ಪೀಠಿಕೆ

ಖಾಸಗೀಕರಣದ ಹೊಸ ಅಲೆ ಎದ್ದಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕ ಉದ್ಯಮಗಳ ಕಾರ್ಯನಿರ್ವಹಣೆಯನ್ನು ಕುರಿತು ವಿಪುಲವಾದ ಚರ್ಚೆ ನಡೆಯುತ್ತಿದೆ. ಬಹುತೇಕ ಸಾರ್ವಜನಿಕ ಉದ್ಯಮಗಳು ನಷ್ಟ ಅನುಭವಿಸುತ್ತಿರುವುದರಿಂದ ಸರ್ಕಾರದ ಹಣಕಾಸು ಪರಿಸ್ಥಿತಿ ಹದಗೆಡುತ್ತಿದೆ. ಸರ್ಕಾರಕ್ಕೆ ಭಾರಿ ಹೊರೆಯಾಗಿರುವ ಸಾರ್ವಜನಿಕ ಉದ್ಯಮಗಳು ಕೋಶೀಯ ಕೊರತೆ ಹೆಚ್ಚಿರುವುದಕ್ಕೆ ಕಾರಣವಾಗಿವೆ. ದೊಡ್ಡ ಪ್ರಮಾಣದಲ್ಲಿ ಸರ್ಕಾರ ಇವುಗಳಲ್ಲಿ ಬಂಡವಾಳ ಹೂಡಿ ನಿರೀಕ್ಷಿತ ಲಾಭ ಪಡೆಯದಿದ್ದರೆ ಹಣಕಾಸು ಪರಿಸ್ಥಿತಿ ಹದಗೆಡುವುದು ಸಹಜ. ಕೋಶೀಯ ಕೊರತೆಯನ್ನು ಗಣನೀಯವಾಗಿ ಕಡಿಮೆಮಾಡುವುದರ ಅಗತ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ ಸಾರ್ವತ್ರಿಕ ವಲಯದ ಪಾತ್ರವನ್ನೇ ಕಡಿಮೆಯಾಗಬೇಕೆಂಬ ವಾದಕ್ಕೆ ಪುಷ್ಟಿ ದೊರೆಯುತ್ತಿದೆ. ಸಾರ್ವಜನಿಕ ಉದ್ಯಮಗಳು ಸರ್ಕಾರಕ್ಕೆ ಆಸ್ತಿಯಾಗುವ ಬದಲು ಹೊರೆಯಾಗಿವೆ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ (ಜಲನ್, ೧೯೯೨). ಅವುಗಳ ಪುನರ್ರ‍ಚನೆ ತ್ವರಿತವಾಗಿ ಆಗಬೇಕೆಂಬುದನ್ನು ಹೊಸ ಆರ್ಥಿಕ ನೀತಿಯ ಕಾರ್ಯಕ್ರಮಗಳ ಒಂದು ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ರಾಜ್ಯಮಟ್ಟದ ಆರ್ಥಿಕ ಸುಧಾರಣಾ ಕ್ರಮಗಳ ಪೈಕಿ ಇದಕ್ಕೆ ಪ್ರಮುಖ ಸ್ಥಾನ ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಾರ್ವಜನಿಕ ಉದ್ಯಮಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯನ್ನು ಸಮೀಕ್ಷಿಸುವುದು ಅಗತ್ಯವಾಗಿದೆ.

ಕರ್ನಾಟಕದ ಸಾರ್ವಜನಿಕ ಉದ್ಯಮಗಳ ಬೆಳವಣಿಗೆ

ಸಾರ್ವಜನಿಕ ಉದ್ಯಮಗಳ ವಿಷಯದಲ್ಲಿ ಕರ್ನಾಟಕ ಒಂದು ಮಾರ್ಗದರ್ಶಕ ಪಾತ್ರ ವಹಿಸಿತ್ತೆಂಬುದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಸ್ವತಂತ್ರಪೂರ್ವ ಕಾಲದಲ್ಲೇ ಮೈಸೂರಿನ ಅರಸರು ಕೈಗಾರೀಕರಣದ ಅಗತ್ಯವನ್ನು ಮನಗಂಡು ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸುವುದರ ಮೂಲಕ ಆ ಉದ್ದೇಶವನ್ನು ಸಫಲಗೊಳಿಸಲು ಯತ್ನಿಸಿದರು. ಸರ್ಕಾರವೇ ಕೆಲವು ಕ್ಷೇತ್ರಗಳಲ್ಲಿ ಉದ್ಯಮ ಶೀಲತೆಯನ್ನು ಬೆಳೆಸುವುದರ ಅಗತ್ಯವನ್ನು ಮನಗಂಡಿತ್ತು. ಆರ್ಥಿಕ ಪ್ರಾಮುಖ್ಯದ ದೃಷ್ಟಿಯಿಂದ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಯನ್ನು ಸಾರ್ವಜನಿಕ ವಲಯದಲ್ಲಿ ಕೈಗೊಳ್ಳಲಾಯಿತು. ಕೆಲವು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುವುದಿಲ್ಲವೋ ಅಂತಹ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರವೇ ಮುಂದೆ ಬರಬೇಕಾಯಿತು. ಸಾಬೂನು ಮತ್ತು ಪಿಂಗಾಣಿ ವಸ್ತುಗಳ ತಯಾರಿಕೆಯನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಸರ್ಕಾರಕ್ಕೆ ಆದಾಯ ಪಡೆಯುವ ಉದ್ದೇಶದಿಂದಲೇ ಸ್ಥಾಪಿತವಾದ ಸಾರ್ವಜನಿಕ ಉದ್ಯಮವೆಂದರೆ ಯಥೇಚ್ಛವಾಗಿ ದೊರಕುತ್ತಿದ್ದ ಗಂಧದಮರದಿಂದ ಎಣ್ಣೆ ತಯಾರಿಸುವ ಸಲುವಾಗಿ ಸ್ಥಾಪಿಸಲ್ಪಟ್ಟ ಸರ್ಕಾರಿ ಗಂಧದಎಣ್ಣೆ ಕಾರ್ಖಾನೆ. (ಬಾಲಕೃಷ್ಣ ಆರ್, ೧೯೪೦; ಹೆಟ್ನೆ, ಬಿ.೧೯೭೮). ಗಂಧದ ಎಣ್ಣೆ ಕಾರ್ಖಾನೆಗಳು ಮೈಸೂರಿನಲ್ಲಿ ೧೯೧೬ರಲ್ಲಿಯೂ, ಬೆಂಗಳೂರಿನಲ್ಲಿ ೧೯೧೭ರಲ್ಲಿಯೂ ಮತ್ತು ಶಿವಮೊಗ್ಗೆಯಲ್ಲಿ ೧೯೪೪ರಲ್ಲಿಯೂ ಸ್ಥಾಪಿತವಾದವು. ಸರ್ಕಾರಿ ಸಾಬೂನು ಕಾರ್ಖಾನೆ ೧೯೧೯ರಲ್ಲೂ, ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ಭದ್ರಾವತಿ) ೧೯೨೩ರಲ್ಲೂ, ಸರ್ಕಾರಿ ಪಿಂಗಾಣಿ ಕಾರ್ಖಾನೆ ೧೯೩೨ರಲ್ಲೂ ಮತ್ತು ಸರ್ಕಾರಿ ವಿದ್ಯುತ್ ಕಾರ್ಖಾನೆ ೧೯೩೫ರಲ್ಲೂ ಪ್ರಾರಂಭಗೊಂಡವು. ಇವಷ್ಟೇ ಅಲ್ಲದೆ ಅರೆ ಸರ್ಕಾರಿ ಉದ್ಯಮಗಳಾಗಿ ಮೈಸೂರು ಕಾರ್ಖಾನೆ ೧೯೨೩ರಲ್ಲೂ ಮತ್ತು ಮೈಸೂರು ಸಕ್ಕರೆ ಕಂಪೆನಿ ೧೯೩೯ರಲ್ಲೂ ಸ್ಥಾಪಿತವಾದುವು. ಖಾಸಗಿ ಸಂಸ್ಥೆಗಳೊಡನೆ ಭಾಗಶಃ ಒಡೆತನದ ವ್ಯವಸ್ಥೆ ಮಾಡಿದ್ದುದು ಖಾಸಗಿ ಸಂಸ್ಥೆಗಳ ಬೆಳವಣಿಗೆಗೆ ಸರ್ಕಾರ ಒತ್ತಾಸೆ ನೀಡಿರುವ ದೃಷ್ಟಿಯಿಂದಲೇ ಹೊರತು ಲಾಭ ಸಂಪಾದಿಸುವ ದೃಷ್ಟಿಯಿಂದಲ್ಲ. ಒಟ್ಟಿನಲ್ಲಿ ಸ್ವಾತಂತ್ಯ್ರಪೂರ್ವ ಕಾಲದಲ್ಲಿ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಿಂದ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಲಾಯಿತು.

ಸ್ವಾತಂತ್ಯ್ರನಂತರದಲ್ಲಿ ಕಾಲದಲ್ಲಿ ಜಾರಿಗೆ ತಂದ ಕೈಗಾರಿಕಾ ನೀತಿಯಲ್ಲಿ ಸಾರ್ವಜನಿಕ ವಲಯಕ್ಕೆ ಹೆಚ್ಚಿನ ಸ್ಥಾನ ಕೊಡುವ ಅವಶ್ಯಕತೆಯನ್ನು ಒತ್ತಿ ಹೇಳಲಾಯಿತು. ಸಮತಾವಾದಿ ಸಮಾಜ ಸೃಷ್ಟಿಯ ಉದ್ದೇಶವನ್ನು ಈಡೇರಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ವಲಯದ ಬೆಳವಣಿಗೆಯನ್ನು ಪ್ರೋತ್ಸಾಹಿಸಲಾಯಿತು. ಅಂದರೆ ಸ್ವಾತಂತ್ಯ್ರಾನಂತರದ ಕಾಲದಲ್ಲಿ ಕೇವಲ ವ್ಯಾವಹಾರಿಕ ಪ್ರಯೋಜನದ ದೃಷ್ಟಿಯಷ್ಟೇ ಅಲ್ಲದೆ ಭಾವನಾವಾದವೂ ಸಾರ್ವಜನಿಕ ವಲಯದ ಬೆಳವಣಿಗೆಗೆ ಕಾರಣವಾಯಿತು. ಸ್ವಾತಂತ್ಯ್ರ ದೊರಕಿದ ಸ್ವಲ್ಪ ಕಾಲದಲ್ಲೇ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಉದ್ಯಮಗಳೆಂದರೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (೧೯೪೮) ಮತ್ತು ರೇಡಿಯೋ ಮತ್ತು ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (೧೯೪೯).

