ವಸಾಹತೀಕರಣಕ್ಕೆ ಒಳಗಾದ ತೃತೀಯ ಜಗತ್ತಿನ ಬಹುಪಾಲು ರಾಷ್ಟ್ರಗಳ ಅನುಭವ ಅನುಭೂತಿಗಳು ಸಾಂಸ್ಕೃತಿಕವಾಗಿ ಮಹತ್ತ್ವದವು. ತಮ್ಮ ಪರಂಪರಿಕ ಬಹುಮುಖತೆಗಳನ್ನು ಅಲ್ಲಗಳೆದ ವಸಾಹತುಶಾಹಿ ಪ್ರಭುತ್ವ ಅದು ಸೃಷ್ಟಿಸಿದ್ದ ಅಸ್ತ್ರಗಳಿಂದಲೇ ತನ್ನನ್ನು ತಾನು ನಾಶ ಮಾಡಿಕೊಂಡದ್ದು ಚರಿತ್ರೆಯಲ್ಲಿ ಗಮನರ್ಹವಾದುದು. ಈ ದಿಸೆಯಲ್ಲಿ ವಸಾಹತೋತ್ತರ ಸ್ಥಿತ್ಯಂತರಗಳನ್ನು ಅಧ್ಯಯನ ಮಾಡುತ್ತಿರುವ ಅಧ್ಯಯನಕರಿಗೆ ಮಹತ್ತ್ವದ ಒಳನೋಟಗಳು ದೊರೆಯುತ್ತಿವೆ. ಅಷ್ಟೇ ಅಲ್ಲದೆ ಸಮಕಾಲೀನತೆಯನ್ನು ಗ್ರಹಿಕೆಗೆ ತೆಗೆದುಕೊಳ್ಳಲು ಸೂಕ್ತ ಹಿನ್ನೆಲೆಗಳನ್ನು ಒದಗಿಸುತ್ತಿರುವುದು ಸಹ ಗಮನಿಸಬೇಕಾದ ಅಂಶ. ವಸಾಹತೀಕರಣದಿಂದ ಆದಂಥ ಹಲವು ಬಗೆಯ ಅವಸ್ಥಾಂತರಗಳಿಗೆ ದೇಶೀ ಚಿಂತನೆಗಳು ಪ್ರತಿಕ್ರಿಯಿಸಿದ ಬಗೆ ಅಧ್ಯಯನ ಯೋಗ್ಯವಾದುದು. ಈ ದೆಸೆಯಲ್ಲಿ ಇಂಡಿಯದಲ್ಲಿ ಆದ ಸಾಂಸ್ಕೃತಿಕ ಆಘಾತವನ್ನು ಹಾಗೂ ಅದಕ್ಕೆ ಸ್ಥಳೀಯವಾಗಿ ತೋರಿದ ಪ್ರತಿಭಟನೆ – ಪ್ರತಿರೋಧಗಳನ್ನು ಅರಿಯುವುದೇ ಪ್ರಸ್ತುತ ಅಧ್ಯಯನದ ಆಶಯ.

