ಪಿ.ಕಾಳಿಂಗರಾಯರು ಹುಟ್ಟಿದ್ದು ೩೧-೮-೧೯೧೪ ರಂದು. ಅವರು ದೈವಾಧೀನರಾದದ್ದು ೨೧-೯-೧೯೮೧ ರಂದು. ಅಂದರೆ ಅವರ ಜೀವಿತಕಾಲ ಅರವತ್ತೇಳು ವರ್ಷದ ನಂತರ ಇಪ್ಪತ್ತೆರಡು ದಿನಗಳು.

ಕಾಳಿಂಗರಾಯರು ತಮ್ಮ ಜೀವಿತಕಾಲದಲ್ಲಿ ಒಮ್ಮೆ ಅಂದರೆ, ೧೯೬೨-೬೩ರಲ್ಲಿ ವಿಷಮಶೀತಜ್ವರದಿಂದ ಕೆಲಕಾಲ ನರಳಿದ್ದನ್ನು ಬಿಟ್ಟರೆ ನನಗೆ ತಿಳಿದಿರುವಂತೆ ಅವರೆಂದೂ ಯಾವ ಖಾಯಿಲೆಯಿಂದಲೂ ನರಳಿಲ್ಲ. ಕೊನೆಯವರೆಗೂ ಆರೋಗ್ಯವಾಗಿಯೇ ಇದ್ದರು, ೧೯೭೮ ರವರೆಗೆ.

೧೯೭೩ ಅಕ್ಟೋಬರ್ ೩೧ರಂದು ಸಂಜೆ ಬೆಂಗಳೂರಿನ ಬಸವನಗುಡಿಯಲ್ಲಿ ಕಾಳಿಂಗರಾಯರ ವೈಯಕ್ತಿಕ ಕಾರ್ಯಕ್ರಮವೊಂದಿತ್ತು. ಅದರ ಮಾರನೆಯ ದಿನ ಅಂದರೆ, ನವೆಂಬರ್ ೧ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಕಾಳಿಂಗರಾಯರು ತಮ್ಮ ವೃಂದದೊಡನೆ ಹಾಡುವ ಕಾರ್ಯಕ್ರಮವೂ ಇತ್ತು.

ಅಕ್ಟೋಬರ್ ೩೧ ರಂದು ಮಧ್ಯಾಹ್ನದ ವೇಳೆಗೆ ಸೋಹನ್ಕುಮಾರಿ ಹಾಗೂ ಮೋಹನ್ಕುಮಾರಿಯೊಂದಿಗೆ ಬೆಂಗಳೂರಿಗೆ ಬಂದ ರಾಯರು ಮಧುನಿವಾಸ್ ಎಂಬ ಹೋಟೆಲಿನಲ್ಲಿ ಇಳಿದುಕೊಂಡರು. (ಮಿಂಟೋಕಣ್ಣಾಸ್ಪತ್ರೆಯ ಎದುರಿನ ಮೂಲೆಯಲ್ಲಿರುವ ಈ ಮಧು ನಿವಾಸ್ ಹೋಟೆಲ್ಲು ಹಿಂದೆ ಕೈಲಾಸಂರಿದ್ದ ‘Whitehouse’ ಆಗಿತ್ತು). ಸಂಜೆ ಅವರೊಬ್ಬರೇ ಹೋಗಿ ಬಸವನಗುಡಿಯ ಕಾರ್ಯಕ್ರಮದಲ್ಲಿ ಹಾಡಿದ್ದೂ ಆಯಿತು. ಅಲ್ಲಿಯ ಕಾರ್ಯಕರ್ತರು ತಮಗರ್ಪಿಸಿದ ಉಡುಗೊರೆ, ದೊಡ್ಡಹೂವಿನ ಹಾರವನ್ನು ಹೊತ್ತು ರಾತ್ರಿ ೮-೩೦ರ ಹೊತ್ತಿಗೆ ರಾಯರು ತಾವು ಇಳಿದುಕೊಂಡಿದ್ದ ಹೋಟೆಲಿಗೆ ವಾಪಸ್ಸಾದರು. ಆಗ ವಿಪರೀತ ಮಳೆ ಬೇರೆ.

ಆ ಮಧುನಿವಾಸ್ ಹೋಟೆಲಿನಲ್ಲಿ ರಾಯರು ತಮ್ಮ ಪರಿವಾರದೊಡನೆ ಇದ್ದುದು ಮೊದಲ ಮಹಡಿಯ ಕೊಠಡಿಯೊಂದರಲ್ಲಿ. ಆ ಮಹಡಿಯ ಕೊಠಡಿಯನ್ನು ಮುಟ್ಟಲು ಕಾಳಿಂಗರಾಯರು ಹಂತದ ಮೆಟ್ಟಿಲುಗಳನ್ನೇರಲಾರಂಭಿಸಿದರು. ಇನ್ನೇನು ಒಂದೆರಡು ಮೆಟ್ಟಿಲುಗಳು ಇರಬೇಕಾದರೆ ಅಲ್ಲೊಂದು ಮೆಟ್ಟಿಲಿನ ಮೇಲೆ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯ ಮೇಲೆ ರಾಯರು ತಮ್ಮ ಪಾದವನ್ನೂರಿದರು. ಆದದ್ದಷ್ಟೇ, ತಕ್ಷಣವೇ ಜಾರಿದ ರಾಯರು ದಡದಡನೆ ನೆಲ ಸೇರುವ ತನಕ ಉರುಳಿ ಬಿದ್ದರು.

