.೨ ಬಿ. ಎಂ. ಶ್ರೀ ಹಾಗೂ ‘ಕನ್ನಡ ತಾಯಿ’

ಆಧುನಿಕ ಕನ್ನಡ ಕಾವ್ಯದ ಸಂದರ್ಭದಲ್ಲಿ ಬಿ.ಎಂ.ಶ್ರೀಕಂಠಯ್ಯ ಅವರು ‘ಕನ್ನಡ ನವೋದಯದ ಪ್ರವರ್ತಕ’ ಎಂದೇ ಗುರುತಿಸಿಕೊಂಡವರು. ಅವರ ‘ಇಂಗ್ಲಿಶ್ ಗೀತಗಳು’ (೧೯೨೬) ಕನ್ನಡ ಕಾವ್ಯ ಸ್ವರೂಪಕ್ಕೆ ‘ಪುನರುಜ್ಜೀವನ’ವನ್ನು ತಂದುಕೊಟ್ಟದ್ದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ವ್ಯಾಕರಣ, ಛಂದಸ್ಸು, ಅರ್ಥ, ವಿನ್ಯಾಸಗಳು ಹೊಸ ರೂಪವನ್ನು ಪಡೆದುವ ಎನ್ನಬಹುದು. ಇಂಗ್ಲೀಷಿನ ಅಂದಿನ ‘ರೋಮ್ಯಾಂಟಿಕ್” ಮಾದರಿಯ ಪ್ರಯೋಗಗಳೂ ‘ಶ್ರೀ’ ಅವರ ಕಾವ್ಯ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವುದು ಸ್ಪಷ್ಟ. ಆದರೆ ದೇಶಭಕ್ತಿ, ಪ್ರಕೃತಿ ಸೌಂದರ್ಯ, ಪ್ರಣಯದ ವಸ್ತುಗಳು ಕನ್ನಡದಲ್ಲಿ ಹೊಸ ಶೈಲಿ, ರೂಪ – ವಿನ್ಯಾಸಗಳನ್ನು ಪಡೆದದ್ದು ವಿಶೇಷ. ಈ ದಿಶೆಯಲ್ಲಿ ಅವರು ‘ಕನ್ನಡ ನವೋದಯದ ಹರಿಕಾರರೇ ಹೌದು’. ಆದರೆ ‘ಕರ್ನಾಟಕದ ನವೋದಯ ಹರಿಕಾರರು ಅಲ್ಲ’ ಎಂಬ ಅಪವಾದವಿದೆ. ಏಕೆಂದರೆ ‘ಶ್ರೀ’ ಅವರು ‘ನವೋದಯ’ ಪರಿಕಲ್ಪನೆಯನ್ನು ಕನ್ನಡ ಬಾಷೆಗೆ ಸೀಮಿತಗೊಳಿಸಿ ಪ್ರಯೋಗಿಸಿದ್ದರಿಂದ. ಕನ್ನಡ ಭಾಷೆ, ಸಾಹಿತ್ಯಗಳನ್ನೊಳಗೊಂಡು ಇನ್ನುಳಿದ ಅಂದಿನ ಸಮಕಾಲೀನ ಆರ್ಥಿಕ – ಸಾಮಾಜಿಕ ರಾಜಕಾರಣದ ಸಮಸ್ಯೆಗಳಂಥವು ಸಾಹಿತ್ಯಕ – ಸಾಂಸ್ಕೃತಿಕ ಒಳನೋಟಗಳಾಗಿ ‘ಶ್ರೀ’ ಅವರ ಸಾಹಿತ್ಯಾಭಿವ್ಯಕ್ತಿಯಲ್ಲಿ ಇಲ್ಲ ಎಂಬ ಚರ್ಚೆಗಳು ಆಗಿವೆ (ಎಸ್. ಚಂದ್ರಶೇಖರ್, ಜಿ.ಎಚ್. ನಾಯಕ, ಹೆಚ್. ಎಸ್. ರಾಘವೇಂದ್ರ ರಾವ ಮೊದಲಾದವರು.) ಈ ಬಗೆಯ ಚರ್ಚೆ ಇಲ್ಲಿ ಅಪ್ರಸ್ತುತ. ಆದರೆ ‘ಶ್ರೀ’ ಅವರು ನಾಡು – ನುಡಿ ಚಿಂತನೆಗಳ ಅಭಿವ್ಯಕ್ತಿಯಲ್ಲಿ ಬಳಸಿದ ‘ಕನ್ನಡಮ್ಮ’ನ ರೂಪಕ – ಪ್ರತೀಕಗಳನ್ನು ಪರಿಶೀಲಿಸಿ ಚರ್ಚಿಸುವ ಜರೂರು ಇದೆ. ‘ಕನ್ನಡ ತಾಯಿ’ಯನ್ನು ‘ಶ್ರೀ’ ಅವರು ನೋಡಿದ್ದು ಭಿನ್ನ ಬಗೆಯಲ್ಲಿ. ಬಹುಶಃ ಇಡೀ ಕನ್ನಡ ಕಾವ್ಯದಲ್ಲಿಯೇ ಈ ನೋಟ ವಿಶೇಷವಾದದ್ದು. ಅಂತೆಯೇ ಗಂಭೀರವಾದದ್ದು ಹೌದು.

ಬಂಗಾಳಿ, ಮರಾಠಿ ಮೊದಲಾದ ಪ್ರಾಂತೀಯ ಭಾಷೆಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ತುಡಿತ, ದಾಸ್ಯದ ವಿಮೋಚನೆ, ವಸಾಹತುಶಾಹಿ ಆಡಳಿತದ ದಬ್ಬಾಳಿಕೆಯ ಅನಾವರಣಗಳಂಥವು ಅಭಿವ್ಯಕ್ತಿ ಆಗುತ್ತಿದ್ದ ಸಂದರ್ಭ ಅದಾಗಿತ್ತು. ಈ ಮಾತು ಕನ್ನಡದ ಸಂದರ್ಭಕ್ಕೂ ಅನ್ವಯ ಆಗುತ್ತದೆ. ಇಲ್ಲಿಯೂ ರಾಷ್ಟ್ರ, ರಾಷ್ಟ್ರೀಯತೆಯ ಪರಿಕಲ್ಪನೆಗಳು ಕಾವ್ಯದಲ್ಲಿ ಮೂಡಿ ಬಂದಿವೆ. ಇದರ ಜೊತೆಗೆ ನಾಡು ಅಂದು ವಿಭಿನ್ನ ಆಡಳಿತ ಘಟಕಗಳಲ್ಲಿ ಛಿದ್ರಗೊಂಡಿದ್ದುದರಿಂದ ಏಕೀಕರಣದ ಆಶಯಕ್ಕೂ ತಡಿಯಬೇಕಾಗಿತ್ತು. ತಮ್ಮ ತುಂಡಾದ ಕನ್ನಡ ಪ್ರದೇಶದಿಂದಲೇ ಭಾರತದ ಸ್ವಾತಂತ್ರ್ಯ, ನಾಡಿನ ಏಕೀಕರಣಗಳೆರಡಕ್ಕೂ ಅಂದಿನ ಸೃಷ್ಟಿಶೀಲ ಜಗತ್ತು ಸ್ಪಂದಿಸುತ್ತಿತ್ತು. ಆದರೆ ‘ಆಚಾರ್ಯ’ ಬಿ.ಎಂ. ಶ್ರೀ ಯವರು ಇದಕ್ಕೆ ಅಪವಾದ ವಾಗಿದ್ದರು. ಅಲ್ಲದೆ ರಾಷ್ಟ್ರೀಯ ಹೋರಾಟದ ಸನ್ನಿವೇಶದಲ್ಲಿ ‘ಹೆಣ್ಣು ಸಂಕಥನ’ದ ರೌದ್ರರೂಪಿ ಚಹರೆಯನ್ನು ಸಹ ‘ಶ್ರೀ’ ಅವರ ಕಾವ್ಯದಲ್ಲಿ ನೋಡಲು ಸಾಧ್ಯ ಇಲ್ಲ.

ವಿಂಗಡಿತ ಕನ್ನಡ ಪ್ರದೇಶಗಳಲ್ಲಿ ಮೈಸೂರು ಸಂಸ್ಥಾನವೂ ಒಂದು. ಈ ಸಂಸ್ಥಾನ ಅಂದು ಇಬ್ಬಗೆಯ ದಾಸ್ಯದಲ್ಲಿ ಸಿಲುಕಿತ್ತು. ನೇರವಾಗಿ ಊಳಿಗಮಾನ್ಯ ವ್ಯವಸ್ಥೆಯ ಪ್ರತಿ ನಿಧಿಗಳಾಗಿದ್ದ ಒಡೆಯರ ಮನೆತನದ ಆಳ್ವಿಕೆ ಒಂದು ಕಡೆಗಾದರೆ, ಇನ್ನೊಂದು ಕಡೆಗೆ ಇವರನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡಿದ್ದ ಬ್ರೀಟಿಶರ ಹಿಡಿತ ಪರೋಕ್ಷವಾಗಿತ್ತು ಆದರೆ ರಾಷ್ಟ್ರ ಮತ್ತು ಸಂಸ್ಥಾನಗಳೆರಡೂ ದಾಸ್ಯದಲ್ಲಿರುವುದನ್ನು ‘ಶ್ರೀ’ ಅವರು ಎಲ್ಲಿಯೂ ಪ್ರಸ್ತಾಪಿಸಲು ಹೋಗುವುದೇ ಇಲ್ಲ. ಬದಲಾಗಿ ಬ್ರಿಟೀಶರನ್ನು ಹಾಗೂ ಅವರ ಕೃಪೆಯಲ್ಲಿ ಆಳ್ವಿಕೆ ನಡೆಸುವ ಮಹಾರಾಜರುಗಳನ್ನು ವೈಭವೀಕರಿಸುತ್ತಾರೆ. ಇಂಗ್ಲಿಶ್ ಶಿಕ್ಷಣದ ಬಗ್ಗೆ, ಭಾಷೆಯ ಬಗ್ಗೆ ‘ಶ್ರೀ’ ಅವರಿಗೆ ಎಲ್ಲಿಲ್ಲದ ಅಭಿಮಾನ. ಆ ಮೂಲಕವೆ ಅವರು ಕನ್ನಡ ಭಾಷೆ, ಸಾಹಿತ್ಯಗಳನ್ನು ನೋಡಲು ಹೊರಡುವುದು.

‘ಶ್ರೀ’ ಅವರ ಕಾವ್ಯಾಭಿವ್ಯಕ್ತಿಯಲ್ಲಿ ಭಾರತ, ಕರ್ನಾಟಕಗಳ ಬಗೆಗಿನ ಪ್ರೀತಿಗಿಂತ ಮೈಸೂರು ಸಂಸ್ಥಾನದ ಮೇಲಿನ ವ್ಯಾಮೋಹವೇ ಹೆಚ್ಚಾಗಿ ಅಭಿವ್ಯಕ್ತವಾಗಿದೆ. ಆಲೂರರಂಥ ಹಿರಿಯರು ಮೈಸೂರು ವ್ಯಾಮೋಹಗಳನ್ನು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲಸಿದಾಗ ‘ಶ್ರೀ’ಅವರು ಅದಕ್ಕೆ ಸರಿಯಾದ ಉದಾಹರಣೆ ಎನ್ನಬಹುದು. ಅಂದರೆ ‘ಶ್ರೀ’ ಅವರು ರಾಷ್ಟ್ರ, ನಾಡು – ನುಡಿಗಳ ಬಗೆಗೆ ಅಭಿಮಾನ ತಾಳದೆ ವಿರೋಧಿಸಿದ್ದರು ಎಂಬುದು ಇದರ ಅರ್ಥವಲ್ಲ. ಬದಲಾಗಿ ‘ಶ್ರೀ’ ಅವರ ಕಾವ್ಯದಲ್ಲಿನ ‘ಕನ್ನಡಮ್ಮ’ನ ಪ್ರತೀಕ – ರೂಪಕಗಳು ಇನ್ನುಳಿದ ಕವಿಗಳಿಗಿಂತ ಭಿನ್ನ. ಅಂದರೆ ಇವರ ‘ಕನ್ನಡಾಂಬೆ’ಯ ಚಿಂತನೆ ಹಲವು ಪರಿಮಿತಿಗಳಿಗೆ ಒಳಗಾಗಿದೆ. ಇನ್ನುಳಿದ ವಿಭಜಿತ ಕನ್ನಡ ಪ್ರದೇಶಗಳೂ ಒಂದುಗೂಡಲಿ ಎಂದು ಚಿಂತನೆ ನಡೆಸಿದ್ದ ಕಾಲಘಟ್ಟದಲ್ಲಿಯೇ ‘ಶ್ರೀ’ ಅವರು ಕೆವಲ ಮೈಸೂರು ಮಹಾರಾಜರ ಏಳಿಗೆಗಳಿಗೆ ಮತ್ರ ಸೀಮಿತವಾಗಿದ್ದರು. ಅಲ್ಲದೆ ಕನ್ನಡ ಬಾಷೆ. ಸಾಹಿತ್ಯಗಳು ಹಿಂದಿನ ಸಂಸ್ಕೃತದ ಹಿಡಿತವನ್ನು ಬಿಡಿಸಿಕೊಳ್ಳಲು ನಡೆಸಿದ ಸಂಘರ್ಷಗಳನ್ನು ಉಲ್ಲೇಖಿಸುವ ‘ಶ್ರೀ’ ಅವರು ‘ಸಂಸ್ಕೃತ’ದ ಸ್ಥಾನದಲ್ಲಿ ‘ಇಂಗ್ಲಿಶ್’ನ್ನು ತಂದು ಕನ್ನಡವು ಬಂಧಿತವಾಗುವಂತೆ ಮಾಡುತ್ತಾರೆ. ಈ ಮಾತನ್ನು ಅವರ ಸ್ವತಂತ್ರ ಕವಿತೆಗಳೆನಿಸಿಕೊಂಡ ‘ಹೊಂಗನಸುಗಳು’ (೧೯೪೮) ಸಂಕಲನಕ್ಕೂ ಅನ್ವಯಿಸಿ ನೋಡಲು ಸಾಧ್ಯ ಇದೆ. ಇದರಲ್ಲಿ ೧೯೧೪ ರಿಂದ ೧೯೪೫ ರವರೆಗೆ ಬರೆದ ೧೪ ಕವತೆಗಳಿವೆ. ಈ ಸಂಕಲನವಲ್ಲದೆ ಇನ್ನುಳಿದ ಕವಿತೆಗಳು ಹಾಗೂ ಗದ್ಯ ಸಾಹಿತ್ಯದ ಉಲ್ಲೇಖಗಳಲ್ಲಿಯೂ ಅವರ ನಾಡು – ನುಡಿ ಚಿಂತನೆಯ ರೂಪಕ – ಪ್ರತೀಕಗಳು ಅಭಿವ್ಯಕ್ತಗೊಂಡಿವೆ.

