ಕನ್ನಡಿಗರ ಸ್ವಭಾವ

ಪದನಱದು ನುಡಿಯಲುಂ ನುಡಿದುದನಱದಾರಲುಮಾರ್ಪರಾ ನಾಡವರ್ಗಳ್ |

ಚದುರರ್ ನಿಜದಿಂ ಕುಱತೋದದೆಯುಂ ಕಾವ್ಯ-ಪ್ರಯೋಗ-ಪರಿಣತ-

ಮತಿಗಳ್ ||೩೮||

ಕುಱತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳೆಲ್ಲರ್ ಜಾಣರ್ |

ಕಿಱುವಕ್ಕಳ್ ಮಾಮೂಗರುಮಱಪಲ್ಕಱವರ್ ವಿವೇಕಮಂ ಮಾ[1]ತುಗಳಂ ||೩೯||

ಜಾಣರ್ಕಳಲ್ಲದವರುಂ ಪೂಣಿಗರಱಯದೆಯುಮಱವೋಲವಗುಣದಾ |

ತಾಣಮ[2]ದಿನಿಸೆಡೆವೊತ್ತೊಡೆ ಮಾಣದೆ ಪ[3]ಡಿದದನೆ ಕೃತಿಗಳಂ

ಕೆಡೆನುಡಿವರ್ ||೪೦||

ಸಕ್ಕದಮುಂ ಪಾಗದಮುಮದ[4]ಕ್ಕುಂ ಬಗೆದಂತೆ ಸಮಱ ಪೇೞಲ್ ಮುನ್ನಂ |

ನಿಕ್ಕುವ[5]ಮೊಳವಪ್ಪುದಱಂ ತಕ್ಕಮತವಱವಱ ಲ[6]ಕ್ಷ್ಯಮುಂ

ಲಕ್ಷ[7]ಣಮುಂ ||೪೧||

೩೮. ಆ ನಾಡ ಜನರು ಕ್ರಮವನ್ನು ಅರಿತು ನುಡಿಯುವುದರಲ್ಲೂ, ನುಡಿದುದನ್ನು ಅರಿತು ತಿಳಿದುಕೊಳ್ಳುವುದರಲ್ಲೂ, ಸಮರ್ಥರು. ಸ್ವಭಾವತಃ ಅವರು ಚದುರರು; ಉದ್ದೇಶಪೂರ್ವಕವಾಗಿ ಅಧ್ಯಯನ ಮಾಡದಿದ್ದರೂ, ಕಾವ್ಯಪ್ರಯೋಗದಲ್ಲಿ ಅವರು ಪರಣತಬುದ್ಧಿಯುಳ್ಳವರು. *ಪದನಱದು=ಹದವರಿತು; ಕ್ರಮಾಗತವಾಗಿ; ಈ ಅರ್ಥದಲ್ಲಿ ಮತ್ತೆ ಇದೇ ಶಬ್ದ ಪ್ರಯೋಗಕ್ಕೆ ನೋಡಿ-MM .೧೦.*

೩೯. ಕಲಿತವರಷ್ಟೇ ಅಲ್ಲ, ಮಿಕ್ಕ ಜನರು ಕೂಡ ಎಲ್ಲರೂ ತಮ್ಮ ತಮ್ಮ ಮಾತಿನಲ್ಲಿ ಜಾಣರು. ಚಿಕ್ಕ ಮಕ್ಕಳೂ ಹುಟ್ಟುಮೂಗರೂ ಸಹ ವಿವೇಕವನ್ನು ಇಲ್ಲವೆ ಜಾಣ್ನುಡಿಗಳನ್ನು ತಿಳಿಸಲು ಬಲ್ಲರು.

೪೦. ಜಾಣರಲ್ಲದವರು ಕೂಡ ಅಭ್ಯಾಸಶೀಲರು. ತಾವು ತಿಳಿಯದಿದ್ದರೂ ತಿಳಿದಿರುವರೋ ಎನಿಸುವಂತೆ, ಒಂದಿಷ್ಟು ದೋಷ ಎಡೆಗೊಂಡಿದ್ದರೂ ಅದನ್ನೇ ಎತ್ತಿ ಕೃತಿಯನ್ನು ದೂಷಿಸುವರು.

