ಆರ್ಥಿಕ ಅಭಿವೃದ್ಧಿಯು ಔದ್ಯಮೀಕರಣದ ಜೊತೆಗೆ ಹೋಗುವುದು ಸಾಮಾನ್ಯವಾದ ಸಂಗತಿ. ಕೃಷಿಯಲ್ಲಿನ ಅಭಿವೃದ್ಧಿಯೂ ಸಹ ಔದ್ಯಮೀಕರಣದಿಂದ ಮುಂದೆ ಹೋಗುವುದು ಕಂಡು ಬರುತ್ತದೆ. ಇದಕ್ಕೆ ಕರ್ನಾಟಕ ಅಪವಾದವಾಗಿಲ್ಲ. ಬಟ್ಟೆಬರೆ (Textilles)ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ರಾಸಾಯನಿಕ ಗೊಬ್ಬರ ಇವೇ ಮುಂತಾದ ಅನೇಕಾನೇಕ  ಉದ್ಯಮಗಳು ಇಲ್ಲಿ ಸ್ಥಾಪಿತವಾದ ದಶಕಗಳೇ ಸಂದಿವೆ. ಈ ಉದ್ಯಮಗಳಿಂದ ರಾಷ್ಟ್ರೀಯ ಉತ್ಪನ್ನ ಮತ್ತು ಉದ್ಯೋಗಾವಕಾಶಗಳು ಸಿಗುತ್ತವೆಯೇನೋ ನಿಜ. ಆದರೆ ಇವುಗಳಿಂದ ಆಗುವ ದುಷ್ಪರಿಣಾಮಗಳನ್ನು ನಾವು ನಿಯಂತ್ರಿಸಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದ ದುಷ್ಟರಿಣಾಮ ಪರಿಸರದ ಮಾಲಿನ್ಯ.

ಪರಿಸರದ ಮಾಲಿನ್ಯವನ್ನು ನಿಯಂತ್ರಿಸುವುದು ನಾವು ಪ್ರಕೃತಿಯನ್ನು ಸುಂದರವಾಗಿಡಲಷ್ಟೇ ಅಲ್ಲ. ನೀರು, ಗಾಳಿ, ನೆಲ ಇವೇ ಮೊದಲಾದವುಗಳಿಂದ ಒಡಗೂಡಿದ ಪರಿಸರದಲ್ಲಿ ನಾವು ಔದ್ಯಮೀಕರಣದ ಮೂಲಕ ವಿಷವಸ್ತುಗಳನ್ನು ಬಿಡುತ್ತೇವೆ. ಇದರ ಬೆಲೆಯನ್ನು ತೆತ್ತುವ, ಪರಿಣಾಮಗಳನ್ನು ಅನುಭವಿಸುವ ಭಾರ ಉದ್ಯಮಗಳ ಮಾಲೀಕರ ಮೇಲೆ ಬೀಳದೆ ಸಾಮಾನ್ಯ ಜನರ ಮೇಲೆ ಬೀಳುತ್ತದೆ. ಅವರ ಆರೋಗ್ಯ ಹಾಳಾಗುತ್ತದೆ, ಕ್ಯಾನಸರ್ ರೋಗದ ಪ್ರಮಾಣ ಹೆಚ್ಚುತ್ತದೆ, ದನಕರುಗಳ ಆರೋಗ್ಯ ಹಾಳಾಗಿ ಅವುಗಳಿಂದ ಬರುವ ಉತ್ಪಾದನೆ ಕುಂಠಿತವಾಗುತ್ತದೆ. ಮೀನುಗಳ ಸಮೂಹಕ್ಕೆ ಸಮೂಹಗಳೇ ನಾಶವಾಗಿ ಅವುಗಳ ಮೇಲೆ ಜೀವಿಸುವ ಮೀನುಗಾರರ ಜೀವನದ ಮೇಲೆ ಕೊಡಲಿ ಬೀಳುತ್ತದೆ, ಕುಡಿಯುವ ನೀರು ಕಡಿಮೆಯಾಗಿ ಅದರ ಸಲುವಾಗಿ ದೂರ ಕ್ರಮಿಸಬೇಕಾಗುತ್ತದೆ. ತೆಂಗಿನ ತೋಟ ಮತ್ತು ಇತರ ಬೆಳೆಗಳ ಮೇಲೆ ಸಿಮೆಂಟ್ ಧೂಳು ಬಿದ್ದು ಉತ್ಪಾದನೆ ಇಳಿಯುತ್ತದೆ. ಹೀಗೆಯೇ ಒಂದಲ್ಲ, ಎರಡಲ್ಲ. ಅನೇಕ ಪರಿಣಾಮಗಳನ್ನು ಜನತೆ ಎದುರಿಸಬೇಕಾಗುತ್ತದೆ.

