೧೯೭೮, ಎಲ್ಲ ಆವಕ್ರ ಗ್ರಹಗಳ ಕ್ರೂರದೃಷ್ಟಿ ಕಾಳಿಂಗರಾಯರನ್ನು ಮುತ್ತಿ ಹತ್ತಿಕ್ಕಿದ್ದು ೧೯೭೮ರ ಫೆಬ್ರವರಿ ತಿಂಗಳ ಮೊದಲನೆ ವಾರದಲ್ಲಿ ಯಾವುದೋ ಕೆಲಸದ ನಿಮಿತ್ತ ತೆರಳಿದ್ದ ರಾಯರು ಆ ಕೆಲಸವನ್ನು ರಸ್ತೆಯಲ್ಲಿ ರಿಕ್ಷಾವನ್ನೇರಲು ಹೊರಟಿದ್ದರು. ಅಷ್ಟರಲ್ಲಿ ಇವರಿಗೆ ದುರ್ವಿಧಿ ಕಾದಿತ್ತು. ಹಿಂದಿನಿಂದ ವೇಗವಾಗಿ ಬಂದ ಇನ್ನೊಂದು ರಿಕ್ಷಾ ಕಾಳಿಂಗರಾಯರಿಗೆ ಬಡಿದು ಅವರನ್ನು ಉರುಳಿಸಿ ಹೊರಟು ಹೋಯಿತು. ರಿಕ್ಷಾದವರಿಗೂ ರಾಯರಿಗೂ ಅದಾವ ಪೂರ್ವಜನ್ಮದ ವೈಷಮ್ಯವೋ, ಹೀಗವರಿಗಾದದ್ದು ಎರಡನೆಯ ಬಾರಿ!

ಸರಿ, ರಸ್ತೆಯ ಪಕ್ಕಕ್ಕೆ ತತ್ತರಿಸಿ ಉರುಳಿಬಿದ್ದ ಕಾಳಿಂಗರಾಯರನ್ನು ಪತ್ತೆ ಹಚ್ಚಿದವರೊಬ್ಬರು, ಅವರು ಏರಲು ಹೊರಟಿದ್ದ ರಿಕ್ಷಾದಲ್ಲೇ ಹೊತ್ತು ತಂದು ಮನೆ ಮುಟ್ಟಿಸಿದರು. ಯಥಾಪ್ರಕಾರ ರಾಯರನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಯಿತು. ಮತ್ತೆ ಅದೇ ಡಾ|| ವೀರಪ್ಪ ರೆಡ್ಡಿಯವರು ಓಡೋಡಿ ಬಂದು ಎಮರ್ಜೆನ್ಸಿವಾರ್ಡಿನಲ್ಲಿ ನರಳುತ್ತಾ ಮಲಗಿದ್ದ ರಾಯರನ್ನು ನೋಡಿ ‘ಏನ್ ಗ್ರಹಚಾರಾನ್ರಿ ನಿಮ್ದು, ಮತ್ತೀಗ ಅದ್ಯಾವ ಮಹಡೀಂದ ಬಿದ್ರಿ?’ ಎನ್ನಲು ಸೋಹನ್ ಕುಮಾರಿಯವರು ನಡೆದದ್ದನ್ನು ರೆಡ್ಡಿಯವರಿಗೆ ವಿವರಿಸಿದರು. ‘ಆಯಿತು’ ಎಂದ ರೆಡ್ಡಿಯವರು ಮತ್ತೆ ರಾಯರನ್ನು ಆಮೂಲಾಗ್ರವಾಗಿ ಪರೀಕ್ಷಿಸಿದ ನಂತರ ಕಾಳಿಂಗರಾಯರ ಹಿಪ್ಬೋನ್ (ಗುದಭಾಗದ ಮೂಳೆ) ಜಜ್ಜಿ ಮುರಿದುಹೋಗಿದ್ದುದು ತಿಳಿದು ಬಂತು.