ಕೂಡಲೆ ಅಲ್ಲಿ ಕೌಂಟರಿನ ಬಳಿ ಇದ್ದವರೆಲ್ಲಾ ಓಡಿ ಬಂದು ಕಾಳಿಂಗರಾಯರನ್ನು ಎತ್ತಿಕೂರಿಸಿದರು. ಅವರ ಪೈಕಿ ಕಾಳಿಂಗರಾಯರ ಆಪ್ತಮಿತ್ರರಾಗಿದ್ದ ನಾರಾಯಣರೆಡ್ಡಿ ಎಂಬುವರೂ ಎದ್ದು, ನಡೆದದ್ದನ್ನು ಮೇಲೆ ಕೊಠಡಿಯಲ್ಲಿದ್ದ ಸೋಹನ್, ಮೋಹನ್ರಿಗೆ ತಿಳಿಸಿ, ಗಾಬರಿಯಿಂದ ಓಡಿ ಬಂದ ಅವರಿಬ್ಬರಿಗೂ ಸಮಾಧಾನ ಹೇಳಿ, ನೋವಿನಿಂದ ನರಳುತ್ತಿದ್ದ ಕಾಳಿಂಗರಾಯರನ್ನು ಹೊತ್ತು ಅವರಿದ್ದ ಕೊಠಡಿಗೆ ಸೇರಿಸಿದರು. ಡಾ|| ದ್ವಾರಕಾನಾಥ್ ಎಂಬುವರು ಕೂಡಲೆ ಅಲ್ಲಿಗೆ ಬಂದು ರಾಯರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆಯನ್ನೂ ನೀಡಿದರು.

ಈ ಹಗರಣ ನಡೆದಾಗ ರಾತ್ರಿ ಹೊತ್ತು ಮೀರಿದ್ದರಿಂದ ಸೋಹನ್, ಮೋಹನ್ರಿಗೆ ಬಲವಂತದ ಏಕಾದಶಿ, ಹೋಟೆಲಿನಲ್ಲಿ ತಿಂಡಿ, ಊಟ ಎಲ್ಲಾ ಮುಗಿದುಹೋಗಿತ್ತು. ಆದರೇನು, ಹೆಚ್ಚಿನ ಅನಾಹುತವೇನೂ ರಾಯರಿಗಾಗಲಿಲ್ಲವಲ್ಲಾ ಎಂಬ ನಿಶ್ಚಿಂತೆಯಿಂದ ಸಮಾಧಾನದ ನಿಟ್ಟುಸಿರುಬಿಟ್ಟು ಸೋದರಿಯರಿಬ್ಬರೂ ತಲಾ ಅಷ್ಟಷ್ಟು ತಣ್ಣೀರು ಕುಡಿದು ತೃಪ್ತಿಯಿಂದ ಮಲಗಿಕೊಂಡರಂತೆ.

ಆದರೆ ರಾಯರು ಮಲಗಲಿಲ್ಲ. ತಮ್ಮ ಸೂಟ್ಕೇಸಿನಿಂದ ಸ್ಕಾಚ್ ವ್ಹಿಸ್ಕಿಯನ್ನು ಹೊರತೆಗೆದರು. ಅದನ್ನು ಖಾಲಿ ಮಾಡಲು ಶುರು ಹಚ್ಚಿದರು. ಸುಮಾರು ಹೊತ್ತಿನ ಮೇಲೆದ್ದು ಗಮನಿಸಿದ  ಸೋಹನ್ ‘ಏನಿದು? ರಾತ್ರಿ ಒಂದೂವರೆ ಆಯ್ತು. ಇನ್ನೂ ಮಲಗೋಲ್ವೆ? ಮಹಡಿಯಿಂದ ಮೈಕೈಯೆಲ್ಲಾ ನೋವಾಗಿದೆ. ಸುಮ್ನೆ ಮಲಕ್ಕಳ್ಳಿ’ ಎನ್ನಲು ರಾಯರು ಮತ್ತಷ್ಟು ವ್ಹಿಸ್ಕಿಯನ್ನು ಲೋಟಾಕ್ಕೆ ಸುರುವಿಕೊಂಡು, ‘ಮೈಕೈ ನೋವಿಗೆ ವ್ಹಿಸ್ಕಿ ತುಂಬಾ ಒಳ್ಳೇದು ಸೋಹನ್’ ಎಂದರು. ಸೋಹನ್ ಸ್ವಲ್ಪ ಸಿಡುಕಿನಿಂದ ‘ಯಾರದು ಹಾಗಂದದ್ದು’ ಎನ್ನಲು ರಾಯರು ಸಿಗರೇಟನ್ನು ಹೊತ್ತಿಸಿಕೊಳ್ಳುತ್ತ’ ‘ಡಾಕ್ಟ್ರು, ನೀನು ನೆಮ್ಮದಿಯಿಂದ ಮಲಕ್ಕೊ, ‘Don’t disturb me please’ ಎಂದರಂತೆ ಕಟುವಾಗಿ. ಸೋಹನ್ರವರು ತಾನೆ ಏನು ಮಾಡಲು ಸಾಧ್ಯ? ಗಾಯಗೊಂಡಿರುವ ಕಾಳಿಂಗನನ್ನು ಕೆಣಕುವುದು ತರವಲ್ಲ ಎಂದುಕೊಂಡು ಸುಮ್ಮನಾದರು.

ಬೆಳಗಾಯಿತು. ಹೊತ್ತು ಹತ್ತನ್ನು ಮೀರಿತ್ತಾದರೂ ರಾಯರಿನ್ನು ಎದ್ದಿರಲಿಲ್ಲ. ಈ ಸೋದರಿಯರೂ ಅವರನ್ನು ಎಬ್ಬಿಸುವ ಗೋಜಿಗೆ ಹೋಗಲಿಲ್ಲ. ರಾಯರು ಎಷ್ಟು ಹೊತ್ತು ಮಲಗಿದ್ದರೆ ಅಷ್ಟು ಹೊತ್ತು ಸಿಗರೇಟು ಸೇದುವುದು ಕಡಿಮೆಯಾಗುತ್ತದೆಂಬುದು ಇವರ ಲೆಕ್ಕಾಚಾರ. ಅಲ್ಲದೆ ಹಿಂದಿನ ರಾತ್ರಿ ಬಿದ್ದು ಪೆಟ್ಟು ತಿಂದಿದ್ದ ರಾಯರು ಇನ್ನಷ್ಟು ಹೊತ್ತು ಮಲಗಿದ್ದರೆ ನಷ್ಟವೇನಿಲ್ಲವೆಂದು ತಮ್ಮಷ್ಟಕ್ಕೆ ತಾವು ತೆಪ್ಪಗಿದ್ದರು.