ಇಂಡಿಯಾ ವಸಾಹತುಶಾಹಿಗಳ ಹಿಡಿತಕ್ಕೆ ಸಿಲುಕಿದ್ದು ಚರಿತ್ರೆಗೆ ಸೇರಿ ಹೋದ ಸಂಗತಿ. ಆದರೆ ಈ ಪ್ರಕ್ರಿಯೆಯಲ್ಲಿ ಪಶ್ಚಿಮದಿಂದ ಬಂದಂಥ ಹೊಸ ಬಗೆಯ ಆವಿಷ್ಕಾರ, ವೈಚಾರಿಕತೆಗಳು ಬೀರಿದ ಪ್ರಭಾವ ಮಹತ್ತ್ವದ್ದು. ಅದರಲ್ಲೂ ಇಂಗ್ಲಿಶ್ ಭಾಷೆ, ಶಿಕ್ಷಣದ ಚಿಂತನೆಗಳು ಭಾರತೀಯರನ್ನು ಆವರಿಸದೆ ಬಿಡಲಿಲ್ಲ. ಅದರ ಪ್ರಭಾವ, ಪರಿಣಾಮಗಳು ಎಷ್ಟು ಎಂದರೆ ಈ ಹೊತ್ತಿಗೂ ಅದರಿಂದ ಹೊರಬರಲಾದಷ್ಟು. ನಮ್ಮ ಮನೋಚಟುವಟಿಕೆಗಳೆಲ್ಲವೂ ಪಶ್ಚಿಮದ ಭರಾಟೆಗೆ ತಲೆದೂಗಿದವು. ಭಾರತೀಯ ಮೇಲ್ಮಧ್ಯಮ ವರ್ಗ ಬಹಳ ಬೇಗ ಈ ಪಶ್ಚಿಮದ ಮಾಯಾವೀ ಚಿಂತನೆಗೆ ಮರುಳಾಯಿತು. ಆಶ್ಚರ್ಯದ ಸಂಗತಿ ಎಂದರೆ ಅಷ್ಟೇ ವೇಗವಾಗಿ ಅದರಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದು. ಈ ದಿಸೆಯಲ್ಲಿ ಭಾರತೀಯ ನವೋದಯದ ಸಾಹಿತಿ – ಬುದ್ದಿಜೀವಿಗಳ ಚಿಂತನೆ ಒಳ್ಳೆಯ ಉದಾಹರಣೆ. ಪಶ್ಚಿಮದಿಂದ ಬಂದಂಥ ಎಲ್ಲ ಬಗೆಯ ‘ರೋಮ್ಯಾಂಟಿಕ್’ ಆಶಯಗಳನ್ನು ಮೈಗೂಡಿಸಿಕೊಂಡು ತಮ್ಮ ಅನನ್ಯೆ, ಅಸ್ಮಿತೆಗಳಿಗಾಗಿ ಪರಿಶೋಧಿಸಿದ್ದು ಗಮನಾರ್ಹವಾದ ಸಂಗತಿ. ಇಂಡಿಯಾದಲ್ಲಿ ಈ ಬಗೆಯ ಪ್ರಕ್ರಿಯೆಗಳಿಗೆ ‘ಬಂಗಾಳಿ ಬಾಬು’ಗಳೇ ಮೊದಲ ಅನುಕರಣಕರರು. ಅಂತೆಯೆ ಭಾರತೀಯ ಸಮಾಜವನ್ನು ಸುಧಾರಿಸುವಲ್ಲಿಯೂ ಅವರೇ ಮೊದಲಿಗರು.