ಕಾಳಿಂಗರಾಯರಿಗಾಗ ಅರವತ್ನಾಲ್ಕು ವರ್ಷ, ಆ ವಯಸ್ಸಿನಲ್ಲಿ, ಅದೂ ಆ ಭಾಗದಲ್ಲಿ ಮುರಿದ ಮೂಳೆ ಮತ್ತೆ ಕೂಡಿಕೊಂಡು ಸರಿಹೋಗಬೇಕಾದರೆ ಅದು ಸಾಧಾರಣದ ವಿಷಯವಲ್ಲ. ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲದೆ ಖರ್ಚಾಗುವ ಕಾಸಿಗೂ ಇತಿಮಿತಿಯಿಲ್ಲ. ಅಲ್ಲದೆ ಆ ಕಾಲದಲ್ಲಿ ಕಾಳಿಂಗರಾಯರಿಗೆ ವರಮಾನವೂ ತಕ್ಕಮಟ್ಟಿಗೆ ಕುಸಿದಿತ್ತು: ಆರಿಸಿಕೊಂಡು ಕಾಳನ್ನು ಹೆಕ್ಕುವ ಕೋಳಿಯ ಕಾಲನ್ನು ಮುರಿದಂತಾಗಿತ್ತು, ಕಾಳಿಂಗರಾಯರ ಸ್ಥಿತಿ. ರಾಯರು ಧೈರ್ಯಗೆಟ್ಟರೂ ಸೋಹನ್ ಮೋಹನ್ ಧೈರ್ಯಗೆಡಲಿಲ್ಲ. ‘ಆದದ್ದಾಗಲೀ, ಕಾಳಿಂಗರಾಯರು ಮೊದಲಿನ ಹಾಗೆ ಓಡಾಡುವಂತೆ ಮಾಡಿ’ ಎಂದು ವೀರಪ್ಪ ರೆಡ್ಇಯವರನ್ನು ಪ್ರಾರ್ಥಿಸಿದರು. ಡಾ|| ರೆಡ್ಡಿಯವರಿಗೂ ರಾಯರೆಂದರೆ ಪ್ರಾಣ: ತುಂಬ ಅಭಿಮಾನ. ನೊಂದು ಕುಳಿತಿದ್ದ ರಾಐರಿಗೆ ಆತ್ಮ ಸ್ಥೈರ್ಯ ತುಂಬುವ ದನಿಯಲ್ಲಿ ನಗುನಗುತ್ತಲೇ ಸೋಹನರತ್ತ ತಿರುಗಿ, ‘ಚಿಂತಿಸಬೇಡಿ ತಾಯಿ, ನನ್ನ ಕೈಲಾದ್ದನ್ನು ಮಾಡುತ್ತೇನೆ, ಮುಂದಿನದು ದೈವ ಚಿತ್ತ’ ಎಂದು ಹೇಳಿ ರಾಯರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಕಾಳಿಂಗರಾಯರನ್ನು ಕೆಲಕಾಲ ಎಮರ್ಜೆನ್ಸಿ ವಾರ್ಡಿನಲ್ಲಿರಿಸಿಕೊಂಡು ನಂತರ ಟೀಚರ್ಸ್ ವಾರ್ಡಿಗೆ ಸ್ಥಳಾಂತರಿಸಿದರು. ಅಲ್ಲಿ ರಾಯರ ತೊಡೆಯಿಂದ ಹಿಡಿದು ಸೊಂಟದವರೆಗೆ ಪ್ಲಾಸ್ಟರ್ ಹಾಕಿ ಅವರನ್ನು ಅಂಗಾತ ಮಲಗಿಸಿ ಕಾಲುಗಳ ತುದಿಗೆ ಮರಳು ತುಂಬಿದ ಚೀಲಗಳನ್ನು ತುಂಬಿ ಹಾಕಿ, ರಾಯರು ಅಕ್ಕಪಕ್ಕವೂ ಹೊರಳಾಡದಂತೆ ಅವರ ದೇಹದ ಇಕ್ಕಡೆಗಳಲ್ಲೂ ಉದ್ದನೆಯ ದಿಂಬುಗಳನ್ನಿರಿಸಿದಾಗ, ಈ ರೀತಿ ಸರ್ವತೋಮುಖವಾಗಿ ದಿಗ್ಬಂಧನಕ್ಕೊಳಗಾದ ಕಾಳಿಂಗರಾಯರು ಕೇವಲ ಆ ವಾರ್ಡಿನ ಸೂರನ್ನಷ್ಟೇ ನೆಟ್ಟ ದೃಷ್ಟಿಯಿಂದ ದಿಟ್ಟಿಸಿ ನೋಡುತ್ತಾ ಕಾಲ ಕಳೆಯಬೇಕಾದ ಕೆಟ್ಟ ದಿನಗಳನ್ನು ಅನುಭವಿಸಬೇಕಾಯಿತು. ಮಲಗಿದ್ದ ಆ ಸ್ಥಿತಿಯಲ್ಲೇ ರಾಯರಿಗೆ ಎಲ್ಲವನ್ನೂ ಮಾಡಬೇಕಾಯಿತು. ಬೆಡ್ಸೋರ್ ಆಗದಂತೆ ರಾಯರ ಬೆನ್ನು ಹಾಗೂ ಹಿಂಭಾಗವನ್ನೆಲ್ಲಾ ಬಿಸಿ ನೀರಿನಿಂದ ಒರೆಸಿ ಶುದ್ಧಿಮಾಡಿ ಪೌಡರ್ ಹಚ್ಚುವುದು, ದಿನನಿತ್ಯವೆಂಬಂತೆ ಬೆಡ್ಶೀಟ್ ಬದಲಾಯಿಸುವುದು, ಅವರ ಮುಖ ತೊಳೆದು ಶುದ್ಧಿಪಡಿಸುವುದು, ಕಾಲಕಾಲಕ್ಕೆ ಔಷಧಿ, ಮಾತ್ರೆಗಳನ್ನು ನುಂಗಿಸುವುದು, ಹೀಗೆ ಈ ಎಲ್ಲಾ ಕೆಲಸಗಳನ್ನೂ ಸೋಹನ್ ಕುಮಾರಿಯವರು ಆಸ್ಪತ್ರೆಯ ನರ್ಸ್ಗಳು ದಾದಿಯವರೊಂದಿಗೆ ಸೇರಿ ಮಾಡಿದರು. ಮಾಡಿದರೂ ಎಂದರೆ ಒಂದೆರಡು ದಿನವಲ್ಲ: ಸುಮಾರು ಎಂಟು ತಿಂಗಳ ಕಾಲ ಕಾಳಿಂಗರಾಯರ ಸೇವೆಯನ್ನು ಮಾಡಿದರು, ಈ ರೀತಿಯಲ್ಲಿ ಕಿಂಚಿತ್ತೂ ಬೇಸರಗೊಳ್ಳದೆ.

