ನವೋದಯಾದ ವಿಚಾರಗಳು ರಾಷ್ಟ್ರೀಯ ಹಾಗೂ ಪ್ರಾಂತೀಯ ನೆಲೆಗಳಲ್ಲಿ ಒಂದು ಸೈದ್ದಾಂತಿಕತೆಯನ್ನೆ ರೂಪಸಿದ್ದವು. ಪಾಶ್ಚಿಮಾತ್ಯ ಚಿಂತನೆಗಳು ತಂದೊಡ್ಡುತ್ತಿದ್ದ ಹಲವು ಬಗೆಯ ಪ್ರಗತಿಪರ ನಿಲುವುಗಳು ಅಷ್ಟು ಸರಳವಾಗಿರಲಿಲ್ಲ. ಬದಲಾಗಿ ಅವು ಅನೇಕ ಸಾಂಸ್ಕೃತಿಕ ಸವಾಲುಗಳನ್ನು ಸಹ ತಂದೊಡ್ಡುತ್ತಿದ್ದವು. ಈ ಸವಾಲುಗಳಿಗೆ ಸರಿಯಾದ ಪ್ರತಿಕ್ರಿಯೆ, ಪ್ರತಿರೋಧಗಳ್ನು ಅಭಿವ್ಯಕ್ತಿಸುವುದು ಅಂದಿನ ಅನಿವಾರ್ಯತೆಯೂ ಹೌದು. ಈ ಪ್ರಕ್ರಿಯೆಗಳಲ್ಲಿ ಒಮ್ಮೆ ನೇರವಾಗಿಯೂ, ಕೆಲವೊಮ್ಮೆ ಪರೋಕ್ಷವಾಗಿಯೂ ಪ್ರತಿಕ್ರಿಯಿಸಬೇಕಾಗುತ್ತಿತ್ತು. ದಾಸ್ಯದ ಆ ಘಟ್ಟದಲ್ಲಿ ಅಸಹಕಾರ, ಸತ್ಯಾಗ್ರಹ, ಅಹಿಂಸೆ, ಉಪವಾಸ, ಶಾಂತಿ – ಸಹನೆ, ರಾಷ್ಟ್ರೀಯ ಶಿಕ್ಷಣ, ಸ್ವರಾಜ್ಯ ಚಿಂತನೆ ಮೊದಲಾದವು ಗಾಂಧಿ ಪ್ರಣೀತವಾಗಿದ್ದವು. ಇದಲ್ಲದೆ ಇನ್ನೊಂದು ಕಡೆಗೆ ಸಂಪೂರ್ಣ ವಿರೋಧಿ ನೆಲೆಯ ಆಲೋಚನೆಗಳು ಸಹ ಜಾರಿಯಲ್ಲಿ ಇದ್ದವು. ಅದೇ ಕ್ಷಾತ್ರ ತೇಜಸ್ಸಿನ, ಶೌರ್ಯ – ವೀರತ್ವದ ಸೈದ್ಧಾಂತಿಕತೆ. ಇಲ್ಲಿ ಹಿಂದಸೆಕ, ಕೊಲ್ಲುವ, ಕ್ರಾಂತಿಯ ಪ್ರಕ್ರಿಯೆಗಳೇ ಪ್ರಧಾನ,. ಇವು ಬಾಲಗಂಗಾಧರ ತಿಲಕ್, ಸಾವರ್‌ಕರ್, ಗೋಳ್ವಾಲ್ಕರ್ ಮೊದಲಾದವರಿಂದ ಪ್ರೇರಿತವಾದುವುಗಳು. ಈ ಎರಡೂ ಪ್ರಕ್ರಿಯಗಳು ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಿನ್ನವಾದ ಪ್ರಭಾವ – ಪರಿಣಾಮಗಳನ್ನು ಬೀರಿದವು. ಅದರ ಫಲಿತಾಂಶವೋ ಎಂಬಂತೆ ಭಾರತೀಯ ಸಾಹಿತ್ಯದ ಅಭಿವ್ಯಕ್ತಿಯೂ ರೂಪು ತಳೆಯಿತು. ಈ ಮಾತು ಕನ್ನಡದ ಸಂದರ್ಭಕ್ಕೂ ಅನ್ವಯ ಆಗುವಂಥದ್ದು.

ಕನ್ನಡ ನವೋದಯ ಸಂದರ್ಭವು ಮೇಲಿನ ಎರಡೂ ಚಿಂತನಾಕ್ರಮಗಳನ್ನು ಅಭಿವ್ಯಕ್ತಿಸದೆ ಬಿಟ್ಟಿಲ್ಲ. ಆದರೆ ಈ ಅಭಿವ್ಯಕ್ತಿ – ಅನುಭೂತಿಗಳು ಸ್ಥಳದಿಂದ ಸ್ಥಳ್ಕಕೆ ಹಾಗೂ ಕವಿಗಳಲ್ಲಿ ವಿಭಿನ್ನವಾಗಿದ್ದವು. ಇದಕ್ಕೆ ಕನ್ನಡ ಮಾತನಾಡುವ ಭೂಪ್ರದೇಶಗಳು ಛಿದ್ರಗೊಂಡಿದ್ದುದೇ ಕಾರಣ. ಹೀಗಾಗಿ ಹೊಸಗನ್ನಡ ಕವಿತೆ ತನಗೆ ಸೂಕ್ತವಾದಿ ಚಿಂತನಾಕ್ರಮಗಳನ್ನು ಆಯಾ ಸಂದರ್ಭಕ್ಕನುಗುಣವಾಗಿ ಅಭಿವ್ಯಕ್ತಿಸಿದೆ. ರಾಷ್ಟ್ರೀಯ ಮಟ್ಟದ ಪಾರತಂತ್ರ್ಯದ ರೀತಿಯಲ್ಲಿಯೆ ಕನ್ನಡದ ತುಂಡಾದ ಪ್ರದೇಶಗಳ ಬಗೆಗೂ ಅನೇಕ ರೀತಿಯ ಪರಿಕಲ್ಪನೆಗಳು, ರೂಪಕ ಪ್ರತೀಕಗಳು ಸೃಷ್ಟಿ ಆದವು ಇನ್ನುಳಿದ ಭಾರತೀಯ ಭಾಷೆಗಳ ಸಾಹಿತಿಗಳಂತೆ ಕನ್ನಡದ ಸೃಷ್ಟಿಶೀಲ ಜಗತ್ತು. ಸಹ ಈ ದಿಸೆಯಲ್ಲಿ ಹಲವು ಬಗೆಯ ಪ್ರಯತ್ನ – ಪ್ರಯೋಗಳನ್ನು ಮಾಡದೆ ಬಿಟ್ಟಿಲ್ಲ. ಪ್ರಭಾವಶಾಲಿಯಾಗಿ ಕೆಲವೆಡೆ ಅಭಿವ್ಯಕ್ತಿ – ಅನುಭೂತಿಗಳು ಅನಾವರಣಗೊಂಡಿದೆ. ಮತ್ತೆ ಕೆಲವೆಡೆ ಮೂಲ ಆಶಯವನ್ನು ಸಂವಹನಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಪ್ರಯತ್ನಗಳ ಒಟ್ಟು ತಾತ್ವಿಕತೆಯನ್ನು ಇಂತಿಷ್ಟೇ ಎಂದು ಹೇಳಲು ಬರುವುದಿಲ್ಲ. ಏಕೆಂದರೆ ಅಂದಿನ ಛಿದ್ರಗೊಂಡ ಕನ್ನಡದ ಭೂಪ್ರದೇಶಗಳ ಸುಮಾರು ಮೂರು ನೂರುಕ್ಕೂ ಹೆಚ್ಚಿನ ಕವಿತೆಗಳನ್ನು ಪರಿಶೀಲಸಿಬೇಕಿದೆ (ಅನುಬಂಧ – ೧ರಲ್ಲಿ ಕವಿ ಕವಿತೆಗಳನ್ನು ಕೊಡಲಾಗಿದೆ). ಈ ದಿಸೆಯಲ್ಲಿ ಇದೊಂದು ಕಿರುಪ್ರಯತ್ನ.

