ಬಹು ಹಿಂದೆ, ೧೯೫೦ರ ಕಾಲವಿರಬಹುದ. ನಮ್ಮ ಕಾಳಿಂಗರಾಯರು ಮೈಸೂರಿನ ಆಕಾಶವಾಣಿಯಲ್ಲಿ ಸಂಜೆ ಆರರಿಂದ ಆರೂ ಮೂವತ್ತರವರೆಗೆ ಕನ್ನಡ ಭಾವಗೀತೆಗಳನ್ನು ಹಾಡುವುದಿತ್ತು. ಏಕೋ ಏನೋ, ಆರೂ ಇಪ್ಪತ್ತೈದಾದರೂ ರಾಯರು ಆಕಾಶವಾಣಿಗೆ ಹಾಜರಾಗಲಿಲ್ಲ. ಅಂದಿನ ಕಾಲದಲ್ಲಿ ಎಲ್ಲ ಕಾರ್ಯಕ್ರಮಗಳೂ ನೇರವಾಗಿ ಪ್ರಸಾರ (live broadcast) ಗೊಳ್ಳುತ್ತಿದ್ದುದರಿಂದ ರಾಯರ ಕಾರ್ಯಕ್ರಮವನ್ನು ಆ ಮೊದಲೇ ಧ್ವನಿಮುದ್ರಿಸಿಕೊಂಡಿರಲಿಲ್ಲ. ಏನು ಮಾಡಬೇಕೆಮಬುದು ತೋಚದೇ ಕಾರ್ಯಕ್ರಮ ತಿಳಿಸುವಾಕೆಗೆ ಕಸಿವಿಸಿಯಾಯಿತು. ನಿಲಯದ ಸಹನಿರ್ದೇಶಕರು (ಡಾ|| ನಟೇಶ್‌ಎಂದು ನೆನಪು) ‘ಇನ್ನು ಕಾಳಿಂಗ್ರಾಯ್ರನ್ನ ಕಾದು ಪ್ರಯೋಜನವಿಲ್ಲ. He must have stuck up somwhere ಆಯ್ತು. ಅವರ plates ಅನ್ನೇ ಹಾಕಿ. manage ಮಾಡಿ, go ahead’ ಎಂದು ಜೊತೆಗಿದ್ದ ಕಾರ್ಯನಿರ್ವಾಹಕಿಗೆ ಹೇಳಿದರು. ಅಷ್ಟರಲ್ಲೇ ನಿಲಯದ ಸೇವಕನೊಬ್ಬ ಓಡೋಡಿ ಬಂದು ‘ಸಾರ್, ಕಾಳಿಂಗ್ರಾಯರು ಬರ‍್ತಿದ್ದಾರೆ ಸಾರ್’ ಎಂದ ಏದುಸಿರು ಬಿಡುತ್ತಾ.

ತಕ್ಷಣ ನಟೇಶ್ ಅವರು ಆ ನಿರ್ವಾಹಕಿಗೆ ‘ಓಡಿ ಮೇಡಂ, the giant has come at last. show him the studio, run’ ಎನ್ನುತ್ತಿದ್ದಂತೆ ಆಕೆ ಓಡಿ ಬಂದು ಆಗ ತಾನೆ ಆಕಾಶವಾಣಿಯ ಮುಖದ್ವಾರದೊಳಕ್ಕೆ ಕಾಲಿರಿಸಿದ್ದ ಕಾಳಿಂಗರಾಯರಿಗೆ ಕೈ ಮುಗಿದು, ಬನ್ನಿ ಸಾರ್, only five ‘minutes more’ ಎನ್ನಲು ರಾಯರು, ‘It’s O.K. It’s O.K., no problem… follow me please’ ಎಂದವರೇ ನೇರವಾಗಿ ನಿಲಯದ ಗ್ರಂಥಾಲಯವನ್ನು ದಾಪುಗಾಲು ಹಾಕುತ್ತಾ ಸಮೀಪಿಸಿದರು.

