ಕೈಲಾಸಂ. ಅ.ನ.ಕೃ ಬೀchi. ಹಿರಣ್ಣಯ್ಯ ತ.ರಾಸು., ಹೀಗೆ ಈ ಕನ್ನಡದ ಅತಿರಥ ಮಹಾರಥರೆಲ್ಲಾ ಪಾನಪ್ರಿಯರು ಹಾಗೂ ಧೂಮಪಾನ ಪ್ರಿಯರು! ಆಯುಷ್ಯದ ಬಹುಭಾಗವನ್ನು ಸೇದುವುದು ಕುಡಿಯುವುದರಲ್ಲೇ ಕಳೆದ ಜನರಿವರು. ಉಳಿದ ಆಯಷ್ಯದ ಅಲ್ಪಕಾಲದಲ್ಲಿ ಮಾಡಿದ ಕಾರ್ಯದಿಂದಲೇ ಕನ್ನಡ ನಾಡನ್ನು ಅಲುಗಿಸಿದ ಅದ್ವಿತೀಯರು ಇವರು. ಒಂದು ದಿನ ಮನೆಯಲ್ಲಿದ್ದರೆ ಒಂದು ತಿಂಗಳು ಹೊರಗಡೆ ಇರುತ್ತಿದ್ದವರು ಇವರು. ಹುಟ್ಟು ಅಲೆಮಾರಿಗಳು.ನಾರದನ ಮಾನಸ ಪುತ್ರರು. ಪರಮಾತ್ಮ ಇವರ ಪಾದದಡಿಗಳನ್ನು ಅದೆಂತಹ ಒರಟು ಚಕ್ಕಳದಿಂದ ಮಾಡಿದ್ದನೋ, ಅವು ಸವೆಯದೇ ಇವರಿವರ ಕೊನೆಯವರೆಗೂ ಉಳಿದದ್ದೇ ಪರಮಾಶ್ಚರ್ಯ. ಅದೆ ಸ್ಪೂರ್ತಿ ಉಕ್ಕಿ ಲೇಖನಿ ಹಿಡಿದು ಬರೆಯಲು ಕೂತರೆಂದರೆ ಇವರು ಜಡಭರತರು. ಒಟ್ಟಾರೆ ಇವರ ಜಾಯಮಾನ ‘ಕೂತರೆ ಕಲ್ಲು, ಎದ್ದರೆ ಗಾಳಿ’ ಎಂಬಂತೆ. ಇವರೆಲ್ಲಾ ಕನ್ನಡನಾಡಿನ ಅಡಿಗಡಿಗೂ ಅಡಿಯಿಟ್ಟು ಅದೆಷ್ಟು ಬಾರಿ ಅಡ್ಡಾಡಿದರೋ!, ಆ ಭಗವಂತನಿಗೇ ಬೆಳಕು.

೧೯೭೫-೭೬, ನಾನು ಚಿಂತಾಮಣಿಯ ಪಾಲಿಟೆಕ್ನಿಕ್ಕಿನಲ್ಲಿ ಉಪನ್ಯಾಸಕನಾಗಿದ್ದ ಸಮಯ. ಅಲ್ಲಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭಕ್ಕೆ ಬೀchi ಅವರನ್ನು ಮುಖ್ಯ ಅತಿಥಿಯಾಗಿ ಬರಲು ಆಹ್ವಾನಿಸಿದ್ದೆ. ಒಪ್ಪಿದ್ದರು. ಅಂದು ಸಮಾರಂಭದ ದಿನ ಬೀchi ಅವರನ್ನು ಕರೆತರಲು ಬೆಂಗಳೂರಿಗೆ ಹೋಗಿ, ಬೆಂಗಳೂರಿನಿಂದ ಮಧ್ಯಾಹ್ನ ಚಿಂತಾಮಣಿಗೆ ತೆರಳಿ ಮತ್ತೇ ಅಂದೇ ರಾತ್ರಿ ಬೆಂಗಳೂರಿಗೆ ಹಿಂತಿರುಗಲು ಕಾರನ್ನು ಬಾಡಿಗೆಗೆ ಗೊತ್ತು ಮಾಡಿ, ವಿಲ್ಸನ್ಗಾರ್ಡನ್ನಿನಲ್ಲಿರುವ ಬೀಚೀ ಅವರ ಮನೆ ‘ತಿಂಮನ ಮನೆ’ ಯ ಮುಂದೆ ಕಾರನ್ನು ನಿಲ್ಲಿಸಿದೆ. ಆಗ ಮಧ್ಯಾಹ್ನ ಎರಡೂ ಮೂವತ್ತರ ಸಮಯ.

