ಮೈಸೂರು ಸುಗಮ ಸಂಗೀತ ಅಕಾಡೆಮಿಯನ್ನು ಹಲವಾರು ವರ್ಷಗಳಿಂದ ನಡೆಸುತ್ತಿದ್ದು. ಐದರಿಂದ ಐವತ್ತು ವರ್ಷ ಪ್ರಾಯವಿರುವ ಅನೇಕ ಶಿಷ್ಯ ಶಿಷ್ಯೆಯರಿಗೆ ಸುಗಮ ಸಂಗೀತದಲ್ಲಿ ತರಬೇತಿ ನೀಡುತ್ತಿದ್ದು. ಈ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವ ಶ್ರೀಮತಿ ಎಚ್. ಆರ್. ಲೀಲಾವತಿಯವರನ್ನು ೧೩-೬-೧೯೯೩ ರಂದು ಬೆಳಿಗ್ಗೆ ಭೇಟಿಯಾಗಿ ಕಾಳಿಂಗರಾಯರನ್ನು ಕುರಿತು ಮಾತನಾಡುತ್ತಿದ್ದೆ.

ಲೀಲಾವತಿಯವರು ಕಾಳಿಂಗರಾಯರನ್ನು ಬಹು ಹಿಂದಿನಿಂದ ಬಲ್ಲವರು. ಬಾನುಲಿಯಲ್ಲಿ ಪ್ರಸಾರವಾಗುತ್ತಿದ್ದ ಬಹುತೇಕ ಗೀತ ರೂಪಕಗಳಲ್ಲಿ ರಾಯರೊಡನೆ ಕೂಡಿ ಹಾಡಿದವರು. ಈ ಪೈಕಿ ಆರ್. ಸಿ. ಭೂಸನೂರ್‌ಮಠ್‌ಅವರ ‘ಅಕ್ಕಮಹಾದೇವಿ’ ಎನ್. ಕೆ. ಕುಲಕರ್ಣಿಯವರ ‘ಗೆಲುವಿನ ಗುಡಿ’ ಮತ್ತೆ ‘ಮೋಹನಮಂತ್ರ’ ಇವುಗಳಲ್ಲೆಲ್ಲಾ ಲೀಲಾವತಿಯವರು ರಾಯರೊಡನೆ ಹಾಡಿದ್ದು ಇವುಗಳ ಧ್ವನಿಮುದ್ರಿಕೆ (tape)  ಗಳನ್ನು ರಾಯರ ಜ್ಞಾಪಕಾರ್ಥವಾಗಿ ಬಹು ಎಚ್ಚರಿಕೆಯಿಂದ ಇಂದಿಗೂ ಇರಿಸಿಕೊಂಡಿದ್ದಾರೆ. ಇದಲ್ಲದೆ ಆಕಾಶವಾಣಿಯವರು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ನಡೆಸುತ್ತಿದ್ದ ಸುಗಮ ಸಂಗೀತದ ಬಹುತೇಕ ಕಾರ್ಯಕ್ರಮಗಳಲ್ಲಿ ಲೀಲಾವತಿಯವರು ರಾಯರ ಜೊತೆ ಪಾಲ್ಗೊಂಡು ಹಾಡಿದ್ದಾರೆ! ‘ಅಂದಿನ ದಿನಗಳಲ್ಲಿ’ ಕಾಳಿಂಗರಾಯರೊಡನೆ ಹಾಡುವುದು ನನಗೆ ಹೆಮ್ಮೆಯ ಸಂಗತಿಯಾಗಿತ್ತು’ ಎಂದು ಹೇಳುವಾಗಲೂ ಈಕೆಯ ಮುಖದ ಮೇಲೆ ಹೆಮ್ಮೆಯ ಮಿಂಚು ಮಿಡಿಯುತ್ತಿದ್ದುದನ್ನು ನಾನು ಗಮನಿಸಿದ್ದೆ.

ಕಾಳಿಂಗರಾಯರ ಹಾಸ್ಯ ಪ್ರವೃತ್ತಿ ಬಗ್ಗೆ ಹೇಳುತ್ತಾ ನಡೆದ ಈ ಒಂದು ಪ್ರಸಂಗವನ್ನು ಶ್ರೀಮತಿಯವರು ನಗುನಗುತ್ತ ನನಗಂದು ತಿಳಿಸಿದರು.

