೧. ಪೀಠಿಕೆ

ಆರ್ಥಿಕ ಪ್ರಗತಿ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಯೋಜನೆಯ ಮುಖ್ಯ ಗುರಿ. ವ್ಯವಸಾಯ ಮತ್ತು ಇದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ದೇಶದಲ್ಲಿ ಸುಮಾರು ಶೇಕಡಾ ೭೦ರಷ್ಟು ಪ್ರಜೆಗಳು ನಿರತರಾಗಿದ್ದಾರೆ. ಇವರಲ್ಲಿ ಬಹುತೇಕ ಜನರು ಭೂಹಿಡುವಳಿ ಕಡಿಮೆಯಿರುವವರೂ, ಕೃಷಿ ಕಾರ್ಮಿಕರು ಆಗಿದ್ದಾರೆ. ಸುಮಾರು ಶೇಕಡಾ ೩೦ಕ್ಕೂ ಹೆಚ್ಚು ರಾಷ್ಟ್ರೀಯ ಆದಾಯ, ವ್ಯವಸಾಯ ಕ್ಷೇತ್ರದಿಂದ ಉತ್ಪತ್ತಿಯಾಗುತ್ತದೆ. ಜನರಿಗೆ ಉದ್ಯೋಗ ಮತ್ತು ಆದಾಯ ತರುವಲ್ಲಿ, ಗೃಹ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಹಿರಿದು. ರೇಷ್ಮೆ ಕೈಗಾರಿಕೆ ಹೆಚ್ಚು ಉಪಯುಕ್ತ ಹಾಗೂ ಲಾಭ ತರುವ ಉದ್ಯಮ. ಈ ಉದ್ಯಮವನ್ನು ಕರ್ನಾಟಕದಲ್ಲಿ ಸುಮಾರು ಎರಡು ಲಕ್ಷಕ್ಕು ಹೆಚ್ಚು ಮಂದಿ ರೈತರು ಅವಲಂಬಿಸಿದ್ದಾರೆ. ಪರೋಕ್ಷವಾಗಿ ಸುಮಾರು ಇಪ್ಪತ್ತು ಲಕ್ಷ ಜನರು ಉದ್ಯಮದ ಹಲವಾರು ಅಂಗಗಳಲ್ಲಿ ಉದ್ಯೋಗ ನಿರತರಾಗಿದ್ದಾರೆ. ಈ ಉದ್ಯಮವು, ವ್ಯವಸಾಯವನ್ನೇ ಅವಲಂಬಿಸಿರುವ ರೈತರಿಗೆ ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆ, ಹುರಿ ಮಾಡುವಿಕೆ, ನೇಯ್ಗೆ ಉದ್ಯಮಗಳಲ್ಲಿ ತೊಡಗಿರುವ ಕುಟುಂಬಗಳ ಪ್ರಗತಿಯಲ್ಲಿ ಗಣನೀಯ ಪಾತ್ರವನ್ನು ವಹಿಸಿದೆ.

ಪ್ರಪಂಚದಲ್ಲಿ ಆಗುತ್ತಿರುವ ರೇಷ್ಮೆ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಚೀನಾ ದೇಶಕ್ಕೆ ಮೊದಲ ಸ್ಥಾನವಿದೆ. ಪ್ರಪಂಚದಲ್ಲಿ ಪ್ರಕೃತಿದತ್ತವಾಗಿ ದೊರಕುವ ನಾಲ್ಕು ರೀತಿಯ ರೇಷ್ಮೆಯ ನೂಲನ್ನೂ ಉತ್ಪಾದಿಸುವುದು ಭಾರತ ಒಂದರಲ್ಲೇಲ. ಅವುಗಳು, ಹಿಪ್ಪುನೆರಳೆ (Mulberry), ಟಸ್ಸಾರ್ (Tassar), ಎರಿ (Eri) ಮತ್ತು ಮೂಗ (Muga) ರೇಷ್ಮೆ. ಅವುಗಳಲ್ಲಿ ಹಿಪ್ಪುನೇರಳೆ ನೂಲಿನ ಉತ್ಪಾದನೆ ಅತಿ ಹೆಚ್ಚು (ಶೇ. ೯೩). ಹಿಪ್ಪುನೇರಳೆ ಬೇಸಾಯ ಲಾಭದಾಯಕವಾಗಿದ್ದು ದೇಶದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ರಾಜ್ಯಗಳಲ್ಲೊಂದಾದ ಜಮ್ಮು ಕಾಶ್ಮೀರದಲ್ಲಿ ಮತ್ತು ಪೂರ್ವ ರಾಜ್ಯಗಳೊಂದಾದ ಪಶ್ಚಿಮಬಂಗಾಳಕ್ಕೆ ಸೀಮಿತವಾಗಿದೆ. ದೇಶದಲ್ಲಿ ಉತ್ಪನ್ನವಾಗುವ ರೇಷ್ಮೆಯಲ್ಲಿ, ಕರ್ನಾಟಕದ ಕೊಡುಗೆ ಶೇಕಡಾ ೬೦ರಷ್ಟು ಇದೆ. ಇತ್ತೀಚಿನ ವರ್ಷಗಳಲ್ಲಿ, ದೇಶದ ಬೇರೆ ರಾಜ್ಯಗಳಲ್ಲೂ ಸಹ, ಹಿಪ್ಪುನೇರಳೆ ವ್ಯವಸಾಯವನ್ನು ಮಾಡುವುದಕ್ಕೆ ಪ್ರೋತ್ಸಾಹ ಕೊಡಲಾಗುತ್ತಿದೆ.

೧೯೯೨-೯೩ನೇ ಸಾಲಿನಲ್ಲಿ, ದೇಶದಲ್ಲಿ ಸುಮಾರು ೫೯,೦೦೦ ಹಳ್ಳಿಗಳಲ್ಲಿ ೩.೪೫ ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆ ಆವೃತ್ತವಾಗಿತ್ತು. ಸುಮಾರು ೫೯ ಲಕ್ಷಕ್ಕೂ ಹೆಚ್ಚು ಜನರು ಈ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಇವರಲ್ಲಿ ಶೇಕಡಾ ೪೦ರಷ್ಟು ಜನರು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ.

ಹಿಪ್ಪುನೇರಳೆ ಬೇಸಾಯ ಮತ್ತು ಇದನ್ನು ಅವಲಂಬಿಸಿರುವ ಕೈಗಾರಿಕೆ – ಹೆಚ್ಚು ಶ್ರಮದಾಯಕ, ವಿವಿಧ ಹಂತಗಳುಳ್ಳ ಒಂದು ಉದ್ಯಮ. ಅವುಗಳು ಹಿಪ್ಪುನೇರಳೆ ಬೇಸಾಯ ಮತ್ತು ರೇಷ್ಮೆ ಹುಳು ಸಾಕಾಣಿಕೆ, ನೂಲು ಬಿಚ್ಚುವುದು, ಹುರಿ ಮಾಡುವಿಕೆ, ನೇಯ್ಗೆ. ಈ ವಿವಿಧ ಹಂತಗಳಲ್ಲಿ ದೊರಕುವ ಉಪ ಉತ್ಪನ್ನಗಳು ಗೃಹ ಕೈಗಾರಿಕೆಗಳ ವೃದ್ಧಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ ಮೊದಲನೆಯ ಎರಡು ಹಂತಗಳು ಭೂ ಚಟುವಟಿಕೆಗಳಾಗಿದ್ದು ರೈತರು ನಿರತರಾಗಿದ್ದು, ಇತರೆ ಹಂತಗಳಲ್ಲಿ ಭೂರಹಿತ ಕಾರ್ಮಿಕರೂ ಮತ್ತು ಕುಶಲಕರ್ಮಿಗಳು ನಿರತರಾಗಿದ್ದು, ಅವರಿಗೆ ಈ ಉದ್ಯಮ ಒಂದು ಜೀವನಾಧಾರವಾಗಿದೆ.

ಸುಮಾರು, ೧೯೭೦ನೇ ಸಾಲಿನಿಂದ ಈಚೆಗೆ ರೇಷ್ಮೆ ಉತ್ಪಾದನೆಯಲ್ಲಿ ಜಪಾನ್ ದೇಶಕ್ಕೆ ಇದ್ದ ಸ್ವಾಮ್ಯ, ಇಳಿಮುಖವಾಗಿದ್ದು, ಭಾರತಕ್ಕೆ ಎರಡನೇ ಸ್ಥಾನ ಒದಗಿದೆ. ಪ್ರಪಂಚದ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೧೬. ಸದ್ಯದಲ್ಲಿ ಸುಮಾರು ೧೩,೦೦೦ ಟನ್ನುಗಳು, ದೇಶದಲ್ಲಿ ರೇಷ್ಮೆ ಉತ್ಪತ್ತಿ ಆಗುತ್ತಿದ್ದು, ಇದರ ಜೊತೆಗೆ ಸುಮಾರು ೫,೦೦೦ ಟನ್ನುಗಳಷ್ಟು ರೇಷ್ಮೆಯನ್ನು ಅಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಂತರಿಕ ಬೇಡಿಕೆಯು ಹೆಚ್ಚಾಗುತ್ತಿದ್ದು. ಸಾಕಷ್ಟು ಅಂತರರಾಷ್ಟ್ರೀಯ ಬೇಡಿಕೆಯೂ ಸಹ ಹೆಚ್ಚುತ್ತಿರುವುದು ಗಮನಾರ್ಹ. ದೇಶದಲ್ಲಿ ಸುಮಾರು ೧, ೮೨, ೦೦೦ ಕೈಮಗ್ಗಗಳು ಮತ್ತು ೩೧,೦೦೦ ವಿದ್ಯುತ್ ಆಧಾರಿತ ಮಗ್ಗಗಳು, ವಿವಿಧ ರೀತಿಯ ವಸ್ತ್ರಗಳ ನೇಯ್ಗೆಯಲ್ಲಿ ತೊಡಗಿವೆ. ಇದರಲ್ಲಿ ಶೇಕಡಾ ೮೫ರಷ್ಟು ಒಟ್ಟು ರೇಷ್ಮೆ ಉತ್ಪಾದನೆ – ಸೀರೆಗಳ ತಯಾರಿಕೆಗೆ ಮೀಸಲಾಗಿದೆ. ಕರ್ನಾಟಕ ರೇಷ್ಮೆ ಉದ್ಯಮ ೧೯೯೨-೯೩ನೇ ಸಾಲಿನಲ್ಲಿ ೧೬೪೦ ದಶಲಕ್ಷ ರೂಪಾಯಿಗಳನ್ನು ವಿದೇಶೀ ವಿನಿಮಯಗೊಳಿಸಿದೆ. ಭಾರತದಿಂದ ರಫ್ತಾದ ರೇಷ್ಮೆ ವಸ್ತುಗಳ ಒಟ್ಟು ಮೌಲ್ಯದಲ್ಲಿ ಕರ್ನಾಟಕ ರಾಜ್ಯದ ರೇಷ್ಮೆ ವಸ್ತುಗಳ ಮೌಲ್ಯ ಶೇಕಡಾ ೨೨ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಿಂದ, ರಫ್ತಾಗುವ ರೇಷ್ಮೆ ವಸ್ತುಗಳು ಸಿದ್ಧ ಉಡುಪುಗಳಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ಪಡೆದಿದೆ.