ಕಾಳಿಂಗರಾಯರು ಮೊದಲಿನಿಂದಲೂ ಬಹು ಸಂಕೋಚದ ಮನುಷ್ಯ. ಆದರೇ ಈ ನಿಟ್ಟಿನಲ್ಲಿ ಅಸಹಾಯಕರಾದ ರಾಯರು ತಮ್ಮನ್ನು ತಾವೇ ಬೆತ್ತಲೆ ಸೇವೆಗೆ ಅರ್ಪಿಸಿಕೊಳ್ಳಬೇಕಾದ್ದು ಅಗತ್ಯವಾಯಿತು ಹಾಗೂ ಅನಿವಾರ್ಯವಾಯಿತು. ಮೊದ ಮೊದಲು ತಮಗೆ ಈ ರೀತಿ ಶುಶ್ರೂಷೆ ಮಾಡಲು ಮುಂದಾಗಿ ಬಂದವರತ್ತ ‘ಉಹು, No, No, No,… I can’t’ ಎಂದು ಮಲಗಿದ್ದಲ್ಲಿಂದಲೇ ಮುಲುಗಿ ಮುಂಗೋಪ ತೋರಿದಾಗ ಡಾ|| ರೆಡ್ಡಿಯವರು ಗತಿಗಾಣದೆ ಗದರಿಸಲು, ಗುಮ್ಮನಿಗೆ ಬೆದರಿ ಸುಮ್ಮನಾಗುವ ಮಗುವಂತೆ ರಾಯರು ಮಮ್ಮಾದರು.

