ಶ್ರೀ ಬಿ.ಎಸ್. ಕೇಶವರಾಯರನ್ನು ೧೯೫೦ಕ್ಕೂ ತುಸು ಹಿಂದಿನಿಂದ ನಾವು ಬಲ್ಲೆವು. ಕಾಳಿಂಗರಾಯರೆಂದರೆ ಇವರಿಗೆ ಪ್ರಾಣ. ಈ ಇಬ್ಬರೂ ಒಬ್ಬರನ್ನೊಬ್ಬರು ಬಹುವಾಗಿ ಹಚ್ಚಿಕೊಂಡಿದ್ದರು. ನಾವೆಲ್ಲಾ ಒಟ್ಟಾಗಿ ಸೇರಿ ಕೆಲವಾರು ಕಡೆ ಸಂಚರಿಸಿದ್ದುಂಟು. ದಿನಗಟ್ಟಲೆ ಹರಟೆ ಹೊಡೆದದ್ದುಂಟು. ಆ ದಿನಗಳೆಲ್ಲಾ ಇತಿಹಾಸದ ಮಾತಾಗಿ ಹೋಯಿತು.

ಪ್ರಸ್ತುತ ನಾವು ಹೇಳಬೇಕೆಂದಿರುವುದು ಇದು. ಈ ಕೇಶವರಾಯರು ನಮ್ಮ ಜೊತೆ ಹಲವಾರು ವರುಷ ಓಡಾಡಿದ್ದಷ್ಟೇ ಅಲ್ಲ. ಸ್ವಯಂ ಕಲಾವಿದರಾದ ಇವರು ಕಲಾವಿದರಾದ ನಮ್ಮ ಹಾಗೂ ಕಾಳಿಂಗರಾಯರ ಬದುಕನ್ನು ಬಹು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ನಮ್ಮ ಜೊತೆಗಿದ್ದು ತಮಗಾದ ಅನುಭವಗಳನ್ನು ಸ್ವಾರಸ್ಯವಾಗಿ, ಸತ್ಯಸಾಕ್ಷಿಯಾಗಿ ಈ ಲೇಖನಗಳಲ್ಲಿ ಬರೆದಿದ್ದಾರೆ. ನಾವೆಲ್ಲ ಒಟ್ಟಾರೆ ಕೆಲವು ನಾಟಕ ಹಾಗೂ ಗೀತನಾಟಕಗಳಲ್ಲಿ ಭಾಗವಹಿಸಿದುದೂ ಉಂಟು. ಶ್ರೀ ಕಾಳಿಂಗರಾಯರ ಜೀವನವನ್ನು ರಸವತ್ತಾಗಿ ಚಿತ್ರಿಸಿರುವ ಶ್ರೀ ಬಿ. ಎಸ್. ಕೇಶವರಾವ್‌ ಅವರ ಈ ಕಾರ್ಯ ಸ್ತುತ್ಯರ್ಹ. ಅವರಿಗೆ ಈ ದಿಶೆಯಲ್ಲಿ ಒಳ್ಳೇದಾಗಲೆಂದು ಹಾರೈಸುತ್ತೇವೆ.

ಇತಿ, ನಿಮ್ಮ
ಸೋಹನ್ ಕುಮಾರಿ
ತಾ|| ೨೫-೨-೧೯೯೩
ಬೆಂಗಳೂರು.

* * *