ಗಂಟೆ ಹನ್ನೊಂದಾಯಿತು, ಹನ್ನೆರಡಾಯಿತು. ಕಾಳಿಂಗರಾಯರು ಏಳುವ ಸೂಚನೆಗಳೇ ಕಂಡುಬರಲಿಲ್ಲ. ಸೋಹನ್, ಮೋಹನ್ರಿಗೆ ಗಾಬರಿಯಾಯಿತು. ಎಬ್ಬಿಸಲು ರಾಯರನ್ನು ಹಿಗ್ಗಾ ಮುಗ್ಗಾ ಜಗ್ಗಿದಾಗ ‘ಅಹಹಾ ಅಯ್ಯೋ’ ಎಂದು ನರಳುತ್ತಾ ರಾಯರು ಎದ್ದು ಕೂತರು. ಹಿಂದಿನ ರಾತ್ರ ಅವರು ಮಹಡಿಯಿಂದ ಬಿದ್ದಾಗ ಅವರ ಮುಖ ಕೈ ಕಾಲುಗಳೆಲ್ಲಾ ಜಜ್ಜಿ ಹೋಗಿದ್ದು ಆ ಮೂಗೇಟಿನ ಪ್ರಭಾವ ಈಗ ಪ್ರಬಲವಾಗಿತ್ತು. ರಾಯರ ಹಣೆ ಮೂಗು ತುಟಿಗಳೆಲ್ಲಾ ಬಾತುಕೊಂಡು ನೀಲಿಗಟ್ಟಿದ್ದವು. ರಾತ್ರಿ ಸುಮಾರು ಹೊತ್ತು ನಿದ್ದೆಗೆಟ್ಟದ್ದರಿಂದ ಕಣ್ಣುಗಳ ಕೆಳಭಾಗ ಕಪ್ಪಿಟ್ಟಿತ್ತು. ಒಟ್ಟಿನಲ್ಲಿ ಸರಕ್ಕನೆ ನೋಡಿದವರಿಗೆ ರಾಯರ ಗುರುತೇ ಸಿಕ್ಕದಂತಾಗಿತ್ತು, ಅವರ ಮುಖಮಂಡಲ. ಸಾಲದ್ದಕ್ಕೆ ಅಂದು ಸಂಜೆ ಸ್ಟೇಡಿಯಂನಲ್ಲಿ ಕಾಳಿಂಗರಾಯರ ವೃಂದದಿಂದ ಸಂಗೀತ ಬೇರೆ. ಹಿಗಿರುವಾಗ ‘ಈ ಪರಿಸ್ಥಿತಿಯಲ್ಲಿ ಕಾಳಿಂಗರಾಯರು ಹೇಗೆ ತಾನೇ ಹಾಡಲು ಸಾಧ್ಯ’ ಎಂದು ಅನುಮಾನಗೊಂಡ ಸೋಹನ್ ತಮ್ಮ ಅಳಲನ್ನು ತೋಡಿಕೊಂಡಾಗ, ಅವರಿದ್ದ ಕೊಠಡಿಯ ಕಪಕ್ಕದಲ್ಲಿದ್ದವರೊಬ್ಬರ ಸಲಹೆಯ ಪ್ರಕಾರ ರಾಯರ ಮುಖಕ್ಕೆ ಮಂಜುಗಡ್ಡೆಯ ಸೇವೆಯನ್ನು ಈ ಸೋದರಿಯರಿಬ್ಬರೂ ಸೇರಿ ಸರದಿಯ ಮೇಲೆ ಕೆಲಕಾಲ ನಡೆಸಿದ ನಂತರ ರಾಯರ ಮುಖ ನೋಡುವಂತಾಯ್ತು.

ಹಿಂದಿನ ರಾತ್ರಿ ಏನನ್ನೂ ತಿನ್ನದೆ ಮಲಗಿದ್ದ ಕಾಳಿಂಗರಾಯರು ಮಾರನೆಯ ದಿನ ಮಧ್ಯಾಹ್ನ ಹೊಟ್ಟೆ ತುಂಬ ಉಂಡು ಮತ್ತೆ ಹಾಯಾಗಿ ಮಲಗಿಕೊಂಡರು. ಅವರು ನಂತರ ಎದ್ದಾಗ ಐದು ಗಂಟೆ. ಮಾಲೂಲಿನಂತಲ್ಲದಿದ್ದರೂ ರಾಯರು ಸಾಕಷ್ಟು ಸೂಟಿಯಾಗಿದ್ದರು. ಮೈಕೈಯೆಲ್ಲಾ ಇನ್ನೂ ನೋಯುತ್ತಿದ್ದುದರಿಂದ ಅಂದಿನ ಸಂಜೆ ಕಾರ್ಯಕ್ರಮಕ್ಕೆ ಸೂಟನ್ನು ಧರಿಸಿರಲಿಲ್ಲ. ಬದಲಿಗೆ ತೆಳುವಾದ ಸಿಲ್ಕ್ ಶರಟನ್ನು ತೊಟ್ಟುಅದನ್ನು ಪ್ಯಾಂಟಿನೊಳಗೆ ತೂರಿಸಿ, ಅವರದ್ದೇ ಕ್ರಮದಲ್ಲಿ ‘ಬಾಕ್ಸ್ ಟೈಪ್’ ರೀತಿಯಲ್ಲಿ ಟಕ್ ಹಿಡಿದು, ಟೈಯಿಗೆ ಅಮೆರಿಕನ್ ಡಬಲ್ ನಾಟ್ ಹಾಕಿ, ಕಪ್ಪನೆಯ ಶೂಸ್ ಧರಿಸಿ, ಸಮವಸ್ತ್ರಧಾರಿಗಳಾಗಿ ಸಿದ್ಧರಾಗಿದ್ದ ಸೋಹನ್, ಮೋಹನ್ರೊಡನೆ ಕಂಠೀರವ ಸ್ಟೇಡಿಯಮ್ಮಿಗೆ, ಕಾರ್ಯಕರ್ತರು ತಂದಿದ್ದ ಕಾರಿನಲ್ಲಿ ತೆರಳಿದರು.