‘ರಾಷ್ಟ್ರ’ದ ಪರಿಕಲ್ಪನೆ ವಸಾಹತುಶಾಹಿ ಪ್ರಭುತ್ವದ ಎರವಲು ಪರಿಲ್ಪನೆ. ಇದು ಬಲಿಷ್ಟವಾದಷ್ಟು ವಸಾಹತು ಆಡಳಿತದ ಸರದಾರರು ಅಧೀರರಾಗುತ್ತಾ ಹೋದರು. ಕೇವಲ ಜಡ್ಡುಗಟ್ಟಿದ ನೆಲ, ಜನ ಎಂದು ಭಾವಿಸಿದ್ದ ‘ಪಾಶ್ಚಿಮಾತ್ಯ’ ಚಿಂತನೆಗೆ ಮಾರಕವಾದ ಪ್ರತಿರೋಧಗಳು ಕಾಣಿಸಿಕೊಂಡುವ. ಈ ಪ್ರತಿರೋಧಕ್ಕೆ ಅವರ ರಾಷ್ಟ್ರೀಯತೆಯ ಪರಿಕರವೇ ಪ್ರಬಲ ಅಸ್ತ್ರವಾಗಿತ್ತು. ಪಶ್ಚಿಮವು ತನ್ನಲ್ಲಿರುವ ಎಲ್ಲ ಬಗೆಯ ಉತೃಷ್ಟತೆಗಳಿಗೆ ವಿರದ್ದವಾದ ನಿಕೃಷ್ಟತೆಗಳನ್ನು ಪೂರ್ವಕ್ಕೆ ಅಳವಡಿಸಿತ್ತು. ಈ ಮತು ಇಂಡಿಯಾಕ್ಕೂ ಅನ್ವಯ ಆಗುತ್ತದೆ. ಆದರೆ ಅದನ್ನು ಸುಳ್ಳು ಮಾಡಿಸುವಲ್ಲಿ ನಡೆದ ಪ್ರಯತ್ನಗಳು ಹಲವು. ಇಂಥ ಪ್ರಯತ್ನಗಳಲ್ಲಿ ಕೆಲವು ಬೌದ್ಧಿಕವಾಗಿದ್ದರೆ, ಮತ್ತೆ ಕೆಲವು ಭೌತಿಕವಾದವು. ಅಂದರೆ ಒಂದು ವೈಚಾರಿಕತೆಗೆ ಸಂಬಂಧಪಟ್ಟಿದ್ದರೆ, ಇನ್ನೊಂದು ಚಟುವಟಿಕೆ, ಚಳವಳಿಗಳಿಗೆ ಸಂಬಂಧಿಸಿದ್ದು. ಎರಡನೆಯದನ್ನು ಚಲನಶೀಲವನ್ನಾಗಿಸಿದ್ದು ಇಲ್ಲಿನ ಶಿಕ್ಷಿತ ಮೇಲ್ಮಧ್ಯಮ ವರ್ಗದ ವೈಚಾರಿಕತೆ. ಈ ವೈಚಾರಿಕತೆ ಪಶ್ಚಿಮದಿಂದ ಹರಿದು ಬಂದಿದ್ದರೂ ಅದನ್ನು ದೇಶಿ ನೆಲೆಳಿಗೆ ಅಳವಡಿಸಿ ಪ್ರಯೋಗಿಸಿದ್ದು ಮಹತ್ತ್ವದ ಸಂಗತಿ. ಸಾಂಸ್ಕೃತಿಕವಾಗಿ ಆದಂಥ ಈ ಪಲ್ಲವಟವನ್ನು ಅರಿಯುವುದೇ ಪ್ರಸ್ತುತ ಅಧ್ಯಯನದ ಜರೂರು.

ಭಾರತೀಯ ನವೋದಯದ ಚಿಂತನೆಗಳು ಪಾಶ್ಚಿಮಾತ್ಯ ನವೋದಯದ ಎರವಲಾಗಿವೆ. ಆದರೆ ಅವುಗಳನ್ನು ಭಾರತದ ವಸಾಹತುಕಾಲೀನ ಸಂದರ್ಭಕ್ಕೆ ಬಳಸಿಕೊಂಡು ಪ್ರಯೋಗಿಸಿದ್ದರಲ್ಲಿ ಜಾಣ್ಮೆ ಇದೆ. ಏಕೆಂದರೆ ಇಲ್ಲಿನ ಜಾತಿ, ವರ್ಗ, ಲಿಂಗ, ಭಾಷೆ, ಜನಾಂಗ ಮೊಲಾದ ವೈವಿಧ್ಯತೆಗಳು ವೈರುಧ್ಯಗಳನ್ನು