೨. ಕರ್ನಾಟಕದಲ್ಲಿ ರೇಷ್ಮೆ ಕೃಷಿ

ಕರ್ನಾಟಕ ರಾಜ್ಯದ ವಿಸ್ತೀರ್ಣ ಸುಮಾರು ೧.೯೧ ಲಕ್ಷ ಚದುರ ಕಿಲೋ ಮೀಟರುಗಳಿದ್ದು, ರಾಜ್ಯದಲ್ಲಿ ೪೪.೮ ದಶಲಕ್ಷ ಜನವಾಸಿಸುತ್ತಿದ್ದಾರೆ. ರಾಜ್ಯದ ಭೂಪ್ರದೇಶದಲ್ಲಿ ೧೨೦ ಲಕ್ಷ ಹೆಕ್ಟೇರು ಪ್ರದೇಶ, ಸಾಗುವಳಿಗೆ ಯೋಗ್ಯವಾಗಿದ್ದು, ಈಗಾಗಲೇ ೧೦೫ ಲಕ್ಷ ಹೆಕ್ಟೇರುಗಳಲ್ಲಿ, ಸಾಗುವಳಿ ಆಗುತ್ತಿದೆ. ಇದರಲ್ಲಿ ೨೮ ಲಕ್ಷ ಹೆಕ್ಟೇರು ಪ್ರದೇಶದಲ್ಲಿ ನೀರಾವರಿ ಬಳಕೆಯಲ್ಲಿದ್ದು, ಉಳಿದ ಸಾಗುವಳಿ ಪ್ರದೇಶ ಮಳೆ ಆಧಾರಿತವಾಗಿದೆ. ಸಾಗುವಳಿ ಆಗುತ್ತಿರುವ ಹಾಲೀ ೧೦೫ ಲಕ್ಷ ಹೆಕ್ಟೇರುಗಳಲ್ಲಿ, ಅರ್ಧದಷ್ಟು ಕ್ಷೇತ್ರದಲ್ಲಿ ಆಹಾರ ಪೂರಕವಾದ ಬೆಳೆಗಳನ್ನು ಬೆಳೆಯುತ್ತಿದ್ದು ಇನ್ನುಳಿದ ಅರ್ಧ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಗಳನ್ನು ಉತ್ಪಾದಿಸಿದೆ.  ಇದರಲ್ಲಿ ಹೆಪ್ಪುನೇರಳೆ ಬೇಸಾಯ ಒಂದು ಅತಿ ಪ್ರಮುಖವಾದ ಬೆಳೆಯಾಗಿದ್ದು, ಅಧಿಕವಾಗಿ ರಾಜ್ಯದ ದಕ್ಷಿಣಕ್ಕೆ ಇರುವ ಜಿಲ್ಲೆಗಳಿಗೆ ಸೀಮಿತವಾಗಿದೆ. ಕರ್ನಾಟಕದಲ್ಲಿ ಹಿಪ್ಪುನೇರಳೆ ಬೇಸಾಯ ಮತ್ತು ರೇಷ್ಮೆ ಕೈಗಾರಿಕೆಗೆ ಸುಮಾರು ೨೦೦ ವರ್ಷಗಳ ಇತಿಹಾಸವಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ – ಸುಮಾರು ೧೭೮೦ ನೇ ಇಸ್ವಿಯಲ್ಲಿ ಆಗಿನ ಆಳ್ವಿಕೆಯಲ್ಲಿದ್ದ ಟಿಪ್ಪುಸುಲ್ತಾನ್ ಕರ್ನಾಟಕದಲ್ಲಿ ಮೊದಲಿಗೆ ಹಿಪ್ಪುನೇರಳೆ ಬೇಸಾಯ ಮತ್ತು ರೇಷ್ಮೆ ಕೈಗಾರಿಕೆಯನ್ನು ಪ್ರಾರಂಭಿಸಲು ಅನುಕೂಲಗಳನ್ನು ಮಾಡಿಕೊಟ್ಟರು. ಅನಂತರ ಆಗಿನ ಮೈಸೂರು ರಾಜ್ಯದ ರಾಜರಾಳ್ವಿಕೆಯಲ್ಲಿ ರೇಷ್ಮೆ ಕೃಷಿ ಮತ್ತು ಉದ್ಯೋಗಕ್ಕೆ ಪೂರಕವಾದ ಉತ್ತೇಜನ ದೊರಕಿತು. ಅಂದಿನಿಂದ ಇಂದಿನವರೆಗೂ, ಕೆಲವು ಜಿಲ್ಲೆಗಳ ರೈತರಿಗೆ, ಭೂ ಕಾರ್ಮಿಕರಿಗೆ ಈ ಉದ್ಯಮ ಜೀವನಾಧಾರವಾಗಿದೆ.

ಭಾರತ ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ರೇಷ್ಮೆಯಲ್ಲಿ ಶೇಕಡಾ ೬೦ ರಷ್ಟು ಉತ್ಪಾದನೆ ಕರ್ನಾಟಕದ ರಾಜ್ಯದಲ್ಲಿ ಆಗುತ್ತಿದ್ದು, ದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಹಿಪ್ಪುನೇರಳೆ ಬೇಸಾಯಕ್ಕೆ ಹಾಗೂ ರೇಷ್ಮೆ ನೂಲಿನ ಉತ್ಪಾದನೆಗೆ ತಕ್ಕ ವಾಯುಗುಣ, ಪರಿಸರ ಇರುವುದು ಒಂದು ಗಣನೀಯ ಅಂಶ. ಈ ಉದ್ಯಮ ಇಷ್ಟೊಂದು ಪ್ರಾಮುಖ್ಯತೆ ಹೊಂದಲು, ಉತ್ತೇಜಕ ಪೂರಕವಾದ ಅಂಶಗಳೆಂದರೆ ಈ ಉದ್ಯಮವನ್ನು ಪ್ರಾರಂಭಿಸಲು ಮತ್ತು ಮುಂದುವರಿಸಿ ಕೊಂಡು ಹೋಗಲು, ಜನರ ಆಸಕ್ತಿ, ಮಿಗಿಲಾಗಿ, ಇದರಲ್ಲಿ ಪ್ರಾರಂಭದಲ್ಲಿ ತೊಡಗಿಸಬಹುದಾದ ಹಣ ಅತೀ ಕಡಿಮೆಯಾಗಿದ್ದು – ಎರಡು ತಿಂಗಳುಗಳಿಗೊಮ್ಮೆ ವರ್ಷದಲ್ಲಿ ಐದರಿಂದ ಆರು ಬಾರಿ ಆದಾಯ ಬರುತ್ತದೆ. ಇದರಿಂದ ಬರುವ ಆದಾಯ ಇನ್ನಿತರೇ ಬೆಳೆಗಳ ವ್ಯವಸಾಯದಿಂದ ಬರುವ ಆದಾಯಕ್ಕಿಂತ ಅಧಿಕವಾಗಿರುತ್ತದೆ. ಅತೀ ಕಡಿಮೆ ನೀರಾವರಿ ಸೌಕರ್ಯವಿದ್ದರೂ ಸಹ, ರೇಷ್ಮೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬಹುದಾದ ಕಾರಣ ರೈತರು ಆಸಕ್ತಿಯಿಂದ ತಮ್ಮನ್ನು ಈ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ೧೯೯೩-೯೪ನೇ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಹಿಪ್ಪುನೇರಳೆ ವಿಸ್ತೀರ್ಣ, ಸುಮಾರು ೧.೬೧ ಲಕ್ಷ ಹೆಕ್ಟೇರು ಇದ್ದು, ಇದರಲ್ಲಿ ಶೇಕಡಾ ೬೦ರಷ್ಟು ವಿಸ್ತೀರ್ಣ, ನೀರಾವರಿ ಸೌಲಭ್ಯವನ್ನು ಒಳಗೊಂಡಿದ್ದು, ಉಳಿದ ವಿಸ್ತೀರ್ಣ ಮಳೆ ಆಧಾರವಾಗಿದೆ. ರಾಜ್ಯದ ೧೮,೦೦೦ ಹಳ್ಳಿಗಳಲ್ಲಿರುವ ೨.೬೪ ಲಕ್ಷ ಕುಟುಂಬಗಳು ಇದನ್ನು ಅವಲಂಬಿಸಿದ್ದಾರೆ. ಇದಲ್ಲದೆ, ಉತ್ಪತ್ತಿಯದ ರೇಷ್ಮೆ ಗೂಡನ್ನು ಸಂಸ್ಕರಣ ಮಾಡುವುದು ನೂಲು ತೆಗೆಯುವುದು, ರೇಷ್ಮೆ ಹುರಿ ಮಾಡುವುದು, ನೇಯ್ಗೆ, ಸಿದ್ಧ ಉಡುಪುಗಳು ತಯಾರಿಕೆ, ಸ್ಪನ್ ಸಿಲ್ಕ್ ಸಂಸ್ಕರಣ, ಮುಂತಾದ ಅನೇಕ ವಿವಿಧ ಹಂತಗಳಲ್ಲಿ ಒದಗುವ ಉದ್ಯೋಗಗಳಲ್ಲಿ ರಾಜ್ಯದ ಜನರ ಪಾತ್ರ ಗಣನೀಯ.

