ನಾಡು ಒಂದುಗೂಡುವುದಕ್ಕೆ ಮೊದಲು ಕಲ್ಪಿಸಲಾದ ಈ ‘ಕನ್ನಡಮ್ಮ’ನ ಪರಿಕಲ್ಪನೆ ಸಾಂಸ್ಕೃತಿಕವಾಗಿ ಮಹತ್ತ್ವದ್ದು. ಏಕೆಂದರೆ ವಸಾಹತುಶಾಹಿ ಆಡಳಿತದ ಪರಿಣಾಮವಾಗಿ ಕನ್ನಡಿಗರು ಐದು ಪ್ರಮುಖ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದರು. ಇವರನ್ನು ಮತ್ತೆ ಒಂದೇ ಆಡಳಿತದ ತೆಕ್ಕೆಗೆ ತರುವುದು ಸುಲಭದ ಮಾತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಂತೀಯ ಮಟ್ಟದಲ್ಲಿ ಹುಟ್ಟಿಕೊಂಡ ಈ ಪರಿಕಲ್ಪನೆ ಕನ್ನಡಿಗರನ್ನು ಭಿನ್ನ ನೆಲೆಯಲ್ಲಿ ಆಲೋಚಿಸುವಂತೆ ಮಾಡಿತ್ತು.

ತಟಸ್ಥ, ನಿಷ್ಕ್ರಿಯ, ಜಡ ಎಂದು ಪರಭಾವಿಸಿದ್ದ ಅಂದಿನ ಬ್ರಿಟಿಶ್ ಆಡಳಿತಶಾಹಿಗೆ ನವೋದಯದ ‘ಕನ್ನಡಮ್ಮ’ನ ರೂಫಕ ಸರಿಯಾ ಪ್ರತಿಕ್ರಿಯೆ, ಪ್ರತಿರೋಧಗಳನ್ನೇ ಒಡ್ಡಿತ್ತು. ಈ ರೂಪಕದಿಂದ ಕೇವಲ ಭೌಗೋಳಿಕವಾಗಿದ್ದ ಕನ್ನಡ ನಾಡು ಸಾಂಸ್ಕೃತಿಕ ರೂಪ ಪಡೆಯಿತು. ನಪುಂಸಕಲಿಂಗವೆಂದು ಅರಿತಿದ್ದ ನಾಡಿಗೆ ಕನ್ನಡ ಸೃಷ್ಟಿಶೀಲ ಜಗತ್ತು ‘ತಾಯಿ’ (ಸ್ತ್ರೀಲಿಂಗದ)ಯ ಚಹರೆ ನೀಡಿದ್ದು ಗಮನಾರ್ಹ. ಅಂದಿನ ಕರ್ನಾಟಕದ ಐದು ಭಾಗಗಳು ಈ ‘ಕನ್ನಡ್ಮ’ನನ್ನು ಪ್ರತಿನಿಧಿಸಲು ಹಾತೊರೆದುವು. ಹೆತ್ತ ತಾಯಿ ಒಂದೇ ಇರಲು ಸಾಧ್ಯವೇ ಹೊರತು ಐದಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದು ಇಲ್ಲಿನ ಪ್ರಧಾನ ತಿರುಳು. ಅಲ್ಲದೆ ಭಾಷಿಕ, ಜನಾಂಗಿಕ, ಭೌಗೋಳಿಕ ವಿಭಜನೆಗೆ ಇನ್ನುಳಿದ ದೃಶ್ಯಾತ್ಮಕ ಹಾಗೂ ಮಾನಸಿಕವಾದ ಭಾಗಗಳು ಸೇರಿಕೊಂಡು ಐದು ನೆಲೆಗಳಲ್ಲಿ ಕನ್ನಡಿಗರು ತಮ್ಮ ವೈಚಾರಿಕತೆಯನ್ನು ಪ್ರಚಾರಪಡಿಸುವಂತೆ ಆಯಿತು. ‘ವಂದೇ ಮಾತರಂ’ ಗೀತೆಯ ರೀತಿಯಲ್ಲಿಯೇ ಹುಟ್ಟಿಕೊಂಡ ಕನ್ನಡ ಕವಿತೆಗಳು ಕೋಮಲತೆಯ ಜೊತೆಗೆ ಅವೇಶದ ಸ್ವರೂಪವನ್ನು ಸಹ ಸಂಕೇತಿಸಿದವು. ‘ತಾಯಿ’ ವಸಾಹತು ಪ್ರಭುತ್ವಕ್ಕೆ ಒಳಗಾಗಿ ಸಂಕೋಲೆಗಳಿಂದ ಬಂಧಿತಳಾಗಿದ್ದಾಳೆ. ಅವಳನ್ನು ಬಿಡುಗಡೆಗೊಳಿಸಲು ಹಿಂಸಾತ್ಮಕ ಹಾದಿಯೂ ಸರಿಯಾದುದೇ ಎಂಬ ಅಭಿಮತ ಅಂದಿನದು.

