ಕಾಳಿಂಗರಾಯರು ಸ್ನೇಹಜೀವಿ. ಅವರು ಒಂಟಿಯಾಗಿ ಒಂದು ಕಡೆ ಕೂತದ್ದನ್ನು ನಾನು ಕಂಡಿಲ್ಲ. ಅವರ ಜೊತೆ ಹರಟಲು ಯಾರಾದರೂ ಇರಲೇಬೇಕು. ಇಂತಹ ವರ್ಗದವರೇ ಜೊತೆಗಿರಬೇಕೆಂಬ ನಿಯಮವೇನಿಲ್ಲ. ಇಂತಹ ವಯಸ್ಸಿನವರೇ ಇರಬೇಕೆಂಬುದೇ ಇಲ್ಲ. ಜೊತೆಗಿದ್ದವರು ಯಾರೇ ಇರಲಿ, ಅವರವರ ದರ್ಜೆ, ಅಭಿರುಚಿಗೆ ತಕ್ಕಂತೆ ಮಾತನಾಡುತ್ತಾ ಸಂತಸದಿಂದಲೇ ಕಾಲ ಕಳೆಯುತ್ತಿದ್ದರು.

ನಾನಂತೂ ರಾಯರೊಡನೆ ಲೆಕ್ಕವಿಲ್ಲದಷ್ಟು ಬಾರಿ ಗಂಟೆಗಟ್ಟಲೆ ಹರಟೆ ಕೊಟ್ಟಿದ್ದೇನೆ. ಅವರೊಡನೆ ಮಾತಿಗೆ ಕೂತಾಗ ಎಂದೂ ನನಗೆ ಬೇಸರವಾದದ್ದಿಲ್ಲ. ಸಂಗೀತ, ರಂಗಭೂಮಿ, ಚಲನಚಿತ್ರ ವಿಭಾಗಗಳಲ್ಲಿ ರಾಯರಿಗಿದ್ದ ಅನುಭವ ಅಪಾರವಾದ್ದು. ಆಯಾ ವಿಭಾಗಗಳಿಗೆ ಅನ್ವಯಿಸುವ ಅನೇಕ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅವರು ಅಥೆಂಟಿಕ್ಕಾಗಿ ಹೇಳುತ್ತಿದ್ದರು. ಅವನ್ನೆಲ್ಲ ಬರೆದುಕೊಂಡಿದ್ದರೆ ಅದೇ ಒಂದು ಸ್ವಾರಸ್ಯಮಯ ಗ್ರಂಥವಾಗುತ್ತಿತ್ತು.

೧೯೬೮ ರಲ್ಲಿ ನಾನು ಮದುವೆಯಾದೆ, ದಾವಣಗೆರೆಯಲ್ಲಿ, ಮೈಸೂರಿನಲ್ಲಿದ್ದ ನಮ್ಮ ಬಂಧುಮಿತ್ರರನ್ನೆಲ್ಲಾ ಕರೆದಿದ್ದೆವು. ನನಗೆ ತುಂಬ ಆತ್ಮೀಯರಾಗಿದ್ದ ಕಾಳಿಂಗರಾಯರನ್ನು ಕುಟುಂಬದೊಡನೆ ಖಂಡಿತ ಬರಲೇಬೇಕೆಂದು ಹೇಳಿ ಆಹ್ವಾನಿಸಿದ್ದೆ. ಆದರೆ ಕಾರಣಾಂತರದಿಂದ ರಾಯರಾಗಲೀ, ಅವರ ಮನೆಯವರಾದ ಸೋಹನ್, ಮೋಹನ್‌ರಾಗಲೀ ನನ್ನ ಮದುವೆಗೆ ಬರಲಿಲ್ಲ.