ಆಧುನಿಕ ಕನ್ನಡ ಕಾವ್ಯವು ಜನಾಂಗ, ಭಾಷಿಕವಾದ ಆಯಾಮಗಳ ಜೊತೆಗೆ ತನ್ನ ಭೂಪರಿಸರದ ಆಗು – ಹೋಗುಗಳನ್ನು ಪರಿಶೀಲಿಸುವ ಚಿಂತನೆಯನ್ನು ಮಾಡಿದೆ. ಇಲ್ಲಿ ಒಂದು ಪರಿಸರ(ಕರ್ನಾಟಕ)ದ ಜನ ( ಕನ್ನಡಿಗ)ರು ತಾವು ಆಡುವ ಭಾಷೆ (ಕನ್ನಡ)ಯ ಮುಖೇನ ಕಂಡುಕೊಂಡ ಸಾಸ್ಕೃತಿಕ ಅಂಶಗಳು ಪ್ರಧಾನ ಆಗಿವೆ. ಇವುಗಳ ಜೊತೆಗೆ ರಾಜಕೀಯವಾದ ಹಾಗೂ ಸಾಮಾಜಿಕವಾದ ಆಶಯಗಳು ಹೊರತಾಗಿಲ್ಲ. ನಾಡು ಒಂದುಗೂಡಿದ ಸಾಕಾರತೆಗೂ, ಈ ಬಗೆಗೆ ನಡೆದ ಪ್ರಯತ್ನ – ಒತ್ತಡಗಳಿಗೂ ನಡುವೆ ಅನೇಕ ವೈವಿಧ್ಯತೆಗಳು ಕಾಣಿಸಿಕೊಂಡಿವೆ. ಅವುಗಳನ್ನು ಕನ್ನಡ ಕಾವ್ಯ ಆಯಾ ಕಾಲಕ್ಕೆ ಅನುಗುಣವಾಗಿ ಅಭಿವ್ಯಕ್ತಿಸುತ್ತಾ ಬಂದಿದೆ. ಈ ಅಭಿವ್ಯಕ್ತಿಯ ಒಟ್ಟು ರೂಪವೆ ನಾಡು ನುಡಿ ಚಿಂತನೆಗಳನ್ನು ಕುರಿತ ರೂಪಕ – ಪ್ರತೀಕಗಳು. ಈ ರೂಪಕ – ಪ್ರತೀಕಗಳ ಹುಟ್ಟಿಗೂ ಸಮಕಾಲೀನ ರಾಜಕಾರಣಕ್ಕೂ ಸಂಬಂಧಗಳಿವೆ. ಏಕೆಂದರೆ ಹಲವು ಬಗೆಯ ರಾಜಕಾರಣದ ಒತ್ತಡ – ತುರ್ತುಗಳು ತಮ್ಮ ಆಶಯಗಳ ಸಾಕಾರತೆಗೆ ಸಂಸ್ಕೃತಿಯಲ್ಲಿನ ವಿಶಿಷ್ಟವಾದ ಅಂಶಗಳನ್ನೆ ಅವಲಂಬಿಸಿರುವುದರಿಂದ. ಆಗ ಮಾತ್ರ ಈ ಸಂಸ್ಕೃತಿಯಲ್ಲಿನ ವಿಶಿಷ್ಟವಾದ ಅಂಶಗಳನ್ನೇ ಅವಲಂಬಿಸಿರುವದರಿಂದ. ಆಗ ಮಾತ್ರ ಈ ಸಂಸ್ಕೃತಿಯ ವಿಶಿಷ್ಟ ಅಂಶಗಳು ಪ್ರತೀಕಗಳಾಗಿ ಅನಾವರಣಗೊಳ್ಳುವುದು. ಸರಳವಾಗಿ ಹೇಳುವುದಾದರೆ ಸ್ವಾತಂತ್ರ್ಯ, ರಾಷ್ಟ್ರೀಯತೆ, ಗುಲಾಮಗಿರಿ, ದೇಶ, ನಾಡು ಮೊದಲಾದವು ‘ನೆಲದ ಸತ್ವ’ವನ್ನು ಪಡೆಯುವುದರ ಜೊತೆಗೆ ತಾಯಿ, ಮಗಳು ಮೊದಲಾದ ರೂಪಕ – ಪ್ರತೀಕಗಳನ್ನು ಪಡೆದದ್ದು.

ವಸಾಹತುಕಾಲೀನ ಘಟ್ಟದಲ್ಲಿ ಭಾರತೀಯ ಬರೆಹಗಾರರಿಗೆ ಜನರಿಂದ ಸ್ವೀಕೃತವಾಗುವ ತಂತ್ರಗಳನ್ನು ಮಾತ್ರ ಬಳಸುವ ಅನಿವಾರ್ಯತೆ ಸೃಷ್ಟಿ ಆಗಿತ್ತು. ಆಗ ಅವರಿಗೆ ಧರ್ಮ, ಪುರಾಣ, ಚರಿತ್ರೆ – ಐತಿಹ್ಯಗಳಂಥ ನೆಲೆಗಳಲ್ಲಿನ ಪರಿಕರಗಳು ಸಹಾಯಕ್ಕೆ ಬಂದವು. ಈ ಮಾತು ಕನ್ನಡದ ಸಂದರ್ಭಕ್ಕೂ ಒಪ್ಪುತ್ತದೆ. ಆದರೆ ಕನ್ನಡದ ನವೋದಯ ಸಂದರ್ಭವು ಪ್ರಾದೇಶಿಕವಾಗಿ ಭಿನ್ನ ಬಗೆಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕಾದ ಜರೂರು ನಿರ್ಮಾಣ ಆಗಿತ್ತು. ಏಕೆಂದರೆ ಭಾರತದ ಸ್ವಾತಂತ್ರ್ಯದ ಜೊತೆಗೆ ಅದೇ ಸನ್ನಿವೇಶದಲ್ಲಿಯೇ ವಿಭಿನ್ನ ಆಡಳಿತ ಘಟಕಗಳಲ್ಲಿನ ಕನ್ನಡಿಗರು ಒಂದೇ ಆಡಳಿತದ ತೆಕ್ಕೆಗೆ ಬರಬೇಕಾಗಿದ್ದುದು. ಈ ದಿಸೆಯಲ್ಲಿ ನಡೆದ ಪ್ರಯತ್ನಗಳು ಅನೇಕ ಬಗೆಯ ‘ನಾಡು – ನುಡಿ’ ಚಿಂತನಾ ಪ್ರತೀಕಗಳನ್ನು ಸೃಷ್ಟಿ ಮಾಡಿದವು. ಅವುಗಳನ್ನು ಮುಂದೆ ಪರಿಶೀಲಿಸಲಾಗಿದೆ.