ದುಷ್ಪರಿಣಾಮಗಳನ್ನು ಹೋಗಾಲಾಡಿಸಲು ಉದ್ಯಮಗಳನ್ನೇ ಹೋಗಲಾಡಿಸಬೇಕಾಗಿಲ್ಲ. ಆದರೆ ದುಷ್ಪರಿಣಾಮಗಳ ಜವಾಬ್ದಾರಿಯನ್ನು ಉದ್ಯಮಗಳು ಹೊರುವಂತೆ ಮಾಡಬೇಕಾಗುತ್ತದೆ. ಭಾರತದಲ್ಲಷ್ಟೇ ಅಲ್ಲ, ಎಲ್ಲ ರಾಷ್ಟ್ರಗಳಲ್ಲಿಯೂ Polluter Pays Principle  ಅಂದರೆ ಯಾರು ಮಾಲಿನ್ಯಕ್ಕೆ ಅಥವಾ ದುಷ್ಪರಿಣಾಮಗಳಿಗೆ ಕಾರಣೀಭೂತರೋ ಅವರೇ ಅದರ ಬೆಲೆಯನ್ನು ಅಥವಾ ವೆಚ್ಚವನ್ನು ಹೊರಬೇಕು ಎಂಬ ತತ್ವವನ್ನು ಒಪ್ಪಿಕೊಂಡು ಅದರ ಪ್ರಕಾರ ಕಾನೂನನ್ನು ಮಾಡಲಾಗಿದೆ. ಮಾಲಿನ್ಯವನ್ನು ನಿಯಂತ್ರಿಸದೇ ಜನರ ಮೇಲೆಯೇ ಪರಿಣಾಮವಾದರೆ ಜನರಿಗೆ ತಕ್ಕಕ ಪರಿಹಾರವನ್ನು ಕೊಡುವುದು ಉದ್ಯಮಗಳ ಜವಾಬ್ದಾರಿಯಾಗುತ್ತದೆ. ಜನರ ಮೇಲೆ ಅಥವಾ ಪರಿಸರದ ಮೇಲೆ ದುಷ್ಪರಿಣಾಮವಾಗದಂತೆ ಮಾಲಿನ್ಯವನ್ನು ಅದರ ಮೂಲದಲ್ಲಿಯೇ ನಿಯಂತ್ರಿಸುವುದೂ, ಅದಕ್ಕೆ ತಗಲುವ ವೆಚ್ಚವನ್ನು ಉದ್ಯಮಗಳೇ ಹೊರುವುದು ಮೇಲೆ ಹೇಳಿದ ತತ್ವದ ಇನ್ನೊಂದು ರೂಪ.

ಜನರಿಗೆ ಕಷ್ಟ ಕೊಟ್ಟು, ಆಮೇಲೆ ಪರಿಹಾರಧನವನ್ನು  ಕೊಡುವುದಕ್ಕಿಂತ ಮೂಲದಲ್ಲಿಯೇ ಮಾಲಿನ್ಯವನ್ನು ನಿಯಂತ್ರಿಸುವುದು ಹೆಚ್ಚು ಸೂಕ್ತವೆಂದು ಜಲ ಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ೧೯೭೪ರಲ್ಲೂ, ವಾಯು ಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ೧೯೮೧ರಲ್ಲೂ ಭಾರತದಲ್ಲಿ ಅಂತೆಯೇ ಎಲ್ಲ ರಾಜ್ಯಗಳಲ್ಲಿಯೂ ಅನುಷ್ಠಾನಕ್ಕೆ ತರಲಾಯಿತು. ಈ ಕಾಯಿದೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರದ ಮಟ್ಟದಲ್ಲಿಯೂ, ರಾಜ್ಯಗಳ ಮಟ್ಟದಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸ್ಥಾನವನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಸ್ಥಾಪನೆಯಾಯಿತು. ಮಾಲಿನ್ಯದ ಪ್ರಮಾಣ ಇಂತಿಷ್ಟೇ ಮಿತಿಯೊಳಗೆ ಇರಬೇಕೆಂದು ಈ ಮಂಡಳಿಗಳು ಮಿತಿ (standard)ಗಳನ್ನು ನಿರ್ಧರಿಸುತ್ತವೆ. ಮಾಲಿನ್ಯದ ಪ್ರಮಾಣ ನಿರ್ಧರಿಸಿದ ಮಿತಿಗಳಿಗೆ ಮೀರಿದರೆ ಈ ಮಂಡಳಿಗಳು ಉದ್ಯಮಗಳ ವಿರುದ್ಧ ಕಾಯಿದೆ ಬದ್ಧ ಕ್ರಮಗಳನ್ನು ಜಾರಿ ಮಾಡಬೇಕಾಗುತ್ತದೆ. ಕಾಯಿದೆಯಿಂದ ತಪ್ಪಿಸಿಕೊಂಡ ಉದ್ಯಮಗಳಿಗೆ ನೀರು  ಮತ್ತು ವಿದ್ಯುತ್ ಶಕ್ತಿಯ ಪೂರೈಕೆಗೆ ತಡೆ ಹಾಕುವುದು ಅಥವಾ ತೀರ ಕೆಟ್ಟ ಪರಿಸ್ಥಿತಿಯಲ್ಲಿ ಅಂಥ ಉದ್ಯಮಗಳನ್ನು ನಿಲ್ಲಿಸಿಬಿಡುವ ಅಧಿಕಾರವೂ ಸಹ ಈ ಮಂಡಳಿಗಳಿಗೆ ಇದೆ. ಸಾಮಾನ್ಯವಾಗಿ ಮಂಡಳಿಗಳು ಅಷ್ಟು ಮಟ್ಟಿಗೆ ಹೋಗುವುದಿಲ್ಲ. ಅವು ಕಾಯಿದೆ ಬದ್ದ ಕ್ರಮಗಳನ್ನು ಕೈಗೊಳ್ಳಲು ದಾವೆ ಮಾಡುವುವು, ದಂಡ ಜುಲ್ಮಾನೆಗಳನ್ನು ಹೇರುವುವು, ಆದರೆ ನಿರುದ್ಯೋಗವಾಗುವ ಭೀತಿಯಿಂದಲೋ ಏನೋ ಉದ್ಯಮಗಳನ್ನೇ ನಿಲ್ಲಿಸಿ ಬಿಡುವ ಕ್ರಮ ತೆಗೆದುಕೊಳ್ಳುವುದು ವಿರಳ. ತಕ್ಕ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಮೂರು ತಿಂಗಳಿಂದ ಆರು ವರ್ಷಗಳವರಿಗೆ ಜೈಲಿಗೂ ಕಳುಹಿಸಬಹುದು. ಆದರೆ ಹಾಗೆ ನಿಜವಾಗಿ ಜೈಲಿಗೆ ಕಳುಹಿಸಿದ ಉದಾಹರಣೆ ಗೊತ್ತಿಲ್ಲ.

