ಕಾಳಿಂಗರಾಯರ ಕಂಠಸಿರಿಯ ಬಗ್ಗೆ ಮತ್ತಷ್ಟು ಹೇಳುವುದಾದರೆ, ೧೯೫೫ರ ಸುಮಾರು. ದೂಲಿ ಸತ್ಯ ನಾರಾಯಣ ಶೆಟ್ಟಿ ಎಂಬುವರು ಆಗ ಮೈಸೂರಿನಲ್ಲಿ ಬಿ.ಎ. ಓದುತ್ತಿದ್ದರು. ಅವರು ಇದ್ದುದು ಕಾವೇರಿ ಪಟ್ಣಮ ಛತ್ರದ ಕೊಠಡಿಯೊಂದರಲ್ಲಿ. ಆಗ ನಾನು ಫಿಲೋಮಿನಾಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ವಿದ್ಯಾರ್ಥಿಯಾಗಿದ್ದೆ.

ಈ ದೂಲಿಗೆ ನಾಟಕವೆಂದರೆ ಪ್ರಾಣ. ಸ್ವಯಂ ಒಳ್ಳೆಯ ನಟ ಹಾಗೂ ನಾಟಕಕಾರ. ಇವರು ಹಾಗೂ ನಾನು ಸೇರಿ ೧೯೫೪ರಲ್ಲಿ ‘ಚಿತ್ರಕಲಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆವು. ಅದರ ಅಧ್ಯಕ್ಷ ದೂಲಿ, ಕಾರ್ಯದರ್ಶಿ ನಾನು.

ಈ ಸಂಸ್ಥೆಯ ವತಿಯಿಂದ ಸುಮಾರು ಏಳೆಂಟು ವರ್ಷಗಳ ಕಾಲ ಪ್ರತಿವರ್ಷವೂ ಅಂತರ ಕರ್ನಾಟಕ (ಮೈಸೂರು) ನಾಟಕ ಸ್ಪರ್ಧೆ. ಸಂಗೀತ, ನೃತ್ಯ, ಗಮಕ ಸ್ಪರ್ಧೆಯನ್ನು ಬಹಳ ಅದ್ಧೂರಿಯಾಗಿ ನಡೆಸುತ್ತಿದ್ದೆವು.

ಹೀಗೆ ನಾವು ನಡೆಸುತ್ತಿದ್ದ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾಳಿಂಗರಾಯರು, ಎಂ.ವಿ. ಮಾಲತಿ, ವೀಣೆ ದೊರೆಸ್ವಾಮಿ, ಆರ್.ಕೆ. ಶ್ರೀಕಂಠನ್ ಇವರುಗಳು ಬಂದದ್ದುಂಟು. ಹೀಗಾಗಿ ದೂಲಿ ಸತ್ಯನಾರಾಯಣ ಶೆಟ್ಟರಿಗೆ ಕಾಳಿಂಗರಾಯರು ಚಿರಪರಿಚಿತರಾದರು.

ಮೂಲತಃ ಈ ದೂಲಿ ಸತ್ಯನಾರಾಯಣ ಶೆಟ್ಟರು ಕೆ.ಆರ್.ನಗರದವರು. ಆ ಊರಿನಲ್ಲಿ ‘ದೂಲಿ’ ಎಂದರೆ ಮನೆಮಾತು. ಆ ಕಾಲದಲ್ಲಿ ಕೆ.ಆರ್. ನಗರದಲ್ಲಿ ನಡೆಯುತ್ತಿದ್ದ ಎಲ್ಲಾ ಚಟುವಟಿಕೆಗಳಿಗೂ ದೂಲೀಯವರ ಮನೆಯೇ ಕೇಂದ್ರ ಸ್ಥಾನ. ಅಲ್ಲದೆ ಕೆ.ಆರ್. ನಗರದಲ್ಲಿ ಈ ನಮ್ಮ ದೂಲಿ ‘ಚಿತ್ರಕಲಾ’ ಪ್ರಿಂಟಿಂಗ್ ಪ್ರೆಸ್ ಎಂಬ ಮುದ್ರಣಾಲಯವನ್ನು ನಡೆಸುತ್ತಿದ್ದರು. ಅಲ್ಲದೆ ದೂಲಿ ಅತ್ಯುತ್ತಮ ಬ್ಯಾಟ್‌ಮಿಂಟನ್ ಆಟಗಾರ. ಮತ್ತೆ ಕೆ.ಆರ್.ನಗರದ ಎಲ್ಲ ಚಟುವಟಿಕೆಯಲ್ಲೂ ದೂಲಿ ಸತ್ಯನಾರಾಯಣ ಶೆಟ್ಟರದೇ ಅಗ್ರಸ್ಥಾನ. (ಮುಂದೆ ಅಲ್ಲಿಯ ನಗರ ಸಭಾಧ್ಯಕ್ಷರೂ ಆಗಿದ್ದವರು ಇವರು).