ಪಡೆಯುವ ಎಚ್ಚರ ಬೇಕಿತ್ತು. ಈ ದಿಸೆಯಲ್ಲಿ ನವೋದಯ ಸಾಹಿತಿಗಳು ಹುಟ್ಟು ಹಾಕಿದ ಸೃಷ್ಟಿಶೀಲತೆ ಮಹತ್ತ್ವದ್ದು. ಇಲ್ಲಿನ ಬಹುಮುಖಿ ಸಾಂಸ್ಕೃತಿಕ ನೆಲೆಗಳನ್ನು ಏಕಮುಖಿಯನ್ನಾಗಿಸುವ ಜರೂರು, ಅನಿವಾರ್ಯತೆಗಳು ಅಂದು ಅದ್ದವು. ಈ ಮಾತು ಕನ್ನಡದ ಸಂದರ್ಭಕ್ಕೂ ಅನ್ವಯ ಅಗುತ್ತದೆ. ಏಕೆಂದರೆ ವಸಾಹತುಶಾಹಿ ಪ್ರಭುತ್ವದಲ್ಲಿ ಇಂಡಿಯಾವೂ ದಾಸ್ಯಕ್ಕೆ ಒಳಗಾಗುವುದರ ಜೊತೆಗೆ ಪ್ರಾಂತೀಯ ನೆಲೆಗಳನ್ನೂ ಛಿದ್ರಗೊಳಿಸಿತ್ತು. ಇಂಥ ವಿಚ್ಛಿದ್ರತೆಗೆ ಬ್ರಿಟಿಶರಲ್ಲಿ ಯಾವುದೇ ಬಗೆಯ ತಾತ್ವಿಕ ತಳಹದಿಗಳು ಇರಲಿಲ್ಲ. ಬದಲಾಗಿ ‘ಒಡೆದು ಆಳುವ’ ಕುತಂತ್ರವೊಂದೆ ಇದ್ದದ್ದು. ಇದನ್ನು ಗ್ರಹಿಸಿದ ಅಂದಿನ ಸೃಷ್ಟಿಶೀಲ ಜಗತ್ತು ದೇಶ ಮತ್ತು ಪ್ರಾಂತ್ಯಗಳನ್ನು ಒಟ್ಟೊಟ್ಟಿಗೆ ಪ್ರತಿಕ್ರಯಿಸುವಂತೆ ಮಾಡಬೇಕಾಗಿತ್ತು. ಆಗ ಇವರಿಗೆ ದೊರೆತಕದ್ದು ಭಾರತೀಯರ ಪಾರಂಪರಿಕ ಧರ್ಮ, ಆಚರಣೆ, ಚರಿತ್ರೆ – ಪುರಾಣ – ಐತಿಹ್ಯಗಳಂಥ ಪರಿಕರಗಳು. ಈ ಪರಿಕರಗಳನ್ನು ಪಾಶಿಮಾತ್ಯ ಪರಿಕಲ್ಪನೆಗಳ ಹಿನ್ನೆಲೆಗಳಿಂದಲೆ ಭಾರತೀಯರಿಗೆ ಉಣಬಡಿಸಿದರು. ಆ ಮೂಲಕ ಸಾಸ್ಕೃತಿಕವಾಗಿ ಅನಾವರಣಗೊಳ್ಳುವುದು ಇಲ್ಲಿ ಪ್ರಧಾನ ಆಗಿತ್ತು. ಇದರ ಪರಿಣಾಮವಾಗಿ ಇಲ್ಲಿನ ನೆಲ, ಜಲ, ಪರಿಸರಗಳೆಲ್ಲವೂ ಸಾಂಸ್ಕೃತಿಕ ಆಯಾಮಗಳನ್ನು ಪಡೆದು ಪೂಜ್ಯತೆಗೆ ಒಳಗಾದವು. ಇದನ್ನು ಆಗುಮಾಡಿಸಿದವರು ಅಂದಿನ ನವೋದಯದ ಸಾಹಿತಿಗಳೂ. ಅದನ್ನು ಪರಿಶೀಲಿಸುವ ಪ್ರಯತ್ನ ಪ್ರಸ್ತುತ ಇಲ್ಲಿನದು.