ಉದ್ಯಮಗಳನ್ನು ಪ್ರಾರಂಭಿಸುವ ಮೊದಲೇ ಪರಿಸರ ಮಾಲಿನ್ಯದ ದೃಷ್ಟಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಬೇಕಾದ ಯಂತ್ರ ಸೌಕರ್ಯಗಳನ್ನು ಉದ್ಯಮಗಳು ಹಾಕಿಕೊಂಡಿವೆಯೋ ಎಂಬುದನ್ನು ಮಂಡಳಿಯು ಪರಿಷ್ಕರಿಸಿ ಆ ಮೇಲೆಯೇ ಉದ್ಯಮಗಳನ್ನು ಪ್ರಾರಂಭಿಸುವ ಒಪ್ಪಿಗೆಯನ್ನು ನೀಡುವುದು ವಾಡಿಕೆ. ಆದರೆ ಅನೇಕ ಉದ್ಯಮಗಳು ಈ ಒಪ್ಪಿಗೆಯನ್ನು ಪಡೆಯಲು ಮಾತ್ರ ಸಾಕಷ್ಟು ನಿಯಂತ್ರಣ ಸೌಕರ್ಯಗಳನ್ನು ಹಾಕಿಕೊಂಡು ವಿದ್ಯುಚ್ಛಕ್ತಿಯನ್ನು ಉಳಿಸಲು ಆಮೇಲೆ ಸಾಕಷ್ಟು ಮಾಲಿನ್ಯ ನಿಯಂತ್ರಣ ಮಾಡುವುದೇ ಇಲ್ಲ. ಇಂತಹ ಸಂದರ್ಭವನ್ನು ಎದುರಿಸಲು ಸಹ ಮಂಡಳಿಗಳು ಮಾರ್ಗ ಮಾಡಿಕೊಂಡಿವೆ. ಮಂಡಳಿಗಳಿಗೆ ಉದ್ಯಮಗಳಿಗೆ ತನಿಖೆ ನಡೆಸುವ ಅಧಿಕಾರವಿದೆ. ಈ ದೃಷ್ಟಿಯಿಂದ ಉದ್ಯಮಗಳ ವಿಭಜನೆಯನ್ನು ಮೂರು ಗುಂಪುಗಳಲ್ಲಿ ಎರಡು ವಿಧವಾಗಿ ಮಾಡಲಾಗಿದೆ. ಗಾತ್ರದ ದೃಷ್ಟಿಯಿಂದ – ದೊಡ್ಡ ಮಧ್ಯಮ ಮತ್ತು ಸಣ್ಣ ಎಂತಲೂ, ಮಾಲಿನ್ಯದ ದೃಷ್ಟಿಯಿಂದ – ಕೆಂಪು, ಕಿತ್ತಳೆ ಮತ್ತು ಹಸಿರು ಎಂತಲೂ ಮಾಡಲಾಗಿದೆ. ದೊಡ್ಡ ಮತ್ತು ಕೆಂಪು ಉದ್ಯಮಗಳನ್ನು ಹೆಚ್ಚು ಮತ್ತು ಮೇಲಿಂದ ಮೇಲೆ ತನಿಖೆಗೆ ಒಳಪಡಿಸಲಾಗುವುದು. ಸಣ್ಣ ಮತ್ತು ಹಸಿರು ಗುಂಪುಗಳಲ್ಲಿಯು ಉದ್ಯಮಗಳ ಮೇಲೆ ಎಲ್ಲಕ್ಕೂ ಕಡಿಮೆ ತನಿಖೆ. ಇವನ್ನು ಕೋಷ್ಟಕ – ೧ ರಲ್ಲಿ ಕಾಣಬಹುದು.

