ಶ್ರೀ ಕೇಶವರಾವ್ ಅವರು ನನ್ನ ಹಳೆಯ ಸ್ನೇಹಿತರಲ್ಲೊಬ್ಬರು. ಅವರು ಕಾಳಿಂಗರಾಯರ ಜೀವನ ಮತ್ತು ಸಾಧನೆಯ ಬಗ್ಗೆ ಬರೆದಿರುವ ‘ಕನ್ನಡದ ಕೋಗಿಲೆ ಕಾಳಿಂಗರಾಯರು’ ಪುಸ್ತಕಕ್ಕೆ ಈ ಎರಡು ಮಾತನ್ನು ಬರೆಯಲು ನನಗೆ ಸಂತೋಷವಾಗುತ್ತಿದೆ.

ಕಾಳಿಂಗರಾಯರು ಮತ್ತು ನಾನು ಅನೇಕ ವರ್ಷ ನಿಕಟ ಗೆಳೆಯರಾಗಿದ್ದೆವು. ಅವರು, ಸೋಹನ್‌, ಮೋಹನ್‌ಹಾಗೂ ನಾನು ೧೯೫೦ ಮತ್ತು ೧೯೬೦ ದಶಕಗಳ ಅನೇಕ ಸಮಾರಂಭಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದೆವು. ಅವರ ಸಂಗಾತಿಯಾಗಿ ಅವರ ಹಾಡಿನ ಗುಂಪಿನಲ್ಲಿ ನಾನೂ ಸೇರಿಕೊಂಡಿದ್ದೆ. ಗುಂಪು ಹಾಡುಗಾರರಲ್ಲಿ ಒಬ್ಬನಾಗುವುದು ಕಷ್ಟದ ಕೆಲಸವೇ?

ಕಾಳಿಂಗರಾಯರ ಸಂಗೀತದ ವೈವಿಧ್ಯ ಮತ್ತು ಜೀವಂತ ಶಕ್ತಿ ಅದರ ಮಾಯಾಜಾಲದಲ್ಲಿ ಸಿಕ್ಕಿಕೊಂಡಿದ್ದ ನನಗೆ ಅವರ ಹಾಗೂ ಅವರ ಗುಂಪಿನ ಜೊತೆಯ ತಿರುಗಾಟ ನಿಜವಾದ excitement ಖುಷಿಯನ್ನು ತರುತ್ತಿತ್ತು. ಅದರಲ್ಲೂ ಚೆಲುವೆಯಾಗಿದ್ದ ಮೋಹನ್‌ಕುಮಾರಿಯರವರ ಜೊತೆ ಓಡಾಡುವುದು ಪ್ರಿಯಮಯವಾಗಿತ್ತು. ಆದರೆ ಒಬ್ಬ ವಿಶಿಷ್ಟರಾಗಿದ್ದ ರಾಯರ ಜೊತೆ ನಾನು ಕುಣಿಯುತ್ತ ಹಾಡುತ್ತ, ಅವರ ಮಾತು ಕೇಳುತ್ತ ದಿನ ರಾತ್ರಿ ಕಳೆಯುವುದು ಮತ್ತು ಅವರ ಜೊತೆಗಿದ್ದ ಸಮಯವನ್ನು ನನಗೆ ಮರೆಯಲು ಸಾಧ್ಯವಿಲ್ಲ.

ನಾನು ೧೯೬೪ ರಲ್ಲಿ ಅಮೆರಿಕಕ್ಕೆ ಹೊರಟು ಹೋದದ್ದರಿಂದ ಈ ಸಂಬಂಧ ಅಥವಾ ಈ ಸಹಜೀವನ ಅನಿವಾರ್ಯವಾಗಿ ಕಳಚಿಹೋಯಿತು.

