ನಾಡು ‘ಸುವರ್ಣ ಕರ್ನಾಟಕ’ದ ಉತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. ಚದುರಿಹೋಗಿದ್ದ ಕನ್ನಡ ಭೂಪ್ರದೇಶಗಳು ಒಂದೇ ಆಡಳಿತದ ತೆಕ್ಕೆಗೆ ಬಂದು ಐವತ್ತು ವರಷಗಳೇ ಆಗುತ್ತಿದೆ. ಕಳೆದ ಶತಮಾನದ ಎರಡು ಮಹತ್ತ್ವದ ಘಟನೆಗಳು ಅಂದರೆ, ಇಂಡಿಯಾದ ಮುಕ್ತತೆ ಹಾಗೂ ಕನ್ನಡ ನಾಡಿನ ಒಂದುಗೂಡುವಿಕೆ. ಈ ಎರಡೂ ಚಾರಿತ್ರಿಕ ಘಟನೆಗಳು ಒಟ್ಟೊಟ್ಟಿಗೆ ಸಾಗಿದಂಥವು. ರಾಷ್ಟ್ರ ಹಾಗೂ ನಾಡಿನ ಆಶಯಗಳಿಗೆ ಒಂದೇ ಘಟ್ಟದಲ್ಲಿ ನಿಂತು ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ ಕನ್ನಡಿಗರದು. ಈ ರಾಜಕಾರಣದ ಪ್ರಕ್ರಿಯೆಯಲ್ಲಿ ಒಂದು ಇನ್ನೊಂದನ್ನು ವಿರೋಧಿ ನೆಲೆಯಲ್ಲಿ ಪರಿಭಾವಿಸುವ ತೊಕುಗಳೇ ಹೆಚ್ಚು. ಇಂಥ ಸೂಕ್ಷ್ಮತೆ, ಎಚ್ಚರಗಳ ಮೂಲಕ ಅನುಸಂಧಾನಗೊಳ್ಳಬೇಕಾದ ಜರೂರನ್ನು ಮೂಡಿಸಿದವರು ನಮ್ಮ ಹಿರಿಯರು. ಅದರಲ್ಲೂ ಅಂದಿನ ಸೃಷ್ಟಿಶೀಲರು ಹಾಗೂ ಅವರ ಸೃಷ್ಟಿಶೀಲತೆ. ಈ ದಿಸೆಯಲ್ಲಿ ಸಾಹಿತಿ – ಕಲಾವಿದರು ರಾಜಕಾರಣಿಗಳಿಗಿಂತ ಭಿನ್ನ. ರಾಜಕಾರಣದ ಪರಿಕಲ್ಪನೆಗಳ ಆಶಯಗಳಿಗೆ ಸರಿಯದ ಹಿನ್ನೆಲೆ, ವೇದಿಕೆಯನ್ನು ನಿರ್ಮಿಸಿಕೊಟ್ಟವರು ಸೃಷ್ಟಿಶೀಲ ಚಿಂತಕರೇ ಆಗಿದ್ದಾರೆ. ಇಂಡಿಯಾದ ಅಥವಾ ಕನ್ನಡದ ಸಂದರ್ಭದಲ್ಲಿ ಸಾಂಸ್ಕೃತಿಕ ಚರಿತ್ರೆಯ ಸ್ವರೂಪವನ್ನು ಅನಾವರಣಗೊಳಿಸಲು ಈ ಬಗೆಯ ಚಿಂತನೆಗಳು ಸಹಕಾರಿ ಆಗಿವೆ. ಅಲ್ಲದೆ ಹೊಸ ಒಳನೋಟಗಳನ್ನು ಸಹ ಹುಟ್ಟು ಹಾಕಿವೆ. ವಸಾಹತೋತ್ತರ ಚಿಂತನಾ ಸ್ವರೂಪದ ಚರಿತ್ರೆಯ ವಿಶ್ಲೇಷಣೆಗಳಿಗೂ ಈ ಮಾತು ಅನ್ವಯ ಆಗುತ್ತದೆ. ಆ ಬಗೆಯ ಆಲೋಚನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ‘ಕನ್ನಡಮ್ಮ’ನ ಅಧ್ಯಯನ ಒಂದು ಕಿರುಪ್ರಯತ್ನ.

