ಜನಸಂಖ್ಯಾ ಬೆಳವಣಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ನಮ್ಮ ದೇಶ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಾದರೆ ಜನಸಂಖ್ಯಾ ಬೆಳವಣಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಂಡಲ್ಲಿ ಮಾತ್ರ ಸಾಧ್ಯವಾದೀತು. ಈ ವಿಚಾರವನ್ನು ಬಹಳಷ್ಟು ಹಿಂದೆಯೇ ಮನಗಂಡು ಇತರೆ ಯಾವುದೇ ದೇಶಕ್ಕಿಂತ ಮೊದಲು ಕುಟುಂಬ ಯೋಜನಾ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಳ್ಳಲಾಯಿತು. ಇದೇ ಸಮಯದಲ್ಲಿ ರಾಜ್ಯಗಳಲ್ಲಿ ಸಹ  ಪ್ರಾರಂಭವಾದ ಕಾರ್ಯಕ್ರಮಗಳು ಯಾವ ರೀತಿಯಲ್ಲಿ ಫಲಪ್ರದವಾಗಿವೆ ಅನ್ನುವ ಒಂದು ಸಂಕ್ಷಿಪ್ತ ವಿಶ್ಲೇಷಣೆಯನ್ನು ಇಲ್ಲಿ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಅವಲೋಕನ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಅವುಗಳಲ್ಲಿ ಮೊದಲನೆಯದಾಗಿ, ನಮ್ಮ ಜನಸಂಖ್ಯೆಯ ಚಾರಿತ್ರಿಕ ಹಿನ್ನೆಲೆ ಮತ್ತು ಬೆಳವಣಿಗೆಯ ಪ್ರಮಾಣ, ವಿವಿಧ ಪ್ರದೇಶ ಹಾಗೂ ಜಿಲ್ಲೆಗಳಲ್ಲಿನ ಪರಿಸ್ಥಿತಿ, ಗ್ರಾಮಾಂತರ ಹಾಗೂ ನಗರಗಳ ಬೆಳವಣಿಗೆಯ ನಡುವಿನ ಅಂತರ ಇತ್ಯಾದಿ. ಎರಡನೆಯದಾಗಿ, ಜನನ ಹಾಗೂ ಮರಣ ಪ್ರಮಾಣ, ಮದುವೆಯ ವಯಸ್ಸು, ಸಂತಾನ ನಿಯಂತ್ರಣ ಕಾರ್ಯಕ್ರಮಗಳ ಸಂಯೋಜನೆ ಹಾಗೂ ಅವುಗಳ ಯಶಸ್ಸು ಇದರ ಬಗ್ಗೆ ಇರುವ ಮಾಹಿತಿಯನ್ನು ಗಮನಿಸಬೇಕಾಗುತ್ತದೆ. ಮೂರನೆಯದಾಗಿ, ಜನರಿಗೆ ಸಂತಾನ ನಿಯಂತ್ರಣ ಕಾರ್ಯಕ್ರಮಗಳ ವಿಚಾರವಾಗಿ ತಿಳುವಳಿಕೆ ಕೊಡುವ ಸಂಸ್ಥೆಗಳು ಹಾಗೂ  ಸಾಧನಗಳು ಮತ್ತು ಅಲ್ಲಿ ಲಭ್ಯವಿರುವ ಸೇವೆಗಳು ಹಾಗೂ ಜನರಿಂದ ಅವುಗಳ ಬಳಕೆ ಇವುಗಳ ಬಗ್ಗೆ ತಿಳಿಯಬೇಕಾಗುತ್ತದೆ. ಇನ್ನು ಹಲವಾರು ವಿಚಾರಗಳತ್ತ ನಾವು ಗಮನ ಹರಿಸಬಹುದಾದರೂ, ಈ ಸಂಕ್ಷಿಪ್ತ ಮಂಡನೆಯಲ್ಲಿ ಮೇಲೆ ತಿಳಿಸಿರುವ ಮೂರು ಮುಖ್ಯ ಅಂಶಗಳಿಗೆ ಮಾತ್ರ ಆಧ್ಯತೆ ಕೊಡಲಾಗಿದೆ. ಇವುಗಳನ್ನು ಪರಿಚಯಿಸುವುದೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.

೧. ಎ) ಒಟ್ಟಾರೆ ನೋಡಿದಾಗ, ಈ ಶತಮಾನದ ಆದಿಯಿಂದಲೂ ಕರ್ನಾಟಕದ ಜನಸಂಖ್ಯಾ ಬೆಳವಣಿಗೆಯು ಹೆಚ್ಚು ಕಡಿಮೆ ರಾಷ್ಟ್ರದ ಜನಸಂಖ್ಯಾ ಬೆಳವಣಿಗೆಯನ್ನು ಹೋಲುತ್ತದೆ. ೧೯೦೧ರಲ್ಲಿ ೧ ಕೋಟಿ ೩೦ ಲಕ್ಷದಷ್ಟಿದ್ದ ನಮ್ಮ ರಾಜ್ಯದ ಜನಸಂಖ್ಯೆ ದಶಕದಿಂದ ದಶಕಕ್ಕೆ ಬೆಳೆಯುತ್ತಾ ಬಂದು ೧೯೯೧ರಲ್ಲಿ ನಾಲ್ಕೂವರೆ ಕೋಟಿಯಷ್ಟಾಗಿದೆ. ಅಂದರೆ ೯೦ ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಜನಸಂಖ್ಯೆ ಮೂರುಪಟ್ಟು ಬೆಳೆದಿದೆ. ೧೯೧೧-೨೧ರ ದಶಕವನ್ನು ಬಿಟ್ಟರೆ ಉಳಿದೆಲ್ಲಾ ದಶಕಗಳಲ್ಲಿ ಜನಸಂಖ್ಯೆ ವೃದ್ಧಿಯಾಗುತ್ತಲೇ ಬಂದಿದೆ. (ಪಟ್ಟಿ-೧). ೧೯೧೧-೨೧ರಲ್ಲಿ ರಾಜ್ಯ ಪ್ಲೇಗು, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಪೀಡಿತವಾಗಿ ಬಹಳಷ್ಟು ಜನರು ಮರಣವನ್ನಪ್ಪಿದರು. ಕ್ರಮೇಣ ಈ ರೋಗಗಳ ಹತೋಟಿ ಹಾಗೂ ಇತರ ಆರೋಗ್ಯ ಸುಧಾರಣಾ ಕಾರ್ಯಕ್ರಮಗಳ ಸಂಯೋಜನೆಯಿಂದ ಜನಸಂಖ್ಯೆ ಬೆಳೆಯುತ್ತಲೇ ಇದೆಯಾದರೂ ಈ ಬೆಳವಣಿಗೆಯ ಗತಿ ಒಂದೇ ತೆರನಾಗಿಲ್ಲ. ೧೯೩೧ಕ್ಕೆ ಮುಂಚೆ ಸರಾಸರಿ ಶೇ. ೧ಕ್ಕೂ ಕಡಿಮೆ ಇದ್ದ ಬೆಳವಣಿಗೆಯ ದರ, ೧೯೩೧-೫೧ರ ನಡುವೆ ಶೇ. ಒಂದಕ್ಕೂ ಹೆಚ್ಚು ಬೆಳೆದು, ೧೯೫೧-೮೧ರಲ್ಲಿ ಈ ದರ ಶೇ. ೨ಕ್ಕೂ ಮೀರಿತು. ಈ ಬೆಳವಣಿಗೆಯ ದರವನ್ನು ಜಿಲ್ಲೆಗಳಿಗನುಸಾರವಾಗಿ ನೋಡಿದಲ್ಲಿ ಇದು ಪ್ರತ್ಯೇಕ ಭೌಗೋಳಿಕ ಲಕ್ಷಣಗಳನ್ನು ಒಳಗೊಂಡಿದೆ. ಹಿಂದುಳಿದ ಹೈದರಾಬಾದ್-ಕರ್ನಾಟಕ ಜಿಲ್ಲೆಗಳಲ್ಲಿ ಒಂದೇ ಸಮನಾಗಿ ಜನಸಂಖ್ಯೆ ಬೆಳೆಯುತ್ತಿದ್ದರೆ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬೆಳವಣಿಗೆಯ ದರವು ಗಣನೀಯವಾಗಿ ಇಳಿಮುಖವಾಗಿದೆ. (ಸೆನ್ಸಸ್ ಆಫ್ ಇಂಡಿಯಾ ಸೀರೀಸ್-೧೧ – ಕರ್ನಾಟಕ, ೧೯೯೧). ಬೆಳವಣಿಗೆಯ ಗತಿಯನ್ನು ಗಮನಿಸುತ್ತಾ ಬಂದಾಗ ಸ್ವಲ್ಪಮಟ್ಟಿಗೆ ಸಮಾಧಾನ ಕೊಡುವ ಅಂಶವೆಂದರೆ ೧೯೮೧-೯೧ರ ದಶಕದಲ್ಲಿ ಪ್ರಥಮ ಬಾರಿಗೆ ನಿರೀಕ್ಷಿಸಿದ ಜನಸಂಖ್ಯೆಗಿಂತ, ಎಣಿಕೆಯಲ್ಲಿ ೭ ಲಕ್ಷದಷ್ಟು ಕಡಿಮೆ ಕಂಡುಬಂದಿರುವುದು. ಒಟ್ಟಾರೆ ರಾಜ್ಯದ ಹಾಗೂ ವಿವಿಧ ಪ್ರದೇಶಗಳ ಬೆಳವಣಿಗೆಯನ್ನು ಗಮನಿಸಿದರೆ, ಪ್ರಾರಂಭದಿಂದಲೂ ಹೆಚ್ಚಿನ ಬೆಳವಣಿಗೆ ಕಂಡುಬಂದ ಪ್ರದೇಶವೆಂದರೆ, ರಾಜ್ಯದ ದಕ್ಷಿಣದ ಜಿಲ್ಲೆಗಳು. ಮಲೆನಾಡು, ಕರಾವಳಿ ಹಾಗೂ ಉತ್ತರದ ಜಿಲ್ಲೆಗಳು ಪ್ರಾರಂಭದಲ್ಲಿ ದಕ್ಷಿಣ ಜಿಲ್ಲೆಗಳಿಗಿಂತ ಹಿಂದಿದ್ದವು. ಆದರೆ, ಸ್ವಾತಂತ್ಯ್ರಾನಂತರ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನಸಂಖ್ಯಾ ಬೆಳವಣಿಗೆಯಲ್ಲಿ ಸಾಕಷ್ಟು ವೃದ್ಧಿ ಕಂಡುಬಂದಿತು. ಇತ್ತೀಚಿನ ದಶಕದಲ್ಲಿ ಮೇಲೆ ತಿಳಿಸಿರುವಂತೆ ಉತ್ತರದ ಜಿಲ್ಲೆಗಳಾದ ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಬೀದರ್, ಹಾಗೂ ಬಿಜಾಪುರದಲ್ಲಿ ಹೆಚ್ಚಿನ ವೇಗದಲ್ಲಿ ಜನಸಂಖ್ಯೆ ಬೆಳೆಯುತ್ತಿರುವುದನ್ನು ನೋಡಬಹುದು. ಕೊಡಗು ಜಿಲ್ಲೆಯ ಜನಸಂಖ್ಯಾ ಬೆಳವಣಿಗೆಯ ದರವು ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳೆರಡರಲ್ಲೂ ಅತಿ ಕಡಿಮೆ ದರವಾಗಿರುವುದು ಒಂದು ಪ್ರಮುಖ ಅಂಶವಾಗಿದೆ (ಪಟ್ಟಿ-೨).