ಭೂಮಿಯನ್ನು ಆರಾಧನೆಯ ನೆಲೆಗಳಿಗೆ ಕೊಂಡೊಯ್ದ ಅಂದಿನ ನವೋದಯ ಸಾಹಿತ್ಯ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಗಳನ್ನು ಜಗರಲ್ಲಿ ಹುಟ್ಟು ಹಾಕಿತು. ಬಂಗಾಳಿ, ಒರಿಯಾ, ಭಾಷೆಗಳಿಗೂ ಪಸರಿಸುವಂತೆ ಆಯಿತು. ಇದರಿಂತ ಸ್ವದೇಶ, ಸ್ವಧರ್ಮ, ಸ್ವಭಾಷೆ, ನವೊದಯ ಕಾವ್ಯ ಜನರಿಗೆ ಅರ್ಥವಾಗಲು ಅನೇಕ ರೂಪಕ – ಪ್ರತೀಕಗಳನ್ನು ಸೃಷ್ಟಿಸಿತು. ಅಂಥವುಗಳಲ್ಲಿ ತಾಯಿ, ಮಾಯತೆ, ಲಕ್ಷ್ಮಿ, ಜನನಿ, ಕಾಳಿ, ಚಂಡಿ, ದುರ್ಗೆ ಮೊದಲಾದ ರೂಪಕಗಳು ಸಹ ಬಳಕೆ ಆದವು. ಇವುಗಳಿಂದ ದೇಶ ಹಾಗೂ ಪ್ರಾಂತೀಯ ಘಟಕಗಳು ಕ್ರಿಯಾಶೀಲವಾದವು. ಆದ್ದರಿಂದಲೇ ಭಾರತ ಮಾತೆ, ಭೂದೇವಿ, ದುರ್ಗೆ, ಕನ್ನಡಮ್ಮ, ಕರ್ನಾಟಕ ಮಾತೆ, ತನುಜಾತೆ, ಭುವನೇಶ್ವರಿ ಮೊದಲಾದ ರೂಪಕಗಳು ಚಾಲ್ತಿಗೆ ಬಂದದ್ದು. ವಸಾಹತುಸಾಹಿ ಪ್ರಭುತ್ವಕ್ಕೆ ಪ್ರಬಲ ಪ್ರತಿರೋಧಗಳನ್ನು ಒಡ್ಡಿದ ಈ ‘ಹೆಣ್ಣು ಸಂಕಥನ’ದ ಹಲವು ರೂಪಕಗಳು ಸಾಂಸ್ಕೃತಿಕವಾಗಿ ಮಹತ್ತ್ವದವು. ಏಕೆಂದರೆ ಈ ಸಂಕಥನ ಹೆಣ್ಣಿನ ಎರಡು ಚಹರೆಗಳನ್ನು ಅನಾವರಣಗೊಳಿಸಿತ್ತು. ಶಾಂತ ಸ್ವರೂಪದ ಹಾಗೂ ಉಗ್ರ (ರೌದ್ರ) ರೂಪದ ಎರಡೂ ಚಹರೆಗಳೂ ರಾಷ್ಟ್ರೀಯ ಅಂತೆಯೆ ಪ್ರಾಂತೀಯ ನೆಲೆಗಳಲ್ಲಿ ಸದೃಢ ಭೂಮಿಕೆಯನ್ನು ನಿರ್ಮಿಸಿದ್ದು ಗಮನಾರ್ಹ. ಆದ್ದರಿಂದಲೆ ಮಮತೆ, ಶಾಂತಿ, ಸಹನೆಗಳ ಜೊತೆಗೆ ರೋಷ, ಕೆಚ್ಚು, ಬಲಿದಾನಗಳಂಥ ಕ್ರಾಂತಿಕಾರಕ ರೂಪಗಳು ಅಂದಿನ ಹೋರಾಟಗಳಲ್ಲಿ ಕಾಣಿಸಿಕೊಂಡದ್ದು. ಈ ಮಾತು ಕನ್ನಡದ ಸಂದರ್ಭಕ್ಕೂ ಅನ್ವಯಿಸುತ್ತದೆ. ಅವುಗಳನ್ನು ಸಹ ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ.

