ಬ್ರಿಟಶರ ‘ಒಡೆದು ಆಳುವ ನೀತಿ’ಯಿಂದಾಗಿ ಭಾರತೀಯರು ಹಲವು ಬಗೆಯ ಸ್ಥಿತ್ಯಂತರಗಳಿಗೆ ಒಳಗಾಗಬೇಕಾಯಿತು. ಯಾವುದೇ ತಾತ್ವಿಕ ತಳಹದಿ ಇಲ್ಲದೆ ಪ್ರಾದೇಶಿಕ ಸಂಸ್ಕೃತಿಗಳನ್ನು ಛಿದ್ರಗೊಳಿಸಿದ ಹೆಗ್ಗಳಿಕೆ ಅವರದು. ಇಲ್ಲಿನ ವಿಭಿನ್ನತೆಗಳೂ ವಸಾಹತು ಸರದಾರರಿಗೆ ವರವಾಗಿ ಪರಿಣಮಿಸಿದ್ದವು. ಆದ್ದರಿಂದಲೆ ಇಲ್ಲಿನ ವಿಭಿನ್ನತೆಗಳು ವಸಾಹತು ಸರದಾರರಿಗೆ ವರವಾಗಿ ಪರಿಣಮಿಸಿದ್ದವು. ಆದ್ದರಿಂದಲೆ ಇಲಲಿನ ಭಾಷೆ, ಧರ್ಮ, ಜನಾಂಗ, ಸಮಾಜ, ಸಂಸ್ಕೃತಿ, ಸಂಪತ್ತುಗಳೆಲ್ಲವೂ ಆಂಗ್ಲರ ಅನುಕೂಲಕ್ಕೆ ಸಹಕಾರಿಯಾಗಿದ್ದು. ವ್ಯಾಪಾರಿ ದೃಷ್ಟಿ ಬದಲಾದ ಹಾಗೆ ಇಲ್ಲಿನ ಸಾಂಸ್ಕೃತಿಕ ವಿಚಾರಗಳನ್ನು ಅರಿತುಕೊಳ್ಳುತ್ತಾ ಹೋದರು. ಹೀಗಾಗಿ ಕ್ರಮೇಣ ಹಿಡಿತ ಸಾಧಿಸುವುದರ ಜೊತೆಗೆ ಎಲ್ಲ ಬಗೆಯ ಒಂದು ಗೂಡುವಿಕೆಯ ಸಂಗತಿಗಳನ್ನು ಸಹ ಛಿದ್ರಗೊಳಿಸಿದರು. ಈ ದಿಸೆಯಲ್ಲಿ ಹುಟ್ಟಿಕೊಂಡದ್ದೇ ‘ವಂಗಭಂಗ’ದ ಘಟನೆ. ೧೯೦೫ರ ಈ ಘಟನೆ ಸ್ಥಳೀಯರನ್ನು ಕೆರಳಿಸದೆ ಬಿಡಲಿಲ್ಲ. ಬಂಗಾಳದ ವಿಭಜನೆಯಂತೆಯೆ ಪ್ರಾದೇಶಿಕವಾಗಿ ವಿಭಿನ್ನ ಭಾಷಿಕರನ್ನು ಒಡೆಯಲಾಯಿತು. ಒಂದೇ ಭಾಷೆಯನ್ನು ಆಡುವ ಜನ ಮತ್ತೆ ಒಂದುಗೂಡಲು ಹಲವು ಬಗೆಯ ಪ್ರಯತ್ನಗಳನ್ನು ಮಾಡಬೇಕಾಯಿತು. ರಾಜಕೀಯವಾದ ಇಂಥ ಆಶಯಗಳಿಗೆ ಆಯಾ ಸೃಷ್ಟಿಶೀಲ ಜಗತ್ತು ಸರಿಯಾದ ತಾತ್ವಿಕ ತಳಹದಿಯನ್ನು ನಿರ್ಮಿಸಿಕೊಡುವ ಜರೂರು ಕಾಣಿಸಿಕೊಂಡಿತು. ಪ್ರಾದೇಶಿಕವಾದ ವೈಪರೀತ್ಯಗಳು ಯಾವುದೇ ಕಾರಣಕ್ಕೂ ದೇಶದ ಸಮಗ್ರ ಒಗ್ಗಟ್ಟನ್ನು, ಸ್ವಾತಂತ್ರ್ಯವನ್ನು ಒಡೆಯದ ರೀತಿಯಲ್ಲಿ ಈ ಭೂಮಿಕೆಯನ್ನು ಸಿದ್ಧಪಡಿಸಬೇಕಾದ ದೊಡ್ಡ ಸವಾಲು ಅಂದಿನ ಸೃಷ್ಟಿಶೀಲರದು. ಏಕೆಂದರೆ ದೇಶದ ಸ್ವಾತಂತ್ರ್ಯ ಹಾಗೂ ಪ್ರಾಂತೀಯವಾದ ಆಶಯಗಳ ಸಾಕಾರತೆಗಳೆರಡೂ ಒಟ್ಟೊಟ್ಟಿಗೆ ಸಾಗಬೇಕಾದ ಅನಿವಾರ್ಯ ಸ್ಥಿತಿ ಅಂದಿನದು. ಇದನ್ನು ಇತರೆ ಭಾಷಿಕರಂತೆ ಕನ್ನಡದ ಸೃಷ್ಟಿಶೀಲ ಜಗತ್ತು ಸಹ ಆಗುಮಾಡಿಸಿದ್ದು ಬಹಳ ಮಹತ್ತ್ವದ್ದು.

ವಸಾಹತುಶಾಹಿ ದಬ್ಬಾಳಿಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಮನವರಿಕೆ ಮಾಡಿಕೊಡಲು ಹೇಗೆ ‘ತಾಯಿ’ಯ ರೂಪಕ ಬಳಕೆ ಆಯಿತೋ, ಅದೇ ರೀತಿಯಲ್ಲಿ ಪ್ರಾಂತೀಯ ಹಂತಗಳಲ್ಲೂ ಹೆಣ್ಣಿನ ರೂಪಕವೊಂದು ಸೃಷ್ಟಿ ಆಯಿತು. ಅದೇ ಮಗಳ ರೂಪಕ. ರಾಷ್ಟ್ರೀಯ ಮಟ್ಟದ ‘ಭಾರತ’ವು ಭಾರತಮಾತೆ, ಜನನಿ, ಭಾರತಿ, ಮಾತೃಭೂಮಿ, ಭಾರತಿದೇವಿ, ಭಾರತಲಕ್ಷ್ಮಿ ಮೊದಲಾದ ಪ್ರತಿಮೆಗಳಲ್ಲಿ ಚಾಲ್ತಿಯಲ್ಲಿ ಇತ್ತು. ಆದರೆ ಪ್ರಾದೇಶಿಕವಾದ ವಿಭಿನ್ನ ಭಾಷಿಕ ನಾಡುಗಳನ್ನು ಸೂಕ್ತ ಪ್ರತಿಮೆ ಅಥವಾ ರೂಪಕಗಳ ಮೂಲಕ ಅನಾವರಣಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ‘ಭಾರತ ಮಾತೆ’ಗೆ ಧಕ್ಕೆ ತರುವಂತೆ ಪ್ರಯೋಗ ಆಗಬಾರದಾಗಿತ್ತು. ಈ ದಿಸೆಯಲ್ಲಿ ಕನ್ನಡದ ಸಂದರ್ಭದಲ್ಲಿ ‘ಕನ್ನಡಮ್ಮ’ ನನ್ನು ತನುಜಾತೆ, ಹಿರಿಮಗಳು, ಮಗಳು, ಪೆರ್ಮಗಳ್, ಪುತ್ರಿ ಸೋದರಿ ಮೊದಲಾದ ರೂಪಕಗಳಲ್ಲಿ ಅಳವಡಿಸಿ ಕೊಂಡದ್ದು ಗಮನಾರ್ಹ. ‘ಭಾರತ’ ಮತ್ತು ‘ಕರ್ನಾಟಕ’ಗಳು ‘ತಾಯಿ – ಮಗಳ’ ಹೊಕ್ಕಳ ಸಂಬಂಧವನ್ನು ಬೆಸೆಯುವಂತೆ ಮಾಡಿದ್ದವು. ತಾಯಿಯ ಒಳಿತಿನೊಂದಿಗೆ ಮಗಳ ಒಳಿತು ಹಾಸುಹೊಕ್ಕಾಗಿರುವುದುರ ಬಗ್ಗೆ ಅಂದಿನ ನವೋದಯದ ಸಂದರ್ಭ ಮನವರಿಕೆ ಮಾಡಿ ಕೊಟ್ಟಿತು. ಈ ಮಾತು ಭಾರತದ ಇತರೆ ಭಾಷಿಕ ಪ್ರಾಂತ್ಯಗಳಿಗೂ ಅನ್ವಯವಾಗುವಂಥದ್ದು. ‘ಹೆಣ್ಣು ಸಂಕಥನ’ದಲ್ಲಿಯ ತಾಯಿ – ಮಗಳ ಚಹರೆಗಳನ್ನು ಅನಾವರಣಗೊಳಿಸಿದ ಆಧುನಿಕ ಕನ್ನಡ ಕಾವ್ಯ ಆ ಮೂಲಕ ರಾಷ್ಟ್ರೀಯತೆಯ ಅರಿವನ್ನು ಮೂಡಿಸಲು ಯತ್ನಿಸಿದ್ದು ಗಮನಾರ್ಹ.