ಕಾಳಿಂಗರಾಯರು ಒಮ್ಮೆ ಒಂದು ಕಡೆ ಹಾಡಲು ಹೋಗಿದ್ದರು. ಅವರೊಬ್ಬರೇ ಹಾಡುವ ಕಾರ್ಯಕ್ರಮ. ಆ ಊರಿನಲ್ಲೇ (ತೀರ್ಥಹಳ್ಳಿ) ತಮಗೆ ಪಕ್ಕವಾದ್ಯದವರು ಸಿಗಬಹುದೆಂದೆಣಿಸಿ ರಾಯರು ಕೈಬೀಸಿಕೊಂಡು ಅಲ್ಲಿಗೆ ಹೋದಾಗ ಆ ಊರಿನಲ್ಲಿ ಇವರಿಗೆ ಪಕ್ಕವಾದ್ಯ ನುಡಿಸಲು ಯಾರೂ ಸಿಗುವುದಿಲ್ಲವೆಂಬುದರ ಅರಿವಾಯಿತು. ಕಾರ್ಯಕರ್ತರನ್ನು ಕರೆದು ಕಾಳಿಂಗರಾಯರು ‘ಇದೆಂಥಾ ಊರ್ರೀ? ಹಾರ್ಮೋನಿಯಮ್ಮು ತಬಲ ನುಡ್ಸೋರು ಯಾರೂ ಇಲ್ಲಿ ಇಲ್ದೇ?’ ಎನ್ನಲು ಕಾರ್ಯಕರ್ತರು ‘ಇಲ್ಲಿ ಯಾರೂ ಇಲ್ಲಾ ಸಾರ್, ನಮ್ಮೂರಿನ ಭಜನೆ ಮನೆಯಲ್ಲಿ ಹಾರ‍್ಮೋನಿಯಮ್, ತಬಲ, ತಾಳ, ಇವುಗಳ್ನ ನುಡಿಸೋರು ಒಂದಿಷ್ಟು ಜನ ಇದ್ದಾರೆ. ಅವ್ರು ನಿಮ್ಗೆ ಪಕ್ಕವಾದ್ಯ ನುಡಿಸೋದೂಂದ್ರೆ…’ ಎಂದು ರಾಗವೆಳೆಯಲು ಕಾಳಿಂಗರಾಯರು ನಗುತ್ತಾ “ಮುಳುಗೋ ಹೊತ್ನಲ್ಲಿ ಮನುಷ್ಯ ಹುಲ್ಕಡ್ಡೀನೇ ಹಿಡ್ಕೊಳ್ಳೋಲ್ವೇ, ಹಾಗೆ ಈಗಾಗಿದೆ ನನ್ನ ಪರಿಸ್ಥಿತಿ, ಬೇಗ ಹೋಗಿ ಅವ್ರನ್ನೆಲ್ಲಾ ಕರ್ಕೋಂಡ್ಬನ್ನಿ, with their instruments, quick?’ ಎನ್ನಲು ಅರ್ಥವಾಗದ ಆ ಕಾರ್ಯಕರ್ತರು ಓಡಿಹೋಗಿ ತಮ್ಮೂರಿನ ಭಜನೆ ಮನೆಯಲ್ಲಿದ್ದ ಆ ಆರ್ಕೆಸ್ಟ್ರಾ ತಂಡದವರನ್ನು ಕರೆತಂದರು. ಇವರೆಲ್ಲಾ ವೇದಿಕೆಯನ್ನೇರಿ ತಂತಮ್ಮ ವಾದ್ಯಗಳನ್ನು ರಾಯರ ಶ್ರುತಿಗೊಪ್ಪುವಂತೆ ಸಿದ್ದಪಡಿಸಿಕೊಂಡರು. ಆ ವಾದ್ಯವೃಂದದ ಮುಖ್ಯಸ್ಥ ತನ್ನ ತಂಡದವರಿಗೆ ‘ನೋಡ್ರಪ್ಪ ಈ ಕಾಳಿಂಗರಾಯ್ರು ಬೋ ದೊಡ್ಡ ಸಂಗೀತ ವಿದ್ವಾಂಸರು. ಪಿಚ್ಚಾರ‍್ನಾಗೆ ಮ್ಯೂಜಿಕ್ ಕೊಡಾದು ಇವ್ರೇನೆ. ಅಂಗಂತ ಎದರ‍್ಕೊಬ್ಯಾಡ್ರಿ. ಅವ್ರು ಪದ್ಗೋಳ್ನ ಯೇಳ್ತಿದ್ದಂಗೆ ಧೈರ್ಯವಾಗಿ ದಂಕಟ್ಟಿ ಬಾರಸ್ಬುಡಿ’ ಎಂದು ಎಚ್ಚರಿಕೆ ಮಾತನ್ನು ಹೇಳುತ್ತಿದ್ದಾಗ ಅವನ ಧ್ವನಿಯೇ ನಡುಗುತ್ತಿತ್ತು. ಆಯಿತು. ಕಾಳಿಂಗರಾಯರು ಬಂದರು. ವೇದಿಕೆಯನ್ನೇರಿ ನಿಂತರು. ‘ಬ್ರಹ್ಮ ನಿಂಗೆ ಜೋಡಸ್ತೀನಿ ಎಂಡ ಮುಟ್ಟಿದ್ ಕೈನ’ ಹಾಡನ್ನು ಹಾಡಲಾರಂಭಿಸಿದರು. ಇವರು ಹಾಡು ಶುರು ಹಚ್ಚುತ್ತಲೇ ಹಿಂದೆ ಮುಂದೆ ನೋಡದೆ ಇವರ ಸುತ್ತ ಪವಡಿಸಿದ್ದ ಆ ಭಜನೆ ಮನೆಯ ವಾದ್ಯಗಾರರು ಬಹು ಉತ್ಸಾಹ ಹಾಗೂ ಚಬಕಿನಿಂದ ತಂತಮ್ಮ ವಾದ್ಯಗಳನ್ನು ಬಾರಿಸಲಾರಂಭಿಸಿದರು. ಕಾಳಿಂಗರಾಯರು ‘ಬ್ರಹ್ಮ ನಿಂಗೆ ಜೋಡಿಸ್ತೀನಿ’ ಹಾಡನ್ನು ಪಾಶ್ಚಾತ್ಯ ಶೈಲಿಯಲ್ಲಿ ಹಾಡುತ್ತಿದ್ದರೆ ಈ ವಾದ್ಯಗಾರರು ಅದನ್ನು ಭಜನೆ ಶೈಲಿಯಲ್ಲಿ ನುಡಿಸುತ್ತಿದ್ದಾರೆ. ರಾಯರು ಇವರ ಧಾಟಿ ಹಾಗಲ್ಲ ಹೀಗೆ ಎಂದು ಹೇಗ್ಹೇಗೊ ಸನ್ನೆ ಮಾಡಿ ಸೂಚಿಸಿದರು. ಅದೆಲ್ಲಾ ಏನೂ ಅರ್ಥವಾಗದ ಆ ಭಜನೆ ವಾದ್ಯಗೋಷ್ಠಿಯವರು ತಮ್ಮ ಶೈಲಿಯಲ್ಲೇ ಬಾರಿಸುತ್ತಿರಲು, ಅವರ ಕಷ್ಟವನ್ನು ಅರ್ಥಮಾಡಿಕೊಂಡ ರಾಯರು ತಾವೇ ಆ ಹಾಡನ್ನು ಭಜನೆ ಶೈಲಿಯಲ್ಲಿ ಹಾಡಲಾರಂಭಿಸಿ ಮುಗಿಸಿದಾಗ ಆ ವಾದ್ಯವೃಂದದವರಿಗೆ ಹಾಗೂ ಶ್ರೋತೃಗಳಿಗೆ ಆದ ಆನಂದ ಅಷ್ಟಿಷ್ಟಲ್ಲ. ಚಪ್ಪಾಳೆಯ ಸುರಿಮಳೆ. once more’ ಅಬ್ಬರ. ಆ ವಾದ್ಯವೃಂದದವರು ಅಷ್ಟು ವರುಷ ಭಜನೆ ಮನೆಯಲ್ಲಿ ವಾದ್ಯ ನುಡಿಸಿದುದಕ್ಕೆ ಅಂದು ತಮ್ಮ ಜನ್ಮ ಸಾರ್ತಕವಾಯಿತು ಎಂದುಕೊಂಡರಂತೆ.

