ಪ್ರಸ್ತಾವನೆ

ಆದಿಕಾಲದಿಂದಲೂ ಮಾನವ ತನ್ನ ಅಭಿವೃದ್ಧಿಗಾಗಿ ವೃತ್ತಿಯನ್ನು ಅವಲಂಬಿಸುತ್ತಾ ಬಂದಿರುವನು. ಅದನ್ನು ನುರಿತ ರೀತಿಯಲ್ಲಿ ಮಾಡಲು ಶಿ‌ಕ್ಷಣ ಮತ್ತು ತರಬೇತಿ ಪಡೆಯುತ್ತಾನೆ. ಇದರಿಂದಾಗಿ ಮಾನವನು ತನ್ನ ಸಾಮರ್ಥ್ಯಗಳನ್ನರಿತು ಅವುಗಳನ್ನು ತನ್ನ ಅಭ್ಯುದಯ ಅಥವಾ ವಿಕಾಸಕ್ಕಾಗಿ ಉಪಯೋಗಿಸುವುದಲ್ಲದೇ ತಾನು ಉದ್ಯೋಗ ಮಾಡುತ್ತಿರುವ ಸಂಸ್ಥೆಯ ಬೆಳವಣಿಗೆಗೆ ಅನುಕೂಲ ಮಾಡುತ್ತಾನೆ. ಪ್ರತಿ ಮಾನವನು ಈ ರೀತಿ ತನ್ನ ಕೆಲಸ/ವೃತ್ತಿ/ಉದ್ದಿಮೆಯನ್ನು ನುರಿತಂತೆ ಮಾಡಲು ಬೇಕಾದ ಸಾಮರ್ಥ್ಯಗಳ ಬೆಳವಣಿಗೆಗೆ “ಮಾನವ ಸಂಪನ್ಮೂಲಾಭಿವೃದ್ಧಿ” ಎನ್ನುತ್ತಾರೆ. ತಾನು ಮಾಡಲು ವೃತ್ತಿ/ಉದ್ದಿಮೆಯನ್ನು ಪರಿಣಿತ ರೀತಿಯಲ್ಲಿ ಮಾಡಲು ಬೇಕಾದ ಶಿಕ್ಷಣ ಮತ್ತು ತರಬೇತಿ ಪಡೆಯುವುದಕ್ಕೆ “ವಿಕಾಸ” ಎನ್ನುತ್ತಾರೆ.

ಮಾನವನಲ್ಲಿನ ಅಪರಿಮಿತ ಅಂತಸ್ಥ ಸಾಮರ್ಥ್ಯಗಳನ್ನು ಸೂಕ್ತ ವಾತಾವರಣ ನಿರ್ಮಿಸುವುದರಿಂದಾಗಿ ಹೊರ ಬರುವಂತೆ ಮಾಡಿ ಇವುಗಳನ್ನು ಪೋಷಿಸಿ, ಉಪಯುಕ್ತವಾಗುವಂತೆ ಮಾಡುವುದೇ ಮಾನವ ಸಂಪನ್ಮೂಲಾಭಿವೃದ್ಧಿಯ ಪದ್ಧತಿ. ನಿಶ್ಚಿತ ಕಾಲದಲ್ಲಿ ವೃತ್ತಿ/ಉದ್ದಿಮೆಯಲ್ಲಿ ಪರಿಣತಿ ಪಡೆದು ಅದರ ಉಪಯೋಗವನ್ನು ಸ್ವಂತ ಬೆಳವಣಿಗೆಗೆ ಮತ್ತು ಸಂಸ್ಥೆಯ ಅಭ್ಯುದಯಕ್ಕೆ ಉಪಯೋಗಪಡಿಸುವುದಕ್ಕೆ ಮಾನವ ಸಂಪನ್ಮೂಲಾಭಿವೃದ್ಧಿ ಎಂದು ಹೆಸರು. (ನಾಡ್ಲೆರ್ ೧೯೮೪).

ಮಾನವ ಸಂಪನ್ಮೂಲಾಭಿವೃದ್ಧಿಯಿಂದಾಗುವ ಪ್ರಯೋಜನಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದು ಪ್ರತಿ ಮಾನವನೂ ತನ್ನ ಸ್ಥಾನವನ್ನು ಇತರರೊಂದಿಗೆ ಹೋಲಿಸುವುದು ಮತ್ತು ತನ್ನಲ್ಲಿರುವ ರಾಜಕೀಯ, ಆರ್ಥಿಕ, ಸಾಮಾಜಿಕ ನೈಪುಣ್ಯತೆಯನ್ನು ಅರಿತು ಅವುಗಳಿಂದಾಗಿ ಸ್ವಂತ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳವುದು. ರಾಷ್ಟ್ರ ಅಥವಾ ರಾಜ್ಯವು ತನ್ನಲ್ಲಿರುವ ಆಂತರಿಕ ನೈಪುಣ್ಯತೆಯನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಬೇಕಾದಂತಹ ಚಟುವಟಿಕೆಗಳಾಗಲಿ ಕಾರ್ಯಕ್ರಮಗಳನ್ನಾಗಲಿ ಏರ್ಪಡಿಸುವುದರಿಂದ ತನ್ನ ಆರ್ಥಿಕ ಮತ್ತು ಸಾಮಾಜಿಕ ಸ್ಥರವನ್ನು ವೃದ್ಧಿಗೊಳಿಸಬಹುದು.

ಮಾನವ ಸಂಪನ್ಮೂಲಾಭಿವೃದ್ಧಿಯ ಪ್ರಮುಖ ಆಕರಗಳು ಆರ್ಥಿಕ, ಸಾಮಾಜಿಕ ಮತ್ತು ಅಭಿವೃದ್ಧಿಯೇತರ ಕಾರ್ಯಕ್ರಮಗಳು. ಶಿಕ್ಷಣ ಮತ್ತು ಶಿಕ್ಷಣೋತ್ತರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದರಿಂದಾಗಿ ವ್ಯಕ್ತಿಯ ಬೆಳವಣಿಗೆಗೆ, ಸಂಸ್ಥೆಯ ಬೆಳವಣಿಗೆಗೆ, ರಾಜ್ಯ ಮತ್ತು ರಾಷ್ಟ್ರಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ. ಈ ರೀತಿ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳ ವಿಸ್ತರಣೆ ಆಗಲು ಶಿಕ್ಷಣವನ್ನೇ ಕೇಂದ್ರವನ್ನಾಗಿಟ್ಟುಕೊಂಡ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಮಾನವ ಸಂಪನ್ಮೂಲಾಭಿವೃದ್ಧಿ ಯಶಸ್ವಿಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಕರ್ನಾಟಕ ರಾಜ್ಯದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿಯ ಬಗ್ಗೆ ಸಮೀಕ್ಷೆ ನಡೆಸುವುದೇ ಈ ಲೇಖನದ ಉದ್ದೇಶ. ಕರ್ನಾಟಕದಲ್ಲಿ ಶಿಕ್ಷಣದ ಪ್ರಗತಿಯನ್ನು ಸಹ ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ೧೯೫೦ರಲ್ಲಿ ಏಕೀಕರಣದ ನಂತರ ಶಿಕ್ಷಣದಲ್ಲಿ ಗಮನಾರ್ಹವಾದ ಬದಲಾವಣೆಯನ್ನೂ, ಬೆಳವಣಿಗೆ  ಮತ್ತು ಪ್ರಗತಿಯನ್ನು ಕಾಣಬಹುದು. ಶಿಕ್ಷಣದ ಪ್ರತಿ ಹಂತದಲ್ಲೂ ಸಾಧನೆಯು ಕಂಡುಬಂದಿತು. ಇದಕ್ಕೆ ಪೂರಕವಾದ ೬ ಕಮೀಷನ್ ಮತ್ತು ೧೨ ಕಮಿಟಿಗಳನ್ನು ರಚಿಸಲಾಗಿತ್ತು. ಅವುಗಳ ಸಲಹೆಗಳ ಮೇರೆಗೆ ಕೆಲವು ಬದಲಾವಣೆಗಳನ್ನು ಜಾರಿಗೆ ತರಲಾಯಿತು. ರಾಷ್ಟ್ರೀಯ ಶಿಕ್ಷಣದ ನಿಯಮಗಳಲ್ಲಿನ ಆದೇಶಗಳಂತೆ (೧೯೪೮, ೧೯೬೪-೬೮, ೧೯೭೭, ೧೯೯೦) ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನೂ ಮಾಡಲಾಗಿದ್ದು, ಅವು ಮಾನವ ಸಂಪನ್ಮೂಲಾಭಿವೃದ್ಧಿಯಾಗಲು ಪೂರಕವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲೂ ಶಿಕ್ಷಣಕ್ಕೆ, ಅದರಲ್ಲೂ ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ, ಕ್ರಮವಾಗಿ ಆದ್ಯತೆ ನೀಡಲಾಗಿದ್ದು ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇದರ ವಿವರಣೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ.