ಈ ಮೇಲಿನ ಬೆಳವಣಿಗೆಯನ್ನು ಕೂಲಂಕಶವಾಗಿ ವಿಶ್ಲೇಷಿಸಿದರೆ, ಮೂರು ಪ್ರಮುಖ ಅಂಶಗಳು ಗೋಚರವಾಗುತ್ತವೆ.

೧. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ ಸ್ವಾತಂತ್ಯ್ರಾನಂತರ ತೀವ್ರಗತಿಯಲ್ಲಿ ಬೆಳೆಯತೊಡಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಮಲೇರಿಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ. ವ್ಯವಸಾಯಕ್ಕೆ ಅನುಗುಣವಾಗುವಂತೆ ಕಾಡು ಬಳಕೆ, ರಸ್ತೆ ಹಾಗೂ ಇತರೆ ಸಾರಿಗೆ ಸೌಲಭ್ಯಗಳ ಅಭಿವೃದ್ಧಿ, ಇತ್ಯಾದಿ.

೨. ತುಂಗಭದ್ರಾ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟುಗಳ ಪರಿಣಾಮವಾಗಿ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಮಂಡ್ಯದಂತಹ ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯಾ ಬೆಳವಣಿಗೆಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಂತಾಗಿದೆ.

೩. ಜನಸಂಖ್ಯಾ ಬೆಳವಣಿಗೆಯಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಈ ದರ ಹೆಚ್ಚಾಗಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರ ರಾಜ್ಯದ ಹತ್ತನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ್ದು, ತೀವ್ರ ಗತಿಯಲ್ಲಿ ಬೆಳೆಯುತ್ತಿರುವುದನ್ನು ನಾವು ಕಾಣಬಹುದು. ಅದರಲ್ಲಿಯೂ ೧೯೪೧-೫೧  ಮತ್ತು ೧೯೭೧-೮೧ ರ ದಶಕಗಳಲ್ಲಿ ರಾಜಧಾನಿಯ  ಜನಸಂಖ್ಯಾ ಬೆಳವಣಿಗೆ ದಾಖಲೆಯನ್ನೇ ಸ್ಥಾಪಿಸಿತು. ನಗರ ಹಾಗೂ ಪಟ್ಟಣಗಳಲ್ಲಿ ಈ ರೀತಿ ಜನಸಂಖ್ಯೆ ಬೆಳೆಯಲು ಅಲ್ಲಿ ಸ್ಥಾಪಿಸಲಾಗಿರುವ ಕೈಗಾರಿಕೆಗಳು ಹಾಗೂ ಇತರ ವಾಣಿಜ್ಯ ಹಾಗೂ ವಿದ್ಯಾಭ್ಯಾಸದ ಚಟುವಟಿಕೆಗಳು ಮುಖ್ಯ ಕಾರಣಗಳಾಗಿವೆ. ಈ ಬೆಳವಣಿಗೆಯು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿದೆ, ಇತರ ಪ್ರಮುಖ ನಗರ ಹಾಗೂ ಪಟ್ಟಣಗಳಿಗೂ ಅನ್ವಯಿಸುತ್ತದೆ.

೧. ಬಿ) ನಮ್ಮ ರಾಜ್ಯದ ಜನಸಂಖ್ಯಾ ಸಾಂದ್ರತೆ ರಾಷ್ಟ್ರಮಟ್ಟಕ್ಕಿಂತ ಕಡಿಮೆ ಇದ್ದು, ದಶಕದಿಂದ ದಶಕಕ್ಕೆ ವೃದ್ಧಿಯಾಗುತ್ತಿರುವುದನ್ನು ಕಾಣುತ್ತೇವೆ. ೧೯೦೧ರಲ್ಲಿ ಪ್ರತಿ ಚದುರ ಕಿಲೋಮೀಟರಿಗೆ ಕೇವಲ ೬೮ರಷ್ಟಿದ್ದು, ಸ್ವಾತಂತ್ಯ್ರಾನಂತರ, ಅಂದರೆ ೧೯೫೧ರಲ್ಲಿ ೧೦೦ನ್ನು ದಾಟಿತು. ಆದರೆ ೧೯೯೧ರ ಜನಗಣತಿಯ ಪ್ರಕಾರ ಇದು ೨೩೫ಕ್ಕೆ ತಲುಪಿದೆ. ಜನಸಂಖ್ಯಾ ಸಾಂದ್ರತೆಯು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚಿನ ಜನ ಸಾಂದ್ರತೆ ಇರುವ ಪ್ರದೇಶ ಬೆಂಗಳೂರು ನಗರ. ಇಲ್ಲಿ ಪ್ರತಿ ಚದುರ ಕಿಲೋಮೀಟರಿಗೆ ೨೨೦೩ ಜನ ಇದ್ದಾರೆ. ಅತಿ ಕಡಿಮೆ ಜನ ಸಾಂದ್ರತೆ ಇರುವ ಜಿಲ್ಲೆಗಳೆಂದರೆ ಕೊಡಗು, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು. ಇದಕ್ಕೆ ಮುಖ್ಯ ಕಾರಣವೆಂದರೆ ಈ ಜಿಲ್ಲೆಗಳಲ್ಲಿ ಹೆಚ್ಚು ಕಾಡು ಹಾಗೂ ತೋಪುಗಳು ಇರುವುದು. ಬಯಲು ಸೀಮೆಯಲ್ಲಿರುವ ಕೋಲಾರ, ಮೈಸೂರು  ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಜನಸಾಂದ್ರತೆ ಕಂಡುಬರುತ್ತದೆ. ಕೋಲಾರದ ಚಿನ್ನದ ಗಣಿ, ವಿಶ್ವವಿಖ್ಯಾತ ಪ್ರವಾಸಿ ಕೇಂದ್ರವಾಗಿರುವುದರಿಂದ ಮೈಸೂರು ಹಾಗೂ ನೀರಾವರಿ ಸೌಲಭ್ಯವಿರುವುದರಿಂದ ಮಂಡ್ಯ ಜನರನ್ನು ಹೆಚ್ಚಿಗೆ ಆಕರ್ಷಿಸಿರಬಹುದು. ಹೈದರಬಾದ್ ಕರ್ನಾಟಕ ಪ್ರದೇಶಗಳಲ್ಲಿರುವ ದೊಡ್ಡ ಜಿಲ್ಲೆಗಳಾದ ರಾಯಚೂರು, ಗುಲ್ಭರ್ಗಾಗಳಲ್ಲಿ ಕಡಿಮೆ ಜನಸಾಂದ್ರತೆ ಇದೆ. ಆದರೆ ಪಕ್ಕದಲ್ಲೇ ಇರುವ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಜನಸಾಂದ್ರತೆ ಕಂಡುಬರುತ್ತದೆ. ಬಹುಶಃ ತುಂಗಭದ್ರಾ ಜಲಾಶಯ ಹಾಗೂ ಕೈಗಾರಿಕಾ ಅಭಿವೃದ್ಧಿ ಇದಕ್ಕೆ ಕಾರಣವಿರಬಹುದು.