ಕೋಷ್ಟಕ ೧ ಉದ್ಯಮಗಳ ವರ್ಗೀಕರಣ ಮತ್ತು  ಮಾಲಿನ್ಯ ತನಿಖೆಯ ತೀವ್ರತೆ

ಗಾತ್ರದ ದೃಷ್ಟಿಯಿಂದ ಮಾಲಿನ್ಯದ ದೃಷ್ಟಿಯಿಂದ ತನಿಖೆಯ ತೀವ್ರತೆ
ದೊಡ್ಡ ಕೆಂಪು ತಿಂಗಳಿಗೊಮ್ಮೆ (ಮಾಲಿನ್ಯ ಕಡಿಮೆಯಿದ್ದರೆ ಆರು ತಿಂಗಳಿಗೊಮ್ಮೆ)
ಮಧ್ಯಮ ಕೆಂಪು ೩ ತಿಂಗಳಿಗೊಮ್ಮೆ
ಕಿತ್ತಳೆ ೬ ತಿಂಗಳಿಗೊಮ್ಮೆ
ಹಸಿರು ವರ್ಷಕ್ಕೊಮ್ಮೆ
ಸಣ್ಣ ಕೆಂಪು ೬ ತಿಂಗಳಿಗೊಮ್ಮೆ
ಕಿತ್ತಳೆ ವರ್ಷಕ್ಕೊಮ್ಮೆ
ಹಸಿರು ೨ ವರ್ಷಕ್ಕೊಮ್ಮೆ

ಟಿಪ್ಪಣಿ : ಸ್ಥಿರ ಬಂಡವಾಳ ೫ ಕೋಟಿ ರೂಪಾಯಿಗಳಿಗೆ ಮೇಲ್ಪಟ್ಟು ಇದ್ದರೆ ದೊಡ್ಡ ಉದ್ಯಮಗಳೆಂದು, ೩೫ಲಕ್ಷ ರೂ. ಗಳು ಅಥವಾ ಅದಕ್ಕೂ ಕಡಿಮೆ ಇದ್ದರೆ ಸಣ್ಣ ಉದ್ಯಮಗಳೆಂದೂ, ಇವಕ್ಕೆ ನಡುವಿನ ಉದ್ಯಮಗಳಿಗೆ ಮಧ್ಯಮ ಉದ್ಯಮಗಳೆಂದು ಪರಿಗಣಿಸಲಾಗುತ್ತದೆ. ಹಸಿರು ಗುಂಪಿನ ಉದ್ಯಮಗಳಲ್ಲಿಯೂ ಸ್ವಲ್ಪ ಮಾಲಿನ್ಯವಿದ್ದೇ ಇದೆ. ಏನೋ ಮಾಲಿನ್ಯ ತರದ ಉದ್ಯಮಗಳು ಈ ವರ್ಗೀಕರಣಕ್ಕೆ ಒಳಪಟ್ಟಿಲ್ಲ.

ಮಾಲಿನ್ಯ ನಿಯಂತ್ರಣ ಕಾನೂನುಗಳ ಅನುಷ್ಠಾನದಲ್ಲಿ ೧೯೮೬ರಿಂದ ಈಚೆಗೆ ಸಾಕಷ್ಟು ಅಲ್ಲದಿದ್ದರೂ ಗಮನೀಯ ಸುಧಾರಣೆ ಕಂಡು ಬಂದಿದೆ. ಇದಕ್ಕೆ ಮುಖ್ಯವಾದ ಕಾರಣ ನಿಯಂತ್ರಣ ಮಂಡಳಿಗಳಿಗೆ ಕೊಟ್ಟ ಹೆಚ್ಚಿನ ಅಧಿಕಾರಿಗಳು ಮತ್ತು ಜನತೆಗೆ ಸಹ ತಪ್ಪಿತಸ್ಥ ಉದ್ಯಮಗಳ ವಿರುದ್ಧ ದಾವೆ ಹೂಡುವ ಅಧಿಕಾರ ಕೊಟ್ಟದ್ದು. ೧೯೮೬ರ ಪರಿಸರ ಸಂರಕ್ಷಣಾ ಕಾನೂನು (Environment Protection Act) ಈ ಸಂದರ್ಭದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇದಕ್ಕೂ ಮೊದಲು ತಪ್ಪನ್ನು ಸಿದ್ಧಪಡಿಸುವ ಭಾರ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೇಲೆ ಇತ್ತು. ಈಗ ತಪ್ಪು ಮಾಡಿಲ್ಲವೆಂದು ಸಿದ್ಧಪಡಿಸುವ ಭಾರ ಉದ್ಯಮಗಳ ಮೇಲೆ ಇದೆ. ನ್ಯಾಯಾಲಯಕ್ಕೆ ಹೋಗಿಯೇ ಕ್ರಮ ತೆಗೆದುಕೊಳ್ಳುವ ಬದಲು, ಆಡಳಿತ ಕ್ರಮಗಳ ಮೂಲಕ ಮಾಲಿನ್ಯ ನಿಯಂತ್ರಣವನ್ನು ಅನುಷ್ಠಾನಕ್ಕೆ ತರಲು ಈಗ ಸಾಧ್ಯವಿದೆ. ಬೇಕಾದರೆ, ಉದ್ಯಮಗಳು ಮಂಡಳಿಗಳ ವಿರುದ್ಧ ನ್ಯಾಯಾಲಯಗಳ ಹತ್ತಿರ ದೂರು ಕೊಡಬಹುದು. ತೀರ್ಪು ಕೊಡಲು  ವಿಳಂಬವಾಗದಂತೆ ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಮೀಸಲಾದ ವಿಶೇಷ Environment Tribunal ಗಳನ್ನು ಹಮ್ಮಿಕೊಳ್ಳಲಾಯಿತು.