ವಿಶ್ವನಾಥ್ ಸೋಮಯಾಜಿ (ಹೋಟಲ್ ಮಾಲೀಕ) ಇವರು ದೂಲಿಯ ಜೊತೆ ದುಡಿಯುತ್ತಿದ್ದವರು. ಇವರೆಲ್ಲಾ ಸೇರಿ ಅಲ್ಲಿ ಕನ್ನಡ ಸಂಘವನ್ನು ನಡೆಸುತ್ತಿದ್ದರು, ಬಹಳ ಅದ್ಧೂರಿಯಾಗಿ.

೧೯೫೫, ನವೆಂಬರ್ ತಿಂಗಳು. ಕನ್ನಡ ನಾಡಹಬ್ಬ, ಕಾಳಿಂಗರಾವ್ ಮತ್ತು ವೃಂದದವರಿಂದ ಸಂಗೀತ ಕಾರ್ಯಕ್ರಮ. ಎರಡು ಗಂಟೆಗಳ ಕಾಲ. ನಂತರ ನಾನು ಹಾಗೂ ಎ.ವಿ.ಗುಂಡೂರಾಯರಿಂದ (ಎಲ್.ಐ.ಸಿ.ಯಲ್ಲಿ ಡೆವಲಪ್‌ಮೆಂಟ್ ಆಫೀಸರ್‌ಆಗಿದ್ದು ಈಗ ಮೈಸೂರಿನ ಒಂಟಿಕೊಪ್ಪಲಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇವರು ನನ್ನ ಸೋದರಮಾವ. ಉತ್ತಮ ನಟ, ನಿರ್ದೇಶಕ ಹಾಗೂ ನಾಟಕಕಾರ) ‘ಅಮ್ಮನವರ ಗಂಡ’ ಎಂಬ ನಗೆ ನಾಟಕ – ೪೫ ನಿಮಿಷ. ಕಾಳಿಂಗರಾಯರ ಪಾರ್ಟಿಯೊಡನೆ ನಾವೂ ಹೋಗಿದ್ದೆವು ವ್ಯಾನೊಂದರಲ್ಲಿ.