ಪೂರ್ವ ಪ್ರಾಥಮಿಕ ಶಿ‌ಕ್ಷಣ

ಶ್ರೀಯುತ ಗೋಪಾಲಸ್ವಾಮಿಯವರಿಂದ ಪ್ರಾರಂಭವಾದ ನರ್ಸರಿ ಶಾಲೆಯು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬುನಾದಿಯಾಗಿದ್ದಿತು. ವಿವಿಧ ರೀತಿಯ ಪೂರ್ವ ಪ್ರಾಥಮಿಕ ಶಿಕ್ಷಣವು ವಿವಿಧ ಕೇಂದ್ರಗಳಿಂದ/ವಿವಿಧ ಸಂಘ ಸಂಸ್ಥೆಗಳಿಂದ ನಡೆಸಲ್ಪಟ್ಟ ಮತ್ತು ವಿಸ್ತೃತವಾಗಿದೆ.

೧೯೬೭ರಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿರುವ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿ ಶ್ರೀಯುತ ಜೆ.ಬಿ. ಮಲ್ಲಾರಾಧ್ಯ ವರದಿ ಹೆಚ್ಚು ಬೆಳಕು ಚೆಲ್ಲಿ ಸಲಹೆಗಳನ್ನೂ ನೀಡಿ, ಅದರ ಆದೇಶದಂತೆ ಶಿಕ್ಷಕರ ತರಬೇತಿ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಶಾಲೆಗಳಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಲಾಯಿತು.

೧೯೫೬-೫೭ ರಿಂದ ೧೯೭೧ರವರೆಗೆ ಪೂರ್ವ ಪ್ರಾಥಮಿಕ ಶಿಕ್ಷಣವು ಖಾಸಗಿ ಸಂಸ್ಥೆಗಳಿಂದ ನಡೆಸಲಾಗುತ್ತಿತ್ತು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದಿತು. ಐದನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಈ ವಿವಿಧ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾರಂಭವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಕೆಗಳು ಅಂಗನವಾಡಿ, ಬಾಲವಾಡಿ, ನರ್ಸರಿ, ಕಿಂಡರ್‌ಗಾರ್ಟನ್ ಮತ್ತು ಬಾಲವಿಕಾಸ ಕೇಂದ್ರಗಳಾಗಿ ನಡೆಸುತ್ತಿದ್ದವು. ಈಗಲೂ ಸಹ ಪೂರ್ವ ಪ್ರಾಥಮಿಕ ಶಿಕ್ಷಣವು ಭಿನ್ನ ಭಿನ್ನ ಹೆಸರುಗಳಿಂದ ಕರೆಯಲ್ಪಟ್ಟರೂ ಸಹ ಅದರ ಆಡಳಿತ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವು ಸಹಶಿಕ್ಷಣದ ನಿರ್ದೇಶನದಡಿಯಲ್ಲಿ ಹೆಚ್ಚು ಗಮನ ನೀಡುತ್ತ ಬಂದಿದೆ. ಖಾಸಗೀಕರಣಕ್ಕೆ ಪುಷ್ಟಿ ಕೊಡಲಾಗಿದ್ದು ಇದು ಪ್ರಾಥಮಿಕ ಶಿಕ್ಷಣದ ಪ್ರಮುಖ ಅಂಗವಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣದ ಪ್ರಯೋಜನಗಳ ಬಗ್ಗೆ ಎನ್.ಸಿ.ಇ.ಆರ್.ಟಿ., ನಿಪ್ಸೆಡ್, ರಾಷ್ಟ್ರೀಯ ಮಟ್ಟದಲ್ಲಿರುವ ಸಂಘ ಸಂಸ್ಥೆಗಳು ಮತ್ತು ಸಂಶೋಧಕರು (ಏಲಿ, ರಾಜಲಕ್ಷ್ಮಿ, ಮುರಲೀಧರನ್, ಮೀನಾ ಸ್ವಾಮಿನಾಥನ್ ಮುಂತಾದವರು) ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಈ ಸಂಶೋಧನೆಗಳಿಂದ ಕಂಡುಬಂದ ಅಂಶವೆಂದರೆ ಪೂರ್ವ ಪ್ರಾಥಮಿಕ ಶಿಕ್ಷಣದಿಂದಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ವಿಕಾಸ ಸಾಧ್ಯ ಮಾತ್ರವಲ್ಲದೇ ಮಕ್ಕಳು ಪ್ರಾಥಮಿಕ ಶಾಲೆಯ ಹಂತದಲ್ಲಿ ಶಾಲೆ ಬಿಡುವುದನ್ನು ತಡೆಯಲು ಸಹಾಯಕವಾಗುತ್ತದೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ಹೊಂದಾಣಿಕೆಯುಳ್ಳವರಾಗುತ್ತಾರೆ. ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಅವಶ್ಯಕವಾಗಿರುವುದರಿಂದಲೇ ಸಮಗ್ರ ಬಾಲವಿಕಾಸ ಯೋಜನೆ (ICDS) ಕಾರ್ಯಕ್ರಮಗಳನ್ನು ನಗರ, ಗ್ರಾಮ ಮತ್ತು ಬುಡಕಟ್ಟು (Tribal) ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

ಇತ್ತೀಚೆಗೆ ನಡೆದ ಸಮಾವೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವು ಮಕ್ಕಳ ಶಿಕ್ಷಣದ ಪ್ರಥಮ ಮೈಲುಗಲ್ಲಾಗಿಯೂ ಮತ್ತು ಶಿಕ್ಷಣದ ಕಡ್ಡಾಯ ಅಂಗವಾಗಬೇಕೆಂದು ಸಲಹೆ ನೀಡಲಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣವು ಭಾರತದಲ್ಲಿ ಕಾನೂನು ಸಲಹೆ ನೀಡಲಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣವು ಭಾರತದಲ್ಲಿ ಕಾನೂನು ರೀತಿಯಲ್ಲಿ ಕಡ್ಡಾಯವಾಗಿಸಬೇಕಾದ ಅಂಶವೆಂದು ಗುರುತಿಸಲಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರವನ್ನು ಗುರುತಿಸಿ ಅವರುಗಳ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದಾಗಿ ಶಾಲೆ ಬಿಟ್ಟು ಹೋಗುವವರ ಸಂಖ್ಯೆ ಅದರಲ್ಲೂ ಹೆಣ್ಣುಮಕ್ಕಳು ಕಡಿಮೆಯಾಗಬಹುದೆಂದು ಜನಾಭಿಪ್ರಾಯ. ಪೋಷಕರು (ಹೆಚ್ಚಿನಾಂಶ ನಗರ ಪ್ರದೇಶಗಳಲ್ಲಿ) ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದ, ಪ್ರತಿ ಗಲ್ಲಿಯಲ್ಲೂ, ಅಡ್ಡರಸ್ತೆಗಳಲ್ಲೂ, ಪೂರ್ವ ಪ್ರಾಥಮಿಕ ಶಾಲೆಗಳ ತಲೆಯೆತ್ತುತ್ತಿವೆ. ಅದರ‌ಲ್ಲೂ ಆಂಗ್ಲ ಮಾಧ್ಯಮವುಳ್ಳ ಪ್ರಾಥಮಿಕ ಶಾಲೆಗಳೊಂದಿಗೂ ಹೊಂದಿರುವ ಪೂರ್ವ ಪ್ರಾಥಮಿಕ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಇವುಗಳ ಬೆಳವಣಿಗೆಗೆ ಮತ್ತೊಂದು ಕಾರಣ ಪೂರ್ವ ಪ್ರಾಥಮಿಕ ಶಿಕ್ಷಣವು ಶಿಕ್ಷಣಾಧಿಕಾರಿಗಳ ಆಡಳಿತಕ್ಕೆ ಬರದಿರುವುದು. ಯಾವುದೇ ವಿಧವಾದ ಆಡಳಿತ/ಹಣಕಾಸಿನ (ಆರ್ಥಿಕ ವ್ಯವಸ್ಥೆಯ) ಬಗ್ಗೆ ಪರಿಶೀಲನೆ, ತಪಾಸಣೆ ನಡೆಸಲಾಗುವ ವ್ಯವಸ್ಥೆ ಇಲ್ಲದಿರುವುದಕ್ಕೆ ಪೂರ್ವ ಪ್ರಾಥಮಿಕ ಶಿಕ್ಷಣ ಈಗ ಧನ ಸಂಪಾದನೆಯ ಆಗರವಾಗಿದೆ. ಇದನ್ನು ತಡೆಯಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚುವಂತೆ ಮಾಡಲು ಪ್ರಾಥಮಿಕ ಶಿಕ್ಷಣದ ನಿರ್ದೇಶನಾಲಯದ ಆಡಳಿತಕ್ಕೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಒಳಪಡಿಸುವುದು ಸೂಕ್ತ. ಇದಲ್ಲದೇ ಖಾಸಗೀಕರಣ ವಾಗಿರುವ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಕಡಿವಾಣ ಹಾಕುವಂತಹ ನೀತಿ, ಮಸೂದೆ  ಮತ್ತು ತಿದ್ದುಪಡಿ ಅವಶ್ಯಕವೆನಿಸುತ್ತದೆ.

ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ನೂತನ ಬದಲಾವಣೆ ಮತ್ತು ಮಾರ್ಪಾಡು ಸಾಕಷ್ಟು ನಡೆದಿದ್ದರೂ ಸಹ ಭೌತಿಕ, ವೈಜ್ಞಾನಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚಿನ ಬದಲಾವಣೆಯಾಗಲು ಸಾಧ್ಯತೆಯನ್ನು ಈ ವರದಿಗಳು ತಿಳಿಸಿವೆ.

ಪ್ರಾಥಮಿಕ ಶಿಕ್ಷಣ

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಚರಿತ್ರೆಯನ್ನು ವಿಶ್ಲೇಷಿಸಿದಾಗ ೧೯೫೬ರ ನಂತರ ಕೆಲವು ಗಮನಾರ್ಹವಾದ ಅಂಶಗಳು ಕಂಡುಬರುತ್ತವೆ. ೧೯೬೧ರಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಮಸೂದೆಯನ್ನು ಜಾರಿಗೆ ತಂದುದು ಬಹು ಮುಖ್ಯ ಸಂಗತಿ. ಇದಾದ ನಂತರ ಸುಮಾರು  ಮೂರು ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಗತಿಯನ್ನು ಕಾಣಬಹುದು.

ಐದನೆಯ ಪಂಚವಾರ್ಷಿಕ ಯೋಜನೆಯ ನಂತರ ಪ್ರಾಥಮಿಕ ಶಿಕ್ಷಣ ವಿಸ್ತೃತಗೊಂಡಿತು ಮತ್ತು ಅದರೊಂದಿಗೆ ಶಾಲಾ ಪದ್ಧತಿಯಲ್ಲಿ ನೂತನ ಕಾರ್ಯಕ್ರಮಗಳನ್ನು ಅಳವಡಿಸಲಾಯಿತು.

ಮಧ್ಯಾಹ್ನದ ಉಪಹಾರದೊಂದಿಗೆ ಸಮವಸ್ತ್ರ ವಿತರಣೆ, ಪುಸ್ತಕ ವಿತರಣೆ, ಹಾಜರಾತಿ ಸ್ಕಾಲರ್‌ಷಿಪ್, ಮೆರಿಟ್ ಸ್ಕಾಲರ್‌ಷಿಪ್, ಪೂರ್ವ ಮೆಟ್ರಿಕ್ ಸ್ಕಾಲರ್‌ಷಿಪ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ (ವಸತಿ ಗೃಹಗಳನ್ನು) ಹಾಸ್ಟೆಲ್‌ಗಳನ್ನು, ಆಶ್ರಮ ಶಾಲೆಗಳನ್ನೂ ತೆರೆಯಲಾಯಿತು.

೧೯೬೧ರ ನಂತರದ ನಾಲ್ಕು ದಶಕಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಯಾಯಿತು. ಶಾಲೆಗಳ ಸಂಖ್ಯೆ ಶೇ.೮ರಷ್ಟು ಹೆಚ್ಚಿತು. ಶಿಕ್ಷಕರ ಸಂಖ್ಯೆ ೨.೪೫ರಷ್ಟು ಹೆಚ್ಚಾಯಿತು. ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಯಿತು.

ಸರಾಸರಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಮಾಣ ೧೯೫೫-೫೬ರಲ್ಲಿ ೩೧.೫ ಇದ್ದಿದ್ದು ೧೯೯೩-೯೪ರಲ್ಲಿ ೫೨ಕ್ಕೆ ಏರಿತು.

ಈ ಶತಮಾನದ ಅಂತ್ಯದ ವೇಳೆಗೆ ಸುಮಾರು ೬ರಿಂದ ೧೧ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಸಂಖ್ಯೆ ೬.೧ ದಶಲಕ್ಷ ಮತ್ತು ೧೧ ರಿಂದ ೧೩ರ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಸಂಖ್ಯೆ ೩.೭ ದಶಲಕ್ಷಕ್ಕೇರುವುದೆಂದು ಗುರುತಿಸಲಾಗಿದೆ.

೧೯೭೦ರಿಂದ ಪ್ರಾಥಮಿಕ ಶಿಕ್ಷಣವನ್ನು ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಲಾಗಿದ್ದು ಅವುಗಳ ಆಧಾರಿತ ಆಯ್ದ ಸಲಹೆಗಳನ್ನು ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರಂತರ ಪ್ರಯಾಸ ಮಾಡಲಾಯಿತು. ಇವುಗಳಿಂದ ಆಯ್ದ ಕೆಲವು ಅಂಶಗಳು ಹೀಗಿವೆ.

ಪ್ರಾಥಮಿಕ ಶಿಕ್ಷಣದ ವಿಸ್ತರಣೆ ಆದರೂ ಸಹ ಈ ಶಿಕ್ಷಣದಲ್ಲಿ ಹೆಚ್ಚಿನಾಂಶ ೬ ರಿಂದ ೧೧ರ ವಯಸ್ಸಿನ ಮಕ್ಕಳ ಶೈಕ್ಷಣಿಕ ವೆಚ್ಚ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆ ೧೧ರಿಂದ ೧೪ರ ವಯಸ್ಸಿನ ಮಕ್ಕಳು ಶಾಲೆಗೆ ಭರ್ತಿಯಾಗದೇ ಇರುವುದಕ್ಕೆ ಕಾರಣಗಳು ಅನೇಕ. ಹೆಣ್ಣು ಮತ್ತು ಗಂಡು ಮಕ್ಕಳು ತಮ್ಮ ಪೋಷಕರಿಗೆ ಸಹಾಯ ಮಾಡುವಿಕೆ, ಮಕ್ಕಳಿಗಾಗಿ ಶಾಲೆಗಳು ಅವರುಗಳ ನಿವಾಸವಾಗಿರುವ ಗೃಹಗಳಿಂದ ದೂರವಿರುವಿಕೆ, ಶಾಲಾವರಣದಲ್ಲಿ ಮತ್ತು ಶಾಲೆಯೊಳಗಿನ ಸೌಲಭ್ಯಗಳ ಕೊರತೆ, ಶಿಕ್ಷಕರು ನಡೆಸುವ ಶಿಕ್ಷಣೋತ್ತರ ಕಾರ್ಯಕ್ರಮಗಳಲ್ಲಿ ಗುಣಮಟ್ಟವಿಲ್ಲದಿರುವಿಕೆ, ಶಿಕ್ಷಣದಲ್ಲಿ ನೀಡುವ ವಿವರಗಳಿಗೂ, ಪರಿಸರದಲ್ಲಿ ಮತ್ತು ದೈನಂದಿನ ಜೀವನದಲ್ಲಿರುವ ವಿಷಯಗಳಿಗೂ ವ್ಯತ್ಯಾಸವಿರುವಿಕೆ , ಹೆಣ್ಣು ಮಕ್ಕಳು ತಂದೆ ತಾಯಂದಿರಿಗೆ ಗೃಹ ಕೆಲಸಗಳಲ್ಲೂ ಗೃಹೋದ್ಯೋಗಗಳಲ್ಲಿ ನೆರವಾಗುವಿಕೆ.