ಗ್ರಂಥಾಧಿಕಾರಿಯನ್ನು ಕುರಿತು, ‘Hullo Mr. ಶ್ರೀ ಶೈಲಮ್ ಭಾವಗೀತೆಗಳಿರೋ ಪುಟ್ಟಪ್ಪನವರ ಒಂದೆರಡು ಪುಸ್ತಕಗಳ್ನ…’ ಎನ್ನುತ್ತಿದ್ದಂತೆ ಆ ಹೊತ್ತಿಗಾಗಲೇ ಪುಟ್ಟಪ್ಪನವರ ಕವನ ಸಂಕಲನದ ಪುಸ್ತಕಗಳನ್ನು ಇವರಿಗಾಗಿ ತೆಗೆದಿರಿಸಿದ್ದ ಆ ಗ್ರಂಥಾಧಿಕಾರಿ, ಅವುಗಳನ್ನು ರಾಯರ ಕೈಗಿತ್ತು ‘ಪಕ್ಕವಾದ್ಯದವರೆಲ್ಲಾ ಶ್ರುತಿ ಮಾಡ್ಕೊಂಡು ತಮಗೋಸ್ಕರವೇ ಕಾಯ್ತಿದ್ದಾರೆ ಸಾರ್, ಎದುರ‍್ಗಿರೋದೇ ಸ್ಟುಡಿಯೋ, Please get in, it’s time and all the best’ ಎಂದರು.

ರಾಯರು ನಿರ್ವಾಹಕಿಯೊಡನೆ ಸ್ಟುಡಿಯೋ ಹೊಕ್ಕರು. ಪಕ್ಕವಾದ್ಯದವರೆಲ್ಲಾ ನಮಸ್ಕರಿಸಲು ಅವರೆಲ್ಲರಿಗೂ ಪ್ರತಿ ನಮಸ್ಕರಿಸಿ, ಬಿಗಿದುಕೊಂಡಿದ್ದ ಕಂಠಕೌಪೀನ (ಟೈ) ವನ್ನು ಸಡಿಲಿಸಿ ಧ್ವನಿವರ್ಧಕದ ಮುಂದೆ ರಾಯರು ನಿಲ್ಲುತ್ತಿದ್ದಂತೆ, ಸ್ಟುಡಿಯೋದ ಒಳಗಡೆ ಗಡಿಯಾರದ ಮುಳ್ಳು ಆರರ ಮೇಲೆ ಹಾರಿತು. ಕೆಂಪು ದೀಪ ಹತ್ತಿಕೊಂಡಿತು. ನಿರ್ವಾಹಕಿ ‘ಈಗ ಶ್ರೀ ಪಿ. ಕಾಳಿಂಗರಾಯರಿಂದ ಕುವೆಂಪು ಅವರ ಭಾವಗೀತೆಗಳು’ ಎಂದು ಹೇಳಲು ರಾಯರು ಆ ಹೊತ್ತಿಗೆ ಕುವೆಂಪು ಅವರ ಒಂದು ಪುಸ್ತಕವನ್ನು ತೆಗೆಯುತ್ತಿದ್ದಂತೆ ಅವರಿಗೆ ಕಂಡದ್ದು ‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ’ ಎಂಬ ಪದ್ಯ. ಪಕ್ಕದಲ್ಲೇ ನಿಂತಿದ್ದ ನಿರ್ವಾಹಕಿಗೆ ಆ ಪದ್ಯದ ಶಿರೋನಾಮೆಯತ್ತ ಬೊಟ್ಟು ಮಾಡಿ ತೋರಲು ಆಕೆ ‘ಮೊದಲಿಗೆ ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಎಂಬ ಕವನ’ ಎಂದು ಹೇಳಿ ಸದ್ದು ಮಾಡದೇ ಅಲ್ಲಿಯೇ ಕುಳಿತರು.