ಆ ಸಂಜೆಯ ಕಾರ್ಯಕ್ರಮದ ಉಸ್ತುವಾರಿಯನ್ನೆಲ್ಲಾ ಡಾ|| ಎಚ್.ಕೆ.ರಂಗನಾಥ್ರವರು ವಹಿಸಿಕೊಂಡಿದ್ದರು. ದಕ್ಷಿಣ ಭಾರತ ವಲಯದ ಕಲಾ ಕಾರ್ಯಕ್ರಮ ನಿರ್ದೇಶಕರಾಗಿ ನಮ್ಮ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ರಂಗನಾಥ್ರವರು ಎಲ್ಲ ವಿಷಯದಲ್ಲೂ ಬಹು ಅಚ್ಚುಕಟ್ಟು. ಮೇಲಾಗಿ ಅವರು ಒಳ್ಳೆಯ ಬರಹಗಾರರು ಹಾಗೂ ಕಲಾವಿದರು. ಕಲೆ ಹಾಗೂ ಸಾಹಿತ್ಯದ ವಿಚಾರದಲ್ಲಿ ರಂಗನಾಥ್ರವರ ಅನುಭವ ಅಪಾರವಾದ್ದು.

ಅಂದು ಸಂಜೆ ನಡೆಯಬೇಕಿದ್ದ ಕಾಳಿಂಗರಾಯರ ಹಾಗೂ ಇತರ ಕಾರ್ಯಕ್ರಮದ ಬಗ್ಗೆ ಒಳ್ಳೆಯ ಪ್ರಚಾರವನ್ನಿತ್ತು ರಾಯರ ಸಂಗೀತ ಯಶಸ್ವಿಯಾಗಿ ನಡೆಯಲು ಬೇಕಿದ್ದ ಸಕಲ ಏರ್ಪಾಡುಗಳನ್ನು ಮಾಡಿದ್ದರು. ಅಂದು ಸಂಜೆ ಕಾಳಿಂಗರಾಯರ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

ಎಲ್ಲವೂ ಸರಿಯೆ, ಆದರೆ ಅಂದು ರಾಯರು ಕಾರ್ಯಕ್ರಮ ಏರ್ಪಾಡಾಗಿದ್ದುದು ಸ್ಟೇಡಿಯಮ್ಮಿನಲ್ಲಿ,, Open air programme ಉ!  ತೆರೆದ ಬಯಲಿನಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮ. ನವೆಂಬರ್ ತಿಂಗಳು ಬೇರೆ. ಕೇಳಬೇಕೆ. ಗಾಳಿಯೋ ಗಾಳಲಿ, ಚಳಿಯೋ ಚಳಿ. ಕಾಳಿಂಗರಾಯರಿಗೆ ಅಲ್ಲಿಯ ವಾತಾವರಣದ ಪರಿಸ್ಥಿತಿ ಹಾಗಿರುತ್ತದೆಂದು ತಿಳಿದಿರಲಿಲ್ಲ. ಹೇಗೋ ಬಂದದ್ದಾಯಿತು. ಒಂದಷ್ಟು ಹೊತ್ತು ಹಾಡಿ ಹೋದರಾಯಿತು ಎಂದು ಕೊಂಡವರೇ ತಮ್ಮ ವೃಂದವರೊಡನೆ ವೇದಿಕಯನ್ನೇರಿದರು. ಮಾಮೂಲಿನಂತೆ ನೆರೆದಿದ್ದ ಜನಸ್ತೋಮದಿಂದ ಕಿವಿಗಡಚಿಕ್ಕುವಂತೆ ಚಪ್ಪಾಳೆ. ನಮೃತೆಯಿಂದ ಎಲ್ಲರಿಗೂ ಕೈಮುಗಿದು ಕಾಳಿಂಗರಾಯರುಹಾಡಲು ಆರಂಭಿಸಿದರು. ಆದರೆ ಆ ಎತ್ತರದ ವೇದಿಕೆಯ ಮೇಲೆ ನಿಂತು ಹಾಡಲಾರಂಭಿಸಿದ ರಾಯರಿಗೆ ಆ ಗಾಳಿ ಚಳಿಯನ್ನು ಎದುರಿಸಿ ಹಾಡುವುದು ಅಸಾಧ್ಯವೆನಿಸಿತು. ಅಲ್ಲದೆ ಸುಡುಬೇಸಿಗೆಯ ದಿನಗಳಲ್ಲಿ ಧರಿಸುವಂತೆ ತೆಳ್ಳನೆಯ ಶರಟನ್ನು ಬೇರೆ ತೊಟ್ಟು ಬಂದಿದ್ದರು. ಆ ಚಳಿಗಾಳಿಯ ಹೊಡೆತಕ್ಕೆ ರಾಯರು ತತ್ತರಿಸಿ ಗಡಗಡನೆ ನಡುಗಲಾರಂಭಿಸಿದರು. ಹಾಡುವುದೇ ಕಷ್ಟವೆನಿಸಿ ಕಾಳಿಂಗರಾಯರು ಅಕ್ಕಪಕ್ಕ ನೋಡಲಾರಮಭಿಸಿದಾಗ, ಇವರ ಅಭಿಮಾನಿಗಳಲ್ಲೊಬ್ಬರು ರಾಯರ ತೊಂದರೆಯನ್ನರಿತು ನೇರವಾಗಿ ವೇದಿಕೆಯನ್ನೇರಿ ತಾವು ತೊಟ್ಟಿದ್ದ ಕೋಟನ್ನೇ ತೆಗೆದು ರಾಯರಿಗೆ ತೊಡಿಸಿದರು. ಪಕ್ಕದಲ್ಲಿದ್ದವರೊಬ್ಬರು ತಮ್ಮ ಮಫ್ಲರನ್ನು ರಾಯರ ಕುತ್ತಿಗೆಗೆ ಸುತ್ತಿದರು. ಆಗ ರಾಯರ ಸ್ತಿತಿ ಸುಧಾರಿಸಿ ಅವರ ತೆಳ್ಳನೆಯ ದೇಹ ಗಡಗಡನೆ ನಡುಗುತ್ತಿದ್ದುದು ನಿಂತಿತು. ಮೈಯಿ ಬೆಚ್ಚಗಾಯಿತು. ರಾಯರ ಮುಖದಲ್ಲಿ ರಂಗೇರಿತು. ನಮ್ಮ ಜನ ತೋರಿದ ಈ ರೀತಿಯ ಪ್ರೀತಿ ವಾತ್ಸಲ್ಯದಿಂದ ಪುಳಕಿತರಾದ ಕಾಳಿಂಗರಾಯರು ಹುರುಪುಗೊಂಡು ತುಂಬು ಕಂಠದಿಂದ ಹಾಡಿ ಆ ಜನಸ್ತೋಮವನ್ನು ಆನಂದಸಾಗರದಲ್ಲಿ ತೇಲಾಡಿಸಿದರಂತೆ. ಮೆಟ್ಟಿಲುಗಳ ಮೇಲಿಂದ ದಡದಡನೆ ಉರುಳಿ ದೇಹ ಅಜ್ಜುಗುಜ್ಜಾಗಿದ್ದರೂ ಲೆಕ್ಕಿಸದೆ ತಾಸನ್ನೂ ಮೀರಿ ಸೊಗಸಾಗಿಯೇ ಹಾಡಿದ ರಾಯರ ಧೀಶಕ್ತಿಯನ್ನು ಕಂಡು ರಾಯರ ವೃಂದವರೆಲ್ಲಾ ಬೆಕ್ಕಸಬೆರಗಾದರಂತೆ.