೩. ರೇಷ್ಮೆ ಕೃಷಿಯಲ್ಲಿ ಆದ ಪ್ರಗತಿ

ಹಿಂದೆ ಉಲ್ಲೇಖಿಸಿದಂತೆ ರಾಜ್ಯದಲ್ಲಿ, ಈ ಉದ್ಯಮ ಸುಮಾರು ೨೦೦ ವರ್ಷಗಳ ಹಿಂದೆಯೇ ಪ್ರಾರಂಭವಾದರೂ ಸಹ ಸ್ವಾತಂತ್ಯ್ರಾನಂತರ ಕಳೆದ ನಾಲ್ಕು ದಶಕಗಳಲ್ಲಿ ಆದ ಅಭಿವೃದ್ಧಿ ಬಹಳ ಪ್ರಾಮುಖ್ಯತೆ ಹೊಂದಿದೆ.

ರಾಜ್ಯದಲ್ಲಿ ರೇಷ್ಮೆ ಉತ್ಪಾದನೆ ಮೊದಲನೆ ಪಂಚವಾರ್ಷಿಕ ಯೋಜನೆಯ ಕೊನೆಯಲ್ಲಿ, ಅಂದರೆ ೧೯೫೬ನೇ ವರ್ಷದಲ್ಲಿ ಸುಮಾರು ೭೨೬ ಟನ್ ಇದ್ದು ಕಳೆದ ವರ್ಷದಲ್ಲಿ (೧೯೯೩-೯೪ರಲ್ಲಿ), ಸುಮಾರು ೮೨೫೦ ಟನ್ ಉತ್ಪನ್ನ ಮಾಡಿದೆ. ಈ ದಿಸೆಯಲ್ಲಿ ಹಿಪ್ಪುನೇರಳೆ ಬೇಸಾಯದಲ್ಲಿ ಗಣನೀಯ ಅಂಶಗಳು ಉತ್ತೇಜನ ಪೂರಕವಾಗಿದ್ದು ಮುಖ್ಯವಾಗಿ ಉತ್ಪಾದನೆಯಾದ ರೇಷ್ಮೆಗೂಡಿನ ಗುಣಮಟ್ಟದಲ್ಲಿ ಆದ ಬದಲಾವಣೆ. ಪ್ರಾರಂಭದಲ್ಲಿ ಹಿಪ್ಪುನೇರಳೆ ಬೇಸಾಯ ಪೂರ್ಣವಾಗಿ ಮಳೆಯ ಆಶ್ರಮದಲ್ಲಿದ್ದು ಸಾಮಾನ್ಯ ಮಿಶ್ರ ತಳಿಯ ರೇಷ್ಮೆ  ಹುಳುವಿನ ಸಾಕಾಣಿಕೆಗೆ ಸೀಮಿತವಾಗಿತ್ತು ಉತ್ಪಾದನೆಯಾದ ಗೂಡಿನ ಗುಣಮಟ್ಟವೂ ಸಹ ಕಡಿಮೆ ಇದ್ದು, ಕಚ್ಚಾ ರೇಷ್ಮೆ ಉತ್ಪಾದನೆ ಸಹ ಅದೇ ರೀತಿಯಾಗಿದ್ದು ಒಂದು ಕಿಲೋ ಗ್ರಾಂ ರೇಷ್ಮೆ ನೂಲಿನ ಉತ್ಪಾದನೆಗೆ ಸುಮಾರು ೧೬ ಕಿಲೋಗ್ರಾಮ್ ಬೇಕಿದ್ದಿತು. ಒಂದು ಹೆಕ್ಟೇರ್ ಹಿಪ್ಪುನೇರಳೆ ಪ್ರದೇಶದಲ್ಲಿ ರೇಷ್ಮೆ ನೂಲಿನ ಇಳುವರಿ ೨೫ ಕಿಲೋಗ್ರಾಮ್ ಇದ್ದು ೧೯೯೩-೯೪ರ ವೇಳೆಗೆ ೫೨ ಕಿಲೋಗ್ರಾಮ್ ಮಟ್ಟವನ್ನು ತಲುಪಿದೆ. ಈ ಅವಧಿಯಲ್ಲಿ ವಿವಿಧ ಯೋಜನೆಯಡಿಯಲ್ಲಿ ಕೈಗೊಂಡ ಅಭಿವೃದ್ಧಿ, ಕಾರ್ಯಕ್ರಮಗಳು, ಅವುಗಳ ಅನುಷ್ಠಾನ, ಇವುಗಳಿಗೆ ಜನರ ಸ್ಪಂದನೆ-ಗಮನೀಯವಾದುದು. ಅವುಗಳು ಮುಖ್ಯವಾಗಿ ಬೇಸಾಯದಲ್ಲಿ ಸುಧಾರಿತ ತಳಿಗಳ ಅಳವಡಿಣೆ, ಸುಧಾರಿತ ಮಿಶ್ರ ತಳಿಗಳ ಹುಳುವಿನ ಸಾಕಾಣಿಕೆ, ಮುಖ್ಯವಾದ ಅಂಶಗಳು. ಇದಕ್ಕೆ ಪೂರಕವಾಗಿ ಹಿಪ್ಪುನೇರಳೆ ಬೇಸಾಯವನ್ನು ನೀರಾವರಿ ಕ್ಷೇತ್ರಕ್ಕೆ ಅಳವಡಿಸಿದ್ದು, ಅಭಿವೃದ್ಧಿ ದಿಸೆಯಲ್ಲಿ ಆದ ಒಂದು ತೀವ್ರಕ್ರಮ. ಈ ಯೋಜನೆ ಕಾರ್ಯಗತವಾಗುವುದರಲ್ಲಿ ವಿವಿಧ ಯೋಜನೆಯ ಅಡಿಯಲ್ಲಿ ಸಂಘ ಸಂಸ್ಥೆಗಳು, ಬ್ಯಾಂಕುಗಳು ರೈತರಿಗೆ ಬೇಕಾದ ಧನಸಹಾಯವನ್ನು ಒದಿಗುಸುವುದರಲ್ಲಿ ಕ್ರಿಯಾತ್ಮಕವಾಗಿ ಸಹಕರಿಸಿದವು.

೪. ಮಾರುಕಟ್ಟೆಯ ವ್ಯವಸ್ಥೆ

ರೈತರು ಉತ್ಪಾದನೆ ಮಾಡುತ್ತಿದ್ದ ಗೂಡನ್ನು ಮಾರಲು ಅನುಕೂಲವಾದ ಸೌಲಭ್ಯಗಳು ಇಲ್ಲದೇ ರೈತರು ಮಧ್ಯವರ್ತಿ ಜನರಿಂದ ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿದ್ದರು. ಇದರಲ್ಲಿ ಮುಖ್ಯವಾಗಿ, ರೇಷ್ಮೆಗೂಡಿನ ಬೆಲೆಯನ್ನು ಗೊತ್ತುಪಡಿಸಲು ರಹಸ್ಯ ಕ್ರಮವನ್ನು ಅನುಸರಿಸುವುದು, ತೂಕದಲ್ಲಿ ಮೋಸ, ಸೋಡಿ ಪಡೆಯುವುದು, ವಿಳಂಬ ಹಣಪಾವತಿ, ದಳ್ಳಾಳಿಗಳ ನಡುವಳಿಕೆಗಳು ಮುಖ್ಯವಾಗಿದ್ದು, ರೈತರ ಅಭಿವೃದ್ಧಿಗೆ ಮಾರಕವಾಗಿತ್ತು. ಈ ಪ್ರವೃತ್ತಿಯನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಲು ಸರ್ಕಾರ ಬದ್ಧವಾಗಿ ೧೯೫೯ನೇ ಇಸವಿಯಲ್ಲಿ ‘ಮಾರುಕಟ್ಟೆ ಆಧಿನಿಯಮಗಳು’ ಎಂಬ ಸುತ್ತೋಲೆಯನ್ನು ಹೊರಡಿಸಿತು. ಈ ನಿಯಮವನ್ನು ಅನುಷ್ಠಾನಗೊಳಿಸುವುದರ ಮೂಲಕ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ, ರೇಷ್ಮೆ ಗೂಡನ್ನು ಬೆಳೆದ ರೈತರು ಮತ್ತು ಗೂಡು ಖರೀದಿಸುವವರು (ನೂಲು ಬಿಚ್ಚುವವರು) ನೇರವಾಗಿ ಬೆಲೆಯ ನಿರ್ಧಾರವನ್ನು ಕೈಗೊಳ್ಳುವ ವ್ಯವಸ್ಥೆ, ಸರಿಯಾದ ತೂಕ, ಉತ್ಪನ್ನಕ್ಕೆ ಆದ ಒಟ್ಟು ಮೌಲ್ಯವನ್ನು ರೈತರಿಗೆ ನೇರವಾಗಿ ಮಾರಾಟದ ದಿನವೇ ಪಾವತಿ ಮಾಡುವ ವ್ಯವಸ್ಥೆ, ಕೆಲವು ಗಣನೀಯ ಅಂಶಗಳು. ಆದರೆ ಇದನ್ನು ಅನುಷ್ಟಾನಗೊಳಿಸಿ ಕಾರ್ಯರೂಪಕ್ಕೆ ತರಲು ಮಾರುಕಟ್ಟೆಗಳ ಅಭಾವ, ಇದ್ದ ಕೆಲವೇ ಮಾರುಕಟ್ಟೆಯ ನಿಯಮಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಅವಕಾಶವಾಗಲಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಗೂಡಿನ ಉತ್ಪಾದನೆ ಆಗುತ್ತಿದ್ದರೂ ಸಹ, ನೂಲು ಬಿಚ್ಚುವುವರಿಗೆ ಸಕಾಲದಲ್ಲಿ ಸಿಗದೆ, ದಳ್ಳಾಳಿಗಳಿಗೆ ಹೆಚ್ಚು ಬೆಲೆ ತರಬೇಕಾಗಿತ್ತು.