ತಕ್ಷಣವೇ ಕಾಳಿಂಗರಾಯರು ದರ್ಬಾರಿ ಕಾನಡದಲ್ಲಿ ಎರಡು ಮೂರು ನಿಮಿಷ ಆಲಾಪ್‌ಮಾಡಿ ನಂತರ ಆ ಗೀತೆಯನ್ನು ಅದ್ಭುತವಾಗಿ ಹಾಡಿ ಮುಗಿಸಿದರಂತೆ. ನಂತರ ಹೀಗೆಯೇ ಮತ್ತೆರಡು ಹಾಡು ಹಾಡಿದರೆಂದು ಕೇಳಿದ್ದೇನೆ. ಪಕ್ಕದ ಕೊಠಡಿಯಲ್ಲಿ (ಈಗ ರೆಕಾರ್ಡ್ ಮಾಡಲು ಉಪಯೋಗಿಸುತ್ತಿರುವ ಸ್ಥಳ) ಇವರು ಹಾಡುತ್ತಿದ್ದ ಆ ಗೀತೆಗಳನ್ನು ಕೇಳುತ್ತಿದ್ದ ನಿಲಯದ ಮಂದಿಗೆ ಆದ ಆಶ್ಚರ್ಯ ಹಾಗೂ ಸಂತೋಷ ಹೇಳತೀರದು.

ಹೀಗೆ ಯಾವ ಪೂರ್ವ ಸಿದ್ಧತೆಯೂ ಇಲ್ಲದೇ ಕ್ಷಣಾರ್ಧದಲ್ಲಿ ತಯಾರಾಗಿ ಗೀತೆಗಳಿಗೆ ಅಲ್ಲಿಂದಲ್ಲೇ ರಾಗಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸಂಯೋಜಿಸಿ ಎಲ್ಲರ ಮನವು ತಣಿಯುವಂತೆ ಹಾಡಿ ಹೊರಬಂದ ಕಾಳಿಂಗರಾಯರನ್ನು ಅಂದು ಅಲ್ಲಿದ್ದವರೆಲ್ಲಾ ಹೊಗಳಿ ಹಾಡಿದರಂತೆ. ಅಂದು ರಾಯರು ಹೀಗೆ ಹಾಡಿದ ಆ ಕಾರ್ಯಕ್ರಮವನ್ನು ಮೆಚ್ಚಿಶ್ರೋತೃಗಳು ಬರೆದ ಪತ್ರಗಳ ಸಂಖ್ಯೆ ಅಪಾರ.

ಕಾಳಿಂಗರಾಯರಿಗಿದ್ದ ಸಂಗೀತ ಜ್ಞಾನದ ಹರವು ಅಪಾರವಾದದ್ದು. ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತ ಪದ್ಧತಿಗಳೆರಡಲ್ಲೂ ತುಂಬಾ ಸಾಧನೆಯನ್ನು ಮಾಡಿ ಪಾಂಡಿತ್ಯ ಗಳಿಸಿದ್ದ ವ್ಯಕ್ತಿ ಅವರು. ಕೇವಲ ಹಳ್ಳಿಗರು ಹಾಡುತ್ತಿದ್ದ ಜಾನಪದ ಗೀತೆಗಳಿಗೆ ಸಂಗೀತದ (ದಕ್ಷಿಣಾದಿ, ಉತ್ತರಾದಿ, ಪಾಶ್ಚಾತ್ಯ) ಸೊಗಡನ್ನು ಎರಕ ಹೊಯ್ದು ಪಟ್ಟಣದವರೂ ಕೇಳಿ ತಲೆದೂಗುವಂತೆ ಮಾಡಿದ ಹೆಗ್ಗಳಿಕೆ ಕಾಳಿಂಗರಾಯರಿಗೆ ಸೀಮಿತವಾದ್ದು.