ಪ್ರಾಥಮಿಕ ಶಿಕ್ಷಣದಡಿಯಲ್ಲಿ ಬರದೇ ಇರತಕ್ಕಂತಹ ವಿದ್ಯಾರ್ಥಿಗಳಿಗೆ (ವಲಸೆ ಕಾರ್ಮಿಕರ ಮಕ್ಕಳು) ಪ್ರತ್ಯೇಕ ವ್ಯವಸ್ಥೆ ಮಾಡಲು ಅನೌಪಚಾರಿಕ ಶಿಕ್ಷಣ ಜಾರಿಗೆ ತರಲಾಗಿದೆ. ಇವರಲ್ಲದೇ ಶಾಲೆ ಬಿಟ್ಟವರು, ಬಾಲಕಾರ್ಮಿಕರಾಗಿರುವವರಿಗಾಗಿ ಶಾಲೆಯನ್ನು ಪುನಃ ಪ್ರವೇಶಲಿಚ್ಚಿಸುವ ವಿದ್ಯಾರ್ಥಿಗಳಿಗಾಗಿ ಅನೌಪಚಾರಿಕ ಶಿಕ್ಷಣ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಇದು ಅರ್ಧಕಾಲೀನ ಮತ್ತು ಮುಂದುವರೆಯುವಂತಹ ಶಿಕ್ಷಣದ ವ್ಯವಸ್ಥೆ ಆಗಿದೆ. ಇದರಿಂದಾಗಿ ೬ ರಿಂದ ೧೪ರ ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ೧೫ ವಯೋಮಿತಿಯ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಆಗಿದೆ.

ಇವೆಲ್ಲಾ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ ಸಹ ಇತ್ತೀಚೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಣದ ಯೋಜನೆಯನ್ನು (ವಿಶ್ವಬ್ಯಾಂಕ್ ಮತ್ತಿತರ ಧನಸಹಾಯ ಮಾಡುವ ಸಂಸ್ಥೆಗಳಿಂದ) ಕರ್ನಾಟಕದ ೪ ಜಿಲ್ಲೆಗಳಲ್ಲಿ ತರಲಾಗಿದೆ.

೧೯೮೬ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನವೀನ ಶಿಕ್ಷಣದ ಪದ್ಧತಿಯು ಜಾರಿಗೆ ಬಂದಿತು. ಆಗ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಕರ ತರಬೇತಿಗಾಗಿ ಹೆಚ್ಚು ಹಣವನ್ನು ಕೇಂದ್ರ ಸರ್ಕಾರವು ಖರ್ಚು ಮಾಡಿತು. ಇದಲ್ಲದೇ ಮಕ್ಕಳು ಶಾಲೆಗೆ ಬಾರದೇ ಇರಲು ಕಾರಣವನ್ನು ಗುರುತಿಸಿ ಅದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಯೋಜನೆ ಹಾಕಿತು. ಆಪರೇಷನ್ ಕಪ್ಪು ಹಲಗೆ ಕಾರ್ಯಾಚರಣೆ ಪ್ರಾರಂಭವಾಗಿ ಶಾಲಾ ಕಾರ್ಯ ಚಟುವಟಿಕೆಗಾಗಿ, ಪ್ರಮುಖವಾಗಿ ಏಕೋಪಾಧ್ಯಾಯ ಶಾಲೆಗಳಲ್ಲಿ, ಕನಿಷ್ಟವಾಗಿ ಇಬ್ಬರು ಶಿಕ್ಷಕರಿರಬೇಕು ಎಂಬುದನ್ನು ಸ್ಪಷ್ಟಪಡಿಸಿ ಅದರೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚುಂತಹ ಸೌಕರ್ಯಗಳನ್ನು ಮಾಡಲಾಯಿತು. ಈಗಲೂ ಸಹ ಈ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರವು ನೆರವು ಸಿಗುತ್ತಿದೆ.

ಹೆಣ್ಣು ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ವಹಿಸಿ ಹೆಣ್ಣುಮಕ್ಕಳು ಪ್ರಾಥಮಿಕ ಶಾಲೆಗೆ ಭರ್ತಿಯಾಗುವಂತೆ ಮಾಡುವಂತಹ ನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಇದರಡಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಸಮವಸ್ತ್ರ, ಅಟೆಂಡೆನ್ಸ್ ಸ್ಕಾಲರ್‌ಷಿಪ್, ವಸತಿ ಗೃಹಗಳು ಮತ್ತು ಹೆಣ್ಣು ಮಕ್ಕಳು ಶಾಲೆ ಬಿಟ್ಟು ಬಿಡುವುದನ್ನು ತಪ್ಪಿಸುವಂತೆ ಶಿಕ್ಷಕಿಯರ ನೇಮಕಾತಿ ಮಾಡುವಿಕೆ, ಪೋಷಕರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪೋಷಕರ ಶಿಕ್ಷಣವನ್ನು ತೀವ್ರಗೊಳಿಸುವಂತಹ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾರಂಭಿಸಲಾಯಿತು. ಹೆಣ್ಣು ಮತ್ತು ಗಂಡು ಮಕ್ಕಳು ಸಮಾನಾವಕಾಶ ಪಡೆದಿರುವುದರಿಂದ ಅವರುಗಳ ಶಿಕ್ಷಣದಲ್ಲಿ ಕಂಡುಬರುವ ತಾರತಮ್ಯವನ್ನು ತೋರಿಸುವ ಪಠ್ಯಕ್ರಮ, ಪುಸ್ತಕದಲ್ಲಿರುವ ಪಾಠಗಳಲ್ಲಿರುವ ಕುಂದು ಕೊರತೆಗಳನ್ನು ಹೋಗಲಾಡಿಸುವುದು, ಶಿಕ್ಷಣದಲ್ಲಿ ಸೇವಾ ನಿರತರಾದ ಶಿಕ್ಷಕರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಭೇದಭಾವ ಇರಬಾರದೆಂಬುದನ್ನು ತಿಳಿಸುವಿಕೆ ಮತ್ತು ಪೋಷಕರಲ್ಲಿ ಹೆಣ್ಣು ಗಂಡೆಂಬ ಭೇದಭಾವ ತೋರಬಾರದೆಂದು ಮತ್ತು ಅವರುಗಳ ಶಿಕ್ಷಣಕ್ಕೆ ಸಮಾನಾವಕಾಶ ಒದಗಿಸಬೇಕೆಂದು ಪ್ರಚಾರ ನಡೆಸಲಾಯಿತು.

ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆಯಲ್ಲೂ ಸಹ ಸಾಕಷ್ಟು ಬದಲಾವಣೆ ತರಲಾಯಿತು. ಅವರುಗಳು ಪ್ರಾಥಮಿಕ ಶಿಕ್ಷಣ ಪಡೆಯುವಂತಾಗಲು ಗ್ರಾಮೀಣ ಪ್ರದೇಶಗಳಲ್ಲಿ, ನಗರದಲ್ಲಿನ ಕೊಳಚೆ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಹೆಚ್ಚು ಸೌಲಭ್ಯ, ಸೌಕರ್ಯಗಳನ್ನೊಳಗೊಂಡ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಯಿತು. ಅವರಿಗಾಗಿಯೇ ಕೇಂದ್ರ ಸರ್ಕಾರವು ನವೋದಯ ಶಾಲೆಗಳನ್ನು ತೆರೆದು ಅವುಗಳಲ್ಲಿ ನವೀನ ರೀತಿಯ ಉಪಕರಣಗಳಿಂದ ಟಿ.ವಿ., ರೇಡಿಯೋ ಮುಂತಾದವುಗಳನ್ನು ಅಳವಡಿಸಿ ಶಿಕ್ಷಣದಲ್ಲಿ ಪರಿಣಿತಿ ಪಡೆದ ಶಿಕ್ಷಕರನ್ನೊಳಗೊಳ್ಳುವಂತೆ ಮಾಡಲಾಯಿತು. ಇದಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಬಾಲಕ ಮತ್ತು ಬಾಲಕಿಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಂತಹ ಚಟುವಟಿಕೆಗಳನ್ನು ಜಾರಿಗೆ ತರಲಾಯಿತು. ಅವರುಗಳಲ್ಲಿರುವ ಪ್ರತಿಭೆಯನ್ನು ಪೋಷಿಸಲು ಬೇಕಾದ ಪುಸ್ತಕಗಳು, ಉಪಕರಣಗಳು, ಸಲಕರಣೆ, ಸೌಲಭ್ಯಗಳನ್ನು ವಿತರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳು, ಪರಿಶಿಷ್ಟ ಬುಡಕಟ್ಟು, ಅಧಿಸೂಚನೆಯಲ್ಲಿಲ್ಲದ ಬುಡಕಟ್ಟು ಮತ್ತು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಬಟ್ಟೆ, ಸ್ಲೇಟು, ಪುಸ್ತಕ ಮತ್ತಿತರ ತಲಾ ಉಪಕರಣಗಳನ್ನು ಒದಗಿಸುವಂತಹ ಯೋಜನೆಯನ್ನು ಜಾರಿಗೆ ತಂದುದು ಕರ್ನಾಟಕದ ಶಿಕ್ಷಣದಲ್ಲಿ ಒಂದು ಮೈಲಿಗಲ್ಲು.