ಹೆಣ್ಣು ಸಂಕಥನದಲ್ಲಿ ಪ್ರಾಂತೀಯ ನೆಲೆಯ ಮಗಳಿಗೂ ಸಹ ‘ರೌದ್ರರೂಪಿ’ ದರ್ಶನವನ್ನು ಮಾಡಿಸಿದ ಉದಾಹರಣೆಗಳು ಕನ್ನಡ ಕಾವ್ಯದಲ್ಲಿವೆ. ಈ ದರ್ಶನ ಕೇವಲ ‘ಮಾತೆ’ಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ‘ಮಗಳ’ಲ್ಲೂ ಕ್ಷಾತ್ರತೇಜಸ್ಸಿನ, ವೀರತ್ವದ ಕೆಚ್ಚಿನ ಪ್ರತೀಕಗಳನ್ನು ಅಳವಡಿಸಲಾಯಿತು. ಅಂದರೆ ಆಕೆಗೆ ‘ದೇವಿ’, ‘ಶಕ್ತಿ’ಗಳನ್ನು ಸಂಕೇತಿಸಿ ರಕ್ಷಿಸುವ ಹೊಣೆಗಾರಿಕೆಯನ್ನು ನೀಡಿದ್ದು ವಿಶೇಷವಾದುದು. ಕನ್ನಡದಲ್ಲಿ ಮಾರಿ, ಚಂಡಿ, ಕಾಳಿ, ಚಾಮುಂಡಿ, ಶಕ್ತಿ, ಶೂರರ ರಾಣಿ, ಕ್ರಾಂತಿಕಾಳಿ, ವೀರರಸ ವಾಣಿ, ದೇವಿ ಮೊದಲಾದ ಪ್ರತೀಕಗಳ ಬಳಕೆ ಆಗಿರುವುದು ಈ ದಿಸೆಯಲ್ಲಿಯೆ. ಇಲ್ಲಿ ನರಬಲಿ, ತ್ಯಾಗ, ಅರ್ಪಣೆ, ರಕ್ತದ ಓಕುಳಿಯ ವೈಚಾರಿಕತೆಯೆ ಪ್ರಧಾನ. ಈ ವೈಚಾರಿಕತೆಗೆ ಆ ಹೊತ್ತಿನ ಬಂಗಾಳಿ, ಮರಾಠಿ ಚಿಂತನೆಗಳೂ ಪ್ರೇರಣೆ ಆಗಿರುವ ಸಾಧ್ಯತೆಗಳು ಇವೆ. ಏಕೆಂದರೆ ಗೋವು, ಶಿವಾಜಿ, ಗಣೇಶ, ಅಂಬಾ ಭವಾನಿ, ಕಾಳಿ, ಮೊದಲಾದ ಧರ್ಮ, ಪುರಾಣ, ಚರಿತ್ರೆಯಪರಿಕರಗಳೆನಮ್ಮಲ್ಲಿಯೂಪ್ರಯೋಗಆಗಿರುವುದು. ವಿದ್ಯಾರಣ್ಯ, ವಿಜಯನಗರ, ಹಂಪಿ, ಸಾಯಣ, ಕ್ರಾಂತಿಕಾಳಿ, ಚಂಡಿ, ಚಾಮುಂಡಿ ಮೊದಲಾದ ಸಂಕೇತಗಳು ಕ್ಷಾತ್ರತೇಜಸ್ಸಿನಿಂದಲೇ ಕನ್ನಡ ಕಾವ್ಯದಲ್ಲಿ ಹೊರಹೊಮ್ಮಿವೆ. ಉಗ್ರ ರೂಪದ ಹೆಣ್ಣಿನ ಚಹರೆಗಳನ್ನು ನಾಡಿಗೂ ಅಳವಡಿಸಿರುವ ಈ ಪ್ರಯೋಗ ಮಹತ್ತ್ವದು. ಏಕೆಂದರೆ ‘ನಾಡು’ ಎಂಬ ನಪುಂಸಕಲಿಂಗಕ್ಕೆ ಹೆಣ್ಣನ್ನಷ್ಟೇ (ಸ್ತೀಲಿಂಗವನ್ನಷ್ಟೇ) ಅಳವಡಿಸದೆ ಅದಕ್ಕೆ ವಿಶೇಷವಾದ ‘ವೀರತ್ವ’ದ ಹೆಣ್ಣಿನ ಚಹರೆಯನ್ನು ಅಳವಡಿಸಲಾಗಿದೆ. ಮಮತೆ, ಕಾರುಣ್ಯದ ಜೊತೆಗೆ ಉಗ್ರಸ್ವರೂಪವು ಸಹ ಬೆಸೆದುಕೊಂಡಿರುವುದನ್ನು ಅಭಿವ್ಯಕ್ತಿಸಲಾಗಿದೆ. ಪೋಷಣೆ, ಸಂತೈಕೆಗಳಿಗಷ್ಟೇ ಹೆಣ್ಣು ಸಂಕಥನವನ್ನು ಬಳಸದೆ ಆಕೆಯನ್ನು ವಿನಾಶ, ಅಂತ್ಯದ ಸಂಕೇತವಾಗಿಯೂ ಬಳಸಿ ಕೊಂಡಿರುವುದನ್ನು ಗಮನಿಸಬಹುದು. ಅಂದಿನ ಪರಕೀಯ ಕೆಂಪು ಸರದಾರರನ್ನು ಅಭಿವ್ಯಕ್ತಿಸಲು ಇಂಥ ಪ್ರಯೋಗಗಳನ್ನು ಎಲ್ಲ ‘ನಾಡು’ಗಳಲ್ಲೂ ಬಳಸಿಕೊಳ್ಳಲಾಗಿದೆ. ವಸಾಹತುಶಾಹಿ ಆಡಳಿತ ವೈಖರಿಗೆ ಇಂಥ ಅಭಿವ್ಯಕ್ತಿಗಳು ಹೆಚ್ಚಿನ ಬೆಲೆ ತರುವಂತೆ ಮಾಡಿದ್ದು ಕಡಿಮೆ ಸಂಗತಿಯೇನಲ್ಲ.