‘ಶ್ರೀ’ ಅವರ ಕಾಲದಲ್ಲಿಯೆ ಇನ್ನಿತರ ಭಾಷಿಕರು ಇಂಗ್ಲಿಶನ್ನು, ಇಂಗ್ಲಿಶರನ್ನು ಪ್ರತಿಭಟಿಸುತ್ತಿದ್ದರು. ಅಂತೆಯೆ ಪ್ರಾಂತೀಯ ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆಗಳಿಗಾಗಿ ಸ್ಪಂದಿಸುತ್ತಿದ್ದ ಉದಾಹರಣೆಗಳು ದೊರೆಯುತ್ತವೆ. ಆದರೆ ‘ಶ್ರೀ’ ಅವರು ಕನ್ನಡ ಭಾಷೆಯನ್ನು ‘ತಾಯಿಭಾಷೆ’ಯನ್ನಾಗಿ ಪ್ರತೀಸಿದರೂ ಇಂಗ್ಲಿಶ್ ಭಾಷೆಯನ್ನು ಮಾತ್ರ ಬಿಡುವುದಿಲ್ಲ. ಗಾಂಧಿಯಂಥವರು ತಮ್ಮ ಮಾತೃಬಾಷೆಯಲ್ಲಿಯೇ (ಗುಜರಾತಿ) ಹೆಚ್ಚೆಚ್ಚು ಬರೆಯುತ್ತದ್ದ ಸನ್ನಿವೇಶದಲ್ಲಿ ‘ಶ್ರೀ’ ಅವರು ಅದಕ್ಕೆ ತದ್ವಿರುದ್ಧ ಆಲೋಚಿಸಿದ್ದರು. ಕನ್ನಡದ ಜೊತೆ ಜೊತೆಗೆ ಇಂಗ್ಲಿಶಿನ ಬಗೆಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದ ‘ಶ್ರೀ’ ಅವರಿಗೆ ಯಾವುದೇ ಅಳುಕು ಇರಲಿಲ್ಲವೆಂದಲ್ಲ. ಆದರೆ ಆ ಅಳುಕಿನ ನಡುವೆಯು ಇಂಗ್ಲಿಶ್ ಭಾಷೆ, ಸಾಹಿತ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಉಂಟು. ಅವರು ತಮ್ಮ ‘ಕಾಣಿಕೆ’ ಕವಿತೆಯಲ್ಲಿ ಆ ಅಭಿವ್ಯಕ್ತಿಯನ್ನು ಮೂಡಿಸಿದ್ದಾರೆ. ಕನ್ನಡ ನುಡಿ ಹಾಗೂ ನಾಡು ಅವರಿಗೆ ತಮ್ಮ ಹೆಣ್ಣಾಗಿ, ತಾಯಿಯಾಗಿ ಕಂಡುಬಂದರೂ ‘ಇಂಗ್ಲಿಶ್’ ಹಾಗೂ ‘ಇಂಗ್ಲೆಂಡ್’, ‘ಸಾಕು ತಾಯಿ’ಯಾಗಿ ಕಾಣಿಸಿಕೊಳ್ಳುತ್ತಾಳೆ. ಇಂಗ್ಲಿಶ್ ಅವರಿಗೆ ‘ಪಡುವ ಕಡಲ ಹೊನ್ನ ಹೆಣ್ಣಿನ’ ರೂಪಕದಲ್ಲೂ ವ್ಯಕ್ತ ಆಗಿದ್ದಾಳೆ. ಆದ್ದರಿಂದಲೇ ಅವರು

ಕನ್ನಡ ನುಡಿ, ನಮ್ಮ ಹೆಣ್ಣು,
ನ್ಮಮ ತೋಟದಿನಿಯ ಹಣ್ಣು,…….
ಪಡುವ ಕಡಲ ಹೊನ್ನ ಹೆಣ್ಣು,
ನ್ನ ಜೀವದುಸಿರು ಕಣ್ಣು,
ನಲಿಸಿ, ಕಲಿಸಿ, ಮನವನೊಲಿಸಿ
ಕುಣಿಸುತಿರುವಳು……
ಹೀಗೆ ನನಗೆ ಹಬ್ಬವಾಗಿ
ಇನಿಯರಿಬ್ಬರನ್ನು ತೂಗಿ
ಇವಳ ಸೊಬಗನವಳು ತೊಟ್ಟು,
ನೋಡ ಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡಬಯಸಿದೆ.”

– ಎಂದಿದ್ದಾರೆ. ಇಲ್ಲಿ ‘ಶ್ರೀ’ ಅವರಿಗೆ ಕನ್ನಡ ಇಂಗ್ಲಿಶ್‌ಗಳೆರಡೂ ‘ಇನಿಯೆ’ ರಾಗಿಯೇ ಕಾಣಿಸಿಕೊಂಡಿರುವುದು ಅಭಿವ್ಯಕ್ತಗೊಂಡಿದೆ. ಹೆಣ್ಣು ಸಂಕಥನದಲ್ಲಿನ ಗೆಳತಿಯರ ಚಹರೆಗಳನ್ನು ಅಲ್ಲಿ ನೋಡಬಹುದು. ಇನಿಯಳ ‘ಅಕ್ಕ’ ಎಂಬ ಸಂಬಂಧದ ರೂಪಕವೂ ಬಳಕೆ ಆಗಿದೆ.

ಶಾಂತಕವಿ, ಕುವೆಂಪು ಬೇಂದ್ರೆ ಮೊದಲಾದ ಕವಿಗಳು ತಮ್ಮ ಸ್ಥಳೀಯ ವಿಶೇಷತೆಗಳ ಮುಖೇನ ‘ಅಖಂಡ ಕರ್ನಾಟಕ’ದ ಚಿತ್ರವನ್ನು ಕಟ್ಟಿಕೊಡಲು ಹಾತೊರೆದವರು. ಆದರೆ ಬಿ.ಎಂ. ಶ್ರೀ ಅವರು ತಮ್ಮ ಸ್ಥಳೀಯ ಮೈಸೂರಿನಲ್ಲಿಯೆ ಉಳಿದ ಪ್ರಾಂತ್ಯಗಳ ವಿಶೇಷತೆಗಳನ್ನು ನೋಡಲು ಬಯಸಿದರು. ‘ಶ್ರೀ’ ಅವರ ಪ್ರಾಂತೀಯ ವ್ಯಾಮೋಹಕ್ಕೆ ‘ಮೈಸೂರು ಮಕ್ಕಳು’ ಮೊದಲಾದ ಕವಿತೆಗಳೇ ಒಳ್ಳೆಯ ಉದಾಹರಣೆ. ಮೈಸೂರು ಪ್ರಾಂತ್ಯದ ಎಲ್ಲಾ ಬಗೆಯ ವಿಶೇಷತೆಗಳನ್ನು ವೈಭವೀಕರಿಸುವ ‘ಶ್ರೀ’ ಆ ಮೂಲಕ ತಮ್ಮ ಪ್ರಾಂತ್ಯವನ್ನು ಪ್ರಗತಿಯ ಮಾದರಿಯನ್ನಾಗಿಯೇ ನೋಡುತ್ತಾರೆ. ಆದ್ದರಿಂದಲೇ ಅವರು ಮೈಸೂರನ್ನು ಕುರಿತು

ಬೆಳೆಯುವ ನಾಡದು,
ಮೈಸೂರು.
ಇಳೆಯ ಮಾದರಿಯದು,
ಮೈಸೂರು.
ಕನ್ನಡಿಗನುಸಿರದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು.

– ಎಂದು ಬರೆದಿರುವುದು. ‘ರಾಜಸೇವಾಸಕ್ತ’ ಬಿ.ಎಂ. ಶ್ರೀ ಅವರ ರಾಜಭಕ್ತಿ ಪ್ರಾಂತೀಯ ವ್ಯಾಮೋಹಕ್ಕಿಂತ ಮಿಗಿಲಾದುದು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರನ್ನು ‘ರಾಜರ್ಷಿ’ಗಳನ್ನಾಗಿ ಸುತ್ತಿಸುವ ‘ಶ್ರೀ’ ಅವರು ಅವರ ಮರಣವನ್ನು ಸಹಿಸಲು ಸಾಧ್ಯವಿಲ್ಲದಷ್ಟು ನೊಂದುಕೊಳ್ಳುತ್ತಾರೆ. ಹಿಂದಿನ ಎಲ್ಲಾ ಬಗೆಯ ಪ್ರಗತಿ – ಪ್ರೋತ್ಸಾಹಗಳನ್ನು ನಿರೀಕ್ಷಿಸಿ ಅದು ಜಯಚಾಮರಾಜ ಒಡೆಯರ ಕಾಲಕ್ಕೂ ಮುಂದುವರೆಯಾಲಿ ಎಂದು ಬಯಸುವುದುಂಟು. ಇದಕ್ಕಾಗಿ ‘ಶ್ರೀ’ ಅವರು ತಮ್ಮ ಪ್ರಾತ್ಯದ ಅಧಿದೇವಿಯಾದ ‘ಚಾಮುಂಡೇಶ್ವರಿ’ಯಲ್ಲಿ ಮೈಸೂರಿನ ಯಶಸ್ವಿಗಳಿಗಾಗಿ ‘ಶ್ರೀಕೃಷ್ಣರಾಜ ರಜತಮಹೋತ್ಸವ ಪ್ರಗಾಥ’ದಲ್ಲಿ ಪ್ರಾರ್ಥಿಸಿದ್ದರೆ. ‘ನಾಡ’ನ್ನು ಆ ‘ತಾಯಿ’ ‘ಕಾಯ’ ಬೇಕೆಂದು ಕೇಳಿಕೊಳ್ಳುವ ‘ಶ್ರೀ’ ಅವರಿಗೆ ಇನ್ನುಳಿದ ಕನ್ನಡದ ಭೂಪ್ರದೇಶಗಳು ಹಾಗೂ ಜನ ನೆನಪಿಗೆ ಬರುವುದಿಲ್ಲ ಬದಲಾಗಿ ತಮ್ಮ ಮನೆಯನ್ನೇ (ಮೈಸೂರು ಪ್ರಾಂತ್ಯವನ್ನು) ಹಿರಿದು ಮಾಡಬೇಕು ಎಂದು ಕೇಳಿಕೊಳ್ಳುವುದನ್ನು ಗಮನಿಸಬಹುದು. ‘ಶ್ರೀ’ ಅವರಿಗೆ ರಾಜಭಕ್ತಿ ಎಷ್ಟಿತ್ತು ಎಂಬುದು ಅವರು ಬಳಸಿರುವ ರೂಪಕಗಳಲ್ಲೂ ಅದು ವ್ಯಕ್ತಗೊಂಡಿದೆ. ಉದಾರಹಣೆಗೆ ಮೈಸೂರೇತರ ಕನ್ನಡಿಗರಿಗೆ ಅದರಲ್ಲೂ ಸೃಷ್ಟಿಶೀಲರಿಗೆ ‘ಕರ್ನಾಟಕದ ರತ್ನಸಿಂಹಾಸನ’ ಎಂಬುದು ‘ಹಂಪಿ ವಿಜಯನಗರ’ದ ಗದ್ದುಗೆಯಾಗಿದೆ. ಆದರೆ ಕನ್ನಡಿಗರ ಈ ಪ್ರತೀಕ ‘ಶ್ರೀ’ ಅವರಿಗೆ ಮಾತ್ರ ‘ಮೈಸೂರಿನ ಮಹಾರಾಜರ ಸಿಂಹಾಸನ’ವೇ ಆಗಿದೆ.