ಕಲೆ, ಸಂಗೀತ, ಸಾಹಿತ್ಯದ ಪ್ರಚಾರ ಕಾರ್ಯಕ್ರಮವನ್ನು ನಮ್ಮ ಸರ್ಕಾರ ವಹಿಸಿಕೊಂಡಿದ್ದಾಗ ಡಾ|| ಎಚ್.ಕೆ.ರಂಗನಾಥ್ರವರು ಈ ಪ್ರಚಾರ ಕಾರ್ಯ ನಿರ್ವಹಣೆಗಾಗಿ ಅನೇಕ ಜನ ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಮೇಲಿಂದ ಮೇಲೆ ಬಳಸಿಕೊಳ್ಳುತ್ತಿದ್ದರು. ಅವರ ಪೈಕಿಮುಖ್ಯವಾಗಿದ್ದವರು ಪಿ.ಕಾಳಿಂಗರಾಯರು ಹಾಗೂ ವೃಂದದವರು. ಈ ಪ್ರಚಾರ ಕಾರ್ಯಕ್ರಮದಲ್ಲಿ ಒಂದು ತಿಂಗಳಲ್ಲಿ ಪ್ರತಿದಿನ ಒಂದು ಒಂದೂವರೆ ಗಂಟೆಯ ಒಂದು ಕಾರ್ಯಕ್ರಮವೆಂಬಂತೆ ಒಟ್ಟು ಹನ್ನೆರಡು ಬೇರೆ ಬೇರೆ ಊರುಗಳಲ್ಲಿ ರಾಐರು ಅವರ ವೃಂದದೊಡನೆ ಹಾಡುವಂತೆ ರಂಗನಾರ್ಥ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಎಲ್ಲ ಕಡೆಯೂ ಕಾಳಿಂಗರಾಯರ ಹಾಡುಗಾರಿಕೆ ಜನರಿಗೆ ಹೆಚ್ಚು ರಂಜನೆಯನ್ನುನೀಡುತ್ತಿತ್ತು. ಡಾ| ರಂಗನಾಥ್ರವರನ್ನು ೨೯-೭-೧೯೯೨ ರಂದು ಭೇಟಿಯಾಗಿ ಈ ಬಗ್ಗೆ ನಾನು ವಿಚಾರಿಸಲು, ಅವರು ಕಾಳಿಂಗರಾಯರನ್ನು ಕುರಿತು ಮಾತನಾಡುತ್ತಾ ಮೇಲಿನ ವಿಚಾರಗಳನ್ನು ಹೇಳಿದರಲ್ಲದೇ, ಎಲ್ಲಕ್ಕಿಂತ ಹೆಚ್ಚಾಗಿ ಕೊಡಗಿನ ಪ್ರದೇಶಗಳಲ್ಲಿ  ಕಾಳಿಂಗರಾಯರ ಸಂಗೀತಕ್ಕಾಗಿ ಅಲ್ಲಿಯ ಜನ ಹಾತೋರೆಯುತ್ತಿದ್ದರಂತೆ. ಅಲ್ಲದೆ ನಮ್ಮ ಕೊಡಗನ್ನು ಕರ್ನಾಟಕದ ಕ್ಯಾಲಿಪೋರ್ನಿಯ ಎನ್ನಬಹುದು! ಸಾಮಾನ್ಯವಾಗಿ ಕೆಲವು ಕೊಡಗಿಯರ ಮನೆಯಲ್ಲಿ ಬೀರು, ಬ್ರಾಂದಿ, ವ್ಹಿಸ್ಕಿ ಇವುಗಳ ಇದ್ದದ್ದೇ. ಅವರ ಸಂಸ್ಕೃತಿ ಪಾಶ್ಚಾತ್ಯರ ಸಂಸ್ಕೃತಿಗೆ ಸಮೀಪ. ಅವರಲ್ಲಿ ಬಹುತೇಕ ಮಂದಿ ಶ್ರೀಮಂತರು. ಹಣದ ಸುರಿಮಳೆಯನ್ನೊಡ್ಡುವ ಯಾಲಕ್ಕಿ ಕಾಫಿತೋಟಗಳ ಮಾಲೀಕರು. ಕಾಳಿಂಗರಾಯರು ಅಲ್ಲಿಗೆ ಹೋದಾಗಲೆಲ್ಲಾ ಈ ರಾಯರಿಗಲ್ಲಿ ರಾಜೋಪಚಾರ. ರಾಯರೆಂದರೆ ಆ ಜನಕ್ಕೆ ಪ್ರಾಣ. ಕಾಳಿಂಗರಾಯರಿಗೂ ಅವರೆಂದರೆ ಪ್ರಾಣ. ಕೊಡಗೂ ಅನ್ನುತ್ತಲೇ ರಾಯರು ಗರಿಗೆದರಿದ ನವಿಲಿನಂತಾಗುತ್ತಿದ್ದರಂತೆ.

