ಕನ್ನಡದ ಕೋಗಿಲೆ’ ಎಂದೇ ಚಿರಪರಿಚಿತರಾಗಿದ್ದ ಪಿ. ಕಾಳಿಂಗರಾಯರನ್ನು ನಾನು ೧೯೫೦ರಿಂದಲೇ ಬಲ್ಲೆ. ಬಲ್ಲೆ ಎಂದರೆ, ಚೆನ್ನಾಗಿಯೇ ಬಲ್ಲೆ. ಸುಮಾರು ಮೂರು ದಶಕಗಳ ಕಾಲ ಅವರೆ ಬದುಕನ್ನು ಬಹು ಹತ್ತಿರದಿಂದ ಗಮನಿಸಿದವನು ನಾನು.

ನನಗೀಗ ಅರವತ್ತೇಳರ ಪ್ರಾಯ. ನಿವೃತ್ತನಾಗುವ ಮುನ್ನ ವೃತ್ತಿಯಿಂದ, ನಾನೊಬ್ಬ ಉಪನ್ಯಾಸಕನಾಗಿದ್ದೆ. ಅಲ್ಲದೆ ಪ್ರವೃತ್ತಿಯಿಂದ ಲಾಗಾಯ್ತಿನಿಂದಲೂ ನಾನೂ ಒಬ್ಬ ಕಲಾವಿದ ಹಾಗೂ ಬರಹಗಾರ. ಮತ್ತೆ ಭಾಷಣಕಾರನೂ ಅಹುದು.

ಸುಮಾರು ನಲವತ್ತೈದು ವರ್ಷಗಳಿಂದಲೂ ರಂಗಭೂಮಿಯ ನಿಕಟ ಸಂಪರ್ಕವಿರುವ ನನಗೆ ವಿವಿಧ ಕಲಾವಿಭಾಗಗಳಲ್ಲಿ ರಂಜಿಸಿದ, ರಂಜಿಸುತ್ತಿರುವ ಅನೇಕ ಕಲಾವಿದರ ಪರಿಚಯವಿದೆ. ಇವರೆಲ್ಲರ ಪೈಕಿ ನಾನು ಬಹುವಾಗಿ ಮೆಚ್ಚಿದವರು ಹಲವರು. ಆ ಹಲವರ ಪೈಕಿ ಕಾಳಿಂಗರಾಯರು ನನಗೆ ಬಹು ಅಚ್ಚುಮೆಚ್ಚಾಗಿದ್ದವರು.