ಮದುವೆಯಾದೊಡನೆ ನನ್ನ ಪತ್ನಿಯೊಡನೆ ನಾವೆಲ್ಲಾ ಮೈಸೂರಿಗೆ ಬಂದೆವು. ಹೆಣ್ಣನ್ನು ಮನೆತುಂಬಿಸಿಕ್ಕೊಂಡ ಶಾಸ್ತ್ರ ಮುಗಿಯಿತು. ಮಾರನೆಯ ದಿನವೇ ಪತ್ನಿಯೊಡನೆ ದಾವಣಗೆರೆಗೆ ಹೊರಟೆ. ಹಾಸನದಲ್ಲಿ ಒಂದು ದಿನ ತಂಗಿದ್ದು, ಬೇಲೂರು ಹಳೇಬೀಡನ್ನು ನೋಡಿಕೊಂಡು ನಂತರ ದಾವಣ ಗೆರೆಯನ್ನು ಸೇರುವುದೆಂದು ನಾನು ನನ್ನ ಪತ್ನಿ ನಿಶ್ಚಯಿಸಿ ಅದರಂತೆ ಹಾಸನಕ್ಕೆ ಟಿಕೆಟ್ ತೆಗೆದುಕೊಂಡು ರಾತ್ರಿ ರೈಲಿನಲ್ಲಿ ಕೂತೆವು. ನಮ್ಮವರೆಲ್ಲಾ ಮೈಸೂರು ರೈಲ್ವೆ ನಿಲ್ದಾಣದಲ್ಲಿ ‘ಟಾಟಾ’ ಮಾಡುತ್ತಿದ್ದಂತೆ, ಸಿಗರೇಟು ಸೇದುತ್ತಾ ನಾವಿದ್ದ ಬೋಗಿಯ ಕಡೆಗೇ ಬರುತ್ತಿದ್ದ ಕಾಳಿಂಗರಾಯರನ್ನು ಕಂಡು ನನಗಾದ ಆನಂದ ಆಶ್ಚರ್ಯ ಅಷ್ಟಿಷ್ಟಲ್ಲ. ಎದ್ದವನೇ ಒಳಗಿಂದ ‘ಬನ್ರೀ ಕಾಳಿಂಗ್ರಾವ್’ ಎಂದು ಕಿಟಕಿಯ ಸರಳುಗಳ ಮಧ್ಯೆ ಕೈಚಾಚಿ ಕರೆದೆ. ಹೊರಗಿನಿಂದ ನನ್ನನ್ನು ಇಣುಕಿ ನೋಡಿದ ರಾಯರು ‘ಅರೆರೆ, ಕೇಶೂ….! ಮದುವೆ ಚೆನ್ನಾಗಿ ಆಯ್ತೋ? ಹೆಂಡ್ತೀಗೆ ಬಿಗಿಯಾಗಿ ತಾಳೀ ಕಟ್ಟಿದ್ದೀ ತಾನೇ’ ಎನ್ನಲು ನಾನು ಹುಸಿಮುನಿಸಿನಿಂದ ‘ಮಾತ್ನಾಡ್ಬೇಡ್ರಿ. Please don’t talk, ಮದುವೇಗೆ ಚೆನ್ನಾಗಿ ಬಂದ್ರಲ್ಲಾ ಮನೆಯವ್ರನ್ನ ಕರ‍್ಕೊಂಡು. ಇಷ್ಟೇ ನೀವು ಸ್ನೇಹಕ್ಕೆ ಕೊಟ್ಟ ಬೆಲೆ, ಅಲ್ವೇ?’ ಎಂದು ನಾನನ್ನುತ್ತಿದ್ದಂತೆ ರೈಲು ಚಲಿಸಲಾರಂಭಿಸಲು ರಾಯರು ನಮ್ಮ ಬೋಗಿಯೊಳಕ್ಕೆ ಹಾರುತ್ತಾ ‘ಬಂದೆ, ತಾಳಯ್ಯಾ, I will tell you what happened’ ಎಂದು ಬಂದು ನಮ್ಮೆದುರು ಖಾಲಿ ಇದ್ದ ಜಾಗದಲ್ಲಿ ಕೂತರು. ರೈಲು ವೇಗವಾಗಿ ಓಡಲಾರಂಭಿಸಿತು. ರಾಯರು ಒಂದು ಸಿಗರೇಟನ್ನು ಹಚ್ಚಿ ವುಫ್ ಎಂದು ಹೊಗೆಯನ್ನು ಕಿಟಕಿಯಾಚೆ ಬಿಟ್ಟು ನನ್ನ ಹೆಂಡತಿಯನ್ನು ದಿಟ್ಟಿಸಿ ‘ಈ ಹುಡುಗಿನೇನೋ ನಿನ್ನ ಹೆಂಡ್ತಿ?’ ಎಂದರು. ನಾನು ‘ಹೌದ್ರೀ’ ಎಂದು ಪರಿಚಯ ಮಾಡಿಕೊಟ್ಟೆ. ನಾಚಿ ನಗುತ್ತಿದ್ದ ನನ್ನಾಕೆಯನ್ನು ನೋಡಿ ರಾಯರು ನನ್ನತ್ತ ತಿರುಗಿ ‘ಅಲ್ರೀ ನೀವು ಸ್ಮಾರ್ತರು, ಸಂಕೇತಿಗಳು, ಅಂಥಾದ್ರಲ್ಲಿ ಈ ಅನ್ಯಜಾತಿ ಹುಡುಗೀನ ಹೇಗೆ ಮದುವೆಯಾದ್ರಿ? ನಿಮ್ಮನೆಯವ್ರು ಒಪ್ಪದ್ರಾ,? ಎಂದರು. ಅದಕ್ಕೆ ನನ್ನ ಹೆಂಡತಿ ಗಟ್ಟಿಯಾಗಿ ನಗುತ್ತಾ ‘ನಾನು ಸಂಕೇತೀನೇ ಸಾರ್, ಬೇರೆ ಜಾತಿ ಅಲ್ಲಾ’ ಎಂದಳು. ಅದಕ್ಕೆ ರಾಯರು ‘ಹೌದಾ? ಹಾಗಾದ್ರೆ ಸರಿಹೋಯ್ತು ಬಿಡಮ್ಮಾ. “ಈ ಕೇಶವರಾಯರವ ದಾವಣಗೆರೆ ಹುಡುಗೀನ ಮದುವೆ ಆಗ್ತಿರೋದು ಅಂತ ತಿಳಿದ ಕೂಡ್ಲೆ ಅಲ್ಲಿ ಇತರೇ ಜಾತಿಯವರೇ ತುಂಬ ಜಾಸ್ತಿ ಇರೋದ್ರಿಂದ ಅವರ ಪೈಕಿ ಒಂದು ಹುಡಗೀನ ಇವ್ನು ಹಾರಿಸ್ಬಿಟ್ಟಿರ್ಬಹ್ದು ಅಂತ ಅಂದ್ಕೊಂಡಿದ್ದೆ. ಈಗ ನೀನೇ ಹೇಳದ್ಮೇಲೆ ಖಾತರಿಯಾಯ್ತು’ ಎಂದರು. ನಂತರ ನಾನು ಸ್ವಲ್ಪ ಗಡುಸಾಗಿ ‘ನೋಡಿ ರಾಯ್ರೇ, ನೀವು ಅದೂ ಇದೂ ಮಾತ್ನಾಡಿ ಪೂಸೀ ಹೊಡೀಬೇಡಿ. ನೀವು ನನ್ನ ಮದ್ವೇಗೆ ಬರ್ದೇ ಇದ್ದದ್ದು ನನ್ಗೆ ಬಹಳ ಬೇಸರವಾಯ್ತು’ ಎಂದು ಮತ್ತೆ ತೋಡೀ ರಾಗವನ್ನು ಎತ್ತಿದಾಗ ಕಾಳಿಂಗರಾಯರು ನನ್ನ ಕೈಹಿಡಿದು ‘ನೋಡಯ್ಯಾ ಮತ್ಮತ್ತೆ ಹೇಳಿದ್ದನ್ನೇ ಹೇಳ್ಬೇಡ. ಕೆಲವು ಕಾರಣದಿಂದ ಬರೋಕ್ಕಾಗಿಲ್ಲ, ಅಷ್ಟೆ. ಇಷ್ಟರ ಮೇಲೆ ನಾನು ಬಂದಿದ್ರೆ ತಾನೆ ಏನ್ಮಾಡ್ತಿದ್ದೆ? ನಿನ್ನ ಬಲವಂತಕ್ಕೆ ಒಂದೆರಡು ಹಾಡನ್ನ ಹಾಡ್ತಿದ್ದೆ ಅಷ್ಟೇ ತಾನೆ? ಈಗ ಎರಡೇ ಯಾಕೆ, ಹನ್ನೆರಡು ಹಾಡನ್ನ ಹಾಡ್ತೀನಿ, ನೀವು ಹಾಸನ ತಲಪೋವರ್ಗೂ ಹಾಡ್ತೀನಿ, O.K-?’ ಎಂದವರೆ ಹಾಡಲು ಶುರುಮಾಡಿಯೇ ಬಿಟ್ಟರು. ಹೀಗೆ ನಮ್ಮೆದುರು ಆ ರೈಲು ಬೋಗಿಯಲ್ಲಿ ಕುಳಿತು ಅವರು ಹಾಡಿದ ಮೊದಲ ಹಾಡು ಕೆ.ಎಸ್. ನರಸಿಂಹ ಸ್ವಾಮಿಯವರ ‘ರಾಯರು ಬಂದರು ಮಾವನ ಮನೆಗೆ’ ಹಾಡು. ನಂತರ ‘ನಮ್ಮೂರ ಚೆಂದವೋ’. ಹೀಗೆ ಒಂದರ ನಂತರ ಮತ್ತಮೊಂದು. ನಮಗಷ್ಟೇ ಅಲ್ಲ. ಅಂದು ಆ ಬೊಗಿಯಲ್ಲಿದ್ದವರಿಗೆಲ್ಲಾ ಖುಷಿಯೋ ಖುಷಿ. ನಾವು ಹಾಗೂ ಅವರಿವರು ಬೇಡಿದ್ದನ್ನೆಲ್ಲಾ ರಾಯರು ಹಾಡಿದರು. ಮಧ್ಯರಾತ್ರಿ ಎರಡೂ ಮೂವತ್ತರ ಹೊತ್ತಿಗೆ ರೈಲು ಹಾಸನ ಮುಟ್ಟಿತು. ಅಷ್ಟರಲ್ಲಿ ಅದೆಷ್ಟು ಹಾಡುಗಳನ್ನು ಹಾಡಿದ್ದರೊ ! ಮಾರನೆಯ ದಿನ ಸಂಜೆ ರಾಯರು ಬೀರೂರಿನಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಹಾಡಬೇಕಿತ್ತು. ಅದರ ಪರಿವೆಯೇ ಇಲ್ಲದೆ ಕಾಳಿಂಗರಾಯರು ಅಷ್ಟು ಹೊತ್ತೂ ಓಡುವ ರೈಲಿನ ಶಬ್ದವನ್ನೂ ಮೆಟ್ಟಿ ಹಾಡಿದ್ದರು.