ಮಂಡಳಿಗಳು ಉದ್ಯಮಿಗಳ ಪ್ರಭಾವಕ್ಕೆ ಒಳಪಟ್ಟು ಕಾಯಿದೆ ಕಾಗದದಲ್ಲಿ ಮಾತ್ರ ಉಳಿದರೆ ಬೇರೆ ಮಂಡಳಿಗಳ ಔದ್ಯಮಿಕ ಮಾಲಿನ್ಯದ ಬಗ್ಗೆ ಜಾಗೃತವಾಗಿದ್ದರೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸದಾ ಒತ್ತಡ ಇರಬೇಕೆಂದು ಸಾರ್ವಜನಿಕ ಹಿತಾಸಕ್ತಿ ದಾವೆ (Public Interest Litigations)ಗಳಿಗೆ ೧೯೮೬ರಿಂದ ಈಚೆಗೆ ಅನುವು ಮಾಡಲಾಗಿದೆ. ಸರಕಾರದ ನಿಯಂತ್ರಣ ಮಂಡಳಿಗಳು ಹತ್ತಿರವಿದ್ದ ಮಾಹಿತಿಯನ್ನು ದೊರಕಿಸುವ ಹಕ್ಕನ್ನು ಈ ಸಂದರ್ಭದಲ್ಲಿ ಇಂತಹ ದಾವೆ ಮಾಡುವವರಿಗೆ ಕೊಡಲಾಯಿತು. ಹೀಗಾಗಿ ಔದ್ಯಮಿಕ ಮಾಲಿನ್ಯಕ್ಕೆ ಒಳಪಟ್ಟ ಜನರ ವತಿಯಿಂದ ಇತರ ಉದ್ಯಮಗಳ ಮತ್ತು ನಿಯಂತ್ರಣ ಮಂಡಳಿಗಳ ವಿರುದ್ಧ ದಾವೆ ಮಾಡಬಹುದು.

ಅನೇಕ ಸಲ ರಾಜ್ಯ ಸರಕಾರಗಳು ಪರಿಸರದ ಕಡೆಗೆ ಗಮನ ಕೊಡುವುದಲ್ಲವಷ್ಟೇ ಅಲ್ಲ, ಈ ನೀತಿಯ ಆಧಾರದ ಮೇಲೆ ಉದ್ಯಮಿಗಳನ್ನು ತಮ್ಮ ತಮ್ಮ ರಾಜ್ಯಗಳಲ್ಲಿಯೇ ಬರುವಂತೆ ಆಕರ್ಷಿಸಲು ಇತರ ರಾ‌ಜ್ಯಗಳೊಡನೆ ಸ್ಪರ್ಧಿಸುತ್ತವೆ. ಇಂತಹ ಪ್ರತಿಗಾಮಿ ಸ್ಪರ್ಧೆ ಪರಿಸರದ ಮೇಲೆ ಮಾರಕವಾಗುತ್ತದೆ. ಕಾರಣ ಪರಿಸರದ ವಿಷಯವನ್ನು ಈಗ ಸಂವಿಧಾನದ concurrent listನಲ್ಲಿ ಇಡಲಾಗಿದೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯೂ, ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಔದ್ಯೋಗಿಕ ಮಾಲಿನ್ಯ ಮತ್ತು ರಾಜ್ಯಮಟ್ಟದ ಮಂಡಳಿಗಳ ಮೇಲೆ ಲಕ್ಷಕೊಟ್ಟು ಅವುಗಳಿಗೆ ನಿರ್ದೇಶನಗಳನ್ನೂ ನೀಡುತ್ತವೆ.

