ಉಸಿರಡಗಿದ್ದ ರಾಯರ ಪಾರ್ಥಿವ ಶರೀರವನ್ನು ಕೆಲ ಕ್ಷಣಗಳ ಮುಂಚೆ ಅವರು ಕೂತ ಕಣ್ಮುಚ್ಚಿದ ಸ್ಥಳದಲ್ಲೇ ಹಾಸಿದ ಚಾಪೆಯ ಮೇಲೆ ಮಲಗಿಸಿದ್ದಾಯಿತು. ರಾಯರು ಸ್ವರ್ಗಸ್ಥರಾದ ಸುದ್ದಿಯನ್ನು ಬಿತ್ತರಿಸಲೆಂದು ಸೋಹನಕುಮಾರಿಯವರು ಆಕಾಶವಾಣಿಗೆ ದೂರವಾಣಿಯ ಮೂಲಕ ಸುದ್ದಿ ಮುಟ್ಟಿಸಿದರು. ಆಕಾಶವಾಣಿಯಲ್ಲಿದ್ದ ಕಲಾವಿದರೆಲ್ಲಾ ಕಾಳಿಂಗರಾಯರಿಗೆ ಬೇಕಾದವರೇ. ಕೆಲ ಕಾಲದ ಹಿಂದೆಯಷ್ಟೇ ಈ ಕಾಳಿಂಗರಾಯರು ತಮ್ಮ ನಿಲಯಕ್ಕೆ ಬಂದು ಹಾಡಿ ಎಲ್ಲರೊಡನೆ ಹರಟೆ ಹೊಡೆದು ನಗುನಗುತ್ತಲೇ ಹೋದವರು ಈಗ ಹೀಗೆ ಹಠಾತ್ತನೆ ಎಲ್ಲರನ್ನಗಲಿ ಹೊರಟೇ ಹೋಗುತ್ತಾರೆಂದು ಅವರಾರೂ ಯೋಚಿಸಿಯೂ ಇರಲಿಲ್ಲ. ರಾಯರು ಕಾಲವಶರಾದ ಸುದ್ದಿಯನ್ನು ಕೇಳುತ್ತಲೆ ಎಲ್ಲರಿಗೂ ಸಿಡಿಲೇ ಬಡಿದಂತೆ ಭಾಸವಾಯಿತು. ಅಲ್ಲಿದ್ದ ಕಲಾವಿದರು, ತಂತ್ರಜ್ಞರು, ಸಿಬ್ಬಂದಿ ವರ್ಗದವರನ್ನೆಲ್ಲಾ ಮೃತ್ಯುಮೌನ ಆವರಿಸಿತು. ಮೂಕವಿಸ್ಮಿತರಾಗಿ  ನಿಸ್ತೇಜರಾದ ಅವರನ್ನು ಶೋಕಸಾಗರದ ಅಲೆಗಳು ಅಪ್ಪಳಿಸಿದಾಗ ಅವರಲ್ಲನೇಕರು ಅತ್ತರು. ಕೆಲವರು ಗರಬಡಿದವರಂತೆ ಕುಸಿದು ಕುಳಿತುಬಿಟ್ಟರು.

ಅಂದು ಮುಂಜಾನೆ ಕನ್ನಡದ ಕೋಗಿಲೆ ಕಾಳಿಂಗರಾಯರು ಕಲೈಕ್ಯರಾದರೆಂದೂ, ಅವರ ಅಂತ್ಯಕ್ರಿಯೆ ಅಂದೇ ಮಧ್ಯಾಹ್ನ ನೆರವೇರುವುದೆಂದೂ ತನ್ನ ಕಾರ್ಯಕ್ರಮಗಳ ನಡುವೆ ಒಂದೆರಡು ಬಾರಿ ಆಕಾಶವಾಣಿ ಈ ವಿಷಯವನ್ನು ಬಿತ್ತರಿಸಿತು.

ಕಾಳಿಂಗರಾಯರು ಮರಣವನ್ನಪ್ಪಿದ ಸಮಯದಲ್ಲಿ ನಾನು ಹಾಸನದ ಎಲ್.ವಿ. ಪಾಲಿಟೆಕ್ನಿಕ್ಕಿನಲ್ಲಿ ಪಾಠ ಹೇಳುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಬಂದಾಗ ಮಧ್ಯಾಹ್ನ ಹನ್ನೆರಡೂ ಮೂವತ್ತರ ಸಮಯ. ಅಲ್ಲಿಯವರೆಗೆ ಬೆಂಗಳೂರಿನ ಬಾನುಲಿ ಕೇಂದ್ರ ಎರಡು ಮೂರು ಬಾರಿ ರಾಯರ ಮರಣ ವಾರ್ತೆಯನ್ನು ಬಿತ್ತರಿಸಿದ್ದರೂ ಆ ಸುದ್ದಿ ನನಗೆ ತಿಳಿದದ್ದು ನಾನು ಮನೆಗೆ ಕಾಲಿಟ್ಟಾಗಲೇ.

ಬಾಗಿಲನ್ನು ತೆಗೆದ ನನ್ನ ಹೆಂಡತಿ ‘ಬನ್ನಿ, ವಿಚಾರ ತಿಳೀತೇ?’ ಎಂದು ಸಪ್ಪೆ ಮೋರೆಯಿಂದ ಕೇಳಿದಾಗ ನನಗೆ ಗಾಬರಿಯಾಯಿತು. ‘ಯಾಕೆ? ಏನ್ಸಮಾಚಾರ?’ ಎಂದೆ ಎಲ್ಲಿಲ್ಲದ ದುಗುಡದಿಂದ. ಅದಕ್ಕೆ ನನ್ನವಳು ನನ್ನ ಕೈ ಹಿಡಿದು ‘ನಮ್ಮ ಕಾಳಿಂಗ್ರಾಯ್ರು ಈವತ್ತು ಬೆಳಿಗ್ಗೆ…’ ಎಂದು ಮುಂದೆ ಮಾತನ್ನು ಮುಂದುವರಿಸಲಾರದೆ ಬಿಕ್ಕಲಾರಂಭಿಸಿದಾಗ ಅವಳ ಹೇಳಬೇಕೆಂದಿದ್ದ ವಿಷಯ ಅರ್ಥವಾಗಿ ನನ್ನವಳನ್ನು ಹಿಡಿದು ಕುಲುಕುತ್ತಾ ‘ಯಾರು ಹೇಳಿದ್ದು? ಎಲ್ಲಿ?’ ಎಂದು ಚೀರಿದೆ. ವಿಷಯವಲ್ಲಾ ತಿಳಿಯಿತು. ಈ ಸುದ್ದಿ ತಿಳಿದು ಮಿಕ್ಕವರಿಗಾದ ಅನುಭವವೇ ನನಗೂ ಆಯಿತು. ಒಮ್ಮೆಲೇ ಹಿಂದಿನದೆಲ್ಲಾ ನೆನಪಾಗಿ ಕಣ್ಣೀರು ಕಟ್ಟೆಯೊಡದು ಕೋಡಿ ಹರಿಯಿತು. ನೆನಪುಗಳು, ಒಂದೇ ಎರಡೇ?