ಮೈಸೂರಿನ ಮಹಾರಾಜರು ಇಂಗ್ಲೆಂಡಿನ ಬ್ರಿಟಿಶರ ಬಗ್ಗೆ ತಳೆದಂಥ ಉದಾರವಾದಿ ಧೋರಣೆ ‘ಶ್ರೀ’ ಅವರಿಗೆ ಸಂತಸದ, ಅಂತೆಯೇ ಅಭಿಮಾನದ ಸಂಗತಿ, ಅದ್ದರಿಂದಲೇ ‘ಶ್ರೀ’ ಅವರು ಬ್ರಿಟಿನ್ನಿನ ರಾಣಿ ‘ವಿಕ್ಟೋರಿಯಾ’, ‘ಕಡಲರಾಣಿ ಬ್ರಿಟಾನಿಯ’, ‘ಕಾಳಗಧಣಿ ಇಂಗ್ಲೆಂಡ್’ ಮೊದಲಾದ ರೂಪಕಗಳಲ್ಲೂ ಬ್ರಿಟಿಶ್ ಸಾಮ್ರಾಯಶಾಹಿತ್ವವನ್ನು ಹುರಿದುಂಬಿಸಿರುವುದು. ನಿಷ್ಟಾವಂತ ಮೈಸೂರಿನ ಒಡೆಯರು ಸಹ ಇಂಗ್ಲಶರ ವಿಚಾರಧಾರೆಗಳಿಗೆ ಮಿಡಿಯುತ್ತಿದ್ದರಿಂದ ‘ಶ್ರೀ’ ಅವರಿಗೆ ಅವು ‘ಹೆಗ್ಗೌರವ’ದ ಸಂಗತಿಗಳಾಗಿದ್ದವು.

‘ಕನ್ನಡಮ್ಮ’ ನಮ್ಮ ಸಂಕೇತಿಸುವ ಪ್ರತೀಕ – ರೂಪಕಗಳ ಹಿನ್ನೆಲೆಯಲ್ಲಿ ‘ಶ್ರಿ’ ಅವರು ಎರಡು ಮಹತ್ವದ ಕವಿತೆಗಳನ್ನು ರಚಿಸಿರುವುದುಂಟು. ಅವೇ ‘ಕನ್ನಡ ತಾಯ ನೋಟ’ (೧೯೩೬) ಹಾಗೂ ‘ಕನ್ನಡದ ಬಾವುಟ’ (೧೯೩೮) ಎಂಬ ಶೀರ್ಷಿಕೆಯ ರಚನೆಗಳು ಇನ್ನುಳಿದ ಭಾಷೆಗಳಲ್ಲಿನ ‘ಹೆಣ್ಣು ಸಂಕಥನ’ದ ಚಹರೆಗಳನ್ನು ಈ ಎರಡೂ ಕವಿತೆಗಳಲ್ಲಿ ಪರಿಶೀಲಿಸಲು ಸಾಧ್ಯ ಇದೆ. ಆದರೆ ಇಲ್ಲಿ ‘ರೌದ್ರರೂಪಿ’ಯ ಚಹರೆಯ ಚಿತ್ರಣ ಗೌಣವಾಗಿದೆ. ಬದಲಾಗಿ ಮಮತೆ, ಕರುಣೆ, ಹೆಮ್ಮಯ ಪ್ರತೀಕಗಳ್ನನಷ್ಟೆ ನೋಡಲು ಸಾರ್ಧಯ. ಅಂದು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ರಚಿತವಾದ ಕ್ರಾಂತಿಕಾರಕ, ಹಿಂಸೆಯ ಚಿತ್ರಣಗಳನ್ನು ‘ಶ್ರೀ’ ಅವರು ಎಲ್ಲಿಯೂ ಪ್ರಯೋಗಿಸದಂತೆ ಎಚ್ಚರವಹಿಸಿದ್ದಾರೆ. ಬಹುಶಃ ಇದಕ್ಕೆ ಪ್ರಧಾನ ಕಾರಣ ಅವರಲ್ಲಿದ್ದ ವಸಾಹತು ಪ್ರಭುಗಳ ಬಗೆಗಿನ ಅಭಿಮಾನ.

ಬಿ.ಎಂ. ಶ್ರೀಕಂಠಯ್ಯ ಅವರು ಇನ್ನುಳಿದ ಕನ್ನಡದ ಕವಿಗಳಂತೆಯೇ ‘ಕನ್ನಡದ ಬಾವುಟ’ದಲ್ಲಿ ಚಿಂತನೆ ನಡೆಸಿ ಅಭಿವ್ಯಕ್ತಿಸಿರುವುದು ಕಂಡುಬರುತ್ತದೆ. ಅಂದರೆ ಇತರರಂತೆ (ಉದಾ:- ಶಾಂತಕವಿ ಮೊದಲದವರು) ಈ ಕವಿತೆಯಲ್ಲೂ ನಾಡು – ನುಡಿಗಳನ್ನು ಕುರಿತು ಹೆಮ್ಮೆ ಪಟ್ಟುಕೊಳ್ಳಬಹುದಾದ ವಿಚಾರಗಳನ್ನು ಮಂಡಿಸಿದ್ದಾರೆ. ಈ ನಾಡನ್ನು ಆಳಿದ ರಾಜಮನೆತನಗಳ ವೈಭವವನ್ನು ಕನ್ನಡಿಗರ ಹೆಮ್ಮಯ ಪ್ರತೀಕಗಳನ್ನಾಗಿ ಅನಾವರಣ ಗೊಳಿಸಿರುವುದುಂಟು. ಅಲ್ಲದೆ ಈ ಮಣ್ಣಿನಲ್ಲಿ ಆಗಿಹೋದ ಎಲ್ಲ ಸಾಧು – ಸಂತ, ವಚನಕಾರರನ್ನು ನೆನಪು ಮಾಡಿಕೊಳ್ಳದೆ ಬಿಟ್ಟಿಲ್ಲ. ‘ಕನ್ನಡದ ಬಾವುಟ’ದಲ್ಲಿ ಬಾವುಟವೇ ನ್ನಡಿಗರ ಪ್ರತೀಕವೋ ಎಂಬಂತೆ ಬಿಂಬಿತವಾಗಿದೆ. ಇದರಲ್ಲಿನ ವಿಶೇಷತೆಯೆಂದರೆ ‘ಭುವನೇಶ್ವರಿ’ಯ ಚಿತ್ರದ ಅರಿವಿದ್ದ ಕನ್ನಡಿಗರಿಗೆ ‘ರಾಜೇಶ್ವರಿ’ಯ ಮೂರ್ತಿಯನ್ನು ಪರಿಚಯಿಸಿದ್ದು. ‘ಶ್ರೀ’ ಅವರು ‘ರಾಜ್ಯದ ಈಶ್ವರಿ’ಯನ್ನು ಹಿಂದೆ ಬಳಸುತ್ತಿದ್ದ ‘ರಾಜ್ಯಲಕ್ಷ್ಮಿ’ಗೆ ಸಮೀಕರಿಸಿರುವುದು ಕಂಡುಬರುತ್ತದೆ. ಈ ರಾಜೇಶ್ವರಿ ಕನ್ನಡಿಗರೆಲ್ಲರ ಒಡತಿಯಾಗಿ ಸಂಕೇತಿಸಲ್ಪಟ್ಟಿದ್ದಾಳೆ. ‘ಕನ್ನಡಮ್ಮ’ನ ಶ್ರೇಯಸ್ಸು, ಕೀರ್ತಿ, ಪ್ರಗತಿಗಳಿಗಾಗಿ ಹಾತೊರೆವ ಈ ಕವಿತೆಯ ಆಂತರ್ಯ ಕನ್ನಡದ ತಾಯಿ ಉಳಿದರೆ ಮಾತ್ರ ತಾನು (ಕನ್ನಡಿಗ) ಉಳಿಯಲು ಸಾಧ್ಯ ಎನ್ನುತ್ತದೆ. ಆಕೆ ಅಳಿದರೆ ಕನ್ನಡಿಗರು ಅಳಿದಂತೆಯೆ ಎಂದು ಪ್ರತಿಬಿಂಬಿಸಲಾಗಿದೆ. ಆ ಹಿನ್ನೆಲೆಯಲ್ಲಿಯೆ ‘ಶ್ರೀ) ಅವರು ನಾಡಿನ ಹಿರಿಯ – ಕಿರಿಯರನ್ನೆಲ್ಲ ಹುರಿದುಂಬಿಸಿರುವುದು. ಅಂತೆಯೆ ‘ಕನ್ನಡ ಬಾವುಟ’ವನ್ನು

ಬಾಳುಎಲೆ ಬಾವುಟ!
ಬಾಳ್ ಕನ್ನಡ ತಾಯ್,
ಏಳ್ ಕನ್ನಡ ತಾಯ್,
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರೀ!

– ಎನ್ನುವುದರ ಮೂಲಕ ಅದರ ನಿರಂತರತೆಯನ್ನು ‘ಶ್ರೀ’ ಅವರು ಸಂಕೇತಿಸಿದ್ದರೆ. ಆದರೆ ‘ಅಖಂಡ ಕರ್ನಾಟಕ’ವನ್ನೇ ಪ್ರತಿನಿಧಿಸುವ ‘ಕನ್ನಡದ ಬಾವುಟ’ವು ತನ್ನ ಕೊನೆಯ ಸಾಲುಗಳಲ್ಲಿ ಮೈಸೂರಿನ ಒಡೆಯರಾದ ಜಯಚಾಮರಾಜರನ್ನು ಸ್ತುತಿಸುವದರ ಮುಖೇನ ಮತ್ತೆ ಮಿತಿಗಳಿಗೆ ಒಳಗಾಗುವುದನ್ನು ಪರಿಶೀಲಿಸಬಹುದು.

‘ಶ್ರೀ’ ಅವರ ‘ಕನ್ನಡ ತಾಯ ನೋಟ’ವು ಸಹ ವಿಭಿನ್ನವಾದ ರೂಪಕ – ಪ್ರತೀಕಗಳನ್ನು ಮೇಳೈವಿಸಿಕೊಂಡಿರುವ ಕವಿತೆ. ‘ಶ್ರೀ’ ಅವರು ‘ಕನ್ನಡತಾಯಿ’ಯು ತನ್ನಲ್ಲಿ ಅರುಹಿಸಿದ ‘ಒಸಗೆ’ಯ ನುಡಿಯನು ಕೇಳುಗರಿಗೆ ಹೇಳಲು ಈ ಕವಿತೆಯ ಮೂಲಕ ಪ್ರಯತ್ನಿಸಿದ್ದಾರೆ. ಈ ಕವಿತೆ ಕೆಲವೆಡೆ ಶಾಂತಕವಿಗಳ ಪ್ರಯೋಗಿಸಿದ ಕೀರ್ತನೆಯ ಧಾಟಿಯನ್ನೆ ನೆನಪು ಮಾಡುತ್ತದೆ. ಅಲ್ಲದೆ ಮತ್ತೆ ಕೆಲವೆಡೆ ಬೇಂದ್ರೆ ಅವರ ಮುತ್ತೈದೆತನದ ‘ಕನ್ನಡ ತಾಯಿ’ (ಧಾರವಾಡದ ತಾಯಿ)ಯನ್ನು ಪ್ರತಿಬಿಂಬಿಸುವುದನ್ನು ಗಮನಿಸಬಹುದು.

‘ಕನ್ನಡ ತಾಯ ನೋಟ’ದಲ್ಲಿ ‘ಶ್ರೀ’ ಅವರು ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹೇಗೆ ಪಸರಿಸಿದೆ ಎಂಬುದನ್ನು ಹೇಳವುದರ ಮುಖೇನ ಪ್ರವೇಶಿಸುತ್ತಾರೆ. ಅಲ್ಲಿಂದ ಮುಂದಕ್ಕೆ ನಾಡಿನ ರಾಜ – ಮಹಾರಾಜರ, ಪ್ರಾಕೃತೀಕ ಸೌಂದರ್ಯದ, ನದಿ – ಕಾಲುವೆಗಳ, ಧರ್ಮ – ಆಚರಣೆಗಳ, ಪುಣ್ಯಕ್ಷೇತ್ರಗಳ, ದೇವ – ದೇತೆಯರ ಮೊದಲಾದ ಹೆಮ್ಮೆಯ ಸಂಗತಿಗಳನ್ನು ರೂಪಕಗಳಲ್ಲಿ ದರ್ಶನ ಮಾಡಿಸುತ್ತಾರೆ. ಕನ್ನಡ ನಾಡನ್ನು ತುಂಗಭದ್ರೆಯ ತಟದಲ್ಲಿ ಹಂಪೆಗೆ ಬಂದು ನೋಡುವಾಗ ಅಲ್ಲಿ ಒಬ್ಬ ಹಿರಿಯ ಮುತ್ತೈದೆಯನ್ನು ಗಮನಿಸುವ ಚಿತ್ರನವಿದೆ. ಆಕೆಯನ್ನು ಕಂಡು

“ಯಾರವ್ವ ನೀ ತಾಯಿ? ಏತಕಿಂತೊಬ್ಬಳೇ ಕುಳಿತೆ ಕಾಡಿನಲ್ಲಿ?
ಏಕೆ ಮೊಗ ಬಾಡಿಹುದು, ಕಂದಿಹುದು, ನೊಂದಿಹುದು, ಕಾಂತಿಗುಂದಿಹುದು?”