ಮಾಲಿನ್ಯ ನಿಯಂತ್ರಣದಲ್ಲಿ ಕಂಡುಬಂದ ಸುಧಾರಣೆಗೆ ಒಂದು ನಿದರ್ಶನವೆಂದರೆ ಚಲಿಸುತ್ತಿರುವ ಮಾಲಿನ್ಯ ನಿಯಂತ್ರಣ ಯಂತ್ರ ಸೌಕರ್ಯಗಳನ್ನು ಇಟ್ಟುಕೊಂಡು ಉದ್ಯಮಗಳ ಪ್ರತಿಶತ ಪ್ರಮಾಣ. ಈ ಅಂಕಿ ಸಂಖ್ಯೆಗಳು ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿಯು ವಾರ್ಷಿಕ ವರದಿಗಳ ಮೇಲೆ ಆಧಿರಿಸಿದ್ದು, ಅವನ್ನು ಕೋಷ್ಟಕ – ೨ರಲ್ಲಿ ಕೊಡಲಾಗಿದೆ.

ಕೋಷ್ಟಕ ೨ : ಚಲಿಸುತ್ತಿರುವ ಮಾಲಿನ್ಯ ನಿಯಂತ್ರಣ ಯಂತ್ರ ಸೌಕರ್ಯಗಳನ್ನು ಇಟ್ಟುಕೊಂಡ ಉದ್ಯಮಗಳ ಪ್ರತಿಶತ ಪ್ರಮಾಣ (ಕರ್ನಾಟಕದಲ್ಲಿ)

  ೩೧.೩.೧೯೯೧ ೩೧.೩.೧೯೯೩
ಜಲಮಾಲಿನ್ಯ
ದೊಡ್ಡ ಉದ್ಯಮಗಳು ೬೫.೮ ೭೦.೩
ಮಧ್ಯಮ ಉದ್ಯಮಗಳು ೬೫.೦ ೫೩.೦
ಸಣ್ಣ ಉದ್ಯಮಗಳು ಮಾಹಿತಿ ಇಲ್ಲ ೫೨.೫
ವಾಯು ಮಾಲಿನ್ಯ
ದೊಡ್ಡ ಉದ್ಯಮಗಳು ೩೩.೮ ೬೨.೬
ಮಧ್ಯಮ ಉದ್ಯಮಗಳು ೩೩.೫ ೬೦.೧
ಸಣ್ಣ ಉದ್ಯಮಗಳು ಮಾಹಿತಿ ಇಲ್ಲ ೩೪.೫

ಮೂಲ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ೧೯೯೦-೯೧ ಮತ್ತು ೧೯೯೨-೯೩ರ ವಾರ್ಷಿಕ ವರದಿಗಳು.