“ಪಿ. ಪುಟ್ಟಯ್ಯ” ಇವರು ಯಕ್ಷಗಾನ ಕ್ಷೇತ್ರದಲ್ಲಿ ಬಹು ಪ್ರಸಿದ್ಧರಾಗಿದ್ದವರು. ಅಲ್ಲದೆ ವಿಖ್ಯಾತ ನೃತ್ಯಪಟು. ಅವರಿಗಿದ್ದ ತಾಳಜ್ಞಾನ ಅಮೋಘವಾದದ್ದು. ಒಮ್ಮೆ ಅವರು ಯಕ್ಷಗಾನದ ಕುಣಿತವನ್ನು ಅಭ್ಯಸಿಸುತ್ತಿದ್ದರು. ಅಭ್ಯಾಸವೆಂದರೆ, ನರನಾಡಿ ಕಿತ್ತುಬರುವಂಥ ಅಭ್ಯಾಸ ! ಹೀಗೆ ಅಭ್ಯಾಸ ನಡೆಸುತ್ತಿರಬೇಕಾದರೆ ಡೋಲು ನುಡಿಸುತ್ತಿದ್ದವನು ಅರ್ಧ ಮಾತ್ರೆ ತಾಳ ತಪ್ಪಿದ. ಪುಟ್ಟಯ್ಯನವರ ಬಲಗಾಲ ಹೆಜ್ಜೆ ನೆಲಮುಟ್ಟದೆ ನಿಂತಲ್ಲೆ ನಿಂತಿತು. ಪುಟ್ಟಯ್ಯನವರು ಸಿಡುಕುಮುಖದಿಂದ ತಬಲದವನನ್ನು ದಿಟ್ಟಿಸಿ ‘ಅಯೋಗ್ಯ’ ನೀನು ತಾಳತಪ್ಪದೆ ನುಡಿಸಿದ್ದಿದ್ರೆ ಏಟಿಗೆ ಸರಿಯಾಗಿ ನನ್ನ ಈ ಹೆಜ್ಜೆಯನ್ನು ನೆಲಮುಟ್ಟಿಸಬೇಕಿತ್ತು. ನೀನು ತಾಳ ತಪ್ಪಿದ್ದರಿಂದ ನಾನೀಗ ಹೆಜ್ಜೆಯನ್ನು ನೆಲದ ಮೇಲಿಡಲಾಗಲಿಲ್ಲ. ಈಗಿದನ್ನ ಎಲ್ಲಿಡಲಿ? ನಿನ್ನ ತಲೆಯ ಮೇಲಿಡಲೇ? ಬೊಗಳು’ ಎಂದು ಅಬ್ಬರಿಸಿದರು. ಆ ಕಾಲದಲ್ಲಿ ಪುಟ್ಟಯ್ಯನವರ ಕುಣಿತಕ್ಕೆ ತಬಲ ಅಥವ ಮದ್ದಳೆ ನುಡಿಸುವವನು ತಾಳ ಬ್ರಹ್ಮನಾಗಿರಬೇಕಿತ್ತು! ಯಕ್ಷಗಾನದ ತಾಳಲಯದಲ್ಲಿ ಪುಟ್ಟಯ್ಯನವರದ್ದು ಆ ಮಟ್ಟದ ಪರಿಪಕ್ವತೆ.

ಯಕ್ಷಗಾನದಲ್ಲಿ ರಾಜ್ಯಪ್ರಶಸ್ತಿ ಗಿಟ್ಟಿಸಿದ ಹಾರಾಡಿ ಗ್ರಾಮದ ರಾಮಗಾಣಿಗ – (ಹಾರಾಡಿ ರಾಮ ಎಂದೇ ಪ್ರಸಿದ್ಧಿ)- ಪುಟ್ಟಯ್ಯನವರ ಶಿಷ್ಯರಲ್ಲೊಬ್ಬ. ಅಂತಹ ಶಿಷ್ಯೋತ್ತಮರು ಪುಟ್ಟಯ್ಯನವರಿಗೆ ಅನೇಕರು. ಮೂಲೆ ಗುಂಪಾಗಿದ್ದ ಯಕ್ಷಗಾನಕ್ಕೆ ದಿವ್ಯ ಚೈತನ್ಯ ಚಾಲನೆಯನಿತ್ತ ಮಹಾಕಲಾವಿದರು ಪಿ. ಪುಟ್ಟಯ್ಯ. ಯಕ್ಷಗಾನದತ್ತ ಒಲವು ತೋರಿ ಬಂದ ಯುವಕರನೇಕರನ್ನು ತನ್ನ ಮನೆಯಲ್ಲೇ ವರ್ಷಾನುಗಟ್ಟಲೆ ಇರಿಸಿಕೊಂಡು ತನ್ನೆಲ್ಲಾ ಕಲಾಶಕ್ತಿಯನ್ನು ಶಿಷ್ಯರ ಏಳಿಗೆಗಾಗಿ ವ್ಯಯಮಾಡಿ ಅವರ ಶ್ರೇಯಸ್ಸಿಗೆ ಕಾರಣರಾದ ವ್ಯಕ್ತಿ ಅವರು.

