ವಾಷಿಂಗ್‌ಟನ್ ಮಹಾನಗರದ ಪರಿಸರದ, ಉಪನಗರವಾದ ಗೇಥೆಸ್‌ಬರ್ಗ್ ಎಂಬಲ್ಲಿನ ಡಾ. ಎಂ. ಎಸ್. ನಟರಾಜ್ ಅವರ ಮನೆಯ ಕೆಳ ಹಂತದ ಕೊಠಡಿಯಿಂದ ಹೊರಗೆ ನೋಡುತ್ತೇನೆ-ಬೆಳಗಿನ ಬೆಚ್ಚನೆಯ ಬಿಸಿಲಿನಲ್ಲಿ ಮನೆ ಸುತ್ತ ಕವಿದುಕೊಂಡ ದಟ್ಟವಾದ ಹಸಿರು, ಅತ್ಯಂತ ಆಪ್ಯಾಯಮಾನವಾಗಿದೆ. ಹಿಂದಿನ ದಿನ ಸಂಜೆ, ಸ್ಯಾಲಿಸ್‌ಬರಿಯಿಂದ ಉಮೇಶ್ ಅವರ ಕಾರಿನಲ್ಲಿ ಬರುವಾಗ, ಮೂರುವರೆ ಗಂಟೆಗಳ ಪಯಣದ ಅನಂತರ ವಾಷಿಂಗ್‌ಟನ್‌ನ ಪರಿಸರವನ್ನು ಪ್ರವೇಶಿಸಿದಾಗಲೆ, ದಟ್ಟವಾದ ಹಸಿರಿನ ಕೋಟೆಯನ್ನು ಹೊಕ್ಕ ಅನುಭವವಾಗಿತ್ತು. ಈ ದೇಶಕ್ಕೆ ಬಂದಂದಿನಿಂದಲೂ, ನಾನು ಪ್ರಯಾಣ ಮಾಡಿದ ನೂರಾರು ಮೈಲಿಗಳ ದಾರಿಯ ಉದ್ದಕ್ಕೂ ಹಸಿರೋ ಹಸಿರು. ಈ ವಾಷಿಂಗ್‌ಟನ್ ನಗರ ಪರಿಸರವಂತೂ ಇನ್ನೂ ಹಸಿರು. ಮನುಷ್ಯನ ಆರೋಗ್ಯಕ್ಕೆ, ಹೀಗೆ ಹಸಿರನ್ನು ಉಳಿಸಿಕೊಳ್ಳುವುದು ಎಷ್ಟು ಅಗತ್ಯ ಎಂಬುದನ್ನು ಈ ಜನ ಕಂಡುಕೊಂಡ ಹಾಗೆ, ನಾವಿನ್ನೂ ಕಂಡುಕೊಂಡಿಲ್ಲ. ಹಾಗೆ ನೋಡಿದರೆ ಭಾರತೀಯರಂತೆ ನಿಸರ್ಗವನ್ನು ಭಕ್ತಿಯಿಂದ ಆರಾಧಿಸದವರೂ ಇಲ್ಲ; ಹಾಗೆಯೇ ಅದನ್ನು ನಿಷ್ಕರುಣೆಯಿಂದ ನಾಶಪಡಿಸದವರೂ ಇಲ್ಲ.

ವಾಷಿಂಗ್‌ಟನ್ ಅಮೆರಿಕಾದ ರಾಜಧಾನಿ. ಈ ರಾಷ್ಟ್ರದ ಅಧ್ಯಕ್ಷರು  ವಾಸಮಾಡುವ ಸುಪ್ರಸಿದ್ಧವಾದ ಶ್ವೇತಭವನ (ವೈಟ್‌ಹೌಸ್) ಇರುವುದು ಇಲ್ಲಿ. ಬಹು ಸಂಖ್ಯೆಯ ವಸ್ತುಪ್ರದರ್ಶನಾಲಯಗಳು ಹಾಗೂ ಸ್ಮಾರಕಗಳಿರುವುದು ಇಲ್ಲಿ. ಇವುಗಳನ್ನು ನೋಡಲೆಂದು ನಾನು ಮತ್ತು ಹಿಂದಿನ ದಿನ ಪಾಟ್ಸ್‌ಟೌನ್‌ನಿಂದ ಬಂದು ಜತೆಗೂಡಿಕೊಂಡ ಹರಿಹರೇಶ್ವರ ಅವರೂ, ಷೇಡೀಗ್ರೋವ್ ಎಂಬಲ್ಲಿನ ಮೆಟ್ರೋ (ಸುರಂಗ ರೈಲು) ನಿಲ್ದಾಣಕ್ಕೆ ಬಂದೆವು. ಈ ಮೆಟ್ರೋನಿಲ್ದಾಣ ಅತ್ಯಂತ ಶ್ವೇತ ಶುಭ್ರವಾಗಿ, ಕಮಾನಿನಾಕಾರದ ವಿನ್ಯಾಸದಿಂದ ಶೋಭಿಸುತ್ತದೆ. ಚಲಿಸುವ ಮೆಟ್ಟಿಲುಗಳ ಮೂಲಕ, ಕೆಳಗೆ, ಸುರಂಗ ರೈಲು ಬರುವ ಪಾತಾಳಕ್ಕೆ ಇಳಿದರೆ, ನಾವೇ ಟಿಕೆಟ್‌ಗಳನ್ನು ಕೊಂಡುಕೊಳ್ಳುವ ವಿವರಗಳು ಪ್ರದರ್ಶಿತವಾಗಿದೆ. ಅಲ್ಲಿ ಟಕೆಟ್ ಕೊಡುವವರಾಗಲೀ, ಚೆಕ್ ಮಾಡುವವರಾಗಲೀ ಇಲ್ಲ. ಷೇಡೀಗ್ರೋವ್‌ದಿಂದ ಸ್ಮಿತ್ ಸೋನಿಯಾಕ್ಕೆ ಹೋಗಬೇಕಾಗಿದ್ದ ನಾವು, ಒಂದು ಡಾಲರ್ ಮತ್ತು ಸೆಂಟನ್ನು ಯಂತ್ರವೊಂದರ ಬಾಯೊಳಗೆ ತೂರಿಸಿದರೆ, ಅದರ ಬಗಲಲ್ಲಿ ವಿವರಗಳನ್ನು ಮುದ್ರಿಸಿದ ಟಿಕೆಟ್ ಹೊರಕ್ಕೆ ಬರುತ್ತದೆ. ಆ ಟಿಕೆಟ್ಟನ್ನು ಎರಡು ಉದ್ದ ಕಂಬಿಗಳ ಮೂಲಕ ಹಾದು ಹೋಗಬೇಕಾದ ಗೇಟಿನಾಕಾರದ ಮೊದಲ ತೂತಿನಲ್ಲಿ ತೂರಿಸಿದರೆ, ನಮಗೆ  ಅಡ್ಡವಾಗಿದ್ದ ಹಾಗೂ ತಡೆಯಾಗಿದ್ದ ಚಿಕ್ಕ ಹಲಗೆಯಾಕಾರದ  ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ. ಮುಂದೆ ಚಲಿಸುವ ಮೆಟ್ಟಿಲುಗಳ ಮೂಲಕ ಇನ್ನೂ ಒಂದು ಹಂತ ಕೆಳಗಿಳಿದರೆ, ನಾವು ನಿಂತ ಪ್ಲಾಟ್‌ಫಾರಂ ಎದುರಿನ ಕಂಬಿಗಳ ಮೇಲೆ, ಕೇವಲ ಮೂರು ನಾಲ್ಕು ನಿಮಿಷಗಳಿಗೊಂದರಂತೆ, ಅದೆಲ್ಲಿಂದಲೋ ಸುರಂಗರೈಲು ಭುಸ್ಸೆಂದು ಧಾವಿಸಿ ಬಂದು ಧಡ್ಡೆಂದು ನಿಲ್ಲುತ್ತದೆ. ನಿಮಿಷಾರ್ಧದಲ್ಲಿ ಅದರ ಬಾಗಿಲುಗಳು ಸರ್ರನೆ ಸರಿದು ತೆರೆದುಕೊಳ್ಳುತ್ತವೆ. ಅವಸರದಿಂದ ಇಳಿಯುವವರು ಇಳಿದು, ಹತ್ತುವವರು ಹತ್ತಿದ ಮೇಲೆ, ಡಿಂಗ್ ಡಾಂಗ್ ಎಂಬ ಘಂಟೆಯ ಶಬ್ದವಾಗಿ ತೆರೆದ ಬಾಗಿಲುಗಳು ಒಂದಕ್ಕೊಂದು ಸೇರಿಕೊಳ್ಳುತ್ತವೆ. ಸುಯ್ಯೋ ಎನ್ನುತ್ತ ಕತ್ತಲೆಯ ಬಿಲದೊಳಕ್ಕೆ ನುಗ್ಗುವ ಮಿಂಚಿನ ಮಹಾಸರ್ಪದಂತೆ ಸುರಂಗರೈಲು, ನೆಲದೊಳಗಣ ದಾರಿಯೊಳಗೆ ಧಾವಿಸುತ್ತದೆ.