ಇಂತಹ ಕೊಡಗಿನಲ್ಲಿ ಕಾಳಿಂಗರಾಯರೊಡನೆ ತಮಗಾದ  ಒಂದು ವಿಚಿತ್ರ ಅನುಭವವನ್ನು ಡಾ|| ಎಚ್.ಕೆ. ರಂಗನಾಥ್ ಹೀಗೊಂದು ಕಡೆ ನಿರೂಪಿಸಿದ್ದಾರೆ. ಅವರದ್ದೇ ವಿಚಿತ್ರ ಶೈಲಿಯಲ್ಲಿ ಅದು ಹೀಗೆ:

‘ಶಿಕಾರಿ’

ಕನ್ನಡಕ್ಕೊಬ್ಬನೇ ಕೈಲಾಸಂ ಎನ್ನುವಂತೆ, ತದೇರೀತ್ಯಾ ಕನ್ನಡಕ್ಕೊಬ್ಬನೇ ಕಾಳಿಂಗರಾವ್. ಅವರಿಗೆ ನಮ್ಮ ಮನೆಯಲ್ಲಿ ಸದರ. ನನ್ನ ತಾಯಿ ಬಗೆಗೆ ಅತೀವ ಗೌರವ. ಆಕೆ ಪಾರ್ಶ್ವವಾಯು ಪೀಡಿತಳಾಗಿ ಹಾಸಿಗೆ ಹಿಡಿದಾಗ ಕಾಳಿಂಗರಾಯರು ಮತ್ತೆ ಮತ್ತೆ ಬಂದು, ಮಂಚದ ಬಳಿಯ ಚಾಪೆಯ ಮೇಲೆ ಕುಳಿತು, ಆಕೆಯ ಮೆಚ್ಚಿನ ಭಕ್ತಿಗೀತೆಗಳನ್ನು ಭಾವದುಂಬಿ ಹಾಡುತ್ತಿದ್ದರು. ಆಕೆಯ ಸಂತೋಷ ಹೇಳತೀರದು.

ಕಾಳಿಂಗರಾಯರದು ಹಸುಮಗುವಿನ ಮನಸ್ಸು. ಸುಳ್ಳು, ಕಪಟ, ಬಡಾಯಿ, ಬಣ್ಣದ ಮಾತು, ಬೂಟಾಟಿಕೆ, ಬುಡಬುಡಿಕೆ ಆತನ ಸನಿಹವೂ ಸುಳಿಯುವುದಿಲ್ಲ ದುಡ್ಡು-ಕಾಸು, ವ್ಯಾಪಾರ-ವ್ಯವಹಾರ, ಆತನ ಹಿಡಿತಕ್ಕೆ ಹೊರತು. ಯಾರದೋ ಕಷ್ಟ-ನಷ್ಟ ಎಂದರೆ ಮಮ್ಮಲ ಮರುಗುವ ಹೆಂಗರುಳು. ಆತನ ಸಿರಿಕಂಠ, ಅದು ದೇವರ ದೇಣಿಗೆ. ಆ ಸಂಪತ್ತನ್ನು ಆತ ಬಳಸಿ ಬಳಸಿ, ಬೆಳಿಸಿಕೊಂಡ ಬಗೆ ಅತ್ಯಂತ ಮೋಹಕವಾದದ್ದು.

ದಕ್ಷಿಣ ವಲಯದ, ಸಂಗೀತ ನಾಟಕ ವಿಭಾಗದ ಮುಖ್ಯಾಧಿಕಾರಿಯಾಗಿ ನಾನು ಬಂದ ನಂತರ ಗ್ರಾಮೀಣ ಜನತೆಯ ತಿಳಿವನ್ನು ಬೆಳೆಸಿ, ಮೂಢನಂಬಿಕೆ, ನಿರಕ್ಷರತೆ, ಅತಿಸಂತಾನದಂತಹ ಪಿಡುಗುಗಳನ್ನು ಕಳೆಯುವ ಸಲುವಾಗಿ, ಜನಪದ ಗೀತ, ನೃತ್ಯ-ನಾಟಕಗಳನ್ನು ಏರ್ಪಡಿಸಿ ಬಳಸಿಕೊಳ್ಳುವ ಕೆಲಸ. ಈ ಕಾಯಕದಲ್ಲಿ ಕಾಳಿಂಗರಾಯರಂತಹ ಪ್ರಬುದ್ಧ, ಸುಪ್ರಸಿದ್ಧ ಗಾಯಕರು ನೆರವಿಗೆ ಬಂದರೆ ಏನೆಷ್ಟು ಚಂದ! ಅಳುಕುತ್ತ ಅವರನ್ನು ಕೇಳಿದೆ. ಹಿರಿ-ಹಿರಿ ಹಿಗ್ಗಿನಿಂದ ಒಪ್ಪಿದರು. ಅವರಿಗಾಗಿ ಹೊಸ ಹೊಸ ಕವಿತೆಗಳನ್ನೂ, ಗೀತೆಗಳನ್ನೂ ನಾಡಿನ ಪ್ರಸಿದ್ಧ ಕವಿಗಳು ರಚಿಸಿದರು. ಊರಿಂದ ಊರಿಗೆ, ಹಳ್ಳಿಯಿಂದ ಹಳ್ಳಿಗೆ ಕಾಳಿಂಗರಾವ್ ತಂಡದವರು ತೆರಳಲಿ ತಾಸು-ಎರಡು ತಾಸುಗಳ ಅವಧಿಯ ಕಾರ್ಯಕ್ರಮಗಳನ್ನು ಕೊಟ್ಟಾಗ ನಮ್ಮ ಗ್ರಾಮೀಣ ಜನತೆಯ ಮೇಲೆ ಸಂಮ್ಮೋಹನಾಸ್ತ್ರ ಬೀಸಿದಂತಾಯಿತು. ರಂಜನೆಯೊಂದಿಗೆ ಬೋಧನೆಯ ಸಮಸಂಧಾನ.