೫. ೧೯೮೦ರ ದಶಕದಲ್ಲಿ ಆದ ಬದಲಾವಣೆ

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ರೇಷ್ಮೆ ಗೂಡು ಮತ್ತು ನೂಲಿನ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಣೆ ಆದರೂ ಸಹ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯದ ರೇಷ್ಮೆ ನೂಲಿಗೆ ಗಣನೀಯ ಬೇಡಿಕೆ ಬರಲಿಲ್ಲ. ಈ ದಿಸೆಯಲ್ಲಿ ರಾಜ್ಯದಲ್ಲಿ, ಹೆಚ್ಚು ಇಳುವರಿ ಕೊಡುವ ಬೈವೋಲ್ಪೈನ್ ಸಂಕೀರ್ಣ ತಳಿಗಳ ಹುಳು ಸಾಕಾಣಿಕೆ ಅನಿವಾರ್ಯವಾಯಿತು. ಆವರೆವಿಗೂ ಹೊರಡಿಸಿದ್ದ ಕಾಯಿದೆಗಳು, ನಿಯಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ನಿರ್ಧಾರ ಮಾಡಿತು.

ಇದನ್ನು ಕಾರ್ಯರೂಪಕ್ಕೆ ತರಲು ವಿವಿಧ ಸವಲತ್ತುಗಳನ್ನು ಅಭಿವೃದ್ಧಿ ಹೊಂದಿಸುವುದು ಅನಿವಾರ್ಯವಾಯಿತು. ಇದರ ಸಲುವಾಗಿ, ಒಂದು ಯೋಜನೆಯನ್ನು ತಯಾರಿಸಿ ವಿಶ್ವ ಬ್ಯಾಂಕ್ ನೆರವಿನಿಂದ ಅದನ್ನು ೧೯೮೦-೮೭ರವರೆಗೆ ಜಾರಿಗೊಳಿಸಿತು. ಈ ಅವಧಿಯಲ್ಲಿ ಸುಮಾರು ೧೦೧ ಕೋಟಿ ರೂಪಾಯಿಗಳನ್ನು ತೊಡಗಿಸಲಾಯಿತು. ಈ ಯೋಜನೆ ಅಡಿಯಲ್ಲಿ ರೇಷ್ಮೆ ನೂಲಿನ ಉತ್ಪಾದನೆಯನ್ನು ೧೬೦೦ ಟನ್ನು ಹೆಚ್ಚಿಸುವುದು, ಸುಮಾರು ೧೮,೦೦೦ ಹೆಕ್ಟೇರಿನಲ್ಲಿ ಹಿಪ್ಪುನೇರಳೆ ಬೇಸಾಯಕ್ಕೆ ಅಳವಡಿಸುವುದು ಮುಖ್ಯ ಉದ್ದೇಶ. ಈ ಉದ್ದೇಶಗಳನ್ನು ಸಾಧಿಸಲು ಉನ್ನತ ಗುಣಮಟ್ಟದ ಹೆಚ್ಚು ಇಳುವರಿ ಮೊಟ್ಟೆ ತಯಾರಿಕೆ, ವಿತರಣೆ, ರೈತರಿಗೆ ಬೇಕಾದ ತರಬೇತಿ, ತಾಂತ್ರಿಕ ಸೇವಾ ಸೌಲಭ್ಯಗಳನ್ನು ಒದಗಿಸುವುದು. ವ್ಯವಸಾಯದಲ್ಲಿ ಮತ್ತು ಹುಳು ಸಾಕಾಣಿಕೆಯಲ್ಲಿ ಆಧುನಿಕ ರೀತಿಯ ತಂತ್ರಜ್ಞಾನಗಳ ಅಳವಡಿಕೆ, ಮಾರುಕಟ್ಟೆಯ ಅಭಿವೃದ್ಧಿ ನೂತನ ಮಾರುಕಟ್ಟೆಗಳ ನಿರ್ಮಾಣ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.

ರೇಷ್ಮೆಗೂಡಿನ ಉತ್ಪಾದನೆಯು ೧೯೭೯-೮೦ರಲ್ಲಿ ೩೬, ೨೪೮ ಟನ್ನುಗಳಿದ್ದು, ೧೯೮೭-೮೮ರ ವೇಳೆಗೆ ೪೭, ೨೧೯ ಟನ್ನುಗಳಾಯಿತು. ಇದೇ ಅವಧಿಯಲ್ಲಿ ೨, ೬೯೯ ಟನ್ನುಗಳಿಂದ ೪, ೯೭೦ ಟನ್ನುಗಳು ಕಚ್ಚಾ ರೇಷ್ಮೆ ಉತ್ಪಾದನೆ ರಾಜ್ಯದಲ್ಲಿ ಆಗಿ  ೧೫ ಇದ್ದ ರೆಂಡೀಟಾ ೧೨ಕ್ಕೆ ಇಳಿಯಿತು.

ಈ ಅವಧಿಯಲ್ಲಿ ಮಾರುಕಟ್ಟೆಯ ನಿರ್ವಹಣೆಯಲ್ಲಿ ಅನುಸರಿಸಿದ ಕ್ರಮಗಳು, ರೈತರಿಗೂ ಮತ್ತು ನೂಲು ಬಿಚ್ಚುವವರಿಗೂ ನೇರ ಸಂಪರ್ಕ ಕಲ್ಪಿಸಿ ರೈತರು ಉತ್ಪಾದಿಸಿದ ಗೂಡಿಗೂ ಸರಿಯಾದ ಬೆಲೆ ಹಣ ಪಾವತಿ ಮತ್ತು ಪ್ರತಿ ನಿತ್ಯವೂ ಮಾರುಕಟ್ಟೆಗೆ ಬರುವ ರೇಷ್ಮೆಗೂಡು, ನುಲು ಬಿಚ್ಚುವವರ ಅಗತ್ಯತೆಯನ್ನು ಪೂರೈಸಲು ಅನುವು ಮಾಡಿಕೊಟ್ಟಿತು.

ಈ ಯೋಜನೆಯ ಅವಧಿಯ ಏಳು ವರ್ಷಗಳಲ್ಲಿ ಗಣನೀಯ ಅಭಿವೃದ್ಧಿ ಆದರೂ ಸಹ, ಕೆಲವು ಅಂಶಗಳಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರಕಲಿಲ್ಲ. ಅವು. ಬೈವೋಲ್ಟ್‌ನ್‌ ರೇಷ್ಮೆಯಲ್ಲಿನ ಕುಂಠಿತ ಉತ್ಪಾದನೆ. ಇದಕ್ಕೆ ಅನೇಕ ಕಾರಣಗಳುಂಟು. ಉದಾಹರಣೆಗೆ, ಬ್ವೆವೋಲ್ಟ್‌ನ್ ಹುಳು ಸಾಕಾಣಿಕೆಗೆ ವರ್ಷದ ಎಲ್ಲಾ ಕಾಲದಲ್ಲಿಯೂ ದೊರೆಯದ ಅನುಕೂಲಕರ ವಾತವಾರಣ, ರೈತರ ಪರಿಶ್ರಮ ಮತ್ತು ವಿಸ್ತರಣಾ ಸಿಬ್ಬಂದಿಗಳಲ್ಲಿದ್ದ ತಾಂತ್ರಿಕ ಮಟ್ಟ ಬಹುತೇಕವಾಗಿ ಕಾರಣವಾಯಿತು.

ಈ ಅವಧಿಯಲ್ಲಿ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ಸುಮಾರು ರೈತರು ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡರು. ಪ್ರಾರಂಭದ ವರ್ಷಗಳಲ್ಲಿ, ಈ ಉದ್ಯಮದಲ್ಲಿ ಸಫಲತೆಯನ್ನು ಕಂಡರೂ ನಂತರದ ಸಾಲಿನಲ್ಲಿ ಅದೇ ರೀತಿಯ ಫಲವನ್ನು ರೈತರು ಪಡೆಯಲಾಗಲಿಲ್ಲ. ಇದಕ್ಕೆ ಮೂಲ ಕಾರಣಗಳು ಹುಳುವಿನ ಸಾಕಾಣಿಕೆಗೆ ನಿರಂತರವಾಗಿ ನೀಡಬೇಕಾಗುವ ಗಮನ, ಹಿಪ್ಪುನೇರಳೆ ಬೇಸಾಯಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ನಿರ್ಲಕ್ಷ್ಯತೆ, ನೂಲು ಬಿಚ್ಚುವ ಘಟಕಗಳು, ಪ್ರಾರಂಭವಾಗದೇ ಇದ್ದುದರಿಂದ ಸ್ಥಳೀಯ ಬೇಡಿಕೆ ಇಲ್ಲವಾಗಿ ಸ್ಥಾಪಿಸಿದ ಸ್ಥಳೀಯ ಮಾರುಕಟ್ಟೆಯ ಸೌಲಭ್ಯವನ್ನು ಪಡೆಯುವುದು ಅಸಾಧ್ಯವಾಯಿತು.

೬. ಕಚ್ಚಾ ರೇಷ್ಮೆ ನೂಲು ತಯಾರಿಕೆ

ರಾಜ್ಯದಲ್ಲಿ ಉತ್ಪಾದಿಸುತ್ತಿರುವ ಕಚ್ಚಾ ರೇಷ್ಮೆಯಲ್ಲಿ ಶೇಕಡಾ ೬೦ರಷ್ಟು ಚರಕಾ ಘಟಕಗಳಲ್ಲಿಯೂ, ಉಳಿದ ಉತ್ಪನ್ನವು ಕಾಟೇಜ್ ಬೇಸಿನ್ ಮತ್ತು ಫಿಲೇಚರ್ ಘಟಕಗಳಿಂದಲೂ ಬರುತ್ತದೆ. ೧೯೯೩-೯೪ರಲ್ಲಿ ೧೩, ೫೪೦ ಕುಟುಂಬಳು ಸುಮಾರು ೩೩,೩೯೬ ಘಟಕಗಳು (ಚರಕಾ ಮತ್ತು ಕಾಟೇಜ್ ಬೇಸಿನ್ ಯುನಿಟ್ಟುಗಳು) ನೂಲು ಬಿಚ್ಚುವ ಕಾರ್ಯದಲ್ಲಿ ತೊಡಗಿದ್ದವು. ಇದರಲ್ಲಿ ಶೇಕಡಾ ೭೦ರಷ್ಟು ಚರಕಾ ಘಟಕಗಳು. ಇದಲ್ಲದೆ ಸರ್ಕಾರದ ಸ್ವಾಮ್ಯದಲ್ಲಿ ಐದು ಕಾರ್ಖಾನೆಗಳು ಆಧುನಿಕ ರೀತಿಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ನೂಲು ಬಿಚ್ಚುವುದು, ಹುರಿ ಮಾಡುವಿಕೆ ಮತ್ತು ನೇಯ್ಗೆಯಲ್ಲಿ ತೊಡಗಿದ್ದವು.

ಚರಕಾ ಘಟಕಗಳಲ್ಲಿ, ಅನೇಕವಾಗಿ ಕುಟುಂಬದ ಸದಸ್ಯರು, ನೂಲು ಬಿಚ್ಚುವುದರಲ್ಲಿ ತೊಡಗಿರುತ್ತಾರೆ ಇತ್ತೀಚಿನ ದಿನಗಳಲ್ಲಿ, ಹೆಚ್ಚು ಚರಕಾಗಳನ್ನು ಹೂಡಿ ಕೂಲಿಕಾರರನ್ನು ಒದಗಿಸಿಕೊಂಡು ನೂಲು ತೆಗೆಯುತ್ತಾರೆ. ಕಾಟೇಜ್ ಬೇಸಿನ್ ಘಟಕಗಳು, ಬಹಳವಾಗಿ ಕೂಲಿಕಾರರ ಮೇಲೆ ಆಧಾರಿತ, ನೂಲು ಬಿಚ್ಚುವುದರಲ್ಲಿ ಅನೇಕ ರೀತಿಯ ಚಟುವಟಿಕೆಗಳು ಇದ್ದು, ನೈಪುಣ್ಯತೆಯೂ ಪರಿಶ್ರಮವೂ ಅವಶ್ಯಕ. ಈ ಎಲ್ಲ ಚಟುವಟಿಕೆಗಳಲ್ಲಿ ಗಂಡಸರು, ಹೆಂಗಸರು ದುಡಿಯುತ್ತಾರೆ. ಈ ಘಟಕಗಳು ತಾಲ್ಲೂಕು ಕೇಂದ್ರದಲ್ಲಿ ಮತ್ತು ಕೆಲವು ಗ್ರಾಮೀಣ ಪ್ರದೇಶದಲ್ಲಿ ಕಾರ್ಯಮಾಡುತ್ತಿವೆ. ರಾಜ್ಯದಲ್ಲಿ ಈ ಕಾರ್ಯಚಟುವಟಿಕೆಯ ಸುಮಾರು ಮೂರು ಜಿಲ್ಲೆಗಳಿಗೆ (ಮೈಸೂರು, ಕೋಲಾರ  ಮತ್ತು ಬೆಂಗಳೂರು) ಸೀಮಿತಗೊಂಡಿದೆ.

ಈ ಹಿಂದೆ ತಿಳಿಸಿದಂತೆ ಮಾರುಕಟ್ಟೆಯ ಅಭಿವೃದ್ಧಿ ಮತ್ತು ಸೌಲಭ್ಯಗಳು ಸಮರ್ಪಕವಾಗಿ ಉಪಯೋಗಿಸುವ ದಿಸೆಯಲ್ಲಿ (೧೯೮೦ರ ನಂತರದ ವರ್ಷಗಳಲ್ಲಿ) ನೂಲು ಬಿಚ್ಚುವುದರಲ್ಲಿ ತೊಡಗಿರುವವರಿಗೂ ಮತ್ತು ರೇಷ್ಮೆ ಗೂಡು ಉತ್ಪಾದಕರಿಗೂ (ರೈತರಿಗೆ) ಏಕರೀತಿಯಲ್ಲಿ ಅನುಕೂಲತೆಗಳನ್ನು ಕಲ್ಪಿಸಿ ಕೊಟ್ಟಿತು. ಉತ್ಪಾದನೆಯಾದ ರೇಷ್ಮೆ ಗೂಡಿನ ವಹಿವಾಟು ಪ್ರಮಾಣ ಸ್ಥಾಪಿತ ಮಾರುಕಟ್ಟೆಗಳಲ್ಲಿ ವರ್ಷಪ್ರತಿ ಅಧಿಕವಾಯಿತು. ಇದರಿಂದ ರೈತರಿಗೆ ಸರಿಯಾದ ಬೆಲೆ, ಹಣಪಾವತಿ ಸೌಲಭ್ಯಗಳನ್ನು ಕಲ್ಪಿಸಿದರೆ, ರೇಷ್ಮೆಗೂಡಿನಬಳಕೆದಾರರಾದ ನೂಲು ಬಿಚ್ಚುವವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಗೂಡನ್ನು ಖರೀದಿಸುವುದು ಸಾಧ್ಯವಾಯಿತು. ಗೂಡಿನ ಅಭಾವದಿಂದ ಗೂಡಿನ ಬೆಲೆಯಲ್ಲಿ ಏರಿಳಿತದ ಕಾರಣ, ಕೆಲವರು ನೂಲು ಬಿಚ್ಚುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದರು. ಈ ಸ್ಥಿತಿಯಲ್ಲಿ ಅವರಿಗೆ ಜೀವನೋಪಾಯವು ಕಷ್ಟ ಸಾಧ್ಯವಿತ್ತು  ೧೯೯೩-೯೪ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆಗಳಲ್ಲೂ ಸೇರಿ ೫೯, ೦೦೬ ಟನ್ನು ರೇಷ್ಮೆಗೂಡು ವಹಿವಾಟು ಆಗಿತ್ತು.

ಇತ್ತೀಚಿನ ವರ್ಷಗಳಲ್ಲಿ, ಚರಕಾ ನುಲು ತೆಗೆಯುವುದರಲ್ಲಿ, ಕೆಲವು ಸುಧಾರಣೆಗಳು ಆಗಿವೆ. ರೇಷ್ಮೆಗೂಡಿನ ಉತ್ಪಾದನೆಯಲ್ಲಿ ಆದ ಸುಧಾರಣೆಯ ಗುಣಮಟ್ಟವನ್ನು ಅನುಸರಿಸಿ ಕೆಲವು ಬದಲಾವಣೆ ಮಾಡಲಾಗಿದೆ. ನಾಡು ಚರಕಾದಲ್ಲಿರುವ ಮೂಲ ನಿಯಮಗಳನ್ನು ಉಳಿಸಿಕೊಂಡು, ಉತ್ಪಾದನೆ ಸಾಮರ್ಥ್ಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಮಾತ್ರ ನೂತನ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಬಳಕೆ ಸ್ವಲ್ಪವಾಗಿ ಅನುಷ್ಟಾನಕ್ಕೆ ಬಂದಿದೆ. ಈ ರೀತಿಯ ಸುಧಾರಿತ ಚರಕಾ ಘಟಕಗಳನ್ನು ತಯಾರಿಸುವ ವೆಚ್ಚ ಹೆಚ್ಚಾದುದರಿಂದ, ಬಳಕೆದಾರನಿಗೆ ಇದನ್ನು ಕೊಳ್ಳಲು ಕಷ್ಟಸಾಧ್ಯವಾಗಿದೆ. ನೂಲು ಬಿಚ್ಚುವವನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ತಕ್ಕ ಹಾಗೆ ರೇಷ್ಮೆ ನೂಲು ಬಿಚ್ಚುವ ಸುಧಾರಿತ ಉಪಕರಣಗಳು ರಚಿತವಾದ ಪಕ್ಷದಲ್ಲಿ ರೇಷ್ಮೆ ಕೈಗಾರಿಕೆಗೆ ಹಾಗೂ ಅದನ್ನು ಅವಲಂಬಿಸಿ ಜೀವನೋಪಾಯ ಮಾಡುವವರಿಗೆ ಅನುಕೂಲವಾಗುತ್ತದೆ.

೭. ರೇಷ್ಮೆ ವಿನಿಮಯ ಕೇಂದ್ರ

ಸುಮಾರು ೩೦ ವರ್ಷಗಳ ಹಿಂದೆ ರೈತರಿಗೆ ತಾವು ಉತ್ಪಾದಿಸಿದ ರೇಷ್ಮೆ ಗೂಡುಗಳ ಮಾರಾಟಕ್ಕೆ ಇದ್ದ ತೊಂದರೆ ರೇಷ್ಮೆ ಗೂಡಿನ ಮಾರುಕಟ್ಟೆಗಳ ಸ್ಥಾಪನೆ ಮತ್ತು ‘ಮಾರುಕಟ್ಟೆಯ ನಿಯಮ’ಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ರೇಷ್ಮೆ ಗೂಡು ಉತ್ಪಾದಕರಿಗೆ ಮತ್ತು ಬಳಕೆದಾರರಿಗೆ ಬಳಹವೇ ಅನುಕೂಲವಾಯಿತು.