ಕಾಳಿಂಗರಾಯರ uniqueness ಅವರ ಹತ್ತಿರ ಬಂದವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಈ ಕನ್ನಡದ ಕಲೆಗಾರ ಸಂಗೀತದಲ್ಲಿ ಅಪೂರ್ವ ಅನನ್ಯ ಪ್ರತಿಭೆಯನ್ನು ಹೊಂದಿದ್ದುದು ಸಾಕಷ್ಟು ಜನರಿಗೆ ಗೊತ್ತಿದೆ. ಆದರೆ ಅವರ ವ್ಯಕ್ತಿತ್ವದಲ್ಲೂ ಅಪೂರ್ವ, ಅನನ್ಯ ಉದಾರತೆ, ಸರಳತೆ (ಒಂದು ರೀತಿಯ ಆಕರ್ಷಕ ಮುಗ್ಧೆಯೆನ್ನಬಹುದು) ಮತ್ತು ನಿಯತ್ತುಗಳನ್ನು ಉಳ್ಳ ಮಹಾನುಭಾವರುಗಳಲ್ಲಿ ಈತ ಒಬ್ಬ ಎನ್ನುವ ವಿಷಯ ಜನಕ್ಕೆ ಬಹಳವಾಗಿ ಗೊತ್ತಿಲ್ಲ. ಈ ಎರಡೂ ವಿಷಯಗಳ ಬಗ್ಗೆ ಕೇಶವರಾಯರ ಕೃತಿ ಸಾಕಷ್ಟು ಸಾಕ್ಷಿ ಪುರಾವೆಗಳನ್ನು ಒದಗಿಸಿ, ಮೀಡಿಯಾ ಚಿತ್ರದ ಹಿಂದೆ ಇರುವ ನೈಜ ಕಾಳಿಂಗರಾಯರನ್ನು ಜೀವಂತ ಮಾಡಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸನ್ನೂ ಪಡೆಯುತ್ತದೆ.

ಕೇಶವರಾಯರಿಗೆ ಕಾಳಿಂಗರಾಯರ ಕೊರತೆಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಆದರೆ ಅವರಿಗೆ ಇವುಗಳನ್ನು ಮೀರಿದ ಕಾಳಿಂಗರಾಯರ ವ್ಯಕ್ತಿ – ಶಕ್ತಿ, ವ್ಯಕ್ತಿ – ಗುಣಗಳು ಮುಖ್ಯ. ಅದು ಸರಿಯಾದದ್ದೇ. ಯಾಕೆಂದರೆ, ಒಟ್ಟಿನಲ್ಲಿ ಕಾಳಿಂಗರಾಯರ ಬದುಕಿನ ಒಳಿತು ಅದರ ಕೆಡಕನ್ನು ಮೀರಿ ರಾರಾಜಿಸಿದ್ದರಲ್ಲಿ ನನಗೆ ಸಂದೇಹವಿಲ್ಲ. ಅಲ್ಲದೆ ಕೇಶವರಾಯರ ಪುಸ್ತಕ ನಮ್ಮನ್ನು ಸರಳವಾಗಿ, ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ಅದರ ಭಾಷೆ ರಾಯರ ಜೀವನದಲ್ಲಿ ನಡೆದ ಪ್ರಸಂಗಗಳ ಘಟನೆಗಳ ಆಯ್ಕೆ. ಅವುಗಳ ವಿವರಣೆ ಈ ಕೃತಿಗೆ ಸ್ವಾರಸ್ಯ ತಂದುಕೊಟ್ಟಿದೆ.

ಮನುಷ್ಯ (ಎಲ್ಲ ಜೀವಂತ ಪ್ರಾಣಿಗಳ ಹಾಗೆ) ತನ್ನನ್ನು ಸ್ಥಿರಪಡಿಸಿಕೊಳ್ಳಲು, ತನ್ನ ಇರುವನ್ನು ಭದ್ರಪಡಿಸಿಕೊಳ್ಳಲು (self – preservation) ಪ್ರಯತ್ನಿಸುತ್ತಾನೆ. ಆದರೆ ಅವನಿಗಿರುವ ಸ್ವ – ಪ್ರಜ್ಞೆ (self – conscience) ಅವನೇ ಕಲ್ಪಿಸಿಕೊಂಡಿರುವ ಆದರ್ಶಗಳು, ಮೌಲ್ಯಗಳು ಅವುಗಳಿಂದ ಉದ್ಭವಿಸುವ ಮನುಷ್ಯತ್ವ ಪರಿಕಲ್ಪನೆ – ಇವೆಲದರ ಒತ್ತಡವಿರಬಹುದು ಅಥವಾ ವಕ್ರತೆ ಮನುಷ್ಯನ ಒಂದು ಪ್ರವೃತ್ತಿಯೇ ಇರಬಹುದು. ಅಂತೂ ಮನುಷ್ಯ ಆಗಾಗ್ಗೆ (ಯೌವನದಲ್ಲಿ ಇದು ಅತೀವವಗಿರುತ್ತದೆ) ಸ್ವ-ನಾಶತರುವ (Self- destruction) ಚಟುವಟಿಕೆಗಳಲ್ಲಿ ನಿರತನಾಗುತ್ತಾನೆ.

