‘ಮೈಸೂರು ಕಾಫೀ ಹೌಸ್’ ಇದು ಇದ್ದುದು ಮೈಸೂರಿನ ಗಾಂಧೀ ಚೌಕದಲ್ಲಿ. ಸಾರ್ವಜನಿಕರಿಗೆ ಅದು ಕಾಫೀ ಹೌಸು. ಆದರೆ ನಮಗದು ಪರಿಷನ್ಮಂದಿರ : ಸಾಹಿತ್ಯ ಪರಿಷನ್ಮಂದಿರ. ದಿನಂಪ್ರತಿ ಸಂಜೆ ಆರಾಗುತ್ತಿದ್ದಂತೆ ತಲೆಯ ಮೇಲೆ ತಲೆ ಬಿದ್ದರೂ ನಾವು ಹಲವರು ಅಲ್ಲಿ ಹಾಜರು, ಸಂಕಲ್ಪ ತೊಟ್ಟವರಂತೆ.

ಅಲ್ಲಿಗೆ ದಿನಂಪ್ರತಿ ಬರುತ್ತಿದ್ದವರ ಪೈಕಿ ರಾಜೀವ ತಾರಾನಾಥ್‌, ಯು.ಆರ್. ಅನಂತಮೂರ್ತಿ, ಸದಾಶಿವ, ಪಿ. ಶ್ರೀನಿವಾಸರಾವ್, ಟಿ.ಜಿ. ರಾಘವ, ಹೀಗೆ ಇನ್ನೂ ಹಲವರು ಖಾಯಂ ಆಗಿ ಬರುತ್ತಿದ್ದರು. ಈಗ ಇವರೆಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದಾರೆ. ಅಂದಿನ ದಿನಗಳಲ್ಲಿ ಇವರೆಲ್ಲಾ ಬರೆಯುವ ಹವ್ಯಾಸವನ್ನಿರಿಸಿಕೊಂಡಿದ್ದು, ಇವರೆಲ್ಲರನ್ನೂ ತೀಡಿ, ತಿದ್ದಿ, ನೇರ್ಪಡಿಸಿ ಮೇಲಿಂದ ಮೇಲೆ ಮತ್ತಷ್ಟನ್ನು ಬರೆಯುವಂತೆ ಪ್ರಚೋದಿಸುತ್ತಿದ್ದವರು ಶ್ರೀ ವೈ.ಎನ್.ಕೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎರಡು ಸಮಾರಂಭಗಳಲ್ಲಿ ಈ ವಿಷಯವನ್ನು ಡಾ|| ಯು. ಆರ್. ಅನಂತಮೂರ್ತಿ ಹಾಗೂ ಪಿ. ಶ್ರೀನಿವಾಸರಾಯರು ತುಂಬಿದ ಸಭೆಗಳಲ್ಲಿ ತಿಳಿಸಿ ತನ್ಮೂಲಕ ವೈ.ಎನ್.ಕೆ. ಅವರಿಗೆ ತಮ್ಮ ಗೌರವವನ್ನು ಸೂಚಿಸಿದ್ದು ಶ್ಲಾಘನೀಯ.

ಸಂಜೆ ಆರಾಗುತ್ತಿದ್ದಂತೆಯೇ ಮೈಸೂರು ಕಾಫೀ ಹೌಸಿನ ಹಜಾರದ ಬಲಭಾಗದ ಮೂಲೆಯಂಚಿನಲ್ಲಿದ್ದ ದುಂಡು ಮೇಜಿನ ಸುತ್ತ ಈ ಬುದ್ದಿಜೀವಿಗಳ ದಂಡು ಆಗ ದಿನನಿತ್ಯ ಜಮಾಯಿಸುತ್ತಿತ್ತು.