ಕಾಳಿಂಗರಾಯರ ಕಾರ್ಯಕ್ರಮ ಎಂದರೆ ಆಂಧ್ರಪ್ರದೇಶ, ತಮಿಳುನಾಡು ಒಳಗೊಂಡು ಎಲ್ಲೆಲ್ಲಿಯೂ ಜನಸಮುದ್ರ. ಕಾಳಿಂಗರಾಯರನ್ನು ಮತ್ತೆ ಮತ್ತೆ ಕಳುಹಿಸಿಕೊಡಬೇಕೆಂದು ನನ್ನ ಕಚೇರಿಗೆ ಬಿಡುವಿಲ್ಲದ ಬೇಡಿಕೆ. ಕೊಡಗು ಜಿಲ್ಲೆಯಂತೂ ಈ ಗಾಯಕನಿಗೆ ಮರುಳಾಗಿ ಹೋಗಿತ್ತು. ಕೊಡಗು ಎಂದು ಕಾಳಿಂಗರಾಯರಿಗೂ ವಿಪರೀತ ಮೋಹ.ಮಡಕೇರಿ ಇರಲಿ, ವಿರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು, ಮೂರ್ನಾಡುಗಳಂತಹ ಗ್ರಾಮಾಂತರ ಪಟ್ಟಣಗಳಲ್ಲಿಯೂ ಗಾಯಕ ತಂಡಕ್ಕೆ ರಾಜಾತಿಥ್ಯ. ಹೆಸರಾಂತ ಯಾರೊಬ್ಬ ಕಾಫಿ ಪ್ಲಾಂಟರನ ಬಂಗಲೆಯಲ್ಲಿ ಕಾಳಿಂಗ ವೃಂದದ ವಾಸ್ತವ್ಯ. ದಿನಕ್ಕೆ ಎರಡು-ಮೂರು ಕಾರ್ಯಕ್ರಮ. ಸಮೀಚೀನ ಭೋಜನ. ಪ್ರೇಕ್ಷಣೀಯ ಸ್ಥಳದರ್ಶನಕ್ಕಾಗಿ ಅತಿಥೇಯರ ಸ್ಪೆಷಲ್ ವಾಹನದಲ್ಲಿ ಸುತ್ತಾಟ. ಊರಿನ ಇಬ್ಬರು-ಮೂವರು ಪ್ರಸಿದ್ಧರ ಮನೆಗಳಿಗೆ ಬಲವಂತದ ಆಹ್ವಾನ. ಚಹಾಪಾಣ. ಪ್ರತಿಸಂಜೆ ಪಾನಕಪೂಜೆ. ಎಂದೂ ಕಂಡು ಕೇಳದ ಹೊಸ ಹೊಸ ತಿಂಡಿ-ತಿನಿಸು. ಕುಳಿತಲ್ಲಿ ನಿಂತಲ್ಲಿ ಸಂಗೀತ ಸಭೆ. ಬೇಡ ಬೇಡವೆಂದರೂ ಹಣದ  ಹೊಳೆ. ಕೊಡವರ ಇಂಥ ಆತ್ಮೀಯ ಆತಿಥ್ಯ, ಕಾಳಿಂಗರಾಯರನ್ನು ಮೂಕವಿಸ್ಮಿತರನ್ನಾಗಿ ಮಾಡಿ, ಮತ್ತೆ ಮತ್ತೆ ಅವರನ್ನು ಕೊಡಗಿಗೆ ಸೆಳೆಯಿತು. ಅವರೊಂದಿಗೆ ನಾನೂನಾಲ್ಕಾರು ಸಲ ಹೋಗಿ ಕಾಳಿಂಗರಾಯರ ನಿತ್ಯೋತ್ಸವದಲ್ಲಿ ಪಾಲ್ಗೊಂಡುದುಂಟು.