೪೧. ಸಂಸ್ಕೃತ, ಪ್ರಾಕೃತ ಇವುಗಳ (ಪ್ರಯೋಗದ) ಲಕ್ಷ್ಯ-ಲಕ್ಷಣಗಳು ನಿರ್ದಿಷ್ಟವಾಗಿ ಮೊದಲೇ ಲಭ್ಯವಿರುವುದರಿಂದ, ಯಥೇಷ್ಟವಾಗಿಯೂ ಓರಣವಾಗಿಯೂ ಅವುಗಳಲ್ಲಿ ಕಾವ್ಯರಚನೆ ಶಕ್ಯ.

ಅರಿದಾದಂ ಕನ್ನಡದೊಳ್ತಿರಿಕೊಱೆಗೊಂಡಱಯ ಪೇಱ್ವೆನೆಂಬುದಿದಾರ್ಗಂ |

ಪರಮಾಚಾರ್ಯರವೋಲ್ ಸೈತಿರಲಱಯರ್ ಕನ್ನಡಕ್ಕೆ ನಾಡವರೋಜರ್ ||೪೨||

ದೋಷನಿಂದೆ

ಅವಗುಣಮಿನಿತಾದೊಡಮಾ ಕವಿತಾ-ಬಂಧಮನಶೇಷಮಂ ದೂಷಿಸುಗುಂ |

ಸವಿಲಾಸ-ಲೋಲ-ಲೋಚನ-ವಿವರಮನೆ[8]ಡೆವೆತ್ತ ಕಸದ ವೋಲನವರತಂ ||೪೩||

ಅದಱಂದಲಸದೆ ಪೀನಂ ಪದೆಯದೆ ಪಾಂಗಱದು ದೋಷಮಂ ಪಿಂಗಿಸಿ ತ- |

ಪ್ಪದೆ ಬಗೆದು ಪೇೞ್ವುದಾಗಮ[9]ಮುದಾರೆ-ನೃಪತುಂಗ-ದೇವ-ವಿದಿತ-

ಕ್ರಮದಿಂ ||೪೪||

*ಗೀತಿಕೆ || ಕಾ[10]ಣನೇಗೆಯ್ದುಂ ತನ್ನ ದೋಷಮಂ

ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ |

ಪೂಣಿಗನಾದುದಱಂ ಪೆಱರಿಂ

ಜಾ[11]ಣರಿನೋದಿಸಿ ಪೇೞ್ವುದು ಕಬ್ಬಮಂ ||೪೫||

೪೨. ಕನ್ನಡದಲ್ಲಿ ತಿರುದು ತಂದು ತುಂಡುತುಂಡನ್ನು ಕೂಡಿಸಿ ಕೊಂಡು ಅರಿತಮೇಲೆ ಕಾವ್ಯವನ್ನು ಹೇಳುವೆನೆಂಬುದು ಯಾರಿಗೂ ಬಹಳ ಕಷ್ಟ ಸಾಧ್ಯ. ಏಕೆಂದರೆ (ಸಂಸ್ಕೃತ ಪ್ರಾಕೃತಗಳ) ಲಕ್ಷಣಶಾಸ್ತ್ರಕಾರರಂತೆ ನಾಡವರು ನೇರವಾಗಿ ಹೇಳಲಾರರು; (ಆದರೆ* ಅವರೇ ಕನ್ನಡಕ್ಕೆ ಗುರುಗಳು !

೪೩. ವಿಲಾಸದಿಂದ ಚಂಚಲವಾಗಿರುವ ಕಣ್ಣೊಳಗೆ ಕಸ ಸಿಕ್ಕಿಕೊಂಡರೆ ಹೇಗೋ ಹಾಗೆ ಒಂದಿಷ್ಟು ದೋಷ ಸೇರಿಕೊಂಡರೂ ಇಡಿಯ ಕಾವ್ಯಬಂಧವನ್ನೆಲ್ಲ ಅದು ಕೆಡಿಸುವುದು.

