ಪೀಠಿಕೆ

ನಮ್ಮ ದೇಶ ಅದರಲ್ಲೂ ನಮ್ಮ ರಾಜ್ಯ ಅವಳಿ ಸಮಸ್ಯೆಗಳಾದ ಬಡತನ ಮತ್ತು ನಿರುದ್ಯೋಗವನ್ನು ಎದುರಿಸುತ್ತಿದೆ. ಪ್ರತಿ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸಲು ವಿವಿಧ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾಗ್ಯೂ, ಬಡತನ ರೇಖೆಯ ಕೆಳಗಿರುವವರ ಸಂಖ್ಯೆ ಮತ್ತು ನಿರುದ್ಯೋಗದ ಸಮಗ್ರ ಪರಿಮಾಣಗಳು ಒಂದು ಯೋಜನಾವಧಿಯಿಂದ ಮುಂದಿನ ಯೋಜನಾವಧಿಗೆ ಏರುವ ಪ್ರವೃತ್ತಿಯನ್ನೇ ತೋರುತ್ತಿವೆ. ಇದು ಪ್ರಾಯಶಃ ಅನಿಯಂತ್ರಿತ ಜನಸಂಖ್ಯಾ ಬೆಳವಣಿಗೆ ಅಥವಾ ಜನ ಸಂಖ್ಯಾ ಸ್ಫೋಟದ ಕಾರಣದಿಂದಾಗಿರಬಹುದು.

ಈ ಪ್ರಬಂಧದಲ್ಲಿ ಬಡತನ ರೇಖೆ, ನಿರುದ್ಯೋಗದ ಸಾಮಾನ್ಯ ಜ್ಞಾನ, ಕಲ್ಪನೆ, ಲಕ್ಷಣ ಈ ಸಮಸ್ಯೆಗಳು ವಿಸ್ತಾರ ಗಾತ್ರಗಳಲ್ಲದೆ ಈ ಸಂಗತಿಗಳನ್ನು ಎದುರಿಸಲು ರಾಜ್ಯದಲ್ಲಿ ಯೋಜಿಸಿರುವ ರಕ್ಷಣಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಒಂದು ಪ್ರಯತ್ನವನ್ನು ಮಾಡಿದೆ.

ಬಡತನ

ಜನರು ಕೊರತೆ ಅಥವಾ ಅಭಾವದ ಸ್ಥಿತಿಯಲ್ಲಿರುವುದಕ್ಕೆ ಬಡತನವೆನ್ನುತ್ತಾರೆ. ಅವರವರ ಸಮುದಾಯವು ಒಪ್ಪಿರುವ ಜೀವನ ಮಟ್ಟಕ್ಕೆ ತಕ್ಕಂತೆ ಬದುಕಲು ಜನರಿಗೆ ವೈಯಕ್ತಿಕ ವರಮಾನ  ಮತ್ತು ಸಾಧನ ಸಂಪತ್ತುಗಳ ಕೊರತೆಯಿದ್ದರೆ ಜನರು ಬಡವರಾಗುತ್ತಾರೆ. ಬಡತನದ ಹೋಲಿಕೆಯ ಮಾನದಂಡಗಳು ಬಹಳವಾಗಿ ಕಾಲ ಮತ್ತು ಸ್ಥಳಗಳಿಗನುಗುಣವಾಗಿ ಸಮುದಾಯದಲ್ಲಿ ಬದುಕುತ್ತಿರುವ ಹೆಚ್ಚಿನ ಜನರು ಉತ್ತಮವಾಗಿ ಬದುಕಲು ಮೋಟಾರುಕಾರನ್ನು ಹೊಂದಿರಲೇಬೇಕೆಂದು ನಂಬುತ್ತಾರೆ. ಮೋಟಾರು ಕಾರನ್ನು ಕೊಳ್ಳಲು ಶಕ್ತಿಯಿಲ್ಲದಿದ್ದರೆ ಅವರು ತಮ್ಮನ್ನು ಬಡವರೆಂದು ತಿಳಿಯುತ್ತಾರೆ. ಅದೇ ಸಮಯಕ್ಕೆ, ಅಭಿವೃದ್ಧಿಶೀಲ ದೇಶಗಳಲ್ಲಿ ಬದುಕುತ್ತಿರುವ ಬಹಳಷ್ಟು ಮಂದಿ ಮೋಟಾರು ಕಾರುಗಳನ್ನು ಸುಖಭೋಗ ವಸ್ತುವೆಂದು ಭಾವಿಸುತ್ತಾರೆ. ಅವರು ಮೋಟಾರು ಕಾರು ಇಲ್ಲದಿರುವುದನ್ನು ಬಡತನದ ಚಿನ್ಹೆಯೆಂದು ತಿಳಿಯುವುದಿಲ್ಲ.

ಬಡತನದ ಕಾರಣಗಳು

ನಮ್ಮ ದೇಶದಲ್ಲಿ ಬಡತನ ಇನ್ನೂ ದೃಢವಾಗಿ ಉಳಿದುಕೊಂಡಿರುವುದಕ್ಕೆ ಕಾರಣಗಳು ೧) ಕೃಷಿ ಚಟುವಟಿಕೆಗಳ ತಲಾ ಉತ್ಪನ್ನದ ಬಹುಮಟ್ಟಿನ ಸ್ಥಾಯಿ ಸ್ಥಿತಿ, ೨) ಜನಸಂಖ್ಯಾವೃದ್ಧಿಯಿಂದಾಗಿ ರಾಷ್ಟ್ರೀಯ ವರಮಾನದ ಬೆಳವಣಿಗೆ ದರದ ನಿಧಾನಗತಿ, ೩) ಅಲ್ಪ ಪ್ರಮಾಣದ ಔದ್ಯೋಗಿಕ ಬೆಳವಣಿಗೆ, ೪) ಅಸಮರೂಪದ ವರಮಾನ ಹಂಚಿಕೆ, ೫) ನಮ್ಮಂತಹ ಕಾರ್ಮಿಕ ಶಕ್ತಿ ಅಧಿಕವಿರುವ ದೇಶಗಳಲ್ಲಿ ಬಂಡವಾಳ ಕೇಂದ್ರೀಕೃತ ಸನ್ನಾಹ, ೬) ಅಲ್ಪ ಪ್ರಮಾಣದ ಉತ್ಪಾದಕತೆ, ೭) ನಿರುದ್ಯೋಗ ಮತ್ತು ೮) ಜೀವನ ವೆಚ್ಚವನ್ನು ಮೇಲಕ್ಕೆ ತಳ್ಳುವ ಹಣದುಬ್ಬರ ಪ್ರವೃತ್ತಿ.

ಬಡತನವನ್ನು ಅಳೆಯುವುದು

೧. ಬಡತನದ ರೇಖೆ : ಇದೊಂದು ವರಮಾನ ಅಥವಾ ವೆಚ್ಚದ ಮಟ್ಟವಾಗಿದ್ದು, ಈ ಮಟ್ಟಕ್ಕಿಂತ ಕಡಿಮೆ ಇರುವವರನ್ನು ಬಡವರೆಂದು ಪರಿಗಣಿಸುತ್ತಾರೆ. ತೃಪ್ತಿಕರವಾಗಿ ಬದುಕಲು ಕುಟುಂಬಗಳಿಗೆ ಅವಶ್ಯಕವಿರುವ ಹಣದ ಮೊತ್ತವೇ ಈ ಅಳತೆಗೆ ಆಧಾರವಾಗಿದೆ. ಈ ಅಳತೆಯು ಒಂದು ಕುಟುಂಬವು ತನ್ನ ವರಮಾನದ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಹಣವನ್ನು ಆಹಾರದ ಮೇಲೆ ವೆಚ್ಚ ಮಾಡಬಾರದೆನ್ನುವ ತತ್ವವನ್ನು ಅಂಗೀಕರಿಸುತ್ತದೆ. ಅಧಿಕವಾಗಿ ಬದಲಾಗುವ ಸ್ಥಳೀಯ ಆರ್ಥಿಕ ಸ್ಥಿತಿಗಳು ಮತ್ತು ಜೀವನ ಮಟ್ಟ ಹಾಗೂ ಶೈಲಿಗಳಿಂದಾಗಿ ದೇಶ-ದೇಶಗಳ ಮಧ್ಯೆ ಈ ಸಂಬಂಧದ ಹೋಲಿಕೆ ತಪ್ಪು ಅಭಿಪ್ರಾಯ ಕೊಡುತ್ತದೆ.

೨. ರಾಷ್ಟ್ರೀಯ ವರಮಾನದ ಪಾಲು: ಶ್ರೀಮಂತ ಮತ್ತು ಬಡ ಕುಟುಂಬಗಳ ಮಧ್ಯೆ ರಾಷ್ಟ್ರೀಯ ವರಮಾನದ ಪಾಲಿನ ಹಂಚಿಕೆಯು ಬಡತನವನ್ನು ಅಳತೆ ಮಾಡುವ ಮತ್ತೊಂದು ಸಾಧನ. ಭಾರತದಲ್ಲಿ ರಾಷ್ಟ್ರೀಯ ವರಮಾನದ ಅರ್ಥ, ಮೇಲಣ ಶೇ. ೨೦ ಶ್ರೀಮಂತ ಕುಟುಂಬಗಳ ಪಾಲಾಗಿತ್ತು ಹಾಗೂ ಆ ವರಮಾನದ ಕೇವಲ ಶೇ. ೫  ಕೆಳಭಾಗದ ಶೇ. ೨೦ ಬಡ ಕುಟುಂಬಗಳ ಪಾಲಾಗಿತ್ತು.

೩. ಭೂರಹಿತರ ಪ್ರಮಾಣ: ಗ್ರಾಮೀಣ ಪ್ರದೇಶಗಳಲ್ಲಿ ಭೂರಹಿತ ಪ್ರಮಾಣದಿಂದಲೂ ಬಡತನವನ್ನು ಅಳೆಯಬಹುದು.

೪. ಗೃಹರಹಿತರ ಪ್ರಮಾಣ: ಗೃಹರಹಿತತೆಯೂ ಸಹ ಬಡತನದ ಚಿಹ್ನೆಯಾಗಿದೆ. ಬಡತನದ ಸಮಸ್ಯೆಯನ್ನು ಚೆನ್ನಾಗಿ ಅರಿಯಲು ನಾವು ಸಂಪೂರ್ಣ ಬಡತನ ಹಾಗೂ ತುಲನಾತ್ಮಕ ಬಡತನಗಳ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸಬೇಕು. ಒಬ್ಬ ವ್ಯಕ್ತಿಯ ಸಮಗ್ರ ಬಡತನವೆಂದರೆ ಆತನ ವರಮಾನ ಅಥವಾ ಬಳಕೆಯ ಕನಿಷ್ಟ ಜೀವನಾಧಾರಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಜೀವಿಸಿರುವಷ್ಟು ಅಲ್ಪ ಪರಮಾಣದ್ದಾಗಿರುತ್ತದೆ. ಈ ಸಮಗ್ರ ಬಡತನದ ಸ್ಥಿತಿಯಿಂದಾಗಿ ಆತನು ತನ್ನ ಆರೋಗ್ಯ ಹಾಗೂ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ವಾಸ್ತವವಾಗಿ ಆತನು ಹಸಿದು ಕಂಗಾಲಾಗಿರಬಹುದು. ಇದಕ್ಕೆ ಬದಲಾಗಿ ಸಾಪೇಕ್ಷ ಬಡತನವು ಆರ್ಥಿಕ ಅಸಮತೋಲನತೆಯ ಜೊತೆಯಲ್ಲಿ ಮಿಳಿತಗೊಂಡಿರುವುದು. ಅವರು ಆರ್ಥಿಕವಾಗಿ ಹಿಂದುಳಿದ ಗುಂಪಿನಲ್ಲಿದ್ದು, ಮುಂದುವರೆದ ಗುಂಪಿಗಿಂತ ವರಮಾನದಲ್ಲಿ ಕಡಿಮೆ ಪಾಲನ್ನು ಪಡೆದಿರುತ್ತಾರೆ. ನಾವು ಬಡತನದ ಬಗ್ಗೆ ಮಾತನಾಡುವಾಗಲೆಲ್ಲ ಅದು ಸಮಗ್ರ ಬಡತನಕ್ಕೆ ಸಂಬಂಧಿಸಿದ್ದುದಾಗಿರುತ್ತದೆ. ಶ್ರೀಮಂತ ದೇಶಗಳು ಸಮಗ್ರ ಬಡತನವನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾಗಿದ್ದಾಗ್ಯೂ ತುಲನಾತ್ಮಕ ಬಡತನ ಅಲ್ಲಿ ಇದ್ದೇ ಇರುವುದಕ್ಕೆ ಅಲ್ಲಿನ ಆದಾಯದಲ್ಲಾಗಿರುವ ಅಸಮಾನ ಹಂಚಿಕೆಯ ಕಾರಣವಾಗಿರುತ್ತದೆ.