ಷೇಡಿಗ್ರೋವ್‌ದಿಂದ ಸ್ಮಿತ್‌ಸೋನೀಯಾಕ್ಕೆ ಮುಕ್ಕಾಲು ಗಂಟೆಯ ಪಯಣ. ರೈಲಿಳಿದು, ಚಲಿಸುವ ಮೆಟ್ಟಿಲುಗಳ ಮೂಲಕ ಮೇಲೇರಿ, ನಗರದ ಅತ್ಯಂತ ಪ್ರಮುಖವಾದ ನೆಲೆಗೆ ನಾವು ಬಂದೆವು. ಸ್ಮಿತ್ ಸೋನಿಯಾ ಎಂದು ಕರೆಯಲಾಗುವ ಈ ಪರಿಸರದಲ್ಲೇ ಕ್ಯಾಪಿಟಾಲ್ ಅಥವಾ ಅಮೆರಿಕಾ ಸರ್ಕಾರದ ಪ್ರಧಾನ ಆಡಳಿತ ಕಛೇರಿಗಳು ಇರುವುದು. ತುಂಬಾ ವಿಸ್ತಾರವಾದ ಹುಲ್ಲುಗಾವಲ ಬಯಲ ಆಚೆ ಈಚೆಯ ರಸ್ತೆಗಳ ಬದಿಗೆ ಗ್ರೀಕ್ ಮಾದರಿಯ ಬೃಹದಾಕಾರದ ಕಟ್ಟಡಗಳ ಒಳಗೆ ವಸ್ತು ಪ್ರದರ್ಶನಾಲಯಗಳಿವೆ. ಅದರಾಚೆಗೆ ಪಾರ್ಲಿಮೆಂಟ್ ಭವನ. ಹತ್ತಿರದಲ್ಲೇ ಶ್ವೇತಭವನ. ಇನ್ನೊಂದು ದಿಕ್ಕಿಗೆ ವಾಷಿಂಗ್‌ಟನ್ ಮೆಮೋರಿಯಲ್ ಎಂಬ ಸೂಚೀ ಸ್ತಂಭಾಕೃತಿಯ ಎತ್ತರವಾದ ಶಿಲ್ಪ. ಅದರ ಸುತ್ತ ಅಮೆರಿಕಾದ ಎಲ್ಲಾ ಆಡಳಿತ ಕಛೇರಿಗಳು.

ಇಡೀ ದಿನ ಈ ಪ್ರದೇಶದ ಮ್ಯೂಸಿಯಂಗಳನ್ನು, ಅದರಲ್ಲೂ ಕೆಲವೇ ಕೆಲವನ್ನು, ಖಚಿತವಾಗಿ ಹೇಳಬೇಕೆಂದರೆ ಕೇವಲ ನಾಲ್ಕೇ ನಾಲ್ಕನ್ನು ನೋಡಲು ಸಾಧ್ಯವಾಯಿತು. ಇನ್ನೂ ನೋಡಬಹುದಾದ ಮ್ಯೂಸಿಯಂಗಳ ಸಂಖ್ಯೆ ಹದಿನೈದಕ್ಕೂ ಹೆಚ್ಚಾಗಿವೆ. ಅಮೆರಿಕಾದ ಇತಿಹಾಸದ ಮ್ಯೂಸಿಯಂ, ನವ್ಯ ಶಿಲ್ಪದ ಮ್ಯೂಸಿಯಂ, ಆರ್ಟ್ಸ್ ಮತ್ತು ಸೈನ್ಸ್ ಮ್ಯೂಸಿಯಂಗಳನ್ನು ನೋಡುವಷ್ಟರಲ್ಲಿಯೇ ಹೊತ್ತು ಹೋಯಿತು.  ಈ ಮ್ಯೂಸಿಯಂಗಳ ವಿಸ್ತಾರಗಳೊಳಗೆ ಹತ್ತಿ ಇಳಿದು ನೋಡಬೇಕಾದ ವೈವಿಧ್ಯಗಳನ್ನು ಲೆಕ್ಕ ಹಾಕಿದರೆ, ಕನಿಷ್ಠಪಕ್ಷ ಇಲ್ಲಿರುವ ಮ್ಯೂಸಿಯಂಗಳಷ್ಟನ್ನೂ ನೋಡಲು ಮೂರು ತಿಂಗಳಾದರೂ ಬೇಕು.

ವಾಷಿಂಗ್‌ಟನ್ ಇನ್ನೂ ಅನೇಕ ಸ್ಮಾರಕಗಳ ಬೀಡು. ಇವುಗಳಲ್ಲಿ ಕೆಲವನ್ನಾದರೂ ನೋಡಲೆಂದು ಮರುದಿನ ಬೆಳಿಗ್ಗೆ ಹೊರಟರೆ ಇಡೀ ನಗರದ ಮೇಲೆ ಹಠಾತ್ತನೆ ಮಬ್ಬು ಕವಿದುಕೊಂಡು ಸಣ್ಣಗೆ ಸೋನೆ ಸುರಿಯತೊಡಗಿತು. ದಟ್ಟ  ಹಸುರಿನ ಮುಖಕ್ಕೆ ಇಳಿಯಬಿಟ್ಟ ಸೋನೆ ಮಳೆಯ ಪರದೆಯ ಮಬ್ಬಿನಲ್ಲಿ ಡಾ. ನಟರಾಜ್ ಅವರು ಏಕಕಾಲಕ್ಕೆ ನಮ್ಮ ಸಾರಥಿಯೂ ಮಾರ್ಗದರ್ಶಕರೂ ಆಗಬೇಕಾಯಿತು.