ಕಾಳಿಂಗರಾಯರು ನನಗೆ ಗೆಳೆಯರಷ್ಟೇ ಆಗಿರಲಿಲ್ಲ. ಒಡಹುಟ್ಟಿದ ಅಣ್ಣನಂತಿದ್ದವರು. ನಾವಿಬ್ಬರೂ ಬೆಸೆದು ಓಡಾಡುತ್ತಿದ್ದುದನ್ನು ನೋಡಿ ‘ನೀವಿಬ್ರೂ ಹಿಂದಿನ ಜನ್ಮದಲ್ಲಿ ಅವಳಿಜವಳಿಗಳಾಗಿದ್ರೇನ್ರಿ?’ ಎಂದು ನನ್ನವರು ಹಲವರು ಕಿಚಾಯಿಸುತ್ತಿದ್ದರು.

ಮೈಸೂರಿನ ಮೆಟ್ರೋಪೋಲ್, ಗ್ರೀನ್ಸ್ ಮತ್ತೆ ಬೆಂಗಳೂರಿನ ಮೆಟ್ರೋ ಬಾರ್ಗಳಿಗೆ ರಾಯರ ಜೊತೆಗೂಡಿ ಅದೆಷ್ಟೋ ಬಾರಿ ಹೋಗಿದ್ದೇನೆ. ಪುಣ್ಯಾತ್ಮ ಒಮ್ಮೆಯಾದರೂ ನನಗೆ ಕುಡಿಯುವಂತೆ ಹೇಳಲಿಲ್ಲ, ಪ್ರಚೋದಿಸಲಿಲ್ಲ. ಬದಲಿಗೆ ಆ ಕುಡಿಯುವ ಹವ್ಯಾಸಕ್ಕೆ ಬಲಿಯಾಗಬಾರದೆಂದೂ, ಅದು ಬಹಳ ಕೆಟ್ಟದ್ದೆಂದೂ ಬುದ್ಧಿಮಾತು ಹೇಳುತ್ತಿದ್ದರು. ಮತ್ತೆ ‘ನೀವೇಕೆ ಹೀಗೆ ಕುಡಿಯುತ್ತೀರಿ’? ಎಂದು ನಾನಂದರೆ, ‘ಅದು ನನ್ನ ಕರ್ಮ, ಪ್ರಾಚೀನ ಕರ್ಮ, ನೀನು ಕುಡೀಬಾರ್ದಯ್ಯ ಕೇಶವ’ ಎಂದು ರೇಗುತ್ತಿದ್ದರು. ಮತ್ತೊಮ್ಮೆ ಸಲಿಗೆ ವಹಿಸಿ ‘ಅಲ್ರೀ ಕಾಳಿಂಗ್ರಾವ್, ನನ್ಗೂ ಒಂದಿಷ್ಟು ಆ ಬೀರನ್ನ ಈ ಲೋಟಾಕ್ಕೆ ಬಗ್ಸಿ, ಅದು ಹೇಗಿರೊತ್ತೋ letme taste it’ ಎಂದು ಅವರ ಮುಂದೆ ಗಾಜಿನ ಲೋಟವನ್ನು ಹಿಡಿದೆ. ನಾನು ಹಾಗೆನ್ನುತ್ತಿದ್ದಂತೆ ಆಕಾಶವೇ ಕಳಚಿ ಬಿತ್ತನ್ನುವ ಹಾಗೆ ಕೂಗಾಡುತ್ತಾ ನಾನು ಅವರತ್ತ ಚಾಚಿದ್ದ ಆ ಗಾಜಿನ ಲೋಟವನ್ನು ಕಿತ್ತೆಸೆದಾಗ ಅದು ನುಚ್ಚು ನೂರಾಯಿತು. ನಂತರ ರಾಯರನ್ನು ಸಮಾಧಾನ ಪಡಿಸಲುವಲ್ಲಿ ನನಗೆ ಸಾಕಾಯಿತು. ಈ ಪ್ರಕರಣ ನಡೆದದ್ದು ಮೈಸೂರಿನ ವುಡ್ಲ್ಯಾಂಡ್ಸ್ ಥಿಯೇಟರಿನ ಪಕ್ಕದಲ್ಲಿರುವ ಗ್ರೀನ್ಸ್ ಬಾರಿನಲ್ಲಿ ೧೯೫೭ರಲ್ಲಿ ಎಂದು ನೆನಪು.

ಮತ್ತೆ ಇದಕ್ಕೂ ಹಿಂದೆ, ೧೯೫೬-೫೭ರ ಕಾಲ. ಹಾಸನದಲ್ಲಿ ದನದ ಜಾತ್ರೆ ಹಾಗೂ ವಸ್ತುಪ್ರದರ್ಶನ. ಅಲ್ಲಿ ಕಾಳಿಂಗರಾವ್ ಮತ್ತು ವೃಂದವರಿಂದ ಸಂಗೀತ. ನಾನೂ ಜೊತೆಯಲ್ಲಿ ಹೋಗಿದ್ದೆ. ಕಾರ್ಯಕ್ರಮದ ನಂತರ ನಾವೆಲ್ಲಾ. ಇದ್ದುದು ಅಲ್ಲಿಯ ಪ್ರವಾಸಿಮಂದಿರದಲ್ಲಿ. ಮಾರನೆಯ ದಿನ ಬೆಳಿಗ್ಗೆ ಎದ್ದು ಹೊರಬಂದ ರಾಯರಿಗೆ ಆಕರ್ಷಕವಾಗಿ ಕಂಡದ್ದು ಆ ಪ್ರವಾಸಿ ಮಂದಿರದ ಆವರಣದಲ್ಲಿ ಸೊಂಪಾಗಿ ಬೆಳೆದಿದ್ದ ಕುಳ್ಳು ಮರ. ಅದನ್ನು ಕಂಡೊಡನೆ ಕಾಳಿಂಗರಾಯರಿಗೆ ಯುಗಯುಗಾಂತರದ ಹಿಂದಿದ್ದ ಮಾನವಮೂಲ ಮಹಾಶಯರ ಸ್ಮೃತಿ ತಟ್ಟಿತೋ ಏನೋ, ತಟ್ಟನೆ ತಾವು ತೊಟ್ಟಿದ್ದ ಪಟ್ಟಾಪಟ್ಟಿ ಲುಂಗಿಯನ್ನು ಮಂಡಿಯ ಮೇಲಕ್ಕೆ ಮಡಚಿ ಕ್ಷಣಾರ್ಧದಲ್ಲಿ ಕೆಳಗೆ ಕೈಗೆಟಕುವಂತಿದ್ದ ಆ ಮರದ ಕೊಂಬೆಯಿಂದ ಮೇಲಿನ ಮತ್ತೊಂದಕ್ಕೆ ಹಾರಿದರು. ಹೀಗೆ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಿದ್ದ ಕಾಲಿಂಗರಾಯರನ್ನು ಕಂಡು ನಮಗೆ ಆಶ್ಚರ್ಯವೋ ಆಶ್ಚರ್ಯ. ಜೊತೆಗೆ ತಡೆಯಲಾಗದ ನಗು. ಅಲ್ಲದೆ ಆ ಅವಾಂತರದಲ್ಲಿ ಅವರೆಲ್ಲಿ ಕೆಳಗೆ ಬಿದ್ದು ಮೈ ಕೈ ಮುರಿದುಕೊಂಡಾರೋ ಎಂಬ ಹೆದರಿಕೆ. ನಾನು ‘ಹುಷಾರು, ಹುಷಾರು’ ಎನ್ನುತ್ತಿದ್ದೆ. ಮೋಹನ್ ಕುಮಾರಿ ‘ಸಾಕು ನಿಮ್ಮ ಹುಡುಗಾಟ, ನೋಡ್ದೋಡು ನಕ್ಕಾರು ಸುಮ್ನೆ ಕೆಳ್ಗಿಳೀರಿ’ ಎಂದು ಗದರಿದರು. ಆದರೆ ಮರದ ಮೇಲೆ ಕುಣಿದು ಕೇಕೆ ಹಾಕುತ್ತಿದ್ದ ರಾಯರಿಗೆ ನಾವಾಗಲೀ, ನಮ್ಮಮಾತುಗಳಾಗಲೀ ಗಣನೆಗೇ ಇಲ್ಲ. ಬದಲಿಗೆ ಕೆಳಗೆ ನಿಂತಿದ್ದ ನನ್ನನ್ನು ‘ಮುದಿ ಮುತ್ತೈದೆ ಹಾಗೆ ಆ ಹೆಂಗಸ್ರ ಜೊತೆ ನಿಂತ್ಕೊಂಡು ಏನಯ್ಯಾ ಮಾಡ್ತಿದ್ದೀ? ಹತ್ತು ಮರಾನ, you will know the fun of it’ ಎಂದರು.