ಹಾಸನದಲ್ಲಿ ರೈಲು ನಿಂತೊಡನೆ ನಾನು ನನ್ನ ಮಡದಿಯೊಡನೆ ಇಳಿದೆ. ರಾಯರು ಕೆಳಗಿಳಿದು ನಮ್ಮಿಬ್ಬರ ಕೈಯನ್ನೂ ಬಲವಾಗಿ ಕುಲುಕಿ “I wish you both a very happy married life. Have a nice time” ಎಂದು ಹೇಳಿ ಬೋಗಿಯನ್ನು ಹತ್ತಿದರು.

ಮತ್ತೆ ೧೯೬೨ರಲ್ಲಿ ‘IPTA’ ಒಕ್ಕೂಟ (Indian People Theatrical Association conference) ದೆಹಲಿಯಲ್ಲಿ ಸೇರಿತು. ಆಗ ಕರ್ನಾಟಕ ಲಘು ಸಂಗೀತ ವಿಭಾಗವನ್ನು ಅಲ್ಲಿ ಪ್ರತಿನಿಧಿಸಿದ್ದು ಕಾಳಿಂಗರಾಯರ ತಂಡ. ಅಲ್ಲಿ ಬಹು ಯಶಸ್ವಿಯಾದ ಕಾರ್ಯಕ್ರಮವನ್ನು ಕೊಟ್ಟನಂತರ ರಾಯರು ತಮ್ಮ ವೃಂದದವರೊಡನೆ ತಾಜ್‌ಮಹಲ್ ನೋಡಲು ತೆರಳಿದ್ದರು. ಅದೇ ದಿನ ನಮ್ಮ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ಕಿನ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಜೊತೆಗೂಡಿ ಅಂತರ ಭಾರತ ಪ್ರವಾಸವನ್ನು ಮಾಡುತ್ತಿದ್ದ ಬಿ.ಸಿ.ರಂಗಯ್ಯನವರು (Head of the Dept. Of Civil Eng. S.J.P., Bangalore) ತಾಜ್‌ಮಹಲ್ ನೋಡಲು ಹೋಗಿದ್ದರು. ಅಂದು ಹುಣ್ಣಿಮೆ. ಹುಣ್ಣಿಮೆಯಂದು ಬೆಳದಿಂಗಳಿನಲ್ಲಿ ಆ ಭವ್ಯವಾಗಿರುವ ಅಮೃತ ಶಿಲೆಯ ಕಟ್ಟಡಕ್ಕೆ ಬೆಳ್ಳಿಯ ತೆರೆಯನ್ನು ಹೊದ್ದಿಸಿದಂತೆ ಕಾಣುತ್ತದೆ. ಆ ಸ್ವರ್ಗೀಯ ದೃಶ್ಯವನ್ನು ಎಷ್ಟೇ ಹೊತ್ತು ನೋಡಿದರೂ ಬಿಟ್ಟು ಬರುವ ಮನಸ್ಸಾಗುವುದಿಲ್ಲ. ನಮ್ಮ ತಾಜ್‌ಮಹಲ್ ನಿಜಕ್ಕೂ ತೇಜಮಹಾಲಯವೇ ಸರಿ. ಸಾಕಷ್ಟು ಹೊತ್ತು ಆ ನೋಟವನ್ನು ಸವಿದ ಬಳಿಕ ನಮ್ಮ ವಿದ್ಯಾರ್ಥಿಗಳು ಹಿಂತಿರುಗುತ್ತಿರಲು ಕಾಳಿಂಗರಾಯರು ಎದುರಾಗಬೇಕೆ! ನಮ್ಮ ಹುಡುಗರಿಗೆ ಆ ತಾಜಮಹಲ್ ನೋಡಿದಾಗ ಅದೆಷ್ಟು ಆನಂದವಾಯಿತೋ ಅಷ್ಟೇ ಆನಂದ ಈ ರಾಯರನ್ನು ಅಲ್ಲಿ ನೋಡಿದಾಗ ಆಯಿತು. ಒಂದೇ ಉಸಿರಿಗೆ ‘ಸಾರ್ ನಮ್ಮ ಕಾಳಿಂಗರಾಯ್ರೂ’ ಎಂದು ಕಿರುಚಿ ಇವರತ್ತ ಓಡಿ ಬಂದು