ಹಿಂದಿನ ಅಧ್ಯಾಯಗಳಲ್ಲಿ ‘ಕನ್ನಡಮ್ಮ’ನ ಹಲವು ಪ್ರತೀಕ – ರೂಪಕಗಳ ಬಗೆಗೆ ಚರ್ಚಿಸಲಾಗಿದೆ. ಆದರೆ ಅದು ಆಧುನಿಕ ಕನ್ನಡ ಕಾವ್ಯದ ಹಿನ್ನೆಲೆಯಲ್ಲಿ. ನಾಡು – ನುಡಿ ರೂಪಕಗಳು ಕನ್ನಡದ ಸೃಷ್ಟಿಶೀಲರಲ್ಲಿ ಒಂದೇ ತೆರನಾಗಿ ಅಭಿವ್ಯಕ್ತಗೊಂಡಿಲ್ಲ. ಅದರೆ ಒಟ್ಟಾರೆ ಪರಿಶೀಲಿಸಿದಾಗ ವಿಭಿನ್ನ ಬಗೆಯ ಹೆಣ್ಣು ಸಂಕಥನದ ರೂಪಕಗಳೆಲ್ಲವೂ ‘ಕನ್ನಡಮ್ಮ’ನ ಪ್ರತೀಕವಾಗಿಯೆ ರೂಪು ತಳೆದಂಥು. ಹೀಗೆ ರೂಪು ತಳೆದ ‘ಕನ್ನಡಮ್ಮ’ನ ಚಿತ್ರಣಗಳು ಆಯಾ ಕವಿಯ ಬೌದ್ಧಿಕ ಸಾಮರ್ಥ್ಯದ ವಿಸ್ತಾರಕ್ಕೆ ಸಂಬಂಧಪಟ್ಟಿರುವುದನ್ನು ಗಮನಿಸ ಬಹುದು. ಶಾಂತಕವಿಗಳಲ್ಲಿ ಈ ‘ಕನ್ನಡಮ್ಮ’ನ ಚಿತ್ರ ‘ಭುವನೇಶ್ವರಿ’ಯ ರೂಪಕವಾಗಿಯೆ ಮೊಟ್ಟಮೊದಲಿಗೆ ದಾಖಲಾಗಿದೆ. ಹಾಗಾದರೆ ಬೌದ್ಧಿಕ ರೂಪದ ಈ ‘ಭುವನೇಶ್ವರಿ’ಯು ಕಾವ್ಯದಲ್ಲಿ ಪ್ರತಿಬಿಂಬಿತವಾಗಲು ಮೂಲ ‘ಭೌತಿಕ’ ಮೂರ್ತಿ ಯಾವುದು ಎಂಬುದು ಕುತೂಹಲಕರ ಸಂಗತಿ. ಈ ಬಗೆಗೆ ಸಾಕಷ್ಟು ಅಧ್ಯಯನ ನಡೆದಿಲ್ಲ.

ತಾಯಿ ‘ಭುವನೇಶ್ವರಿ’ಯ ಚಿತ್ರ ರೂಪು ತಳೆಯುವುದು ‘ಹಂಪಿ’ಯಲ್ಲಿ. ಅಂದರೆ ‘ಶ್ರೀ ವಿದ್ಯಾರಣ್ಯ ವಿಜಯ’ದಲ್ಲಿ ಶಾಂತಕವಿಗಳು ತಮ್ಮ ಈ ‘ಕರ್ನಾಟಕ ದೇವಿ’ಯನ್ನು ಪ್ರಸ್ತಾಪಿಸುವುದನ್ನು ಗಮನಿಸಬಹುದು. ಹಂಪಿಯ ಸ್ಥಿತಿ – ಗತಿಗಳ ಹಿನ್ನೆಲೆಯಲ್ಲಿ ‘ಭುವನೇಶ್ವರಿ’ಯ ಪ್ರಸ್ತಾಪ ಮೇಲಿಂದ ಮೇಲೆ ಈ ಕೀರ್ತನೆಯಲ್ಲಿ ವ್ಯಕ್ತ ಆಗುತ್ತದೆ. ಈ ದಿಸೆಯಲ್ಲಿ ಪರಿಶೀಲಿಸಿದಾಗ ಹಂಪಿಯ ವಿರೂಪಾಕ್ಷನ ಸನ್ನಿಧಿಯಲ್ಲಿ ‘ಭವನೇಶ್ವರಿ’ ದೇವಿಯ ಸಣ್ಣದಾದ ಗುಡಿ ಇದೆ. ಈ ಗುಡಿಯಲ್ಲಿನ ದೇವಿಯೇ ‘ಭುವನೇಶ್ವರಿ’ ಆಗಿದ್ದಲ್ಲಿ ಇದನ್ನೇ ಮೂಲ ‘ಭೌತಿಕ’ ಸ್ವರೂಪದ್ದು ಎಂದು ಅರಿಯಬಹುದು. ಈ ಬಗೆಯ ‘ಭುವನೇಶ್ವರಿ’ಯ ಪ್ರತಿಮೆಗಳ ಬಗ್ಗೆ ಇನ್ನೂ ಅಧ್ಯಯನ ನಡೆಯಬೇಕಿದೆ. ನಡಿನಾದ್ಯಾಂತ ಇರುವಂಥ ಇಂಥ ಮೂರ್ತಿ ಶಿಲ್ಪಗಳ ಕಾಲಾನುಕ್ರಮಣಿಕೆಯನ್ನು ಪರಿಶೀಲಸಿದಾಗ ಅದರ ಪ್ರಾಚೀನತೆಯ ನಿಖರತೆಗೆ ಉತ್ತರಗಳು ದೊರೆಯಬಹುದು. ಆದರೆ ಇಲ್ಲಿ ಸದ್ಯಕ್ಕೆ ಶಾಂತಕವಿಗಳ ಈ ‘ಭೌತಿಕ’ ಮೂರ್ತಿಯನ್ನು ಕನ್ನಡ ಕಾವ್ಯದ ‘ಬೌದ್ಧಿಕ’ ಮೂರ್ತಿಯೆಂದು ತಿಳಿದರೆ ತಪ್ಪಾಗಲಾರದು.

ದೃಶ್ಯಮಾಧ್ಯಮದಲ್ಲಿ ಈಗ ಪ್ರಚಲಿತವಿರುವ ‘ಭುವನೇಶ್ವರಿ’ಯ ಚಿತ್ರಗಳು ಹಲವು. ಆದರೆ ಅವೆಲ್ಲವೂ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿ ಚಳವಳಿಕರರನ್ನು ಹುರಿದುಂಬಿಸುತ್ತಿವೆ. ಇಂದಿನ ಕನ್ನಡ ಬಾವುಟದಂತೆಯೇ ‘ಭುವನೇಶ್ವರಿ’ಯ (‘ಕನ್ನಡಮ್ಮ’ನ) ಚಿತ್ರವು ಸಹ ಎಲ್ಲೆಡ ಅನಾವರಣಗೊಂಡಿದೆ. ಗಮನಿಸಬೇಕಾದ ಅಂಶವೆಂದರೆ ಇದನ್ನು ಮೊಟ್ಟ ಮೊದಲ ರೇಖಾ ಚಿತ್ರ ಅಥವಾ ತೈಲಚಿತ್ರದಲ್ಲಿ ಅನಾವರಣಗೊಳಿಸಿದ ಕಲಾವಿದ ಯಾರು ಎಂಬುದನ್ನು. ಆದರೆ ಆ ಕಲಾವಿದನಿಗೂ ಮನಸ್ಸಿನಲ್ಲಿ ಈ ಚಿತ್ರ ಮೂಡಲು ಕಾವ್ಯವೇ ಪ್ರೇರಣೆ ಆಗಿರಬೇಕು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಅಂದಾನಷ್ಟ ದೊಡ್ಡಮೇಟಿ ಅವರು ರಚಿಸಿದ ‘ಕರ್ಣಾಟಕ ಮಹಿಮ್ನಃಸ್ತೋತ್ರ’ವೇ ಮೂಲ ಆಕಾರ ಎನ್ನಬಹುದು. ಏಕೆಂದರೆ ಇದರಲ್ಲಿನ ‘ಭುವನೇಶ್ವರಿ’ಯ ಹಲವು ರೂಪಕಗಳು ನಾಡದೇವಿಯ ಪ್ರತೀಕವಾಗಿ ಹೊರಹೊಮ್ಮಿವೆ. ಅಲ್ಲದೆ ‘ಭುವನೆಶ್ಚರಿ’ಯ ಪ್ರತಿರೂಪಕ್ಕೂ ಒಂದೊಂದು ರೇಖಾಚಿತ್ರವನ್ನು ಈ ಕೃತಿಯಲ್ಲಿ ಮೂಡಿಸಲಾಗಿದೆ. ಒಟ್ಟು ೧೬ ಚಿತ್ರಗಳನ್ನು, ೧೬ ಶ್ಲೋಕ, ೧೬ ರೂಪಕಗಳಲ್ಲಿ ಚಿತ್ರಿಸಲಾಗಿದೆ. ಇಲ್ಲಿ ೧೬ರ ಸಂಖ್ಯೆ ಮಹತ್ತ್ವದ್ದು. ಏಕೆಂದರೆ ಇದು ಕರ್ನಾಟಕದಲ್ಲಿ ೧೬ ಶಾಕ್ತ ಪೀಠಗಳು ಇವೆ ಎಂಬುದನ್ನು ಸಂಕೇತಿಸುವುದರಿಂದ.