ನನಗೂ ಎಲ್ಲಿಲ್ಲದ ಸ್ಫೂರ್ತಿ ಬಂದು ಅಕ್ಕ ಪಕ್ಕ ನೋಡದೆ ಕಾಡು ಕೋತಿಯಂತೆ ಆ ಕುಳ್ಳು ಮರವನ್ನೇರಿ ಕಾಳಿಂಗರಾಯರು ಕೂತಿದ್ದ ಕೊಂಬೆಯ ಮೇಲೆ ಕೂತೆ. ಅಷ್ಟರಲ್ಲಿ ದೂರದಿಂದ ಧಾಂಡಿಗನೊಬ್ಬ ಕೋಲು ಬೀಸುತ್ತಾ ‘ಯಾರ್ಲಾ ಅದು ಮರಾನ ಅತ್ತಿರಾದು? ಇಳೀರ್ಲಾ ಕೆಳೀಕ್ಕೆ’ ಎಂದು ನಮ್ಮ ಕಡೆಗೇ ದಾಪುಗಾಲು ಹಾಕಿಕೊಂಡು ಬರುತ್ತಿದ್ದುದು ಕಾಣಿಸಿತು. ತಕ್ಷಣ ನಾನು ರಾಯರಿಗೆ ‘ಸಾರ್ಸಾರ್, ಇಳೀರೀ ಸಾರ್ ಬೇಗ, ಮಾಲೀಂತ ಕಾಣ್ಸುತ್ತೆ’ ಎಂದು ಕೊಂಬೆಯಿಂದ ಜೋತುಬಿದ್ದು ನೆಗೆದೆ. ಕಾಳಿಂಗರಾಯರೂ ನೆಗೆದು ನನ್ನ ಪಕ್ಕ ನಿಂತರು. ಮೋಹನ್, ಸೋಹನ್ ಇಬ್ಬರೂ ನಾವು ಅವರಿಗೆ ಪರಿಚಯವೇ ಇಲ್ಲವೇನೋ ಎಂಬಂತೆ ಪಕ್ಕದ ಗಿಡದಿಂದ ಬಿದ್ದಿದ್ದ ಹೂವುಗಳನ್ನು ಆರಿಸುವಂತೆ ಸೋಗು ಹಾಕಿದರು.

ನಾನು ತೊಟ್ಟಿದ್ದು ಪಟ್ಟೆ ಪಟ್ಟೆಯ ಪೈಜಾಮ, ಬನಿಯನ್ನು. ರಾಯರು ಉಟ್ಟಿದ್ದು ಪಟಾಪಟಿಲುಂಗಿ, ಸ್ಯಾಂಡೋಬನಿಯನ್ನು. ಇಬ್ಬರದ್ದೂ ಬಾಚಿಕೊಳ್ಳದ ತಲೆ, ಕ್ಷೌರಕಾಣದ ಮುಖ. ಹೀಗೆ ವಿಕಾರ ಸ್ವರೂಪಿಗಳಾಗಿ ನಿಂತಿದ್ದ ನಮ್ಮನ್ನು ಸಂಭಾವಿತ ವ್ಯಕ್ತಿಗಳೆಂದು ಆ ಮಾಲಿ, ಮಾಲಿಯೇ ಏಕೆ, ಆ ಸಮಯದಲ್ಲಿ ಯಾರಾದರೂ ಭಾವಿಸುವಂತಿರಲು ಸಾಧ್ಯವಿರಲಿಲ್ಲ. ಅಲ್ಲದೆ ಮರದ ಮೇಲೆ ಹಲ್ಲೇ ನಡೆಸುತ್ತಿದ್ದು ಆತನ ಬೆದರಿಕೆ, ಬರುವಿಕೆಯಿಂದ ಭಯಗೊಂಡು ಒಟ್ಟಿಗೆ ಮರದಿಂದ ನೆಗೆದು ನಿಂತಿದ್ದ ನಮ್ಮನ್ನು ಆ ಮಾಲೀ, ಅಪ್ಪಾಪೋಲಿಗಳೆಂದು ಭಾವಿಸಿರಲು ಆಶ್ಚರ್ಯವಿಲ್ಲ. ಬಂದ. ನಮ್ಮತ್ತ ತಾನುಹಿಡಿದಿದ್ದ ಉದ್ದನೆಯ ಕೋಲನ್ನು ತಿರುಚುತ್ತ, ನಮ್ಮನ್ನು ವಾಚಾಮಗೋಚರವಗಿ ಬೈಯುತ್ತ ಅಟ್ಟಿಸಿಕೊಂಡೇ ಬಂದ.

