ನನ್ನ ನೆಚ್ಚಿನ ಕಾಳಿಂಗರಾಯರು ಕಲೈಕ್ಯರಾಗಿ ಹನ್ನೆರಡು ವರ್ಷದ ಮೇಲಾಯಿತು. ಸುಮಾರು ಮೂವತ್ತು ವರುಷಗಳ ಕಾಲ ಅವರ ಸ್ನೇಹ, ಸಂಪರ್ಕ ಲಾಭವನ್ನು ಪಡೆದಿದ್ದ ನನಗೆ, ರಾಯರು ಇನ್ನಿಲ್ಲವೆಂದಾಗ ಇಂದಿಗೂ ಈ ಮಾತನ್ನು ನಂಬುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಅವರ ಹಾಡನ್ನು ಕೇಳಿದಾಗಲೆಲ್ಲಾ ಈಗಲೂ ನಮ್ಮ ಕಾಳಿಂಗರಾಯರು ಮೈಕನ್ನು ಎಡಗೈಯಲ್ಲಿ ಹಿಡಿದು ಬಲಗೈಯನ್ನು ಬೀಸಿ ಆಡಿಸುತ್ತಾ, ನಲಿಯುತ್ತಾ, ಬೀಗುತ್ತಾ ಹಾಡುತ್ತಿರುವ ಚಿತ್ರವೇ ಎದುರು ಬಂದು ನಿಲ್ಲುತ್ತದೆ. ಅಂತಹ ಅಳಿಸಲಾಗದ ಛಾಪನ್ನು ನಮ್ಮಲ್ಲಿ, ಅವರ ನಿಕಟ ಸಂಪರ್ಕ ಹೊಂದಿದ್ದ ಕೆಲವರಲ್ಲಿ ಒತ್ತಿ ಅವರು ಅದೃಶ್ಯರಾಗಿದ್ದಾರೆ.

ನಾನು ಕಾಳಿಂಗರಾಯರ ಬಗ್ಗೆ ಬರೆಯಲು ಹೊರಟಾಗ ಆರಂಭದಲ್ಲಿ ನನಗೆ ಅನಿಸಿದ್ದು, ಈ ಮಹಾರಾಯನ ಮೇಲೆ ಬರೆಯುವುದು ಎಷ್ಟು ತಾನೇ ಇದೆ. ಅಬ್ಬಬ್ಬಾ ಎಂದರೆ ಒಂದೆರಡು ಲೇಖನವಾಗಬಹುದು ಎಂದು ಭಾವಿಸಿ ಬರೆಯಲಾರಂಭಿಸಿದೆ. ಆದರೆ ಬರೆಬರೆಯುತ್ತಾ ನನ್ನ ನೆನಪಿನಂಗಳದಿಂದ ಉಕ್ಕಿ ಬರಲಾರಂಭಿಸಿದ ರಾಯರ ವಿಚಾರಗಳನ್ನು ನನ್ನ ಲೇಖನಿ ಕಕ್ಕಲಾರಂಭಿಸಿದಾಗ, ಒಂದೆರಡು ಲೇಖನವೆಂದುಕೊಂಡದ್ದು ಮೂವತ್ತಾರು ಲೇಖನಗಳನ್ನೂ ಮೀರಿ ಮುಂದುವರಿಯಿತು. ಇನ್ನೂ ಬರೆಯುವುದು ಸಾಕಾದಷ್ಟಿದೆ, ಬೇಕಾದಷ್ಟಿದೆ.

ಈಗ ಸದ್ಯಕ್ಕೆ ಇತಿ, ಮಿತಿಗಳಿಗನುಗುಣವಾಗಿ, ಮುಖ್ಯವಾಗಿ ಪ್ರಕಾಶಕರ ಪರಿಸ್ಥಿತಿಯನ್ನು ಪರಿಗಣಿಸಿ, ಕಾಳಿಂಗರಾಯರನ್ನು ಕುರಿತು ನಾನು ಬರೆದಿರುವ ಈ ಇಪ್ಪತ್ನಾಲ್ಕು ಪ್ರಸಂಗಗಳನ್ನಷ್ಟೆ ಈ ಪುಸ್ತಕದಲ್ಲಿ ಓದುಗರಿಗೆ ನೀಡುತ್ತಿದ್ದೇನೆ. ಇದು ಮೊದಲ ಕಂತು. ಪ್ರೋತ್ಸಾಹ ದೊರೆತದ್ದೇ ಆದರೆ ಇಂಥದೇ ಇನ್ನೂ ಒಂದೆರಡು ಕಂತುಗಳನ್ನು ನೀಡಲು ನಾನಂತೂ ಸಿದ್ಧನಿದ್ದೇನೆ. ಈ ಸಾಧನೆಗೆ ಓದುಗರ ಅಭಿಮಾನ, ಅದಕ್ಕಿಂತ ದೈವಾನುಗ್ರಹ ಮುಖ್ಯ.