ಈ ದಿಶೆಯಲ್ಲಿ ರಾಯರು ಡಾ|| ರೆಡ್ಡಿ ಹಾಗೂ ಅವರ ಸಿಬ್ಬಂದಿ ವರ್ಗದವರ ಕಣ್ತಪ್ಪಿಸಿ ಅಷ್ಟಿಷ್ಟು ಕುಡಿದು ಏನೂ ಅರಿಯದವರಂತೆ ಮುಖ ಮುಚ್ಚಿ ರಗ್ಗು ಹೊದೆದು ಮಲಗಿದ್ದುಂಟು! ಆ ಆಸ್ಪತ್ರೆಯವರು ಮಾಡುತ್ತಿದ್ದ ಸೇವೆಗಿಂತ ಅವರನ್ನು ಕಾಣಲು ಬರುತ್ತಿದ್ದ ಅಭಿಮಾನಿಗಳ ಪೈಕಿ ಕೆಲವರು ಮಾಡುತ್ತಿದ್ದ ಈ ‘ಕಳ್ಳು’ ಕಳ್ಳಸೇವೆ, ರಾಯರಿಗೆ ಅವರು ಅನುಭವಿಸುತ್ತಿದ್ದ ನರಕಯಾತನೆಯನ್ನು ತುಸುಹೊತ್ತಾದರೂ ಮರೆತು ನೆಮ್ಮದಿಯಿಂದ ಮಲಗುವಂತೆ ಮಾಡುತ್ತಿತ್ತು.

ಎಂಟು ತಿಂಗಳ ನಂತರ ೧೯೭೮ರ ಸೆಪ್ಟೆಂಬರ್ ತಿಂಗಳ ಕೊನೆಗೆ ಕೋಲೂರಿ ಹೆಜ್ಜೆಯಿರಿಸಿ ನಡೆಯುವ ಸ್ಥಿತಿಗೆ ಬಂದಿದ್ದ ಕಾಳಿಂಗರಾಯರನ್ನು ಬೌರಿಂಗ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಸೋಹನ್, ಮೋಹನ್ ಕುಮಾರಿಯವರು ತಮ್ಮ ಮನೆಗೆ ಕರೆತಂದರು.

ಈ ಅವಧಿಯಲ್ಲಿ ರಾಯರು ಯಾವುದೇ ಕಾರ್ಯಕ್ರಮವನ್ನು ಕೊಡುವುದು ಸಾಧ್ಯವಾಗದಿದ್ದುದರಿಂದ ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ವರಮಾನ ಸೊನ್ನೆ. ಅವರ ಕಾಲಿನ ರಿಪೇರಿಗಾದ ಖರ್ಚು ಊಹೆಗೆ ನಿಲುಕದ್ದು. ಇಷ್ಟಾದರೂ ರಾಯರು ತಮ್ಮ ಚಟುವಟಿಕೆಗಳೇನ್ನನ್ನೂ ಚುಟುಕುಗೊಳಿಸಿರಲಿಲ್ಲ. ಬದಲಿಗೆ ಮತ್ತಷ್ಟು ಚುರುಕುಗೊಳಿಸಿದ್ದರು. ಮನೆಯಲ್ಲೇ ಕುಳಿತು ಮಾಡುವುದಾದರೂ ಏನಿದೆ? ಸುಮ್ಮನೆ ಸಿಗರೇಟು ಸೇದುವುದು, ಇಲ್ಲಾ ಬ್ರಾಂದಿ, ವಿಸ್ಕಿ ಹೀರುವುದು, ಇಲ್ಲಾ ಮಲಗುವುದು, ಇದಿಷ್ಟೇ ಕಾಳಿಂಗರಾಯರ ದೈನಂದಿನ ಕಾರ್ಯಕ್ರಮವಾಯಿತು.