ನಾನು ರಾಯರನ್ನು ಭಯದಿಂದ ನೋಡಿದೆ. ಆದರೆ ರಾಯರು ಯಾವ ಹೆದರಿಕೆ, ಸಂಕೋಚವನ್ನೂ ವ್ಯಕ್ತಪಡಿಸದೆ ಲುಂಗಿಯನ್ನು ಸೊಂಟದ ಮಟ್ಟಕ್ಕೆ ಕಟ್ಟಿ ‘get ready ಕೇಶೂ’ ಎಂದು ನನ್ನ ಕೈ ಹಿಡಿದು, ನಮ್ಮತ್ತ ಓಡಿಬರುತ್ತಿದ್ದ, ಮಾಲಿಗೆ ಕೇಳುವಂತೆ ಶಿಳ್ಳೆ ಹೊಡೆದು ‘ಜೂಟ್’ ಎಂದವರೆ ನನ್ನನ್ನು ಬರಸೆಳೆದುಕೊಂಡು ಆ ಪ್ರವಾಸಿಮಂದಿರದ ಆವರಣದಲ್ಲಿ ಓಡಲಾರಂಭಿಸಿದರು. ಆ ಮಾಲಿ ‘ನಿಲ್ರೋ, ಲೋಲೇ’ ಎನ್ನುತ್ತ ಅಟ್ಟಿಸಿಕೊಂಡು ಬೆನ್ನಟ್ಟಿ ಬರುತ್ತಿದ್ದಾನೆ, ನಾವಿಬ್ಬರೂ ಜೋಡಿಕುದುರೆಗಳಂತೆ ‘ಜೂಟ್ ಜೂಟ್’ ಎಂದು ಮುಂದೆ ಮುಂದೆ ಓಡುತ್ತಿದ್ದೇವೆ. ಈ ದೃಶ್ಯವನ್ನು ನೋಡಿ ಸೋಹನ್ ಮೋಹನ್ ಬಿದ್ದು ಬಿದ್ದು ನಗುತ್ತಿದ್ದಾರೆ.

ಹೀಗೆ ಕೆಲಕಾಲ ಆ ಮಾಲಿಯನ್ನು ಓಡಾಡಿಸಿ ನಂತರ ಪ್ರವಾಸಿಮಂದಿರವನ್ನು ಹೊಕ್ಕು ನಾವಿಳಿದುಕೊಂಡಿದ್ದ ಕೋಣೆಯಲ್ಲಿ ತೂರಿ ಒಳಗಿಂದ ಬಾಗಿಲನ್ನು ಭದ್ರಪಡಿಸಿದೆವು. ನಮ್ಮ ಬೆನ್ನುಹತ್ತಿಬಂದ ಆ ಮಾಲಿ ‘ತೆಗೀರೋ ಬಾಗಲ್ನ, ಇಲ್ದಿದ್ರೆ’.. ಎಂದು ಹಲವು ಬಾರಿ ಬಾಗಿಲು ಬಡಿದ. ನಾವು ತೆಗೆಯಲಿಲ್ಲ. ಮತ್ತೆ ಒಂದೆರಡುಬಾರಿ ಬಾಗಿಲು ಬಡಿದು ಕಿರುಚಿದ. ನಂತರ ಆತ ಬಾಗಿಲು ಬಿಡಯುವುದೂ ಬೈಯುವುದೂ ನಿಂತು ಹೋಯಿತು.,

ಕೆಲವು ನಿಮಿಷದ ನಂತರ ಮೆದುವಾಗಿ ನಮ್ಮ ಕೋಣೆಯ ಬಾಗಿಲನ್ನುಯಾರೋ ತಟ್ಟಿದಂತಾಯಿತು. ‘ಯಾರೂ?’ ಎಂದು ನಾನಂದೆ.

‘ನಾನೇ, ತೆಗೀರ್ರೀ ಬಾಗಲ್ನ’ ಎಂದ ಸೋಹನ್ರ ಧ್ವನಿ ಕೇಳಿಸಿತು. ಒಳಗಿನಿಂದಲೇ ‘ಆ ಮಾಲೀ?’ ಎಂದೆ. ಎಲ್ಲಾದ್ನೂ ಹೇಳಿದೀನಿ, ತೆಗೀರ್ರಿ”ಎಂದರು ಸೋಹನ್. ಧೈರ್ಯವಾಗಿ ಬಾಗಿಲನ್ನು ತೆಗೆದೆ. ಮೋಹನ್  ಸೋಹನ್ ಇಬ್ಬರೂ ನಗುತ್ತಲೇ ಒಳಬಂದರು.

ನಂತರ ಬಾಗಿಲು ಮುಚ್ಚೋಣವೆಂದರೆ, ಆಶ್ಚರ್ಯ, ಬಾಗಿಲಾಚೆ ತುಸು ದೂರದಲ್ಲಿ ಅದೇ ಮಾಲಿ ಕೈಕಟ್ಟಿ ಮುಗುಳ್ನಗುತ್ತಾ ನಿಂತಿದ್ದಾನೆ. ನನಗೂ ಅವನನ್ನು ನೋಡಿ ನಗು ಬಂದು; ನಕ್ಕೆ, ಒಳಗೆ ಬಾರಯ್ಯ ಎಂದೆ;ಬಂದ. ಬಂದವನೇ ಸಿಗರೇಟು ಸೇದುತ್ತಾ ಠೀವಿಯಿಂದ ಕುಳಿತಿದ್ದ ರಾಯರನ್ನು ನೋಡುತ್ತಿದ್ದಂತೆ ಬಹುನಮ್ರತೆಯಿಂದ ನಮಸ್ಕರಿಸಿ, ಕೈಕಟ್ಟಿ ‘ತೆಪ್ಪಾತ್ರು ಬುದ್ದಿ. ನೀವು ಇಂಗೇಂತ ತಿಳ್ದಿರ್ನಿಲ್ಲಾ. ಇವ್ರು ಎಲ್ಲಾದ್ನೂ ಯೋಳದ್ರು, ತೆಪ್ಪಾತು’ ಅಂದ. ಆಗ ಕಾಳಿಂಗರಾಯರು ನಗುತ್ತಾ ಎದ್ದು ಆ ಮಾಲಿಯ ಭುಜತಟ್ಟಿ ‘ಪರವಾಗಿಲ್ಲ ಬಿಡು ರಾಜಾ; ಅಂತೂ ಜೂಟಾಟ ಚೆನ್ನಾಗೆ ಆಡದ್ವು, ಏನಂತಿ?’ ಎಂದು, ಮುಗುಳ್ನಗೆಯಿಂದ ಮುಖ ಕೆಳಗೆ ಮಾಡಿ ನಿಂತಿದ್ದ ಆ ಮಾಲಿಗೆ ಐದುರೂಪಾಯಿ ನೋಟನ್ನಿತ್ತು ‘ಬೀಡಿ ಕಾಫೀಗಾಗುತ್ತೆ ಇಟ್ಕೊ’ ಎಂದು ಹೇಳಿ ಕಳುಹಿಸಿದರು.

ಹೀಗೆ ಹಲುವಬಾರಿ ತಾವು ಯಾರು, ಏನೆಂಬುದನ್ನೇ ಮರೆತು ಮಕ್ಕಳಲ್ಲಿ ಮಕ್ಕಳಂತಾಗಿ ಮೈಮರೆತು ನಲಿದಾಡಿ, ತಾನೂ ನಕ್ಕು ಇತರರನ್ನೂ ನಲಿಸುತ್ತಿದ್ದ ಸರಳ ಸುಂದರ ಜೀವಿ ನಮ್ಮ ಪೂಜ್ಯ ಕಾಳಿಂಗರಾಯರು.