ಈ ಇಪ್ಪತ್ನಾಲ್ಕು ಲೇಖನಗಳನ್ನೂ ಓದಿ, ವಿಮರ್ಶಿಸಿ, ಮುನ್ನುಡಿಯನ್ನು ಬರೆದವರು ನನ್ನ ಆತ್ಮೀಯ ಮಿತ್ರರಾದ ಪಿ. ಶ್ರೀನಿವಾಸರಾವ್‌ರವರು. ನನ್ನಂತೆಯೇ ಇವರೂ ಕಾಳಿಂಗರಾಯರ ಜತೆಗಿದ್ದವರು. ರಾಯರ ಬಗ್ಗೆ ಅವರ ಅನಿಸಿಕೆಯನ್ನು ಸರಳವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ‘ಉತ್ತಮ ವಿಮರ್ಶಕ’, ‘ಒಳ್ಳೆಯ ಕಥೆಗಾರ’ ಎಂದು ಹೆಸರು ಪಡೆದಿರುವ ಶ್ರೀನಿವಾಸರಾಯರು ನನ್ನ ಈ ಲೇಖನಗಳನ್ನೋದು ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದು ಕರುಣಿಸಿದ್ದಾರೆ; ಅವರನ್ನು ನಾನು ಸ್ಮರಿಸುತ್ತೇನೆ.

ಖ್ಯಾತಕವಿ, ವಿಮರ್ಶಕ ಸುಮತೀಂದ್ರ ನಾಡಿಗರು ಈ ಲೇಖನಗಳನ್ನೋಡಿ ಮೆಚ್ಚಿ ಪ್ರೋತ್ಸಾಹಿಸಿದ್ದಾರೆ. ಡಾ|| ಎಚ್.ಕೆ. ರಂಗನಾಥ್, ಮಾಸ್ಟರ್ ಹೀರಣಯ್ಯ, ಎಸ್. ಎನ್. ಶಿವಸ್ವಾಮಿ, ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್ , ಎಚ್. ಆರ್. ಲೀಲಾವತಿ, ಯೋಗಾನರಸಿಂಹ, ನಂದೀಶ್ವರ್, ನ. ನಾಗಲಿಂಗಸ್ವಾಮಿ ಇವರೆಲ್ಲಾ ಕಾಳಿಂಗರಾಯರನ್ನು ಕುರಿತು ತಮ್ಮ ಅನಿಸಿಕೆ, ಅನುಭವಗಳನ್ನು ತಿಳಿಸಿದ್ದಾರೆ.

ಸೋಹನ್‌ ಕುಮಾರಿ, ಮೋಹನ್ ಕುಮಾರಿಯವರು ಕಾಳಿಂಗರಾಯರ ಜೊತೆಗೂಡಿ ಐದು ದಶಕಗಳಿಗೂ ಹೆಚ್ಚು ಕಾಲ ಓಡಾಡಿದವರು. ರಾಯರ ನೆರಳಿನಂತೆ ಅವರ ಜೊತೆಗೇ ಇದ್ದ ಈ ಸಹೋದರಿಯರು, ರಾಯತು ತಮ್ಮ ಜೀವಿತ ಕಾಲದಲ್ಲಿ ಅನುಭವಿಸಿದ ನಲಿವು, ನೋವುಗಳನ್ನು ತಾವೂ ಅನುಭವಿಸಿದರು. ಸಂತೋಷ, ಸಂಭ್ರಮದ ದಿನಗಳಲ್ಲಿ ರಾಯರೊಡನಿದ್ದ ಇವರು ಕಷ್ಟದ ದಿನಗಳಲ್ಲಿ ಅವರ ಕೈಬಿಡಲಿಲ್ಲ. ರಾಯರು ಮೊದಲಿಗೆ ಇವರನ್ನು ಸಾಕಿ ಸಲಹಿದಂತೆ, ರಾಯರನ್ನು ಇವರೂ ಸಲಹಿದರು, ರಾಯರ ಕೊನೆಯ ತನಕ.

