ಕಾಳಿಂಗರಾಯರಿಗೆ ದಕ್ಷಿಣಾದಿ ಹಾಗೂ ಉತ್ತರಾದಿ ಪದ್ಧತಿಗಳೆರಡರಲ್ಲೂ ಗಂಟೆಗಟ್ಟಲೇ ಭರ್ಜರಿಯಾಗಿ ಸಂಗೀತ ಕಛೇರಿ ಮಾಡುವ ಶಕ್ತಿ ಸಾಮರ್ಥ್ಯವಿತ್ತೆಂಬುದು ಅನೇಕರಿಗೆ ತಿಳಿಯದ ವಿಷಯ.

೧೯೫೬ರ ಸುಮಾರು, ನಮ್ಮ ಮನೆಗೊಮ್ಮೆ ಕಾಳಿಂಗರಾಯರು ಬಂದಿದ್ದರು. ನಮ್ಮ ತಂದೆ (ಶ್ರೀ ಬಿ.ಕೆ. ಸುಬ್ಬರಾವ್, ಅಡ್ವೊಕೇಟ್) ಯವರಿಗೆ ಕಾಳಿಂಗರಾಯರೆಂದರೆ ತುಂಬ ಅಭಿಮಾನ, ಪ್ರೀತಿ. ಬಂದ ರಾಯರೊಡನೆ ಅದೂ ಇದೂ ಮಾತನಾಡುತ್ತ ‘ನೋಡಿ ರಾಯ್ರೆ, ನಮ್ಮ ಕರ್ನಾಟಕ ಸಂಗೀತವನ್ನು ನಮ್ಮವರೇ ಧೀಮಂತಿಕೆಯಿಂದ ಹಾಡೋದಿಲ್ಲ. ಕೆಲವರನ್ನು ಬಿಟ್ರೆ ಉಳಿದ ವಿದ್ವಾಂಸರೆಲ್ಲಾ ಕಚೇರಿ ಮಾಡಿ ಹಣ ಸಂಪಾದ್ಸೋ ಬದಲು ಬರೀ ಸಂಗೀತ ಪಾಠ ಹೇಳೋದನ್ನೇ ವೃತ್ತಿಯಾಗಿಟ್ಕೊಂಡ್ಬಿಟ್ಟಿದ್ದಾರೆ. ಯಾಕ್ಹೀಗೇಂತ ಕೇಳದ್ರೆ, ಇಲ್ಲಿ ಲೋಕಲ್ ಆರ್ಟಿಸ್ಟ್ಗಳಿಗೆ ಎನ್ಕರೇಜ್ಮೆಂಟ್ಕೊಡೋಲ್ಲಾಂತ ಹೇಳ್ತಾರೆ. ಬಟ್ ಇವರ್ಗೆ ಅದೇನು ಎನ್ಕರೇಜ್ಮೆಂಟ್ ಕೊಡೋದು ಹೇಳಿ? ಇವರ ಸಂಗೀತವನ್ನು ಅರ್ಧಗಂಟೆ ಕೇಳೋದ್ರಲ್ಲೇ ಸಾಕಾಗ್ಹೋಗತ್ತೆ. ಅದೇ ಮದ್ರಾಸ್ನವರ್ನ ನೋಡಿ, ಒಬ್ಬರ್ಗಿಂತ ಒಬ್ರು ಹುಲಿಗಳು ! ಅವರ ಆ ಸಾಧನೆ, ಪರಿಶ್ರಮ, ರಾಗಾಲಾಪನೆಯ ವೈಖರಿ, ಅವರ್ಗಳು ಹಾಡೋ ಸ್ಟೈಲು, ಇವನ್ನೆಲ್ಲಾ ನಮ್ಮವರಲ್ಲಿ ಹುಡುಕಾಡದ್ರೂ ಸಿಕ್ಕೋಲ್ಲ. ನೀವು ಏನೇ ಅನ್ನಿ ಮಿ. ರಾವ್, ಈ ಕರ್ಣಾಟಕ ಸಂಗೀತಾನ್ನೋದು ಆ ಕಣಿವೆ ಕೆಳಗಿನ ಜನಕ್ಕೆ ಕಟ್ಟಿಟ್ಟ ಬುತ್ತಿ. ಆ ಅರಿಯಾಕುಡಿ, ಶಮ್ಮನ್ ಗುಡಿ, ಚೆಂಬೈ, ಜಿ.