ಕಾಳಿಂಗರಾಯರು ಈ ದಾರುಣ ಸ್ಥಿತಿಯಲ್ಲಿದ್ದಾಗ ಒಮ್ಮೆ ನಾನವರನ್ನು ಕಂಡೆ. ಎರಡು ಮೂರು ದಿನಗಳಿಂದ ಕ್ಷೌರ ಕಾಣದ ನೆರೆತ ಪುರುಚಲು ಗಡ್ಡ ಮೀಸೆಯಿಂದ ಆವೃತವಾಗಿದ್ದ ಅವರ ಮುಖ ಬಾಡಿ ಬರಡಾಗಿ ಮುದುಡಿಕೊಂಡಿತ್ತು. ಉಕ್ಕಿನ ಮುಖದ ರಾಯರ ನೆತ್ತಿಯ ಮೇಲೆಲ್ಲಾ ಸುಕ್ಕಿನ ಆಳವಾದ ಗೆರೆಗಳು. ಕಣ್ಣಂಚಿನಲ್ಲಿ ಕಟ್ಟಿ ಒಣಗಿದ ಜಿಬುರು. ಕರಕಲಾಗಿದ್ದ ತುಟಿಗಳು.

ಜೀವನದ ಹಂಗನ್ನೇ ತೊರೆದ, ನೂರರ ಗಡಿಯನ್ನೂ ಮೀರಿದ ವೃದ್ಧ. ವ್ಯಕ್ತಿಯಂತೆ ನನಗಂದು ಕಾಳಿಂಗರಾಯರು ಕಂಡರು! ದುರ್ಬಲತೆ ಹಾಗೂ ವೃದ್ಧಾಪ್ಯ ರಾಯರನ್ನು ಮೆಟ್ಟಿ ಮೆರೆದಿತ್ತು.

ಈ ದಿಶೆಯಲ್ಲಿದ್ದ ರಾಯರನ್ನು ಗುರುತಿಸಲು ನನಗೆ ಕ್ಷಣವೆರಡು ಬೇಕಾಯಿತು. ಬಾಗಿಲಲ್ಲಿ ನಿಂತಿದ್ದ ನನ್ನನ್ನೇ ನೆಟ್ಟ ಶೂನ್ಯ ದೃಷ್ಟಿಯಿಂದ ಗರಬಡಿದವರಂತೆ ನೋಡುತ್ತಾ ದಿಂಬಿಗೊರಗಿ ಕುಳಿತಿದ್ದ ಕಾಳಿಂಗರಾಯರನ್ನು ಕಂಡಾಗ ಅಯ್ಯೋ ಎನಿಸಿತು.

ಅದೇ ಹಿಂದಿನ ದಿನಗಳಲ್ಲಿ, ಬಾಗಿಲಲ್ಲಿ ನನ್ನನ್ನು ಕಂಡೊಡನೆ ‘ಹಲೋ ಕೇಶವ’ ಎಂದು ಕರೆದು ಉಪಚರಿಸುತ್ತಿದ್ದ ಕಾಳಿಂಗರಾಯರು ಅದೇನನ್ನೂ ಮಾಡದೆ ಆಕಾಶವೇ ತಲೆಯ ಕಳಚಿ ಬಿದ್ದಿರುವುದೋ ಎಂಬಂತೆ ಕೊರಗುತ್ತಾ ಸುಮ್ಮನೆ ಕುಳಿತಿದ್ದದ್ದನ್ನು ಕಂಡು ಆಶ್ಚರ್ಯವಾಯಿತು.