೧೯೫೫ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ. ನಡೆದದ್ದು ಮೈಸೂರಿನ ಕ್ರಾಫರ್ಡ್ ಹಾಲಿನಲ್ಲಿ. ಸಮ್ಮೇಲನದ ಅಧ್ಯಕ್ಷರಾಗಿದ್ದವರು ಡಾ|| ಶಿವರಾಮ ಕಾರಂತರು. ಆ ಸಮ್ಮೇಳನದ ಮನೋರಂಜನ ಕಾರ್ಯಕ್ರಮದಲ್ಲಿ ಮುಖ್ಯವೆನಿಸಿದ್ದು ಶಿವರಾಮ ಕಾರಂತರೇ ರಚಿಸಿದ್ದ ‘ಗರ್ಭಗುಡಿ’ ಎಂಬ ನಾಟಕ. ಆ ನಾಟಕವನ್ನು ನಿರ್ದೇಶಿಸಿ, ಅದರಲ್ಲಿ ಬರುವ ಕಶ್ಯಪ ಮುನಿಯ ಪಾತ್ರವನ್ನು ವಹಿಸಿದ್ದು ನಾನು. ಸುಮಾರು ಮೂರು ಗಂಟೆಯ ಆ ನಾಟಕವನ್ನು ಒಂದು ಗಂಟೆಯ ಕಾಲವ್ಯಾಪ್ತಿಗೆ ತುಂಡರಿಸಿದ್ದ ನನಗೆ ಕೆಲವು ಮುಖ್ಯವಾದ ಸೂಚನೆ, ಸಲಹೆಗಳನ್ನಿತ್ತವರು ಕಾಳಿಂಗರಾಯರು.

ಮತ್ತೆ ೧೯೫೭ರಲ್ಲಿ ಎಂದು ನೆನಪು. ಶ್ರೀ ಅಶ್ವತ್ತನಾರಾಯಣ ಎಂಬುವರು ರಚಿಸಿರುವ ‘ಉತ್ಸರ್ಗ’ ಎಂಬ ಐತಿಹಾಸಿಕ ನಾಟಕವನ್ನು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಟವನ್ಹಾಲಿನಲ್ಲಿ ಕಾಳಿಂಗರಾಯರೇ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಆಡಲಾಯಿತು, ಆ ನಾಟಕವನ್ನುದಿಗ್ದರ್ಶಿಸಿದ್ದು ನಾನು, ಸಂಗೀತ ಕಾಳಿಂಗರಾಯರದ್ದು.

ಹೀಗೆಯೇ ಇನ್ನೂ ಅದೆಷ್ಟೋ ಸುಸಂದರ್ಭಗಳು, ಅವೆಲ್ಲಾ  ಒಂದರ ಮೇಲೊಂದು ನೆನಪಿಗೆ ಬಂದು ಕಣ್ಣೀರಿಟ್ಟು ಹಂಬಲಿಸಿದೆ. ಅಂದು, ಕಾಳಿಂಗರಾಯರು ಕೊನೆಯುಸಿರನ್ನೆಳೆದ ದಿನ ಸಂಜೆ ಪ್ರವಾಸಿ ಮಂದಿರದ ಬಳಿ ಹೋದೆ. ಅದೇ ಮರ. ಆಗ ಕುಳ್ಳಾಗಿದ್ದುದು ಈಗ ದಟ್ಟವಾಗಿ ಬೆಳೆದು ದೊಡ್ಡದಾಗಿದೆಯಷ್ಟೆ ನನಗೇ ಅರಿವಿಲ್ಲದಂತೆ ಅದನ್ನು ದಿಟ್ಟಿಸುತ್ತ ನಿಂತೆ. ಆಗಲೂ ಅದರ ಕೊಂಬೆಯ ಮೇಲೆ ಕಾಳಿಂಗರಾಯರು ಕೂತು ಜಿಗಿದಾಡುತ್ತಿರುವಂತೆ ಭಾಸವಾಯಿತು. ನನಗಲ್ಲಿ ಹೆಚ್ಚು ಕಾಲ ನಿಲ್ಲಲಾಗಲಿಲ್ಲ. ಮೇಲೆ ನೋಡಿದೆ. ಹೆಪ್ಪುಗಟ್ಟಿದ ಕಪ್ಪು ಮೋಡಗಳನ್ನು ಸೀಳಿಕೊಂಡು ಅವುಗಳ ಮಧ್ಯೆ ರಾಯರು ರಾಜಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಮೇಲೆತ್ತಲೋ ಹೋಗುತ್ತಿರುವಂತೆ ಅನ್ನಿಸಿತು. ಮಂಕಡರಿದ ಮನ, ದುಃಖತಪ್ತ ಮುಖದಿಂದ ಮನೆಗೆ ಬಂದೆ. ಅಷ್ಟುಹೊತ್ತಿಗೆ ಆ ದಿವ್ಯ ಶರೀರಿಯ ಭವ್ಯಾಕೃತಿ ಭಸ್ಮಗೊಂಡು ಹಿಡಿಮುಷ್ಟಿ ಬೂದಿಯಾಗಿ ಹೋಯಿತಲ್ಲಾ ಎಂದು ಚಿಂತಿಸುತ್ತಾ ಮತ್ತೆ ಬೇರೇನೂ ತೋಚದೆ ಸುಮ್ಮನೆ ರಗ್ಗುಹೊದೆದು ಮಲಗಿಬಿಟ್ಟೆ ಆದರೆ ಅಂದು ಬೆಂಗಳೂರಿನಲ್ಲಿ ನಡೆದ ವಿಚಾರವೇ ಬೇರೆ.

ಅಂದು, ೧೯೮೧ ಸೆಪ್ಟೆಂಬರ್ ೨೧ರ ಪ್ರಾತಃ ಕಾಲ ಮುಂಜಾನೆ ಕಣ್ಮುಚ್ಚಿದ ಕಾಳಿಂಗರಾಯರ ಪ್ರಾರ್ಥೀವ ಶರೀರದ ಅಂತಿಮಕ್ರಿಯೆಯನ್ನು ಸಂಜೆಯ ಹೊತ್ತಿಗೆ ನಡೆಸುವುದೆಂದು ರಾಯರ ಜೊತೆಗಿದ್ದವರು ತೀರ್ಮಾನಿಸಿದರು. ಈ ಸುದ್ದಿಯನ್ನು ಪಾಂಡೇಶ್ವರದಲ್ಲಿದ್ದ ರಾಯರ ಕುಟುಂಬದವರಿಗೂ ಮತ್ತೆ ಹಲವು ಆಪ್ತರಿಗೂ ತುರ್ತು ತಂತಿಯ ಮೂಲಕ ತಿಳಿಸಲಾಯಿತು.

ಇಲ್ಲಿ ಸಂಪಂಗಿರಾಮ ಬಡಾವಣೆಯಲ್ಲಿ ರಾಯರಿದ್ದ ಮಹಡಿ ಮೇಲಿನ ಮನೆ ಚಿಕ್ಕದು. ಬಾನುಲಿಯಲ್ಲಿ ಮೇಲಿಂದ ಮೇಳೆ ಎರಡು ಮೂರು ಬಾರಿ ಈ ಸುದ್ದಿ ಪ್ರಸಾರವಾದ್ದರಿಂದ ಅದನ್ನಾಲಿಸಿದ ರಾಯರ ಅಭಿಮಾನಿಗಳು ಆಗಲೇ ತಂಡೋಪತಂಡವಾಗಿ ಅವರ ಅಂತಿಮ ದರ್ಶನ ಪಡೆಯಲು ಬರಲಾರಂಭಿಸಿದರು. ಜೊತೆಗೆ ಬಡಾವಣೆಯಲ್ಲಿದ್ದ ಜನರ ಗುಂಪು ಬೇರೆ  ರಾಯರ ಮನೆಯನ್ನು ಮುತ್ತಿತ್ತು. ಇದರಿಂದ ಆ ಪುಟ್ಟ ಮನೆ ದಟ್ಟ ಜನಸಂದಣಿಯಿಂದ ತುಂಬಿ ತುಳುಕಿ ಒಳಗಿದ್ದವರಿಗೆ ಉಸಿರಾಡುವುದೇ ದುಸ್ತರವೆನಿಸಿತು. ಕಟ್ಟಡ ಹಳೆಯದಾದ್ದರಿಂದ ಕುಸಿಯುವ ಸಂಭವವಿದೆ ಎಂದು ಅವರಿವರ ಎಚ್ಚರಿಕೆಯು ಮಾತು.

