ಬನವಾಸಿಯನ್ನು ಕೇಂದ್ರವನ್ನಾಗಿರಿಸಿಕೊಂಡು ತಮ್ಮ ರಾಜ್ಯವನ್ನು ಸದೃಢಗೊಳಿಸಿಕೊಳ್ಳುತ್ತಿರುವಾಗ ಕದಂಬರ ಧಾರ್ಮಿಕ ಚೌಕಟ್ಟನ್ನು ಆರಂಭದಲ್ಲಿ ಗೆದ್ದದ್ದು ಬೌದ್ಧಧರ್ಮ. ಅಶೋಕನಿಂದ ದಕ್ಷಿಣದ ಕೆಲವೆಡೆ ಪ್ರಸಾರಿಸಲ್ಪಟ್ಟ ಬೌದ್ಧದರ್ಮದಲ್ಲಿ ವಿಶೇಷ ಆಸಕ್ತಿ ಸಹಜವಾಗಿತ್ತು. ಅನಂತರ ಕಾಲದಲ್ಲೂ ಸಹ ಅವರು ಬೌದ್ಧಧರ್ಮದಿಂದ ದೂರ ಸರಿಯಲಿಲ್ಲ ಎನ್ನುವ ನಿದರ್ಶನಕ್ಕೆ ರವಿವರ್ಮನ ದಾವಣಗೆರೆ ಸಿದ್ಧಾಯತನ ತಾಮ್ರಪಟ ಮತ್ತು “ಜಯತ್ಯಮಿತಗುಣ ಭೃದ್ಬುದ್ಧಸ್ಸತ್ವ ಸಮಾಶ್ರಯಃ| ಶುದ್ಧೋದನ ಕುಲೋದ್ಭೂತಃ ಪದ್ಮ ಪತ್ರ ನಿಭೇಕ್ಷಣಃ|| ಎನ್ನುವ ಬುದ್ಧನ ಸ್ತುತಿಯಿಂದ ಪ್ರಾರಂಭವಾಗುವ ಸು. ಐದು-ಆರನೇ ಶತಮಾನದ ಹೊನ್ನಾವರ ತಾಮ್ರಪಟಗಳು ಆಧಾರವಾಗಿ ಸಿಗುತ್ತವೆ. ಕದಂಬರು ಧರ್ಮದವೊಂದರ ಅಂಧಾಭಿಮಾನಿಗಳಾಗಿರಲಿಲ್ಲವೆಂಬುದು ಸರಿ ಸುಮಾರು ಐವತ್ತು ದಾಖಲೆಗಳು ಸ್ಪಷ್ಟಪಡಿಸುತ್ತವೆ. ವೈದಿಕ ಧರ್ಮವನ್ನು ಎಷ್ಟು ಶ್ರದ್ಧೆಯಿಂದ ಸಲಹಿದರೋ ಅಷ್ಟೇ ಶ್ರದ್ಧೆಯಿಂದ ಜೈನಧರ್ಮವನ್ನೂ ಪೋಷಿಸಿದ್ದಕ್ಕೆ ಮೃಗೇಶವರ್ಮ, ರವಿವರ್ಮ, ಹರಿವರ್ಮ, ಕೃಷ್ಣವರ್ಮ ಮತ್ತು ವಿಷ್ಣುವರ್ಮರ ಜೈನದತ್ತಿಗಳು ನಿದರ್ಶನಗಳಾಗುತ್ತವೆ. ರವಿವರ್ಮ ಬುದ್ಧನನ್ನು ಪ್ರಾರ್ಥಿಸಿದರೆ, ತನ್ನ ಗ್ರಾಮದೇವತೆಯನ್ನು ಮೃಗೇಶವರ್ಮನು ಆರಾಧಿಸಿದನು. ತಮ್ಮ ರಾಜ್ಯದಲ್ಲಿ ಮಹಾದೇವ, ವಿಷ್ಣು, ಜ್ಯೋತಿರ್ಮಯ ಮತ್ತು ಕಾಮದೇವರಿಗೆ ದೇವಾಲಯಗಳನ್ನು ಕಟ್ಟಿಸಿ, ಜಿನನ ಮತ್ತು ಕಾಮನ ಹಬ್ಬಗಳನ್ನು ವರ್ಷವರ್ಷವೂ ಇವರು ಸಡಗರದಿಂದ ಆಚರಿಸಿದರು.