ಭಾರತದ ಏಳನೆಯ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ, ಗ್ರಾಮೀಣ ಪ್ರದೇಶದ ಪ್ರತಿವ್ಯಕ್ತಿಗೆ, ಪ್ರತಿ ದಿವಸಕ್ಕೆ, ೨೪೦೦ ಕ್ಯಾಲೋರಿಗಳಷ್ಟು ಪುಷ್ಠಿಕರ ಆಹಾರ, ನಗರ ಪ್ರದೇಶದ ಪ್ರತಿ ವ್ಯಕ್ತಿಗೆ ೨೧೦೦ ಕ್ಯಾಲೋರಿಗಳಷ್ಟು ಪುಷ್ಠಿಕರ ಆಹಾರದ ಅವಶ್ಯಕತೆಯ ಆಧಾರವನ್ನಾಗಿಸಿ ಕೊಂಡು ಬಡತನದ ರೇಖೆಯನ್ನು ಗುರುತಿಸಲು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿರುವುದನ್ನು ಪುನರುಚ್ಚರಿಸಲಾಗಿದೆ. ಆರ್ಥಿಕ ಮಾನದಿಂದ ಹೇಳುವುದಾದರೆ, ಬಡತನದ ರೇಖೆಯನ್ನು ೧೯೮೧-೮೫ನೇ ಸಾಲಿನ ಬೆಲೆಗಳಲ್ಲಿನ ಖರ್ಚು ವೆಚ್ಚವನ್ನಾಧರಿಸಿ ನಿರ್ಧರಿಸಲಾಗಿದೆ. ಈ ಆಧಾರದಂತೆ, ಗ್ರಾಮೀಣ ಪ್ರದೇಶದಲ್ಲಿ ಮಾಸಿಕ ತಲಾವಾರು ಗ್ರಾಹಕ ವೆಚ್ಚವು ರೂ. ೧೦೭.೦೦ (ಅಂದರೆ ರೂ. ೧೨೮೪.೦೦ ಪ್ರತಿ ವರ್ಷಕ್ಕೆ) ನಗರ ಪ್ರದೇಶಗಳಲ್ಲಿನ ಮಾಸಿಕ ತಲಾವಾರು ಗ್ರಾಹಕ ವೆಚ್ಚವು ರೂ. ೧೨೨.೦೦ (ಅಂದರೆ ರೂ. ೧೪೫೪.೦೦ ಪ್ರತಿ ವರ್ಷಕ್ಕೆ) ಬಡತನದ ರೇಖೆಯೆಂದು ಅಂದಾಜು ಮಾಡಲಾಗಿದೆ. ೫ ಜನರ ಕುಟುಂಬದ ಬಡತನದ ರೇಖೆಯ ಮಟ್ಟ ೬೪೦೦.೦೦ ರೂ. ವಾರ್ಷಿಕ ವರಮಾನ ಉಳ್ಳದ್ದು ಗ್ರಾಮೀಣ ಪ್ರದೇಶದಲ್ಲಾಗಿದ್ದರೆ, ರೂ. ೭೨೦೦.೦೦ ನಗರ ಪ್ರದೇಶದ್ದಾಗಿರುತ್ತದೆ. ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ೧೯೯೧-೯೨ನೇ ಸಾಲಿನ ಬೆಲೆಗಳಲ್ಲಿ ರೂ. ೧೧೮೦೦.೦೦ನ್ನು ಕುಟುಂಬದ ವಾರ್ಷಿಕ ವರಮಾನವನ್ನಾಗಿಟ್ಟುಕೊಂಡು ಬಡತನ ರೇಖೆಯನ್ನು ಗುರುತಿಸಲು ಆಧಾರವಾಗಿಟ್ಟುಕೊಳ್ಳಲಾಗಿದೆ.

ಬಡತನದ ಪ್ರಸಕ್ತ ನಿಯಕಾಂಕಗಳು (parameters) ಮತ್ತು ವಿಮರ್ಶೆಗಳು

೧. ಪುಷ್ಟಿಕರ ಆಹಾರವನ್ನಾಧರಿಸಿದ ಬಡತನದ ರೇಖೆಯ ಬಗ್ಗೆ ವಿಮರ್ಶೆಗಳು: ಈ ಸಂಬಂಧದಲ್ಲಿ ಕೆಳಕಂಡ ವಿಮರ್ಶೆಗಳನ್ನು ಗಮನಿಸಬಹುದು.

ಅ) ಕ್ಯಾಲೋರಿಗಳ ಸೇವನೆಯು ಪುಷ್ಠಿಕರ ಆಹಾರ ಮಟ್ಟವನ್ನು ಅಳೆಯುತ್ತದೆಯೇ ಹೊರತು ಬಡತನವನ್ನು ಅಳೆಯುವುದಿಲ್ಲ.

ಆ) ಕ್ಯಾಲೋರಿ ಸೇವನೆಯ ಮಟ್ಟದ ನಿರ್ಣಯ ಹೇಗೆ?

ಇ) ವೈವಿಧ್ಯತೆಯಿಂದ ಕೂಡಿದ ಜನ ಸಮುದಾಯದ ಕ್ಯಾಲೋರಿಗಳ ಅವಶ್ಯಕತೆಯು ವಯಸ್ಸು, ಲಿಂಗ ಮತ್ತು ಚಟುವಟಿಕೆಗಳನ್ನು ಅವಲಂಬಿಸಿ ವ್ಯತ್ಯಾಸ ಹೊಂದುತ್ತದೆ.

ಈ) ಸದ್ಯದ ವ್ಯಾಖ್ಯೆಯ ಕನಿಷ್ಟ ಅವಶ್ಯಕತೆಗಳನ್ನು ಮಾತ್ರ ಆಧರಿಸಿದೆಯೇ ಹೊರತು ಸಮತೋಲನ ಆಹಾರದ ಅವಶ್ಯಕತೆಗಳನ್ನು ಆಧರಿಸಿಲ್ಲ.

೨. ಬಡತನವನ್ನು, ಒಬ್ಬ ವ್ಯಕ್ತಿಯು ಕನಿಷ್ಟ ಒಪ್ಪತವಾದ ಬದುಕನ್ನು ಸಾಗಿಸಲು ಮೂಲ ಸಾಮರ್ಥ್ಯಗಳ ಅಭಾವದ ದೃಷ್ಟಿಯಿಂದ ನೋಡಬೇಕು. ಅಂದರೆ ಸಾಕಾಗುವಷ್ಟು ಪುಷ್ಟಿಕರ ಆಹಾರ, ರೋಗ ರುಜಿನ ಮತ್ತು ಮರಣಗಳನ್ನು ತಡೆಗಟ್ಟುವ ಸಾಧ್ಯತೆ, ಬಟ್ಟೆ ಮತ್ತು ವಸತಿ ಇವುಗಳ ಆಧಾರದಿಂದ ಬಡತನವನ್ನು ಅಳೆಯಬೇಕು.

೩. ಬಡತನವನ್ನು ತಗ್ಗಿಸುವುದನ್ನು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆಯ ದೃಷ್ಟಿಯಿಂದ ನೋಡಬಾರದಲ್ಲದೆ, ಜನರಿಗೆ ತಮ್ಮ ಅಭಿವೃದ್ಧಿ ಸಾಮರ್ಥ್ಯವನ್ನು ಸ್ಪಷ್ಟವಾಗಿ ಗ್ರಹಿಸುವಂತೆ ಶಿಕ್ಷಣ, ಪ್ರಾಥಮಿಕ ಆರೋಗ್ಯ ಸೇವೆ, ಶುದ್ಧವಾದ ಕುಡಿಯುವ ನೀರು, ವಸತಿ ಮತ್ತು ಪೌಷ್ಟಿಕ ಆಹಾರದ ಪ್ರಾಪ್ತಿಯ ಭರವಸೆಯನ್ನು ನೀಡುವುದರ ಮೂಲಕ ಕನಿಷ್ಟವಾದ ಒಪ್ಪಿತವಾದ ಜೀವನವನ್ನು ನಡೆಸಲು ಅವರಿಗೆ ಸಾಮರ್ಥ್ಯವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ನೋಡಬೇಕು.

ನಿರುದ್ಯೋಗ

ಈರ ನಿರುದ್ಯೋಗ ಸಾಮಾನ್ಯ ಜ್ಞಾನ, ಅವುಗಳ ವಿಧಗಳು ಹಾಗೂ ಅವುಗಳ ವಿವರಣೆಗಳ ಬಗ್ಗೆ ಈ ಮುಂದೆ ಚರ್ಚಿಸಲಾಗಿದೆ.

ನಿರುದ್ಯೋಗವು, ಕೆಲಸ ಮಾಡಲು ಸಿದ್ಧರಿರುವ ದೈಹಿಕವಾಗಿ ಸಮರ್ಥರಾದ ವ್ಯಕ್ತಿಗಳಿಗೆ ನಿರಂತರವಾಗಿ ವರಮಾನ ನೀಡುವ ಕೆಲಸಗಳಲ್ಲದ ಸ್ಥಿತಿಯನ್ನು ವರ್ಣಿಸುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ನಿರುದ್ಯೋಗಿಯೆ, ಅರೆ ಉದ್ಯೋಗಿಯೆ ಎಂಬುದನ್ನು ನಿರ್ಧರಿಸಲು ನಾಲ್ಕು ಮಾನದಂಡಗಳನ್ನು ಪರಿಗಣಿಸುತ್ತಾರೆ.

ಅ. ಕಾಲದ ಮಾನ ದಂಡ: ಒಂದು ವರ್ಷದಲ್ಲಿ ಒಂದು ಗೊತ್ತಾದ ಅವಧಿಗೆ ಅಂದರೆ ಗಂಟೆ ಅಥವಾ ದಿನಗಳಿಗಿಂತ ಕಡಿಮೆ ಅವಧಿಗೆ ಒಬ್ಬ ವ್ಯಕ್ತಿಯ ಸಂಪಾದನಾ ನಿರತನಾಗಿರುವುದು.

ಆ. ವರಮಾನದ ಮಾನ ದಂಡ: ಕನಿಷ್ಟ ನಿರೀಕ್ಷಿತ ವರಮಾನಕ್ಕಿಂತ ಕಡಿಮೆ ವರಮಾನವನ್ನು ಪ್ರತಿ ವರ್ಷ ಒಬ್ಬ ವ್ಯಕ್ತಿಯು ಗಳಿಸುವುದು.

ಇ. ಇಚ್ಚಾ ಸ್ವಾತಂತ್ಯ್ರದ ಮಾನದಂಡ : ಒಂದು ಸಂಸ್ಥೆಯ ಉತ್ಪನ್ನಕ್ಕೆ ಒಬ್ಬ ವ್ಯಕ್ತಿಯ ಕೊಡುಗೆಯು ಒಂದು ಗೊತ್ತಾದ  ಉತ್ಪತ್ತಿ ಮಟ್ಟಕ್ಕಿಂತ ಕಡಿಮೆ ಇದ್ದು, ಉದ್ಯೋಗದಿಂದ ತೆಗೆದುಹಾಕುವ ಸಾಧ್ಯತೆ.

ನಿರುದ್ಯೋಗದ ವಿಧಗಳು

೧. ಘರ್ಷಣಾ (Friction)ನಿರುದ್ಯೋಗ : ಈ ನಿರುದ್ಯೋಗವು ಕಾರ್ಮಿಕ ಶಕ್ತಿಯ ನಿಶ್ಚಲತೆ, ಕೆಲಸದ ಕಾಲಿಕ ಸ್ವಭಾವ, ಕಚ್ಚಾ ವಸ್ತುಗಳ ತಾತ್ಕಾಲಿ, ಕೊರತೆಗಳು, ಯಂತ್ರೋಪಕರಣಗಳು ಕೆಟ್ಟುಹೋಗುವುದು, ಉದ್ಯೋಗಾವಕಾಶಗಳ ಅಜ್ಞಾನ ಇದೇ ಮುಂತಾದ ಕಾರಣಗಳಿಂದ ಉಂಟಾಗುತ್ತದೆ.

೨. ಚಕ್ರೀಯ ನಿರುದ್ಯೋಗ: ಈ ಬಗೆಯ ನಿರುದ್ಯೋಗವು ವ್ಯಾಪಾರದ ಹಿಂಜರಿತದ ಘಟ್ಟದಲ್ಲಿ ಆಗುವ ಬದಲಾವಣೆಗಳಿಂದಾಗಿ ಈ ಹೆಸರನ್ನು ಪಡೆದಿರುತ್ತದೆ.

೩. ತಾಂತ್ರಿಕ ನಿರುದ್ಯೋಗ: ಉತ್ಪಾದನಾ ತಂತ್ರಗಳಲ್ಲಿ ಆಗುವ ಬದಲಾವಣೆಗಳ ಫಲವಾಗಿ ಈ ಬಗೆಯ ನಿರುದ್ಯೋಗವು ಉಂಟಾಗುತ್ತದೆ. ಅಲ್ಲದೆ, ಕಾರ್ಮಿಕ ಶಕ್ತಿಯ ಬದಲಾಗಿ ಬಂಡವಾಳ ಕೇಂದ್ರೀಕೃತ ಉತ್ಪಾದನೆಯು ಸಹ ಈ ಬಗೆಯ ನಿರುದ್ಯೋಗಕ್ಕೆ ಕಾರಣವಾಗಿದೆ.

೪. ಕಾಲಿಕ ನಿರು‌ದ್ಯೋಗ : ಋತುಮಾನದ ಸ್ಥಿತಿಗಳು ಅಥವಾ ರೀತಿ ನೀತಿ ಇತ್ಯಾದಿಗಳಲ್ಲಿ ಆಗುವ ಬದಲಾವಣೆಗಳಿಂದ ಒಂದು ಕ್ಷೇತ್ರದಲ್ಲಿನ ಚಟುವಟಿಕೆಗಳಲ್ಲಿ ಕಾಲಿಕ ವ್ಯತ್ಯಾಸಗಳ ಮೂಲಕ ಈ ನಿರುದ್ಯೋಗವು ಸಂಬಂಧಿಸುತ್ತದೆ.