ರಾಷ್ಟ್ರವನ್ನು ‘ಭಾರತ ಮಾತೆ’ಯನ್ನಾಗಿಸಿದ ರೂಪಕಗಳಲ್ಲಿ ‘ಕರ್ನಾಟಕ’ ಮಗಳಾಗಿ ಅಭಿವ್ಯಕ್ತಗೊಂಡಿದೆ. ತಾಯಿಗೆ ಅನೇಕ ಹೆಣ್ಣು ಮಕ್ಕಳು ಇರುವಂತೆ ರಾಷ್ಟ್ರಕ್ಕೆ ಅನೇಕ ‘ನಾಡು’ ಅಥವಾ ‘ರಾಜ್ಯ’ಗಳು ಇವೆ ಎಂಬುದನ್ನು ಅಂದಿನ ಸೃಷ್ಟಿಶೀಲರು ಅಬಿವ್ಯಕ್ತಿಸಿದ್ದಾರೆ. ಆದ್ದರಿಂದಲೇ ‘ಕನ್ನಡಮ್ಮ’ನು ಸಹ ‘ಭಾರತ ಜನನಿಯ ತನುಜಾತೆ’. ಹಲವು ‘ನಾಡ ತಾಯಿ’ಗಳು ಭಾರತದಲ್ಲಿ ಅಂದರೆ ಪ್ರಾಂತೀಯ ನೆಲೆಗಳಲ್ಲಿ ಇದ್ದಾವೆ ಎಂಬುದು ಇಲ್ಲಿ ಗ್ರಹಿಕೆಗೆ ಬರುತ್ತದೆ. ಅಲ್ಲದೆ ಇದು ಒಂದು ಬಗೆಯ ಭಾರತೀಯ ಪರಂಪರೆಯಲ್ಲಿನ ಅವಿಭಕ್ತ ಕುಟುಂಬವನ್ನು ನೆನಪು ಮಾಡುವಂಥದ್ದು. ಗಮನಿಸಬೇಕಾದ ಅಂಧವೆಂದರೆ ಈ ಬಗೆಯ ನಡಿನ ಭಾಷೆಗಳು ಹಾಗೂ ಭೌಗೋಳಿಕ ಪರಿಸರಗಳು ಮಾತ್ರ ರಾಷ್ಟ್ರವನ್ನು (Nation) ನಿರ್ವಹಿಸುವುದು. ಹೀಗಾಗಿ ೧೯ನೆಯ ಶತಮಾನದಲ್ಲಿ ಎರಡು ಬಗೆಯ ರಾಷ್ಟ್ರೀಯತೆಗಳನ್ನು ಗಮನಿಸಬಹುದು. ಒಂದು ‘ಭಾಷಿಕ ರಾಷ್ಟ್ರೀಯತೆ’, ಇನ್ನೊಂದು ‘ಭೌಗೋಳಿಕ ರಾಷ್ಟ್ರೀಯತೆ’. ನಿರ್ದಿಷ್ಟ ಭಾಷೆಯೊಂದು ನಿರ್ದಿಷ್ಟ ನಾಡನ್ನು ಪ್ರತಿನಿಧಿಸುತ್ತದೆ. ಆದರೆ ವಿವಿಧ ಭಾಷೆಗಳು ಅಂದರೆ ಭಾಷಾರಹಿತತೆ ‘ದೇಶ’ವನ್ನು ಸೂಚಿಸುತ್ತೆ. ಆದರೆ ವಿವಿಧ ಭಾಷೆಗಳು ಅಂದರೆ ಭಾಷಾರಹಿತತೆ ‘ದೇಶ’ವನ್ನು ಸೂಚಿಸುತ್ತದೆ. ಈ ಅಂಶಗಳು ಅಂದಿನ ಅವೋದಯ ಕಾವ್ಯದಲ್ಲಿ ಪ್ರಧಾನ ತಿರುಳಾಗಿ ವ್ಯಕ್ತವಾಗಿವೆ. ‘ರಾಷ್ಟ್ರೀಯತೆ’ ಹಾಗೂ ‘ಉಪ ರಾಷ್ಟ್ರೀಯತೆ’ಯ ನೆಲೆಗಳಲ್ಲಿಯೂ ಇವುಗಳನ್ನು ಪರಿಭಾವಿಸಬಹುದು

೨೦ ನೆಯ ಶತಮಾನದಲ್ಲಿ ಮೊದಲ ದಶಕದ ವೇಳೆಗೆ ರಾಜಕೀಯ ಸಂಕೋಲೆಗಳಿಂದ ರಾಷ್ಟ್ರವನ್ನು ಬಿಡಿಸುವ ಆವೇಶ ಹೆಚ್ಚಾಗುತ್ತಾ ಹೋಗುತ್ತದೆ. ಇದೇ ವೇಳೆಗೆ ನವೋದಯದ ಕಾವ್ಯದ ಪ್ರಧಾನ ಅಂಶವಾಗಿದ್ದ ಪ್ರಾಸಗಳ ರಚನೆ ಧಿಕ್ಕರಿಸಲ್ಪಟ್ಟಿದ್ದು. ಇವೆರಡೂ ಏಕಕಾಲಕ್ಕೆ ನಡೆದದ್ದು ಕಾಕತಾಳೀಯವೇ ಸರಿ. ಈ ಮಾತು ಕನ್ನಡ ಕಾವ್ಯದ ಸಂದರ್ಭಕ್ಕೂ ಅನ್ವಯ ಆಗುತ್ತದೆ.

ವಸಾಹತುಶಾಹಿ ಕಾಲಘಟ್ಟದಲ್ಲಿ ಪಾರಂಪರಿಕ ಪರಿಕಲ್ಪನೆಗಳು ಹೆಚ್ಚಿನ ಮಹತ್ತ್ವ ಪಡೆದವು. ಈ ದಿಸೆಯಲ್ಲಿ ಹಿಂದಿನ ಪುರಾಣ – ಐತಿಹ್ಯ, ಚರಿತ್ರೆಯ ಸಂಗತಿಗಳೂ ಸೃಷ್ಟಿಸಲಾಯಿತು. ನಾಡನ್ನು ಆಳಿಹೋದ ಎಲ್ಲ ರಾಜಮನೆತನಗಳು ಮತ್ತೆ ಪುನರ್ರಚಿಸಲ್ಪಟ್ಟು ಭಾಷಿಕರ ತೀವ್ರವಾದ ಚರಿತ್ರೆಯ ಮೋಹ ಚರಿತ್ರೆಯ ಪರಿಕರಗಳನ್ನು ಪ್ರಬಲ ಅಸ್ತ್ರಗಳನ್ನಾಗಿ ಬಳಸಿದಂತೆ ನಮ್ಮಲ್ಲಿಯೂ ಪ್ರಯೋಗಗಳು ಆದವು. ಈ ಹಿನ್ನೆಲೆಯಲ್ಲಿ ಸಂತ – ಶರಣರ ಉತ್ಸವಗಳು, ನಾಡಹಬ್ಬಗಳು ಆಚರಣೆಗೆ ಬಂದದ್ದು ಗಮನಾರ್ಹ. ಎಲ್ಲಕ್ಕಿಂತ ಮಿಗಾಲಾಗಿ ‘ಹಂಪಿ’ ಸಂಕಥನ ಮೇಲಿಂದ ಮೇಲೆ ಪ್ರಸ್ತಾಪ ಆಗಿದೆ.