ವಚನ ಹಾಗೂ ದೇವರನಾಮಗಳನ್ನು ಭಾವಪೂರ್ಣವಾಗಿ ಹಾಡಲು ಉತ್ತರಾದಿ ಸಂಗೀತ ಪದ್ಧತಿಯೇ ಉತ್ತಮವೆಂದರಿತ ಕಾಳಿಂಗರಾಯರು ಅನೇಕ ವಚನ, ದೇವರನಾಮಗಳನ್ನು ಆ ಧಾಟಿಯಲ್ಲೇ ಹಾಡಿದ್ದಾರೆ. ಅಂದ ಮಾತ್ರಕ್ಕೆ ಅವರು ಕರ್ನಾಟಕ ಸಂಗೀತವನ್ನು ಕಡೆಗಣಿಸಿದರೆಂದು ಅರ್ಥವಲ್ಲ. ಉದಾಹರಣೆಗೆ ರಾಯರು ಹಾಡಿರುವ ‘ಮನವೆಂಬ ಸರಸಿಯಲಿ ಆಡು ಬಾ ಹಂಸ’ ಎಂಬ ಹಾಡಿನ ಧ್ವನಿ ಮುದ್ರಿಕೆಯನ್ನು ಕೇಳಿದರೆ ರಾಯರಿಗೆ ಕರ್ನಾಟಕ ಸಂಗೀತದಲ್ಲಿದ್ದ ಪಾಂಡಿತ್ಯ ಎಷ್ಟೆಂಬುದು ವೇದ್ಯವಾಗುತ್ತದೆ. ಚಾರುಕೇಶಿಯಲ್ಲಿ ಹಾಡಿರುವ ಆ ಹಾಡನ್ನು ನಮ್ಮ ಅನೇಕ ಸಂಗೀತ ವಿದ್ವಾಂಸರು ಮುಕ್ತ ಕಂಠದಿಂದ ಹೊಗಳಿದ್ದುಂಟು.

ಅಲ್ಲದೇ ಕರ್ನಾಟಕ ಸಂಗೀತದ ಮೋಹನ, ಹಿಂದೋಳ, ಅರಭಿ, ಇಂಥ ಹಲವು ರಾಗಗಳನ್ನು ಕೆಲವು ಗೀತೆಗಳಿಗೆ ಅಳವಡಿಸಿದಾಗ್ಯೂ ಅಲ್ಲಲ್ಲಿ ಹಿಂದೂಸ್ತಾನಿ ಸಂಗೀತದ ‘ಟಚ್’ ಕೊಡುತ್ತಿದ್ದುದು ರಾಯರ ಸ್ಪೆಷಾಲಿಟಿ.

ಮತ್ತೆ ಕೆಲವು ಗೀತೆಗಳಿಗೆ ರಾಗವನ್ನು ಅಳವಡಿಸುವಾಗ ಅವುಗಳನ್ನು ಬರೆದ ಕವಿಯ ಮನೋಭಾವ ಹಾಗೂ ಇಂಗಿತವನ್ನು ತಿಳಿದು ಅದಕ್ಕೆ ತಕ್ಕಂತೆ ರಾಗ ಸಂಯೋಜಿಸಿ ಹಾಡುತ್ತಿದ್ದರು. ಉದಾ: ಪು.ತಿ.ನ. ಅವರ ಗೀತೆಗಳನ್ನು ಶುದ್ದವಾಗಿ ಕರ್ನಾಟಕ ಸಂಗೀತ ಪದ್ಧತಿಯಲ್ಲೇ ಹಾಡುತ್ತಿದ್ದರು. ಅದೇ ಬೇಂದ್ರೆಯವರ ಗೀತೆಗಳನ್ನು ಜಾನಪದ ಶೈಲಿಯಲ್ಲಿ ಹಾಡುತ್ತಿದ್ದರು. ಮತ್ತೆ ಜಿ.ಪಿ. ರಾಜರತ್ನಂ ಅವರ ರತ್ನನ ಪದಗಳನ್ನು ಹಾಡುವಾಗ ಪಾಶ್ಚಾತ್ಯ ಸಂಗೀತದ ಸೊಗಡು ಬಡಿಯುವಂತೆ ಹಾಡುತ್ತಿದ್ದರು.