೫. ಉತ್ಪಾದನಾ ಅಂಶಗಳ ಸ್ವರೂಪದಿಂದಾಗಿ ನಿರುದ್ಯೋಗ : ಉತ್ಪಾದನೆಯ ಅಂಶಗಳಾದ ಭೂಮಿ, ಕಾರ್ಮಿಕ ಶಕ್ತಿ ಮತ್ತು ಬಂಡವಾಳ ಇವುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದೇ ಉಂಟಾಗುವ ನಿರುದ್ಯೋಗ ಅಥವಾ ಅರೆ ಉದ್ಯೋಗ, ಭೂಮಿ, ಬಂಡವಾಳ ಅಥವಾ ನೈಪುಣ್ಯತೆಯ ಕೊರತೆ ಹಾಗೂ ಕಾರ್ಮಿಕ ಕ್ಷೇತ್ರದಲ್ಲಿನ ಅಸಮತೋಲನದಿಂದಾಗಿ ನಿರುದ್ಯೋಗ ಉಂಟಾಗುತ್ತದೆ.

೬. ಕೃತಕ ನಿರುದ್ಯೋಗ : ಈ ನಿರುದ್ಯೋಗವು ಯಾರಿಗೂ ಪ್ರತ್ಯಕ್ಷವಾಗಿ ಗೋಚರವಾಗದೆ, ಅಗೋಚರವಾಗಿರುತ್ತದೆ. ಉದಾಹರಣೆಗೆ, ಭಾರತದ ಹಳ್ಳಿಗಳಲ್ಲಿ ನಿರುದ್ಯೋಗವು ಈ ಬಗೆಯಲ್ಲಿ ಇರುತ್ತದೆ. ಏಕೆಂದರೆ, ಮೇಲು ನೋಟಕ್ಕೆ ಜನರು ಕೃಷಿ ಚಟುವಟಿಕೆಗಳಲ್ಲಿ ನಿರತವಾಗಿರುವಂತೆ ಗೋಚರಿಸುತ್ತದೆ. ಆದರೆ ಅಂತಹ ಉದ್ಯೋಗವು ಕೆಲಸವನ್ನು ಹಂಚಿಕೊಳ್ಳುವ ಒಂದು ಸಾಧನವಾಗಿರುತ್ತದೆ. ಅಂದರೆ, ಇರುವ ಕೆಲಸವನ್ನು ಅದು ಎಷ್ಟೇ ದೊಡ್ಡದಿದ್ದರೂ, ಹಲವಾರು ಕೆಲಸಗಾರರು ಹಂಚಿಕೊಂಡಿರುತ್ತಾರೆ. ಅಂತಹ ಸ್ಥಿತಿಯಲ್ಲಿ ಹಲವಾರು ಕೆಲಸಗಾರರನ್ನು ಕೈಬಿಟ್ಟರೂ ಸಹ ಅದೇ ಕೆಲಸವನ್ನು ಜನ ಮಾಡಿ ಮುಗಿಸಬಹುದಾಗಿರುತ್ತದೆ. ಹೀಗಾಗಿ, ಸದ್ಯದ ಉತ್ಪಾದನಾ ಮಟ್ಟವನ್ನು ಕಾಪಾಡಿಕೊಳ್ಳಲು ಅಲ್ಲಿ ನಿರತರಾಗಿರುವ ಎಲ್ಲಾ ಕೆಲಸಗಾರರ ಅವಶ್ಯಕತೆ ಇರುವುದಿಲ್ಲ. ಒಟ್ಟು ಉತ್ಪಾದನೆಗೆ ಅಂತಹ ಕೆಲಸಗಾರರ ಕೊಡುಗೆ ಈ ದೃಷ್ಟಿಯಿಂದ ಶೂನ್ಯ ಅಥವಾ ಶೂನ್ಯಕ್ಕೆ ಸಮೀಪ. ವಾಸ್ತವವಾಗಿ, ಭಾರತದ ಹೊಲಗದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಗಾರರು ನಿರತರಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟುಮಾಡುವುದಲ್ಲದೆ, ತನ್ಮೂಲಕ ಉತ್ಪಾದನೆಯನ್ನು ತಗ್ಗಿಸುತ್ತದೆ. ಇಲ್ಲಿ ಕೃತಕ ನಿರುದ್ಯೋಗ ಮತ್ತು ಪೂರ್ಣ ಉದ್ಯೋಗದ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸುವುದು ಉಪಯುಕ್ತ. ಪ್ರತಿಯೋರ್ವ ಸಮರ್ಥ ಮತ್ತು ಕೆಲಸ ಮಾಡಲು ಸಿದ್ದನಿರುವ ವ್ಯಕ್ತಿಗೆ ಕೆಲಸ ದೊರಕುವ ಸ್ಥಿತಿ ಅಥವಾ ಕೆಲಸ ಮಾಡಲು  ಸಿದ್ದನಿರುವ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ರೀತಿಯ ಕೆಲಸಕ್ಕೆ ಸದ್ಯ ಚಾಲ್ತಿ ಇರುವ ಮಜೂರಿ ದರದಲ್ಲಿ ಉದ್ಯೋಗ ನಿರತನಾಗಿರುವ ಸ್ಥಿತಿಯನ್ನು ಪೂರ್ಣ ಉದ್ಯೋಗ ಎನ್ನುತ್ತಾರೆ. ಆದರೆ, ಅದೇ ಕೃತಕ ನಿರುದ್ಯೋಗದ ಸಂಬಂಧದಲ್ಲಿ ಪ್ರತಿಯೋರ್ವನೂ ಮೇಲ್ನೋಟಕ್ಕೆ ಪೂರ್ಣ ಉದ್ಯೋಗ ನಿರತನಾಗಿರುವಂತೆ ತೋರುತ್ತದೆ. ಇದು ನಿಗದಿತ ಕೆಲಸವನ್ನು ಅವಶ್ಯಕತೆಗಿಂತ ಹೆಚ್ಚು ಮಂದಿ ಹಂಚಿಕೊಳ್ಳುವುದರಿಂದಾಗಿ ಸಂಭವಿಸುತ್ತದೆ. ಹೀಗಾಗಿ, ಯಾರೂ ಕೆಲಸವಿಲ್ಲದೆ ಇಲ್ಲ ಎಂಬಂತೆ ತೋರುತ್ತದೆ. ಆದರೆ ಕೆಲಸಗಾರರು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಇರುವುದರಿಂದ ಇಂತಹ ಸಂದರ್ಭಗಳಲ್ಲಿ ಪೂರ್ಣ ಉದ್ಯೋಗ ಇರುವುದಿಲ್ಲ ಎಂಬ ಅಂಶವನ್ನು ಅದು ಮರೆಮಾಡುತ್ತದೆ. ಇದಕ್ಕೆ ಪ್ರಮಾಣವೆಂದರೆ ಈ ಕಾರ್ಮಿಕ ಶಕ್ತಿಯ ಒಂದು ಭಾಗವನ್ನು ಕೈಬಿಟ್ಟರೂ ಉತ್ಪಾದನೆ ಕಡಿಮೆಯಾಗುವುದಿಲ್ಲ ಎಂಬುದೇ ಆಗಿದೆ. ಅದೇ ಪೂರ್ಣ ಉದ್ಯೋಗದ ಸಂಬಂಧದಲ್ಲಿ ಎಲ್ಲಾ ಕೆಲಸಗಾರರು ಸಮಾನವಾಗಿ ಉತ್ಪಾದನೆಗೆ ತಮ್ಮ ಕೊಡುಗೆಯನ್ನು ನೀಡುವುದರಿಂದ, ಈ ಕಾರ್ಮಿಕ ಶಕ್ತಿಯ ಒಂದು ಭಾಗವನ್ನು ಕೈಬಿಡುವುದರಿಂದ ಉತ್ಪಾದನೆಯು ಕುಂಠಿತಗೊಳ್ಳುತ್ತದೆ.

ಅರೆ ಉದ್ಯೋಗ: ಉದ್ಯೋಗ ನಿರತರಾದ ಜನರು ಒಟ್ಟು ಉತ್ಪಾದನೆಗೆ ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ಕೊಡುಗೆಯನ್ನು ನೀಡುವ ಸ್ಥಿತಿಯೇ ಅರೆ ಉದ್ಯೋಗ. ಉದಾಹರಣೆಗೆ, ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದವನೊಬ್ಬ ಸೂಕ್ತ ಕೆಲಸದ ಕೊರತೆಯಿಂದಾಗಿ ಬೂಟು ಪಾಲಿಶ್ ಕೆಲಸವನ್ನು ಪ್ರಾರಂಭಿಸಿದರೆ ಆಗ ಆತನನ್ನು ಅರೆ ಉದ್ಯೋಗಿ ಎಂದು ಕರೆಯಬಹುದು. ಏಕೆಂದರೆ, ಮೇಲ್ನೋಟ್ಟಕ್ಕೆ ಆತನನ್ನು ಉದ್ಯೋಗಿ ಹಾಗೂ ಯಾವುದೋ ಒಂದು ಉತ್ಪಾದನೆಯಲ್ಲಿ ತೊಡಗಿ ಸಂಪಾದಿಸುತ್ತಾನೆ ಎಂದು ಪರಿಗಣಿಸಿ, ಉತ್ಪಾದನೆಗೆ ತನ್ನದೇ ಕೊಡುಗೆ ನೀಡುತ್ತಾನೆ ಎಂದು ಭಾವಿಸಿದರೂ, ವಾಸ್ತವವಾಗಿ ಆತನ ತನ್ನ ಸಾಧ್ಯತೆ ಹಾಗೂ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗಿಯಾಗಿರುವುದಿಲ್ಲ. ಆದ್ದರಿಂದ, ಆತ ಪೂರ್ಣ ಉದ್ಯೋಗಿಯಲ್ಲ. ಇಲ್ಲಿಯೂ ಸಹ ಅರೆ ಉದ್ಯೋಗವು ಕೃತಕವಾಗಿರುತ್ತದೆ.

ತೆರೆದ  ನಿರುದ್ಯೋಗ : ಯಾವ ವ್ಯಕ್ತಿ ಕೆಲಸ ಮಾಡಲು ಸರ್ವಥಾ ಸಮರ್ಥನಿದ್ದು, ಇಷ್ಟವಿದ್ದು ಕೆಲಸವಿಲ್ಲದೆ ಇರುವ, ವರ್ಗವು ಇದಾಗಿರುತ್ತದೆ. ಆ ನಿರುದ್ಯೋಗವು ಅನಪೇಕ್ಷಿತವಾದ ವಿರಾಮದ ಸ್ವರೂಪದಲ್ಲಿರುತ್ತದೆ. ಅಂಥಹವರ ಸಂಖ್ಯೆಯು ಹಳ್ಳಿಗಳಲ್ಲಿ ವಿರಳವಾಗಿದ್ದರೆ, ನಗರಗಳಲ್ಲಿ ಅಧಿಕವಾಗಿರುತ್ತದೆ. ಬಹುತೇಕ ಜನರು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ ಅರಸಿ ಬಂದವರಾಗಿರುತ್ತಾರೆ. ಬಹಳಷ್ಟು ಜನರು ಮೂಲತಃ ನಗರ ಪ್ರದೇಶದವರಾಗಿರುತ್ತಾರೆ. ಈ ನಿರುದ್ಯೋಗವನ್ನು ನೋಡಬಹುದಾಗಿದ್ದು, ಅಂತಹ ಜನರ ಸಂಖ್ಯೆಯಿಂದ ಎಣಿಕೆ ಮಾಡಬಹುದಾಗಿದೆ. ಪುನಃ ತೆರೆದ ನಿರುದ್ಯೋಗವನ್ನು ನೋಡಬಹುದಾಗಿದ್ದು, ಅಂತಹ ಜನರ ಸಂಖ್ಯೆಯಿಂದ ಎಣಿಕೆ ಮಾಡಬಹುದಾಗಿದೆ. ಪುನಃ ತೆರೆದ ನಿರುದ್ಯೋಗವನ್ನು ಕೃತಕ ನಿರುದ್ಯೋಗ ಮತ್ತು ಅರೆ ನಿರುದ್ಯೋಗದಿಂದ ಬೇರೆ ಎಂದು ಗುರುತಿಸಬೇಕು. ಏಕೆಂದರೆ, ಇವುಗಳಲ್ಲಿ ಮೊದಲನೆಯದು ಕೆಲಸಗಾರರು ಸಂಪೂರ್ಣ ಕೆಲಸವಿಲ್ಲದ ಸ್ಥಿತಿಯಲ್ಲಿದ್ದರೆ, ಇತರೆ ಎರಡರಲ್ಲಿ ಅವರು ಮೇಲ್ನೋಟಕ್ಕೆ ಕಾರ್ಯನಿರತರೆಂದೂ, ಅವರ ಸಮಯವನ್ನು ಅಪ್ರಯೋಜಕವಾಗಿ ಕಳೆಯದೆ ದೂರ ಉಳಿಯುತ್ತಾರೆಂದೂ ಕಂಡುಬರುತ್ತದೆ.

ವಿದ್ಯಾವಂತ ನಿರುದ್ಯೋಗ : ಇದು ಕೆಲಸವಿಲ್ಲದ ವಿದ್ಯಾವಂತರಿಗೆ ಸಂಬಂಧಿಸಿದ್ದಾಗಿದೆ (ಅಂದರೆ ಮೆಟ್ರಿಕ್ ಪರೀಕ್ಷೆ ಉತ್ತೀರ್ಣಗೊಂಡ ಮತ್ತು ಉನ್ನತ ವಿದ್ಯಾಭ್ಯಾಸ ಹೊಂದಿರುವ) ಇವುಗಳಲ್ಲಿ ಕೆಲವರು ತೆರೆದ ನಿರುದ್ಯೋಗಕ್ಕೆ ಗುರಿಯಾಗಿರಬಹುದು ಮತ್ತು ಕೆಲವರು ಅರೆ ಉದ್ಯೋಗಿಗಳಾಗಿರಬಹುದು. ಮೊದಲನೆಯ ಬಗೆಯ ನಿರುದ್ಯೋಗಿ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ತಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸಗಳನ್ನು ಪಡೆಯದೇ ಇರಬಹುದು. ಬಹುತೇಕ ಪಟ್ಟಣಗಳು ಮತ್ತು ನಗರಗಳು ವಿದ್ಯಾವಂತ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿವೆ.