ಲೀಲಾವತಿಯವರು ರಾಯರ ರಸಿಕತ್ವದ ಬಗ್ಗೆ ಹೇಳುತ್ತಾ ಇದೊಂದು ಪ್ರಸಂಗವನ್ನು ಹೇಳಿದರು.

ಒಮ್ಮೆ ಬೆಂಗಳೂರು ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಕಾಳಿಂಗರಾಯರು ಹಾಡುತ್ತಿದ್ದರು. ಆ ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ರಾಜಕಾರಿಣಿಯೊಬ್ಬರು ವಹಿಸಬೇಕಿತ್ತು. ಆದರೆ ಆಕೆ ‘ನಾನು ಬರುವುದು ಕೊಂಚ ತಡವಾಗುತ್ತದೆ. ಕಾಳಿಂಗರಾಯರನ್ನು ಕಾಯಿಸುವುದು ಬೇಡ, ಅವರು ಹಾಡುತ್ತಿರಲಿ’ ಎಂದು ತಿಳಿಸಲು, ರಾಯರು ತಮ್ಮ ಮಾಮೂಲು ಶೈಲಿಯಲ್ಲಿ ಬೀಗುತ್ತಾ ಬಾಗುತ್ತಾ ಹಾಡುತ್ತಿದ್ದರು. ಹೀಗೆ ರಾಯರು ‘ನಗೆಯು ಬರುತಿದೆ’ ದೇವರನಾಮವನ್ನು ಹಾಡುತ್ತಿರಲು ಆ ರಾಜಕಾರಿಣಿ ಆಗಮಿಸಿದರು. ಅವರು ಒಳ ಬರುತ್ತಿದ್ದಂತೆ ರಾಯರು ತಾವು ಹಾಡುತ್ತಿದ್ದ ದೇವರನಾಮವನ್ನು ನಿಲ್ಲಿಸಿ, ಆಕೆಯತ್ತಲೇ ಕೈಬೀಸಿ ‘ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ’ ಎಂದು ಹಾಡಲು ಶುರು ಮಾಡಿಬಿಟ್ಟರು. ಇದನ್ನು ಕೇಳಿದ ಜನ ಕೇಕೆ ಹೊಡೆದು ನಕ್ಕರು. ಆ ರಾಜಕಾರಣಿಯೂ ನಗುತ್ತಾ ನಾಚಿ ನೀರಾಗಲು ಅವರ ಉಬ್ಬಿದ ಕೆನ್ನೆಗಳ ಮೇಲೆ ಕೆಂಪೇರಿತಂತೆ. ಆ ರಾಜಕಾರಿಣಿ ಬೇರಾರೂ ಅಲ್ಲ. ಅವರೇ ಕಬ್ಬಳ್ಳಿ ನಾಗರತ್ನಮ್ಮನವರು! ಈಕೆ ಕಾಳಿಂಗರಾಯರ ಕಟ್ಟಾ ಅಭಿಮಾನಿಯಾಗಿದ್ದವರು.

ಕಾಳಿಂಗರಾಯರು ಕೇಳುಗರ ಮೇಲೆ ಅದೆಂತಹ ಮೋಡಿಯನ್ನು ಬೀರುತ್ತಿದ್ದರೆನ್ನುವುದಕ್ಕೆ ಇನ್ನೊಂದು ಪ್ರಸಂಗ ಹೀಗಿದೆ, ಲೀಲಾವತಿಯವರ ನಿರೂಪಣೆಯಲ್ಲಿ.