ಈ ಕೋಷ್ಟಕದಲ್ಲಿ ಜಲಮಾಲಿನ್ಯದ ಕೆಳಗೆ ಮಧ್ಯಮ ಉದ್ಯಮಗಳನ್ನು ಬಿಟ್ಟರೆ ಎರಡು ವರ್ಷಗಳಲ್ಲೇ ಸುಧಾರಣೆಯಾಗಿದ್ದೂ ಕಂಡು ಬರುತ್ತದೆ. ಮಧ್ಯಮ ಉದ್ಯಮಗಳ ಮಟ್ಟಿಗೆ ಪ್ರತಿಶತ ಪ್ರಮಾಣ ಇಳಿದಿದ್ದು ಅವುಗಳ ಸಂಖ್ಯೆ ಭಾರೀ ಮೊತ್ತದಲ್ಲಿ ಏರಿದ್ದೇ ಕಾರಣ. ವಾಯು ಮಾಲಿನ್ಯದ ಸಂದರ್ಭದಲ್ಲಿ ಗಮನೀಯ ಸುಧಾರಣೆಯಾಗಿದ್ದು ಈ ಕೋಷ್ಟಕದಲ್ಲಿ ಕಾಣಬರುತ್ತದೆ. ಇನ್ನೊಂದು ಸ್ಪಷ್ಟೀಕರಣ ಇಲ್ಲಿ ಅವಶ್ಯ. ಈ ಸಂಖ್ಯೆಗಳು ಚಲಿಸುತ್ತಲು ಯೋಗ್ಯವಾದ ಸ್ಥಿತಿಯಲ್ಲಿ ಇದ್ದು ಯಂತ್ರ ಸೌಕರ್ಯಗಳನ್ನು ಇಟ್ಟುಕೊಂಡು ಉದ್ಯಮಗಳಿಗೆ ಅನ್ವಯಿಸುತ್ತವೆ. ಇದರ ಅರ್ಥ ಈ ಉದ್ಯಮಗಳು ಅವುಗಳನ್ನು ಪ್ರತಿದಿನವೂ ಚಲಾಯಿಸುತ್ತವೆ ಎಂದಲ್ಲ. ಎಷ್ಟರ ಮಟ್ಟಿಗೆ ಮಂಡಳಿಗಳೂ ಮತ್ತು ಜನತೆಯೂ ಇದರ ಬಗ್ಗೆ ಜಾಗೃತವಾಗಿದ್ದು ತಕ್ಕ ಕ್ರಮಗಳನ್ನು ಕೈಗೊಳ್ಳುತ್ತವೆಯೋ ಅದರ ಮೇಲೆ ಅದು ಅವಲಂಬಿಸಿರುತ್ತದೆ. ಇಂತಹ ಸದಾಕಾಲ ಜಾಗೃತೆ ಕಷ್ಟವಾದದ್ದುದರಿಂದ ಈಗ  Process Integrated Technologyಗಳನ್ನು ಅಳವಡಿಸಬೇಕಾಗುತ್ತದೆ. ಉತ್ಪಾದನೆ ಮತ್ತು ಮಾಲಿನ್ಯವನ್ನು ನಿಯಂತ್ರಿಸುವ ಎರಡೂ ಯಂತ್ರಗಳಲ್ಲಿ ಸಮನ್ವಯ ಸಾಧಿಸಿ ಒಂದು ಚಲಿಸಬೇಕಾಗದರೆ ಇನ್ನೊಂದೂ ಚಲಿಸಬೇಕಾಗುತ್ತದೆ. ಇಂತಹ ತಂತ್ರ ವ್ಯವಸ್ಥೆಯಿಂದ ಒಟ್ಟು ವೆಚ್ಚ ಉತ್ಪಾದನೆಯ ಪ್ರಮಾಣದಲ್ಲಿ ಕಡಿಮೆಯಾಗುವ ಸಂಭವವಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಮಟ್ಟಿಗೆ ತನಿಖೆಗಳನ್ನು ನಡೆಸಿ ದಾವೆಗಳನ್ನು ಹೂಡುವ ಕಾರ್ಯವನ್ನು ನಡೆಸುತ್ತಲೇ ಇದೆ. ೩೧.೩.೧೯೯೩ರ ತನಕ ೧೯೭೪ ಜಲಮಾಲಿನ್ಯ ನಿಯಂತ್ರಣ ಕಾಯಿದೆಯ ಕೆಳಗೆ ೮೪ ದಾವೆಗಳನ್ನು, ೧೯೮೧ರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆಯ ಕೆಳಗೆ ೩೯ ದಾವೆಗಳನ್ನು ಹೂಡಲಾಗಿತ್ತು. ಅದರಲ್ಲಿ ನಿರ್ಣಯವಾದ ಕೇಸುಗಳು ಅನುಕ್ರಮವಾಗಿ ೩೦ ಮತ್ತು ೭. ಅವುಗಳಲ್ಲಿ ಮಂಡಳಿಗೆ ಪರವಾಗಿ ತೀರ್ಪು ಆದ ಕೇಸುಗಳು ಅನುಕ್ರಮವಾಗಿ ೧೦ ಮತ್ತು ೧ ಮಾತ್ರ. ಉದ್ಯಮಗಳನ್ನು ನಿಲ್ಲಿಸಿಬಿಡುವ ತೀರ್ಮಾನವನ್ನು ಮಂಡಳಿಯು ತೆಗೆದುಕೊಂಡಿದ್ದೂ ಬರೀ ೫(ಜಲ  ಮಾಲಿನ್ಯದ ಮೂಲಕ) ಮತ್ತು ೪ (ವಾಯು ಮಾಲಿನ್ಯದ ಮೂಲಕ) ಮಾತ್ರ. ಮಂಡಳಿಯು ತನ್ನ ಅಧಿಕಾರಿಗಳನ್ನು ಬಹಳ ಜಾಗರೂಕತೆಯಿಂದ ಉಪಯೋಗಿಸುವುದು ಕಂಡುಬರುತ್ತದೆ.

ಮಾಲಿನ್ಯ ನಿಯಂತ್ರಣ ಮಂಡಳಿಗೆ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಬೇಕಾದ ಧನ ಬಲ ಮತ್ತು ಸಿಬ್ಬಂದಿ ಇಲ್ಲ. ೧೯೯೩ರಲ್ಲಿ ಸರಾಸರಿ ಒಂದು ಉದ್ಯಮದ ಮೇಲೆ ಲಕ್ಷ ಕೊಟ್ಟು  ತನಿಖೆ ನಡೆಸಲು ಮಂಡಳಿಗೆ ಇದ್ದುದು ರೂ. ೨೮೯ ಮಾತ್ರ. ಅದು ತಾನೇ ತನ್ನ ಧನ ಸಂಪನ್ಮೂಲಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅದರ ಸ್ವಾಯತ್ತತೆಯನ್ನು ರಕ್ಷಿಸಿಕೊಳ್ಳಲು ಈ ನೀತಿ ಬೇಕಾಗಿದ್ದರೂ, ಅದು ಒಂದು ಆರ್ಥಿಕ ಅಡ್ಡಿಯಾಗುತ್ತದೆ. ತಾನು ಹೇರಿದ (water cess), ಫೀಜು ಮತ್ತು ಜುಲ್ಮಾನೆಗಳೇ ಮಂಡಳಿಯ ಸಂಪನ್ಮೂಲ. ಇದರ ಧನಪೂರೈಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಹುಡುಕುವುದು ಅವಶ್ಯಕವಾಗಿದೆ. ಇದೇ ಕಾರಣದಿಂದ ಮಂಡಳಿಗೆ ಬೇಕಾಗುವಷ್ಟು ಸಿಬ್ಬಂದಿಯೂ ಇಲ್ಲ. ೧೯೯೩ರಲ್ಲಿ ಇವರ ಹತ್ತಿರವಿದ್ದ ಸಿಬ್ಬಂದಿ ೨೦೫ ಮಾತ್ರ. ಒಪ್ಪಿಗೆ (sanction) ಪಟ್ಟ ೩೫೮ ಸಿಬ್ಬಂದಿಗೆ ಹೋಲಿಸಿದರೆ ಅದು ಕಡಿಮೆ. ಅಲ್ಲದೆ, ಈ ಎಲ್ಲ ಸಿಬ್ಬಂದಿಯ ಸಹಾಯದಿಂದ ಇಡೀ ರಾಜ್ಯದಲ್ಲಿ ಪಸರಿಸಿದ ೧೩೮ ಸಾವಿರ ಉದ್ಯಮಗಳ ತನಿಖೆಗಳನ್ನು ಮಾಡುವುದು ಕಷ್ಟಸಾಧ್ಯ