. ಬಂಗಾಳಿಗರು ಹಾಗೂ ಅವರ ಕಾವ್ಯ

ಆಧುನಿಕ ಇಂಗ್ಲಿಶ್ ಶಿಕ್ಷಣ ಕ್ರಮ ಹಾಗೂ ವೈಚಾರಿಕತೆಗಳು ಭಾರತೀಯ ಮೇಲ್ವರ್ಗದ ಜನರನ್ನು ಬಹಳ ಬೇಗ ಒಳಗು ಮಾಡಿಕೊಂಡಿದ್ದವು. ಹತ್ತೊಂಭತ್ತನೆಯ ಶತಮಾನದ ಮೊದಲ ಘಟ್ಟದ ವೇಳೆಗೆ ಬಂಗಾಳದಲ್ಲಿನ ಮೇಲ್ವರ್ಗ ಈ ಸಮೂಹಸನ್ನಿಗೆ ಒಳಗಾಗಿತ್ತು. ಹೀಗಾಗಿ ಇಲ್ಲಿಯೂ ‘ಬಂಗಾಳಿ ಬಾಬು’ಗಳೇ ಮೊದಲಿಗರು. ಪಶ್ಚಾತ್ಯ ಮನೋಧರ್ಮಗಳನ್ನು ಬಹಳ ಬೇಗ, ಅಷ್ಟೇ ವ್ಯಾಪಕವಾಗಿ ಮೈಗೂಡಿಸಿಕೊಂಡ ಈ ವರ್ಗ ಅಷ್ಟೇ ತೀವ್ರಗತಿಯಲ್ಲಿ ಪ್ರತಿಕ್ರಿಯಿಸಿದ್ದೂ ವಿಶೇಷವಾಗಿತ್ತು. ಬ್ರಿಟಿಷರ ಹುನ್ನಾರಗಳನ್ನು ಅವರ ತಂತ್ರಗಳಿಂದಲೇ ಎದರುರುಗೊಂಡ ವೈಚಾರಿಕತೆ ಬಂಗಾಳಿ ಸಾಹಿತ್ಯ ಚಿಂತನೆಯದಾಗಿತ್ತು. ಇಂಡಿಯಾದ ಅಂದಿನ ಅಧೀನ ಸ್ಥಿತಿಯನ್ನು ಅರಿತು ಅದರಿಂದ ಬಿಡುಗಡೆಗೊಳ್ಳಲು ಪಾಶ್ಚಾತ್ಯರ ‘ಓರಿಯಂಟಲಿಸ್ಟ್’ ಚಿಂತನೆಗಳನ್ನೇ ಪ್ರಮುಖ ಆಯುಧಗಳನ್ನಾಗಿಸಿ ಕೊಂಡದ್ದು ಗಮನಾರ್ಹ. ಇವರಿಗೆ ಭಾರತೀಯ ಧರ್ಮ, ಪುರಾಣ, ತತ್ತ್ವ, ಮಹಾಕಾವ್ಯ, ಚರಿತ್ರೆ, ಐತಿಹ್ಯಗಳೇ ಮೂಲ ಪರಿಕರಗಳಾಗಿ ಸಹಕರಿಸಿದವು. ಪಾಶ್ಚಾತ್ಯರ ‘ವೈಭವೀ ಭೂತ’ವನ್ನು ಅವರ ಕಡೆಗೇ ತಿರುಗಿಸಿದ ಶ್ರೇಯಸ್ಸು ಭಾರತೀಯ ಚಿಂತನಶೀಲ ಬರೆಹಗಾರರಿಗೆ ಸಲ್ಲುತ್ತದೆ. ಏಕೆಂದರೆ ಅವರ ದೃಷ್ಟಿಯಲ್ಲಿ ಭಾರತ ಎಂಬುದು ‘ಜಡ್ಡುಗಟ್ಟಿ’ದ, ‘ನಿಷ್ಕ್ರಿಯ’ವಾದ, ‘ಚರಿತ್ರೆರಹಿತ’ ಭೂಪರಿಸರ ಆಗಿತ್ತು. ಈ ಭೂಪರಿಸರಕ್ಕೆ ಸಾಂಸ್ಕತಿಕ ವಿಚಾರಧಾರೆ, ಪರಿಕರಗಳನ್ನು ಜೋಡಿಸಿದ್ದರಿಂದಾಗಿ ತಾವೇ ಸೃಷ್ಟಿಸಿದ್ದ ‘ವೈಭವೀ ಭೂತ’ಕ್ಕೆ ತಾವೇ ಬಲಿ ಆಗಬೇಕಾಗಿ ಬಂದಿತು. ಅವರು ಇಲ್ಲಿನ ಸಂಸ್ಕೃತಿಗಳನ್ನು ನಗಣ್ಯ ಮಾಡಿದ್ದರು. ಈ ಪ್ರಯೋಗಗಳು ಭಾರತೀಯ ಭಾಷೆಗಳಲ್ಲಿ ಬಂಗಾಳಿಗಳಿಂದಲೆ ಪ್ರಭಾವಿತಗೊಂಡು ಮುಂದುವರೆದಂಥವು. ಕನ್ನಡ ಕಾವ್ಯದಲ್ಲಿ ಈ ಅಳವಡಿಕೆಯನ್ನು ಪರಿಶೀಲಿಸುವುದಕ್ಕೆ ಮೊದಲು ಬಂಗಾಳಿ ಹಾಗೂ ಇನ್ನಿತರ ಭಾಷೆಗಳಲ್ಲಿನ ಪ್ರಯೋಗಗಳನ್ನು ಅರಿತುಕೊಳ್ಳುವ ಜರೂರು ಇದೆ.

‘ಬಂಗಾಳಿ ಬಾಬು’ಗಳು ಪಾಶ್ಚಾತ್ಯರನ್ನು ಅನುಕರಿಸಿದಷ್ಟು ಬಹುಶಃ ಇನ್ನಾವ ಭಾಷಿಕರು ಅನುಕರಿಸಿರಲಿಲ್ಲ. ಇಂಗ್ಲಿಶ್ ಭಾಷೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳಿಗೆ ಬಂಗಾಳಿ ಭಾಷಿಕರೇ ಮೊಟ್ಟಮೊದಲ ದಾಸಿಗರು. ಅಂದು ಇಂಗ್ಲಿಶಿನಲ್ಲಿ ಬರೆಯುವುದು, ಚಿಂತನೆ ನಡೆಸುವುದು ಹೆಮ್ಮೆಯ ಸಂಗತಿಯೆ ಆಗಿತ್ತು. ಆದರೆ ಈ ಹೆಮ್ಮೆ ಬಹಳ ಕಾಲ ಮುಂದುವರೆಯಲಿಲ್ಲ. ಇದಕ್ಕೆ ಕಾರಣ ಭಾರತೀಯರಲ್ಲಿನ ರಾಷ್ಟ್ರೀಯತೆಯ ಪ್ರಶ್ನೆ, ಸವಾಲುಗಳು ಹಲವು ಬಗೆಯ ಅವಸ್ಥಾಂತರಗಳನ್ನು ತಂದೊಡ್ಡಿದ್ದು. ಇದರ ಪರಿಣಾಮವಾಗಿ ಬಂಗಾಳಿಬಾಬುಗಳೆ ತಮ್ಮ ನಡುವೆ ಇಂಗ್ಲಿಶಿನಲ್ಲಿ ಬರೆಯುತ್ತಿದ್ದವರನ್ನು ಟೀಕಿಸಿ ಮೂದಲಿಸತೊಡಗಿದರು. ಗೋವಿಂದ ಚಂದ್ರ, ಶಶಿಚಂದ್ರ, ಮಧುಸೂದನ ದತ್ತ ಮೊದಲಾದವರು ಈ ವೇಳೆಗಾಗಲೇ ಇಂಗ್ಲಿಶಿನಲ್ಲಿ ಕವಿತೆಗಳನ್ನು ರಚಿಸಿದ್ದರು. ಆದರೆ ಇವರ ಹಾದಿಯನ್ನೇ ಹಿಡಿದ ರಮೇಶ್ ಚಂದ್ರರಂಥ ಯುವ ಬರೆಹಗಾರರನ್ನು ಕುರಿತು ಬಂಕಿಮಚಂದ್ರರು ತಮ್ಮ ಪತ್ರವೊಂದರಲ್ಲಿ “ಇಂಗ್ಲಿಶ್ ಬರೆಹಗಳ ಮೂಲಕ ನೀವು ಎಂದಿಗೂ ಜೀವಂತವಾಗಿರಲಾರಿರಿ…” ಎಂದು ಜರಿದಿರುವು ದುಂಟು. ಅಷ್ಟೆ ಅಲ್ಲದೆ ‘ವಂಗದರ್ಶನ್’ದಲ್ಲೂ ಸಹ ಆಂಗ್ಲ ವ್ಯಾಮೋಹಿ ಬರೆಹಗಾರರನ್ನು ಕುರಿತಂತೆ “…ನಾಲ್ಕಾರು ಸಾವಿರ ನಕಲಿ ಆಂಗ್ಲರಲ್ಲದೆ ನಾವು ಮೂವತ್ತಕೋಟಿ ಸಾಹೇಬರಾಗಲಾರೆವು” ಎಂಬ ಮೂದಲಿಕೆಯ ಮಾತುಗಳನ್ನು ದಾಖಲಿಸಲಾಗಿದೆ. ಇಲ್ಲಿಂದ ಮುಂದಕ್ಕೆ ಸ್ವಭಾಷೆ, ಸ್ವಸಂಸ್ಕೃತಿಗಳ ಚಿಂತನೆ ಬಂಗಾಳಿಗಳಲ್ಲೂ ಜಾಗೃತ ಆಯಿತು. ಅಂತೆಯೇ ಪರಕೀಯ ಆಡಳಿತದ ದಾಸ್ಯದ ಮನೋಚಿಂತನೆಗಳು ಸಹ ಅನಾವರಣಗೊಳ್ಳತೊಡಗಿದವು