ಈ ‘ಅಮ್ಮನವರ ಗಂಡ’ (ಕೈಲಾಸಂರ ‘ಅಮ್ಮಾವ್ರ ಗಂಡ’ ಅಲ್ಲ) ನಾಟಕದಲ್ಲಿ ನಾನು ಅಮ್ಮನವರ ಪಾತ್ರವನ್ನು ಮಾಡುತ್ತಿದ್ದೆ. ನಾವಿಬ್ಬರೇ ಈ ನಾಟಕವನ್ನು ಅದೆಷ್ಟು ಬಾರಿ ಆಡಿದೆವೊ! ಇರಿ. ಅಂದು ಕಾರ್ಯಕ್ರಮವನ್ನು ಕೊಡಲು ನಾವೆಲ್ಲಾ ಕೆ.ಆರ್.ನಗರಕ್ಕೆ ಹೋದೆವಷ್ಟೆ. ಕಾಳಿಂಗ ರಾಯರು ಬರುವುದನ್ನು ತಿಳಿದಿದ್ದ ಅಲ್ಲಿಯ ಜನ ಹಾಗೂ ಸುತ್ತಮುತ್ತಲಿನವರು ಈಗಿನ ಬಸ್‌ಸ್ಟ್ಯಾಂಡ್‌ಇರುವ ಜಾಗದಲ್ಲಿ ಏರ್ಪಡಿಸಿದ್ದ ವೇದಿಕೆಯ ಎದುರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಧ್ವನಿವರ್ಧಕ ಹಾಗೂ ದೀಪಗಳಿಂದ ಆ ಚಪ್ಪರದ ವೇದಿಕೆ ರಂಜಿಸುತ್ತಿತ್ತು. ಸಮಯ ಸಮೀಪಿಸುತ್ತಿದ್ದಂತೆ ಆ ಕೆ.ಆರ್. ನಗರದ ಪ್ರವಾಸಿ ಮಂದಿರದಲ್ಲಿ ಇರಿಸಿದ್ದ ನಮ್ಮನ್ನು ರಾತ್ರಿ ೮ – ೩೦ರ ಹೊತ್ತಿಗೆ ವೇದಿಕೆಯ ಬಳಿ ಕರೆದೊಯ್ಯಲಾಯಿತು. ಕಾಳಿಂಗರಾಯರು ವೇದಿಕೆಯನ್ನೇರಿ ಧ್ವನಿವರ್ಧಕವನ್ನು ಹಿಡಿದು ನಿಂತರು. ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ ! ಅಷ್ಟೆ. ಇನ್ನೇನು ರಾಯರು ಹಾಡಲು ಶುರು ಮಾಡಬೇಕು ಅನ್ನುವಷ್ಟರಲ್ಲಿ ಕರೆಂಟು ಕೈ ಕೊಟ್ಟಿತು ! ಬೆಳಕು, ಧ್ವನಿವರ್ಧಕ ಎಲ್ಲವೂ ನಿಂತು ಇಡೀ ವಾತಾವರಣವನ್ನು ಕಗ್ಗತ್ತಲು ಆವರಿಸಿತು. ಸೇರಿದ್ದ ಜನರಿಗೆ ಎಲ್ಲಿಲ್ಲದ ನಿರಾಸೆ. ಕಾರ್ಯಕರ್ತರು ದಿಕ್ಕೇ ತೋಚದೆ ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಲಾರಂಭಿಸಿದರು. ಪಕ್ಕದಲ್ಲಿದ್ದ ವಿದ್ಯುತ್ ಕಂಬವನ್ನು ಜಗ್ಗಿದರು, ಒದ್ದರು, ಇನ್ನೂ ಏನೇನೋ ಮಾಡಿದರು. ಪ್ರಯೋಜನವಾಗಲಿಲ್ಲ. ಹೆಂಗಸರು ಮಕ್ಕಳಿಗೆ ಅಪಾಯವಾಗದಿರಲೆಂದು ಯಾರೋ ಓಡಿಹೋಗಿ ಒಂದಷ್ಟು ಮೇಣ ಬತ್ತಿಗಳನ್ನು ತಂದು ವೇದಿಕೆಯ ಮೇಲೆ ಅಲ್ಲಲ್ಲಿ ಹಚ್ಚಿಟ್ಟರು.