‘ಕನ್ನಡಿಗರ ರತ್ನಸಿಂಹಾಸನ’, ‘ತಾಯಿ ಭುವನೇಶ್ವರಿಯ ತಾಣ’, ಹಾಗೂ ನಾಡಿಗೆ ಮಧ್ಯೆ ಇರುವ (ಹಂಪಿ) ವಿಜಯನಗರ ಸಾಮ್ರಾಜ್ಯದ ರಾಜಧಾನಿಯೂ ಹೌದು. ೧೯೦೪. ೫ರ ವೇಳೆಗೆ ಆಲೂರರ ‘ಕರ್ನಾಟಕ ಗತವೈಭವ’ದಿಂದ ಹಂಪಿಗೆ ಎಲ್ಲಿಲ್ಲದ ಮಹತ್ತ್ವ ಬಂದಿತು. ಅಭಿಮಾನ ಶೂನ್ಯರಲ್ಲಿ ‘ಕರ್ನಾಟಕತ್ವ’ದ ಪರಿಕಲ್ಪನೆಯನ್ನು ಮೂಡಿಸಲು ಆಲೂರರಾದಿಯಾಗಿ ಅಂದಿನ ಕವಿಗಳೂ ಪ್ರಯತ್ನಿಸಿದರು. ದಾಳಿಗೆ ತುತ್ತಾದ ‘ಹಂಪಿ ವಿಜಯನಗರ’ಗಳು ತಮ್ಮ ವೈಭವಗಳನ್ನು ಕಳೆದುಕೊಂಡುದ್ದುದರ ಬಗ್ಗೆ ಕೆಚ್ಚಿನಿಂದ ಚಿತ್ರಿಸುವ ಪ್ರಯತ್ನಗಳು ನಡೆದವು. ಮತ್ತೆ ವಿದ್ಯಾರಣ್ಯರ ಪ್ರೇರಣೆಗಳಿಂದಾಗಿ ನಾಡು ತನ್ನ ಹಿಂದಿನ ವೈಭವವನ್ನು ಪಡೆದಂತೆ, ಪ್ರಸ್ತುತ ಛಿದ್ರಗೊಂಡ ಕರ್ನಾಟಕವನ್ನು ಒಂದುಗೂಡಿಸಲು ಅಭವ್ಯಕ್ತಿಸಲಾಯಿತು. ಇಂಥ ಪ್ರಯತ್ನಗಳು ‘ಕನ್ನಡಮ್ಮ’ನನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸಿದವು.

ಹೆಣ್ಣು ಸಂಕಥನದಲ್ಲಿ ಶಾಂತಚಿತ್ತದ ಹಾಗೂ ರೌದ್ರರೂಪದ ಎರಡೂ ಚಹರೆಗಳನ್ನು ಸಹ ‘ಕನ್ನಡಮ್ಮ’ನಿಗೆ ತೊಡಿಸಿದ್ದು ಕನ್ನಡ ಕಾವ್ಯ ವಿಶೇಷತೆಗಳಲ್ಲಿ ಒಂದು. ಅಷ್ಟೇ ಅಲ್ಲದೆ ಅವಳಿಗೆ ಕಡೆಂಗೋಡ್ಲು ಶಂಕರಭಟ್ಟರು ರಕ್ತ ಸಂಬಂಧದ ನಂಟನ್ನು ಬೆಸೆದದ್ದು ಗಮನಾರ್ಹ ಆಮ ಮೂಲಕ ಆಕೆಯನ್ನು ‘ಕುಲ ದೇವತೆ’ಯನ್ನಾಗಿಸುವ ರೂಪಕಗಳು ಬಳಕೆ ಬಂದದ್ದೂ ಇದೆ. ಧರ್ಮದ ಹಲವು ಪರಿಕಲ್ಪನೆಗಳು ಆಕೆಯನ್ನು ‘ದೇವಿ’ಯನ್ನಾಗಿಸಿದವು. ಇದು ನವೋದಯದ ಪ್ರಧಾನ ರೂಪಕ ವಿಶ್ಲೇಷಣೆಗಳಲ್ಲಿ ಒಂದು. ಈ ರೂಪಕ ಬಹುಪಾಲು ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಅಭಿವ್ಯಕ್ತಗೊಂಡಿದೆ.