ಒಮ್ಮೆ ಬಾಳೆಹೊನ್ನೂರಿನಲ್ಲಿ ಕಾಳಿಂಗರಾಯರು ಹಾಡುವುದಿತ್ತು. ಅಂದು ಜಿಟಿ ಜಿಟಿ ಎಂದು ಜಿನುಗುತ್ತಿದ್ದ ಮಳೆ, ನೆಲವೆಲ್ಲಾ ಕೆಸರುಮಯ. ಆದರೂ ಕಾಳಿಂಗರಾಯರ ಸಂಗೀತಸುಧೆಯನ್ನಾಲಿಸಲು ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮ ಪ್ರಾರಂಭವಾಯ್ತು. ಕಾಳಿಂಗರಾಯರು ಹುಟ್ಟು ರಸಿಕ ಸ್ವಭಾವದವರು. ಅದರಲ್ಲೂ ಸುಂದರವಾದ ಹೆಣ್ಣುಗಳು ಎದುರಿಗಿದ್ದಾಗ ರಾಯರು ಗರಿಗೆದರಿದ ನವಿಲಿನಂತಾಗುತ್ತಿದ್ದರು. ಹೀಗೆ ಹಾಡುತ್ತಿರಬೇಕಾದರೆ ಮುಂದಿನ ಸಾಲಿನಲ್ಲಿ ಹಾಸಿದ್ದ ಟಾರ್‌ಪಾಲಿನ ಮೇಲೆ ಸುಂದರಿಯಾದ ಹೆಂಗಸೊಬ್ಬಳು ತನ್ನ ಮಗುವನ್ನು ಪಕ್ಕದಲ್ಲೇ ಮಲಗಿಸಿಕೊಂಡಿದ್ದು ರಾಯರ ಸಂಗೀತವನ್ನು ಕೇಳುವುದರಲ್ಲಿ ಮೈಮರೆತ್ತಿದ್ದಳು. ಈ ಕಾಳಿಂಗರಾಯರೂ ಮೇಲಿಂದ ಮೇಲೆ ಆ ಹೆಣ್ಣನ್ನೇ ನೋಡುತ್ತಾ ನಗುತ್ತಾ ಹಾಡುತ್ತಿದ್ದರು. ಕಾರ್ಯಕ್ರಮ ಮುಗಿಯಿತು. ರಾಯರು ಎಲ್ಲರಿಗೂ ವಂದಿಸಿ ವೇದಿಕೆಯಿಂದಿಳಿದು ಹೊರಹೊರಟರು.

ಅದುವರೆವಿಗೂ ತದೇಕಚಿತ್ತಳಾಗಿ ರಾಯರ ಸಂಗೀತವನ್ನಾಲಿಸುತ್ತಿದ್ದ ಆ ಸುಂದರ ಹೆಣ್ಣು ಕಾರ್ಯಕ್ರಮದ ನಂತರ ಪಕ್ಕದಲ್ಲಿ ಮಲಗಿಸಿದ್ದ ಮಗುವನ್ನೂ ಮರೆತು ಭ್ರಮೆಗೊಂಡವಳಂತೆ, ರಾಯರ ವ್ಯಕ್ತಿತ್ವ ವರ್ಚಸ್ಸಿಗೆ ಸೋತು, ಅವುಗಳಿಂದ ಆಕರ್ಷಿತಳಾಗಿ, ರಾಯರನ್ನು ಹಿಂಬಾಲಿಸುತ್ತಾ ಅವರ ಹಿಂದೆ ಹಿಂದೆಯೇ ಪೆಂಡಾಲಿನ ಗಡಿಯನ್ನೂ ದಾಟಿ ಬಂದಾಗ, ಅವಳತ್ತ ತಿರುಗಿದ ರಾಯರು ‘ಏನಮ್ಮ ತಾಯಿ? ಎಲ್ಲಿ ನಿನ್ನ ಮಗು?’ ಎಂದು ಎಚ್ಚರಿಸಲು, ಆಗ ಆಕೆ ವಾಸ್ತವ ಪ್ರಪಂಚಕ್ಕಿಳಿದು ‘ಅಯ್ಯಯ್ಯೋ ನನ್ನ ಮಗು, ನನ್ನ ಮಗು’ ಎಂದು ಬಡಬಡಿಸುತ್ತಾ ತನ್ನ ಕಂದನನ್ನರಸಿ ಹಿಂದಕ್ಕೆ ಓಡಿದಳಂತೆ!

