ಹಲವಾರು ದಶಕಗಳ ಹಿಂದೆ, ಸುಮಾರು ನಲವತ್ತೈದು ವರುಷಗಳ ಹಿಂದೆ, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲ್ಲುವ ಕನ್ನಡನಾಡು’ ಎಂಬ ಹಾಡನ್ನು ಹಾಡಿ ದಿಢೀರನೇ ಖ್ಯಾತಿ ಪಡೆದು ಕನ್ನಡನಾಡಿನಾದ್ಯಂತ ಮನೆಮಾತಾದವರು ಕಾಳಿಂಗರಾಯರು. ಒಂದು ರೀತಿಯಲ್ಲಿ ಈ ‘ಉದಯವಾಗಲಿ’ ಹಾಡು ಕನ್ನಡ ನಾಡಿನಲ್ಲಿ ಕಾಳಿಂಗರಾಯರ ಉದಯಕ್ಕೇ ಕಾರಣವಾಯಿತೆನ್ನಬಹುದು. ತಮ್ಮ ಕೊನೆಯವರೆವಿಗೂ ರಾಯರು ತಮ್ಮೆಲ್ಲ ಕಾರ್ಯಕ್ರಮದಲ್ಲೂ ಮೋಹನ ಹಾಗೂ ಬಾಗೇಶ್ರೀಯಲ್ಲಿ ಹಾಡುತ್ತಿದ್ದ ಆ ಹಾಡು ಇಂದಿಗೂ ತನ್ನ ಸೊಂಪು ಸೊಗಡನ್ನು ಕಳೆದುಕೊಂಡಿಲ್ಲ.

– ಲಾಗಾಯ್ತಿನಿಂದಲೂ ಕಾಳಿಂಗರಾಯರ ಜೊತೆ ಅಡ್ಡಾಡುತ್ತಿದ್ದ ನನಗೂ ಈ ಹಾಡು ಅಪ್ಯಾಯಮಾನ. ಅಭ್ಯಾಸ ಮಾಡಿಕೊಂಡಿದ್ದೆ. ಅಷ್ಟೇ ಅಲ್ಲ ಸಣ್ಣ ಪುಟ್ಟ ಸಮಾರಂಭಗಳಲ್ಲಿ. ಯಾರಾದರೂ ಕೇಳಿದರೆ ಇದನ್ನು ಹಾಡುತ್ತಿದೆ, ಬಲು ಉತ್ಸಾಹದಿಂದ.