ನಾನೇ ಮುನ್ನೆಡೆದು ಬಳಿ ಸಾರಿ ಅವರ ಮೈಯನ್ನು ನೇವರಿಸುತ್ತಾ ‘ಕಾಳಿಂಗ್ರಾಯ್ರೆ’ ಎಂದೆ. ನಿಧಾನವಾಗಿ ನನ್ನತ್ತ ತಿರುಗಿದ ಅವರು ಕ್ಷೀಣವಾದ ಸ್ವರದಲ್ಲಿ ‘ಈಗೆಲ್ಲಿದ್ದೀಯಯ್ಯಾ’? ಎಂದರು. ನಾನೀಗ ಹಾಸನದಲ್ಲಿದ್ದೀನಿ’ ಎಂದೆ. ‘ನೋಡಿ ಬಹಳ ದಿವಸವಾಯ್ತು. How is your wife and children?’ ಎಂದರು. ‘ಚೆನ್ನಾಗಿದ್ದಾರೆ ಸಾರ್’ ಎಂದೆ. ನಂತರ ನಾನೇ ಮಾತು ಮೂಮದುವರಿಸಿ ‘ನೀವು ಹೇಗಿದ್ದೀರಿ ರಾಯ್ರೆ. ಈಗ ಮೊದಲ್ನಂತೆ ಓಡಾಡೋಕ್ಕೆ ಆಗುತ್ಯೇ’ ಎಂದೆ. ಅದಕ್ಕೆ ರಾಯರು ಮೃದುವಾಗಿ ನಕ್ಕು ಓಡೋದು ಆಡೋದು ಇವೆಲ್ಲಾ ಇತಿಹಾಸದ ಮಾತಾಗಿ ಹೋಯ್ತಯ್ಯ. ಇನ್ನೇನಿದ್ರು ಇಷ್ಟೇ, ಒಂದ್ರೀತಿ retired life, but without pension’ ಎಂದಾಗ ನನಗೆ ಕರುಳು ಚುರುಕ್ಕೆಂದಿತು.

ಅಷ್ಟು ಹೊತ್ತಿಗೆ ಏನನ್ನೋ ತರಲು ಹೊರಗೆ ಹೋಗಿದ್ದ ಸೋಹನ್ ಕುಮಾರಿಯವರು ಬಂದರು. ಮತ್ತೆ ಇವರಿಬ್ಬರೊಡನೆ ಅದೂ ಇದೂ ಮಾತನಾಡುತ್ತಾ ಕುಳಿತೆ. ರಾಯರ ಈ ದುರ್ದಿನಗಳಲ್ಲಿ ಪ್ರತಿ ಹಂತದಲ್ಲೂ ಸಹಕರಿಸಿ, ಕಾಳಿಂಗರಾಯರ ಏಳಿಗಾಗಿ ಶ್ರಮಿಸಿ ನಾನಾ ರೀತಿಯಲ್ಲಿ ಸಹಾಯ ಮಾಡಿದ ವಾಟಾಳ್ ನಾಗರಾಜ್, ಬಿ.ಎಸ್.ವಿಶ್ವನಾಥನ್, ಮೈಸೂರು ಶೇಷಗಿರಿರಾವ್, ಬಿchi, ಮುಂತಾದ ಹಲವರನ್ನು ಕಾಳಿಂಗರಾಯರು ಹಾಗೂ ಸೋಹನ್ರವರು ಹೃತ್ಪೂರ್ವಕವಾಗಿ ನೆನದು ಇವರೆಲ್ಲರ ಸ್ನೇಹ ಸಂಪರ್ಕವನ್ನು ಕೊಂಡಾಡಿದರು., ಕಣ್ಣೊರಸಿಕೊಳ್ಳುತ್ತ. ನಂತರ ಮೇಲೆದ್ದ ನಾನು ಸಂಕೋಚದಿಂದ ‘Can I be of any help to you Mr.Rao? ಎಂದೆ. ಅದಕ್ಕವರು ನನ್ನನ್ನೊಮ್ಮೆ ದಿಟ್ಟಿಸಿ  ‘Of course I am badly in need of something’ ಎಂದರು. ‘ಏನ್ಹೇಳಿ ಸಾರ್’ ಎಂದೆ. ಅದಕ್ಕವರು ಇನ್ನೇನಿಲ್ಲ. ಜಾಣಮರೀ ಹಾಗೆ ಕೆಳಗ್ಹೋಗಿ ಒಂದು ಮ್ಯಾಚ್ ಬಾಕ್ಸ್ ಮತ್ತೆ ಒಂದು ಸಿಗರೇಟು ಪ್ಯಾಕನ್ನ ತಂದ್ಬಿಡು, if you don’t mind’ ಎಂದರು. ಅದಕ್ಕೆ ನಾನು ‘with great pleasure’  ಎಂದವನೇ ಕೆಳಗಿಳಿದು ಬಂದು ಅಲ್ಲೇ ಹತ್ತಿರದಲ್ಲಿದ್ದ ಅಂಗಡಿಯೊಂದರಿಂದ ಅವೆರಡನ್ನು ಕೊಂಡು ರಾಯರಿಗೆ ತಲುಪಿಸಲು ಅವರ ಮನೆಯತ್ತ ತಿರುಗಿದೆ. ಅಷ್ಟರಲ್ಲಿ ಬಾಲ್ಕನಿಯಲ್ಲಿ ಕುಂಟುತ್ತಾ ಬಂದು ನಿಂತಿದ್ದ ಕಾಳಿಂಗರಾಯರು, ‘ಮತ್ತೆ ಮೆಟ್ಲ್ಹುತ್ತಿ ತೊಂದ್ರೇನ ತೊಗೋ ಬೇಡಯ್ಯ. Just throw them, I am capable of catching them’ ಎನ್ನಲು, ‘O.K. then, Catch’ ಎನ್ನುತ್ತಾ ಬೆಂಕಿಪೊಟ್ಟಣ ಹಾಗೂ ಸಿಗರೇಟು ಪ್ಯಾಕನ್ನು ಒಂದರ ಮೆಲೊಂದರಂತೆ ಎಸೆದೆ. ಅವರೆಡನ್ನೂ ಆತುಕೊಂಡ ಕಾಳಿಂಗರಾಯರು ನನ್ನತ್ತ ಬಾಗಿ ‘Do you find me alert and fine’,  ಎನ್ನಲು very fine, keep it up’ ಎಂದು ಹೇಳಿ ಅವರಿಂದ ಬೀಳ್ಕೊಂಡೆ.