ಒಮ್ಮೆ ಕೊಡಗಿನ ಸಿದ್ದಾಪುರದಲ್ಲಿ ವಾಸ್ತವ್ಯ. ಅಂದಿನ ಕಾರ್ಯಕ್ರಮದ ನಂತರ ನಮ್ಮಿಬ್ಬರ ಗೌರವಾರ್ಥ ಒಂದು ವಿಶೇಷ ಕಾರ್ಯಕ್ರಮ. ಕಾಡಿನಲ್ಲಿ ಹುಲಿಯ ಬೇಟೆ. ಸುಬ್ಬಯ್ಯನವರ ಬಂಗಲೆಯಲ್ಲಿ ಸಂಜೆಯ ಸ್ನೇಹಕೂಟ. ಕಂಠಪೂರ್ತಿ ಪಾನಕಪೂಜೆ, ವಿಶೇಷ ಭೋಜನ, ಹಣ್ಣು-ಹಂಪಲು, ತ್ರಯೋದಶ ತಾಂಬೂಲ, ಸ್ಪೆಷಲ್ ಸಿಗಾರ್ ಊದುಬತ್ತಿ. ಇಷದ್ಟೆಲ್ಲ ಮುಗಿಯುವಲ್ಲಿ ರಾತ್ರಿ ಹನ್ನೆರಡು. ಅನಂತರ ಸುಬ್ಬಯ್ಯನವರ ಜೀಪ್ ವಾಹನದಲ್ಲಿ ಅವರ ಭಾವಮೈದುನ. ‘ಗುರಿಕಾರ ಮುತ್ತಣ್ಣ’ನೊಂದಿಗೆ ಕಾನನದಲ್ಲಿ ಏಳು ಮೈಲು. ಅಷ್ಟರಲ್ಲಿ ಆಳುಮಕ್ಕಳು ನಿಗದಿತ ಸ್ಥಳದಲ್ಲಿ ಒರಲುತ್ತಿದ್ದ ಮೇಕೆಮರಿಯನ್ನು ಕಟ್ಟಿದ್ದರು. ಹತ್ತಿರದ ಮರದ ಮೇಲೆ ಗಟ್ಟಿಮುಟ್ಟಿನ ‘ಮಚಾನ್ ಅಟ್ಟ’. ಸರ್ಚ್ ಲೈಟ್ ಆರಿಸಿ, ಆಳುಮಕ್ಕಳನ್ನು ನಿರ್ದೇಶಿಸಿದ ನಂತರ ನಾವು ನಾಲ್ವರು-ಎಂದರೆ  ಸುಬ್ಬಯ್ಯ, ಮುತ್ತಣ್ಣ, ಕಾಳಿಂಗರಾವ್ ಮತ್ತು ನಾನು-ಏಣಿಯಗುಂಟ ಏರಿ ಅಟ್ಟವನ್ನು ಮುಟ್ಟಿದೆವು. ಕೈ ಕಾಣದಂತಹ ಕಗ್ಗತ್ತಲು. ಸುಬ್ಬಯ್ಯನವರಿಂದ ಪಿಸುಮಾತಿನಲ್ಲಿ ನಮಗೆ ಕಟ್ಟಪ್ಪಣೆ. “ಏನೇ ಆದರೂ ತುಟಿಪಿಟಿಕ್ ಎನ್ನಬಾರದು; ಶೀನಬಾರದು; ಕೆಮ್ಮಬಾರದು. ಮೊನ್ನೆ ಬೇರೊಂದು ಮೇಕೆಯ ರುಚಿಕಂಡ ವ್ಯಾಘ್ರ ಇಂದು ಬಂದೇ ಬರುತ್ತದೆ. ನಮ್ಮ ಮುತ್ತಣ್ಣ ಹೆಸರಾಂತ ಗುರಿಶೂರ. ಸಾಲದ್ದಕ್ಕೆ ಇಂದಿನ ಈ ಶಿಕಾರಿ ನಿಮ್ಮಿಬ್ಬರ ಗೌರವಾರ್ಥ. ಆದರೆ ಉಸಿರೂ ಆಡದಷ್ಟು ಮೌನವಾಗಿರಬೇಕು”. ಸರಿ, ಎಂದು ಮುದುರಿ ಕುಳಿತೆವು. ನಿಮಿಷಗಳು ಉರುಳಿದವು. ರಾತ್ರಿ ಒಂದು. ಹುಲಿಯ ಸುಳಿವಿಲ್ಲ. ಮತ್ತೊಂದು ತಾಸು ಸವೆಯಿತು. ಸ್ಮಶಾನ ಮೌನವನ್ನು ಸೀಳಿಕೊಂಡು ಮೇಕೆಮರಿಯ ಒರಲು ಧ್ವನಿ. ನಮ್ಮದು ಮೌನ ತಪಸ್ಸು. ಸಹಿಸಲಾರದ ಕಠಿಣ ಶಿಕ್ಷೆ. ಸ್ವಲ್ಪ ಅಲುಗಿದರೂ ಹುಲಿಗೆ ಸುಳಿವು ಸಿಕ್ಕೀತೆಂದು ಅಂಜಿ ಏನೆಲ್ಲ ಘೋರ ಸಂಕಟವನ್ನೂ ದೇಹಬಾಧೆಗಳನ್ನೂ ಹತ್ತಿಕ್ಕಿ ಕುಳಿತೆ ಕುಳಿತೆವು.  ಕಾಲ ಸರಿಯುತ್ತ ನಿದ್ರೆಯ ಮತ್ತು ಮುಸುಗಿ ಉಸಿರು ಭಾರವಾಯಿತು. ಸದ್ದು ಮಾಡದೆ ತಲೆತುಂಬ ಮುಸುಕು ಹೊದ್ದು ಮುಖ ಜೋಲಿಸಿದೆ. ‘ಹಾಯ್’ಎನ್ನಿಸುವಷ್ಟರಲ್ಲಿ….

ಢಮಾರ್! …. ಢಮಾರ್!!

ನನ್ನ ಕಿವಿಗೇ ಸಿಡಿಗುಂಡು ಬಿಡದಂತಾಗಿ ಎದೆಯೊಡೆದು ದೇಹ ನಡುಗಿ ಅರಚಿಕೊಂಡು ಕಣ್ಣು ತೆರೆದೆ. ಪಕ್ಕದ ಕಾಳಿಂಗರಾಯರು ಉಸುರುಗಟ್ಟಿ ನಡುಗುತ್ತ ಭುಸುಗುಟ್ಟುತ್ತಿದ್ದರು. ಸುಬ್ಬಯ್ಯನವರಿಗೆ ಮಾತ್ರ ಖುಶಿಯೋ ಖುಶಿ. ಗುರಿಕಾರ ಮುತ್ತಣ್ಣನ ಬೆನ್ನು ತಟ್ಟಿ “ಇದೀಗ ಗಂಡು ಶಿಕಾರಿ. ಸತ್ತ ಹುಲಿಯ ಸದ್ದಿಲ್ಲ. ಇಷ್ಟು ದಿನ ಕಣ್ಣು ತಪ್ಪಿಸಿ ಕಾಡುತ್ತಿದ್ದ ಶಿಕಾರಿ ಇಂದು ಮುತ್ತಣ್ಣನಿಗೆ ಬಲಿಯಾಯಿತು. ಎಷ್ಟಾದರೂ ಕಾಳಿಂಗರಾಯರ ಹಿರಿಮೆ” ಎಂದು ನುಡಿದು ಹಣೆಪಟ್ಟಿಯಲ್ಲಿದ್ದ ಸರ್ಚ್ಲೈಟ್ ಹಾಯಿಸುತ್ತ ಕೆಳಗೆ ಇಳಿಯುವಷ್ಟರಲ್ಲಿ ಆಳುಮಕ್ಕಳು ಕೇಕೇ ಹಾಕಿ ಕುಣಿಯುತ್ತಿದ್ದಾರೆ. ಸಂತೋಷ ಸಂಭ್ರಮಗಳಿಂದ ಮೂವತ್ತು ಹೆಜ್ಜೆ ಮುಂದೆ ನಡೆದು ಮುತ್ತಣ್ಣನ ಬಲಿಯನ್ನು ನಿಟ್ಟಿಸಿ ನೋಡಿದೆವು.

ನಿಜ, ಗುರಿತಪ್ಪಿರಲಿಲ್ಲ. ಎರಡರಲ್ಲಿ ಒಂದು ಗುಂಡು, ನೇರವಾಗಿ ಗುರಿಮುಟ್ಟಿದ್ದರಿಂದ, ಪಾಪ, ಆ ಪುಟ್ಟ ಮೇಕೆಮರಿ ಪ್ರಾಣವಳಿದು ಬಿದ್ದಿತ್ತು.

* * *