ಇನ್ನೊಂದು ಪ್ರಸಂಗ :

ಶ್ರೀ ಎಸ್.ಜಿ. ರಘುರಾಮ್ ಅಂಬುವ ಆಗಿನ್ನೂ ಬಾಲಕ. ಕಾಳಿಂಗರಾಯರೆಂದರೆ ಪ್ರಾಣ. ಹಾಡುವ ಚಟವನ್ನು ಆಗಲೇ ಬೆಳಸಿಕೊಂಡಿದ್ದು ಒಂದೆರಡು ಸಂದರ್ಭದಲ್ಲಿ ರಾಯರೆದುರಿಗೆ ಹಾಡಿಯೂ ಇದ್ದ. ಒಮ್ಮೆ ಮೈಸೂರಿನಲ್ಲಿ ಕಾಳಿಂಗರಾಯರ ಕಾರ್ಯಕ್ರಮವಿತ್ತು. ರಾಯರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸುಮಾರು ಒಂದು ಗಂಟೆ ಹಾಡಿದ ನಂತರ ಒಂದೈದು ನಿಮಿಷ ಪಕ್ಕಕ್ಕೆ ಬಂದು ಸಿಗರೇಟು ಸೇವಿಸಿ ಮತ್ತೆ ಹಾಡಲು ಮೈಕಿನತ್ತ ಧಾವಿಸುತ್ತಿದುದ್ದು ರಾಯರ ಮಾಮೂಲು ಪದ್ಧತಿ. ಹೀಗವರು ಪಕ್ಕಕ್ಕೆ ಬಂದಾಗ ಅಲ್ಲಿಯೇ ನಿಂತಿದ್ದ ಈ ರಘುರಾಮ್ ರಾಯರ ಕಣ್ಣಿಗೆ ಬಿದ್ದ. ಕೂಡಲೆ ರಾಯರು ಇವನನ್ನು ವೇದಿಕೆಯ ಮೇಲೆ ಕರೆದೊಯ್ದು ‘ಈ ಹುಡುಗ ರಘುರಾಮ್ ಅಂತ. ತುಂಬ ಚೆನ್ನಾಗಿ ಹಾಡುತ್ತಾನೆ, ಕೇಳಿ’ ಎಂದು ಜನರಿಗೆ ಹೇಳಿ ರಘುರಾಮನ ಬೆನ್ನು ತಟ್ಟಿ ‘ಧೈರ್ಯವಾಗಿ ಹಾಡು ರಾಜ’ ಎಂದು ಪ್ರೋತ್ಸಾಹಿಸಿ ಹಾಡಿಸಿದ್ದನ್ನು ರಘುರಾಮ್ ಇಂದಿಗೂ ನೆನೆಯುತ್ತಾರೆ. ಯುವಕರನ್ನು ಮುಂದೆ ತರಬೇಕೆಂಬ ಉತ್ಸಾಹ, ಆಸೆ, ರಾಯರಿಗೆ ಸದಾಕಾಲವಿತ್ತು. ಈ ಮೇಲಿನ ಘಟನೆ ಕೇವಲ ಒಂದು ಪುಟ್ಟ ಉದಾಹರಣೆ, ಅಷ್ಟೆ. ಈ ರಘುರಾಮ್ ಶ್ರೀಮತಿ ಲೀಲಾವತಿ ಅವರ ಪತಿ.

ಕಾಳಿಂಗರಾಯರು ಕಣ್ಮುಚ್ಚುವ ಕೆಲವೇ ದಿನಗಳ ಮುಂಚೆ ಈ ದಂಪತಿಗಳಿಬ್ಬರೂ ಕಾಳಿಂಗರಾಯರ ಮನೆಗೆ ಹೋಗಿದ್ದರು. ಲೀಲಾವತಿಯವರು ತಿಳಿಸಿರುವಂತೆ ರಾಯರಿಗೆ ಕೊನೆಗಾಲ ಸಮೀಪಿಸುತ್ತಿದ್ದರೂ ಅದರ ಅರಿವೇ ಇಲ್ಲವೆಂಬಂತೆ ಆ ನಿಟ್ಟಿನಲ್ಲೂ ಸದಾಕಾಲ ಸಂಗೀತದ ಗುಂಗಿನಲ್ಲೇ ಕಾಲ ಹಾಕುತ್ತಿದ್ದರಂತೆ. ಕೈಲಾಗದಿದ್ದರೂ ಸಂಗೀತವನ್ನು ಗುನುಗುವ ಪ್ರಯತ್ನವನ್ನು ಮಾತ್ರ ಕಾಳಿಂಗರಾಯರು ಬಿಟ್ಟಿರಲಿಲ್ಲವಂತೆ.

