ಬಣ್ಣದ ಬದುಕಿನ ಬಂಧನ ಬಯಸದವರಾರು? ಆದರೆ ಬಣ್ಣದ ಬದುಕಿನಿಂದ ಕಲಾಜೀವನ ಆರಂಭಿಸಿದ ಕಾಳಿಂಗರಾಯರು ಬಹು ಬೇಗ ಸ್ವಯಂಪ್ರೇರಣೆಯಿಂದ ಅದಕ್ಕೆ ವಿದಾಯ ಹೇಳಿದರು….

ಅಂಬಾ ಪ್ರಸಾದಿತ ನಾಟಕ ಮಂಡಳಿ. ಇದರ ಮಾಲೀಕರು ಮುಂಡಾಜೆ ರಂಗನಾಥ ಭಟ್ಟರು. ಅಂದಿನ ದಿನಗಳಲ್ಲಿ ಜನಪ್ರಿಯ ನಟರಾಗಿದ್ದ ರಂಗನಾಥ ಭಟ್ಟರು ಒಳ್ಳೆಯ ಕರ್ನಾಟಕ ಸಂಗೀತ ಪದ್ಧತಿಯ ವಿದ್ವಾಂಸರೂ ಆಗಿದ್ದರು. ಸುರಾಲಿನಲ್ಲಿ ಬಾಲಕ ಕಾಳಿಂಗರಾಯರ ಪ್ರತಿಭೆಯನ್ನು ಕಂಡ ಭಟ್ಟರು, ಪುಟ್ಟಯ್ಯನವರ ಮನವೊಲಿಸಿ ರಾಯರನ್ನು ತಮ್ಮ ನಾಟಕದ ಕಂಪೆನಿಗೆ ಸೇರಿಕೊಂಡು ಧ್ರುವ, ಕೃಷ್ಣ ಮುಂತಾದ ಬಾಲಕರ ಪಾತ್ರಗಳನ್ನಿತ್ತರು. ರಾಯರಿಗೆ ಭಟ್ಟರಿಂದೇ ಸಂಗೀತಾಭ್ಯಾಸ, ಮುಂಜಾನೆಯಿಂದ ಸಂಜೆಯವರೆಗೆ, ಸತತವಾಗಿ. ರಾಯರು ಆಡುವ ಆ ದಿನಗಳಲ್ಲಿ ಹಾಡುವುದರಲ್ಲಿ ಕಳೆಯಬೇಕಾಯಿತು. ಈ ಅಭ್ಯಾಸ ಒಂದೆರಡು ತಿಂಗಳಲ್ಲ; ಆರೇಳು ವರ್ಷ! ದಿನಂಪ್ರತಿ ಈ ರೀತಿಯ ರಾಕ್ಷಸ ಸಾಧನೆ. ಮತ್ತೆ ಸಂಜೆಯಾಗುತ್ತಿದ್ದಂತೆ ಬಣ್ಣ ಬಳಿದುಕೊಂಡು ನಾಟಕದಲ್ಲಿ ಪಾತ್ರವಹಿಸುವುದು. ಹೀಗಾಗಿ ಆ ದಿನಗಳಲ್ಲಿ ರಾಯರಿಗೆ ಹೊರ ಪ್ರಪಂಚವನ್ನು ಕ್ಷಣಕಾಲ ನೋಡುವುದೂ ಸಾಧ್ಯವಾಗದೇ ಹೋಯಿತು. ದಿನನಿತ್ಯ ಬೆಳಗಿನಿಂದ ಸಂಜೆಯವರೆಗೆ ಹಾಡುತ್ತಿರುವುದು. ಸಂಜೆಯಿಂದ ಮಧ್ಯರಾತ್ರಿಯವರೆಗೆ ನಟಿಸುತ್ತಿರುವುದು. ಇದೇ ರಾಯರ ದಿನಚರಿ, ಆ ದಿನಗಳಲ್ಲಿ ಕಾಳಿಂಗರಾಯರ ಮೊದಲ ಸಂಗೀತ ಕಛೇರಿ ಶಿವಮೊಗ್ಗದಲ್ಲಿ, ಅವರ ಹದಿನಾರನೆಯ ವಯಸ್ಸಿನಲ್ಲಿ; ಶಿವಮೊಗ್ಗದ ಜಿಲ್ಲಾಧಿಕಾರಿ ಬಿ.ಟಿ.ಕೇಶವಯ್ಯಂಗಾರ್ಯರ ಸಮ್ಮುಖದಲ್ಲಿ. ಅಂದು ಸಭಿಕರೆಲ್ಲರ ಪ್ರಶಂಸೆಗೆ ಪಾತ್ರರಾದ ರಾಯರಿಗೆ ಕೇಶವಯ್ಯಂಗಾರ್ಯರು ಶಾಲು ಹೊದಿಸಿ, ಚಿನ್ನದ ತೋಡಾ ತೊಡಿಸಿ ಆಶೀರ್ವದಿಸಿದರು. ಹದಿನಾರರ ಪ್ರಾಯದಲ್ಲೇ ಈ ರೀತಿಯ ಪ್ರಶಂಸೆ, ಪುರಸ್ಕಾರ!