ಪಾಶ್ಚಿಮಾತ್ಯರ ವಸಾಹತುಗಳಾಗಿ ಮಾರ್ಪಟ್ಟ ರಾಷ್ಟ್ರಗಳು ಹಲವು. ಅದರಲ್ಲೂ ಪೂರ್ವದ ರಾಷ್ಟ್ರಗಳಲ್ಲಿನ ‘ರಾಷ್ಟ್ರೀಯತೆ’ಯ ಅನುಭವ – ಅನುಭೂತಿಗಳು ಪರಿಶೀಲನೆಗೆ ಅಧ್ಯಯನ ಯೋಗ್ಯವಾದವು. ಲೆನಿನ್ ‘ಪೌರಾತ್ಯ ನಾಡುಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ’ ಎಂಬ ಬರೆಹದಡಿಯಲ್ಲಿ ರಾಷ್ಟ್ರೀಯತೆಯನ್ನು ಕುರಿತು ವಿವರವಾಗಿ ಚರ್ಚಿಸಿದ್ದಾನೆ. ರಾಜಕಾರಣದ ಪರಿಕಲ್ಪನೆಗಲೂ ಸಂಸ್ಕೃತಿಯ ಅನೇಕ ಪರಿಕಲ್ಪನೆಗಳನ್ನು ಪ್ರತೀಕಗಳನ್ನಾಗಿ ಬದಲಾಯಿಸುತ್ತಾ ಹೋಗುತ್ತವೆ. ಈ ಮಾತು ಇಂಡಿಯಾದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣದ ಪ್ರಕ್ರಿಯೆಗಳಿಗೂ ಅನ್ವಯಿಸುತ್ತದೆ. ನವೋದಯದ ಕಾಲಘಟ್ಟದಲ್ಲಿ ರಾಷ್ಟ್ರೀಯ ಭಾವನೆಗಳನ್ನು ಉದ್ದೀಪಿಸಲು ಈ ಬಗೆಯ ರೂಪಕ – ಪ್ರತೀಕಗಳು ಅನಾವರಣಗೊಂಡವು. ಅದರಲ್ಲೂ ಆಧುನಿಕ ಕನ್ನಡ ಕಾವ್ಯದ ಪ್ರತಿಮೆಗಳ ಹಿನ್ನೆಲೆಯಲ್ಲಿ ‘ಹೆಣ್ಣು ಸಂಕಥನ’ವೊಂದನ್ನೇ ಸೃಷ್ಟಿಸಲಾಯಿತು. ‘ರಾಷ್ಟ್ರ’ ಹಾಗೂ ‘ನಾಡು’ಗಳನ್ನು ‘ತಾಯಿ-ಮಗಳ ನಂಟಿನೊಂದಿಗೆ ಜೋಡಿಸಿ ಪ್ರತಿಬಿಂಬಿಸುವ ಪ್ರಯತ್ನಗಳು ನಡೆದವು. ವಸಾಹತು ಪ್ರಭುತ್ವವನ್ನು ಅದರಲ್ಲೂ ಬ್ರಿಟಿಶರನ್ನು ಹೊರಗಟ್ಟಲು ನಮ್ಮಲ್ಲಿ ಸೃಷ್ಟಿ ಆದದ್ದು ‘ಹೆಣ್ಣೆಗೆ ಭಾರತ’ದ ಪ್ರತಿಮೆಗಳೂ. ಈ ಪ್ರತಿಮೆ – ಸಂಕೇತಗಳ ಹಿಂದಿರುವ ಆಶಯ ‘ಅಹಿಂಸೆ’ಯೇ ಆಗಿದ್ದರೂ ವೀರತ್ವದ, ಕ್ಷಾತ್ರತೇಜಸ್ಸಿನ ಚಿಂತನೆಗಳು ಹೊರಹೊಮ್ಮದೆ ಇರಲಿಲ್ಲ. ಆದರೆ ಅವು ಅಭಿವ್ಯಕ್ತಗೊಂಡದ್ದು ಹೆಣ್ಣಿನ ಸಂವೇದನೆಯ ರೂಪಕ – ಪ್ರತೀಕಗಳಲ್ಲಿ ಮಾತ್ರ. ಅಂದರೆ ಇವುಗಳಿಗೆ ಇದ್ದಂಥ ತೀವ್ರತರವಾದ ಪರಿಣಾಮ ಬೀರುವ ಶಕ್ತಿಯನ್ನು ನಮ್ಮ ಸೃಷ್ಟಿಶೀಲರು ಅರಿತಿದ್ದರು. ಇತರೆ ಭಾಷಿಕರಲ್ಲೂ ಈ ಬಗೆಯ ಚಿಂತನೆಗಳು ನಡೆದಿವೆಯಾದರೂ ಕನ್ನಡದಲ್ಲಿ ಅವೆಲ್ಲಕ್ಕಿಂತಲೂ ಭಿನ್ನ. ಇಂಥ ಭಿನ್ನತೆಗಳ ಸ್ವರೂಪದ ಹಿನ್ನೆಲೆಯಲ್ಲಿ ನಾಡು. ನುಡಿ ಪ್ರತೀಕಗಳನ್ನು ಪರಿಶೀಲಿಸಿರುವ ಪ್ರಯತ್ನ ಇಲ್ಲಿನದು. ಈ ಪ್ರಯತ್ನಕ್ಕೆ ನಾಡಿನ ಹತ್ತು ಹಲವು ವಿದ್ವಾಂಸರು, ಚಿಂತಕರು ನೆರವಾಗಿದ್ದಾರೆ. ಅವರುಗಳಲ್ಲಿ ಚಂದ್ರಶೇಖರ ಕಂಬಾರ, ಕಿ.ರಂ. ನಾಗರಾಜ, ಕೆ.ವಿ. ನಾರಾಯಣ, ಬಿ. ಷೇಕ್ ಅಲಿ, ಎಸ್. ಶೆಟ್ಟರ್, ಬಸವರಾಜ ಕಲ್ಗುಡಿ, ಎಸ್,. ಚಂದ್ರಶೇಖರ್, ಅಶಿಷ್ ನಂದಿ, ಡಿ. ಆರ್. ನಾಗರಾಜ್, ಕೆ.ವಿ. ಸುಬ್ಬಣ್ಣ ಮೊದಲಾದವರು ಪ್ರಮುಖರು. ಅವರೆಲ್ಲರಿಗೂ ನನ್ನ ಧನ್ಯವಾದಗಳು.