ಸುತ್ತುವರಿದರು. ಈ ಹುಡುಗರು ‘ನಮ್ಮ ಕಾಳಿಂಗರಾಯ್ರು’ ಎಂದು ಹೌಹಾರಿ, ಚಿಮ್ಮಿ ಕುಣಿದು ಕುಪ್ಪಳಿಸುತ್ತಾ ಸುತ್ತುವರಿದದ್ದರಿಂದ ರಾಯರಿಗಾದ ಆನಂದ ಅಷ್ಟಿಷ್ಟಲ್ಲ. ಎಷ್ಟಾಗಲಿ ನೆಲದ ವಾಸನೆ, ವಾತ್ಸಲ್ಯ. ಹತ್ತಿರ ಬಂದವರನ್ನು ತಬ್ಬಿ ‘ಎಲ್ಲಿಂದ ಬಂದಿದ್ದೀರಯ್ಯ’ ಎಂದರು. ಇವರು ಕೋರಸ್ಸಾಗಿ ‘ಹೀಗೇ’ ಎಂದರು.  ರಾಯರು ಸಿಗರೇಟು ಹಚ್ಚಿ ‘ಡೆಲ್ಲಿಗಿಲ್ಲಿ ಎಲ್ಲಾದ್ನೂ ನೋಡದ್ರಾ?’ ಎನ್ನಲು ಹುಡುಗರು ಮತ್ತೆ ಕೋರಸ್ಸಾಗಿ ನೋಡದ್ವೂ ಸಾರ್’ ಎಂದರು. ನಂತರ  ರಾಯರು ‘very good, ಹೊತ್ತಾಗಿದೆ ಹೋಗ್ಬನ್ನಿ’ ಎನ್ನಲು ಹುಡುಗರು ‘ಟೂರೂಂತ ಹೊರಟ್ಮೇಲೆ ಹೊತ್ತುಗಿತ್ತು ಯಾರಿಗ್ಗೊತ್ತು. ಈಗ ಮೊದ್ಲು ಒಂದಿಷ್ಟು ಹಾಡ್ಹೇಳೀ ಸಾರ್ !’ ಎಂದು ದುಂಬಾಲು ಬಿದ್ದರು. ಅಲ್ಲಿ ಒಲ್ಲೆ ಎಂದು ಹೇಳಿ ಮಕ್ಕಳ ಮನಸ್ಸನ್ನು ಚಿಕ್ಕದು ಮಾಡಲು ರಾಯರ ಸರಳ ಸ್ವಭಾವ ಸಮ್ಮತಿಸಲಿಲ್ಲ. ಆ ಕ್ಷಣವೇ ಬೆಳದಿಂಗಳಿನಲ್ಲಿ ಬೆಳಗುತ್ತಿದ್ದ ತಾಜ್‌ಮಹಲ್ ಕಡೆಗೆ ಕೈಬೀಸಿ ಅದರ ನೆತ್ತಿಯ ಮೇಲೆ ಮುಗಿಲೆತ್ತರದಲ್ಲಿ ತಿಂಗಳ ಬೆಳಕನ್ನು ಸುರಿಯುತ್ತಿದ್ದ ಚಂದಿರನನ್ನೇ ನೋಡುತ್ತಾ ‘ಬಾರಯ್ಯ ಬೆಳುದಿಂಗಳೆ, ನಮ್ಮೂರ ಹಾಲ್ನಂತ ಬೆಳುದಿಂಗಲೇ’ ಎಂದು ಅತಿ ಎತ್ತರದ ದನಿಯಲ್ಲಿ ಕಾಳಿಂಗರಾಯರು ಹಾಡಲಾರಂಭಿಸಿಯೇ ಬಿಟ್ಟರು! ಜೊತೆಗೆ ಮೋಹನ್ ಸೋಹನ್. ಮತ್ತವರ ಜೊತೆಗೆ ನಮ್ಮ ಹುಡುಗರು. ತಾಜಮಹಲನ್ನು ನೋಡಲು ಅಂದು ಅಲ್ಲಿಗೆ ಬಂದಿದ್ದ ಬಹು ಮಂದಿ, ಗುಂಪಿನ ನಡುವೆ ಮೈಮರೆತು ಉಲ್ಲಾಸದಿಂದ, ಭಾವಾವೇಶದಿಂದ ಹಾಡುತ್ತಿದ್ದ ಈ Tip-Top ಸೂಟುಧಾರಿ ಕಾಳಿಂಗರಾಯರನ್ನು ಮೆಚ್ಚು ಕೊಂಡಾಡಿದರು. ‘ನಮ್ಮ ಕಾಳಿಂಗರಾಯರು ಇತರ ಭಾಷೆಯ ಜನರ ಹೃನ್ಮನವನ್ನೂ ಅಂದು ದಟ್ಟ ಬೆಳದಿಂಗಳಲ್ಲಿ ಸೂರೆಗೊಂಡಿದ್ದರು’ ಎಂದು ಕಾಳಿಂಗರಾಯರ ಕಲಾಶಕ್ತಿಯನ್ನೂ ಸರಳತೆಯನ್ನೂ ಇಂದಿಗೂ ನಮ್ಮ ರಂಗಯ್ಯನವರು ಸ್ಮರಿಸುತ್ತಾರೆ.