ಆಗಿನ ಕಾಲದಲ್ಲಿ ಯಕ್ಷಗಾನ ನಡೆಯುತ್ತಿದ್ದುದು ಹೆಚ್ಚಾಗಿ ದಕ್ಷಿಣ ಕನ್ನಡ ಜಲ್ಲೆಯ ಪ್ರದೇಶಗಳಲ್ಲಷ್ಟೇ. ನಮ್ಮ ಕಡೆಗಳಲ್ಲಿ ಅದು ನಡೆಯುತ್ತಿದ್ದುದು ಅಪರೂಪಕ್ಕೆ. ಈಗಲೂ ಈ ಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯೇನೂ ಆಗಿಲ್ಲ. ಆದರೆ ಯಕ್ಷಗಾನ ಪ್ರಸಂಗಗಳ ಕಾಲಾವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮೊದಲಿಗೆ, ರಾತ್ರಿ ಎಂಟು ಗಂಟೆಯ ಹೊತ್ತಿಗೆ ಶ್ರೀ ಗಣಪತಿ ಪೂಜೆಯಿಂದ ಪ್ರಾರಂಭವಾಗಿ ಮರುದಿನ ಮುಂಜಾನೆಯ ಹೊತ್ತಿಗೆ ಮುಗಿಯುತ್ತಿದ್ದ ಯಕ್ಷಗಾನ ಈಗೀಗ ಕೇವಲ ಮೂರು ಗಂಟೆ ಕಾಲಮಿತಿಯಲ್ಲಿ ಮುಗಿಯುವಷ್ಟು ಮಾರ್ಪಾಡಾಗಿದೆ. ಈ ಕಾರಣದಿಂದ ಪಟ್ಟಣವಾಸದವರೂ ಸಿನಿಮಾ, ನಾಟಕಗಳನ್ನು ನೋಡುವಂತೆ ಯಕ್ಷಗಾನವನ್ನು ನೋಡಬಹುದಾಗಿದೆ.

ಹೀಗೆ ಯಕ್ಷಗಾನ ಪ್ರಸಂಗಗಳನ್ನು ಪರಿಷ್ಕರಿಸಿ ಅವುಗಳ ಸುದೀರ್ಘ ಕಾಲಾವಧಿಯನ್ನು ಕೇವಲ ಎರಡು ಮೂರು ಗಂಟೆಗೆ ಇಳಿಸಿ, ಅವುಗಳ ರೀತಿ ನೀತಿಗಳನ್ನು ನವೀಕರಿಸಿ, ದೇಶ ವಿದೇಶದವರೂ ಈ ಪ್ರಾಚೀನ ಯಕ್ಷಗಾನ ಕಲಾವೈಭವಕ್ಕೆ ಮರುಳಾಗಿ ಮೆಚ್ಚಿ ಹುಬ್ಬೇರಿಸಿ ‘ಭೇಷ್’ ಎಂದು ಉದ್ಗರಿಸುವಂತೆ ಮಾಡಿದ ಕೀರ್ತಿ ಸಲ್ಲಬೇಕಾದ್ದು ಡಾ|| ಶಿವರಾಮ ಕಾರಂತರಿಗೆ. ಕಾರಂತರು ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಾಂತಿಕಾರಿ ಕಾರ್ಯಕ್ರಮಗಳಿಗೆ ಕುಮ್ಮಕ್ಕು ಕೊಟ್ಟು ಅವರ ಜೊತೆಜೊತೆಗೇ ದುಡಿದವರು ಕು.ಶಿ. ಹರಿದಾಸ ಭಟ್ಟರು. ಶಿವರಾಮ ಕಾರಂತರು ಸಾಮಾನ್ಯವಾಗಿ ಯಾರನ್ನೂ ಮೆಚ್ಚುತಿದ್ದುದು ಅಪರೂಪಕ್ಕೆ. ಅವರಿವರಲ್ಲಿ, ಸಂಘ ಸಂಸ್ಥೆಗಳಲ್ಲಿ ಕಂಡುಬರುವ ಲೋಪ ದೋಷಗಳನ್ನು ಅಂಕು ಡೊಂಕುಗಳನ್ನು ಎತ್ತಿ ಆಡುವುದೇ ಅವರ ಪ್ರವೃತ್ತಿ. ಕಾರಂತರು ಮುಖದಾಕ್ಷಿಣ್ಯಕ್ಕೆ ಎಂದೂ ಮಾತನಾಡುತ್ತಿರಲಿಲ್ಲ. ಇದ್ದುದನ್ನು ಇದ್ದ ಹಾಗೆ, ಹರಿತವಾದ ಕತ್ತಿಯಿಂದ ಹೊಡೆದ ಹಾಗೆ ಮಾತನಾಡುವುದೆ, ಅವರ ಜಾಯಮಾನ. ಅವರಂತೆ ನಿರ್ಭೀತಿಯಿಂದ, ನಿರ್ದಾಕ್ಷಿಣ್ಯವಾಗಿ, ನಿಸ್ಸಂಕೋಚವಾಗಿ ಮಾತನಾಡುವವರು ನಮ್ಮಲ್ಲಿ ವಿರಳ. ಇಲ್ಲವೇ ಇಲ್ಲ ಎಂದರೂ ತಪ್ಪಾಗದು.

ಇಂಥ ಡಾ|| ಶಿವರಾಮ ಕಾರಂತರು ತಮ್ಮ ಸಂಶೋಧನ ಗ್ರಂಥ “ಯಕ್ಷಗಾನ ಬಯಲಾಟ” ದಲ್ಲಿ ಪಿ.ಪುಟ್ಟಯ್ಯನವರು ಯಕ್ಷಗಾನ ಕಲಾ ಸೇವೆಯನ್ನು ಕೊಂಡಾಡಿದ್ದಾರೆ ಎಂದ ಮೇಲೆ ಪುಟ್ಟಯ್ಯನವರ ಕಲಾಶಕ್ತಿ ಯಾವ ಮಟ್ಟದ್ದು ಎಂಬುದನ್ನು ವಾಚಕರು ಊಹಿಸಿಕೊಳ್ಳಬಹುದು.

ಪುಟ್ಟಯ್ಯನವರ ಪತ್ನಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಗ್ರಾಮ ಆರೂರಿನ ನಾಗಮ್ಮನವರು. ಈಕೆಯ ಗರ್ಭಾಂಬುಧಿಯಲ್ಲಿ ೧೯೧೪ನೇ ಆಗಸ್ಟ್‌೩೧ ರಂದು ಜನ್ಮತಳೆದವರು, ಕಾಳಿಂಗರಾಯರು.

ದಕ್ಷಿಣ ಜಿಲ್ಲೆಯ ಪಾಂಡೇಶ್ವರದ ವಂಶ ಪರಂಪರೆಯಲ್ಲಿ ಹುಟ್ಟಿ ಬೆಳೆದು ಪ್ರಖ್ಯಾತರಾಗಿದ್ದ ಪಾಂಡೇಶ್ವರದ ಪುಟ್ಟಯ್ಯನವರ ಮಗ ಕಾಳಿಂಗರಾಯರನ್ನು ನ್ಯಾಯವಾಗಿ ಪಿ.ಪಿ.ಕಾಳಿಂಗರಾವ್ ಎಂದೇ ಕರೆಯಬೇಕು. ಆದರೆ ಹಾಗೆ ಹೆಸರನ್ನು ಇಟ್ಟಿದ್ದೇ ಆದರೆ ಮುಂದೆ ಪಿ.ಪಿ. ಕಾಳಿಂಗರಾವ್ ಎಂಬುದು ‘ಪೀಪಿ’ ಕಾಳಿಂಗರಾವ್ ಎಂದಾಗಿ ಆಭಾಸಕ್ಕೆ ಎಡೆಯಾಗಬಹುದೆಂದರಿತ ಪುಟ್ಟಯ್ಯನವರು ತಮ್ಮ ಮುದ್ದಿನ ಮಗನನ್ನು ಪಿ. ಕಾಳಿಂಗರಾವ್ ಎಂದಷ್ಟೇ ಕರೆದರು.