ಗುಡ್ಡಗಾಡು ಜನಾಂಗ ಹೆಚ್ಚಾಗಿರುವ ಕಡೆಗಳಲ್ಲಿ ಆ ಜನಾಂಗದ ಮಕ್ಕಳಿಗಾಗಿ ಆಶ್ರಮ ಶಾಲೆಗಳನ್ನು ಹಾಗೂ ವಸತಿ ಶಾಲೆಗಳನ್ನು ಪ್ರಾರಂಭಿಸಿ ಅದರ ಉಪಯೋಗವನ್ನು ಹೆಣ್ಣು ಮತ್ತು ಗಂಡು ಮಕ್ಕಳು ಪಡೆಯುವಂತೆ ಮಾಡಲಾಯಿತು. ಇವುಗಳು ಮಾತ್ರವಲ್ಲದೇ ಅವರುಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಜಾರಿಗೆ ತರಲಾಯಿತು. ಇದಲ್ಲದೇ ಮಕ್ಕಳು ವಿವಿಧ ಶಿಕ್ಷಣ ಕ್ಷೇತ್ರದಲ್ಲಿ/ಹಂತದಲ್ಲಿ ಉತ್ತಮ ರೀತಿಯಲ್ಲಿ ತೇರ್ಗಡೆಯಾಗುವಂತೆ ಉತ್ತೇಜನ ನೀಡುವ ಸಲುವಾಗಿ ಅರ್ಹತಾ ವಿದ್ಯಾರ್ಥಿ ವೇತನ ಯೋಜನೆ ಜಾರಿಯಲ್ಲಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರೊಂದಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಸಹ ಈ ಸೌಲಭ್ಯಗಳನ್ನು ಪ್ರಾಥಮಿಕ ಶಿಕ್ಷಣದಲ್ಲಿ ನೀಡಲಾಗುತ್ತಿದೆ. ಇದರಿಂದ ಶಿಕ್ಷಣ ಇಲಾಖೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗದವರ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿ ನಿಗಮದಲ್ಲಿ ಕೂಡ ಶಿಕ್ಷಣಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಿದೆ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಮತ್ತು ಶಿಕ್ಷಣಕ್ಕೆ ಪೂರಕವಾಗಿರುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಈ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ ಸಹ ಶಿಕ್ಷಣ ಸೌಲಭ್ಯ ಹಾಗೂ ಶಿಕ್ಷಣ ಪ್ರಗತಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಸಮವಾಗಿದೆ ಎಂದು ಹೇಳುವಂತಿಲ್ಲ. ಇದನ್ನು ಗುರುತಿಸಿ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಗಮನ ನೀಡಲಾಗುತ್ತಿದೆ. ಅದರ ಮೂಲಕ ಶೈಕ್ಷಣಿಕವಾಗಿ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಈ ಕಾರ್ಯಕ್ರಮಗಳು ಬಹುಮಟ್ಟಿಗೆ ನೆರವಾಗುತ್ತಿವೆ.

ಹಾವನೂರ್ ಕಮೀಷನ್, ಮಂಡಲ್ ಕಮೀಷನ್ ಮತ್ತು ಚಿನ್ನಪ್ಪರೆಡ್ಡಿ ಕಮೀಷನ್ ಮುಂತಾದವುಗಳು ಶಿಕ್ಷಣಕ್ಕೆ ಒತ್ತು ಕೊಟ್ಟು ಶಿಕ್ಷಣೋತ್ತರ ಯೋಜನೆಗಳಲ್ಲಿ ಅವುಗಳು ಹಾಕಿದ ಗುರಿಯನ್ನು ತಲುಪುವಂತೆ ಮಾಡಲಾಗುತ್ತಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಆಕರಗಳಲ್ಲಿ (ಸೂಚ್ಯಾಂಕ) ಪ್ರಾಥಮಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ದೊರೆತಿದೆ. ಇದರಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುತ್ತಿರುವ ಬಾಲಕ ಬಾಲಕಿಯರ ಸಂಖ್ಯೆ (೬ರಿಂದ ೧೧ ಮತ್ತು ೧೧ರಿಂದ ೧೪ರೊಳಗಿನ ವಿದ್ಯಾರ್ಥಿಗಳ ಶೇಕಡಾವಾರು ಸಂಖ್ಯೆ) ಮತ್ತು ಪ್ರತ್ಯೇಕವಾಗಿ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಹಚ್ಚು ಕಾಳಜಿ ವಹಿಸುತ್ತಿರುವ ಕಾರ್ಯಕ್ರಮಗಳ ವಿವರಗಳನ್ನೂ, ಶಾಲೆಗೆ ಅರ್ಹವಾದ (ವಯೋಮಿತಿಯಲ್ಲಿ)ವರ ಸಂಖ್ಯೆ ಮತ್ತು ಅವರುಗಳು ಪಾಲ್ಗೊಳ್ಳುವ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯ ಬಗ್ಗೆ ವಿವರ ನೀಡುತ್ತಿವೆ. ಇದರಿಂದಾಗಿ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣವಾಗುವಂತಹ ಕಾರ್ಯಕ್ರಮಗಳಿಗೆ ಹೆಚ್ಚು ಬೆಂಬಲ ನೀಡಬೇಕೆಂದು ಮಾನವ ಸಂಪನ್ಮೂಲಾಭಿವೃದ್ಧಿ ವರದಿ ತಿಳಿಸಿದೆ.

ಶಾಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚು ಮಾಡುತ್ತಿರುವುದರಲ್ಲಿ ಸಂದೇಹವೇ ಇಲ್ಲ. ಆದರೂ ಕನಿಷ್ಠ ಕಲಿಕಾಮಟ್ಟ (MLL) ಕಾರ್ಯಕ್ರಮವನ್ನು ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡದವರ ಕಲಿಕಾ ಮಟ್ಟವನ್ನು ಜಾರಿಗೆ ತಂದು ಇದನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗಿದೆ. ಇದರಡಿಯಲ್ಲಿ ಶಿಕ್ಷಕರ ಕೈಪಿಡಿ ತಯಾರಿಕೆ, ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಲಾಗಿದೆ. ಸಾಕಷ್ಟು ಕಾರ್ಯಗಳು ಈ ದಿಶೆಯಲ್ಲಿ ನಡೆದಿದೆ. ಈಗಾಗಲೇ ಪಠ್ಯಪುಸ್ತಕಗಳ ತಯಾರಿಸಿ ಪಾಠಶಾಲೆಗಳಿಗೆ ವಿತರಿಸಲಾಗುತ್ತಿದೆ.

ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣವಾಗುವಂತೆ ಮಾಡುವ ಆಡಳಿತ ಮತ್ತು ಯೋಜನೆ, ಹಣಕಾಸಿನ ವ್ಯವಸ್ಥೆ ಮತ್ತು ಶಾಲಾ ಸೌಲಭ್ಯಗಳ ವಿತರಣೆಯಲ್ಲಿರುವ ಲೋಪದೋಷಗಳ ನಿವಾರಣೆ ಮತ್ತು ಪ್ರಾದೇಶಿಕ ಯೋಜನೆ, ಸ್ಥಳೀಯ ಯೋಜನೆ ಮತ್ತು ಶಾಲಾ ನಕ್ಷೆಗಳನ್ನು ತಯಾರಿಸುವಿಕೆ, ಲಿಂಗಭೇದವಿಲ್ಲದಿರುವಿಕೆ ಮತ್ತು ಶಿಕ್ಷಕರ ತರಬೇತಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತಡ, ವಯಸ್ಕರ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಕ್ರಮಗಳು, ಮಹಿಳೆ ಮತ್ತು ಪೋಷಕರ ಶಿಕ್ಷಣ ಮುಂತಾದವುಗಳು ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾಗಿಯೂ, ಸಹಾಯಕವಾಗಿಯೂ ಇರುವಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಸೇವಾನಿರತ ಸಂಘ ಸಂಸ್ಥೆಗಳು ನಡೆಸುವಂತಹ ಶಿಕ್ಷಣ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗಿದ್ದು ಅದರಿಂದಲೂ ಸಹ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಅನುವಾಗುವಂತಹ ಕಾರ್ಯಕ್ರಮಗಳಿಗೆ ಸರ್ಕಾರವು ಧನಸಹಾಯ ಒದಗಿಸುತ್ತಿದೆ.

ಇವೆಲ್ಲಾ ಕಾರ್ಯಕ್ರಮಗಳಿದ್ದರೂ ಸಹ ಪ್ರಾಥಮಿಕ ಶಿಕ್ಷಣದ ಪ್ರಗತಿಯಲ್ಲಿ ಅಡಚಣೆಗಳನ್ನು ಗುರುತಿಸುವಂತಹ ಸಂಶೋಧನೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಅವುಗಳಿಂದ ಕಂಡು ಬಂದಂತಹ ವಿಶೇಷ ಕುಂದುಕೊರತೆಗಳಿಗೆ ಅನುವಾಗುವಂತಹ ನಿವಾರಣೋಪಾಯಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರಮುಖವಾಗಿ ಹೆಣ್ಣು ಮಕ್ಕಳು ಶಾಲೆಗೆ ಭರ್ತಿಯಾಗುವಿಕೆ, ಹೆಣ್ಣು ಮಕ್ಕಳು ಶಾಲೆಯನ್ನು (ಅಪೂರ್ಣವಾಗಿ) ಬಿಟ್ಟು ಬಿಡುವಿಕೆ, ಬಾಲಕ ಬಾಲಕಿಯರಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವಿಕೆಯಲ್ಲಿರುವ ತಾರತಮ್ಯಗಳನ್ನು ಗುರುತಿಸುವಿಕೆ ಮತ್ತು ಅದಕ್ಕೆ ಪರಿಹಾರ ಸೂಚಿಸುವ ಮತ್ತು ಕಲಿಕೆಯಲ್ಲಿ ಶಾಲೆಯ ಗುಣಮಟ್ಟವನ್ನು ಏರಿಸುವಂತಹ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ೫ ಶಿಕ್ಷಣ ಸಮೀಕ್ಷೆಗಳು ನಡೆಸಲಾಗಿದ್ದು ಕರ್ನಾಟಕದಲ್ಲಿ ನಡೆಸಬೇಕಾದ ಮುಂದಿನ ಚಟುವಟಿಕೆಗಳ ಬಗ್ಗೆ ವಿವರ ನೀಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಬಗ್ಗೆ ನುರಿತ ಸಂಶೋಧನೆಗಳಿಂದ ಕರ್ನಾಟಕಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾದಂತಹ ಕ್ರಮಗಳ ಬಗ್ಗೆ ಆಸಕ್ತಿ ತೋರಿ ಸರ್ಕಾರವು ಪ್ರಾಥಮಿಕ ಶಿಕ್ಷಣದ ಪ್ರಗತಿಯಾಗುವಂತೆ ಮಾಡುತ್ತಿದೆ.

ಪ್ರೌಢ ಶಿಕ್ಷಣ

ರಾಜ್ಯ ಏಕೀಕರಣದ ಸಂದರ್ಭದಲ್ಲಿ ಪ್ರೌಢಶಿಕ್ಷಣದ ಆಡಳಿತ ವ್ಯವಸ್ಥೆಯಲ್ಲಿರುವ ತಾರತಮ್ಯಗಳನ್ನು ಗುರುತಿಸಿ ೧೯೬೨-೬೩ರಲ್ಲಿ ರಾಜ್ಯದೆಲ್ಲೆಡೆಯೂ ಸಮವಾದ ಪ್ರೌಢಶಿಕ್ಷಣವನ್ನು ಜಾರಿಗೆ ತರಲಾಯಿತು. ಇದಾದ ನಂತರ ತರಗತಿ ಒಂದರಿಂದ ಹತ್ತರವರೆಗಿನ ಶಿ‌ಕ್ಷಣ ಪದ್ಧತಿಯನ್ನು ಜಾರಿಗೆ ತರಲಾಯಿತು. (ಪ್ರಥಮ ೭ ವರ್ಷಗಳು ಪ್ರಾಥಮಿಕ ಶಿಕ್ಷಣವಾಯಿತು, ನಂತರದ ೩ ವರ್ಷಗಳು ಪ್ರೌಢಶಿಕ್ಷಣವೆನಿಸಿಕೊಂಡಿತು).

ಇಷ್ಟೇ ಅಲ್ಲದೇ ೧೯೬೩ರಲ್ಲಿ ಮೊಟ್ಟಮೊದಲ ಬಾರಿಗೆ ಮೈಸೂರು ರಾಜ್ಯದ ಪ್ರೌಢಶಿಕ್ಷಣದ ಒಂದು ಅಂಗವಾದ ಸೆಕೆಂಡರಿ ಪರೀಕ್ಷಾ ಮಂಡಳಿ (MSEEB)ಯು ರಾಜ್ಯಮಟ್ಟದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರಾಜ್ಯದೆಲ್ಲೆಡೆ ಏಕತ್ರವಾಗಿ ನಡೆಸಿತು. ೧೯೫೬-೫೭ರಲ್ಲಿ ರಾಜ್ಯದಲ್ಲಿ ಸುಮಾರು ೫೩೫ ಪ್ರೌಢಶಾಲೆಗಳಿದ್ದವು. ಅವುಗಳಲ್ಲಿ ೧.೨೫ ದಶ ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಪ್ರೌಢಶಿಕ್ಷಣಕ್ಕೆ ತಗುಲುತ್ತಿದ್ದ ವೆಚ್ಚ ರೂ. ೧೪.೪೩ ಲಕ್ಷಗಳು. ೧೯೭೦-೭೧ರ ವೇಳೆಗೆ ಪ್ರೌಢಶಿಕ್ಷಣ ಪಡೆಯುತ್ತಿದ್ದವರ ಸಂಖ್ಯೆ ೪.೫೪ ದಶ ಲಕ್ಷಕ್ಕೆ ಹೆಚ್ಚಿತು. ಪ್ರೌಢಶಿಕ್ಷಣಕ್ಕಾಗಿ ರೂ. ೨೦೨.೩೮ ದಶಲಕ್ಷದಷ್ಟು ವೆಚ್ಚವಾಯಿತು.