– ಎಂದು ಪ್ರಶ್ನಿಸುವುದುಂಟು. ಈ ಪ್ರಶ್ನೆಗಳಗಿಎ ಆಕೆ

“ಕೇಳಣ್ಣ, ನಾನೊಬ್ಬ ಹಳೆಯ ಮುತ್ತೈದೆ – ಹಿರಿದಾಗಿ ಬಾಳಿದವಳೊಮ್ಮೆ;
ಈಗ ಬಡತನ, ಬಡವೆ, ಬಡವಾದೆ: ಬಡವಾದ ಮಕ್ಕಳನು ನೋಡಿ,
ಬತ್ತಿ, ಮತ್ತಿಮ್ಮಡಿಯ ಸೊರಗಿನಲಿ ಬಡವಾದೆ – ಸಾವಿಲ್ಲ ನನಗೆ!……”

– ಎಂದೆಲ್ಲಾ ಉತ್ತರಿಸುತ್ತಾ ಹೋಗುತ್ತಾಳೆ. ಈಕೆ ಬೇರೆ ಯಾರೊ ಆಗಿರದೆ ‘ಕನ್ನಡಮ್ಮ’ ಅಥವಾ ‘ಕನ್ನಡ ತಾಯಿ’ಯೇ ಆಗಿರುವುದು ಸ್ಪಷ್ಟ ಆಗುತ್ತದೆ. ತನ್ನ ಹಾಗೂ ತನ್ನ ಮಕ್ಕಳ ದೀನ ಸ್ಥಿತಿ – ಗತಿಗಳನ್ನು ಹೇಳುವ ಆ ಮುತ್ತೈದೆ ಹಿಂದಿನ ವೈಭವಯುತ ಕಾಲವನ್ನು ನೆನೆಪಿಸಿ ಮರುಗುತ್ತಾಳೆ. ಅಲ್ಲದೆ ತನ್ನ ನೆರೆಹೊರೆಯ ಸೋದರಿಯರ ಮಕ್ಕಳು ಸಂಪದ್ಭರಿತವಾಗಿ ಬಾಳ್ವೆ ನಡೆಸುತ್ತಿರುವುದನ್ನು ಕಂಡು ತನ್ನ ಮಕ್ಕಳು ಎಂದಿಗೆ ಈ ರೀತಿ ಒಟ್ಟಾಗಿ ಬಾಳುವುದನ್ನು ನೋಡಲು ಸಾಧ್ಯ ಎಂದು ಹಲಬುವುದನ್ನು ಚಿತ್ರಿಸಲಾಗಿದೆ. ಒಗ್ಗಟ್ಟಿನ ಬಾಳನ್ನು ನೋಡಲು ಬಯಸುವ ಆಕೆ ಕನ್ನಡಿಗರು ಏಕೀಕರಣದ ಮೂಲಕ ಒಂದುಗೂಡಬೇಕಾದ ತುಡಿತವನ್ನು ಅಭಿವ್ಯಕ್ತಿಸಿರುವುದು ಇಲ್ಲಿನ ಪ್ರಧಾನ ಆಶಯ. ತಮ್ಮ ಕರ್ತವ್ಯಗಳನ್ನು ತಾವು ನಿಭಾಯಿಸುವುದಾಗಿ ಭರವಸೆಯಿತ್ತ ಮೇಲೆ ಆ ಮುದುಕಿ ಎಳೆಯ ವಯಸ್ಸನ್ನು ಪಡೆಯುತ್ತಾಳೆ. ಆಕೆಯ ಮುಖದ ಮಾಸುಗಳೆಲ್ಲ ಹೋಗಿ, ಮೈತುಂಬಿಕೊಂಡು, ಕಡಲಿನ ತೆರೆಗಳನ್ನು ಉಟ್ಟು, ಬಟ್ಟ ಬಯಲನ್ನು ತೊಟ್ಟು, ಅರಿಲವನ್ನು ಮುಡಿಗೆ ಇಟ್ಟುಕೊಂಡು ಬಂದ ರಥವನ್ನು ಹತ್ತುತ್ತಾಳೆ. ಆಕೆಯ ಈ ಸ್ವರೂಪವನ್ನು ನೋಡಿದ ಮಕ್ಕಳು (ಕನ್ನಡಿಗರು) ಅವಳ ನಗುವಿನಲ್ಲಿ ತಮ್ಮ ನಗುವನ್ನು ಬೆರೆಸಿ ಆರಾಧಿಸುವುದನ್ನು ‘ಶ್ರೀ’ ಮೂಡಿಸಿದ್ದಾರೆ. ಹೀಗೆ ಮೂಡಿಸುವಲ್ಲಿ ಅವರು ಬಳಕೆ ಮಾಡಿರುವ ಪರಿಕರಗಳ ಪ್ರೇರಣೆ ನೀಡುವಂಥವು.

‘ಕನ್ನಡ ತಾಯ ನೋಟ’ದಲ್ಲಿ ‘ತಾಯಿ’ಯು ಅಮ್ಮ, ಪೆರ್‌ತಾಯೆ (ಹಿರಿಯ ತಾಯೆ), ದೇವಿ, ಸಾಮ್ರಾಜ್ಞಿ, ಮುತ್ತೈದೆ, ಭಾರತಾಂಬೆಯ ಹಿರಯ ಮಗಳು, ‘ಭುವನೇಶ್ವರಿ ದೇವಿ’ಯಾಗಿ ಹಲವು ರೂಪಕಗಳ ಮೂಲಕ ಪ್ರತಿಬಿಂಬಿತವಾಗಿದ್ದಾಳೆ. ‘ಶ್ರಿ’ ಅವರಿಗೆ ನಾಡು – ನುಡಿಗಳು (ಕನ್ನಡಮ್ಮ) ಇನಿಯಳಾಗಿ, ಕನ್ನಡದ ಅರಸಿಯಾಗಿ, ರತ್ನಸಿಂಹಾಸನವಾಗಿ, ಬಾವುಟವಾಗಿ, ಕನ್ನಡ ಹೆಣ್ಣಾಗಿ, ಕನ್ನಡದ ಕುಲವಾಗಿ, ಹಿರಿಯರ ಹೂದೋಟಗಳಾಗಿ ಕಾಣಿಸಿರುವುದನ್ನು ಗಮನಿಸಬಹುದು.

೩.೩ ಬೇಂದ್ರೆ ಹಾಗೂ ‘ಚಂಡಿ – ಚಾಮುಂಡಿ’

೧೯೨೯೦ರ ವೇಳೆಗೆ ಇಂಡಿಯಾದ ರಾಷ್ಟ್ರೀಯ ಹೋರಾಟದ ಪ್ರಕ್ರಿಯೆ ತನ್ನದೇ ಆದ ಅವಸ್ಥಾಂತರಗಳಿಗೆ ಗುರಿಯಾಗಿತ್ತು. ಈ ಘಟ್ಟದಲ್ಲಿ ಗಾಂಧಿ ಪ್ರಣೀತ ಶಾಂತಿ, ಸಹನೆ, ಸತ್ಯ, ಅಹಿಂಸೆ, ಉಪವಾಸ, ಸರಳತೆಗಳಂಥ ಚಿಂತನೆಗಳು ವಸಾಹತುಶಾಹಿ ಆಳ್ವಿಕೆಗೆ ಸವಾಲಾಗಿ ಪರಿಣಿಸದ್ದವು. ಇದರ ಜೊತೆಗೆ ತಿಲಕ್ ಪ್ರಣೀತ ಚಿಂತಾನಾ ಧಾರೆಯೊಂದು ಹಿಂಸೆ, ಕ್ರಾಂತಿ, ದ್ವೇಷ, ಬಲಿದಾನಗಳಂಥ ಆದರ್ಶಗಳನ್ನು ಹೋರಾಟಗಾರರಲ್ಲಿ ಪ್ರೇರೇಪಿಸುತ್ತಿತ್ತು. ಇವೆರಡರ ಅಂತಿಮಗುರಿ ಇಂಡಿಯಾದ ದಾಸ್ಯದ ವಿಮೋಚನೆಯೇ ಆಗದಿದರೂ, ಮಾರ್ಗಗಳು ಮಾತ್ರ ಭಿನ್ನ. ಅಸಹಕಾರ, ಕಾಯಿದೆಭಂಗ, ಉಪವಾಸ, ಸ್ವದೇಶಿ ಮೊದಲಾದ ಚಿಂತನೆ – ಪರಿಕರಗಳು ಒಂದು ಕಡೆಗಾದರೆ, ಇನ್ನೊಂದು ಕಡೆಗೆ ಇದಕ್ಕೆ ವಿರುದ್ಧವಾದ ಚೀಂತನೆ – ಪರಿಕರಗಳು ಪ್ರಧಾನ ಅಸ್ತ್ರಗಳಾಗಿ ಪರಿಣಮಿಸಿದ್ದವು. ಅಂದರೆ ಸ್ವಧರ್ಮ, ಸ್ವಸಂಸ್ಕೃತಿ, ಸ್ವಾಭಿಮಾನ, ಸ್ವಭಾಷೆ, ಸ್ವರಾಜ್ಯ ಮೊದಲಾದ ಪರಿಕರಗಳ ಮೂಲಕ ರಾಷ್ಟ್ರೀಯತೆಯ ಅಸ್ಮಿತೆ (identities)ಗಳನ್ನು ಬಡಿದೆಬ್ಬಿಸುವ ಪ್ರಯತ್ನಗಳು ನಡೆಯತೊಡಗಿದವು. ಇವೆರಡನ್ನೂ ಆಂಗ್ಲ ಸರದಾರರು ತಮ್ಮ ‘ಒಡೆಯ ಆಳುವ ನೀತಿ’ಯಿಂದಲೇ ಬಗ್ಗುಬಡಿಯಲು ಹುನ್ನಾರಗಳನ್ನು ನಡೆಸಿದ್ದರು. ಬಹುಮುಖಿ ಸಂಸ್ಕೃತಿಗಳನ್ನು ಹೊಂದಿದ್ದ ಇಂಡಿಯಾದ ಸಮಾಜವು ಐಕ್ಯಗೊಳ್ಳದಿರಲು ಹೇಳಿ ಮಾಡಿಸಿದಂತೆಯೆ ಇದೆ ಎಂಬ ಧೋರಣೆ ಬ್ರಿಟಿಶ್ ವಸಾಹತುಶಾಹಿಯದಾಗಿತ್ತು. ಆದರೆ ಈ ಹುನ್ನಾರಗಳನ್ನು ಮನವರಿಕೆ ಮಾಡಿಕೊಬೇಕಾದ ಜವಾಬ್ದಾರಿ ಭಾರತೀಯ ಸೃಷ್ಟಿಶೀಲರದು. ಈ ದಿಸೆಯಲ್ಲಿ ನಡೆದ ಪ್ರಯತ್ನಗಳು ಅಂದಿನ ನವೋದಯ ಪರಿಕಲ್ಪನೆಗಳನ್ನು ಬಳಸಿಕೊಂಡವು. ಕನ್ನಡದ ಸಂದರ್ಭದಲ್ಲೂ ರಾಷ್ಟ್ರೀಯ ಹಾಗೂ ಪ್ರಾಂತಿಯ ಆಶಯಗಳನ್ನು ಗಮನದಲ್ಲಿ ಇಟ್ಟು ಕೊಂಡು ಸಾಹಿತ್ಯ ಸೃಷ್ಟಿ ಆಯಿತು. ತಮ್ಮ ಸೃಜನಶೀಲ ಪರಿಧಿಗೆ ಆ ಹೊತ್ತಿನ ಸಮಾಜ – ರಾಜಕಾರಣವನ್ನು ಬಳಸಿಕೊಂಡು ಸಾಸ್ಕೃತಿಕವಾಗಿ ಪ್ರತಿಕ್ರಿಯಿಸದ ಸಾಹಿತಿ – ಕಲಾವಿದರು ಹೊಸ ಅಭಿವ್ಯಕ್ತಿಗಳನ್ನು ನೀಡಿದರು. ಇದು ಕನ್ನಡದಲ್ಲೂ ನಡೆದ ಬೇಂದ್ರೆ, ಕುವೆಂಪು, ಮಾಸ್ತಿ, ವೀ.ಸಿ., ಪಂಜೆ ಮಂಗೇಶ ರಾವ್, ಗೋವಿಂದ ಪೈ ಮೊದಲಾದವರಲ್ಲಿ ಪ್ರತಿಬಿಂಬಿತವಾಗಿದೆ.

