ಕಾಳಿಂಗರಾಯರ ಕಂಠ ನವಿರಾದ ಸುಮಧುರ ಕಂಠವಷ್ಟೇ ಅಲ್ಲ, ಅದು ವಜ್ರ ಕಂಠ! ನನ್ನ ಅವರ ಸುಮಾರು ಮೂವತ್ತು ವರುಷಗಳ ಸ್ನೇಹದಲ್ಲಿ ಎಂದೂ ಅವರು ಗಂಟಲು ಕಟ್ಟಿಕೊಂಡಿತೆಂದು ಹೇಳಿದ್ದು ನನಗೆ ನೆನಪಿಲ್ಲ. ಅದು ಸದಾಕಾಲ ಸಿಗರೇಟು ಸೇದುತ್ತಿದ್ದರು. ದಿನ ತಪ್ಪದಂತೆ ice-cold beer ಕುಡಿಯುತ್ತಿದ್ದರು. ಕುಡಿಯುವಾಗ ಜೊತೆ ಚಿಪ್ಸು, ಪಕೋಡ ಇತ್ಯಾದಿಗಳು ಬೇರೆ. ಋತುಮಾನಗಳ ವ್ಯತ್ಯಾಸವಿಲ್ಲದೆ ಇದನ್ನೆಲ್ಲಾ ವರ್ಷದ ಎಲ್ಲಾ ಕಾಲಗಳಲ್ಲೂ ಸೇವಿಸುತ್ತಿದ್ದರು. ಅಲ್ಲದೆ ಕುಡಿಯುವಾಗ ಸ್ನೇಹಿತರೊಡನೆ ಇತಿಮಿತಿ ಇಲ್ಲದ ಮಾತು. ಸದಾಕಾಲವೂ ಸಂಗ ಸ್ನೇಹಜೀವಿಯಾಗಿದ್ದ ಕಾಳಿಂಗರಾಯರು ಒಬ್ಬರೇ ಒಂದು ಕಡೆ ಕೂತು ಕುಡಿದದ್ದನ್ನು ನಾನು ಕಂಡಿಲ್ಲ. ರಾಯರು ಬಾರೊಳಗೆ ಕಾಲಿಡುತ್ತಿದ್ದಂತೆ, ಸಕ್ಕರೆಯನ್ನು ಕಂಡೊಡನೆ ಇರುವೆಗಳು ಮುತ್ತುವಂತೆ ಸ್ನೇಹಿತರ ಹಿಂಡು ರಾಯರನ್ನು ಮುತ್ತಿ ಸುತ್ತ ಸೇರುತ್ತಿತ್ತು. ಆಗವರ ಗುಂಡಿನ ಗೋಷ್ಠಿಗೆ ಗಮ್ಮತ್ತು. ಅಂತಹ ಗೋಷ್ಠಿಗಳಿಗೆಲ್ಲಾ ರಾಯರೆ ಅಧ್ಯಕ್ಷರು. ಸುತ್ತಲೂ ಸೇರಿರುತ್ತಿದ್ದವರು ಮಾತನಾಡುತಿದ್ದುದರ ಮುಕ್ಕಾಲು ಭಾಗವನ್ನು ಇವರೊಬ್ಬರೇ ಮಾತನಾಡುತ್ತಿದ್ದರು. ಇಂತಹ ಗೋಷ್ಠಿಗಳು ಸಂಜೆ ಆರಕ್ಕೆ ಆರಂಭವಾದರೆ ಮುಗಿದು ಬರ್ಕಾಸ್ತಾಗುತಿದ್ದುದು ರಾತ್ರಿ ಹತ್ತು ಹನ್ನೊಂದರ ನಂತರ. ಅಷ್ಟರಲ್ಲಿ ಇವರೆಷ್ಟು ಸಿಗರೇಟುಗಳನ್ನು ಸುಟ್ಟು ಹಾಕುತ್ತಿದ್ದರೋ, ಅದಕ್ಕೆ ಲೆಕ್ಕವಿಲ್ಲ. ಹೀಗೆಲ್ಲಾ ಇದ್ದರೂ ಅವರ ಗಂಟಲು ಮಾತ್ರ ಗಟ್ಟಿಯಾಗಿದ್ದು. ರಾಯರಿಗೆ ಅವರ ಕೊನೆಯವರೆವಿಗೂ ಕೈಕೊಡಲಿಲ್ಲ!