‘ಕನ್ನಡಮ್ಮ’ ಯೋಜನೆಯು ಕೃತಿಯ ರೂಪದಲ್ಲಿ ಹೊರಬರುತ್ತಿರುವ ಈ ಸಂದರ್ಭದಲ್ಲಿ ಕಳೆದ ಹದಿಮೂರು ವರುಷಗಳ ಅಧ್ಯಯನದ ಹಿನ್ನೆಲೆ ಇದೆ. ಈ ಅಧ್ಯಯನದ ವಿವಿಧ ಹಂತಗಳಲ್ಲಿ ಅನೇಕ ವ್ಯಕ್ತಿಗಳು, ಸಂಘ – ಸಂಸ್ಥೆಗಳು, ಮಾಹಿತಿ – ಆಕಾರಗಳನ್ನು ಒದಗಿಸಿಕೊಟ್ಟಿದ್ದಾರೆ. ಅವರೆಲ್ಲರನ್ನು ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇನೆ. ಪ್ರಕಟನೆಯ ಹಂತದಲ್ಲಿ ನೆಚ್ಚಿನ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ತಮ್ಮ ಸಹಜವಾದ ಹಾಗೂ ಪರಿಪೂರ್ಣವಾದ ಸಹಕಾರವನ್ನು ನೀಡಿ ಬೆಂಬಲಿಸಿದ್ದಾರೆ. ಅವರಿಗೂ ಹಾಗೂ ಹಿಂದಿನ ಕುಲಪತಿಗಳಾದ ಎಂ. ಎಂ. ಕಲಬುರ್ಗಿ, ಎಚ್. ಜೆ. ಲಕ್ಕಪ್ಪಗೌಡ ಅವರಿಗೂ, ಎಂದಿನಂತೆ ಉತ್ಸಾಹ ತುಂಬುತ್ತಿರುವ ವಿಭಾಗದ ಪ್ರೊ. ಲಕ್ಷ್ಮಣ್ ತೆಲಗಾವಿ, ಖ್ಯಾತ ಕತೆಗಾರರಾದ ಕರೀಗೌಡ ಬೀಚನಹಳ್ಳಿ, ಪ್ರಸಾರಾಂಗದ ನಿರ್ದೇಶಕರಾದ ಹಿ.ಚಿ. ಬೋರಲಿಂಗಯ್ಯ, ಅವರುಗಳನ್ನು ಮರೆಯಲು ಸಾಧ್ಯವಿಲ್ಲ.

ಅಂತೆಯೇ ಗೆಳೆಯರಾದ ಎಚ್. ಬಿ. ರವೀಂದ್ರ, ಬಿ. ಸುಜ್ಞಾನಮೂರ್ತಿ, ಕೆ.ಎಲ್. ರಾಜಶೇಖರ್, ಕಲಾವಿದ ಕೆ.ಕೆ. ಮಕಾಳಿ, ಡಿ.ಟಿ.ಪಿ. ಮಾಡಿಕೊಟ್ಟ ಶ್ರೀಮತಿ ಎ. ನಾಗವೇಣಿ, ಸಹಕರಿಸಿದ ವಿಶ್ವವಿದ್ಯಾಲಯದ ಹಾಗೂ ವಿಭಾಗದ ಎಲ್ಲ ಸಹೋದ್ಯೋಗಿ ಮಿತ್ರಿಗೂ ನನ್ನ ಧನ್ಯವಾದಗಳು. ಹಿರಿಯ ಕಲಾವಿದರಾದ ಬಿ. ಕೊಂಡಾಚಾರಿ ಅವರು ತಾವು ಬಹಳ ಹಿಂದೆ ರಚಿಸಿದ ರೇಖಾಚಿತ್ರಗಳನ್ನು ಈ ಕೃತಿಯಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಅವರಿಗೂ ಹಾಗೂ ದೊಡ್ಡ ಮೇಟಿ ಅಂದಾನಪ್ಪ ಅವರ ಮಗ ಡಾ. ಅಶೋಕ ದೊಡ್ಡಮೇಟಿ ಅವರಿಗೂ ನನ್ನ ವಂದನೆಗಳು.

ಸಿ.ಆರ್‌. ಗೋವಿಂದರಾಜು