ಈ ಎರಡನೇ ರೀತಿಯ ನಡೆವಳಿಕೆ ಒಂದು ಮಾರ್ಗದ / ವೈಖರಿಯ ಕಲಾವಿದರಲ್ಲಿ ಜಾಸ್ತಿ. ಈ ವಿಷಯದ ಬಗ್ಗೆ ಇಲ್ಲಿ ಚರ್ಚೆ ಮಾಡುವುದು ನನ್ನ ಉದ್ದೇಶವಲ್ಲ. ಆದರೆ ಇಷ್ಟು ಮಾತ್ರ ಹೇಳಬಹುದು, ಸೃಷ್ಟಿಶಕ್ತಿ ಪಡೆದ ಕಲಾವಿದನ ಸ್ಪಂದನ – ಪ್ರತಿಸ್ಪಂದನೆಗಳು ಅವನನ್ನು ಆಗಾಗ್ಗೆ ಸ್ಪನಾಶದ ದಿಕ್ಕಿನಲ್ಲಿ ದೂಡುತ್ತವೆ. ಆದರೆ ಕೆಲವರ ಸೃಷ್ಟಿ ಈ ರೀತಿಯ ಬದುಕಿನಿಂದಲೇ ಸಾಧ್ಯವೇನೋ ಎನ್ನಿಸುವುದು ನಿಜ. ಕಾಳಿಂಗರಾಯರ ಕುಡಿಯುವ ಚಟ ಅವರನ್ನು ನಾಶಮಾಡಿತು ಎಂದು ಹೇಳುವುದು ಸುಲಭ. ಹಾಗೂ self – righteous. ಆದರೆ ಅವರ ಸೃಷ್ಟಿಕಲೆ, ಅವರ ಕುಡಿಯುವ ಚಟ ಎರಡೂ ಜೊತೆ ಜೊತೆಗೇ ಪರಸ್ಪರತೆಯಿಂದ ಸಾಧ್ಯವಾಗಿರಬಹುದು. ಇಲ್ಲದಿದ್ದರೆ ಅವರ ಅನನ್ಯ ಸಂಗೀತವೇ ಸಾಧ್ಯವಾಗುತ್ತಿರಲಿಲ್ಲವೇನೋ ಎನ್ನುವ ಮಾತನ್ನು ಹೇಳುವುದು ಮನುಷ್ಯನ ಸೃಷ್ಟಿಶಕ್ತಿಯ ನಿಗೂಢತೆಯನ್ನು ನಮ್ರತೆಯಿಂದ ಒಪ್ಪಿಕೊಂಡಹಾಗೆ.

ಪ್ರಪಂಚದ ಸಾವಿರಾರು ಕಲಾವಿದರು ಈ ರೀತಿ ತಮ್ಮನ್ನು ತಾವೇ ಆಹುತಿ ಮಾಡಿಕೊಂಡಿರುವುದು ಸಾಮಾನ್ಯವಾಗಿ ತಿಳಿದ ವಿಷಯ. ಮುಖ್ಯವಾದ ಪಾಯಿಂಟು ಇದು.

ಕಾಳಿಂಗರಾಯರು ಒಂದು ಒಟ್ಟು phenomenon. ಇಂಗ್ಲಿಷ್‌ನಲ್ಲಿ ಹೇಳುವುದಾದರೆ, ಅವರು ಒಂದು package deal. ಪ್ಯಾಕೇಜನ್ನು ಪೂರ್ತಿ ಸ್ವೀಕರಿಸಬೇಕು. ಇಲ್ಲದಿದ್ದರೆ ಬಿಡಬೇಕು. ಕಾಳಿಂಗರಾಯರಂಥವರು ಒಡೆದು ತೆಗೆದುಕೊಳ್ಳಲು ಸಾಧ್ಯವಾಗುವ ಕೊಡುಗೆಯಲ್ಲ.