ನಿರುದ್ಯೋಗದ ಕಾರಣಗಳು: ನಿರುದ್ಯೋಗದ ವ್ಯಾಪಕತೆಗೆ ಈ ಕೆಳಕಂಡ ಕಾರಣಗಳನ್ನು ಗುರುತಿಸಬಹುದು.

ಅ)ಬಡತಬ

ಆ) ಅತ್ಯಧಿಕ ಜನಸಂಖ್ಯಾ ಬೆಳವಣಿಗೆ

ಇ) ಆರ್ಥಿಕ ಬೆಳವಣಿಗೆಯ ನಿಧಾನಗತಿ

ಈ) ಕೃಷಿಯ ಹಿಂದುಳಿಯುವಿಕೆ

ಉ) ರಾಷ್ಟ್ರೀಯ ಉದ್ಯೋಗ ನೀತಿಯ ಅಭಾವ

ಊ) ಕೈಗಾರಿಕೆ ಸಾಮರ್ಥ್ಯದ ಅಪೂರ್ಣ ಬಳಕೆ

ಋ) ಬಂಡವಾಳ ಕೇಂದ್ರೀಕೃತ ತಂತ್ರಗಳಿಗೆ ಒತ್ತು ನೀಡುವುದು

ಋ) ಖಾಸಗಿ ಉದ್ಯಮಗಳ ಬಗ್ಗೆ ಉತ್ತಮ ಸರ್ಕಾರಿ ನೀತಿಯ ಅಭಾವ

ಎ) ದೋಷಪೂರಿತ ಶಿಕ್ಷಣ ಪದ್ದತಿ

ಮಾಹಿತಿಯ ಮೂಲಗಳು ಹಾಗೂ ವಿಶ್ಲೇಷಣಾ ವಿಧಾನ

ಬಹಳಷ್ಟು ಬಡತನದ ಮೇಲಿನ ಅಧ್ಯಯನಗಳು ರಾಷ್ಟ್ರೀಯ ಮಾದರಿ ಸಮೀಕ್ಷೆಯಲ್ಲಿ ಸಂಗ್ರಹಿಸುವ ಕುಟುಂಬ ಗ್ರಾಹಕರ ವೆಚ್ಚದ ಮಾಹಿತಿಯನ್ನು ಅವಲಂಬಿಸಿರುತ್ತವೆ. ಈ ಮಾಹಿತಿಗಳು ೧೯೫೦ರ ಮಧ್ಯಭಾಗದಿಂದ ಪ್ರಾರಂಭವಾಗಿ, ೧೯೭೩-೭೪ರ ವರೆಗೆ ಅವಿಚ್ಚಿನ್ನವಾಗಿ ವಾರ್ಷಿಕ ಆಧಾರದಲ್ಲಿ ಲಭ್ಯವಿದೆ. ಅನಂತರ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯು ಈ ಮಾಹಿತಿಗಳನ್ನು ಪಂಚವಾರ್ಷಿಕ ಆಧಾರದ ಮೇಲೆ ಸಂಗ್ರಹಿಸಲು ನಿರ್ಧರಿಸಿತು. ಆದರೆ, ಈ ಮಾಹಿತಿಗಳ ಸಮಯಾಧಾರಿತ ಸರಣಿಯೊಂದನ್ನು ನಿರ್ಮಿಸುವ ಉದ್ದೇಶದಿಂದ ೧೯೮೬-೮೭ರಿಂದ ಪಂಚವಾರ್ಷಿಕ ಸಮೀಕ್ಷೆಗಳ ಮಾಹಿತಿಗಳಿಗೆ ಪೂರಕವಾಗಿ ಅಲ್ಪ ಪ್ರಮಾಣದ ಮಾದರಿಗಳಿಂದ ಇಂತಹ ಮಾಹಿತಿಗಳನ್ನು ವಾರ್ಷಿಕ ಆಧಾರದ ಮೇಲೆ ಸಂಗ್ರಹಿಸಬೇಕೆಂದು ಪುನಃ ನಿರ್ಧರಿಸಲಾಯಿತು. ಕುಟುಂಬಗಳ ಆದಾಯದ ಮಾಹಿತಿಗಳ ಅಭಾವದಲ್ಲಿ, ಬಡತನವನ್ನು ಅಧ್ಯಯನ ಮಾಡಲು ರಾಷ್ಟ್ರೀಯ ಮಾದರಿ ಸಮೀಕ್ಷೆಯಿಂದ ಹೊರಬೀಳುವ ಕುಟುಂಬ ಗ್ರಾಹಕರ ವೆಚ್ಚದ ಮಾಹಿತಿಗಳನ್ನು ಉಪಯೋಗಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಗ್ರಾಹಕರ ವೆಚ್ಚವು ಶಾಶ್ವತ ಆದಾಯಕ್ಕೆ ಉತ್ತಮ ಪ್ರಾತಿನಿಧ್ಯವಾಗಿದ್ದು, ಬಡತನದ ವಿಶ್ಲೇಷಣೆಗೆ ಕೇವಲ ಚಾಲ್ತಿ ಆದಾಯಕ್ಕೆ ಅನುಗುಣವಾಗಿರುವ ಕುಟುಂಬ ಆದಾಯ ಮಾಹಿತಿಗಿಂತ ಹೆಚ್ಚು ಯೋಗ್ಯವಾಗಿದೆ. ಬಹುತೇಕ, ಬಡತನದ ಸಂಶೋಧನಾ ಅಧ್ಯಯನಗಳು, ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ವ್ಯಾಪ್ತಿಯನ್ನು ಅಂದಾಜಿಸಲು ೧೯೬೦-೬೧ರ ಬೆಲೆಗಳ ಆಧಾರದಲ್ಲಿ ಮಾಸಿಕ ತಲಾ ಗ್ರಾಹಕ. ವೆಚ್ಚ ರೂ. ೧೫..೦೦ರ ಪ್ರಮಾಣವನ್ನು ಉಪಯೋಗಿಸಿವೆ.

ಒಬ್ಬ ವ್ಯಕ್ತಿಯ ಒಂದು ಗೊತ್ತಾದ ಕನಿಷ್ಟ ಮಟ್ಟದ ಸರಕುಗಳು ಮತ್ತು ಸೇವೆಗಳ ಸಮುದಾಯವನ್ನು ಪಡೆಯುವ ಸಾಧ್ಯತೆಯ ಭರವಸೆಗಾಗಿ ಈ ವೆಚ್ಚವನ್ನು ಮಾಡಲೇ ಬೇಕಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ. ಪ್ರಮಾಣಕವನ್ನು ೧೯೬೦-೬೧ರ ನಂತರದ ವರ್ಷಗಳಿಗೆ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವ ಒಂದೇ ಒಂದು ಸೂಚ್ಯಂಕವಾದ ಭಾರತ ಸರ್ಕಾರದ ಕಾರ್ಮಿಕ ಬ್ಯೂರೋವು ಸಂಗ್ರಹಿಸುವ ೧೯೬೦-೬೧=೧೦೦ ಆಧಾರವುಳ್ಳ ಕೃಷಿ ಕಾರ್ಮಿಕರ ಗ್ರಾಹಕರ ಬೆಲೆಗಳ ಸೂಚ್ಯಾಂಕವನ್ನು ಉಪಯೋಗಿಸಿ ಕೃತಕವಾಗಿ ಏರಿಸಲಾಗುತ್ತದೆ. ರಾಜ್ಯಗಳಲ್ಲಿನ ವಿವಿಧ ವಸ್ತುಗಳ ಬೆಲೆಗಳ ಹಾಗೂ ಹಣದುಬ್ಬರದ ದರಗಳ ವ್ಯತ್ಯಾಸದ ಕಾರಣದಿಂದಾಗಿ ರಾಜ್ಯಗಳಿಗೆ ಸಂಬಂಧಪಟ್ಟ ಬಡತನ ರೇಖೆಗಳನ್ನು ನಿಗದಿಮಾಡಲು, ಇಂತಹ ಪ್ರಮಾಣವನ್ನು ಭಾರತದ ಗ್ರಾಮೀಣ ಪ್ರದೇಶಗಳ ಬೆಲೆಗಳನ್ನು ಒಂದು ಗೊತ್ತಾದ ವರ್ಷಕ್ಕೆ ೧೦೦ ಎಂದಿಟ್ಟುಕೊಂಡು ರಾಜ್ಯಗಳಿಗೆ ಸಂಬಂಧಪಟ್ಟ ಗ್ರಾಹಕರ ಬೆಲೆಗಳ ಸೂಚ್ಯಾಂಕಗಳನ್ನು ಉಪಯೋಗಿಸಿಕೊಂಡು ಹೊಂದಾಣಿಕೆ ಮಾಡಲಾಗುತ್ತದೆ. ಹಾಗೂ ರಾಜ್ಯಗಳಿಗೆ ಸಂಬಂಧಪಟ್ಟ ಕೃಷಿ ಕಾರ್ಮಿಕರ ಬೆಲೆಗಳ ಸೂಚ್ಯಾಂಕಗಳನ್ನು ಉಪಯೋಗಿಸಿಕೊಂಡು ಈ ಹೊಂದಾಣಿಕೆ ಮಾಡಿದ ಬಡತನ ರೇಖೆಗಳನ್ನು ನಂತರದ ವರ್ಷಗಳಿಗೆ ಕೃತಕವಾಗಿ ಏರಿಸಲಾಗುತ್ತದೆ. ಹೀಗೆ, ರಾಜ್ಯಗಳ ಗ್ರಾಮೀಣ ಪ್ರದೇಶಗಳ ಬಡತನದ ವ್ಯಾಪಕತೆಯನ್ನು ನಿರ್ಧರಿಸಲು ಇಂತಹ ಪ್ರಾಮಾಣಿಕಗಳನ್ನು ಉಪಯೋಗಿಸಲಾಗುತ್ತದೆ. ಬಡತನದ ವ್ಯಾಪಕತೆಯನ್ನು ಅಂದಾಜಿಸುವ ವಿಧಾನಗಳಲ್ಲಿ, ಒಂದು ಗೊತ್ತಾದ ಬಡತನ ರೇಖೆಗೆ ಸಂಬಂಧಿಸಿದಂತೆ ಬಡವರ ಪ್ರಮಾಣದ ಅಂದಾಜುಗಳನ್ನು ನೀಡುವ “ತಲೆ ಎಣಿಕೆ ಪ್ರಮಾಣ” ಮತ್ತು ಬಡವರ ಪ್ರಮಾಣ, ಬಡತನ ರೇಖೆ ಹಾಗೂ ಬಡವರ ಸರಾಸರಿ ಬಳಕೆ ಹಾಗೂ ಬಡ ಕುಟುಂಬಗಳ ಬಳಕೆ ವೆಚ್ಚದ ಲಾರೆನ್ಸ್ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಸುಧಾರಿತ ಬಡತನ ಸೂಚ್ಯಾಂಕವಾದ ‘ಸೇನರ ಬಡತನ ಸೂಚ್ಯಾಂಕಗಳು’ ಬಹಳ ಜನಪ್ರಿಯವಾಗಿವೆ.