ಅಷ್ಟು ಹೊತ್ತಿಗೆ ಶುಭ್ರವಾದ ತಡುಪು ಪಂಚೆಯನ್ನುಟ್ಟು, ಅದು ಜಾರದಂತೆ ಸೊಂಟಕ್ಕೆ ಅಗಲ ಪಟ್ಟಿಯ ಬೆಲ್ಟ್ ಬಿಗಿದು, ಮೇಲೆ ಓಪನ್ ಕಾಲರ್ ಕೋಟನ್ನು ಧರಿಸಿ, ತಿಂಡಿ ತಿದ್ದಿದ ಎಣಿಸುವಷ್ಟು ಕೂದಲನ್ನು ಮತ್ತೆ ಮತ್ತೆ ನೇವರಿಸುತ್ತಾ, ಮಡಿಚಿದ ಚೀಲವನ್ನು ಕೈಯಲ್ಲಿ ಹಿಂಡಿ ಹಿಡಿದು, ಅವರಿಗಾಗಿ ನಾವು ಕಾದಿಟ್ಟಿರುತ್ತಿದ್ದ ಕುರ್ಚಿಯಲ್ಲಿ ನಗು ನಗುತ್ತಲೇ ಬಂದು ಆಸೀನರಾಗುತ್ತಿದ್ದರು. – ನಮ್ಮ ಅಚ್ಚುಮೆಚ್ಚಿನ ಅಡಿಗರು. ಹಾಗವರು ಕೂರುತ್ತಿದ್ದಂತೆ ಆ ನಮ್ಮ ದುಂಡುಮೇಜಿನ ಗೋಷ್ಠಿಗೆ ಗಮ್ಮತ್ತು ಬರುತ್ತಿತ್ತು. ಹೀಗೆ ಆ ಕಾಲದಲ್ಲಿ ಅಡಿಗರ ಅಕ್ಕಪಕ್ಕವನ್ನು ಆಕ್ರಮಿಸಿಕೊಂಡು ಇರುತ್ತಿದ್ದವರು ನಾವು ನಾವೇ, ಚಿಗುರು ಮೀಸೆಯ ಯುವಕರು.

ಕಾಳಿಂಗರಾಯರೂ ಸಹ ಮೈಸೂರಿನಲ್ಲಿದ್ದಾಗಲೆಲ್ಲಾ ಬೆಳಿಗ್ಗೆ ಮತ್ತು ಸಂಜೆ ಈ ಕಾಫೀಹೌಸಿಗೆ ಬರುತ್ತಿದ್ದುದು ಮಾಮೂಲು.

ಅದೊಂದು ದಿನ ಭಾನುವಾರ ಬೆಳಿಗ್ಗೆ ಹತ್ತರ ಹೊತ್ತು : ನಾನು ಕಾಳಿಂಗರಾಯರೊಡನೆ ಕಾಫೀಹೌಸನ್ನು ಹೊಕ್ಕೆ. ರಾಯರು ಅಲ್ಲಿಯ ಹಜಾರದಲ್ಲಿ ಎಂದೂ ಕೂಡುತ್ತಿರಲಿಲ್ಲ, ಬದಲಿಗೆ ಆ ಹಜಾರದ ಎಡಪಕ್ಕಕ್ಕಿದ್ದ ಕೋಣೆಯಲ್ಲಿ ಕೂಡುತ್ತಿದ್ದರು. ಅಲ್ಲೂ ಒಂದು ದೊಡ್ಡ ಮೇಜು, ಅದರ ಸುತ್ತ ಐದಾರು ಬೆತ್ತದ ಕುರ್ಚಿಗಳು. ನಾವಲ್ಲಿ ಕೂರುತ್ತಿದ್ದಂತೆ ಗರಿಗರಿಯಾದ ಬಿಳೀ ಸಮವಸ್ತ್ರಧರಿಸಿ,  ರೆಕ್ಕೆರೆಕ್ಕೆಯಾಗಿ ಮಡಿಚಿದ್ದ ಕುಚ್ಚುಳ್ಳ ಬಿಳೀ ಪೇಟ ಹಾಕಿಕೊಂಡಿದ್ದ ಬೇರರ್ ರಾಜು ಒಳಬಂದ. ‘Indian Airlines’ ಜಾಹೀರಾತುಗಳಲ್ಲಿ ನಮ್ರತೆಯಿಂದ ತಲೆಬಾಗಿ ನಮಸ್ಕರಿಸುತ್ತಿರುವ ಸೇವಕ ‘ಮಹಾರಾಜ’ ನನ್ನು ಆತ ಠೀವಿಯಲ್ಲಿ ಹೋಲುತ್ತಿದ್ದುದರಿಂದ ರಾಯರು ಆ ಬೇರರ್ ರಾಜುವನ್ನು ‘ಮಹಾರಾಜ’ ಎಂದೇ ಕರೆಯುತ್ತಿದ್ದರು. ಸರಿ, ಹೊಳೆಯುವ ಅಗಲವಾದ ಹಿತ್ತಾಳೆಯ ದುಂಡುತಟ್ಟೆಯನ್ನು ಎದೆಗಾನಿಸಿಕೊಂಡು ಆತ ನಮ್ರತೆಯಿಂದ ನಮಸ್ಕರಿಸುತ್ತಿದ್ದಂತೆ ಕಾಳಿಂಗರಾಯರು “ಓಹೋಹೋ ಮಹಾರಾಜರು ದಯಮಾಡಿಸಬೇಕು.” ತಮ್ಮನ್ನೇ ಕಾದುಕುಳಿತ್ತಿದ್ದೇವೆ. ಬೇಗ ಎರಡು ಕಪ್ Extra Strong ಕಾಫಿಯನ್ನು ದಯಪಾಲಿಸಬೇಕು ಮಹಾಸ್ವಾಮಿ” ಎಂದಾಗ ಆತ ಮುಗುಳುನಕ್ಕು ಒಳಹೋದ.