ದೊಡ್ಡ ಮೇಟಿ ಅವರ ‘ಮಹಿಮ್ನಃಸ್ತೋತ್ರ’ದಲ್ಲಿ ‘ಕನ್ನಡಮ್ಮ’ನ ಭುವನೇಶ್ವರಿ’ಯ ಪ್ರತೀಕಗಳು ಒಟ್ಟು ೧೬ ರೂಪ (ಕ)ಗಳಲ್ಲಿ ಅಭಿವ್ಯಕ್ತಗೊಂಡಿವೆ. ಈ ಹದಿನಾರು ರೂಪಕಗಳಿಗೆ ರೇಖಾಚಿತ್ರಗಳನ್ನು (ಅನುಬಂಧ – ೪ರಲ್ಲಿ ಕೊಡಲಾಗಿದೆ) ಬಿಡಿಸಿದವರು ಬಳ್ಳಾರಿಯ ಕೊಂಡಾಚಾರಿ (ಬಿ. ಕೊಂಡಾಚಾರ್ಯ) ಅವರು. ಮೂಲತಃ ಶಿಲಪಿಗಳಾದ ಇವರು ದೊಡ್ಡಮೇಟಿ ಅವರ ಕೃತಿಗೆ ಚಿತ್ರಗಳನ್ನು ರಚಿಸಿಕೊಟ್ಟಿದುದರ ಬಗ್ಗೆ ಅಂದಿನ ಸಂದರ್ಭವನ್ನು (೧೯೫೩) ಇಂದಿಗೂ ಮೆಲುಕು ಹಾಕುತ್ತಾರೆ. ದೊಡ್ಡಮೇಟಿ ಅವರು ತಾವು ರಚಿಸಿದ ಶ್ಲೋಕಗಳನ್ನು ಸಂಸ್ಕೃತಕ್ಕೂ ಅನುವಾದಿಸಿ (ವಿದ್ವಾನ್ ಹ.ಪಿ. ನಾರಾಯಣ ಶಾಸ್ತ್ರಿ ಅವರಿಂದ) ಪ್ರಕಟಿಸಿದ್ದಾರೆ. ಇದಕ್ಕೆಲ್ಲ. ಪ್ರೇರಣೆ ‘ಮಂತ್ರಮಯಿ ಕರ್ನಾಟಕ ಮಾತೆ’ ಎಂದು ಹೇಳಿಕೊಂಡಿರುವ ದೊಡ್ಡಮೇಟಿ ಅಂದಾನಪ್ಪ ಅವರು ತಾಯಿ ‘ಭುವನೇಶ್ವರಿ’ಯನ್ನು ಕುರಿತು

ಓ ಜನನಿ
ಭುವನೇಶ್ವರಿಯೆ, ಕರ್ಣಾಟ ಮಹಾಶಕ್ತಿ!
ರಾಜರಾಜರ ಮುಕಟದಲಿದೆ ನಿನ್ನ ಪಾದ ಮುದ್ರೆ!
ನಿನ್ನ ಕೃಪಯನೆ ಹೊತ್ತು ಹರಿಯುವಳು ತುಂಗಭದ್ರೆ!
ಭುವನಧೀಶ್ವರಿಯು ಅಲ್ಲವೆ ಅಂಬೆ ನೀನು?