ಆಧುನಿಕ ಕನ್ನಡ ಕಾವ್ಯದಲ್ಲಿ ಭೂಮಿ – ಭಾರತ – ಕರ್ನಾಟಕಗಳಿಗೆ ಲಕ್ಷ್ಮಿ – ಮಾತೆ -ಮಗಳ ರೂಪಕಗಳು ಪ್ರಯೋಗವಾದಂತೆ ಇನ್ನೂ ಹಲವು ಬಗೆಯ ರೂಪಕ – ಪ್ರತೀಕಗಳನ್ನೂ ಗಮನಿಸಬಹುದು. ಶಾಂತಕವಿಗಳ ‘ಭುವನೇಶ್ವರಿ’, ‘ಕರ್ನಾಟಕದೇವಿ’ಗಳ ದರ್ಶನದಿಂದ ಹಿಡಿದು ಕನ್ನಡ – ಕರ್ನಾಟಕ (ಕನ್ನಡಮ್ಮನ) ಪ್ರತೀಕಗಳನ್ನು ಪ್ರಯೋಗ ಮಾಡಿದ್ದಾರೆ. ಅವರುಗಳಲ್ಲಿ ಬಿ.ಎಂ.ಶ್ರೀಕಂಠಯ್ಯ, ಗೋವಿಂದ ಪೈ, ತೀ.ನಂ. ಶ್ರೀಕಂಠಯ್ಯ, ಎಂ.ಎನ್.ಕಾಮತ್, ಭೀಮಸೇನ ರಾವ್, ಪಂಜೆಮಂಗೇಶ ರಾವ್, ಬೇಂದ್ರೆ, ಕುವೆಂಪು ಮೊದಲಾದವರು ಪ್ರಮುಖರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರೆಲ್ಲ ಅಂದು ತುಂಡಾಗಿದ್ದ ಕನ್ನಡದ ವಿವಿಧ ಭೂಪ್ರದೇಶಗಳಿಗೆ ಸೇರಿದವರು. ಹೀಗಾಗಿ ತಾವು ಸ್ಥಳೀಯ ಕನ್ನಡೇತರ ಆಡಳಿತಗಳಿಗೆ ತಕ್ಕಂತೆ ಕಾವ್ಯ ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ ಇವರೆಲ್ಲರ ಆಶಯ ದೇಶದ ಸ್ವಾತಂತ್ರ್ಯ, ನಾಡಿನ ಏಕೀಕರಣವೇ ಆಗಿತ್ತು. ಈ ದಿಸೆಯಲ್ಲಿ ಸ್ಥಳೀಯ ಸಾಂಸ್ಕೃತಿಕ ವಿಶೇಷತೆಗಳಿಗೆ ತಕ್ಕಂತೆ ನಾಡು – ನುಡಿಗಳಿಗೆ ಸ್ಪಂದಿಸಿರುವುದು ಕಂಡುಬರುತ್ತದೆ. ಹೀಗಾಗಿ ಆಯಾ ಸಂದರ್ಭ, ಸ್ಥಳ, ಘಟನೆಗಳಿಗೆ ಅನುಗುಣವಾಗಿ ಹಲವು ಬಗೆಯ ರೂಪಕ, ಪ್ರತಿಮೆ, ಸಂಕೇತ, ಪ್ರತೀಕಗಳನ್ನು ನಾಡಿಗೆ ಜೋಡಿಸಿದರು. ಅವುಗಳಲ್ಲಿ ಕನ್ನಡ ತಾಯಿ, ಕನ್ನಡಿಗರ ಮಾತೆ (ಎಂ. ಗೋವಿಂದ ಪೈ), ನಾಡರಾಣಿ ಭಾಷಾದೇವಿ (ಹ.ಗೋ.ಕಟ್ಟಿ), ಮಾದೇವಿ, ಮುತ್ತೈದೆ, ಕನ್ನಡಾಂಬೆ, ಪೆತ್ತೆನ್ನತಾಯಿ (ಬೆನಗಲ್‌ರಾವ್), ರಾಜೇಶ್ವರಿ, ಜನನಿ, ಕನ್ನಡಿಗರಧಿ ದೇವಿ, ಸ್ವೇತಿಹಾಸ ನೀರಾಜನೆ ರಾಣಿ, ಕನ್ನಡಿತಿ, ಬನಶಂಕರಿ, ಮಹಾಲಕ್ಷ್ಮಿ, ಚಾಮುಂಡಿ ದೇವಿ, ಮಾಹೇಶ್ವರಿ, ಜನಶಂಕರಿ, ಶಾರದೆ, ಆದಿಶಕ್ತಿ, ಶ್ರೀಕರೆ, ಶುಭಕರೆ, ಹೆತ್ತತಾಯಿ, ಕನ್ನಡಮ್ಮಮೊದಲಾದುವುಪ್ರಧಾನ ಅನ್ನಿಸುತ್ತವೆ. ರಾಜ್ಯವು ಏಕೀಕರಣ ಆಗುವ ಸನ್ನಿವೇಶದಲ್ಲಿ ಚಂದ್ರಶೇಖರ ಕಂಬಾರರು ನಾಡನ್ನು ‘ಅಮ್ಮ’ (ಕನ್ನಡಮ್ಮ), ‘ನಲ್ದಾಯೆ’ (ನೆಲದ ಆಯಿ – ಭೂ ತಾಯಿ) ಎಂದು ಕೆರೆದದ್ದು ವಿಶೇಷವಾಗಿದೆ. ಇವುಗಳಲ್ಲದೆ ಸಿರಿವೆಣ್ಣು, ಇನಿಯೆ, ಜೊತೆಗಾತಿ, ರಾಜೇಶ್ವರಿ (ಬಿ.ಎಂ.ಶ್ರೀ) ಮೊದಲಾದ ಪ್ರಯೋಗಗಳನ್ನು ಗಮನಿಸಬಹುದು. ತುಳು ಪ್ರದೇಶ, ಕೊಡಗುಗಳನ್ನು ಪ್ರತಿನಿಧಿಸುವ ಉಪಭಾಷಿಕ ಪ್ರತೀಕಗಳಾಗಿ ತುಳುನಾಡ ರಾಣಿ (ಎಂ.ಎನ್. ಕಾಮತ್), ಕಾವೇರಿ ದೇವಿ ಎಂಬಂಥ ಪ್ರಯೋಗಗಳನ್ನು ಉದಾಹರಿಸಬಹುದು.

ಆಧುನಿಕ ಕನ್ನಡ ಕಾವ್ಯದ ರೂಪಕ – ಪ್ರತೀಕಗಳು ಕೇವಲ ಪ್ರದೇಶ, ಭಾಷೆ, ಜನಾಂಗ, ಸಮಾಜ, ರಾಜಕಾರಣ, ಆರ್ಥಿಕತೆಯ ಆಶಯಗಳಿಗೆ ಮಾತ್ರ ಸೀಮಿತವಾದುವುಗಳಲ್ಲ. ಬದಲಾಗಿ ಇವೆಲ್ಲವುಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಭಿತ್ತಿಯನ್ನು ಅನಾವರಣಗೊಳಿಸಿವೆ. ಅಂತೆಯೆ ಕನ್ನಡ ಸೃಷ್ಟಿಶೀಲ ಜಗತ್ತು ಕೇವಲ ತನ್ನ ಸಮಕಾಲೀನ ರಾಜಕಾರಣದ ದಾಸ್ಯದ ಸಂಕೋಲೆಗಳಿಂದ ಹೊರಬರುವ ಆಶಯಕ್ಕೂ ಸೀಮಿತ ಆಗಿಲ್ಲ. ಕಾವ್ಯ ಪ್ರಯೋಗದಲ್ಲಿಯೂ ಹಿಂದಿನ ಎಲ್ಲ ಬಗೆಯ ಪ್ರಾಸ – ಶೈಲಿಗಳನ್ನು ಧಿಕ್ಕರಿಸಿದ್ದನ್ನು ಗಮನಿಸಬಹುದು. ಆದರೆ ಇವೆರಡು ಒಂದೇ ಕಾಲಘಟ್ಟದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆ. ಇಂಥ ಕೆಲವು ಅಂಶಗಳನ್ನು ಆಯಾ ಕಾಲಘಟ್ಟ, ಪ್ರದೇಶಗಳಿಗೆ ಸಂಬಂಧಸಿದಂತೆ ಪರಿಶೀಲಿಸುವ ಜರೂರು ಇದೆ. ಈ ನಿಟ್ಟಿನಲ್ಲಿ ಛಿದ್ರಗೊಂಡ ಅಂದಿನ ಕನ್ನಡ ಭೂಪ್ರದೇಶಗಳ ಕೆಲವು ಕವಿಗಳನ್ನು ಪ್ರಾತಿನಿಧಿಕವಾಗಿ ವಿಶ್ಲೇಷಿಸಬಹುದು. ಅಲ್ಲದೆ ಆ ಮೂಲಕ ‘ಕನ್ನಡಮ್ಮ’ನ ನಾಡು – ನುಡಿ ಪ್ರತೀಕಗಳನ್ನು ಅರಿಯಲು ಸಾಧ್ಯ.