೧೯೬೦. ನಾನಾಗ ರಾಯಚೂರಿನ ಪಾಲಿಟೆಕ್ನಿಕ್ಕಿನಲ್ಲಿ ಉಪನ್ಯಾಸಕನಾಗಿದ್ದೆ. ಆಗಲೊಮ್ಮೆ ಅಲ್ಲಿಯ ಎಲ್.ವಿ.ಡಿ. ಕಾಲೇಜಿಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಬೇಕೆಂದು ಶ್ರೀ ದ. ರಾ. ಬೇಂದ್ರೆಯವರನ್ನು ಕರೆಸಿದ್ದರು. ಬೇಂದ್ರೆಯವರ ಭಾಷಣವೆಂದ ಮೇಲೆ ಬಿಡುತ್ತೇವೆಯೇ? ಗೆಳೆಯರ ಜೊತೆ ನಾನೂ ಹೋಗಿದ್ದೆ. ಬೇಂದ್ರೆಯವರು ಬಂದರು, ವೇದಿಕೆಯ ಮೇಲೆ ಕುಳಿತರು. ಸಭೆ ಆರಂಭವಾಗಬೇಕು, ಪ್ರಾರ್ಥನೆಯಿಂದ. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ‘ಈಗ ಪ್ರಾರ್ಥನೆ…. ಅವರಿಂದ’ ಎಂದು ಯಾರದ್ದೋ ಹೆಸರನ್ನು ಹೇಳಿದ. ಆದರೆ ಆ ವ್ಯಕ್ತಿ ಬರಲಿಲ್ಲ. ಮತ್ತೆರಡು ಬಾರಿ ಹಾಗೆ ಕರೆದಾಗಲೂ ಆ ವ್ಯಕ್ತಿ ಬರಲಿಲ್ಲ. ಮಾಗಳ್‌ಶಂಕರರಾಯರು (ಎಲ್.ವಿ.ಡಿ. ಕಾಲೇಜನಲ್ಲಿ ಆಗ ಪ್ರಾಚಾರ್ಯರು) ಅಕ್ಕಪಕ್ಕ, ಸುತ್ತಮುತ್ತ ಕ್ರೂರ ದೃಷ್ಟಿಯಿಂದ ನೋಡಿದರು. ಇಲ್ಲ, ಆತ ಬರಲಿಲ್ಲ. ಅಷ್ಟರಲ್ಲಿ ನನ್ನ ಹಿಂದೆ ಕೂತಿದ್ದ ಒಬ್ಬರು ನನ್ನನ್ನು ತಿವಿದು ‘ನೀವೆ ಯಾವ್ದಾದ್ರೂ ಒಂದು ಹಾಡನ್ನು ಹಾಡೀಪ್ಪಾ, ಹೊತ್ತಾಗಿದೆ’ ಎಂದರು. ಅಕ್ಕಪಕ್ಕದಲ್ಲಿದ್ದವರೂ ಒತ್ತಾಯಿಸಲು ನಾನು ಎದ್ದೆ, ವೇದಿಕೆಯ ಮೇಲಕ್ಕೆ ಹೋದೆ, ಹಾಡಿದೆ. ‘ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು’ ಎಂದು. ಹಾಡನ್ನು ಸೊಗಸಾಗಿಯೇ ಹಾಡಿದೆ. ಶ್ರೋತೃಗಳಿಂದ ಕರತಾಡನ. ಬಂದು ಸ್ವಸ್ಥಾನದಲ್ಲಿ ಕುಳಿತೆ. ಅಕ್ಕಪಕ್ಕದಲ್ಲಿದ್ದವರು ‘ಭೇಷ್, ತುಂಬಾ ಚೆನ್ನಾಗಿ ಹಾಡದ್ರಿ’ ಎಂದು ನನ್ನ ಕೈ ಕುಲುಕಿದರು. ಎಲ್ಲವೂ ಆಯಿತು. ನಂತರ ಬೇಂದ್ರೆ ಅವರು ಭಾಷಣ ಮಾಡಲು ಎದ್ದರು. ಮಾತನಾಡಲು ಆರಂಭಿಸಿದರು. ‘ಈಗ ಈ ಹುಡುಗ ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು ಅಂತ ಹಾಡಿದ. ಅದು ತಪ್ಪು, ಹಾಗೆ ಹಾಡಬಾರ‍್ದು ನೋಡ್ರಿ. ‘ಉದಯವಾಗಿದೆ’ ಅಂತ ಹೇಳಿದ ಮೇಲೆ ಇನ್ನುಳ್ದಿರೋದಾದ್ರೂ ಏನು? ‘ಅಸ್ತ’ ಅಷ್ಟೇ. ಕನ್ನಡ ನಾಡಿನ ‘ಅಸ್ತ’ ಎಂದಿಗೂ ಆಗಬಾರ‍್ದೂ ಅನ್ನೋದಾದ್ರೆ ಎಂದೆಂದಿಗೂ ‘ಉದಯವಾಗಿ’ ಅಂತಾನೇ ಹೇಳ್ತಿರ‍್ಬೇಕು. ಏಕೀಕರಣವಾದ ಮೇಲೆ ಕನ್ನಡನಾಡಿನ ಉದಯವಾಗ್ಹೋಯ್ತು ಅಂತ ತಿಳ್ಕೊಂಡು ನಮ್ಮ ಕಾಳಿಂಗ್ರಾಯ್ರು. ‘ಉದಯವಾಗಿದೆ’ ಅಂತ ಹಾಡ್ಲಿಕ್ಕೆ ಶುರು ಮಾಡಿದ್ದಾರ‍್ರಿ, ಅದು ತಪ್ಪು. ‘ಉದಯವಾಗಲಿ’ ಅಂತಾನೇ ನೀವು ಹಾಡ್ಬೇಕ್ರಿ ಅಂತ ನಾನು ಅವರಿಗೆ ತಿಳಿಸೀನ್ರಿ. ಆದ್ರೂ ಅವರು ಹಾಂಗೇ ಹಾಡ್ಲಿಕ್ಕೆ ಹತ್ಯಾರೆ’ ಎಂದವರೇ ಸಾಕಷ್ಟು ದೃಷ್ಟಾಂತಗಳನ್ನು ಹೇಳುತ್ತಾ ಪ್ರತಿ ದೃಷ್ಟಾಂತದ ಕೊನೆಯಲ್ಲಿ ‘ಆದ್ರಿಂದ “ಉದಯವಾಗಲಿ” ಅಂತಾನೇ ಹೇಳ್ಬೇಕು, ತಿಳಿತೇನೋ ಹುಡುಗ?’ ಎಂದು ನನ್ನತ್ತ ನೋಡುತ್ತಿದ್ದಂತೆ ಜನ ನಗುತ್ತಾ ಚಪ್ಪಾಳೆ ತಟ್ಟುತ್ತಿದ್ದರು.