ಬನವಾಸಿ ಮಹತ್ವಾಕಾಂಕ್ಷೆ ಹೊಂದಿದ ರಾಜಕಾರಣಿಗಳಾಗಿರಲಿಲ್ಲ. ಸಾತವಾಹನರ ನಂತರ ದಕ್ಷಿಣಭಾರತವನ್ನು ಆಳಿದ ಅರಸರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಬಾದಾಮಿ ಚಾಳುಕ್ಯರಂತಾಗಲೀ ತಲಕಾಡಿನ ಗಂಗರಂತಾಗಲೀ ಇವರು ತಮ್ಮ ಸಾಮ್ರಾಜ್ಯದ ವಿಸ್ತರಣೆಗೆ ಮುಂದಾಗಲಿಲ್ಲ್ಲ. ರಾಜಕೀಯವಾಗಿ ಇವರ ಕೊಡುಗೆ ಏನೇ ಇರಲಿ ಕನ್ನಡ ನಾಡು ನುಡಿ ಮತ್ತು ಲಿಪಿಯೊಂದಿಗಿನ ಭಾಷಾಸಾಮ್ರಾಜ್ಯ ಕಟ್ಟಿದ್ದಂತೂ ಸ್ಪಷ್ಟ. ಸುಮಾರು ಐದು ನೂರು ವರ್ಷಗಳಷ್ಟು ಕಾಲ ಊರ್ಜಿತದಲ್ಲಿದ್ದ ಪ್ರಾಕೃತ ಮತ್ತು ಬ್ರಾಹ್ಮಿಯ ಯುಗ ಕದಂಬರ ಕಾಲದಲ್ಲಿ ಕನ್ನಡದ ನೆಲದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಬ್ರಾಹ್ಮಿಯ ಸ್ಥಾನವನ್ನು ಕನ್ನಡಲಿಪಿ ಪಡೆದುಕೊಂಡು, ಭಾಷಾಮಾಧ್ಯಮವಾಗಿ ಸಂಸ್ಕೃತ ನೆಲೆಗೊಂಡಿತು. ದಕ್ಷಿಣದಲ್ಲಿ ಅತ್ಯಂತ ಹೆಚ್ಚು ಗೌರವಕ್ಕೆ ಪಾತ್ರವಾಗಿ ಸಂಸ್ಕೃತ ಬಳಕೆಗೆ ಬಂತು ಹಾಗೂ ಕನ್ನಡ ಭಾಷೆ ಮತ್ತು ಲಿಪಿ ಕ್ರಮೇಣ ಸಂಸ್ಕೃತದೊಂದಿಗೆ ತಮ್ಮ ವ್ಯವಹಾರ ಹಂಚಿಕೊಂಡು ಕನ್ನಡ ಅಧಿಕೃತವಾಗಿ ನೆಲೆಗೊಂಡಿದ್ದು ಕದಂಬರ ಕಾಲದಲ್ಲಿಯೇ.
ಕದಂಬರು ಕನ್ನಡದ ಜೊತೆಗೆ ಅಪಾರ ಸಂಸ್ಕೃತ ಪ್ರೇಮಿಗಳಾಗಿದ್ದರೆಂಬುದಕ್ಕೆ ಅವರು ಬರೆಸಿರುವ ಹೆಚ್ಚಿನ ಶಾಸನಗಳು ಅದರಲ್ಲೂ ವಿಶೇಷವಾಗಿ ತಾಮ್ರಪಟಗಳು ಇವಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಅಪವಾದವೆಂದರೆ ಕೆಳಗುಂದಿಯವೀರಗಲ್ಲು, ತಮಟಕಲ್ಲು ಮತ್ತು ಪುರ್ದುಕಾನ್ ದಾನಶಾಸನ ಪೂರ್ಣಪ್ರಮಾಣದ ಕನ್ನಡ ಶಾಸನಗಳು. ಈ ಕಾಲದಲ್ಲಾದ ಮತ್ತೊಂದು ಬದಲಾವಣೆ ಎಂದರೆ, ಶಿಲಾಶಾಸನಗಳ ಏಕಸ್ವಾಮ್ಯ ಕೊನೆಗೊಂಡು ತಾಮ್ರಪಟಗಳು