ಸಾಮಾಜಿಕ ಆರ್ಥಿಕ ಸಮೀಕ್ಷಾ ಸುತ್ತುಗಳ ಒಂದು ಭಾಗವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯು ಕಾರ್ಮಿಕ ಶಕ್ತಿ ಸಮೀಕ್ಷೆಗಳನ್ನು ನಡೆಸುತ್ತಿದೆ. ವಿವಿಧ ಜನಗಣತಿಗಳ ವ್ಯಾಖ್ಯೆಗಳಲ್ಲಿ ವ್ಯತ್ಯಾಸಗಳಿದ್ದರೂ ಸಹ, ಕೆಲಸಗಾರರು ಮತ್ತು ಕೆಲಸಗಾರರಲ್ಲದವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವುದು ನಮ್ಮ ಜನಗಣತಿಗಳ ಒಂದು ಸಂಯುಕ್ತ ಭಾಗವಾಗಿದೆ. ತಾಂತ್ರಿಕವಾಗಿ ಅಷ್ಟಾಗಿ ಸರಿಯಲ್ಲದಿದ್ದರೂ, ಮತ್ತೊಂದು ಜನಪ್ರಿಯ ನಿರುದ್ಯೋಗದ ಸೂಚಿ ಎಂದರೆ, ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ದಾಖಲು ಮಾಡಿಸಿರುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ. ಅಲ್ಲದೆ, ಉದ್ಯೋಗ ವಿನಿಮಯ ಕೇಂದ್ರಗಳು ಉದ್ಯೋಗ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತನ್ಮೂಲಕ ಸಂಘಟಿತ ಕ್ಷೇತ್ರಗಳಲ್ಲಿನ ಉದ್ಯೋಗ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ನಡೆಸುವ ಆರ್ಥಿಕ ಸಮೀಕ್ಷೆಗಳೂ ಸಹ ಉದ್ಯೋಗದ ಬಗ್ಗೆ ಮಾಹಿತಿಗಳನ್ನು ನೀಡುತ್ತಿವೆ. ಒಬ್ಬ ವ್ಯಕ್ತಿಯ ಉದ್ಯೋಗ ಮತ್ತು ನಿರುದ್ಯೋಗ, ದೀರ್ಘಾವದಿಯಲ್ಲಿ ಒಂದೇ ಆಗಿರದೆ, ಒಂದೇ ದಿನದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಜನಸಂಖ್ಯೆಯನ್ನು ಅದರ ಕಾರ್ಮಿಕ ಶಕ್ತಿಯ ಲಕ್ಷಣಗಳ ಆಧಾರದ ಮೇಲೆ (ಕಾರ್ಮಿಕ ಶಕ್ತಿಯಲ್ಲಿರುವ ಜನಸಂಖ್ಯೆ, ಕಾರ್ಮಿಕ ಶಕ್ತಿಯಲ್ಲಿರದ ಜನಸಂಖ್ಯೆ, ಉದ್ಯೋಗಿಗಳು, ನಿರುದ್ಯೋಗಿಗಳು, ಪೂರ್ಣೋದ್ಯೋಗಿಗಳು ಅರೆ ಉದ್ಯೋಗಿಗಳು, ಪ್ರತ್ಯಕ್ಷ ಅರೆ ಉದ್ಯೋಗಿಗಳು, ಅಪ್ರತ್ಯಕ್ಷ ಅರೆ ಉದ್ಯೋಗಿಗಳು) ವರ್ಗೀಕರಿಸುವದು ಬಹಳ ಕಷ್ಟ. ಈ ಮೂರು ಮುಖ್ಯ ಮಾಹಿತಿ ಆಧಾರಗಳ  ಮೂಲಕ ಉದ್ಯೋಗ ಮತ್ತು ನಿರುದ್ಯೋಗದ ಅಳತೆ ಮಾಡಲು ಉಪಯೋಗಿಸುವ ವ್ಯಾಖ್ಯೆಗಳು ಹಾಗೂ ವಿಧಾನಗಳು ಈ ಕೆಳಕಂಡಂತಿವೆ:

೧. ರಾಷ್ಟ್ರೀಯ ಮಾದರಿ ಸಮೀಕ್ಷೆ (ರಾಮಾಸ): ಪರಿಣಿತರ ಸಮಿತಿಯ (ದಾಂತವಾಲ ಸಮಿತಿ) ಕೆಲವು ನಿರ್ದಿಷ್ಟ ಶಿಫಾರಸ್ಸುಗಳ ಆಧಾರದ ಮೇಲೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ ಸುಧಾರಿತ ವ್ಯಾಖ್ಯೆಗಳು ಮತ್ತು ಅಳತೆಯ ವಿಧಾನಗಳನ್ನು ಅಳವಡಿಸಿಕೊಂಡು, ೧೯೭೨-೭೩ (೨೭ನೇ ಸುತ್ತ)ರಿಂದ ಕಾರ್ಮಿಕ ಶಕ್ತಿ ಸಮೀಕ್ಷೆಗಳ ಪಂಚವಾರ್ಷಿಕ ಸುತ್ತುಗಳ ಹೊಸ ಶ್ರೇಣಿಯನ್ನು ಪ್ರಾರಂಭಿಸಿತು. ಅಲ್ಲಿಂದೀಚೆಗೆ, ಇಂತಹ ನಾಲ್ಕು ಸಮೀಕ್ಷೆಗಳನ್ನು ೧೯೭೭-೭೮ ರಲ್ಲಿ ೩೨ನೇ ಸುತ್ತು ೧೯೮೩ರಲ್ಲಿ ೩೮ನೇ ಸುತ್ತು ೧೯೮೭-೮೮ರಲ್ಲಿ ೪೩ನೇ ಸುತ್ತು ಹಾಗೂ ೧೯೯೩-೯೪ರಲ್ಲಿ ೫೦ನೇ ಸುತ್ತುಗಳ ಮೂಲಕ ನಡೆಸಿದೆ. ಈ ಸಮೀಕ್ಷೆಗಳಲ್ಲಿ ಇದೇ ಜನಸಂಖ್ಯೆಯನ್ನು ಕಾರ್ಮಿಕ ಶಕ್ತಿಯ ವಿವಿಧ ಭಾಗಗಳಾಗಿ ಈ ಕೆಳಕಂಡ ೩ ಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಅ)ಸಾಮಾನ್ಯ ಸ್ಥಿತಿ, ಆ) ಪ್ರಸ್ತುತ ವಾರದ ಸ್ಥಿತಿ ಮತ್ತು ಇ) ಪ್ರಸ್ತುತ ನಿತ್ಯದ ಸ್ಥಿತಿ.

ಆ) ಸಾಮಾನ್ಯ ಸ್ಥಿತಿ: ಒಬ್ಬ ವ್ಯಕ್ತಿಯ ಸಾಮಾನ್ಯ ಸ್ಥಿತಿಯನ್ನು ಸಮೀಕ್ಷೆಯ ದಿನಾಂಕದಿಂದ ಹಿಂದಕ್ಕೆ ಒಂದು ವರ್ಷದ ಅವಧಿಯ ಚಟುವಟಿಕೆಯ ಅವಧಿಯನ್ನು ಆಧರಿಸಿ ಆ ವ್ಯಕ್ತಿಯು ಉದ್ಯೋಗಿಯೇ, ನಿರುದ್ಯೋಗಿಯೇ ಅಥವಾ ಕಾರ್ಮಿಕ ಶಕ್ತಿಯಿಂದ ಹೊರಗೆ ಉಳಿದಿದ್ದಾನೆಯೆ/ಳೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ. ೩೨ನೇ ಸ್ತುತಿನಿಂದ ಮುಖ್ಯ ಸಾಮಾನ್ಯ ಸ್ಥಿತಿ, ಉಪ ಮುಖ್ಯ ಸಾಮಾನ್ಯ  ಸ್ಥಿತಿಗಳ ಮಧ್ಯೆ ಮತ್ತೆ ವ್ಯತ್ಯಾಸವನ್ನು ಗುರುತಿಸಲಾಗುತ್ತಿದೆ. ಮುಖ್ಯ ಸಾಮಾನ್ಯ ಸ್ಥಿತಿಯನ್ನು ಈ ರೀತಿ ನಿರ್ಧರಿಸಲಾಗುತ್ತಿದೆ. ೧)ಉದ್ಯೋಗಿ ೨)  ನಿರುದ್ಯೋಗಿ ೩)ಕಾರ್ಮಿಕ ಶಕ್ತಿಯ ಹೊರಗೆ ಎಂಬುದನ್ನು ಆ ವ್ಯಕ್ತಿ ೧) ಸಮೀಕ್ಷಾ ದಿನಾಂಕಕ್ಕೆ ಹಿಂದಿನ ೩೬೫ ದಿನಗಳ ಅವಧಿಯಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಅವಧಿಯಲ್ಲಿ ಸಂಪಾದನಾ ಚಟುವಟಿಕೆಯಲ್ಲಿ ನಿರತನಾಗಿರುವುದು, ೨) ಅದೇ ಅವಧಿಯಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಅವಧಿಯಲ್ಲಿ ಸಂಪಾದನಾ ನಿರತನಾಗಿರದೆ ಕೆಲಸಕ್ಕೆ ದೊರಕುವ ಅಥವಾ ಕೆಲಸವನ್ನು ಹುಡುಕುವುದರಲ್ಲಿ ನಿರತನಾಗಿರುವುದು. ೩) ಅದೇ ಅವಧಿಯಲ್ಲಿ, ಸಂಪದನಾ ನಿರತನಾಗಿಯೂ ಇರದೆ, ಕೆಲಸಕ್ಕೆ ದೊರಕುವ ಅಥವಾ ಕೆಲಸವನ್ನು ಹುಡುಕುವುದರಲ್ಲಿ ನಿರತನಾಗಿರದೆ ಇರುವುದು. ಇವುಗಳ ಆಧಾರದ  ಮೇಲೆ ನಿರ್ಧರಿಸಲಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯು ಮೇಲಿನ (೨) ಮತ್ತು (೩) ವರ್ಗಗಳಿಗೆ ಸೇರದೆ ಅಲ್ಪ ಪ್ರಮಾಣದಲ್ಲಿ ಸಂಪಾದನಾ ನಿರತನಾಗಿದ್ದಾರೆ, ಆ ವ್ಯಕ್ತಿಯನ್ನು ಸಾಮಾನ್ಯ ಸ್ಥಿತಿಯ ಉಪ ಮುಖ್ಯ ಕೆಲಸಗಾರ ಎಂದು ಪರಿಗಣಿಸಲಾಗುತ್ತದೆ. ಎರಡೂ ಗುಂಪುಗಳು ಅಂದರೆ ಮುಖ್ಯ ಕೆಲಸಗಾರರು ಹಾಗೂ ಉಪ ಮುಖ್ಯ ಕೆಲಸಗಾರರನ್ನು ಒಟ್ಟಾಗಿ ಸಾಮಾನ್ಯ ಸ್ಥಿತಿಯ “ಒಟ್ಟಾರೆ ಕೆಲಸಗಾರರು” ಎಂದು ಪರಿಗಣಿಸಲಾಗುತ್ತದೆ.

ಆ) ಪ್ರಸ್ತುತವಾದ ಸ್ಥಿತಿ: ಸಮೀಕ್ಷಾ ದಿನಾಂಕದಿಂದ ಹಿಂದಿನ ಒಂದು ವಾರದ ಅವಧಿಯಲ್ಲಿ ಯಾವುದೇ ಒಂದು ದಿನದಲ್ಲಿ ಒಬ್ಬ ವ್ಯಕ್ತಿಯು ಕನಿಷ್ಟ ಒಂದು ಗಂಟೆಯಾದರೂ ಸಂಪಾದನಾ ನಿರತನಾಗಿದ್ದಾರೆ ಆ ವ್ಯಕ್ತಿಯನ್ನು ಪ್ರಸ್ತುತ ವಾರದ ಸ್ಥಿತಿಯಲ್ಲಿ ಉದ್ಯೋಗಿ ಎಂದು ಪರಿಗಣಿಸಲಾಗುತ್ತದೆ. ಅದೇ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಒಂದು ಗಂಟೆಯೂ ಸಂಪಾದನಾ ನಿರತನಾಗಿರುವ ಕೆಲಸಕ್ಕೆ ದೊರಕುವ ಅಥವಾ ಕೆಲಸವನ್ನು ಹುಡುಕುತ್ತಿದ್ದರೆ, ಆ ವ್ಕ್ಯತಿಯನ್ನು ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತದೆ. ಮಿಕ್ಕೆಲ್ಲರನ್ನು “ಕಾರ್ಮಿಕ ಶಕ್ತಿಯ  ಹೊರಗೆ” ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯು ಆ ಒಂದು ವಾರದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚಿಗೆ ವರ್ಗಗಳಲ್ಲಿ ವರ್ಗೀಕೃತನಾದರೆ ಅವನ ಅಥವಾ ಅವಳ ಸ್ಥಿತಿಯನ್ನು ಆದ್ಯತಾ ನಿಯಮದ ಪ್ರಕಾರ ನಿರ್ಧರಿಸಲಾಗುತ್ತದೆ. ಈ ನಿಯಮದಂತೆ “ಉದ್ಯೋಗದ ಸ್ಥಿತಿಯು ನಿರುದ್ಯೋಗದ ಸ್ಥಿತಿಯ ಮೇಲೂ ಹಾಗೂ ನಿರುದ್ಯೋಗದ ಸ್ಥಿತಿಯು ಕಾರ್ಮಿಕ ಶಕ್ತಿಯ ಹೊರಗೆ” ಸ್ಥಿತಿಯ ಮೇಲೂ ಆದ್ಯತೆಗಳನ್ನು ಪಡೆಯುತ್ತಾರೆ.

ಇ) ಪ್ರಸ್ತುತ ನಿತ್ಯದ ಸ್ಥಿತಿ: ಒಂದು ವಾರದ ಒಳಗಿನ ಚಟುವಟಿಕೆಗಳ ಸ್ಥಿತಿಯಲ್ಲಿ ಬದಲಾಗಬಹುದಾದ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ನಿತ್ಯದ ಸ್ಥಿತಿ ವಿಧಾನವು ವಾರದ ಪ್ರತಿ ದಿನಗಳಲ್ಲಿನ ಸ್ಥಿತಿಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತದೆ ಹಾಗೂ ಎಲ್ಲಾ ಏಳೂ ದಿನಗಳಿಗೂ ಗರಿಷ್ಟ ಎರಡು ಚಟುವಟಿಕೆಗಳನ್ನು ನಿರ್ಧರಿಸುತ್ತದೆ. ಈ ವರ್ಗೀಕರಣದ ಮಾನದಂಡ ಅರ್ಧ ದಿನವಾಗಿದೆ. ವಾರದ ಪ್ರತಿದಿನದ ಎರಡು ಅರ್ಧ ದಿನಗಳ ಸ್ಥಿತಿಗಳನ್ನು ಕೆಳಕಂಡಂತೆ ನಿರ್ಧರಿಸಲಾಗುತ್ತದೆ.