ಹೀಗಾಗಿ ಅಂದು ನಾನು ಏಕಾದರೂ ಪ್ರಾರ್ಥನೆಯನ್ನು ಮಾಡಲು ಒಪ್ಪಿಕೊಂಡೆನೋ ಎನ್ನುವಂತಾಯ್ತು. ಈ ಮಾತು ಹಾಗಿರಲಿ, ಕೇವಲ ಉದಯವಾಗಿದೆ ಎಂಬ ಪದವನ್ನೇ ವಸ್ತುವಾಗಿರಿಸಿಕೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದ ಬೇಂದ್ರೆಯವರ ಜ್ಞಾನಮಟ್ಟ ಎಷ್ಟೆಂಬುದರ ಅರಿವು ಅಂದು ನಮಗಾಯಿತು. ಅಂಥವರನ್ನಷ್ಟೇ ಸಿದ್ಧಪುರುಷರೆನ್ನಬೇಕು. ಇತ್ತೀಚೆಗಷ್ಟೆ ಡಾ|| ಎಚ್.ಕೆ.ರಂಗನಾಥ್‌ರವರೊಡನೆ ಅದೂ ಇದೂ ಮಾತನಾಡುತ್ತಿದ್ದಾಗ ಅವರೆಂದರು, ‘ನನಗೆ ತಿಳಿದಿರುವಂತೆ ನಾನಾ ವಿಚಾರಗಳನ್ನು ಕುರಿತು, ಯಾವ ಪೂರ್ವಸಿದ್ಧತೆಯೂ ಇಲ್ಲದೆ off hand authoriatative ಆಗಿ ಗಂಟೆಗಟ್ಟಲೆ ಮಾತನಾಡುವ ಶಕ್ತಿ ಇದ್ದದ್ದು ಇಬ್ಬರಿಗಷ್ಟೇ. ಅವರ ಪೈಕಿ ಒಬ್ಬರು ಟಿ.ಪಿ. ಕೈಲಾಸಂ, ಮತ್ತೊಬ್ಬರು ದ.ರಾ. ಬೇಂದ್ರೆ’ ಎಂದರು.

ಕೆಲವು ಕಾಲದ ನಂತರ ನಾನು ರಾಯಚೂರಿನಿಂದ ಮೈಸೂರಿಗೆ ವರ್ಗವಾಗಿ ಬಂದೆ. ಮೈಸೂರಿನಲ್ಲಿ ಇದ್ದ ಕಾಳಿಂಗರಾಯರನ್ನು ಭೇಟಿಯಾಗಿ ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ನಡೆದ ಪ್ರಸಂಗವನ್ನು ಹೇಳಿದೆ. ಅದಕ್ಕೆ ರಾಯರು ನಗುತ್ತಾ ‘ಹೌದ್ರಿ ಕೇಶವರಾವ್, sometime back I met Bendre in his house at Dharwad. He told me the same thing. But I am not still convinced with what he meant. ಹಿಂದೆ ‘ಉದಯವಾಗಲಿ’ ಅಂತ ಇದ್ದದ್ದನ್ನ ಈಗ ಕರ್ನಾಟಕದ ನವೋದಯವಾದ ಮೇಲೆ ‘ಉದಯವಾಗಿದೆ’ ಅಂತ ಹಾಡೋದ್ರಲ್ಲಿ ತಪ್ಪೇನಿದೆ? ಹಾಗೆ ನಾನು ಹಾಡಿದ ಮಾತ್ರಕ್ಕೇ ಈ ಕನ್ನಡನಾಡು ಮುಳುಗಿ ಹೋಗುತ್ಯೇ? ನಾನೀಗ ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು ಅಂತ ಹಾಡ್ತಿರೋದು ಅಷ್ಟು ಅಮಂಗಳಕರವಾದ್ದು ಅಂತ ಅನ್ಸಿದ್ರೆ ಹುಯಿಲಗೋಳ ನಾರಾಯಣರಾಯ್ರೇ ನನಗೆ ಈ ಬಗ್ಗೆ ಎಚ್ಚರಿಕೆ ಕೊಟ್ಟಿರೋರು. ಬೇಂದ್ರೆಯವರು ಹೇಳೋದು ತಪ್ಪು ಅಂತ ನಾನು ಅನ್ನೊಲ್ಲಾ, He is too great and I have all respects and regards for him. But sometimes I feel he is too rigid and not convincing. what do you say? ಎಂದು ಬಿಟ್ಟರು.

ನಂತರ ದಿನಗಳಲ್ಲೂ ತಮ್ಮ ಕೊನೆಯ ತನಕ ಕಾಳಿಂಗರಾಯರು ‘ಉದಯವಾಗಿದೆ ನಮ್ಮ ಚೆಲ್ಲುವ ಕನ್ನಡ ನಾಡು’ ಎಂದೇ ಹಾಡುತ್ತಿದ್ದರು. ಈ ಕಾರಣದಿಂದ ಕಾಳಿಂಗರಾಯರನ್ನು ಕಂಡಾಗಲೆಲ್ಲಾ ಬೇಂದ್ರೆಯವರು ಒಂದೆರಡು ಕ್ಷಣ ಮುನಿಸಿನ ಪೋಸ್ ಕೊಟ್ಟು ನಂತರ ರಾಯರ ಕೈ ಕುಲುಕುತ್ತಾ ಅದೂ ಇದೂ ಮಾತನಾಡುತ್ತಿದ್ದರು. ಆದರೆ ಮೇಲೆ ಹೇಳಿರುವ ವಿಚಾರದಲ್ಲಿ ಈ ಇಬ್ಬರೂ ಪರಸ್ಪರ ಒಪ್ಪಿ ರಾಜಿಯಾಗಲೇ ಇಲ್ಲ.

* * *