ಕನ್ನಡದ ಸನ್ನಿವೆಶದಲ್ಲಿ ರಾಷ್ಟ್ರವು ದಾಸ್ಯದಿಂದ ವಿಮುಕ್ತಿಗೊಳ್ಳುವ ಆಶಯದ ಜೊತೆಗೆ ತುಂಡಾದ ಕನ್ನಡ ಪ್ರದೇಶಗಳು ಒಂದುಗೂಡಬೇಕಾಗಿದ್ದ ಆಶಯವೂ ಸೇರಿಕೊಂಡಿತ್ತು. ಇವೆರಡರ ಸಾಕಾರತೆಗಾಗಿ ಕನ್ನಡ ನವೋದಯದ ಸೃಷ್ಟಿಶೀಲ ಜಗತ್ತು ಹಲವು ರೂಪಕ ಪ್ರತೀಕಗಳನ್ನು ಪ್ರಯೋಗಿಸಿದೆ. ಅವುಗಳಲ್ಲಿ ‘ಹೆಣ್ಣು ಸಂಕಥನ’ದ ರೂಪಕಗಳನ್ನು ಮಾತ್ರ ಈ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಅದರಲ್ಲೂ ‘ನಾಡು’ ‘ಕನ್ನಡಮ್ಮ’ನ ಪರಿಕಲ್ಪನೆ ರೂಪಕಗಳಲ್ಲಿ ಅನಾವರಣಗೊಂಡು ಸಾಂಸ್ಕೃತಿಕ ಮಹತ್ತ್ವ ಪಡೆದ ಪ್ರಕ್ರಿಯೆಗಳನ್ನು ಗುರುತಿಸುವುದು ಇಲ್ಲಿನ ಆಶಯ. ಈ ದಿಸೆಯಲ್ಲಿ ಆಧುನಿಕ ಕನ್ನಡ ಕಾವ್ಯವನ್ನು ಪ್ರಧಾನ ಭಿತ್ತಿಯನ್ನಾಗಿಸಿಕೊಳ್ಳಲಾಗಿದೆ. ಅಲ್ಲದೆ ಇನ್ನುಳಿದ ಕವಿಗಳ ರೂಪಕ – ಪ್ರತೀಕಗಳ ಜೊತೆಗೆ ಶಾಂತಕವಿ, ಬಿ.ಎಂ.ಶ್ರೀ, ಬೇಂದ್ರೆ ಹಾಗೂ ಕುವೆಂಪು ಅವರುಗಳು ಸೃಷ್ಟಿಸಿದ ‘ಹೆಣ್ಣುಸಂಕಥನ’ವನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ. ಕನ್ನಡಿಗರ ಹೆಮ್ಮೆಂಯ ಪ್ರತೀಕವಾಗಿ ಅನುಸಂಧಾನಗೊಂಡಿರುವ ‘ಭುವನೇಶ್ವರಿ’ಯ ರೂಪವನ್ನು ಈ ಅಧ್ಯಯನದಲ್ಲಿ ವಿಶೇಷವಾಗಿ ಪರಿಗಣಿಸಲಾಗಿದ್ದು, ಅದರ ದೃಶ್ಯಮಾಧ್ಯಮಗಳ ಬಗೆಗೂ ಪ್ರತಿಕ್ರಿಯಿಸದೆ ಬಿಟ್ಟಿಲ್ಲ. ರಾಷ್ಟ್ರಮಟ್ಟದಲ್ಲಿ ಚರಿತ್ರೆಯ ಸಂಕೇತಗಳೂ ವಸಾಹತುಶಾಹಿಗೆ ಪ್ರಧಾನ ವಿರೋಧಿ ಪರಿಕರಗಳಾಗಿ ಬಳಕೆ ಆದವು. ಅದೇ ರೀತಿಯಾಗಿ ಕನ್ನಡದಲ್ಲೂ ‘ಹಂಪಿ – ವಿಜಯನಗರ’ಗಳು ಮೇಲಿಂದ ಮೇಲೆ ಪ್ರಸ್ತಾಪವಾಗಿದೆ. ಈ ಕುರಿತಂತೆಯೂ ‘ಕನ್ನಡಮ್ಮ’ನ ಹಿನ್ನೆಲೆಯಲ್ಲಿ ಗಮನಿಸಲಾಗಿದೆ.

