ಕೋಷ್ಟಕ – ೩
ಕರ್ನಾಟಕ ಹಾಗೂ ಭಾರತದ ಬಡತನ ಮಟ್ಟಗಳು

ವರ್ಷ ಗ್ರಾಮೀಣ ನಗರ ಒಟ್ಟು
  ಬಡತನ ರೇಖೆ (ರೂ.) ಸಂಖ್ಯೆ (ಲಕ್ಷ (ರೂ.) ಶೇಕಡ ಬಡತನ ರೇಖೆ (ರೂ) ಸಂಖ್ಯೆ (ಲಕ್ಷಗಳಲ್ಲಿ) ಶೇಕಡ ಸಂಖ್ಯೆ (ಲಕ್ಷಗಳಲ್ಲಿ) ಶೇಕಡ
೧೯೭೨-೭೩                
ಕರ್ನಾಟಕ ೪೮.೪೬ ೧೧೯.೦ ೫೨.೩ ೪೮.೭೨ ೩೪.೩ ೪೫.೮ ೧೫೩.೩ ೫೦.೦
ಭಾರತ ೪೦.೨೪ ೨೪೪೨.೨ ೫೪.೧ ೪೭.೩೧ ೪೭೩.೩ ೪೧.೨ ೨೯೧೫.೫ ೫೧.೫
೧೯೭೭-೭೮                
ಕರ್ನಾಟಕ ೬೪.೦೬ ೧೩೧.೯ ೫೩.೨ ೭೯.೧೮ ೪೧.೬ ೪೪.೬ ೧೭೩.೫ ೫೦.೮
೧೯೮೩-೮೪                
ಕರ್ನಾಟಕ ೧೦೨.೧೩ ೧೦೨.೯ ೩೭.೫ ೧೨೩.೯೧ ೩೪.೭ ೨೯.೨ ೧೩೭.೬ ೩೫.೦
ಭಾರತ ೧೦೧.೭೦ ೨೨೧೫.೦ ೪೦.೪ ೧೧೭.೫೦ ೪೦೫.೦ ೨೮.೧ ೨೭೧೦.೦ ೩೭.೪
೧೯೮೭-೮೮                
ಕರ್ನಾಟಕ ೧೨೮.೫೪ ೧೦೨.೮ ೩೫.೯ ೧೫೯.೧೧ ೩೩.೭ ೨೪.೨ ೧೩೬.೫ ೩೨.೧
ಭಾರತ ೧೩೧.೬೦ ೧೯೫೯.೭ ೩೩.೪ ೧೫೨.೧೩ ೪೧೭.೦ ೨೦.೧ ೨೩೭೬.೭ ೨೯.೯

ಈ ಕೋಷ್ಟಕದಿಂದ ಹೊರಬೀಳುವ ಫಲಿತಾಂಶವೆಂದರೆ, ಕರ್ನಾಟಕದ ಬಡತನದ ಮಟ್ಟವು ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಲ್ಲೂ ಭಾರತದ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ ಎಂಬುದು.

ಹೀಗೆಯೇ ಉದ್ಯೋಗ, ನಿರುದ್ಯೋಗ ಮಟ್ಟಗಳನ್ನು ಭಾರತದೊಂದಿಗೆ ಹೋಲಿಸಿದಾಗ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಈ ಹಿಂದೆ ತಿಳಿಸಿರುವ ಪ್ರಕಟಣೆಯಿಂದ ತಿಳಿದು ಬರುವಂತೆ, ಎಲ್ಲಾ ಮೂರು ವಿಧಾನಗಳಾದ ಸಾಮಾನ್ಯ ಸ್ಥಿತಿ, ಪ್ರಸ್ತುತ ವಾರದ ಸ್ಥಿತಿ ಹಾಗೂ ಪ್ರಸ್ತುತ ನಿತ್ಯದ ಸ್ಥಿತಿಗಳಂತೆ, ಉದ್ಯೋಗಸ್ಥರ ಪ್ರಮಾಣವು ಭಾರತದ ಪ್ರಮಾಣಕ್ಕಿಂತ ಉತ್ತಮವಾಗಿತ್ತು ಎಂಬುದು. ಅಲ್ಲದೆ, ಮೇಲ್ಕಾಣಿಸಿದ ಎಲ್ಲಾ ಮೂರು ಸ್ಥಿತಿಯಂತೆ, ನಿರುದ್ಯೋಗವೂ ಸಹ ಭಾರತದ ಸ್ಥಿತಿಗಿಂತ ಗಮನಾರ್ಹವಾಗಿ ಕಡಿಮೆಯಿತ್ತು.

೩. ಕರ್ನಾಟಕದಲ್ಲಿ ಉದ್ಯೋಗದ ರಚನೆ

ಉದ್ಯೋಗ ಉತ್ಪತ್ತಿಗಳ ಅವಕಾಶಗಳನ್ನು ತಿಳಿಯುವುದಕ್ಕೆ ಮೊದಲು ಸದ್ಯದ ಕರ್ನಾಟಕದ ಉದ್ಯೋಗದ ರಚನೆಯನ್ನು ತಿಳಿಯುವುದು ಉತ್ತಮ.

ರಾಷ್ಟ್ರೀಯ ಮಾದರಿ ಸಮೀಕ್ಷೆಗಳ ಪಂಚವಾರ್ಷಿಕ ಸುತ್ತುಗಳ ಫಲಿತಾಂಶಗಳನ್ನು ೧೯೮೩ರಲ್ಲಿ ಒಟ್ಟು ಉದ್ಯೋಗದಲ್ಲಿ ಸ್ವಯಂ ಉದ್ಯೋಗಿಗಳು ಶೇ. ೪೬.೪ ಇದ್ದುದು, ೧೯೮೭-೮೮ರಲ್ಲಿ ೪೪.೫ಕ್ಕೆ ಇಳಿದಿತ್ತು ಎಂದೂ, ಇದೇ ಅವಧಿಯಲ್ಲಿ ದಿನಗೂಲಿ ಉದ್ಯೋಗಸ್ಥರು ಶೇ. ೩೮.೬ರಿಂದ ಶೇ. ೧.೬ಕ್ಕೆ ಏರಿದ್ದರೆಂದೂ ಹಾಗೂ ವೇತನ ಪಡೆಯುವ ಉದ್ಯೋಗಸ್ಥರು ಶೇ. ೧.೫ರಿಂದ ಶೇ. ೧೩.೯ಕ್ಕೆ ಇಳಿದಿದ್ದರೆಂದು ತಿಳಿಸುತ್ತವೆ. ಒಟ್ಟಿನಲ್ಲಿ ಈ ವಿಶ್ಲೇಷಣೆಯಿಂದ ಸ್ವಯಂ ಉದ್ಯೋಗಸ್ಥರು ಹಾಗೂ ವೇತನ ಪಡೆಯುವ ಉದ್ಯೋಗಸ್ಥರಲ್ಲಿ ಇಳಿಕೆಯೂ ದಿನಗೂಲಿ ಉದ್ಯೋಗಸ್ಥರಲ್ಲಿ ಏರಿಕೆಯೂ ಕಂಡು ಬಂದಿದೆ ಎಂದು ಹೇಳಬಹುದು.

ಈ ಸಮೀಕ್ಷೆಗಳ ಕೈಗಾರಿಕಾ ಗುಂಪುಗಳಲ್ಲಿನ ಉದ್ಯೋಗದ ವಿಶ್ಲೇಷಣೆಯಂತೆ, ೧೯೮೩ರಲ್ಲಿ ಕೃಷಿ, ಶಿಕಾರಿ, ಅರಣ್ಯ ಹಾಗೂ ಮೀನುಗಾರಿಕೆಗಳು ಒಟ್ಟು ಉದ್ಯೋಗದ ಶೇಕಡಾ ೬೭ ಇದ್ದುದು ೧೯೮೭-೮೮ರಲ್ಲಿ ೬೫.೫೪ಕ್ಕೆ ಇಳಿದಿತ್ತು. ಉತ್ಪಾದಕತೆಯ ವಲಯದ ಪಾಲು ೧೯೮೩ರಲ್ಲಿ ಶೇ. ೧೧.೧ ಇದ್ದುದು, ೧೯೮೭-೮೮ರಲ್ಲಿ ಅಲ್ಪ ಪ್ರಮಾಣದ (ಶೇ. ೧೧.೩) ಏರಿಕೆಯಾಗಿತ್ತು. ಸಮೂಹ, ಸಾಮಾಜಿಕ ಮತ್ತು ವೈಯಕ್ತಿಕ ಸೇವೆಗಳ ವಲಯಗಳ ಉದ್ಯೋಗದ ಪಾಲು ೧೯೮೩ರಲ್ಲಿ ಶೇ. ೭ ಆಗಿದ್ದುದು, ೧೯೮೭-೮೮ರಲ್ಲಿ ಶೇ. ೯.೧ಕ್ಕೆ ಏರಿತ್ತು. ಸಾರಾಂಶವೆಂದರೆ, ಕೃಷಿ ವಲಯ ಶೇ. ೬೫ಕ್ಕೆ ಹೆಚ್ಚು ಉದ್ಯೋಗದ ಪಾಲನ್ನು, ಉತ್ಪಾದನಾ ವಲಯವು ಸುಮಾರು ಶೇ. ೧೧ರಷ್ಟು ಪಾಲನ್ನೂ, ಶೇ.೧೦ರಷ್ಟು ಪಾಲು ಇನ್ನುಳಿದ ವಲಯಗಳ ಪಾಲಾಗಿತ್ತು. ಕೃಷಿ ವಲಯವು ಒಟ್ಟು ಉದ್ಯೋಗದ ೨/೩ ಪಾಲು ಪಡೆದಿದ್ದು, ಕೃಷಿಯೇತರ ವಲಯಗಳ ಪಾಲಿನಲ್ಲಿ ಕರ್ನಾಟಕದಲ್ಲಿ ಶೇ.೨ ಏರಿಕೆಯಾಗಿದ್ದರೆ, ಭಾರತದಲ್ಲಿ ಸುಮಾರು ಶೇ. ೩ರಷ್ಟು ಏರಿಕೆಯಾಗಿತ್ತು.