ಅವರ ಸ್ನೇಹಿತನಾದ ನನಗೆ ಅವರ ವ್ಯಕ್ತಿತ್ವದ ಅನೇಕ ಗುಣಗಳಲ್ಲಿ ಒಂದು ಮಾತ್ರ ದಂಗು ಬಡಿಸುವಂತಹುದು. ಅವರ ಸರಳ ಉದಾರತೆ (generosity of spiriti) ಇದು ಪ್ರಾಯಶಃ ಒಂದು ರೀತಿಯ detachment, ನಿರ್ಲಿಪ್ತತೆಯಿಂದ ಸಾಧ್ಯವೇನೋ. ನಾನು ಅವರ ಜೊತೆಯಲ್ಲಿದ್ದಾಗ ಅವರ ಈ ಗುಣ ಹೊರಬರದ ದಿನವೇ ಇಲ್ಲ ಅನ್ನಬಹುದು. ನಮ್ಮ ತಂದೆ ಒಬ್ಬ ಉದಾರಿ ಮನುಷ್ಯನಾಗಿದ್ದ, ನಿಜ. ಆದರೆ ಕಾಳಿಂಗರಾಯರ ಉದಾರತೆ ಅತಿ ವಿರಳ. ಅದಕ್ಕೆ ಮಿತಿಯೇ ಇಲ್ಲ ಅನ್ನಿಸುತ್ತಿತ್ತು. ಒಂದು ಕಾರ್ಯಕ್ರಮ ಮುಗಿದು ದುಡ್ಡು ಕೈಗೆ ಬಂದ ಕೂಡಲೇ. ರಾಯರ ಇಡೀ ಗುಂಪೇ ಅಡ್ಡಾಡಲು ಹೋಗುತ್ತಿದ್ದೆವು. ಷೂ ಅಂಗಡಿಗೋ, ಬಟ್ಟೇ ಅಂಗಡಿಗೋ ಹೋದರೆ, ಕಾಳಿಂಗರಾಯರು ಅಲ್ಲಿದ್ದವರೆಲ್ಲಾ ಏನಾದರೂ ಕೊಂಡುಕೊಳ್ಳುವವರೆಗೂ ಮುಷ್ಕರ ಹೂಡಿದವರಂತೆ ವರ್ತಿಸುತ್ತಿದ್ದರು. ಎಲ್ಲರಿಗೂ ಷರ್ಟ್ ಷೂ ಅಥವಾ ಇನ್ನೇನೋ! ಹೀಗದ್ದಾಗ ಕಾಳಿಂಗ ರಾಯರ ಕೈಯ್ಯಲ್ಲಿ ದುಡ್ಡು ಉಳಿಯುವುದು ಹೇಗೆ ಸಾಧ್ಯ? ಹಣವನ್ನು ನೀರಿನ ಹಾಗೆ ಖರ್ಚು ಮಾಡುವುದು ಕಾಳಿಂಗರಾಯರ ಕೇಸಿನಲ್ಲಿ ಬರೀ ಗಾದೆ ಮಾತಾಗಿರಲಿಲ್ಲ. ಅವರು ಹಣವನ್ನು ನೀರಿನ ಹಾಗೆಯೇ ಖರ್ಚು ಮಾಡುತ್ತಿದ್ದರು.

ಈ ರೀತಿಯ ಸ್ವಭಾವದ ವೈಪರೀತ್ಯ ಒಂದು ಪ್ರಸಂಗದಲ್ಲಿ ವ್ಯಕ್ತವಾದದ್ದು ನನಗೆ ಮರೆಯಲಾಗದ ನೆನಪು. ಕಾಳಿಂಗರಾಯರ ಬದುಕಿಗೆ, ಸಾಧನೆಗೆ, ವ್ಯಕ್ತಿತ್ವಕ್ಕೆ ಈ ಪ್ರಸಂಗ ಸಂಕೇತವಾಗಿ ಉಳಿದುಬಿಟ್ಟಿದೆ. ಈ ಪ್ರಸಂಗ ನನಗೆ ನೆನಪು ಬಂದಾಗಲೆಲ್ಲ ಕಾಳಿಂಗರಾಯ ನನ್ನ ಮನಸ್ಸಿನಲ್ಲಿ ಸಾಕ್ಷಾತ್ಕಾರವಾಗುತ್ತಾರೆ.