ಕಾಳಿಂಗರಾಯರು ಸಂಗೀತದಲ್ಲಿ ಪ್ರಯೋಗಪ್ರಿಯರು. ನಮ್ಮ ದಕ್ಷಿಣಾದಿ ಸಂಗೀತವನ್ನು ಪಾಶ್ಚಾತ್ಯ ಸಂಗೀತದೊಡನೆ ಸೇರಿಸಿ ಹಾಡಬಹುದೆಂಬುದನ್ನು ಸಾದರಪಡಿಸಿ ತೋರಿಸಿಕೊಟ್ಟವರು ಪ್ರಾಯಶಃ ನಮ್ಮ ಕಾಳಿಂಗರಾಯರೇ ಎನ್ನಬಹುದು. ಈ ಮಾತಿಗೆ ನಿದರ್ಶನವೆಂಬಂತೆ –

೧೯೫೬-೫೭ರ ಸುಮಾರಿನಲ್ಲಿ, ಮೈಸೂರಿನ ಟೌನ್ ಹಾಲಿನಲ್ಲಿ ಕಾಳಿಂಗರಾಯರೇ ಈ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿ ತ್ಯಾಗರಾಜರ, ಮೈಸೂರು ವಾಸುದೇವಾಚಾರ್ಯರ ಕೆಲವು ಕೀರ್ತನೆಗಳನ್ನು ಹಾಡುತ್ತಾ ಅವುಗಳಿಗೆ ಪಾಶ್ಚಾತ್ಯ ಪದ್ಧತಿಯ ಹಿನ್ನೆಲೆ ಸಂಗೀತವನ್ನು ಅಳವಡಿಸಿ ಸುಮಾರು ಒಂದೂವರೆ ಗಂಟೆಯ ಕಾರ್ಯಕ್ರಮವನ್ನು ಕೊಟ್ಟರು. ಈ ಕಾರ್ಯಕ್ರಮವನ್ನು ಶ್ರೋತೃಗಳು ಅಂದು ಬಹುವಾಗಿ ಮೆಚ್ಚಿದ್ದುಂಟು.

ಕಾಳಿಂಗರಾಯರಿಗೆ ಒಂದು ಕಾಲದಲ್ಲಿ ಅಂದಿನ ಹಾಗೂ ಮುಂದಿನ ಪೀಳಿಗೆಯ ಲಘು ಸಂಗೀತ ಕಲಾವಿದರಿಗೆ ಉಪಯೋಗವಾಗುವಂಥದ್ದು ಏನನ್ನಾದರೂ ಮಾಡಬೇಕೆನಿಸಿತು. ಕೂಡಲೇ ಕಾಯೋನ್ಮುಖರಾದರು. ತಾವು ಹಾಡುತ್ತಿದ್ದ ಹಾಡುಗಳಿಗೆ ಸ್ವರಪ್ರಸ್ತಾರವನ್ನು (ನೋಟೇಶನ್) ಬರೆಸಿ, ರಾಗ ತಾಳಗಳನ್ನೆಲ್ಲಾ ನಮೂದಿಸಿದರೆ, ಅದರಿಂದ ಕಂಠಸಿರಿ ಚೆನ್ನಾಗಿದ್ದು ಸಂಗೀತದಲ್ಲಿ ಪರಿಶ್ರಮವಿರುವವರು ಈ ಸ್ವರ ಪ್ರಸ್ತಾರ ಕ್ರಮದಲ್ಲಿ ಅಭ್ಯಸಿಸಿ ತಮ್ಮಂತೆಯೇ ಹಾಡಬಲ್ಲ ಕಲಾವಿದರಾಗಬಹುದೆಂದು ಊಹಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.