ವಾಷಿಂಗ್‌ಟನ್‌ನ ನ್ಯೂಕ್ಲಿಯರ್ ರೆಗ್ಯುಲೇಟರಿ ಕಮೀಷನ್ನಿನಲ್ಲಿ ವಿಭಾಗಾಧಿ ಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಂ. ಎಸ್. ನಟರಾಜ್ ಅವರು, ಮೂಲತಃ ಹಾಸನದವರು. ಬಹು ಹಿಂದೆಯೇ ಇಲ್ಲಿಗೆ ಬಂದು ನೆಲೆಸಿರುವ ಅವರು, ತಮ್ಮೊಳಗಿನ ಭಾರತೀಯ – ಅಮೆರಿಕನ್ ವ್ಯಕ್ತಿತ್ವಗಳ ಸಂಘರ್ಷವನ್ನು ತಾವು ಬರೆದ ಬರೆಹಗಳಲ್ಲಿ ಬಹು ಸೊಗಸಾಗಿ ತೋಡಿಕೊಂಡಿದ್ದಾರೆ. ಈ ಕವಿತೆಗಳೆಲ್ಲ ಇತ್ತೀಚೆಗೆ ಪ್ರಕಟವಾದ ‘ನಾನೂ ಅಮೆರಿಕನ್ ಆಗಿಬಿಟ್ಟೆ’ ಎಂಬ ಸಂಗ್ರಹದಲ್ಲಿ ಸೇರ್ಪಡೆಯಾಗಿವೆ. ಅಮೆರಿಕಾದ ಮೈನಡುಗಿಸುವ ಛಳಿಯ ನಡುವೆ, ಹಾಸನದ ಉಡುಪಿ ಹೋಟೆಲಿನ ಮಸಾಲೆದೋಸೆಯ ಕಂಪನ್ನು ನೆನೆಯುವ, ಇಂಡಿಯಾದ ಮಣ್ಣನ್ನು ತಂದು, ಅಮೆರಿಕಾದ ತಮ್ಮ ಮನೆಯ ಹಿತ್ತಲಲ್ಲಿ ಕರಿಬೇವು ಬೆಳೆಯಿಸುವ  ಆಶಯಗಳನ್ನು ಬಚ್ಚಿಟ್ಟುಕೊಂಡ, ಅಮೆರಿಕಾದ ನಿಶ್ಯಬ್ದ ಏಕಾಕಿತನಗಳ ಮಧ್ಯೆ ತಾಯ್ನಾಡಿನ ಬಾಂಧವ್ಯದ ಕನಸುಗಳನ್ನು ಸೊಗಸುಗಳನ್ನು ನೆನೆದು ನಿಟ್ಟುಸಿರಿಡುವ ದ್ವಂದ್ವಗಳನ್ನು ಡಾ. ನಟರಾಜ್ ತಮ್ಮ ಕವಿತೆಗಳಲ್ಲಿ ಚೆನ್ನಾಗಿ ಹಿಡಿದಿರಿಸಿದ್ದಾರೆ.