ಒಮ್ಮೆ, ೧೯೬೩ ರಲ್ಲಿ ಎಂದು ನೆನಪು ಮೈಸೂರಿನ town hall  ನಲ್ಲಿ ರಾಯರ ಸಂಗೀತ ಸಂಜೆ ಕಾರ್ಯಕ್ರಮ, ವಾದ್ಯಗಾರನೊಬ್ಬ ಬಂದಿರಲಿಲ್ಲ. ಆತ ಇದ್ದುದು ಕೊತ್ತಾಲ್ ರಾಮಯ್ಯನವರ ಬೀದಿಯಲ್ಲಿ. ಸರಿ, ‘ಅವನನ್ನು ಕರದ್ಕೊಂಡು ಬರೋಣ ಬನ್ನಿ’ ಎಂದು ರಾಯರು ಜೊತೆಯಲ್ಲಿದ್ದ ನನ್ನನ್ನು ಎಳೆದುಕೊಂಡು ಹೊರಟರು. ಅವನ ಮನೆ ಮುಟ್ಟುತ್ತಿದ್ದಂತೆ ಆ ವಾದ್ಯ ಗಾರನ ಮನೆಯಾಕೆ ಹೊರಬಂದು ‘ಅವರು ಈಗ ತಾನೆ ಟವನ್ ಹಾಲಿಗೆ ಹೋದ್ರು ಸಾರ್’ ಎನ್ನಲು ನಮ್ಮ ರಿಕ್ಷಾವನ್ನು ತಿರುಗಿಸಿದೆವು town hallನ ಕಡೆಗೆ.

ಹೀಗೆ ಹಿಂದಿರುಗುವಾಗ ಮೈಸೂರಿನ ದೊಡ್ಡಗಡಿಯಾರದ ಬಳಿ ಇರುವ ಉಡುಪಿ ಹೋಟೆಲಿನ ಮುಂದೆ ರಾಯರು ರಿಕ್ಷಾವನ್ನು ನಿಲ್ಲಿಸಿದರು. ‘ಹೊಟ್ಟೆ ತುಂಬ ಹಸೀತಿದೆ. ಬೆಳಗ್ನಿಂದ ಏನು ತಿಂದಿಲ್ಲ. rehersal ಮಾಡ್ಸೋ ಭರಾಟೇಲಿ ಈ ಹೊಟ್ಟೇಕಡೆ ಯೋಚನ್ಯೇ ಬರ‍್ಲಿಲ್ಲ. ಬಾ, ಏನಾದ್ರೂ ತಿಂದ್ಕೊಂಡು ಬರೋಣ’ ಎಂದರು. ಅದಕ್ಕೆ ನಾನು ‘ಸದ್ಯ ಈಗ್ಲಾದ್ರೂ ತಿನ್ಬೇಕೂಂತ ಅನ್ನಸ್ತಲ್ಲ. ನಡೀರಿ, ಚೆನ್ನಾಗಿ ತಿನ್ನಿ’ ಎಂದು ಅವರೊಡನೆ ಹೋಟೆಲಿನ ಒಳ ಹೊಕ್ಕೆ. ಅಲ್ಲೊಂದು ಟೇಬಲ್ಲಿನ ಎದುರು ಬದುರು ಕುರ್ಚಿಗಳಲ್ಲಿ ನಾವು ಕೂರುತ್ತಿದ್ದಂತೆ ಮಾಣಿ ಬಂದ. ಆ ಹೋಟೆಲಿನಲ್ಲಿ ಇದ್ದದ್ದು ಇಲ್ಲದ್ದನ್ನೆಲ್ಲಾ ಒಂದೇ ಉಸುರಿನಲ್ಲಿ ಒಪ್ಪಿಸಿದ. ಆತ ಹೇಳಿದ ಪ್ರವರವನ್ನಾಲಿಸಿದ ರಾಯರು ನನ್ನತ್ತ ಬಾಗಿ ‘ಈ ಹೋಟಲ್ಗಳಲ್ಲಿರೋ ಹುಡುಗ್ರು ತಿಂಡಿಗಳ ಪಟ್ಟೀನ ಅದೆಷ್ಟು ಚೆನ್ನಾಗಿ ಉರುಹೊಡ್ದು ಒಪ್ಪಿ ಸ್ತಾರೆ ನೋಡು ! ಅದೇ ನಮ್ಮ group song ನಲ್ಲಿ ಹಾಡೋ ಕೆಲವರ‍್ಗೆ ಇಷ್ಟು ಚುರುಕಾಗಿ ಆಡೋಕೇ ಆಗೊಲ್ಲಾ’ ಎಂದು ನಕ್ಕರು. ನಾನು ‘ಈ ಮಾಣಿ ಗುಣಗಾನ ಸಾಕು, ಮೊದ್ಲು ತಿಂಡೀಗೆ order ಮಾಡಿ; ನಾಲ್ಗೆ ಚುರುಕಾಗಿದೆ ಅಂತ ಇವನ್ನ ನಿಮ್ಮ group ಇಗೆ ಸೇರಸ್ಕೊಂಡ್ರೆ ಇವನಲ್ಲಿ ಹಾಡೋಕ್ಬದ್ಲು ಒಪ್ಸೋದು ಈ ತಿಂಡೀ ಪಟ್ಟೀನ್ನೇ,’ ಎಂದಾಗ ರಾಯರಿಗೆ ತಡೆಯಲಾಗದ ನಗು, ಗಹಗಹಿಸಿ ನಕ್ಕರು.