ವಸಾಹತು ಕಾಲಘಟ್ಟದಲ್ಲಿ ‘ಕನ್ನಡಮ್ಮ’ನ ರೂಪಕದಂತೆ ಹೆಣ್ಣಿನ ಸಂಕಥನವೇ ಏಕೆ ಅನವರಣಗೊಂಡಿತು ಎನ್ನುವ ಪ್ರಶ್ನೆ ಕಾಡುತ್ತದೆ. ರಾಷ್ಟ್ರ ಹಾಗೂ ಪ್ರಾಂತೀಯ ನೆಲೆಗಳಲ್ಲಿ ‘ಸ್ತೀ’ ರೂಪಕತ್ವಗಳೆ ಪ್ರಧಾನ ಭಿತ್ತಿಯನ್ನು ಪಡೆದದ್ದು ಏಕೆ ಎಂಬುದನ್ನು ಪರಿಶೀಲಿಸ ಬೇಕಿದೆ. ಬಹುಶಃ ಇದಕ್ಕೆ ಕಾರಣ ನಮ್ಮ ಹಿಂದಿನ ಪಾರಂಪರಿಕ ಪ್ರಕ್ರಿಯೆಗಳ ಜೊತೆಗೆ ಬ್ರಿಟಿಶರ ಅಸ್ತಿತ್ವವೂ ಕಾರಣ ಆಗಿರಬಹುದು. ಅಂಗ್ಲರ ‘ವಿಕ್ಟೋರಿಯಾ ರಾಣಿ’ಯ ಚಿತ್ರಣಗಳು, ಅಂತೆಯೇ ‘ಆಳುವ ಬ್ರಿಟಾನಿಯಾ’ಳ ರೂಪಕಗಳನ್ನು ಸಮೀಕರಿಸುವ ಪ್ರಯತ್ನ ನವೋದಯದ್ದಾಗಿರಬಹುದು. ‘ಶ್ರೀ’ ಅವರು ಬಹುಶಃ ಈ ನೆಲೆಯಲ್ಲಿಯೆ ‘ಕನ್ನಡಮ್ಮ’ನನ್ನು ‘ವಿಕ್ಟೋರಿಯ ರಾಣಿ’ಯಂತೆ ‘ಕನ್ನಡಿಗರೊಡತಿ ರಾಜೇಶ್ವರಿ’ ಎಂದಿರುವುದು.

ರಾಷ್ಟ್ರವು ವಸಾಹತುಶಾಹಿ ಆಳ್ವಿಕೆಯಿಂದ ಬಿಡುಗಡೆಗೊಂಡ ಮೇಲೆ, ಅಂತೆಯೆ ನಾಡು ಏಕೀಕರಣವಾದ ಮೇಲೆ ಎಲ್ಲ ಬಗೆಯ ರೂಪಕ – ಪ್ರತೀಕಗಳು, ಆಶಯಗಳು ಪ್ರಶ್ನಿಸಲ್ಪಟ್ಟವು. ದೇಶಾಭಿಮಾನ – ಭಾಷಾಭಿಮಾನದ ಚಿಂತನೆಗಳು ಬದಲಾಗಿ ಜೀವನದಾಟಿಯ ವೈಚಾರಿಕತೆ ಪ್ರಧಾನ ಧಾರೆಗೆ ಬಂದಿತು. ಸಾಂಸ್ಕೃತಿಕವಾಗಿ ಕಲ್ಪಿಸಿಕೊಳ್ಳಲಾದ ಅನೇಕ ಪರಿಕಲ್ಪಪನೆಗಳು ಸಮಕಾಲೀನ ರಾಜಕಾರಣದಲ್ಲಿ ವಿಫಲಗೊಂಡವು. ಸ್ವಾತಂತ್ರ್ಯ, ಏಕೀಕರಣದ ಸಾಕಾರತೆಗಳು ನಿರೀಕ್ಷಿಸಿದ್ದ ಪ್ರತಿಫಲಗಳನ್ನು ನೀಡದಾದಾಗ ಅನೇಕ ಬಗೆಯ ಟೀಕೆ – ವಿಮರ್ಶೆಗಳು ಸೃಷ್ಟಿಶೀಲ ಜಗತ್ತಿನಿಂದಲೇ ಮೊದಲ್ಗೊಂಡದ್ದು