ಅಷ್ಟರಲ್ಲಿ ಕಾಫೀ ಹೌಸನ್ನು ಒಳಹೊಕ್ಕ ಅಡಿಗರು ಹಜಾರದ ಒಳಗೆಲ್ಲಾ ಕಣ್ಣಾಡಿಸಿ ತಮ್ಮ ಪೈಕಿ ಯಾರೂ ಅಲ್ಲಿರದಿದ್ದುದನ್ನು ಗಮನಿಸಿ ಕೊನೆಗೆ ನಾವಿದ್ದ ಕೋಣೆಯ ಕಡೆ ತಿರುಗಲು, ಅವರನ್ನು ಕಂಡ ನಾವಿಬ್ಬರೂ ಎದ್ದು ‘ಇಲ್ಲೇ ಬನ್ನೀ ಸಾರ್’ ಎಂದೆವು. ಅಡಿಗರು ಬಂದರು, ನಗುತ್ತಲೇ ನಮ್ಮೊಡನೆ ಕುಳಿತರು. ಮಾಣಿ ತಂದಿರಿಸಿದ ಕಾಫಿಯನ್ನು ಮೂರಾಗಿ ಪರಿವರ್ತಿಸಿದ್ದಾಯಿತು. ನಂತರ ನಮ್ರತೆಯಿಂದ ಕಾಳಿಂಗರಾಯರು ಅಡಿಗರನ್ನುದ್ದೇಶಿಸಿ ‘ಇತ್ತೀಚೆಗೆ ಹೊಸದಾಗಿ ಏನನ್ನ ಬರೆದಿದ್ದೀರಿ ಮೇಷ್ಟ್ರೆ?’ ಎನ್ನಲು ಅಡಿಗರು ಮುಗುಳು ನಗುತ್ತಾ ತಮ್ಮ ಕೋಟಿನ ಜೇಬಿನಲ್ಲಿ ಮಡಿಚಿರಿಸಿಕೊಂಡಿದ್ದ ಸಂಚಿಕೆಯೊಂದನ್ನು ಹೊರತೆಗೆದು ಬಿಡಿಸಿ, ಅದರಲ್ಲಿ ಮುದ್ರಿತವಾಗಿದ್ದ ತಮ್ಮ ಕವನವನ್ನು ಕಾಳಿಂಗರಾಯರಿಗೆ ತೋರಿ, ರಾಯರ ಮುಂದಿರಿಸಿ ‘This is my latest poem’ ಈಚೀಚ್ಗೆ ನಾನು ಈ ಕ್ರಮದಲ್ಲೇ ಬರೀತಿರೋದು. ಇಂಥವನ್ನೂ ಹಾಡೋಕ್ಕಾದ್ರೆ ಹಾಡಿ ರಾಯ್ರೆ’ ಎಂದು, ಭಂಗಿ ಸೇದುವ ರೀತಿಯಲ್ಲಿ ಕೊನೆ ಕಿರುಬೆರಳುಗಳ ಮಧ್ಯೆ ಹಿಡಿದಿದ್ದ ಸಿಗರೇಟಿನ ಉರಿದ ಭಾಗದ ಬೂದಿಯನ್ನು ಎದುರಿಗಿದ್ದ ಬೂದಿ ಬಟ್ಟಲಿಗೆ ಚಿಟಿಕಿ ಹೊಡೆದು ಚಿಮ್ಮಿ, ತಾವಿತ್ತ ಕವನವನ್ನು serious ಆಗಿ study ಮಾಡುತ್ತಿದ್ದ ರಾಯರನ್ನೇ ಕುತೂಹಲದಿಂದ ದಿಟ್ಟಿಸುತ್ತಾ ಗತ್ತಿನಿಂದ ಕುಳಿತರು ಶ್ರೀ ಗೋಪಾಲಕೃಷ್ಣ ಅಡಿಗರು.