೧೯೮೧ರ ವೇಳೆಗೆ ೧೬೮೮ ಶಾಲೆಗಳಿದ್ದು ಅವುಗಳಲ್ಲಿ ೭.೩೨ ವಿದ್ಯಾರ್ಥಿಗಳಿದ್ದರು. ಶಿಕ್ಷಣಕ್ಕಾಗಿ ಆಗುತ್ತಿದ್ದ ಖರ್ಚು ರೂ. ೨೪೫.೭ ದಶಲಕ್ಷಕ್ಕೆ ಏರಿತು. ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿಯು ಕಾಯಿದೆ ೧೯೬೬ರ ನಿಯಮದಲ್ಲಿ ಸೂಚಿಸಿರುವ ನಿಬಂಧನೆಗಳಿಗನುಸಾರವಾಗಿ ರಚಿತವಾಗಿರುವ ಸ್ವಾಯತ್ತ ಸಂಸ್ಥೆ ಇದು. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸು‌ತ್ತಾ ಬಂದಿದೆ. ೧೯೮೧ರಲ್ಲಿ ಪರೀಕ್ಷೆಗೆ ಕುಳಿತವರ ಸಂಖ್ಯೆ ೧೨೩೬೦೩ ಗೆ ಏರಿತು. ಇದೇ ರೀತಿ ಶೇಕಡಾವಾರು ಪಾಸಾದವರ ಸಂಖ್ಯೆ ೩೫.೫ಗೆ ಏರಿತು. ೧೯೮೮-೯೮ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ೧೩೪೬೬೦ ಕ್ಕೆ ಏರಿತು ಮತ್ತು ಫಲಿತಾಂಶ ಶೇಕಡಾವಾರು ೧೩.೬೦ಕ್ಕೆ ಇಳಿಯಿತು. ಇದಕ್ಕೆ ಕಾರಣ ಹೊಸ ಪಠ್ಯಕ್ರಮ ಜಾರಿಗೆ ಬಂದಿತೆಂದು ವರದಿ ನೀಡಲಾಯಿತು. ೧೯೯೩-೯೪ರ ಸಾಲಿನಲ್ಲಿ ನೂತನ ಪಠ್ಯಕ್ರಮವನ್ನು ಅಳವಡಿಸಲಾಯಿತು.

ಒಂದು ಕಡೆ ಪ್ರೌಢಶಿಕ್ಷಣದ ಪ್ರಗತಿಯಾದರೆ ಮತ್ತೊಂದೆಡೆ ಪ್ರೌಢಶಿಕ್ಷಣ ಪಡೆದು ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ಣಗೊಳಿಸದೇ ವಿದ್ಯಾರ್ಥಿಗಳು ಪ್ರೌಢಶಾಲೆಗಳನ್ನು ಬಿಡುವುದರಿಂದ ಶಿಕ್ಷಣದ ಕ್ಷೇತ್ರದಲ್ಲಿ ಹೆಚ್ಚು ವ್ಯರ್ಥವಾಗತೊಡಗಿತು. ಇದನ್ನು ಶೈಕ್ಷಣಿಕ ನಷ್ಟ (wastage)ವೆನ್ನಬಹುದಾಗಿದೆ. ೧೯೭೮ರಿಂದ ೧೯೮೧ರವರೆಗಿನ ಶೈಕ್ಷಣಿಕ ನಷ್ಟ ಶೇಕಡ ೭೩.೭೭ (ಮತ್ತು ಅದರಲ್ಲೂ ಬಾಲಕರ ಶೈಕ್ಷಣಿಕ ನಷ್ಟ ಶೇಕಡ ೭೩.೮೪ರಷ್ಟು ಮತ್ತು ಬಾಲಕಿಯರ ಶೈಕ್ಷಣಿಕ ನಷ್ಟ ಶೇಕಡ ೭೩.೬೫) ಎಂದು ಕಂಡುಹಿಡಿಯಲಾಯಿತು. ಇದೇ ರೀತಿ ೧೯೭೮-೭೯ ರಿಂದ ೧೯೮೧ರವರೆಗಿನ ಶೈಕ್ಷಣಿಕ ನಷ್ಟ ಶೇಕಡ ೭೩.೭೭ (ಮತ್ತು ಅದರಲ್ಲೂ ಬಾಲಕರ ಶೈಕ್ಷಣಿಕ ನಷ್ಟ ಶೇಕಡ ೭೩.೮೪ರಷ್ಟು ಮತ್ತು ಬಾಲಕಿಯರ ಶೈಕ್ಷಣಿಕ ನಷ್ಟ ಶೇಕಡ ೭೩.೬೫) ಎಂದು ಕಂಡುಹಿಡಿಯಲಾಯಿತು. ಇದೇ ರೀತಿ ೧೯೭೮-೭೯ರಿಂದ ೧೯೮೧ರವರೆಗಿನ ಶೈಕ್ಷಣಿಕ ನಷ್ಟ ಸುಮಾರು ೭೩.೭೭ ಇದ್ದಿತು. (ಬಾಲಕರು ಶೇಕಡ ೭೩.೮೪ ಬಾಲಕಿಯರು ಶೇಕಡ ೭೩.೬೫). ಇದೇ ರೀತಿ ೧೯೮೬ರಿಂದ ೧೯೯೨-೯೩ರವರೆಗಿನ ಶೈಕ್ಷಣಿಕ ನಷ್ಟ ಶೇಕಡ ೬೪.೪೯ರಷ್ಟಾಗಿದ್ದು (ಬಾಲಕರ ಶೈಕ್ಷಣಿಕ ನಷ್ಟ ಶೇಕಡ ೫೦.೫೨ರಷ್ಟು ಮತ್ತು ಬಾಲಕಿಯರ ಶೈಕ್ಷಣಿಕ ನಷ್ಟ ಶೇಕಡ ೫೭.೫೨) ಎಂದು ಕಂಡುಹಿಡಿಯಲಾಯಿತು.

ಐದನೇ ಪಂಚವಾರ್ಷಿಕ ಯೋಜನೆಯಿಂದಾಗಿ ಪ್ರೌಢಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಶೈಕ್ಷಣಿಕ ಗುಣಮಟ್ಟವನ್ನೇರಿಸುವ ಕಾರ್ಯಕ್ರಮಗಳಿಂದಾಗಿ ಹೆಚ್ಚು ಹಣ ವ್ಯವಸ್ಥೆಯಾಗುತ್ತಿದ್ದರೂ ಸಹ ಪ್ರೌಢಶಿಕ್ಷಣದ ಮಹತ್ವವನ್ನು ಅರಿಯದೆ ಮಕ್ಕಳನ್ನು ಬಾಲಕಾರ್ಮಿಕರಾಗಿ ಅಥವ ಗೃಹೋದ್ಯೋಗಿಗಳಾಗಿಯೂ ಪರಿವರ್ತಿಸುವ ಚಟುವಟಿಕೆಗಳು ಒಂದು ಕಡೆಯಾದರೆ ಮತ್ತೊಂದು ಕಡೆ ವೃತ್ತಿ ಶಿಕ್ಷಣಕ್ಕೆ ಆದ್ಯತೆ ಕೊಡುವ ಪೋಷಕರು ಮಕ್ಕಳು ಶಾಲೆಗಳನ್ನು ಬಿಡುವಂತೆ ಉತ್ತೇಜನ ನೀಡುವುದನ್ನು ಈ ಸನ್ನಿವೇಶದಲ್ಲಿ ನೋಡಬಹುದಾಗಿದೆ. ಪೋಷಕರು, ವಿದ್ಯಾರ್ಥಿಗಳು, ಉದ್ಯೋಗದಾರರು ಪ್ರೌಢ ಶಿಕ್ಷಣಕ್ಕೆ ಕೊಡುತ್ತಿರುವ ಮಹತ್ವವನ್ನು ಗುರುತಿಸುವುದು ಬಹುಮುಖ್ಯವಾದ ಅಂಶ. ಇದನ್ನು ಅರಿಯಬೇಕಾದರೆ ಉದ್ಯೋಗದಲ್ಲಿ ನಿರತರಾದವರ ಸಂಖ್ಯೆಯನ್ನು ನೋಡಬೇಕಾಗುವುದು. ಇದಕ್ಕೆ ಮಾಹಿತಿ ಒದಗಿಸುವ ವರದಿಗಳಲ್ಲಿ ಕಂಡು ಬರುವ ಅಂಶವೆಂದರೆ, ೧೯೫೫-೫೬ರಲ್ಲಿ ಶೇಕಡಾವಾರು ೭೬.೧ ಮಂದಿ ಉದ್ದಿಮೆಶೀಲರಾಗಿರುವವರಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರು ಇದ್ದರು. ೧೯೭೧ರ ವೇಳೆಗೆ ಕಂಡು ಬರುವ ಅಂಶವೇನೆಂದರೆ ಮೆಟ್ರಿಕ್ಯುಲೇಷನ್ ಅಥವಾ ಪ್ರೌಢಶಿಕ್ಷಣ ಮುಗಿಸಿದವರು ಉದ್ಯೋಗಸ್ಥರಾಗುವ ಸಂಭವ ಹೆಚ್ಚು.