ವಿಷಯ ತಿಳಿಯುತ್ತಿದ್ದಂತೆ ಬಹುತೇಕ ಮಂತ್ರಿಗಳು, ಶಾಸಕರು ಮತ್ತು ಇತರ ಗಣ್ಯವ್ಯಕ್ತಿಗಳು. ಒಬ್ಬರ ಹಿಂದೊಬ್ಬರಂತೆ ಬರಲಾರಂಭಿಸಿದರು. ರಾಜ್ಕುಂಆರ್ರವರೂ ಸೇರಿದಂತೆ ಚಿತ್ರಂಗದ ನಟನಟಿಯರು, ಕಲಾವಿದರು, ತಂತ್ರಜ್ಞರು, ಆಕಾಶವಾಣಿಯವರು, ಚಿತ್ರವಿತರಕರು, ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಇವರೆಲ್ಲಾ ತಂಡೋಪತಂಡವಾಗಿ ಬಂದು ರಾಯರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿಯನ್ನರ್ಪಿಸಿದರು. ಮಹಡಿಯಲ್ಲಿದ್ದವರನ್ನೆಲ್ಲ ಕೆಳಗಿಳಿಸಿ ಗಣ್ಯರಿಗೆ ಮಹಡಿಯನ್ನೇರಲು ಅವಕಾಶ ಮಾಡಿಕೊಡುವುದರಲ್ಲಿ ಸಂಬಂಧಪಟ್ಟವರಿಗೆ ಸಾಕಾಗಿಹೋಯಿತು. ಸುಮಯ ಕಳೆದಂತೆ ರಾಯರ ದರ್ಶನಕ್ಕಾಗಿ ಬರುವವರ ಸಂಖ್ಯೆ ಏರುತ್ತೇರುತ್ತಾ ಹೋಯಿತೇ ಹೊರತು ಅದು ಕಡಿಮೆಯಾಗುವ ಸಂಭವವೇ ಕಂಡುಬರಲಿಲ್ಲ.

ಅಂದು ಸಂಜೆಯ ಹೊತ್ತಿಗೆ ರಾಯರ ಪಾರ್ಥಿವ ಶರೀರವನ್ನು ವಿಲ್ಸನ್ ಗಾರ್ಡನ್ ನಲ್ಲಿರುವ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಆ ದಿಶೆಯಲ್ಲಿ ಸಂಪಂಗಿರಾಮನಗರದ ಪ್ರಜಾಸಮಿತಿಯ ಅಧ್ಯಕ್ಷ ಜಯರಾಮ್ ಹಾಗೂ ರಾಘವಾದೇವಿಯವರು (ಕಾರ್ಪೋರೇಟರ್) ಸಮಾಲೋಚಿಸಿ, ಇಂತಹ ಮಹಾನ್ ಕಲಾವಿದನ ಅಂತಿಮ ಯಾತ್ರೆಯನ್ನು ಉಚಿತ ರೀತಿಯಲ್ಲಿ ಗೌರವ, ಮಾರ್ಯಾದೆ ಹಾಗೂ ಮೆರವಣಿಗೆಯಲ್ಲಿ ಚಿತಾಗಾರಕ್ಕೆ ತರುವದೇ ತರವೆಂದು ಭಾವಿಸಿ, ಅಲ್ಲಿ ಸೇರಿದ್ದ ಮಿಕ್ಕೆಲ್ಲರ ಅಭಿಪ್ರಾಯದಂತೆ ಕಾಳಿಂಗರಾಯರ ಶರೀರವನ್ನು ಮತ್ತೆ ಅವರು ವಾಸಿಸುತ್ತಿದ್ದ ಬಡಾವಣೆಯ ಪ್ರದೇಶಕ್ಕೆ ವಾಪಸ್ತುತರಲಾಯಿತು!

ಹೀಗೆ ಸುಡುಗಾಡನ್ನು (ಸುಡುಗೂಡನ್ನು) ಸೇರಿದ ಒಬ್ಬ ವ್ಯಕ್ತಿಯ ಪಾರ್ಥಿವ ಶರೀರವನ್ನು ಮತ್ತೆ ಆತನ ಸ್ವಸ್ಥಾನಕ್ಕೆ ಹೊತ್ತು ತಂದು, ಮತ್ತೆ ಪುರಸ್ಕರಿಸಿದ ನಂತರ ಆತನನ್ನು ಅಂತಿಮವಾಗಿ ಬೀಳ್ಕೊಡುವ ಸನ್ನಾಹ ನಡೆದದ್ದನ್ನು ಈ ಹಿಂದೆ ಯಾರೂ ಕಂಡಿರಲಾರರು, ಮುಂದೆ ಹೀಗಾಗುವುದೂ ಅಸಂಭವವೇ. ಈ ನಿಟ್ಟಿನಲ್ಲೂ ರಾಯರು ಒಂದು ದಾಖಲೆಯನ್ನು ಮಾಡಿಯೇ ಹೋದರೆಂದರೆ ತಪ್ಪಾಗದು.

ಸಂಪಂಗಿರಾಮ ಬಡಾವಣೆಯಲ್ಲಿ ವರ್ಷಂಪ್ರತಿ ಗಣಪತಿಯನ್ನು ಕೂರಿಸುವ ಅಂಗಳದಲ್ಲೇ ಏರ್ಪಡಿಸಿದ್ದ ವೇದಿಕೆಯ ಮೇಲೆ ರಾಯರ ದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಯಿತು. ವೇದಿಕೆಯ ಮುಂಭಾಗದ ಪಕ್ಕಕ್ಕೆ, ರಾಯರ ದೇಹಕ್ಕೆದುರಾಗಿ ನಾಕಾರು ಧ್ವನಿವರ್ಧಕಗಳು ಸೆಟೆದು ನಿಂತಿದ್ದವು. ವೇದಿಕೆಯ ಇಕ್ಕೆಡೆಗಳಲ್ಲೂ ಬೀದಿಯುದ್ದಕ್ಕೂ ಸ್ಫೀಕರ್ಗಳು ನಾನ ದಿಕ್ಕಿಗೆ ಮುಖ ಮಾಡಿ ಧ್ವನಿಯನ್ನು ಸಿಡಿಸಲು ಸಿದ್ಧವಾಗಿದ್ದುವು. ಮತ್ತೆ ಆ ಬೀದಿಯ ಉದ್ದಗಲದ ನೆತ್ತಿಗೆ ಬಣ್ಣ ಬಣ್ಣದ ತುಣುಕು ಮಿಣುಕು ದೀಪಹಾರದಿಂದ ಸಿಂಗಾರ. ವೇದಿಕೆಯ ಮುಂಭಾಗದಲ್ಲಿ ಸಾಕಷ್ಟು ಮಂದಿ ಕೂಡುವಷ್ಟು ಜಾಗಕ್ಕೆ ಜಮಖಾನ. ಅದರಿಂದಾಚೆಗೆ ಮತ್ತಷ್ಟು ಮಂದಿ ಕೂರಲು ಆಸನಗಳ ವ್ಯವಸ್ಥೆ. ನೋಡುವವರಿಗೆ ಇಲ್ಲಾವುದೋ ಸನ್ಮಾನ. ಸಮಾರಂಭವೋ ಅಥವಾ ಕವಿ ಕಲಾವಿದರ ಸಮ್ಮೇಳನವೋ ಇರಬಹುದೆಂಬ ಭ್ರಾಂತಿ ಮೂಡಿಸುವಂತಿತ್ತು ಆ ಬೀದಿಯ ವಾತಾವರಣ.