ಸರ್ವವಿಧದಿಂ ಕುಸಿದ ಮಕ್ಕಳನ್ನೆತ್ತು ಸರ್ವೇಶ್ವರಿಯೆ!
ಓ ಕನ್ನಡ ಕುಲದೇವಿ! ನಿತಯ ಪೂಜ್ಯಳು ನೀನು
ನಮ್ಮ ಹೃದಯ ಮಂದಿರದಲ್ಲಿ ನೀನೆ ಒಡಮೂಡು ಬಾ!
ನಿನ್ನಮಕ್ಕಳೆದೆಯಲ್ಲಿ ಮರವಾಗಿ ಬೆಳದಿರುವ
ಮನೆ ಮುರುಕುತನವ ಕಳೆಯಮ್ಮಾ
ನಿನ್ನಡಿಗೆ ಪೊಡಮಟ್ಟು ಕೇಳುವೆವು
ಒಂದೇ ಕಟ್ಟಿನಲಿ ನಮ್ಮ ಮನನೊಲಿಸು
ಒಂದೇ ಕೂಟದಲಿ ನಮ್ಮ ಜನವನು ನಿಲಿಸು!

– ಎಂಬುದಾಗಿ ಸ್ತುತಿಸಿದ್ದಾರೆ. ೧೯೫೩ರಲ್ಲಿ ಪ್ರಕಟವಾದ ಈ ಕೃತಿ ಹಾಗೂ ಶ್ಲೋಕ ಅಂದಿನ ನಾಡಿನ ಏಕೀಕರಣದ ಆಶಯಕ್ಕೆ ಪೂರಕವಾಗಿದೆ. ಇದೇ ಕವಿತೆಯನ್ನೇ ಹೋಲುವ ಒಟ್ಟು ೧೬ ಶ್ಲೋಕಗಳು ತಾಯಿ ಭುವನೇಶ್ವರಿಯನ್ನು ಸ್ತುತಿಸುತ್ತವೆ. ಅವುಗಳಲ್ಲಿನ ರೂಪಕಗಳು ವಿಭಿನ್ನ. ಇದು ಹೆಣ್ಣು ಸಂಕಥನದ ದೇವಿ ಸ್ವರೂಪದ ‘ಕನ್ನಡಮ್ಮ’ನ ರೂಪಗಳು. ಅಂದರೆ ಪರಾಶಕ್ತಿ, ಭುವನೇಶ್ವರಿ, ಮಹೇಶ್ವರಿ, ಮಹಾಕಾಲಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಮೂಕಾಂಬಿಕಾ, ರತ್ನಗರ್ಭಾ, ಶ್ರೀದುರ್ಗೆ, ಇಂದ್ರಾಣಿ, ವಾರಾಹಿ, ಆದಿತಿ, ಕೌಮಾರಿ, ಕುಂಡಲಿನೀ, ತೀಪುರಸುಂದರಿ ಹಾಗೂ ಸಾವಿತ್ರಿಯ ಪ್ರತಿಮೆಗಳಲ್ಲಿ (ಮೂರ್ತಿ) ಅವು ಮೂಢಿ ಬಂದಿವೆ (ಈ ಪ್ರತಿಮೆಗಳ ರೇಖಾಚಿತ್ರಗಳನ್ನು ಅನುಬಂಧ – ೪ರಲ್ಲಿ ಕೊಡಲಾಗಿದೆ)

ಬಂಕಿಮಚಂದ್ರರು ತಮ್ಮ ‘ಆನಂದಮಠ’ ಕಾದಂಬರಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಅಳವಡಿಸಿ ರಾಷ್ಟ್ರೀಯತೆಯನ್ನು ಮೆರೆಯುವಂತೆ ಕನ್ನಡ ಕಾದಂಬರಿಯಲ್ಲೂ ಪ್ರಯೋಗಗಳಾಗಿವೆ. ಆ ಪ್ರಯೋಗವನ್ನು ಮಾಡಿದವರು ಕಾದಂಬರಿ ದಿಗ್ಗಜರೆನಿಸಿದ ಅ.