ಕಾರಿನಿಂದ ಇಳಿದು ಬೀಚಿಯವರ ಮನೆಯಾಚೆ ನಿಂತು, ‘ಸಾರ್’ ಎಂದೆ. ಅವರ ಮಡದಿ ಸೀತಮ್ಮನವರು ಹೊರಬಂದು, ‘ಏನು?’ ಅಂದರು. ‘ಯಜಮಾನ್ರನ್ನ ಕರ್ಕೊಂಡ್ಹೋಗೋದಕ್ಕೆ ಕಾರ್ ತಂದಿದ್ದೀನಿ ತಾಯಿ’ ಎಂದೆ. ಅದಕ್ಕವರು. ‘ಎಲ್ಲೀಗೆ?’ ಅಂದರು. ‘ಚಿಂತಾಮಣೀಗೆ’ ಎಂದೆ. ‘ಒಪ್ಕೊಂಡಿದ್ರೇನಪ್ಪ?’ ಎಂದರು. ‘ಹೂಮ್ಮಾ’ ಎಂದೆ. ‘ಬನ್ನಿ ಒಳಕ್ಕೆ’ ಎಂದರು. ಹೋದೆ. ಕೂತ್ಕೊಳ್ಳಿ ಅಂದರು. ಕೂತೆ. ನಂತರ ಆಕೆ ‘ಅವರು ಊರ್ನಲ್ಲಿಲ್ಲಾ’ ಅಂದರು. ಡಂಗಾದ ನಾನು ‘ಎಲ್ಲಿಗ್ಹೋಗಿದ್ದಾರೆ ತಾಯಿ?’ ಎಂದೆ. ‘ಬಳ್ಳಾರೀಗಪ್ಪಾ’ ಎಂದರು. ಬೆಚ್ಚಿದ ನಾನು ‘ಯಾವಾಗ ಬರ್ತಾರಮ್ಮ?’ ಎಂದೆ. ‘ಯಾರಿಗೊತ್ತು. ಅವ್ರೇನನ್ನೂ ಹೇಳಿಲ್ಲ’ ಅಂದರು. ಪೆಚ್ಚು ಬಡಿದಿದ್ದ ನಾನು ‘ಹಾಗಾದ್ರೆ ನಮ್ಮ functionನ್ನಿನ ಗತಿ…’ ಎಂದು ರಾಗವೆಳೆಯಲು ಆಕೆ ‘ದೇವ್ರೇಗತಿ’ ಎನ್ನುವಂತೆ ಸೂರಿನತ್ತ ನೋಡಿ ಸುಮ್ಮನಾದರು.