ನಿಮಿಷ ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು. ಅಷ್ಟು ಹೊತ್ತಾದರೂ ವಿದ್ಯುತ್ ಬರಲೇ ಇಲ್ಲ. ಇಷ್ಟಾದರೂ ಸೇರಿದ್ದವರಲ್ಲಿ ಒಬ್ಬರಾದರೂ ಹೋಗಬೇಕಲ್ಲಾ ! ಕರೆಂಟಿಗಾಗಿ ಕೈಕಟ್ಟಿ ಕಾಯುತ್ತಾ ಕುಳಿತಿದ್ದರು. ಸಿಗರೇಟಿನ ಮೇಲೆ ಸಿಗರೇಟು ಸೇದುತ್ತಾ ಕುಳಿತಿದ್ದ ಕಾಳಿಂಗರಾಯರನ್ನು ಆ ಮೋಂಬತ್ತಿ ಬೆಳಕಿನಲ್ಲಿ ನೋಡುವುದೇ ಆ ಜನಕ್ಕೊಂದು ಮೋಜು. ಕೊನೆಗೆ ದೂಲೀಯವರು ಬಂದು ‘ಸಾ, ಇವತ್ತು ಕರೆಂಟು ಬರೋ ಹಾಗೇ ಕಾಣ್ಸೋಲ್ಲ. ಹಾಗಾಗಿ ಇಲ್ಲಿದ್ಬಿಡಿ. ನಾಳೆ ಸಾಯಂಕಾಲ ಪ್ರೋಗ್ರಾಂ ಕೊಟ್ಟು ಹೋಗ್ಬನ್ನಿ’ ಎಂದರು. ಅದಕ್ಕೆ ರಾಯರು ಒಪ್ಪಲಿಲ್ಲ. ‘ಇಲ್ಲಾಮಿ. ದೂಲಿ, ನಾಡಿದ್ದು ಬೆಳಿಗ್ಗೆ ಹೊತ್ಗೆ ನಾನು ಬೆಳಗಾಂನಲ್ಲಿ ಇರಲೇಬೇಕು. ಅಲ್ಲಿ ಒಂದು marriage function ನಲ್ಲಿ ಹಾಡೋದಕ್ಕೆ ಒಪ್ಕೊಂಡ್ಬಿಟ್ಟಿದ್ದೀನಿ. I cannot disappoint them you know’ ಎಂದರು. ದೂಲೀ ಶೆಟ್ಟರು ಹಾಗಾದ್ರೆ ಈಗೇನ್ಮಾಡೋಣ ಸಾರ್’ ಎನ್ನಲು ರಾಯರು ಅವರ ಭುಜವನ್ನು ಹಿಡಿದು ಮೇಲೇಳುತ್ತಾ  ‘Don’t be distrubed. ನಾನೀಗ್ಲೇ ಹಾಡ್ತೇನೆ’ ಎಂದಾಗ ಏನೂ ತೋಚದೆ ಕಕ್ಕಾವಿಕ್ಕಿಯಾದ ದೂಲಿ ‘mikeಏ ಇಲ್ದೆ?’ ಎಂದು ಉದ್ಗರಿಸಲು ರಾಯರು ನಗುತ್ತಾ ‘I will manage’ ಎಂದವರೇ ವೇದಿಕೆಯ ಮುಂದೆ ನಿಂತು ಎತ್ತರದ ಧ್ವನಿಯಲ್ಲಿ ‘ಘೋರಾಂದಕಾರದಲ್ಲಿ ಕಾರ್ಮುಗಿಲನುಟ್ಟೂ’ ಎಂಬ ಗೀತೆಯನ್ನು ಹಾಡಲಾರಂಭಿಸಿಯೇ ಬಿಟ್ಟರು!

ಅದು ಮುಗಿಯಿತು, ನಂತ ಇನ್ನೊಂದು, ಮತ್ತೆ ಮಗದೊಂದು. ಹೀಗೆ ಎಡೆಬಿಡದೆ ಗುಡುಗು ಸಿಡಿಲು ಒಂದರ ನಂತರ ಒಂದು ಅಪ್ಪಳಿಸುವಂತೆ ಹಾಡಿನ ಮೇಲೆ ಹಾಡು ! ಒಂದೊಂದು ಹಾಡು ಮುಗಿದಾಗಲೂ ಚಪ್ಪಾಳೆಯ ಸುರಿಮಳೆ. ಆ ಚಪ್ಪಳೆಯ ಅಬ್ಬರ ಕೇಳಿದಾಗಷ್ಟೇ ಸಭಿಕರು ಅಲ್ಲಿ ಅಷ್ಟು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆಂಬ ಅರಿವಾಗುತ್ತಿತ್ತು. ಮತ್ತೆ ರಾಯರು ಇನ್ನೊಂದು ಹಾಡು ಹೇಳಲಾರಂಭಿಸಿದಂತೆ ಸೂಜಿಬಿದ್ದರೂ ಕೇಳಿಸುವಷ್ಟು ನಿಶ್ಯಬ್ದ. ಮುಂದೆ ವೇದಿಕಯ ಅಂಚಿಗಿದ್ದ ಹಲವು ವ್ಯಕ್ತಿಗಳನ್ನುಳಿದು ಮಿಕ್ಕವರಾರೂ ಆ ಕತ್ತಲಲ್ಲಿ ಕಾಣುತ್ತಿರಲಿಲ್ಲ.