ಎನ್.ಬಿ.’ ಎಂದು ಆ ಕಡೆಯ ಪ್ರಖ್ಯಾತ ಸಂಗೀತಗಾರರೆನ್ನಿಸಿದ್ದವರ ಹೆಸರುಗಳನ್ನು ಚಪ್ಪರಿಸಿ, ‘ಅಂದ್ಹಾಗೆ ನೀವು ಜಿ.ಎನ್.ಬಿ. ಸಂಗೀತ ಕೇಳಿದ್ದೀರಲ್ಲಾ! ಅದೇನು ವಾಯಿಸ್ಸೂ, ಅದೇನು ಉರುಳ್ಕೆ….’ ಎನ್ನಲು ಕಾಳಿಂಗರಾಯರು ‘ಹಾಗಾದ್ರೆ ನಿಮ್ಗೆ ಜಿ.ಎನ್.ಬಿ. ಅಂದ್ರೆ ತುಂಬ ಇಷ್ಟ ಅಂದ್ಹಾಗಾಯ್ತು’ ಎನ್ನಲು ನಮ್ಮ ತಂದೆ ‘ಇಷ್ಟ ಒಂದೇ ಅಲ್ಲಾ, he was my student also once upon a time’ ಎಂದರು. ಅದಕ್ಕೆ ಚಕಿತರಾದ ರಾಯರು ‘ಏನಂದ್ರಿ? ಜೆ.ಎನ್.ಬಿ. ನಿಮ್ಮ ಸ್ಟೂಡೆಂಟೇ? ನೀವು ಅವರಿಗೆ ಸಂಗೀತ ಹೇಳ್ಕೊಡ್ತಿದ್ರ?’ ಎನ್ನಲು, ನಮ್ಮ ತಂದೆ ‘ನೊ ನೊ’ ಆ ರಾಕ್ಷಸನಿಗೆ ನಾನು ಸಂಗೀತ ಹೇಳ್ಕೊಡೋದೂಂದ್ರೇನು ರಾಯ್ರೆ? ಅದಲ್ಲಾ. ನಾನು ಮದ್ರಾಸ್ನಲ್ಲಿ ಬಿ.ಎಲ್. ಓದ್ತಿರ್ರ್ಬೇಕಾದ್ರೆ, ಇನ್ ೧೯೨೬, ಈ ಜಿ.ಎನ್. ಬಿ. ನನ್ಗೆ ಪರಿಚಯವಾದ್ರು. ನಾನಿದ್ದ ಹಾಸ್ಟಲ್ನಲ್ಲಿ ಅವರ ಹತ್ತಿರದ ಸಂಬಂಧಿ ಒಬ್ಬ ಇದ್ದ, ಅತನ್ನ ನೋಡೋಕೆ ಜಿ.ಎನ್.ಬಿ. ಆಗಾಗ ನಮ್ಮ ಹಾಸ್ಟಲ್ಲಿಗೆ ಬರರ್ತಿದ್ರು. ಅವ್ರು ಹೀಗೆ ಬಂದಾಗ್ಲೆಲ್ಲಾ ನಾವು ಕೆಲವು ಜನ ಅವರ ಸುತ್ತ ಸೇರಿ ದುಂಬಾಲು ಬಿದ್ದು ಅವರಿಂದ ಹಾಡಸ್ತಿದ್ವು. ಕೆಲವು ಬಾರಿ ಮೂಡ್ ಇದ್ದಾಗ ಘಂಟೆಗಟ್ಲೆ ಹಾಡ್ತಿದ್ರು. ಆ ಸಮಯದಲ್ಲಿ ಅವ್ರೂವೆ ಬಿ.ಎ.ನೋ ಬಿ.ಎಸ್ಸಿ.