ಜಿಂಕೆಯಂತೆ ಜಿಗಿದಾಡುತ್ತ, ಗರಿಕೆದರಿದ ನವಿಲಿನಂತೆ ನಲಿದಾಡುತ್ತಾ, ಕೋಕಿಲ ಕಂಠಮಾಧುರ್ಯದಿಂದ ಕೇಳುಗರ ಮನವನ್ನು ಕೊಳ್ಳೆಹೊಡೆಯುತ್ತಾ, ನಾಡಿನಾದ್ಯಂತ ಹಳ್ಳಿ ದಿಳ್ಳಿ ಎನ್ನದೆ, ಹಗಲು ರಾತ್ರಿಯ ವ್ಯತ್ಯಾಸವೆಣಿಸದೇ, ನಿರಾತಂಕವಾಗಿ, ನರರೂಪಿ ನಾರದನಂತೆ ಸಂಚರಿಸುತ್ತಿದ್ದ, ಕಾಳಿಂಗರಾಯರ ಆರೋಗ್ಯಭಾಗ್ಯದ ಮೇಲೆ ವಿಧಿಯ ಕ್ರೂರ ದೃಷ್ಟಿ ಬೀಳಲಾರಂಭಿಸಿದ್ದು ೧೯೭೭ರಿಂದ.

ಆಗ ಕಾಳಿಂಗರಾಯರು ವಾಸಿಸುತ್ತಿದ್ದುದು ಸಂಪಂಗಿರಾಮ ಬಡಾವಣೆಯ ಮಹಡಿ ಮನೆಯೊಂದರಲ್ಲಿ. ಮೇಲೆ ಹತ್ತಿ ಮನೆ ಸೇರಲು ಇಕ್ಕಟ್ಟಾದ ಮೆಟ್ಟಿಲುಗಳು. ಏಕೋ ಏನೋ! ಒಂದು ದಿನ ರಾಯರು ಆ ಮಹಡಿಯಿಂದ ಇಳಿಯುವಾಗ ಬಿದ್ದರು. ದಡದಡನೆ ಉರುಳಿ ಕೆಳಗೆ ಅಂಗಾತ ಬಿದ್ದರು.

ಸರಿ, ರಾಯರನ್ನು ರಿಕ್ಷಾದಲ್ಲಿ ಸೋಹನ್ ಮೋಹನ್ ಅವರು ನೇರ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ಖ್ಯಾತ ವೈದ್ಯ ಡಾ. ವೀರಪ್ಪ ರೆಡ್ಡಿಯವರೇ ಬಂದು, ಮೊಣಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಕುಳಿತಿದ್ದ ರಾಯರನ್ನು ಕಂಡು ‘ಏನಾಯ್ತು ರಾಯ್ರೆ, ಏನ್ಸಮಾಚಾರ’? ಎಂದಾಗ ಕಾಳಿಂಗರಾಯರು ಮೌನವಾಗಿ ತಲೆತಗ್ಗಿಸಲು ರೆಡ್ಡಿಯವರು ರಾಯರ ಬೆನ್ನು ಚಪ್ಪರಿಸಿ. ‘O.K. it’s allright. ಬನ್ನಿ’ ಎಂದು ರಾಯರನ್ನು ಪರೀಕ್ಷಿಸಲು, ಅವರ ಕೈಮೂಳೆ ಮುರಿದಿತ್ತು. ಸರಿ, ಅದಕ್ಕೆ ಬೇಕೆನಿಸುವ ಚಿಕಿತ್ಸೆ ನೀಡಿ, ಮುರಿದಿದ್ದ ಕೈಗೆ ಪ್ಲಾಸ್ಟರ್ ಹಾಕಿ ಮನೆಗೆ ಆ ಸಮಯದಲ್ಲಿ ಹಲವು ಬಾರಿ ಬಂದು ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಹೋಗುತ್ತಿದ್ದರಂತೆ.