೧. ಸಿ) ಜನಾಂಗದ ಸ್ಥಿತಿಯ ವಿವರಣೆಯನ್ನು ಕೊಡುವಲ್ಲಿ ಮಹತ್ವಪೂರ್ಣವಾದ ಮತ್ತೊಂದು ಅಂಶವೆಂದರೆ ಸ್ತ್ರೀ-ಪುರುಷರ ಪರಸ್ಪರ ಪ್ರಮಾಣ. ಎಲ್ಲಾ ಮುಂದುವರೆದ ರಾಷ್ಟ್ರಗಳಲ್ಲೂ ಪುರುಷರಿಗಿಂತ ಸ್ತ್ರೀಯರೇ ಹೆಚ್ಚಾಗಿರುತ್ತಾರೆ. ಕರ್ನಾಟಕದಲ್ಲಿ ೧೯೦೧ರಲ್ಲಿ ಪ್ರತಿ ಸಾವಿರ ಪುರುಷರಿಗೆ ೯೮೩ ಮಹಿಳೆಯರಿದ್ದರೆ, ಕ್ರಮೇಣ ಈ ಪ್ರಮಾಣ ಕಡಿಮೆಯಾಗುತ್ತಾ ಬಂದು, ೧೯೯೧ರ ಹೊತ್ತಿಗೆ ೯೬೦ ಆಗಿದೆ. ಇದಕ್ಕೆ ಸ್ತ್ರೀಯರ ಸ್ಥಾನಮಾನ ಉತ್ತಮ ಸ್ಥಿತಿಯಲ್ಲಿಲ್ಲದಿರುವುದಲ್ಲದೆ, ಈ ಪರಿಸ್ಥಿತಿಗೆ ನಗರೀಕರಣವು ಒಂದು ಕಾರಣವೆಂದು ಹೇಳಬಹುದು. ಏಕೆಂದರೆ ನಗರಕ್ಕೆ ವಲಸೆ ಬರುವವರಲ್ಲಿ ಪುರುಷರೇ ಹೆಚ್ಚು. ಎಲ್ಲಿ ಸಂತಾನ ಉತ್ಪತ್ತಿ ಹೆಚ್ಚಾಗಿದೆಯೋ ಅಲ್ಲಿ ತಾಯಿ ಹಾಗೂ ಶಿಶುಗಳ ಮರಣ ದರವು ಹೆಚ್ಚಾಗಿರುವ ಸಾಧ್ಯತೆ ಇದೆ. ಇದಲ್ಲದೆ ವಿದ್ಯಾಭ್ಯಾಸ, ಆರೋಗ್ಯ ಸೌಲಭ್ಯಗಳು, ಆಹಾರ ಪೂರೈಕೆ, ಪರಿಸರ ಇತ್ಯಾದಿ ಸಹ ಸ್ತ್ರೀ ಪುರುಷರ ಪ್ರಮಾಣದ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ನಮ್ಮ ರಾಜ್ಯದಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚಿರುವ ಜಿಲ್ಲೆಯೆಂದರೆ ದಕ್ಷಿಣ ಕನ್ನಡ ಜಿಲ್ಲೆ. ಈ ಜಿಲ್ಲೆ ರಾಷ್ಟ್ರದಲ್ಲೇ ಅತಿ ಹೆಚ್ಚು ಸ್ತ್ರೀಯರ ಪ್ರಮಾಣವಿರುವ ಕೇರಳ ರಾಜ್ಯದ ಪಕ್ಕದಲ್ಲಿರುವುದಲ್ಲದೆ, ಇಲ್ಲಿನ ಗಂಡಸರು ವ್ಯಾಪಾರ ಅಥವಾ ನೌಕರಿಯ ದೃಷ್ಟಿಯಿಂದ ಮುಂಬಯಿ ಅಥವಾ ಇತರೆ ಕಡೆಗಳಿಗೆ ಹೋಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಈ ಜಿಲ್ಲೆಯಲ್ಲಿ ಸ್ತ್ರೀಯರಿಗೆ ಅನುಕೂಲಕರವಾದ ವಿದ್ಯಾಭ್ಯಾಸ ಮಟ್ಟ, ಮದುವೆ ವಯಸ್ಸು ಮುಂತಾದವುಗಳನ್ನು ನಾವು ಕಾಣಬಹುದು. ಹಾಸನ ಜಿಲ್ಲೆಯಲ್ಲಿ ಮಾತ್ರ ನಾವು ಗಂಡು ಹೆಣ್ಣುಗಳು ಸಮಾನ ಪ್ರಮಾಣದಲ್ಲಿ ಇರುವುದನ್ನು ನೋಡಬಹುದು.

೧. ಡಿ) ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನಸಂಖ್ಯಾ ಬೆಳವಣಿಗೆಯ ಅಂತರ ಗಮನಿಸಿದರೆ ೧೯೮೧ರ ಜನಗಣತಿಯ ಪ್ರಕಾರ ೨೮೧ ಇದ್ದ ಪಟ್ಟಣಗಳು ೧೯೯೧ಕ್ಕೆ ೩೦೬ ಆಗಿವೆ. ಅದೇ ರೀತಿ ೧೯೮೧ರಲ್ಲಿ ಕೇವಲ ೭ ಉಪನಗರಗಳಿದ್ದರೆ ೧೯೯೧ರಲ್ಲಿ ಇನ್ನೂ ೧೫ ಉಪನಗರಗಳು ಸೇರ್ಪಡೆಯಾಗಿವೆ. ಒಟ್ಟು ೨೨ ನಗರಗಳ ಪೈಕಿ ೧೭ ನಗರಗಳಲ್ಲಿ ೧ ಲಕ್ಷಕ್ಕೂ ಮೇಲ್ಪಟ್ಟು ಜನಸಂಖ್ಯೆ ಇರುವುದೊಂದು ವಿಶೇಷ. ಒಟ್ಟಿನಲ್ಲಿ ಹೇಳುವುದಾದರೆ ೧೯೦೧ರಲ್ಲಿ ೧೦೦ ಜನರಲ್ಲಿ ೧೩ ಜನ ಮಾತ್ರ ನಗರ ವಾಸಿಗಳಿದ್ದರೆ, ೧೯೯೧ರಲ್ಲಿ ಇದು ಶೇ. ೩೧ ಆಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ನಗರ ವಾಸಿಗಳಿದ್ದರೆ (ಶೇ. ೮೫), ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮೀಣವಾಸಿಗಳಿದ್ದಾರೆ (ಶೇಕಡಾ ೮೫). ಪ್ರತಿ ೧೦೦ ನಗರವಾಸಿಗಳಲ್ಲಿ ೩೦ ಜನ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಸಮಾಡುತ್ತಾರೆ. ರಾಜ್ಯದಲ್ಲಿ ಒಟ್ಟು ೨೭, ೦೨೮ ಹಳ್ಳಿಗಳಿದ್ದು, ಇದರಲ್ಲಿ ಸಣ್ಣ ಹಳ್ಳಿಗಳ ಪ್ರಮಾಣವೇ ಹೆಚ್ಚಾಗಿದೆ. ದಕ್ಷಿಣ ಮೈದಾನದಲ್ಲಿರುವ ಬಹುಪಾಲು ಹಳ್ಳಿಗಳು ಸಣ್ಣ ಹಳ್ಳಿಗಳಾಗಿರುವುದೊಂದು ವಿಶೇಷ. ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ ೧೦ ರಷ್ಟಿನ ಜನ ೫೦೦ ಕ್ಕೂ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ವಾಸಿಸುತ್ತಾರೆ. (ಪಟ್ಟಿ ೩.೪).

ಯಾವುದೇ ರಾಜ್ಯದ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಅಲ್ಲಿನ ಜನನ ಹಾಗೂ ಮರಣ ಪ್ರಮಾಣ, ರಾಜ್ಯದಿಂದ ವಲಸೆ ಹೋಗುವ ಹಾಗೂ ಹೊರಗಡೆಯಿಂದ ರಾಜ್ಯಕ್ಕೆ ವಲಸೆ ಬರುವವರ ಸಂಖ್ಯೆ, ಹಾಗೂ ಸ್ತ್ರೀಯರ ಮದುವೆಯ ವಯಸ್ಸು ಇವುಗಳ ಮೇಲೆ ನಿರ್ಧಾರವಾಗಿರುತ್ತದೆ.