ನೋ ಓದ್ತಿದ್ರು, ಕಾಟಾಚಾರಕ್ಕೆ. ಅವರೆಂದೂ ಕಾಲೇಜಿಗೆ ಸರಿಯಾಗಿ ಹೋದದ್ದಿಲ್ಲ. ಸದಾ ಸಂಗೀತಾಭ್ಯಾಸ. ಬೆಳಿಗ್ಗೆ ಐದರಿಂದ ರಾತ್ರಿ ಹತ್ತು ಹನ್ನೊಂದರವರೆಗೆ ಅಭ್ಯಾಸ ಮಾಡ್ತಿದ್ರಂತೆ. ಈ ಮಧ್ಯೆ ಓದೋದೇನ್ಬಂತು? ನಾನೇ ಆಗಾಗ ಅವರಿಗೆ ಇಂಗ್ಲಿಷ್ನ ಪಾಠ ಮಾಡಿ ನೋಟ್ಸ್ ಬರಸ್ತಿದ್ದೆ. ಹೀಗಾಗಿ this famous G.N.B. of today was once my beloved student you know. ನಿಜಕ್ಕೂ ರಾಯ್ರೆ, ಆತನದೇನು ಕಂಠ, ಅದೇನು ಪಲುಕು, I am proud of him. ಅವರಂತೆ ಹಾಡೋರು ನಮ್ಮಲ್ಲಿ ಯಾರಿದ್ದಾರೆ ಕಾಳಿಂಗರಾಯ್ರೆ?’ ಎಂದು ಉದ್ಗರಿಸಲು ಇದನ್ನೆಲ್ಲ ಕೇಳುತ್ತಿದ್ದ ಕಾಳಿಂಗರಾಯರು ‘ಆಯ್ತು ಸಾರ್, ಜಿ.ಎನ್.ಬಿ. ಅವರ ಕಂಠ, ಉರುಳಿಕೆ ಅಮೋಘ ಅಂದ್ರಿ ಅಲ್ವೆ? ಇಲ್ಕೇಳಿ’ ಎಂದವರೇ ಜಿ.ಎನ್.ಬಿ. ಸಾಮಾನ್ಯವಾಗಿ ತಮ್ಮೆಲ್ಲ ಕಚೇರಿಗಳಲ್ಲಿ ಹಾಡುತ್ತಿದ್ದ ಅವರದ್ದೇ ಸ್ವಂತ ಕೃತಿ “ಹಿಮಗಿರಿ ತನಯೇ ಹೇಮಲತೇ” ಎಂಬ ಕೀರ್ತನೆಯನ್ನು ಕಾಳಿಂಗರಾಯರು ಹಾಡಲು, ಕೇಳಿದ ನಮ್ಮ ತಂದೆ ತತ್ತರಿಸಿಹೋದರು. ಆ ಕಾಲದಲ್ಲಿ ಅಪ್ರತಿಮ ಸಂಗೀತದ ವಿದ್ವಾಂಸರೆಂದು ಹೆಸರು ಗಳಿಸಿದ್ದ ಜಿ.ಎನ್. ಬಾಲಸುಬ್ರಹ್ಮಣ್ಯಂರವರ ಸರಿಸಮಾನರೆಂಬಂತೆ ಅಥವಾ ಇನ್ನೂ ಒಂದು ಕೈ ಮೇಲೆಂಬಂತೆ ಹಾಡುವ ಶಕ್ತಿ ಈ ಕಾಳಿಂಗರಾಯರಿಗಿದೆ ಎಂಬುದನ್ನರಿತ ನಮ್ಮ ತಂದೆ ರಾಯರ ಕೈ ಹಿಡಿದು ‘Mr. Rao, why don’t you switch over to Karnatic classical music? I am sure you will outbeat most of the Madras Musicians I say’, ಎನ್ನಲು ರಾಯರು ನಕ್ಕು ‘thank you sir, ನೀವು ಕಿಚಾಯಿಸಿದ್ರಿಂದ ಹಾಡ್ದೆ ಅಷ್ಟೆ. ನಾನು ಮದ್ರಾಸಿನಲ್ಲಿ ಹಿಂದೀ ಪ್ರಚಾರ ಸಭೆಯಲ್ಲಿ ಪ್ರಾಧ್ಯಾಪಕನಾಗಿದ್ದಾಗ ಜಿ.