ಈ ಲೇಖನಗಳನ್ನು ಸಿದ್ಧಪಡಿಸುವಲ್ಲಿ ಹಲವು ಲೇಖನಗಳಿಗೆ ಪೂರಕವೆಂಬಂತೆ ಸೋಹನ್‌ಕುಮಾರಿಯವರು ಕಾಳಿಂಗರಾಯರನ್ನು ಕುರಿತು ಸಾಕಷ್ಟು ವಿಚಾರಗಳನ್ನು ನೀಡಿ ಸಹಕರಿಸಿದ್ದಾರೆ, ಅವರಿಗೆ ನಾನು ಋಣಿ.

‘ಕನ್ನಡ ಪ್ರಭ’ ಪತ್ರಿಕೆಯ ಸಂಪಾದಕರಾದ ಶ್ರೀ ವೈ.ಎನ್.ಕೆ. ಅವರನ್ನು ಅತ್ಯಂತ ಆತ್ಮೀಯತೆ ಹಾಗೂ ಗೌರವದಿಂದ ನಾನು ನೆನೆಯುತ್ತೇನೆ. ಈ ಲೇಖನಗಳನ್ನು ಮೆಚ್ಚಿ ಕನ್ನಡ ಪ್ರಭದಲ್ಲಿ ಪ್ರತಿ ಭಾನುವಾರವೆಂಬಂತೆ ಇಪ್ಪತ್ತನಾಲ್ಕು ಕಂತುಗಳಲ್ಲಿ ಇವನ್ನು ಪ್ರಕಟಿಸಿ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಹಾಗೆಯೇ ಕನ್ನಡ ಪ್ರಭದ ಸಂಪಾದಕ ಬಳಗದಲ್ಲಿರುವ ಸೀತಾರಾಂ, ಶ್ಯಾಮ್‌ಸುಂದರ್, ಸುಧೀಂದ್ರ, ಸುಧಾಕರ್‌, ಕುಮಾರ್, ಚಂದ್ರಶೇಖರಯ್ಯ ಇವರೆಲ್ಲರನ್ನೂ ನಾನು ಸ್ಮರಿಸುತ್ತೇನೆ. ಈ ಲೇಖನಗಳನ್ನು ಪ್ರಕಟಿಸುವಲ್ಲಿ ಕಾಳಜಿ ವಹಿಸಿದ ಕನ್ನಡ ಪ್ರಭದ ಮುಖ್ಯ ಸಹ ಸಂಪಾದಕ ಸೀತಾರಾಂ, ಶ್ಯಾಮ್‌ಸುಂದರ್‌ಅವರಿಗೆ ನನ್ನ ಇನ್ನಷ್ಟು ವಂದನೆಗಳು.

ಅಲ್ಲದೆ ಕಾಳಿಂಗರಾಯರ ಸುಂದರವಾದ ಚಿತ್ರವನ್ನು ರಚಿಸಿಕೊಟ್ಟಿರುವ ಸುಧಾಕರ್‌ಅವರನ್ನು ನಾನು ಸ್ಮರಿಸುತ್ತೇನೆ. ಮತ್ತು ಈ ನನ್ನ ಬರಹವನ್ನು ಪುಸ್ತಕ ರೂಪದಲ್ಲಿ ತರುತ್ತಿರು ನನ್ನ ಪ್ರಕಾಶಕ ಮಿತ್ರರಾದ ಶ್ರೀ ತೋಂಟಾಪೂರ್‌ಅವರಿಗೆ ಈ ದಿಶೆಯಲ್ಲಿ ಶುಭವಾಗಲೆಂದು ಹಾರೈಸುತ್ತೇನೆ.

ಇತಿ ತಮ್ಮವ,
ಬಿ.ಎಸ್. ಕೇಶವರಾವ್
೨-೨-೧೯೯೩
ಬೆಂಗಳೂರು.

* * *