ಕಾಳಿಂಗರಾಯರ ಹುಟ್ಟು ಹೆಸರು ‘ಕಾಳಿಂಗ ಶರ್ಮ’ ನಂತರ ಇದು ‘ಸುಬ್ಬರಾಯ ಶಾನುಭಾಗ್‌’ ಎಂದಾಗಿ ಕೊನೆಗೆ ‘ಕಾಳಿಂಗ ರಾವ್’ ಎಂದು ಬದಲಾದ ಈ ಹೆಸರೇ ರಾಯರ ಖಾಯಂ ಹೆಸರಾಯಿತು.

ಕಾಳಿಂಗರಾಯರ ಶಾಲಾ ಜೀವನ ಅಷ್ಟು ಆಕರ್ಷಕವಾದದ್ದೇನಲ್ಲ ಹಾಗೂ ಹೀಗೂ ತಡವಿ ತಟ್ಟಿ ಮುಗ್ಗರಿಸಿ ಒಂದಷ್ಟು ಶಾಲೆಗಳಿಗೆ ಮಣ್ಣು ಹಾಕಿದ್ದರು ಅಷ್ಟೇ. ಪಾಂಡೇಶ್ವರ ಸಮೀದಲ್ಲಿದ್ದುದು ಸೂರಾಲ್ ಸಂಸ್ಥಾನ. ಆ ಸಣ್ಣ ಸಂಸ್ಥಾನದ ಅರಸು ನಾಗೇಂದ್ರ ತೋಳ್ಹಾರ್ ಎಂಬುವರು. ಕಾಳಿಂಗರಾಯರ ಪ್ರಾಥಮಿಕ ಶಿಕ್ಷಣ ನಡೆದದ್ದು ಸುರಾಲ್ ಅರಸರ ಶಾಲೆಯಲ್ಲೇ.

ಕಾಳಿಂಗರಾಯರ ಸೋದರಮಾವ ಮಂಜಯ್ಯ ಅಂಬುವರು ಆ ಸಮಯದಲ್ಲಿ ಸೂರಾಲ್ನಲ್ಲಿದ್ದು ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದರು. ಮೂಲತಃ ಕಾಳಿಂಗರಾಯರಿಗೆ ಸಂಗೀತಾಭ್ಯಾಸ ಪ್ರಾರಂಭಿಸಿದವರೇ ಈ ಮಂಜಯ್ಯನವರು. ಐದಾರು ವರ್ಷದ ಕಾಳಿಂಗರಾಯರನ್ನು ತೊಡೆಯ ಮೇಲೆ ಕೂರಿಸಿಕೊಡು ಮುದ್ದಿಸುತ್ತಾ ಅನೇಕ ದೇವರನಾಮ ಹಾಗೂ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಅಲ್ಲದೆ ಅಲ್ಲಿಯ ಸೂರಾಲ್ ಸ್ಕೂಲ್‌ನಲ್ಲಿ ಕಾಳಿಂಗರಾಯರು ಸುಮಾರು ಐದನೇ ತರಗತಿಯವರೆಗೆ ಓದಿದರು. ಆ ದಿಶೆಯಲ್ಲಿ ಚುರುಕಾಗಿದ್ದ ರಾಯರು ಸ್ಕೂಲಿನ ವಾರ್ಷಿಕೋತ್ಸವ ಸಮರಂಭದಲ್ಲಿ ಆಡಿದ ‘ಚಂದ್ರಹಾಸ’ ನಾಟಕದ ಬಾಲಕ ಚಂದ್ರಹಾಸನ ಪಾತ್ರದಲ್ಲಿ ಮಿಂಚಿದರಲ್ಲದೆ, ಮುಖ್ಯ ಅತಿಥಿ ಗೌನ್ ಎಂಬ ಸಾಹೇಬರಿಂದ ಚಿನ್ನದ ಪದಕವನ್ನೂ ಪಡೆದರು! ಎಳವೆಯಲ್ಲೇ ರಾಯರಿಗೆ ಈ ಯಶಸ್ಸು!

* * *