ಸರಿ, ಮಾಡುವುದು ಇನ್ನೇನಿದೆ? ಬಾಡಿಗೆಗೆ ತಂದಿದ್ದ ಟ್ಯಾಕ್ಸಿಯವನಿಗೆ ಅಷ್ಟಿಟ್ಟು ಕೊಟ್ಟು ಕಳಿಸಿಬಿಡುವುದೆಂದು ನಿರ್ಧರಿಸಿ ಹೊರಕ್ಕೆ ಬರುವಷ್ಟರಲ್ಲಿ ಬಿಳಿಯ ಅಂಬಾಸಿಡರ್ ಕಾರೊಂದು ಬೀಚೀ ಅವರ ಮನೆ ಮುಂದೆ ಬಂದು ನಿಂತಿತು. ನಾನು ಅದನ್ನು ನೋಡುತ್ತಿದ್ದಂತೆ ಅದರ ಡ್ರೈವರ್ ಇಳಿದು ಪಕ್ಕದ ಬಾಗಿಲನ್ನು ತೆಗೆದ. ಹಿಂಭಾಗದ ಸೀಟಿನಲ್ಲಿ ಮುದುಡಿ ಮಲಗಿದ್ದ ಬೀಚೀ ಅವರನ್ನು ‘ಸಾರ್ ಮನೆ ಬಂತು’ ಎಂದು ಎಬ್ಬಿಸಲು, ದೊಡ್ಡದಾಗಿ ಆಕಳಿಸುತ್ತಾ ತಲೆ ನೇವರಿಸಿಕೊಂಡು ಬೀಚಿ ಕಾರಿನಿಂದ ಇಳಿಯುತ್ತಿದ್ದಂತೆ, ಪುಳಕಿತನಾಗಿದ್ದ ನಾನು ಆತುರದಿಂದ ಹೆಜ್ಜೆ ಹಾಕಿ, ಅವರನ್ನು ಹಿಡಿದುಕೊಂಡು ‘ಹುಷಾರಾಗಿದ್ದೀರಾ ಸಾರ್?’ ಎನ್ನಲು ಅವರು ನನ್ನನ್ನು ದಿಟ್ಟಿಸಿ ‘ಹುಷಾರಾಗೇ ಇದ್ದೆ ರಾಜ, ಹಿಂದೆ, ಎಂದೋ ಒಂದಾನೊಂದು ಕಾಲದಲ್ಲಿ. ಆದ್ರೆ ಈಚೀಚ್ಗೆ, ಅಂದ್ರೆ ಒಂದಿಪ್ಪತ್ತು ವರ್ಷದಿಂದೀಚ್ಗೆ, health ಹದಗೆಟ್ಟಿದೆ ಅಷ್ಟೆ. health ವಿಷಯ ಹಾಳಾಯ್ತು.. ಎಷ್ಟು ಹೊತ್ತಿಎಗೆ ನಿಮ್ಮ  function? ಅಂದರು. ನಾನು ‘ಆರಕ್ಕೆ ಸಾರ್’ ಅಂದೆ. `How long it takes to reach your place?’  ಅಂದರು.  Just one hour fifteen minutes ಸಾರ್’ ಎಂದು ನಾನೆನ್ನಲು ಬೀಚೀ ತಮ್ಮ ಕೈಗಡಿಯಾರವನ್ನುನೋಡುತ್ತಾ. It is two fortyfive now. Still there is lot of time. Give me five minutes, I will be ready and we shall proceed. ಬಾ,  let us have some tea,’ ಎಂದು ನನ್ನ ಹೆಗಲ ಮೇಲೆ ಕೈ ಹಾಕಿ ಮನೆಯೊಳಕ್ಕೆ ಕರೆದೊಯ್ದು ಕೂರಿಸಿ ಅವರು ಒಳಕ್ಕೆ ಹೋದರು.