ಇಂಡಿಯಾದ ರಾಜಧಾನಿ ತಾಣಗಳಾಗಿದ್ದ ಕಲ್ಕತ್ತಾ – ಬಂಗಾಳ ಬೂಪರಿಸರವು ಸಾಂಸ್ಕರತಿಕವಾಗಿಯೂ ಪ್ರಧಾನ (ಕೇಂದ್ರ) ಸ್ಥಳವಾಗಿ ಗುರುತಿಸಿಕೊಂಡಿತ್ತು. ಕೇವಲ ಭೌತಿಕ ನೆಲೆವೀಡಾಗಿದ್ದ ಬಂಗಾಳ ಪ್ರದೇಶವು ಬ್ರಿಟಿಶರಿಗೆ ಬೌದ್ಧಿಕವಾಗಿ ಪೆಟ್ಟುಕೊಟ್ಟ ಮೊಟ್ಟ ಮೊದಲ ಸ್ಥಳವೂ ಹೌದು. ಕೇವಲ ನೆಲ, ಮಣ್ಣು, ಭೂಮಿ ಎಂದೇ ಭಾವಿಸಿದ್ದ ಆಂಗ್ಲರಿಗೆ ಇವುಗಳೊಂದಿಗೆ ಬೆಸೆದುಕೋಂಡಿದ್ದ ಸಾಂಸ್ಕೃತಿಕ ಸಂರಚನೆಗಳೂ, ಅನಾವರಣಗೊಳ್ಳುತ್ತಾ ಹೋದವು. ಈ ಅನಾವರಣಕ್ಕೆ ಬಂಗಾಳಿಗಳು ಪ್ರಾಚೀನ ಕಾವ್ಯ, ಪುರಾಣ, ಧರ್ಮ, ಐತಿಹ್ಯಗಳಿಂದ ಎರವಲು ಪಡೆದ ಪ್ರತೀಕಗಳೇ ಕಾರಣ. ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿದ್ದ ಅನೇಕ ರೂಢಿ – ನಂಬಿಕೆಗಳು ಪ್ರಧಾನ ಅಸ್ತ್ರಗಳಾಗತೊಡಗಿದವು. ಈ ಅಸ್ತ್ರಗಳ ತೀವ್ರತೆ ವಸಾಹತುಶಾಹಿ ಮೂಸೆಯ ಚಿಂತನೆಗಳಿಗೆ ದೊಡ್ಡ ಬೆಲೆಯನ್ನೇ ತೆರುವಂತೆ ಮಾಡಲಾರಂಭಿಸಿದ್ದು ಗಮನಾರ್ಹ. ಉದಾಹರಣೆಗೆ ಭೂಮಿಯನ್ನು ಬಂಗಾಳಿ ಸೃಷ್ಟಿಶೀಲರು ತಮ್ಮ ಕಾವ್ಯದ ಮೂಲಕ ಅದಕ್ಕೆ ವಿಷ್ಣು ಪತ್ನಿ (ಲಕ್ಷ್ಮಿ), ಮಾತೆ, ತಾಯಿ ಮೊದಲಾದ ರೂಪಕ – ಪ್ರತೀಕಗಳನ್ನು ಜೋಡಿಸಿದ್ದು. ಇದರಿಂದ ಪರಕೀಯ ವೈಚಾರಿಕತೆ, ಚಟುವಟಿಕೆಗಳು ಹಲವು ಬಗೆಯ ಪ್ರತಿಕ್ರಿಯೆ – ಪ್ರತಿರೋಧಗಳಿಗೆ ಗುರಿ ಆದವು. ಇಲ್ಲಿನ ಸ್ಥಳೀಯ ಧರ್ಮ, ಪುರಾಣ, ದೇವ – ದೇವತೆಗಳ ಬಗೆಗೆ ಎಚ್ಚರಿಕೆಯಿಂದ ವರ್ತಿಸಲು ವಸಾಹತುಶಾಹಿ ಸರದಾರರು ಸನ್ನದ್ಧರಾಗತೊಡಗಿದರು.

‘ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿ’ಯ ಪ್ರವೇಶವು ಸ್ಥಳೀಯ ಮುಸ್ಲಿಂ ಸುಲ್ತಾನರ ಆಡಳಿತವನ್ನು ಕೊನೆಗೊಳೀಸುವುದರೊಂದಿಗೆ ತೀವ್ರಗತಿಯಲ್ಲಿ ಆಂಗ್ಲ ನವೋದಯದ ಛಾಪನ್ನೂ ಮೂಡಿಸಿತ್ತು. ಮೈಕಲ್ ಮಧುಸೂದನ ದತ್ತ, ರಂಗಲಾಲ್ ವಂದ್ಯೋಪಾಧ್ಯಾಯ, ಹೇಮಚಂದ್ರ ವಂದೋಪಾದ್ಯಾಯ, ನವೀನ್ ಚಂದ್ರಸೇನ್, ಬಿಹಾರಿಲಾಲ್ ಚಕ್ರವರ್ತಿ ಮೊದಲಾದವರು ಪ್ರಮುಖ ನವೋದಯ ಕವಿಗಳೆನಿಸಿದ್ದರು. ಇವರು ತಮ್ಮ ಕಾವ್ಯಾಭಿವ್ಯಕ್ತಿಯಲ್ಲಿ ಕ್ರಮೇಣ ದಾಸ್ಯದ ವಿರೋಧಿ ನೆಲೆಗಳನ್ನು, ರೂಪಕಗಳನ್ನು ಅಭಿವ್ಯಕ್ತಿಸಲು ಆರಂಭಿಸಿದ್ದು ಗಮನಾರ್ಹ. ನಾಡು, ನುಡಿ, ರಾಷ್ಟ್ರ, ರಾಷ್ಟ್ರೀಯತೆ, ದಾಸ್ಯ ಮೊದಲಾದ ಪರಿಕಲ್ಪನೆಗಳು ಅನುಭವ – ಅನುಭೂತಿಗಳಾಗಿ ಹೊರಹೊಮ್ಮಿದವು. ರಂಗಲ್ಲಿ ವಂದ್ಯೋ ಪಾಧ್ಯಾಯರಂಥವರು ರಾಷ್ಟ್ರೀಯತೆಯನ್ನು ಬಿಂಬಿಸುವ ‘ಕರ್ಮದೇವಿ’, ‘ಪದ್ಮಿನೀ ಉಪ ಖ್ಯಾನ್’ ಹಾಗೂ ‘ಕಾಂಚಿ – ಕಾವೇರಿ’ ರಚನೆಗಳನ್ನು ನಿಡಿದ್ದರು. ಒರಿಯಾ ಭಾಷೆಯ ಕಾವ್ಯಾನುವಾದವೆ ಆಗಿರುವ ‘ಕಾಂಚಿ – ಕಾವೇರಿ’ಯಲ್ಲಿ ರಂಗಲಾಲ್ಲಿರು ಸ್ವರ್ಗ – ನರಕ ಕಲ್ಪನೆಗಳ ಮೂಲಕ ದಾಸ್ಯದ ಚಿಂತನೆಯನ್ನು ಪರಿಶೀಲಿಸಿದರು. ಅವರು

“ಕೋಟಿಕಲ್ಪ ದಾಸಥಾಕಾ ನರಕೇರ್ ಪ್ರಾಯ್ ಹೇ
ನರಕೇರ್ ಪ್ರಾಯ್
ದಿನೇಕೇರ್ ಸ್ವಾಧೀನತಾ ಸ್ವರ್ಗಸುಖ್ ತಾಯ್ ಹೇ
ಸ್ವರ್ಗಸುಖ್ ತಾಯ್……”

ಎಂಬ ಸಲುಗಳ ಮೂಲದ ‘ಕೋಟಿ ಕಾಲ ದಾಸರಾಗಿ ಇರುವುದು ನರಕಕ್ಕೆ ಸರಿಸಮವಾದುದು, ಅದೇ ಒಂದು ದಿನದ ಸ್ವಾತಂತ್ರ್ಯವು ಸಹ ಸ್ವರ್ಗಕ್ಕೆ ಸಮನಾಗಿ ಇರುವಂಥದ್ದು’ ಎಂಬ ಅರ್ಥದಲ್ಲಿ ಅಭಿವ್ಯಕ್ತಿಸಿದ್ದಾರೆ. ಇಂಥ ಹಲವು ಪ್ರಕ್ರಿಯೆಗಳು ಬಂಗಾಳಿ ತರುಣರನ್ನು ಬೌದ್ಧಿಕವಾಗಿಯಷ್ಟೆ ಅಲ್ಲದೆ ಕ್ರಾಂತಿಕಾರಕವಾಗಿಯೂ ಸಜ್ಜುಗೊಳಿಸಲಾಂಭಿಸಿದ್ದವು. ಈ ದಿಸೆಯಲ್ಲಿ ಮುಸ್ಲಿಂ ಕವಿಗಳ ಪಾತ್ರವು ಸಹ ಮಹತ್ತ್ವದ್ದು.