. ಶಾಂತಕವಿಗಳು ಹಾಗೂಭುವನೇಶ್ವರಿ

ಆಧುನಿಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸುವುದಕ್ಕೆ ಮೊದಲು ಶಿಶುನಾಳ ಶರೀಫ ಹಾಗೂ ಶಾಂತಕವಿಗಳನ್ನು ಹಿನ್ನೆಲೆಯಾಗಿ ಪರಿಗಣಿಸಲೇಬೇಕಾಗುತ್ತದೆ. ಏಕೆಂದರೆ ಇವರಿಬ್ಬರೂ ವಸಾಹತುಶಾಹಿ ಕಾಲಘಟ್ಟದ ಅನುಭವ – ಅನುಭೂತಿಗಳಿಗೆ ಸ್ಪಂದಿಸಿದವರು. ಶರೀಫ ಸಾಹೇಬರು ಶಾಂತಕವಿಗಳಿಗಿಂತ ಹಿರಿಯರು. ಶರೀಫರು ೧೮೧೯ರಲ್ಲಿ ಹುಟ್ಟಿದರು. ಆದರೆ ಶಾಂತಕವಿಗಳು ಹುಟ್ಟಿದ್ದು ೧೮೫೬ರಲ್ಲಿ. ಶರೀಫರು ೧೮೯೧ರಲ್ಲಿ ಸಾವನ್ನಪ್ಪಿದ್ದಾಗ ಶಾಂತಕವಿ ಗಳಿಗೆ ೩೫ವರ್ಷ ವಯಸ್ಸಾಗಿತ್ತು ಈ ಅಂಶಗಳು ಅವರಿಬ್ಬರೂ ಸಮಕಾಲೀನರೆಂಬುದನ್ನು ಸಾಬೀತುಪಡಿಸುತ್ತವೆ. ಆದರೆ ಇವರು ಆಯ್ಕೆ ಮಾಡಿಕೊಂಡು ಕ್ಷೇತ್ರಗಳು ಮಾತ್ರ ಭಿನ್ನ. ಒಬ್ಬರು ಅಲವಿ ಬಯಲಿನಲ್ಲಿ ರಿವಾಯತ್ ಪದಗಳನ್ನು ಹಾಡಿ ಕುಣಿದರೆ, ಇನ್ನೊಬ್ಬರು ಕೀರ್ತನೆ, ನಾಟಕಗಳನ್ನು ಹಾಡಿ, ಆಡಿಕೊಂಡು ಅಡ್ಡಾಡಿದವರು. ಶರೀಫರು ಅನುಭಾವಿಗಳಾಗಿ ಗುರುತಿಸಿಕೊಂಡರೆ, ಶಾಂತಕವಿಗಳು ಕೀರ್ತನಕಾರರಾಗಿ ಗುರುತಿಸಿಕೊಂಡ್ದು ಉಂಟು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರಿಬ್ಬರೂ ಸಂವಹನಕ್ಕೆ ಬಳಿಸಿಕೊಂಡ ಭಾಷೆಯನ್ನು. ಅಂದರೆ ಸರಳವಾದ ಅಚ್ಛ ಕನ್ನಡದಲ್ಲಿ ಸಮಕಾಲೀನರನ್ನು ತೋಂಡಿ ನೆಲೆಯಲ್ಲಿ ಸ್ಪಂದಿಸಿ ಪ್ರಭಾವ ಬೀರಿದ ಸಂಗತಿ ಮಹತ್ತ್ವದ್ದು. ಉತ್ತರ ಕರ್ನಾಟಕದ ‘ಜವಾರಿ’ ವ್ಯಕ್ತಿತ್ವಗಳಾದ ಶರೀಫ – ಶಾಂತಕವಿಗಳಿಬ್ಬರೂ ಅಂದಿನ ಪರಕೀಯ ದಾಸ್ಯಕ್ಕೆ ಪ್ರತಿಕ್ರಿಯಿಸಿದ್ದು ಮಾತ್ರ ಒಂದೇ ದಿಸೆಯಲ್ಲಿ. ಆಧುನಿಕ ಶಿಕ್ಷಣ ತಂತ್ರಜ್ಞಾನಗಳ ತೀವ್ರತೆಯ ಭರಾಟೆಯ ಬಗೆಗೆ ಇವರಿಬ್ಬರಿಗೂ ಸಂಪೂರ್ಣ ಅರಿವು ಇತ್ತು. ಬ್ರಿಟಿಶರ ಆಗಮನ, ‘ಕಿರಿಸ್ತಾನ ಬಾದಶಹ’ರ ಆಳ್ವಿಕೆ, ‘ಸರಕಾರಿ ಸಾಲಿ’ಗಳು, ‘ದಯಾನಿಧಿ ಇನ್ಸ್‌ಸ್ಪೆಕ್ಟರ್‌’ಗಳು, ದವಾಖಾನೆಯ ಡಾಕ್ಟರರು, ಗಿರಣಿಯ ವಿಸ್ತಾರ, ವಿಕ್ಟೋರಿಯಾಳ ದರ್ಪ, ಪರಂಭಾಷೆ – ಸಂಸ್ಕೃತಿಗಳ ನಿರಾಕರಣೆ ಮೊದಲಾದ ಸಂಗಿಗಳು ಇವರಿಬ್ಬರ ಕಾವ್ಯದ ವಸ್ತುಗಳು. ಹೀಗಾಗಿ ಭಾರತದ ಪಾರತಂತ್ರದ ಅನುಭವ, ಹೊಸ ಕಾಲದ ಮುನ್ಸೂಚನೆಗಳನ್ನು ಬಹಳ ಆಪ್ತವಾಗಿ ಅವಲೋಕಿಸುವಂತೆ ಆಗಿತ್ತು.

೧೯ನೆಯ ಶತಮಾನದ ಪೂರ್ವಾರ್ಧಕ್ಕೆ ಬರುವ ವೇಳೆಗೆ ಕಂಪನಿ ಸರದಾರರ ಭರಾಟೆ, ಕನ್ನಡ ಪ್ರದೇಶಗಳ ವಿಚ್ಛಿದ್ರತೆ, ಮರಾಠಿ ಮೋಹಗಳಿಗೆ ಶರೀಫರಿಗಿಂತ ಶಾಂತಕವಿಗಳಿಗೇ ಹೆಚ್ಚು ಪ್ರತಿಕ್ರಿಯಿಸುವ ವಾತಾವರಣ ನಿರ್ಮಾಣ ಆಗಿತ್ತು. ಕನ್ನಡ ಭೂಪ್ರದೇಶಗಳು ಐದು ವಿಭಿನ್ನ ಆಡಳಿತ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದವು. ಮುಂಬಯಿ ಕರ್ನಾಟಕದ ಪರಿಸರಕ್ಕೆ ಸೇರಿದ್ದ ಶಾಂತಕವಿಗಳು ಸ್ಥಳೀಯ ಭಾಷಿಕ ಏರು – ಪೇರುಗಳನ್ನು ಸಹಿಸದಾದರು. ‘ಬಾಳ’, ‘ಬಾಳೂ ಮಾಸ್ತರ’ರೆಂದೇ ಖ್ಯಾತಿ ಪಡೆದ ಸಕ್ಕರಿ ಬಾಳಾಚಾರ್ಯರು ಶಾಲ ಮಾಸ್ತರರಾಗಿ ಊರೂರು ಅಲೆದವರು. ರಾಣಿಬೆನ್ನೂರು, ಗದಗ, ಅಗಡಿ, ಹೊಂಬಳ, ಕೋಳಿವಾಡ, ಧಾರವಾಡ ಹೀಗೆ ವರ್ಗವಾಗಿ ಹೋದ ಕಡೆಗಳೆಲ್ಲ ಕನ್ನಡದ ಛಾಪನ್ನು ಮೂಡಿಸಲು ಮುಂದಾಗಿದ್ದು ಗಮನಾರ್ಹ. ಮುಂಬಯಿ ಆಡಳಿತದ ಪ್ರಭಾವ, ಮರಾಠಿ ಭಾಷಿಕರ ಒತ್ತಡಗಳಿಂದಾಗಿ ಅಂದು ಇಡೀ ಶಿಕ್ಷಣ ಇಲಾಖೆಯೆ ಮರಾಠಿಮಯವಾಗಿತ್ತು. ಇದನ್ನು ಕನ್ನಡಿಗರು ಸಹ ಅಂತರ್ಗತ ಮಾಡಿಕೊಂಡಿದ್ದುದು ಶಾಂತಕವಿಗಳಿಗೆ ದುಃಖದ ವಿಚಾರವಾಗಿ ಪರಣಮಿಸಿತು. ಆದ್ದರಿಂದಲೇ ಅವರು ನಾಡು – ನುಡಿ ಚಿಂತನೆಯ ಕಡೆಗೆ ತಮ್ಮನ್ನು ಹೊರಳಿಸಿಕೊಂಡದ್ದು. ಇವರಿಗೆ ಇಂಗ್ಲಿಶ್ ಹಾಗೂ ಇನ್ನಿತರ ಭಾಷೆಗಳ ಪರಿಚಯ ಇರಲಿಲ್ಲ.