೨ ಎ). ನಮ್ಮ ರಾಜ್ಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲನೆ ಮಾಡಿದಲ್ಲಿ, ಈ ಶತಮಾನದ ಆದಿಯಲ್ಲಿ ಜನನ ಹಾಗೂ ಮರಣ ಪ್ರಮಾಣಗಳ ನಡುವೆ ಅಷ್ಟೇನು ಅಂತರ ಕಂಡು ಬರುತ್ತಿರಲಿಲ್ಲ. ಇವೆರಡೂ ಪ್ರಮಾಣಗಳು ಸ್ವತಂತ್ರದ ಪೂರ್ವದವರೆಗೂ ಅತಿ ಹೆಚ್ಚಿನ ಮಟ್ಟದಲ್ಲಿ ಉಳಿದಿದ್ದವು. (೧೦೦೦ ಜನಸಂಖ್ಯೆಗೆ ೪೦ ರಷ್ಟು ಜನನ ಹಾಗೂ ಮರಣ ಪ್ರಮಾಣ). ಸ್ವಾತಂತ್ಯ್ರ ಪೂರ್ವಕ್ಕೆ ಪ್ರಥಮವಾಗಿ ಮರಣ ಪ್ರಮಾಣವು ಇಳಿಮುಖವಾಗಿದೆ. ೧೯೫೦ರ ದಶಕದಲ್ಲಿ ಸುಮಾರು ೨೦ರಷ್ಟಿದ್ದು ಮರಣ ದರ ಇನ್ನು ಇಳಿಮುಖವಾಗುತ್ತಾ ಬಂದು ಇಂದು ೮ ಅಥವಾ ೯ರಷ್ಟನ್ನು ತಲುಪಿದೆ (ಪಟ್ಟಿ ೫ ಎ). ಜನನ ಹಾಗೂ ಮರಣ ಪ್ರಮಾಣಗಳಲ್ಲಿ ಅಂತರ ಹೆಚ್ಚಾದಂತೆಲ್ಲಾ ಜನಸಂಖ್ಯಾ ಬೆಳವಣಿಗೆ ಹೆಚ್ಚುತ್ತಾ ಹೋಗುತ್ತದೆ. ಕರ್ನಾಟಕದ ಜನಸಂಖ್ಯಾ ಬೆಳವಣಿಗೆಗೆ ಈ ಅಂತರ ಹೆಚ್ಚಾಗಿರುವುದೇ ಮುಖ್ಯ ಕಾರಣವಾಗಿದೆ. ಮರಣ ದರದ ಇಳಿಮುಖದಲ್ಲಿ ಕಂಡುಬಂದ ವೇಗ ಜನನ ದರದ ಇಳಿಮುಖದಲ್ಲಿ ಕಂಡುಬರಲಿಲ್ಲ. ಅದೇ ರೀತಿ ಶಿಶು ಮರಣ ದರವನ್ನು ತೆಗೆದುಕೊಂಡರೆ ಈ ಶತಮಾನದ ಆದಿಯಲ್ಲಿ ಕೆಲವಾರು ಸಮೀಕ್ಷೆಗಳಿಂದ ವ್ಯಕ್ತವಾದಂತೆ ಹೆಚ್ಚು ಕಡಿಮೆ ೨೦೦ ರಷ್ಟಿತ್ತು. ೧೯೭೮-೮೨ರ ಅವಧಿಯಲ್ಲಿ ಪ್ರತಿ ೧೦೦೦ ಜೀವಂತ ಜನನಗಳಿಗೆ ೯೩.೫ರಷ್ಟು ಪ್ರಮಾಣದಲ್ಲಿದ್ದು, ೧೯೮೮-೮೯ರ ಅವಧಿಯಲ್ಲಿ ೬೫.೪ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಮಕ್ಕಳ ಮರಣ ದರವು ಪ್ರತಿ ೧೦೦೦ ಜೀವಂತ ಜನಗಳಿಗೆ ೫೨ರಿಂದ ೨೪ ಹಾಗೂ ೫ ವರ್ಷಗಳೊಳಗಿನ ಮಕ್ಕಳ ಮರಣ ದರವು ಪ್ರತಿ ಸಾವಿರ ಜೀವಂತ ಜನನಗಳಿಗೆ ೧೪೧ ರಿಂದ ೮೭ಕ್ಕೆ ಇಳಿಯಿತು. ಹಾಗೆಯೇ ಮಾದರಿ ನೋಂದಣಿ ವ್ಯವಸ್ಥೆ (Sample Registration System) ಅಂದಾಜು ಮಾಡಿದ ಪ್ರಕಾರ, ೧೯೮೮-೮೯ರಲ್ಲಿ ಪ್ರತಿ ೧೦೦೦ ಜೀವಂತ ಜನನಗಳಿಗೆ ಶಿಶು ಮರಣ ದರವು ಸರಾಸರಿ ೭೫ರಷ್ಟಿದೆ (ಪಟ್ಟು ೫ ಬಿ). ಇಂತಹ ಫಲಿತಾಂಶ ಕೊಡಲು ಕಾರಣವಾದ ಅನೇಕ ಆರೋಗ್ಯ ಸುಧಾರಣಗಳನ್ನು ನಾವು ಸಾಧಿಸಿದ್ದೀವಾದರೂ ಕುಡಿಯುವ ನೀರು, ನೈರ್ಮಲ್ಯ ಹಾಗೂ ಪರಿಸರಗಳ ಮಾಲಿನ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಆದ್ಯತೆ ಅವಶ್ಯಕವೆಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ. ಮರಣ ದರವನ್ನು ಕಡಿಮೆ ಮಾಡುವುದರಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಆರೋಗ್ಯ ಕಾರ್ಯಕ್ರಮಗಳೆಂದರೆ ಮಲೇರಿಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ನಿವಾರಣೆ ಕಾರ್ಯಕ್ರಮ ಮತ್ತು ಸರ್ವವ್ಯಾಪಿ ರೋಗನಿರೋಧಕ ಚುಚ್ಚುಮದ್ದು (Universal Immunisation Programme) ಇತ್ಯಾದಿ.

೨. ಬಿ) ಜನನ ಪ್ರಮಾಣದಲ್ಲಿ ಇಳಿಮುಖ ಸಾಕಷ್ಟು ತಡವಾಗಿ ಕಂಡು ಬಂದಿದೆ. ೧೯೬೦ ಹಾಗೂ ೧೯೭೦ರ ದಶಕಗಳಲ್ಲಿ ಪ್ರಥಮವಾಗಿ ಜನನ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದೆ. ಇತ್ತೀಚಿನ ಅಂದಾಜಿಕ ಪ್ರಕಾರ ನಮ್ಮ ರಾಜ್ಯದಲ್ಲಿ ಕಚ್ಚಾ ಜನನ ದರವು ಒಂದುಸಾವಿರ ಜನಸಂಖ್ಯೆಗೆ ೨೬.೯ ಇದೆ. ಆದರೆ ಈ ಪ್ರಮಾಣವು ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಂದೇ ತೆರನಾಗಿಲ್ಲ. ರಾಜ್ಯದ ದಕ್ಷಿಣ ಮೈದಾನ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜನನ ಪ್ರಮಾಣದಲ್ಲಿ ಅತಿಹೆಚ್ಚಿನ ಇಳಿಮುಖ ಕಂಡುಬಂದಿದ್ದು, ಉತ್ತರದ ಜಿಲ್ಲೆಗಳಲ್ಲಿ ಜನನನ ಪ್ರಮಾಣದಲ್ಲಿ ಅತಿಹೆಚ್ಚಿನ ಇಳಿಮುಖ ಕಂಡುಬಂದಿದ್ದು, ಉತ್ತರದ ಜಿಲ್ಲೆಗಳಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸ್ಥಿತಿ ವಿಭಿನ್ನವಾಗಿಯೇ ಇದೆ. ಆದ್ದರಿಂದ ರಾಜ್ಯದಲ್ಲಿ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ೧.೮ ರಿಂದ ೧.೯ವರೆಗಿದ್ದು ಈ ದಿಕ್ಕಿನಲ್ಲಿ ನಾವಿನ್ನೂ ಸಾಧಿಸಬೇಕಾದ ಕಾರ್ಯ ಸಾಕಷ್ಟಿದೆ.