ಅಧ್ಯಯನದ ಅನುಕೂಲಕ್ಕಾಗಿ ಬೇಂದ್ರೆ ಹಾಗೂ ಕುವೆಂಪು ಅವರುಗಳು ಸೃಷ್ಟಿಸಿದ ರೂಪಕ – ಪ್ರತೀಕಗಳ ಮುಖೇನ ಅಂದಿನ ರಾಷ್ಟ್ರೀಯ, ಪ್ರಾಂತೀಯ ಅಸ್ಮಿತೆಗಳನ್ನು ಪರಿಶೀಲಿಸುವುದು ಇಲ್ಲಿನ ಆಶಯ. ಈ ಹಿನ್ನೆಲೆಯಲ್ಲಿ ಬೇಂದ್ರೆ ಹಾಗೂ ಕುವೆಂಪು ಅವರು ಅಂದು ತುಂಡಾಗಿದ್ದ ಭಿನ್ನ ಕನ್ನಡದ ಭೂ ಪ್ರದೇಶಗಳಿಗೆ ಸೇರಿದವರು. ಆದರೆ ಅವರಿಬ್ಬರು ತಮ್ಮ ಸೃಷ್ಟಿಶೀಲತೆ ಯಲ್ಲಿ ಅಭಿವ್ಯಕ್ತಿಸಿದ ಚಿಂತನೆತಳು ಬಹಳಷ್ಟು ಹೋಲಿಕೆ ಇರುವಂಥವು. ಇವರಿಬ್ಬರೂ ತಾವು ಹುಟ್ಟಿದ ಸ್ಥಳದಿಂದಲೇ ನಾಡು, ರಾಷ್ಟ್ರಗಾಳನ್ನು ಪರಿಭಾವಿಸಿ ‘ಕನ್ನಡಮ್ಮ’ನ ರೂಪಕ – ಪ್ರತಿಮೆಗಳನ್ನು ಸಂಕೇತಿಸಿದವರು. ‘ಕನ್ನಡಮ್ಮ’ನ ರೂಪಕ – ಪ್ರತೀಕಗಳನ್ನು ತಮ್ಮ ನೆಲದಿಂದಲೆ ಸಂರಚಿಸಿದ ಇವರಿಬ್ಬರು ಅಂದಿನ ವಸಾಹತುಶಾಹಿ ಪ್ರಭುತ್ವಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ – ಪ್ರತಿರೋಧಗಳನ್ನು ಒಡ್ಡಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಜರೂರು ಇದೆ.

ಮುಂಬಯಿ – ಕರ್ನಾಟಕದಲ್ಲಿ ಎಲ್ಲ ಬಗೆಯ ಮರಾಠಿ ಭಾಷೆ – ಸಂಸ್ಕೃತಿಗಳ ಭರಾಟೆಯನ್ನು ಅನುಭವಿಸಿದ ತಾಣ ಧಾರವಾಡ. ಈ ನೆಲದಲ್ಲಿ ಹುಟ್ಟಿದ ಬೇಂದ್ರೆ ಆಂಗ್ಲರ ಎಲ್ಲ ಬಹೆಯ ಹುನ್ನಾರಗಳನ್ನು ಆಪ್ತವಾಗಿ ಅನುಭವಿಸಿ ಚಿಂತಿಸಿದ್ದರು. ಶಾಂತಕವಿ, ಆಲೂರ ವೆಂಕಟರಾವ್, ಶಂಬಾ ಮೊದಲಾದ ಕಟ್ಟಾ ಕನ್ನಡಿಗರ ಆಲೋಚನೆಗಳನ್ನು ಮೈಗೂಡಿಸಿಕೊಂಡಿದ್ದ ಬೇಂದ್ರೆ ಅವರಿಗೆ ‘ಗೆಳೆಯರ ಗುಂಪಿ’ನ ಹಿನ್ನೆಲೆಯೂ ಇತ್ತು. ಹೀಗಾಗಿ ಅವರ ಸಾಹಿತ್ಯ ಸೃಷ್ಟಿ ಅಂದಿನ ತುಂಡಾದ ಕರ್ನಾಟಕದ ಎಲ್ಲ ಕನ್ನಡಿಗರ ಅಸ್ಮಿತೆಗಳನ್ನು ಅಭಿವ್ಯಕ್ತಿಸಲು ಹಾತೊರೆಯಿತು. ಕೇವಲ ತನ್ನ ವಿಭಜಿತ ಘಟಕವನ್ನಷ್ಟೇ ಅಲ್ಲದೆ ಆ ಮೂಲಕ ನಾಡು, ರಾಷ್ಟ್ರದ ಪರಿಕಲ್ಪನೆಗಳನ್ನು ಪ್ರತೀಕಗಳನ್ನಾಗಿಸಿದ ನೋಟ ಬೇಂದ್ರೆ ಕಾವ್ಯಕ್ಕೆ ಇದೆ.

ಬೇಂದ್ರೆ ತಾನು ಜನಿಸಿದ ‘ಧಾರವಾಡ’ವನ್ನು ಅದರ ಎಲ್ಲ ಬಗೆಯ ಪ್ರಾಕೃತಿಕ ಸಂಪತ್ತಿನ ಮೂಲಕ ಗುರುತಿಸುತ್ತಾರೆ. ಮಲೆನಾಡಿಗೂ, ಬೆಳವಳಕ್ಕೂ ಗಡಿನಾಡಿನ ಪಟ್ಟಣವಾಗಿರುವ ಧಾರವಾಡವನ್ನು ಹಸಿರು ಸುತ್ತುವರೆದಿದೆ. ಈ ಹಸಿರು ಮಲೆನಾಡಿಗೆ ಸೆರಗನ್ನು ಹದ್ದ ರೀತಿ ಕಾಣವುದರಿಂದ ಬೇಂದ್ರೆ ‘ಮುತ್ತೈದೆ’ ಯೊಬ್ಬಳು ತಲೆಯ ಮೇಲೆ ಸೆರಗನ್ನು ಹೊದ್ದುಕೊಂಡಂತೆ ಧಾರವಾಡ ಇದೆ ಎಂಬುದನ್ನು ಅಭಿವ್ಯಕ್ತಿಸಿದ್ದಾರೆ. ನಾಡಿನ ಅಥವಾ ರಾಷ್ಟ್ರದಲ್ಲಿ ಗರತಿ ಯೊಬ್ಬಳು ಸೆರಗು ಹೊದೆವುದು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಈ ರೂಪಕವನ್ನು ‘ಕನ್ನಡಮ್ಮ’ನಿಗೆ ಕವಿ ಪ್ರತೀಕವಾಗಿಸಿ ‘ತಾಯಿ ನಿನ್ನ ಮೇಲೆ ಸೆರಗು’ ಎನ್ನುತ್ತಾರೆ. ‘ಧಾರವಾಡ’ ಕವಿಗೆ ಹಾಗೂ ಸ್ಥಳೀಯ ಕನ್ನಡಿಗರಿಗೆ ತಾಯಿ ಅಷ್ಟೆ ಆಗಿರದೆ ಧಾರವಾಡದ ಅಧಿದೇವತೆ ‘ದುರ್ಗೆ’ (ಪಾರ್ವತಿ)ಯೂ ಆಗಿದ್ದು, ಆಕೆ ತನ್ನ ಪತಿ ಶಿವನ ಬರುವಿಕೆಯನ್ನು ಕಾಯುತ್ತಿರುವುದಾಗಿ ಅಭಿವ್ಯಕ್ತಿಸುತ್ತಾರೆ. ಆ ಮೂಲಕ ಕನ್ನಡಿಗರು ಒಳ್ಳೆಯ ದಿನಗಳನ್ನು ನಿರೀಕ್ಷಿಸುವುದನ್ನು ಪ್ರತಿಬಿಂಬಿಸುವ ಆಶಯ ಕವಿಯದು. ‘ಧಾರವಾಡದ ತಾಯಿ’ (ದುರ್ಗೆ) ಇರುವ ಸ್ಥಳ ಬೇಂದ್ರೆ ಅವರಿಗೆ ‘ಮೀಸಲಿಟ್ಟ ನಾಡು ಬಿ.ಎಂ.ಶ್ರೀ ಅವರಿಗೆ ಮೈಸೂರು ಹೇಗೆಯೋ ಬೇಂದ್ರೆ ಅವರಿಗೆ ಧಾರವಾಡವು ಹಾಗೆಯೇ. ಇಂಥ ಅಭಿವ್ಯಕ್ತಿ ಕನ್ನಡನಾಡು, ನುಡಿ, ಹಿಂದಿನ ದಾಸ – ಶರಣರ ಅನುಭೂತಿಗಳನ್ನು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುತ್ತದೆ.

ಕನ್ನಡ ನಾಡಿನ ಹಿಂದಿನ ವೈಭವಗಳನ್ನು ಪ್ರತಿಬಿಂಬಿಸಲು ಬೇಂದ್ರೆ ಧರ್ಮ, ಆಧ್ಯಾತ್ಮ, ಚರಿತ್ರೆ – ಪುರಾಣಗಳನ್ನು ಬಳಸಿಕೊಂಡಿದ್ದಾರೆ. ಅವರಿಗೆ ನಾಡು ‘ನಾರಾಯಣ’ನಾಗಿ ‘ಶರಣ ನಾಡು’ ಆಗಿ ಕಾಣಿಸಿದೆ. ಅದ್ವೈತ ಸಿದ್ಧಾಂತದ ಪ್ರತೀಕವಾಗಿ ಕನ್ನಡ ನಾಡನ್ನು ನೋಡುವ ನೋಟ ಅವರದು. ಆದ್ದರಿಂದಲೆ ಅವರು

ಜಿನ ಹರಿ ಅಲ್ಲಾ ಶಿವನೆ ಬಲ್ಲಾ
ಒಬ್ಬನಲದೇ ಎರಡಿಲ್ಲಾ
ಜೀವ ದೇವನೊಂದಾವಣೆ ಇಲ್ಲದೆ
ನೀರಿಲ್ಲದ ನೆಲ ಬರಡಲ್ಲ!!

– ಎನ್ನುವುದರ ಮುಖೇನ ಏಕತ್ರಗೊಳಿಸುವುದು. ಈ ಚಿಂತನೆ ಅಂದು ಇತರೆ ಭಾಷಿಕರಲ್ಲೂ ನಡೆದಿತ್ತು.

ಆಧುನಿಕ ಕನ್ನಡ ಕಾವ್ಯದಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ಮಹತ್ತ್ವದ ಪ್ರತೀಕವೆಂದರೆ ‘ಹಂಪಿ – ವಿಜಯನಗರ’. ಚರಿತ್ರೆಯ ಗತವೈಭವದ ಕುರುಹಾಗಿ ಅಭಿವ್ಯಕ್ತಿಗೊಳ್ಳುವ ಈ ಪ್ರತೀಕ ನಾಡು ಮತ್ತೆ ಒಂದುಗೂಡಲು ಪ್ರೇರಣೆ ನೀಡುವಂತೆ ಬಳಕೆ ಆಗಿದೆ. ಇದಕ್ಕೆ ಬೇಂದ್ರೆ ಕಾವ್ಯ ಹೊರತಲ್ಲ. ಕನ್ನಡಿಗರ ‘ಸಾಂಸ್ಕೃತಿಕ ಸಾಮ್ರಾಜ್ಯ’ವಾದ ಹಂಪಿ ಕರ್ನಾಟಕದ ‘ರತ್ನಸಿಂಹಾಸನ’ವಿದ್ದ ಸ್ಥಳ. ಮರಾಠಿ, ಬಂಗಾಳಿ ಭಾಷಿಕರಲ್ಲಿ ಚರಿತ್ರೆಯ ಪರಿಕರಗಳು ಬಳಕೆ ಆದಂತೆ ನಮ್ಮಲ್ಲಿಯೂ ‘ಹಂಪಿ’ ಬಳಕೆ ಆಗಿದೆ. ಬೇಂದ್ರೆ ಅವರಿಗೂ ನಾಡಿನ ‘ನಡುಮನೆ’ಯ ರೂಪಕವಾಗಿ ‘ಹಂಪಿ’ ಕಾಣಿಸಿಕೊಂಡಿದೆ. ಕನ್ನಡಿಗರ ಹೆಮ್ಮೆಯ ಪ್ರತೀಕವಾದ ‘ಹಂಪಿ’ಯನ್ನು ಕವಿ

ಬಿದ್ದ ರಾಜ್ಯವಿದಲ್ಲ ಉದ್ಭುದ್ಧವಾಗಿದ್ದು
ಎದ್ದ ರಾಜ್ಯದ ಮೊಳಕೆಯಿದು, ಇದರ ಬಳಿಯಲ್ಲಿ
ಇದ್ದ ಸಂಜೀವನದ ಜಪಿಸುವಂತಹ ಯೋಗಿ
ಕೊಂಪೆ ಹಂಪೆಯು ಇದಲ್ಲ.