  ಚಟುವಟಿಕೆ ಸ್ಥಿತಿ
೧. ದಿನದಲ್ಲಿ ೪ ಗಂಟೆಗಳಿಗೂ ಹೆಚ್ಚು ಸಮಯ ಕೆಲಸ ಮಾಡುವುದು. ಎರಡೂ ಅರ್ಧ ದಿನಗಳಲ್ಲಿ ಉದ್ಯೋಗ
೨. ದಿನದಲ್ಲಿ ೧ ರಿಂದ ೪ ಗಂಟೆಗಳ ಕಾಲ ಕೆಲಸ ಮೂಡುವುದು ಹಾಗೂ ಇನ್ನುಳಿದ ಸಮಯದಲ್ಲಿ ಕೆಲಸಕ್ಕೆ ದೊರಕುವ ಅಥವಾ ಕೆಲಸ ಹುಡುಕುವುದು ಒಂದು ಅರ್ಧ ದಿನ ಉದ್ಯೋಗಿ ಹಾಗೂ ಮತ್ತೊಂದು ಅರ್ಧ ದಿನ ನಿರುದ್ಯೋಗಿ
೩. ದಿನದಲ್ಲಿ ೧ ರಿಂದ ೪ ಗಂಟೆಗಳ ಕಾಲ ಕೆಲಸ ಮಾಡುವುದು ಇನ್ನುಳಿದ ಸಮಯ ಕೆಲಸಕ್ಕೆ ದೊರಕದೆ ಇರುವುದು ಅಥವಾ ಕೆಲಸ ಹುಡುಕದೆ ಇರುವುದು ಒಂದು ಅರ್ಧ ದಿನ ಉದ್ಯೋಗ ಹಾಗೂ ಇನ್ನೊಂದು ಅರ್ಧದಿನ ಕಾರ್ಮಿಕ ಶಕ್ತಿಯ ಹೊರಗೆ
೪. ಕೆಲಸ ಮಾಡದೆ ಇರುವುದು ಅಂದರೆ ದಿನದ ೪ ಗಂಟೆಗಳಿಗೂ ಹೆಚ್ಚು ಕಾಲ ಕೆಲಸಕ್ಕೆ ದೊರಕುವ ಅಥವಾ ಕೆಲಸವನ್ನು ಹುಡುಕುವುದು. ಎಡರು ಅರ್ಧ ದಿನಗಳು
೫. ಕೆಲಸ ಮಾಡದೇ ಇರುವುದು ಆದರೆ ದಿನದ ೪ ಗಂಟೆಗಳಿಗೂ ಕಡಿಮೆ ಸಮಯ ಕೆಲಸಕ್ಕೆ ದೊರಕುವ ಅಥವಾ ಕೆಲಸವನ್ನು ಹುಡುಕುವುದು ಒಂದು ಅರ್ಧ ದಿನ ನಿರುದ್ಯೋಗಿ ಹಾಗೂ ಇನ್ನೊಂದು ಅರ್ಧ ದಿನ ಕಾರ್ಮಿಕ ಶಕ್ತಿಯ ಹೊರಗೆ
೬. ಕೆಲಸ ಮಾಡದಿರುವುದು ಹಾಗೂ ದಿನ ಪೂರ್ತಿ ಕೆಲಸಕ್ಕೆ ದೊರಕದೆ ಇರುವುದು ಮತ್ತು ಕೆಲಸ ಹುಡುಕದೆ ಇರುವುದು. ಎರಡೂ ಅರ್ಧ ದಿನಗಳು ಕಾರ್ಮಿಕ ಶಕ್ತಿಯ ಹೊರಗೆ

ಈ ರೀತಿ ವಾರದ ಎಲ್ಲಾ ೧೪ ಅರ್ಧ ದಿನಗಳನ್ನು ಉದ್ಯೋಗಿ, ನಿರುದ್ಯೋಗಿ ಅಥವಾ ಕಾರ್ಮಿಕ ಶಕ್ತಿಯ ಹೊರಗೆ ಎಂಬ ಅರ್ಧ ದಿನಗಳನ್ನಾಗಿ ಹಂಚಲಾಗಿದೆ. ಈ ಫಲಿತಾಂಶಗಳನ್ನು ವ್ಯಕ್ತಿಗತವಾಗಿ ಕೂಡಿದಾಗ ಉದ್ಯೋಗ, ನಿರುದ್ಯೋಗ ಹಾಗೂ ಕಾರ್ಮಿಕ ಶಕ್ತಿಯ ಒಟ್ಟಾರೆ ಅಳತೆಯು ವ್ಯಕ್ತಿಗಳ ದಿನಗಳಲ್ಲಿ ದೊರೆಯುತ್ತದೆ. ಸಾಮಾನ್ಯ ಸ್ಥಿತಿ ಮತ್ತು ಪ್ರಸ್ತುತ ವಾರದ ಸ್ಥಿತಿ ವರ್ಗೀಕರಣಗಳು ಉದ್ಯೋಗ, ನಿರುದ್ಯೋಗ ಅಥವಾ ಕಾರ್ಮಿಕ ಶಕ್ತಿಯ ದಿನಗಳಲ್ಲಿ ನೀಡಿದರೆ ಪ್ರಸ್ತುತ ನಿತ್ಯದ ಸ್ಥಿತಿ ವರ್ಗೀಕರಣವು ಉದ್ಯೋಗ, ನಿರುದ್ಯೋಗ ಮತ್ತು ಕಾರ್ಮಿಕ ಶಕ್ತಿಯ ಹಂಚಿಕೆಯನ್ನು ವ್ಯಕ್ತಿಗಳ ದಿನಗಳಲ್ಲಿ ನೀಡುತ್ತದೆ. ಸಾಮಾನ್ಯ ಸ್ಥಿತಿಯು, ಪ್ರಸ್ತುತವಾದ ಸ್ಥಿತಿ ಹಾಗೂ ನಿತ್ಯದ ಸ್ಥಿತಿಯ ಮರುವರ್ಗೀಕರಣವು ಪ್ರತ್ಯಕ್ಷ ಅರೆ ಉದ್ಯೋಗದ ಅಳತೆಯನ್ನು ನೀಡುತ್ತದೆ.

೨. ಬಡತನ ಮತ್ತು ನಿರುದ್ಯೋಗಕ್ಕಿರುವ ಸಂಬಂಧ ಹಾಗೂ ಅವುಗಳ ಮಟ್ಟ

ಬಡತನ ಮತ್ತು ನಿರುದ್ಯೋಗಗಳು ಸಯಾಮೀ ಅವಳಿಗಳಿದ್ದಂತೆ. ಒಬ್ಬ ವ್ಯಕ್ತಿಯು ನಿರುದ್ಯೋಗಿಯಾಗಿರುವುದರಿಂದ ಬಡವನಾಗಿರುತ್ತಾರೆ ಹಾಗೂ ಬಡವನಾಗಿರುವುದರಿಂದ ನಿರುದ್ಯೋಗಿಯಾಗಿರುತ್ತಾರೆ. ಬಡವನಾಗಿರುವುದರಿಂದ ಉದ್ಯೋಗಿಯಾಗಿರುವುದಕ್ಕೆ ಸಂಪನ್ಮೂಲಗಳಿರುವುದಿಲ್ಲ. ಇದನ್ನು ಭಾರತದಲ್ಲಿ ನಿರುದ್ಯೋಗದ ಮತ್ತು ತಲಾಮಾಸಿಕ ವೆಚ್ಚದ ಮುಖಾಂತರ ತಿಳಿಯಬಹುದು. ೧೯೭೭-೭೮ರಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಕೆಳಮಟ್ಟದ ಮಾಸಿಕ ತಲಾ ವೆಚ್ಚದ ಗುಂಪಿನಲ್ಲಿ ಶೇ. ೨೨.೪ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ. ೨೯ರಷ್ಟು ನಿರುದ್ಯೋಗದ ದರಗಳಿದ್ದವು. ಈ ತಲಾ ವೆಚ್ಚವು ಹೆಚ್ಚಾದಂತೆ ನಿರುದ್ಯೋಗ ದರವು ಕಡಿಮೆಯಾಗುತ್ತದೆ. ಉದಾಹರಣೆ: ಅತಿ ಹೆಚ್ಚಿನ ತಲಾವೆಚ್ಚ ರೂ. ೧೦೦.೦೦ಕ್ಕಿಂತ ಹೆಚ್ಚಿನ ಗುಂಪಿನಲ್ಲಿ ಶೇ. ೩.೨ ಹಾಗೂ ೪.೯ ನಿರುದ್ಯೋಗ ದರಗಳು ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿದ್ದವು.  ಕರ್ನಾಟಕದಲ್ಲಿಯೂ ಸಹ ೧೯೮೩ರಲ್ಲಿ ತಲಾ ಮಾಸಿಕ ವೆಚ್ಚವಾದ ರೂ. ೧೦೦ಕ್ಕಿಂತ ಕಡಿಮೆ ವೆಚ್ಚದ ಗುಂಪಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ. ೩೦ ನಿರುದ್ಯೋಗ ದರವಿದ್ದು, ಕ್ರಮೇಣ ಕಡಿಮೆಯಾಗುತ್ತಾ ಅತ್ಯಂತ ಹೆಚ್ಚಿನ ವೆಚ್ಚದ ಗುಂಪಾದ ರೂ. ೩೦೦ಕ್ಕಿಂತ ಹೆಚ್ಚಿನ ಗುಂಪಿನಲ್ಲಿ ನಿರುದ್ಯೋಗ ದರವು ಶೇ. ೪ ಆಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಅತ್ಯಂತ ಕೆಳಗಿನ ಗುಂಪಾದ ರೂ. ೧೫೦ಕ್ಕೆ ಕಡಿಮೆ ವೆಚ್ಚದ ಗುಂಪಿನಲ್ಲಿ ಅತ್ಯಂತ ಹೆಚ್ಚಿನ ಅಂದರೆ ಶೇ.೫೦ರಷ್ಟು ನಿರುದ್ಯೋಗ ದರವಿದ್ದು ಅತ್ಯಂತ ಹೆಚ್ಚಿನ ವೆಚ್ಚದ ಗುಂಪಾದ ರೂ. ೭೦೦ಕ್ಕಿಂತ ಹೆಚ್ಚಿನ ಗುಂಪಿನಲ್ಲಿಯೂ ಸಹ ನಿರುದ್ಯೋಗ ದರವು ಶೇ. ೨೩ರಷ್ಟು ಇತ್ತು.

ಬಡತನಕ್ಕೆ ಹಲವಾರು ಕಾರಣಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವುಗಳಲ್ಲಿ ನಿರುದ್ಯೋಗವು ಅತಿ ಮುಖ್ಯ ಕಾರಣವಾಗಿರುವುದರಿಂದ, ಈ ಪ್ರಬಂದದಲ್ಲಿ ಚರ್ಚೆಯನ್ನು ನಿರುದ್ಯೋಗಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಮುಂದೆ ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದ ಅಂದರೆ ಉದ್ಯೋಗ, ಅರೆ ಉದ್ಯೋಗಿಗಳ ಮಟ್ಟಗಳ ಬಗ್ಗೆ ಚರ್ಚಿಸಲಾಗಿದೆ.

ಆರ್ಥಿಕ ಮತ್ತು ಸಾಂಖ್ಯಿಸ್ಥಿಕ  ನಿರ್ದೇಶನಾಲಯವು ಇತ್ತೀಚೆಗೆ ಪ್ರಕಟಿಸಿರುವ “ಕರ್ನಾಟಕದಲ್ಲಿ ಉದ್ಯೋಗ ಮತ್ತು ನಿರುದ್ಯೋಗ ಪ್ರವೃತ್ತಿಯ ಅಧ್ಯಯನ” ಎಂಬ ಪ್ರಕಟಣೆಯಲ್ಲಿ ಉದ್ಯೋಗ, ನಿರುದ್ಯೋಗ, ಅರೆ ಉದ್ಯೋಗಿಗಳ ಚಿತ್ರಣವನ್ನು ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪಂಚವಾರ್ಷಿಕ ಸುತ್ತುಗಳ ಫಲಿತಾಂಶಗಳನ್ನು ಆಧರಿಸಿ ನೀಡಲಾಗಿದೆ. ಈ ಅಧ್ಯಯನದಂತೆ ಕರ್ನಾಟಕದಲ್ಲಿ ಕಾರ್ಮಿಕ ಶಕ್ತಿಯ ದರವು ಇಳಿಮುಖವಾಗುತ್ತಿದೆ. ಈ ದರವು ೧೯೭೨-೭೩ರಲ್ಲಿ ಜನಸಂಖ್ಯೆಯ ಶೇ. ೫೩ರಷ್ಟು ಇದ್ದುದು ೧೯೮೭-೮೮ರಲ್ಲಿ ಶೇ. ೪೬ಕ್ಕೆ ಇಳಿದಿತ್ತು ಆದರೆ ವಾಸ್ತವಿಕ ಕಾರ್ಮಿಕ ಶಕ್ತಿಯು ಇದೇ ಅವಧಿಯಲ್ಲಿ ೧೪೦.೩ ಲಕ್ಷದಿಂದ ೧೭೧.೬ ಲಕ್ಷಕ್ಕೆ ಏರಿದೆ.