೨. ಸಿ) ಇನ್ನು ಸ್ತ್ರೀಯರ ವೈವಾಹಿಕ ವಯಸ್ಸಿನ ಮಾಹಿತಿ ಪರಿಶೀಲಿಸಿದಲ್ಲಿ ರಾಜ್ಯದಲ್ಲಿ ಸ್ತ್ರೀಯರ ವಿವಾಹವು ಹೆಚ್ಚಾಗಿ ಎಳೆಯ ವಯಸ್ಸಿನಲ್ಲಿಯೇ ನಡೆಯುತ್ತದೆ. ಉದಾಹರಣೆಗೆ ಶೇ.೩೮ರಷ್ಟು ಮಹಿಳೆಯರು ತಮ್ಮ ೧೫-೧೯ ವಯಸ್ಸಿನಲ್ಲಿ ವಿವಾಹಿತರಾಗಿದ್ದಾರೆ. ಪಟ್ಟಣಗಳಲ್ಲಿ ೧೫-೧೯ ವಯಸ್ಸಿನಲ್ಲಿ ಮದುವೆಯಾದ ಮಹಿಳೆಯರ ಪ್ರಮಾಣವು ಶೇಕಡಾ ೨೭ ರಷ್ಟಾದರೆ, ಹಳ್ಳಿಗಳಲ್ಲಿ ಈ ಪ್ರಮಾಣವು ಶೇಕಡಾ ೪೩ರಷ್ಟಿದೆ. ತೀರಾ ಎಳೆಯ ವಯಸ್ಸಿನಲ್ಲಿ ವಿವಾಹ ನಡೆಯುವ ಪ್ರಮಾಣವು ಕಾಲಕ್ರಮೇಣ ಇಳಿಯುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ೧೩ ವರ್ಷಗಳಾಗುವ ವೇಳೆಗೆ ವಿವಾಹವಾದ ಪ್ರಮಾಣವು ೪೫-೪೯ರ ವಯಸ್ಸಿನ ಮಹಿಳೆಯರಲ್ಲಿ ಶೇಕಡಾ ೨೦ರಷ್ಟಿದ್ದು, ೧೫-೧೯ ವಯಸ್ಸಿನವರಲ್ಲಿ ಇದು ಶೇಕಡಾ ೪ಕ್ಕೆ ಇಳಿದಿದೆ. ಅದೇ ರೀತಿ ೧೫ ವರ್ಷವಾಗುವ ವೇಳೆಗೆ ವಿವಾಹವಾದ ಪ್ರಮಾಣವು ೪೫-೪೯ ವಯಸ್ಸಿನವರಲ್ಲಿ ಶೇಕಡಾ ೩೮ರಷ್ಟಿದ್ದು, ೧೫-೧೯ ವಯಸ್ಸಿನವರಲ್ಲಿ ಇದು ಶೇಕಡಾ ೧೪ಕ್ಕೆ ಇಳಿದಿದೆ. ಮಹಿಳೆಯರ ವ್ಯಕ್ತಿಶಃ ಸರಾಸರಿ (Singulate mean) ವಿವಾಹ ವಯಸ್ಸು ೧೯.೬ ವರ್ಷಗಳು. ಈ ಸಮೀಕ್ಷೆಯ ಪ್ರಕಾರ ಪಟ್ಟಣವಾಸಿ ಮಹಿಳೆಯರು ಹಳ್ಳಿಯಲ್ಲಿ ವಾಸಿಸುವವರಿಗಿಂತ ಮೂರು ವರ್ಷ ತಡವಾಗಿ ಮದುವೆಯಾಗುತ್ತಾರೆ. ಇದೇ ರೀತಿ ಗಂಡಸರ ವ್ಯಕ್ತಿಶಃ ಸರಾಸರಿ ವಿವಾಹ ವಯಸ್ಸು ೨೬.೧ ವರ್ಷಗಳು. ಹೀಗಾಗಿ ರಾಜ್ಯದಲ್ಲಿ ಪುರುಷರ ಹಾಗೂ ಸ್ತ್ರೀಯರ ವಿವಾಹ ವಯಸ್ಸಿನ ಅಂತರ ೬ ವರ್ಷಕ್ಕಿಂತಲೂ ಮೇಲ್ಪಟ್ಟಿದೆ. ಜಿಲ್ಲಾವಾರು ವಿವಾಹ ವಯಸ್ಸನ್ನು ಗಮನಿಸಿದಾಗ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಹಿಳೆಯರ ಸರಾಸರಿ ವಿವಾಹ ವಯಸ್ಸು ೨೦ಕ್ಕೆ ಮೇಲ್ಪಟ್ಟಿದ್ದಿರೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಬಳ್ಳಾರಿ ಮುಂತಾದ ಕಡಿಮೆ ಇದೆ (೧೫-೧೬ ವರ್ಷಗಳು). ಇದೇ ರೀತಿ ಗ್ರಾಮ, ನಗರಗಳಲ್ಲದೆ, ವಿವಿದ ಜಾತಿ, ಪಂಗಡಗಳಲ್ಲೂ ವಿವಾಹ ವಯಸ್ಸಿನ ಅಂತರವನ್ನು ನಾವು ಗಮನಿಸಬಹುದು. ಇಂತಹ ಸ್ಥಿತಿಗೆ ಪ್ರಮುಖ ಕಾರಣದಳೆಂದರೆ ಆಯಾ ಪ್ರದೇಶಗಳ ಚಾರಿತ್ರಿಕ ಹಿನ್ನೆಲೆ, ಜನರಲ್ಲಿ ಇರಬಹುದಾದ ಕೆಲವು ಮೂಢ ನಂಬಿಕೆಗಳು, ಅನಕ್ಷರಸ್ಥರ ಸಂಖ್ಯೆ, ನೆರೆಹೊರೆಯ ಪರಿಸ್ಥಿತಿ ಮುಂತಾದವು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಪ್ರಸ್ತುತ ೨೫-೨೯ ವಯಸ್ಸಿನಲ್ಲಿರುವ ಪ್ರೌಢಶಾಲಾ ಶಿಕ್ಷಣ ಹೊಂದಿರುವ ಮಹಿಳೆಯರ ವಿವಾಹ ವಯಸ್ಸು ಅದೇ ವಯಸ್ಸಿನ ಅನಕ್ಷರಸ್ಥ ಮಹಿಳೆಯರ ವಿವಾಹ ವಯಸ್ಸಿಗಿಂತ ೭ ವರ್ಷಗಳು ಹೆಚ್ಚಾಗಿದೆ. ಕಾನೂನಿನ ಪ್ರಕಾರ ಮದುವೆಗೆ ಅರ್ಹರಾಗಲು ಮಹಿಳೆಯರಿಗೆ ಕನಿಷ್ಠ ೧೮ ವರ್ಷಗಳು ಮತ್ತು ಪುರುಷರಿಗೆ ೨೧ ವರ್ಷಗಳೆಂದು ನಿಗದಿ ಮಾಡಿದ್ದರೂ, ಕಾನೂನಿನ ಉಲ್ಲಂಘನೆ ಮುಂದುವರಿದೇ ಇದೆ. ಈ ಸಮೀಕ್ಷೆಯ ಪ್ರಕಾರ  ಈ ವಿವಾಹ ವಯಸ್ಸಿನ ತಿಳುವಳಿಕೆ ಕೇವಲ ಶೇಕಡಾ ೪೧ರಷ್ಟು ಮಹಿಳೆಯರಲ್ಲಿ ಮಾತ್ರ ಇದೆ. ಜನರಲ್ಲಿ ಜನನ, ಮರಣ ಹಾಗೂ ವೈವಾಹಿಕ ವಯಸ್ಸಿನ ಸರಿಯಾದ ದಾಖಲೆಗಳು ಇಲ್ಲದ ಕಾರಣ ಕಾನೂನು ಬದ್ಧವಾದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ನಾವು ಅಲ್ಲಿ ಗಮನಿಸಬೇಕಾದ ಅಂಶವೆಂದರೆ ವೈದ್ಯಕೀಯ ದೃಷ್ಟಿಯಿಂದ ಮಹಿಳೆಯರ ಆರೋಗ್ಯ, ಮಕ್ಕಳ ಪಾಲನೆ, ಪೋಷಣೆ ಮತ್ತು ಗರ್ಭಧಾರಣೆಗೆ ೨೦ ವರ್ಷದ ನಂತರವೇ ಸೂಕ್ತ ಎಂದು ಸಾಬೀತಾಗಿದೆ. ಈ ಅರಿವು ನಮಗೆಲ್ಲರಿಗೂ ಆದ ನಂತರವೇ ಸಂತಾನ ನಿಯಂತ್ರಣ, ಆರೋಗ್ಯ ಸುಧಾರಣೆಗಳ ಮಾರ್ಗ ಸುಗಮವಾದೀತು.

೩. ಎ) ಜನನ ಪ್ರಮಾಣದಲ್ಲಿ ಕಡಿತ ತರುವ ಸಲುವಾಗಿ ನಮ್ಮ ದೇಶದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸ್ವಾತಂತ್ಯ್ರ ಪೂರ್ವಕ್ಕೆ ಹಲವಾರು ಗಣ್ಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇದರ ಸಲುವಾಗಿ ತಮ್ಮ ಕ್ಷೇತ್ರದಲ್ಲಿ ಕಾರ್ಯಾರಂಭ ಮಾಡಿದ್ದರೂ ಸಹ ಪ್ರಥಮ ಪಂಚವಾರ್ಷಿಕ ಯೋಜನೆಯ ಪ್ರಾರಂಭದಿಂದಾಗಿ ಇದಕ್ಕೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಕರ್ನಾಟಕ ರಾಜ್ಯದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮಕ್ಕೆ ಪ್ರಾರಂಭದಿಂದಲೂ ಆದ್ಯತೆ ಕೊಡಲಾಗಿದೆ. ೧೯೩೦ರಲ್ಲೇ ಸರ್ಕಾರದ ವತಿಯಿಂದ ಕುಟುಂಬ ಯೋಜನಾ ಕ್ಲಿನಿಕ್‌ಗಳನ್ನು ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಸ್ಥಾಪಿಸಲಾಯಿತು. ಕುಟುಂಬ ಯೋಜನೆಯನ್ನು ಒಂದು ಅಭಿವೃದ್ಧಿ ಕಾರ್ಯಕ್ರಮವನ್ನಾಗಿ ರೂಪಿಸಿಕೊಂಡು ಕಾಲಕ್ರಮೇಣ ಇದರಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಯಿತು. ಕುಟುಂಬ ಯೋಜನೆ ಕೇವಲ ಸಂತಾನ ನಿಯಂತ್ರಣಕ್ಕಾಗಿ ಅಲ್ಲದೆ ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಅಂತರ ವಿಧಾನಗಳ ಬಳಕೆಯತ್ತ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ೧೯೭೨ರಲ್ಲಿ ವೈದ್ಯಕೀಯ ಗರ್ಭಪಾತ (Medical termination of pregnancy) ಕಾನೂನನ್ನು ಜಾರಿಗೆ ತರಲಾಯಿತು. ಇದರಂತೆ ಬೇಡವಾದ ಗರ್ಭ ತೆಗೆಯುವ ಸೌಲಭ್ಯವನ್ನು ಒದಗಿಸಲಾಯಿತು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಟುಂಬ ಯೋಜನೆಯ ಸೌಲಭ್ಯವನ್ನು ವಿವಿಧ ವರ್ಗಗಳಿಗೆ ಒದಗಿಸಲು ಹೊಸ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಜನನ ನಿಯಂತ್ರಣವನ್ನು ಒಪ್ಪಿ ಯಾವುದಾದರೊಂದು ವಿಧಾನವನ್ನು ಅಳವಡಿಸಿಕೊಳ್ಳಲು ಮುಂದೆ ಬರುವವರಿಗೆ ಉಚಿತ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಲ್ಪಿಸಿಕೊಡಲಾಯಿತು.