ಅತಿ ದೊಡ್ಡ ಪಾಲು ಪಡೆದಿರುವ ಕೃಷಿವಲಯದ ಬಗ್ಗೆ ಹೇಳುವುದಾದರೆ, ಕೃಷಿ ವಲಯದ ಒಟ್ಟು ಉದ್ಯೋಗದಲ್ಲಿ ಕೃಷಿ ಉತ್ಪಾದನೆ ಶೇ. ೮೫ರಷ್ಟು ಹೈನುಗಾರಿಕೆ ಉತ್ಪಾದನೆ ಶೇ.೮ರಷ್ಟು ಆಗಿತ್ತು. ೧೯೯೦-೯೧ರ ಕೃಷಿಗಣತಿಯ ಭೂಹಿಡುವಳಿ ರಚನೆಯನ್ನು ವಿಶ್ಲೇಷಿಸಿದಾಗ, ಶೇ.೩೩ ಭೂ ಹಿಡುವಳಿಗಳು ಒಟ್ಟು ವಿಸ್ತೀರ್ಣದ ಶೇ. ೭೩ ಪಾಲನ್ನು ಹೊಂದಿದ್ದವು ಎಂದೂ, ಸರಾಸರಿ ಭೂಹಿಡುವಳಿಗಳ ಗಾತ್ರ ೩.೨ ಭೂಹಿಡುವಳಿ ೨ ಹೆಕ್ಟೇರು ಆಗಿತ್ತೆಂದು ಕಂಡು ಬರುತ್ತದೆ.  ಅಲ್ಲದೆ ಅತಿ ಸಣ್ಣ ಹಿಡುವಳಿದಾರರ ಪ್ರಮಾಣವು ಹೆಚ್ಚಾಗಿದ್ದು, ಸಣ್ಣ ಭೂಹಿಡುವಳಿದಾರರ ಪ್ರಮಾಣದಲ್ಲಿ ಯಾವ ವ್ಯತ್ಯಾಸವು ತೋರದೆ, ದೊಡ್ಡ ಭೂಹಿಡುವಳಿದಾರರ ಪ್ರಮಾಣವು ಇಳಿದಿತ್ತು ಎಂಬುದು ವೇದ್ಯವಾಗುತ್ತದೆ. ಹೀಗಾಗಿ, ಕಾಲಾನುಕ್ರಮದಲ್ಲಿ ಭೂಹಿಡುವಳಿಗಳ ಅಸಮತೆಯ ಮಟ್ಟವು ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅತಿ ಸಣ್ಣ ಭೂಹಿಡುವಳಿದಾರರ ಸರಾಸರಿ ಹಿಡುವಳಿ ಗಾತ್ರ ಕಡಿಮೆಯಾಗುತ್ತಿರುವುದರಿಂದ ಈ ಅತಿ ಸಣ್ಣ ರೈತರು ಕೃಷಿ ಕ್ಷೇತ್ರದ ಹೊರಗಡೆ ಉದ್ಯೋಗವನ್ನರಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೃಷಿ ಕ್ಷೇತ್ರದಿಂದ ಕೃಷಿಯೇತರ ಕ್ಷೇತ್ರಕ್ಕೆ ಉದ್ಯೋಗವು ಬದಲಾಗಬಹುದಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಈ ಹೆಚ್ಚಿನ ಕಾರ್ಮಿಕ ಶಕ್ತಿಯನ್ನು ಕೃಷಿಯೇತರ ಕ್ಷೇತ್ರಗಳ ಉದ್ಯೋಗದಲ್ಲಿ ಒಳಗೊಳ್ಳುವಂತೆ ಮಾಡುವ ಕ್ರಮಗಳ ಮೇಲೆ ಒತ್ತು ನೀಡಬೇಕಾಗುತ್ತದೆ.

ರಾಷ್ಟ್ರೀಯ ಮಾದರಿ ಸಮೀಕ್ಷೆಗಳ ಇನ್ನೂ ಆಳವಾದ ವಿಶ್ಲೇಷಣೆಯು, ಗ್ರಾಮೀಣ ಕೈಗಾರಿಕೆಗಳು, ವಿಶೇಷವಾಗಿ, ಆಹಾರ ಸಾಮಗ್ರಿಗಳು, ಪಾನೀಯಗಳು, ಹೊಗೆಸೊಪ್ಪು ಮತ್ತು ಹೊಗೆಸೊಪ್ಪು. ಸಾಮಗ್ರಿಗಳು, ಹತ್ತಿ ಬಟ್ಟೆಗಳು, ಸಿದ್ಧ ಉಡುಪುಗಳು ಹಾಗೂ ಚರ್ಮ ಮತ್ತು ಉಣ್ಣೆಯ ಸಾಮಗ್ರಿಗಳು ವಲಯಗಳ ಕೈಗಾರಿಕೆಗಳ ಉದ್ಯೋಗದಲ್ಲಿ ಉತ್ತಮ ಮಟ್ಟದ ಹೆಚ್ಚಳವಾಗಿದೆ ಎಂದು ತೋರಿಸುತ್ತದೆ. ಇವೆಲ್ಲವೂ ಇಂತಹ ಕೈಗಾರಿಕೆಗಳನ್ನು ಬಲಪಡಿಸುವುದರ ಹಾಗೂ ಪ್ರೋತ್ಸಾಹಿಸುವ ಕ್ರಮ ಕೈಗೊಳ್ಳುವ ನೀತಿಯ ಅವಶ್ಯಕತೆಯನ್ನು ಎತ್ತಿ ತೋರಿಸುತ್ತವೆ.

೧೯೯೪-೯೫ರ ಕರ್ನಾಟಕದ ಆರ್ಥಿಕ ಸಮೀಕ್ಷೆಯ ವರದಿಯು, ಸಂಘಟಿತ ಕ್ಷೇತ್ರದಲ್ಲಿನ ಉದ್ಯೋಗದ ಬೆಳವಣಿಗೆಯು ಕೇವಲ ಶೇ.೧ ಎಂದು ಹೇಳುತ್ತದೆ. ಅಲ್ಲದೆ ಈ ವಲಯದ ಉದ್ಯೋಗ ಉತ್ಪತ್ತಿಯ ಕುಂಠಿತ ಬೆಳವಣಿಗೆಯಿಂದಾಗಿ ನಿರುದ್ಯೋಗಿಗಳಿಗೆ ಹಾಗೂ ಅರೇ ಉದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಕಾರ್ಯ ಬೃಹತ್ತಾಗಿರುತ್ತದೆ. ಸಂಘಟಿತ ವಲಯದಲ್ಲಿನ ಸೀಮಿತ ಉದ್ಯೋಗಾವಕಾಶಗಳನ್ನು ವೃತ್ತಿ ಶಿಕ್ಷಣವನ್ನು ಒದಗಿಸುವುದು ಹಾಗೂ ಸ್ವಯಂ ಉದ್ಯೋಗಾವಕಾಶಗಳನ್ನು ವಿದ್ಯಾವಂತ ನಿರುದ್ಯೋಗಿಗಳಿಗೆ ಒದಗಿಸುವುದು ಒಂದು ಉಪಾಯವಾಗಬಹುದು. ಈವರೆಗೂ ನಮ್ಮ ಆದ್ಯತೆಗಳು ವೃತ್ತಿಪರವಲ್ಲದ ಶಿಕ್ಷಣವಾಗಿದ್ದು ನಮ್ಮ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಪದವೀಧರರು ಕೇವಲ ‘ವೈಟ್‌ಕಾಲರ್ ಕೆಲಸಗಳನ್ನು’ ಬಯಸುತ್ತಿರುವುದರಿಂದ ಇಂತಹ ವಿದ್ಯಾವಂತ ಯುವಕರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ. ಆದ್ದರಿಂದ ಇದಕ್ಕೆ ಪರಿಹಾರೋಪಾಯವೆಂದರೆ, ವಿದ್ಯಾವಂತರಿಗೆ ಹೆಚ್ಚು ಹೆಚ್ಚಾಗಿ ಸ್ವಯಂ ಉದ್ಯೋಗಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುವುದಾಗಿದೆ.

ಅಸಂಘಟಿತ ವಲಯದ ಉದ್ಯೋಗದ ಚಿತ್ರಣದಂತೆ, ಈ ವಲಯವು ಗಣನೀಯವಾಗಿ ಉದ್ಯೋಗಗಳನ್ನು ಒದಗಿಸಿದ್ದರೂ ಸಹ, ಈ ವಲಯದ ಕೈಗಾರಿಕೆಗಳು ಅಸಂಘಟಿತವಾಗಿರುವುದರಿಂದ ಅಲ್ಲಿರುವ ಉದ್ಯೋಗಗಳನ್ನು ಉಳಿಸಿಕೊಳ್ಳುವಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ.

ಕರ್ನಾಟಕದ ೮ನೆಯ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ರಾಜ್ಯಾದಾಯದ ಶೇ.೧ರ ಬೆಳವಣಿಗೆಯು ಉದ್ಯೋಗದ ಶೇ. ೦.೨೨ರ ಬೆಳವಣಿಗೆಗೆ ಕಾರಣವಾಗಿದೆ ಎಂದು ಅಂದಾಜು ಮಾಡಲಾಗಿದೆ. ಈ ಅನುಪಾತವನ್ನು ಉಳಿಸಿಕೊಳ್ಳಲು ರಾಜ್ಯಾದಾಯದಲ್ಲಿನ ಬೆಳವಣಿಗೆಯು ಭವಿಷ್ಯದಲ್ಲಿ ಅತಿ ಹೆಚ್ಚಿನ ಮಟ್ಟದ್ದಾಗಬೇಕಾಗುತ್ತದೆ. ಅಂದರೆ, ೮ನೇ ಪಂಚವಾರ್ಷಿಕ ಯೋಜನಾವಧಿಯಲ್ಲಿಯೇ ಎಲ್ಲರಿಗೂ ಉದ್ಯೋಗ ಗುರಿಯನ್ನು ಸಾಧಿಸಲು ರಾಜ್ಯಾದಾಯದಲ್ಲಿ ವಾರ್ಷಿಕವಾಗಿ ಶೇ. ೧೧ರ ಬೆಳವಣಿಗೆಯನ್ನು ಸಾಧಿಸಬೇಕಾಗುತ್ತದೆ. ಆದರೆ, ೧೯೯೪-೯೫ರ ಕರ್ನಾಟಕದ ಆರ್ಥಿಕ ಸಮೀಕ್ಷೆಯು ೧೯೯೨-೯೩ರಲ್ಲಿ ಶೇ. ೪.೨ರ ರಾಜ್ಯಾದಾಯದ ಬೆಳವಣಿಗೆಯ ಪ್ರತಿಯಾಗಿ ೧೯೯೪-೯೫ರಲ್ಲಿ ಶೇ. ೩.೫ರ ಬೆಳವಣಿಗೆಯನ್ನು ನಿರೀಕ್ಷಿಸಿದೆ. ಆದ್ದರಿಂದ ಈ ಶತಮಾನಾಂತ್ಯದಲ್ಲಿಯೂ ಸಹ ಎಲ್ಲರಿಗೂ ಉದ್ಯೋಗದ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಈ ಪ್ರವೃತ್ತಿಯು ಮುಂದುವರೆಯುವುದಾದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಪ್ರಯತ್ನವನ್ನಷ್ಟೇ ಮಾಡಬಹುದು. ಇದಕ್ಕಾಗಿ, ನಮ್ಮ ಹಿಂದಿನ ಅನುಭವಗಳನ್ನು ಆಧಾರವಾಗಿಟ್ಟುಕೊಳ್ಳಬೇಕಾಗುತ್ತದೆ.