ಸಣ್ಣಗೆ ಸುರಿಯುವ ಸೋನೆ ಮಳೆಗೆ ತಣ್ಣಗೆ ನೆನೆದ ದಾರಿಯಲ್ಲಿ ಕಾರು ಬಿಟ್ಟುಕೊಂಡು, ನಟರಾಜ್ ಅವರು ಹೆಚ್ಚು ಕಡಿಮೆ ಒಂದೇ ವಿಸ್ತಾರದಲ್ಲಿ ಹರಹಿಕೊಂಡ ಕೆಲವು ಸ್ಮಾರಕಗಳನ್ನು ತೋರಿಸಿದರು. ವಾಷಿಂಗ್‌ಟನ್ ಮೆಮೋರಿಯಲ್ ಎಂಬ ಸೂಜಿಯಾಕಾರದ ಸ್ತಂಭಶಿಲ್ಪವನ್ನು ಕೊಂಚ ದೂರದಿಂದ, ಜೆಫರ್‌ಸನ್ ಮೆಮೋರಿಯಲ್ ಮತ್ತು ಲಿಂಕನ್ ಮೆಮೋರಿಯಲ್‌ಗಳನ್ನು ಹತ್ತಿರ ಹೋಗಿ ನೋಡಿದ್ದಾಯಿತು. ಜೆಫರ್‌ಸನ್ ಮತ್ತು ಲಿಂಕನ್ ಸ್ಮಾರಕ ಭವನಗಳು ನೆಲದ ಮಟ್ಟದಿಂದ ಎತ್ತರವಾದ ವಿಸ್ತಾರವಾದ ವೇದಿಕೆಯ ಮೇಲೆ ನಿಂತು, ಗ್ರೀಕ್ ಮಾದರಿಯ ಸ್ತಂಭ ಹಾಗೂ ಗೋಲಗಳಿಂದ ಅದ್ಭುತವಾದ ಶಿಲ್ಪವಿನ್ಯಾಸವನ್ನು ಪ್ರಕಟಿಸುವಂತಿವೆ. ಈ ಸ್ಮಾರಕ ಭವನಗಳ ಸುತ್ತ ಅತ್ಯಂತ ವಿಸ್ತಾರವಾದ ಉದ್ಯಾನಗಳು  ಹಾಗೂ ಸರೋವರಗಳು ಹರಹಿಕೊಂಡಿವೆ. ‘ಮನುಷ್ಯನ ಮನಸ್ಸಿನ ಮೇಲೆ ದಬ್ಬಾಳಿಕೆ ನಡೆಸುವ ಎಲ್ಲ ಸರ್ವಾಧಿಕಾರೀ ಪ್ರವೃತ್ತಿಗಳನ್ನೂ ನಾನು ದೈವಸಾಕ್ಷಿಯಾಗಿ ವಿರೋಧಿಸುತ್ತೇನೆ’ – ಎಂದು ಸಾರಿದ ಥಾಮಸ್ ಜೆಫರ್‌ಸನ್, ಅಮೆರಿಕಾದ ಸ್ವಾತಂತ್ರ್ಯ ಘೊಷಣೆಯ ಮೂಲಸೂತ್ರಗಳನ್ನು ರೂಪಿಸಿದವರಲ್ಲಿ ಒಬ್ಬ. ಈತ ಅಮೆರಿಕಾದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್‌ಟನ್ ಅವರ ಸೆಕ್ರೆಟರಿ ಆಫ್ ಸ್ಟೇಟ್ಸ್ ಆಗಿ ಸೇವೆ ಸಲ್ಲಿಸಿದವನು. ಮತ್ತು ೧೮೦೧ರಲ್ಲಿ ಅಮೆರಿಕಾದ ಅಧ್ಯಕ್ಷನಾಗುವ ಗೌರವವನ್ನು ಪಡೆದವನು. ಅಮೆರಿಕಾದ ಹದಿನಾರನೆಯ ಅಧ್ಯಕ್ಷನಾದ ಏಬ್ರಹಾಂ ಲಿಂಕನ್‌ನ ಸ್ಮಾರಕ ಭವನ, ಎತ್ತರವಾದ ವೇದಿಕೆಯೊಂದರ ಮೇಲೆ ಮೂವತ್ತಾರು ಸ್ತಂಭಗಳನ್ನುಳ್ಳ ಗ್ರೀಕ್ ಮಾದರಿಯ ಕಟ್ಟಡವಾಗಿದೆ, ಲಿಂಕನ್ನನ ಕಾಲಕ್ಕೆ ಅಸ್ತಿತ್ವದಲ್ಲಿದ್ದ ಅಮೆರಿಕಾದ ಮೂವತ್ತಾರು ರಾಜ್ಯಗಳನ್ನು ಈ ಕಂಭಗಳು ಸಾಂಕೇತಿಸುತ್ತವೆ. ಕಪ್ಪು ಜನರ ಗುಲಾಮಗಿರಿಯ ವಿರುದ್ಧ ಹೋರಾಡಿ ಅವರ ಆತ್ಮ ಗೌರವವನ್ನೂ, ಅವರ ಬಿಡುಗಡೆಯನ್ನೂ ಎತ್ತಿ ಹಿಡಿದ ಲಿಂಕನ್ನನ ಹಾಲುಗಲ್ಲಿನ  ಮೂರ್ತಿ ಕುರ್ಚಿಯೊಂದರಲ್ಲಿ ಕೂತಂತೆ ರೂಪಿತವಾಗಿ, ಅಡಿಯಿಂದ ಮುಡಿಯವರೆಗೆ ಹತ್ತೊಂಬತ್ತು ಅಡಿಗಳ ಅಳತೆಯುಳ್ಳದ್ದಾಗಿದೆ. ಇಷ್ಟೇ ಎತ್ತರದ ಥಾಮಸ್ ಜೆಫರ್‌ಸನ್‌ನ ಮೂರ್ತಿ ಕಂಚಿನದು. ಆದರೆ ಕುಳಿತ ಭಂಗಿಯಲ್ಲಿರುವ ಲಿಂಕನನ  ಮೂರ್ತಿಯ ಮುಖದಲ್ಲಿ ಕಾಣಿಸುವ ವಿಷಾದಮೂಲವಾದ ಅನುಕಂಪದ ಭಾವ ಅತ್ಯಂತ ಅಪೂರ್ವವಾಗಿದೆ. ಈ ಸಣ್ಣಗೆ ಸುರಿವ ಮಳೆಯಲ್ಲಿ ಹಾಗೂ ಕೊರೆಯುವ ಗಾಳಿಯಲ್ಲಿ ಈ ಸ್ಮಾರಕಗಳನ್ನು ನೋಡಿಕೊಂಡು ಬಂದರೆ, ಆ ಸೋನೆ ಮಳೆಯಲ್ಲೂ ಶ್ವೇತಭವನದ ಹತ್ತಿರ ಅದನ್ನು ನೋಡಲು ನಿಂತ ಜನದ ದೊಡ್ಡ ಕ್ಯೂ ನೋಡಿ ಆಶ್ಚರ್ಯವಾಯಿತು. ಕೂತ ಕಾರಿನಲ್ಲೇ ಶ್ವೇತಭವನದ ಸುತ್ತ ತಿರುಗಾಡಿ, ಮುಂದೆ ಲೈಬ್ರರಿ ಆಫ್ ಕಾಂಗ್ರೆಸ್ ಹತ್ತಿರ ಬಂದೆವು. ಲೈಬ್ರರಿ ಆಫ್ ಕಾಂಗ್ರೆಸ್ ಎಂಬುದು ಇಡೀ ಜಗತ್ತಿನಲ್ಲಿಯೇ ದೊಡ್ಡದಾದ ಒಂದು ಗ್ರಂಥಾಲಯ ಸಂಕೀರ್ಣವಾಗಿದೆ. ನಾನು, ಹರಿಹರೇಶ್ವರ ಇಬ್ಬರೂ ಕಾರಿಳಿದು ಈ ಗ್ರಂಥಮಹಾದೇವಾಲಯವನ್ನು ಪ್ರವೇಶಿಸಿ, ಕೇವಲ ಹಸ್ತಪ್ರತಿ ವಿಭಾಗವನ್ನು ನೋಡುವುದರಲ್ಲೇ ತೃಪ್ತಿ ಪಟ್ಟುಕೊಂಡು, ಆ ಸರಸ್ವತೀ ಮಂದಿರಕ್ಕೆ ಕೈ ಮುಗಿದು ಹೊರಕ್ಕೆ ಬಂದೆವು. ಅಂದು ಮಧ್ಯಾಹ್ನವೇ ಉತ್ತರ ಅಮೆರಿಕಾ ಕನ್ನಡ ಸಂಘಗಳ ಸಮ್ಮೇಳನ ಇದ್ದುದರಿಂದ, ವಾಷಿಂಗ್‌ಟನ್ ಅನ್ನು ಸಂಪೂರ್ಣವಾಗಿ ನೋಡುವ ನನ್ನ ಆಸೆಯನ್ನು ಮೊಟಕುಗೊಳಿಸುವುದು ಅನಿವಾರ‍್ಯವಾಯಿತು.