ಇಲ್ಲಿಯವರೆಗೂ ಅರ್ಹ ದಂಪತಿಗಳು ಅಳವಡಿಸಿಕೊಂಡಿರುವ ಪ್ರಮುಖ ಕುಟುಂಬ ಯೋಜನಾ ವಿಧಾನವೆಂದರೆ ಶಸ್ತ್ರ ಚಿಕಿತ್ಸೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಪ್ರಸಕ್ತ ವೈವಾಹಿಕ ಜೀವನ ನಡೆಸುತ್ತಿರುವವರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಹೆಂಗಸರ ಅಥವಾ ಗಂಡಸರ ಪ್ರಮಾಣ ಶೇಕಡಾ ೪೩ ರಷ್ಟಿದೆ. ಪ್ರಾರಂಭದಲ್ಲಿ ಪುರುಷರ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಿತು. ೧೯೭೫ರ ನಂತರ ಕುಟುಂಬ ಯೋಜನಾ ಕಾರ್ಯಕ್ರಮ ಜನರ ಕಾರ್ಯಕ್ರಮವಾಗಿ ರೂಪಿತವಾಗಿರುವುದನ್ನು ಕಾಣಬಹುದು. ಇತ್ತೀಚಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು ಅರ್ಧದಷ್ಟು ಅರ್ಹ ದಂಪತಿಗಳು (೧೫-೪೪ ವಯಸ್ಸಿನ ಪ್ರಸಕ್ತ ವಿವಾಹಿತ) ಯಾವುದಾದರೊಂದು ಕುಟುಂಬ ಯೋಜನಾ ವಿಧಾನವನ್ನು ಅಳವಡಿಸಿಕೊಂಡು ಜನನ ನಿಯಂತ್ರಣದಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದಾರೆ. ಅಂತಹವರಲ್ಲಿ ಸ್ತ್ರೀಯರ ಶಸ್ತ್ರಚಿಕಿತ್ಸೆಯದೇ ಸಿಂಹಪಾಲು (ಶೇಕಡಾ ೪೧ರಷ್ಟು). ತಾತ್ಕಾಲಿಕ ವಿಧಾನಗಳ ಅಳವಡಿಕೆಯ ಬಗ್ಗೆ ಸಾಕಷ್ಟು ಪ್ರಚಾರ ಕಾರ್ಯ ಸಾಗಿದ್ದರೂ ಸಹ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಇದರ ಉಪಯೋಗ ಬಹು ವಿರಳ (ಪಟ್ಟಿ-೬). ಅಂದರೆ ಶೇಕಡಾ ೬ರಷ್ಟು ದಂಪತಿಗಳು ಮಾತ್ರ ಈ ತಾತ್ಕಾಲಿಕ ವಿಧಾನಗಳನ್ನು ಬಳಸುತ್ತಿದ್ದಾರೆ. ೧೯೭೯-೮೦ರಲ್ಲಿ ಉದರದರ್ಶಕ ಶಸ್ತ್ರ ಚಿಕಿತ್ಸೆಯ (Laparospic sterilization) ಕಾರ್ಯಕ್ರಮ ಪ್ರಾರಂಭವಾದರೂ ಸ್ವಲ್ಪ ಕಾಲದ ನಂತರ ಇದರ ಯಶಸ್ಸು ಸ್ವಲ್ಪ ಕುಂಠಿತಗೊಂಡಿತು.

೩. ಬಿ) ರಾಜ್ಯದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಅಡ್ಡಿ ಆತಂಕಗಳಿವೆ. ಪ್ರಪ್ರಥಮವಾಗಿ ನಮ್ಮಲ್ಲಿ ಜನಸಂಖ್ಯಾ ಸಮಸ್ಯೆಯ ಬಗ್ಗೆ ಇರುವ ಅರಿವು ಸಾಲದು. ಕುಟುಂಬ ಯೋಜನೆ ಎಂದರೆ ಮಕ್ಕಳನ್ನು ಸಾಕುಮಾಡಿಕೊಳ್ಳುವ ವಿಧಾನವೆಂದೇ ಜನರ ಅಭಿಪ್ರಾಯ. ಅದರ ಪೂರ್ಣ ಅರಿವು ಅಂದರೆ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಪಡೆಯುವ ಸಲಹೆ, ಮದುವೆ ಮತ್ತು ಮೊದಲನೆ ಮಗುವಿನ ನಡುವೆ ಅಂತರ ಮತ್ತು ಎರಡು ಮಕ್ಕಳ ನಡುವೆ ಅಂತರವಿರುವುದು ಬಹಳ ಸೂಕ್ತ ಎಂಬುದರ ಬಗ್ಗೆ ಸಾಕಷ್ಟು ಮನವರಿಕೆ ಆಗಬೇಕಾಗಿದೆ. ನಮ್ಮಲ್ಲಿ ಜನರಿಗೆ ಸಣ್ಣ ಕುಟುಂಬದ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮಗಳ ಕೊರತೆ ಇದೆ. ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಮುಂದೆ ಬಂದವರಿಗೆ ಸೂಕ್ತ ಸಲಹೆ ಮತ್ತು ಸೌಲಭ್ಯಗಳನ್ನು ಒದಗಿಸುವುದು, ಅದರ ಭಯ ಭೀತಿಗಳ ನಿವಾರಣೆ, ಯಾವುದೇ ವಿಧಾನವನ್ನು ಅಳವಡಿಸಿಕೊಂಡಾಗ ಅವರು ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ, ಇತರೆ ಯಾವುದೇ ಸಾಮಾನ್ಯ ಆರೋಗ್ಯ ತೊಂದರೆಗಳಿಗೂ ಕುಟುಂಬ ಯೋಜನೆಯ ವಿಧಾನವೇ ಕಾರಣ ಎಂಬ ಅಪಪ್ರಚಾರ ಇವುಗಳ ಕಡೆ ಮೊದಲ ಗಮನ ಹರಿಸಬೇಕಾಗಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಿನ ಬಲಪ್ರಯೋಗ ನಡೆಯದೇ ಇದ್ದ ಕಾರಣ ಈ ಕಾರ್ಯಕ್ರಮ ೧೯೭೭ರ ನಂತರ ಅಷ್ಟಾಗಿ ಹಿಂದೇಟು ಪಡೆಯಬೇಕಾಗಲಿಲ್ಲ.

ಕೈಗೊಂಡ ಸಮೀಕ್ಷೆಗಳ ಪ್ರಕಾರ ಕುಟುಂಬ ಯೋಜನಾ ವಿಧಾನ ಉಪಯೋಗಿಸದ ದಂಪತಿಗಳು ಕುಟುಂಬ ಯೋಜನಾ ವಿಧಾನಗಳ ಉಪಯುಕ್ತತೆಯ ಅರಿವಿಲ್ಲದೆ ಇನ್ನು ಮಕ್ಕಳು ಬೇಕು, ಗಂಡು ಸಂತಾನ ಬೇಕು, ಹಿರಿಯರು ಒಪ್ಪುವುದಿಲ್ಲ, ಆರೋಗ್ಯಕ್ಕೆ ಹಾನಿಕರ, ಅಳವಡಿಸಿಕೊಂಡಲ್ಲಿ ಕೆಲಸ ಮಾಡಲು ತೊಂದರೆಯಾಗುತ್ತದೆ, ಇದರಲ್ಲಿ ನಂಬಿಕೆ ಇಲ್ಲ, ಇನ್ನು ಕೆಲ ಸಮಯದ ನಂತರ ಅಥವಾ ಒಂದೆರಡು ಮಕ್ಕಳ ನಂತರ ಉಪಯೋಗಿಸುತ್ತೇವೆ ಎಂಬುದಾಗಿ ಹೇಳುವುದನ್ನು ಗಮನಿಸಬಹುದು. ಇಂತಹ ಕಡೆ ಕುಟುಂಬ ಯೋಜನೆಯ ಅವಶ್ಯಕತೆಯ ಬಗ್ಗೆ ಬಲವಾದ ಪ್ರಚಾರ ಹಾಗೂ ಮನವರಿಕೆ ಮುಖ್ಯ. ಈ ಹಿನ್ನಲೆ ಅರಿತು ಕಾರ್ಯಕ್ರಮದಲ್ಲಿ ಸೂಕ್ತ ಮಾರ್ಪಾಟು ತಂದಲ್ಲಿ ಈ ಕಾರ್ಯಕ್ರಮ ಇನ್ನೂ ಹೆಚ್ಚಿನ ಯಶಸ್ಸು ಪಡೆಯುವುದರಲ್ಲಿ ಸಂಶಯವಿಲ್ಲ.