ಈ ಕೆಲಸದಲ್ಲಿ ತಮಗೆ ನೆರವು ನೀಡಲು ಸಂಗೀತ ವಿದ್ವಾಂಸರೂ, ಖ್ಯಾತಿವೆತ್ತ ಪಿಟೀಲು ವಾದಕರೂ ಮತ್ತು ತಮಗೆ ಅನೇಕ ಕಾರ್ಯಕ್ರಮಗಳಲ್ಲಿ ಪಕ್ಕವಾದ್ಯ ನುಡಿಸುತ್ತಿದ್ದವರೂ ಆಗಿದ್ದ ಒಬ್ಬರನ್ನು (ಮೈಸೂರಿನ ಪಿ. ಶ್ಯಾಮಣ್ಣನವರೆಂದು ನೆನಪು) ಕರೆ ತಂದರು. ಅವರೊಡನೆ ಭದ್ರವಾಗಿ ನೆಲಕಚ್ಚಿ ಕೂತ ಕಾಳಿಂಗರಾಯರು ಸಾವಧಾನವಾಗಿ ತಾವು ಹಾಡುತ್ತಿದ್ದ ಗೀತೆಗಳನ್ನು ಸಾಲುಸಾಲಾಗಿ ಸ್ವರಬದ್ಧವಾಗಿ ಹೇಳುವುದು, ಆ ವಿದ್ವಾಂಸರು ಅವನ್ನು ನೊಟೇಶನ್ ರೂಪದಲ್ಲಿ ಬರೆಯುವುದು. ಹೀಗೆ ಇಬ್ಬರೂ ಸೇರಿ ಕೆಲವು ಗೀತೆಗಳ ಸ್ವರಸಂಯೋಜನೆಯ ಕಾರ್ಯವನ್ನು ಮುಗಿಸಿದರು.

ಇವರ ಈ ಕಾರ್ಯ ವೈಖರಿಯನ್ನು ಕೆಲವು ದಿನ ಗಮನಿಸಿದ ನನಗೆ ನಗು. ನಾನು ರಾಯರಿಗೆ ಹೇಳಿದೆ. ‘ಅಲ್ರೀ ಕಾಳಿಂಗರಾವ್, ನೀವು ಹೀಗೆ ನಿಮ್ಮ ಹಾಡುಗಳನ್ನ ಸ್ವರ ಜೋಡಣೆಯ ಪ್ರಕಾರ ರೂಪಿಸಿದ ಮಾತ್ರಕ್ಕೆ ಎಲ್ಲರ‍್ಗೂ ನಿಮ್ಮ ಹಾಗೇ ಹಾಡುವುದಕ್ಕೆ ಸಾಧ್ಯವಾಗುತ್ಯೆ? ರಾಗ, ಸಾಹಿತ್ಯ ಇವೆಲ್ಲಾ ಸರಿ ಹೋಗಬಹುದು. ಆದರೆ ನಿಮ್ಮ ಕಂಠದಿಂದ ಹೊರಡುವ ಪಲಕು ಮಿಕ್ಕವರ ಬಾಯಿಂದ ಹೊರಡುವುದು ಅಷ್ಟು ಸುಲಭವೇ?’ ಎಂದಾಗ ರಾಯರು ‘Let me mak a trial’ ಎಂದು ನಕ್ಕರು.

ಈ ಕೆಲಸವನ್ನು ರಾಯರು ಕೈಬಿಡಲಿಲ್ಲ. ಆ ವಿದ್ವಾಂಸರನ್ನೂ ಸಾಕಷ್ಟು ಗೋಳುಹುಯ್ದುಕೊಂಡು ತಮ್ಮ ಇನ್ನಷ್ಟು ಗೀತೆಗಳಿಗೆ ಸ್ವರ ಪ್ರಸ್ತಾರವನ್ನು ಹಾಕಿಸಿದರು. ನಂತರ ತಮ್ಮ ಈ ಕಾರ್ಯ ಎಷ್ಟರ ಮ್ಟಿಗೆ ಫಲ ನೀಡಬಹುದೆಂಬುದನ್ನು ಪರೀಕ್ಷಿಸಲು ಅವರು ನಿರ್ಧರಿಸಿದರು.