ಅದೇ ಕೊನೆ, ಮತ್ತೆ ನಾನು ಕಾಳಿಂಗರಾಯರನ್ನು ಕಾಣಲೇ ಇಲ್ಲ. ೧೯೭೮ರ ಸೆಪ್ಟೆಂಬರ್ ತಿಂಗಳ ಕೊನೆಗೆ ಕೋಲೂರಿ ಹೆಜ್ಜೆಯಿರಿಸಿ ನಡೆಯುವ ಸ್ಥಿತಿಗೆ ಬಂದಿದ್ದ ಕಾಳಿಂಗರಾಯರನ್ನು ಬೌರಿಂಗ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಮನೆಗೆ ಕರೆತಂದಿದ್ದರಲ್ಲವೇ, ನಂತರ ಮತ್ತೆ ರಾಯರಿಗೆ ಮನೆಯಲ್ಲಿ ಶುಶ್ರೂಷೆ, ಒಂದು ರೀತಿಯಲ್ಲಿ ಬಾಣಂತನ. ಕೆಲ ಕಾಲದ ನಂತರ ರಾಯರು ಮತ್ತೆ ಚೇತರಿಸಿಕೊಂಡರು. ಅವರ ಗುಳಿ ಬಿದ್ದ ಕಣ್ಣು, ಕೆನ್ನೆಗಳು ಬುಬ್ಬಿಕೊಂಡು ಮೊದಲಿನಂತಾದುವು. ರಾಯರ ಮುಖದಲ್ಲಿ ಮತ್ತೆ ತೇಜಸ್ಸು ಮೂಡಿತು. ಮೊದಲಿನಂತೆ ಸಲೀಸಾಗಿ ಓಡಾಡಲು ಆಗದಿದ್ದರೂ ಕೋಲೂರಿಕೊಂಡೇ ಕಾಳಿಂಗರಾಯರು ಕಾರ್ಯಕ್ರಮಗಳನ್ನು ಕೊಡಲಾರಂಭಿಸಿದರು.