ಅಲ್ಲದೆ ಆ ಸಂಜೆ ಮತ್ತು ರಾತ್ರಿ ಬಹುಹೊತ್ತಿನವರೆಗೆ ಹೆಸರಾಂತ ಕಲಾವಿದರಿಂದ ಭಾವಗೀತೆ, ದೇವರ ನಾಮ, ಜಾನಪದ ಗೀತೆ, ಮತ್ತೆ ಅಭಿಮಾನಿಗಳಿಂದ ಮಧ್ಯೆ ಮಧ್ಯೆ ಕಾಳಿಂಗರಾಯರನ್ನು ಕುರಿತು ಮಾತು. ಹೀಗೆ ಇನ್ನೂ ಏನೇನೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಬಡಾವಣೆಯ ‘ಪ್ರಜಾಸಮಿತಿ’ ಬಳಗದವರು ಈ ನಿಟ್ಟಿನಲ್ಲಿ ಶ್ರಮಿಸಿದ್ದು ನಿಜಕ್ಕೂ ಸಾರ್ಥಕ. ಸ್ತುತ್ಯರ್ಹ.

ಹೀಗಂದು ಸಂಜೆ ೬-೩೦ರ ಹೊತ್ತಿಗೆ ಈ ಸುಗಮ ಸಂಗೀತದ ಕಾರ್ಯಕ್ರಮ, ಕಾಳಿಂಗರಾಯರ ಪಾರ್ಥಿವ ಶರೀರವನ್ನಿರಿಸಿದ್ದ ಆ ವ ಇಚಿತ್ರ ವೇದಿಕೆಯಲ್ಲಿ ಆರಂಭವಾಯಿತು. ಕಾಳಿಂಗರಾಯರ ಕಟ್ಟಾ ಅಭಿಮಾನಿ ಕಲಾವಿದರಾಗಿದ್ದ ಸಿ.ಅಶ್ವಥ್, ಬಿ.ಕೆ. ಸುಮಿತ್ರ, ಹೀಗೆ ಇನ್ನೂ ಅನೇಖ ಕಲಾವಿದರು ಕನ್ನಡಗೀತೆ, ಭಾವಗೀತೆಗಳನ್ನು ತಮ್ಮ ಆತ್ಮ ಹಾಗೂ ರಾಯರ ಆತ್ಮ ತೃಪ್ತಿಯಾಗುವವರೆಗೆ ಹಾಡಿ ಕೃತಾರ್ಥರಾಗಿ ಕೈ ಮುಗಿದರು. ಮತ್ತೆ ಹಲವು ಪ್ರತಿಷ್ಠಿತರು ರಾಯರನ್ನು ಕುರಿತು ತಮ್ಮ ಅನಿಸಿಕೆಗಳನ್ನು ಹೇಳಿದ್ದೇ ಅಲ್ಲದೆ ತಮ್ಮ ನೆಚ್ಚಿನ  ಈ ಮಹಾನ್ ಕಲಾವಿದನ ಸಾಧನೆಗಳನ್ನು ಕೊಂಡಾಡಿದರು.

ಯಾವುದೋ ಕಾರ್ಯದ ಮೇಲೆ ಚಿತ್ರದುರ್ಗದ ಬಳಿ ಇದ್ದ ಶ್ರೀ ವಾಟಾಳ್ ನಾಗರಾಜ್ರವರು ರಾಯರ ಮರಣ ಸುದ್ದಿ ಕಿವಿ ಮುಟ್ಟುತ್ತಿದ್ದಂತೆ ತಮ್ಮೆಲ್ಲ ಕೆಲಸ ಕಾರ್ಯನ್ನು ಬಿಟ್ಟು ಬೆಂಗಳೂರನ್ನು ಸೇರಿದವರೇ ನೇರವಾಗಿ ಬಂದು ಕಾಳಿಂಗರಾಯರ ಅಂತಿಮ ದರ್ಶನ ಪಡೆದು ಕಣ್ಣೀರ್ಗರೆದರು.

ಇವೆಲ್ಲಾ ಮುಗಿಯುವ ಹೊತ್ತಿಗೆ ಅಂದು ಮಧ್ಯರಾತ್ರಿಯಾಗಿತ್ತು. ದೂರದಿಂದ ಬಂದಿದ್ದವರು ರಾಯರ ಅಂತಿಮ ದರ್ಶನ ಪಡೆದು ಕಣ್ಣೀರ್ಗರೆಯುತ್ತಾ ಹಿಂತಿರುಗಿದರು. ಆದರೆ ಆ ಬಡಾವಣೆಯ ಬಹುಆಲು ಮಂದಿ ರಾತ್ರಿ ಇಡೀ ರಾಯರ ದೇಹವನ್ನು ಸುತ್ತುವರಿದು ಬೆಳಗಾಗುವುದನ್ನೇ ಕಾದುಕುಳಿತಿದ್ದರು. ಆ ರಾತ್ರಿ ಅವರಾರೂ ಮಲಗಲಿಲ್ಲ, ಬದಲಿಗೆ ಭಜನೆ ಮಾಡುತ್ತಾ ಕಾಲಕಳೆದರು.

೨೨-೯-೧೯೮೧, ಬೆಳಗಾಯಿತು. ಆ ಯುವಕರು ಕಾಳಿಂಗರಾಯರ ದೇಹವನ್ನು ಮತ್ತೆ ಹೊಸ ಹೂವು, ಹಾರಗಳಿಂದ ಅಲಂಕರಿಸಿದರು. ರಾಯರನ್ನು ಮೆರುವಣಿಗೆಯಲ್ಲಿ ಒಯ್ಯಲು ನಿಂತಿದ್ದ ಲಾರಿಗೂ ಮೈಮುಚ್ಚ ಹೂವಿನ ಅಲಂಕಾರ. ಇದೆಲ್ಲಾ ಕೊನೆಗೊಂಡು ರಾಯರ ಪಾರ್ಥಿವ ಶರೀರವನ್ನು ಹೊತ್ತ ಲಾರಿ ಸಂಪಂಗಿರಾಮ ಬಡಾವಣೆಯನ್ನು ಬಿಡುವಲ್ಲಿ ಮಧ್ಯಾಹ್ನ ಹೊತ್ತು ಮೀರಿತ್ತು.