ಎನ್.ಬಿ. ಪರಿಚಯ ನನ್ಗೂ ಚೆನ್ನಾಗಿದೆ. ಎಲ್ಲಾ ಸರಿಯೆ. ಆದ್ರೆ ಈಗ ನನಗೆ ಈ ಲೈಟ್ ಮ್ಯೂಸಿಕ್ ಕೊಡ್ತಿರೋ pleasureನ pure classical music ಖಂಡಿತವಾಗ್ಯೂ ಕೊಡೋದಿಲ್ಲಾ ರಾಯ್ರೇ. Light Music is more striaght and sharp. It can reach the mases easily you know. ಆಲ್ದೆ ನಾನೀಗ ಹಾಡ್ತಿರೋ ಲಘು ಸಂಗೀತಕ್ಕೆ ಪಕ್ಕವಾದ್ಯದವರು ಸುಲಭವಾಗಿ ಸಿಗ್ತಾರೆ. But it is not so if I switch over to classical music’ ಎಂದು ಹೆಮ್ಮೆಯಿಂದ ಹೇಳಿದ ಕಾಳಿಂಗರಾಯರು ನಮ್ಮ ತಂದೆಗೆ ವಂದಿಸಿ ಹೊರಟು ಹೋದರು.

ಇದಾದ ಕೆಲವು ದಿನಗಳ ನಂತರ ನಾನೂ ಕಾಳಿಂಗರಾಯರೂ ಮೈಸೂರು ಕೋರ್ಟಿನ ಬಳಿ ಬರುತ್ತಿದ್ದೆವು. ಆಗ ಆ ಪ್ರದೇಶದಲ್ಲೇ ವಾಸಿಸುತ್ತಿದ್ದ ಸುವಿಖ್ಯಾತ ಟಿ. ಚೌಡಯ್ಯನವರು ಎದುರಾದರು. ಅವರನ್ನು ಕಂಡಕೂಡಲೆ ಬಹು ಆತ್ಮೀಯತೆಯಿಂದ ‘ಹೇಗಿದ್ದೀರ ದೇವ್ರೂ? ನೋಡಿ ಬಹಳ ದಿನಗಳಾಯ್ತು’ ಎಂದು ಕಾಳಿಂಗ ರಾಯರು ಕೈ ಮುಗಿಯಲು ಚೌಡಯ್ಯನವರು ಅಷ್ಟೇ ಆತ್ಮೀಯತೆಯಿಂದ ಹತ್ತಿರ ಬಂದು ಕೈಮುಗಿದು ನಿಂತಿದ್ದ ಕಾಳಿಂಗರಾಯರ ಕೈಗಳನ್ನು ಬಲವಾಗಿ ಅದುಮಿ ಹಿಡಿದು ತಮ್ಮ ಕಣ್ಣುಗಳಿಗೆ ಒತ್ತಿಕ್ಕೊಂಡು ‘ನೀವು ಹೇಗಪ್ಪಾ ಇದ್ದೀರಿ?’ ಎಂದದ್ದು ನನ್ನ ಸ್ಮೃತಿಯಿಂದ ಮಾಸಿಲ್ಲ.