ಹೀಗೆ ಒಳ್ಳೆಯ ರೂಪು, ಶರೀರ, ಶಾರೀರ ಹಾಗೂ ವಿದ್ವತ್ತನ್ನು ಗಳಿಸಿದ್ದ ಕಾಳಿಂಗರಾಯರು ತಮ್ಮ ಹದಿನಾರನೇ ವಯಸ್ಸಿನಿಂದಾಚೆಗೆ ಅವರಿದ್ದ ಅಂಬಾ ಪ್ರಸಾದಿತ ನಾಟಕ ಮಂಡಳಿಯಲ್ಲಿ ಹಲವು ವರ್ಷ ಮುಖ್ಯ ಸ್ತ್ರೀಪಾತ್ರಗಳನ್ನು, ಸ್ತ್ರೀಯರೂ ನಾಚಿ ನೀರಾಗುವಂತೆ, ಅಭಿನಯಿಸುತ್ತಿದ್ದರು. ರಾಯರೊಬ್ಬರೇ ಏಕೆ. ಆಗಿನ ಕಾಲದಲ್ಲಿ ಬೋಧ, ನಾಗೇಂದ್ರರಾಯರು, ಗೌರಿನರಸಿಂಹಯ್ಯ ಹೀಗೆ ಇನ್ನೂ ಅನೇಕ ಮಂದಿ ಮಹಾನ್ ನಟರೆಲ್ಲಾ ಪ್ರಸಿದ್ಧರಾದದ್ದು ಸ್ತ್ರೀ ಪಾತ್ರಗಳಿಂದಲೇ. ಆ ದಿನಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡಬೇಕಿತ್ತು. ಕನ್ಯೆಯರು ಕಂಪೆನಿಯ ಒಳಕ್ಕೆ ಕಾಲನ್ನೂ ಇಡುತ್ತಿರಲಿಲ್ಲ. ಗಂಡು ಕಲಾವಿದರೇ ಸ್ತ್ರೀ ಪಾತ್ರಧರಿಸಿ ಸೊಗಸಾದ ಅಭಿನಯವನ್ನೇನೋ ನೀಡಲು ಸಮರ್ಥರೆನಿಸಿದ್ದರು. ಆದರೆ ಸೊಗಸಾಗಿ ಹಾಡುವ ಸಾಮರ್ಥ್ಯವನ್ನು ಪಡೆದಿರಲಿಲ್ಲ. ಅಭಿನಯ, ಹಾಡುಗಾರಿಕೆ ಇವೆರಡರಲ್ಲೂ ಸೈ ಎನ್ನಿಸಿಕೊಂಡಿದ್ದ ಕಲಾವಿದರು ಕೆಲವರಷ್ಟೆ. ಅಂಥವರ ಪೈಕಿ ಕಾಳಿಂಗರಾಯರಿಗೆ ಅಗ್ರಪಟ್ಟ.

ಆರ್. ನಾಗೇಂದ್ರರಾಯರು ಮದ್ರಾಸಿನಲ್ಲಿ ಅವರ ಮಗ ಆರ್.ಎನ್. ಜಯಗೋಪಾಲರ ಮನೆಯಲ್ಲಿದ್ದಾಗ ಅವರನ್ನೊಮ್ಮೆ ನಾನು ಭೇಟಿಯಾಗಿದ್ದೆ. ಹಿಂದಿನ ನಾಟಕಗಳ ಬಗ್ಗೆ ಮಾತನಾಡುತ್ತಿದ್ದಾಗ ಅವರೆಂದರು. “ನಮ್ಮ ಕಾಳಿಂಗರಾಯರು ಸ್ತ್ರೀ ಪಾತ್ರಧಾರಿಯಾಗಿ ಶೃಂಗಾರಪೂರ್ಣ ದೃಶ್ಯಗಳಲ್ಲಿ ಅಭಿನಯಿಸುತ್ತಿರಬೇಕಾದರೆ ಅವರೆದುರು ಅಭಿನಯಿಸುತ್ತಿದ್ದ ನಾಯಕ ಪಾತ್ರಧಾರಿಗಳು ನಾಚಿ, ತಬ್ಬಿಬ್ಬಾಗಿ, ಸಂಕೋಚಗೊಂಡು, ಪೆಚ್ಚು ಬಡಿದು ಹೋಗುತ್ತಿದ್ದರು,” ಎಂದವರಂದದ್ದುಂಟು.

ಕಾಳಿಂಗರಾಯರಿಗೆ ರಂಗನಾಥಭಟ್ಟರು ಕರ್ನಾಟಕ ಸಂಗೀತವನ್ನೂ ಅವರ ಕಂಪೆನಿಯ ನಟರಾಗಿದ್ದ ರಾಮಚಂದ್ರ ಬುವಾ ಮರೋಳ್‌ಕರ್ ಹಾಗೂ ವೆಂಕಟರಾವ್‌ ರಾಮದುರ್ಗ ಎಂಬುವರು ಹಿಂದೂಸ್ತಾನಿ ಸಂಗೀತವನ್ನೂ ಹಲವು ವರ್ಷ ಕೇಳಿಕೊಟ್ಟರು. ಹೀಗಾಗಿ ಎರಡು ರೀತಿಯ ಸಂಗೀತ ಪದ್ಧತಿಯಲ್ಲೂ ಕಾಳಿಂಗರಾಯರು ಪಾಂಡಿತ್ಯವನ್ನು ಗಳಿಸಿಕೊಂಡರು ಅಪಾರ ಪರಿಶ್ರಮದಿಂದ ಹಾಗೂ ಆಸಕ್ತಿಯಿಂದ.

ಸ್ತ್ರೀ ಪಾತ್ರ ಹಾಗೂ ರಂಗ ಸಂಗೀತಕ್ಕೆಂದೇ ಹುಟ್ಟಿ ಬಂದವನೆಂದು ಖ್ಯಾತಿ ಗಳಿಸಿದ್ದ ಬಾಲಗಂಧರ್ವರು ಕಾಳಿಂಗರಾಯರ ಶಾರೀರ ಹಾಗೂ ಸ್ತ್ರೀ ಪಾತ್ರಾಭಿನಯಕ್ಕೆ ಮಾರು ಹೋಗಿ ರಾಯರನ್ನು ತಮ್ಮಲ್ಲಿಗೆ ಕರೆಸಿಕೊಂಡು ಗೌರವಿಸಿದರೆಂದರೆ ಅದು ಸಾಮಾನ್ಯ ವಿಷಯವಲ್ಲ!

ರಂಗನಾಥ ಭಟ್ಟರು ಸಂಗೀತ ಕಛೇರಿಯನ್ನು ಮಾಡುತ್ತಿರಬೇಕಾದರೆ ಅವರ ಹಿಂದೆ ಕುಳಿತು ತಂಬೂರಿ ಮೀಟುತ್ತಿರುವ ಕಾಳಿಂಗರಾಯರ ಪೋಟೋವನ್ನು ಅವರ ಮನೆಯಲ್ಲಿ ಅನೇಕ ಬಾರಿ ನೋಡಿದ್ದೇನೆ. ಯುವಕರಾಗಿದ್ದಾಗ ರಾಯರದು ಎಂಥ ರೂಪವೆಂಬುದನ್ನು ತಿಳಿಯಬೇಕಾದರೆ ಆ ಫೋಟೋವನ್ನು ನೋಡಬೇಕು ! ನಮ್ಮ ಚಿತ್ರನಟರಿಗೆಷ್ಟು ಮಂದಿಗೆ ಅಷ್ಟು ಮೋಹಕವಾದ ಆಕರ್ಷಕ ಮುಖವಿದ್ದೀತು?!

ಗ್ರಹಚಾರ. ಅನೇಕ ವರ್ಷಗಳ ಕಾಲ ಸೊಗಸಾಗಿ ನಡೆದು ಬದುಕಿದ್ದ ಅಂಬಾ ಪ್ರಸಾದಿತ ನಾಟಕ ಮಂಡಳಿ ಕುಂಟಲಾರಂಭಿಸಿತು. ಆಗ ರಾಯರಿಗೆ ಇಪ್ಪತ್ತೆರಡರ ಪ್ರಾಯ; ತುಂಬು ತಾರುಣ್ಯ; ಕಂಪೆನಿಯ ಸ್ಥಿತಿಯನ್ನು ಕಂಡು ಕೊರಗುತ್ತಿದ್ದ ಗುರು ರಂಗನಾಥಭಟ್ಟರಿಗೆ ಕಾಳಿಂಗರಾಯರೇ ಸಮಾಧಾನ ಹೇಳಬೇಕಾಯಿತು. ಕಂಪೆನಿಯ ಇತರೇ ನಟರೂ ಕುಮ್ಮಕ್ಕು ಕೊಟ್ಟಿದ್ದರಿಂದ ಕಾಳಿಂಗರಾಯರೇ ಕಂಪೆನಿಯನ್ನು ನಡೆಸುವ ಹೊಣೆ ಹೊತ್ತು, ಉತ್ತರ ಕರ್ನಾಟಕದಲ್ಲಿ ತತ್ತರಿಸಿ ಹೋಗಿದ್ದ ಅಂಬಾ ಪ್ರಸಾದಿತ ನಾಟಕ ಮಂಡಳಿಯನ್ನು ಪುನಶ್ಚೇತನಗೊಳಿಸಿ, ‘ರಾಯರ ಸೊಸೆ’ ಎಂಬ ನಾಟಕ ಸಿದ್ಧಪಡಿಸಿ, ಹೊಸ ಹುರುಪಿನೊಂದಿಗೆ ಬೆಂಗಳೂರಿನಲ್ಲಿ ಆಡಲಾರಂಭಿಸಿದರು. ಈ ‘ರಾಯರ ಸೊಸೆ’ ನಾಟಕದಲ್ಲಿ ಕಾಳಿಂಗರಾಯರೇ ನಾಯಕ. ಬಿ. ಸುಶೀಲ ನಾಯಕಿ. ಆಕೆಯ ತಮ್ಮ ಮಹಾಬಲರಾಯರು ಹಾಸ್ಯ ಪಾತ್ರ ನಿರ್ವಹಿಸುತ್ತಿದ್ದರು. (ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ವಾಸಿಸುತ್ತಿದ್ದ ಮಹಾಬಲರಾಯರನ್ನು ನಾನು ಚೆನ್ನಾಗಿ ಬಲ್ಲೆ. ಆಗಿನ ಕೆಲವು ಕನ್ನಡ ಚಿತ್ರಗಳಲ್ಲೂ ಮಹಾಬಲರಾಯರು ಪಾತ್ರವಹಿಸಿದ್ದರು. ಸ್ವಯಂ ನಾಟಕ ಸಂಸ್ಥೆಯನ್ನು ಸ್ಥಾಪಿಸಲೆತ್ನಿಸಿ ಕೈ ಸುಟ್ಟುಕೊಂಡವರ ಮಹಾಪಂಕ್ತಿಗೆ ಮಹಾಬಲರಾಯರೂ ಸೇರುತ್ತಾರೆ. ಕೂಡಿರಿಸಿಕೊಂಡಿದ್ದ ಕಾಸನ್ನೆಲ್ಲಾ ಕಂಪೆನಿ ಕಟ್ಟಲು ಹೋಗಿ ಕಳೆದುಕೊಂಡವರು ಮಹಾಬಲರಾಯರು)

ಅಂಬಾ ಪ್ರಸಾದಿತ ನಾಟಕ ಮಂಡಳಿ ಕಾಳಿಂಗರಾಯರ ನೇತೃತ್ವದಲ್ಲಿ ಸ್ವಲ್ಪ ಕಾಲ ಚೆನ್ನಾಗಿಯೇ ನಡೆಯಿತು. ಆದರೆ, ರಾಯರಿಗೆ ನಾಟಕದ ಕಂಪೆನಿಯ ಬದುಕು, ಅಲ್ಲಿಯ ಹೊಲಸು ರಾಜಕೀಯ, ತರಲೇ ನಟರು ತಂದೊಡ್ಡುತ್ತಿದ್ದ ತಾಪತ್ರಯ ಇವೆಲ್ಲ ಹಿಡಿಸಲಿಲ್ಲ. ಬೇಸತ್ತ ಭಟ್ಟರು ಕಂಪೆನಿಗೆ ಬೈ ಬೈ ಹೇಳಿ, ಬಣ್ಣದ ಬದುಕಿನಿಂದ ಬಿಡಿಸಿಕೊಂಡರು.

ಹೀಗೆ ಬಣ್ಣದ ಬದುಕಿನ ಬಂಧನದಿಂದ ಬಿಡಿಸಿಕೊಂಡು ಬಂದ ಕಾಳಿಂಗರಾಯರು ಮತ್ತೆಷ್ಟೋ ಮಂದಿ ಮಂಡಿಯೂರಿ ಬೇಡಿದರೂ ನಾಟಕದ ಕಂಪೆನಿಗಳಿಗೆ ನಟನಾಗಿ ಕಾಲಿಡಲಿಲ್ಲ. ಬದಲು ಕೆಲವಾರು ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕಾಳಿಂಗರಾಯರ ಸಂಗೀತ ನಿರ್ದೇಶನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡ ಸಂಸ್ಥೆ ಎಂದರೆ ನಾಟಕರತ್ನ ವೀರಣ್ಣನವರ ಗುಬ್ಬಿ ಶ್ರೀ ಚೆನ್ನಬಸವೇಶ್ವರ ನಾಟಕ ಮಂಡಳಿ. ಈ ಮಂಡಳಿಯ ಹಲವಾರು ನಾಟಕಗಳಿಗೆ ರಾಯರು ಸಂಗೀತ ಅಳವಡಿಸಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಅಂದಿನ ಕಾಲದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡಿ ವೀರಣ್ಣನವರು ೧೯೫೫ ರಲ್ಲಿ ತಯಾರಿಸಿದ ‘ದಶಾವತಾರ’ ನಾಟಕಕ್ಕೆ ಕಾಳಿಂಗರಾಯರು ಅಳವಡಿಸಿದ ಸಂಗೀತ ಅಮೋಘವಾದದ್ದು. ಈ ನಾಟಕದ ಗೀತೆಗಳಿಗೆ ಕಾಳಿಂಗರಾಯರು ಅಳವಡಿಸಿದ ಸ್ವರ ಸಂಯೋಜನೆ ರಂಗ ಗೀತಾ ಪ್ರಕಾರದಲ್ಲಿ ಒಂದು ಮುರಿಯಲಾಗದ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿತು.

ವೃತ್ತಿ ರಂಗಭೂಮಿಗೆ ಸಂಬಂಧಿಸಿದಂತೆ ಇಲ್ಲೊಂದು ಸಣ್ಣ ಸ್ವಾರಸ್ಯಕರ ಸುಂದರ ಪ್ರಸಂಗ –

ಪ್ರಖ್ಯಾತ ರಂಗನಟ ಹಾಗೂ ಚಿತ್ರನಟ ರಾಮಚಂದ್ರ ಶಾಸ್ತ್ರಿಗಳೂ ಕೆಲಕಾಲ ಒಂದು ನಾಟಕ ಮಂಡಳಿಯನ್ನು ಕಟ್ಟಿ ಕೈಸುಟ್ಟುಕೊಂಡರು. ಆ ಕಂಪನಿಯವರು ಆಡುತ್ತಿದ್ದ ಅದೇ ‘ರಾಯರ ಸೊಸೆ’ ನಾಟಕಕ್ಕೆ ಕಾಳಿಂಗರಾಯರು ಸಂಗೀತ ನಿರ್ದೇಶಕರಾಗಿದ್ದರು. ಆ ನಾಟಕದ ಹಿಂಬದಿ ಗಾಯಕಿಯಾಗಿದ್ದ ಮೋಹನ್‌ಕುಮಾರಿ ಅವರಿಗೆ ಕಾಳಿಂಗರಾಯರು ಒಂದು ದಿನ ಬೆಳಿಗ್ಗೆ ಹಾಡೊಂದನ್ನು ಹೇಳಿಕೊಡುತ್ತಿದ್ದರು. ಆ ಹಾಡಿನ ಒಂದು ತಾನ್‌(ಭಿರ‍್ಕ) ಎಷ್ಟು ಬಾರಿ ಹೇಳಿ ಕೊಟ್ಟರೂ ಮೋಹನ್ ಕುಮಾರಿಯವರ ಬಾಯಲ್ಲಿ ನುಡಿಯದು. ಇದನ್ನೆಲ್ಲ ಬಾಗಿಲು ಮುಚ್ಚಿದ್ದ ಕೊಠಡಿಯಾಚೆ ಕುಳಿತು ಆಲಿಸುತ್ತಿದ್ದ ಯೋಗಾನರಸಿಂಹ (ಯೋಗಣ್ಣ – ಆಗ ಇವರೂ ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.) ತಡೆಯಲಾಗದ ಸ್ಫೂರ್ತಿಯಿಂದ ಆ ಸಂಚಾರ ಕ್ರಮವನ್ನು ಸಲೀಸಾಗಿ ಹಾಡಿದ್ದನ್ನು ಒಳಗಿನಿಂದ ಆಲಿಸಿದ ರಾಯರು ಸರ್ರನೆ ಮೇಲೆದ್ದು, ಬಾಗಿಲು ತೆರೆದು, ಯಾರೆಂದು ನೋಡುವಷ್ಟರಲ್ಲಿ ಈ ಯೋಗಣ್ಣ ಹೆದರಿ ಅಲ್ಲಿಂದ ದೌಡಾಯಿಸಿದ್ದರು. ಆದರೆ ರಾಯರು ಬಿಡಬೇಕಲ್ಲ. ಪತ್ತೆ ಹಚ್ಚಿ ಎಳೆತಂದ ಯೋಗಣ್ಣನನ್ನು ‘ಏ ಯೋಗ ಬಾ ಇಲ್ಲಿ’. ಎಂದು ಕೊಠಡಿಗೆ ಕರೆದೊಯ್ದು. ಯೋಗಣ್ಣನಿಂದ ಆ ಹಾಡನ್ನು ಸವಿಸ್ತಾರವಾಗಿ ಹೇಳಿಸಿ, ಅಚ್ಚರಿಯಿಂದ ಆಲಿಸುತ್ತಿದ್ದ ಮೋಹನ್‌ಕುಮಾರಿಯವರಿಗೆ ‘ನೋಡದ್ಯಾ ಮೋಹನ್. ಸಂಗೀತ ಹೇಳ್ಕೊಟ್ರೇ ಬರೋದಲ್ಲಾ. ಸಂಸ್ಕಾರ ಬಲವಿದ್ರೆ ಕೇವಲ ಕೇಳ್ಮೆಯಿಂದ್ಲೇ ಕಲತ್ಕೋ ಬಹುದು’ ಎಂದು ಯೋಗಣ್ಣನ ಬೆನ್ನು ಚಪ್ಪರಿಸಿ ಕಳಿಸಿದವರು ಕಾಳಿಂಗರಾಯರು.

* * *