ಹಿಂದಿನ ಅಂದರೆ, ಏಳನೆಯ ಪಂಚ ವಾರ್ಷಿಕ ಯೋಜನಾವಧಿಯಲ್ಲಿ (೧೯೮೫-೯೦) ಸರ್ಕಾರದ ಉದ್ಯೋಗ ಪ್ರಧಾನ ಕಾರ್ಯಕ್ರಮಗಳಾದ ಜವಾಹರ್ ರೋಜ್‌ಗಾರ್ ಯೋಜನೆ, ಅಭಾವ ಪೀಡಿತ ಪ್ರದೇಶಗಳ ಕಾರ್ಯಕ್ರಮ, ಸಮಗ್ರ ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮ, ಉದ್ಯೋಗ ಭರವಸೆ ಯೋಜನೆ, ಇತ್ಯಾದಿಗಳಿಂದ ವಾರ್ಷಿಕವಾಗಿ ಸರಾಸರಿ ೪.೪೭ ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿತ್ತು. ಫಲಾನುಭವಿ ಆಧಾರಿತ ಕಾರ್ಯಕ್ರಮವಾದ ಸಮಗ್ರ ಗ್ರಾಮೀಣಾಭಿವೃದ್ಧಿಯಂತಹ ಕಾರ್ಯಕ್ರಮಗಳಿಂದ ವರ್ಷಕ್ಕೆ ಸರಾಸರಿ ೧.೭ ಲಕ್ಷ ಮಂದಿ ಪ್ರಯೋಜನ ಪಡೆದಿದ್ದರು. ಸ್ವಯಂ ಉದ್ಯೋಗ ಕಾರ್ಯಕ್ರಮಗಳಿಂದ ವರ್ಷಕ್ಕೆ ಸರಾಸರಿ ಸುಮಾರು ೩೫ ಸಾವಿರ ಮಂದಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗಿತ್ತು. ಈ ಮಾಹಿತಿಗಳಲ್ಲದೆ, ಉದ್ಯಮಿಗಳಿಗೆ ಭೂಮಿಯ ವಿತರಣೆ, ಕರಕುಶಲಕರ್ಮಿಗಳಿಗೆ ಹಾಗೂ ಮಗ್ಗದ ಕೈಕೆಲಸಗಾರರಿಗೆ ಪ್ರತಿ ವರ್ಷ ಒದಗಿಸಿದ ಸರಾಸರಿ ನೆರವುಗಳ ವಿವರಗಳನ್ನೂ ಸ್ವಯಂ ಉದ್ಯೋಗ ಕೈಗೊಳ್ಳಲು ನೀಡಿದ ತರಬೇತಿಯ ವಿವರಗಳನ್ನೂ ಸಹ ಕೋಷ್ಟಕ ೫ರಲ್ಲಿ ನೀಡಲಾಗಿದೆ.

ಕೋಷ್ಟಕ – ೫
ಏಳನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ (೧೯೮೫-೯೦)
ಉದ್ಯೋಗ ಉತ್ಪತ್ತಿಯ ಸಾಧನೆ

  ಕಾರ್ಯಕ್ರಮಗಳು ಮೂಲಮಾನ ಉದ್ಯೋಗ ಉತ್ಪತ್ತೀ ಫಲಾನುಭವಿಗಳ ವಾರ್ಷಿಕ ಸರಾಸರಿ
೧. ಉದ್ಯೋಗ ಪ್ರಧಾನ ಕಾರ್ಯಕ್ರಮಗಳು ಲಕ್ಷ ಮಾನ ದಿನ ೪೪೬.೫
೨. ಫಲಾನುಭವಿ ಪ್ರಧಾನ ಕಾರ್ಯಕ್ರಮಗಳು ಸಂಖ್ಯೆ ೧೬೯೨೪೯
೩. ಸ್ವಯಂ ಉದ್ಯೋಗ ಕಾರ್ಯಕ್ರಮಗಳು ಸಂಖ್ಯೆ ೩೪೯೧೬
೪. ನೆರವಿನ ಕಾರ್ಯಕ್ರಗಳು ಸಂಖ್ಯೆ ೩೩೮೯೦
೫. ಸ್ವಯಂ ಉದ್ಯೋಗಕ್ಕಾಗಿ ತರಬೇತಿ ಕಾರ್ಯಕ್ರಮಗಳು ಸಂಖ್ಯೆ ೮೧೫೬

ಹೀಗಾಗಿ, ಏಳನೆಯ ಪಂಚವಾರ್ಷಿಕ ಯೋಜನೆಯಲ್ಲಿನ ನಮ್ಮ ಅನುಭವವು ಬರಿಯ ಉದ್ಯೋಗ ಉತ್ಪತ್ತಿಗಾಗಿ ಮಾಡಿದ ಪ್ರಯತ್ನವಾಗಿರದೆ, ವರಮಾನಕ್ಕೆ ಪೂರಕವಾದ ಪ್ರಯೋಜನಗಳನ್ನೂ ನೀಡಿದ್ದು ಸ್ವಯಂ ಉದ್ಯೋಗಕ್ಕಾಗಿ ನೆರವನ್ನೂ ಇದರಲ್ಲಿನ ಬಹುಮುಖ ಅಂಶವಾದ ತರಬೇತಿಯನ್ನೂ ನೀಡುವುದಾಗಿತ್ತು ಎಂಬುದನ್ನು ನಿಚ್ಚಳಗೊಳಿಸುತ್ತದೆ.

ಇದೀಗ, ೧೯೯೪-೯೫ರ ಆರ್ಥಿಕ ಸಮೀಕ್ಷೆಯ ವರದಿಯಂತೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ೧೯೯೪-೯೫ರಲ್ಲಿ ರಾಜ್ಯದಲ್ಲಿ ಉದ್ಯೋಗ ಉತ್ಪತ್ತಿಯು ಅಲ್ಪ ಪ್ರಮಾಣದಲ್ಲಿ ಉತ್ತಮವಾಗಬಹುದು ಎಂದು ನಿರೀಕ್ಷಿಸಲಾಗಿದೆ. ೧೯೯೪-೯೫ರ ಹೆಚ್ಚುವರಿ ಉದ್ಯೋಗ ಉತ್ಪತ್ತಿಯನ್ನು ಸುಮಾರು ೨.೭ ಲಕ್ಷ ಎಂದು ಅಂದಾಜಿಸಲಾಗಿದೆ. ಇದು ಕಳೆದ ಸಾಲಿನ ಉದ್ಯೋಗ ಉತ್ಪತ್ತಿಗಿಂತ ಶೇ. ೧.೪ ಹೆಚ್ಚಳವಾಗಿದ್ದು, ಇದರಲ್ಲಿ ಸೇವಾವಲಯದ ಕೊಡುಗೆ ಶೇ. ೩೨.೬ ಹಾಗೂ ಕೃಷಿ ವಲಯದ ಕೊಡುಗೆ ಶೇ. ೨೧.೯ ಎಂದು ಅಂದಾಜಿಸಿದೆ. ಅಲ್ಲದೆ, ಡಿಸೆಂಬರ್ ೧೯೯೪ರ ಅಂತ್ಯಕ್ಕೆ ಉದ್ಯೋಗ ಉತ್ಪತ್ತಿಯ ವಿಶೇಷ ಕಾರ್ಯಕ್ರಮಗಳಡಿಯಲ್ಲಿ ರಾಜ್ಯದಲ್ಲಿ ೮.೪೨ ಕೋಟಿ ವರಮಾನ ದಿನಗಳ ಉದ್ಯೋಗ ಉತ್ಪತ್ತಿಯಾಗಿತ್ತು. ಇದು ಏಳನೆಯ ಪಂಚ ವಾರ್ಷಿಕ ಯೋಜನಾವಧಿಯ ವಾರ್ಷಿಕ ಸರಾಸರಿಯ ಸುಮಾರು ಎರಡು ಪಟ್ಟಾಗಿತ್ತು. ಇದರಲ್ಲಿ ಉದ್ಯೋಗ ಪ್ರಧಾನ ಕಾರ್ಯಕ್ರಮಗಳಾದ ಜವಾಹರ್ ರೋಜಗಾರ್ ಯೋಜನೆ, ಅಭಾವಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮ, ಉದ್ಯೋಗ ಭರವಸೆ ಯೋಜನೆ ಮತ್ತು ನೆಮ್ಮದಿಗಳ ಪಾಲು ಶೇ. ೪೨.೯ ಆಗಿತ್ತು. ವಿವರಗಳಿಗಾಗಿ ಕೋಷ್ಟಕ ೬ನ್ನು ನೋಡಿ.

ಕೋಷ್ಟಕ – ೬
ರಾಜ್ಯದ ವಿವಿಧ ಕಾರ್ಯಕ್ರಮಗಳಿಂದ ೧೯೯೪-೯೫ರಲ್ಲಿ ಆದ ದಿನಗೂಲಿ ಉದ್ಯೋಗ ಉತ್ಪತ್ತಿಯ ವಿವರಗಳು

ಕ್ರ.ಸಂ. ಕಾರ್ಯಕ್ರಮ ವಾರ್ಷಿಕ ಗುರಿ ೧೯೯೪-೯೫ ಡಿಸೆಂಬರ್ ೯೪ ರ ವರೆಗೆ ಆದ ಪ್ರಗತಿ ಶೇಕಡವಾರು
೧. ಜವಹಾರ್ ರೋಜಗಾರ್ ಯೋಜನೆ ೪೧೫.೭೨ ೨೧೪.೯೮ ೫೧.೭
೨. ಅಭಾವ ಪೀಡಿತ ಪ್ರದೇಶಾಭಿವೃದ್ಧಿ ಕಾರ್ಯಕ್ರಮ ೪೭.೮೬ ೧೬.೮೭ ೩೫.೨
೩. ಸಮಗ್ರ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಕ್ರಮ ೨೩.೨೭ ೫.೮೮ ೨೪.೯
೪. ಉದ್ಯೋಗ ಭರವಸೆ ಯೋಜನೆ ೨೧೪.೮೩ ೧೦೯.೪೩ ೫೦.೯
೫. ನೆಮ್ಮದಿ ೧೦೨. ೮೫ ೧೪.೧೬ ೧೩.೭
೬. ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ನೆರೆ ನಿಯಂತ್ರಣ ೫೦೧.೪೫ ೧೫೮.೦೩ ೩೧.೫
೭. ಸಣ್ಣ ನೀರಾವರಿ ೬೯.೫೬ ೫೬.೮೦ ೮೧.೬
೮. ಕಾಡಾ ೩೪.೭೬ ೯.೦೦ ೨೫.೯
೯. ಭೂ ಸಂರಕ್ಷಣೆ ೧೮೧.೨೯ ೭೫.೩೭ ೪೧.೬
೧೦. ಜಲಾನಯನ ಪ್ರದೇಶಾಭಿವೃದ್ಧಿ ೧೫.೨೮ ೯.೩೮ ೬೧.೪
೧೧. ರಸ್ತೆ ಮತ್ತು ಸೇತುವೆಗಳು ೧೭೫.೨೮ ೧೩೩.೮೩ ೭೬.೩
೧೨. ಕಟ್ಟಡಗಳು ೧೦೬.೯೯ ೩೮.೭೪ ೩೬.೨
ಒಟ್ಟು ೧೮೮೯-೧೭ ೮೪೨.೪೭ ೪೪.೬  

೪. ರಕ್ಷಣಾ ಕಾರ್ಯಕ್ರಮಗಳು, ಬಡತನ ಮತ್ತು ನಿರುದ್ಯೋಗವನ್ನು ಎದುರಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳು

೧. ಬಡತನದ ವಿರುದ್ಧ ಕಾರ್ಯಕ್ರಮಗಳು : ಫಲಾನುಭವಿಗಳಿಗೆ ಯಾವುದಾದರೂ ಉತ್ಪನ್ನಕಾರಕ ಆಸ್ತಿಗಳನ್ನು ಹೊಂದಲು ನೆರವು ಹಾಗೂ ಅವರ ವರಮಾನವನ್ನು ತುಂಬಿಕೊಡಲು ಅಲ್ಪಾವಧಿಯ ದಿನಗೂಲಿ ಒದಗಿಸುವುದರ ಮೂಲಕ ಬಡತನ ಸಮಸ್ಯೆಯನ್ನು ಎದುರಿಸಲು ಸರ್ಕಾರವು ಕೆಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇಂತಹ ಎರಡು ಬಗೆಯ ಕಾರ್ಯಕ್ರಮಗಳೆಂದರೆ ಅ)ಸ್ವಯಂ ಉದ್ಯೋಗ ಮತ್ತು ಆ) ದಿನಗೂಲಿ ಒದಗಿಸುವ ಕಾರ್ಯಕ್ರಮಗಳು. ಗ್ರಾಮೀಣ ಪ್ರದೇಶಗಳಲ್ಲಿ ಬಡತನವನ್ನು ತಗ್ಗಿಸುವ ಪ್ರಧಾನ ಕಾರ್ಯಕ್ರಮಗಳೆಂದರೆ, ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜವಾಹರ್ ರೋಜಾಗಾರ್ ಯೋಜನೆ. ನಗರ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಲ್ಪ ಪ್ರಮಾಣದಲ್ಲಿ ಜಾರಗೊಳಿಸಲಾಗಿದೆ. ಈ ಕೆಲವು ಕಾರ್ಯಕ್ರಮಗಳು ನಿರುದ್ಯೋಗಿ ವ್ಯಕ್ತಿಗಳು ಸ್ವಯಂ ಉದ್ಯೋಗವನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದ ಸಾಲ, ಸಬ್ಸಿಡಿಗಳು ಹಾಗೂ ಸಾಲ ಮರುಪಾವತಿಗಾಗಿ ದೀರ್ಘ ಕಾಲಾವಧಿಯನ್ನು ನೀಡುತ್ತವೆ. ಕೈಗಾರಿಕಾ ಎಸ್ಪೇಟುಗಳಲ್ಲಿ ಕೈಗಾರಿಕಾ ಶೆಡ್ಡುಗಳನ್ನು ನಿರ್ಮಿಸಿ ಉದ್ಯಮಿಗಳಿಗೆ ಹಂಚಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಆದ್ಯತೆಯ ಮೇಲೆ ಸಾಲ ನೀಡಲಾಗುತ್ತಿದೆ. ರಾಷ್ಟ್ರೀಯ ಈಕ್ವಿಟಿ ನಿಧಿ ಯೋಜನೆಯಡಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿಗೆ ನೆರವು ನೀಡಲಾಗುತ್ತದೆ. ಅಲ್ಲದೆ, ನಿರುದ್ಯೋಗಿ ವ್ಯಕ್ತಿಗಳು ಸ್ವಯಂ ಉದ್ಯೋಗ ಕೈಗೊಳ್ಳುವಂತೆ ಪ್ರೋತ್ಸಾಹಿಸಲು ರಾಜ್ಯದಲ್ಲಿ ೧೯೯೩-೯೪ರಿಂದ ಪ್ರಧಾನ ಮಂತ್ರಿಯವರ ರೋಜ್‌ಗಾರ್ ಯೋಜನೆ ಜಾರಿಯಲ್ಲಿದೆ. ಈ ಕಾರ್ಯಕ್ರಮಗಳ ರೂಪುರೇಶೆ, ಸಾಧನೆ ಇತ್ಯಾದಿ ವಿವರಗಳನ್ನು ಈ ಮುಂದೆ ನೀಡಲಾಗಿದೆ.

ಅ) ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ (ಸ.ಗ್ರಾ.ಅ.ಕಾ)

ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ಆರ್ಥಿಕತೆಯ ಮೂರು ವಲಯಗಳ ವಿವಿಧ ಚಟುವಟಿಕೆಗಳಲ್ಲಿ ಸ್ವಯಂ ಉದ್ಯೋಗ ಉದ್ಯಮಗಳನ್ನು ಸ್ಥಾಪಿಸಲು ನೆರವು ನೀಡುವ ಉದ್ದೇಶದಿಂದ ೧೯೮೦ರಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದ ಲಕ್ಷಣ ಹಾಗೂ ಸಂಪನ್ಮೂಲಗಳ ಹಂಚಿಕೆ ೧) ಬಡತನದ ವ್ಯಾಪಕತೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆ ೨)ಬಡವರನ್ನು ಗುರುತಿಸಲು ವಾರ್ಷಿಕ ರೂ. ೬೪೦೦.೦೦ ವರಮಾನದ ಮಿತಿ ಹಾಗೂ ರೂ. ೩೫೦೦.೦೦ಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಕುಟುಂಬಗಳಿಗೆ ಆದ್ಯತೆ ೩) ಹೆಚ್ಚಿಗೆ ಲಾಭಗಳಿಸಲು ನೆರವುಗಳ ಪ್ಯಾಕೇಜ್‌ನೊಂದಿಗೆ ಹೆಚ್ಚಿನ ಬಂಡವಾಳ ಹೂಡಿಕೆ ೪) ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಯೋಜನೆ ೫) ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಇತರೆ ಕಾರ್ಯಕ್ರಮಗಳ ನಡುವೆ ಹೆಚ್ಚಳ ಅಂತರ ವಲಯ ಹೊಂದಾಣಿಕೆ ೬) ಹಿಮ್ಮುಖ ಮತ್ತು ಮುಮ್ಮುಖ ಕೊಂಡಿಗಳ ವ್ಯೂಹವನ್ನು ಬಲಪಡಿಸುವುದು ೭) ಬ್ಯಾಂಕು ಮತ್ತು ಸಹಕಾರಿ ಸಂಸ್ಥೆಗಳ ಪಾತ್ರವನ್ನು ಉತ್ತಮಗೊಳಿಸುವುದು ೮) ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಾಗಿ ಭಾಗವಹಿಸುವುದು – ಇವೇ ಮುಂತಾದವುಗಳನ್ನು ಆಧರಿಸಿತ್ತು. ಈ ರೀತಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮವು ಬಡತನ ನಿರ್ಮೂಲನೆ, ಉದ್ಯೋಗ ಉತ್ಪತ್ತಿ ಮತ್ತು ಉತ್ತಮ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಸಮಗ್ರತೆಯ ವ್ಯಾಪಕತೆ ಇರುವುದರಿಂದ ಬಡತನದ ವಿರುದ್ಧ ಬಹುಮುಖಿ ಕವಲುಗೋಲಾಗಿದೆ. ೧೯೯೪-೯೫ರಲ್ಲಿ ರಾಜ್ಯದಲ್ಲಿ ಡಿಸೆಂಬರ್ ೧೯೯೪ರ ಅಂತ್ಯಕ್ಕೆ ೧,೧೨, ೦೦೦ ಫಲಾನುಭವಿಗಳಿಗೆ ನೆರವು ನೀಡುವ ಗುರಿಗೆ ಪ್ರತಿಯಾಗಿ ೯೦,೦೦೦ ಫಲಾನುಭವಿಗಳಿಗೆ ನೆರವು ನೀಡಲಾಗಿತ್ತು.

ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಮೌಲ್ಯಮಾಪನವು ಹಲವಾರು ಲೋಪ ದೋಷಗಳನ್ನು ಗುರುತಿಸಿದೆ. ಅವುಗಳೆಂದರೆ ೧) ಶೇ. ೫೪ರಷ್ಟು ಫಲಾನುಭವಿಗಳು ರೂ. ೩೫೦೦.೦೦ ಆದಾಯವನ್ನು ದಾಟಿದ್ದರು ಸಹ ಕೇವಲ ಶೇ. ೧೨ರಷ್ಟು ಫಲಾನುಭವಿಗಳು ಬಡತನ ರೇಖೆಯಾದ ರೂ. ೬, ೪೦೦.೦೦ ವರಮಾನದ ಮಿತಿಯನ್ನು ದಾಟ್ಟಿದ್ದರು, ೨) ಶೇ. ೯ ಪ್ರಕರಣಗಳು ಆಯ್ಕೆಗೆ ಅರ್ಹವಲ್ಲವಾಗಿತ್ತು ೩) ಶೇ. ೬೨ ಪ್ರಕರಣಗಳಲ್ಲಿ ಸಾಲ ಮರುಪಾವತಿ ಕಾಲವು ೩ ವರ್ಷಕ್ಕಿಂತ ಹೆಚ್ಚಿನದಾಗಿತ್ತು ೪) ಶೇ. ೪೨ ಪ್ರಕರಣಗಳಲ್ಲಿ ಪಶ್ಚಾದ್ಯೋಗ ಕ್ಷೇಮದ ಅಭಾವವಿತ್ತು. ಆಯಾ ಪ್ರದೇಶದ ಮೂಲಭೂತ ಸೌಲಭ್ಯಗಳು, ಪೂರೈಕೆ, ಬೇಡಿಕೆ ಮತ್ತು ಸಾಂಪ್ರದಾಯಿಕ ಕೌಶಲ್ಯಗಳೊಂದಿಗೆ ನಿರ್ಮಿತವಾದ ಆಸ್ತಿಗಳ ಹೊಂದಾಣಿಕೆಯಾಗಬೇಕು. ಹಾಗೂ ಸಾಂಪ್ರದಾಯಿಕ ಕೌಶಲ್ಯಗಳನ್ನು ಗುರುತಿಸಿ ಸಾಂಸ್ಥಿಕ ಸಾಲಗಳ ಭರವಸೆಗಳನ್ನು ನೀಡಬೇಕೆಂದು ಈ ನಿಟ್ಟಿನ ಅನುಭವವು ತೋರಿಸುತ್ತದೆ.