ಕಾಳಿಂಗರಾಯರು ಈ ಹೊಡೆತದಿಂದ ಎಚ್ಚೆತ್ತುಕೊಳ್ಳಲು ಎರಡು ಮೂರು ತಿಂಗಳೇ ಬೇಕಾಯಿತು. ನಂತರ ರಾಯರು ಮತ್ತೆ ಮಾಮೂಲಿನಂತೆ ಅಲ್ಲಿಲ್ಲಿ ಹಾಡಲಾರಂಭಿಸಿದರು.

೧೯೭೫-೭೬ರಲ್ಲಿ ಕಾಳಿಂಗರಾವ್ ಮತ್ತು ವೃಂದದವರ ಸಂಗೀತವನ್ನು ಚಿಂತಾಮಣಿಯಲ್ಲಿ ನಾನು ಏರ್ಪಡಿಸಿದ್ದೆ. ಅಲ್ಲಿಯ ಪ್ರಸಿದ್ಧ ದಿನಸಿ ವರ್ತಕ ವೆಂಕಟೇಶಮೂರ್ತಿಯವರ ತಂಗಿಯ ಮದುವೆಯ ಸಂದರ್ಭ. ಸಂಜೆ ಆರರಿಂದ ಒಂಬತ್ತು ಆರತಕ್ಷತೆ. ಕಾಳಿಂಗರಾವ್ ಮತ್ತು ವೃಂದದಿಂದ ಸಂಗೀತ. ವೆಂಕಟೇಶಮೂರ್ತಿ ರಾಯರಿಗೆ ಕೊಟ್ಟ ಸಂಭಾವನೆ ಎರಡು ಸಾವಿರ, ಅದೂ ನಾನು ಮಧ್ಯಸ್ತಿಕೆ ವಹಿಸಿದ್ದರಿಂದ. ರಾಯರು ಕೇಳಿದ್ದು ಮೂರುವರೆ ಸಾವಿರ.

ಮದುವೆಯ ದಿನ ಬೆಳಿಗ್ಗೆಯೇ ರಾಯರು ಸೋಹನ್, ಮೋಹನ್ರ ಜೊತೆ ನಮ್ಮ ಮನೆಗೆ ಬರಬೇಕೆಂದೂ, ನಮ್ಮೊಡನೆ ಊಟ ಮಾಡಬೇಕೆಂದೂ ನಾನು ಆಹ್ವಾನಿಸಿದ್ದೆ. ಅದರಂತೆ ಮೂವರೂ ಅಂದು ಬೆಳಿಗ್ಗೆ ಹತ್ತರ ಹೊತ್ತಿಗೆ ನಮ್ಮ ಮನೆಗೆ ಬಂದರು. ನನ್ನಾಕೆ ಅತಿ ಸಂಭ್ರಮದಿಂದ ಊಟಕ್ಕಾಗಿ ಅದೂ ಇದೂ ಏನೇನೋ ಮಾಡಿದ್ದಳು. ಅವುಗಳ ಪೈಕಿ ಪ್ರಧಾನವಾದ್ದು ವೆಜಿಟೆಬಲ್ ಭಾತು ಹಾಗೂ ಟೊಮ್ಯಾಟೊ ಸೌತೆಕಾಯಿ ಪಚಡಿ. ರಾಯರು ನಮ್ಮ ಮನೆಯೊಳಗೆ ಕಾಲಿಡುತ್ತಿದ್ದಂತೆ ಘಮಘಮಿಸುತ್ತಿದ್ದ ಭಾತಿನ ಪರಿಮಳವನ್ನು ತಮ್ಮ ನವಿರಾದ ನಾಸಿಕದಿಂದ ಹೀರುತ್ತಾ ‘ಏನಯ್ಯಾ ಕೇಶವರಾಯ, ಬೀರ್ಯಾನೀ ಮಾಡ್ಸಿದ್ದೀಯ ಈ ಮಹಾಬ್ರಾಹ್ಮಣ ಬರ್ತಾನೇಂತ’ ಎಂದು ಕಿಚಾಯಿಸಿದರು, ನಕ್ಕೆವು. ನಾವು ಒಟ್ಟಾಗಿ ಓಡಾಡುತ್ತಿದ್ದ ಹಿಂದಿನ ದಿನಗಳನ್ನು ಮೆಲುಕು ಹಾಕಿ ಆನಂದಪಟ್ಟೆವು. ಒಟ್ಟಾಗಿ ನೆಲದ ಮೇಲೆ ಕೂತು ನನ್ನಾಕೆ ಬಡಿಸಿದ್ದನ್ನೆಲ್ಲಾ ಚಪ್ಪರಿಸಿ ತಿಂದೆವು. ಆದರೆ ರಾಯರು ಮಾತ್ರ ಎರಡೆರಡು ಬಾರಿ ಚೀಟು ಚೀಟು ಪುಟ್ಟಹೊಟ್ಟೆಯನ್ನು ತುಂಬಿಸಿಕೊಂಡರು. ನಂತರ ಒಂದು ಲೋಟ ತಿಳೀ ಸಾರನ್ನು ಗುಟುಕರಿಸಿ ಅಷ್ಟು ಮೊಸರನ್ನುಸಾರಿಗೆ ಹಾಕಿಸಿಕ್ಕೊಂಡು ಸೊರೆದು, ತೇಗುತ್ತಾ ಮೇಲೆದ್ದರು.