ಇಂದು, ಅಂದರೆ ೩೦-೫-೯೩ರಂದು ಬೆಳಿಗ್ಗೆ ಡಾ|| ಎಚ್.ಕೆ. ರಂಗನಾಥ್‌ರವರ ಮನೆಯಲ್ಲಿದ್ದೆ. ಕಾಳಿಂಗರಾಯರ ಬಗ್ಗೆ ಬರೆದಿರುವ ನನ್ನ ಲೇಖನಗಳಲ್ಲಿ ಶ್ರೀಯುತರಿಗೆ ಸಂಬಂಧಿಸಿದಂತಿರುವ ಕೆಲವು ವಿವರಗಳನ್ನು ಅವರ ಮುಂದೆ ಓದಿದೆ. ಎಲ್ಲವೂ ಸರಿಯಾಗಿದೆ ಎಂದು ರಂಗನಾಥರು ಕಾಳಿಂಗರಾಯರ ಸರಳತೆ, ಸ್ನೇಹಭಾವ ಹಾಗೂ ಸೌಜನ್ಯದ ಬಗ್ಗೆ ಹೇಳುತ್ತಾ ಮತ್ತೊಂದು ವಿಚಾರವನ್ನು ತಿಳಿಸಿದರು

ಡಾ|| ರಂಗನಾಥ್‌ರವರು ೧೯೪೨-೪೩ರ ಸಮಯದಲ್ಲೇ ಬೆಂಗಳೂರು, ಮೈಸೂರು, ಮಡಿಕೇರಿ, ಉಡುಪಿ ಇತ್ಯಾದಿ ಕಡೆಗಳಲ್ಲಿ ಕುವೆಂಪು, ಬೇಂದ್ರೆ, ರಾಜರತ್ನಂ, ಪು.ತಿ.ನ. ಇವರ ಕವನಗಳನ್ನು ಅಲ್ಲಲ್ಲಿ ಸಭೆ ಸಮಾರಂಭಗಳಲ್ಲಿ ಹಾಡಿ ಪ್ರಖ್ಯಾತರಾದವರು. ಅ.ನ.ಕೃ. ಮಾಸ್ತಿ, ಇಂಥವರ ಜೊತೆಗೂಡಿ ಕನ್ನಡ ಪ್ರಚಾರ ಕಾರ್ಯದಲ್ಲಿ ಸುತ್ತಾಡಿದವರು. ಆಗಿನಿಂದಲೇ ಇವರಿಗೆ ರಾಯರ ನಿಕಟ ಪರಿಚಯ ಸ್ನೇಹ.

ರಂಗನಾಥ್‌ರವರು ಈಗ ವಾಸಿಸುತ್ತಿರುವುದು ಬೆಂಗಳೂರು ಜಯನಗರದಲ್ಲಿ. ಹಿಂದೆ ಇವರು ಮಲ್ಲೇಶ್ವರದಲ್ಲಿದ್ದಾಗ ಕಾಳಿಂಗರಾಯರು ಆಗಾಗ ಇವರ ಮನೆಗೆ ಬರುತ್ತಿದ್ದರು. ರಂಗನಾಥ್‌ರವರ ತಾಯಿ ಚಿನ್ನಮ್ಮನವರು ಎಂದರೆ ರಾಯರಿಗೆ ಬಲು ಪ್ರೀತಿ. ಚಿನ್ನಮ್ಮನವರಿಗೆ ಪಾರ್ಶ್ವವಾಯು ಅಪ್ಪಳಿಸಿತು. ಅವರು ಹಾಸಿಗೆ ಹಿಡಿದು ಮಲಗಿದರು. ಆ ದಿಶೆಯಲ್ಲಿ ಅವರ ಆರೋಗ್ಯವನ್ನು ವಿಚಾರಿಸಲು ಹೋಗುತ್ತಿದ್ದ ಕಾಳಿಂಗರಾಯರು ಚಿನ್ನಮ್ಮನವರ ಬಳಿ ಅವರಿಗೆ ಧೈರ್ಯ ಬರುವಂತೆ ಕೆಲವು ಮಾತನಾಡಿ ‘ಅಮ್ಮಾ ನಿಮಗೆ ತೊಂದರೆಯಾಗದಿದ್ದರೆ ಒಂದೆರಡು ಹಾಡುಗಳನ್ನು ಹೇಳ್ಲೇನಮ್ಮಾ?’ ಎಂದು ಮಗುವಿನಂತೆ ಕೇಳುತ್ತಿದ್ದರಂತೆ. ಅದಕ್ಕೆ ಚಿನ್ನಮ್ಮನವರು ‘ಅಯ್ಯೋ ದೇವರೆ, ಅದೆಷ್ಟು ದೊಡ್ಡ ಕಲಾವಿದನಪ್ಪ ನೀನು. ನೀನೇ ಹಾಡ್ತೀನಿಂದ್ರೆ ಬೇಡಾನ್ನೋರು ಯಾರಿದ್ದಾರಪ್ಪ ಈ ಭೂಲೋಕದಲ್ಲಿ? ಹಾಡಪ್ಪ, ದಯವಿಟ್ಟು ಹಾಡು’ ಎಂದು