ಇಕ್ಬಾಲ್‌ರಂಥ ರಾಷ್ಟ್ರಪ್ರೇಮಿ ಕವಿ ತಮ್ಮ ‘ಸಾರೆ ಜಹಾಂಸೆ ಅಚ್ಛ…’ವನ್ನು ‘ತರಾನಾಯೇ ಹಿಂದ್’ ಮೂಲಕ ಉತ್ಸಾಹ ಮೂಡಿಸಿದರು. ಮಂದಿರ – ಮಸೀದಿಗಳೆರಡನ್ನೂ ತಿರಸ್ಕರಿಸಿದ್ದ ಇಕ್ಭಾಲ್ ಮಣ್ಣಿನ ಕಣ ಕಣವು ತನ್ನ ದೇವರು ಎಂದು ಪರಿಭಾವಿಸಿದವರು. ಅಂತೆಯೇ ಶಬ್ಬೀರ್ ಹಸನ್ ಖಾನ್ ‘ಜೋಶ’ ಮಲಿಹ –ಆಬಾದಿ ಅವರು ರಾಷ್ಟ್ರೀಯತೆಯನ್ನು ಮೂಢಿಸುವ ಕವಿತೆಗಳನ್ನು ಬರೆದದ್ದು ಉಂಟು. ಆದರೆ ಮುನ್ಷಿ ಪ್ರೇಮಚಂದ್‌ರು ಅಂದು ಉರ್ದುವಿನಲ್ಲಿ ಬರೆದರಾದರೂ ಕವಿತೆಗಳನ್ನಲ್ಲ; ಕತೆಗಳನ್ನು ಮಾತ್ರ. ಗಮನಿಸಬೇಕಾದ ಅಂಶವೆಂದರೆ ಜಸೀಮುದ್ದೀನ್, ನಶರುಲ್ ಇಸ್ಲಾಂರಂಥ ಕವಿಗಳು ತಮ್ಮ ಕವಿತೆಗಳ ಮುಖೇನ ಕ್ರಾಂತಿಕಾರಕ ಧಾರೆಯನ್ನು ಪ್ರಯೋಗಿಸಿದ್ದು. ನರರುಲ್ ಇಸ್ಲಾಂರು ತಮ್ಮ ‘ವಿದ್ರೋಹಿ’ ಕವನವೊಂದರಿಂದಲೇ ಸಾಕಷ್ಟು ಪ್ರಖ್ಯಾತಿ ಪಡೆದರು. ಈ ಘಟ್ಟದಲ್ಲಿ ಸ್ವರ್ಣಕುಮಾರಿ, ಸರಳಾದೇವಿ, ಗಂಗಾಮಲೆ ದೇವಿ, ಆನಂದಮಯಿ, ಪಂಕಜೀನಿ ಬಸು, ಸರೋಜಿನಿ ಮೊದಲಾದ ಬಂಗಾಳಿ ಕವಯತ್ರಿಯರನ್ನು ಸಹ ಉಲ್ಲೇಖಿಸಬಹುದು. ಮುಂದೆ ರವೀಂದ್ರನಾಥ ಠಾಗೋರರು ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ತಲ್ಲೀನರಾದದ್ದು ಇದೆ. ದ್ವೇಷ, ಹಿಂಸೆ, ರಕ್ತಪಾತಗಳ ವಿರುದ್ಧ ನೆಲೆಗಳಲ್ಲಿ ರಾಷ್ಟ್ರೀಯತೆಯನ್ನು ಪರಿಭಾವಿಸಿದೆ ಕವಿ ಠಾಗೋರ್‌. ಇವರ ಕಾವ್ಯ ಮಾನವೀಯತೆಯ ಪ್ರತೀಕವಾಗಿ ಅನವಾರಣಗೊಂಡದ್ದೇ ಹೆಚ್ಚು. ಆದರೆ ಬಂಗಾಲಿ ಸಾಹಿತ್ಯದಲ್ಲಿಯೆ ವಿಶೇಷವಾಗಿ ಗುರುತಿಸಿಕೊಳ್ಳುವ ಬಂದಿರುವ ಅಭಿವ್ಯಕ್ತಿ ಇದ್ದಕ್ಕಿಂತ ಭಿನ್ನವಾದದು. ರವೀಂದ್ರರು ರಾಷ್ಟ್ರೀಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸಾಕೃತ್ಯಗಳಿಗೆ ನೊಂದು ‘ಶಾಂತಿನಿಕೇತನ’ದ ಮೂಲಕ ಗುರುತಿಸಿಕೊಂಡದ್ದು ಚರಿತ್ರೆಯಲ್ಲಿ ಗಂಭೀರ ಹಾಗೂ ದಾಖಲಾರ್ಹವಾದುದು. ಆದರೆ ಬಂಕಿಮರ ‘ಆನಂದಮಠ’ದ ‘ವಂದೇಮಾತರಂ’ ಗೀತೆ ರವೀಂದ್ರರ ಚಿಂತನೆಗೆ ವಿರುದ್ಧವಾಗಿ ರೂಪುತಳೆದದ್ದು. ಅಷ್ಟೇ ಅಲ್ಲದೆ ಇದು ಭಾರತೀಯ ಕಾವ್ಯ ಚಿಂತನೆಯಲ್ಲಿಯೆ ಪರಿಣಾಮಕಾರಿಯಾದ ಚರಿತ್ರೆಗೆ ಎಡೆಮಾಡಿಕೊಟ್ಟಿತು. ಬಹುಶಃ ಇಲ್ಲಿಂದಲೇ ಇನ್ನಿತರ ಭಾಷೆಗಳಲ್ಲಿ ಹಲವು ಬಗೆಯ ಪ್ರತೀಕ – ರೂಪಕಗಳು ಕಾಣಿಸಿಕೊಂಡಿದ್ದು ಎನ್ನಬಹುದು.

ಬಂಕಿಮರ ‘ವಂದೇಮಾತರಂ’, ರವೀಂದ್ರರ ‘ಜನ ಗಣ ಮನ’ ಹಾಗೂ ಇಕ್ಬಾಲರ ‘ಸಾರೆ ಜಹಾಂಸೇ ಅಚ್ಛ’ – ಕವಿತೆಗಳು ವಸಾಹತುಶಾಹಿ ಕಾಲಘಟ್ಟದಲ್ಲಿಯೇ ರಚಿತವಾದವು. ಆದರೆ ಈ ಮೂರು ಕವಿತೆಗಳ ಅಭಿವ್ಯಕ್ತಿ ಒಂದೇ ತೆರನಾಗಿಲ್ಲ. ಆದರೆ ಇವು ಮೂರು ಸಹ ಭಾರತೀಯರನ್ನು ಏಕಾಘನಾಕೃತಿಯ (Monolythic) ನೆಲೆಯಲ್ಲಿಯೆ ಅನಾವರಣ ಗೊಳಿಸಿದವು. ಭಾರತೀಯ ಜನಮನದಲ್ಲಿ ಈ ಮೂರು ಕವಿತೆಗಳು ರಾಷ್ಟ್ರಗೀತೆಗಳಾಗಿಯೆ ಮೂಡಿಬಂದಂಥವು. ರಾಷ್ಟ್ರೀಯ ಏಕತೆ, ಒಗ್ಗಟ್ಟು, ದೇಶಭಕ್ತಿಯನ್ನು ಸಾರಿ ಹೇಳುವ ಈ ಗೀತೆಗಳು ಬ್ರಿಟಿಷರ ದಾಸ್ಯದ ವಿರೋಧಿ ನೆಲೆಯವು. ಅಂದು ಈ ಬಗೆಯ ಅಭಿವ್ಯಕ್ತಿ ಅನಿವಾರ್ಯವೋ ಎಂಬಂತೆ ರೂಪುತಳೆದಿತ್ತು. ಇಕ್ಬಾಲ್ ಹಾಗೂ ರವೀಂದ್ರರ ಕವಿತೆಗಳು ಭಾರತದ ನೆಲ, ಜನ, ಪ್ರಾಂತ್ಯ, ಪ್ರಕೃತಿ ಮೊದಲಾದ ಸೌಂದರ್ಯಗಳ ಮೂಲಕ ಜನರನ್ನು ಒಗ್ಗೂಡಿಸಲು ಬಯಸುವಂಥವು. ಆದರೆ ಬಂಕಿಮರ ‘ವಂದೇ ಮಾತರಂ’ ಇವರಿಬ್ಬರ ಕವಿತೆಗಳಲ್ಲಿನ ವಿಶೇಷತೆಗಳ ಜೊತೆಗೆ ಭಿನ್ನ ಬಗೆಯ ಸಂಕಥನವೊಂದನ್ನೇ ಅಭಿವ್ಯಕ್ತಿಸಿದೆ.