ಹೆಚ್ಚಳಗೊಂಡದ್ದು. ಲಿಪಿ ಮಾಧ್ಯಮವು ಬದಲಾದುದಕ್ಕಾಗಿ ಇದು ಮಹತ್ವವೆನಿಸಲಿಲ್ಲ, ಬೇರೆ ಬಗೆಯ ಧಾರ್ಮಿಕ ಸಂಸ್ಕೃತಿಯನ್ನೂ ಆರ್ಥಿಕ ವ್ಯವಸ್ಥೆಯನ್ನೂ ತಂದುದಕ್ಕೆ ಈ ಪಟ್ಟಸಿಕ್ಕಿತು. ಶಿವಸ್ಕಂಧವರ್ಮನ ಹಿರೇಹಡಗಲಿ ಶಾಸನವು ಕರ್ನಾಟಕದಲ್ಲಿ ಬರೆಸಿದ ಮೊದಲ ತಾಮ್ರಪಟ. ಪ್ರಾಕೃತ ಭಾಷೆಯಲ್ಲಿ ಬರೆದು ವೈದಿಕದತ್ತಿಯನ್ನು ದಾಖಲಿಸಿರುವ ಈ ತಾಮ್ರಪಟದಲ್ಲಿ ಅಗ್ನಿಶರ್ಮನನ್ನು ಮೊದಲ್ಗೊಂಡು ಇಪ್ಪತ್ತು ಬ್ರಾಹ್ಮಣರಿಗೆ ವ್ರಿತ್ತಿಗಳನ್ನು ಹಂಚಿದ ವಿವರವಿದೆ. ಇಲ್ಲಿಂದ ಪ್ರಾರಂಭವಾಗುವ ಬ್ರಾಹ್ಮಣ ವೈದಿಕ ಕೊಡುಗೆಗಳು ಕದಂಬರ ಕಾಲದಲ್ಲಿ ಹೆಚ್ಚಾಗಿ, ಭಾಷೆ ಮತ್ತು ಲಿಪಿ ಸಂವಹನದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು.
ಕದಂಬರ ಕಾಲದ ಸಂಸ್ಕೃತವು ಕೇವಲ ವ್ಯವಹಾರ ಭಾಷೆಯಾಗಿ ಮಾತ್ರ ಉಳಿಯದೆ ಸಾಹಿತ್ಯಿಕ ಗುಣವನ್ನು ಹೊಂದಿ ಕಾವ್ಯ ಪರಂಪರೆಗೆ ಬಂತು. ಇದರ ಪ್ರಥಮ ಪ್ರಯೋಗವೇ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಸ್ತಂಭಶಾಸನದಲಿ ಕಾಣಿಸಿಕೊಳ್ಳುತ್ತದೆ. ಸುಮಾರು ಐದು-ಆರನೇ ಶತಮಾನದಲ್ಲಿ ಕವಿ ಕುಬ್ಜ ಇದನ್ನು ಬರೆದ. ‘ಕುಬ್ಜಸ್ಸ್ವ ಕಾವ್ಯಮಿದಮಶ್ಮತಲೇ ಲಿಲೇಖ’ ಎಂದು ಅವನೇ ಈ ಶಾಸನದಲ್ಲಿ ಬರೆದುಕೊಂಡಿರುವನು. ಪ್ರಾಚೀನ ಕದಂಬರ ಅತಿ ದೊಡ್ಡ ದಾಖಲೆಯಾದ ಇದು ಒಟ್ಟು 34 ಸಂಸ್ಕೃತ ಶ್ಲೋಕಗಳನ್ನೊಳಗೊಂಡಿದೆ. ಸುಂದರ ಅಕ್ಷರಗಳಲ್ಲಿ ಸಮಸಾಲುಗಳಲ್ಲಿ ಕಂಡರಿಸಿರುವ ಕಲ್ಲಿನ ಕಂಭಶಾಸನದಲ್ಲಿ ಅಕ್ಷರದೋಷಗಳು ಕಾಣಸಿಗುವುದೇ ಇಲ್ಲ. ಅಲ್ಲದೆ ಅಂದಿನ ನಿಘಂಟಿಗೂ ಗೊತ್ತಿರದ ಕೆಲವು ಅಪರೂಪ ಪದಗಳು ಈ ಪ್ರೌಢ ಕಾವ್ಯದಲ್ಲಿ ನುಸುಳಿಕೊಂಡು ಬಂದಿವೆ.