ಆಕೆ ಅನ್ನುತ್ತಿದ್ದರಂತೆ, ರಾಯರು ಅವರಿಗಿಷ್ಟವೆನಿಸುವ ಒಂದೆರಡು ಹಾಡುಗಳನ್ನು ಹಾಡುತ್ತಿದ್ದರು’ ‘ಇದರಿಂದ ನನ್ನ ತಾಯಿಗೆ ಆ ನಿಲುವಿನಲ್ಲಿ ಅದೆಷ್ಟು ನೆಮ್ಮದಿ ಸಿಗುತ್ತಿತ್ತೋ! ಮಹಾನುಭಾವ, ಆತನಿಗೆ ಬಂದಾಗಲೆಲ್ಲಾ ನಾವು ಕೊಡುತ್ತಿದ್ದುದು ಒಂದು ಲೋಟ ಕಾಫಿ ಅಷ್ಟೆ. ಅವರು ಅದರ ಋಣವನ್ನು ಈ ರೀತಿಯಿಂದ ತೀರಿಸುತ್ತಿದ್ದರು’ ಎಂದು ಕಿಟಕಿಯ ಬೆಳಕಿನತ್ತ ರಂಗನಾಥ್ ತಿರುಗಿದಾಗ ಅವರ ಮುಖದಲ್ಲಿ ನೋವಿನ ಛಾಯೆ ಎದ್ದು ತೋರುತ್ತಿತ್ತು.

ಬೀಚೀ, ಅ.ನ.ಕೃ. ಕಾಳಿಂಗರಾಯರು, ಮಾಸ್ಟರ್ ಹಿರಣ್ಣಯ್ಯ, ಪರಸ್ಪರ ಆತ್ಮೀಯರು. ಕಾಳಿಂಗರಾಯರಿಗೆ ವಚನ ಹಾಗೂ ಭಾವಗೀತೆಗಳನ್ನು ಹಾಡುವುದನ್ನೇ ಪರಿಪಾಠ ಮಾಡಿಕೊಳ್ಳಬೇಕೆಂದು ಪ್ರಚೋದಿಸಿ ಹುರಿದುಂಬಿಸಿದವರು ಅ.ನ.ಕೃಷ್ಣರಾಯರು. ಬೆಂಗಳೂರಿನಲ್ಲಿದ್ದಾಗಲೆಲ್ಲಾ  ಕಾಳಿಂಗರಾಯರು ಅ.ನ.ಕೃ. ಅವರ ಮನೆಗೆ ಹೋಗಿಬರುತ್ತಿದ್ದುದು ಮಾಮೂಲು. ಮತ್ತೆ ಡಿ.ವಿ. ಗುಂಡಪ್ಪನವರೆಂದರೆ ಕಾಳಿಂಗರಾಯರಿಗೆ ಪಂಚಪ್ರಾಣ. ಅವರ ‘ಉಮರನ ಒಸಗೆ’ ಹಾಗೂ ‘ಮಂಕುತಿಮ್ಮನ ಕಗ್ಗ’ದಿಂದ ಆಯ್ದ ಎಷ್ಟೋ ಪದ್ಯಗಳನ್ನು ರಾಯರು ತಮ್ಮ ಕಾರ್ಯಕ್ರಮಗಳಲ್ಲಿ ಹಾಡಲು ಮರೆಯುತ್ತಿರಲಿಲ್ಲ. ಡಿ.ವಿ.ಜಿ. ಅವರ ಬಗ್ಗೆ ರಾಯರಿಗೆ ಅದೆಷ್ಟು ಗೌರವ ಭಾವವಿತ್ತೆಂದರೆ, ಡಿ.ವಿಜಿ.ಯವರು ತೀವ್ರವಾಗಿ ಅನಾರೋಗ್ಯದಿಂದ ನರಳುತ್ತಾ ಬೆಂಗಳೂರಿನ ಸೆಂಟ್‌ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಕಾಳಿಂಗರಾಯರು ಅವರ ಯೋಗಕ್ಷೇಮವನ್ನು ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದರು. ತೀರ ಅಸ್ವಸ್ಥರಾಗಿದ್ದು ಕೃಶರಾಗಿದ್ದ ಗುಂಡಪ್ಪನವರನ್ನು ನೋಡುತ್ತಿದ್ದಂತೆ ಕಾಳಿಂಗರಾಯರ ಕಣ್ಣಲ್ಲಿ ಕರುಣಾಶ್ರು ಒತ್ತರಿಸಿಕೊಂಡು ಬರಲು, ಅವರ ಪಕ್ಕದಲ್ಲಿ ಕೂತು ಮೈದಡವಲು, ರಾಯರನ್ನು ದಿಟ್ಟಿಸಿದ ಡಿ.ವಿ.