೩. ಸಿ) ಕಾಲಕ್ರಮೇಣ ಕುಟುಂಬ ಯೋಜನಾ ಕಾರ್ಯಕ್ರಮದ ಯಶಸ್ಸಿಗೆ ಹಲವಾರು ಪೂರಕ ಕಾರ್ಯಕ್ರಮಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಮೊದಲನೆಯದು ತಾಯಿ ಮತ್ತು ಮಗುವಿನ ಪಾಲನೆ ಹಾಗೂ ಪೋಷಣೆಯ ಬಗ್ಗೆ ಹಾಕಿರುವ ಕಾರ್ಯಕ್ರಮಗಳು (Maternal and Child health programmes).ಈ ಕರ್ಯಕ್ರಮದಡಿ ಅರ್ಹ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವುದು, ಗರ್ಭ ಧಾರಣೆಯ ಸಂದರ್ಭದಲ್ಲಿ ಅವರಿಗೆ ಸೌಕರ್ಯಗಳಾದ ವೈದ್ಯರು/ದಾದಿಯರಿಂದ ತಪಾಸಣೆ, ಕಾಲಕಾಲಕ್ಕೆ ತಾಯಿಗೆ ಧರ್ನುವಾಯು ನಿರೋಧಕ ಚುಚ್ಚುಮದ್ದು ಕೊಡುವುದು, ಕಬ್ಬಿಣಾಂಶದ ಮಾತ್ರೆಗಳ ಪೂರೈಕೆ, ಹೆರಿಗೆಯಲ್ಲಿ ಬೇಕಾದ ನೆರವು, ನಂತರ ಮಗುವಿನ ಆರೋಗ್ಯದತ್ತ ಗಮನ ಹರಿಸಿ ಅದಕ್ಕೆ ಕೊಡಬೇಕಾದ ಎಲ್ಲಾ ಚುಚ್ಚುಮದ್ದುಗಳನ್ನು ಕೊಡುವುದು ಅಲ್ಲದೆ ತಾಯಿಗೆ ಬೇಕಾದ ಕುಟುಂಬ ಯೋಜನಾ ಸಲಹೆಗಳನ್ನು ಈ ಕಾರ್ಯಕ್ರಮದಲ್ಲಿ ನಿರೂಪಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮದ ಉದ್ದೇಶವೆಂದರೆ, ತಾಯಿ ಮಗುವಿನ ಆರೋಗ್ಯ ಸುಧಾರಿಸಿ ಮರಣ ದರ ಕಡಿಮೆಯಾಗಿ ಸುಖಜೀವನ ಸಾಧ್ಯವಾದಲ್ಲಿ ಕುಟುಂಬ ಯೋಜನೆಗೆ ಸಾಕಷ್ಟು ಪ್ರೋತ್ಸಾಹ ಸಿಗಬಹುದೆಂಬ ಪ್ರಬಲ ನಂಬಿಕೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಯಲು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಶೇಕಡಾ ೬೪.೮ರಷ್ಟು ಗರ್ಭಿಣಿ ಸ್ತ್ರೀಯರು ತಾವು ಗರ್ಭಿಣಿ ಇದ್ದಾಗ ವೈದ್ಯ ಅಥವಾ ಇತರ ವೈದ್ಯಕೀಯ ಸಿಬ್ಬಂದಿಯಿಂದ ಆರೈಕೆ (ವೈದ್ಯಕೀಯ ತಪಾಸಣೆ) ಪಡೆದಿದ್ದಾರೆ. ಶೇಕಡಾ ೬೯.೮ರಷ್ಟು ಮಹಿಳೆಯರು ತಮ್ಮ ಗರ್ಭಿಣಿ ಸಮಯದಲ್ಲಿ ಧನುರ್ವಾಯು ವಿರುದ್ಧದ ಲಸಿಕೆ ಪಡೆದಿದ್ದಾರೆ, ಶೇಕಡಾ ೮೨ರಷ್ಟು ಮಕ್ಕಳು ಕ್ಷಯದ ವಿರುದ್ಧ ಲಸಿಕೆ ಮತ್ತು ಶೇಕಡಾ ೭೧ರಷ್ಟು ಮಕ್ಕಳು ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು ಹಾಗೂ ಪೋಲಿಯೋ ವಿರುದ್ಧ ಲಸಿಕೆಗಳನ್ನು ಪಡೆದಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಈ ಕಾರ್ಯಕ್ರಮದ ಯಶಸ್ಸಿನ ಅನುಭವವಾಗುತ್ತದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ದುಡಿಯುವ ಆರೋಗ್ಯ ಕಾರ್ಯಕರ್ತರು ಮತ್ತು ತಾಯಂದಿರ ನಡುವೆ ಸ್ನೇಹ ಬಾಂದವ್ಯ ಬೆಳೆದು ಕುಟುಂಬ ಯೋಜನಾ ಸಲಹೆಗಳಿಗೆ ಅನುಕೂಲವಾದ ವಾತಾವರಣ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.

೪. ಎ) ಈ ಸೌಲಭ್ಯಗಳೆಲ್ಲವನ್ನು ಒದಗಿಸಲು ಸರ್ಕಾರದ ವತಿಯಿಂದ ಮಾತ್ರ ಸಾಧ್ಯವಿಲ್ಲವೆಂದು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಖಾಸಗೀ ಕ್ಷೇತ್ರದಿಂದ ನೆರವು ಪಡೆಯಲಾಗಿದೆ. ಅದರ ಸಲುವಾಗಿ ಸರ್ಕಾರದ ವತಿಯಿಂದ ವೈದ್ಯ ಹಾಗೂ ಅರೆವೈದ್ಯರಿಗೆ ತರಬೇತಿ ಕೊಡಲಾಗಿದೆ. ಉದಾಹರಣೆಗೆ ೧೯೭೬ರ‍ಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು ೨೧೩ ಆಸ್ಪತ್ರೆಗಳು, ೨೬೬ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೧೭೨ ಆರೋಗ್ಯ ಘಟಕಗಳಿದ್ದು, ಇತ್ತೀಚಿನ ಅಂದಾಜಿನ ಪ್ರಕಾರ ೧೯೯೪ರಲ್ಲಿ ೧೩೫೭ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೭೭೮೩ ಉಪಕೇಂದ್ರಗಳು ಮತ್ತು ೨೧೩ ಸಮುದಾಯ ಆರೋಗ್ಯ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿವೆ (ಪಟ್ಟಿ-೭). ಇದರಿಂದಾಗಿ ಹೆಚ್ಚಿನ ಪ್ರದೇಶಕ್ಕೆ ಮತ್ತು ಹೆಚ್ಚಿನ ಜನರಿಗೆ ಆರೋಗ್ಯ ಹಾಗೂ ಕುಟುಂಬ ಯೋಜನಾ ಸೌಲಭ್ಯವನ್ನು ಒದಗಿಸುವ ಏರ್ಪಡಾಗಿದೆ. ಇವೆಲ್ಲಾ ಅಲ್ಲದೆ ಹಳ್ಳಿಯಲ್ಲಿ ತತ್ಕಾಲಕ್ಕೆ ಸರಿಯಾದ ನೆರವು ಸಿಗಲಿ ಎನ್ನುವ ದೃಷ್ಟಿಯಿಂದ ಹಳ್ಳಿಯಲ್ಲೇ ಪರಂಪರೆಯಾಗಿ ಬಂದ ಸೂಲಗಿತ್ತಿಯರಿಗೆ ಮತ್ತು ಹಳ್ಳಿಯವರೇ ಆದ ಒಬ್ಬರಿಗೆ ಆರೋಗ್ಯ ಮಾರ್ಗದರ್ಶಕ ತರಬೇತಿಯನ್ನು ಕೊಡಲಾಗಿದೆ. ಈ ಎಲ್ಲಾ ಯೋಜನೆಗಳೂ ನಾವು ನೆನೆಸಿದಂತೆ ಫಲಪ್ರದವಾದಲ್ಲಿ ಕ್ರಿಸ್ತಶಕ ೨೦೦೦ರ ವೇಳೆಗೆ ‘ಎಲ್ಲರಿಗೂ ಆರೋಗ್ಯ’ ದೊರಕಿಸುವ ಸದ್ಗುರಿ ಫಲಪ್ರದವಾಗಬಹುದೇನೋ! ಒಂದು ವೇಳೆ ನಾವೆಣಿಸಿದಂತೆ ನಡೆಯದೆ ನಮ್ಮ ರಾಜ್ಯದ ಜನಸಂಖ್ಯೆ ಈಗ ಬೆಳೆಯುತ್ತಿರುವ ಗತಿಯಲ್ಲೇ ಮುಂದುವರೆದರೆ ನಮ್ಮ ಜನಸಂಖ್ಯೆಯ ಗಾತ್ರವು ಒಂದು ಅಂದಾಜಿನಂತೆ ೧೯೯೫ಕ್ಕೆ ೪ ಕೋಟಿ ೯೭ ಲಕ್ಷ ತಲುಪುವುದು. ಕ್ರಿಸ್ತಶಕ ೨೦೦೧ಕ್ಕೆ ೫ ಕೋಟಿ ೫೭ ಲಕ್ಷ ಹಾಗೂ ೨೦೦೫ಕ್ಕೆ ೬ ಕೋಟಿ ೯೫ ಲಕ್ಷ ಮುಟ್ಟುವುದೆಂದು ಅಂದಾಜು ಮಾಡಲಾಗಿದೆ. ಕುಟುಂಬ ಯೋಜನೆ ಹಾಗೂ ಇತರ ಆರೋಗ್ಯ ಕಾರ್ಯಕ್ರಮಗಳು ಈ ಅಂದಾಜನ್ನು ಎಷ್ಟರ ಮಟ್ಟಿಗೆ ನಿರೂಪಿಸುತ್ತದೆ ಎಂಬ ಅಂಶವನ್ನು ಕಾದು ನೋಡಬೇಕಾಗಿದೆ.