ಧಾರವಾಡದ ಸಾತೇನಗಳ್ಳಿಯ ‘ಶಾಂತೇಶ’ನಿಗೆ ನಡೆದುಕೊಳ್ಳುತ್ತಿದ್ದ ಬಾಳಾಚಾರ್ಯರು ‘ಶಾಂತಕವಿ’ಗಳಾಗಿ ಗುರುತಿಸಿಕೊಂಡಿದ್ದರು. ಕನ್ನಡದ ಮೇಲಿನ ಪ್ರೀತಿ – ಕಾಳಜಿಗಳಿಂದಾಗಿ ತಮ್ಮ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಇವರು ಲೆಕ್ಕವಿಲ್ಲದಷ್ಟು ಭಾರಿ ವರ್ಗ ಆಗಿದ್ದುದು ಉಂಟು. ಆಂಗ್ಲರು ತಪ್ಪಾಗಿ ಗ್ರಹಿಸಿದ್ದ ಈ ಭಾಗದ ಭಾಷೆ ‘ಮರಾಠಿ’ ಆಗಿರದೆ ‘ಕನ್ನಡ’ ಎಂಬುದನ್ನು ಬಾಳಶಾಸ್ತ್ರಿ ಝಂಬೇಕರ್ ಅವರ ವರದಿ ರುಜುವಾತುಪಡಿಸಿತ್ತು. ಅಲ್ಲದೆ ಇದು ‘ದಕ್ಷಿಣ ಮಹಾರಾಷ್ಟ್ರ’ವಾಗಿರದೆ ಅಚ್ಛ ‘ಕನ್ನಡದ ಪ್ರದೇಶ’ ವೆಂಬುದನ್ನು ಸಹ ಸಾಬೀತುಪಡಿಸಲಾಯಿತು. ಇಷ್ಟಾದರೂ ನಿರಭಿಮಾನಿ ಕನ್ನಡಿಗರು ನಾಡು – ನುಡಿಗಳಿಗೆ ಸ್ಪಂದಿಸಿರಲಿಲ್ಲ. ಅಲ್ಲದೆ ಶಾಂತಕವಿಗಳಿಗೆ ಬಡತನದ ನಡುವೆ ಸಾಹಿತ್ಯ, ಕೀರ್ತನೆ, ನಡಕ ಇತ್ಯಾದಿಗಳ ಮೂಲಕ ಕನ್ನಡಿಗರನ್ನು ಅಭಿಮಾನಿಗಳನ್ನಾಗಿಸುವ ಜವಾಬ್ದಾರಿ ಸುಲಭದ ಮಾತಾಗಿರಲಿಲ್ಲ. ರಸೆಲ್, ಕಿಟ್ಟೆಲ್, ಮೋಗ್ಲಿಂಗ್ ಮೊದಲಾದ ಆಂಗ್ಲ ಅಧಿಕಾರಿಗಳ ಕನ್ನಡದ ಕಾಳಜಿಗಳು ಹುರುಪನ್ನು ತಂದಿದ್ದವಾದರೂ ಕನ್ನಡಿಗರ ಪ್ರತಿಕ್ರಿಯೆ ಶಾಂತಕವಿಗಳಿಗೆ ನಿರಾಶೆ ಯನ್ನು ಉಂಟುಮಾಡಿತ್ತು. ನಾಡು – ನುಡಿಗಳ ಬಗೆಗೆ ಕಾಳಜಿಯನ್ನು ಹೊಂದಿದ್ದ ಕನ್ನಡದ ಅಧಿಕಾರಗಳೇ ಶಿಕ್ಷಣ ಇಲಾಖೆಗೆ ಬಂದರು. ಅವರುಗಳಲ್ಲಿ ಡೆಪ್ಯುಟಿ ಚನ್ನಬಸಪ್ಪ, ವೆಂಕಟ ರಂಗೋಕಟ್ಟಿ, ಹುಯಿಲಗೋಳ ಭುಜಂಗರಾವ್, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸ ರಾವ್, ದೊಂಡೋ ನರಸಿಂಹ ಮುಳಬಾಗಲ, ಗಂಗಾಧರ ಮಡಿವಾಳೇಶ್ವರ ತುರಮರಿ ಮೊದಲಾದವರು ಪ್ರಮುಖರು. ಇವರ ಅವಧಿಯಲ್ಲೂ ಶಾಂತಕವಿಗಳೀಗೆ ಅಂಥ ಅನುಕೂಲ ಗಳೇನೂ ಆಗಲಿಲ್ಲ. ಆದರೆ ಇವರಿಂದ ಕನ್ನಡದ ಕೆಲಸಗಳಿಗೆ ಆರಂಭಿಕ ಚಾಲನೆ ದೊರೆಯಿತಷ್ಟೇ. ‘ಕನ್ನಡ’ವೆಂದರೆ ಅಪಮಾನ ಎನ್ನುವ ಅಂದಿನ ವಾತಾವರಣದಲ್ಲಿ ಶಾಂತ ಕವಿಗಳು ೬೩ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದು ಸರಳವಾದುದಲ್ಲ. ತಮ್ಮ ಇವರಿಗೆ ಅಂಥ ತೃಪ್ತಿಯೇನೂ ಇರಲಿಲ್ಲ. ಆದರೆ ತಮ್ಮ ಮುಪ್ಪಿನ ಅವಧಿಯಲ್ಲಿ (೧೯೧೫ರ ವೇಳೆಗೆ) ಆಳೂರ ವೆಂಕಟರಾವ್, ಕಡಪ ರಾಘವೇಂದ್ರರಾವ್, ಮುದವೀಡು ಕೃಷ್ಣರಾವ್ ಮೊದಲದ ತರುಣರು ನಾಡು – ನುಡಿಗೆ ಟೊಂಕಕಟ್ಟಿ ನಿಂತದ್ದು ಸಂತಸ ತಂದಿತ್ತು. ನರಗುಂದಕರ ರಾಮರಾಯರ ಸಂಪರ್ಕದಿಂದ ಈ ಯುವಕರನ್ನು ಹುರಿದುಂಬಿಸಿದ ಶಾಂತಕವಿಗಳು ಆಲೂರರನ್ನು ಆಪ್ತವಾಗಿ ಹಚ್ಚಿಕೊಂಡದ್ದು ಉಂಟು. ‘ಕರ್ನಾಟಕತ್ವ’ದ ಬಗಗೆಗೆ ಚಿಂತನೆ ನಡೆಸಿದ್ದ ಆಲೂರರ ‘ಕರ್ನಾಟಕ ಗತವೈಭವ’ದ ಕರಡುಪ್ರತಿಯನ್ನು ಶಾಂತಕವಿಗಳು ಪರಿಶೀಲಿಸಿದರು. ಇದೇ ಸನ್ನಿವೇಶದಲ್ಲಿ ಆಲೂರರು ತಾವು ೧೯೦೯ರಲ್ಲಿ ಪ್ರಕಟಿಸಿದ್ದ ‘ಶ್ರೀ ವಿದ್ಯಾರಣ್ಯ ಚರಿತೆ’ (‘ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯ’ ಎಂತಲೂ ಕರೆಯಲಾಗಿದೆ)ಯ ಪ್ರತಿಯನ್ನು ಸಹ ನೀಡಿದ್ದರು.

ಶ್ರೀ ವಿದ್ಯಾರಣ್ಯ ವಿಜಯ

ಮೇಲಿನ ಎರಡೂ ಕೃತಿಗಳು ಶಾಂತಕವಿಗಳನ್ನು ಮತ್ತೆ ನಾಡು – ನುಡಿಗಳ ಬಗೆಗೆ ಉತ್ಸಾಹ ತುಂಬಿಕೊಳ್ಳಲು ಸಹಕರಿಸಿದವು. ವಿದ್ಯಾರಣ್ಯರ ಬಗೆಗೆ, ಹಂಪಿಯ ಬಗೆಗೆ ಎಲ್ಲಿಲ್ಲದ ಅಭಿಮಾನವನ್ನು ತುಂಬಿಕೊಂಡರು. ಇದರ ಪರಿಣಾಮವೇ ಅವರು ರಚಿಸಿದ ‘ಶ್ರೀ ವಿದ್ಯಾರಣ್ಯ ವಿಜಯ’ ಕೃತಿ. ಇದು ಕೀರ್ತನ ಸ್ವರೂಪದಲ್ಲಿ ಪ್ರಕಟ ಆಗಲು ಆಲೂರರ ಒತ್ತಾಸೆಯೂ ಕಾರಣ. ಈ ಕೃತಿ ಕನ್ನಡಿಗರಿಗೆ ಇಂದಿಗೂ ಪ್ರಸ್ತುತವಾಗುವುದು ಶಾಂತಕವಿಗಳು ಬಳಸಿದ ಪ್ರತೀಕಗಳ ಹಿನ್ನೆಲೆಯಿಂದ. ೧೯೧೮ರಲ್ಲಿ ಪ್ರಕಟವಾದ ಈ ಕೃತಿ ಅದೇ ವರ್ಷ ಎರಡು ಮುದ್ರಣಗಳನ್ನು ಕಾಣುವುದರೊಂದಿಗೆ ಜನಮನ್ನಣೆ ಗಳಿಸಿತ್ತು. ಈ ಕೀರ್ತನೆಯನ್ನು ಸವತಃ ಸಾಂತಕವಿಗಳೇ ತಮ್ಮ ಇಳಿವಯಸ್ಸಿನಲ್ಲಿ ಪ್ರಯೋಗ ಮಾಡುವುದನ್ನು ತೋರಿಸಿಕೊಟ್ಟದ್ದು ಗಮನಿಸಬೇಕಾದ ಸಂಗತಿ. ಧಾರವಾಡ, ಗದಗ, ಹುಬ್ಬಳ್ಳಿ, ಬೆಟಗೇರಿ ಮೊದಲಾದ ಕಡೆಗಳಲ್ಲಿ ಈ ಕೀರ್ತನ ತೋಂಡಿ ರೂಪದಲ್ಲಿ ಹರಡುವುದರೊಂದಿಗೆ ಹೆಚ್ಚು ಜನಪ್ರಿಯವೂ ಆಯಿತು. ರಾಷ್ಟ್ರೀಯತ್ವ ಹಾಗೂ ಕರ್ನಾಟಕತ್ವಳ ನೆಲೆಯಲ್ಲಿ ಈ ಕೀರ್ತನೆ ನೀಡಿದ ರೂಪಕ – ಪ್ರತೀಕಗಳನ್ನು ಕುರಿತು ಪರಿಶೀಲಿಸುವ ಜರೂರು ಇದೆ. ಅಲ್ಲದೆ ಇದರಲ್ಲಿನ ಉಪಮೆ – ಉಪಮಾನಗಳು ಹುಟ್ಟು ಹಾಕಿದ ನಾಡು – ನುಡಿಗಳ ಬಗೆಗಿನ ಪ್ರತಿಮೆ, ಸಂಕೇತ, ರೂಪಕಗಳನ್ನು ವಿಶ್ಲೇಷಿಸಬೇಕಿದೆ. ಈ ದಿಸೆಯಲ್ಲಿ ‘ಕನ್ನಡಮ್ಮ’ನ ಅನಾವರಣ ಶಾಂತಕವಿಗಳಿಂದಲೇ ಆರಂಭಗೊಂಡದ್ದು ಎಂದರೂ ತಪ್ಪಾಗಲಾರದು.