ಅಷ್ಟರಲ್ಲಿ ಮಾಸಿ ಮಸಿಯಾಗಿದ್ದ ಟವೆಲ್ಲನ್ನು ಸೊಂಟಕ್ಕೆ ಬಳಸಿ, ಕೊಳೆಯಾಗಿದ್ದ ಸ್ಯಾಂಡೋ ಬನಿಯನ್ನು ಧರಿಸಿದ್ದ ಬಾಣಸಿಗನೊಬ್ಬ ಒಂದು ಬಾಣಲೆಯ ಭರ್ತಿ ಆಗತಾನೆ ಕರಿದಿದ್ದ ಉದ್ದಿನ ವಡೆಗಳನ್ನು ನಮ್ಮ ಪಕ್ಕಕ್ಕಿದ್ದ ತಿಂಡಿ ಕಪಾಟುವಿನಲ್ಲಿದ್ದ ಅಲ್ಯೂಮಿನಿಯಂ ತಟ್ಟೆಯೊಳಕ್ಕೆ ಸುರಿದ. ಸಾಕಷ್ಟು ದಪ್ಪನೆ ಗಾತ್ರದ, ಎಣ್ಣೆಯ ಹಬೆ, ಗುಳ್ಳೆಗಳನ್ನು ಸ್ರವಿಸಿ ಕಾರುತ್ತಿದ್ದ ಆ ಬಿಸಿ ಬಿಸಿ ಉದ್ದಿನ ವಡೆಗಳನ್ನು ರಾಶಿಯಲ್ಲಿ ಕಾಣುತ್ತಿದ್ದಂತೆ ಜಿಹ್ವಾ ಚಾಪಲ್ಯಜಿನುಗಿ ರಾಯರ ನಾಲಗೆಯಲ್ಲಿ ನೀರೂರಿತು. ಎದುರು ಸಿದ್ಧವಾಗಿ ತಟ್ಟೆ ಹಿಡಿದು ನಿಂತಿದ್ದ ಮಾಣಿಗೆ ‘ಬೇಗ ವಡೆ, ಏರಟು ಪ್ಲೇಟ್’ ಎಂದರು ರಾಯರು. ಆತ ಸರಸರನೆ ಎರಡು ಪ್ಲೇಟ್ ವಡೆಗಳನ್ನು ತಂದು ನಮ್ಮ ಮುಂದಿರಿಸಿದ.