೫. ಎ) ಉಪಸಂಹಾರ

ಈ ಶತಮಾನದ ಆದಿಯಿಂದ ಕರ್ನಾಟಕದ ಜನಸಂಖ್ಯಾ ಬೆಳವಣಿಗೆ ರಾಷ್ಟ್ರದ ಜನಸಂಖ್ಯಾ ಬೆಳವಣಿಗೆಯನ್ನು ಹೋಲುತ್ತದೆ. ಇತ್ತೀಚಿನ ದಶಕದಲ್ಲಿ (೧೯೮೧-೯೧) ಬೆಳವಣಿಗೆಯ ದರದಲ್ಲಿ ಗಣನೀಯ ಕಡಿತ ಕಂಡುಬಂದಿದ್ದು, ರಾಜ್ಯದ ಜನಸಂಖ್ಯೆ ನಿರೀಕ್ಷೆಗಿಂತ ಸುಮಾರು ೭ ಲಕ್ಷದಷ್ಟು ಕಡಿಮೆಯಾಗಿದೆ. ಇಲ್ಲಿ ನಮಗೆ ಕಂಡುಬರುವ ಮುಖ್ಯ ಅಂಶವೆಂದರೆ ಜನಸಂಖ್ಯಾ ಬೆಳವಣಿಗೆ ಎಲ್ಲಾ ಕಡೆ ಒಂದೇ ತೆರನಾಗಿರದೆ, ಕೆಲವು ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದನ್ನು ಕಾಣುತ್ತೇವೆ. ಅಲ್ಲದೆ ಜನಸಾಂದ್ರತೆಯಲ್ಲಿನ ಹೆಚ್ಚಳ, ಸ್ತ್ರೀ-ಪುರುಷರ ಪ್ರಮಾಣದಲ್ಲಿನ ಅಂತಹ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿನ ಬೆಳವಣಿಗೆಯ ಅಂತರ ಇ ವು ಮುಖ್ಯವಾಗಿ ಗಮನಿಸಬೇಕಾದ ಇತರ ಅಂಶಗಳು.

ಮರಣ ಪ್ರಮಾಣದಲ್ಲಿನ ಕಡಿತದಿಂದಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ ವೃದ್ಧಿ ಕಂಡುಬಂದರೂ ಸಹ, ಇತ್ತೀಚಿನ ದಶಕಗಳಲ್ಲಿ ಜನನ ಪ್ರಮಾಣದಲ್ಲೂ ಕಡಿತ ಕಂಡುಬಂದಿದೆ. ಆದರೆ ರಾಜ್ಯದ ಇನ್ನೂ ಕೆಲವು ಪ್ರದೇಶಗಳಲ್ಲಿ ಜನನ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಇರುವುದರಿಂದ, ಅಂತಹ ಪ್ರದೇಶಗಳಿಗೆ ನಾವು ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ. ಇದಲ್ಲದೆ, ಸ್ತ್ರೀಯರ ವೈವಾಹಿಕ ವಯಸ್ಸು ಪುರುಷರ ವೈವಾಹಿಕ ವಯಸ್ಸಿಗಿಂತ ತುಂಬಾ ಕಡಿಮೆ ಇದ್ದು, ಸುಮಾರು ಅರ್ಧದಷ್ಟು ಸ್ತ್ರೀಯರು ಚಿಕ್ಕ ವಯಸ್ಸಿನಲ್ಲೇ (೧೮ ವರ್ಷಕ್ಕಿಂತ ಕಡಿಮೆ) ಮದುವೆಯಾಗುತ್ತಾರೆ. ರಕ್ತಸಂಬಂಧದ ಮದುವೆಗಳು ಹೆಚ್ಚಿನ ಪ್ರಮಾಣದಲ್ಲೇ ನಡೆಯುತ್ತದೆ. ಸ್ತ್ರೀಯರಿಗೆ ಸೂಕ್ತವಾದ ಮದುವೆಯ ವಯಸ್ಸು ೨೦ ವರ್ಷದ ನಂತರವೇ ಎಂವ ಅಂಶವನ್ನು ನಾವು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರತಿಪಾದಿಸಬೇಕಾಗುತ್ತದೆ.

ಕುಟುಂಬ ಯೋಜನೆ ಕಾರ್ಯಕ್ರಮ ರಾಜ್ಯದಲ್ಲಿ ಬಹಳ ಹಿಂದಿನಿಂದಲೇ ಪ್ರಾರಂಭವಾದರೂ, ಎಲ್ಲಾ ಅರ್ಹ ದಂಪತಿಗಳು ಇದನ್ನು ಅಳವಡಿಸಲು ಮುಂದೆ ಬರುವಂತೆ ನಾವು ಸರಿಯಾದ ಕಾರಣಗಳನ್ನು ಗುರುತಿಸಿ ಹೊಸ ಕಾರ್ಯಕ್ರಮಗಳನ್ನು ಜೋಡಿಸಬೇಕಾಗಿದೆ. ಅಲ್ಲದೆ ಕುಟುಂಬ ಯೋಜನೆಗೆ ಪೂರಕವಾಗುವಂತಹ ಮಹಿಳೆಯರು ಮತ್ತು ಮಕ್ಕಳ ಪಾಲನೆ ಹಾಗೂ ಪೋಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ದಿಕ್ಕಿನಲ್ಲಿ ಸೌಲಭ್ಯಗಳನ್ನು ಕೊಡುವ ಸಲುವಾಗಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದರೂ, ಅಲ್ಲಿ ದೊರೆಯುವ ಸೌಲಭ್ಯಗಳ ಗುಣಮಟ್ಟ ಸುಧಾರಿಸುವ ಅವಶ್ಯಕತೆ ಇದೆ. ಆರೋಗ್ಯ ಕಾರ್ಯಕರ್ತರು ಜನರ ಮನ ಒಲಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಸಾದಿಸಿದ್ದೇ ಆದರೆ ಜನಸಂಖ್ಯಾ ನಿಯಂತ್ರಣಕ್ಕೆ ನಾಂದಿ ಹಾಡಿದಂತಾಗುತ್ತದೆ.

ಒಟ್ಟಿನಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ಹಿಡಿತಕ್ಕೆ ತರಬೇಕಾದಲ್ಲಿ ಮೊಟ್ಟ ಮೊದಲು ಆರೋಗ್ಯ ಮತ್ತು ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಪ್ರದೇಶದ ಅಗತ್ಯತೆಗೆ ಅನುಗುಣವಾಗಿ ರೂಪಿಸುವುದಲ್ಲದೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯತ್ತ ಮೊದಲು ಗಮನ ಹರಿಸಬೇಕಾಗಿದೆ.

ಎರಡನೆಯದಾಗಿ ಕನಿಷ್ಠ ಮದುವೆಯ ವಯಸ್ಸನ್ನು ಜಾರಿಗೆ ತರುವಲ್ಲಿ ನಮ್ಮ ಕಾನೂನು ವಿಫಲವಾಗಿರುವುದನ್ನು ಚಿಕ್ಕ ವಯಸ್ಸಿನಲ್ಲಿ ಮದುವೆ ಹಾಗೂ ತಾಯ್ತನದಿಂದ, ತಾಯಿ ಮತ್ತು ಮಗುವಿನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ನಮ್ಮ ಜನತೆಗೆ ಸಂಪರ್ಕ ಮಾಧ್ಯಮಗಳ ಮೂಲಕ ತಿಳಿಯಪಡಿಸಿ ಅವರ ಮನಗೆಲ್ಲಬೇಕಾಗಿದೆ.

ಮೂರನೆಯದಾಗಿ ಸಧ್ಯದಲ್ಲಿ ಶೇಕಡಾ ೬ರಷ್ಟು ಅರ್ಹ ದಂಪತಿಗಳು ಮಾತ್ರ ತಾತ್ಕಲಿಕ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಂಡಿದ್ದು ಇನ್ನು ಹೆಚ್ಚು ಅರ್ಹ ದಂಪತಿಗಳು ಅದರಲ್ಲೂ ವಿಶೇಷವಾಗಿ ನವದಂಪತಿಗಳು ಮತ್ತು ಒಂದು ಮಗುವಿರುವ ದಂಪತಿಗಳು ಈ ವಿಧಾನಗಳನ್ನು ಅಳವಡಿಸಿಕೊಳ್ಳುವ ಮನ ಒಲಿಸಬೇಕಾಗಿದೆ.

ನಾಲ್ಕನೆಯದಾಗಿ ಕುಟುಂಬ ಯೋಜನೆಯ ಅಗತ್ಯತೆ ಇದ್ದು ಉಪಯೋಗಿಸದಿರುವುದು ಅಂದರೆ ಬೇಡವಾದ ಗರ್ಭ ಧರಿಸಿರುವವರು, ಬೇಡವಾದ ಸಮಯದಲ್ಲಿ ಗರ್ಭ ಧರಿಸಿರುವವರು, ಮಕ್ಕಳ ಮಧ್ಯ ಅಂತರವಿಡಬಯಸುವವರು, ಮುಂದೆ ಮಕ್ಕಳು ಬೇಡವೆನ್ನುವವರನ್ನು ಗುರುತಿಸಿ ಸೂಕ್ತ ಸಲಹೆ ಮತ್ತು ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ಕೊನೆಯದಾಗಿ ಕುಟುಂಬ ಯೋಜನಾ ಕಾರ್ಯಕ್ರಮಕ್ಕೆ ಪೂರಕವಾಗಿ ಸದ್ಯ ಜಾರಿಯಲ್ಲಿರುವ ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮಗಳು ಎಲ್ಲ ಮಹಿಳೆಯರನ್ನು ತಲುಪುವಂತೆ ನೋಡುವುದು.