ಆರಂಭದಲ್ಲಿ ಪ್ರೇಕ್ಷಕರನ್ನು ತಮ್ಮೆಡೆಗೆ ಒಲಿಸಿಕೊಳ್ಳಲು ರಾಯರು ಅತಿ ಎತ್ತರದ ಧ್ವನಿಯನ್ನು ‘ಘೋರಾಂಧಕಾರದಲ್ಲಿ ಕಾರ್ಮುಗಿಲನುಟ್ಟೂ ಮಿಂಚೆಂಬ ರೌದ್ರತೆಯ ಬಳೆಯ ತೊಟ್ಟೂ’ ಎಂಬ ಕುವೆಂಪು ಅವರ ಗೀತೆಯನ್ನು ಹಾಡಿ ನಂತರದ ಹಾಡುಗಳನ್ನು ತಮ್ಮ ಮಾಮೂಲು ಮಟ್ಟದ ಶ್ರುತಿಯಲ್ಲಿ ಹಾಡಲಾರಂಭಿಸಿದರೂ ಪ್ರೇಕ್ಷಕರು ಕಿಂಕಂ ಎನ್ನದೆ ಶಾಂತಚಿತ್ತರಾಗಿ ರಾಯರ ಸಂಗೀತವನ್ನು ಸುಮಾರು ಅರ್ಧ ಮುಕ್ಕಾಲು ಗಂಟೆಗಳ ಕಾಲ ಆ ಕಗ್ಗತ್ತಲಿನ ವಾತಾವರಣದಲ್ಲೇ ಕೇಳಿ ಆನಂದಿಸಿದರು. ರಾಯರಿಗೆ ಅಂತಹ ಅಪರಿಮಿತ ಆತ್ಮಸ್ಥೈರ್ಯ.

ನಂತರ ಕರೆಂಟ್ ಬಂದಿತು. ಜನರ ಹಿಗ್ಗಿಗೆ ಎಣೆಯಿಲ್ಲ. ಆಕಾಶವೇ ಕಳಚಿಕೊಳ್ಳುವ ಹಾಗೇ ‘ಹೋ’ ಎಂದರು. ಪ್ರಾಯಶಃ ಕೆ.ಆರ್. ನಗರಕ್ಕೆ ಮೊಟ್ಟಮೊದಲ ಬಾರಿ ವಿದ್ಯುತ್ ದೀಪ ಬಂದಾಗಲೂ ಅಲ್ಲಿಯ ಜನ ಅಷ್ಟು ಸಂತಸಪಟ್ಟಿರಲಾರರು ! ನಮಗೂ ಅಷ್ಟೆ. ವೇದಿಕೆಯ ಮೇಲಿಂದ ಸೇರಿದ್ದ ಜನಸಾಗರವನ್ನು ಕಂಡು ಆಶ್ಚರ್ಯವಾಯಿತು. ಏನಿಲ್ಲವೆಂದರೂ ಸುಮಾರು ಎರಡು ಸಾವಿರ ಮಂದಿ ಸೇರಿದ್ದರೇನೋ!