ಆ) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ

ಪ್ರತಿ ವರ್ಷವೂ ಹೆಚ್ಚುವರಿ ಉದ್ಯೋಗ ಉತ್ಪತ್ತಿಯನ್ನು ನಿಗದಿಗೊಳಿಸಿ ಶೇ. ೫೦ ಕೇಂದ್ರ ಸರ್ಕಾರದ ಸಹಾಯದೊಂದಿಗೆ ೧೯೮೦ರಲ್ಲಿ ಈ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮಕ್ಕಾಗಿ ಹಣ ಹಂಚಿಕೆಯ ಪ್ರಮಾಣವು ಹೆಚ್ಚಾಗಿದ್ದರೂ ಅದಕ್ಕೆ ಸಮಪ್ರಮಾಣದಲ್ಲಿ ಉದ್ಯೋಗ ಉತ್ಪತ್ತಿಯಲ್ಲಿ ಹೆಚ್ಚಳವು ಕಂಡು ಬಂದಿಲ್ಲ. ಅಲ್ಲದೆ, ಇನ್ನಿತರ ಕೆಲವು ನ್ಯೂನತೆಗಳೆಂದರೆ ೧) ಅಲ್ಪಾವಧಿಗೆ ಮಾತ್ರ ಉದ್ಯೋಗ ಒದಗಿಸುವಿಕೆ, ೨) ಮಾರುಕಟ್ಟೆ ಕೂಲಿಗಿಂತ ಕಡಿಮೆ ಮಜೂರಿ ದರಗಳು, ೩) ಕ್ರಮ ಬದ್ಧವಲ್ಲದ ಫಲಾನುಭವಿಗಳ ಆಯ್ಕೆ, ೪) ಸ್ಥಳೀಯ ಜನರ ಅವಶ್ಯಕತೆಗಳನ್ನು ಕಡೆಗಣಿಸುವುದರಿಂದ ದೋಷಪೂರಿತ ಕಾರ್ಯಗಳ ಆಯ್ಕೆ, ೫) ರಕ್ಷಣೆಗಾಗಿ ಹಣಕಾಸು ನೆರವು ಇಲ್ಲದಿರುವುದರಿಂದ ನಿರ್ಮಿಸಿದ ಆಸ್ತಿಗಳ ಹಾಳಾಗುವಿಕೆ, ೬) ಸಸಿಗಳ ಆಯ್ಕೆಯಲ್ಲಿ ಸಮುದಾಯದ ಒಳಗೊಳ್ಳುವಿಕೆ ಇಲ್ಲದಿರುವುದರಿಂದ ಸಾಮಾಜಿಕ ಅರಣ್ಯ ಕಾರ್ಯಕ್ರಮದಲ್ಲಿ ಸಸಿಗಳು ಬದುಕಿ ಉಳಿಯುವ ಪ್ರಮಾಣವು ಅತ್ಯಂತ ಕಡಿಮೆ, ೭) ಈ ಕಾರ್ಯಕ್ರಮವನ್ನು ಬರಿಯ ಇಲಾಖಾ ಕಾರ್ಯಕ್ರಮವೆಂದು ಪರಿಗಣಿಸಿರುವುದು ಮತ್ತು ೮) ಸ್ಥಳೀಯ ಸಂಪನ್ಮೂಲಗಳ ಬಳಕೆ ಮಾಡದಿರುವುದು.

ಇ) ಗ್ರಾಮೀಣ ಭೂರಹಿತರ ಉದ್ಯೋಗ ಭರವಸೆ ಕಾರ್ಯಕ್ರಮ

ಪ್ರತಿ ಭೂ ರಹಿತ ಕುಟುಂಬದ ಕನಿಷ್ಠ ಒಬ್ಬನಿಗಾದರೂ ಒಂದು ವರ್ಷದಲ್ಲಿ ೧೦೦ ದಿನಗಳವರೆಗೆ ಉದ್ಯೋಗ ಒದಗಿಸುವ ಭರವಸೆ ಮತ್ತು ಬಾಳಿಕೆ ಬರುವ ಆಸ್ತಿಗಳನ್ನು ನಿರ್ಮಿಸುವ ಉದ್ದೇಶಗಳ ಮೂಲಕ ಗ್ರಾಮೀಣ ಭೂ ರಹಿತ ಉದ್ಯೋಗಾವಕಾಶಗಳನ್ನು ಉತ್ತಮಗೊಳಿಸಲು ಹಾಗೂ ಹೆಚ್ಚಿಸಲು ಈ ಕಾರ್ಯಕ್ರಮವನ್ನು ೧೯೮೩-೮೪ರಲ್ಲಿ ಪ್ರಾರಂಭಿಸಲಾಯಿತು. ಆದರೆ, ಸಂಪನ್ಮೂಲಗಳ ಕೊರತೆಯಿಂದಾಗಿ ಕಾರ್ಯಕ್ರಮದ ‘ಭರವಸೆ’ ಅಂಶವನ್ನು ಕಾರ್ಯಗತಗೊಳಿಸಲಾಗಲಿಲ್ಲ ಈ ಕಾರ್ಯಕ್ರಮದ ಕೆಲವು ನ್ಯೂನತೆಗಳೆಂದರೆ ೧) ಪ್ರದೇಶವಾರು ಸನ್ನಾಹಗಳನ್ನು ಅಳವಡಿಸದೇ ಇರುವುದು, ೨) ಕೆಲಸಗಾರರ ಹಾಜರಿ ಪಟ್ಟಿಯನ್ನು ತಿದ್ದುವುದು, ೩) ಭೂರಹಿತ ಕಾರ್ಮಿಕರ ಆಯ್ಕೆಯನ್ನು ಕ್ರಮಬದ್ಧವಾಗಿ ಮಾಡದೇ ಇರುವುದು ಮತ್ತು ೪) ದಾಖಲೆಯಲ್ಲಿನ ಕೂಲಿಗಿಂತ ವಾಸ್ತವವಾಗಿ ಕೊಟ್ಟ ಕೂಲಿಯು ಬೇರೆಯೇ ಆಗಿರುವುದು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ ಮತ್ತು ಗ್ರಾಮೀಣ ಭೂರಹಿತರ ಉದ್ಯೋಗ ಭರವಸೆ ಕಾರ್ಯಕ್ರಮಗಳ ಉದ್ದೇಶಗಳು ಹಾಗೂ ಜಾರಿಗೊಳಿಸುವ ವಿಧಾನ ಒಂದೇ ಬಗೆಯದ್ದಾದರಿಂದ ಈ ಎರಡೂ ಕಾರ್ಯಕ್ರಮಗಳನ್ನು ಒಗ್ಗೂಡಿಸಲು ನಿರ್ಧರಿಸಲಾಯಿತು. ಹಾಗೂ, ಇದನ್ನು ‘ಜವಾಹರ್ ರೋಜ್‌ಗಾರ್ ಯೋಜನೆ’ ಎಂಬ ಹೆಸರಿನಿಂದ ೧೯೮೯ರಲ್ಲಿ ಜಾರಿಗೊಳಿಸಲಾಯಿತು.

ಈ) ಜವಾಹರ್ ರೋಜ್‌ಗಾರ್ ಯೋಜನೆ

ಈ ಯೋಜನೆಯು ಪ್ರತಿ ಗ್ರಾಮ ಪಂಚಾಯತಿಯನ್ನು ತಲುಪುವ ಗುರಿ ಇಟ್ಟುಕೊಂಡಿದೆ. ಇದನ್ನು ಗ್ರಾಮಪಂಚಾಯಿತಿಗಳು ಕಾರ್ಯರೂಪಕ್ಕೆ ತರುತ್ತದೆ. ಇದಕ್ಕೆ ಶೇ. ೮೦ ಕೇಂದ್ರ ಸರ್ಕಾರದ ಹಣಕಾಸಿನ ನೆರವಿದ್ದರೆ, ಇನ್ನುಳಿದ ಶೇ. ೨೦ನ್ನು ರಾಜ್ಯಗಳು ಭರಿಸಬೇಕಾಗುತ್ತದೆ. ಈ ಕಾರ್ಯಕ್ರಮಕ್ಕೆ ಹಣದ ಹಂಚಿಕೆಯು, ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯ ಶೇಕಡ ಪ್ರಮಾಣ, ತದನಂತರದ ಜಿಲ್ಲೆಗಳಿಗೆ ಹಣದ ಹಂಚಿಕೆಯನ್ನು ಹಿಂದುಳಿದುರುವಿಕೆಯ ಲಕ್ಷಣ ಅಂದರೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆ, ಕೃಷಿ ಉತ್ಪಾದನೆ ಇತ್ಯಾದಿಗಳ ಆಧಾರದ ಮೇಲೆ ಮಾಡಲಾಗುತ್ತಿದೆ. ಒಟ್ಟು ಉದ್ಯೋಗ ಉತ್ಪತ್ತಿಯಲ್ಲಿ ಮಹಿಳೆಯರ ಪಾಲು ಶೇ. ೩೦ ಆಗಿದ್ದು, ಅಲೆಮಾರಿ ಮತ್ತು ಬುಡಕಟ್ಟು ಜನರ ಯೋಜನೆಗಳೊಂದಿಗೆ ಈ  ಕಾರ್ಯಕ್ರಮವನ್ನು ಸಂಯುಕ್ತಗೊಳಿಸುವ ಅವಕಾಶವೂ ಇದೆ. ಈ ಕಾರ್ಯಕ್ರಮವು ಈ ಮುಂದಿನ ಕೆಲವು ಲೋಪ ದೋಷಗಳಿಂದ ಕೂಡಿದೆ. ೧) ಈ ಕಾರ್ಯಕ್ರಮದ ಅನುಷ್ಟಾನದ ಪ್ರಭಾವ ಇನ್ನೂ ತೋರಬೇಕಾಗಿದೆ ಮತ್ತು ದುರುಪಯೋಗ ತಪ್ಪಬೇಕಿದೆ, ೨) ಈ ಕಾರ್ಯಕ್ರಮದ ನೀಲಿ ನಕ್ಷೆಯನ್ನು ತಾಂತ್ರಿಕ ಪರಿಕರಗಳ ಅಭಾವದಲ್ಲಿ ಅಭಿವೃದ್ಧಿಪಡಿಸುವುದು ತ್ರಾಸದಾಯಕ, ೩) ಇದೊಂದು ರಾಷ್ಟ್ರೀಯ ಗ್ರಾಮೀಣ ಯೋಜನೆಯ ನಿಸ್ಸಾರ ರೂಪವಾಗಿದೆ, ೪) ರಾಜ್ಯದ ಮೇಲೆ ಗಣನೀಯ ಪ್ರಮಾಣದ ಆರ್ಥಿಕ ಹೊರೆ ಬೀಳುತ್ತದೆ, ೫) ಈ ಕಾರ್ಯಕ್ರಮದ ಜಾರಿಯ ಲಕ್ಷಣದಿಂದಾಗಿ ಜನಸಂಖ್ಯೆಯ ಅಧಿಕವಿರುವ ರಾಜ್ಯಗಳ ಪರವಾಗಿ ಪಕ್ಷಪಾತವಿರುತ್ತದೆ.

ಉ) ನೆಹರು ರೋಜ್‌ಗಾರ್ ಯೋಜನೆ

ಇದು ಜವಾಹಾರ್ ರೋಜ್‌ಗಾರ್ ಯೋಜನೆಯ ನಗರ ಪ್ರದೇಶಗಳ ಪ್ರತಿ ರೂಪವಾಗಿದ್ದು, ಅಕ್ಟೋಬರ್ ೧೯೮೯ರಿಂದ ಜಾರಿಯಲ್ಲಿದೆ. ಪ್ರತಿ ವರ್ಷ ಉದ್ಯೋಗಗಳನ್ನು ಸೃಜಿಸುವುದು ಇದರ ಉದ್ದೇಶ. ಸ್ವಯಂ ಉದ್ಯೋಗಾವಕಾಶಗಳು ಹಾಗೂ ದಿನಗೂಲಿ ಉದ್ಯೋಗ ಉತ್ಪತ್ತಿ ಈ ಯೋಜನೆಯಿಂದ ಉಂಟಾಗುತ್ತಿದೆ. ಈ ಕಾರ್ಯಕ್ರಮದ ಗುರಿ, ಗುಂಪು ಬಡತನ ರೇಖೆಗಿಂತ ಕೆಳಗೆ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಾಗಿದ್ದಾರೆ.

