ಮಿತ್ರರೆ,

ಕನ್ನಡ ಜನತೆಗೆ ಜನಪದಗೀತೆ, ಭಾವಗೀತೆ ಹಾಗೂ ಕನ್ನಡ ಗೀತೆಗಳ ಧಾಟಿಯನ್ನು ಪರಿಚಯಿಸಿದ ಏಕೈಕ ವ್ಯಕ್ತಿ ಎಂದರೆ ಪಿ. ಕಾಳಿಂಗರಾಯರು.

ಅವರು ಗೀತೆಗಳನ್ನು ಹಾಡುತ್ತಿದ್ದ ರೀತಿ ಅಸದಳವಾದದ್ದು ಮೈಮರೆತು ಹಾಡುತ್ತಿದ್ದರು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ, ೧೯೭೦ ರಲ್ಲಿ ಮಂಡ್ಯದ ಫಲ ಪುಷ್ಪ ಪ್ರದರ್ಶನದಲ್ಲಿ ಕಾಳಿಂಗರಾಯರ ಮಧುರ ಧ್ವನಿಯ ಭಾವಗೀತೆ, ಜನಪದ ಗೀತೆಗಳನ್ನು ಕೇಳುವ ಸುಯೋಗ ಲಭಿಸಿತ್ತು.

ಕಾಳಿಂಗರಾಯರ ಶರೀರ ಪೀಚಾದರೂ ಶಾರೀರ ಮಾತ್ರ ಕಂಚಿನ ಕಂಠದ್ದಾಗಿತ್ತು ‘ಯಾರು ಹಿತವರು ನಿನಗೆ ಈ ಮೂವರೊಳಗೆ’… “ಏರಿಸಿ ಹಾರಿಸಿ ಕನ್ನಡದ ಬಾವುಟ”…. “ಮೂಡಲ್‌ ಕುಣಿಗಲ್ ಕೆರೆ…” ಮುಂತಾದ ಹಾಡುಗಳನ್ನು ಕನ್ನಡ ಜನತೆ ಎಂದಿಗೂ ಮರೆಯಲಾರದು. ಕಾಳಿಂಗರಾಯರು ಈ ಹಾಡುಗಳ ಮೂಲಕ ಅಮರರಾಗಿದ್ದಾರೆ.

ಜೀವನದ ಕೊನೆಯವರೆಗೂ ವೈಯಕ್ತಿಕವಾಗಿ ಎಷ್ಟೇ ನೋವಿದ್ದರೂ ಆ ನಂಜನ್ನು ನುಂಗಿಕೊಂಡು ಹಾಡಿ ರಂಜಿಸುತ್ತಿದ್ದ ರಾಯರು ತತ್ವಜ್ಞಾನಿಯೇ ಸರಿ. ಜೀವನದ ಸಂಧ್ಯಾಕಾಲದ ಕೊನೆಗಳಿಗೆಯಲ್ಲೂ “ದೇವೀಸ್ತುತಿ” ಹಾಡುವುದರ ಮೂಲಕ ಇಹಲೋಕ ತ್ಯಜಿಸಿದ ಪಿ. ಕಾಳಿಂಗರಾಯರು ಅಮರರಾಗಿದ್ದಾರೆ.

ದಿವಂಗತ ಪಿ. ಕಾಳಿಂಗರಾಯರ ಜೀವನ ಪರಿಚಯವನ್ನು ಸೊಗಸಾಗಿ ನಿರೂಪಿಸಿದ ಬಿ.ಎಸ್. ಕೇಶವರಾವ್ ಅವರಿಗೂ, ಇದನ್ನು ೨೩ ಕಂತುಗಳಲ್ಲಿ ಪ್ರಕಟಿಸಿದ ‘ಕನ್ನಡ ಪ್ರಭ’ ಬಳಗಕ್ಕೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಡಾ|| ಕೆ.ಸಿ. ಮರಿಯಪ್ಪ
ಹೊಳೆನರಸೀಪುರ.

* * *