ಒಂದು ದಿನ. ಸಂಗಿತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಒಬ್ಬ ವ್ಯಕ್ತಿಯನ್ನು ಕರೆತಂದು, ಆತನ ಮುಂದೆ  ಈ ಸ್ವರ ಪ್ರಸ್ತಾರವಿದ್ದ ಪುಸ್ತಕವನ್ನು ಅದರಲ್ಲಿರುವ ರೀತಿಯಲ್ಲೇ ಹಾಡಬೇಕೆಂದು ಹೇಳಲು ಆತ ಹಾಡಲಾರಂಭಿಸಿದ. ದೇವರಿಗೇ ಪ್ರೀತಿ ! ರಾಯರು ಆ ಗೀತೆಗಳನ್ನು ಹಾಡುತ್ತಿದ್ದ ಶೈಲಿಗೂ, ಆತ ಹಾಡುತ್ತಿದ್ದ ಶೈಲಿಗೂ ಅಜಗಜಾಂತರವೆಂಬಂತಿತ್ತು ಆತನ ಹಾಡುಗಾರಿಕೆ. ಶ್ಯಾಮಣ್ಣನವರು ಸುಮ್ಮನೆ ಸೂರು ನೋಡುತ್ತಾ ಕುಳಿತುಬಿಟ್ಟರು. ನಮ್ಮಿಬ್ಬರ ಕೆಲಸ ಯಾವ ರೀತಿಯಲ್ಲೂ ಪ್ರಯೋಜನವಾಗದೆಂದು ತಲೆಯಾಡಿಸಿದರು. ಆದರೆ ಈ ಕಾಳಿಂಗರಾಯರು ಸುಮ್ಮನಿರಬೇಕಲ್ಲಾ. ಆ ವ್ಯಕ್ತಿಯನ್ನು ಹುರಿದುಂಬಿಸಿ ತೀಡಲಾರಂಭಿಸಿದರು. ಉಹುಂ… ಎಷ್ಟು ತೀಡಿದರೂ ಅಷ್ಟೆ ತಟ್ಟಿದರೂ ಅಷ್ಟೇ. ಆತನ ಹಾಡುಗಾರಿಕೆಯಲ್ಲಿ ಕಾಳಿಂಗರಾಯರ ಕಂಠ ಮಾಧುರ್ಯದ ಲೇಶಾಂಶವು ಕೇಳಿ ಬರಲಿಲ್ಲ. ಇದರಿಂದ ರಾಯರಿಗಾದ ನಿರಾಸೆ ಅಷ್ಟಿಷ್ಟಲ್ಲ. ಹೀಗಾಗಿ ಆ ಕೆಲಸವನ್ನು ಕೈಬಿಟ್ಟರು.

’ಹಾಡುವ ಕಲಾವಿದರಿಗೆ ಇದರಿಂದ ಪ್ರಯೋಜನವಾಗಲೀ ಬಿಡಲೀ, ಹಿಡಿದಿರುವ ಈ ಕಾರ್ಯವನ್ನು ಮುಗಿಸಿಬಿಡಿ ರಾಯರೇ’ ಎಂದು ನಾನು ಅಂಗಲಾಚಿದೆ. ಆದರೆ ರಾಯರು ಆ ಕಾರ್ಯವನ್ನು ಅಲ್ಲಿಗೆ ನಿಲ್ಲಿಸಿ ನಂತರದಲ್ಲಿ ಆ ಬಗ್ಗೆ ಯೋಚಿಸುವುದನ್ನೂ ಬಿಟ್ಟು ಬಿಟ್ಟರು.

ಇತ್ತೀಚೆಗೆ ಇಂತಹುದೇ ಕೆಲಸವನ್ನು ಸಿ. ಅಶ್ವಥ್ ಮಾಡಿ ಮುಗಿಸಿ ಪ್ರಕಟಿಸಿದ್ದಾರೆ. ಆದರೆ ಇದರ ಪರಿಣಾಮ ಅಷ್ಟಾಗಿ ಫಲ ನೀಡಿಲ್ಲವಷ್ಟೇ?

* * *