ಊ) ಕುಶಲ ಕರ್ಮಿಗಳಿಗೆ ನೆರವು

ಕುಶಲ ಕರ್ಮಿಗಳು ತಮ್ಮ ಕಸುಬನ್ನು ಮುಂದುವರಿಸಿಕೊಂಡು ಹೋಗಲು ನೆರವನ್ನು, ಮುಖ್ಯವಾಗಿ ಸಬ್ಸಿಡಿಗಳು, ಅಲ್ಪ ಪ್ರಮಾಣದ ಧನ ಸಹಾಯ ಕಚ್ಚಾ ವಸ್ತುಗಳ ಪೂರೈಕೆ, ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ರೂಪದಲ್ಲಿ ಸರ್ಕಾರದ ಅಧೀನದ ವಿವಿಧ ಮಂಡಳಿಗಳು ಮತ್ತು ನಿಗಮಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಋ) ಸ್ವಯಂ ಉದ್ಯೋಗಕ್ಕಾಗಿ ತರಬೇತಿ

ಸರ್ಕಾರದ ವಿವಿಧ ಸಂಸ್ಥೆಗಳು ವ್ಯಕ್ತಿಗಳು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ಸಹಾಯ ಮಾಡಲು ತರಬೇತಿಯನ್ನು ನೀಡುತ್ತವೆ. ಸೀಡಾಕ್,ಸಣ್ಣ ಕೈಗಾರಿಕಾ ಸೇವಾ ಸಂಸ್ಥೆ, ಮುಂತಾದವು ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮ (ಇ.ಡಿ.ಪಿ) ಗಳನ್ನು ನಡೆಸುತ್ತಿದೆ. ರಾಜ್ಯ ಪುರಸ್ಕೃತ ಯೋಜನೆಯಾದ ‘ವಿಶ್ವ’ ಕಾರ್ಯಕ್ರಮದಡಿಯಲ್ಲಿಯೂ ಸಹ ತರಬೇತಿಯನ್ನು ನೀಡುತ್ತಿದೆ. ಅಲ್ಲದೆ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ತರಬೇತಿ  (ಟ್ರೈಸಮ್) ಕೂಡ ರಾಜ್ಯದಲ್ಲಿ ಜಾರಿಯಲ್ಲಿದ್ದು ಸುಮಾರು ೧೪ ಸಾವಿರ ಯುವಕರು ಪ್ರತಿ ವರ್ಷ ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.

೨. ಉದ್ಯೋಗ ಉತ್ಪತ್ತಿಯ ನೀತಿ

ರಾಜ್ಯದ ೮  ನೇ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ಈ ನೀತಿಯನ್ನು ವಿವರವಾಗಿ ಚರ್ಚಿಸಲಾಗಿದೆ. ಈ ಚರ್ಚೆಯಿಂದ ಹೊರಬೀಳುವ ಕೆಲ ಅಂಶಗಳನ್ನು ಕೆಳಗೆ ನೀಡಲಾಗಿದೆ.

ಅ) ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳು

ಹಲವಾರು ಸಂಶೋಧನಾ ಅಧ್ಯಯನಗಳು ಕರ್ನಾಟಕದ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವು ಅತ್ಯಂತ ಸಮಗ್ರವಾದ ಮತ್ತು ಸಮರ್ಪಕವಾದ ಕಾರ್ಯಕ್ರಮವಾಗಿದ್ದು, ಭಾರತದ ಉಳಿದ ಮಳೆ ಆಧಾರಿತ ಪ್ರದೇಶಗಳಲ್ಲಿ ಪುನರಾವರ್ತನೆಗೊಳಿಸಲು ಯೋಗ್ಯವಾಗಿದೆ ಎಂದು ತೋರಿಸುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಉದ್ಯೋಗವು ಪ್ರತಿ ಹೆಕ್ಟೇರಿಗೆ ಸರಾಸರಿ ೧೩೭ ಮಾನವ ದಿನಗಳಾಗಿದ್ದು, ಒಂದು ಮಾನವ ದಿನವನ್ನು ಉತ್ಪತ್ತಿ ಮಾಡಲು ತಗಲುವ ಸರಾಸರಿ ಖರ್ಚು ರೂ. ೧೧.೪೯ ಆಗಿದೆ. ಈ ಸರಾಸರಿ ಖರ್ಚು ೧೯೮೭-೮೮ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಒಂದು ಮಾನವ ದಿನದ ಉದ್ಯೋಗ ಉತ್ಪತ್ತಿ ಮಾಡಲು ತಗುಲಿದೆ ಸರಾಸರಿ ಖರ್ಚಾದ ರೂ. ೨೩ಕ್ಕಿಂತ ಕೇವಲ ಅರ್ಧದಷ್ಟಾಗಿತ್ತು.

ಆ) ಸಣ್ಣ ನೀರಾವರಿ

ಕರ್ನಾಟಕದಲ್ಲಿ ಹೊಸ ಸಣ್ಣ ನೀರಾವರಿ ಕೆರೆಗಳನ್ನು ನಿರ್ಮಿಸುವ ಅವಕಾಶಗಳು ಗಮನಾರ್ಹವಾಗಿ ಕಡಿಮೆಯಾಗಿರುವುದರಿಂದಲೂ ಸದ್ಯ ಇರುವ ಸಣ್ಣ ನೀರಾವರಿ ಕೆರೆಗಳಲ್ಲಿ ಹೊಳೆತ್ತುವ ಅವಶ್ಯಕತೆ ಬಹಳವಾಗಿ ಇರುವುದರಿಂದಲೂ ಉದ್ಯೋಗಾವಕಾಶಗಳ ಸಾಧ್ಯತೆಯನ್ನು ಹೆಚ್ಚು ಮಾಡುವ ಕೆರೆಗಳ ಹೂಳೆತ್ತುವ ಒಂದು ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳವುದರಿಂದ ಕಾರ್ಮಿಕ ಕೇಂದ್ರಿಕೃತ ಕಾರ್ಯಗಳಾದ ಹಣ್ಣು ಮತ್ತು ತರಕಾರಿ ಬೆಳೆಯುವುದನ್ನು ಪ್ರೋತ್ಸಾಹಿಸಬಹುದು.

ಇ) ಪಶುಸಂಗೋಪನೆ

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರ ಸಂಖ್ಯೆಗಳನ್ನು ಹೆಚ್ಚಿಸುವುದು, ಗ್ರಾಮೀಣ ಮಹಿಳೆಯರಿಗೆ ನೀಡುವ ಹೈನುಗಾರಿಕೆ ಉದ್ಯಮ ಕೈಗೊಳ್ಳಲು ಪ್ರೋತ್ಸಾಹ ಹಾಗೂ ಮಹಿಳಾ ಸಹಕಾರಿ ಸಂಘಗಳನ್ನು ಸ್ಥಾಪಿಸಲು ನೆರವು ನೀಡುವುದು, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆಯಂತಹ ಕಾರ್ಯಗಳನ್ನು ಜನಪ್ರಿಯಗೊಳಿಸುವುದು ಈ ಕ್ಷೇತ್ರದಲ್ಲಿನ ಕೆಲವು ಮುಖ್ಯ ಕಾರ್ಯಕ್ರಮಗಳಾಗಬಹುದು.

ಈ) ಕೈಗಾರಿಕೆಗಳು

ಅಧಿಕ ಉದ್ಯೋಗಾವಕಾಶಗಳನ್ನು ಸೃಜಿಸುವ ಖಾಸಗಿ ಬಂಡವಾಳ ಹೂಡಿಕೆಗೆ ಹಿತಕರ ವಾತಾವರಣವನ್ನು ನಿರ್ಮಿಸುವ ಹಾಗೂ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೂಕ್ತ ಸಹಾಯವನ್ನು ಒದಗಿಸುವ ಕೈಗಾರಿಕಾ ನೀತಿಯನ್ನು ರೂಪಿಸಬೇಕು. ಅಲ್ಲದೆ, ವಿಶೇಷ ವೃತ್ತಿಪರ ಯೋಜನೆಗಳಾದ ತಾಂತ್ರಿಕ ಶಿಕ್ಷಣ ಯೋಜನೆ, ಕೈಗಾರಿಕಾ ತರಬೇತಿ ಸಂಸ್ಥೆಗಳ ಕೌಶಲ್ಯ ಅಭಿವೃದ್ಧಿ ಯೋಜನೆಯಂತಹವುಗಳನ್ನು ವಿಶ್ವ ಬ್ಯಾಂಕ್ ಅಥವಾ ಇನ್ನಿತರ ಸಂಸ್ಥೆಗಳ ಸಾಲದ ನೆರವಿನೊಂದಿಗೆ ಕೈಗೆತ್ತಿಕೊಳ್ಳುವುದು ಉದ್ಯೋಗಾವಕಾಶಗಳ ಹೆಚ್ಚುವಿಕೆಗೆ ಕಾರಣವಾಗಬಹುದು.

ಉ) ಸೇವಾಕ್ಷೇತ್ರ

ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳ ಸೌಲಭ್ಯಗಳು, ಔಷಧಿಗಳ ಲಭ್ಯತೆ, ಉಪಕರಣಗಳ ಲಭ್ಯತೆಯ ಸುಧಾರಣೆ, ವೈದ್ಯರ ಲಭ್ಯತೆಗಳನ್ನು ಬಲಪಡಿಸುವುದಲ್ಲದೆ ಆರೋಗ್ಯ ರಕ್ಷಣೆಯ ಸೌಲಭ್ಯಗಳನ್ನು ಉತ್ತಮಗೊಳಿಸಿ, ಉದ್ಯೋಗಾವಕಾಶಗಳ ಹೆಚ್ಚುವಿಕೆಗೆ ಕಾರಣವಾಗುತ್ತದೆ.

ಅಂತೆಯೇ, ಏಕೋಪಧ್ಯಾಯ ಶಾಲೆಗಳನ್ನು ಎರಡು ಉಪಾಧ್ಯಾಯ ಶಾಲೆಗಳಾಗಿ ಬದಲಾಯಿಸುವುದರಿಂದ ಮಕ್ಕಳ ವಿದ್ಯಾಭ್ಯಾಸ ಸೌಲಭ್ಯಗಳು ಹೆಚ್ಚುವುದಲ್ಲದೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ.