೧೯೭೮ರಲ್ಲಿ ಸುಮಾರು ವರ್ಷವಿಡೀ ಮಲಗಿದ್ದ ಕಾಳಿಂಗರಾಯರು ನಂತರ ೧೯೮೧ರ ಮೇ ತಿಂಗಳವರೆಗೆ ಅಲ್ಲಿಲ್ಲಿ ಕರೆಬಂದ ಕಡೆ ತಮ್ಮ ವೃಂದದೊಡನೆ ಹಾಡಿ ಬಂದರು. ಮತ್ತೆ ೧೯೮೧ರ ಜೂನ್ ತಿಂಗಳಲ್ಲಿ ತೀರ ನಿಶ್ಯಕ್ತರಾದ ಕಾಳಿಂಗರಾಯರನ್ನು ವಿಶ್ವನಾಥನ್, ವಾಟಾಳ್ ಹಾಗೂ ಬೀಚೀಯವರ ಬಲವಂತದಿಂದ West End Hotel ಬಳಿ ಇರುವ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಲಾಯಿತು. ಮತ್ತಲ್ಲಿ ತಿಂಗಳಾದ್ಯಂತ ಚಿಕಿತ್ಸೆ.

ನಂತರ ಸಾವನ್ನಪ್ಪಲು ತಿಂಗಳೆರಡು ಉಳಿದಿದ್ದಾಗ ‘ತರಂಗ’ ಎಂಬ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಒಪ್ಪಿಕೊಂಡ ಕಾಳಿಂಗರಾಯರು ಮದ್ರಾಸಿಗೆ ತೆರಳಿ ತಮ್ಮ ‘ಕಾರ್ಯಭಾರವನ್ನು ಇಡೀ ಚಿತ್ರರಂಗ ಶ್ಲಾಘಿಸುವ ರೀತಿಯಲ್ಲಿ ನಿರ್ವಹಿಸಿ, ಆ ಚಿತ್ರದ ಹಾಡುಗಳೆಲ್ಲದರ ರಿಕಾರ್ಡಿಂಗ್ ಮುಗಿಸಿದರು. ಈ ಚಿತ್ರದ ಹಾಡುಗಳ ರೆಕಾರ್ಡಿಂಗಿನಲ್ಲಿ ವಾದ್ಯವೃಂದದ ಮುಖ್ಯಸ್ಥನಾಗಿದ್ದು ರಾಯರೊಡನೆ ಸಹ ಸಂಗೀತ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದು ನನ್ನ ಗೆಳೆಯ ಗುಣಸಿಂಗ್, ಅವನು ಹೇಳಿದಂತೆ ಈ ಚಿತ್ರದ ಹಾಡುಗಳೆಲ್ಲವೂ ಅಪೂರ್ವವಾಗಿದ್ದು ‘ಸೂಪರ್ ಹಿಟ್’ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದ. ಆದರೆ ಈ ಚಿತ್ರ, ‘ತರಂಗ’ ಬೆಳಕು ಕಾಣಲೇ ಇಲ್ಲ.

ಚಿತ್ರಜಗತ್ತಿನಲ್ಲಿ ‘ತರಂಗ’ಕ್ಕೆ ಸಂಗೀತವನ್ನು ನಿರ್ದೇಶಿಸಿದ್ದೇ ಕಾಳಿಂಗರಾಯರ ಕೊನೆಯ ಕಾರ್ಯ. ಈ ದಿಶೆಯಲ್ಲಿ ರಾಯರ ಪಕ್ಕವಿದ್ದು ಸಹಕರಿಸಿದ, ಅವರ ಆಪ್ತ, ಜಿ.ಕೆ.ವೆಂಕಟೇಶ್ರವರನ್ನೂ ಸಿ.ಅಶ್ವತ್ ಅವರನ್ನೂ ಮೆಚ್ಚಲೇಬೇಕು.

* * *