ಮತ್ತೆ, ಅಂದರೆ ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಡೆಕ್ಕನ್ ಹೆರಾಲ್ಡ್ ಸಂಸ್ಥೆಯಲ್ಲಿದ್ದ ಟಿ.ಎಸ್. ರಾಮಚಂದ್ರರಾಯರ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಹಾಡಿದವರು ಕಾಳಿಂಗರಾಯರು. ಆ ಸಮಾರಂಭಕ್ಕೆ ಡೆಕ್ಕನ್ ಹೆರಾಲ್ಡ್ ಹಾಗೂ ಸುಧಾ ಪತ್ರಿಕೆಯ ಸಂಪಾದಕರಾಗಿದ್ದ ಇ.ಆರ್. ಸೇತೂರಾಮ್ರವರೂ ಹೋಗಿದ್ದು, ಸಮಾರಂಭದ ನಂತರ ಕಾಳಿಂಗರಾಯರೊಡನೆ ಮಾತನಾಡುತ್ತಾ ‘ಏನ್ರಿ ಕಾಳಿಂಗ್ರಾಯ್ರೆ, ನೀವು ಸೊಗಸಾಗಿ, ಅದ್ಭುತವಾಗಿ ಹಾಡ್ತೀರಿ, ದೈವದತ್ತವಾದ ಕಂಠವೂ ಇದೆ, ಸರಿಯೆ. ಆದರೆ ಬರೀ ಈ ಲಘು ಸಂಗೀತಾನೇ ಹಾಡೋದ್ರ ಬದ್ಲು once in a way, classical music ನ ಹಾಡೀಪ್ಪ, at least for a change’ ಎನ್ನಲು ಕಾಳಿಂಗರಾಯರು ‘ಆಯ್ತು, ನಿಮ್ಗೆ ಯಾವ ಕ್ಲಾಸಿಕಲ್ ಮ್ಯೂಸಿಕ್ ಇಷ್ಟ?’ ಎನ್ನಲು ಸೇತೂರಾಮ್ ‘ಹಿಂದೂಸ್ಥಾನೀನೇ ಹಾಡೀಪ್ಪ’ ಎಂದಾಗ ರಾಯರು ನಕ್ಕು ‘ಆಯ್ತು ಹಾಡ್ತೀನಿ, ಅರೇಂಜ್ ಮಾಡಿ’ ಎಂದರು. ವಿಷಯ ಅಲ್ಲಿಗೇ ಮುಗಿಯಲಿಲ್ಲ. ಇ.ಆರ್. ಸೇತೂರಾಮ್ ತಮ್ಮ ಕೆಲವು ಮಿತ್ರರೊಂದಿಗೆ ಕಾಳಿಂಗರಾಯರ ಹಿಂದೂಸ್ಥಾನಿ ಸಂಗೀತ ಕಛೇರಿಯನ್ನು ಏರ್ಪಡಿಸಿಯೇ ಬಿಟ್ಟರು. ಕಛೇರಿ ನಡೆದದ್ದು ಕೆ.ವಿ. ಅಯ್ಯರ್ರವರ ವ್ಯಾಯಾಮ ಶಾಲೆಯ ಹಜಾರದಲ್ಲಿ.

ಸಾಕಷ್ಟು ಮಂದಿ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ರಾಯರು ಸುಮಾರು ಮೂರ್ನಾಲ್ಕು ಘಂಟೆಗಳ ಕಾಲ, ಅಂದರೆ ಕೇಳಿದವರು ನಿಬ್ಬೆರಗಾಗಿ ಹುಬ್ಬೇರಿಸಿ ಹೊಗಳಿ ಕೊಂಡಾಡುವಂತೆ ಹಾಡಿದರು. ಕಾಳಿಂಗರಾಯರು ಅಂದು ಹಿಂದೂಸ್ಥಾನಿ ತೋಡಿಯೊಂದನ್ನೇ ಸುಮಾರು ಒಂದು ಘಂಟೆಯ ಕಾಲ ಅಲಾಪಿಸಿದ್ದನ್ನು ಇಂದಿಗೂ ಸ್ಮರಿಸುತ್ತಾರೆ ಸೇತುರಾಮ್. (ಸೇತುರಾಮ್ ಈಗಿಲ್ಲ).

ಕೈಲಾಸಂ ಹೇಳಿದಂತೆ ಕಾಳಿಂಗರಾಯರು ‘ಕಟ್ಬಿಟ್ರೆ ಕುರಿ, ಕಿತ್ಕೊಂಡ್ರೆ ಕಿರುಬ’ಎಂಬ ಗುಂಪಿಗೆ ಸೇರಿದವರು. ಸುಮ್ಮನಿದ್ದರೆ ಸರಿ. ಸಂಗೀತದ ಸುದ್ದಿಯನ್ನೆತ್ತಿ ಕೆಣಕಿದವರಿಗೆ ಗ್ರಹಚಾರ ಬಿಡಿಸಿಬಿಡುತ್ತಿದ್ದರು.

* * *