ಅಪರೂಪಕ್ಕೆ ಆಗಮಿಸಿದ್ದ ತಮ್ಮ ನೆಚ್ಚಿನ ಗಾಯಕಿ ಲೀಲಾವತಿಯನ್ನು ಕಂಡು ರಾಯರಿಗಾದ ಆನಂದ ಅಪಾರ. ಎಷ್ಟು ಬೇಡವೆಂದರೂ ಕೇಳದೆ ಹೊರಗಿನಿಂದ ಸಿಹಿ ತಿಂಡಿಯನ್ನು ತರಿಸಿಕೊಟ್ಟರಂತೆ. ಸ್ವಲ್ಪ ಹೊತ್ತು ಮಾತನಾಡಿದ ನಂತರ ಲೀಲಾವತಿಯವರು ರಾಯರ ಸಮೀಪಕ್ಕೆ ಸರಿದು ‘ಸಾರ್ ನೀವು ಆದಷ್ಟು ಬೇಗ ಚೇತರಿಸಿಕೊಂಡು ಮೊದಲಿನಂತೆ ಹಾಡುವ ಹಾಗಾಗಬೇಕು, ಸಾರ್’ ಎಂದು ನೊಂದು ನುಡಿಯಲು, ಲೀಲಾವತಿಯವರನ್ನು ತೀಕ್ಷ್ಣವಾಗಿ ದಿಟ್ಟಿ ನೋಡುತ್ತಾ ‘Why not, if i get a girl friend like you, I will sing. O.K.?’ ಎಂದು ನಗುತ್ತಾ ಕಣ್ಣು ಮಿಟುಕಿಸಿ ಕೋಲೂರಿಕೊಂಡು ಎದ್ದು ಬಂದು ಲೀಲಾವತಿಯವರ ಕೈ ಹಿಡಿದು ಕುಲಿಕಿದಾಗ ಲೀಲಾವತಿ ದಂಪತಿಗಳ ಕಣ್ಣುಗಳಿಂದ ನೀರು ತೊಟ ತೊಟ. ಅವರಿಗೆ ಸಮಾಧಾನ ಹೇಳಲು ಹೋಗಿದ್ದ ಇವರಿಗೇ ಅವರು ಸಮಾಧಾನ ಹೇಳಿ ನಗುನಗುತ್ತಾ ಕಳುಹಿಸಿಕೊಟ್ಟದ್ದನ್ನು ಇಂದಿಗೂ ನೆನೆಯುವ ಲೀಲಾವತಿಯವರು ಕಣ್ಣೊರೆಸಿಕೊಳ್ಳುತ್ತಾರೆ.

(ಕರ್ನಾಟಕ ರಾಜ್ಯ ಸರ್ಕಾರವು ವಯಸ್ಕರ ಶಿಕ್ಷಣ ಸಮಿತಿ, ಮೈಸೂರು, ವತಿಯಿಂದ ೧೯೮೫ರಲ್ಲಿ ಪ್ರಕಟಿಸಿರುವ ‘ಕನ್ನಡ ಪ್ರಭೆ-ವಿವಿಧ ಲೇಖಕರು’ ಎಂಬ ಪುಸ್ತಕದಲ್ಲಿ ಶ್ರೀಮತಿ ಎಚ್.ಆರ್. ಲಿಲಾವತಿಯವರು ಈ ಹಲವು ವಿಚಾರಗಳನ್ನು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಆದರೆ ನಾನು ಇಲ್ಲಿ ಬರೆದಿರುವುದು ಅವರ ನೇರ ನಿರೂಪಣೆಯನ್ನು ಆಧರಿಸಿ)

* * *