ಆ ನವ್ಯಶೈಲಿಯ ನೀಳ್ಗವನವನ್ನು ಓದುತ್ತಿದ್ದಂತೆ ರಾಯರ ಮುಖಮುದ್ರೆ ಗಂಭೀರವಾಯಿತು. ಎಡಗೈ ಬೆರಳುಗಳ ಮಧ್ಯೆ ಹಿಡಿದಿದ್ದ ಸಿಗರೇಟು ಸುಮ್ಮನೆ ಉರಿಯುತ್ತಾ ಹೊಗೆ ಕಾರುತ್ತಿತ್ತು. ಕೆಲ ಕ್ಷಣಗಳಲ್ಲೇ ರಾಯರ ಬಲಗೈಯ ಬೆರಳುಗಳು ಮೇಜುವಿನ ಮೇಲೆ ಮೆಲ್ಲನೆ ತಾಳ ಹಾಕುತ್ತಾ ಕುಣಿಯಲಾರಂಭಿಸಿದವು. ನಾನೂ ಅಡಿಗರೂ ಸದ್ದು ಮಾಡದೆ, ಪುಳಕಿತರಾಗಿ ಅವರತ್ತಲೆ ನೋಡುತ್ತಿದ್ದೆವು. ಹೀಗೆ ಐದು ಹತ್ತು ನಿಮಿಷವಷ್ಟೇ ಕಳೆದಿರಬಹುದು, ರಾಯರ ಮುಖ ತಿಳಿಯಾಗಿ ಸಂತೋಷದ ನಗು ಚಿಮ್ಮಿತು. ‘ಕೇಶವ if you dont’ – mind door curtain ಸ್ವಲ್ಪ ಸರ್ಸೂ’ ಎಂದರು. ಸರಿಸಿ ಬಂದು ಕುಳಿತೆ. ಅಷ್ಟರಲ್ಲಿ ರಾಯರು ನಮ್ಮಿಬ್ಬರಿಗಷ್ಟೆ ಕೇಳುವಷ್ಟು ಮೆಲ್ಲನೆ ದನಿಯಲ್ಲಿ ಕವನವನ್ನು ಹಾಡಿದಾಗ ನಮ್ಮಿಬ್ಬರಿಗೂ ಆದ ಆನಂದ ಅಪಾರ. ಕ್ಷಣಾರ್ಧದಲ್ಲಿ ಅಡಿಗರ ಅಂತಹ ಕ್ಲಿಷ್ಟ ಕವನಕ್ಕೆ ಸರಿಹೊಂದುವ ರಾಗವನ್ನಳವಡಿಸಿ ಹಾಡುವ ಶಕ್ತಿ ನಮ್ಮಲ್ಲಿ ಎಷ್ಟು ಮಂದಿ ಕಲಾವಿದರಿಗಿದೆ? ಇರುವುದಾದರೆ ಸಂತೋಷ.

ಅಡಿಗರು ತಮ್ಮ ಕವನಗಳನ್ನು ಅಧಿಕೃತವಾಗಿ ಹಾಡಲು ಅನುಮತಿ ಕೊಡುತ್ತಿದ್ದುದು ಕೆಲವರಿಗಷ್ಟೆ. ಇತರರು ತಿಳಿಸದೇ ಅವರ ಹಾಡುಗಳನ್ನು ವಿಶೇಷವಾದ ಕಡೆಗಳಲ್ಲಿ ಹಾಡಿದಾಗ ಅಡಿಗರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಈ ದಿಶೆಯಲ್ಲಿ ತಮಗೇ ಒಮ್ಮೆ ಅಡಿಗರಿಂದಾದ ಒಂದು ಅನುಭವವನ್ನು ಮೋಹನ್‌ಕುಮಾರಿ ಹೀಗೆ ಹೇಳಿದರು.