ಕಾರ್ಮಿಕ ಶಕ್ತಿಯ ದರ ಹಾಗೂ ವಾಸ್ತವಿಕ ಕಾರ್ಮಿಕ ಶಕ್ತಿ ವಿಶೇಷವಾಗಿ, ೧೯೮೩ ರಿಂದ ೧೯೮೭-೮೮ ಅವಧಿಯಲ್ಲಿ ೭ ಪ್ರತಿಶತ ಅಂಶಗಳಷ್ಟು ಕಡಿಮೆಯಾಗಿ, ೩.೫ ಲಕ್ಷದಷ್ಟು ಜನರು ಕಾರ್ಮಿಕ ಶಕ್ತಿಯಿಂದ ಹೊರಗುಳಿದಿದ್ದರು. ಈ ಇಳಿಕೆ ನಗರ ಪ್ರದೇಶಗಳಲ್ಲಿ ಅತ್ಯಧಿಕವಾಗಿತ್ತು. ೧೯೭೨-೭೩ರಿಂದ ೧೯೮೭-೮೮ರ ೧೫ ವರ್ಷಗಳ ಅವಧಿಯಲ್ಲಿ ಕಾರ್ಮಿಕ ಶಕ್ತಿಯ ಬೆಳವಣಿಗೆಯ ಸರಾಸರಿ ವಾರ್ಷಿಕ ದರವು ಶೇ. ೧.೫ ಎಂದು ಅಂದಾಜಿಸಲಾಗಿದೆ. ಅದರಂತೆ ಉದ್ಯೋಗದ ಬೆಳವಣಿಗೆಯ ಸರಾಸರಿ ವಾರ್ಷಿಕ ದರವನ್ನು ೦.೯೭ ಎಂದು ಅಂದಾಜಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶೇ. ೨೫ರಷ್ಟು ಬಾಲ ಕಾರ್ಮಿಕರು ಹಾಗೂ ಬಾಲಕಿಯರಿಗಿಂತ ಬಾಲಕರು ಹೆಚ್ಚಿನ ಸಂಖ್ಯೆಯಲ್ಲಿದ್ದುದು ಕ್ರಮೇಣ ಕಡಿಮೆಯಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ಸಾಮಾನ್ಯ ಸ್ಥಿತಿಯ ನಿರುದ್ಯೋಗದ ದರಗಳು ಗಮನಾರ್ಹವಾಗಿ ಇಳಿದಿತ್ತು. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತವಾದದ ಸ್ಥಿತಿಯ ನಿರುದ್ಯೋಗದ ದರಗಳು ನಿರಂತರವಾಗಿ ಇಳಿದಿತ್ತು. ಆದರೆ ನಗರ ಪ್ರದೇಶಗಳ ಪುರುಷರು ನಿತ್ಯದ ಸ್ಥಿತಿಯ ನಿರುದ್ಯೋಗದ ದೃಷ್ಟಿಯಿಂದ ತೊಂದರೆಗೊಳಗಾಗಿದ್ದರು.

ಕಾರ್ಮಿಕ ಶಕ್ತಿಯ ಶೇಕಡವಾರು ಪ್ರಮಾಣದಲ್ಲಿ ಸಾಮಾನ್ಯ ಸ್ಥಿತಿಯ ನಿರುದ್ಯೋಗದ ದರಗಳು ಹೆಚ್ಚಾಗಿದ್ದು ಪ್ರಸ್ತುತ ನಿತ್ಯದ ಸ್ಥಿತಿಯ ದರಗಳು ಕಡಿಮೆಯಾದದ್ದು ಕಂಡು ಬರುತ್ತದೆ. ನಿರುದ್ಯೋಗದ ರಚನೆಯು ಅರೆ ಉದ್ಯೋಗದಿಂದ ತೆರೆದ ನಿರುದ್ಯೋಗದ ಕಡೆಗೆ ವಾಲಿತ್ತು ಎಂದು ಅಭಿಪ್ರಾಯ ಪಡಲಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ದಿನಗೂಲಿಗೆ ಬದಲಾಗಿ ನಿರಂತರ ಉದ್ಯೋಗವನ್ನು ಹೆಚ್ಚಾಗಿ ಬಯಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ಅರೆ ಉದ್ಯೋಗವು ಇಳಿಮುಖವಾಗುತ್ತಿದ್ದು, ವಿಶೇಷವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಮಹಿಳೆಯರಲ್ಲಿ ಹೆಚ್ಚಿನ ಇಳಿತ ಕಂಡು ಬಂದಿತ್ತು. ನಿರುದ್ಯೋಗ ಮತ್ತು ಅರೆ ಉದ್ಯೋಗವನ್ನು ಒಟ್ಟಾರೆ ತೆಗೆದುಕೊಂಡು ಕಾರ್ಮಿಕ ಶಕ್ತಿಯಲ್ಲಿ ಇವುಗಳ ಪ್ರಮಾಣವನ್ನು ಗಮನಿಸಿದರೆ, ೫ನೇ ಪಂಚವಾರ್ಷಿಕ ಯೋಜನೆಯಲ್ಲಿ ಶೇ. ೧೮.೬ ಇದ್ದುದು ೭ನೇ ಪಂಚವಾರ್ಷಿಕ ಅವಧಿಯಲ್ಲಿ ಶೇ. ೧೩.೫ಕ್ಕೆ ಇಳಿದಿರುವುದು ಗೋಚರವಾಗುತ್ತದೆ.

ನಿರುದ್ಯೋಗದ ಅಳತೆಯ ೩ನೇ ವಿಧಾನದ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ದಾಖಲಾದ ನಿರುದ್ಯೋಗಿಗಳ ಸಂಖ್ಯೆಯ ಆಧಾರದಲ್ಲಿ ೧-೪-೯೫ರಲ್ಲಿ ೧೬.೫೧ ಲಕ್ಷ ಮಂದಿ ರಾಜ್ಯದಲ್ಲಿ ನಿರುದ್ಯೋಗಿಗಳಿದ್ದರು. ಆದರೆ ಈ ಅಳತೆಯಲ್ಲಿ ಕೆಲವು ನ್ಯೂನತೆಗಳಿವೆ. ಅವುಗಳೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ದಾಖಲು ಮಾಡದೇ ಇರುವವರ ಸಂಖ್ಯೆ ಹಾಗೂ ಉದ್ಯೋಗದಲ್ಲಿದ್ದು ಉದ್ಯೋಗ ವಿನಿಮಯ ಕೇಂದ್ರಗಳ ದಾಖಲೆಗಳಲ್ಲಿ ಮುಂದುವರೆಯುತ್ತಿರುವವರ ಸಂಖ್ಯೆಯಿಂದಾಗಿ ಈ ಅಳತೆಯು ಪರಿಪೂರ್ಣವಲ್ಲ. ಒಟ್ಟು ೧೬.೫೧ ಲಕ್ಷ ದಾಖಲಾದ ಉದ್ಯೋಗಾಕಾಂಕ್ಷಿಗಳಲ್ಲಿ ಮೆಟ್ರಿಕ್ ವಿದ್ಯಾರ್ಹತೆಗಿಂತ ಕಡಿಮೆ ಇರುವವರು ೧೩.೮೫ ಲಕ್ಷ (ಶೇ. ೮೩.೯), ಪದವೀಧರರು ೧.೬೦ ಲಕ್ಷ (ಶೇ. ೯.೭), ಡಿಪ್ಲೊಮೋದಾರರು ೩೫ ಸಾವಿರ (ಶೇ. ೨.೧), ಸರ್ಟಿಫಿಕೇಟ್ ಹೊಂದಿರುವವರು ೪೯ ಸಾವಿರ (ಶೇ. ೩) ಹಾಗೂ ಸ್ನಾತಕೋತ್ತರ ಪದವಿ ಪಡೆದವರು ೧೫ ಸಾವಿರ (ಶೇ. ೦.೯) ಇದ್ದರು. ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ದಾಖಲಾದವರು ಸಂಖ್ಯೆಗೂ, ಉದ್ಯೋಗ ಪಡೆದವರ ಸಂಖ್ಯೆಗೂ ಮಧ್ಯೆ ಆಗಾಧವಾದ ಅಂತರವಿತ್ತು. ೧೯೯೪-೯೫ರ ಅಂತ್ಯಕ್ಕೆ ಉದ್ಯೋಗಾಕಾಂಕ್ಷಿಗಳೂ ೧೬.೫೧ ಲಕ್ಷ ಇದ್ದರೆ, ೨೪ ಸಾವಿರ ಖಾಲಿ ಹುದ್ದೆಗಳಿಗೆ ಸೂಚನೆ ನೀಡಲಾಗಿ, ಕೇವಲ ೧೨, ೪೦೦ ಮಂದಿಗೆ ಉದ್ಯೋಗ ನೀಡಿಕೆಯಾಗಿತ್ತು.

ಇನ್ನು ಉದ್ಯೋಗದ ಬಗ್ಗೆ ಹೇಳುವುದಾದರೆ, ಕಳೆದ ೩೦ ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಘಟಿತ ವಲಯದ ಉದ್ಯೋಗವು ಸರಾಸರಿ ವಾರ್ಷಿಕವಾಗಿ ೩೦ ಸಾವಿರದಂತೆ ಹೆಚ್ಚಿತ್ತು. ಇದು ಭಾರತದಲ್ಲಿ ವಾರ್ಷಿಕವಾಗಿ ೫ ಲಕ್ಷವಾಗಿತ್ತು. ೧-೪-೯೫ರಲ್ಲಿ ಕರ್ನಾಟಕದಲ್ಲಿ ಸಂಘಟಿತ ವಲಯದಲ್ಲಿ ಉದ್ಯೋಗವು ೧೪.೪೫ ಲಕ್ಷ ಆಗಿತ್ತು. ಇದು ಒಟ್ಟು ಉದ್ಯೋಗದ ಕೇವಲ ಶೇ. ೧೦ರಷ್ಟು ಮಾತ್ರ. ಒಟ್ಟು ಸಂಘಟಿತ ವಲಯದಲ್ಲಿ ಉದ್ಯೋಗವು ೧೪.೪೫ ಲಕ್ಷ ಆಗಿತ್ತು. ಇದು ಒಟ್ಟು ಉದ್ಯೋಗದ ಕೇಲವ ಶೇ. ೧೦ ರಷ್ಟು ಮಾತ್ರ. ಒಟ್ಟು ಸಂಘಟಿತ ವಲಯದ ಉದ್ಯೋಗದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಶೇಕಡಾ ಪ್ರಮಾಣವು ಕ್ರಮವಾಗಿ ೬೭.೫  ಮತ್ತು ೩೨.೫ ಆಗಿತ್ತು. ಉದ್ಯೋಗ ನಿರುದ್ಯೋಗದ ಸ್ಥಿತಿಯನ್ನು ವಿಶ್ಲೇಷಿಸಿದ ಮೇಲೆ, ಇವುಗಳನ್ನು ಒಂದು ನಿರ್ದಿಷ್ಟ ಅವಧಿಗೆ (೧-೪-೯೫) ಅಂದಾಜಿಸುವುದು ಉಪಯುಕ್ತ.

೧೯೮೧ನೇ ಜನಗಣತಿಯ ಮಾಹಿತಿಯ ಆದಾರದ ಮೇಲೆ ೧೫ ರಿಂದ ೫೯ ವರ್ಷ ವಯಸ್ಸಿನ ಗುಂಪಿನ ಜನ ಸಂಖ್ಯೆಗೆ ಕೆಲಸಗಾರರಲ್ಲಿದ್ದವರ ಪ್ರಮಾಣವನ್ನು ಉಪಯೋಗಿಸಿ ೧-೪-೯೫ರಂದು ಕರ್ನಾಟಕದಲ್ಲಿ ಸುಮಾರು ೨೨.೪ ಲಕ್ಷ ನಿರುದ್ಯೋಗಿಗಳಿದ್ದರೆಂದು ಅಂದಾಜು ಮಾಡಲಾಗಿದೆ. ಅಂತೆಯೇ, ರಾಷ್ಟ್ರೀಯ ಮಾದರಿ ಸಮೀಕ್ಷೆ ೪೮ನೇ ಸುತ್ತಿನ ಕಾರ್ಮಿಕ ಶಕ್ತಿಯ ದರವನ್ನು ೧೯೯೧ನೇ ಜನಗಣತಿಯ ಜನಸಂಖ್ಯೆಗೆ ಅನ್ವಯಿಸಿ ಹಾಗೂ ಕಾರ್ಮಿಕ ಶಕ್ತಿಯ ಸರಾಸರಿ ವಾರ್ಷಿಕ ಬೆಳವಣಿಗೆಯಾದ ಶೇ. ೧.೫ನ್ನು ಊಹಿಸಿ ೧-೪-೯೫ರಂದು ಕರ್ನಾಟಕದ ಒಟ್ಟು ಕಾರ್ಮಿಕ ಶಕ್ತಿ ೨೦೪.೧೬ ಲಕ್ಷ ಎಂದು ಅಂದಾಜಿಸಿದೆ. ಈ ಕಾರ್ಮಿಕ ಶಕ್ತಿಗೆ ನಿರುದ್ಯೋಗ ದರವನ್ನು ಅನ್ವಯಿಸಿದರೆ ಈ ಮಾಹಿತಿ ಮೂಲದ ಪ್ರಕಾರ ಕರ್ನಾಟಕದ ನಿರುದ್ಯೋಗಿಗಳ ಸಂಖ್ಯೆ ೯.೨೨ ಲಕ್ಷ ಆಗುತ್ತದೆ. ಹಾಗೂ ಉದ್ಯೋಗಿಗಳ ಸಂಖ್ಯೆ ೧೯೪-೯೪ ಲಕ್ಷ ಆಗುತ್ತದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ೪೩ ನೇ ಸುತ್ತಿನ ಅರೆ ಉದ್ಯೋಗಿ ದರವನ್ನು ಉಪಯೋಗಿಸಿ ೧-೪-೯೫ರಂದು ಒಟ್ಟು ಅರೆ ಉದ್ಯೋಗಿಗಳ ಸಂಖ್ಯೆ ೧೫.೭೭ ಲಕ್ಷ ಎಂದು ಅಂದಾಜಿದೆ. ವಿವರಗಳನ್ನು ಕೋಷ್ಟಕ – ೧ ರಲ್ಲಿ ಕೊಡಲಾಗಿದೆ.