ಒಂದು ಸಾಯಂಕಾಲ ನಾನೂ ಅವರೂ ಕಂಟೋನ್ಮೆಂಟಿನ ಬಾರೊಂದಕ್ಕೆ ಹೋಗಿ ಎಂದಿನ ಹಾಗೆ ಕುಡಿಯುವುದರಲ್ಲಿ ನಿರತರಾಗಿದ್ದೆವು. ಆ ಬಾರಿನಲ್ಲಿ ಅಂದು ರಾತ್ರಿ ಒಂದು ಬ್ಯಾಂಡ್‌ನ ಸಂಗೀತ ಪ್ರದರ್ಶನ. ಕಾಳಿಂಗರಾಯರು ಕ್ಲಾರಿಯೋನೆಟ್ ನುಡಿಸುವವನನ್ನು ಬಹಳ ಮೆಚ್ಚಿದರು. ಅವನ ಜೊತೆ ಮಾತಾಡಿ ಬಂದರು. ತಮಗೆ ಬೇಕಾದ ಸಂಗೀತವನ್ನು ನುಡಿಸಲು ಹೇಳಿದರು. ಅವನು ತುಂಬಾ ಆಸ್ತೆಯಿಂದ ನುಡಿಸಿದ. ಬಾರು ಮುಚ್ಚಿದ ಮೇಲೂ ಇನ್ನೊಂದು ಡ್ರಿಂಕ್ (one for the road) ತೊಗೊಂಡು ನಾನೂ ಕಾಳಿಂಗರಾಯರೂ ಟ್ಯಾಕ್ಸಿಯಲ್ಲಿ ಹೊರಟೆವು. ಸೋಹನ್ ಕುಮಾರಿ, ಮೋಹನ್‌ಕುಮರಿ ವ್ಯಾಕುಲದಿಂದ ಕಾಯುತ್ತಿರುತ್ತಾರೆಂದು ನಮ್ಮಿಬ್ಬರಿಗೂ ಗೊತ್ತಿತ್ತು. ನಾನು ಅದನ್ನು ಹೇಳಿದೆ. ಕಾಳಿಂಗರಾಯರು ಟ್ಯಾಕ್ಸಿಯವನಿಗೆ ಜೋರಾಗಿ ನಡೆಸು ಎಂದು ಹೇಳಿ ನನ್ನ ಕಡೆ ತಿರುಗಿ ಉದ್ಗಾರ ತೆಗೆದರು. “ಶ್ರೀನಿವಾಸ, ನೋಡಿಲ್ಲಿ! ಆ clarionet – player ಅದ್ಭುತವಾಗಿ ಇಂದು ನುಡಿಸಿದ ಅಲ್ವಾ? He was great! ಅದಕ್ಕೆ ನನ್ನ watch ಕೊಟ್ಬಿಟ್ಟೆ” ನಾನೊಂದು ನಿಮಿಷ ನನಗಾದ shock ನಲ್ಲೇ ಇದ್ದೆ. ಆ ಚಿನ್ನದ ವಾಚು ಇವರಿಗೆ ಬಂದ ಒಂದು ಸನ್ಮಾನದ ಕುರುಹು, ಉಡುಗೊರೆ, ಸೋಹನ್‌ಮೋಹನ್‌, ಕಾಳಿಂಗರಾಯರು ಅದನ್ನು ಹಾಕಿಕೊಂಡು ಕುಡಿಯಲು ಹೋಗಲು ಬಿಡುತ್ತಿರಲಿಲ್ಲ. ಅದು ಹೇಗೋ, ಕೆಟ್ಟ ಅದೃಷ್ಟ ಅವತ್ತು, ರಾಯರು ಆ ವಾಚನ್ನು ಕಟ್ಟಿಕೊಂಡು ಬಂದಿದ್ದರು. ಅದನ್ನೀಗ ದಾನವಿತ್ತು ಮಗುವಿನ ಹಾಗೆ ಅದರ ಬಗ್ಗೆ excited ಆಗಿ ಮಾತನಾಡುತ್ತಿದ್ದರು. ಸುಮಾರು ಎರಡು ಗಂಟೆ ರಾತ್ರಿ, ಮನೆ ಸೇರಿದ ಮನೆ ಸೋಹನ್‌ಮೋಹನ್‌ಅವರು ರಾಯರನ್ನಷ್ಟೇ ಅಲ್ಲ, ನನ್ನನ್ನೂ ತರಾಟೆಗೆ ತೆಗೆದುಕೊಂಡರು. ಅದು ಹೇಗೇ ಇರಲಿ, ನಾನು, ಸೋಹನ್‌, ಮೋಹನ್‌ಮಾರನೇ ದಿನ ಬೆಳಿಗ್ಗೆ ಆ ಬಾರಿಗೆ ಹೋಗಿ ಆ ಕ್ಲಾರಿಯೋನೆಟ್ ಪ್ಲೇಯರ್‌ನ ಮನೆ ಅಡ್ರಸ್ ತಿಳಿದುಕೊಂಡು ಅವರ ಮನೆಗೆ ಹೋಗುವುದಕ್ಕೆ ಮುಂಚೆ ಅವನಿಗೊಂದು HMT ವಾಚು ಕೊಂಡುಕೊಂಡೆವು. ಅವನ ಮನೆಯಲ್ಲಿ ಅವನಿನ್ನೂ ಎದ್ದಿರಲೇ ಇಲ್ಲ. ಅವನಿಗೆ ನಾವು ತಂದ ವಾಚನ್ನು ಇಟ್ಟುಕೊಂಡು ಕಾಳಿಂಗರಾಯರ ಸನ್ಮಾನದ ಗೋಲ್ಡ್ ವಾಚನ್ನು ವಾಪಸ್ಸು ಕೊಡಲು ಒಪ್ಪಿಸಲು ಸುಮಾರು ಅರ್ಧ ಘಂಟೆ ಬೇಕಾಯಿತು. ಈ ಘಟನೆ ಕಾಳಿಂಗರಾಯರ ಆಸೆ ಇಲ್ಲದ ಮೂಲಭೂತ ಸ್ವಭಾವವನ್ನು ಬೆಳಕಿಗೆ ತರುತ್ತದೆಂದು ನನಗನ್ನಿಸುತ್ತದೆ. ಮನುಷ್ಯ ಮಾತ್ರರಾದ ನಮಗೆಲ್ಲರಿಗೂ ಇದು ಕಷ್ಟ ಎನ್ನುವುದು ಗೊತ್ತಿದ್ದದ್ದೇ.