ಡಾ. ನಟರಾಜ್ ಅವರ ಮನೆಯಿಂದ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಗೇಥೇಸ್‌ಬರ್ಗ್‌ನಿಂದ ನಲವತ್ತು ಮೈಲಿ ದೂರದ ಪೂಲ್‌ವಿಲೆ ಎಂಬ ಹಳ್ಳಿಗೆ ಹೊರಟೆವು. ದಾರಿ ಉದ್ದಕ್ಕೂ ಎರಡೂ ಕಡೆ ಕೋಟೆಗಟ್ಟಿದ ಹಸಿರು. ಅಲ್ಲಲ್ಲಿ ರಸ್ತೆಯ ಬದಿಗೆ ಜಿಂಕೆಗಳ ಚಿತ್ರಗಳಿರುವ ಹಲಗೆಗಳು. ಇದರರ್ಥ ದಾರಿಯ ಆಚೆ ಬದಿಯ ಕಾಡಿನಿಂದ, ಈಚೆ ಬದಿಯ ಹಸುರಿಗೆ ಜಿಂಕೆಗಳು ದಾಟುವುದರಿಂದ, ವಾಹನಗಳ ಚಾಲಕರು ಸ್ವಲ್ಪ ನಿಧಾನವಾಗಿ ಚಲಿಸಬೇಕು ಎಂಬುದು. ಅತಿ ವೇಗದಿಂದ ಓಡುವ ವಾಹನಗಳಿಗೆ ಸಿಕ್ಕಿ ಎಷ್ಟೋ ಜಿಂಕೆಗಳು ಸಾಯುವುದು ದಿನನಿತ್ಯದ ಸಂಗತಿ ಎಂಡು ಡಾ. ನಟರಾಜ್ ತಿಳಿಸಿದರು. ಸುಮಾರು ಮೂರು ಗಂಟೆಯ ವೇಳೆಗೆ ನಾವು ಪೂಲ್‌ವಿಲೆ ಎಂಬ ಹಳ್ಳಿಯ ದೊಡ್ಡದೊಂದು ಸ್ಕೂಲಿನ ಬಳಿ ಕಾರು ನಿಲ್ಲಿಸಿದೆವು. ಉತ್ತರ ಅಮೆರಿಕಾ ಕನ್ನಡ ಸಂಘಗಳ ಸಮಾವೇಶಕ್ಕೆ ಗೊತ್ತು ಮಾಡಲಾದ ಸ್ಕೂಲಿನ ಮುಂದೆ ಸಾಕಷ್ಟು ಸಂಖ್ಯೆಯ ಕಾರುಗಳು ಜಮಾಯಿಸಿದ್ದವು. ಆ ಸ್ಕೂಲಿನ ಒಳಗಣ ವಿಸ್ತಾರದ (ನಮ್ಮ ದೇಶದ ಸ್ಕೂಲುಗಳನ್ನು ನೆನಸಿಕೊಳ್ಳಲೇ ಬಾರದು)  ನಡುವಣ ಸಭಾಂಗಣದಲ್ಲಿ ಕನ್ನಡ ಸಂಘಗಳ ಸಮ್ಮೇಳನ. ಇದಕ್ಕಾಗಿ ದೂರ ದೂರ ದೂರಗಳಿಂದ ಬಂದ ಬಹುಸಂಖ್ಯೆಯ ಮಹನೀಯರು, ಮಹಿಳೆಯರು, ಹುಡುಗರು, ಹುಡುಗಿಯರು ತುಂಬ ಸಂಭ್ರಮದಿಂದ ಓಡಾಡುತ್ತಿದ್ದರು. ಹರಿಹರೇಶ್ವರ ಅವರು ಕಂಪ್ಯೂಟರ್ ಮೂಲಕ ಸಿದ್ಧಪಡಿಸಿ ತಂದಿದ್ದ ಕನ್ನಡದ ಭಿತ್ತಿಪತ್ರಗಳನ್ನು ಅಲ್ಲಲ್ಲಿ ಲಗತ್ತಿಸುತ್ತಾ ಕನ್ನಡದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು.  ನಾಲ್ಕೂವರೆಯ ಹೊತ್ತಿಗೆ ಒಳಗಿನ ಸಭಾಂಗಣದಲ್ಲಿ ಸೇರಿದವರ ಸಂಖ್ಯೆ ಐನೂರಕ್ಕೂ ಹೆಚ್ಚಾಗಿತ್ತು. ಅವರಲ್ಲಿ ಬಹು ಸಂಖ್ಯಾತರು ಎಂಜಿನಿಯರ್‌ಗಳು, ಡಾಕ್ಟರುಗಳು ಹಾಗೂ ವಿವಿಧ ವೈಜ್ಞಾನಿಕ ಹಾಗೂ ಔದೆಗಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರು. ಕನ್ನಡ  ನಾಡಿನಲ್ಲೇ ಇಂಥದೊಂದು ಕಾರ‍್ಯಕ್ರಮಕ್ಕೆ ಇಷ್ಟೊಂದು ಜನ ಸೇರುವುದು ಅಸಂಭವವಾಗಿರುವಾಗ, ದೂರದ ಈ ಅಮೆರಿಕಾದಲ್ಲಿ ಕನ್ನಡದ ಹೆಸರಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನ ಸೇರಿದ್ದು ನನಗಂತೂ ಮಹತ್ವದ ಸಂಗತಿಯಾಗಿತ್ತು.

ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಕನ್ನಡ ಕೂಟಗಳಿವೆ ಎಂದು ತಿಳಿದು ಬರುತ್ತದೆ. ಇವುಗಳಲ್ಲಿ ಹನ್ನೆರಡು-ಹದಿಮೂರು ಸಂಘಗಳಾದರೂ, ಸಾಕಷ್ಟು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸುತ್ತ ಕ್ರಿಯಾಶೀಲವಾಗಿವೆ. ದೂರದ ಕರ್ನಾಟಕದಿಂದ ವಿವಿಧ ಉದ್ಯೋಗಗಳಿಗಾಗಿ ಇಲ್ಲಿಗೆ ಬಂದು ನೆಲೆಸಿರುವ ಕನ್ನಡಿಗರು, ತಾವೆಲ್ಲ ಜತೆಗೂಡಲು ಈ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡಿದ್ದಾರೆ. ‘ಕಾವೇರಿ ಕನ್ನಡ ಕೂಟ’, ‘ಪಂಪ ಕನ್ನಡ ಕೂಟ’, ‘ವಿದ್ಯಾರಣ್ಯ ಕನ್ನಡ ಕೂಟ’ ಇತ್ಯಾದಿ ಹೆಸರುಗಳನ್ನುಳ್ಳ ಮತ್ತು ಕೆಲವು ಸಲ ಆಯಾ ಊರಿನ  ಹೆಸರನ್ನಿರಿಸಿಕೊಂಡ (ಉದಾ : ನ್ಯೂಯಾರ್ಕ್ ಕನ್ನಡ ಕೂಟ) ಈ ಕನ್ನಡ ಸಂಘಗಳು ವರ್ಷಾದ್ಯಂತವೂ ವಿವಿಧ ಹಬ್ಬ-ಹರಿದಿನಗಳಲ್ಲಿ, ನಾಡಹಬ್ಬ, ರಾಜ್ಯೋತ್ಸವ, ವಸಂತೋತ್ಸವ ಇತ್ಯಾದಿಗಳ ನೆಪದಲ್ಲಿ ಪುರಂದರದಾಸ, ಕನಕದಾಸ ಜಯಂತಿಗಳನ್ನೇರ್ಪಡಿಸುವಲ್ಲಿ ಮತು ಈ ಬಗೆಯ ವಾರ್ಷಿಕ ಸಮ್ಮೇಳನಗಳನ್ನು ವ್ಯವಸ್ಥೆಗೊಳಿಸುವ ಸಂದರ್ಭಗಳಲ್ಲಿ ಆಯಾ ಪರಿಸರದ ಕನ್ನಡಿಗರನ್ನು ಒಂದೆಡೆ ಕೂಡಿಸುವ ಸಾಧನಗಳಾಗಿವೆ. ಅಷ್ಟೇ ಅಲ್ಲ, ಅವರು ನಡೆಸುವ ಜಾನಪದ ಉತ್ಸವ, ಭರತನಾಟ್ಯ ಪ್ರದರ್ಶನ ಮತ್ತು ನಾಟಕಾಭಿಯನಗಳ ಮೂಲಕ, ಹಾಗೂ ಆಗಾಗ ಈ ದೇಶಕ್ಕೆ ಬರುವ ಕರ್ನಾಟಕದ ಕವಿಗಳನ್ನು ಕಲೆಗಾರರನ್ನು ತಮ್ಮ ಸಂಘ ಸಂಸ್ಥೆಗಳಿಗೆ ಆಹ್ವಾನಿಸುವುದರ ಮೂಲಕ, ಈ ಜನ ತಮ್ಮೊಳಗಿನ ಕನ್ನಡತನವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವುದು ಆಶ್ಚರ್ಯದ ಹಾಗೂ ಸಂತೋಷದ ಸಂಗತಿಯಾಗಿದೆ. ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’ – ಎಂಬ ಶ್ರೀ ಕುವೆಂಪು ಅವರ ಹಾಡು, ಈ ಎಲ್ಲಾ ಕನ್ನಡ ಸಂಘಗಳ ಮಂತ್ರವಾಗಿದೆ. ಉತ್ತರ ಅಮೆರಿಕಾದ, ಕನ್ನಡ ಸಂಘಗಳ  ಒಕ್ಕೂಟದ ಸಮಾರಂಭ, ನಾಲ್ಕೂವರೆ ಗಂಟೆಗೆ, ‘ಪೂಲ್‌ವಿಲೆ’ಯ ಶಾಲೆಯ ಸಭಾಂಗಣದಲ್ಲಿ ಪ್ರಾರಂಭವಾದದ್ದು ಕುವೆಂಪು ಅವರ ಈ ಹಾಡಿನಿಂದಲೇ. ಈ ಸಮ್ಮೇಳನದ ಉದ್ಘಾಟನೆ ಅಮೆರಿಕಾದಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಆಗಿರುವ ಶ್ರೀ ನಜರೇತ್ ಅನ್ನುವವರಿಂದ. ಕರ್ನಾಟಕದ ಇತಿಹಾಸ, ಸಂಸ್ಕೃತಿ, ಕಲೆ ಇತ್ಯಾದಿಗಳನ್ನು ಕುರಿತು ಇಂಗ್ಲಿಷಿನಲ್ಲಿ ಅವರು ಮಾಡಿದ ಭಾಷಣ ತುಂಬ ಸೊಗಸಾಗಿತ್ತು. ಉದ್ಘಾಟನೆಯ ನಂತರ, ಅವರನ್ನು ಸಂಜೆಯ ಕಾಫಿಯ ಸಮಯದಲ್ಲಿ ಭೆಟ್ಟಿ ಮಾಡಿದಾಗ ತಿಳಿಯಿತು, ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರೆಂದು.