ತಯಾರಿಕಾ ಉದ್ಯಮಗಳಷ್ಟೇ ಅಲ್ಲದೆ ವಿವಿಧ ರೀತಿಯ ಇತರ ಉದ್ಯಮಗಳು ಅಸ್ತಿತ್ವಕ್ಕೆ ಬಂದದ್ದು ಸ್ವಾತಂತ್ಯ್ರಾನಂತರದ ಕಾಲದ ಸಾರ್ವಜನಿಕ ಉದ್ಯಮಗಳ ಬೆಳವಣಿಗೆಯಲ್ಲಿ ಕಂಡುಬರುವ ಒಂದು ಗಮನಾರ್ಹ ಅಂಶ. ಇವುಗಳನ್ನು ಕೆಳಕಂಡ ಏಳು ವರ್ಗಗಳಾಗಿ ವಿಂಗಡಿಸಲಾಗಿದೆ:

೧. ಸಾರ್ವಜನಿಕ ಉಪಯುಕ್ತತೆಯ ಉದ್ಯಮಗಳು

೨. ಹಣಕಾಸು ಸಂಸ್ಥೆಗಳು

೩. ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯೇತರ)

೪. ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯ)

೫. ಸೇವಾ ಉದ್ಯಮಗಳು

೬. ತಯಾರಿಕಾ ಉದ್ಯಮಗಳು

೭. ಮಾರುಕಟ್ಟೆ ಮತ್ತು ಜಾಹಿರಾತು ಉದ್ಯಮಗಳು

ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ನೆರವು ನೀಡುವ ದೃಷ್ಟಿಯಿಂದ ವಿವಿಧ ಬಗೆಯ ಸಾರ್ವಜನಿಕ ಉದ್ಯಮಗಳ ಸ್ಥಾಪನೆಯನ್ನು ಸಮರ್ಥಿಸಲಾಗಿದೆ. ಖಾಸಗಿ ವಲಯದ ಅಭಿವೃದ್ಧಿಗೆ ಹಣಕಾಸು ಒದಗಿಸುವ, ಹಿಂದುಳಿದ ಪ್ರದೇಶಗಳ ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗೆ ನೆರವು ನೀಡುವ, ಖಾಸಗಿ ವಲಯದಲ್ಲಿ ಉತ್ಪಾದನೆಯಾದ ವಸ್ತುಗಳ ಮಾರಾಟಕ್ಕೆ ನೆರವು ನೀಡುವ, ಸಾರ್ವಜನಿಕ ಉಪಯುಕ್ತತೆಯ ಸೌಲಭ್ಯ ಒದಗಿಸುವ ಮತ್ತಿತರೆ ಚಟುವಟಿಕೆಗಳಲ್ಲಿ ಇವು ತೊಡಗಿವೆ. ಹೀಗಾಗಿ ಸಾರ್ವಜನಿಕ ಉದ್ಯಮಗಳು ಹಲವು ಕ್ಷೇತ್ರಗಳನ್ನು ಪ್ರವೇಶಿಸಿವೆ. ಇವೆಲ್ಲವೂ ಸಾರ್ವಜನಿಕ ಉದ್ಯಮಗಳ ಮೂಲ ಉದ್ದೇಶಕ್ಕೆ ಅನುಗುಣವಾಗಿವೆಯೇ ಎಂಬ ಸಂದೇಹಕ್ಕೆ ದಾರಿಯಾಗಿದೆ. ೧೯೪೪ರ ಮಾರ್ಚ್ ಅಂತ್ಯದ ವೇಳೆಗೆ ಇವುಗಳ ಸಂಖ್ಯೆ ೭೦ಕ್ಕೆ ಏರಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಉದ್ಯಮಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಒಂದಾಗಿದೆ. ಸಾರ್ವಜನಿಕ ಉದ್ಯಮಗಳ ಈ ರೀತಿಯ ಸಂಖ್ಯಾಭಿವೃದ್ಧಿ, ರಾಜಕಾರಣಿಗಳಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸ್ಥಾನಗಳನ್ನು ಕಲ್ಪಿಸುವುದಕ್ಕಾಗಿ ಆಗುತ್ತಿದೆ ಎಂಬ ಟೀಕೆಗೆ ಕಾರಣವಾಗಿದೆ.

ಸಾರ್ವಜನಿಕ ಉದ್ಯಮಗಳ ಬೆಳವಣಿಗೆಯನ್ನು ಕೇವಲ ಸಂಖ್ಯೆಯ ದೃಷ್ಟಿಯಿಂದಲ್ಲದೆ, ಒಟ್ಟು ಬಂಡವಾಳ ಹೂಡಿಕೆಯ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಅನುಬಂಧ ೧ರಲ್ಲಿ ತೋರಿಸಿರುವಂತೆ ೧೯೮೦-೮೧ರಲ್ಲಿ ಒಟ್ಟು ಬಂಡವಾಳ ಹೂಡಿಕೆ ೧೪೧೫.೭೭ ಕೋಟಿ ರೂಪಾಯಿಗಳಾಗಿದ್ದುದು ೧೯೯೩-೯೪ರಲ್ಲಿ ೬೯೪೮.೬೩ ಕೋಟಿ ರೂಪಾಯಿಗಳಿಗೆ ಹೆಚ್ಚಿತು. ಅಂದರೆ ಈ ಅವಧಿಯಲ್ಲಿ ಒಟ್ಟು ಬಂಡವಾಳ ಹೂಡಿಕೆ ಸುಮಾರು ಐದುಪಟ್ಟು ಹೆಚ್ಚಿತು. ಶೇಕಡಾವಾರು ವಾರ್ಷಿಕ ಹೆಚ್ಚಳ ೧೯೮೮-೮೯ರಲ್ಲಿ ಕಡಿಮೆಯದೂ (೪.೦೭) ಮತ್ತು ೧೯೮೨-೮೩ರಲ್ಲಿ ಅತ್ಯಂತ ಹೆಚ್ಚಿನದೂ (೨೩.೯೦) ಆಗಿತ್ತು. ಒಟ್ಟು ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಸರ್ಕಾರದ ಪಾಲು ಸುಮಾರು ಅರ್ಧದಷ್ಟಾಗುತ್ತದೆ. ಸಾರ್ವಜನಿಕ ಉದ್ಯಮಗಳಿಗೆ ಸರ್ಕಾರ ಒದಗಿಸುವ ಬಂಡವಾಳ ಕಡಿಮೆಯಾಗಬೇಕೆಂಬ ಅಭಿಪ್ರಾಯವಿರುವ ಇಂದಿನ ದಿನಗಳಲ್ಲೂ ಅದು ಹೆಚ್ಚುತ್ತಿರುವುದು ಗಮನಿಸಬೇಕಾದ ಅಂಶ. ೧೯೯೩-೯೪ನೇ ವರ್ಷದಲ್ಲಿ ಅದರ ಹಿಂದಿನ ವರ್ಷಕ್ಕಿಂತ ೧೮೯.೧೩ ಕೋಟಿ ರೂಪಾಯಿ ಹೆಚ್ಚು ಬಂಡವಾಳವನ್ನು ಸರ್ಕಾರ ಒದಗಿಸಿದೆ.

ಕರ್ನಾಟಕದ ಸಾರ್ವಜನಿಕ ಉದ್ಯಮಗಳಲ್ಲಿ ತೊಡಗಿಸಿರುವ ಬಂಡವಾಳ ಭಾರಿ ಮೊತ್ತದ್ದಾದರೂ, ಇದರ ಶೇಕಡ ೮೬.೪೨ರಷ್ಟು ಕೇವಲ ೬ ಉದ್ಯಮಗಳಲ್ಲಿ ಕೇಂದ್ರೀಕೃತವಾಗಿದೆ. ೧೯೯೩-೯೪ರಲ್ಲಿ ೬೮ ಉದ್ಯಮಗಳಲ್ಲಿ ಹೂಡಿದ್ದ ಒಟ್ಟು ೬೯೪೮.೬೩ ಕೋಟಿ ರೂಪಾಯಿ ಬಂಡವಾಳದಲ್ಲಿ ಕರ್ನಾಟಕ ವಿದ್ಯುತ್ ನಿಗಮ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ, ಕರ್ನಾಟಕ ರಾಜ್ಯ ಹಣಕಾಸು ನಿಗಮ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೆಎಸ್ಐಐಡಿಸಿ (ಕರ್ನಾಟಕ ಸಣ್ಣ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ) ಮತ್ತು ಮೈಸೂರು ಕಾಗದದ ಕಾರ್ಖಾನೆ ಈ ಮೂರು ಸಂಸ್ಥೆಗಳಲ್ಲಿ ಹೂಡಿದ್ದ ಒಟ್ಟು ಬಂಡವಾಳ ೬೦೦೪.೮೧ ಕೋಟಿ ರೂಪಾಯಿಗಳಾಗಿದ್ದು ಇನ್ನುಳಿದ ೬೨ ಉದ್ಯಮಗಳಲ್ಲಿ ಹೂಡಿದ ಬಂಡವಾಳ ಕೇವಲ ೯೪೩.೮೨ ಕೋಟಿ ರೂಪಾಯಿಗಳಾಗಿದ್ದುವು. ಅಂದರೆ ೬೨ ಉದ್ಯಮಗಳಲ್ಲಿ ಹೂಡಿದ ಬಂಡವಾಳ ಒಟ್ಟು ಬಂಡವಾಳ ಹೂಡಿಕೆಯ ಶೇಕಡ ೧೩.೫೮ ರಷ್ಟಿದ್ದು ಬಹುತೇಕ ಉದ್ಯಮಗಳಲ್ಲಿ ಹೂಡಿದ ಬಂಡವಾಳ ಅತ್ಯಲ್ಪ ಪ್ರಮಾಣದ್ದಾಗಿದ್ದು ಅವುಗಳ ಕಾರ್ಯಚಟುವಟಿಕೆಗಳು ಬಹಳ ಸೀಮಿತವಾದವುಗಳಾಗಿವೆ. ಒಟ್ಟಿನಲ್ಲಿ ಸಂಖ್ಯಾಬಾಹುಳ್ಯ ಮತ್ತು ಸೀಮಿತ ಬಂಡವಾಳ ಹೂಡಿಕೆಯಿಂದಾಗಿ ಸಾರ್ವಜನಿಕ ಉದ್ಯಮಗಳು ರಾಜ್ಯಕ್ಕೆ ವರದಾನವಾಗುವ ಬದಲು ಒಂದು ಹೊರೆಯಾಗಿರುವುದು ಅವುಗಳ ಕಾರ್ಯನಿರ್ವಹಣೆಯ ಸಮೀಕ್ಷೆಯಿಂದ ಸ್ಪಷ್ಟವಾಗುತ್ತದೆ.

೨. ಸಾರ್ವಜನಿಕ ಉದ್ಯಮಗಳ ಕಾರ್ಯನಿರ್ವಹಣೆ

ಸಾರ್ವಜನಿಕ ಕಾರ್ಯನಿರ್ವಹಣೆಯನ್ನು ವಿಮರ್ಶಿಸಿದಾಗ ಎರಡು ವರ್ಗಗಳ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ: ೧. ಹಣಕಾಸು ಫಲಿತಾಂಶಗಳು ಮತ್ತು ೨. ಇತರೆ ಮಾನದಂಡಗಳು. ಮೊದಲನೆ ಗುಂಪಿನ ಮಾನದಂಡಗಳಲ್ಲಿ ಮುಖ್ಯವಾದವು ಈಕ್ವಿಟಿ ಬಂಡವಾಳದ ಮೇಲಿನ ಆದಾಯ, ಒಟ್ಟು ಹೂಡಿಕೆಯ ಮೇಲಿನ ಆದಾಯ, ನಿಯೋಜಿಸಿದ ಬಂಡವಾಳದ ಮೇಲಿನ ಆದಾಯ ಮತ್ತು ನಿವ್ವಳ ಲಾಭ: ನಷ್ಟ. ಎರಡನೆಯ ಗುಂಪಿನ ಮಾನದಂಡಗಳಲ್ಲಿ ಸೇವೆಗಳ ಗುಣಮಟ್ಟ, ಮೊದಲೇ ನಿಗದಿಪಡಿಸಿರುವ ಗುರಿಗಳನ್ನು ಎಷ್ಟರಮಟ್ಟಿಗೆ ಮುಟ್ಟಲಾಗಿದೆ ಎಂಬುದು, ಉತ್ಪಾದಕತೆ, ಸಾಮರ್ಥ್ಯ ಬಳಕೆ, ಉದ್ಯೋಗ ಸೃಷ್ಟಿ ಮುಂತಾದವುಗಳಿರುತ್ತದೆ.

ಹಣಕಾಸಿನ ಮಾನದಂಡಕ್ಕೆ ಸಂಬಂಧಿಸಿದಂತೆ ಇರುವ ವಿವಾದವೆಂದರೆ, ಸಾರ್ವಜನಿಕ ಉದ್ಯಮಗಳ ಗುಣವಿಮರ್ಶೆಯನ್ನು ಕೇವಲ ಲಾಭದ ದೃಷ್ಟಿಯಿಂದ ಮಾಡಬಹುದೆ ಎಂಬುದು. ಸಾಮಾಜಿಕ ಪ್ರಯೋಜನ ಮುಖ್ಯವೇ ಹೊರತು ಉದ್ಯಮ ಸಂಪಾದಿಸುವ ಲಾಭವಲ್ಲ ಎಂಬುದು ಒಂದು ಅಭಿ‌ಪ್ರಾಯ. ಲಾಭ ಅಥವಾ ನಷ್ಟ ಎರಡೂ ಇಲ್ಲದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದರೆ ಸಾಕೆಂಬುದು ಮತ್ತೊಂದು ಅಭಿಪ್ರಾಯ. ನಷ್ಟ ಅನುಭವಿಸುವುದಕ್ಕಿಂತ ಲಾಭ-ನಷ್ಟ ಎರಡೂ ಇಲ್ಲದ ರೀತಿಯಲ್ಲಿ ಕೆಲಸಮಾಡುವುದು ಉತ್ತಮವೇನೋ ಹೌದು. ಅಷ್ಟೇ ಅಲ್ಲದೆ ಪ್ರತಿಯೊಂದು ಬಗೆಯ ಉದ್ಯಮವೂ ಲಾಭ ಗಳಿಸಲೇಬೇಕೆ ಅಥವ ಲಾಭ-ನಷ್ಟಗಳಿಲ್ಲದೆ ಕಾರ್ಯ ನಿರ್ವಹಿಸಬೇಕೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ವಾಣಿಜ್ಯೇತರ ಅಭಿವೃದ್ಧಿಶೀಲ ಉದ್ಯಮಗಳು ಮತ್ತು ಸೇವಾ ಉದ್ಯಮಗಳು ಲಾಭ ಇನ್ನುಳಿದ ಉದ್ಯಮಗಳು ಲಾಭಗಳಿಸಬೇಕೆಂದು ನಿರೀಕ್ಷಿಸುವುದು ತಪ್ಪಾಗಲಾರದು.

ಸಾರ್ವಜನಿಕ ಉದ್ಯಮಗಳ ಮುಖ್ಯಗುರಿ ಲಾಭ ಗಳಿಕೆಯಾಗಿರಬೇಕಾಗಿಲ್ಲದಿದ್ದರೂ, ಅವು ಲಾಭಗಳಿಸದಿದರೆ ಅಥವಾ ಒಂದೇ ಸಮನೆ ನಷ್ಟಕ್ಕೆ ಒಳಗಾಗುತ್ತಿದ್ದರೆ ಅದರಿಂದ ಸರ್ಕಾರದ ಹಣಕಾಸು ಪರಿಸ್ಥಿತಿಯ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳ ಬೇಕು. ಸರ್ಕಾರ ತಾನು ಹೂಡಿರುವ ಬಂಡವಾಳಕ್ಕೆ ಪ್ರತಿಫಲ ಪಡೆಯದಿದ್ದರೆ ಮತ್ತು ಸಾರ್ವಜನಿಕ ಉದ್ಯಮಗಳು ಅನುಭವಿಸುವ ನಷ್ಟವನ್ನು ತುಂಬಿಕೊಡಬೇಕಾದರೆ, ಸರ್ಕಾರದ ಹಣಕಾಸು ಪರಿಸ್ಥಿತಿ ಹದಗೆಡುತ್ತದೆ. ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿರುವ ಬಂಡವಾಳದಿಂದ ಸರ್ಕಾರ ಪ್ರತಿಫಲ ಅದರ ತೆರಿಗೇತರ ಆದಾಯ ಮೂಲಗಳಲ್ಲೊಂದು. ಕೋಶೀಯ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕಾದ ಅಗತ್ಯವಿರುವ ಇಂದಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಉದ್ಯಮಗಳು ನಷ್ಟ ಅನುಭವಿಸುತ್ತಿರುವುದನ್ನು ತಪ್ಪಿಸುವುದು ಅನಿವಾರ್ಯ ಮತ್ತು ರಾಜ್ಯದ ಬೊಕ್ಕಸಕ್ಕೆ ಅವು ಆದಾಯ ತರುವಂತೆ ಮಾಡುವುದು ಅಗತ್ಯ. ಈ ದೃಷ್ಟಿಯಿಂದ ಸಾರ್ವಜನಿಕ ಉದ್ಯಮಗಳ ಹಣಕಾಸು ಫಲಿತಾಂಶಗಳನ್ನು ವಿಶ್ಲೇಷಿಸಿಬೇಕಾಗುತ್ತದೆ.

ಹಣಕಾಸು ಫಲಿತಾಂಶ

ಹಣಕಾಸು ಫಲಿತಾಂಶವನ್ನು ವಿಶ್ಲೇಷಿಸಲು ಹಿಂದೆ ಹೇಳಿರುವಂತೆ ವಿವಿಧ ಮಾನದಂಡಗಳು ಇರುವುದಾದರೂ ಅವೆಲ್ಲವುಗಳ ಮಾಹಿತಿ ಲಭ್ಯವಿಲ್ಲದಿರುವುದರಿಂದ ಇಲ್ಲಿ ನಿವ್ವಳ ಲಾಭ: ನಷ್ಟಕ್ಕೆ ಸಂಬಂಧಿಸಿದಂತೆ ಮಾತ್ರ ಹಣಕಾಸು ಫಲಿತಾಂಶವನ್ನು ವಿಶ್ಲೇಷಿಸಬೇಕಾಗಿದೆ. ಪ್ರತಿಯೊಂದು ಉದ್ಯಮದ ಲಾಭ: ನಷ್ಟದ ವಿವರಗಳನ್ನು ಕೊಡುವ ಬದಲು ವರ್ಗ ಪ್ರಕಾರವಾಗಿ ವಿಶ್ಲೇಷಿಸಬಹುದು. ಕೋಷ್ಟಕ ೧ರಲ್ಲಿ ಸಾರ್ವಜನಿಕ ಉದ್ಯಮಗಳ ೭ ಗುಂಪುಗಳ ವಿವರ ಕೊಡಲಾಗಿದೆ.

ಕೋಷ್ಟಕ – ೧
ಸಾರ್ವಜನಿಕ ಉದ್ಯಮಗಳ ನಿವ್ವಳ ಲಾಭ : ನಷ್ಟ

(ಲಕ್ಷ ರೂ.ಗಳಲ್ಲಿ)

ವರ್ಗ ೧೯೯೧-೯೨ ೧೯೯೨-೯೩ ೧೯೯೩-೯೪
ಸಾರ್ವಜನಿಕ ಉಪಯುಕ್ತತೆ ಉದ್ಯಮಗಳು ೧೦೬೮೪.೫೭ ೪೦೩೨.೧೬ ೩೧೨೦.೧೭
ಹಣಕಾಸು ಸಂಸ್ಥೆಗಳು ೧೧೯೫.೮೭ ೧೫೨೪.೨೧ ೧೦೪೭.೦೯
ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯೇತರ) ೪೪.೭೫ ೩೫.೦೦ ೪೩.೨೧
ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯ) ೮೩೧.೭೩ ೮೯೧.೧೭ ೧೯೬.೦೬
ಸೇವಾ ಉದ್ಯಮಗಳು ೪೨.೦೨ ೩೮೫.೭೬ ೪೪೭.೭೫
ತಯಾರಿಕಾ ಉದ್ಯಮಗಳು ೪೬.೯೭ ೩೨೬೭.೨೧ ೧೫೫೭.೨೫
ಮಾರುಕಟ್ಟೆ ಮತ್ತು ಜಾಹಿರಾತು ಉದ್ಯಮಗಳು ೧೪೮.೦೫ ೨೯೫.೪೫ ೧೪೪.೬೫
ಒಟ್ಟು ೧೧೦೬೩.೦೨ ೬೫೭೧.೦೨ ೩೨೭೭.೨೦

ಆಧಾರ : ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಮಹೋದ್ಯಮ, ಸಾರ್ವಜನಿಕ ಉದ್ಯಮಗಳ ಸಮೀಕ್ಷೆ, ೧೯೯೩-೯೪.

ಕರ್ನಾಟಕ ವಿದ್ಯುತ್ ನಿಗಮ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಒಳಗೊಂಡ ಸಾರ್ವಜನಿಕ ಉಪಯುಕ್ತತೆ ಉದ್ಯಮಗಳ ವರ್ಗ ೧೯೯೧-೯೨ರಲ್ಲಿ ೧೦೬೮೪.೫೭ ಲಕ್ಷ ರೂಪಾಯಿ ಗಳಿಸಿದೆ, ೧೯೯೨-೯೩ರಲ್ಲಿ ೪೦೩೨.೧೬ ಲಕ್ಷ ರೂಪಾಯಿ ಮತ್ತು ೧೯೯೩-೯೪ರಲ್ಲಿ ೩೧೨೦.೧೭ ಲಕ್ಷ ರೂಪಾಯಿ ನಷ್ಟ ಅನುಭವಿಸಿತು. ಮೂರೂ ವರ್ಷಗಳಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಲಾಭ ಗಳಿಸಿದೆ. ಕಳೆದಬಾರಿ ವಿದ್ಯುತ್ ದರಗಳು ಪರಿಷ್ಕೃತಗೊಂಡ ಮೇಲೆ ಮಂಡಳಿಯ ಹಣಕಾಸು ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮಗೊಂಡಿತು. ಕರ್ನಾಟಕ ವಿದ್ಯುತ್ ನಿಗಮ ೧೯೯೧-೯೨ರಲ್ಲಿ ೧೦೧೬೫.೦೩ ಲಕ್ಷ ರೂಪಾಯಿ ಲಾಭ ಪಡೆಯಿತು; ೧೯೯೨-೯೩ರಲ್ಲಿ ೧೧೨೪.೪೭ ಲಕ್ಷ ರೂಪಾಯಿ ನಷ್ಟ ಅನುಭವಿಸಿತು ಮತ್ತು ೧೯೯೩-೯೪ರಲ್ಲಿ ೨೭೬೫.೩೯ ಲಕ್ಷ ರೂಪಾಯಿ ಲಾಭ ಗಳಿಸಿತು. ಈ ಗುಂಪಿನ ಉದ್ಯಮಗಳ ಪೈಕಿ ಭಾರಿ ನಷ್ಟ ಅನುಭವಿಸುತ್ತಿರುವ ಉದ್ಯಮವೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ. ಇದರ ನಷ್ಟ ೧೯೯೧-೯೨ರಲ್ಲಿ ೧೯೦೯.೪೬ ಲಕ್ಷ ರೂಪಾಯಿಗಳಿದ್ದದ್ದು ೧೯೯೨-೯೩ರಲ್ಲಿ ೬೧೨೮.೬೯ ಲಕ್ಷ ರೂಪಾಯಿಗಳಿಗೂ, ೧೯೯೩-೯೪ರಲ್ಲಿ ೯೨೭೨.೫೬ ಲಕ್ಷ ರೂಪಾಯಿಗಳಿದ್ದದ್ದು ೧೯೯೨-೯೩ರಲ್ಲಿ ೬೧೨೮.೬೯ ಲಕ್ಷ ರೂಪಾಯಿಗಳಿಗೂ, ೧೯೯೩-೯೪ರಲ್ಲಿ ೯೨೭೨.೫೬ ಲಕ್ಷ ರೂಪಾಯಿಗಳಿಗೂ ಹೆಚ್ಚಿತು. ಒಟ್ಟಿನಲ್ಲಿ ಸಾರ್ವಜನಿಕ ಉಪಯುಕ್ತತೆ ಉದ್ಯಮಗಳ ವರ್ಗ ಅತಿ ಹೆಚ್ಚಿನ ನಷ್ಟ ಅನುಭವಿಸುತ್ತಿರುವ ವರ್ಗವಾಗಿದೆ.

ಕರ್ನಾಟಕ ರಾಜ್ಯ ಹಣಕಾಸು ನಿಗಮ ಮತ್ತು ಕೆ.ಎಸ್.ಐ.ಐ.ಡಿ.ಸಿ.ಗಳನ್ನೊಳಗೊಂಡ ಹಣಕಾಸು ಸಂಸ್ಥೆಗಳ ಗುಂಪು ಲಾಭ ಗಳಿಸುತ್ತಿದೆ. ಈ ಗುಂಪಿನ ಲಾಭ ೧೯೯೧-೯೨ರಲ್ಲಿ ೧೧೯೫.೮೭ ಲಕ್ಷ ರೂಪಾಯಿಗಳಿದ್ದದ್ದು ೧೯೯೨-೯೩ರಲ್ಲಿ ೧೫೨೪.೨೧ ಲಕ್ಷ ರೂಪಾಯಿಗಳಿಗೆ ಹೆಚ್ಚಿತು. ಆದರೆ ೧೯೯೩-೯೪ರಲ್ಲಿ ೧೦೪೭.೦೯  ಲಕ್ಷ ರೂಪಾಯಿಗಳಿಗೆ ಇಳಿಯಿತು. ಸಾಲ ವಿತರಣೆ ಮತ್ತು ಸಾಲ ವಸೂಲಿ ಇವುಗಳ ವಿಷಯದಲ್ಲಿಯೂ ಈ ಸಂಸ್ಥೆಗಳ ಕೆಲಸ ತೃಪ್ತಿಕರವಾಗಿದೆ.

ವಾಣಿಜ್ಯೇತರ ಅಭಿವೃದ್ಧಿಶೀಲ ಉದ್ಯಮಗಳ ವರ್ಗ, ಕರ್ನಾಟಕ ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ರಾಜ್ಯ ಪೋಲೀಸ್ ಗೃಹನಿರ್ಮಾಣ ನಿಮಗ ನಿಯಮಿತ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ನಿಯಮಿತ ಇವುಗಳನ್ನೊಳಗೊಂಡಿದೆ. ಇವುಗಳ ಪೈಕಿ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ನಿಯಮಿತ ಮಾತ್ರ ೧೯೯೧-೯೨, ೧೯೯೨-೯೩ ಮತ್ತು ೧೯೯೩-೯೪ ಮೂರು ವರ್ಷಗಳಲ್ಲೂ ಲಾಭ ಗಳಿಸಿದೆ. ಕರ್ನಾಟಕ ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ೧೯೯೨-೯೩ರಲ್ಲಿ ಲಾಭ ಗಳಿಸಿದೆ. ಈ ಗುಂಪಿನ ಇನ್ನುಳಿದ ನಿಗಮಗಳೆಲ್ಲವೂ ನಷ್ಟ ಅನುಭವಿಸಿವೆ. ಈ ಗುಂಪನ್ನು ಒಟ್ಟಾರೆಯಾಗಿ ತೆಗೆದು ಕೊಂಡರೆ ೧೯೯೧-೯೨ರಲ್ಲಿ ೪೪.೭೫ ಲಕ್ಷ ರೂಪಾಯಿಗಳ ನಷ್ಟ, ೧೯೯೨-೯೩ರಲ್ಲಿ ೩೫ ಲಕ್ಷ ರೂಪಾಯಿಗಳ ಲಾಭ ಮತ್ತು ೧೯೯೩-೯೪ರಲ್ಲಿ ೪೩.೨೧ ಲಕ್ಷ ರೂಪಾಯಿಗಳ ನಷ್ಟ ಕಂಡುಬಂದಿದೆ.

ವಾಣಿಜ್ಯೇತರ ಅಭಿವೃದ್ಧಿಶೀಲ ಉದ್ಯಮಗಳಿಂದ ಲಾಭ ನಿರೀಕ್ಷಿಸಲಾಗದು. ಅವು ಲಾಭ ತರುವ ಚಟುವಟಿಕೆಗಳಲ್ಲಿ ತೊಡಗಿಲ್ಲದಿರುವುದೇ ಇದಕ್ಕೆ ಕಾರಣ. ಈ ನಿಗಮಗಳನ್ನು ಸ್ಥಾಪಿಸಿರುವುದು ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರು ಇವರುಗಳಿಗೆ ಸ್ವಂತ ಉದ್ಯೋಗದಲ್ಲಿ ತೊಡಗಲು ಸಹಾಯ ಮಾಡುವುದಕ್ಕಾಗಿ. ಇವು ಸಬ್ಸಿಡಿ ಮತ್ತು ಮಾರ್ಜಿನ್ ಹಣವನ್ನು ಒದಗಿಸುತ್ತವೆ ಮತ್ತು ಉಳಿದ ಹಣವನ್ನು ಬ್ಯಾಂಕುಗಳು ಸಾಲರೂಪದಲ್ಲಿ ಕೊಡಲು ವ್ಯವಸ್ಥೆ ಮಾಡುತ್ತವೆ. ಇವು ಮುಖ್ಯವಾಗಿ ಸಂಯೋಜನಾ ಕಾರ್ಯವನ್ನು ನಿರ್ವಹಿಸುತ್ತವೆ. ಮಾರ್ಜಿನ್ ಹಣದ ಮೇಲೆ ದೊರಕುವ ಬಡ್ಡಿಯೊಂದೇ ಈ ನಿಗಮಗಳು ಮಾಡುವ ಸಂಪಾದನೆಯಾದ್ದರಿಂದ ಇವುಗಳ ಲಾಭಗಳಿಕೆ ಸಾಮರ್ಥ್ಯ ಅತ್ಯಲ್ಪವೆಂದೇ ಹೇಳಬೇಕು. ಆದ್ದರಿಂದ ಇವು ನಷ್ಟ ಅನುಭವಿಸದಿದ್ದರೂ ಸಾಕು. ನಿರ್ದಿಷ್ಟ ಗುಂಪುಗಳಿಗೆ ನೆರವು ನೀಡಲು ಈ ರೀತಿಯ ನಿಗಮಗಳ ಸ್ಥಾಪನೆ ಅಗತ್ಯವೆ? ಈಗ ಇರುವ ಆಡಳಿತ ಯಂತ್ರವನ್ನೇ ಉಪಯೋಗಿಸಿಕೊಂಡು ನೆರವು ದೊರಕಿಸಲು ಸಾಧ್ಯವಿಲ್ಲವೆ? ಎಂಬುದು ಇಲ್ಲಿನ ಮುಖ್ಯ ಪ್ರಶ್ನೆಗಳಾಗುತ್ತವೆ. ಪ್ರತ್ಯೇಕ ನಿಗಮಗಳ ಸ್ಥಾಪನೆಯಿಂದ ಮೇಲಾಡಳಿತ ವೆಚ್ಚ ಹೆಚ್ಚಾಗಿ ಸರ್ಕಾರಕ್ಕೆ ಹೊರೆಯಾಗುತ್ತದೆ. ಅವುಗಳ ಅಸ್ತಿತ್ವ ಅಗತ್ಯವೆಂದಾದರೆ ಕಡೇಪಕ್ಷ ಅವು ನಷ್ಟವನ್ನನುಭವಿಸುವುದನ್ನಾದರೂ ತಪ್ಪಿಸಬೇಕಾಗುತ್ತದೆ. ಹಾಲಿ ಅವು ನಷ್ಟವನ್ನನುಭವಿಸುತ್ತಿರುವುದಷ್ಟೇ ಅಲ್ಲದೆ, ಫಲಾನುಭವಿಗಳ ಸಂಖ್ಯೆ ಮತ್ತು ನೆರವಿನ ಮೊತ್ತ ಇವುಗಳ ದೃಷ್ಟಿಯಿಂದಲೂ ಅವುಗಳ ಕಾರ್ಯನಿರ್ವಹಣೆ ಸಮರ್ಪಕವಾಗಿ ಕಂಡುಬರುವುದಿಲ್ಲ.

ಅಭಿವೃದ್ಧಿಶೀಲ ಉದ್ಯಮಗಳ (ವಾಣಿಜ್ಯ) ವರ್ಗದಲ್ಲಿ ೧೨ ಉದ್ಯಮಗಳು ಸೇರಿವೆ (ಅನುಬಂಧ ೨). ಇವುಗಳ ಪೈಕಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ೧೯೯೧-೯೨ ರಲ್ಲಿ ಮತ್ತು ೧೯೯೩-೯೪ರಲ್ಲಿ ಲಾಭಗಳಿಸಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ೧೯೯೧-೯೨, ೧೯೯೨-೯೩ ಮತ್ತು ೧೯೯೩-೯೪ ಮೂರು ವರ್ಷಗಳಲ್ಲೂ ಲಾಭ ಸಂಪಾದಿಸಿದೆ. ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ ನಿಯಮಿತ ೧೯೯೧-೯೨ರಲ್ಲಿ ಮತ್ತು ೧೯೯೩-೯೪ರಲ್ಲಿ ಲಾಭಗಳಿಸಿದೆ ಮತ್ತು ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ೧೯೯೨-೯೩ ಮತ್ತು ೧೯೯೩-೯೪ರಲ್ಲಿ ಲಾಭ ಗಳಿಸಿದೆ. ಇನ್ನುಳಿದವುಗಳು ಎಲ್ಲಾ ಮೂರು ವರ್ಷಗಳಲ್ಲೂ ನಷ್ಟ ಅನುಭವಿಸಿದೆ. ಈ ವರ್ಗ ಒಟ್ಟಾರೆಯಾಗಿ ೧೯೯೧-೯೨ರಲ್ಲಿ ೮೩೧.೭೩ ಲಕ್ಷ ರೂಪಾಯಿಗಳ, ೧೯೯೨-೯೩ರಲ್ಲಿ ೮೯.೧೭ ಲಕ್ಷ ರೂಪಾಯಿಗಳ ಮತ್ತು ೧೯೯೩-೯೪ರಲ್ಲಿ ೧೯೬.೦೬ ಲಕ್ಷ ರೂಪಾಯಿಗಳ ನಷ್ಟ ಅನುಭವಿಸಿದೆ. ಈ ಉದ್ಯಮಗಳು ಅಭಿವೃದ್ಧಿಶೀಲ ಉದ್ಯಮಗಳಾದರೂ, ಅವು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಅವುಗಳ ನಷ್ಟವನ್ನು ಸಮರ್ಥಿಸಲಾಗುವುದಿಲ್ಲ. ಈ ಗುಂಪಿನಲ್ಲಿ ಸೇರಿರುವ ಕರ್ನಾಟಕ ಕಾಂಪೋಸ್ಟ್ ಗೊಬ್ಬರ ಅಭಿವೃದ್ಧಿ ನಿಗಮ ನಿಯಮಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ ಸ್ಥಾಪಿಸಲ್ಪಟ್ಟಿರುವ ಉದ್ಯಮಗಳಿಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ. ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಮಹೋದ್ಯಮ ತಯಾರಿಸಿದ ಒಂದು ವರದಿಯಲ್ಲಿ ಹೇಳಿರುವಂತೆ ಸ್ಥಾಪಿತ ಸಾಮರ್ಥ್ಯದ ಪೂರ್ಣ ಬಳಕೆಯಾಗದಿರುವುದು ಈ ನಿಗಮದ ನಷ್ಟಕ್ಕೆ ಒಂದು ಕಾರಣವಾಗಿದೆ. (ಇಸ್ಸಾರ್ ಟಿ.ಪಿ. ೧೯೮೪). ಬೆಂಗಳೂರು ನಗರದ ಕಸದಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವುದು ಮತ್ತು ಅದನ್ನು ಮಾರಾಟ ಮಾಡುವುದು ಇದರ ಕೆಲಸ. ಬೆಂಗಳೂರು ನಗರಪಾಲಿಕೆ  ಒಂದು ದಿನಕ್ಕೆ ೨೦೦ ಮೆಟ್ರಿಕ್ ಟನ್ ಕಸ ಒದಗಿಸಲು ಒಪ್ಪಿದ್ದು ವಾಸ್ತವವಾಗಿ ೫೦ ಮೆಟ್ರಿಕ್ ಟನ್ ಮಾತ್ರ ಒದಗಿಸುತ್ತಿರುವುದರಿಂದ ಸ್ಥಾಪಿತ ಸಾಮರ್ಥ್ಯದ ಪೂರ್ಣ ಬಳಕೆಯಾಗದೆ ಉದ್ಯಮ ನಷ್ಟ ಅನುಭವಿಸುತ್ತಿರುವುದಾಗಿ ಮೇಲಿನ ವರದಿ ತಿಳಿಸಿದೆ. ನಗರ ಪಾಲಿಕೆಯೇ ಕಸದಿಂದ ಗೊಬ್ಬರ ತಯಾರಿಸುವ ಘಟಕವನ್ನು ಸ್ಥಾಪಿಸಬಹುದಾಗಿತ್ತು; ಇದಕ್ಕೆ ಪ್ರತ್ಯೇಕವಾಗಿ ಸಾರ್ವಜನಿಕ ಉದ್ಯಮ ಬೇಕಾಗಿತ್ತೆ ಎಂಬ ಪ್ರಶ್ನೆ ಉದ್ಬವಿಸುತ್ತದೆ. ಹತ್ತು ವರ್ಷಗಳಿಂದ ಆರ್ಥಿಕ ಮುಗ್ಗಟ್ಟಿನಿಂದಾಗಿ ಮುಖ್ಯ ಕಾಂಪೋಸ್ಟ್ ಯಂತ್ರವು ರಿಪೇರಿಯಾಗದಿರುವುದು ಈ ಸ್ಥಾವರವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿರುವುದಕ್ಕೆ ಕಾರಣವೆಂದು ಈಗ ಹೇಳಲಾಗುತ್ತಿದೆ. (ಕೆ.ಎಸ್.ಬಿ.ಪಿ.ಇ. ೧೯೯೫)

ಸೇವಾ ಉದ್ಯಮಗಳ ವರ್ಗದಲ್ಲಿ ೧೩ ಉದ್ಯಮಗಳಿಗೆ (ಅನುಬಂಧ ೨). ಇವುಗಳ ಪೈಕಿ ೬ ಉದ್ಯಮಗಳು ಲಾಭ ಗಳಿಸುತ್ತಿವೆ ಮತ್ತು ಉಳಿದವು ನಷ್ಟ ಅನುಭವಿಸುತ್ತಿವೆ. ಈ ವರ್ಗ ಒಟ್ಟಾರೆಯಾಗಿ ೧೯೯೧-೯೨ರಲ್ಲಿ ೪೨.೦೧ ಲಕ್ಷ ರೂಪಾಯಿ ನಷ್ಟ ಅನುಭವಿಸಿದೆ ಮತ್ತು ೧೯೯೨-೯೩ರಲ್ಲಿ ೩೮೫.೭೬ ಲಕ್ಷ ರೂಪಾಯಿ  ಮತ್ತು ೧೯೯೩-೯೪ರಲ್ಲಿ ೪೪೭.೭೫ ಲಕ್ಷ ರೂಪಾಯಿ ಲಾಭ ಗಳಿಸಿದೆ. ಈ ವರ್ಗಕ್ಕೆ ಸೇರಿದ ಕರ್ನಾಟಕ ರಾಜ್ಯ ನಿರ್ಮಾನ ನಿಮಗ ನಿಯಮಿತ ಅಲ್ಪ ಪ್ರಮಾಣದ ಲಾಭ ಸಂಪಾದಿಸುತ್ತಿದೆಯಾದರೂ, ಅದರ ಮೂಲ ಉದ್ದೇಶ ಸಫಲವಾಗಿಲ್ಲದಿರುವುದು ಒಂದು ಕೊರತೆ. ನಿರ್ಮಾಣ ವೆಚ್ಚದಲ್ಲಿ ಸರ್ಕಾರಕ್ಕೆ ಮಿತವ್ಯಯವನ್ನು ಸಾಧಿಸಲು, ಖಾಸಗಿ ಗುತ್ತಿಗೆದಾರರಿಗೆ ಬದಲಾಗಿ ಈ ಉದ್ಯಮ ನಿರ್ಮಾಣಕಾರ್ಯಗಳನ್ನು ನಿರ್ವಹಿಸಲು ಅವಕಾಶ ಮಾಡುವ ಸಲುವಾಗಿ ಇದನ್ನು ಸ್ಥಾಪಿಸಲಾಯಿತು. ಆದರೆ ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಮಹೋದ್ಯಮದ ಒಂದು ವರದಿಯಂತೆ, ಈ ಉದ್ಯಮದ ಮಧ್ಯ ಪ್ರವೇಶದಿಂದ ಸರ್ಕಾರ ಟೆಂಡರಿಗಿಟ್ಟ ಕೆಲಸಗಳಿಗೆ ಸ್ಪರ್ಧಾತ್ಮಕ ಕೊಟೇಷನ್‌ಗಳು ಬಂದ ಒಂದೇ ಒಂದು ನಿದರ್ಶನವೂ ಇಲ್ಲ (ಇಸ್ಸಾರ್, ಟಿ.ಪಿ. ೧೯೮೪). ಈ ಗುಂಪಿಗೆ ಸೇರಿದ ಮತ್ತೊಂದು ಉದ್ಯಮವಾದ ಕರ್ನಾಟಕ ಭುಸೇನಾ ನಿಮಗ ನಿಯಮಿತ ಸಹ ನಿರ್ಮಾಣ ಕಾರ್ಯದಲ್ಲೇ ತೊಡಗಿದೆ. ಗುತ್ತಿಗೆದಾರರನ್ನು ಹೊರತುಪಡಿಸಿ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು ತನ್ಮೂಲಕ ಗ್ರಾಮೀಣ ಕಾರ್ಮಿಕರಿಗೆ ನೇರ ಉದ್ಯೋಗ ಒದಗಿಸುವುದು ಇದರ ಉದ್ದೇಶ. ಈ ಉದ್ದೇಶ ಬಹಳ ಮಟ್ಟಿಗೆ ಸಫಲವಾಗಿದೆ ಎಂಬ ಅಭಿಪ್ರಾಯವಿದೆ (ಇಸ್ಸಾರ್. ಟಿ.ಪಿ. ೧೯೮೪). ಆದರೆ ಇದರ ಹಣಕಾಸು ಫಲಿತಾಂಶ ಮಾತ್ರ ಆತಂಕಕಾರಿಯಾಗಿದೆ. ೧೯೯೧-೯೨ರಲ್ಲಿ ೮೫.೯೪ ಲಕ್ಷ ರೂಪಾಯಿ, ೧೯೯೨-೯೩ರಲ್ಲಿ ೯೭.೯೭ ಲಕ್ಷ ರೂಪಾಯಿ ಮತ್ತು ೧೯೯೩-೯೪ರಲ್ಲಿ ೬೨.೬೯ ರೂಪಾಯಿ ನಷ್ಟ ಉಂಟಾಗಿದೆ. ಆಡಳಿತ ನಿರ್ವಹಣೆ ವೆಚ್ಚ ಭರಿಸಲು ಸಾಕಾಗುವಷ್ಟು ಕಾಮಗಾರಿಗಳು ದೊರಕದೇ ಇರುವುದು ಇದಕ್ಕೆ ಒಂದು ಮುಖ್ಯ ಕಾರಣವೆಂದು ಹೇಳಲಾಗಿದೆ. (ಕೆ.ಎಸ್.ಬಿ.ಇ, ೧೯೯೫). ಕರ್ನಾಟಕ ರಾಜ್ಯ ನಿರ್ಮಾಣ ನಿಗಮ ನಿಯಮಿತ ಮತ್ತು ಕರ್ನಾಟಕ ಭೂಸೇನಾ ನಿಗಮ ನಿಯಮಿತ ಎರಡೂ ಹೆಚ್ಚು ಕಡಿಮೆ ಒಂದೇ ತೆರನಾದ ಕೆಲಸದಲ್ಲಿ ತೊಡಗಿರುವುದರಿಂದ ಇವೆರಡನ್ನೂ ಒಟ್ಟುಗೂಡಿಸಿ ಮೇಲಾಡಳಿತ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದೆಂಬ ಸಲಹೆ ಇದ್ದರೂ ಈ ದಿಕ್ಕಿನಲ್ಲಿ ಯಾವ ಪ್ರಯತ್ನವೂ ನಡೆದಿಲ್ಲ.

ತಯಾರಿಕಾ ಉದ್ಯಮಗಳ ವರ್ಗ ಒಟ್ಟು ೨೯ ಉದ್ಯಮಗಳನ್ನು ಒಳಗೊಂಡಿದೆ (ಅನುಬಂಧ ೨). ಈ ಬಗೆಯ ಉದ್ಯಮಗಳಿಂದ ಸಾಕಷ್ಟು ಲಾಭ ನಿರೀಕ್ಷಿಸುವುದು ಸಹಜ. ಇವುಗಳ ಪೈಕಿ ೧೯೯೧-೯೨ರಲ್ಲಿ ೧೩ ಉದ್ಯಮಗಳು ಹಾಗೂ ೧೯೯೨-೯೩ ಮತ್ತು ೧೯೯೩-೯೪ ಎರಡು ವರ್ಷಗಳಲ್ಲೂ ೧೬ ಉದ್ಯಮಗಳು ನಷ್ಟ ಅನುಭವಿಸಿದವು. ಈ ವರ್ಗದ ನಷ್ಟ ೧೯೯೧-೯೨ರಲ್ಲಿ ೪೬.೯೭ ಲಕ್ಷ ರೂಪಾಯಿಗಳಿದ್ದದ್ದು ೧೯೯೨-೯೩ರಲ್ಲಿ ೩೨೯೭.೨೧ ಲಕ್ಷ ರೂಪಾಯಿಗಳಿಗೆ ಹೆಚ್ಚಿತು ಮತ್ತು ೧೯೯೩-೯೪ರಲ್ಲಿ ೧೫೫೭.೨೫ ಲಕ್ಷ ರೂಪಾಯಿಗಳಿಗೆ ಇಳಿಯಿತು.