ಕಾಳಿಂಗರಾಯರು ಖಯಾಲಿ ಮನುಷ್ಯ. ಶೋಕೀಲಾಲರೆನ್ನುವಷ್ಟು style ಬೇಕಿದ್ದವರು ಎನ್ನುವುದು ನಿಜ. ಆದರೆ ಇದು ಎಷ್ಟು ಸತ್ಯವೋ ಹಾಗೆಯೇ ಸ್ವಂತ ಸ್ವಾರ್ಥ ಇಲ್ಲದೆ, ಉದಾರ ಚಿತ್ತರಾಗಿ, ಉದಾರಹಸ್ತರಾಗಿ ಇರುವುದು ಅಷ್ಟೇ ಸತ್ಯವಾಗಿತ್ತು, ಕಾಳಿಂಗರಾಯರ ಬದುಕಲ್ಲಿ.

ಕೇಶವರಾಯರು ನಾನಾ ರೀತಿಯಲ್ಲಿ ಕಾಳಿಂಗರಾಯರ ವರ್ಣರಂಜಿತ ಬದುಕನ್ನು, ವ್ಯಕ್ತಿತ್ವವನ್ನು ಸಂಗೀತ ಸಾಧನೆಯನ್ನು ಆದಷ್ಟು ಪ್ರಾಮಾಣಿಕವಾಗಿ ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಕಾಳಿಂಗರಾಯರಂತಹ ಭೋಗಿ ತ್ಯಾಗಿ ಕಲಾವಿದರನ್ನು ನಾಡಿನ ಸ್ಮರಣೆಯಲ್ಲಿಡುವುದು ಬಹಳ ಆವಶ್ಯಕವಾದ, ಉತ್ತಮವಾದ ಕೆಲಸ.

ಕೇಶವರಾಯರ ಪುಸ್ತಕ ಕಾಳಿಂಗರಾಯರ ಸಂಗೀತದ ಹಾಗೆಯೇ ಸಹಸ್ರಾರು ಜನರ ಹೃದಯವನ್ನು ಸೇರಲಿ ಎಂದು ನನ್ನ ಹಾರೈಕೆ. ನನಗೆ ನನ್ನ ಪ್ರೀತಿಯ ಕಾಳಿಂಗರಾಯರ ಬಗ್ಗೆ ಈ ಎರಡು ಮಾತನ್ನು ಬರೆಯಲು ಅವಕಾಶ ಕೊಟ್ಟಿದ್ದಕ್ಕೆ ನಾನು ಕೇಶವರಾಯರಿಗೆ ಕೃತಜ್ಞ.

ಇತಿ,
ಪಿ.ಶ್ರೀನಿವಾಸರಾವ್
ಬೆಂಗಳೂರು
ಏಪ್ರಿಲ್ ೧೫, ೧೯೯೩

* * *