ಇದೇ ರೀತಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಚ್ಚು ಜನಸಂಖ್ಯೆಯಲ್ಲಿ ಪ್ರೌಢಶಿಕ್ಷಣ ಪಡೆದವರು ತಮ್ಮ ಹೆಸರನ್ನು ನೊಂದಾಯಿಸುವುದೂ ಸಹ ಕಂಡು ಬಂದಿದೆ.

ಪ್ರೌಢಶಿಕ್ಷಣವು ಕರ್ನಾಟಕದಲ್ಲಿ ಪ್ರಗತಿಪಥದಲ್ಲಿದ್ದರೂ ಸಹ ಕೆಲವು ಅಂಶಗಳನ್ನು ಗಮನಿಸಬೇಕಾಗಿದೆ. ಪ್ರೌಢಶಾಲೆಗಳಲ್ಲಿ ಸಂಖ್ಯೆ ಹೆಚ್ಚುತ್ತಿದೆ. ಅದರಂತೆಯೇ ಶಾಲೆಗಳಲ್ಲಿ ನೊಂದಾಯಿಸಿ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಹೆಚ್ಚಿನಾಂಶ ಹೆಣ್ಣುಮಕ್ಕಳು ಭರ್ತಿಯಾಗದಿರುವುದು, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಪ್ರೌಢಶಿಕ್ಷಣ ಪಡೆಯುವುದರಲ್ಲಿ ಹೆಚ್ಚು ತಾರತಮ್ಯ ಕಂಡುಬರುತ್ತಿದೆ. ಇದಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಬಾಲಕ ಬಾಲಕಿಯರು ಸಾಕಷ್ಟು ಸಂಖ್ಯೆಯಲ್ಲಿ (ಮೊದಲಿಗಿಂತ)ಪ್ರೌಢಶಿಕ್ಷಣದಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ.

ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಯೋಗಿಸದೇ ಇರುವುದೂ ಸಹ ಕಂಡು ಬಂದಿದೆ. (ಡಾ. ಪ್ರಮೀಳಾ, ಡಾ.ಚಂದ್ರಶೇಖರ್) ಸಂವಿಧಾನದ ಕಾನೂನಿನಂತೆ ಎಲ್ಲರಿಗೂ ಸಮಾನ ಶಿಕ್ಷಣ. ಶಿಕ್ಷಣದ ಹಕ್ಕು ಇದ್ದರೂ ಸಹ ಪ್ರೌಢಶಿಕ್ಷಣದಲ್ಲಿ ಈ ವಿಷಯವನ್ನು ವಿಮರ್ಶಿಸಿ ನೋಡಿದಾಗ ಇನ್ನೂ ಹೆಚ್ಚು ಕಾರ್ಯಕ್ರಮಗಳು ಕೂಡಿ ಬರಬೇಕೆನಿಸುವುದು. ಇದಕ್ಕೆ ಕಾರಣ ಲಿಂಗ ಭೇದ, ಜಾತಿ ತಾರತಮ್ಯ, ವಿದ್ಯಾರ್ಥಿಗಳು ಶಿಕ್ಷಣ ಸವಲತ್ತುಗಳನ್ನು ಸಂಪೂರ್ಣವಾಗಿ ಪಡಯದೇ ಇರುವುದು, ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇರುವುದು, ಶಾಲೆ ಬಿಟ್ಟುಬಿಡುವಿಕೆ ಮತ್ತು ಶಾಲೆಗೆ ಭರ್ತಿಯಾಗದಿರುವಿಕೆ ಮತ್ತು ಪೂರ್ಣ ಶಿಕ್ಷಣ ಪಡೆದನಂತರ ಪರೀಕ್ಷೆಗೆ ಕುಳಿತುಕೊಳ್ಳದಿರುವಿಕೆ ಅಥವಾ ಪರೀಕ್ಷೆಗೆ ಕುಳಿತರೂ ಸಹ ತೇರ್ಗಡೆ ಆಗದಿರುವಿಕೆ. ಪ್ರೌಢಶಾಲಾ ಶಿಕ್ಷಣದಲ್ಲಿ ಪ್ರಗತಿ ಕುಂಠಿತವಾಗುತ್ತಿರಲು ಪ್ರೌಢಶಾಲೆಗಳಲ್ಲಿ ಉಪಾಧ್ಯಾಯರ ಕೊರತೆ, ಕಲಿಕೆಯಲ್ಲಿ ಅನುವಾಗುವಂತಹ ಸಲಕರಣೆ, ಪಠ್ಯಪುಸ್ತಕಗಳ ಕೊರತೆ, ಪಠ್ಯಕ್ರಮಗಳಲ್ಲಿ ಉಪಯೋಗಿಸುವ ಭಾಷೆಯಲ್ಲಿನ ತೊಡಕುಗಳು, ಶಾಲೆಗಳ ಕೊರತೆ ಮತ್ತು ಶಾಲೆಗಾಗಿ ಹೆಚ್ಚು ದೂರ ಹೋಗುವ ಸಮಸ್ಯೆಗಳು ಇವೇ ಮುಖ್ಯ ಕಾರಣಗಳು.

ಪ್ರೌಢಶಿಕ್ಷಣದಲ್ಲಿ ಖಾಸಗೀಶಾಲೆಗಳನ್ನೂ ನಡೆಸಲು ಸರ್ಕಾರ ಪ್ರೋತ್ಸಾಹಿಸುತ್ತಾ ಬಂದಿರುವುದರಿಂದ ಪ್ರೌಢಶಿ‌ಕ್ಷಣಕ್ಕಾಗಿ ಸರ್ಕಾರ ಅನುದಾನ ಕೊಡುತ್ತಿದೆ. ಇದಕ್ಕಾಗಿ ಗ್ರಾಂಟ್ – ಇನ್ – ಏಡ್  ಕೋಡ್ ತಯಾರಿಸಲಾಗಿದೆ. ಇದರಲ್ಲಿ ಹೆಚ್ಚು ಬದಲಾವಣೆ ಮಾಡಲಾಗಿದ್ದು ಇದರಿಂದಾಗಿ ಹೆಚ್ಚು ಉಪಯೋಗವಾಗುತ್ತಿದೆ. ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ತರಬೇತಿ ಕಾರ್ಯಕ್ರಮಗಳೂ ಸಹ ಹೊಂದಿದ್ದು ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಆದರೂ ಸಹ ಕೆಲವು ಶಾಲೆಗಳಲ್ಲಿ (ಅನುದಾನ ಪಡೆಯದ) ಶಿಕ್ಷಕರು ತರಬೇತಿ ಶಿಕ್ಷಣ ಪದವಿ (B.Ed.) ಪಡೆಯದವರಿದ್ದಾರೆ. ಪ್ರೌಢಶಿಕ್ಷಣದಲ್ಲಿ ಶಿಕ್ಷಕರ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಶಿಕ್ಷಕರ ತರಬೇತಿಯೇ ಎಂದು ಗುರುತಿಸಿ ಸೇವಾನಿರತ ಶಿಕ್ಷಕರಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ.

ಪ್ರೌಢಶಿಕ್ಷಣದಲ್ಲೂ ಸಹ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳಿಗೆ ವಸತಿ ಗೃಹಗಳನ್ನು, ಮೆಟ್ರಿಕ್ ಪೂರ್ವ ಸ್ಕಾಲರ್‌ಷಿಪ್, ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಷಿಪ್ ಮತ್ತು ಮೆರಿಟ್ ಸ್ಕಾಲರ್‌ಷಿಪ್, ಆಶ್ರಮ ಶಾಲೆಗಳು ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇವೆಲ್ಲ ಇದ್ದರೂ ಸಹ ಶಾಲೆಗಳ ಗುಣಮಟ್ಟ ಏರಿಸಲು ಸಕಲ ಪ್ರಯತ್ನಗಳೂ ನಡೆಯುತ್ತಿವೆ.

ಎಂಟನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ವಿಜ್ಞಾನ ಶಿಕ್ಷಣಕ್ಕೆ ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಗಮನ ನೀಡುತ್ತಿರುವ ವಿಷಯ ಗಮನಾರ್ಹ. ವಿದ್ಯಾರ್ಥಿಗಳ ಕಲಿಕೆಯ ಮಟ್ಟದಲ್ಲೂ ಸಹ ಹೆಚ್ಚಿನ ಬದಲಾವಣೆಯನ್ನು ನಡೆಸಲಾಗುವಂತಹ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ.