ಕೈಗಾರಿಕೆಗಳ ಸ್ಥಾಪನೆ ಮತ್ತು ವಿಕಾಸದ ದೃಷ್ಟಿಯಿಂದ ಕರ್ನಾಟಕ ಇಡೀ ಭಾರತದಲ್ಲೇ ವಿಶಿಷ್ಠವಾದ ಸ್ಥಾನವನ್ನು ಪಡೆದಿದೆ. ವಿಫುಲವಾದ ಸಂಪನ್ಮೂಲಗಳು, ಸರ್ಕಾರದ ಪ್ರೋತ್ಸಾಹ, ಖಾಸಗೀ ಉದ್ಯಮಿಗಳ ಉತ್ಸಾಹದಿಂದಾಗಿ ವೈವಿಧ್ಯಮಯವಾದ ಕೈಗಾರಿಕೆಗಳು ಕರ್ನಾಟಕದಲ್ಲಿ ವಿಕಾಸಗೊಂಡಿದೆ. ಖಾಸಗೀ ಕ್ಷೇತ್ರ, ಸಾರ್ವಜನಿಕ ವಲಯಗಳಲ್ಲಿ ಅನೇಕ ರೀತಿಯ ಕೈಗಾರಿಕೆಗಳು ಅಭಿವೃದ್ಧಿಗೊಂಡಿವೆ. ಕೈಗಾರಿಕೆಗಳೊಂದಿಗೆ ಕೈಗಾರಿಕಾ ಕಾರ್ಮಿಕರ ಸಂಖ್ಯೆ ಸಹ ಬೆಳೆದಿದೆ. ಇಂದು ಸುಮಾರು ೧೫.೪೯ ಲಕ್ಷ ಜನರು ವ್ಯವಸ್ಥಿತ ಕ್ಷೇತ್ರದಲ್ಲಿ ಉದ್ಯೋಗಸ್ಥರಾಗಿದ್ದಾರೆ. ಸದ್ಯದಲ್ಲಿ ರಾಜ್ಯದಲ್ಲಿ ೭೨೪ ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು ಇವುಗಳಲ್ಲಿ ೨.೭೭ ಲಕ್ಷ ಜನ ಉದ್ಯೋಗಸ್ಥರಿದ್ದಾರೆ. ಈ ಕೈಗಾರಿಕೆಗಳಲ್ಲಿ ಹೂಡಿಕೆಯಾಗಿರುವ ಬಂಡವಾಳದ ಪ್ರಮಾಣ ೬೨೬೮ ಕೋಟಿ ರೂಪಾಯಿಗಳು.

ಕೈಗಾರಿಕೆಗಳಲ್ಲಿನ ಉತ್ಪಾದನೆಯ ಪ್ರಗತಿ ಅತಿ ಮುಖ್ಯವಾಗಿ ಉತ್ತಮವಾದ ಕೈಗಾರಿಕಾ ಬಾಂಧವ್ಯದ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಕಾರಣದಿಂದಲೇ ಕೈಗಾರಿಕೆಗಳ ಮಾಲೀಕರು ಮತ್ತು ಕಾರ್ಮಿಕರ ನಡುವೆ ಉತ್ತಮವಾದ ಸಂಬಂಧವನ್ನು ಕಾಪಾಡಿಕೊಂಡು ಬರುವುದರಲ್ಲಿ ಸರ್ಕಾರವೂ ತನ್ನ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ರಾಷ್ಟ್ರ ಸರ್ಕಾರ ಅನೇಕ ಕಾನೂನುಗಳ ಮೂಲಕ ಕೈಗಾರಿಕಾ ಸಂಬಂಧವನ್ನು ಉತ್ತಮ ಮಟ್ಟದಲ್ಲಿಟ್ಟಿರುವ ಪ್ರಯತ್ನದಲ್ಲಿ ತೊಡಗುತ್ತಾ ಬಂದಿದ್ದು ಕರ್ನಾಟಕ ಸರ್ಕಾರವು ಸಹ ಇವುಗಳನ್ನು ಅನುಸರಿಸುತ್ತಾ ಬಂದಿದೆ.

ಹಿನ್ನೆಲೆ

ಸ್ವಾತಂತ್ಯ್ರಪೂರ್ವದಲ್ಲಿ ಕೈಗಾರಿಕಾ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದ ಕಾನೂನುಗಳೆಂದರೆ, ೧೯೩೬ರ ಮೈಸೂರು ಫ್ಯಾಕ್ಟರಿ ಲೆಜಿಸ್ಲೇಷನ್ ಆಕ್ಟ್, ೧೯೨೭ರ ಮೈಸೂರು ಮೆಟಿರ್ನಿಟಿ ಬೆನಿಫಿಟ್ ಆಕ್ಟ್. ಈ ಕಾನೂನುಗಳು ಮುಖ್ಯವಾಗಿ ಕಾರ್ಖಾನೆಗಳಲ್ಲಿ ಶ್ರಮದ ಶೋಷಣೆಯನ್ನು ತಗ್ಗಿಸುವ ಮತ್ತು ಕಾರ್ಮಿಕರು, ಮಾಲೀಕರೊಡನೆ ಒಡಂಬಡಿಕೆ ಮಾಡಿಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುವಂತಿದ್ದವು.

ಮೇಲಿನ ಕಾನೂನುಗಳ ಜೊತೆಗೆ ೧೯೩೧ರಲ್ಲಿ ಕೈಗಾರಿಕಾ ವಿವಾದಗಳನ್ನು ಇತ್ಯರ್ಥಮಾಡುವ ದೃಷ್ಟಿಯಿಂದ ‘ಬೋರ್ಡ್‌ ಆಫ್ ಕನ್ಸೀಲಿಯೇಷನ್’ಅನ್ನು ಸಹ ಸರ್ಕಾರ ಅಸ್ತಿತ್ವಕ್ಕೆ ತಂದಿತು. ಇದರ ಉದ್ದೇಶ, ಕೈಗಾರಿಕಾ ಮಾಲೀಕರು ಮತ್ತು ಕಾರ್ಮಿಕರ ನಡುವೆ ನಡೆಯುವ ವ್ಯಾಜ್ಯವನ್ನು ತೀರ್ಮಾನಿಸುವುದಾಗಿತ್ತು. ಈ ಬೋರ್ಡಿನಲ್ಲಿ ಮಾಲೀಕರು,ಕಾರ್ಮಿಕರು ಮತ್ತು ಸಾರ್ವಜನಿಕರು ಸದಸ್ಯತ್ವವನ್ನು ಹೊಂದಿರುತ್ತಿದ್ದರು. “ಬೋರ್ಡ್‌ ಆಫ್ ಕನ್ಸೀಲಿಯೇಷನ್” ಕಾರ್ಮಿಕ ವಿವಾದಗಳನ್ನು ಸದರ್ಥವಾಗಿ ಇತ್ಯರ್ಥ ಮಾಡುವುದಕ್ಕೆ ಶಕ್ತವಾಗಲಿಲ್ಲವಾದುದರಿಂದ ೧೯೪೨ರಲ್ಲಿ ‘ಮೈಸೂರು ಲೇಬರ್ (ಎಮೆರ್ಜೆನ್ಸಿ) ಆಕ್ಟ್’ ಅನ್ನು ಜಾರಿಗೆ ತರಲಾಯಿತು. ವಾಸ್ತವವಾಗಿ ಕೈಗಾರಿಕಾ ವಿವಾದಗಳ ವಿಷಯದಲ್ಲಿ ಸರ್ಕರ ಮಧ್ಯಪ್ರವೇಶಿಸುವುದಕ್ಕೆ ಅನುಕೂಲವಾದ ಪ್ರಪ್ರಥಮ ಕಾನೂನು ಇದಾಗಿತ್ತು. ಈ ಕಾನೂನಿನ ಪ್ರಕಾರ ಯಾವುದೇ ಕಾರ್ಮಿಕ ವಿವಾದವನ್ನು ‘ಅರ್ಬಿಟ್ರೇಷನ್ ಟ್ರೆಬ್ಯೂನಲ್‌’ಗೆ ಅಥವಾ ‘ಲೇಬರ್ ಕೋರ್ಟ್‌’ಗೆ ಒಪ್ಪಿಸುವ ಅಧಿಕಾರವನ್ನು ಪಡೆದುಕೊಂಡಿತು.

ಎರಡನೆಯ ಮಹಾಯುದ್ಧದ ನಂತರದ ತಕ್ಷಣದಲ್ಲಿ ವರ್ಷಗಳಲ್ಲಿ ಕೈಗಾರಿಕೆಗಳ ಪರಿಸ್ಥಿತಿ ಬಹುಮಟ್ಟಿಗೆ ಬದಲಾಯಿತೆಂದು ಹೇಳಬಹುದು. ಅನೇಕ ಕೈಗಾರಿಕೆಗಳಲ್ಲಿ ಅಶಾಂತಿಯುತವಾದ ಪರಿಸ್ಥಿತಿ ಉದ್ಭವಿಸಿತು. ಮುಷ್ಕರಗಳಿಂದಾಗಿ ಅನೇಕ ಕೈಗಾರಿಕೆಗಳಲ್ಲಿ ಉತ್ಪಾದನಾ ಕಾರ್ಯ ಸ್ಥಗಿತಗೊಂಡಿತು. ರಾಷ್ಟ್ರದ ವಿಭಜನೆ, ಹಣದುಬ್ಬರ ಪರಿಸ್ಥಿತಿಗಳೂ ಸಹ ಕೈಗಾರಿಕಾ ಅಶಾಂತಿಗೆ ಪೋಷಣೆ ಕೊಟ್ಟವು.

ಕೈಗಾರಿಕೆಗಳಲ್ಲಿ ಕಾರ್ಮಿಕ ಶಾಂತಿ ನೆಲಸುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕಾ ಮಾಲಿಕರು ಮತ್ತು ಕಾರ್ಮಿಕರ ಸಮ್ಮೇಳನಗಳನ್ನು ನಡೆಸಿದವು. ರಾಜ್ಯ ಸರ್ಕಾರದ ಮಟ್ಟದಲ್ಲಿ ೩ ವರ್ಷಗಳವರೆಗೆ ಶಾಂತಿ ನೆಲೆಸಿರಬೇಕೆಂಬ ಒಪ್ಪಂದಕ್ಕೆ ಕೈಗಾರಿಕಾ ಮಾಲಿಕರು ಮತ್ತು ಕಾರ್ಮಿಕರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ತಕ್ಷಣದ ಅವಧಿಯಲ್ಲಿ ಕೈಗಾರಿಕಾ ಶಾಂತಿ ಅಸ್ತಿತ್ವಕ್ಕೆ ಬಂತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಕಾರ್ಮಿಕ ಕಾನೂನುಗಳನ್ನು ಸಹ ಜಾರಿಗೆ ತಂದಿತು. ಇವುಗಳಲ್ಲಿ ಮುಖ್ಯವಾದುವೆಂದರೆ, ಮೈಸೂರು ಫ್ಯಾಕ್ಟರೀಸ್ ಆಕ್ಟ್ ೧೯೪೮, ಮೈಸೂರು ಮಿನಿಮಮ್ ವೇಜಸ್ ಆಕ್ಟ್ ೧೯೪೯, ದಿ ಮೈಸೂರು ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಆಕ್ಟ್ ೧೯೪೮ ಮತ್ತು ದಿ ಮೈಸೂರು ಷಾಪ್ಸ್ ಅಂಡ್ ಎಷ್ಟಾಬ್ಲಿಷ್ಮೆಂಟ್ಸ್ ಆಕ್ಟ್. ಈ ಕಾನೂನುಗಳು ಕೈಗಾರಿಕಾ ಕಾರ್ಮಿಕರಿಗೆ ಅನೇಕ ರೀತಿಯ ಸವಲತ್ತುಗಳನ್ನು ದೊರಕಿಸಿ ಕೊಡುವುದರ ಮೂಲಕ ಕೈಗಾರಿಕಾ ಬಾಂಧವ್ಯ ಉತ್ತಮಗೊಳಿಸುವ ಪ್ರಯತ್ನವನ್ನು ನಡೆಸಿದವು. ೧೯೫೧ರಲ್ಲಿ ಕೇಂದ್ರ ಸರ್ಕಾರ ಕೈಗಾರಿಕಾ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಜಾರಿಗೆ ತಂದ ಕಾನೂನು ಸಹ ಮುಖ್ಯವಾಗಿದ್ದವು. ಈ ಕಾನೂನಿನ ವ್ಯಾಪ್ತಿಗೆ ಕರ್ನಾಟಕ ರಾಜ್ಯ ಸಹ ಬಂದಿತು. ಆರ್ಥಿಕ ಯೋಜನೆ ಪ್ರಾರಂಭವಾದ ಮೇಲಂತೂ, ಕರ್ನಾಟಕ ರಾಜ್ಯದ ಕೈಗಾರಿಕಾ ಬಾಂಧವ್ಯಕ್ಕೆ ಸಂಬಧಿಸಿದ ನೀತಿ, ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಜಾರಿಗೆ ತರುವ ಕಾನೂನುಗಳನ್ನು ತಾನೂ ಸಹ ಅನುಸರಿಸುವುದೇ ಆಗಿದೆ. ಹೀಗಾಗಿ, ರಾಜ್ಯ ಸರ್ಕಾರ ಅತಿ ದೊಡ್ಡ ಕೈಗಾರಿಕೆಗಳಲ್ಲಿ ಮಾಲೀಕರು ಮತ್ತು ಕಾರ್ಮಿಕರ ನಡುವೆ ಉಂಟಾಗುವ ಒಪ್ಪಂದಗಳನ್ನು ರಾಜ್ಯ ಸರ್ಕಾರದ ಕಮೀಷನರ್ ಆಫ್ ಲೇಬರ್‌ನಿಂದ ಪ್ರಮಾಣಿತವಾಗಬೇಕೆಂದು ಒತ್ತಾಯಿಸಿದೆ. ಹಾಗೆಯೇ ಪ್ರತಿ ಫ್ಯಾಕ್ಟರಿಯಲ್ಲಿ ಉಂಟಾಗುವ ಸಣ್ಣ ಪುಟ್ಟ ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ತಮ್ಮದೇ ಆದ ಸರಳ ನೀತಿಯನ್ನು ಅನುಸರಿಸುವಂತೆ ಪ್ರೋತ್ಸಾಹಿಸುತ್ತಾ ಬಂದಿದೆ.

ಕೈಗಾರಿಕಾ ಸಂಬಂಧಗಳನ್ನು ಉತ್ತಮವಾಗಿರಿಸಿಕೊಳ್ಳುವ ದೃಷ್ಟಿಯಿಂದ ಉದ್ಯಮ ಮತ್ತು ರಾಜ್ಯಮಟ್ಟಗಳಲ್ಲಿ ಈಗ  ವ್ಯವಸ್ಥಿತವಾದ ‘ಕೂಡು ಸಂಧಾನ’ ವಿಧಾನ ಅಸ್ತಿತ್ವದಲ್ಲಿದೆ. ಉದ್ಯಮದ ಹಂತದಲ್ಲಿ ವರ್ಕ್ಸ್‌ ಕಮಿಟಿಗಳು ಮತ್ತು ಜಾಯಿಂಟ್ ಕಮಿಟಿಗಳು ಇವೆ. ಹಾಗೆಯೇ ಕೈಗಾರಿಕಾ ಹಂತದಲ್ಲಿ ‘ವೇಜ್ ಬೋರ್ಡ್‌’ ಮತ್ತು ‘ಇಂಡಸ್ಟ್ರೀಯಲ್ ರಿಲೇಷನ್ಸ್ ಕಮಿಟಿ’ ಮತ್ತು ರಾಷ್ಟ್ರ ಮಟ್ಟದಲ್ಲಿ ಇಂಡಿಯನ್ ಲೇಬರ್ ಕಾನ್ಫರೆನ್ಸ್ ಮತ್ತು ‘ಸ್ಟಾಡಿಂಗ್ ಲೇಬರ್ ಕಮಿಟಿ’ಗಳು ಅಸ್ತಿತ್ವಕ್ಕೆ ಬಂದಿವೆ. ಜೊತೆಗೆ ಕರ್ನಾಟಕ ಸರ್ಕಾರ, ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳು ಸರಿಯಾಗಿ ಜಾರಿಗೆ ಬರುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತು ಅವುಗಳನ್ನು ಅನುಷ್ಟಾನಗೊಳಿಸಲು ಒಂದು ‘ಇಂಪ್ಲಿಮೆಂಟೇಷನ್ ಅಂಡ್ ಇವ್ಯಾಲ್ಯುಯೇಷನ್ ಕಮಿಟಿ’ಯನ್ನು ಸಹ ರಚಿಸಿದೆ.

ಸಾಧ್ಯವಾದಷ್ಟು ಮಟ್ಟಿಗೂ ಉದ್ಯಮ ಮಟ್ಟದಲ್ಲಿಯೇ ವಿವಾದಗಳು ಅಂತ್ಯಗೊಳ್ಳಬೇಕೆಂಬುದು ಸರ್ಕಾರದ ಬಯಕೆ. ಈ ದೃಷ್ಟಿಯಿಂದ ಉದ್ಯಮದ ಮಟ್ಟದಲ್ಲಿಯೇ ಮಾಲೀಕರು ಮತ್ತು ಕಾರ್ಮಿಕರು ‘ಒಪ್ಪಂದ’ಕ್ಕೆ ಬರುವ (ಟ್ರೂಸ್ ಅಗ್ರೀಮೆಂಟ್) ಒಂದು ಪದ್ದತಿಯನ್ನು ಸಹ ಜಾರಿಗೆ ತರಲಾಗಿದೆ. ಇದರ ಪ್ರಕಾರ, ಒಂದು ಅವಧಿಯವರೆಗೆ ಕೈಗಾರಿಕಾ ಮಾಲೀಕರು ಮತ್ತು ಕಾರ್ಮಿಕರು ವಿವಾದಗಳ ಬಗ್ಗೆ ಒಂದು ಒಪ್ಪಂದಕ್ಕೆ ಬರಬಹುದಾಗಿದೆ.

ಕೈಗಾರಿಕಾ ಸಂಬಂಧಗಳಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ, ಕಾರ್ಮಿಕರು ಕೈಗಾರಿಕಾ ಆಡಳಿತದಲ್ಲಿ ಭಾಗವಹಿಸುವ ವಿಧಾನ. ಇದನ್ನು ‘ಜಾಯಿಂಟ್ ಮ್ಯಾನೇಜ್‌ಮೆಂಟ್ ಕೌನ್ಸಿಲ್‌’ಗಳು ಮತ್ತು ‘ಪ್ಲೋರ್ ಕೌನ್ಸಿನಲ್’ಗಳ ಮೂಲಕ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಈ ರೀತಿಯ ವ್ಯಾಪಕವಾದ ಕೈಗಾರಿಕಾ ಸಂಬಂಧ ಸುಧಾರಣಾ ಕ್ರಮಗಳ ಜೊತೆಗೆ ಸರ್ಕಾರ ಕಾರ್ಮಿಕರ ಕ್ಷೇಮಾಭಿವೃದ್ಧಿಯನ್ನು ಹೆಚ್ಚಿಸುವಂತಹ ‘ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಆಕ್ಟ್’, ‘ದಿ ವರ್ಕರ್ಸ್‌ ಹೌಸಿಂಗ್ ಸ್ಕೀಂ’ಮುಂತಾದವುಗಳ ಮೂಲಕ ಕೈಗಾರಿಕಾ ಸಂಬಂಧ ಉತ್ತಮಗೊಳ್ಳುವಂತೆ ಪ್ರಯತ್ನಿಸಿದೆ.

ಈ ಮೊದಲೇ ಸೂಚಿರುವಂತೆ ಕೈಗಾರಿಕಾ ಬಾಂಧವ್ಯದ ಇಬ್ಬರು ಮುಖ್ಯ ಪಾತ್ರಧಾರಿಗಳೆಂದರೆ ಕಾರ್ಮಿಕರು ಮತ್ತು ಕೈಗಾರಿಕಾ ಮಾಲೀಕರು. ಆದ್ದರಿಂದ ಕಾರ್ಮಿಕ ಸಂಘಗಳು ಎಷ್ಟು ಪ್ರಬಲವಾಗಿವೆ ಮತ್ತು ಮಾಲೀಕರು ಎಷ್ಟರ ಮಟ್ಟಿಗೆ ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಿ ಅವರ ಬೇಡಿಕೆಗಳನ್ನು ಪೂರೈಸುತ್ತಾರೆ ಎನ್ನವುದು ಕೈಗಾರಿಕಾ ಸಂಬಂಧವನ್ನು ನಿರ್ಧರಿಸುವ ಮುಖ್ಯ ಅಂಶಗಳಾಗುತ್ತವೆ. ಕಾರ್ಮಿಕ ಸಂಘಗಳು ಮತ್ತು ಮಾಲೀಕರು ನಡುವೆ ಯಾವುದೇ ವಿವಾದದ ಬಗ್ಗೆ ಒಮ್ಮತ ಏರ್ಪಡದಿದ್ದಾಗ ಕಾರ್ಮಿಕ ಕಾನೂನುಗಳ, ಸರ್ಕಾರದ ಮಧ್ಯಪ್ರವೇಶಿಸುವಿಕೆ ಮುಖ್ಯವಾಗುತ್ತವೆ. ಕರ್ನಾಟಕದಲ್ಲಿ ಕಾರ್ಮಿಕ ಸಂಘಗಳ ಹಾಗೂ ಮಾಲೀಕರ ಪಾತ್ರಗಳನ್ನು ವಿವೇಚಿಸುವುದು, ಕೈಗಾರಿಕಾ ಬಾಂಧವ್ಯವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಕಾರ್ಮಿಕ ಸಂಘಗಳು

೧೯೫೬-೫೭ರಿಂದ ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಸಂಘಗಳ ಸಂಖ್ಯೆ ಸತತವಾಗಿ ಹೆಚ್ಚಾಗುತ್ತಾ ಮುಂದುವರಿದಿದೆ. ೧೯೫೬-೫೭ರಲ್ಲಿ ಇವುಗಳ ಸಂಖ್ಯೆ ಕೇವಲ ೨೩೩ ಇದ್ದದ್ದು ೧೯೯೪ರಲ್ಲಿ ಇವುಗಳ ಸಂಖ್ಯೆ ೩೬೩೫ಕ್ಕೆ ಏರಿದೆ. ಕಾರ್ಮಿಕ ಸಂಘಗಳ ಸದಸ್ಯತ್ವ ಸಹ ಸತತವಾಗಿ ಹೆಚ್ಚಾಗುತ್ತಾ ಬಂದಿದೆ. ರಾಜ್ಯದಲ್ಲಿ ಅನೇಕ ಕಾರ್ಮಿಕ ಸಂಘಗಳಿದ್ದರೂ ಕೇವಲ ಕೆಲವು ಸಂಘಗಳ ಸಂಖ್ಯೆ ಮಾತ್ರ ಸರಾಸರಿ ೨೦೦೦ವನ್ನು ದಾಟಿದೆ ಅಷ್ಟೇ. ವಾಸ್ತವವಾಗಿ ಹೆಚ್ಚಿನ ಕಾರ್ಮಿಕ ಸಂಘಗಳ ಸರಾಸರಿ ಸದಸ್ಯತ್ವ ಅಷ್ಟೇನೂ ವ್ಯತ್ಯಾಸವಿಲ್ಲದೆ ಮುಂದುವರಿದಿದೆ. ಕರ್ನಾಟಕ ರಾಜ್ಯದಲ್ಲಿ ವಾಸ್ತವವಾಗಿ ಕಾರ್ಮಿಕ ಸಂಘದ ಗಾತ್ರ ಬಹಳ ಕಿರಿದಾದುದಾಗಿದೆ. ಸುಮಾರು ಶೇ. ೭೦ರಷ್ಟು ಕಾರ್ಮಿಕ ಸಂಘಗಳ ಸರಾಸರಿ ಸದಸ್ಯತ್ವ ಕೇವಲ ೫೦ ರಿಂದ ೧೦೦ರಷ್ಟಿದೆ. ಹೀಗಾಗಿ ಕಾರ್ಮಿಕ ಸಂಘಗಳ ಬಲ ನಮ್ಮ ರಾಜ್ಯದಲ್ಲಿ ತುಂಬಾ ಕಡಿಮೆ ಇದೆ. ಅಂದರೆ ಹೆಚ್ಚಿನ ಸಂಘಗಳು ಬಲಾಢ್ಯವಾಗಿಲ್ಲ. ಕೇವಲ ಶೇ. ೧೦ರಷ್ಟು ಕಾರ್ಮಿಕ ಸಂಘಗಳು ಮಾತ್ರ ಹೆಚ್ಚಿನ ಸದಸ್ಯತ್ವವನ್ನು ಹೊಂದಿದ್ದು ಅವು ಸರ್ಕಾರವನ್ನು ಪ್ರಭಾವಿಸುವುದರಲ್ಲಿ ಶಕ್ತವಾಗಿವೆ.

ಕಾರ್ಮಿಕ ಸಂಘಗಳ ಬಲವನ್ನು ಕೈಗಾರಿಕಾವಾರು ದೃಷ್ಟಿಯಿಂದ ನೋಡಿದರೆ, ಸಣ್ಣ ಉದ್ಯಮಗಳಾದ ಸೋಪು, ಎಣ್ಣೆ, ಕೈಕಸುಬುಗಳು, ಬಳೆ, ಬೀಡಿ, ಬ್ಯಾಟರಿ, ಗೋಡಂಬಿ ಇತ್ಯಾದಿಗಳಲ್ಲಿನ ಕಾರ್ಮಿಕ ಸಂಘಗಳು ಒಟ್ಟು ಕಾರ್ಮಿಕ ಸಂಘಗಳಲ್ಲಿ ಸುಮಾರು ೪೦ ರಷ್ಟಾಗುತ್ತವೆ. ಸಾರಿಗೆ ಕ್ಷೇತ್ರದಲ್ಲಿನ ಸಂಘಗಳು ಒಟ್ಟು ಸಂಘಗಳಲ್ಲಿ ಶೇ. ೧೧ರಷ್ಟು, ಬ್ಯಾಂಕಿಂಗ್ ವಿಮೆ ಕ್ಷೇತ್ರದ  ಸಂಘಗಳು ಸುಮಾರು ಶೇ. ೮ರಷ್ಟು, ಪಾನೀಯಗಳು ಮತ್ತು ಹೊಗೆಸೊಪ್ಪು ಉದ್ಯಮಗಳಲ್ಲಿ ಸಂಘಗಳು ಶೇ. ೭ರಷ್ಟು ಆಗುತ್ತವೆ. ಉಳಿದ ಸಂಘಗಳು ಗಣಿ ಲೋಹ, ಕಾಗದ ಮತ್ತು ಮುದ್ರಣ, ರೇಡಿಯೋ, ವಿದ್ಯುತ್ ಉಪಕರಣಗಳು, ಟೀ ಮತ್ತು ರಾಸಾಯನಿಕಗಳಿಗೆ ಸೇರುತ್ತವೆ. ಒಟ್ಟಿನಲ್ಲಿ ನೋಡುವುದಾದರೆ, ಜವಳಿ  ಮತ್ತು ಎಂಜಿನಿಯರಿಂಗ್ ಉದ್ಯಮಗಳಲ್ಲಿನ ಕಾರ್ಮಿಕ ಸಂಘಗಳು ಒಟ್ಟು ಕಾರ್ಮಿಕ ಸಂಘಗಳಲ್ಲಿನ ಶೇ. ೧೮ರಷ್ಟಾಗುತ್ತವೆ.

ಜಿಲ್ಲಾವಾರು ವಿಂಗಡನೆಯ ದೃಷ್ಟಿಯಿಂದ ನೋಡುವುದಾದರೆ ಸಹಜವಾಗಿಯೇ ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಗಳು ಸಹ ಕೇಂದ್ರೀಕೃತವಾಗಿವೆ. ಹೀಗಾಗಿ ಬೆಂಗಳೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಕಾರ್ಮಿಕ ಸಂಘಗಳಿವೆ. ಅದನ್ನುಳಿದರೆ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಗಳು ಹೆಚ್ಚಾಗಿ ಕೇಂದ್ರೀಕೃತವಾಗಿವೆ.

ಭಾರತದ ಕಾರ್ಮಿಕ ಸಂಘಗಳ ಒಂದು ಲಕ್ಷಣವೆಂದರೆ, ಹೆಚ್ಚಿನ ಕಾರ್ಮಿಕರು, ಕಾರ್ಮಿಕ ಸಂಘಗಳಿಗೆ ಸದಸ್ಯರಾಗಿಲ್ಲದೇ ಇರುವುದು. ಕರ್ನಾಟಕ ಸಹ ಇದಕ್ಕೆ ಹೊರತಾದುದೇನಲ್ಲ. ಒಟ್ಟು ಕಾರ್ಮಿಕರಲ್ಲಿ ಶೇ. ೫೦ರಷ್ಟು ಸಹ ಕಾರ್ಮಿಕ ಸಂಘಗಳ ಸದಸ್ಯರಾಗಿಲ್ಲ. ಹೀಗಾಗಿ ಕಾರ್ಮಿಕ ಸಂಘಗಳು ಎಲ್ಲಾ ಕಾರ್ಮಿಕರ ಪ್ರಾತಿನಿಧ್ಯವನ್ನು ಹೊಂದಿಲ್ಲದಿದ್ದು ಅವರ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿಪಾದಿಸುವುದಕ್ಕೆ ಶಕ್ತವಾಗಿಲ್ಲ.

ಕರ್ನಾಟಕ ರಾಜ್ಯ ಕೈಗಾರಿಕಾ ಕಾರ್ಮಿಕ ಸಂಘಗಳ ಮತ್ತೊಂದು ವೈಶಿಷ್ಟ್ಯವೆಂದರೆ, ಅವು ವೃತ್ತಿ ಆಧಾರಿತವಾದುವಲ್ಲ. ಅಂದರೆ ಯಾವುದೇ ನಿರ್ದಿಷ್ಟ ವೃತ್ತಿಗೆ ಸಂಬಂಧಿಸಿದ ಕಾರ್ಮಿಕರು ತಮ್ಮದೇ ಆದ ಕಾರ್ಮಿಕ ಸಂಘವನ್ನು ರಚಿಸಿಕೊಳ್ಳುವುದು ಸಾಮಾನ್ಯವಾಗಿಲ್ಲ. ಬದಲಿಗೆ ಇವು ಸಾರ್ವತ್ರಿಕ ಸ್ವರೂಪವನ್ನು ಹೊಂದಿದ್ದು, ರಾಜಕೀಯ ವ್ಯಕ್ತಿಗಳು, ಕಾರ್ಮಿಕ ಸಂಘಗಳ ನಾಯಕರುಗಳಾಗುವುದಕ್ಕೆ ಸುಲಭವಾಗಿ ಅವಕಾಶವನ್ನು ದೊರಕಿಸಿ ಕೊಡಲಾಗಿದೆ.

ಕರ್ನಾಟಕದ ಕಾರ್ಮಿಕ ಸಂಘಗಳು ಹೆಚ್ಚಾಗಿ ಪ್ರಾಥಮಿಕ ಮಟ್ಟದಲ್ಲಿ ಅಥವಾ ಉದ್ಯಮದ ಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಹೆಚ್ಚಿನ ಸಂಘಗಳು ರಾಷ್ಟ್ರೀಯ ಸಂಘಗಳಿಗೆ ನೊಂದಾಯಿಸಿಕೊಂಡಿಲ್ಲ. ಕೇವಲ ಕೆಲವು ಸಂಘಗಳು ಮಾತ್ರ ರಾಷ್ಟ್ರೀಯ ಪ್ರಮುಖ ಸಂಘಗಳಾದ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐ.ಎನ್.ಟಿ.ಯು.ಸಿ) ‘ದಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್’ (ಎ.ಐ.ಟಿ.ಯು.ಸಿ) ‘ದಿ ಹಿಂದ್ ಮಜದೂರ್ ಸಭಾ’ (ಹೆಚ್.ಎಂ.ಎಸ್) ಮತ್ತು ‘ಯೂನಿಯನ್ ಆಫ್ ಟ್ರೇಡ್ ಯೂನಿಯನ್ ಕಾಂಗ್ರೆಸ್’ (ಯು.ಟಿ.ಯು.ಸಿ)ಗಳೊಡನೆ ನೊಂದಣಿ ಮಾಡಿಕೊಂಡಿವೆ. ಕರ್ನಾಟಕ ಸರ್ಕಾರದ ಉದ್ಯಮಗಳು ಮಾತ್ರ ಬೆಂಗಳೂರಿನ ‘ಕರ್ನಾಟಕ ಗೌರ್ನಮೆಂಟ್ ಇಂಡಸ್ಟ್ರಿಯಲ್ ಕನ್‌ಸರ್ನ್ಸ್ ಟ್ರೇಡ್ ಯೂನಿಯನ್ ಫೆಡರೇಷನ್’ನೊಡನೆ ನೊಂದಾಯಿಸಿಕೊಂಡಿವೆ. ಹೆಚ್ಚಿನ ಕಾರ್ಮಿಕ ಸಂಘಗಳು ಸ್ವತಂತ್ರವಾಗಿ ವರ್ತಿಸುತ್ತಿದ್ದರೂ, ಅವುಗಳ ಸದಸ್ಯತ್ವ ಬಹಳ ಕಡಿಮೆ. ರಾಷ್ಟ್ರೀಯ ಸಂಘಗಳೊಡನೆ ನೊಂದಾಯಿತವಾಗಿರುವ ಸಂಘಗಳು ಒಟ್ಟು ಕಾರ್ಮಿಕ ಸಂಘದ ಶೇ. ೬೫ರಷ್ಟು ಸದಸ್ಯರನ್ನು ಹೊಂದಿವೆ. ಆದರೆ ಒಂದು ಸ್ವಾರಸ್ಯದ ವಿಷಯವೆಂದರೆ, ರಾಷ್ಟ್ರೀಯ ಸಂಘಗಳೊಡನೆ ನೊಂದಾಯಿತವಾಗಿರುವ ಸಂಘಗಳು ಒಟ್ಟು ಕಾರ್ಮಿಕ ಸಂಘದ ಶೇ. ೬೫ರಷ್ಟು ಸದಸ್ಯರನ್ನು ಹೊಂದಿವೆ. ಆದರೆ ಒಂದು ಸ್ವಾರಸ್ಯದ ವಿಷಯವೆಂದರೆ, ರಾಷ್ಟ್ರೀಯ ಫೆಡರೇಷನ್‌ಗಳೊಡನೆ ನೊಂದಾವಣಿ ಹೊಂದದಿದ್ದರೂ ಸಹ ಸ್ಥಳೀಯ ಕಾರ್ಮಿಕ ಸಂಘಗಳು ಅತ್ಯಂತ ಹೆಚ್ಚಿನ ಸ್ವಾತಂತ್ಯ್ರ ಹೊಂದಿದ್ದು, ಕೈಗಾರಿಕಾ ಮಾಲೀಕರ ಜೊತೆ ಸಂಧಾನ ನಡೆಸುವಾಗ, ಫೆಡರೇಷನ್ ನೆರವನ್ನು ಕೋರುವುದಿಲ್ಲ. ತಾವು ಮುಷ್ಕರ ಹೂಡಿದಾಗ ಮಾತ್ರ ಸ್ಥಳೀಯ ಸಂಘಗಳು ಫೆಡರೇಷನ್ ಬೆಂಬಲವನ್ನು ನಿರೀಕ್ಷಿಸುತ್ತವೆ ಅಷ್ಟೇ. ಉಳಿದಂತೆ ಫೆಡರೇಷನ್‌ನೊಡನೆ ಯಾವ ಸಕ್ರಿಯ ಸಂಬಂಧವನ್ನು ಹೊಂದಿರುವುದಿಲ್ಲ. ಫೆಡರೇಷನ್‌ಗಳು ಸಹ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕೇವಲ ಕೆಲವು ಕಾರ್ಮಿಕ ಸಂಘಗಳು ಪ್ರಾಥಮಿಕ ಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದ್ದು. ಪ್ರಾಥಮಿಕ ಹಾಗೂ ರಾಜ್ಯ ಮಟ್ಟದ ಸಂಘಗಳೊಡನೆ ಸಂಪರ್ಕ ಹೊಂದಿಲ್ಲ. “ಆಟೋಮೊಬೈಲ್ ವರ್ಕರ್ಸ್ ಯೂನಿಯನ್”, “ಬ್ಯಾಂಗಲೂರ್ ಡಿಸ್ಟ್ರಿಕ್ಸ್ ಟೆಕ್ಸ್‌ಟೈಲ್ ಎಂಪ್ಲಾಯೀಸ್ ಯೂನಿಯನ್”, “ದಿ ಬ್ಯಾಂಗಲೂರ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್” ಇಂತಹ ಸಂಘಗಳಿಗೆ ನಿದರ್ಶನಗಳು. ಇವು ಸ್ವತಂತ್ರ ಸಂಘಗಳಾಗಿದ್ದು ಪ್ರಾಥಮಿಕ ಮಟ್ಟದ ಅಥವಾ ರಾಷ್ಟ್ರೀಯ ಮಟ್ಟದ ಸಂಘಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸಂಬಂಧ ಹೊಂದಿರುವ ಕೆಲವು ಕಾರ್ಮಿಕ ಸಂಘಗಳು ಅತ್ಯಂತ ಪ್ರಮುಖವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕರ್ನಾಟಕ ಕಾರ್ಮಿಕ ಸಂಘಗಳು ಸಹ ಇಂತಹ ಪ್ರಮುಖ ಸಂಘಗಳಿಗೆ ತಮ್ಮನ್ನು ನೊಂದಾಯಿಸಿಕೊಂಡಿವೆ. ರಾಷ್ಟ್ರೀಯ ಕಾರ್ಮಿಕ ಸಂಘವಾದ ಐ.ಎನ್.ಟಿ.ಯು.ಸಿ. ಜೊತೆ ಅತ್ಯಂತ ಹೆಚ್ಚಿನ ರಾಜ್ಯ ಕಾರ್ಮಿಕ ಸಂಘಗಳು ನೊಂದಾವಣಿ ಹೊಂದಿದೆ. ಇದರ ನಂತರ ಎ.ಐ.ಟಿ.ಯು.ಸಿ,  ಸಿ.ಐ.ಟಿ.ಯು, ಬಿ.ಎಂ.ಎಸ್., ಮತ್ತು ಎಚ್.ಎಂ.ಎಸ್. ಜೊತೆ ನೊಂದಾವಣಿಯನ್ನು ಹೊಂದಿವೆ.

ಕರ್ನಾಟಕ ಕಾರ್ಮಿಕ ಸಂಘಗಳ ಮತ್ತೊಂದು ಪ್ರಮುಖ ಅಂಶವೆಂದರೆ, ಅವು ಆರ್ಥಿಕವಾಗಿ ಬಲಿಷ್ಟವಾಗಿಲ್ಲದಿರುವುದು. ಹೆಚ್ಚಿನಂಶ ಇವು ಸದಸ್ಯರ ವಂತಿಗೆಯನ್ನೇ ಅವಲಂಬಿಸಬೇಕಾಗಿದ್ದು, ಈ ಮೂಲದಿಂದ ದೊರೆಯುತ್ತಿರುವ ಆದಾಯ ಬಹಳ ಅಲ್ಪವಾಗಿದ್ದು ಸಂಘಗಳು ಬಲಿಷ್ಠವಾಗುವುದು ಸಾಧ್ಯವಾಗಿಲ್ಲ. ಜೊತೆಗೆ ತಾವು ಪಡೆಯುವ ಆದಾಯದಲ್ಲಿ ಹೆಚ್ಚಿನ ಭಾಗವನ್ನು ಇವು ಸಂಘಗಳ ಆಡಳಿತಕ್ಕಾಗೇ ಖರ್ಚು ಮಾಡುತ್ತಿದ್ದು ಕಾರ್ಮಿಕ ಸದಸ್ಯರ ಕಲ್ಯಾಣಕ್ಕೆ ದೊರೆಯುತ್ತಿರುವ ಹಣ ಬಹಳ ಅಲ್ಪವಾಗಿದೆ. ಹೀಗಾಗಿ, ಸದಸ್ಯರು ತಮ್ಮ ಸಂಘಗಳ ಬಗ್ಗೆ ತುಂಬಾ ಅನಾಸಕ್ತರಾಗಿದ್ದಾರೆ. ಕಾರ್ಮಿಕ ಕಲ್ಯಾಣಕ್ಕಿಂತ ಹೆಚ್ಚಾಗಿ, ಕಾರ್ಮಿಕ ಸಂಘಗಳು ಮುಷ್ಟರಗಳಲ್ಲಿ ಮಾತ್ರ ಸಕ್ರಿಯವಾಗಿರುವುದು ಕೈಗಾರಿಕಾ ಸಂಬಂಧ ದುರ್ಬಲವಾಗಿರುವುದಕ್ಕೆ ಕಾರಣವಾಗಿದೆ. ಈ ಅಂಶವು ನಮ್ಮ ರಾಷ್ಟ್ರದ ಇತರೆ ರಾಜ್ಯಗಳಲ್ಲಿನ ಕಾರ್ಮಿಕ ಸಂಘಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಒಟ್ಟಿನಲ್ಲಿ ಹೇಳುವಾಗ, ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಸಂಘಗಳು  ಉತ್ತಮ ಕೈಗಾರಿಕಾ ಸಂಬಂಧವನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತಿಲ್ಲ. ಕಡಿಮೆ ಸಂಖ್ಯೆಯ ಸದಸ್ಯತ್ವ, ರಾಜಕೀಯ ಧುರೀಣರ ಮುಖಂಡತ್ವ, ಕೂಲಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಮಹತ್ವ, ದುರ್ಬಲ ಆರ್ಥಿಕ ಪರಿಸ್ಥಿತಿ ಕಾರ್ಮಿಕ ಸಂಘಗಳ ಪ್ರಮುಖ ಲಕ್ಷಣವಾಗಿದ್ದು, ಉತ್ತಮ ಕೈಗಾರಿಕಾ ಸಂಬಂಧ ಏರ್ಪಡಿಸುವುದರಲ್ಲಿ ಇವು ವಿಫಲವಾಗಿವೆ.

ಈ ಹಿಂದೆಯೇ ಸೂಚಿಸಿರುವಂತೆ ಕೈಗಾರಿಕಾ ಸಂಬಂಧದ ಮತ್ತೊಬ್ಬ ಪಾತ್ರಧಾರಿಯೆಂದರೆ, ಕೈಗಾರಿಕಾ ಮಾಲಿಕೆ. ಕಾರ್ಮಿಕ ಸಂಘಗಳಿರುವಂತೆಯೇ, ರಾಜ್ಯದಲ್ಲಿ ಮಾಲೀಕರ ಸಂಘಗಳು ಸಹ ಅಸ್ತಿತ್ವದಲ್ಲಿದೆ. ಕರ್ನಾಟಕದ ಕೈಗಾರಿಕಾ ಮಾಲೀಕರು, ಇಲ್ಲವೇ ‘ಕರ್ನಾಟಕ ಛೇಂಬರ್ ಆಫ್ ಕಾಮರ್ಸ್‌’ನ ಸದಸ್ಯರಾಗಿದ್ದಾರೆ ಅಥವಾ ಅಖಿಲ ಭಾರತೀಯ ಮಾಲೀಕರ ಸಂಘಗಳಲ್ಲಿನ ಸದಸ್ಯತ್ವವನ್ನು ಹೊಂದಿದ್ದಾರೆ. ಆದರೆ ಮಾಲೀಕರ ಸಂಘಗಳು, ಉತ್ತಮ ಕೈಗಾರಿಕಾ ಬಾಂಧವ್ಯವನ್ನು ಸೃಷ್ಟಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿಲ್ಲ. ಉದಾಹರಣೆಗೆ, ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಹೆಚ್ಚಾಗಿ ವಾಣಿಜ್ಯ ವಿಷಯಗಳಲ್ಲಿ ಆಸಕ್ತವಾಗಿದೆ. ಇದಲ್ಲದೆ, ರಾಜ್ಯದ ಕೈಗಾರಿಕಾ ಮಾಲೀಕರ ಸಂಘಗಳು ಸಹ ಪ್ರತಿಯೊಂದು ಕೈಗಾರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಸಂಘಟಿಸಿ ಕೊಂಡಿಲ್ಲ. ಇದಕ್ಕೆ ಕಾರಣ ಸಹ ಸುಸ್ಪಷ್ಟ. ಒಂದು ಉದ್ಯಮದಲ್ಲಿ ಉಂಟಾಗುವ ಕಾರ್ಮಿಕ ವಿವಾದಕ್ಕೆ ಮತ್ತೊಂದು ಉದ್ಯಮ ತಲೆಕೆಡಿಸಿಕೊಳ್ಳುವುದಕ್ಕೆ ತಯಾರಿಲ್ಲ. ಆದ್ದರಿಂದ ಉದ್ಯಮದ ಮಾಲೀಕರು ತಮ್ಮ ಉದ್ಯಮಕ್ಕೆ ಸಂಬಂಧಿಸಿದ ಕೈಗಾರಿಕಾ ವಿವಾದವನ್ನು ಪರಿಹರಿಸಿಕೊಳ್ಳುವುದರಲ್ಲಿ  ಹೆಚ್ಚು ಆಸಕ್ತರಾಗಿರುವುದರಿಂದ ಇಡೀ ಕೈಗಾರಿಕೆಗೆ ಸಂಬಂಧಿಸಿದ ಉದ್ಯಮಪತಿಗಳ ಸಂಘಗಳು ಅಸ್ತಿತ್ವಕ್ಕೆ ಬಂದಿಲ್ಲ. ಒಟ್ಟಿನಲ್ಲಿ ಮಾಲೀಕರ ಸಂಘಗಳು, ಕೈಗಾರಿಕಾ ಸಂಬಂಧವನ್ನು ಉತ್ತಮ ಪಡಿಸುವುದರಲ್ಲಿ ವಹಿಸುತ್ತಿರುವ ಪಾತ್ರ ಬಹಳ ಗೌಣ.

ಕೈಗಾರಿಕಾ ಮಾಲೀಕರು ಮತ್ತು ಕಾರ್ಮಿಕರು ವಿವಾದಗಳನ್ನು ಬಗೆಹರಿಸಿಕೊಳ್ಳುವುದರಲ್ಲಿ ನಿರೀಕ್ಷಿತ ಪಾತ್ರವನ್ನು ವಹಿಸುತ್ತಿಲ್ಲದಿರುವಾಗ, ಸಹಜವಾಗಿಯೇ ಸರ್ಕಾರದ ಮಧ್ಯ ‌ಪ್ರವೇಶಿಸುವಿಕೆ ಅನಿವಾರ್ಯವಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಸರ್ಕಾರ ಅನೇಕ ಕಾನೂನುಗಳು ಮತ್ತು ಒಡಂಬಡಿಕೆಗಳ ಮೂಲಕ ಉತ್ತಮ ಕೈಗಾರಿಕಾ ಸಂಬಂಧವನ್ನು ಏರ್ಪಡಿಸುವುದಕ್ಕೆ ಪ್ರಯತ್ನಿಸುತ್ತಾ ಬಂದಿದೆ. ಈ ಕಾನೂನುಗಳ ಪರಿಚಯವನ್ನು ಈ ಮೊದಲೇ ಮಾಡಿಕೊಡಲಾಗಿದೆ.

ಕೈಗಾರಿಕಾ ವಿವಾದಗಳು ಮತ್ತು ಕೈಗಾರಿಕಾ ಬಾಂಧವ್ಯ

ಮೇಲೆ ವಿವರಿಸಿರುವಂತೆ ಕಾರ್ಮಿಕ ಸಂಘಗಳು ಮತ್ತು ಕೈಗಾರಿಕಾ ಮಾಲೀಕರ ಸಂಘಗಳು ದುರ್ಬವಾಗಿರುವುದರಿಂದ ಅನಿವಾರ್ಯವಾಗಿ ಕೈಗಾರಿಕಾ ವಿವಾದಗಳು ವೃದ್ಧಿಯಾಗುವುದಷ್ಟೇ ಅಲ್ಲದೆ, ಅವು ವಿವಿಧ ಸ್ವರೂಪವನ್ನು ಸಹ ಪಡೆದುಕೊಳ್ಳುತ್ತವೆ. ಕಾರ್ಮಿಕರು ತಮ್ಮ ಅಸಮಾಧಾನಗಳನ್ನು ಅತ್ಯಂತ ವ್ಯಕ್ತವಾಗಿ ಮುಷ್ಕರ ಹೂಡುವುದು ಮತ್ತು ಕೈಗಾರಿಕೆಯನ್ನು ಮುಚ್ಚಿಸುವುದರ ಮೂಲಕ, ಹಾಗೂ ಅವ್ಯಕ್ತವಾಗಿ ಕೆಲಸಕ್ಕೆ ಹಾಜರಾಗದೇ ಹೋಗುವುದು, ಕಡಿಮೆ ಉತ್ಪಾದಿಸುವುದು ಮತ್ತು ಅಶಿಸ್ತಿನ ಮೂಲಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇವು ಹೇಗೆ ವ್ಯಕ್ತಗೊಳ್ಳುತ್ತಾ ಬಂದಿವೆ ಎನ್ನುವುದನ್ನು ನೋಡೋಣ.

ಕೈಗಾರಿಕಾ ವಿಕಾಸದ ಪ್ರಾರಂಭಿಕ ಹಂತದಲ್ಲಿ ಕರ್ನಾಟಕದಲ್ಲಿ ಕೈಗಾರಿಕಾ ಮುಷ್ಕರ ಮತ್ತು ಕೈಗಾರಿಕೆಗಳಿಗೆ ಬೀಗ ಹಾಕಿಸುವ ಕ್ರಮ ತುಂಬಾ ವಿರಳವಾಗಿತ್ತು. ೧೯೩೬ರವರೆಗೂ ಕೈಗಾರಿಕೆಗಳಲ್ಲಿ ಮಾಲೀಕರುರಗಳು ಪ್ರಾಬಲ್ಯವಿದ್ದುದಷ್ಟೇ ಅಲ್ಲದೆ, ಸರ್ಕಾರ ಸಹ ಕೈಗಾರಿಕಾಪತಿಗಳಿಗೇ ಹೆಚ್ಚಿನ ಬೆಂಬಲ ನೀಡುತ್ತಿತ್ತು. ಹೀಗಾಗಿ, ಕಾರ್ಮಿಕರ ಶಕ್ತಿ ತುಂಬಾ ಕ್ಷೀಣವಾಗಿತ್ತು. ಇದರಿಂದಾಗಿ ೧೯೨೦-೩೬ರ ನಡುವೆ ಕೇವಲ ೩೬ ಮುಷ್ಕರಗಳು ಮತ್ತು ಬೀಗ ಮುದ್ರೆಗಳು ನಡೆದಿದ್ದವು ಅಷ್ಟೇ. ಇವುಗಳಲ್ಲಿ ಭಾಗವಹಿಸಿದ್ದ ಕಾರ್ಮಿಕರ ಸಂಖ್ಯೆ ಸಹ ಬಹಳ ಕಡಿಮೆ ಇದ್ದು ಅದು ಕೇವಲ ೩೮.೫೯೫ ಆಗಿತ್ತು ಅಷ್ಟೇ.

ಎರಡನೇ  ಮಹಾ ಯುದ್ಧದ ನಂತರ, ಅನೇಕ ದೊಡ್ಡ ದೊಡ್ಡ ಕಾರ್ಮಿಕ ಮುಷ್ಕರಗಳು ರಾಜ್ಯದಲ್ಲಿ ನಡೆದವು. ಸತತವಾಗಿ ಏರಿದ ಸರಕುಗಳ ಬೆಲೆಗಳ ಬಿಸಿ ಕಾರ್ಮಿಕರಿಗೆ ತಟ್ಟಿ  ಹೆಚ್ಚಿನ ವೇತನದ ಬೇಡಿಕೆಗಾಗಿ ಸಹ ಚಳುವಳಿ ನಡೆಯಿತು. ಜೊತೆಗೆ, ಹೆಚ್ಚು ಹೆಚ್ಚು ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದವು ಮತ್ತು ಕರ್ನಾಟಕದ ಏಕೀಕರಣದಿಂದ, ರಾಜ್ಯಕ್ಕೆ ಸೇರಿದ ಕೈಗಾರಿಕೆಗಳ ಸಂಖ್ಯೆಯಲ್ಲಿ ಸಹ ಹೆಚ್ಚಳವಾಯಿತು. ಕೈಗಾರಿಕೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಮುಷ್ಕರಗಳ ಸಂಖ್ಯೆ ಸಹ ಹೆಚ್ಚಾಯಿತು. ಜೊತೆಗೆ, ಕಾರ್ಮಿಕರ ಬಗ್ಗೆ ಸರ್ಕಾರದ ಧೋರಣೆ ಸಹ ಬದಲಾಯಿತು. ೧೯೪೭ರಲ್ಲಿ ಅಸ್ತಿತ್ವಕ್ಕೆ ಬಂದ ‘ಇಂಡಸ್ಟ್ರಿಯಲ್ ಡಿಸ್‌ಪ್ಯೂಟ್ಸ್ ಆಕ್ಟ್’ ಕಾರ್ಮಿಕರ ಬಲವನ್ನು ಹೆಚ್ಚು ಮಾಡಿತು. ಅವರ ಬೇಡಿಕೆಯ ಶಕ್ತಿ ವೃದ್ಧಿಗೊಂಡು, ತಮ್ಮ ಹಕ್ಕೊತ್ತಾಯಕ್ಕಾಗಿ ಅವರು ಮುಷ್ಕರ ಮತ್ತು ಬೀಗಮುದ್ರೆಗಳನ್ನು ಸಹ ಅವಲಂಬಿಸಿದ್ದರು. ಹೀಗಾಗಿ ೧೯೪೦ರ ನಂತರ ರಾಜ್ಯದಲ್ಲಿ ಕಾರ್ಮಿಕ ಮುಷ್ಕರಗಳ ಸಂಖ್ಯೆ ಸತತವಾಗಿ ಹೆಚ್ಚಾಯಿತು. ೧೯೬೬-೯೪ರ ನಡುವಣ ಕಾರ್ಮಿಕ ಚಳುವಳಿ ಮತ್ತು ಬೀಗ ಮುದ್ರೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಪಟ್ಟಿ (೧)ರಲ್ಲಿ ಕೊಡಲಾಗಿದೆ.

ಪಟ್ಟಿ (೧) : ಕರ್ನಾಟಕದಲ್ಲಿ ಮುಷ್ಕರ ಮತ್ತು ಬೀಗಮುದ್ರೆಗಳು

ವರ್ಷ ಮುಷ್ಕರಗಳ ಸಂಖ್ಯೆ ಬೀಗಮುದ್ರೆಗಳು
೧೯೬೬ ೮೮
೧೯೬೭ ೭೦
೧೯೬೮ ೯೨
೧೯೬೯ ೧೨೭ ೧೭
೧೯೭೦ ೮೫
೧೯೭೧ ೭೨
೧೯೭೨ ೮೯ ೧೬
೧೯೭೩ ೭೩ ೧೪
೧೯೭೪ ೩೫
೧೯೭೪ ೩೫
೧೯೮೭ ೪೭ ೧೩
೧೯೮೮ ೫೨ ೧೩
೧೯೮೯ ೪೪
೧೯೯೦ ೩೧
೧೯೯೧ ೨೦
೧೯೯೨

(ಜನವರಿಯಿಂದ ನವೆಂಬರ್)

ಕರ್ನಾಟಕದಲ್ಲಿನ ಕೈಗಾರಿಕೆಗಳಲ್ಲಿನ ಮುಷ್ಕರಗಳು  ಮತ್ತು ಬೀಗಮುದ್ರೆಗಳು ಗಣನೀಯ ಪ್ರಮಾಣದ್ದೇನಲ್ಲ. ಇಷ್ಟೇ ಅಲ್ಲದೆ ಹೆಚ್ಚಿನ ಕಾರ್ಮಿಕ ವ್ಯಾಜ್ಯಗಳು ಇತ್ಯರ್ಥಗೊಂಡು, ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದ ಮುಷ್ಕರಗಳಿಗೆ ಈ ರಾಜ್ಯದಲ್ಲಿ ಎಡೆ ಮಾಡಿಕೊಡುತ್ತಿಲ್ಲದಿರುವುದ ಸಹ ಗಮನಿಸಬೇಕಾದ ಅಂಶ. ಕೈಗಾರಿಕಾವಾರು ಮುಷ್ಕರಗಳನ್ನು ಗಮನಿಸಿದರೆ ಸಹ ಗೋಚರವಾಗುತ್ತದೆ. ಹಾಗೆಯೇ ಹೆಚ್ಚಿನ ಮುಷ್ಕರಗಳು, ಕೂಲಿ ಮತ್ತು ಭತ್ಯೆ ಹೆಚ್ಚಳ ಮತ್ತು ಬೋನಸ್‌ಗಳಿಗಾಗಿ ನಡೆದಿವೆ. ಅತ್ಯಂತ ಹೆಚ್ಚಿನ ಮುಷ್ಕರಗಳು ಆರ್ಥಿಕ ಕಾರಣಗಳಿಗಾಗೇ ನಡೆದಿವೆ. ಹೆಚ್ಚಿನ ಕೈಗಾರಿಕಾ ವಿವಾದಗಳು, ಉದ್ಯಮಗಳು ಮಟ್ಟದಲ್ಲಿ ತೀರ್ಮಾನಗೊಳ್ಳುತ್ತಿರುವುದು ಸಹ ಗಮನಿಸಬೇಕಾದ ವಿಷಯ. ತುಂಬಾ ಕಡಿಮೆ ಪ್ರಮಾಣದ ವಿವಾದಗಳನ್ನು ಮಾತ್ರ ಸರ್ಕಾರದ ಮಧ್ಯಸ್ಥಿಕೆಗೆ (ಅಡ್ಜೂಡಿಕೇಷನ್‌)ಗಾಗಿ ಒಪ್ಪಿಸಲಾಗುತ್ತಿದೆ ಅಷ್ಟೇ. ಅನೇಕ ಮುಷ್ಕರಗಳನ್ನು ಇತ್ಯರ್ಥ ಪಡಿಸುವುದರಲ್ಲಿ ಕಾರ್ಮಿಕ ಸಂಘಗಳು ಸಹ ಪ್ರಮುಖ ಪಾತ್ರ ವಹಿಸಿವೆ.

ಕರ್ನಾಟಕ  ಮತ್ತು ಇತರ ರಾಜ್ಯಗಳು

ಬೀಗ ಮುದ್ರೆ, ಇದರಿಂದ ತೊಂದರೆಯಾಗಿರುವ ಕಾರ್ಮಿಕರು, ಬೀಗ ಮುದ್ರೆಯಿಂದ ಕಳೆದುಕೊಳ್ಳಲಾಗಿರುವ ಮಾನವ ದಿನಗಳಿಗೆ ಸಂಬಂಧಿಸಿದಂತೆ, ಇತರ ರಾಜ್ಯಗಳಿಗೆ ಹೋಲಿಸಿದಂತೆ ಕರ್ನಾಟಕದಲ್ಲಿ ಉತ್ತಮ ಪರಿಸ್ಥಿತಿ ಇದೆ. ಅದರಲ್ಲೂ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶಗಳಿಗೆ ಹೋಲಿಸಿದಂತೆ ಕರ್ನಾಟಕದ ಕೈಗಾರಿಕೆಗಳಿಗೆ ಹಾಕಲಾಗಿರುವ ಬೀಗ ಮುದ್ರೆ ಬಹಳ ಕಡಿಮೆ. ಉದಾಹರಣೆಗೆ ೧೯೯೧ರಲ್ಲಿ ಆಂಧ್ರದಲ್ಲಿ ೨೦೦, ಮಹಾರಾಷ್ಟ್ರದಲ್ಲಿ ೬೮, ಪಶ್ಚಿಮ ಬಂಗಾಳದಲ್ಲಿ ೧೦೮, ಕೇರಳದಲ್ಲಿ ೧೧ ಕೈಗಾರಿಕೆಗಳಿಗೆ ಬೀಗ ಮುದ್ರೆಗಳು ಪರಿಸ್ಥಿತಿ ಇದ್ದರೆ, ಕರ್ನಾಟಕದಲ್ಲಿ ಕೇವಲ ೨ ಕೈಗಾರಿಕೆಗೆ  ಮಾತ್ರ ಬೀಗಮುದ್ರೆ ಬಿದ್ದಿತು. ಹಾಗೆಯೇ ಆಂಧ್ರದಲ್ಲಿ ೩೪೦, ಗುಜರಾತಿನಲ್ಲಿ ೧೪೬, ಕೇರಳದಲ್ಲಿ ೩೯, ಮಹಾರಾಷ್ಟ್ರದಲ್ಲಿ ೧೦೫, ತಮಿಳುನಾಡಿನಲ್ಲಿ ೧೫೪ ಮುಷ್ಕರಗಳು ನಡೆದಿದ್ದರೆ, ೧೯೯೧ರಲ್ಲಿ ಕರ್ನಾಟಕದಲ್ಲಿ ಕೇವಲ ೨೦ ಮುಷ್ಕರಗಳು ನಡಿದಿದ್ದವು. ಆದ್ದರಿಂದ ಕೈಗಾರಿಕಾ ಶಾಂತಿಯ ದೃಷ್ಟಿಯಿಂದ ಕರ್ನಾಟಕ ಇತರ ರಾಜ್ಯಗಳಿಗೆ ಹೋಲಿಸಿದಂತೆ ತುಲನಾತ್ಮಕವಾಗಿ ಉತ್ತಮವಾದ ಪರಿಸ್ಥಿತಿಯಲ್ಲಿರುವುದು ನಿರ್ವಿವಾದ.

ಕೈಗಾರಿಕಾ ಗೈರುಹಾಜರಿ

ಮುಷ್ಕರ ಮತ್ತು ಬೀಗ ಮುದ್ರೆಗಳು ಕಾರ್ಮಿಕರು ನೇರವಾಗಿ ವ್ಯಕ್ತಪಡಿಸುವ ಪ್ರತಿಭಟನೆಗಳಾದರೆ ಕೆಲಸಕ್ಕೆ ಗೈರು ಹಾಜರಾಗುವುದು, ಕೆಲಸಕ್ಕೆ ಬಂದರೂ ಕೆಲಸ ಮಾಡದೆ ಇರುವುದು, ಅಶಿಸ್ತನ್ನು ತೋರಿಸುವುದು ಕಾರ್ಮಿಕರು ಪರೋಕ್ಷವಾಗಿ ವ್ಯಕ್ತಪಡಿಸುವ ಅಸಮಾಧಾನಗಳಾಗಿವೆ. ಕರ್ನಾಟಕದಲ್ಲಿ ಉದ್ಯಮಗಳಲ್ಲಿ ಕಾರ್ಮಿಕರ ಗೈರು ಹಾಜರಿ ಹೆಚ್ಚಿನ ಪ್ರಮಾಣದ್ದಾಗಿದೆ. ಅನಾರೋಗ್ಯ, ಅಪಘಾತ, ಸಾಮಾಜಿಕ ಹಾಗೂ ಧಾರ್ಮಿಕ ಹಾಗೂ ಇತರ ಕಾರಣಗಳಿಗಾಗಿ ಕಾರ್ಮಿಕರು ಗೈರುಹಾಜರಾಗುವುದು ವ್ಯಕ್ತವಾಗಿದೆ. ತಮ್ಮ  ಹಕ್ಕಿನಲ್ಲಿರುವ ರಜೆಗಳನ್ನು ಮುಗಿಸಿಕೊಂಡು, ವೇತನ ರಹಿತವಾದ ಗೈರು ಹಾಜರಾತಿಯ ಪ್ರಮಾಣ ಸಹ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪಟ್ಟಿ (೨)ರಲ್ಲಿ ೧೯೯೫ರ ಮಾರ್ಚಿಗೆ ಸಂಬಂಧಿಸಿದ ಕೆಲವು ಮುಖ್ಯ ಕೈಗಾರಿಕೆಗಳಲ್ಲಿನ ಗೈರು ಹಾಜರಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿದೆ. ಸುಮಾರು ಶೇ. ೧೩.೫ರಷ್ಟು ಗೈರು ಹಾಜರಿ ಅತಿ ಮುಖ್ಯ ಕೈಗಾರಿಕೆಗಳಲ್ಲಿರುವುದು ಈ ಪಟ್ಟಿಯಲ್ಲಿ ವ್ಯಕ್ತವಾಗುತ್ತದೆ.

ಪಟ್ಟಿ ೨ : ಕರ್ನಾಟಕದಲ್ಲಿ ಕಾರ್ಮಿಕ ಗೈರು ಹಾಜರಿ, ೧೯೯೨-೯೩ – ೧೯೯೩-೯೪

 

ಏಪ್ರಿಲ್‌ನಿಂದ ನವೆಂಬರ್‌ವರೆಗೆ
    ೧೯೯೨-೯೩ ೧೯೯೩-೯೪ ೧೯೯೩ ೧೯೯೪
೧. ಕೈಗಾರಿಕಾ ಕಾರ್ಮಿಕರು
ಅ. ಕೆಲಸ ಮಾಡಬೇಕಾಗಿರುವ ಮಾನವ ದಿನಗಳು (೦೦೦)ದಲ್ಲಿ ೧೦೩೫೯ ೯೭೦೦ ೬೪೮೩ ೩೪೯೦
ಆ. ಗೈರುಹಾಜರಾದ ಮಾನವ ದಿನಗಳು ೧೫೪೨ ೧೩೩೧ ೮೧೬ ೭೪೬
ಇ. ಗೈರು ಹಾಜರಿ (ಶೇಕಡಾಂಶದಲ್ಲಿ) ೧೪.೮ ೧೩.೭ ೧೨.೫ ೧೧.೫
೨. ಪ್ಲಾಂಟೇಷಶನ್‌ಗಳಲ್ಲಿ
ಅ. ಕೆಲಸ ಮಾಡಬೇಕಾಗಿರುವ ಮಾನವ ದಿನಗಳು (೦೦೦) ದಲ್ಲಿ ೮೦೫ ೧೦೦೦ ೫೬೮ ೬೨೦
ಆ. ಗೈರು ಹಾಜರಾದ ಮಾನವ ದಿನಗಳು ೧೫೩ ೧೬೬ ೯೭ ೧೩೫
ಇ. ಗೈರು ಹಾಜರಿ (ಶೇಕಡಾಂಶದಲ್ಲಿ) ೧೯.೦ ೧೬.೬ ೧೭.೧ ೨೧.೮

ಕೈಗಾರಿಕಾ ವಿವಾದಗಳ ಇತ್ಯರ್ಥ

ಕೈಗಾರಿಕಾ ಸಂಬಂಧ ಉತ್ತಮಗೊಳ್ಳಬೇಕಾದರೆ, ಕೈಗಾರಿಕಾ ವಿವಾದಗಳು ಕ್ಷಿಪ್ರವಾಗಿ ಮತ್ತು ಸಮಾಧಾನಕರವಾಗಿ ಇತ್ಯರ್ಥಗೊಳ್ಳಬೇಕಾದುದು ಅತ್ಯಗತ್ಯ. ಕರ್ನಾಟಕದಲ್ಲಿ ಅನೇಕ ಕಾರ್ಯತಂತ್ರಗಳ ಮೂಲಕ ಕೈಗಾರಿಕಾ ವಿವಾದವನ್ನು ಬಗೆಹರಿಸಿ, ಕೈಗಾರಿಕಾ ಬಾಂಧವ್ಯವನ್ನು ಉತ್ತಮವಾಗಿಸುವ ಪ್ರಯತ್ನಗಳು ಸರ್ಕಾರದ ವತಿಯಿಂದ ನಡೆದಿವೆ. ಪ್ರಸ್ತುತದ ಈ ಕಾರ್ಯ ತಂತ್ರಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು (ಅ) ನೇರ ಸಂಧಾನದ ಮೂಲಕ ವಿವಾದಗಳ ಇತ್ಯರ್ಥ (ಆ) ಮಧ್ಯಸ್ಥಿಕೆದಾರರ ಮೂಲಕ ವಿವಾದಗಳ ಇತ್ಯರ್ಥ. ಇವುಗಳ ಪ್ರಗತಿಯನ್ನು ಸ್ವಲ್ಪ ವಿವರವಾಗಿ ನೋಡೋಣ.

ನೇರ ಸಂಧಾನಕ್ರಮಗಳು, ಫಿರ್ಯಾದು ಪರಿಹಾರ (ಗ್ರೀವನ್ಸ್ ಪ್ರೊಸಿಜರ್) ವರ್ಕ್ಸ್ ಕಮಿಟಿ ಮತ್ತು ಸಾಮೂಹಿಕ ಚೌಕಾಶಿ (ಕಲೆಕ್ಟಿವ್ ಬಾರ್‌ಗೈನಿಂಗ್) ಗಳನ್ನು ಒಳಗೊಳ್ಳುತ್ತವೆ. ಇವುಗಳ ಮುಖ್ಯ ಶಿ‌ಕ್ಷಣ ಮೂರನೆಯ ಮಧ್ಯಸ್ಥಿಕೆದಾರರಿಲ್ಲದೆ, ಕೈಗಾರಿಕಾ ವಿವಾದಗಳನ್ನು ಪರಿಹರಿಸಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿನ ಹೆಚ್ಚಿನ ಪ್ರಮುಖ ಕೈಗಾರಿಕೆಗಳು ೧೯೫೮ರಲ್ಲಿ ಜಾರಿಗೆ ಬಂದ ಮಾದರಿ ಪಿರ್ಯಾದು ಪರಿಹಾರ ವಿಧಾನವನ್ನು (ಮಾಡೆಲ್ ಗ್ರೀವಿನ್ಸ್ ಪ್ರೋಸೀಜರ್) ಅನುಸರಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಈ ಕ್ರಮ ಅಷ್ಟೇನೂ ಯಶಸ್ಸನ್ನು ಸಾಧಿಸಿಲ್ಲ. ಇದಕ್ಕೆ ಕಾರಣ ಈ ಕ್ರಮ ಐಚ್ಚಿಕವಾಗಿದ್ದು ಕಾರ್ಮಿಕರು ಮತ್ತು ಮಾಲೀಕರ ನಡುವೆ ವಿವಾದಗಳಿಗೆ, ಒಮ್ಮತ ಏರ್ಪಡುವುದು ಕಷ್ಟವಾಗಿರುವುದೇ.

೧೯೪೮ರಷ್ಟು ಹಿಂದೆಯೇ, ಭದ್ರಾವತಿಯ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್‌‌ನಲ್ಲಿ, ವರ್ಕ್ಸ್ ಕಮಿಟಿಯನ್ನು ಸ್ಥಾಪಿಸಲಾಯಿತು. ಇದರ ನಂತರ ಅನೇಕ ಉದ್ಯಮಗಳು ವರ್ಕ್ಸ್‌ ಕಮಿಟಿಗಳನ್ನು ರಚಿಸಿಕೊಂಡಿವೆ. ಸುಮಾರು ೧೮೦ ವರ್ಕ್ಸ್ ಕಮಿಟಿಗಳು ಕೆಲಸ ಮಾಡುತ್ತಿದ್ದರೂ, ಕೈಗಾರಿಕಾ ಬಾಂಧವ್ಯವನ್ನು ಉತ್ತಮ ಪಡಿಸುವುದರಲ್ಲಿ ಅವು ಅಷ್ಟರ ಮಟ್ಟಿಗಿನ ಯಶಸ್ಸನ್ನು ಸಾಧಿಸಿಲ್ಲ. ವರ್ಕ್ಸ್ ಕಮಿಟಿಗಳಲ್ಲಿ ಅಂಗೀಕರಿಸಿದ ನಿಲುವಳಿಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ. ಈ ಕೈಗಾರಿಕಾ ಮಾಲೀಕರು, ಕಾರ್ಮಿಕ ನಾಯಕರನ್ನು, ವರ್ಕ್ಸ್ ಕಮಿಟಿಗಳಲ್ಲಿ ತಮ್ಮ ಸಮಾನವೆಂದು ಪರಿಗಣಿಸಲು ಹಿಂದೆಗೆಯುತ್ತಿರುವುದು ಇನ್ನೂ ಸಾಮಾನ್ಯವಾಗಿ ಉಳಿದುಕೊಂಡ ಬಂದಿದೆ. ಕಾರ್ಮಿಕ ಸಂಘಗಳು ವರ್ಕ್ಸ್ ಕಮಿಟಿಗಳನ್ನು ತಮ್ಮ ಶಸ್ತ್ರವೆಂದೇ ಭಾವಿಸುತ್ತವೆ. ಸರ್ಕಾರ ಸಹ ವರ್ಕ್ಸ್‌ ಕಮಿಟಿಗಳನ್ನು ಗಂಭೀರಕರವಾಗಿ ಪರಿಗಣಿಸುವಂತಿಲ್ಲ.

ಇನ್ನು “ಸಾಮೂಹಿಕ ಚೌಕಾಶಿ”ಯನ್ನು ಹೆಚ್ಚು ಕಡಿಮೆ ಶಾಂತಿ ಒಪ್ಪಂದವೆಂದೇ ಪರಿಗಣಿಸಲಾಗುತ್ತಿದೆ. ಇನ್ನೂ ಒಂದು ವಿಶೇಷವೆಂದರೆ, ಈ ಶಾಂತಿ ಒಪ್ಪಂದ ಕಾರ್ಮಿಕರು ಮತ್ತು ಮಾಲೀಕರುಗಳ ನಡುವೆ ಏರ್ಪಟ್ಟರೂ, ಈ ಒಪ್ಪಂದವನ್ನು ರಾಜ್ಯಮಟ್ಟದ, “ಸ್ಟೇಟ್ ಕನ್ಸೀಲಿಯೇಷನ್” ಅಧಿಕಾರಿಯೊಡನೆ ನೊಂದಾಯಿಸುವುದರಿಂದ ಅವು ತ್ರಿಪಕ್ಷೀಯ ಒಪ್ಪಂದದ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಕರ್ನಾಟಕದಲ್ಲಿ ಮೊದನೆಯ ಒಪ್ಪಂದ ೧೯೫೨ರಲ್ಲಿ “ಇಂಪೀರಿಯಲ್ ಟೊಬ್ಯಾಕೋ ಕಂಪನಿ”ಯಲ್ಲಿ ಜಾರಿಗೆ ಬಂದಿತು. ಇದರ ನಂತರ ಭದ್ರಾವತಿ ಕಬ್ಬಿಣದ ಕೈಗಾರಿಕೆಗಳಲ್ಲಿ ಕೈಗಾರಿಕಾ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಅನೇಕ ಉದ್ಯಮಗಳಲ್ಲಿ ಇಂತಹ ಒಪ್ಪಂದಗಳು ಏರ್ಪಟ್ಟಿವೆ. ಸಾಮಾನ್ಯವಾಗಿ ಒಂದು ಅವಧಿಗೆ  ಜಾರಿಗೆ ಬರುವಂತೆ ಈ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳಲಾದರೂ, ಒಪ್ಪಂದದ ಚೌಕಟ್ಟಿನೊಳಕ್ಕೆ ಬರದಿರುವ ವಿಷಯಗಳ ಬಗ್ಗೆ ವಿವಾದಗಳು ಏರ್ಪಡುವುದು ಮತ್ತು ಒಪ್ಪಂದವಾಗಿರುವ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುವ ಕಾರಣಗಳಿಗಾಗಿ ವಿವಾದಗಳು ಬಗೆಹರಿಯದೆ ಇರುವ ಸಂದರ್ಭಗಳೂ ಏರ್ಪಟ್ಟಿವೆ.

ಮೇಲೆ ವಿವರಿಸಿರುವ ಕ್ರಮಗಳು ಸ್ವಯಂ ಶಿಸ್ತಿನಿಂದ ಏರ್ಪಡುವಂತವು. ಆದರೆ ಇಂತಹ ಕ್ರಮಗಳು ಕೈಗಾರಿಕಾ ಶಾಂತಿಯನ್ನು ಏರ್ಪಡಿಸುವುದರಲ್ಲಿ ಬಹಳ ಮಿತವಾದ ಯಶಸ್ಸನ್ನು ಸಾಧಿಸಿವೆ. ಹೀಗಾಗಿ ಮಧ್ಯಸ್ಥಿಕೆದಾರರನ್ನು ಒಳಗೊಳ್ಳುವಂತಹ ವಿವಾದ ಪರಿಹಾರ ಕ್ರಮಗಳು ಸಹ ಅಭಿವೃದ್ಧಿಗೊಂಡಿವೆ. ಇವುಗಳೆಂದರೆ, “ಕನ್ಸೀಲಿಯೇಷನ್”, “ಮೀಡಿಯೇಷನ್”, “ಅರ್ಬಿಟ್ರೇಷನ್” ಅಥವಾ “ಅಡ್ಜೂಡಿಕೇಷನ್”.

೧೯೫೭ ಮತ್ತು ೧೯೪೭ರ ಅವಧಿಯಲ್ಲಿ ‘ಕನ್ಸೀಲಿಯೇಷನ್‌’ಗೋಸ್ಕರ ಒಪ್ಪಿಸಲಾದ ವಿವಾದಗಳು ವಾರ್ಷಿಕ ಸರಾಸರಿ ೯೨೯ ಆಗಿದ್ದು, ಇದು ನಂತರ ಬಹಳವಾಗಿ ಬೆಳೆದು ಬಂದಿದೆ. ೧೯೪೪ರಲ್ಲಿ ಸುಮಾರು ೧೮೩೭ ವಿವಾದಗಳನ್ನು ‘ಕನ್ಸೀಲಿಯೇಷನ್‌’ಗೋಸ್ಕರ ಒಪ್ಪಿಸಲಾಗಿದೆ. ಇವುಗಳಲ್ಲಿ ಕನ್ಸೀಲಿಯೇಷನ್ ಅಧಿಕಾರಿಯ ಮುಖಾಂತರ ಕೇವಲ ೩೬೫ ವ್ಯಾಜ್ಯಗಳನ್ನು ಪರಿಹರಿಸಲಾಗಿದೆ. ಸುಮಾರು ೧೧೧ ವ್ಯಾಜ್ಯಗಳನ್ನು ಹಿಂದೆಗೆದುಕೊಳ್ಳುಲಾಗಿದ್ದರೂ, ಇನ್ನೂ ಇತ್ಯರ್ಥವಾಗದೇ ಉಳಿದುಕೊಂಡ ವ್ಯಾಜ್ಯಗಳು ೭೭೬. ಹಾಗೆಯೇ ರಾಜ್ಯದಲ್ಲಿರುವ ೪ ಟ್ರೆಬ್ಯೂನಲ್‌ಗಳು ಮತ್ತು  ೧೦ ಕಾರ್ಮಿಕ ನ್ಯಾಯಾಲಗಳು ಸಹ ಕಾರ್ಮಿಕ ವಿವಾದಗಳನ್ನು ಬಗೆಹರಿಸಲು  ಯತ್ನಿಸುತ್ತಿವೆ. ಆದರೆ “ಅಡ್ಜೂಡಿಕೇಷನ್”ಗೋಸ್ಕರ ಬರುತ್ತಿರುವ ವಿವಾದಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದು ಗೋಚರವಾಗುತ್ತದೆ. ಉದಾಹರಣೆಗೆ ೧೯೯೦ ರಲ್ಲಿ ಅಡ್ಜೂಡಿಕೇಷನ್‌ಗೆ ಬಂದ ವಿವಾದಗಳ ಸಂಖ್ಯೆ ೧೩, ೮೧೬ ಆಗಿದ್ದರೆ, ೧೯೯೪ರಲ್ಲಿ ಇದು ೧೬, ೨೪೭ಕ್ಕೆ ಹೆಚ್ಚಿದೆ. ಹಾಗೆಯೇ ಇತ್ಯರ್ಥವಾಗದೇ ಉಳಿದಿರುವ ವಿವಾದಗಳ ಸಂಖ್ಯೆ ಇದೇ ವರ್ಷಗಳಲ್ಲಿ ೧೧,೧೭೦ ರಿಂದ ೧೪, ೨೫೧ಕ್ಕೆ ಹೆಚ್ಚಾಗಿದೆ. ಅಂದರೆ ಇತ್ಯರ್ಥವಾಗದೇ ಉಳಿದು ಬರುತ್ತಿರುವ ವಿವಾದಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಬಂದಿದೆ. ‘ಕನ್ಸೀಲಿಯೇಷನ್’ ಅಧಿಕಾರಿಗಳು ಇತ್ಯರ್ಥವಾಗದೇ ಇರುವ ವಿವಾದದ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಅತ್ಯಂತ ವಿಳಂಬ ಮಾಡುವುದು, ತಾವು ನಿರ್ವಹಿಸಬಹುದಾದುಕ್ಕಿಂತಲೂ ಹೆಚ್ಚಿನ ವಿವಾದಗಳನ್ನು ಕೈಗಾರಿಕಾ ಟ್ರೆಬ್ಯೂನಲ್‌ಗಳು ಮತ್ತು  ಕಾರ್ಮಿಕ ನ್ಯಾಯಾಲಯಗಳು ಪಡೆಯುತ್ತಿರುವುದು, ಇತ್ಯರ್ಥ ಮಾಡುವುದಕ್ಕೆ ಅತ್ಯಂತ ಕಠಿಣವಾದ ವಿವಾದಗಳು ನ್ಯಾಯಾಲಯಕ್ಕೆ ಬರುವುದು ಮುಂತಾದ ಕಾರಣಗಳಿಂದಾಗಿ, ರಾಜ್ಯದಲ್ಲಿ ‘ಅಡ್ಜೂಡಿಕೇಷನ್’ ಯಂತ್ರ ಹೆಚ್ಚು ಯಶಸ್ಸನ್ನು ಸಾದಿಸಿಲ್ಲ. ಒಟ್ಟಿನಲ್ಲಿ ಕರ್ನಾಟಕದ ಕೈಗಾರಿಕಾ ಸಂಬಂಧವನ್ನು ಪರಿಗಣಿಸಿದಾಗ ಕೆಲವು ಮುಖ್ಯ ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳನ್ನು ಕೆಳಗಿನಂತೆ ಸಾರಾಂಶಿಸಬಹುದು.