ಚಿಂತಾಮಣಿಯಲ್ಲಿ ನಮ್ಮ ಮನೆ ಚೊಕ್ಕವಾಗಿದ್ದರೂ ಚಿಕ್ಕದಾಗಿದ್ದುದರಿಂದ ಕಾಳಿಂಗರಾಯರ ಸಂಸಾರಕ್ಕೆ ಇಳಿದುಕೊಳ್ಳಲು ಅಲ್ಲಿಯ ಒಬ್ಬರ ಮನೆಯಲ್ಲಿ ಏರ್ಪಾಡು ಮಾಡಿದ್ದೆವು. ನಮ್ಮ ಮನೆಯಲ್ಲಿ ಊಟ ಮಾಡಿದ ನಂತರ ಅವರನ್ನೆಲ್ಲಾ ಆ ಮನೆಗೆ ಕರೆದೊಯ್ದು ಸಂಜೆ ೫.೩೦ರ ಹೊತ್ತಿಗೆ ಸಿದ್ಧರಾಗಿರಬೇಕೆಂದು ಹೇಳಿ ಬಂದೆ.

ನಾವೆಲ್ಲಾ ಶ್ರೀ ಹೊನ್ನಪ್ಪನವರ (ವೆಂಕಟೇಶಮೂರ್ತಿಯವರ ತಂದೆ) ಶ್ರೀರಾಮ ಮಂದಿರವನ್ನು ತಲುಪಿದಾಗ ಸಂಜೆ ಆರಾಗಿತ್ತು. ಅಲ್ಲಿ ಪೂಜೆಯನ್ನು ಮುಗಿಸಿಕೊಂಡು ನಾವೆಲ್ಲಾ ಛತ್ರದೊಳಕ್ಕೆ (ಅದೂ ಹೊನ್ನಪ್ಪನವರದ್ದೆ) ಪ್ರವೇಶಿಸಿದೆವು. ವಾದ್ಯಗಾರರೆಲ್ಲಾ ಆ ವೇಳೆಗೆ ಅಲ್ಲಿಗೆ ಬಂದು ವೇದಿಕೆಯ ಮೇಲೆ ಸಿದ್ಧರಾಗಿದ್ದರು. ಎದುರಿಗೆ ಸಿಂಹಾಸನದಂತಿದ್ದ ಎರಡು ಕುರ್ಚಿಗಳಲ್ಲಿ ಹೆಣ್ಣು ಗಂಡು ಸಿಂಗರಿಸಿಕೊಂಡು ಕೂತಿದ್ದರು. ಛತ್ರದ ಹಾಲಿನ ತುಂಬ ಆಮಂತ್ರಿತರು ಆಸೀನರಾಗಿದ್ದರು. ಕಾಳಿಂಗರಾಯರು ವೇದಿಕೆಯನ್ನೇರಿದವರೇ ಹಾಡಲಾರಂಭಿಸಿದರು. ಜನರೆಲ್ಲಾ ತನ್ಮಯರಾಗಿ ಕೇಳುತ್ತಾ ಕುಳಿತರು.

ಹೀಗೆ ರಾಯರ ಹಾಡನ್ನು ಕೇಳುತ್ತಾ ಕುಳಿತವರು ಕುಳಿತಿದ್ದರೇ ಹೊರತು ಅವರ ಪೈಕಿ ಯಾರೂ ಎದ್ದು ಹೋಗುವ ಸೂಚನೆಗಳೇ ಕಂಡುಬರಲಿಲ್ಲ. ಹೀಗೆ ಕೂತಿದ್ದ ಆಮಂತ್ರಿತರನ್ನು ಹೊರಗೆ ಕಾದುನಿಂತಿದ್ದವರಿಗೆ ಜಾಗ ಮಾಡಿಕೊಡಿ ಎಂದು ಹೇಳುವುದಾದರೂ ಹೇಗೆ? ಹಾಗೇನಾದರೂ ಅಂದರೆ ಅದೇ ಅಸಮಾಧಾನಕ್ಕೆ ಕಾರಣವಾಗಿ ಜಗಳಕ್ಕೆ ನಾಂದಿಯಾಗಬಹುದು. ಅಲ್ಲದೆ ಹಾಗೆ ಕೂತಿದ್ದವರ ಪೈಕಿ ಸಾಕಷ್ಟು ಮಂದಿ ಗಂಡಿನ ಕಡೆಯವರು ಬೇರೆ. ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂದು ತೋರದೆ ಹೆಣ್ಣಿನ ಕಡೆಯವರು ಮಿಸುಕಾಡಲಾರಂಭಿಸಿದರು.

ಹೊರಬಾಗಿಲಿನಲ್ಲಿ ಬಂದ ಆಹ್ವಾನಿತರಿಗೆ ಪನ್ನೀರನ್ನು ಸಿಂಪಡಿಸಿದ ಮೇಲೆ ಒಳಬಂದವರು ಒಂದೆರಡು ನಿಮಿಷ ಕೂತಿದ್ದು ನಂತರ ಎದ್ದು ಹೆಣ್ಣು ಗಂಡಿಗೆ ಶುಭ ಕೋರಿ ಹೊರಗೆ ಹೋಗುವಾಗ ತಾಂಬೂಲವನ್ನು ಅವರಿಗಿತ್ತು ಕಳಿಸುವ ಮಾಮೂಲು ಏರ್ಪಾಡನ್ನು ವೆಂಕಟೇಶಮೂರ್ತಿ ಮಾಡಿದ್ದರು. ಈ ಕಾರ್ಯನಿರ್ವಹಣೆಗಾಗಿ ಅವರ ಪೈಕಿಯ ಕೆಲವು ಲಲನಾಮಣಿಯರು ನಖಶಿಖಾಂತ ಸಿಂಗರಿಸಿಕೊಂಡು ಹೊರಬಾಗಿಲಿನ ಬಳಿ ನಿಂತಿದ್ದರು. ಆದರೆ ಒಳಬಂದ ವ್ಯಕ್ತಿಗಳು ಹೀಗೆ ಆಸನಗಳಿಗಂಟಿಕೊಂಡು ಕಾಳಿಂಗರಾಯರು ಮತ್ತು ಮೋಹನ್ ಸೋಹನ್ರನ್ನೇ ಎವೆಯಿಕ್ಕದೆ ನೋಡುತ್ತಾ ಅವರ ಸಂಗೀತವನ್ನು ಕೇಳುತ್ತಾ ಬಲಭದ್ರವಾಗಿ ತಳವೂರಿಬಿಡುತ್ತಾರೆಂದು ಯಾರೂ ಎಣಿಸಿರಲಿಲ್ಲ. ಹೀಗೆ ಒಳಗೆ ಕೂತಿದ್ದವರಿಗೆ ಆರತಕ್ಷತೆ, ಹೆಣ್ಣು ಗಂಡು, ಇವೆಲ್ಲದಕ್ಕಿಂತ ಕಾಳಿಂಗರಾಯರೆ ಹೆಚ್ಚೆನಿಸಿದ್ದರು.