ರಾಯರ ತಮ್ಮೆದುರು ಮಾಣಿ ತಂದಿರಿಸಿದ ವಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಮಾಣಿಗೆ ‘ಏನಯ್ಯ ಈ ಪಾಟಿ ಎಣ್ಣೆ ಇದ್ರಲ್ಲಿ?’ ಎಂದವರೆ ತಮ್ಮ ಪ್ಲೇಟಿನಲ್ಲಿದ್ದ ವಡೆಗಳನ್ನು ಮುಷ್ಟಿಯಲ್ಲಿರಿಸಿಕೊಂಡು ಬಿಗಿಯಾಗಿ ಹಿಂಡಲು ಆ ವಡೆಗಳಲ್ಲಡಗಿದ್ದ ಎಣ್ಣೆಯ ಹೆಚ್ಚಿನ ಅಂಶ ತೊಟತೊಟನೆ ತೊಟ್ಟಿಕ್ಕಿದ ನಂತರ ಕೈಲಿದ್ದ ವಡೆಯನ್ನು ಚೆಟ್ನಿಯಲ್ಲಿ ಅದ್ದಿ ಒಂದೆರಡು ತುತ್ತಿಗೇ ಅಷ್ಟನ್ನೂ ತಿಂದು ಚಪ್ಪರಿಸಿ – ‘Excellent, Excellent, ತುಂಬ ಚೆನ್ನಾಗಿದೆ’ ಎಂದು ಮತ್ತೆ ಆ ಮಾಣಿಯನ್ನು ಕರೆದು ‘ಬೇಗ ಇನ್ನೆರ್ಡೆರ್ಡು ವಡೆ, ಏರ್ಡು ಪ್ಲೇಟ್’ ಎಂದಗ ನಾನು ‘ಬೇಡ್ ಸಾರ್, ನನಗ್ಬೇಡ’, ನೀವ್ತಿನ್ನಿ’ ಎನ್ನಲು ರಾಯರು ಒಂದು ಸಿಗರೇಟು ಹಚ್ಚಿ ಜೋರಾಗಿ ದಂ ಎಳೆದು ಬಾಯ್ತುಂಬ ಭರ್ತಿಯಾದ ಹೊಗೆಯ ಅರ್ಧದಷ್ಟನ್ನು ತಮ್ಮ ನವಿರಾದ ನಾಸಿಕದ ರಂದ್ರದ್ವಯಗಳಿಂದ ಹೊರಬಿಟ್ಟು ಉಳಿದ ಅರ್ಧವನ್ನು ನುಂಗಿ, ನನ್ನತ್ತ ಛೇಡಿಸುವ ದೃಷ್ಟಿಬೀರಿ ‘ಯಾವೂರ್ ಸಂಕೇತೀನಯ್ಯಾ ನೀನು. ನಿಮ್ಕಡೇಲೆಲ್ಲಾ ವಡೆ ಅಂಬೊಡೇನ ಮೊರ ಮೊರ್ದಲ್ಲೇ ತಂದ್ಸುರೀತಾರೆ ಎಲೇಗೇಂತ ಹೇಳ್ತಿರ್ತೀ… ಇಷ್ಟೇನೆ ನಿನ್ನ ಯೋಗ್ಯತೆ?’ ಎನ್ನುತ್ತಿದ್ದಂತೆ ಮತ್ತೆ ಆ ಮಾಣಿ ಅವರೆದುರು ತಂದಿಟ್ಟ ಒಂದು ಪ್ಲೇಟ್ ವಡೆಯನ್ನು ತಾವೊಬ್ಬರೇ ತಿಂದು ‘Strong ಆಗಿ ಎರಡು ಕಾಫೀ ತೊಗೊಂಬಾರಯ್ಯಾ’ ಎಂದು ಎರಡು ಗ್ಲಾಸ್ ನೀರು ಕುಡಿದು ಬಾಯಿಯನ್ನು ಕರ್ಚೀಫಿನಿಂದ ಒರೆಸಿಕೊಂಡರು. ನಂತರ ಮಾಣಿ ತಂದ ಕಾಫಿಯನ್ನೂ ಕುಡಿದದ್ದಾಯಿತು. ಅಷ್ಟರಲ್ಲಿ ಮಾಣಿ ಬಿಲ್ಲನ್ನು ತಂದು ಟೇಬಲ್ ಮೇಲಿನ ನೀರಿಗೆ ಅಂಟಿಸಿದ. ರಾಯರು ಕರ್ಚೀಫನ್ನು ಮಡಚಿ ಜೇಬಿಗೆ ಸೇರಿಸುತ್ತಾ ಮಾಣಿಗೆ ‘ಆಗ್ಲೆ ಬಿಲ್ಲನ್ನೂ ತಂದ್ಬಿಟ್ಯಾ’? ಎಂದರು. ಅರ್ಥವಾಗದ ನಾನು ‘ಮತ್ತೇನ್ಸಾರ್, ಎಲ್ಲಾ ಆಯ್ತಲ್ಲ, ಹೊರಡೋಣ. Time ಆಗ್ತಿದೆ ಎಂದೆ. ಅದಕ್ಕೆ ರಾಯರು ‘Still twenty minutes more, i say. ಹಾಳಾದ್ದು summer ನೋಡು, ಅಲ್ದೆ ಬ್ರಾಹ್ಮಣಾರ್ತದೋರು ತಿನ್ನೋ ಹಾಗೆ ಅಷ್ಟು ವಡೆಗಳ್ನ ತಿಂದ್ಬೆಟ್ಟೆ ನೋಡು… ಅದು ದಾಹ, ದಾಹ’ ಎಂದರು ಮಗುವಿನಂತೆ. ನಾನು ‘ಇನ್ನಷ್ಟು ನೀರ್ಕುಡೀರೀ’ ಎಂದೆ. ಅದಕ್ಕೆ ರಾಯರು ‘ಛೆ ಛೆ’ ಎಂದು ಇವರನ್ನೇ ನಗುತ್ತಾ ನೋಡುತ್ತಿದ್ದ ಮಾಣಿಗೆ ‘Cold ಆಗಿ ಏನಿದ್ಯಯ್ಯಾ,’ ಎಂದರು. ಅದಕ್ಕವನು ‘ಆರಂಜ್, ಪೈನಾಪಲ್, ಮ್ಯಾಂಗೋ, ರೋಸ್‌ಮಿಲ್ಕ್‌’ ಎಂದು ಪಾನೀಯಗಳ ಪಟ್ಟಿಯನ್ನು ಪಟಪಟನೆ ಒಪ್ಪಿಸಿದ. ರಾಯರು ‘ಆಯ್ತಾಯ್ತು ಬೇಗ ಎರಡು ರೋಸ್ ಮಿಲ್ಕ್ ತೊಗೊಂಬಾ’ ಎಂದು ಹೇಳಿ ಕಣ್ಣು ಮಿಟುಕಿಸಿದರು. ನಂತರ ನಾನಂದೆ ‘ಅಲ್ರೀ ಇನ್ನೆಲ್ಲ ಕಾಲ್ಗಂಟೇಗೆ ಹಾಡೋಕ್ಕೆ ಶುರು ಮಾಡ್ಬೇಕು ನೀವು. ಅಂಥಾದ್ರಲ್ಲಿ ಎಣ್ಣೆ ತೊಟ್ಟಿಕ್ಕೋ ವಡೆಗಳು, ಅದರ್ಮೇಲೆ ಬಿಸಿ ಕಾಫಿ, ಮತ್ತದರ್ಮೇಲೆ ice cold rosemilk ಅನ್ನೂ ತಿಂದು ಕುಡ್ದು ಮಾಡ್ತಿದ್ದೀರಲ್ಲಾ, will it not upset your throat?’ ಎನ್ನಲು ರಾಯರು ಘಟ್ಟಿಯಾಗಿ ನಕ್ಕು. ‘ಈ ಗಂಟ್ಲು, ಕಟ್ಕೊಳ್ಳೋ ಭಯ ನನ್ಗಿಲ್ಲಾ Mr.Rao. ಈ ಕಾಳಿಂಗರಾಯನಿಗೆ ಏನೇ ತಿಂದ್ರೂ, ಕುಡದ್ರೂ ಕಂಠಮಾತ್ರ ಕೈಕೊಡೋಲ್ಲಾ’ ಎನ್ನುತ್ತಿದ್ದಂತೆ ಮಾಣಿ ತಂದಿರಿಸಿದ ತಣ್ಣನೆಯ rosemilk ಅನ್ನು ಚಪ್ಪರಿಸಿ ಕುಡಿದರು. ಮತ್ತೆ ಬಿಲ್ಲನ್ನು ತಿದ್ದು ತಂದ ಮಾಣಿಯ ಕೈಗೆ ಒಂದು ಹತ್ತರ, ಮತ್ತೊಂದು ಐದರ ನೋಟನ್ನಿತ್ತು ಹೋಟಲಿನಿಂದ ಹೊರಬರುತ್ತಿರಲು, ಹಿಂದೆ ಬಂದ ಮಾಣಿ ‘ಸಾರ್…. change’ ಎಂದು ಎರಡು ರೂ. ವನ್ನು ನೀಡಲು, ರಾಯರು ನಕ್ಕು. ಅವನ ಕೆನ್ನೆ ಚಿವುಟಿ ‘ಇಟ್ಕೋ ರಜ’ ಎಂದು ಕಾದು ನಿಂತಿದ್ದ ರಿಕ್ಷಾವನ್ನೇರಿ ‘town hall’ ಎಂದವರೇ ಮತ್ತೊಂದು ಸಿಗರೇಟಿಗೆ ಬೆಂಕಿ ತಾಗಿಸಿದರು.