ಉದ್ಘಾಟನೆಯ ನಂತರ, ಮನರಂಜನೆ. ಮಕ್ಕಳು ತುಂಬ ಸೊಗಸಾಗಿ, ತಾವು ಇಂಗ್ಲಿಷಿನಲ್ಲಿ ಬರೆದುಕೊಂಡು ಅಭ್ಯಾಸಮಾಡಿದ್ದ ಕನ್ನಡ ಗೀತೆಗಳನ್ನು ಹಾಡಿದರು. ಅನಂತರ ಕರ್ನಾಟಕ ಸಂಗೀತ, ಭಜನೆ, ಭರತನಾಟ್ಯ, ಏಕಪಾತ್ರಾಭಿನಯ, ಕೋಲಾಟದ ಕಾರ್ಯಕ್ರಮಗಳು ನಡೆದವು. ಇವುಗಳಲ್ಲಿ ಪಾಲುಗೊಂಡ ನನಗೆ, ನಾನು ನಿಂತ ನೆಲ ಅಮೆರಿಕಾ ಅಲ್ಲ; ಕರ್ನಾಟಕ ಎಂದು ಅನ್ನಿಸಿತು.

ಕಾರ್ಯಕ್ರಮಗಳೆಲ್ಲ ಮುಗಿದು ಅದೇ ಶಾಲೆಯ ಬೇರೊಂದು ‘ಹಾಲ್’ ನಲ್ಲಿ ಊಟಕ್ಕೆ ವ್ಯವಸ್ಥೆಯಾಗಿತ್ತು. ಈ ಸಮ್ಮೇಳನಕ್ಕೆ ಬಂದ ಅಷ್ಟೂ ಸಂಸಾರಗಳವರು, ಮೊದಲೇ ಮಾತಾಡಿಕೊಂಡು, ಒಂದೊಂದು ಮನೆಯಿಂದ ಒಂದೊಂದು ಊಟದ ಪದಾರ್ಥಗಳನ್ನು ತಂದು, ಅವೆಲ್ಲವನ್ನು ಒಂದೆಡೆ ಕೂಡಿಸಿ, ಸಮ್ಮೇಳನಕ್ಕೆ ಬಂದ ಅಷ್ಟೂ ಜನಕ್ಕೆ ವಿತರಣೆ ಮಾಡಿದ ರೀತಿ ತುಂಬ ವ್ಯವಸ್ಥಿತವಾಗಿತ್ತು. ಊಟವಾದಾಗ ರಾತ್ರಿ ಎಂಟು ಗಂಟೆ. ಈ ಹಳ್ಳಿಯಿಂದ ಮತ್ತೆ ನಲವತ್ತು ಮೈಲಿ ದೂರದ ವಾಷಿಂಗ್‌ಟನ್‌ಗೆ ಹಾಗೂ ಹತ್ತಿರದ ಇತರ ಕಡೆಗಳಿಗೆ ಬಂದವರೆಲ್ಲ ಹಿಂದಿರುಗಿದರು.

ಮಾರನೆ ದಿನ, ಸೆಪ್ಟೆಂಬರ್ ಆರನೆ ತಾರೀಖು ಭಾನುವಾರ, ಇದೇ ಕನ್ನಡ ಸಂಘಗಳ ಸಮ್ಮೇಳನದ ಎರಡನೆಯ ದಿನದ ಕಾರ್ಯಕ್ರಮಗಳು, ಬೆಳಿಗ್ಗೆ ಹನ್ನೊಂದು ಗಂಟೆಗೆ. ಈ ದಿನ ನಾನು ಭಾಗವಹಿಸಲು ಒಪ್ಪಿಕೊಂಡ ಕಾರ್ಯಕ್ರಮಗಳು ಎರಡು. ಒಂದು, ಹನ್ನೆರಡರಿಂದ ಒಂದು ಗಂಟೆಯವರೆಗೆ, ಏರ್ಪಾಡಾದ ಹಲವಾರು ಗೋಷ್ಠಿಗಳಲ್ಲಿ ಒಂದಾದ ಸಾಹಿತ್ಯಗೋಷ್ಠಿ ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವುದು; ಎರಡು, ಮಧ್ಯಾಹ್ನ ಎರಡೂವರೆ ಗಂಟೆಗೆ ಸೇರಲಿದ್ದ ಮಹಾಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ಮಾಡುವುದು.