ಉದ್ಯೋಗದ ಹಕ್ಕು

ಹಿಂದೆ ತಿಳಿಸಿರುವಂತೆ, ಸಂವಿಧಾನದತ್ತವಾದ ಈ ಹಕ್ಕನ್ನು ಜಾರಿಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸದ್ಯದ ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಆದ್ದರಿಂದ, ಇದನ್ನು ಕಾಲಾನುಕ್ರಮದಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸ್ಥಳೀಯ ಜನರು ಉದ್ಯೋಗಾಧಾರಿತ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸುವ ವಾತಾವರಣವನ್ನು ಸೃಷ್ಟಿಸುವುದರ ಮೂಲಕ ಪೂರೈಸಬೇಕು. ಇದರಿಂದಾಗಿ, ಈಗಿನ ವೆಚ್ಚದ ಆಧಾರದ ಉದ್ಯೋಗ ಕಾರ್ಯಕ್ರಮಗಳು ಪ್ರತಿಫಲ ನೀಡುವಂತಹ ಬಂಡವಾಳಾಧಾರಿತ ಕಾರ್ಯಕ್ರಮಗಳಾಗಿ ರೂಪುಗೊಳ್ಳುತ್ತವೆ. ಯಾವ ಜನರಿಗೆ ಯೋಜನೆಯು ಅತ್ಯಾವಶ್ಯಕವಾಗಿದೆಯೋ, ಅಂತಹವರನ್ನು ತೊಡಗಿಸಿಕೊಂಡು ಮೂಲಮಟ್ಟದ ಯೋಜನಾಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

೫. ರಕ್ಷಣಾ ಕಾರ್ಯಕ್ರಮಗಳ ಮೌಲ್ಯಮಾಪನ

೧. ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ

ಕರ್ನಾಟಕ ಸರ್ಕಾರದ ಸಾಂಸ್ಥಿಕ ಹಣಕಾಸು ಮತ್ತು ಸಾಂಖ್ಯಿಕ ಇಲಾಖೆಯ ಮೌಲ್ಯಮಾಪನ ವಿಭಾಗವು ಪ್ರಕಟಿಸಿರುವ ಈ ಮೌಲ್ಯಮಾಪನ ವರದಿಯು ‘ನಿಜವಾದ ಅರ್ಥದಲ್ಲಿ ಫಲಾನುಭವಿಗಳ ಕುಟುಂಬದ ವರಮಾನವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮವು ಅಂತಹ ಪ್ರಭಾವಶಾಲಿ ಏನಾಗಿಲ್ಲ. ಈ ಸ್ಥಿತಿಗೆ ಯೋಜನೆಯಲ್ಲಿನ ಕೊರತೆಗಳು, ಕಾರ್ಯಕ್ರಮವನ್ನು ಸಂಘಟಿಸಿ ಜಾರಿಗೊಳಿಸುವಲ್ಲಿನ ಲೋಪದೋಷಗಳು ಕಾರಣವಾಗಿದೆ’ ಎಂದು ದಾಖಲಿಸಿದೆ.

೨. ಸಾರ್ವಜನಿಕ ವಿತರಣಾ ಪದ್ಧತಿ

ಇದು ಮತ್ತೊಂದು ಬಡತನದ ವಿರುದ್ಧ ರಕ್ಷಣಾ ಕಾರ್ಯಕ್ರಮವಾಗಿದ್ದು, ಇದರಡಿಯಲ್ಲಿ ಸೀಮಿತ ಪ್ರಮಾಣದಲ್ಲಿ ಧಾನ್ಯಗಳು, ಸೀಮೆ ಎಣ್ಣೆ ಮತ್ತು ಸಕ್ಕರೆಯನ್ನು ರಿಯಾಯಿತಿ ದರಗಳಲ್ಲಿ ಪಡಿತರ ಕಾರ್ಡುದಾರರಿಗೆ ವಿತರಿಸಲಾಗುತ್ತದೆ. ನ್ಯಾಯಬೆಲೆಗಳಲ್ಲಿ ಆಹಾರ ಧಾನ್ಯಗಳ ಲಭ್ಯತೆಯ ಭರವಸೆ ನೀಡುವುದರ ಮೂಲಕ ಸಮಾಜದ ಬಡ ವರ್ಗವನ್ನು ರಕ್ಷಿಸುವ ಉದ್ದೇಶ ಈ ಕಾರ್ಯಕ್ರಮಕ್ಕಿದೆ. ಈ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲ ಉದ್ದೇಶವೇ ವಿಶೇಷವಾಗಿ, ಬಡವರಿಗೆ ಆಹಾರದ ಭದ್ರತೆಯನ್ನು ಒದಗಿಸುವುದಾಗಿದೆ. ಸಣ್ಣ ಮತ್ತು ಬೃಹತ್ ಆರ್ಥಿಕ ನೀತಿಗಳ ಮೂಲಕ ಬಡತನವನ್ನು ನಿರ್ಮೂಲ ಮಾಡುವವರೆಗೆ ಈ ಪದ್ಧತಿಯನ್ನು ಬಡವರ ಪರವಾದ ಆದಾಯದ ವರ್ಗಾವಣೆ ಎಂದು ತಿಳಿಯಬೇಕು. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಇತ್ತೀಚೆಗೆ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಸಮೀಕ್ಷಾ ಮಾಹಿತಿಗಳನ್ನಾಧರಿಸಿ ಈ ಪದ್ಧಿತಿಯು ಬಡವರನ್ನು ಪರಿಣಾಮಕಾರಿಯಾಗಿ ತಲುಪುವುದರ ಬಗ್ಗೆ ಒಂದು ಚಿಕ್ಕ ಟಿಪ್ಪಣಿಯನ್ನು ತಯಾರಿಸಿದೆ. ಈ ಟಿಪ್ಪಣಿಯಂತೆ, ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಶೇ. ೩೮.೧ ಜನರು ಈ ಪದ್ಧತಿಯಿಂದ ಧಾನ್ಯಗಳನ್ನು ಕೊಂಡಿಲ್ಲವೆಂದು, ಶೇ. ೫೩.೯ ಮಂದಿ ಭಾಗಶಃ ಕೊಂಡಿದ್ದಾರೆಂದು ಮತ್ತು ಶೇ. ೮ ಮಂದಿ ಪೂರ್ಣವಾಗಿ ಈ ಪದ್ಧತಿಯಿಂದಲೇ ಕೊಂಡಿದ್ದರು. ಅಂತೆಯೇ, ಈ ಪದ್ಧತಿಯಿಂದ ಧಾನ್ಯಗಳನ್ನು ಭಾಗಶಃ ಕೊಂಡಿರುವವರಿಗೆ ಸರಾಸರಿ ಸಬ್ಸಡಿಯು ಮಾಸಿಕ ತಲಾ ರೂ. ೨.೦೪ ಆಗಿದ್ದರೆ, ಪೂರ್ಣವಾಗಿ ಕೊಂಡಿರುವವರಿಗೆ ರೂ. ೩.೦೦ ಆಗಿತ್ತು. ನಗರ ಪ್ರದೇಶಗಳಲ್ಲಿ ಶೇ. ೩೭.೩ ಜನರು ಈ ಪದ್ಧತಿಯಿಂದ ಧಾನ್ಯಗಳನ್ನು ಕೊಳ್ಳದೇ ಇರುವವರಿದ್ದು ಶೇ. ೫೮.೯ ಜನರು ಭಾಗಶಃ ಕೊಂಡಿದ್ದವರಿದ್ದು, ಪೂರ್ಣವಾಗಿ ಕೊಂಡಿರುವವರ ಪ್ರಮಾಣ ಶೇ. ೩.೮ ಆಗಿತ್ತು ಹಾಗೂ ಸರಾಸರಿ ಸಬ್ಸಿಡಿಯು ರೂ. ೩.೭೮ ಮತ್ತು ೬.೬೨ ಕ್ರಮವಾಗಿ ಭಾಗಶಃ ಕೊಂಡವರು ಮತ್ತು ಪೂರ್ಣವಾಗಿ ಕೊಂಡವರಿಗೆ ದೊರಕಿತ್ತು. ಧಾನ್ಯಗಳ ವಿತರಣೆಯಿಂದ ದೊರೆತ ಸಬ್ಸಿಡಿಯ ವ್ಯಾಪ್ತಿಯ ವಿಶ್ಲೇಷಣೆಯು, ಅತ್ಯಂತ ಬಡಕುಟುಂಬಗಳಾದ ಕೆಳಗಿನ ಶೇ. ೨೦ ಕುಟುಂಬಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಶೇ. ೯ ಬಡವರು ಮಾಸಿಕ ತಲಾ ರೂ. ೨.೨೯ ಸಬ್ಸಿಡಿ ಪಡೆದಿದ್ದರೆ, ಶೇ. ೫೫.೪ ಬಡವರು ರೂ. ೧.೭೯ ಸಬ್ಸಿಡಿ ಪಡೆದಿದ್ದರು, ಈ ಸಂಖ್ಯೆಗಳು ನಗರ ಪ್ರದೇಶಗಳಲ್ಲಿ ಶೇ. ೩.೬ ಬಡವರು ತಲಾ ಮಾಸಿಕ ರೂ. ೩.೩೩ ಸಬ್ಸಿಡಿ ಪಡೆದಿದ್ದರೆ ಶೇ. ೬.೧೨ ಬಡವರು ರೂ. ೨.೫೫ ಸಬ್ಸಿಡಿ ಪಡೆದಿದ್ದರು ಎಂದು ತೋರಿಸುತ್ತದೆ.

ಅಷ್ಟೇ ಅಲ್ಲದೆ, ಕೆಳಗಿನ ಶೇ. ೨೦ ಕುಟುಂಬಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಶೇ. ೨೦.೭೯ರಷ್ಟು ಪ್ರಮಾಣದ ಧಾನ್ಯಗಳನ್ನು ವಿತರಿಸಲಾಗಿತ್ತು. ಈ ಟಿಪ್ಪಣಿಯು ಸಾರ್ವಜನಿಕ ವಿತರಣಾ ಪದ್ಧತಿಯುಬಡವರನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ತಲುಪಿಲ್ಲ ಎಂಬ ಅಂಶವನ್ನು ಹೊರಗೆಡವಿದೆ.