ಬಂಕಿಮಚಂದ್ರರ ‘ಆನಂದಮಠ’ ಕಾದಂಬರಿಯಲ್ಲಿ ಜಾಗೃತಿ ಮೂಡಿಸಲೆಂದೇ ಪ್ರಯೋಗವಾಗಿರುವ ‘ವಂದೇ ಮಾತರಂ’ ಕವಿತೆ ರಾಷ್ಟ್ರೀಯ ಚಳವಳಿಯನ್ನು ಪ್ರೇರೇಪಿಸಿದ ಮಹತ್ತ್ವದ ಕವಿತೆ. ಮುಂದೆ ಕನ್ನಡದ ಸಂದರ್ಭದಲ್ಲಿ ಅ.ನ. ಕೃಷ್ಣರಾಯರು ತಮ್ಮ ‘ಕನ್ನಡಮ್ಮನ ಗುಡಿಯಲ್ಲಿ’ ಕಾದಂಬರಿಯಲ್ಲೂ ಇದೇ ಪ್ರಯೋಗವನ್ನೆ ಮಾಡಿದ ಉದಾಹರಣೆ ದೊರೆಯುತ್ತದೆ. ಆದರೆ ಇಲ್ಲಿ ಅದು ನಾಡಿನ ಏಕೀಕರಣದ ಸಾಕಾರತೆಗಾಗಿ ಪ್ರಯೋಗ ಆಗಿದ್ದನ್ನು ಗಮನಿಸಬಹುದು. ‘ವಂದೇ ಮಾತರಂ’ ತೀವ್ರ ಪರಿಣಾಮ ಬೀರಿದ ಕವಿತೆಯಗಿ ರೂಪುತಳೆದದ್ದು ಅದರಲ್ಲಿನ ಪ್ರತಿಮೆ ರೂಪಕಗಳಿಂದಲೇ. ದೇಶವನ್ನು ಹೆಣ್ಣಾಗಿ ಅದರಲ್ಲೂ ‘ತಾಯಿ’ಯ ಪ್ರತೀಕವನ್ನಾಗಿ ಅಭಿವ್ಯಕ್ತಿಸಿದ್ದು ಗಮನಿಸಬೇಕಾದ ಸಂಗತಿ. ಅಂದರೆ ಅಲ್ಲಿಯ ವರೆಗೂ ಭಾರತದ ಪ್ರಾಚೀನ ಕಾವ್ಯ, ಪುರಾಣಗಳಲ್ಲಿದ್ದಂಥ ಭೂಮಿಯನ್ನು ‘ಲಕ್ಷ್ಮಿ; ಯನ್ನಾಗಿ ನೋಡುವ ನೋಟಕ್ಕಿಂತ ಇದು ಭಿನ್ನ, ‘ರಾಜ್ಯಲಕ್ಷ್ಮಿ’ಗಿಂತ ಒಂದು ಹೆಜ್ಜೆ ಮುಂದೆ ಹೋಗಿ. ಪೂಜ್ಯತೆಯ ಜೊತೆಗೆ ತಾಯಿಯ ಮಮತೆಯನ್ನು ಬೆಸೆದ ‘ವಂದೇ ಮಾತರಂ’ ಕವಿತೆ ತನ್ನ ವಿಶಿಷ್ಟತೆಯನ್ನು ಮೆರೆಯಿತು.

ರಾಷ್ಟ್ರೀಯ ಹೋರಾಟದ ವಿಭಿನ್ನ ಹಂತಗಳಲ್ಲಿ ಬಂಕಿಮರ ಈ ಕವಿತೆ ತನ್ನದೇ ಆದ ಮಹತ್ತ್ವದಿಂದಾಗಿ ವಸಾಹತುಶಾಹಿ ಪ್ರಭುತ್ವದ ವೀರೋಧಕ್ಕಾಗಿಯೆ ಕಟ್ಟಿದ ರೂಪಕವಾಗಿ ಸ್ಪಂದಿಸಿತು. ಉತ್ಕಟವಾದ ರಾಷ್ಟ್ರೀಯ ಅರಿವಿಗಾಗಿಯೆ ಹುಟ್ಟಿದ ಕವಿತೆಯೋ ಎಂಬಂತೆ ‘ವಂದೇ ಮಾತರಂ’ ಜನರಲ್ಲಿ ಅನುಭೂತಿ ಹೊಂದುತ್ತಾ ಹೋಯಿತು. ಬಹುಶಃ ಇದರಲ್ಲಿದ್ದ ಪ್ರತಿಮೆ – ಪ್ರತೀಕಗಳು ಅದರ ಸಾಕಾರತೆಗೆ ಕಾರಣವಾದವು ಎಂದರೆ ತಪ್ಪಾಗಲಾರದು. ಈ ಕವಿತೆ ಮೂರು ಆಯಾಮಗಳಲ್ಲಿ ತನ್ನನ್ನು ತಾನು ತೆರೆದುಕೊಂಡಿದೆ. ಕವಿತೆಯ ಮೊದಲ ಹಂತದಲ್ಲಿ ಅದು ಈ ಹಿಂದಿನ ಕವಿಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪ್ರಕೃತಿ ಸೌಂದರ್ಯದ ಆರಾಧನೆಯನ್ನೇ ಬಿಂಬಿಸುತ್ತದೆ. ಇಲ್ಲಿನ ಜಲಧಾರೆಗಳು, ಹಸಿರು, ಬೆಳದಿಂಗಳ ಶಾಂತ ಸ್ವರೂಪವನ್ನು ವರ್ಣಿಸುವಂಥದ್ದು. ತನ್ನ ಎರಡನೆಯ ಹಂತದಲ್ಲಿ ಹೆತ್ತ ತಾಯಿಯ ಮಮತೆಯ ಮಹತ್ತ್ವವನ್ನು ಪ್ರತಿಬಿಂಬಿಸುತ್ತಾ ಹೋಗುತ್ತದೆ. ಕರುಣೆಯ ಪ್ರತೀಕವಾಗಿ ಈ ತಾಯಿ ಗೋಚರವಾಗುತ್ತಾಳೆ. ‘ವಂದೇ ಮಾತರಂ’ನ ಅಂತಿಮ ಹಂತ ಮೊದಲಿನ ಎರಡೂ ನೆಲೆಗಳಿಗಿಂತ ಭಿನ್ನವಾದದ್ದು. ಇದು ತಾಯಿಯ ಅಥವಾ ಹೆಣ್ಣಿನ ಇನ್ನೊಂದು ಚಹರೆಯ ಅನಾವರಣ. ಅಂದರೆ ಆಕೆಗೆ ವೀರ್ಯವತ್ತಾದ ಕಲ್ಕತ್ತೆಯ ಕಾಳಿಯನ್ನು ಪ್ರತಿನಿಧಿಸುವ ರೌದ್ರರೂಪಿ ಚಹರೆಯನ್ನು ಅಳವಡಿಸಲಾಗಿದೆ.

‘ವಂದೇ ಮಾತರಂ’ ಗೀತೆಯಲ್ಲಿನ ಹೆಣ್ಣೂ ಸಂಕಥನದ ಅನುಭವ – ಅನುಭೂತಿಗಳು ಸ್ವಾತಂತ್ರ್ಯ ಚಳವಳಿಯ ಎಲ್ಲ ಹಂತಗಳಲ್ಲೂ ಜಾಗೃತಿ ಮೂಡಿಸುವಂತೆ ಮಾಡಿದ್ದು ವಿಶೇಷವಾದ ಸ್ಥಾನ ಪಡೆಯಲು ಕಾರಣ ಆಯಿತು. ರಾಷ್ಟ್ರವನ್ನು ಹೆಣ್ಣಿನ ಪ್ರತೀಕವನ್ನಾಗಿಸಿದ ಈ ಕವಿತೆ ಆಕೆಯ ಭಿನ್ನ ಬಗೆಯ ಎರಡು ಚಹರೆಗಳ ಮುಖೇನ ಭಾರತೀಯರಲ್ಲಿ ಸೂಕ್ಷ್ಮ ಪ್ರತಿಮೆಯೊಂದನ್ನೇ ಮೂಡಿಸಿತ್ತು. ಆ ಮೂಲಕ ಈ ಸಂಕಥನ ಭಾವನಾತ್ಮಕ ಹಾಗೂ ಸಂಸ್ಕೃತಿಕವಾದ ಎರಡೂ ನೆಲೆಗಳಲ್ಲೂ ಐಕ್ಯತೆಯನ್ನು ಮೂಡಿಸಲೆಂದು ಪ್ರಯೋಗ ಆಗಿದೆ ‘ವಂದೇ ಮಾತರಂ’ನ ಹೆಣ್ಣು ಸಂಕಥನ ಬ್ರಿಟಿಶರಿಗೆ ‘ಒಲಿದರೆ ಅಮ್ಮ; ಮುನಿದರೆ ಮಾರಮ್ಮ’ ಎಂಬ ದಿಸೆಯಲ್ಲಿ ಅಭಿವ್ಯಕ್ತಗೊಂಡಂತೆ ಇದೆ. ಭಾರತೀಯ ಜನಮನದ ಮಾತೃಸ್ವರೂಪಿ ಹೆಣ್ಣು ಒಲಿದರೆ ಕಾರುಣ್ಯ – ಮಮತೆಯ ಸಾಕಾರಮೂರ್ತಿ ಆಗಿರುವಂತೆಯೇ, ಮುನಿದರೆ ಚಂಡಿ ಅಥವಾ ಕಾಳಿಯ ರೌದ್ರರೂಪಿ ದರ್ಶನವನ್ನು ತಾಳಬಲ್ಲವಳು ಎಂಬುದನ್ನು ಈ ಕವಿತೆ ಅನುಸಂಧಾನಗೊಳಿಸುತ್ತದೆ. ಈ ಥರದ ಪ್ರಯೋಗ ಕೇವಲ ಬಂಗಾಳಿ ಕಾವ್ಯ ಅಥವಾ ಸಾಹಿತ್ಯದಲ್ಲಷ್ಟೆ ರೂಪು ತಳೆದಿಲ್ಲ. ಬದಲಾಗಿ ಇತರೆ ಪ್ರಾಂತೀಯ ಭಾಷೆಗಳಲ್ಲೂ ಅಭಿವ್ಯಕ್ತಗೊಂಡಿದೆ. ಆದರೆ ಇವೆಲ್ಲಕ್ಕೂ ಮೂಲ ಮಾತ್ರ ಬಂಕಿಮರ ‘ವಂದೇ ಮಾತರಂ’ ಕವಿತೆಯೆ ಎಂದರೆ ತಪ್ಪಾಗಲಾರದು.

ಕನ್ನಡದ ಸಂದರ್ಭದಲ್ಲಿ ಈ ಹೆಣ್ಣು ಸಂಕಥನದ ಅಭಿವ್ಯಕ್ತಿಯನ್ನು ಮುಂದಿನ ಅಧ್ಯಯದಲ್ಲಿ ಪರಿಶೀಲಿಸಲಾಗಿದೆ. ಆದರೆ ಅದಕ್ಕೆ ಮೊದಲು ಈ ಪ್ರಯೋಗ ಇತರೆ ಭಾರತೀಯ ಭಾಷೆಗಳಲ್ಲೂ ಅಭಿವ್ಯಕ್ತಗೊಂಡದ್ದನ್ನು ಸಂಕ್ಷಿಪ್ತವಾಗಿ ಪರಿಶೀಲಿಸುವ ಅಗತ್ಯತೆ ಇದೆ. ಬಂಗಾಳದಲ್ಲಿ ಬಂಗಾಳಿ ಹಾಗೂ ಉರ್ದು ಭಾಷೆಗಳಲ್ಲಿ ನವೋದಯ ಹಾಗೂ ಅನಂತರದ ಹಂತಗಳಲ್ಲಿನ ಕಾವ್ಯ ರಚಿತವಾಗಿದ್ದಷ್ಟೆ ಅಲ್ಲದೆ ಮರಾಠಿ ಭಾಷಿಕರನ್ನು ಸಹ ಈ ದಿಸೆಯಲ್ಲಿ ಪ್ರಾಭಾವಿತರನ್ನಾಗಿಸಿತ್ತು.

. ಮರಾಠಿ ಕಾವ್ಯ

ಪಾಶ್ಚಾತ್ಯ ಚಿಂತನೆಗಳಿಗೆ ಪರ್ಯಾಯವಾಗಿ ಮರಾಠಿಗರು ಗತದ ವ್ಯಾಖ್ಯಾನ, ಸಂಸ್ಕೃತಿ ಚಿಂತನೆ, ರಾಷ್ಟ್ರೀಯ ಭಾವನೆಯ ಪರಿಕಲ್ಪನೆಗಳನ್ನು ತಮ್ಮ ಕವಿತೆಗಳಲ್ಲಿ ಮೂಡಿಸಿದರು. ಬಂಗಾಳಿಗರಂತೆ ಇವರಲ್ಲೂ ಹೆಣ್ಣು ಸಂಕಥನದ ಕಾವ್ಯ ರಚಿತವಾಯಿತು. ಆದರೆ ಆರಂಭದಲ್ಲಿ ಹರಿನಾರಾಯಣ ಆಪ್ಟೆ ಅವರು ರಚಿಸಿದ ಕವಿಗಳಿಗೂ, ೧೯೪೯ರ ದಶಕದಲ್ಲಿ ಮರ್ಡೇಕರ್ ಮೊದಲಾದವರು ರಚಿಸಿದ ಕವಿತೆಗಳಿಗೂ ಹೆಚ್ಚಿನ ಭಿನ್ನತೆಗಳಿವೆ. ಮೊದಲ ಕಾದಂಬರಿ ರಚಿಸಿದವರೆಂದೇ ಖ್ಯಾತರಾದ ಆಪ್ಟೆ ಅವರು ಮರಾಠಿ ಭಾಷೆಯಲ್ಲಿ ವವೋದಯ ಕವಿತೆ ರಚಿಸಿದ ಮೊದಲ ಕವಿಗಳೂ ಹೌದು. ಅವರ ‘ಕೇಶವ ಸುತ’ ಮೊಟ್ಟಮೊದಲ ಕವನವಾಗಿದೆ. ಮರಾಠಿ ಭಾಷೆಯಲ್ಲಿ ಹೆಣ್ಣು ಸಂಕಥನದ ಪ್ರತೀಕಗಳ ಜೊತೆಗೆ ಗಂಡು ಸಂಕಥನದ ಪ್ರತೀಕಗಳು ಚಾಲತಿಗೆ ಬಂದದ್ದು ವಿಶೇಷವಾಗಿತ್ತು. ಉಗ್ರ ರಾಷ್ಟ್ರೀಯ ಹೋರಾಟದ ಚಿಂತನೆಗಳನ್ನು ಮೂಡಿಸಿದ ತಿಲಕ್ ಪ್ರಣೀತ ವೈಚಾರಿಕ ಧಾರೆ ಅಲ್ಲಿನ ಕಾವ್ಯವನ್ನು ಆಕ್ರಮಿಸದೆ ಬಿಡಲಿಲ್ಲ. ಗಾಂಧಿ ಪ್ರಣೀತ ರಾಷ್ಟ್ರೀಯ ಪರಿಕಲ್ಪನೆಗಳಿಗಿಂತ ಭಿನ್ನವಾದ ಪರಿಕಲ್ಪನೆಗಳು ಈ ಸನ್ನಿವೇಶದಲ್ಲಿ ಮುಖ್ಯಧಾರೆಗೆ ಬಂದವು. ಅಂತವುಗಳಲ್ಲಿ ಧರ್ಮ ಹಾಗೂ ಚರಿತ್ರೆಯ ಪರಿಕಲ್ಪನೆಗಳು ಪ್ರಧಾನವಾಗಿದ್ದು ಅಂದಿನ ಕಾವ್ಯಾಭಿವ್ಯಕ್ತಿಯಲ್ಲಿ ಹಾಸುಹೊಕ್ಕವು. ಉದಾಹರಣೆಗೆ ಅಂದು ಗಣೇಶ ಹಬ್ಬದ ಆಚರಣೆ, ಗೋವಿನ ಪಾವಿತ್ರತೆ ಶಿವಾಜಿಯ ವೀರತ್ವ – ಕೆಚ್ಚು ಮೊಲಾದವು ಜನರಲ್ಲಿ ರಾಷ್ಟ್ರೀಯತೆಯಪ್ರಜ್ಞೆಯನ್ನು ಮೂಡಿಸುವಲ್ಲಿ ಸಹಕಾರಿ ಆದದ್ದು. ಪರಕೀಯ ಬ್ರಿಟಿಶ್ ಆಡಳಿತವನ್ನು ಕಿತ್ತೊಗೆಯಲು ಮರಾಠಿಗರು ಪೂಜ್ಯತೆಯ ಧರ್ಮದ ಅಸ್ತ್ರಗಳನ್ನು ಬಳಸಿಕೊಂಡಿದ್ದೇ ಹೆಚ್ಚು. ಈ ದಿಸೆಯಲ್ಲಿ ಗಣೇಶ, ಗೋವು, ಶಿವಾಜಿ ಮೊದಲಾದವು ಬಂಗಾಳಿಗರ ಕಾಳಿ, ದುರ್ಗೆ, ಮಾತೆ ಮೊದಲಾದ ರೂಪಕ – ಪ್ರತೀಕಗಳಂತೆ ಇಲ್ಲಿಯೂ ಪ್ರಯೋಗ ಆದವು. ಅಂದು ತಮ್ಮ ಕವಿತೆಗಳಲ್ಲಿ ದಾಶ್ಯದ ಪ್ರಜ್ಞೆಯನ್ನು ಅರಿವಿಗೆ ತಂದು ಜಾಗೃತಿ ಮೂಡಿಸಿದ ಕವಿಗಳು ಅನೇಕರಿದ್ದಾರೆ. ಅವರಲ್ಲಿ ನಾರಾಯಣ ವಾಮನ ತಿಲಕ್, ರಾಮಗಣೇಶ ಗಡಕರಿ, ಬಾಲಕವಿ, ಮುರಳೀಧರ ಗುಪ್ತೆ, ಭಾಸ್ಕರ ರಾಮಚಂದ್ರ ತಂಬೆ, ಶಿರ್ವಾಡಕರ್, ಮರ್ಡೇಕರ್ ಮೊದಲಾದವರು ಪ್ರಮುಖರು. ಮರಾಠಿ ಕಾವ್ಯದ ಪ್ರತೀಕಗಳು ಕನ್ನಡ ಹಾಗೂ ಇತರೆ ಭಾಷಿಕರನ್ನು ಮತ್ತಷ್ಟು ಕ್ರಾಂತಿಕಾರಕ ದಿಸೆಯಲ್ಲಿ, ಅವೇಶದ ನೆಲೆಗಳಲ್ಲಿ ಕೊಂಡೊಯ್ದದ್ದಷ್ಟೆ ಅಲ್ಲದೆ ತೀವ್ರತರವಾದ ಪರಿಣಾಮವನ್ನು ಸಹ ಉಂಟು ಮಾಡಿದವು.