‘ಶ್ರೀ ವಿದ್ಯಾರಣ್ಯ ವಿಜಯ’ವು ಮೂಲತಃ ಕನ್ನಡಿಗರಲ್ಲಿ ಕರ್ನಾಟಕದ ಬಗೆಗೆ ಅಭಿಮಾನವನ್ನು ಮೂಡಿಸಲಿಕ್ಕಾಗಿಯೇ ಹುಟ್ಟಿಕೊಂಡ ಕೃತಿ. ಇದರ ವಸ್ತು ವಿಷಯವು ಸಹ ಅದೇ. ೧೯೧೫ ರಿಂದ ೨೦ರವರೆಗಿನ ಅಂದಿನ ರಾಷ್ಟ್ರೀಯಮಟ್ಟದ ವಾತಾವರಣ ‘ಹಿಂದುತ್ವ’ದ ಅಭಿಮಾನಿ ನೆಲೆಗಳದ್ದು . ಆದರೆ ಈ ಹೊತ್ತಿನ ‘ಹಿಂದುತ್ವ’ದ ಸ್ವರೂಪದಲ್ಲ. ಬದಲಾಗಿ ನೆರೆಯ ಮಹಾರಾಷ್ಟ್ರದಲ್ಲಿನ ತಿಲಕ್ ಪ್ರಣೀತ ರಾಷ್ಟ್ರೀಯತೆಯ ಗತವೈಭವಗಳನ್ನು ಪುನರ್‌ಸೃಷ್ಟಿ ಮಾಡುವುದೇ ಆಗಿತ್ತು. ಅದರ ಪ್ರಭಾವ – ಪರಿಣಾಮಗಳಿಂದಾಗಿ ಕರ್ನಾಟಕದಲ್ಲೂ ಚರಿತ್ರೆ, ಗತವೈಭವಗಳನ್ನು ಕಂಡುಕೊಳ್ಳುವ ಪ್ರಯತ್ನಗಳಾದವು. ಈ ಚಾರಿತ್ರಿಕ ತುರ್ತಿನ ಸೃಷಟಿಗಳಲ್ಲಿ ‘ಶ್ರೀ ವಿದ್ಯಾರಣ್ಯ ವಿಜಯ’ವೂ ಒಂದು. ಆಧ್ಯಾತ್ಮಿಕವಾದ, ತಾತ್ತ್ವಿಕವಾದ ‘ಕನ್ನಡ – ಕರ್ನಾಟಕತ್ವ’ದ ಚಿಂತನೆಗಳ ಮುಖೇನ ಪರಕೀಯ ಸಂಸ್ಕೃತಿ ಚಿಂತನೆಗಳನ್ನು ಮುಖಾ – ಮುಖಿ ಆಗಿಸುವ ಹುನ್ನಾರಗಳು ಅಂದು ಎಲ್ಲೆಡೆ ಚಾಲ್ತಿಗೆ ಬರುತ್ತಿದ್ದವು. ಅಂದರೆ ಪಾಶ್ಚಾತ್ಯ ಬ್ರಿಟಿಶ್ ಸಂಸ್ಕೃತಿಗೆ ಸನಾತನ (ಹಿಂದೂ) ಸಂಸ್ಕೃತಿಯನ್ನು ಎದುರುಗೊಳ್ಳುವಂತೆ ಮಾಡುವುದು. ಈ ದಿಸೆಯಲ್ಲಿ ಅಂದು ತಿಲಕರ ‘ಕೇಸರಿ’ ಪತ್ರಿಕೆ ತೀವ್ರತರವಾದ ಪ್ರಭಾವ ಬೀರುತ್ತಿತ್ತು. ಅಲ್ಲದೆ ಮರಾಠಿಗರ ಗಣೇಶ, ಗೋವು, ಶಿವಾಜಿ, ಕೇಸರಿ ಸಂಕೇತಗಳು ಕನ್ನಡಿಗರನ್ನು ಪ್ರತಿಕ್ರಿಯಿಸುವಂತೆ ಮಾಡದೆ ಬಿಡಲಿಲ್ಲ. ಅದರ ಪರಿಣಾಮವೇ ಈ ಕೀರ್ತನೆ. ತಿಲಕ್ ಹಾಗೂ ಆಲೂರರು ವ್ಯಕ್ತಿಗೂ – ರಾಷ್ಟ್ರಕ್ಕೂ ಧರ್ಮ, ಚರಿತ್ರೆಗಳನ್ನು ಗಂಟು ಹಾಕುವಂತೆಯೆ ಶಾಂತಕವಿಗಳು ಸಹ ಪ್ರಯೋಗಗಳನ್ನು ಮಾಡಿದರು. ಆ ಮೂಲಕ ಕನ್ನಡಿಗರಲ್ಲಿ ರಾಷ್ಟ್ರೀಯತ್ವ – ಕರ್ನಾಟತ್ವಗಳನ್ನು ಪ್ರತಿಬಿಂಬಿಸುವುದು ಪ್ರಧಾನ ಆಗಿತ್ತು. ಶಾಂತಕವಿಗಳು ಸಹ ‘ವೀರತ್ವ – ಶೂರತ್ವ’ಗಳನ್ನು ಸಾರುವ ಬಲಿಷ್ಟ ಪ್ರಭುತ್ವದ ಧಾರೆಯನ್ನೇ ಆಯ್ಕೆ ಮಾಡಿಕೊಂಡು ಹಲವು ಪ್ರತೀಕಗಳನ್ನು ಹುಟ್ಟುಹಾಕಿದರು. ವಸಾಹತುಶಾಹಿ ಸಂದರ್ಭಕ್ಕೆ ಅನಿವಾರ್ಯ ಅನ್ನಿಸಿದ್ದ ಅಂದಿನ ಈ ಪ್ರತೀಕಗಳು ಇಂದು ಕೋಮುವಾದಿತನದ ಅಪಾಯಗಳಿಗೆ ಸಿಲುಕಿರುವುಗದನ್ನು ಗಮನಿಸಬಹುದು.

ಕನ್ನಡಿಗರಿಗೆ ಈ ಕೃತಿ ಮುಖ್ಯ ಅನ್ನಿಸುವುದು ಅದರಲ್ಲಿ ಬಳಕೆ ಆಗಿರುವ ಕೆಲವು ಸಂಕೇತ ಹಾಗೂ ಪ್ರತೀಕಗಳ ಹಿನ್ನೆಲೆಯಲ್ಲಿ. ಕನ್ನಡ ಶಾಂತಕವಿಗಳಿಗೆ ಸಲ್ಲುತ್ತದೆ. ಕರ್ನಾಟಕದ ಪ್ರತೀಕವಾಗಿ, ಕನ್ನಡಿಗರ ಅಧಿದೇವತೆಯಾಗಿ, ಶಾಂತಕವಿಗಳ ಇಷ್ಟದೇವತೆಯಾಗಿ ಈಕೆ ಕೀರ್ತನೆಯ ಮೊದಲ ಸಾಲುಗಳಿಂದಲೇ ಸ್ತುತಿಗೆ ಒಳಪಡುತ್ತಾಳೆ. ನವೋದಯ ಕಾಲಘಟ್ಟದ ಎಲ್ಲ ಬಗೆಯ ಆಶಯಗಳನ್ನು ಶಾಂತಕವಿಗಳು ಇಲ್ಲಿ ದುಡಿಸಿಕೊಂಡಿಲ್ಲ. ಆದರೆ ಅವುಗಳ ಪ್ರಾರಂಭಿಕ ಹಂತಗಳನ್ನು ಈ ಕೀರ್ತನಕಾವ್ಯದ ಮೂಲಕ ಗುರುತಿಸಲು ಸಾಧ್ಯ ಇದೆ. ಹೆಣ್ಣು ಸಂಕಥನದ ಪ್ರತೀಕವಾಗಿ ‘ಕನ್ನಡಮ್ಮ’ ನನ್ನು ನೋಡುವ ನೋಟ ಇವರಲ್ಲಿಯೂ ನೋಡ ಬಹುದು. ಅಲ್ಲದೆ ಈಕೆ ಮಾಹೇಶ್ವರಿ, ಕೃಪಾಕರೆ, ಶುಭಕರ ಶ್ರೀಕರೆಯಾಗಿ ಅಭಿವೃಕ್ತಿ ಗೊಂಡಿದ್ದಾಳೆ.

“ನಮ್ಮದೀ ಭರತ ಭೂಮಿ
ಹೆರವರು ನಂಬದಲೆ ಜಗದೀಶ್ವರಂ ತಾನೆ”

ಎಂಬ ಸಾಲುಗಳು ರಾಷ್ಟ್ರೀಯ ಪ್ರಜ್ಞೆಯ ಕುರುಹಾಗಿ ಮೂಡಿಬಂದಿವೆ. ರಾಷ್ಟ್ರೀಯ ಹೋರಾಟ ಹಾಗೂ ಕರ್ನಾಟಕದ ಏಕೀಕರಣದ ಆಶಯಗಳಿಗಾಗಿಯೆ ಈ ಕೀರ್ಥನೆಯನ್ನು ರಚಿಸಿದ್ದಾರೆ ಎನ್ನುವುದಕ್ಕೆ ಇದರಲ್ಲಿನ ಅನೇಕ ಸಾಲುಗಳು ಸಾಕ್ಷಿಯಾಗಿವೆ. ಅಂದು ತುಂಡಾಗಿದ್ದ ಐದು ಕನ್ನಡದ ಭೂಪ್ರದೇಶಗಳನ್ನು ಶಾಂತಕವಿಗಳು ಒಡೆದ ಕನ್ನಡಿಯ ಐದು ಚೂರುಗಳಲ್ಲಿ ಗುರುತಿಸುತ್ತಾರೆ. ಅವರು

ಇದು ಮಮ್ಮೈಕನ್ನಡಿ ಕೇಳ್ ಗೆಳೆಯ|
ಇದು ಮದ್ರಾಸದ ಕನ್ನಡಿಯು||
ಇದು ಮೈಸೂರವರಿಡಿಗನ್ನಡಿ ಮೇಣ್|
ಇದು ಕೊಡಗದ ಕನ್ನಡ ಕಾಣೈ
ಇದು ಭಾಗ್ಯದ ನಗರದ ಕನ್ನಡಿ ಕೂ-|
ಡಿದರಿವು ನಿನ್ನಿಡಿ ಕನ್ನಡಿಯು

ಎನ್ನುವುದರ ಮೂಲಕ ‘ಈ ನಿನ್ನ ಇಡಿ ಕನ್ನಡಿಯ ಹೆಸರೇನೆಂದರೆ’, ‘ಕರ್ನಾಟಕವಿದು’ ಎಂದು ಹೇಳಿ ಸಮಗ್ರ ಕರ್ನಾಟಕದ ಒಟ್ಟು ಕನ್ನಡಿಯ ಚಿತ್ರಣವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಭೌತಿಕವಾದ ಕರ್ನಾಟಕಕ್ಕೆ ಅವರು ಧರ್ಮ – ಶಾಸ್ತ್ರಗಳಲ್ಲಿನ ಪರಿಕರಗಳನ್ನು ಜೋಡಿಸಿ ಸಂಕೇತಿಸುವುದೂ ಉಂಟು. ಉದಾಹರಣಗೆ

ಪಂಚ ವರ್ಣಗಳ |
ಪಂಚ ರೂಫಗಳ
ಪಂಚ ಸ್ಥಳಗಳ ಕನ್ನಡಿಯು
ಪಂಚ ಧ್ವನಿಗಳ |
ಪಂಚ ವಿನೋದದ |
ಪಂಚ ಗಾನಗಳ ಕನ್ನಡಿಯು
ಪಂಚ ವೇಶಗಳ
ಪಂಚ ಭೂತಗಳ
ಪಂಚ ಪ್ರಕಾಶದ ಕನ್ನಡಿಯು

ಎಂಬ ಸಾಲುಗಳ ಮುಖೇನ ದೈವೀ ‘ಇಮೇಜು’ಗಳನ್ನು ಸೃಷ್ಟಿಸಿ ಈ ‘ಕರ್ನಾಟಕದೇವಿ’ಗೆ ಎಲ್ಲ ಬಗೆಯ ರಕ್ಷಣೆ, ಭದ್ರತೆಗಳಿವೆ. ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ಕಾವ್ಯದಲ್ಲಿನ ಇಂಥ ಪ್ರತಿರೂಪಗಳು ನಾಡಿನ ಏಕೀಕರಣದ ತುಡಿತವನ್ನು ಅಭಿವ್ಯಕ್ತಿಸುತ್ತವೆ.

ಬಂಗಾಳ ಹಾಗೂ ಮಹಾರಾಷ್ಟ್ರಗಳಲ್ಲಿನ ಧರ್ಮ, ಚರಿತ್ರೆಯ ಸಂಕೇತಗಳನ್ನು ಶಾಂತಕವಿಗಳು ಪ್ರತಿಬಿಂಬಿಸುವುದು ಭಿನ್ನ ಬಗೆಯಲ್ಲಿ. ಅವರ ಕೀರ್ತನೆಯಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ ‘ವಸ್ತು’ ಎಂಬ ಪದ ಅಮೂರ್ತ ಅನ್ನಿಸುತ್ತದೆ. ಆದರೆ ಅದು ಅಮೂರ್ತವಾದುದಲ್ಲ. ‘ಹೇಳಪ್ಪ’ ‘ಕೇಳಪ್ಪ’ರ ಮೂಲಕ ಈ ‘ವಸ್ತು’ವು ಅನಾವರಣ ಗೊಳ್ಳುತ್ತಾ ಹೋಗುತ್ತದೆ. ಅದೇ ‘ಕರ್ನಾಟಕ’ ಎಂಬುದು. ಈ ‘ವಸ್ತು’ವನ್ನು ಕನ್ನಡಿಗರು ‘ವಿಸ್ಮೃತಿಗೆ ಒಳಗಾಗಿ ಕಳೆದುಕೋಂಡಿರುವುದನ್ನು ಅನೇಕ ಸಂಕೇತಗಳಿಂದ ನೆನಪು ಮಾಡಿ ಕೊಡುತ್ತಾರೆ. ಸ್ವಭಾಷೆ, ಸ್ವಾಭಿಮಾನ, ಸ್ವರಾಜ್ಯಗಳಿಗಾಗಿ ಹಾತೊರೆಯುವಂತೆ ಮಾಡುವ ಆಶಯವನ್ನು ಅಭಿವ್ಯಕ್ತಿಸಲು ಚರಿತ್ರೆಯನ್ನು ಬಳಸಿಕೊಳ್ಳಲಾಗಿದೆ. ಈ ಅಂಶವನ್ನು ಶಾಂತಕವಿಗಳು

ರಕ್ಷಿಸು ಕರ್ಣಾಟಕ ದೇವಿಯೆ ಸಂ
ರಕ್ಷಿಸು ಕರ್ಣಾಟಕ ದೇವಿ
ಕದಂಬಾದಿ ಸಂಪೂಜಿತ ಚರಣೆ |
ಗಂಗಾರಾಧಿತ ಪದನಖ ಸರಣೆ ||
ರಾಷ್ಟ್ರೂಕೂಟ ಮಣಿ ಕಂಠಾಭವರಣೆ
ಯಾದವಮಣಿ ಕಂಕಣಾಂಶು ಸುಂದರಿ |
ಬಲ್ಲಾಳರ ಭುಜ ಭೂಷಣ ಬಂಧುರೆ ||
ವಿಜಯನಗರ ಮಂಗಳಮಣಿ ಕಂಧರೆ |
ಮೈಸೂರೊಡೆಯರ ಸುಕೀರ್ತಿ ಮಂದಿರೆ ||
ಮಾಂಡಲಿಕಾವನ ಭಾರಧುರಂಧರೆ
ಮನಸ್ಥಾಪಕ ಸ್ಥಾಪಿತ ಪ್ರಾಣೆ |
ಶಿಲ್ಪಕಲಾ ಮಂಡಪ ಸುಸ್ಥಾನೆ
ಕವಿಜನ ಕೀರ್ತಿತ ಸುಯಶಸ್ ತ್ರಾಣೆ
ಸಾಧು ಸತ್ಕಥಾ ಬೇರಿಧ್ವಾನೆ
ಸ್ವೇತಿಹಾಸ ನೀರಾಜನೆ ರಾಣೆ