ಬಹು, ಹಿಂದೆ, ಒಮ್ಮೆ ಮೋಹನ್‌ಕುಮಾರಿ ಮೈಸೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಂದು ಮಧ್ಯಾಹ್ನ ಎರಡು ಗಂಟೆಗೆ ಈಕೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಭಾವಗೀತೆಗಳನ್ನು ಹಾಡುವುದಿತ್ತು. ಹೀಗೆ ಬಸ್ಸಿನಲ್ಲಿ ಮೋಹನ್ ಪ್ರಯಾಣ ಮಾಡುತ್ತಿರಲು ತಮ್ಮ ಕೈಯಲ್ಲಿ ಅಡಿಗರ ಕವನ ಸಂಕಲನವೊಂದನ್ನು ಹಿಡಿದಿದ್ದು ಅದರಲ್ಲಿಯ ‘ಓಡಲೆಳಸುತಿಹುದು ಜೀವ, ದೂರ ದೂರ ಜನ ವಿದೂರ, ವಿಪಿನದೆಡೆಗೆ’ ಎಂಬ ಕವನವನ್ನು ಮೆಲುದನಿಯಲ್ಲಿ ಗುನುಗುತ್ತಿದ್ದರು.

ಅಂದು ಆಕಸ್ಮಿಕವೆಂಬಂತೆ ಮೋಹನ್‌ಕುಮಾರಿಯ ಪಕ್ಕದ ಸೀಟಿಯಲ್ಲಿ ಕುಳಿತಿದ್ದವರು ನಮ್ಮ ಅಡಿಗರೇ!