.೩ ತೆಲುಗು ಕಾವ್ಯ

ತೆಲುಗು ಕಾವ್ಯದ ನೆಲೆಗಳು ಸಹ ಅಂದಿನ ರಾಷ್ಟ್ರೀಯ ಪ್ರಜ್ಞೆಯ ಪ್ರತೀಕಗಳಿಂದ ಹೊರತಾಗಿಲ್ಲ. ಆಂಧ್ರದಲ್ಲಿಯೂ ಭೂಮಿಗೆ ಅನೇಕ ಬಗೆಯ ರೂಪಕ – ಪ್ರತಿಮಗಳನ್ನು ಜೋಡಿಸುವುದರೊಂದಿಗೆ ಜಾಗೃತಿ ಮೂಡಿಸಿದ ಉದಾಹರಣೆಗಳಿವೆ. ಗುರುಜಾಡ ಅಪ್ಪಾರಾವ್ ರಂಥವರು “ದೇಶವೆಂದರೆ ಕೇವಲ ಮಣ್ಣಷ್ಟೇ ಅಲ್ಲ; ಅಲ್ಲಿನ ಜನರೂ ಹೌದು” ಎಂದು ಪ್ರತಿಪಾದಿಸಿ ಕಾವ್ಯವನ್ನು ರಚಿಸಿದ್ದು ತೆಲುಗಿನಲ್ಲಿ ಯೆ. ಆರಂಭದಲ್ಲಿ ವಿರೇಶಲಿಂಗಂ, ದಾಶರಥಿ, ವುನ್ನಲ ಲಕ್ಷ್ಮೀನಾರಾಯಣ, ಚಿಲಕಮರ್ತಿ ಲಕ್ಷ್ಮಿನರಸಿಂಹಂ ಪಂತುಲು, ವಸುರಾಯ, ನೋರಿ ನರಸಿಂಗಶಾಸ್ತ್ರಿ, ಶಿವಶಂಕರ ಶಾಸ್ತ್ರಿ ಮೊದಲಾದವರು ನಾಡು, ನುಡಿ, ಸಾಹಿತ್ಯ, ಚರಿತ್ರೆ ಸಂಸ್ಕೃತಿಗಳ ಮುಖೇನ ರಾಷ್ಟ್ರೀಯ ಪರಿಕಲ್ಪನೆಗಳನ್ನು ಅಭಿವ್ಯಕ್ತಿಸಿದರು. ಅನಂತರದಲ್ಲಿ ಸ್ಥಳೀಯ ಸಾಸ್ಕೃತಿಕ ಪ್ರತೀಕಗಳ ಮೂಲಕ ಗರಿಮೆಳ್ಳ ಸತ್ಯನಾರಾಯಣ, ಬಸವರಾಜು ಅಪ್ಪಾರವ್, ತನ್ನೆಟಿ ಸೂರಿ, ತುಮ್ಮಳ ಸೀತಾರಾಮಶಾಸ್ತ್ರಿ, ಮಂಗಿಪೂಡಿ ವೆಂಕಟ ಶರ್ಮ, ದುವ್ವೂರಿ ರಾಮರೆಡ್ಡಿ, ಕಾಟೂರಿ, ಜೆಷುವಾ, ಕಾಳೋಜಿ ನಾರಾಯಣ ರಾವ್, ರಾಯಪ್ರೋಲು ಸುಬ್ಬರಾವ್ ಮೊದಲಾದವರು ಪ್ರತಿಕ್ರಿಯಿಸಿದ್ದು ಉಂಟು. ಆಂಧ್ರದಲ್ಲಿ ತೆಲುಗು ಕಾವ್ಯದ ಪ್ರತೀಕಗಳು ಕನ್ನಡಿಗರಿಗಿಂತಲೂ ಮೊದಲು ಏಕೀಕರಣ ಹೊಂದಲು ಪ್ರೇರಣೆ ನೀಡಿದ್ದವು. ಇಲ್ಲಿಯೂ ತಾಯಿ – ಮಗಳ ರೂಪಕಗಳು ಸೃಷ್ಟಿ ಆಗಿವೆ.

.೪ ತಮಿಳು ಕಾವ್ಯ

ದಕ್ಷಿಣ ಭಾರತದಲ್ಲಿ ತಮಿಳು ಕಾವ್ಯದ ಮೂಲಕವು ಸ್ಥಳೀಯ ಸಾಂಸ್ಕೃತಿಕ ರೂಪಕ ಪ್ರತಿಮೆಗಳು ಹೊರಹೊಮ್ಮಿವೆ. ‘ರಾಷ್ಟ್ರೀಯತೆಯ ಕವಿ’ಯೆಂದೆ ಖ್ಯಾತರಾದ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ. ಭಾರತಿ ಅವರ ಕಾವ್ಯ ಚಿಂತನೆ ಬಹಳ ಮಹತ್ತ್ವದ್ದು. ಇವರು ಬಂಕಿಮರ ‘ವಂದೇಮಾತರಂ’ನ್ನು ಅನುವಾದಿಸಿದರು. ಅಂತೆಯೇ ವಿ.ವಿ. ಎಸ್. ಅಯ್ಯರ್‌, ವಿ. ಸ್ವಾಮಿ ನಾಥನ್, ವಿ. ರಾಮಸ್ವಾಮಿ ಮೊದಲಾದವರು ತಮಿಳು ಸಂಸ್ಕೃತಿಯ ಮುಖೇನ ಪ್ರದೇಶಿಕ ಸೊಗಡನ್ನು ಅಭಿವ್ಯಕ್ತಿಸಿದವರು. ಆ ಮೂಲಕ ತೀವ್ರತರವದ ರಾಷ್ಟ್ರೀಯ ಪ್ರಜ್ಞೆಯ ಅರಿವಿಗೆ ಕಾರಣರಾದರು. ತಮಿಳಿನಲ್ಲೂ ತಾಯಿಯ ರೂಪಕ ಪ್ರಧಾನವಾದುದು.

. ಮಲಯಾಳ ಕಾವ್ಯ

ಮಲೆಯಾಳ ಭಾಷೆಯಲ್ಲಿ ವಳ್ಳತ್ತೋಳ್ ಕವಿ ಅತಿಯಾದ ಅಭಿಮಾನದಿಂದಲೇ ಮಾತೃ ಭೂಮಿ, ರಾಷ್ಟ್ರೀಯತ ಭಾವನೆಗಳನ್ನು ಮೂಡಿಸಿದವರು. ಗಾಂಧಿಯನ್ನೇ ಪ್ರಧಾನ ಪ್ರತೀಕವನ್ನಾಗಿಸಿದ ಈ ಕವಿ ‘ಎನ್ಡೆ ಗುರುನಾಥನ್’ ಎಂಬ ಸಂಗ್ರಹವನ್ನೂ ತಂದದ್ದು ಉಂಟು. ಕೇರಳೀಗರನ್ನು ಸ್ಥಳೀಯ ಪ್ರತಿಮೆ – ಪ್ರತೀಕಗಳ ಮೂಲಕ ಕೆರಳಿಸಿದ ಕವನ ಸಂಗ್ರಹಗಳಲ್ಲಿ ‘ಚಕ್ರಗಾಥ’, ‘ಖಾದಿವಸನಂಗಳ್ ಕೈಕೊಳ್ವಿನೇವರುಂ’ ಪ್ರಧಾನವಾದವು. ‘ಚಿತ್ರಶಾಲ’ ಸಂಗ್ರಹವನ್ನು ಪ್ರಕಟಿಸಿದ ಕವಿ ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್‌ ಭಾರತಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡರು.

ಇಂಥ ಹಲವು ನೆಲೆಗಳಲ್ಲಿ ಪ್ರಾಂತೀಯ ಭಾಷಿಕರು ತಮ್ಮ ಕಾವ್ಯ ಸೃಷ್ಟಿಯ ಮುಖೇನ ನಾಡು – ನುಡಿ ಪ್ರತೀಕಗಳನ್ನು ಅಭಿವ್ಯಕ್ತಿಸಿದ ಉದಾಹರಣೆಗಳು ಇವೆ. ಕಾವ್ಯದ ಮೂಲಕವಷ್ಟೇ ಅಲ್ಲದೆ ತಮ್ಮ ಕತೆ – ಕಾದಂಬರಿ – ನಾಟಕ ಗದ್ಯ ಶಾಹತಿಯಾದ ಮೂಲಕವೂ ಪ್ರತಿಕ್ರಿಯಿಸಿರುವುದುಂಟು.