– ಎಂಬ ಸಾಲುಗಳ ಮೂಲಕ ಪ್ರತಿಬಿಂಬಿಸಿದ್ಧಾರೆ. ಕೀರ್ತನೆಯಲ್ಲಿನ ಈ ಹಾಡು ಮುಂಬಿಯಿ – ಕರ್ನಾಟಕದಲ್ಲಿ ಹಲವು ವರುಷಗಳ ಕಾಲ ನಾಡಗೀತೆಯ ಪ್ರಾರ್ಥನೆಯಾಗಿ ಜನಪ್ರಿಯ ಆಗಿತ್ತ. ಇಲ್ಲಿ ಕದಂಬರಾಜರ ಮನೆತನದಿಂದ ಹಿಡಿದು ಮೈಸೂರಿನ ಒಡೆಯರ ಮನೆತನದವರೆಗೂ ಕರ್ನಾಟಕದ ಚರಿತ್ರೆ ಹಾದುಹೋಗುತ್ತದೆ. ಅಲ್ಲದೆ ಇಲ್ಲಿನ ಶಿಲ್ಪಕಲೆ, ಮತಗಳು, ಕವಿ – ಸಾಧು – ಸಂತರ ಗತ ವೈಭವಗಳು ನಾಡು – ನುಡಿಯ ಸಮಕೇತಗಳಾಗಿ ಬಳಕೆ ಆಗಿವೆ. ಇಂಥ ಅಮೂಲ್ಯವಾದ ‘ವಸ್ತು’ ಸಹ ‘ಕನ್ನಡಮ್ಮ’ನ ಪ್ರತೀಕವೇ.

ಬಂಕಿಮರ ‘ಆನಂದಮಠ’ದಲ್ಲಿನ ಚರಿತ್ರೆಯ ಘಟನಾವಳಿಗಳಂತೆ ಕ್ಷಾತ್ರತೇಜಸ್ಸಿನ ‘ವಿಜಯನಗರ’ ಸ್ಥಾಪನೆಯ ಚಾರಿತ್ರಿಕ ಸಂಗತಿಗಳು ‘ವಿದ್ಯಾರಣ್ಯ ವಿಜಯ’ದ ಕೀರ್ತನೆ ಯಲ್ಲೂ ದಾಖಲಾಗಿವೆ. ಒಂದು ಕನ್ನಡಿಯ ಚೂರಿನಲ್ಲಿ ಕಾಣುವ ನಾಡಿನ ಗಿರಿ, ನದಿ, ಕೆರೆ ಕೊಳ್ಳ, ಕಾಡು, ಪ್ರಾಣಿ – ಪಕ್ಷಿಗಳ ಜೊತೆಗೆ ಇನ್ನೊಂದು ಕನ್ನಡಿ ಚೂರಿನಲ್ಲಿ ಭಿನ್ನವಾದ ಚಿತ್ರಣವನ್ನು ತೋರಿಸುತ್ತಾರೆ. ಅದರಲ್ಲಿ ಪರಕೀಯ ದಾಳಿಗೆ ಪಾಳುಬಿದ್ದ ಹಂಪಿಯ ಅರಮನೆ, ಗುಡಿ – ಗೋಪುರಗಳು, ವೈಭವದ ಅವಶೇಷಗಳಿಗೆ ಕನ್ನಡಿಗರು ಮರುಗುವಂತೆ ಮಾಡುತ್ತರೆ. ಆ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಪ್ರಯೋಗ ಇಲ್ಲಿನದು. ಈ ಕೀರ್ತನೆಯಲ್ಲಿನ ವಿದ್ಯಾರಣ್ಯರ ಪ್ರವೇಶ, ಹಂಪಿ ‘ಭುವನೇಶ್ವರಿ’ಯ ಮುಂದಿನ ತಪಸ್ಸು, ಮಹಮ್ಮದೀಯರ ದಾಳಿ, ಹರಿಹರ – ಸಾಯಣರಿಗೆ ವಿದ್ಯಾರಣ್ಯರಿಂದ ಮಾರ್ಗದರ್ಶನ, ಧರ್ಮದೀಕ್ಷೆ, ರಾಜ್ಯ ಕಟ್ಟಲು ಪ್ರೇರಣೆ, ಪಂಪಾ ಕ್ಷೇತ್ರದಲ್ಲಿ ತಾಯಿ ‘ಭುವನೇಶ್ವರಿ’ಯ ಕೃಪೆಯಿಂದ ಕನ್ನಡಿಗರ ಸಾಮ್ರಾಜ್ಯ ಸ್ಥಾಪನೆ, ಕರ್ನಾಟಕ ರತ್ನ ಸಿಂಹಾಸನದಲ್ಲಿ ಹರಿಹರ ರಾಜನ ಪಟ್ಟಾಭಿಷೇಕ ಮೊದಲಾದ, ಚರಿತ್ರೆಯ ಅಭಿಮಾನದ ಸಂಕೇತಗಳು, ರೂಪಕಗಳು ತನ್ನ ವಿರಾಟ್ ಸ್ವರೂಪವನ್ನು ಪಡೆದು ವರ್ಣಿತವಾಗಿವೆ. ಈಂಥ ಕಳೆದುಕೊಂಡ ವಿಸ್ಮೃತಿಯ ‘ವಸ್ತು’ವನ್ನು ಅಂದರೆ ಕರ್ನಾಟಕವನ್ನು ಎಲ್ಲ ಬಗೆಯ ಅಭಿಮಾನದಿಂದ ದಿಕ್ಕಿಸಿಕೊಳ್ಳಬೇಕಾದ ತುರ್ತನ್ನು ಕನ್ನಡಿಗರಲ್ಲಿ ಮೂಡಿಸುವುದು ಶಾಂತಕವಿಗಳ ಪ್ರಧಾನ ಆಶಯ. ಅದನ್ನು ಪರಣಾಮಕಾರಿಯಾಗಿ ತಮ್ಮ ಈ ಕೊನೆಯ ದಿನಗಳ ಕೊನೆಯ ಕೀರ್ತನೆಯಲ್ಲಿ ಆಗು ಮಾಡಿ ತೋರಿಸಿದರು. ಅಷ್ಟೇ ಅಲ್ಲದೆ ಕೆಲವೆಡೆ ಖುದ್ದಾಗಿ ತಾವೇ ಹಾಡಿ ಪ್ರಯೋಗಗಳನ್ನು ಮಾಡಿದರು. ಭರತಭೂಮಿ, ಕರ್ನಾಟಕದ ಅಭಿಮಾನಗಳೆರಡನ್ನು ಸಾರುವ ಈ ಕೀರ್ತನೆಯು ತೋಂಡಿ ರೂಪದಲ್ಲಿ ಸಾಕಷ್ಟು ಪ್ರಭಾವವನ್ನುಂಟು ಮಾಡಿತ್ತು. ಇದರ ಪ್ರತಿಗಳು ಇಲ್ಲದಿದ್ದಾಗ ೧೯೫೭ರಲ್ಲಿ ಮೂರನೆಯ ಮುದ್ರಣವನ್ನಾಗಿ ಭಾಲಚಂದ್ರ ಘಾಣೇಕರರು ಪ್ರಕಟಿಸಲು ಮುಂದೆ ಬಂದರು. ಆದರೆ ಮೂಲಪ್ರತಿಗಳು ದೊರೆಯದಿದ್ದ ಸನ್ನಿವೇಶದಲ್ಲಿ ನಾಟಕವಿ ಹುಯಿಲಗೋಳ ನಾರಾಯಣರಾಯರು ಪ್ರತಿ ಮಾಡಿ ಕಳಿಸಿದ್ದುಂಟು. ಅಂತೆಯೇ ಇದರ ಮೊದಲ ಪ್ರಕಾಶಕರಾಗಿದ್ದ ಆಲೂರರು ಅಭಿಮಾನದಿಂದ ಒಪ್ಪಿಗೆ ನೀಡಿದುದರ ಬಗ್ಗೆ ಪ್ರಕಾಶಕರು ದಾಖಲಿಸಿದ್ದಾರೆ.