ಗಮನಾರ್ಹ. ನವೋದಯದ ಆಶಯಗಳು ಪ್ರಗತಿಶೀಲ ಆಶಯಗಳಿಗೆ ತದ್ವಿರುದ್ಧತೆಯನ್ನು ವ್ಯಕ್ತಪಡಿಸಿದ್ದವು. ಗಾಂಧಿ ಕಲ್ಪಿತ ಕೃಷ್ಟಿಗಿಂತ ಬಡತನ, ಹಸಿವು, ಶ್ರಮದ ಬಗೆಗೆ ವೈಚಾರಿಕತೆ ಹುಟ್ಟಿಕೊಂಡಿತು. ಈ ಹಂತದಲ್ಲಿ ‘ಕನ್ನಡಮ್ಮ’ನ ರೂಪಕ – ಪ್ರತೀಕಗಳೆಲ್ಲವೂ ಪ್ರಶ್ನೆಗೆ ಈಡಾದವು. ಅಡಿಗರಂಥವರು “ಕನ್ನಡವೆಂದರೆ ತಾಯಿತೇ, ದೇವಿಯೆ?” ಎಂದು ಪ್ರಶ್ನಿಸಿ ಅದು “ನಾನೂ, ನೀನೂ ಅವರು” ಎಂದು ಉತ್ತರಿಸಿದರು.

‘ಕನ್ನಡಮ್ಮ’ನ ಭಾವನಾತ್ಮಕ ರೂಪಕಗಳು ಕೇವಲ ಮಾತು – ಬರೆಹಗಳಲ್ಲಿ ಮಾತ್ರ ಉಳಿದವು. ಸಮಜವಾದಿ, ಸಮತಾವಾದಿ ರಾಜಕೀಯ ಚಂತನೆಗಳಿಗೆ ಬೆಲೆ ಬಂದಂತೆ ಸಾಹಿತ್ಯದಲ್ಲೂ ಆ ಬಗೆಯ ಸಂವೇದನೆಗಳೂ ಕಾಣಿಸಿಕೊಂಡುವ. ಇದರಿಂದ ಮಾನವನ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅಸ್ತಿತ್ವವಾದಿ ನಿಲುವುಳೇ ಮುಖ್ಯ ಎಂಬುದು ದೃಢಪಟ್ಟಿತು. ಈ ಚಿಂತನೆ ಕನ್ನಡದಲ್ಲೇ ಅಲ್ಲದೆ ಎಲ್ಲ ಪ್ರಾಂತೀಯ ಭಾಷೆಗಳಿಂದಲೂ ವ್ಯಕ್ತವಾದದ್ದು ಮಹತ್ತ್ವದ ಸಂಗತಿ.

ಕೊನೆಯದಾಗಿ, ಬಂಕಿಮರು ೧೮೭೦ ರ ದಶಕದಲ್ಲಿ ಬರೆದ ‘ವಂದೇ ಮತಾರಂ’ ರಾಷ್ಟ್ರೀಯ ಹೋರಾಟದ ಸನ್ನಿವೇಶದಲ್ಲಿ ಪ್ರಧಾನ ರೂಪಪಕಗಳನ್ನೇ ಸೃಷ್ಟಿಸಿತು. ಅದಲ್ಲಿನ ಪ್ರತಿಮೆ – ಸಂಕೇತಗಳು ಮುಂದೆ ಸ್ವದೇಶಿ, ಅಸಹಕಾರ ಚಳವಳಿಯ ಸಂದರ್ಭದಲ್ಲಿ ಭಿನ್ನ ಬಗೆಯಲ್ಲಿ ನಿರ್ವಚನೆಗೆ ಒಳಗಾದವು. ಒಡೆದು ಆಳುವ ನೀತಿಯ ಸರದಾರರಾದ ಬ್ರಿಟಿಶರಿಗೂ ಸಹ ಈ ಸಂಕೇತಗಳು ಬಂಡವಾಳವಾಗದೆ ಇರಲಿಲ್ಲ. ‘ವಂಗ – ಭಂಗ’ದ ಅನಂತರ ಭಾಷೆಯ ಜೊತೆಗೆ ಧರ್ಮಗಳಲ್ಲಿಯೂ ಒಡಕನ್ನುಂಟು ಮಾಡುವ ಬ್ರಿಟಿಶರ ಹುನ್ನಾರಕ್ಕೆ ಭಾರತೀಯರು ಒಳಗಾಗಿದದ್ದು ಉಂಟು. ಅದರ ಪರಿಣಾಮವೇ ಮಹಮದ್ ಅಲಿ ಜಿನ್ನಾ ಮೊದಲಾದವರು ‘ವಂದೇ ಮಾತರಂ’ ವಿರುದ್ಧ ಎತ್ತಿದ ಧ್ವನಿ. ಪ್ರಧಾನ ಧಾರೆಯಲ್ಲಿದ್ದ ಹಿಂದು – ಮುಸ್ಲಿಮರನ್ನು ಛಿದ್ರಗೊಳಿಸುವಲ್ಲಿ ಈ ಧ್ವನಿ ಯಶಸ್ವಿ ಆಯಿತು. ಅಂದರೆ ಅಮೂತ್ ಸ್ವರೂಪದ ಆಧ್ಯಾತ್ಮಿಕತೆಯಲ್ಲಿ ನಂಬಿಕೆಯಿಟ್ಟಿದ್ದ ಭಾರತೀಯ ಮುಸ್ಲಿಮರು ಮೂರ್ತ ಸ್ವರೂಪದ ‘ವಂದೇ ಮಾತರಂ’ನ ಕಾಳಿಯ ಸಂಕೇತವನ್ನು ಒಪ್ಪಲು ಹಿಂದೇಟು ಹಾಕುವಂತಾಯಿತು. ಇದು ‘ಭಾರತ ಮಾತೆ’ಯ ರೂಪಕ – ಪ್ರತೀಕಗಳಿಗೆ ಭಂಗ ತರುವ ನಿಟ್ಟಿನಲ್ಲಿ ಮುಂದುವರೆದದ್ದೂ ಹೌದು (ಈ ಕುರಿತ ಸಂಪ್ರಬಂಧವೊಂದನ್ನು ಅನುಬಂಧ – ೩ರಲ್ಲಿ ಕೊಡಲಾಗಿದೆ). ಈ ಬಗೆಯ ತೊಡಕುಗಳು ಕನ್ನಡ ಅಥವಾ ಕರ್ನಾಟಕದ ಸಂದರ್ಭದಲ್ಲಿ ಅಂಥ ಪರಿಣಾಮಗಳನ್ನು ಉಂಟು ಮಾಡಿಲಿಲ್ಲವೆಂದು ಅನ್ನಿಸುತ್ತದೆ. ಏಕೆಂದರೆ ತೆಲುಗು, ತಮಿಳು ಮೊದಲಾದ ಭಾಷಿಕರಿಗಿಂತಲೂ ಹೆಚ್ಚಿನ ತಾಯಿ, ಮಗಳ ಪ್ರತೀಕಗಳು ಕನ್ನಡದಲ್ಲಿ ಹಾಸುಹೊಕ್ಕಾಗಿದ್ದವು. ಜೊತೆಗೆ ‘ವಂದೇ ಮಾತರಂ’ ಬಗೆಯ ಚಿಂತನೆಗಿಂತಲೂ ಭಿನ್ನವಾದ ಹಾಗೂ ಸೆಕ್ಯುಲರ್ ಆದ (ಧರ್ಮ ನಿರಪೇಕ್ಷವಾದ) ರೂಪಕ – ಪ್ರತೀಕಗಳು ನಮ್ಮಲ್ಲಿ ಅನಾವರಣಗೊಂಡಿದ್ದವು. ಇಂಥ ಅಭಿವ್ಯಕ್ತಿಯೆ ಕನ್ನಡಿಗರನ್ನು ಈ ಹೊತ್ತಿಗೂ ಇತರರಿಗಿಂತಲೂ ಭಿನ್ನವಾಗಿ ನೋಡಲು ಸಾಧ್ಯ ಆಗಿಸಿದ್ದು.