ನ. ಕೃಷ್ಣರಾಯರು. ಅವರು ಅಂದು (೧೯೫೪ ರಲ್ಲಿ) ನಾಡಿನ ಏಕೀಕರಣದ ಆಶಯಕ್ಕಾಗಿ ‘ಕನ್ನಡಮ್ಮನ ಗುಡಿಯಲ್ಲಿ’ ಕಾದಂಬರಿಯನ್ನು ರಚಿಸಿದರು. ಇದರಲ್ಲಿ ಅ.ನ.ಕೃ. ಅವರು ದೊಡ್ಡಮೇಟಿ ಅವರು ತಾಯಿ ‘ಭುವನೇಶ್ವರಿ’ಯನ್ನು ಕುರಿತು ಹೇಳಿರುವ ಮೇಲಿನ ಶ್ಲೋಕಗಳ ಸಾಲುಗಳನ್ನು ಬಳಸಿಕೊಂಡಿದ್ದಾರೆ. ಕನ್ನಡಿಗರನ್ನು ಏಕೀಕರಣದ ಆಶಯಕ್ಕಾಗಿ ಜಾಗೃತಗೊಳಿಸಲು ಅವರಲ್ಲಿನ ‘ಕುಂಡಲಿನೀ ಶಕ್ತಿ’ಯನ್ನು ಎಚ್ಚರಿಸುವ ಉದ್ದೇಶ ಅ.ನ.ಕೃ ಅವರದು. ಆ ಮೂಲಕ ಕನ್ನಡಿಗರು ತಮ್ಮ ‘ಅಭಿಮಾನಿ ದೇವತೆ’ಯನ್ನು ಆರಾಧಿಸುತ್ತಾರೆ ಎಂಬ ನಂಬಿಕೆ ಅಂದು ಪ್ರಚಲಿತವಾಗಿತ್ತು.

ದೊಡ್ಡಮೇಟಿ ಅವರಿಗೆ ಕನ್ನಡಿಗರ ‘ಭುವನೇಶ್ವರಿ’ಯು ಕೇವಲ ಅಭಿಮಾನದ ಪ್ರತೀಕವಾಗಿ ಕಂಡಿಲ್ಲ. ಬದಲಾಗಿ ಆಕೆ ದಿವ್ಯಮಾತೆ, ಕರ್ನಾಟಕಾಂಬೆ, ಮಂತ್ರಮಯಿ, ಕನ್ನಡ ಸಾವಿತ್ರಿ, ಕನ್ನಡ ಗಾಯತ್ರಿಯಾಗಿಯೂ ಕಾಣಿಸಿಕೊಂಡಿದ್ದಾಳೆ. ಅಲ್ಲದೆ ಅವರು ಈ ಕೃತಿಯಲ್ಲಿ ಕರ್ಣಾಟಕ ದೇವಿ, ಜನನಿ, ಕರ್ಣಾಟ ಕುವರಿ, ಕರ್ಣಾಟ ಮಹಾಶಕ್ತಿ, ಸರ್ವೇಶ್ವರಿ, ಕನ್ನಡ ಕುಲದೇವಿ, ಕರ್ಣಾಟ ಮಾಹೇಶ್ವರಿ, ವಾತಾಪಿ ಪುರವಾಸಿನೀ, ಅಂಬೆ, ಬನಶಂಕರಿ, ವೃದ್ಧಿ ವರ್ಧಿನಿ, ವೈಭವ ವಿಧಾತ್ರಿ, ದೇವಿ, ಕರ್ಣಾಟ ಮಹಾಕಾಲಿ, ಚಂಡಿ, ಚಾಮುಂಡೇಶ್ವರಿ, ಮಹಿಷ ಮರ್ದಿನಿ, ರಾಜ ರಾಜರಾಜೇಶ್ವರಿ, ಮೈಸೂರು ಕುಲದೇವಿ, ಕನ್ನಡಿಗರಥಿ ದೇವಿ, ಸಿಂಹವಾಹಿನಿ, ಭದ್ರೆ, ಕರ್ಣಾಟ ಮಹಾಲಕ್ಷ್ಮಿ, ರೇಣುಕೆ, ಗೌರಿತ್ರ್ಯಂಬಕೆ. ಕರ್ಣಾಟಕ ಪ್ರಾಣಪಂಚಕಳೆ, ದೇವಿ ಮುಕಾಂಬೆ, ಪರಶುರಾಮ ಕ್ಷೇತ್ರಧಿವಾಸಿನಿ, ರತ್ನಗರ್ಭೆ, ಕರ್ಣಾಟ ಭೂಶಕ್ತಿ, ದೇವಿ ಪರಮೇಶ್ವರಿ, ಚಂದ್ರಭಾಗಾ ತಟಸ್ಥೆ, ಹಿರಣ್ಮಯಿ, ಭಾರತಾಂಬೆಯ ತನುಜಾತೆ, ಕರ್ಣಾಟ ದುರ್ಗೆ, ಭದ್ರಕರ್ಣಿಕೆ, ಗೋಕರ್ಣಾಕೃತ ನಿಲಯೆ, ಭಯ ವಿನಾಶಿನಿ, ವಾರಾಹಿ, ಕಲ್ಯಾಣ ಶಕ್ತಿ, ಮಾತೆ ಅದಿತಿ, ಕರ್ಣಾಟ ದೇವ ಜನನಿ, ಭಾಗ್ಯನಿಧಿ, ಭಗವತಿ, ಕರ್ಣಾಟ ಕೌಮಾರಿ, ಕರ್ಣಾಟ ಯೋಗಶಕ್ತಿ, ಕುಂಡಲಿನಿ, ತ್ರಿಪುರಸುಂದರಿ, ಮಂತ್ರಶರೀರೆ, ಕರ್ಣಾಟಕ ಮಹಾಮಾತೆ ಮೊದಲಾದ ಮಾತೃದೇವತೆಗಳ ಚಹರೆಗಳನ್ನು ರೂಪಕಗಳಲ್ಲಿ ಅಭಿವ್ಯಕ್ತಿಸಿರುವುದನ್ನು ಗಮನಿಸಬಹುದು. ಬಹುಶಃ ಕನ್ನಡದ ಇನ್ನಾವ ಕೃತಿಯಲ್ಲೂ ಇರದಷ್ಟು ರೂಪಕ – ಪ್ರತಿಮೆಗಳು ‘ಮಹಿಮ್ನಃ ಸ್ತೋತ್ರ’ದಲ್ಲಿ ಇವೆ.

ದೊಡ್ಡಮೇಟಿ ಅಂದಾನಪ್ಪ ಅವರು ‘ಭುವನೇಶ್ವರಿ’ಯನ್ನು ಕನ್ನಡ ನಾಡು – ನುಡಿಯ ಪ್ರತೀಕವಾಗಿಯಷ್ಟೇ ಆರಾಧಿಸದೆ ಅದಕ್ಕೂ ಮಿಗಿಲಾಗಿ ಹಚ್ಚಿಕೊಂಡಿದ್ದರು. ಈ ಹೊತ್ತಿಗೂ ಅವರ ‘ಜಕ್ಕಲಿ’ಯ ದೇವರ ಮನೆಯಲ್ಲಿ ತಾಯಿ ‘ಭುವನೇಶ್ವರಿ’ಯ ತೈಲವರ್ಣ ಚಿತ್ರವನ್ನು ನೋಡಬಹುದು. ನಾಡು ೧೯೭೩ರ ನವೆಂಬರ್ ಒಂದರಂದು ‘ಕನಾಟಕ’ ಎಂದು ನಾಮಕರಣಗೊಂಡಾಗ ಅಂದಿನ ‘ಪ್ರಜಾಮತ’ ನಿಯತಕಾಲಿಕದ ಮುಖಪುಟದಲ್ಲಿ ಈ ತೈಲವರ್ಣದ ಚಿತ್ರವನ್ನು ಮುದ್ರಿಸಲಾಗಿತ್ತು. ಈ ಚಿತ್ರವನ್ನು ಗದಗಿನ ಖ್ಯಾತ ಕಲಾವಿದರಾದ ಸಿ.ಎನ್. ಪಾಟೀಲರು ೧೯೫೩ ರಲ್ಲಿಯೇ ರಚಿಸಿದ್ದರು. (ಈ ಚಿತ್ರವನ್ನು ಸಹ ಅನುಬಂಧ – ೪ರಲ್ಲಿ ನೀಡಲಾಗಿದೆ). ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯು ಭುವನೇಶ್ವರಿಯ ತೈಲವರ್ಣ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದನ್ನು ರಚಿಸಿದವರು ಖ್ಯಾತ ಕಲಾವಿದರಾದ ಬಿ.ಕೆ.ಎಸ್. ಶರ್ಮ ಅವರು.