ನಂತರ ಅವರ ಮಡದಿ ಬಿಸಿಬಿಸಿ ಯಾದ ಟೀಯನ್ನು ತಂದು ನನ್ನ ಕೈಗಿತ್ತು, ನನ್ನ ಸಮೀಪಕ್ಕೆ ಸರಿದು, ಮೆಲುದನಿಯಲ್ಲಿ ‘ನೋಡಿ, ಈಗ್ತಾನೆ ಅವರು ಬಳ್ಳಾರೀಂದ ಬಂದಿದ್ದಾರೆ. ಮತ್ತೀಗ ನಿಮ್ಮ ಜೊತೆ ಚಿಂತಾಮಣೀಗೆ ಬರ್ತಾರೆ. ಆಯ್ತು. ಕರ್ಕೊಂಡು ಹೋಗ್ಬನ್ನಿ, ಸಂತೋಷ. ಆದ್ರೆ ದಯವಿಟ್ಟು ಉಪ್ಪು, ಹುಳಿ, ಖಾರಾನ ಅವರಿಗೆ ತಿನ್ನಸ್ಬೇಡೀಪ್ಪ. ಆವ್ರಿಗೆ ಡ್ಯೂಡನಲ್ ಅಲ್ಸರ್ರು. ಇಲ್ಲಿಗೆ ಬಂದ್ಮೇಲೆ ಒದ್ದಾಡ್ಬಿಡ್ತಾರೆ’ ಎನ್ನಲು ನಾನು ‘ಚಿಂತಿಸಬೇಡಿ ತಾಯಿ. ಅವ್ರನ್ನು ಅಲ್ಲಿ ನಮ್ಮನೇಲೆ ಇರಸ್ಕೋತೀನಿ. ನೀವಂದಂತೆ ಅವರನ್ನ ಎಚ್ಚರಿಕೆಯಿಂದ ನೋಡ್ಕೋತೀನೀಮ್ಮಾ’ ಎನ್ನುತ್ತಿದ್ದಂತೆ ಬಂದ ಬೀಚೀಯವರು ‘ನಡೀಯಯ್ಯಾ ಕೇಶವ,  I am ready’ ಎಂದು ನನ್ನೊಡನೆ ಟ್ಯಾಕ್ಸಿಯನ್ನೇರಲು ಹೊರಟವರು, ಹಿಮ್ಮುಖವಾಗಿ ‘just a minute’ ಎಂದು ಅವರ ಮನೆಯ ಪಕ್ಕಕ್ಕಿರುವ ಅಂಗಡಿಯಲ್ಲಿ ಒಂದು ಕಟ್ಟು ಗಣೇಶ ಬೀಡಿ ಹಾಗೂ ಒಂದು ಬೆಂಕಿಪೊಟ್ಟಣವನ್ನುಕೊಂಡು ತಮ್ಮ ಜುಬ್ಬಾ ಜೇಬಿಗೆ ಇಳಿಬಿಟ್ಟು ಮತ್ತೆ ಎರಡು Wills filter ಸಿಗರೇಟನ್ನುಕೊಂಡು, ಒಂದನ್ನು ಅಲ್ಲೇ ಹಚ್ಚಿ ಹೊಗೆಯನ್ನು ಉರುಬುತ್ತಾ ಟ್ಯಾಕ್ಸಿಯಲ್ಲಿ ಕೂತು ‘ಚಲೋ ಭೈ’ ಎಂದರು. ಟ್ಯಾಕ್ಸಿ ಓಡಲಾರಂಭಿಸಿತು.

ಬೆಂಗಳೂರಿನ  West-End ಹೋಟಲಿನ ಬಳಿ ಟ್ಯಾಕ್ಸಿಯನ್ನು ಸಂಪಂಗಿರಾಮ ಬಡಾವಣೆಯ ಕಡೆ ತಿರುಗಿಸು ಎಂದು ನಾನು ಡ್ರೈವರ್ನಿಗೆ ಹೇಳಲು, ಬೀಚೀ ‘ಯಾಕಯ್ಯ, ಯಾರನ್ನಾದ್ರು ನೋಡ್ಬೇಕಿತ್ತೆ’ ಎನ್ನಲು, ನಾನು ‘ಹೌದು