ಕಾಳಿಂಗರಾಯನ ಅಂತಿಮ ಯಾತ್ರೆಯ ಭವ್ಯ ಮೆರುವಣಿಗೆಗೆ ಸೇರಿದ್ದ ಜನಸಾಗರವನ್ನು ಸೀಳಿಕೊಂಡು ಮತ್ತೆ ವಿಲ್ಸನ್ ಗಾರ್ಡನ್ ಚಿತಾಗಾರವನ್ನು ಸಮೀಪಿಸುವ ಹೊತ್ತಿಗೆ ಸಂಜೆ ಐದರ ಸಮಯ ಮುಟ್ಟಿತ್ತು.

ರಾಯರ ದೇಹವನ್ನು ಒಯ್ದು ತಂದಿದ್ದ ಸರ್ವಾಲಂಕೃತ ಲಾರಿ ಚಿತಾಗಾರದ ಬಾಗಿಲನ್ನು ಸೇರುತ್ತಿದ್ದಂತೆ ಶ್ರೀ ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆಯವರು ಆಗಮಿಸಿ ರಾಯರ ದೇಹದ ಮೇಲೆ ಶ್ರೀ ಮಂಜುನಾಥನ ಪಾದಾರವಿಂದದಿಂದ ಆಯ್ದು ತಂದಿದ್ದ ಹೂವುಗಳನ್ನುಹರಡಿ ತನ್ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರಂತೆ.

ಇಂತಹ ಪುಣ್ಯ ಅದೆಷ್ಟು ಮಂದಿ ಸತ್ತವರಿಗೆ ಸಲ್ಲುತ್ತದೆ? ನಮ್ಮ ಅಚ್ಚು ಮೆಚ್ಚಿನ ಕಾಳಿಂಗರಾಯರು ಈ ನಿಟ್ಟಿನಲ್ಲಿ ಬಹು ಭಾಗ್ಯಶಾಲಿ. ಇದೆಲ್ಲಾ ಆದ ನಂತರ ಕಾಳಿಂಗರಾಯರ ಶರೀರವನ್ನು ಚಿತಾಗಾರದ ಸುಡುಗೂಡಿನಲ್ಲಿ ಸ್ವಾಗತಿಸಲು ಸಜ್ಜಾಗಿದ್ದ ಅಗ್ನಿದೇವನಿಗೆ ಅರ್ಪಿಸಲಾಯಿತು. ಆ ಮಹಾನ್ ವ್ಯಕ್ತಿಯ ಭವ್ಯಾಕೃತಿ ಭಸ್ಮವಾಗಿ ಹೋಯಿತು.

ಅರವೆತ್ತೇಳು ವಂಸತಗಳನ್ನು ಕಂಡಿದ್ದು, ಸಂಗೀತ-ಸಂಸ್ಕೃತಿ-ಸಜ್ಜನಿಕೆ, ಸಹೃದಯತೆ, ಸರಳತೆ, ಈ ಎಲ್ಲ ವಿಶಿಷ್ಟ ಗುಣಗಳನ್ನು ಸಾಮಕೇತಿಸುವಂತಿದ್ದ ಕನ್ನಡ ಕುಲಕೋಟಿಯ ಕಣ್ಮನಿಯಾಗಿದ್ದ, ಪಾಂಡೇಶ್ವರದ ಕಾಳಿಂಗರಾಯರ ದಿವ್ಯಶರೀರ ನಮ್ಮ ನೆಲದಿಂದ ಮರೆ ಆದರೂ ಅವರ ಆತ್ಮಪಕ್ಷಿ ನಮ್ಮ ನಾಡಿನಾದ್ಯಂತ ಇಂದಿಗೂ, ಮುಂದಿಗೂ ಮತ್ತೆಂದಿಗೂ, ಹಾರುತ್ತಲೇ ಇರುತ್ತದೆ. ಕನ್ನಡ ನೆಲವನ್ನು ಅತಿಯಾಗಿ ಪ್ರೀತಿಸುತ್ತ ಕನ್ನಡವನ್ನು ಉಸಿರಾಗಿಸಿಕೊಂಡಿದ್ದ ಅವರ ಆತ್ಮ ನಿಜಕ್ಕೂ ಅಮರ. ಅದು ಚಿರಾಯು.

ಸುಮಾರು ಆರು ದಶಕಗಳ ಕಾಳ ಅನವರತವಾಗಿ ಹಾಡುತ್ತಾ ತನ್ನ ಜೀವಿತ ಕಾಲದ ಬಹುಭಾಗವನ್ನು ಸುಗಮ ಸಂಗೀತಕ್ಕೆಂದೇ ಮೀಸಲಿರಿಸಿ ಈ ಹಾದಿನಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿ ಗರಿಗೆದರಿದ ನವಿಲಿನಂತೆ ನಾಡಿನಾದ್ಯಂತ ನಲಿದಾಡುತ್ತಾ, ಕೋಮಲ ಕಂಠದ ಕೋಗಿಲೆಯಂತೆ ಹಾಡುತ್ತಾ, ಹುಟ್ಟು ಸಾರ್ವಭೌಮನಂತೆ ವಿಜೃಂಭಿಸುತ್ತಾ, ರಸಿಕ ಶಿಖಾಮಣಿಯಾಗಿ ಬಾಳುತ್ತಾ, ಕೊನೆಗೆ ನಮ್ಮೆಲರಿಂದ ಕಣ್ಮರೆಯಾದ ಕಾಳಿಂಗರಾಯರು ದೈಹಿಕವಾಗಿ ಕೊನೆಗೊಂಡರು ನಿಜ. ಆದರೆ ಅವರ ನೆನಪು ಮಾತ್ರ ನಿರಂತರ. ಅವರ ಹೆಸರು ಎಂದೆಂದಿಗೂ ಹಸಿರು ಹಸಿರು.

ಕನ್ನಡಕ್ಕೊಬ್ಬನೇ ಕೈಲಾಸಂಹೇಗೋ ಹಾಗೆಯೇ ಕನ್ನಡಕ್ಕೊಬ್ಬನೇ ಕಾಳಿಂಗರಾವ್’. ಇವರಿಬ್ಬರೂ ಕನ್ನಡ ನೆಲದಲ್ಲಿ ಅವತರಿಸಿದ ಕ್ರಾಂತಿ ಪುರುಷರು. ಪ್ರಾತಃ ಸ್ಮರಣೀಯರು. ಮರೆಯಲಾಗದ ಮಹಾನುಭಾವರು. ಪರಿಮಳದವರು. ಇಂತಹ ಅಪೂರ್ವರು ಅವತರಿಸಬೇಕಾದರೆ ನಾವು ಪುಣ್ಯ ಪಡೆದಿರಬೇಕು. ನಾಡೂ ಪುಣ್ಯ ಪಡೆದಿರಬೇಕು.

* * *