ನಂತರ ಕಾಳಿಂಗರಾಯರು ಸೋಹನ್ ಹಾಗೂ ಮೋಹನ್ ರೊಡಗೂಡಿ ಸುಮಾರು ಒಂದು ಗಂಟೆಯ ಕಾಲ ಜಾನಪದ ಗೀತೆಗಳನ್ನು ಹಾಡಿ ಶ್ರೋತೃಗಳನ್ನು ತಣಿಸಿದರು. ಅಲ್ಲಿಗೆ ರಾತ್ರಿ ಹತ್ತಾಯಿತು. ನಾಟಕವನ್ನಾಡಲು ನಾನೂ ಹಾಗೂ ಗುಂಡೂರಾಯರು ಬಳಿದುಕೊಂಡಿದ್ದ ಬಣ್ಣವೆಲ್ಲಾ ಮಾಸಿ ಬಿರುಕು ಬಿಟ್ಟಿತ್ತು. ‘ಇಷ್ಟು ಹೊತ್ತಿನ ಮೇಲೆ ಎಂಥಾ ನಾಟಕ? ಬೇಡಾ’ ಅಂದೆವು. ದೂಲೀ ಹಾಗೂ ಕಾಳಿಂಗರಾಯರು ಕೇಳಲಿಲ್ಲ. ‘ಆಡಿ’ ಎಂದರು, ಆಡಿದೆವು. ಚೆನ್ನಾಗಿಯೇ ಆಡಿದೆವು. ಹೆಣ್ಣು ಪಾತ್ರವಹಿಸಿ ಅಭಿನಯಿಸುತ್ತಿದ್ದ ನನ್ನನ್ನು ಸೈಡ್‌ವಿಂಗಿನಲ್ಲಿ ಕೂತು ನೋಡುತ್ತ ಕಿಚಾಯಿಸುತ್ತಿದ್ದ ಕಾಳಿಂಗರಾಯರ ಹಾಗೂ ಸೋಹನ್‌ಮೋಹನ್‌ರ ಅಣುಕಾಟವನ್ನು ನಾನಿನ್ನೂ ಮರೆತಿಲ್ಲ!