೪೪. ಆದ್ದರಿಂದ, ಸ್ವಲ್ಪವೂ ಉದಾಸೀನಮಾಡದೆ, ದಾಕ್ಷಿಣ್ಯ ತೋರಿಸದೆ, ಅದರ ಸ್ವರೂಪವನ್ನು ತಿಳಿದುಕೊಂಡು, ದೋಷವನ್ನು ಪರಿಹರಿಸಿದಮೇಲೆಯೇ ತಪ್ಪಿಲ್ಲದಂತೆ ವಿಚಾರಮಾಡಿ ಪ್ರಯೋಗ ಮಾಡಬೇಕೆಂಬುದು ನೃಪತುಂಗನ ಮತದಲ್ಲಿ ವಿಹಿತವಾಗಿರುವ ವಿಧಿ.

೪೫. ಎಂದೂ ಕಣ್ಣುಗಳು ತಮ್ಮೊಳಗಿನ ಕಾಡಿಗೆಯನ್ನು ಹೇಗೆ ಕಾಣಲಾರವೋ, ಹಾಗೆಯೇ ಯಾವ ಮನುಷ್ಯನೂ ತನ್ನ ದೋಷವನ್ನು ತಾನೇ ಕಾಣಲಾರನು. ಆದುದರಿಂದ ಅಭ್ಯಾಸಶೀಲನಾದವನು ಬೇರೆ ಬುದ್ಧಿವಂತರಿಂದ ತನ್ನ ಕಾವ್ಯವನ್ನು ಓದಿಸಿದ ಬಳಿಕವೇ ಪ್ರಕಟಿಸಬೇಕು.

ದೋ[12]ಸಮಿನಿತೆಂದು ಬ[13]ಗೆದುದ್ಭಾಸಿಸಿ ತಱಸಂದು ಕನ್ನಡಂಗಳೊಳೆಂದುಂ |

ವಾಸುಗಿಯುಮಱಯಲಾಱದೆ ಬೇ[14]ಸಱುಗುಂ ದೇ[15]ಸಿ

ಬೇಱೆಬೇಱಪ್ಪುದಱಂ ||೪೬||

ಅಂತುಂ ಪುರಾಣಕವಿಗಳ ಸಂ[16]ತತ-ಗತ-ಮಾರ್ಗ-ಗದಿತ-ದೋಷಂಗಳುಮಂ |

ಚಿಂತಿಸಿ ಮತ್ತೆನ್ನಱಪುದುಮಂ ತ[17]ಱಸಲೆ ಬುಧಜನಕ್ಕೆ ಕೆಲವಂ ಪೇೞ್ವೆಂ ||೪೭||

ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಮೆಂದೆ ಪೞಗನ್ನಡಮಂ |

ಪೊಲಗೆಡಿಸಿ ನುಡಿವರಾಗಮ-ಬಲ-ಹೀನರ್ ದೇಸಿಯಲ್ಲಿದೆಂದಱದಿರ್ದುಂ ||೪೮||


[1] ಮಾಮಾತು ‘ಬ’

[2] ನಿನಿಸೆಡೆ ‘ಪಾಸೀ’.

[3] ಪಿಡಿದದನೆ ‘ಪಾಸೀ’.

[4] ವನಕ್ಕುಂ ‘ಅ’.

[5] ನೊಳವ ‘ಮ, ಪಾ’.

[6] ಲಕ್ಷ್ಯಮಂ ‘ಮ,ಪಾ’.

[7] ಲಕ್ಷಣಮಂ ‘ಮ,ಪಾ’.

[8] ನೆರ್ದೆವೆತ್ತ ‘ಬ’ ನೆದೆವೆತ್ತ ‘ಅ’

[9] ದಾಗದುಮುದಾರ ‘ಬ’

[10] ಕಾಣೆಗೆಯ್ದುಂ ‘ಕ’

[11] ‘ಜಾಣರಿಂ ನೋಡಿಸಿ’ ‘ಪಾ’; ಜಾಣರಿ ಮೋದಿಸಿ ‘ಕ’.

[12] ದೋಷ ‘ಮ’.

[13] ಬಗೆದುದ್ಭಾಷಿಸಿ ‘ಮ’

[14] ಬೇಸರುವಂ ‘ಬ’.

[15] ದೇಶಿ ‘ಪಾ,ಮ,ಸೀ’; ದೇಸೆ ‘ಅ’

[16] ಸಂತತಿ ‘ಪಾ’.

[17] ತರಿಸಲೆ ‘ಪಾ’,    ಅಂತಱಸಲೆ ‘ಅ’ ‘ಕ’.