ಇಂತಹದೇ ಮಾರುಕಟ್ಟೆಯ ವ್ಯವಸ್ಥೆಯನ್ನು ಅಂದರೆ ರೇಷ್ಮೆನೂಲು ತಯಾರಿಸಿ ಮಾರಾಟ ಮಾಡುವವರಿಗೆ ಮತ್ತು ಗ್ರಾಹಕರಿಗೆ (ನೇಯ್ಗೆದಾರರು) ನೇರವಾಗಿ ಬಹಿರಂಗವಾಗಿ ವಹಿವಾಟು ಮಾಡುವುದಕ್ಕೆ ಅನುಕೂಲಿಸುವಂತೆ, ‘ರೇಷ್ಮೆ ವಿನಿಮಯ ಕೇಂದ್ರ’ಗಳನ್ನು ಪ್ರಾರಂಭಿಸುವ ಉದ್ದೇಶ ಮಾಡಲಾಯಿತು. ಇದಕ್ಕೆ ಮುಂಚೆ ನೂಲು ಮಾರಾಟ, ಖಾಸಗೀ ವರ್ತಕರ, ದಳ್ಳಾಳಿಯವರ ಸ್ವಾಮ್ಯಕ್ಕೊಳಪಟ್ಟಿದ್ದು, ನೂಲು ಉತ್ಪಾದಿಸುವುದರ ಅನೇಕ ಬಗೆಯ ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದರು. ಇದರ ಪರಿಣಾಮ, ರೈತರಿಂದ ರೇಷ್ಮೆಗೂಡನ್ನು ಖರೀದಿಸುವ ಸಮಯದಲ್ಲೂ ಪರಿಣಾಮ ಬೀಳುತ್ತಿತ್ತು. ಇದು ಒಂದು ಮುಖವಾದರೆ, ನೂಲನ್ನು ಬಳಸುವವರು ವರ್ತಕರ ಮೂಲಕವೇ ತಮಗೆ ಬೇಕಾದ ಕಚ್ಚಾ ರೇಷ್ಮೆಯನ್ನು ಖರೀದಿಸಬೇಕಿತ್ತು. ಈ ರೀತಿಯ ವ್ಯವಸ್ಥೆ ಅವರ ಮೇಲೂ ಕೆಟ್ಟ ಪರಿಣಾಮ ಬೀರಿತ್ತು ವರ್ತಕರು ನೂಲನ್ನು ಖರೀದಿಸುವಾಗ ಮತ್ತು ನೂಲನ್ನು ಮಾರಾಟ ಮಾಡುವಾಗ ಅನೇಕ ರೀತಿಯ ಅವ್ಯವಹಾರಗಳನ್ನು ಅನುಸರಿಸುತ್ತಿದ್ದರು (ಬೆಲೆ ನಿಗದಿ ಮಾಡುವಲ್ಲು ರಹಸ್ಯ ಕ್ರಮ, ತೂದದಲ್ಲಿ ಸೋಡಿ ಪಡೆಯುವುದು ಮತ್ತು ಮೋಸ, ರುಸುಂ ವಸೂಲು ಮಾಡುವುದು, ಕಡಿಮೆ ಬೆಲೆ, ವಹಿವಾಟದ ಮೊತ್ತವನ್ನು ವಿಳಂಬ ಪಾವತಿ ಮಾಡುವುದು).

ರೇಷ್ಮೆ ನೂಲನ್ನು ಉತ್ಪಾದಿಸುವವರು ಮತ್ತು ಬಳಕೆದಾರರು ಯಾವ ರೀತಿಯ ಶೋಷಣೆಗೂ ಒಳಗಾಗದಂತೆ – ಮಾರಾಟಮಾಡುವುದು, ಕೊಂಡುಕೊಳ್ಳುವಿಕೆ ಸುಗಮವಾಗಿ ಆಗುವಂತೆ ಮಾಡಿರುವ ಸೌಲಭ್ಯವೇ ‘ರೇಷ್ಮೆ ವಿನಿಮಯ ಕೇಂದ್ರ’. ರೇಷ್ಮೆ ನೂಲು ಉತ್ಪಾದನೆಯಾಗುವ ಪ್ರದೇಶ ಮತ್ತು ಗುಣಮಟ್ಟ ಆಧರಿಸಿ ನೂಲನ್ನು ವರ್ಗೀಕರಿಸಿ, ಬಹಿರಂಗ ಹರಾಜು ವ್ಯವಸ್ಥೆಯನ್ನು ಮಾಡಲಾಗಿದೆ. ಅನುಜ್ಞಾ ಪತ್ರ (Licence) ಪಡೆದ ಸುಮಾರು ೧, ೫೦೦ಕ್ಕೂ ಹೆಚ್ಚು ವರ್ತಕರು ರೇಷ್ಮೆ ವಿನಿಮಯ ಕೇಂದ್ರದಲ್ಲಿ ನಡೆಯುವ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ನೂಲು ಕೊಂಡು ಕೊಳ್ಳುವರು. ನೂಲು ಬಿಚ್ಚುವವರಿಗೆ ಅವರು ಉತ್ಪಾದಿಸಿದ ನೂಲಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆಯು ಬಹಿರಂಗ ಹರಾಜಿನಲ್ಲಿ ದೊರೆಯುತ್ತದೆ. ಈ ಕೇಂದ್ರದಲ್ಲಿ ತೂಕ, ರಸೀತಿ ತಯಾರು ಮಾಡುವುದು, ಹಣ ಪಾವತಿ ಮುಂತಾದ ಮಾರುಕಟ್ಟೆಯ ಚಟುವಟಿಕೆಗಳಲ್ಲಿ ನೂತನ ವಿಧಾನಗಳನ್ನು ಅಳವಡಿಸಲಾಗಿದೆ. ರೇಷ್ಮೆನೂಲು  ಮಾರಾಟಕ್ಕೆ ತಂದರಿಗೆ ಬೆಲೆ ಒಪ್ಪಿಗೆಯಾಗದಿದ್ದಲ್ಲಿ, ವಿನಿಮಯದ ಉಗ್ರಾಣದಲ್ಲಿ ಉಚಿತವಾಗಿ ದಾಸ್ತಾನು ಮಾಡುವ ವ್ಯವಸ್ಥೆ ಇದ್ದು ಅವರಿಗೆ ಹಣದ ಅವಶ್ಯಕತೆ ಇದ್ದರೆ, ರೇಷ್ಮೆಯನ್ನು ಒತ್ತು ಇಟ್ಟು ಅದರ ಮೌಲ್ಯದ ಬಹುಪಾಲನ್ನು ಮುಂಗಡವಾಗಿ ಪಡೆಯಬಹುದು. ರೇಷ್ಮೆನೂಲನ್ನು ಬಸ್‌ ನಿಲ್ದಾಣದಿಂದ, ವಿನಿಮಯ ಕೇಂದ್ರಕ್ಕೆ ಸಾಗಿಸಲು ಉಚಿತವಾಹನ ವ್ಯವಸ್ಥೆ, ಉಚಿತ ಹಮಾಲಿಗಳ ಸೇವೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಈವರೆಗಿಗೂ ಒಂಬತ್ತು ಇಂತಹ ರೇಷ್ಮೆ ವಿನಿಮಯ ಕೇಂದ್ರಗಳನ್ನು ವಿವಿಧ ಸ್ಥಳಗಳಲ್ಲಿ ತೆರೆಯಲಾಗಿದೆ. ೧೯೯೩-೯೪ನೇ ಸಾಲಿನಲ್ಲಿ ೧೯೨೪ ಟನ್ನುಗಳಷ್ಟು ಕಚ್ಚಾ ರೇಷ್ಮೆ ನೂಲು ಈ ಕೇಂದ್ರಗಳ ಮೂಲಕ ವಹಿವಾಟು ಆಗಿದೆ. ನಗದು ಹಣಪಾವತಿ ಮತ್ತು ಮಾರುಕಟ್ಟೆಯ ಬೆಲೆ, ನೂಲಿನ ದಾಸ್ತಾನು (arrivls) ಮತ್ತು ಗ್ರಾಹಕರಿಗೆ ಬೇಕಾಗಬಹುದಾದ ರೇಷ್ಮೆನೂಲಿನ ಮಾಹಿತಿಯನ್ನು ನೇರವಾಗಿ ತಿಳಿದುಕೊಳ್ಳುವ ಮುಕ್ತ ಅವಕಾಶವಿದೆ. ಈ ರೀತಿಯ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದರಿಂದ, ನೂಲು ಬಿಚ್ಚುವ ಘಟಕಗಳಲ್ಲಿ ಕೂಲಿಗಾಗಿ ದುಡಿಯುವ ಜನರಿಗೆ ಸಮಾನವಾದ ದಿನಗೂಲಿ (ಈ ಹಿಂದೆ ಒಂದೇ ರೀತಿಯ ಕೆಲಸಕ್ಕೆ, ಗಂಡಸರಿಗೂ ಮತ್ತು ಹೆಂಗಸರಿಗೂ ದಿನಗೂಲಿಯಲ್ಲಿ ವ್ಯತ್ಯಾಸವಿತ್ತು) ಮತ್ತು ವಿಳಂಬವಿಲ್ಲದೆ ಪಾವತಿಯನ್ನು ಮಾಡುವುದಕ್ಕೆ ಅನುಕೂಲವಾಗಿದೆ. ರೇಷ್ಮೆ ವಿನಿಮಯ ಕೇಂದ್ರದೊಂದಿಗೆ ಸರ್ಕಾರದ ಸ್ವಾಮ್ಯದಲ್ಲಿ ‘ಕರ್ನಾಟ್ಕ ರೇಷ್ಮೆ ಮಾರಾಟ ಮಂಡಳಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮಂಡಳಿ ರೇಷ್ಮೆ ವಿನಿಮಯ ಕೇಂದ್ರದಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಿ ರೇಷ್ಮೆ ವಿನಿಮಯ ಕೇಂದ್ರದಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಿ ರೇಷ್ಮೆಯನ್ನು ಕೊಂಡು ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುವ ದಿನಗಳಲ್ಲಿ ಸಾಮಾನ್ಯವಾಗಿ ಎದುರಾಗುವ ಬೆಲೆ ಕುಸಿತದಿಂದ ತೊಂದರೆಯಾಗದಂತೆ ನೋಡಿ ಕೊಳ್ಳುವುದೇ ಇದರ ಮೂಲ ಉದ್ದೇಶ. ಅಂತಹ ದಿನಗಳಲ್ಲಿ ಮಂಡಳಿಯು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನೂಲನ್ನು ಕೊಳ್ಳುತ್ತದೆ.