ಎನ್ನುವುದರ ಮೂಲಕ ‘ವಿಜಯನಗರದ ದರ್ಶನ’ ಮಾಡಿಸುತ್ತಾರೆ. ಅಂದು ಪರಕೀಯ ಪಾರತಂತ್ರ್ಯ ಇಂಡಿಯಾವನ್ನು ಹಾಗೂ ಕನ್ನಡಿಗರನ್ನು ಒಡೆದುಹಾಕಿತ್ತು. ಐದು ಆಡಳಿತ ಘಟಕಗಳಲ್ಲಿದ್ದ ಕನ್ನಡಿಗರನ್ನು ಒಂದೇ ಆಡಳಿತದ ತೆಕ್ಕೆಗೆ ತರುವಲ್ಲಿ ಹಲವು ಪ್ರಯತ್ನಗಳು ನಡೆದವು. ಈ ಬಗ್ಗೆ ಜಾಗೃತಿ ಮೂಡಿಸಲು ಕವಿಗಳು ತಮ್ಮ ಕಾವ್ಯ ಸೃಷ್ಟಿಯಲ್ಲಿ ಧರ್ಮದ ಪರಿಭಾಷೆಗಳನ್ನು ಬಳಸಿದ್ದು ಗಮನಾರ್ಹ. ಶಾಂತಕವಿಗಳಂತೆಯೇ ಬೇಂದ್ರೆ ಅವರು ಸಹ ಈ ಐದು ಭಾಗಗಳ ಏಕೀಕರಣಕ್ಕಾಗಿ ಒಡೆದ ಐದು ಕನ್ನಡಿ ಚೂರುಗಳನ್ನು ಒಂದೇ ಎಂದು ಪ್ರತಿಬಿಂಬಿಸುವುದನ್ನು ಗಮನಿಸಬಹುದು. ಅಲ್ಲದೆ ಹೆಣ್ಣು ಸಂಕಥನದ ಮಾತೃ ದೇವತೆಗಳನ್ನು ರೂಪಕಗಳಲ್ಲೂ ಬಳಸಿದ್ದಾರೆ. ನಾಡಿನ ಐದು ಪ್ರದೇಶಗಳ ಮಾತೃದೇವತೆಗಳನ್ನು ‘ಪಂಚ ಮಾತೃಕೆ’ಯರನ್ನಾಗಿ ಸಂಕೇತಿಸಿರುವುದು ಕಂಡುಬರುತ್ತದೆ. ಆದ್ದರಿಂದಲೇ ಬೇಂದ್ರೆ ಅವರು ತಮ್ಮ ‘ಕಡಲ ಪಾವನ ಪರಂಪರೆ’ ಕವನದಲ್ಲಿ

ಮೈಸೂರು ಚಾಮುಂಡಿ, ಕೊಲ್ಲೂರು ಮೂಕಾಂಬಿಕೆ
ಬನವಾಸಿ ಗೋಕರ್ಣ ಭದ್ರಕಾಳಿ
ಬದಾಮಿ ಬನಶಂಕ್ರಿ ಗುಡ್ಡದಾ ಎಲ್ಲಮ್ಮ
ಎಲ್ಲರೂ ಹರಸುವರು ‘ತಾಳಿ ಬಾಳಿ’

– ಎಂದಿರುವುದು. ಅಂತೆಯೇ ಅವರು ಕನ್ನಡಿಗರಲ್ಲೂ ಉತ್ಸಾಹವನ್ನು ತುಂಬಲೋ ಎಂಬಂತೆ ಪ್ರೇರಣೆ ನೀಡುವ ಸಾಲುಗಳನ್ನು ಸಹ ವೀರತ್ವದ ಪರಿಭಾಷೆಯಲ್ಲಿ ಪ್ರಯೋಗಿಸಿರುವುದೂ ಉಂಟು. ಉದಾಹರಣೆಗೆ ಬೇಂದ್ರೆ ಅವರು

ಏಳು ಶೂರರ ಖಣೀ! ಏಲು ಧೀರರ ರಾಣಿ
ಏಳು ತೀರದ ವೀರರಸದ ವಾಣಿ
ಏಳು ಮೀರಿದ ಜಾಣಿ! ಏನು ಈ ಸ್ಥಿತಿ ಗಾಣಿ!
ಹೇಳು ವರವರದ ಪಾಣಿ

ಎಂದು ಬರೆಯುವುದರ ಮುಖೇನ ಕನ್ನಡಿಗರಲ್ಲಿ ‘ಅಭಿಮಾನಿ ದೇವತೆ’ಯನ್ನು ಕ್ರಿಯಾಶೀಲವನ್ನಾಗಿಸುತ್ತಾರೆ. ನವೋದಯ ಕವಿಗಳಲ್ಲಿದ್ದ ಎಲ್ಲಾ ಬಗೆಯ ಆಶಯಗಳು ಬೇಂದ್ರೆ ಅವರ ಕಾವ್ಯದಲ್ಲಿ ನೋಡಲು ಸಾಧ್ಯವಿದೆ. ಅಲ್ಲದೆ ರಾಷ್ಟ್ರ – ನಾಡನ್ನು ‘ತಾಯಿ – ಮಗಳ’ ಸಂಬಂಧದೊಂದಿಗೆ ಬೆಸೆಯುವ ಕವಿತೆಗಳನ್ನು ಸಹ ಪರಿಶೀಲಿಸಬಹುದು. ರಾಷ್ಟ್ರೀಯ ಹೋರಾಟಕ್ಕೆ ಪ್ರಾಂತೀಯ ನೆಲೆಗಳಲ್ಲಿನ ಭಾಷಿಕ, ಜನಾಂಗಿಕ ತಾರತಮ್ಮಗಳು ಮಾರಕವಾಗ ಬಾರದೆಂಬ ಎಚ್ಚರ ಬೇಂದ್ರೆ ಅವರ ಕಾವ್ಯದಲ್ಲೂ ಕಾಣಿಸಿಕೊಂಡಿದೆ.

ಬಂಕಿಮಚಂದ್ರರ ‘ವಂದೇ ಮಾತರಂ’ನ ಸಾಲುಗಳ ರೀತಿಯಲ್ಲಿಯೆ ಬೇಂದ್ರೆ ಅವರ ಕವಿತೆಗಳ ಸಾಲುಗಳು ಸಹ ನಾಡಿನ ಆಶಯಲ್ಲಿದ್ದು ಅವು ನಾಡನ್ನು ಪ್ರತಿನಿಧಿಸುತ್ತವೆ. ಬೇಂದ್ರೆಯವರ ಕಾವ್ಯ ಸೃಷ್ಟಿಯಲ್ಲಿ ‘ಕನ್ನಡಮ್ಮ’ ಅವರಿಗೆ ಕೇವಲ ‘ಕರ್ನಾಟಕ ಮಾತೆ’ಯಾಗಿರದೆ ಇನ್ನುಳಿದ ರೂಪಕ – ಪ್ರತೀಕಗಳಲ್ಲೂ ಉಲ್ಲೇಖಿತವಾಗಿರುವುದನ್ನು ಗಮನಿಸಬಹುದು. ಅವುಗಳಲ್ಲಿ ಕನ್ನಡ ಭಾರತಿ, ಕನ್ನಡರಥಿ, ನಾಡ ರಾಣಿ, ಕನ್ನಡದಾರತಿ, ವಿಶ್ವರತಿ, ಸಿರಿಗನ್ನಡ ಭಾರತಿ, ನವೋನವಶ್ರೀ ಭಾರತಿ, ಪಂಚಮುಖಿ, ಗರತಿ ಅಥವಾ ಮುತ್ತೈದೆ, ಪಂಚ ಮಾತೃಕೆ, ಚಂಡಿ, ಚಾಮುಂಡಿ ಮೊದಲಾದವು ಪ್ರಧಾನವಾಗಿವೆ.

ವಸಾಹತುಶಾಹಿ ಆಳ್ವಿಕೆ ವಿರುದ್ಧದ ‘ವಂದೇ ಮಾತರಂ’ ರಾಷ್ಟ್ರಗೀತೆ ಬೇಂದ್ರೆ ಅವರನ್ನೂ ಪ್ರಭಾವಿತರನ್ನಾಗಿಸದೇ ಬಿಟ್ಟಿಲ್ಲ. ಏಕೆಂದರೆ ಅವರ ‘ಕನಸಿನೊಳಗೊಂದು ಕಣಸು’ (vision) ಕವಿತೆಯ ಸಾಲುಗಳು ಚಂಡಿ – ಚಾಮುಂಡಿಯ ದರ್ಶನ ಮಾಡಿಸಿ ತ್ಯಾಗ – ಬಲಿದಾನಗಳನ್ನು ಬಯಸುತ್ತದೆ. ಈ ಕವಿತೆಯ ಆರಂಭದ ಸಾಲುಗಳು ಸಹ ಮಮತೆಯ, ಕಾರಣ್ಯದ ಸಾಕಾರತೆಯ ಪ್ರತೀಕವಾಗಿ ‘ತಾಯಿ’ಯನ್ನು ಪರಿಚಯಿಸುತ್ತವೆ. ನಾಡಿನ ಅಂದಿನ ಪರಿಸ್ಥಿತಿ, ಕನ್ನಡಿಗರ ಅನೈಕ್ಯವಿಂಗಡನೆಗಳ ಹಿನ್ನೆಲೆಯಲ್ಲಿ ಬೇಂದ್ರೆ ಅವರು ‘ಕನ್ನಡಮ್ಮ’ನ ಅಥವಾ ‘ಹಿರಿಯ ಮುತ್ತೈದೆ’ಯೊಂದಿಗೆ ಸಂವಾದ ನಡೆಸುವುದು ಮಾರ್ಮಿಕವಾಗಿ ಮೂಡಿಬಂದಿದೆ. ಸುಕೋಮಲ – ಮಮತೆಯ ಚಹರೆಯ ಮುತ್ತೈದೆ ಕವಿತೆಯ ಕೊನೆಯ ಘಟ್ಟದಲ್ಲಿ ರೌದ್ರರೂಪಿ ಆಶಯವನ್ನು ಅಭವ್ಯಕ್ತಿಸುವುದು ‘ವಂದೇ ಮಾತರಂ’ ಗೀತೆಯನ್ನೇ ನೆನಪು ಮಾಡುತ್ತದೆ.

‘ಕನಸಿನೊಳಗೊಂದು ಕಣಸು’ ಕವಿತೆಯಲ್ಲಿ ನಾಡಿನ ಅಂದಿನ ಅನೇಕೀಕರಣದ ಸ್ಥಿತಿಗತಿಗಳನ್ನು ಮೈಗೂಡಿಸಿಕೊಂಡ ‘ಮುತ್ತೈದೆ’ಯೊಬ್ಬಳು ಕನ್ನಡಿಗನ ಕನಸಿನೊಳಗೆ ಕಾಣಿಸಿಕೊಳ್ಳುತ್ತಾಳೆ. ಆತ ಆಕೆಯ ಮುಖ ಚಹರೆಯಿಂದ ತಾಯಿ, ಮುತ್ತೈದೆ, ರಾಜಮುಖಿ, ನಾಡದೇವಿಯ ರೂಪಗಳನ್ನು ಕಾಣುತ್ತಾನೆ. ಅಲ್ಲದೆ ಯಾವುದೋ ಅವ್ಯಕ್ತ ನೋವು – ದುಃಖಗಳು ಆಕೆಯ ಮನದಾಳದಲ್ಲಿ ಅಡಗಿರುವುದನ್ನು ಅರಿತುಕೊಳ್ಳುತ್ತಾನೆ. ಹಲವು ಪ್ರಶ್ನೆಗಳೊಂದಿಗೆ ಸಂವಾದ ನಡೆಸುವ ಆತ ‘ಮಕ್ಕಳೇನಾದರೂ ಇದ್ದಾರೆಯೇ?’ ಎಂದು ಪ್ರಶ್ನಿಸಿದಾಗ ಆಕೆಯಿಂದ ಬರುವ ಉತ್ತರ ದೀನ ಸ್ಥಿತಿಯದು. ಆಕೆಗೆ ಮಕ್ಕಳೆಂಬುವರು (ಕನ್ನಡಿಗರು) ಇದ್ದರೂ ಚೆಲ್ಲಾಪಿಲ್ಲಿಯಾಗಿರುವುದರಿಂದ (ತುಂಡಾದ ಕನ್ನಡದ ಪ್ರದೇಶಗಳಲ್ಲಿ) ತನ್ನ ಹೆಸರನ್ನು (ಕರ್ನಾಟಕ ಮಾತೆ ಅಥವಾ ಕನ್ನಡಮ್ಮ ಎಂದು) ಹೇಳಿಕೊಳ್ಳಲಾರದ ಸ್ಥಿತಿಯನ್ನು ವಿವರಿಸುತ್ತಾಳೆ. ಆಕೆಗೆ ಬೇಕಿರುವುದನ್ನು ಬೇಡಿಕೊಳ್ಳಲು ಹೇಳುವ ಪ್ರಶ್ನಿಕ, ಆಕೆಯ ಬೇಡಿಕೆಯನ್ನು ಕೇಳಿ ದಂಗಾಗುತ್ತಾನೆ. ಏಕೆಂದರೆ ಆಕೆ ಕೇಳುವುದು ನಾಡಿಗಾಗಿ ಆತನ ‘ಬಲಿ’ಯನ್ನು, ಅವನಿಗೆ ಮುತ್ತೈದೆಯ ಚಹರೆಗಿಂತ ಭಿನ್ನವಾದ ‘ಚಂಡಿ – ಚಾಮುಂಡಿ’ಯ ರೂಪದರ್ಶನ ಆಗುತ್ತದೆ. “ಗಂಡಸಾದರೆ ನಿನ್ನ ಬಲಿ ಕೊಡುವೆಯೇನು?” ಎಂದು ಸವಾಲು ಹಾಕುವ ಆಕೆ ಬಯಸುವುದು ಬಲಿಷ್ಟ ತ್ಯಾಗವನ್ನೇ. ಈ ಥರದ ಬಲಿಯ ವಿರಾಟ್ ಸ್ವರೂಪವು ‘ಕನ್ನಡಮ್ಮ’ನ ಪ್ರತೀಕವಗಿ ರೂಪ ತಳೆದಿರುವುದನ್ನು ಬೇಂದ್ರೆ ಕಾವ್ಯದಲ್ಲೂ ನೋಡಲು ಸಾಧ್ಯವಿದೆ.