ಮೋಹನ್ ಆ ಮೊದಲು ಅಡಿಗರನ್ನು ಕಂಡಿರಲಿಲ್ಲ, ಕೇಳಿದ್ದರು ಅಷ್ಟೆ. ಯಾರೋ ಹಿರಿಯರು ಪಕ್ಕದಲ್ಲಿದ್ದಾರೆಂದೇ ಭಾವಿಸಿದ್ದರು. ಆದರೆ ಕೆಲವು ಸಂಗೀತ ಸಮಾರಂಭಗಳಲ್ಲಿ ಕಾಳಿಂಗರಾಯರೊಡನೆ ಈ ಮೋಹನ್ ಕುಮಾರಿ ಪಕ್ಕದಲ್ಲಿ ನಿಂತು ಹಾಡುವುದನ್ನು ಅಡಿಗರು ಕಂಡಿದ್ದರು. ಸ್ವಲ್ಪ ಸಮಯದ ನಂತರ ಅಡಿಗರೇ ಮುಂದಾಗಿ ‘ಕ್ಷಮಿಸಿ ಮೇಡಂ, ಎಲ್ಲಿ ಹಾಡ್ಬೇಕೂಂತ ಈ ಕವನವನ್ನು ಅಭ್ಯಾಸ ಮಾಡ್ತಿದ್ದೀರಿ’ ಎನ್ನಲು ಮೋಹನ್‌ಕುಮಾರಿ ‘ಮಧ್ಯಾಹ್ನ ಆಕಾಶವಾಣೀಲಿ ಹಾಡ್ತಿದ್ದೀನಿ. ಎರಡು ಗಂಟೆಗೆ. ಕೇಳಿ ಸಾರ್’ ಎಂದರು. ಅದಕ್ಕೆ ಅಡಿಗರು ಮುಗುಳ್ನಕ್ಕು ಅದ್ಸರಿ, ಆದ್ರೆ ನೀವು ಈ ಹಾಡನ್ನ ಆಕಾಶವಾಣೀಲಿ ಹಾಡೋದಕ್ಕೆ ಅಡಿಗರ permission ತಗೊಂಡಿದ್ದೀರಾ?’ ಎಂದರು. ಅದಕ್ಕೆ ಮೋಹನ್ ನಗುತ್ತಲೇ ‘ಅದನ್ನೆಲ್ಲಾ ಆಕಾಶವಾಣಿಯವ್ರು ತಗೊಂಡಿರ್ತಾರೆ. ಅಲ್ದೆ ಇದಕ್ಕೆಲ್ಲಾ permission ಏನ್ಬಂತೂ ಸಾರ್? poets ಬರೀತಾರೇ, ನಾವು artists ಹಾಡ್ತೀವಿ. ಇದ್ರಲ್ಲೇನಿದೆ ತಪ್ಪು? ನಾಳೆ ಅಡಿಗರೊಬ್ಬರದ್ದೇ ಅಲ್ಲ. ಇನ್ನೂ ಒಬ್ಬಿಬ್ರ ಕವನಗಳ್ನ ಹಾಡ್ತೀನಿ’ ಎನ್ನಲು ಅಡಿಗರು ಮೆದುವಾಗಿ ‘ನೋಡೀಮ್ಮ, ಆ ಒಬ್ರಿಬ್ರದನ್ನ ಬೇಕಿದ್ರೆ ಹಾಡಿ. ಅದು ನಿಮ್ಮ ಅವರ ವಿಚಾರ. ಆದರೆ ಅಡಿಗರದ್ದನ್ನ ಹಾಡ್‌ಬೇಡಿ, ಅಷ್ಟೆ’ ಎಂದಾಗ ಮೋಹನ್ ಸ್ವಲ್ಪ ಗಡುಸಾಗಿ ‘ಹೀಗೆಲ್ಲಾ ಆಕ್ಷೇಪಣೆ ಮಾಡೋದಕ್ಕೆ ನೀವ್ಯಾರು ಸಾರ್?’ ಎಂದಾಗ ಅಡಿಗರು ನಗುತ್ತ ‘ತಿಳ್ದೋರು ನನ್ನನ್ನ ಗೋಪಾಲಕೃಷ್ಣ ಅಡಿಗ, ಅಂತ ಕರೀತಾರಮ್ಮ’ ಎನ್ನಲು ದಂಗುಬಡಿದ ಮೋಹನ್‌ಅತಿ ನಮ್ರತೆಯಿಂದ ‘Sorry Sir’ ತಾವ್ಯಾರೂಂತ ತಿಳೀದೆ ಸ್ವಲ್ಪ ಒರಟಾಗಿ ಮಾತ್ನಾಡ್ದೆ. ಕ್ಷಮ್ಸಿ. ಆದ್ರೆ ಈವತ್ತು ಈ ನಿಮ್ಮ ಕವನವನ್ನು ಹಾಡ್ಲೇಬೇಕೂಂತ ಅಂದ್ಕೊಂಡಿದ್ದೀನಿ ಸಾರ್’ ಅಂದರು. ಅದಕ್ಕೆ ಅಡಿಗರು ‘ಹಾಗಲ್ಲಾಮ್ಮಾ, ನಾನಿದನ್ನ ಬರ‍್ದಿರೋದು ಜನ ಓದ್ಲೀ ಎಂದಷ್ಟೇ ಹೊರತು ಹಾಡ್ಲೀಂತಲ್ಲ’ ಎಂದಾಗ ಮೋಹನ್ ‘ನೋಡಿ ಸಾರ್, ನಿಮ್ಮ ಈ ರಚನೆಯನ್ನ ಕೆಲವರಷ್ಟೇ ಓದಬಹುದು. ಆದ್ರೆ ಇದನ್ನ ಆಕಾಶವಾಣಿಯಲ್ಲಿ ನಾನು ಹಾಡದ್ರೆ ಸಾವಿರಾರು ಮಂದಿ ಕೇಳಿ ಆನಂದಿಸುತ್ತಾರಲ್ಲವೇ?’ ಎಂದು ಪ್ರಶ್ನಿಸಿದಾಗ ಅಡಿಗರು ಮರು ಉತ್ತರವನ್ನೀಯದೆ, ಈ ಹೆಣ್ಣು ತಮ್ಮ ಆ ರಚನೆಯನ್ನು ಹೇಗೆ ತಾನೆ ಹಾಡಿಯಾಳೋ ಎಂದು ಯೋಚಿಸುತ್ತಾ ‘ನಿಮ್ಮಿಷ್ಟ ಬಿಡಿ, ನಾನು ಹೇಳ್ತಿರೋದು ನಿಮಗೆ ಸರಿಕಾಣ್ತಿಲ್ಲ’ ಎಂದು ನಕ್ಕು ಅಲ್ಲಿಗೆ ಆ ವಿಷಯವನ್ನು ಮುಗಿಸಿದಂತೆ paper ಓದುತ್ತಾ ಕುಳಿತುಬಿಟ್ಟರು.