ಮಾರುಕಟ್ಟೆ ಮತ್ತು ಜಾಹೀರಾತು ಉದ್ಯಮಗಳ ವರ್ಗದಲ್ಲಿ ೬ ಉದ್ಯಮಗಳಿವೆ (ಅನುಬಂಧ ೨). ಇವುಗಳಲ್ಲಿ ಬಹುತೇಕ ಉದ್ಯಮಗಳ ಲಾಭ ಗಳಿಸುತ್ತಿವೆ. ೧೯೯೨-೯೩ ಮತ್ತು ೧೯೯೩-೯೪ ಎರಡು ವರ್ಷಗಳಲ್ಲೂ ಕರ್ನಾಟಕ ಮಾಂಸ ಮತ್ತು ಕೋಳಿ ಮಾರಾಟ ನಿಗಮ ನಿಯಮಿತ ಮತ್ತು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗಳು ನಷ್ಟ ಅನುಭವಿಸಿವೆ. ಈ ವರ್ಘ ಒಟ್ಟಾರೆಯಾಗಿ ೧೯೯೧-೯೨ರಲ್ಲಿ ೧೪೮.೦೫ ಲಕ್ಷ ರೂಪಾಯಿ ಲಾಭ ಗಳಿಸಿತು, ೧೯೯೨-೯೩ರಲ್ಲಿ ೨೯೫.೪೫ ಲಕ್ಷ ರೂಪಾಯಿ ನಷ್ಟ ಅನುಭವಿಸಿತು ಮತ್ತು ೧೯೯೩-೯೪ರಲ್ಲಿ ೧೪೪.೬೫ ಲಕ್ಷ ರೂಪಾಯಿ ಲಾಭಗಳಿಸಿತು.

ಎಲ್ಲಾ ೭ ವರ್ಗಗಳ ಉದ್ಯಮಗಳು ಸೇರಿ ೧೯೮೭-೮೮, ೧೯೯೩-೯೪ರ ಅವಧಿಯಲ್ಲಿ ಪಡೆದ ಲಾಭ: ನಷ್ಟವನ್ನು ಕೋಷ್ಟಕ ೨ ರಲ್ಲಿ ಕೊಡಲಾಗಿದೆ.

ಅಂಶಗಳನ್ನು ಮಾತ್ರ ಪರಿಗಣಿಸಬಹುದು. ಮೊದಲನೆಯದಾಗಿ, ಸಂಖ್ಯಾಬಾಹುಳ್ಯದಿಂದ ಮತ್ತು ಅಗತ್ಯಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವುದರಿಂದ ಮತ್ತು ಪ್ರತಿಯೊಂದು ಉದ್ಯಮವೂ, ಅದರ ಕಾರ್ಯಚಟುವಟಿಕೆ ಏನೇ ಇದ್ದರೂ, ಒಬ್ಬ ಅಧ್ಯಕ್ಷ, ಒಬ್ಬ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಇತರೆ ನಿರ್ದಿಷ್ಟ ಸಿಬ್ಬಂದಿ  ವರ್ಗವಿರಬೇಕೆಂಬ ವ್ಯವಸ್ಥೆ ಇರುವುದರಿಂದ ಮೇಲಾಡಳಿತ ವೆಚ್ಚ ಅಧಿಕವಾಗಿ ಲಾಭಗಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. (ತಿಮ್ಮಯ್ಯ ಜಿ.೧೯೮೯). ಎರಡನೆಯದಾಗಿ, ಸಾರ್ವಜನಿಕ ಉದ್ಯಮಗಳ ಸರಕು ಮತ್ತು ಸೇವೆಗಳಿಗೆ ಬೆಲೆ ನಿರ್ಧರಿಸುವಾಗ ಕೇವಲ ವಾಣಿಜ್ಯ ನಿಯಮಗಳನ್ನು ಅನುಸರಿಸುತ್ತಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಬ್ಸಿಡಿ ಅಂಶ ಬೆಲೆಯಲ್ಲಿ ಸೇರಿಕೊಳ್ಳುವಂತೆ ಮಾಡಲಾಗಿರುತ್ತದೆ. ವಿದ್ಯುಚ್ಛಕ್ತಿ ದರದಲ್ಲಿ ವ್ಯವಸಾಯದ ಉದ್ದೇಶಕ್ಕೆ ರಿಯಾಯಿತಿ ಕೊಡುವುದು, ರಸ್ತೆ ಸಾರಿಗೆ ಸಂಸ್ಥೆ ಸಾರಿಗೆ ದರದಲ್ಲಿ ಕೆಲವು ಮಾರ್ಗಗಳಿಗೆ ರಿಯಾಯಿತಿ ಕೊಡುವುದು ಮುಂತಾದವನ್ನು ಉದಾಹರಣೆಗಳಾಗಿ ಕೊಡಬಹುದು. ಮೂರನೆಯದಾಗಿ, ಸಾರ್ವಜನಿಕ ಉದ್ಯಮಗಳನ್ನು ನಿರ್ವಹಿಸುವುದಕ್ಕಾಗಿ ಉನ್ನತ ಹುದ್ದೆಗಳಿಗೆ ಸಾಮಾನ್ಯವಾಗಿ ನಿರ್ವಹಣಾ ತಜ್ಞರಿಗೆ ಬದಲು ಭಾರತ ಆಡಳಿತ ಸೇವೆ ಅಧಿಕಾರಿಗಳನ್ನು ನೇಮಿಸುವುದರಿಂದ ಕಾರ್ಯನಿರ್ವಹಣೆ ಸರಿಯಾಗಿ ಆಗುತ್ತಿಲ್ಲವೆಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುವುದುಂಟು. ಇದಕ್ಕೆ ಸಾಕಷ್ಟು ಪುರಾವೆ ಇದ್ದ ಹಾಗಿಲ್ಲ. ಆದರೆ ಅವರ ಕಾರ್ಯಾವಧಿ ಬಹಳ ಕಡಿಮೆಯಿದ್ದು ಒಳ್ಳೆಯ ಫಲಿತಾಂಶ ಕೊಡಲು ಸಾಧ್ಯವಾಗುತ್ತಿಲ್ಲವೆಂಬುದರಲ್ಲಿ ಸತ್ಯಾಂಶವಿದೆ. ನಾಲ್ಕನೆಯದಾಗಿ, ಒಂದು ಉದ್ಯಮದ ದೈನಂದಿನ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಮತ್ತು ಅಧಿಕಾರಿಗಳಿಗೆ ಅಗತ್ಯವಿರುವಷ್ಟು ಸ್ವಾತಂತ್ಯ್ರವಿಲ್ಲದಿರುವುದು ಕಾರ್ಯನಿರ್ವಹಣೆ ಸರಿಯಾಗಿ ಆಗಲು ಅಡ್ಡಿಯನ್ನುಂಟುಮಾಡುತ್ತಿದೆ. ಕಡೆಯದಾಗಿ, ಫಲಿತಾಂಶದ ಬಗ್ಗೆ ಹೊಣೆಗಾರಿಕೆ ಯಾರ ಮೇಲೆಯೂ ಬೀಳದಿರುವುದೂ ಸಹ ಅದಕ್ಷತೆ ಹೆಚ್ಚಲು ಕಾರಣವಾಗಿದೆ. ಸ್ವಾತಂತ್ಯ್ರ ಮತ್ತು ಹೊಣೆಗಾರಿಕೆ ಎರಡನ್ನೂ ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದೆ ಒಳ್ಳೆಯ ಫಲಿತಾಂಶ ನಿರೀಕ್ಷೆ ಮಾಡಲಾಗುವುದಿಲ್ಲ.

ಭವಿಷ್ಯ ಸ್ಥಿತಿ

ಸಾರ್ವಜನಿಕ ಉದ್ಯಮಗಳು ಒಂದೇ ಸಮನೆ ನಷ್ಟಕ್ಕೊಳಗಾಗುತ್ತಿರುವುದರಿಂದ ಅವು ಸರ್ಕಾರಕ್ಕೆ ಹೊರೆಯಾಗಿರುವುದು ಮೇಲಿನ ವಿಶ್ಲೇಷಣೆಯಿಂದ ಸ್ಪಷ್ಟಗೊಂಡಿದೆ. ಸರ್ಕಾರದ ಹಣಕಾಸಿನ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮವನ್ನು ತಪ್ಪಿಸುವ ದೃಷ್ಟಿಯಿಂದ ಸಾರ್ವಜನಿಕ ಉದ್ಯಮಗಳ ಸುಧಾರಣೆ ಅಗತ್ಯವಾಗಿ ಆಗಬೇಕಾಗಿದೆ. ರಾಜ್ಯಮಟ್ಟದಲ್ಲಿ ಆಗಬೇಕಾದ ಆರ್ಥಿಕ ಸುಧಾರಣೆಗಳ ಪೈಕಿ ಸಾರ್ವಜನಿಕ ಉದ್ಯಮಗಳ ಸುಧಾರಣೆ ಬಹುಮುಖ್ಯವಾದುದು. ಸರ್ಕಾರ ಇದನ್ನು ಒಪ್ಪಿದೆ. ಸಾರ್ವಜನಿಕ ಉದ್ಯಮಗಳ ೧೯೯೩-೯೪ರ ಸಮೀಕ್ಷೆ ಹೇಳುವಂತೆ, “ಕೆಲವು ಸಾರ್ವಜನಿಕ ಉದ್ದಿಮೆಗಳ ಆರ್ಥಿಕ ಸಾಮರ್ಥ್ಯದ ಬಗ್ಗೆ ಮತ್ತು ಸರ್ಕಾರದ ಬಂಡವಾಳ ಹೂಡಿಕೆಗೆ ಪ್ರತಿಯಾಗಿ ಸಿಗುತ್ತಿರುವ ಪ್ರತಿಫಲದ ಬಗ್ಗೆಯೂ ಸರ್ಕಾರವು ತೀವ್ರತರವಾಗಿ ಕಳಕಳಿಯನ್ನು ಹೊಂದಿದೆ. ಸತತವಾಗಿ ನಷ್ಟ ಅನುಭವಿಸುತ್ತಿರುವ ರಾಜ್ಯ ಸರ್ಕಾರಿ ವಲಯದ ಉದ್ಯಮಗಳ ಬಗ್ಗೆ, ಇನ್ನೊಂದು ಉದ್ಯಮದೊಂದಿಗೆ ವಿಲೀನಗೊಳಿಸುವುದು ಅಥವಾ ಮುಚ್ಚುವುದು ಅಥವಾ ಖಾಸಗೀಕರಣಗೊಳಿಸುವುದು ಸರ್ಕಾರದ  ತೀವ್ರ ಪರಿಶೀಲನೆಯಲ್ಲಿದೆ” (ಕೆ.ಎಸ್.ಬಿ.ಪಿ.ಇ. ೧೯೯೫). ಆರ್ಥಿಕ ಸುಧಾರಣೆ ಪ್ರಾರಂಭವಾಗಿ ನಾಲ್ಕು ವರ್ಷಗಳು ಕಳೆದಿದ್ದರೂ ಸಾರ್ವಜನಿಕ ಉದ್ಯಮಗಳನ್ನು ಸುಧಾರಿಸುವುದು ಇನ್ನೂ ಪರಿಶೀಲನೆಯಲ್ಲೇ ಇರುವುದು ವಿಷಾದನೀಯ. ಸಂಕಲ್ಪದ ಕೊರತೆಯಿಂದಾಗಿ ಇದುವರೆಗೆ ದಿಟ್ಟ ಕ್ರಮ ಯಾವುದನ್ನೂ ತೆಗೆದುಕೊಂಡಿಲ್ಲ.

ಆದ್ಯಂತವಾದ ಅಧ್ಯಯನದ ನಂತರ ಯಾವ ಉದ್ಯಮಗಳನ್ನು ಸಾರ್ವತ್ರಿಕ ವಲಯದಲ್ಲೇ ಉಳಿಸಿಕೊಂಡು ಬೆಳೆಸಬೇಕು, ಯಾವ ಉದ್ಯಮಗಳನ್ನು ಇತರ ಉದ್ಯಮಗಳೊಂದಿಗೆ ವಿಲೀನ ಗೊಳಿಸಬೇಕು ಮತ್ತು ಯಾವ ಉದ್ಯಮಗಳನ್ನು ಮುಚ್ಚಬೇಕು ಅಥವಾ ಖಾಸಗೀಕರಣಗೊಳಿಸಬೇಕು ಎಂಬುದರ ಬಗ್ಗೆ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು. ಲಾಭದಾಯಕವಾಗಿ ಕೆಲಸ ಮಾಡುತ್ತಿರುವ ಮತ್ತು ಸಾರ್ವಜನಿಕ ವಲಯದ ಉದ್ದೇಶಕ್ಕೆ ನಿಜವಾಗಿಯೂ ಅನುಗುಣವಾಗಿರುವ ಉದ್ಯಮಗಳನ್ನು ಹಾಗೆಯೇ ಉಳಿಸಿಕೊಂಡು ಅವುಗಳ ದಕ್ಷತೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಅಸಮರ್ಪಕ ಫಲಿತಾಂಶಕ್ಕೆ ಕಾರಣವಾಗಿರುವ ಕೊರತೆಗಳ ಬಗ್ಗೆ ಈಗಾಗಲೇ ತಿಳುವಳಿಕೆ ಇರುವುದರಿಂದ, ಆ ಕೊರತೆಗಳನ್ನು ನೀಗಿಸಿ ಉತ್ತಮ ಫಲಿತಾಂಶ ಪಡೆಯಲು ತೀವ್ರ ಪ್ರಯತ್ನ ನಡೆಯಬೇಕು.

ಹೆಚ್ಚು ಕಡಿಮೆ ಒಂದೇ ತೆರನಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಈ ಕಾರಣದಿಂದಾಗಿ ಒಂದು ಉದ್ಯಮ ಮತ್ತೊಂದರ ಪ್ರತಿರೂಪ ಆಗಿರುವ ಸಂದರ್ಭಗಳಲ್ಲಿ ಅವನ್ನು ವಿಲೀನಗೊಳಿಸಿ ಉದ್ಯಮಗಳ ಸಂಖ್ಯೆಯನ್ನು ಕಡಿಮೆಗೊಳಿಸಿದರೆ ಮೇಲಾಡಳಿತ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಉದ್ಯಮಗಳು ಲಾಭದಾಯಕವಾಗಿ ನಡೆಯುವಂತೆ ಮಾಡಬಹುದು. ಉದಾಹರಣೆಗೆ, ಕರ್ನಾಟಕ ನಿರ್ಮಾಣ-  ನಿಗಮ ಮತ್ತು ಕರ್ನಾಟಕ ಭೂಸೇನಾ ನಿಗಮಗಳನ್ನು ವಿಲೀನಗೊಳಿಸಬಹುದು.

ಕೆಲವು ಸಾರ್ವಜನಿಕ ಉದ್ಯಮಗಳನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಬಹುದು; ಅಂದರೆ ಖಾಸಗಿಯವರಿಗೆ ಮಾರಾಟಮಾಡಬಹುದು. ಕೆಲವು ಉದ್ಯಮಗಳ ಷೇರುಗಳನ್ನು ಖಾಸಗಿಯವರಿಗೆ ಮಾರಾಟಮಾಡಿ ಖಾಸಗಿ  ಪಾತ್ರವನ್ನು ಹೆಚ್ಚಿಸಿ ತನ್ಮೂಲಕ ದಕ್ಷತೆಯನ್ನು ಉತ್ತಮ ಪಡಿಸಬಹುದು. ಸತತವಾಗಿ ನಷ್ಟದಲ್ಲಿರುವ ಕರ್ನಾಟಕ ಸೋಪ್ಸ್  ಮತ್ತು ಡಿಟರ್ಜೆಂಟ್ಸ್ ನಿಯಮಿತದಂತಹ ಉದ್ಯಮ ಇನ್ನೂ ಸಾರ್ವಜನಿಕ ವಲಯದಲ್ಲಿರುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ೧೯೧೭ರಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಪ್ರಾರಂಭಿಸಿದುದು ಸೋಪು ತಯಾರಿಕೆಯ ಸಾಧ್ಯತೆಯನ್ನು ಖಾಸಗಿಯವರಿಗೆ ತೋರಿಸಿಕೊಡುವ ಸಲುವಾಗಿ. ಈ ಕಾರ್ಯ ಯಶಸ್ವಿಯಾಗಿ ಆಯಿತಷ್ಟೇ ಅಲ್ಲದೆ ಈ ಉದ್ಯಮ ಅನೇಕ ವರ್ಷಗಳ ಕಾಲ ಲಾಭದಾಯಕವಾಗಿಯೇ ಕೆಲಸ ಮಾಡುತ್ತಿತ್ತು. ಮೂಲ ಉದ್ದೇಶ ಈಡೇರಿದ ಮೇಲೆ ೧೯೪೦ ರಷ್ಟು ಹಿಂದೆಯೇ ಸಾಬೂನು ಕಾರ್ಖಾನೆಯನ್ನು ಈಡೇರಿದ ಮೇಲೆ ೧೯೪೦ ರಷ್ಟು ಹಿಂದೆಯೇ ಸಾಬೂನು ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ಉದ್ದೇಶವಿತ್ತೆಂದು ಹೇಳಲಾಗಿದೆ. ೧೯೪೦ (ಬಾಲಕೃಷ್ಣ. ಆರ್. ೧೯೪೦). ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ನಿಯಮಿತವನ್ನು ಖಾಸಗೀಕರಣ ಮಾಡುವುದು ಸಮರ್ಥನೀಯ.

ಯಾವ ಉದ್ಯಮಗಳನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆ ಕಡಿಮೆ ಇದೆಯೋ ಅಂತಹವನ್ನು ಮುಚ್ಚಲೂ ಸರ್ಕಾರ ಹಿಂದೆಗೆಯಬಾರದು. ಆದರೆ ಉದ್ಯೋಗಿಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ಹಿತವನ್ನು ರಕ್ಷಿಸಬೇಕಾಗುತ್ತದೆ. ಉದಾರ ನಿವೃತ್ತಿ ವೇತನ ಅಥವಾ ಮರುತರಬೇತಿಯ ನಂತರ ಇತರ ಉದ್ಯಮಗಳಲ್ಲಿ ನೇಮಕ ಮಾಡಿಕೊಳ್ಳುವುದು ಮುಂತಾದ ಕ್ರಮಗಳ ಮುಖಾಂತರ ಅವರ ಹಿತರಕ್ಷಣೆ ಮಾಡಬೇಕಾಗುತ್ತದೆ.

ಉಪಸಂಹಾರ

ಕರ್ನಾಟಕದಲ್ಲಿ ಸಾರ್ವಜನಿಕ ಉದ್ಯಮಗಳ ಸಂಖ್ಯೆ ಆಗಾಧವಾಗಿ ಬೆಳೆದಿದೆ. ಸಂಖ್ಯಾಭಿವೃದ್ಧಿಯ ಜೊತೆಯಲ್ಲಿ ಅದಕ್ಷತೆಯೂ ಹೆಚ್ಚಿದೆ. ಬಹುತೇಕ ಉದ್ಯಮಗಳು ನಷ್ಟವನ್ನುನುಭವಿಸುತ್ತಿರುವುದರಿಂದ ಸರ್ಕಾರಕ್ಕೆ ಹೊರೆಯಾಗಿವೆ. ಸಂಚಿತ ನಷ್ಟ ಸ್ಥೈರ್ಯಗೆಡಿಸುವ ಮಟ್ಟ ತಲುಪಿದೆ. ಸರ್ಕಾರದ ಹಣಕಾಸು ಪರಿಸ್ಥಿತಿ ಸುಧಾರಿಸಬೇಕಾದರೆ ಸಾರ್ವಜನಿಕ ಉದ್ಯಮಗಳ ಸುಧಾರಣೆ ಅಗತ್ಯವಾಗಿ ಆಗಬೇಕು. ಹಿಂದೆ ಯಾವುದೋ ಸನ್ನಿವೇಶದಲ್ಲಿ ಸಾರ್ವಜನಿಕ ವಲಯದಲ್ಲಿ ಸ್ಥಾಪಿತವಾದ ಉದ್ಯಮಗಳ ಇಂದಿನ ಸನ್ನಿವೇಶದಲ್ಲಿ ಸಾರ್ವಜನಿಕ ವಲಯದಲ್ಲೇ ಮುಂದುವರಿಯಬೇಕಾದ ಅಗತ್ಯವಿಲ್ಲ. ಆದ್ದರಿಂದ ಸಾರ್ವಜನಿಕ ಉದ್ಯಮಗಳ ಪಾತ್ರದ ಬಗ್ಗೆ ಪುನರ್‌ಶೀಲನೆ ಅಗತ್ಯ. ಅಮೂಲಾಗ್ರ ಪರಿಶೀಲನೆಯ ನಂತರ ಯಾವ ಉದ್ಯಮಗಳನ್ನು ಸಾರ್ವಜನಿಕ ವಲಯದಲ್ಲೇ ಉಳಿಸಿಕೊಂಡು ಬೆಳೆಸಬೇಕು, ಯಾವುದನ್ನು ಮುಚ್ಚಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡು ಸಾರ್ವಜನಿಕ ವಲಯದ ಸುಧಾರಣೆಗೆ ಶೀಘ್ರಕ್ರಮ ಕೈಗೊಳ್ಳದಿದ್ದರೆ ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆ. ಇದಕ್ಕೆ ಬೇಕಾದ ರಾಜಕೀಯ ಸಂಕಲ್ಪವನ್ನು ರೂಢಿಸಿಕೊಂಡು ಸರ್ಕಾರ ಕಾರ್ಯಪ್ರವೃತ್ತವಾಗುವುದು ಅನಿವಾರ್ಯ.