೮. ರಾಷ್ಟ್ರೀಯ ರೇಷ್ಮೆ ಅಭಿವೃದ್ಧಿ ಯೋಜನೆ

ವಿಶ್ವಬ್ಯಾಂಕ್ ಆರ್ಥಿಕ ನೆರವಿನ ೫೫೫ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ‘ರಾಷ್ಟ್ರೀಯ ರೇಷ್ಮೆ ಯೋಜನೆಯು’ ಏಪ್ರಿಲ್ ೧೯೮೯ರಿಂದ ರಾಷ್ಟ್ರದ ರೇಷ್ಮೆ ಬೆಳೆಯುವ ಪ್ರಮುಖ ರಾ‌ಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮಬಂಗಾಳ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲದೆ, ರೇಷ್ಮೆ ಉದ್ಯಮಕ್ಕೆ ಹೊಸತಾಗಿರುವ ಇತರ ೧೨ ಆಯ್ದ ರಾಜ್ಯಗಳಲ್ಲಿ ವಿವಿಧ ವಿಸ್ತೃತ ರೇಷ್ಮೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕಾರ್ಯಗತವಾಗುತ್ತಲಿದೆ.

ಕರ್ನಾಟಕದಲ್ಲಿ ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ಈ ಯೋಜನೆಯಡಿಯಲ್ಲಿ ೧೧೮.೩ ಕೋಟಿ ರೂ.ಗಳು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಮತ್ತು ನೂಲು ಬಿಚ್ಚುವವರಿಗೆ ಸಾಲ ಸೌಲಭ್ಯಗಳನ್ನು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ಮುಖಾಂತರ ಒದಗಿಸುವುದು, ಮೂಲ ತಳಿ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವುದು, ತಾಂತ್ರಿಕ ಮತ್ತು ತರಬೇತಿ ಸೌಲಭ್ಯಗಳನ್ನು ಮಾರುಕಟ್ಟೆಗಳ ಅಭಿವೃದ್ಧಿ, ಸಂಶೋಧನೆ ಮತ್ತು ಮಹಿಳಾ ಅಭಿವೃದ್ಧಿ. ರಾಜ್ಯದಲ್ಲಿ (ಈ ಯೋಜನೆಯ ಅವಧಿಯ ೧೯೮೯ರಿಂದ ೧೯೯೪ರ ವರ್ಷಗಳಲ್ಲಿ) ರೇಷ್ಮೆ ಗೂಡಿನ ಉತ್ಪಾದನೆ ೧೯೮೯ರಲ್ಲಿ ೫೦, ೫೧೫ ಟನ್ನುಗಳಿದ್ದು, ೧೯೯೩-೯೪ ರಲ್ಲಿ ೭೦, ೨೦೮ ಟನ್‌ಗಳು ಉತ್ಪಾದನೆ ಆಗಿದೆ. ಇದೇ ಅವಧಿಯಲ್ಲಿ ರೇಷ್ಮೆನೂಲಿನ ಪ್ರಮಾಣ ೬೦೭೬ ಟನ್ನುಗಳಿಂದ ೮೨೫೦ ಟನ್ನುಗಳಿಗೆ ಮುಟ್ಟಿದೆ. ಈ  ಯೋಜನೆಯ ಅವಧಿಯಲ್ಲಿ ಸಂಪನ್ಮೂಲ ಘಟಕಗಳನ್ನು ಕ್ರೋಢಿಕರಿಸುವುದು, ಅವುಗಳ ಉತ್ಪಾದನಾ ಸಾಮರ್ಥ್ಯದ ಪೂರ್ಣ ಬಳಕೆಗೆ ಬೇಕಾದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಕೊಂಡು, ಕಾರ್ಯಗತ ಮಾಡುವುದು ಮುಖ್ಯ ಉದ್ದೇಶವಾಗಿದೆ.

೯. ರೇಷ್ಮೆ ಉದ್ಯಮ, ಮಹಿಳೆಯರ ಅಭಿವೃದ್ಧಿ

ರೇಷ್ಮೆ ವ್ಯವಸಾಯದಿಂದ ಕೃಷಿಕರ ಕುಟುಂಬಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ತಮ್ಮ ಗೃಹಕೃತ್ಯಗಳ ಜೊತೆಗೆ ಹಿಪ್ಪುನೇರಳೆ ಸೊಪ್ಪು ಕೀಳುವುದು, ಚಾಕು ಹುಳು ಸಾಕಾಣಿಕೆ ಮಾಡುವುದು, ರೇಷ್ಮೆ ಹುಳುವಿನ ಕಸ ತೆಗೆಯುವುದು, ಹುಳುವಿಗೆ ಸೊಪ್ಪು ಕೊಡುವುದು ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ. ಕೃಷಿ ಕಾರ್ಮಿಕ ಮಹಿಳೆಯರೂ ಸಹ ರೇಷ್ಮೆ ಕೃಷಿಯಲ್ಲಿ ಉದ್ಯೋಗಾವಕಾಶ ಪಡೆಯುತ್ತಾರೆ. ರೇಷ್ಮೆ ಬಿತ್ತನೆ ಮೊಟ್ಟೆ ತಯಾರಿಕೆಯಲ್ಲಿ ಸಹ ತೊಡಗಿರುತ್ತಾರೆ. ರೇಷ್ಮೆ ನೂಲು ಬಿಚ್ಚಾಣಿಕೆಯು ಕುಶಲತೆ ಹಾಗೂ ನೈಪುಣ್ಯತೆಯ ಒಂದು ಸಂಕೀರ್ಣ ಕಸುಬಾಗಿದ್ದು, ಮಹಿಳೆಯರ ಪಾತ್ರ ಪ್ರಧಾನವಾಗಿದೆ. ಒಟ್ಟಾರೆ ಹೇಳುವುದಾದರೆ, ವಿವಿಧ ಹಂತಗಳ ಕಾರ್ಯಚಟುವಟಿಕೆಗಳಲ್ಲಿ ಶೇಕಡಾ ೬೦ರಷ್ಟು ಮಹಿಳೆಯರು ವಿವಿಧ ಹಂತಗಳ ಕಾರ್ಯಚಟುವಟಿಕೆಗಳಲ್ಲಿ ಶೇಕಡಾ ೬೦ ರಷ್ಟು ಮಹಿಳೆಯರು ಭಾಗವಹಿಸುತ್ತಿದ್ದಾರೆ. ಇವಲ್ಲದೆ, ರೇಷ್ಮೆನೂಲು ಹುರಿಮಾಡುವುದು, ರೇಷ್ಮೆಯ ನೇಯ್ಗೆಯ ಪೂರಕ ಕಾರ್ಯಗಳು, ವಸ್ತ್ರವಿನ್ಯಾಸ, ಸಿದ್ದ ಉಡುಪುಗಳ ತಯಾರಿಕೆ ಮುಂತಾದವುಗಳಲ್ಲೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ರೇಷ್ಮೆ ಉದ್ಯಮಕ್ಕೆ ಪೂರಕವಾದ, ತಟ್ಟೆ, ಬುಟ್ಟಿ, ಚಂದ್ರಿಕೆ ಇತ್ಯಾದಿ ಉಪಕರಣಗಳ ತಯಾರಿಕೆಯಲ್ಲಿಯೂ ಸಹ ಮಹಿಳೆಯರು ನಿರತರಾಗಿದ್ದಾರೆ. ರೇಷ್ಮೆ ಕೈಗಾರಿಕೆಯಲ್ಲಿ ಉದ್ಯೋಗ ಮತ್ತು ಸ್ವಾವಲಂಬನೆ ಒದಗಿಸುವು ವಿಶೇಷ ಅವಕಾಶವಿರುವುದು ಒಂದು ಗಣನೀಯ ಅಂಶ.

ಉದ್ಯಮದಲ್ಲಿ ಪರಿಣತಿ ಹೊಂದಿದ ಮಹಿಳಾ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಲ್ಲಿ ಉದ್ಯಮದ ಅಭಿವೃದ್ಧಿಯೊಂದಿಗೆ ಕುಟುಂಬದ ಆರ್ಥಿಕ ಆದಾಯವು ಹೆಚ್ಚುವುದಲ್ಲದೆ, ಮಹಿಳೆಯರ ಹಾಗೂ ಆ ಮೂಲಕ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ಸಾಧ್ಯವಾಗುತ್ತದೆ.

ಈ ಹಿಂದಿನ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳಾ ಸಮುದಾಯವನ್ನು ಪರಿಗಣಿಸದೇ ಹೋಗಿರುವುದರಿಂದ. ‘ರಾಷ್ಟ್ರೀಯ ರೇಷ್ಮೆ ಯೋಜನೆ’ಗಳಲ್ಲಿ ಉದ್ಯಮದ ಪ್ರಗತಿಗೆ ವಿಶೇಷವಾಗಿ ಕಾರಣವಾಗಿರುವ ಮಹಿಳೆಯರ ಅಭಿವೃದ್ಧಿಗಾಗಿ ಅನುಕೂಲಗಳನ್ನು ಒದಗಿಸಲು ವಿಶ್ವಬ್ಯಾಂಕ್ ಆರ್ಥಿಕ ನೆರವಿನ  ‘ರಾಷ್ಟ್ರೀಯ ಯೋಜನೆ’ಯಲ್ಲಿ ವಿವಿಧ ಅವಕಾಶಗಳನ್ನು ಹಮ್ಮಿಕೊಂಡಿದೆ. ಸಂಕ್ಷಿಪ್ತವಾಗಿ , ಅವುಗಳು ೧) ಮಹಿಳೆಯರನ್ನು ರೇಷ್ಮೆ ಕೃಷಿಕರೆಂದು ಗುರುತಿಸುವುದು, ೨) ರೇಷ್ಮೆ ಕೃಷಿ ಮತ್ತು ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಸಾಲ ಸೌಲಭ್ಯದ ಜೊತೆಗೆ ಅವರು ನಿರತರಾಗಿರುವ ಕಾರ್ಯ ಚಟುವಟಿಕೆಗಳ ಅಗತ್ಯಕ್ಕೆ ತಕ್ಕ ತರಬೇತಿ ಮತ್ತು ವಿಸ್ತರಣಾ ಸೌಲಭ್ಯ, ೩) ರೇಷ್ಮೆ ಗೂಡಿನ ಹಾಗೂ ನೂಲಿನ ಮಾರುಕಟ್ಟೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ಕೊಡುವುದು ೪) ಉದ್ಯಮದ ವಹಿವಾಟನ್ನು ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಮೇಲ್ವಿಚಾರಣೆ, ಮುಂತಾದವುಗಳ ಬಗ್ಗೆ ಶಿಕ್ಷಣ ನೀಡುವುದು.