ಕೋಷ್ಟಕ -೧
೧-೪-೧೯೯೫ರಂದು ಕಾರ್ಮಿಕ ಶಕ್ತಿ
, ನಿರುದ್ಯೋಗ ಮತ್ತು ಉದ್ಯೋಗದ ಅಂದಾಜುಗಳು

  ವಿವರಗಳು ಗಂಡಸರು ಹೆಂಗಸರು ಒಟ್ಟು
೧. ಕಾರ್ಮಿಕ ಶಕ್ತಿ
ಅ. ಗ್ರಾಮೀಣ ೯೯.೪೭ ೫೧.೯೦ ೧೫೧.೩೬
ಆ. ನಗರ ೪೧.೯೧ ೧೦.೮೮ ೫೨.೮೦
ಒಟ್ಟು ೧೪೧.೩೮ ೬೨.೭೮ ೨೦೪.೧೬
೨. ನಿರುದ್ಯೋಗ
ಅ. ಗ್ರಾಮೀಣ ೫.೪೨ ೦.೪೧ ೫.೮೩
ಆ.ನಗರ ೨.೮೨ ೦.೫೩ ೩.೩೪
ಒಟ್ಟು ೮.೨೪ ೦.೯೪ ೯.೨೨
೩. ಅರೆ ಉದ್ಯೋಗ
ಅ. ಗ್ರಾಮೀಣ ೭.೬೬ ೨.೭೬ ೧೦.೪೨
ಆ. ನಗರ ೪.೦೮ ೧.೨೭ ೫.೩೫
ಒಟ್ಟು ೧೧.೭೪ ೪.೦೩ ೧೫.೭೭
೪. ಉದ್ಯೋಗ
ಅ. ಗ್ರಾಮೀಣ ೪೪.೬೧ ೫೦.೩೧ ೧೪೪.೯೨
ಆ. ನಗರ ೩೯.೬೫ ೧೦.೩೭ ೫೦.೦೨
ಒಟ್ಟು ೧೩೪.೨೬ ೬೦.೬೮ ೧೯೪.೯೪

ಈ ಎಲ್ಲಾ ವಿಶ್ಲೇಷಣೆಯಿಂದ, ನಿರುದ್ಯೋಗ ಮತ್ತು ಅರೆ ಉದ್ಯೋಗವನ್ನು ನಮ್ಮ ರಾಜ್ಯದಲ್ಲಿ ಪ್ರತ್ಯೇಕಿಸಲು ಇರುವುದರಿಂದ, ಇವುಗಳನ್ನು ಒಟ್ಟಾಗಿ ನಿರುದ್ಯೋಗ ಎಂದು ಊಹಿಸಿಕೊಂಡರೆ ರಾಜ್ಯದ ನಿರುದ್ಯೋಗದ ಮಟ್ಟ ಕಾರ್ಮಿಕ ಶಕ್ತಿಯ ಶೇ. ೧೨ರಷ್ಟು ಆಗಿರುತ್ತದೆ. ಅಲ್ಲದೆ ಈ ಮಟ್ಟವು ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು ೮ನೇ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ವಿಶ್ಲೇಷಿಸಿರುವಂತೆ ಸುಮಾರು ಶೇ. ೧೫ರಿಂದ ೨೦ರ ಮಟ್ಟದಲ್ಲಿ ಇರುತ್ತದೆ.

ಈ ಮುಂದಿನ ಪುಟಗಳಲ್ಲಿ ಕರ್ನಾಟಕದ ಬಡತನದ ಮಟ್ಟವನ್ನು ನಿರ್ಧರಿಸುವ ಪ್ರಯತ್ನ ಮಾಡಲಾಗಿದೆ.

ಹಿಂದೆ ತಿಳಿಸಿರುವಂತೆ, ಕುಟುಂಬಗಳ ವರಮಾನದ ಮಾಹಿತಿಯ ಅಭಾವದಲ್ಲಿ, ಬಡತನವನ್ನು ಅಧ್ಯಯನ ಮಾಡಲು ರಾಷ್ಟ್ರೀಯ ಮಾದರಿ ಸಮೀಕ್ಷೆಯ ಕುಟುಂಬ ಗ್ರಾಹಕರ ವೆಚ್ಚದ ಮಾಹಿತಿಯನ್ನು ಉಪಯೋಗಿಸಲಾಗುತ್ತದೆ. ಕೋಷ್ಟಕ-೨ರಲ್ಲಿ ೧೯೮೭-೮೮ರಿಂದ  ೧೯೯೧-೯೨ರ ವರೆಗಿನ ಕುಟುಂಬ ಗ್ರಾಹಕ ವೆಚ್ಚದ ವರ್ಗವಾರು ಜನಸಂಖ್ಯೆ ಮತ್ತು ಕುಟುಂಬಗಳ ಹಂಚಿಕೆಯನ್ನು ನೀಡಲಾಗಿದೆ.

ಕೋಷ್ಟಕ – ೨
ಶೇಕಡಾವಾರು ತಲಾ ಮಾಸಿಕ ವೆಚ್ಚಗಳ ವರ್ಗವಾರು ಜನಸಂಖ್ಯೆ ಮತ್ತು ಕುಟುಂಬಗಳ ಹಂಚಿಕೆ ೧೯೮೭-೮೮ರಿಂದ ೧೯೯೨

ತಲಾ ವೆಚ್ಚ ಮಾಸಿಕ ವರ್ಗದ (ರೂ.ಗಳಲ್ಲಿ) ೧೯೮೭ ೮೮ ೮೮೮೯ ೮೯೯೦ ೯೦೯೧ ೯೧ ೧೯೯೨
(ಜುಲೈ-ಡಿಸೆಂಬರ್ ೯೧)
೧೧ಕ್ಕಿಂತ ಕಡಿಮೆ ಕುಟುಂಬ ೩೪.೦ ೨೫.೬ ೨೩.೬ ೨೧.೯ ೮.೭ ೫.೨
ಜನಸಂಖ್ಯೆ ೩೭.೪ ೨೯.೧ ೨೮.೬ ೨೪.೮ ೧೧.೧ ೮.೦
೧೧೦ರಿಂದ ೨೧೫ ಕುಟುಂಬ ೪೮.೪ ೫೪.೬ ೪೯.೮ ೪೬.೨ ೪೫.೮ ೪೫.೦
ಜನಸಂಖ್ಯೆ ೪೮.೯ ೫೩.೨ ೫೦.೯ ೪೪.೩ ೪೯.೬ ೫೦.೧
೨೧೫ರಿಂದ ೩೮೫ ಕುಟುಂಬ ೧೪.೩ ೧೬.೯ ೨೧.೮ ೨೯.೬ ೩೬.೬ ೩೮.೬
ಜನಸಂಖ್ಯೆ ೧೧.೬ ೧೩.೮ ೧೬.೯ ೨೯.೩ ೩೪.೪ ೩೫.೭
೩೮೫ಕ್ಕಿಂತ ಹೆಚ್ಚು ಕುಟುಂಬ ೩.೩ ೨.೯ ೪.೮ ೨.೩ ೮.೭ ೧೦.೦
ಜನಸಂಖ್ಯೆ ೨.೧ ೧.೯ ೩.೬ ೧.೬ ೫.೯ ೬.೨
೧೩೫ಕ್ಕಿಂತ ಕಡಿಮೆ ಜನಸಂಖ್ಯೆ ೩೦.೦ ೧೯.೫ ೨೦.೨ ೧೫.೯ ೭.೮ ೬.೧
ಕುಟುಂಬ ೨೩.೪ ೧೫.೦ ೧೪.೦ ೧೧.೨ ೬.೯ ೪.೫
೧೩೫ರಿಂದ ೨೫೫ ಜನಸಂಖ್ಯೆ ೪೪.೪ ೪೫.೮ ೪೦.೧ ೩೬.೧ ೪೧.೨ ೩೮.೩
ಕುಟುಂಬ ೪೧.೪ ೪೦.೮ ೩೫.೭ ೩೧.೯ ೩೫.೫ ೨೯.೨
೨೫೫ರಿಂದ ೭೦೦ ಜನಸಂಖ್ಯೆ ೨೪.೨ ೩೨.೬ ೩೬.೭ ೪೨.೫ ೪೬.೯ ೪೭.೮
ಕುಟುಂಬ ೩೨.೭ ೪೦.೧ ೪೫.೩ ೪೬.೯ ೫೦.೫ ೫೬.೧
೭೦೦ಕ್ಕಿಂತ ಹೆಚ್ಚು ಜನಸಂಖ್ಯೆ ೧.೪ ೨.೧ ೩.೦ ೫.೫ ೪.೦ ೭.೭
ಕುಟುಂಬ ೨.೬ ೩.೧ ೫.೦ ೧೦.೦ ೬.೫ ೧೦.೩

= ಅಲ್ಪ ಪ್ರಮಾಣದ ಮಾದರಿಗಳು = ಬಹುಪ್ರಮಾಣದ ಮಾದರಿಗಳು

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ತಲಾ ಮಾಸಿಕ ವೆಚ್ಚ ರೂ. ೧೧೦ಕ್ಕಿಂತ ಕಡಿಮೆ ವರ್ಗದ ಜನಸಂಖ್ಯೆಯ ಶೇಕಡ ಪ್ರಮಾಣವು ೧೯೮೭-೮೮ರಲ್ಲಿ ೩೭.೪ ಇದ್ದುದು, ೧೯೯೨ರಲ್ಲಿ ಶೇ. ೮ಕ್ಕೆ ಗಮನಾರ್ಹವಾಗಿ ಇಳಿಯಿತು. ಆದರೆ ಮುಂದಿನ ವರ್ಗವಾದ ರೂ. ೧೧೦-೨೫೫ರ ವರ್ಗದಲ್ಲಿ ಈ ಶೇಕಡ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಹಚ್ಚು ಕಡಿಮೆ ಅದು ಶೇ. ೫೦ರ ಅಂಚಿನಲ್ಲಿ ನಿಂತಿತ್ತು. ರೂ. ೨೧೫-೩೮೫ರ ವರ್ಗದಲ್ಲಿನ ಜನಸಂಖ್ಯೆಯ ಶೇಕಡ ಪ್ರಮಾಣವು ಇದೇ ಅವಧಿಯಲ್ಲಿ ೧೧.೬ರಿಂದ ೩೫.೭ಕ್ಕೆ ಏರಿತ್ತು. ಅತ್ಯಂತ ಹೆಚ್ಚಿನ ವರ್ಗವಾದ ರೂ. ೩೮೫ಕ್ಕಿಂತ ಹೆಚ್ಚಿನ ವರ್ಗದ್ಲಿ ಈ ಶೇಕಡ ಪ್ರಮಾಣವು ಈ ಐದು ವರ್ಗಗಳ ಅವಧಿಯಲ್ಲಿ ೨.೧ರಿಂದ ೬.೨ಕ್ಕೆ ಏರಿತ್ತು.

ಅದರಂತೆ, ನಗರ ಪ್ರದೇಶಗಳಲ್ಲಿ ರೂ. ೧೩೫ಕ್ಕಿಂತ ಕಡಿಮೆ ತಲಾಮಾಸಿಕ ವೆಚ್ಚದ ವರ್ಗದ ಜನಸಂಖ್ಯೆಯ ಶೇಕಡ ಪ್ರಮಾಣವು ೧೯೮೭-೮೮ರಿಂದ ೧೯೯೨ರ ಅವಧಿಯಲ್ಲಿ ೩೦ರಿಂದ ೬.೧ಕ್ಕೆ ಇಳಿದಿತ್ತು. ಆದರೆ ಮುಂದಿನ ವರ್ಗವಾದ ರೂ.೧೩೫ರಿಂದ ೨೫೫ರ ವರ್ಗದಲ್ಲಿ ಇದೇ ಅವಧಿಯಲ್ಲಿ ಶೇ. ೬ ಅಂಶಗಳಷ್ಟು ಇಳಿತವಿದ್ದರೂ ಅಂತಹ ಗಮನಾರ್ಹ ವ್ಯತ್ಯಾಸವೇನೂ ಕಂಡು ಬಂದಿಲ್ಲ. ರೂ. ೨೫೫-೭೦೦ ವರ್ಗದಲ್ಲಿ ಈ ಶೇಕಡ ಪ್ರಮಾಣವು ೨೪.೨ಕ್ಕೆ ಕ್ರಮೇಣವಾಗಿ ಏರಿತ್ತು. ಪುನಃ ಇದೇ ಅವಧಿಯಲ್ಲಿ ರೂ. ೭೦೦ಕ್ಕಿಂತ ಹೆಚ್ಚಿನ ವೆಚ್ಚದ ವರ್ಗದಲ್ಲಿ ಈ ಶೇಕಡ ಪ್ರಮಾಣವು ೧.೪ರಿಂದ ೭.೭ಕ್ಕೆ ಏರಿತ್ತು.

ಇಷ್ಟೇ ಅಲ್ಲದೆ, ಕೇಂದ್ರದಲ್ಲಿನ ಯೋಜನಾ ಆಯೋಗವು ಅಧಿಕೃತವಾಗಿ ರಾಜ್ಯಗಳ ಬಡತನ ರೇಖೆಯನ್ನು ನಿರ್ಧರಿಸಿ ಬಿಡುಗಡೆ ಮಾಡುತ್ತಿದೆ. ಕೋಷ್ಟಕ ೩ ಇಂತಹ ಮಾಹಿತಿಗಳನ್ನು ಒಳಗೊಂಡಿದೆ.