ಭಾರತದ ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆಯೇ, ಕರ್ನಾಟಕದಲ್ಲಿ ಸಹ ಕೈಗಾರಿಕಾ ಸಂಬಂಧವನ್ನು ಉತ್ತಮವಾಗಿಸುವ  ಪ್ರಯತ್ನಗಳು ನಡಿದಿವೆ. ಈ ರಾಜ್ಯಗಳಲ್ಲಿ ಸಹ ಕಾರ್ಮಿಕ ಸಂಘಗಳು, ಕಾರ್ಮಿಕ ಮಾಲೀಕರ ಸಂಘಗಳು  ಮತ್ತು ರಾಜ್ಯ ಸರ್ಕಾರ ಕೈಗಾರಿಕಾ ಬಾಂಧವ್ಯವನ್ನು ಕಾಪಾಡುವುದರಲ್ಲಿ ಭಾಗಿಯಾಗಿದೆ. ಆದರೆ ಕರ್ನಾಟಕದಲ್ಲಿ ಸಹ, ಅನೇಕ ಕಾರ್ಮಿಕ ಸಂಘಗಳಿದ್ದರೂ, ಅವುಗಳಲ್ಲಿ ಬಾಹ್ಯ ನಾಯಕತ್ವವಿದೆ. ಕಾರ್ಮಿಕ ಸಂಘಗಳು ತುಂಬಾ ದುರ್ಬಲವಾಗಿವೆ. ಇವು ಕೂಲಿ ಹೆಚ್ಚಳ, ಬೋನಸ್‌ ಮುಂತಾದ ಆರ್ಥಿಕ ಕಾರಣಗಳಿಗಾಗಿ ಶ್ರಮಿಸುತ್ತಿವೆಯೇ ಹೊರತು ಕಾರ್ಮಿಕರ ಕಲ್ಯಾಣಕ್ಕೆ ಆದ್ಯತೆಯನ್ನು ನೀಡುತ್ತಿಲ್ಲ. ಕೈಗಾರಿಕಾ ಮಾಲೀಕರ ಸಂಘಗಳು ಇದ್ದರೂ ಇವು ಕಾರ್ಮಿಕರ ಕಲ್ಯಾಣಕ್ಕೆ ಆಧ್ಯತೆಯನ್ನು ನೀಡದೆ, ತಮ್ಮದೇ ಆರ್ಥಿಕ ಆಧ್ಯತೆಗಳನ್ನು ಇಟ್ಟುಕೊಂಡಿವೆ. ಹೀಗಾಗಿ ಅವು ಈ ದಿಶೆಯಲ್ಲಿ ಅಷ್ಟು ಯಶಸ್ವಿಯುತವಾಗಿಲ್ಲ.

ಸರ್ಕಾರ ಕಾರ್ಮಿಕ ಬಾಂಧವ್ಯ ಕ್ಷೇತ್ರವನ್ನು ಸಹ ವ್ಯಾಪಕವಾಗಿ ಪ್ರವೇಶಿಸಿದೆ. ಕಾರ್ಮಿಕರ ಹಿತರಕ್ಷಣೆಗೆ ಸಂಬಂಧಿಸಿದ ವ್ಯಾಪಕ ಕಾನೂನುಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ವಾದಗಳ ಪರಿಹಾರಕ್ಕಾಗಿ, ಅತ್ಯಂತ ವ್ಯಾಪಕವಾದ ಯಂತ್ರವನ್ನು ರೂಪಿಸಿದೆ. ಕಾರ್ಮಿಕ ಕಾನೂನುಗಳು ಜಾರಿಗೆ ಬಂದಿವೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು, ನಿರೀಕ್ಷಕ ಅಧಿಕಾರಿಗಳ ಜಾಲವನ್ನು ಸೃಷ್ಟಿಸಿದೆ. ಆದರೆ, ಸರ್ಕಾರದ ಯಂತ್ರ ಸಹ ಉತ್ತಮ ಕೈಗಾರಿಕಾ ಬಾಂಧವ್ಯವನ್ನು ಏರ್ಪಡಿಸುವುದರಲ್ಲಿ ಯಶಸ್ಸನ್ನು ಸಾಧಿಸಿಲ್ಲ. ಕೈಗಾರಿಕಾ ವಿವಾದಗಳ ಸಂಖ್ಯೆ ಬೆಳೆಯುತ್ತಿದೆ. ಇತ್ಯರ್ಥವಾಗದೇ ಉಳಿಯುತ್ತಿರುವ ವಿವಾದಗಳ ಸಂಖ್ಯೆ ಸಹ ರಾಜ್ಯದಲ್ಲಿ ಬೆಳೆಯುತ್ತಿದೆ.  ಕಾರ್ಮಿಕರಿಗೆ  ಕೈಗಾರಿಕಾ ಆಡಳಿತದಲ್ಲಿ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂಬ ವಿಚಾರ ಬಹಳ ಕಾಲದಿಂದ ಚರ್ಚಿಸಲ್ಪಡುತ್ತಿದ್ದರೂ, ಅತ್ಯುನ್ನತ ನಿರ್ಣಯಗಳನ್ನು ತೆಗೆದುಕೊಳ್ಳುವ ನಿರ್ಣಾಯಕ ಮಂಡಳಿಗಳಲ್ಲಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ಪ್ರಯತ್ನ ಯಾವ ಯಾಶಸ್ಸನ್ನೂ ಸಾಧಿಸಿಲ್ಲ.

ಹೊಸ ಆರ್ಥಿಕ ನೀತಿ ಮತ್ತು ಕೈಗಾರಿಕಾ ಸಂಬಂಧಗಳು

ಇಂದು ರಾಷ್ಟ್ರದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರುವ ಪ್ರಯತ್ನದಲ್ಲಿರುವುದು ಎಲ್ಲರಿಗೂ ತಿಳಿದ ವಿಷಯ. ಕೈಗಾರಿಕಾ ಕ್ಷೇತ್ರದಲ್ಲಿ ಸಹ ಹೊಸ ಆರ್ಥಿಕ ನೀತಿಗಳನ್ನು ಜಾರಿಗೆ ತರುವ ಪ್ರಯತ್ನ ಎಲ್ಲಾ ರಾಜ್ಯಗಳಲ್ಲೂ ನಡೆದಿದೆ. ಖಾಸಗೀಕರಣ ಮತ್ತು ಜಾಗತೀಕರಣ ನಡೆದಾಗ ಕೈಗಾರಿಕೆಗಳು ಹೊಸ ನೀತಿಗಳನ್ನು ಅನಿವಾರ್ಯವಾಗಿ ಅನುಸರಿಸಬೇಕಾಗುತ್ತದೆ. ಇದುವರೆಗೆ ಸರ್ಕಾರ ವ್ಯವಸ್ಥಿತ ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ನಡೆದಿಲ್ಲ ಮತ್ತು ಉದ್ಯೋಗ ಸೃಷ್ಟಿಯಾಗಿಲ್ಲವೆಂಬ ವಾದವಿದೆ. ಆದ್ದರಿಂದ, ಹೊಸ ಕೈಗಾರಿಕಾ ಬಾಂಧವ್ಯ ಮಸೂದೆ (ಇಂಡಸ್ಟ್ರೀಯಲ್ ರಿಲೇಷನ್ಸ್ ಬಿಲ್) ಅನ್ನು ಜಾರಿಗೆ ತರುವ ಯತ್ನಗಳು ನಡೆದಿವೆ. ಈ ಮಸೂದೆಯ ಪ್ರಕಾರ, (ಅ)  ಮುಷ್ಕರ ಮತ್ತು ಬೀಗಮುದ್ರೆಗಳಿಗೆ ಕನಿಷ್ಠ ಅವಧಿಯ ಮುನ್ಸೂಚನೆಯನ್ನು ನೀಡಬೇಕು, (ಆ) ಧರ್ಮ, ಜಾತಿ, ಪಂಥಗಳ ಆಧಾರದ ಮೇಲೆ ಕಾರ್ಮಿಕ ಸಂಘಗಳನ್ನು ರಚಿಸಕೂಡದು, (ಇ) ಕೆಲಸದಿಂದ ತೆಗೆದುಹಾಕಿದಾಗ  ಹೆಚ್ಚಿನ ಆರ್ಥಿಕ ಸೌಲತ್ತುಗಳನ್ನು ದೊರಕಿಸಿಕೊಡಬೇಕು, (ಈ) ಕಾರ್ಮಿಕರು ಮತ್ತು ಮಾಲೀಕರ ಪ್ರತಿನಿಧಿಗಳನ್ನೊಳಗೊಂಡ ಕೈಗಾರಿಕಾ ಸಂಬಂಧ ಕಮೀಷನ್ ಒಂದನ್ನು ರಚಿಸಬೇಕು, (ಉ) ಈ ಕಮಿಷನ್ ಕನ್ಸೀಲಿಯೇಷನ್, ಅಡ್ಜೂಡಿಕೇಷನ್ ಮತ್ತು ಕಾರ್ಮಿಕ ಸಂಘಗಳ ಸದಸ್ಯರ ಸಂಖ್ಯೆಯ ತಪಾಸಣಾ ಕಾರ್ಯಗಳನ್ನು ನಿರ್ವಹಿಸಬೇಕು.

ಈ ಮಸೂದೆ ಜಾರಿಗೆ ಬಂದರೆ ಕೈಗಾರಿಕಾ ಬಾಂಧವ್ಯ ಸುಧಾರಿಸುತ್ತದೆಂದು ಖಚಿತವಾಗಿ ಹೇಳುವಂತಿಲ್ಲ. ಇದಕ್ಕೆ ಕಾರ್ಮಿಕ ನಾಯಕರ ವಿರೋಧವಿದೆ. ಆದರೆ ಹೊಸ ಆರ್ಥಿಕ ನೀತಿಯೊಂದಿಗೆ, ಕೈಗಾರಿಕಾ ಬಾಂಧವ್ಯದಲ್ಲಿ ಅನೇಕ ಬದಲಾವಣೆಗಳು ಬರುವುದು ಖಚಿತ. ಸಾರ್ವಜನಿಕ ಉದ್ಯಮಗಳಲ್ಲಿ ಈ ಹಿಂದೆ ಇದ್ದಷ್ಟು ರಕ್ಷಣೆ ಕಾರ್ಮಿಕರಿಗೆ ದೊರೆಯುವುದು ಸಾಧ್ಯವಿಲ್ಲ. ಹೊಸ ನೀತಿಯಿಂದ ನಿರುದ್ಯೋಗವು ಭಯವೂ ಇದೆ. ಆದರೆ ಹೊಸ ಆರ್ಥಿಕ ನೀತಿಯಿಂದ ಕೈಗಾರಿಕಾ ಬಾಂಧವ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎನ್ನುವುದರ ಬಗ್ಗೆ ಇನ್ನೂ ಯಾವ ಒಲವೂ ದೊರೆತಿಲ್ಲ. ಅದನ್ನು ವಿಮರ್ಶಿಸಲು  ಇನ್ನೂ ಸಮಯಬೇಕು.