ಪ್ರಸ್ತುತ ಅಧ್ಯಯನವು ಕೇವಲ ಆಧುನಿಕ ಕನ್ನಡ ಕಾವ್ಯದ ಅದರಲ್ಲೂ ‘ಹೆಣ್ಣು ಸಂಕಥನ’ದ ರೂಪಕ – ಪ್ರತೀಗಳ ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ ತುಂಡಾದ ನಾಡು ರಾಜಕೀಯವಾಗಿ ಒಂದುಗೂಡಿದ ಘಟ್ಟದ (೧೯೫೬) ವರೆವಿಗೂ ಮಾತ್ರ. ಅಂದರೆ ಇಲ್ಲಿ ಕನ್ನಡಿಗರ ಸಾಂಸ್ಕೃತಿಕ ಚಿಂತನಾ ಚಹರೆಯನ್ನು ಮಾತ್ರ ಪರಿಶೀಲಿಸುವ ಮಿತಿಗಳನ್ನು ಹಾಕಿಕೊಳ್ಳಲಾಗಿದೆ. ಅಂತೆಯೆ ‘ಕನ್ನಡಮ್ಮ’ (ಕನ್ನಡ ತಾಯಿ, ಭುವನೇಶ್ವರಿ ಇತ್ಯಾದಿ)ನ ರೂಪಕ – ಪ್ರತೀಕಗಳನ್ನು ಆಯಾ ಚಾರಿತ್ರಿಕ ಸನ್ನಿವೇಶಕ್ಕೆ ಹೊಂದಿಸಿಕೊಳ್ಳಲಾಗಿದೆ. ಕನ್ನಡಮ್ಮನನ್ನು ವಿಶೇಷವಾಗಿ ಚರ್ಚಿಸಿದ್ದರೂ ಯಾವುದೇ ಬಗೆಯ ಭಾವಾವೇಶದ ವಿಶ್ಲೇಷಣೆಗಳಿಗೂ ಒಳಗಾಗಿಲ್ಲ. ಬದಲಾಗಿ ನಾಡು – ನುಡಿಯ ಅಂದಿನ ಆಶಯಗಳನ್ನು ಕುರಿತಂತೆ ನಡೆದ ಪ್ರಕ್ರಿಯೆಗಳನ್ನು ಚಾರಿತ್ರಿಕವಾಗಿ ದಾಖಲಿಸಿ, ವಿಶ್ಲೇಷಿಸಲಾಗಿದೆ. ಈ ಅಧ್ಯಯನವು ಸಾಹಿತ್ಯ – ಚರಿತ್ರೆ ಶಿಸ್ತುಗಳೆರಡರ (ಅಂತರ – ಶಿಸ್ತೀಯ) ವೈಧಾನಿಕತೆಗಳನ್ನು ಅನುಸರಿಸಿದ್ದರೂ, ಇಲ್ಲಿ ಮಾನವ ಹಾಗೂ ಸಮಾಜಗಳೇ ಕೇಂದ್ರ ಬಿಂದುಗಳು. ಆ ಮೂಲಕ ಸಾಂಸ್ಕೃತಿಕ ಒಳನೋಟಗಳನ್ನು ಹೆಕ್ಕಿ ತೆಗೆಯುವ ಕಿರು ಪ್ರಯತ್ನ ಇಲ್ಲಿನದು.