೩.೪ ಕುವೆಂಪು ಹಾಗೂ ‘ಕ್ರಾಂತಿ ಕಾಳಿ’

ನಾಡು – ನುಡಿಗಳ ಬಗೆಗೆ ರೂಪಕ – ಪ್ರತೀಕಗಳನ್ನು ಸೃಷ್ಟಿಸಿದ ಕವಿ ಕುವೆಂಪು ಆ ಮೂಲಕ ಕನ್ನಡಿಗರಿಗೆ ಒಂದು ತಾತ್ವಕತೆಯ್ನೇ ರೂಪಿಸಿದವರು. ಸ್ಥಳೀಯ ವಿಶೇಷತೆಗಳ ಮೂಲಕ ‘ಅಖಂಡ ಕರ್ನಾಟಕ’ದ ದೃಷ್ಟಿಕೋನವನ್ನು ನೀಡಿದ್ದೇ ಅಲ್ಲದೆ, ಆ ಮೂಲಕ ರಾಷ್ಟ್ರೀಯವಾದ ರೂಪಕಗಳ ದರ್ಶನ ಮಾಡಿಸಿದ್ದ ಮಹತ್ತ್ವದ ಸಂಗತಿ. ವಿಶ್ವಮಾನವತೆಗೆ ಈ ರೂಪಕಗಳ ದರ್ಶನ ಅಗತ್ಯವೆಂದು ಅರಿತವರು ಕುವೆಂಪು. ಇತರೆ ಭಾಷಿಕರಂತೆ ‘ಕನ್ನಡಮ್ಮ’ನ ಆಶಯಗಳ ಸಾಕಾರತೆಗೆ ಕನ್ನಡಿಗರನ್ನು ಸಜ್ಜುಗೊಳಿಸಿದ ಕನ್ನಡದ ಸೃಷ್ಟಿಶೀಲ ಪ್ರಮುಖರಲ್ಲಿ ಕುವೆಂಪು ಸಹ ಒಬ್ಬರು. ನಾಡು – ನುಡಿಗಳಿಗಾಗಿ ಬೇಕಾದ ಸಾಂಸ್ಕೃತಿಕ ಆಸ್ಮಿತೆಗಳನ್ನು ಅವರ ಕಾವ್ಯದ ಹಿನ್ನೆಯಲ್ಲಿ ಪರಿಶೀಲಿಸುವುದು ಇಲ್ಲಿನ ಆಶಯ.

ನವೋದಯದ ಇನ್ನಿತರ ಕವಿಗಳಂತೆ ಕುವೆಂಪು ಅವರು ಸಹ ಸ್ಥಳೀಯವಾದಂಥ ವಿಶೇಷತೆಗಳನ್ನು ವರ್ಣಿಸಿದರು. ಅವರು ತಾವು ಹುಟ್ಟಿದ ಸ್ಥಳ, ಅಲ್ಲಿನ ಪ್ರಕೃತಿ ಸೌಂದರ್ಯಗಳಿಗೆ ಬೆರಗಾಗಿ ಆ ಮೂಲಕ ಕರ್ನಾಟಕದ ದೃಷ್ಟಿ ಬೆಳೆಸಿಕೊಂಡು ಹೆಮ್ಮ ಪಟ್ಟವರು. ಎತ್ತರದ ‘ಲಲಿತಾದ್ರಿ’ಯ ಮೇಲೆ ನೀಂತು ಕೇವಲ ಮೈಸೂರನ್ನಷ್ಟೇ ಅಲ್ಲದೆ ಒಡೆದುಹೋದ ಕನ್ನಡ ಪ್ರದೇಶಗಳನ್ನು ನೋಡಿ ಮರುಗುತ್ತಾರೆ. ನಾಡಿನ ಪ್ರತೀಕವಾಗಿ ನಿಂತಿರುವ ಗೊಮ್ಮಟನ ಮುಖೇನ ನಾಡನ್ನು ಒಂದುಗೂಡಿಸಿ, ಕಾಯಲು ಕರೆ ನೀಡುವುದನ್ನು, ಗಮನಿಸಬಹುದು. ಬೇಂದ್ರೆ ಮೊದಲಾದವರಿಗೆ ‘ನಾಡು’ ತಾಯಿಯಾದರೆ ಕುವೆಂಪು ಅವರಿಗೆ ‘ನುಡಿ’ಯು ಸಹ ತಾಯಿಯೆ.

ಪಂಪ ರನ್ನರನ್ನು ಹೆತ್ತ ‘ತಾಯಿನುಡಿ’ಗೆ ಕುಂದು ಇಲ್ಲ ಎಂದು ಅರಿತ ಕುವೆಂಪು ‘ನನ್ನಮ್ಮ, ತಾಯೆ ಸಿರಿಗನ್ನಡಂ ಗೆಲ್ಗೆ’ ಎಂದು ಅಭಿಮಾನ ತಾಳುವುದೂ ಉಂಟು. ಎಲ್ಲಿಯವರೆವಿಗೂ ಹಿಂದಿನ ಕವಿ ಪರಂಪರೆ ಕನ್ನಡಿಗರಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ‘ಕನ್ನಡ’ ನುಡಿಗೆ ಅಳಿವು ಇಲ್ಲ ಎಂದು ನಂಬಿದ್ದರು. ವಸಾಹತುಶಾಹಿ ಆಳ್ವಿಕೆ ಶೋಷಣೆಗಳನ್ನು ‘ನಾಗಿಣಿ’ಯ ರೂಪದಲ್ಲಿ ಅಭಿವ್ಯಕ್ತಿಸುವ ಅವರು ಭಾರತಮಾತೆಯ ತಪಶ್ಚರ್ಯದ ದಿನಗಳು ಕಳೆದು ಆಕೆ ‘ಚಕ್ರವರ್ತಿನಿ’ ಯಾಗುವ ಇಗಂಗಿತವನ್ನು ವ್ಯಕ್ತಪಡಿಸುತ್ತಾರೆ. ಭಾರತವು ತನ್ನ ದಾಸ್ಯರದ ವಿಮೋಚನೆಗಾಗಿ ಕಾದಿರುವ ತುಡಿತ ಕವಿಯದು. ‘ಭಾರತ ಮಾತೆ’ಯನ್ನು ‘ದೇವಿ’ ‘ಜನನಿ’ ಯನ್ನಾಗಿ ಪರಿಭಾವಿಸುವ ಕವಿ ಕರ್ನಾಟಕವನ್ನು ‘ಮಗಳಾಗಿ’, ‘ತನುಜಾತೆ’ಯಾಗಿ ನಂಟನ್ನು ಗಂಟು ಹಾಕುತ್ತಾರೆ.

ಸ್ವಾತಂತ್ರ್ಯದ ಅನಂತರದಲ್ಲಿ ಕವಿಗೆ ನಾಡಿನ ಏಕೀಕರಣದ ತುರ್ತು, ಕನ್ನಡಿಗರಲ್ಲಿನ ಅಭಿಮಾನ ಶೂನ್ಯತೆಗಳು ಕಾಡುತ್ತವೆ. ನೆರೆಯ ಭಾಷಿಕರಲ್ಲಿನ ಅಭಿಮಾನವನ್ನು ಕಂಡು ಅವರು

…………………………………….ಕನ್ನಡಿಗರಿರ,
ಕಲಿಯಿರೈ ತೆಲುಗು ತಮ್ಮಂದಿರಿಂ, ತಮಿಳ ಅಣ್ಣರಿಂ,
ಗೆಳೆಯರು ಮರಾಠಿಯರಿಂ, ಮಲೆಯಾಳಿ ಚಿಣ್ಣರಿಂ,
ನುಡಿ ನಿಮ್ಮ ಮೈಯ್ಯ ರಕ್ಷಿಸುವ ಖರ್ಪರ ಚರ್ಮ.

– ಎಂದು ಕರೆ ನಿಡುತ್ತಾರೆ. ನೆರೆಯ ಆಂರ್ಧರದವರ ಏಕೀಕರಣದ ಆಶಯ ಸಾಕಾರಗೊಳ್ಳುತ್ತಿದ್ದುದನ್ನು ಕಂಡ ಕವಿ ತಮ್ಮ ಭಾಷಿಕರನ್ನು ಎಚ್ಚರಗೊಳಿಸುವ ಧಾಟಿ ಈ ಸಾಲುಗಳಲ್ಲಿ ಇದೆ. ಅಲ್ಲದೆ ‘ಕನ್ನಡಮ್ಮ’ನ ಸಮಗ್ರ ಅಸ್ತಿತ್ವ ಕವಿಗೆ ಪ್ರಧಾನವಾಗಿ ಕಾಡುತ್ತದೆ.

ಕುವೆಂಪು ಅವರ ಕಾವ್ಯದಲ್ಲೂ ‘ಹಂಪಿ’ ದರ್ಶನ ಕನ್ನಡಿಗರ ಹೆಮ್ಮೆಯ ಪ್ರತೀಕಾವಗಿ, ‘ಕರ್ನಾಟಕ ರತ್ನಸಿಂಹಾಸನ’ದ ಸಂಕೇತವಾಗಿ ಅಭಿವ್ಯಕ್ತವಾಗಿದೆ. ಕನ್ನಡಿಗರಿಗೆ ‘ಹಂಪಿ’ಯಲ್ಲಿನ ‘ಪಾಳಾದ ಕನ್ನಡಾರಾಮ’ವನ್ನೂ, ‘ವಿರೂಪಾಕ್ಷನ ಕಣ್ಣೀರ’ನ್ನು ಪರಿಚಯಿಸಿ ಹುರಿದುಂಬಿಸುವುದನ್ನು ಕವಿಯ ಅನುಭೂತಿಯಲ್ಲಿ ಕಾಣಲು ಸಾಧ್ಯ ಇದೆ. ‘ಹಂಪಿ’ ಅವರಿಗೆ ಒಂದೆಡೆ ‘ತೆಂಕಣ ಕಾಶಿ’ಯಾಗಿ ಕಂಡರೆ, ಇನ್ನೊಂದೆಡೆಗೆ ಅದು ‘ಕಲಿಯುಗದ ಹಸಿಯ ಹಿರಿಮಸಣ’ವಾಗಿಯೂ ಕಾಣುತ್ತದೆ. ವಿಜಯನಗರದ ಗತ ವೈಭವಕ್ಕೆ ಕನ್ನಡಿಗರ ಮನಸ್ಸು ಮರುಗಲಿ ಎಂಬ ಆಶಯ ಇತರರಂತೆ ಕುವೆಂಪು ಅವರದು ಸಹ ಆಗಿತ್ತು. ಆದ್ದರಿಂದಲೇ ಅವರು ಹಂಪಿಯನ್ನು ಕುರಿತು – ‘ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಇಲ್ಲೆ’ ಎನ್ನುವುದು. ಆ ಮೂಲಕ ಕರ್ನಾಟಕದ ಏಕೀಕರಣಕ್ಕೆ ಸ್ಪಂದಿಸಲಿ ಎಂಬ ಆಶಯ ಅವರಲ್ಲಿ ಉತ್ಕಟನಾಗಿತ್ತು.

ಕುವೆಂಪು ಅವರು ವೀರತ್ವದ ರೂಪಕಗಳ ಮುಖೇನ ಕನ್ನಡಿಗರನ್ನು ‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ’ (೧೯೪೪) ಎಂಬ ಕವಿತೆಯ ಮೂಲಕ ಎಚ್ಚರಿಸುವುದನ್ನು ಗಮನಿಸಬಹುದು. ಆದರೆ ರಾಷ್ಟ್ರವು ಸ್ವಾತಂತ್ರ್ಯಗೊಂಡ ಮೇಲೆ ಏಕೀಕರಣ ಆಶಯ ಇನ್ನಷ್ಟು ನಿಧಾನಗತಿಯನ್ನು ಪಡೆಯಿತು. ಆಗ ಅಂದರೆ ೧೯೫೦ರ ದಶಕದಲ್ಲಿ ಕವಿ ಕುವೆಂಪು ಮತ್ತೆ ಆವೇಶಕ್ಕೆ ಒಳಗಾಗುತ್ತಾರೆ. ವೀರತ್ವದ, ಕೆಚ್ಚಿನ ಕವಿತೆಗಳ ಮುಖೇನ ನಾಡು ಏಕೀಕರಣಗೊಳ್ಳಬೇಕಾದ ಅನಿವಾರ್ಯತೆಯನ್ನು ಪ್ರಕಟಪಡಿಸುವುದು ಕಂಡುಬರುತ್ತದೆ.