ಬಡವರು ಮತ್ತು ಅವಶ್ಯಕತೆಯುಳ್ಳವರು ಮಾತ್ರ ಕೆಲಸ ಮಾಡಲು ಬರುವುದರಿಂದ ಉದ್ಯೋಗ ಭರವಸೆ ಯೋಜನೆ ಮತ್ತು ಜವಾಹರ್ ರೋಜ್‌ಗಾರ್ ಯೋಜನೆಗಳಲ್ಲಿ ಒಂದು ದೊಡ್ಡ ಅನುಕೂಲವಿದೆ ಎಂದೂ, ಮಹಾರಾಷ್ಟ್ರದ ಅನುಭವದ ಆಧಾರದ ಮೇಲೆ ಇಂತಹ ಯೋಜನೆಗಳ ವೆಚ್ಚ ಪ್ರತಿಫಲ ಅನುಪಾತವು ಬಹಳ ಹೆಚ್ಚಿರುತ್ತದೆ ಎಂದೂ ಈ ಟಿಪ್ಪಣಿಯಲ್ಲಿ ತೋರಿಸಲಾಗಿದೆ. ಹೀಗಾಗಿ ಈ ಯೋಜನೆಗಳ ಮೂಲಕ ನಿರ್ಮಿಸುವ ಆಸ್ತಿಗಳು ಒಂದು ವೇಳೆ ಪೂರ್ಣವಾಗಿ ನಿಷ್ಪ್ರಯೋಜಕವಾದರೂ ಸಹ ಇಂತಹ ಯೋಜನೆಗಳು ಸಾರ್ವಜನಿಕ ವಿತರಣಾ ಪದ್ಧತಿಗಿಂತ ಬಡವರನ್ನು ತಲುಪುವುದರಲ್ಲಿ ಖಂಡಿತವಾಗಿಯೂ ಉತ್ತಮವಾ ಒಂದು ಮಾರ್ಗ ಎಂದು ಭಾವಿಸಿದೆ. ಪ್ರಾಯಶಃ ಬಡವರನ್ನು ತಲುಪುವ ಒಂದು ಪರಿಣಾಮಕಾರಿ ಮಾರ್ಗವೆಂದರೆ ಉದ್ಯೋಗ ಯೋಜನೆಗಳಲ್ಲಿ ಪಾ‌ಲ್ಗೊಳ್ಳುವವರಿಗೆ ಮಾತ್ರ  ಮಜೂರಿಯ ಜೊತೆಗೆ ಆಯ್ದ ಅಥವಾ ಅಂಗೀಕರಿಸಿದ ಅಂಗಡಿಗಳಲ್ಲಿ ಧಾನ್ಯಗಳಿಗೆ ಪರಿವರ್ತಿಸಿ ಕೊಳ್ಳಬಹುದಾದ ಆಹಾರದ ಚೀಟಿಗಳನ್ನು ನೀಡುವುದರ ಮೂಲಕ ಸಾರ್ವಜನಿಕ ವಿತರಣಾ ಪದ್ಧತಿ ಮತ್ತು ಉದ್ಯೋಗ ಭರವಸೆ ಯೋಜನೆಗಳನ್ನು ಏಕೀಕರಿಸುವುದೇ ಆಗಿದೆ.

ಆದ್ದರಿಂದ, ಸಾರ್ವಜನಿಕ ವಿತರಣಾ ಪದ್ಧತಿಯ ಮೇಲ್ಕಾಣಿಸಿದ ಮೌಲ್ಯಮಾಪನದ ಬೆಳಕಿನಲ್ಲಿ ಈಗ ಇರುವ ಈ ಪದ್ಧತಿಯನ್ನು ಮಾರ್ಪಾಡು ಮಾಡಿ ಬಡಜನತೆಯನ್ನು ಪರಿಣಾಮಕಾರಿಯಾಗಿ ತಲುಪುವಂತೆ ಮಾಡುವ ಕಾಲ ಸನ್ನಿಹಿತವಾಗಿದೆ. ಬಹುಶಃ ಈ ದಿಕ್ಕಿನಲ್ಲಿ ಆಹಾರ ಚೀಟಿಗಳನ್ನು ನೀಡುವ ವಿಚಾರ ಉತ್ತಮವಾದುದು ಎನ್ನಬಹುದು.

೬. ಮುಖ್ಯ ಫಲಿತಾಂಶಗಳು

ಈವರೆಗಿನ ಅಧ್ಯಯನದಿಂದ ಹೊರಬೀಳುವ ಕೆಲವು ಮುಖ್ಯ ತೀರ್ಮಾನಗಳನ್ನು ಈ ಮುಂದೆ ನೀಡಲಾಗಿದೆ.

೧. ಕರ್ನಾಟಕದ ನಿರುದ್ಯೋಗದ ಮಟ್ಟವು ಕಾರ್ಮಿಕ ಶಕ್ತಿಯ ಶೇ. ೧೨ರಷ್ಟಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. ೧೫ ರಿಂದ ೨೦ರ ಅಂಚಿನಲ್ಲಿದೆ.

೨. ಕರ್ನಾಟಕದಲ್ಲಿ ಉದ್ಯೋಗವು ಕೇವಲ ಶೇ. ೧ರ ವಾರ್ಷಿಕ ದರದಲ್ಲಿ ವೃದ್ಧಿಯಾಗುತ್ತಿದೆ. ಆದರೆ, ಕಾರ್ಮಿಕ ಶಕ್ತಿಯ ಬೆಳವಣಿಗೆಯ ದರವು ಇದಕ್ಕಿಂತ ವೇಗವಾಗಿದ್ದು ವಾರ್ಷಿಕವಾಗಿ ಶೇ. ೧.೫ರಂತೆ ಬೆಳೆಯುತ್ತಿದ್ದು, ನಿರುದ್ಯೋಗ ವ್ಯಕ್ತಿಗಳ ದೊಡ್ಡ ಬ್ಯಾಕ್‌ಲಾಗ್ ಉಳಿಯುವಂತೆ ಆಗಿದೆ.

೩. ಕರ್ನಾಟಕದಲ್ಲಿ, ವಿಶೇಷವಾಗಿ, ನಗರ ‌ಪ್ರದೇಶಗಳ ಮಹಿಳೆಯರ ಅತಿ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕ ಶಕ್ತಿಯ ಹೊರಗೆ ಉಳಿಯುವ ವಿಚಿತ್ರವಾದ ಸನ್ನಿವೇಶವಿದೆ.

೪. ಒಟ್ಟು ಉದ್ಯೋಗಿಗಳಲ್ಲಿ ಅರೆ ಉದ್ಯೋಗಿಗಳ ಪ್ರಮಾಣ ಕಡಿಮೆಯಾಗುತ್ತಿದ್ದರೂ ಅದು ಶೇ. ೮ರ ಅಂಚಿನಲ್ಲಿದೆ.

೫. ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆ ಪ್ರಮಾಣವು ಭಾರತದ ಮಟ್ಟಕ್ಕಿಂತ ಹೆಚ್ಚಾಗಿದ್ದು, ಈ ಪ್ರಮಾಣವು ೧೯೮೭-೮೮ರಲ್ಲಿ ಕರ್ನಾಟಕದಲ್ಲಿ ಶೇ. ೩೨.೧ ಇದ್ದುದಕ್ಕೆ ಪ್ರತಿಯಾಗಿ, ಭಾರತದಲ್ಲಿ ಶೇ. ೨೯.೯ ಆಗಿತ್ತು.

೬. ಎಲ್ಲಾ ರಕ್ಷಣಾ ಕಾರ್ಯಕ್ರಮಗಳೂ ಅಂದರೆ, ಸಮಗ್ರ ಗ್ರಾಮೀಣ  ಅಭಿವೃದ್ಧಿ ಕಾರ್ಯಕ್ರಮ, ಜವಾಹರ್ ರೋಜ್‌ಗಾರ್ ಯೋಜನೆ, ಸಾರ್ವಜನಿಕ ವಿತರಣಾ ಪದ್ಧತಿ ಮುಂತಾದವು ಒಂದಲ್ಲ ಒಂದು ಕೊರತೆಯಿಂದ ಕೂಡಿದೆ.

೭. ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಮೌಲ್ಯಮಾಪನವು ಅನರ್ಹ ವ್ಯಕ್ತಿಗಳು, ನಿರೀಕ್ಷಿತ ಮಟ್ಟದ ಪರಿಣಾಮವಿಲ್ಲದಿರುವುದು, ಮರು ಪಾವತಿಯಲ್ಲಿ ವಿಳಂಬ ಮುಂತಾದ ದೋಷಗಳಿಂದ ಕೂಡಿವೆ ಎಂದು ತೋರಿಸುತ್ತದೆ.

೮. ಸಾರ್ವಜನಿಕ ವಿತರಣಾ ಪದ್ಧತಿಯ ಮೌಲ್ಯಮಾಪನವು ವೆಚ್ಚ-ಪ್ರತಿಫಲ ಅನುಪಾತವು ನಗಣ್ಯವಾಗಿರುತ್ತದೆ. ಅತಿ ಹೆಚ್ಚಿನ ಆಡಳಿತಾತ್ಮಕ ವೆಚ್ಚ ಮತ್ತು ಸೋರುವಿಕೆಗಳಿಂದ ಕೂಡಿದೆ ಹಾಗೂ ಅತ್ಯಂತ ಕಡುಬಡವರನ್ನು ಪರಿಣಾಮಕಾರಿಯಾಗಿ ತಲುಪಿಲ್ಲ ಎಂದು ತೋರಿಸುತ್ತದೆ.

೯. ಬಡತನ ಮತ್ತು ನಿರುದ್ಯೋಗಿಗಳು ಸಯಾಮೀ ಅವಳಿಗಳಂತಿರುವುದರಿಂದ ಬಡತನವನ್ನು ನಿರ್ಮೂಲನ ಮಾಡಲು ಉದ್ಯೋಗ ಪ್ರಧಾನ ಯೋಜನೆ ಅಥವಾ ಕಾರ್ಯಕ್ರಮಗಳನ್ನು ದಕ್ಷತೆ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

೧೦. ಸ್ವಭಾವತಹ ಸಣ್ಣ ಮತ್ತು ಗೃಹಕೈಗಾರಿಕೆಗಳು ಉದ್ಯೋಗ ಪ್ರಧಾನವಾಗಿರುವುದರಿಂದ ಸರ್ಕಾರವು ಸೂಕ್ತ ಸಹಾಯಗಳ ಮೂಲಕ ಇವುಗಳನ್ನು ಪ್ರೋತ್ಸಾಹಿಸಬೇಕು. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ನಿರುದ್ಯೋಗವನ್ನು ಅಂದರೆ, ಕೃಷಿ ಕ್ಷೇತ್ರದ ಕಾಲಿಕ, ಅಪ್ರತ್ಯಕ್ಷ ಮತ್ತು ಅರೆ ಉದ್ಯೋಗಿವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

೧೧. ರಾಜ್ಯದಾಯದ ಶೇ. ೧ರ ಬೆಳವಣಿಗೆಯಿಂದ ಶೇ. ೦.೨೨ರ ಉದ್ಯೋಗದ ಬೆಳವಣಿಗೆ ಆಗುತ್ತದೆಯಾದ್ದರಿಂದ ರಾಜ್ಯಾದಾಯದ ಬೆಳವಣಿಗೆಯಲ್ಲಿ ಹೆಚ್ಚಿನ ಅಂದರೆ, ವಾರ್ಷಿಕ ಶೇ. ೭.೫ರ ಬೆಳವಣಿಗೆಯನ್ನು ಸಾಧಿಸಬೇಕು.

೧೨. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಜನರ ವಲಸೆಯನ್ನು ತಡೆಯಲು ಗ್ರಾಮೀಣ ಕೈಗಾರಿಕೆಗಳಲ್ಲಿ ಈಗಾಗಲೇ ಉದ್ಯೋಗದಲ್ಲಿರುವವರನ್ನು ಉಳಿಸಿಕೊಳ್ಳಲು ಪ್ರೋತ್ಸಾಹಕರ ಹಾಗೂ ಬೆಂಬಲದಾಯಕ ಕ್ರಮಗಳನ್ನು ತೀವ್ರಗೊಳಿಸುವುದರ ಮೂಲಕ ಪ್ರಯತ್ನವನ್ನು ಮಾಡಬೇಕು.