ಅನುಬಂಧ – ೧
ಕರ್ನಾಟಕದ ಸಾರ್ವಜನಿಕ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ

ವರ್ಷ ಒಟ್ಟು ಬಂಡವಾಳ ಹೂಡಿಕೆ (ಷೇರು ಬಂಡವಾಳ ಮತ್ತು ಸಾಲಗಳು) (ಕೋಟಿ ರೂ.ಗಳಲ್ಲಿ) ಹಿಂದಿನ ವರ್ಷಕ್ಕಿಂತ ಶೇಕಡಾ ವಾರು ಹೆಚ್ಚಳ ಕರ್ನಾಟಕ ಸರ್ಕಾರದ ಪಾಲು (ರಾಜ್ಯ ಸರ್ಕಾರದ ಇತರೆ ಉದ್ಯಮಗಳು ಸೇರಿದಂತೆ) (ಕೋಟಿ ರೂ.ಗಳಲ್ಲಿ) ಹಿಂದಿನ ವರ್ಷಕ್ಕಿಂತ ಶೇಕಡ ವಾರು ಹೆಚ್ಚಳ
೧೯೮೦-೮೧ ೧೪೧೫.೭೭   ೭೭೬.೯೩  
೧೯೮೧-೮೨ ೧೫೪೦.೭೫ ೮.೮೨ ೮೪೯.೩೨ ೯.೩೨
೧೯೮೨-೮೩ ೧೯೦೯.೦೫ ೨೩.೯೦ ೧೦೪೦.೯೯ ೨೨.೫೭
೧೯೮೩-೮೪ ೨೧೩೬.೯೧ ೧೪.೬೫ ೧೩೫೪.೫೭ ೧೬.೯೮
೧೯೮೫-೮೬ ೨೮೨೦.೭೯ ೧೫.೧೩ ೧೪೮೯೩೪ ೯.೯೪
೧೯೮೬-೮೭ ೩೨೬೩.೧೫ ೧೫.೬೮ ೧೬೯೬.೧೦ ೧೩.೮೮
೧೯೮೭-೮೮ ೩೮೨೧.೦೨ ೧೭.೦೯ ೧೯೨೩.೪೮ ೧೩.೪೦
೧೯೮೮-೮೯ ೩೯೭೬.೫೭ ೪.೦೭ ೨೧೧೭.೦೯ ೧೦.೦೬
೧೯೮೯-೯೦ ೪೨೫೫.೬೦ ೭.೦೨ ೨೧೭೯.೫೬ ೨.೯೫
೧೯೯೧-೯೨ ೫೧೭೦.೦೨ ೧೪.೦೦ ೨೫೭೧.೨೭ ೧೦.೨೮
೧೯೯೨-೯೩ ೫೯೬೩.೮೦ ೧೫.೩೫ ೩೦೪೯.೫೮ ೧೮.೬೦
೧೯೯೩-೯೪ ೬೯೪೮.೬೩ ೧೬.೫೧ ೩೩೩೮.೭೧ ೯.೪೮

ಆಧಾರ : ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಮಹೋದ್ಯಮ, ಸಾರ್ವಜನಿಕ ಉದ್ಯಮಗಳ ಸಮೀಕ್ಷೆ ೧೯೯೩-೯೪, ಪು. ೩.

ಅನುಬಂಧ – ೨
ಕರ್ನಾಟಕದ ಸಾರ್ವಜನಿಕ ಉದ್ಯಮಗಳು (೩೧-೩-೯೪ರಲ್ಲಿ ಇದ್ದಂತೆ)

೧. ಸಾರ್ವಜನಿಕ ಉಪಯುಕ್ತತೆಯ ಉದ್ಯಮಗಳು

೧. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ

೨. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

೩. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ

೨. ಹಣಕಾಸು ಸಂಸ್ಥೆಗಳು

೪. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

೫. ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ ನಿಯಮಿತ

೩. ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯೇತರ)

೬.  ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ನಿಯಮಿತ

೭. ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

೮. ಕರ್ನಾಟಕ ರಾಜ್ಯ ಪೋಲೀಸ್ ಗೃಹನಿರ್ಮಾನ ನಿಗಮ ನಿಯಮಿತ

೯. ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

೧೦. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ನಿಯಮಿತ

೪. ಅಭಿವೃದ್ಧಿಶೀಲ ಉದ್ಯಮಗಳು (ವಾಣಿಜ್ಯ)

೧೧. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ

೧೨. ಕರ್ನಾಟಕ ಅಗ್ರೋ ಇಂಡಸ್ಟ್ರೀಸ್ ಕಾರ್ಪೇರೇಷನ್ ನಿಯಮಿತ

೧೩. ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ

೧೪. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ

೧೫. ಕರ್ನಾಟಕ ಅರಣ್ಯಾಭಿವೃದ್ಧಿ ನಿಗಮ ನಿಯಮಿತ

೧೬. ಕರ್ನಾಟಕ ಕಾಂಪೋಸ್ಟ್ ಗೊಬ್ಬರ ಅಭಿವೃದ್ಧಿ ನಿಗಮ ನಿಯಮಿತ

೧೭. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ

೧೮. ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ

೧೯. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ

೨೦. ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ ನಿಯಮಿತ

೨೧. ಕರ್ನಾಟಕ ಒಳನಾಡು ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ

೨೨. ಕರ್ನಾಟಕ ರಾಜ್ಯ ತೆಂಗಿನನಾರು ಅಭಿವೃದ್ಧಿ ನಿಗಮ ನಿಯಮಿತ

೫. ಸೇವಾ ಉದ್ಯಮಗಳು

೨೩. ಕರ್ನಾಟಕ ಗೃಹ ಮಂಡಳಿ

೨೪. ಕರ್ನಾಟಕ ರಾಜ್ಯ ಉಗ್ರಾಣ ನಿಗಮ

೨೫. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

೨೬. ಶ್ರೀ ಕಂಠೀರವ ಸ್ಟುಡಿಯೋಸ್ ನಿಯಮಿತ

೨೭. ಕರ್ನಾಟಕ ರಾಜ್ಯ ನಿರ್ಮಾಣ ನಿಗಮ  ನಿಯಮಿತ

೨೮. ಕರ್ನಾಟಕ ನಗರಾಭಿವೃದ್ಧಿ ಕಾರ್ಪೋರೇಷನ್

೨೯. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ

೩೦. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

೩೧. ಕರ್ನಾಟಕ ಭೂಸೇನಾ ನಿಗಮ ನಿಯಮಿತ

೩೨. ಅರಣ್ಯ ವಸತಿ ಗೃಹಗಳು ಮತ್ತು ವಿಹಾರಧಾಮಗಳು ನಿಯಮಿತ

೩೩. ಡಿ. ದೇವರಾಜ್ ಅರಸ್ ಟ್ರಸ್ಟ್ ಟರ್ಮಿನಲ್ಸ್ ನಿಯಮಿತ

೩೪. ಕೃಷ್ಣ ಏತ ನೀರಾವರಿ ನಿಗಮ

೩೫. ಕಾವೇರಿ ಏತ ನೀರಾವರಿ ನಿಗಮ

೬. ತಯಾರಿಕಾ ಉದ್ಯಮಗಳು

೩೬. ಮೈಸೂರು ಸಕ್ಕರೆ ಕಂಪನಿ ನಿಯಮಿತ

೩೭. ಮೈಸೂರು ಕಾಗದದ ಕಾರ್ಖಾನೆ ನಿಯಮಿತ

೩೮. ಮೈಸೂರು ಲ್ಯಾಂಪ್ ವರ್ಕ್ಸ್‌ ನಿಯಮಿತ

೩೯. ಮೈಸೂರು ತಂಬಾಕು ಕಂಪನಿ ನಿಯಮಿತ

೪೦. ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತ

೪೧. ಮೈಸೂರು ಮ್ಯಾಚ್ ಕಂಪನಿ ನಿಯಮಿತ

೪೨. ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ನಿಯಮಿತ

೪೩.  ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಯಮಿತ

೪೪. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ

೪೫. ಎನ್.ಜಿ.ಇ.ಎಫ್. ನಿಯಮಿತ

೪೬. ಮೈಸೂರು ಅಸಿಟೇಟ್ ಮತ್ತಿ ಕೆಮಿಕಲ್ಸ್ ಕಂಪನಿ ನಿಯಮಿತ

೪೭. ಮೈಸೂರು ಮಿನರಲ್ಸ್ ನಿಯಮಿತ

೪೮. ಮೈಸೂರು ಕಾಸ್ಮಿಟಿಕ್ಸ್ ನಿಯಮಿತ

೪೯. ಕರ್ನಾಟಕ ರಾಜ್ಯ ಆಗ್ರೋ ಪ್ರಾಡಕ್ಟ್ಸ ನಿಯಮಿತ

೫೦. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ

೫೧. ಕರ್ನಾಟಕ ರಾಜ್ಯ ಪೆನೀರ್ಸ್ ನಿಯಮಿತ

೫೨. ಚಾಮುಂಡಿ ಮೇಷೀನ್ ಟೂಲ್ಸ್ ನಿಯಮಿತ

೫೩. ಕರ್ನಾಟಕ ಇಂಪ್ಲಿಮೆಂಟ್ ಮತ್ತು ಮಿಷನರೀಷ್ ಕಂಪನಿ ನಿಯಮಿತ

೫೪. ಕರ್ನಾಟಕ ಆಗ್ರೋ ಪ್ರೋಟೀನ್ಸ್ ನಿಯಮಿತ

೫೫. ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ

೫೬. ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ನಿಯಮಿತ

೫೭. ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ನಿಯಮಿತ

೫೮. ಕರ್ನಾಟಕ ಮಿಲ್ಕ್ ಪ್ರಾಡಕ್ಟ್ಸ ನಿಯಮಿತ

೫೯. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ

೬೦. ಕರ್ನಾಟಕ ರಾಜ್ಯ ಟೆಕ್ಸ್‌ಟೈಲ್ಸ್ ನಿಯಮಿತ

೬೧. ಕರ್ನಾಟಕ ಟೆಲಿಕಾಂ ನಿಯಮಿತ

೬೧. ಕರ್ನಾಟಕ ಟೆಲಿಕಾಂ ನಿಯಮಿತ

೬೨. ಕರ್ನಾಟಕ ಪಲ್ಸ್‌ಪುಡ್ ನಿಯಮಿತ

೬೩. ಕರ್ನಾಟಕ ಟಂಗ್‌ಸ್ಟನ್ ಮೋಲಿ ನಿಯಮಿತ

೬೪. ಎನ್.ಜಿ.ಇ.ಎಫ್. (ಹುಬ್ಬಳ್ಳಿ) ನಿಯಮಿತ

೭. ಮಾರುಕಟ್ಟೆ ಮತ್ತು ಜಾಹೀರಾತು ಉದ್ಯಮಗಳು

೬೫. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ನಿಯಮಿತ

೬೬. ಮಾರ್ಕೆಟಿಂಗ್ ಕನ್ಸ್‌ಟಲಟೆಂಟ್ಸ್ ಅಂಡ್ ಎಜೆನ್ಸೀಸ್ ನಿಯಮಿತ

೬೭. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ

೬೮. ಕರ್ನಾಟಕ ಮಾಂಸ ಮತ್ತು ಕೋಳಿ ಮಾರಾಟ ನಿಗಮ ನಿಯಮಿತ

೬೯. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ

೭೦. ಕರ್ನಾಟಕ ಸಣ್ಣ ಕೈಗಾರಿಕಾ ಮಾರುಕಟ್ಟೆ ನಿಗಮ ನಿಯಮಿತ

ಉಲ್ಲೇಖಗಳು

Balakrishna R. (1940) Industrial Development of Mysore, Bangalore Press, Bangalore.
Hettne.B(1978) The Political Economy of Indirect Rule, Ambika Publications, New Delhi.
lssar. T.P (1984) Public Sector undertakings of Karnataka – A Report Karnataka State Bureau of Public Enterprises.
Jalan, Bimal (1992) The Indian Economy: Problems and Prospects, Viking.
Karanatak State Bureau Public Enterprises (1995) Thimmaiah, G. (1989) Public Enterprises Survey 1993-94″State Government Public Enter-prises in Karnataka: A Macro Perspective, in (Ed) Abdul Aziz Management Problems of State Public Undertakings, Printwell Pub-lishers, Jaipur.