ಸಾಹಿತ್ಯಗೋಷ್ಠಿಗೆ ನಿಗದಿತವಾದ ಕೊಠಡಿಯೊಂದರಲ್ಲಿ ಸಾಹಿತ್ಯವನ್ನು ಕುರಿತು, ಅಮೆರಿಕಾದ ಕನ್ನಡ ಲೇಖಕರ ತೊಡಕುಗಳನ್ನು ಕುರಿತು, ಕರ್ನಾಟಕದ ಸಾಹಿತಿಗಳ ಹಾಗೂ ಸಾಹಿತ್ಯ ನಿರ್ಮಿತಿಯೊಂದಿಗೆ ಇರಿಸಿಕೊಳ್ಳಬೇಕಾದ ಸಂಪರ್ಕದ ವಿಧಾನಗಳನ್ನು ಕುರಿತು ಕೆಲವರು ಮಾತನಾಡಿದರು. ಅನಂತರ ಕವಿಗೋಷ್ಠಿ. ಏಳೆಂಟು ಜನ ತಾವು ಬರೆದ ಕವಿತೆಗಳನ್ನು ಓದಿದರು. ಈ ಸಾಹಿತ್ಯ ಚರ್ಚೆಯಲ್ಲಿ ಭಾಗವಹಿಸಿದವರು ಮತ್ತು ಕವಿತೆಗಳನ್ನು ಓದಿದವರು ಯಾರೂ ಮೂಲತಃ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಸಾಹಿತ್ಯವನ್ನು ಕಲಿಸುವ ಸಂಸ್ಥೆಗಳಿಗೆ ಸೇರಿದವರೂ ಅಲ್ಲ. ಅವರೆಲ್ಲ, ಇಂಜಿನಿಯರ್, ಡಾಕ್ಟರು, ಹಾಗೂ ವಿವಿಧ ವೈಜ್ಞಾನಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು. ಇದೇ ಜನ ಒಂದು ವೇಳೆ ಅಮೆರಿಕಾಕ್ಕೆ ಬಾರದೆ ಕರ್ನಾಟಕದಲ್ಲೇ ಇರುವ ಸಂಭವವಿದ್ದಿದ್ದರೆ, ಸಾಹಿತ್ಯಕ್ಕೂ ತಮಗೂ ಏನೇನೂ ಸಂಬಂಧವಿಲ್ಲವೆಂಬ ಪರಮ ತಾಟಸ್ಥ್ಯದಲ್ಲಿ ಹಾಯಾಗಿ ಇರುತ್ತಿದ್ದರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಕನ್ನಡ ನಾಡನ್ನು ತೊರೆದು ಬಂದು ನೆಲಸಬೇಕಾಗಿರುವ ಈ ದೂರದ ಏಕಾಕಿತನಗಳಲ್ಲಿ, ತಮ್ಮ ತಮ್ಮ ಭಾವನೆಗಳನ್ನು, ತಾಕಲಾಟಗಳನ್ನು ಸಂವೇದನೆಗಳನ್ನು, ತಮಗೆ ಆಪ್ತವಾದ ಕನ್ನಡದಲ್ಲಿ ತೋಡಿಕೊಳ್ಳುತ್ತ, ಇಂಥ ಸಂದರ್ಭಗಳ ಮೂಲಕ ಅವುಗಳನ್ನು ಸಾರ್ವತ್ರಿಕಗೊಳಿಸುತ್ತ, ಅವರಿವರೊಡನೆ ಹಂಚಿಕೊಂಡು ಸುಖಿಸುವ ಸೆಳೆತಕ್ಕೆ, ಕತೆ, ಕವಿತೆ ಇತ್ಯಾದಿಗಳನ್ನು ಆಶ್ರಯಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಹೀಗಾಗಿ ಭಾಷೆ ಹಾಗೂ ಬಂಧಗಳ ದೃಷ್ಟಿಯಿಂದ ಇಲ್ಲಿನ ಕೆಲವರ ಬರೆಹಗಳಲ್ಲಿ ಏನೇ ಅರಕೆ ಇದ್ದರೂ, ಅವರು ತಮ್ಮ ವಿವಿಧ ಸಾಹಿತ್ಯಾಭಿವ್ಯಕ್ತಿಗಳ ಮೂಲಕ ತೋಡಿಕೊಳ್ಳುವ ಭಾವ-ಭಾವನೆಗಳು, ಅವರು ಭಾರತೀಯ ಪರಿಸರದಲ್ಲಿ ಪಡೆಯಬಹುದಾದ ಅನುಭವಗಳಿಗಿಂತ ಭಿನ್ನವಾದ ಸ್ವರೂಪದವುಗಳಾಗಿವೆ ಎಂಬುದನ್ನು ನಾನು ಗುರುತಿಸಲು ಕಷ್ಟವೇನೂ ಆಗಲಿಲ್ಲ.

ಅಮೆರಿಕಾದಲ್ಲಿ ಬಂದು ನೆಲೆಸಿರುವ ನಮ್ಮ ಈ ಕನ್ನಡ ಜನ, ಬೇರೊಂದು ಸಾಂಸ್ಕೃತಿಕ ಸಂದರ್ಭಗಳಲ್ಲಿ ಬದುಕಬೇಕಾಗಿ ಬಂದಿರುವುದರಿಂದ, ಅವರು ಲೌಕಿಕವಾಗಿ ಅತ್ಯಂತ ಆಕರ್ಷಕವೂ ಹಾಗೂ ಪ್ರಬಲವೂ ಆದೊಂದು ಜೀವನ  ಕ್ರಮದೊಂದಿಗೆ ಮುಖಾಮುಖಿಯಾಗುವ ಅನಿವಾರ‍್ಯತೆ ಅವರಿಗೆ ಒದಗಿದೆ. ಹೀಗಾಗಿ ಇವರು ಒಂದು ಬಗೆಯ ಸಾಂಸ್ಕೃತಿಕ ಸಂಘರ್ಷಕ್ಕೆ ಒಳಗಾಗಿದ್ದಾರೆ. ಈ ಸಂಘರ್ಷದಿಂದ ಲಾಭವೂ ಉಂಟು, ಭಯವೂ ಉಂಟು. ಲಾಭ ಎಂದರೆ, ಭಾರತೀಯ ಪರಿಸರದ ಅನೇಕ ಸಾಂಪ್ರದಾಯಿಕ ವಿಚಾರಗಳಿಗೆ, ನಂಬಿಕೆಗಳಿಗೆ, ಈ ಸಂಸ್ಕೃತಿಯ ಸಂಪರ್ಕದಿಂದ ಒದಗುವ ಆಘಾತದ ಪರಿಣಾಮವಾಗಿ, ನಮ್ಮವರ ಎಷ್ಟೋ ವಿಚಾರಗಳು, ನಂಬಿಕೆಗಳು ಚಿಕಿತ್ಸೆಗೆ ಒಳಗಾಗುತ್ತವೆ, ತಿದ್ದುಪಡಿ ಹೊಂದುತ್ತವೆ ಹಾಗೂ ಬದುಕನ್ನು ನೋಡುವ ಮತ್ತು ಗ್ರಹಿಸುವ ನಿಲುವುಗಳು ಬೇರೆಯಾಗುತ್ತವೆ; ನಮ್ಮ ಭಾರತೀಯ ಪರಿಸರದ ಎಷ್ಟೋ ಸಾಮಾಜಿಕ ಅಸಂಗತಿಗಳು ಇಲ್ಲಿ ವಿಮರ್ಶೆಗೆ ಒಳಗಾಗುತ್ತವೆ. ಇದು ವ್ಯಕ್ತಿತ್ವವಕ್ಕೆ ಒದಗುವ ಲಾಭ ಅನ್ನಬಹುದು. ಆದರೆ ಇದರ ಜತೆಯಲ್ಲಿ ‘ಭಯ’ವೂ ಇದೆ. ಅದೆಂದರೆ ಈ ನೂತನವೂ, ಪ್ರಬಲವೂ ಆದ ಸಾಂಸ್ಕೃತಿಕ ಪ್ರವಾಹದಲ್ಲಿ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಭಯ. ಈ ಭಯ ಕೂಡಾ ಬಹುಶಃ ಸಾಪೇಕ್ಷವಾದದ್ದೇ. ಅಮೆರಿಕಾದಲ್ಲಿರುವಾಗ ನಾವೂ ಅಮೆರಿಕನ್ನರಾಗಿಯೇ ಬಿಡುವುದರಲ್ಲಿ  ತಪ್ಪೇನು ಎನ್ನುವರೂ ಇರಬಹುದು. ಆದರೆ ಇದು ಭಾರತದಿಂದ ಬಂದಂಥ ನಮಗೆ ಅಷ್ಟೊಂದು ಸುಲಭವಾದದ್ದಲ್ಲ. ಸಹಸ್ರಾರು ವರ್ಷಗಳಿಂದ ರೂಢಿಸಿಕೊಂಡು ಬಂದ ಆಚಾರಗಳನ್ನು, ವಿಚಾರಗಳನ್ನು, ನಂಬಿಕೆಗಳನ್ನು, ನರನಾಡಿಗಳಲ್ಲಿ ತುಂಬಿಕೊಂಡಿರುವ ಒಂದು ಸಾಂಸ್ಕೃತಿಕ ಪರಿಸರದಿಂದ ಬಂದ, ಹಾಗೂ ವ್ಯಕ್ತಿತ್ವದಲ್ಲಿ ನಂಬಿಕೆ ಮತ್ತು ನಿಷ್ಠೆಯುಳ್ಳ ಯಾರಿಗಾದರೂ, ತಮ್ಮದನ್ನು ಸುಲಭವಾಗಿ ಬಿಟ್ಟುಕೊಟ್ಟು ಬೇರೊಂದರಲ್ಲಿ ಕರಗಿ ಹೋಗುವುದು

ಅಪೇಕ್ಷಣೀಯವೆಂದು ಅನ್ನಿಸಲಾರದು. ಆದ ಕಾರಣ ಇಂಥವರು, ಈ ಪರಿಸರದಲ್ಲಿ ಹೇಗಾದರು ಮಾಡಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತೊಡಗುವುದು ಅನಿವಾರ್ಯ. (ಈ ಹೋರಾಟ ಈ ತಲೆಮಾರಿನವರ ನಂತರದ ತಲೆಮಾರಿಗೆ ಸೇರುವ, ಈ ಪರಿಸರದಲ್ಲೇ ಹುಟ್ಟಿ ಬೆಳೆದು ಬದುಕಬೇಕಾದ ಮಕ್ಕಳ  ಕಾಲಕ್ಕೆ ಹೀಗೆಯೇ ಇರುತ್ತದೆಯೆ ಎಂಬ ಬಗ್ಗೆ ನನಗೆ ಬಹಳ ಅನುಮಾನಗಳಿವೆ). ಈ ಸಾಂಸ್ಕೃತಿಕ ಸಂಘರ್ಷದಲ್ಲಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಒಂದು ಬಗೆಯ ಧೀರೋದಾತ್ತತೆ ಹಾಗೂ ಸಂತೋಷವಿದೆ ಎಂಬುದನ್ನು ಬಹುಮಂದಿ ಕಂಡುಕೊಂಡಿದ್ದಾರೆ. ಅದರ ಪರಿಣಾಮವಾಗಿಯೇ ಇಲ್ಲಿನ ಕನ್ನಡಿಗರು – ಅವರನ್ನು ನಾನು ಭಾರತೀಯರ ಕನ್ನಡಿಗರೆಂದೇ ಕರೆಯುತ್ತೇನೆ; ಯಾಕೆಂದರೆ ಇವರು ಏಕಕಾಲಕ್ಕೆ ಭಾರತೀಯರೂ ಹೌದು, ಕನ್ನಡಿಗರೂ ಹೌದು – ಕನ್ನಡ ನಾಡಿನ ನೆನಪುಗಳನ್ನು, ಪುನರಭಿನಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು, ಕುಣಿತ, ಕತೆ, ಕವಿತೆ ಇತ್ಯಾದಿಗಳ ಮೂಲಕ ತಮ್ಮನ್ನು ತಾವು ಅಭಿವ್ಯಕ್ತ ಪಡಿಸಿಕೊಳ್ಳುವ, ಇಂಥ ಸಂಘ- ಸಂಸ್ಥೆ ಸಮ್ಮೇಳನಗಳ ಮೂಲಕ ತಾವೆಲ್ಲಾ ಒಟ್ಟಿಗೆ ಸೇರುವ, ಮತ್ತು ಕರ್ನಾಟಕದಿಂದ ಬರುವ ಸಾಹಿತಿ – ಕಲೆಗಾರರೊಂದಿಗೆ ಕೂತು ನಡೆಯಿಸುವ ಚರ್ಚೆ ಸಂವಾದ ಇತ್ಯಾದಿಗಳಲ್ಲಿ, ಈ ಜನ ತಮ್ಮೊಳಗಿನ ‘ಕನ್ನಡತನ’ವನ್ನು ಮತ್ತು ಅದರಿಂದ ಉಳಿಯಬಹುದಾದ ತಮ್ಮ ವ್ಯಕ್ತಿತ್ವವನ್ನು ಸಂರಕ್ಷಿಸಿಕೊಳ್ಳುವ ಬಗ್ಗೆ ಗಂಭೀರವಾದ ಕಾಳಜಿಗಳನ್ನು ಉಳ್ಳವರಾಗಿದ್ದಾರೆ. ಈ ಮಹಾಸಮ್ಮೇಳನ ಇಂಥ ತೀವ್ರಾಭಿಲಾಷೆಯ ಬಹಿರಂಗವೂ, ಸಾರ್ವಜನಿಕವೂ ಆದ ಒಂದು ಅಭಿವ್ಯಕ್ತಿಯಾಗಿದೆ.

ಕಾವೇರಿ ಕನ್ನಡ ಕೂಟದ ಆಶ್ರಯದಲ್ಲಿ ನಡೆದ ಉತ್ತರ ಅಮೆರಿಕಾ ಕನ್ನಡ ಕೂಟಗಳ ಈ ಸಮ್ಮೇಳನದ ಮಧ್ಯಾಹ್ನದ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ನಾನು ಮಾಡಿದ ಉಪನ್ಯಾಸ, ಈಗ ಪ್ರಸ್ತಾಪಿಸಿದ ಅಂಶಗಳನ್ನು ಒಳಗೊಂಡು                 ಬಹುಜನಕ್ಕೆ ಪ್ರಿಯವಾಯಿತು. ವಾಷಿಂಗ್‌ಟನ್, ನ್ಯೂಯಾರ್ಕ್, ನ್ಯೂಜರ್ಸಿ, ಇಲಿನಾಯ್ಸ್, ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ ಇತ್ಯಾದಿ ಕನ್ನಡ ಸಂಘಗಳು ಒಂದುಗೂಡಿ ನಡೆಯಿಸಿದ ಅರ್ಥಪೂರ್ಣವಾದ ಈ ಎರಡು ದಿನಗಳ ಸಮ್ಮೇಳನದ ಸಂದರ್ಭದಲ್ಲಿ, ನಾನೂ ಇದರೊಂದಿಗೆ ಅಕಸ್ಮಾತ್ತಾಗಿ ಬೆಸೆದುಕೊಂಡದ್ದು, ಒಂದು ಅನಿರೀಕ್ಷಿತ ಯೋಗಾಯೋಗವೇ ಸರಿ.