ಸಾರ್. ಕಾಳಿಂಗರಾಯರನ್ನು ಒಂದ್ನಿಮಿಷ ನೋಡ್ಬೇಕಿತ್ತು, ಮುಂದಿನ ವಾರ ಚಿಂತಾಮಣೀಲಿ ನನ್ನ ಸ್ನೇಹಿತರೊಬ್ಬರ ತಂಗಿ ಮದ್ವೆ ನಡೀತಿದೆ ಸಾರ್. ಅದರ  Reception ನಲ್ಲಿ ಕಾಳಿಂಗಾರಾಯರು ಹಾಡೋಕ್ಕೆ ಒಪ್ಕೊಂಡಿದ್ದಾರೆ. ಆ ಬಗ್ಗೆ ರಾಯರಿಗೆ ಸ್ವಲ್ಪ ಅಡ್ವಾನ್ಸ್ ಕೊಟ್ಟು ಬಂದ್ಬಿಡ್ತೀನಿ. ನೀವು ಕಾರಿನಲ್ಲೇ ಇರಿ’ ಎಂದೆ. ಅದಕ್ಕೆ ಬೀಚಿ ‘Wonderful I say, ನಾನೂ ಆ ಕಾಳಿಂಗನ್ನ ನೋಡಿ ಶಾನೆ ದಿನ ಆಯ್ತು. Let me have a look at that King Cobra.’ ಎಂದವರೇ ಮಹಡೀ ಮನೆಯಲ್ಲಿದ್ದ ರಾಯರನ್ನು ನೋಡಲು ಅತಿ ಪ್ರಯಾಸದಿಂದಲೇ ಮೆಟ್ಟಿಲುಗಳನ್ನೇರಿ ನನ್ನ ಜೊತೆ ರಾಯರ ಮನೆಯೊಳಕ್ಕೆ ಕಾಲಿಟ್ಟರು.

ಸ್ಯಾಂಡೋ ಬನಿಯನ್ನುಲುಂಗಿ ಧರಿಸಿ ಸಿಗರೇಟು ಸೇದುತ್ತಾ ರಮ್ಮನ್ನು ಚಪ್ಪರಿಸುತ್ತಿದ್ದ ಕಾಳಿಂಗರಾಯರು ಬೀಚಿಯವರನ್ನು ನೋಡುತ್ತಿದ್ದಂತೆ ಭಾವಪರವಶರಾಗಿ ಎದ್ದು ‘ಅರೆರೆ ಬೀಚಿ, ಚೀ ಚೀ’ ಎಂದು ಬಂದು ಕೈ ಕುಲುಕಲು ಬೀಚಿಯವರು ರಾಯರನ್ನು ತಬ್ಬಿಕೊಂಡು ‘ಹೇಗಿದ್ದೀಯಯ್ಯಾ ಕಾಳಿಂಗ್? ಎಷ್ಟು ವರ್ಷವಾಯ್ತು ನಿನ್ನ ನೋಡಿ. ಸುಮಾರು ಸಾವಿರ ವರ್ಷವೇ ಆಗಿರಬೇಕು’ ಎನ್ನಲು ಇಬ್ಬರೂ ಗಟ್ಟಿಯಾಗಿ ನಕ್ಕರು. ನಂತರ ಬೀಚೀ ಒಂದು ಸಿಗರೇಟನ್ನು ಹಚ್ಚಿ ಹೊಗೆಯನ್ನು ಅಕ್ಕ ಪಕ್ಕಕ್ಕೆ ತೂರುತ್ತಾ ಸೀರಿಯಸ್ಸಾಗಿ ‘ಅಯ್ಯಾ’ ನಿನ್ನನ್ನು ಈವತ್ತು ನೋಡಿದ್ಮೇಲೆ ಒಂದು ವಿಚಾರ confirm ಆಯ್ತು.’ ಎಂದು ಹುಬ್ಬೇರಿಸಿ ದಿಟ್ಟಿಸುತ್ತಿದ್ದ ರಾಯರತ್ತ ನೋಡುತ್ತ, ಬೀಚಿ ಮುಂದುವರೆದು ‘ಇನ್ನೇನಿಲ್ಲಾ, ತುಂಬ ದಿವಸದಿಂದ ಕಾಡ್ತಿದ್ದ ಒಂದು ಮಹತ್ತರವಾದ ಪ್ರಶ್ನೆಗೆ ಇವತ್ತು ಉತ್ತರ ಸಿಕ್ತು’ ಎನ್ನಲು ರಾಯರು ‘ಅದೇನು ಅಂಥ ಯಕ್ಷಪ್ರಶ್ನೆ ಬೇಗ ಹೇಳಯ್ಯಾ’ ಎಂದರು. ಬೀಚೀ ನಗುತ್ತಾ ‘ಇನ್ನೇನಿಲ್ಲಾಯ್ಯ, ಆ ಪ್ರಶ್ನೆ ಹಾಳಾದ್ದು ನಮ್ಮಿಬ್ಬರ ಆಯುಷ್ಯ ಕರ್ಮಕ್ಕೆ ಸಂಬಂಧಿಸಿದ್ದು. ಅದಿಷ್ಟೇ ನೋಡು; ನನ್ಗೆ ನಿನ್ನ ಜ್ಞಾಪಕ ಬಂದಾಗಲೆಲ್ಲಾ ನಾನುಮೊದ್ಲು ಸತ್ಹೋಗ್ತೀನೋ, ಇಲ್ಲಾ ನೀನು ಮೊದ್ಲು ಸತ್ಹೋಗ್ತಿಯೋ ಅನ್ನೋದು ಅರ್ಥವಾಗ್ದೆ ಒದ್ದಾಡ್ತಿದ್ದೆ. ಆದ್ರೆ ಈಗ ನಿನ್ನನ್ನ ನೋಡದ್ಮೇಲೆ ಖಂಡಿತವಾಗಿ ನನಗಿಂತ ಮೊದ್ಲು ನೀನೇ ಸಾಯ್ತೀಯಾ ಅನ್ನೋದು ಇತ್ಯರ್ಥವಾಗಿ ನನ್ನ ಮೈಮನಸ್ಸು ತುಂಬ ಹಗುರವಾಯ್ತಯ್ಯ’ ಎಂದಾಗ ಕಾಳಿಂಗರಾಯರು ಘಟ್ಟಿಯಾಗಿ ನಕ್ಕು ‘ಇದನ್ನ ಹೇಳೊಕ್ಕೆ ಇಷ್ಟು ದೂರ ಬಂದ್ಯೇನಯ್ಯ? ಆಯ್ತು ಕಣಯ್ಯ. ನಾನು ಇನ್ನೊಂದು ಐವತ್ತು ವರ್ಷ ಬಿಟ್ಟು ಸಾಯ್ತೀನಿ. ನಾನು ಸತ್ತ ಐವತ್ತು ವರ್ಷದ ಮೇಲೆ ನೀನು ಸಾಯೋವ್ಯಂತೆ, O.K.?’ ಎಂದು ಅವರಿಬ್ಬರೂ ಪರಸ್ಪರ ತಬ್ಬಿಕೊಂಡಾಗ ಇಬ್ಬರ ಕಣ್ಣುಗಳಲ್ಲೂಕಂಬನಿ ಕಟ್ಟಿಕೊಂಡದ್ದನ್ನು ನಾನಂದು ಕಂಡೆ.

ನಂತರ ಕಾಳಿಂಗರಾಯರಿಂದ ಬೀಳ್ಕೊಂಡ ನಾವು ಕೆಳಗೆ ಕಾದಿದ್ದ ಟ್ಯಾಕ್ಸಿಯನ್ನೇರಿ ಚಿಂತಾಮಣಿಯತ್ತ ಹೊರಟೆವು.

(ಆಯಿತು. ಆದರೆ ಆದದ್ದೇನು? ಬೀಚಿಯವರೇ ಕಾಳಿಂಗರಾಯರಿಗಿಂತ ಒಂದು ವರ್ಷ ಮೊದಲು ಕೊನೆಯುಸಿರನ್ನೆಳೆದರು. ಬೀಚಿಯವರು ತೀರಿಕೊಂಡದ್ದು ೭-೧೨-೧೯೮೦ರಂದು. ಕಾಳಿಂಗರಾಯರು ಅಸುನೀಗಿದ್ದು ೨೧-೯-೧೯೮೧ರಂದು)

* * *