ಅವರದ್ದೇ ಕಾರ್ಯಕ್ರಮವಿದ್ದ ದಿನಗಳಲ್ಲಿ ರಾಯರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದೆರಡು ರಿಕ್ಷಾವನ್ನು ತಮ್ಮ ಸುಪರ್ದಿನಲ್ಲೇ ಉಳಿಸಿಕೊಂಡಿರುತ್ತಿದ್ದರು. ಕಾಳಿಂಗರಾಯರು ಯಾವಾಗಲೂ ದಿಲ್ಲೀ ದರ್ಬಾರೇ !

ಅಂದು ರಾಯರು ಮೂರು ಘಂಟೆಗಳ ಕಾಲ ಹಾಡಿದರು. ಮಧ್ಯೆ ಒಮ್ಮೆಯಾದರೂ ಕ್ಯಾಕರಿಸಿದ್ದಾಗಲೀ ಕೆಮ್ಮಿದ್ದಾಗಲೀ ಇಲ್ಲ. ಅಷ್ಟೆಲ್ಲಾ ತಿಂದು ಕುಡಿದಿದ್ದರಿಂದ ಅಂದು ಅವರ ಗಂಟಲಿಗೆ ಏನಾಗುತ್ತೋ ಎಂದು ನಾನು ಅಂಜಿದ್ದೆ. ಆದರೆ ಅಂತಹುದೇನೂ ಆಗಲಿಲ್ಲ. ಬದಲಿಗೆ ಅವರ ಕಂಠಸಿರಿಯಿಂದ ಹೊರಹೊಮ್ಮುತ್ತಿದ್ದ ಧ್ವನಿ ಇನ್ನಷ್ಟು ಕೋಮಲವಾಗಿತ್ತು!

ಅದೇ ಕಾಲದಲ್ಲಿ ನಮ್ಮ ಮನೆಗೊಬ್ಬರು ಸಂಗೀತ ವಿದ್ವಾಂಸರು ವಾರಕ್ಕೆರಡು ದಿನವೆಂಬಂತೆ ನನ್ನ ಸಹೋದರಿಗೆ ಪಾಠ ಹೇಳಲು ಬರುತ್ತಿದ್ದರು. ಅವರು ಈ ವಡೆ, ಬೋಂಡ, ಪಕೋಡಗಳನ್ನು ತಿನ್ನುವುದಂತಿರಲಿ, ಅವುಗಳ ಹೆಸರು ಕೇಳುತ್ತಿದ್ದಂತೆಯೇ ಅವರ ಗಂಟಲಿಗೆ ಗೂಟ ನೆಟ್ಟಂತಾಗುತ್ತಿತ್ತು. ಅವರು ತಮ್ಮ ಗಂಟಲಿಗೆ ಮಾಡಿಕೊಳ್ಳುತ್ತಿದ್ದ ಉಪಚಾರ ಅಷ್ಟಿಷ್ಟಲ್ಲ. ಸದಾ ಕಾಲವೂ ಬಾಯಲ್ಲಿ ಮೆಣಸಿನ ಕಾಳು, ಲವಂಗವನ್ನು ಒತ್ತರಿಸಿಟ್ಟುಕೊಂಡು ಅದರ ರಸವನ್ನು ಚಪ್ಪರಿಸುತ್ತಿದ್ದರು. ಸುಡು ಬೇಡಿಗೆಯಲ್ಲೂ ಒಳಗೆ ಸ್ವೆಟರ್ ಧರಿಸಿ ಕುತ್ತಿಗೆಯ ಸುತ್ತ ಎರಡು ಸುತ್ತು ಮಫ್ಲರ್ ಸುತ್ತಿರುತ್ತಿದ್ದರು. ಹೋಗಿ ಬಂದಲ್ಲೆಲ್ಲಾ ಅವರಿಗೆ ಕುಡಿಯಲು ಬಿಸಿ ನೀರೇ ಬೇಕು. ಅವರ ಕಚೇರಿ ಆಗುತ್ತಿದ್ದುದೇ ಬಹು ಅಪರೂಪಕ್ಕೆ. ವರ್ಷಕ್ಕೆ ಒಂದೋ ಎರಡೋ. ಇವರ ಕಛೇರಿಯನ್ನು ಏರ್ಪಡಿಸಿದವರಿಗೆ ಅಂದು ಒಂದು ಚೊಂಬು ಹಾಲು, ಎರಡು ಚೊಂಬು ಕಾಫಿಯ ಖರ್ಚು ತಪ್ಪಿದ್ದಲ್ಲ. ಪಕ್ಕ ವಾದ್ಯದವರಿಗಿಂತ ಇವರಿಗೆ ಈ ಪರಿಕರಗಳೇ ಮುಖ್ಯ. ಕಛೇರಿ ಶುರುವಾದ ನಂತರ ಪ್ರತಿ ಐದು ಹತ್ತು ನಿಮಿಷಕ್ಕೊಮ್ಮೆ ಅಷ್ಟಿಷ್ಟು ಹಾಲನ್ನೋ ಕಾಫಿಯನ್ನೋ ಹೀರುತ್ತಲೇ ಇರಬೇಕು. ಸಂಗಸಂಗತಿಗೂ ಕೆಮ್ಮುವುದು, ಕ್ಯಾಕರಿಸುವುದು ಇದ್ದದ್ದೇ, ಮಂತ್ರಕ್ಕಿಂತ ಉಗುಳುವುದೇ ಹೆಚ್ಚು ಎಂಬಂತೆ.

ಇವರೊಬ್ಬರೇ ಹೀಗಲ್ಲ. ನಮ್ಮಲ್ಲಿ “ಕೆಲವು” ವಿದ್ವಾಂಸರು ಹೀಗೆಯೇ. ಹೀಗೆ ತಮ್ಮ ವೃತ್ತಿ ಜೀವನದುದ್ದಕ್ಕೂ ತಮ್ಮ ಗಂಟಲಿಗೆ ಸಲ್ಲದ ಷೋಡಶೋಪಚಾರವನ್ನು ಸಲ್ಲಿಸುತ್ತಾ ಸದಾಕಾಲವೂ ಹಸಿಬಾಣಂತಿಯರಂತೆ ಜೀವಿಸುವ ಈ ವರ್ಗದ ವಿದ್ವಾಂಸರ ಕಂಠಸಿರಿ ಹತೋಟಿಗೆ ಬರುವುದು ಅರ್ಧ ಕಛೇರಿಯ ನಂತರವೇ! ಅದೇ ಚಂಬೈ, ಕಾಳಿಂಗರಾಯರಂಥ ಕೆಲವು ವಿದ್ವಾಂಸರ ನೀತಿ, ನಿಯತ್ತು ಒಂದೇ ರೀತಿ. ಏನಕ್ಕೂ ಜಗ್ಗದ ವಜ್ರ ಕಂಠದ ವಿದ್ವನ್ಮಣಿಗಳೆಂಬುವರು ಇಂಥವರು ಅಷ್ಟೇ.

ನಮ್ಮ ಕಾಳಿಂಗರಾಯರಿಗೆ ಗಂಟಲು ಕಟ್ಟಿಕೊಳ್ಳುವುದೂ, ಬಿಟ್ಟುಕೊಳ್ಳುವುದು ಇವೆಲ್ಲಾ ಅರ್ಥವೇ ಆಗುತ್ತಿರಲಿಲ್ಲ. ಘಂಟೆಗಟ್ಟಲೆ ಹಾಡುತ್ತಿದ್ದಾಗ್ಯೂ ರಾಯರು ಮಧ್ಯೆ ಮಧ್ಯೆ ಕಾಫಿ, ಹಾಲು ಇರಲಿ, ಒಂದು ಗುಟುಕು ನೀರನ್ನೂ ಅಪೇಕ್ಷಿಸುತ್ತಿರಲಿಲ್ಲ. ಸುಮಾರು ಹೊತ್ತು ಹಾಡಿದ ನಂತರ ಹೊರಬಂದು ಒಂದೆರಡು ಸಿಗರೇಟು ಸೇದಿ Mike ನ ಬಳಿ ತೆರಳುತ್ತಿದ್ದರು. ಅಷ್ಟೆ. ತಮ್ಮ ಕೊನೆಯವರೆಗೂ ರಾಯರದ್ದು ಇದೇ ರೀತಿ ಹಾಗೂ ಸ್ವಭಾವ.

* * *