ಈ ಮೇಲಿನ ಯೋಜನೆಯಡಿಯಲ್ಲಿ ಗುರುತಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದಲ್ಲಿ, ಈವರಿವಿಗೂ ಉದ್ಯಮದಲ್ಲಿದ್ದು ತಾಂತ್ರಿಕ ಮಾರ್ಗದರ್ಶನ, ಆರ್ಥಿಕ ಆದಾಯಕ್ಕೆ ತೀರ ಅವಕಾಶ ಹೊಂದಿರದ ಮಹಿಳೆಯರು ಮತ್ತು ಮಹಿಳಾ ಕಾರ್ಮಿಕರು, ಸ್ವಂತ ಉದ್ಯಮಿಯಾಗ ಬಯಸುವ ಮಹಿಳೆಯರು ಮತ್ತು ವಿವಿಧ ಶೋಷಣೆಗೊಳಗಾಗಿ ಸಾಮಾಜಿಕ ಜೀವನಾವಶ್ಯಕ ಸೌಲಭ್ಯಗಳು ಹಾಗೂ ಹಕ್ಕು ವಂಚಿತರಾದ ಮಹಿಳೆಯರು ಇದರ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಮಂಡಳಿಗಳು, ಸರ್ಕಾರೇತರ ಸಂಘ ಸಂಸ್ಥೆಗಳನ್ನು ಗುರುತಿಸಲಾಗಿದೆ. ಈ ಉದ್ದೇಶ ಸಾಧನೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶ ಉತ್ತೇಜಕವಾಗಿದೆ.

೧೦. ಸಾರಾಂಶ

ರಾಜ್ಯದಲ್ಲಿ ಎಂಟನೇ ಪಂಚವಾರ್ಷಿಕ ಯೋಜನೆ ಅವಧಿಯ ಕೊನೆಯ ವೇಳೆಗೆ – ಸುಮಾರು ೧೦,೦೦೦ ಟನ್ನುಗಳು ರೇಷ್ಮೆ ಉತ್ಪಾದನೆ ಆಗುವ ನಿರೀಕ್ಷೆ ಇದ್ದು ಇದೇ ಅವಧಿಯಲ್ಲಿ ನೆರೆರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲೂ, ರೇಷ್ಮೆ ಕೃಷಿ ಅಭಿವೃದ್ಧಿ ಆಗಿ – ರೇಷ್ಮೆ ಉತ್ಪಾದನೆಯೂ ಸಹ ಆಗುವ ಯೋಜನೆಗಳು ಪ್ರಾರಂಭವಾಗಿದೆ.  ರಾಜ್ಯದಲ್ಲಿ, ಈಗ ಉತ್ಪತ್ತಿ ಆಗುತ್ತಿರುವ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇಕಡಾ ೪೦ ರಿಂದ ೪೫ರಷ್ಟು ಮಾತ್ರ ಬಳಕೆ ಇದೆ. ಇನ್ನುಳಿದ ರೇಷ್ಮೆ ನೂಲಿನ ಉತ್ಪಾದನೆ ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿರುವ, ನೇಯ್ಗೆ ಕಸುಬಿಗೆ ಪೂರಕವಾಗಿದೆ. ಮುಂದಿನ ವರ್ಷಗಳಲ್ಲಿ ಈ ರಾಜ್ಯದಲ್ಲಿ ಅಧಿಕವಾಗಿ ಉತ್ಪತ್ತಿ ಆಗುವ ರೇಷ್ಮೆ ನೂಲಿನಿಂದ ನಮ್ಮ ರಾಜ್ಯದ ಉತ್ಪಾದನೆಗೆ ಬೇಡಿಕೆ ಕಡಿಮೆ ಆಗಬಹುದು. ಅಂದರೆ, ನಮ್ಮಲ್ಲಿ ಉತ್ಪತ್ತಿ ಆಗುತ್ತಿರುವ – ರೇಷ್ಮೆ ನೂಲನ್ನು, ಉಪಯೋಗಿಸಿ ಕೊಳ್ಳುವುದರಲ್ಲಿ ಬೇಕಾದ ಸಾಮರ್ಥ್ಯವನ್ನು ವೃದ್ಧಿಕೊಳ್ಳುವುದು ಅನಿವಾರ್ಯ.

ಈವರೆವಿಗೂ ದೊರಕಿರುವ ಪರಿಶ್ರಮ ಚಾಲನೆಯಲ್ಲಿರುವ ತಾಂತ್ರಿಕ ಪ್ರಗತಿ ಇವುಗಳನ್ನು ಗಮನಿಸಿದಲ್ಲಿ, ೨೦೦೧ನೇ ದಶಕದ ವೇಳೆಗೆ ರಾಜ್ಯದಲ್ಲಿ ಸುಮಾರು ೧೫೦೦೦ ಟನ್ನುಗಳಷ್ಟು ರೇಷ್ಮೆ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಅಂದರೆ, ಪೂರಕವಾಗಿ, ಈ ಉತ್ಪಾದನೆಯನ್ನು ಬಳಸಿಕೊಳ್ಳಲು ನಮ್ಮ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ಅಭಿವೃದ್ಧಿ ಯೋಜನೆಗಳಲ್ಲಿ ಗಮನ ಹರಿಸುವುದು ಸೂಕ್ತ. ಇದರ ಜೊತೆಗೆ, ಅಂತರರಾಷ್ಟ್ರೀಯ ಬೇಡಿಕೆ ಸಹ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ರೇಷ್ಮೆನೂಲಿನ ಗುಣಮಟ್ಟವನ್ನು ಅಪೇಕ್ಷಿತ ಗುರಿಗೆ ವೃದ್ಧಿಗೊಳಿಸುವುದು ಮೊದಲನೆಯ ಗುರಿಯಾಗಬೇಕು.

ರಾಜ್ಯದಲ್ಲಿನ ಹಿ‌ಪ್ಪುನೇರಳೆ ಕ್ಷೇತ್ರ ನೂಲನ್ನು ಬಿಚ್ಚುವ ಘಟಕಗಳು, ಈ ಉದ್ಯೋಗದಲ್ಲಿ ತೊಡಗಿರುವ ಜನರಲ್ಲಿ ಅಡಗಿರುವ ಕುಶಲತೆ ಮತ್ತು ಈವರೆವಿಗೂ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಾಪಿಸಲಾಗಿರುವ ಸಂಪನ್ಮೂಲಗಳ ಪೂರ್ಣ ಸಾಮರ್ಥ್ಯದ ಬಳಕೆ ಅಗತ್ಯವಾಗಿದೆ. ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ರೇಷ್ಮೆ ಕೈಗಾರಿಕೆಯು ಕೇಂದ್ರಿಕೃತವಾಗಿದ್ದು, ಉತ್ತರ ಜಿಲ್ಲೆಗಳಲ್ಲಿ ನಿರೀಕ್ಷಿಸಿದ ಬೆಳವಣಿಗೆ ಆಗಲಿಲ್ಲ. ಆದರೆ, ಈ ಜಿಲ್ಲೆಗಳಲ್ಲಿ ಅನೇಕ ಹಳ್ಳಿಗಳಲ್ಲಿ, ನೇಯ್ಗೆ ಚಟುವಟಿಕೆಗಳಲ್ಲಿ ಅನೇಕ ಕುಟುಂಬಗಳು ನಿರತರಾಗಿದ್ದಾರೆ. ಈ ಕುಟುಂಬಗಳಲ್ಲಿ ಈ ಚಟುವಟಿಕೆ ಸಾಂಪ್ರದಾಯಿಕವಾಗಿ ಬಂದಿದ್ದು, ಅವರವರ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಹೀಗೆ ಕೇಂದ್ರೀಕೃತವಾಗಿರುವ ಮಾನವ ಕುಶಲತೆಯನ್ನು ಗಮನಿಸಿ ಅದರ ಬಳಕೆಗೆ ಆದ್ಯತೆ ನೀಡುವುದು ರಾಜ್ಯದ ಗುರಿಯಾಗಬೇಕು. ಇದರಿಂದ ಮಾತ್ರ ಕೈಗಾರಿಕೆಯಲ್ಲಿ ಅಡಗಿರುವ ವಿವಿಧ ಚಟುವಟಿಕೆಗಳ ಪರಿಣಿತಿಯು ಎಲ್ಲಾ ಜನರ ಅಭಿವೃದ್ಧಿಗೂ ಪೂರಕವಾಗುವುದರಲ್ಲಿ ಸಾಫಲ್ಯತೆಯನ್ನು ಪಡೆಯುತ್ತದೆ. ಇದರಿಂದ ಮುಖ್ಯವಾಗಿ ಅಭಿವೃದ್ಧಿ ಯೋಜನೆಯ ಮುಖ್ಯ ಗುರಿಯಾದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗವಕಾಶ, ಆರ್ಥಿಕ ವರ್ಧನೆ ಮತ್ತು ಅವರ ಜೀವನ ಸುಧಾರಿಸುವುದು. ಪ್ರಾಮುಖ್ಯವಾಗಿ, ಈ ನಿಲುವಿನಲ್ಲಿ ರಾಜ್ಯದ ಜನರಲ್ಲಿ ಅಡಗಿರುವ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಲು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಲ್ಲಿ, ಜನರ ಸ್ಪಂದನೆಯೂ ಸಹಕಾರವೂ ಸಿಗುವುದರಲ್ಲಿ ಸಂಶಯವಿಲ್ಲ. ಕರ್ನಾಟಕ ರಾಜ್ಯ, ರೇಷ್ಮೆ ಕೈಗಾರಿಕೆಯಲ್ಲಿ ಇಲ್ಲಿಯವರೆವಿಗೂ ಇರುವ ಮೊದಲನೇ ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ, ಜನರು ಸಾಮಾಜಿಕ ಮತ್ತು ಆರ್ಥಿಕ ಮೌಲ್ಯವನ್ನು ಸಹ ಮುಂದುವರಿಸಿಕೊಂಡು ಹೋಗುವುದರಲ್ಲಿ ಸಾಧ್ಯತೆ ಇದೆ.