ಈ ಕಾವ್ಯವನ್ನು ರಚಿಸಲು ಕುಬ್ಜನು ಒಟ್ಟು ಒಂಬತ್ತು ಜಾತಿ ಛಂದಸ್ಸುಗಳನ್ನು ಬಳಸಿಕೊಂಡಿದ್ದಾನೆ. ಪುಷ್ಟಿತಾಗ್ರಾ, ಇಂದ್ರವಜ್ರ, ವಸಂತತಿಲಕ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ ಮತ್ತು ದಂಡಕ ಶಾಖೆಯ ‘ಪ್ರಚಿತ’ವೆಂಬವು ಈ ಕಾಲಕ್ಕಾಗಲೇ ಪರಿಚಿತವಾಗಿದ್ದವು. ಆದರೆ ಸುಮಾರು 24 ಪದ್ಯಗಳನ್ನು ಬರೆಯಲು ಬಳಸಿರುವ ‘ಮಾತ್ರಾಸಮಕ’ ಜಾತಿಯ ‘ಮಿಶ್ರಗೀತಿಕಾ’ ಛಂದಸ್ಸು ಹೊಸದೆಂಬುದು ಹಲವಾರು ಪಂಡಿತರ ಅಭಿಮತ. ಸರಳ ಗದ್ಯದಂತೆ ಓದಿಸಿಕೊಳ್ಳುವ, ಹದಿನೈದು ಮಾತ್ರಾಪಾದದ ನಾಲ್ಕು ಸಾಲುಗಳ ಈ ಕಾವ್ಯಪ್ರಭೇದವನ್ನು ಕೆಲವರು ಗದ್ಯವೆಂದೇ ತಿಳಿದಿದ್ದರು. ಅಪರೂಪವಾಗಿ ಇದನ್ನು ಗುಪ್ತರು ತುಸಾನ್ ಶಿಲಾಶಾಸನದಲ್ಲಿ, ವಾಕಾಟಕರು ಅಜಂತಾ ಗುಹಾಶಾಸನದಲ್ಲಿ ಬಳಸಿರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ ಬೊವೆರ್ ಹಸ್ತಪ್ರತಿಯ ಕೆಲವು ಪದ್ಯಗಳು ಇದೇ ಜಾತಿಯವೆಂಬುದನ್ನೂ ಗುರುತಿಸಲಾಗಿದೆ. ಐದರಿಂದ ಏಳನೇ ಶತಮಾನದಲ್ಲಿ ಎಲ್ಲೋ ಬಳಕೆಯಲ್ಲಿದ್ದ ಈ ಛಂದಸ್ಸನ್ನು ಕುಬ್ಜನು ಕರ್ನಾಟಕಕ್ಕೆ ಪರಿಚಯಿಸಿದ್ದು ಕುಬ್ಜನ ದೊಡ್ಡ ಕೊಡುಗೆ ಅನ್ನಿಸಿಕೊಳ್ಳುತ್ತದೆ.
ಕವಿಕುಬ್ಜನ ಬಗ್ಗೆ ನಮಗೆ ಹೆಚ್ಚು ವಿವರಗಳು ಸಿಗುವುದಿಲ್ಲ. ಬಹುಶಃ ಕಾಲಿದಾಸಗಿಂತ ಸ್ವಲ್ಪ ಕಾಲದಲ್ಲಿಯೇ ಬಂದು ಆತನ ಪ್ರಭಾವಕ್ಕೆ ಒಳಗಾಗಿರಲೂಬಹುದು. ಈತನು ಹರ್ಷನ ಕಾಲದ ಬಾಣ ಮತ್ತು ಎರಡನೇ ಪುಲಕೇಶಿಯ ರವಿಕೀರ್ತಿಗಿಂತ ಪೂರ್ವದಲ್ಲಿದ್ದನೆನಿಸುವುದು.
ಕುಬ್ಜನ ನಂತರ ಬಂದ ಕದಂಬ ಕವಿಗಳಾರೂ ಕುಬ್ಜನಷ್ಟು ವಿಧದ ಛಂದಸ್ಸುಗಳನ್ನು ಉಪಯೋಗಿಸಿಕೊಂಡು ಶಾಸನಗಳನ್ನು ರಚಿಸಲಿಲ್ಲ. ಅಲ್ಲದೆ ಇವನಷ್ಟು ಸುದೀರ್ಘ ಶಾಸನಕಾವ್ಯವನ್ನೂ ಬರೆಯಲಿಲ್ಲ. ಸುಮಾರು ಇಪ್ಪತ್ತೇಳು ಶಾಸನ ಕವಿಗಳು ಅನುಷ್ಟುಪ್ ಛಂದಸ್ಸನ್ನು ಮಾತ್ರ ಬಳಸಿದ್ದಾರೆ. ಆರು ಕವಿಗಳು ಆರ್ಯ, ಸ್ರಗ್ಧರಾ, ಉಪಜಾತಿ, ಮುಂತಾದವನ್ನು ಅನುಷ್ಟುಪ್ ಜೊತೆ ಸೇರಿಸಿ ಬರೆದರು. ರವಿವರ್ಮನ ಕಾಲದ ದಾವಣಗೆರೆ, ಹಲಸಿ, ಗುಡ್ನಾಪುರ ಶಾಸನಗಳು ಪ್ರೌಢಕಾವ್ಯಗುಣವನ್ನು ಹೊಂದಿರುವುದನ್ನು ಕಾಣುತ್ತೇವೆ. ಹಲಸಿಯ ಎರಡನೆಯ ಜಿನಶಾಸನದಲ್ಲಿರುವ ಎಂಟು ಬಗೆಯ ಛಂದಸ್ಸುಗಳು ಮತ್ತು ಗುಡ್ನಾಪುರದ ಶಾಸನದಲ್ಲಿ ಪುನರುಕ್ತಿಯಾಗಿರುವ ‘ಮಾತ್ರಾಸಮಕ’ ಛಂದಸ್ಸು ಬಹುಶಃ ಕುಬ್ಜಕವಿಯ ಪ್ರಭಾವ ಇರಬಹುದು.
ಕುಬ್ಜನ ಕಾವ್ಯದ ಕುರಿತಾಗಿ ಒಂದಿಷ್ಟು : ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿರುವ ಸ್ತಂಭಶಾಸನವು ಕದಂಬರ ಕುರಿತಾಗಿ ಹಾಗೂ ಮಯೂರ ವರ್ಮನ ಕುರಿತಾಗಿ ಕೆಲವು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತದೆ. ಮಯೂರನ ಕುರಿತಾಗಿ ಇನ್ನು ಕೆಲವು ವಿಚಾರಗಳನ್ನು ತಿಳಿಸುವ ಇನ್ನೊಂದು ಶಾಸನವೆಂದರೆ ಅದು ಗುಡ್ನಾಪುರ ಶಾಸನ. ವೇದ ವಿದ್ಯಾ ಪಾರಂಗತ ಎನ್ನುವುದನ್ನು ಎರಡೂ ಶಾಸನಗಳು ಬಿಂಬಿಸುತ್ತವೆ, ಒಮ್ಮೆ ಮಯೂರ ಶರ್ಮನು ತನ್ನ ಅಜ್ಜ ವೀರ ಶರ್ಮಜೊತೆಗೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯ ಘಟಿಕಾಸ್ಥಾನಕ್ಕೆ ತೆರಳಿದ್ದ ಎಂದು ಶಾಸನದ ನಾಲ್ಕನೇ ಸಾಲಿನ 9ನೇ ಶ್ಲೋಕದಿಂದ ತಿಳಿದು ಬರುತ್ತದೆ. ಅಲ್ಲಿ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರ ಶರ್ಮನು, ಪಲ್ಲವರ ರಾಜ ಶಿವಸ್ಕಂದವರ್ಮನು ಸುಮಾರು 345 ರಿಂದ 355 ರ ಸಮಯದಲ್ಲಿ ಅಶ್ವಮೇಧ ಯಾಗವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಂಚಿಯಲ್ಲಿ ಆ ಸಂದರ್ಭದಲ್ಲಿ ನಡೆದ ಜಗಳ ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಅಪಮಾನಿತನಾದ. ಮಯೂರ ಅದನ್ನು ಅಲ್ಲಿನ ಆಳರಸರಲ್ಲಿ ತನ್ನ ದೂರನ್ನು ನಿವೇದಿಸಿಕೊಂಡರೂ ಸಹ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವಮಾನವನ್ನು ಅನುಭವಿಸಿದ. ಇವುಗಳಿಂದ ಸಹಜವಾಗಿಯೇ ಮಯೂರ ಸಿಟ್ಟಿಗೆದ್ದು ಕಂಚಿಯ ಪಲ್ಲವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ. ಶಸ್ತ್ರ ವಿದ್ಯೆಯನ್ನು ಕಲಿಯಲು ಆರಂಭಿಸಿದ ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನಲ್ಲಿ 11ನೇ ಶ್ಲೋಕದಲ್ಲಿ
“ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ |
ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾ ವಿಪ್ರತಃ ||”
ಎಂದು ಹೇಳಲಾಗಿದೆ. ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನ ಶರ್ಮ ಅಭಿದಾನವನ್ನು ತೊರೆದು ಕ್ಷತ್ರಿಯರ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯ ಸೂಚಕ ಅಭಿದಾನವಾದ ವರ್ಮನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ. 5ನೇ ಸಾಲಿನ 14ನೇ ಶ್ಲೋಕದಲ್ಲಿ ಮಯೂರ ವರ್ಮನು ‘ಶ್ರೀಪರ್ವತದ್ವಾರಾ ಸಂಶ್ರಿತಾಮ್’ ಎಂದು ಉಲ್ಲೇಖಗೊಂಡಿದೆ. ಶ್ರೀ ಶೈಲದ ದಟ್ಟಕಾಡಿನಲ್ಲಿ ಗುಡ್ದಗಾಡಿನ ಜನರಿಂದ ಸೇರಿದ ಸೇನೆ ಕಟ್ಟಿದ ಎನ್ನುವುದು ತಿಳಿದು ಬರುತ್ತದೆ. ಕವಿ ಕುಬ್ಜ ಇದನ್ನು ಮಾತ್ರಾ ಸಮಕ ಅಥವಾ ಮಿಶ್ರಗಣಗೀತಿಕಾ ಬಳಸಿ ರಚಿಸಿದ್ದಾನೆ.

ಭಾರತದ ಇತಿಹಾಸವೇ ಹಾಗೇ. ಇಲ್ಲಿನ ಅನೇಕ ರಾಜರು ರಾಜ ವಂಶಸ್ಥರು ಅಧ್ಯಯನ ಶೀಲರಾಗಿದ್ದರು, ಸಾಹಿತ್ಯದ ಆರಾಧಕರು ಪೋಷಕರು ಆಗಿದ್ದರು. ಇದು ಸಧ್ಯದ ವಿಷಯವಲ್ಲ ತಲತಲಾಂತರಗಳಿಂದಲೂ ನಡೆದು ಬಂದದ್ದು ಅದಕ್ಕೇ ಅಲ್ಲವೇ ನಮಗೆ ಈ ಕೆಳಗಿನ ಶ್ಲೋಕ ಉತ್ತಮ ಉದಾಹರಣೆಯಾಗಿ ದೊರಕುವುದು.
ಅಗ್ರತಃ ಚತುರೋ ವೇದಾಃ ಪೃಷ್ಠತಃ ಸಶರಂ ಧನುಃ |
ಇದಂ ಬ್ರಾಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ ||
ನಾಲ್ಕು ವೇದಗಳನ್ನು ಕಲಿತು ಕಂಠಸ್ಥನಾಗಿ ಅಧ್ಯಯನ ಮಾಡಿಕೊಂಡಿದ್ದೇನೆ ವೇದ ವೇದಾಂಗಗಳ ಸಂಪೂರ್ಣ ಜ್ಞಾನ ನನ್ನಲ್ಲಿದೆ ಅದೇ ರೀತಿ ಬಿಲ್ಲು ಬಾಣಗಳನ್ನು ಹಿಡಿದು ಯುದ್ಧ ಮಾಡುವ ಧನುರ್ವೇದವನ್ನೂ ಕಲಿತಿದ್ದೇನೆ, ನನ್ನ ಬೆನ್ನ ಮೇಲೆ ಬಾಣದೊಂದಿಗೆ ಬಿಲ್ಲಿದೆ, ನಾನು ಯುದ್ಧಕ್ಕೂ ಸಿದ್ಧನಿದ್ದೇನೆ, ಸಾಮಥ್ರ್ಯವೂ ಇದೆ, ಇಲ್ಲಿ ಬ್ರಹ್ಮ ತೇಜಸ್ಸು ನನ್ನ ಮುಖದಲ್ಲಿದ್ದರೆ ಹಾಗೂ ಕ್ಷಾತ್ರತೇಜಸ್ಸು ಇಡೀ ದೇಹದಲ್ಲಿದೆ ನಾನು ಸಂಸ್ಕಾರವಂತನೂ ಹೌದು ಪರಾಕ್ರಮಿಯೂ ಹೌದು. ಎನ್ನುವ ಚಿತ್ರಣ ಈ ಒಂದು ಶ್ಲೋಕ ನಮಗೆ ನೀಡುತ್ತದೆ. ಕಂಚಿಯ ಪಲ್ಲವರಿಂದ ಅವಮಾನಿತನಾದ ಕದಂಬ ವಂಶದ ದೊರೆ ಮಯೂರ ‘ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತ’ ಪಲ್ಲವರ ಅಶ್ವಮೇಧಕ್ಕಾಗಿ ಕಟ್ಟಿದ ಕುದುರೆಯಿಂದ ಆದ ಕಲಹದಿಂದ ಮಯೂರ ಸಿಟ್ಟುಗೊಂಡಿದ್ದ. ಅದನ್ನೇ ಇಲ್ಲಿ ಈ ಶಾಸನದ 5ನೇ ಸಾಲಿನಲ್ಲಿ 13ನೇ ಶ್ಲೋಕದಲ್ಲಿ

“ಕುಶ ಸಮಿತ್ಸ್ರುಗಾಜ್ಯ ಚರುಗ್ರಹಣಾದಿಧಕ್ಷೇನ ಪಾಣಿನಾ |
ಉದ್ವವರ್ಹ ದೀಪ್ತಿಮಚ್ಛಸ್ತ್ರಂ ವಿಜಿಗೀಷಮಾಣೋ ವಸುನ್ಧರಾಮ್ ||”
ದರ್ಭೆ ಹಿಡಿದು ಆಜ್ಯ ಮತ್ತು ಚರುಗಳಿಂದ ಹೋಮ ಹವನಗಳನ್ನು ಮಾಡಬೇಕಿದ್ದ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಭೂಮಿಯನ್ನು ಆಳಲು ಹೊರಟ ಎನ್ನುವುದಾಗಿ ತಾಳಗುಂದದ ಸ್ತಂಭ ಹೇಳಲ್ಪಡುತ್ತದೆ.

ಯೋಂತಪಾಲಾನ್ ಪಲ್ಲವೇಂದ್ರಾಣಾಂ ಸಹಸಾ ವಿನಿಜ್ರ್ಜಿತ್ಯ ಸಂಯುಗೇ |
ಅದ್ಧ್ಯುವಾಸ ದುಗ್ರ್ಗಮಾಮಟವೀಂ ಶ್ರೀ ಪವ್ರ್ವತ ದ್ವಾರ ಸಂಶ್ರಿತಾಮ್ ||

ಕಂಚಿಯಿಂದ ಹೊರಟ ಮಯೂರ ಧನುರ್ವೇದಿಯಾಗಿ ಶ್ರೀಪರ್ವತ ಅಥವಾ ತ್ರಿಪರ್ವತದ ದಟ್ಟ ಕಾಡಿನಲ್ಲಿ ಪ್ರವೇಶಿಸಿ ಅಲ್ಲಿನ ಮೂಲ ನಿವಾಸಿಗಳ ಪಡೆಯನ್ನು ಕಟ್ಟಿ ಬ್ರಹದ್ಬಾಣರೇ ಮೊದಲಾದ ರಾಜರನ್ನು ಸೋಲಿಸಿ ಅವರಿಂದ ಕಪ್ಪ ಕಾಣಿಕೆಗಳನ್ನು ಪಡೆದ ಎನ್ನುವುದಾಗಿ ಹೇಳಲಾಗಿದೆ. ಉಪಾಯದಿಂದ ಪಲ್ಲವರ ಕೈಗೆ ಎಲ್ಲಿಯೂ ಸಿಕ್ಕಿ ಹಾಕಕೊಳ್ಳದೇ ಪರ್ವತದ ಸುತ್ತಲಿನ ಪಲ್ಲವರ ಸಾಮಂತ ದೊರೆಗಳಾದ ಆಂಧ್ರಪಾಲರನ್ನು ಅಲ್ಲಿಂದ ಓಡಿಸಿ ಆ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಂಡು ಮಯೂರ ಬಲಿಷ್ಠನಾಗುತ್ತ ಬಂದ.

-ಸದ್ಯೋಜಾತ ಭಟ್