ಜಿ. ಏನಾದರೂ ಹಾಡಿ ಎಂಬಂತೆ ಸನ್ನೆ ಮಾಡಲು, ಅವರ ‘ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ’ ಹಾಗೂ ‘ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ’ ಎಂಬ ಕವನಗಳನ್ನು ಗುಂಡಪ್ಪನವರ ಕಿವಿಯಲ್ಲಿ ಗುನುಗಿದಾಗ, ಸಂತೃಪ್ತ ಭಾವದಿಂದ ಆಲಿಸಿದ ಡಿ.ವಿ.ಜಿ. ಅವರ ಕಣ್ಣಂಚಿನಿಂದ ಹರಿದ ನೀರು ತೊಟ್ಟಿಕ್ಕಿತಂತೆ. ನಂತರ ಕಾಳಿಂಗರಾಯರ ಕೈಗಳನ್ನು ಭದ್ರವಾಗಿ ಹಿಡಿದ ಡಿ.ವಿ.ಜಿ. ‘ನೀವು ನೂರ್ಕಾಲ ಬದುಕಬೇಕು’ ಎಂದು ಹೃತ್ಪೂರ್ವಕವಾಗಿ ಹರಸಿದ್ದನ್ನು ರಾಯರು ಮೇಲಿಂದ ಮೇಲೆ ನೆನೆಯುತ್ತ ಆಗಸದತ್ತ ಕೈಮುಗಿಯುತ್ತಿದ್ದರು.

ಓದುಗರಾದ ನೀವು ‘ಮಹಾನ್ ಕಲಾವಿದರಾಗಿದ್ದ ಕಾಳಿಂಗರಾಯರು ಹೀಗೆಲ್ಲಾ ಮಾಡಿರಲು ಸಾಧ್ಯವೇ? ಇವೆಲ್ಲ ಉತ್ಪ್ರೇಕ್ಷೆಯ ಮಾತಲ್ಲವೆ?’ ಎಂದು ಅನುಮಾನಿಸಿ ತಲೆ ಕೆರೆದುಕೊಳ್ಳಬಹುದು. ಆದರೆ ಖಂಡಿತವಾಗಿ ಹೇಳುತ್ತಿದ್ದೇನೆ, ಇದೆಲ್ಲಾ ನಡೆದ ಪ್ರಸಂಗಗಳೇ.

ಕಾಳಿಂಗರಾಯರು ‘ಮಹಾನ್ ಕಲಾವಿದ’ ಪ್ರಪಂಚದ ದೃಷ್ಟಿಯಿಂದ. ಆದರೆ ತಾನೊಬ್ಬ ಮಹಾನ್ ಕಲಾವಿದನೆಂದು ಅವರು ಎಂದೂ ಅಂದುಕೊಂಡಿರಲಿಲ್ಲ. ಕಂಠ, ಕಲೆ, ರೂಪು, ವರ್ಚಸ್ಸು, ಬೇಡಿಕೆ, ಮನ್ನಣೆ ಜನಾನುರಾಗ, ಸಂಪಾದನೆ, ಕೀರ್ತಿ ಇವೆಲ್ಲಾ ಒಬ್ಬನಲ್ಲಿ ಒಟ್ಟಾಗಿ ಸೇರಿದಾಗ ಸಾಮಾನ್ಯವಾಗಿ ಅಂಥವನು ನಡೆಯಲು ತನ್ನ ಪಾದಗಳನ್ನು ಉಪಯೋಗಿಸುವುದಿಲ್ಲ. ಬದಲಿಗೆ ತಲೆಯಲ್ಲೇ ನಡೆದಾನು ! ಆದರೆ ಇಷ್ಟೆಲ್ಲಾ ಸವಲತ್ತುಗಳನ್ನು ಆ ಭಗವಂತ ಕಾಳಿಂಗರಾಯರಿಗೆ ಕರುಣಿಸಿದ್ದರೂ ಸ್ವಪ್ರತಿಷ್ಠೆ ಹಾಗೂ ಅಹಂಕಾರದ ಸೋಂಕು ರಾಯರಿಗೆಂದೂ ಸೋಕಲಿಲ್ಲ. ಅವರು ತಮ್ಮ ಕೊನೆಯುಸಿರನ್ನು ಎಳೆಯುವವರೆಗೂ ಹಸುಗೂಸಿನಂತೆ ಮುಗ್ದ ಮನಸ್ಸಿನ ಜೀವಿಯಾಗಿಯೇ ಇದ್ದು ಕೊನೆಗೆ ದಗ್ಧವಾದರು.

ಇಂಥವರನ್ನಷ್ಟೇ ಸಿದ್ಧರೆನ್ನಬೇಕು, ಸುಪ್ರಸಿದ್ಧರೆನ್ನಬೇಕು!

* * *