ಕುವೆಂಪು ಅವರಿಗೆ ‘ನಾಡು’ ಅಥವಾ ‘ಕರ್ನಾಟಕ’ ಎಂಬುದು ಕೇವಲ ಮಣ್ಣಿನ ಪ್ರತೀಕವಲ್ಲ. ಬದಲಾಗಿ ಅದೊಂದು ‘ಶಕ್ತಿ’. ರಾಷ್ಟ್ರ ಅಥವಾ ನಾಡು ಕೇವಲ ಭೌತಿಕ ಸ್ವರೂಪದವಷ್ಟೇ ಅಲ್ಲ ಎಂಬುದು ಇವರಲ್ಲೂ ಆಬಿವ್ಯಕ್ತವಾಗಿದೆ. ಹೆಣ್ಣು ಸಂಕಥನದ ಎರಡೂ ಬಗೆಯ ಚಹರೆಯ ರೂಪಕಗಳು ಕುವೆಂಪು ಅವರ ಕಾವ್ಯಸೃಷ್ಟಿಯಲ್ಲಿ ರೂಪು ತಳೆದಿವೆ. ಅವರಿಗೆ ನಾಡು ಮಾತೆ, ತಾಯಿ, ಕನ್ನಡಾಂಬೆ, ದೇವಿ, ಮಗಳು, ತನುಜಾತೆ, ಬೆಂಕಿ, ಸಿಡಿಲು, ಮಂತ್ರ ಸ್ಪೋಟಕ, ಚಂಡಿ, ಕ್ರಾಂತಿಕಾಳಿ ಎಲ್ಲವೂ ಆಗಿದೆ. ಇವರಲ್ಲಿಯೂ ಹೆಣ್ಣಿನ ಒಲಿದರೆ ತಾಯಿಯ ರೂಪ, ಮುನಿದರೆ ಚಂಡಿಯಾ ರೌದ್ರರೂಪವಾಗಲು ಅನುಭೂತಿ ಪಡೆದಿವೆ ಆದರೆ ಕುವೆಂಪು ಅವರ ‘ಕ್ರಾಂತಿಕಾಳಿ’ಯ ಆಶಯ ಇವೆಲ್ಲಕ್ಕಿಂತ ಭಿನ್ನ ಬಗೆಯದು.

ಬೇಂದ್ರೆಯವರ ‘ಕನ್ನಡಮ್ಮ’ ಕೇಳುವ ಧಾಟಿಯಲ್ಲೇ ಕುವೆಂಪು ಅವರ ‘ಕ್ರಾಂತಿಕಾಳಿ’ (ಕನ್ನಡಮ್ಮ)ಯೂ ‘ಪ್ರಾಣ’ವನ್ನೇ ಕೇಲುತ್ತಾಳೆ. ಆದರೆ ಈಕೆ ಬಲಿ ಕೇಳುವುದು ಬಡತನದ ಅಳಿವಿಗಾಗಿ, ಬಡಜನತೆಯ ಅಭಿವೃದ್ಧಿಗಾಗಿ. ಈಕೆ ಈ ಆಶಯಕ್ಕಾಗಿ ಕವಿಯೊಬ್ಬನಿಗೆ ಕವಿತೆ ಬರೆಯಲು ಅಣತಿ ಮಾಡಿರುತ್ತಾಳೆ. ಆದರೆ ಅವನು ಅದನ್ನು ಮರೆತುಬಿಡುತ್ತಾನೆ. ಬದಲಾಗಿ ಭೋಗಿಯಂತೆ ರಸಗಂಧವನ್ನು ಅಸ್ವಾದಿಸಲು ಹಾತೊರೆದಿರುತ್ತಾನೆ. ಅವನ ‘ಹೆಂಬೇಡಿತನ’ವನ್ನು ಆಕೆ ಕೊಲ್ಲಲು ಬರುತ್ತಾಳೆ. ಆದ್ದರಿಂದಲೆ ಅವಳು

‘ಕ್ರಾಂತಿಕಾಳಿಯು ನಾನು ಕೈ ಬೀಸಿ
ಕರೆಯೆ, ಬಾ, ಪೂಜೆ ಗೈ ಹೃದಯರಕ್ತದ ಸೂಸಿ’

– ಎಂದು ಆಹ್ವಾನಿಸಿಸುವುದು. ಇಲ್ಲಿ ಆಶಯವನ್ನು ಮರೆತ ಅವನಿಗೆ ಮರಣವೇ ಸರಿಯಾದ ಶಿಕ್ಷೆ ಎಂದು ಆಕೆ ಭಾವಿಸಿದಂತಿದೆ.

ನಾಡು ಏಕೀಕರಣವಾಗುವ ವೇಳೆಗೆ ‘ಮೈಸೂರು ವ್ಯಾಮೋಹಿ’ಗಳು ಉತ್ತರದವರೊಂದಿಗೆ ಬೆರೆಯಲು ಹಿಂದೇಟು ಹಾಕಿದುರ. ರಾಜಕಾರಣದ ಎಲ್ಲ ಬಗೆಯ ಅಸಮಾಧಾನಗಳು ಸಾಹಿತಿ – ಕಲಾವಿದರನ್ನು ಪೇಚಿಗೆ ಸಿಲುಕಿಸಿದವು. ಕುವೆಂಪು ಅವರು ಸಹ ಈ ಸನ್ನಿವೇಶದಲ್ಲಿ ವಿಚಲಿತರಾಗುವುದಂಟು. ನಾಡನ್ನು ಒಂದು ಗೂಡಿಸುವಲ್ಲಿ ಕನ್ನಡಿಗರನ್ನು ಆಣೆ ಮಾಡಿಸಿ ತಮ್ಮ ಕಾವ್ಯದ ಮೂಲಕ ದೀಕ್ಷೆ ತೊಡಲು ಕರೆ ನೀಡುತ್ತಾರೆ. ಕವಿ ಆಡಳಿತಾತ್ಮಕವಾದ ಏಕೀಕರಣದ ಬಗೆಗೆ ಜಿಗುಪ್ಸೆ ಹುಟ್ಟಲಾರಂಭಿಸುತ್ತದೆ. ಹೀಗಾಗಿ ಅವರು ಆಶಾಶ್ವತವಾದ ಈ ರಾಜಕೀಯ ಪ್ರಕ್ರಿಯೆಯನ್ನು ಕುರಿತು ಟೀಕಿಸಿ ತಮ್ಮ ಕಾವ್ಯದ ಮುಖೇನ ಸಾಸ್ಕೃತಿಕ ಒಳನೋಟಗಳನ್ನು ನೀಡುತ್ತಾರೆ. ಅಂದರೆ ಶತಮಾನಗಳಿಂದ ದತ್ತವಾದ ಸಾಂಸ್ಕ್ರಿತ ಏಕೀಕರಣವೇ ಪ್ರಧಾನ ಅನ್ನಿಸುತ್ತದೆ. ಅಲ್ಲಿ ಕವಿ – ಕಾವ್ಯ ಪರಂಪರೆಯ ನಿತ್ಯ ಮಂತ್ರಿ ಮಂಡಲವನ್ನು ರೂಪಸಿ ಎಚ್ಚರಿಸುತ್ತಾರೆ. ತಾಯಿ ಸರಸ್ವತಿಯಿಂದ ರಚಿತವಾದ ಈ ಸಚಿವ ಮಂಡಲಕ್ಕೆ

ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
………………………….
………………………….

– ಎನ್ನುವ ಕವಿ ಇತರೆ ಕವಿವರ್ಯರನ್ನು ಮಂತ್ರಿಮಂಡಲದ ಸದಸ್ಯರನ್ನಾಗಿ ಗುರುತಿಸಿ ಅಖಂಡ ಕರ್ನಾಟಕ’ದ ಚಿತ್ರಣವನ್ನು ಪ್ರತಿಬಿಂಬಿಸುವದುಂಟು.

ಹಲವು ವೈರುಧ್ಯತೆಗಳ ನಡುವೆಯೂ ನಾಡು ೧೯೫೬ರ ನವೆಂಬರ್ ೧ ರಂದು ಒಂದುಗೂಡುತ್ತದೆ. ಆಗ ಕವಿ ಕುವೆಂಪು “ಭಾರತ ಮಾತೆ’ಯು ಕಂಡ ಕನಸು ನನಸಾದುದರ ಬಗ್ಗೆ ಹೆಮ್ಮೆಯಿಂದ ಮಗಳನ್ನು (‘ಕನ್ನಡಮ್ಮ’ನನ್ನು) ಬಂದು ಹರಸಲು ಕೇಳಿಕೊಳ್ಳುತ್ತಾರೆ. ಹೊಸದಾಗಿ ರೂಪತಳೆದ ರಾಜ್ಯಕ್ಕೆ ಸಾಂಸ್ಕೃತಿಕವಾಗಿ ದತ್ತವಾಗಿದ್ದ ‘ಕರ್ನಾಟಕ’ ಎಂಬ ಹೆಸರನ್ನಿಡಬೇಕಿತ್ತು. ಆದರೆ ರಾಜಕಾರಣಿಗಳ ಸ್ವಾರ್ಥ ಲಾಲಸೆಗಳಿಂದ ನಾಡು ‘ವಿಶಾಲ ಮೈಸೂರು’ ಎಂದು ಕರೆಸಿಕೊಂಡಿತು. ಈ ಬಗೆಗಿನ ಅಸಮಾಧಾನಗಳು ಕವಿ – ಸಾಹಿತಿಗಳಲ್ಲಿ, ಮೈಸೂರೇತರ ಕನ್ನಡಿಗರಲ್ಲಿ ೧೯೭೩ರವರೆಗೂ ಹಾಗೆಯೇ ಉಳಿದವು. ರಾಜಕಾರಣಿಗಳಲ್ಲಿ ಈ ಕುರಿತು ಹೆಚ್ಚು ಅಸಮಾಧಾನಪಟ್ಟುಕೊಂಡವರು ದೊಡ್ಡ ಮೇಟಿ ಅಂದಾನಪ್ಪ ಅವರು ನಾಡಿಗೆ ‘ಕರ್ನಾಟಕ’ವೆಂದು ನಾಮಕರಣ ಮಾಡುವವರೆಗೂ ರಾಜಕೀಯ ವಲಯದಲ್ಲಿ ಮಹತ್ತ್ವದ ಪ್ರಯತ್ನಗಳನ್ನು ಮಾಡಿದವರು. ಅಲ್ಲದೆ ಸಾಹಿತಿ – ಕಲಾವಿದರ ಮೂಲಕ ನಾಡಿನ ನಾಮಕರಣದ ಬಗೆಗೆ ಇನ್ನಷ್ಟು ಕ್ರಿಯಾಶೀಲರಾಗುವಂತೆ ಕನ್ನಡಿಗರನ್ನು ಎಚ್ಚರಿಸಿದರು. ಸ್ವತಃ ತಾವೇ ಬರೆದ ‘ಕರ್ಣಾಟಕ ಮಹಿಮ್ಮಃಸ್ತೋತ್ರ’ವು (೧೯೫೩) ‘ಕನ್ನಡಮ್ಮ’ನ ರೂಪಕ – ಪ್ರತೀಕಗಳ ಹಿನ್ನೆಲೆಯಲ್ಲಿ ಮಹತ್ತ್ವದ ಕೃತಿ.

ಅಂದಾನಪ್ಪ ಅವರು ತಾಯಿ ‘ಭುವನೇಶ್ವರಿ’ಯ ಹಲವು ಬಗೆಯ ರೂಪಕಗಳನ್ನು ಕುರಿತು ಇಲ್ಲಿ ಚಿಂತನೆ ನಡೆಸಿದ್ದಾರೆ. ೧೯೭೩ರಲ್ಲಿ ನಾಡು ‘ಕರ್ನಾಟಕ’ ಎಂದು ಕರೆಸಿಕೊಳ್ಳುವುದರ ಮೂಲಕ ‘ಕನ್ನಡಮ್ಮ’ನಿಗೆ ತೃಪ್ತಿ ಆಯಿತೆಂಬ ಅನೇಕೆ ಕವಿತೆಗಳು ಆಧುನಿಕ ಕನ್ನಡ ಕಾವ್ಯದಲ್ಲಿ ರಚಿತವಾದವು. ಆದರೆ ಈ ವೇಳೆಗಾಗಲೆ ‘ಕರ್ನಾಟಕ’ದ ಹೆಸರಿಗೆ ಹಾತೊರೆದು ಚಿಂತಿಸಿದ ಹಲವು ಹಿರಿಯರು ಇಲ್ಲವಾಗಿದ್ದರು. ಅವರಲ್ಲಿ ಆಲೂರು ವೆಂಕಟರಾವ್, ಅಂದಾನಪ್ಪ ದೊಡ್ಡ ಮೇಟಿ ಮೊದಲಾದವರು ಪ್ರಮುಖರು.