ಕಾರ್ಯಕ್ರಮ ಮುಗಿಯಿತು. ನಮಗೆ ಹಾಗೂ ನಮ್ಮ ಸಂಘದ ಕಾರ್ಯಕರ್ತರಿಗೆಲ್ಲಾ ಒಟ್ಟಾಗಿ ಊಟವನ್ನು ಪ್ರವಾಸಿ ಮಂದಿರದ ಪ್ರಾಂಗಣದಲ್ಲಿ ದೂಲಿಯವರು ಏರ್ಪಡಿಸಿದ್ದರು. ನೆಲದ ಮೇಲೆ ಹಾಸಿದ್ದ ಊಟದ ಚಾಪೆಯ ಮೇಲೆ ಸಾಲಾಗಿ ಕುಳಿತೆವು. ಮೊದಲಿಗೆ ರಾಯರು, ಪಕ್ಕದಲ್ಲಿ ನಾನು ನಂತರ ಉಳಿದವರು. ಒಟ್ಟು ಸುಮಾರು ನೂರು ಮಂದಿ ಎದುರು ಬದರು ಸಾಲುಗಳಲ್ಲಿ ಕೂತಿದ್ದರು. ಆಗ ಅಡಿಗೆಯವರು ಸರಸರನೆ ಬಡಿಸಲಾರಂಭಿಸಿದರು. ಪಲ್ಯ, ಕೋಸಂಬರಿ, ಹಪ್ಪಳ, ಸಂಡಿಗೆ ಬಡಿಸಿದ್ದಾಯಿತು. ನಂತರ ಹಬೆಯಾಡುತ್ತಿದ್ದ ಅನ್ನ. ಅದರ ಮೇಲೆ ಘಮ ಘಮಿಸುವ ತುಪ್ಪ, ಆ ತುಪ್ಪದವನು ಜರುಗುತ್ತಿದ್ದಂತೆ ಆತನ ಹಿಂದಿದ್ದವ ಬಿಸಿಬಿಸಿಯಾದ ಸಾರನ್ನು ಪ್ರತಿ ಬಾಳೆಎಲೆಯ ಪಕ್ಕದಲ್ಲಿರಿಸಿದ್ದ ದೊಡ್ಡ ದೊನ್ನೆಯೊಳಕ್ಕೆ ಸುರಿಯುತ್ತಾ ಮುಂದುವರೆದಂತೆ ಪಕ್ಕದಲ್ಲಿದ್ದ ರಾಯರು ‘ಅಯ್ಯಾ ಕೇಶವ, ಪ್ರಾಣ ಹೋಗ್ತಿದೆ, ಪರ್ಶಂಚನೆ ನಾಳೆ ಮಾಡಿದ್ರಾಯ್ತು. ಪ್ರಾರಂಬ್ಸೋಣ್ವೇ?’ ಎಂದವರೇ ಪಕ್ಕದಲ್ಲಿ ಭರ್ತಿಯಾಗಿ ಸಾರಿನಿಂದ ತುಳುಕುತ್ತಿದ್ದ ದೊನ್ನೆಯನ್ನು ನಯವಾಗಿ ಎತ್ತಿ ತಮ್ಮಲೆಯಲ್ಲಿದ್ದ ಅನ್ನದ ಮೇಲೆ ಸುರುವಿಕೊಂಡರು. ಸರಿ, ಅಗ್ರಸ್ಥಾನದಲ್ಲಿದ್ದ ರಾಯರೇ ಹೀಗೆ ಆರಂಭಿಸಿದ ಮೇಲೆ ನಾವು ಬಿಡುತ್ತೇವೆಯೇ? ನಾವೂ ಹಾಗೇಯೇ ಮಾಡಿದೆವು. ಸರಸರನೆ ಅನ್ನವನ್ನು ಆ ಮಂದವಾದ ಬಿಸಿಬಿಸಿ  ಸಾರಿನಲ್ಲಿ ಕಲಸಿಕೊಂಡು ಬಾಯಿಗೆ ಹಾಕುತ್ತಲೇ ಎಲ್ಲರ ಮುಖವೂ ವಿವರ್ಣವಾಯಿತು ! ರಾಯರು ‘ಅರೆರೆ’, ಎಂದರು. ಘಟ್ಟಿಯಾಗಿ ನಕ್ಕರು. ನಾವೂ ನಕ್ಕೆವು. ಈ ಹೊತ್ತಿಗೆ ನಮ್ಮ ಪಂಕ್ತಿಯಲ್ಲಿದ್ದವರೆಲ್ಲಾ ನಮ್ಮಂತೆಯೇ ಮಾಡಿದ್ದರು. ಎಲ್ಲರ ಮುಖವೂ ಇಂಗು ತಿಂದ ಮಂಗನ ಮುಖದಂತೆ ಪೆಂಗು ಪೆಂಗು. ಆಗಿದ್ದುದು ಇಷ್ಟೆ. ಆ ದೊನ್ನೆಯಲ್ಲಿ ಹಬೆಯಾಡುತ್ತಿದ್ದುದು ಸಾರಲ್ಲ. ಅದು ಗಸೆಗಸೆ ಪಾಯಸ ! ಊಟದ ಮಧ್ಯೆ ಬಡಿಸಬೇಕಿದ್ದ ಪಾಯಸವನ್ನು ಆ ಅವಸರ ಕುಡಿಗೆ ಅಪ್ಪಣ್ಣ, ಅಡಿಗೆಯವನು, ಮೊದಲೇ ಬಡಿಸಿದ್ದರಿಂದ ಆದದ್ದು ಈ ಅನಾಹುತ. ಈಗ ಮಾಡುವುದೇನೆಂದು ರಾಯರನ್ನು ನೋಡಿದೆ. ಅದಕ್ಕೆ ರಾಯರು ‘ಗಾಬರಿ ಯಾಕಯ್ಯ? ಈಗ ಹುಳಿಯನ್ನ, ಮೊಸರನ್ನ, ಚಿತ್ರಾನ್ನ, ಪಕ್ವಾನ್ನ, ಶಾಲ್ಯಾನ್ನ, ಅನ್ನೋಲ್ವೆ, ಹಾಗೇ ಇದೂವೆ, ಪಾಯ್ಸಾನ್ನ, ಹ್ಯಾಗೂ ಕಲಸ್ಕೊಂಡಿದ್ದಾಗಿದೆ, ಜಡಿ ನನ್ ಜಗದ್ಗುರೂಂತ ಹೊಡೀ ರಾಜಾ’, ಎಂದರು.

* * *