ಇಂತಹ ಸಂದಿಗ್ಧ ಸ್ತಿತಿಯಲ್ಲಿ ಸಿಲುಕಿ ಏನು ಮಾಡಲೂ ತೋಚದೆ ಮಿಸುಕಾಡುತ್ತಿದ್ದ ವೆಂಕಟೇಶಮೂರ್ತಿಯನ್ನು ಪಕ್ಕಕ್ಕೆ ಕರೆದು ನಾನು ಹೀಗೆಂದೆ. ‘ನೋಡ್ರಿ ಇದು ಯಾಕೋ ಸರಿಹೋಗ್ತಿಲ್ಲ. ಹೀಗೇ ಮುಂದುವರೆದ್ರೆ ಹೊರಗಿರೋರು ಹೊರಗೇನೇ, ಒಳಗಿರೋರು ಒಳಗೇನೇ. ಆಗ್ಲೆ ಹೊರಗಡೆ ಸುಮಾರು ಹೊತ್ನಿಂದ ಕಾದು ನಿಂತಿರೋವ್ರ ಪೈಕಿ ಕೆಲವರು, “ಏನ್ ಸ್ವಾಮೀ ಒಳಕ್ಬಿಡ್ತಿರೋ ಇಲ್ಲಾ ನಾವು ಮನೇಗೆ ಹೋಗೋಣ್ವೋ?” ಅಂತ ಹೇಳ್ತಿದ್ದಾರೆ. ಹಾಗೇನಾದ್ರೂ ಆದ್ರೆ ಅವಮಾನ’ ಎಂದು ನಾನೆನ್ನಲು ವೆಂಕಟೇಶಮೂರ್ತಿ ದುಗುಡದಿಂದ ನಾನು “ಹೌದೂ ಸಾರ್, ಆದ್ರೆ ಈಗ ಏನ್ಮಾಡೋನ ಹೇಳಿ’ ಎಂದಾಗ ಹಾಡೋದ್ನ ನಿಲ್ಸೀಂತ ರಾಯರ ಕಿವೀಲಿ ಹೇಲಿ ಅವ್ರನ್ನ ಕರಕೊಂಡು ಹೋಗ್ತೇನೆ. ನೀವು ತಕ್ಷಣ ಇಲ್ಲಿ ಕೂತಿರೋವ್ರನ್ನ ಹೆಣ್ಣು ಗಂಡಿಗೆ ಪರಿಚಯ ಮಾಡ್ಸೋ ನೆಪ ಮಾಡ್ಕೊಂಡು ಸಾಲುಸಾಲಾಗಿ ಎಬ್ಬರಿಸ್ಕೊಂಡು ಹೋಗಿ. ಆಗ ಹೊರಗಿರೋವ್ರನ್ನ ಒಳಕ್ಬಿಡಿ. ಪ್ರತಿ ಅರ್ಧರ್ಧ ಗಂಟೆಗೂ let us follow this procedure’ ಎಂದೆ. ಹಾಗೇ ಮಾಡಿದೆವು. ನಾನು ಹೇಳಿದ ಉಪಾಯ ಫಲಿಸಿತು. ಮುಂದೆ ಆ ಕಾರ್ಯಕ್ರಮ ಸುಸೂತ್ರವಾಗಿ ಮುಗಿಯಿತು.

ಚಿಂತಾಮಣಿಯ ನಾಗರಿಕರಿಗೆ ಅಂದು ರಾಯರ ಸಂಗೀತ ಹಿತವೆನ್ನಿಸಿತು. ಆದರೆ ನನಗೆ ಹಾಗೆನಿಸಲಿಲ್ಲ. ಕಾಳಿಂಗರಾಯರ ಸಂಗೀತವನ್ನು ಅನೇಕ ವರುಷ ಲೆಕ್ಕವಿಲ್ಲದಷ್ಟು ಬಾರಿ ಕೇಳಿ ಆನಂದಿಸುತ್ತಿದ್ದ ನನಗೆ ಅಂದು ಚಿಂತಾಮಣಿಯಲ್ಲಿ ಕೇಳಿದಾಗ ರಾಯರ ಕಂಠಸಿರಿಯ ಕೋಮಲತೆಯಲ್ಲಿ ಸ್ವಲ್ಪ ಏರುಪೇರಾಗುತ್ತಿದೆಯೇನೋ ಎನ್ನಿಸಿತು.

* * *