ನಂತರ ದಾರಿಯುದ್ದಕ್ಕೂ ಮೌನ. ಬಸ್ಸು ಬೆಂಗಳೂರನ್ನು ತಲುಪಿತು. ಇವರಿಬ್ಬರೂ ಇಳಿದರು. ಅಡಿಗರು ‘ಆಯ್ತು, ಬರ್ತೀನಮ್ಮ. ಕಾಳಿಂಗರಾಯರ್ಗೆ ಕೇಳ್ದೇಂತ ಹೇಳಿ, And excuse me if i have wounded your feelings’ ಎಂದರು. ಅದಕ್ಕೆ ಮೋಹನ್‌ಕುಮಾರಿ ನಗುತ್ತಲೇ ‘ಹಾಗೇನಿಲ್ಲಾ ಸಾರ್. ನಿಮ್ಮ ಈ ಕವನವನ್ನ ಇಂದು ಮಧ್ಯಾಹ್ನ ಹಾಡ್ದೆ ಇದ್ರೆ ತಾನೆ ಆ ಯೋಚ್ನೆ. ನಾನಿದನ್ನ ಖಂಡಿತ ಹಾಡ್ತೀನಿ. ನೀವು ತುಂಬ ದೊಡ್ಡವರು. ಇದಕ್ಕಿಂತ ಹೆಚ್ಗೆ ನಾನು ಏನ್ಸಾರ್ ಹೇಳ್ಲಿ, ಆಶೀರ್ವಾದ ಮಾಡಿ’ ಎನ್ನುತ್ತಿದ್ದಂತೆ ಹತ್ತಿರ ಬಂದ ಆಟೋ ಹತ್ತಿ ಕಣ್ಮರೆಯಾದರು.

ಈ ಭಂಡ ಹುಡುಗಿಯ ಮೊಂಡುತನವನ್ನು ಕಂಡ ಅಡಿಗರ ದುಂಡು ಮುಖದಲ್ಲಿ ನಗೆ ಮಿಡಿಯಿತು.

ಅಂದು ಮಧ್ಯಾಹ್ನ ‘ಈಗ ಮೋಹನ್ ಕುಮಾರಿಯವರಿಂದ ಭಾವ ಗೀತೆಗಳು. ಮೊದಲಿಗೆ ಗೋಪಾಲಕೃಷ್ಣ ಅಡಿಗರ ಒಂದು ಕವನ’ ಎಂದು ಬಾನುಲಿ ಬಿತ್ತರಿಸಿತು. ಮೋಹನ್ ಆ ಹಾಡನ್ನು ಹಾಡಿದರು. ಅವರ ಕಾರ್ಯಕ್ರಮ ಮುಗಿಯಿತು.

ಹೀಗೆ ಮೋಹನ್ ಕುಮಾರಿ ಹಾಡಿದ್ದನ್ನು ಮನೆಯಲ್ಲಿದ್ದು ಆಲಿಸಿದ ಅಡಿಗರು ಆಕಾಶವಾಣಿಯ ದಿಗ್ದರ್ಶಕರಿಗೆ ದೂರವಾಣಿಯಲ್ಲಿ ಮಾತನಾಡಿ ಮೋಹನ್‌ಕುಮಾರಿ ತಮ್ಮ ಕವನವನ್ನು ಹಾಡಿದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಆ ವಿಷಯವನ್ನು ಕೂಡಲೆ ಮೋಹನ್‌ಕುಮಾರಿಗೆ ತಿಳಿಸಿರೆಂದು ಹೇಳಿದರಂತೆ. ಇದು ಅಡಿಗರ ಉದಾರ ವ್ಯಕ್ತಿತ್ವ ಹಾಗೂ ಅಂತಃಕರಣ.

ಇದಾದ ನಂತರ ಅಡಿಗರ ಕವನಗಳನ್ನು ಮೋಹನ್‌ರು ಹೆಚ್ಚು ಹೆಚ್ಚಾಗಿ ಹಾಡಲಾರಂಭಿಸಿದರು. ಆದರೆ ಮತ್ತೆ ಅಡಿಗರು ಮೋಹನ್ ಕುಮಾರಿಯವರ ಹಾಡುಗಾರಿಕೆಯ ಬಗ್ಗೆ ಚಕಾರವೆತ್ತಲಿಲ್ಲ. ಬದಲಿಗೆ ಈಕೆಯನ್ನು ಕಂಡಾಗಲೆಲ್ಲಾ ‘ಭೇಷ್, ಭೇಷ್’ ಅನ್ನಲಾರಂಭಿಸಿದರಂತೆ.

* * *