ಈ ಕಾರಣದಿಂದಾಗಿ ಮಧ್ಯಮ ಮತ್ತು ವಿಶೇಷವಾಗಿ ಸಣ್ಣ ಉದ್ಯಮಗಳಿಂದ ಆಗುವ ಮಾಲಿನ್ಯದ ತನಿಖೆ ಸರಿಯಾಗಿ ಆಗುತ್ತಿಲ್ಲ. ಅವುಗಳ ಸಂಖ್ಯೆಯೂ ಬಹಳವಾಗಿದ್ದು ಸಣ್ಣ ಉದ್ಯಮಗಳು ಸುಲಭವಾಗಿ ಕಾಯಿದೆಯನ್ನು ತಪ್ಪಿಸಿಕೊಳ್ಳುತ್ತವೆ. ಈ ಉದ್ಯಮಿಗಳಿಗೇ ತಮ್ಮದೇ ಆದ ಮಾಲಿನ್ಯ ನಿಯಂತ್ರಣ ಯಂತ್ರ ಸೌಕರ್ಯಗಳನ್ನು ಹಾಕಿಕೊಳ್ಳುವುದು ದುಬಾರಿ ವೆಚ್ಚದ್ದೆಂದು ಅನಿಸುತ್ತದೆ. ಟ್ಯಾನರಿಗಳಂಥ (ಚರ್ಮ ಹದ ಮಾಡುವ) ಸಣ್ಣ ಉದ್ಯಮಗಳು ಗಾತ್ರದಲ್ಲಿ ಸಣ್ಣದಾದರೂ ಒತ್ತೊಟ್ಟಿಗೆ ತುಂಬಾ ವಿಷವನ್ನು ಪರಿಸರದಲ್ಲಿ ತೂರುತ್ತವೆ. ಇಡೀ ನದಿಗಳೇ ಈ ವಿಷದಿಂದ ಹಾಳಾಗಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾಮೂಹಿಕ ನಿಯಂತ್ರಣ ಸೌಕರ್ಯವನ್ನು ಸಣ್ಣ ಉದ್ಯಮಗಳು ಹಮ್ಮಿಕೊಳ್ಳುವಂತೆ ಸಹಾಯ ಮಾಡುತ್ತವೆ. ಆದರೆ, ಇನ್ನೂ ಇವು ಆಗಬೇಕಾಗಿವೆ, ಸರಿಯಾಗಿ ಆಗಿಲ್ಲ.

ಆರ್ಥಿಕ ಮತ್ತು ಸಿಬ್ಬಂದಿಯ ಜೊತೆ ಕೊರತೆ ಇವೆರಡರ ಮಿತಿಯಲ್ಲಿ ಮಂಡಳಿಯು ಕಾರ್ಯ ಮಾಡಬೇಕಾದರೂ, ಅದು ಒಂದು ವಿಷಯದಲ್ಲಿ ಸಲ್ಲದ ಭಾರವನ್ನು ವಹಿಸಬೇಕಾಗುತ್ತದೆ. ಅನೇಕ ಸಲ ಉದ್ಯಮಗಳು ಕೆಲ ತರಹದ ಮಾಲಿನ್ಯಗಳನ್ನು ನಿರ್ಧರಿಸಿದ ಮಿತಿಯೊಳಗೆ ಬರುವಂತೆ ನಿಯಂತ್ರಿಸಲು ಬೇಕಾದ ತಂತ್ರಜ್ಞಾನವೇ ಇಲ್ಲವೆಂದು ವಾದಮಾಡಿ ತಮ್ಮ ಕರ್ತವ್ಯವನ್ನು ಮಾಡದೇ ಇದ್ದುದಕ್ಕೆ ಸಬೂಬು ಕೊಡುತ್ತವೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಇಂತಹ ತಂತ್ರಜ್ಞಾನವನ್ನು ಕೊಡುವಂತೆ ಕೇಳಿಕೊಳ್ಳುತ್ತವೆ. ಅದನ್ನು ಕೊಡಲು ಮಂಡಳಿಗೆ ಆಗದಿದ್ದರೆ ಉದ್ಯಮಗಳು ಅಂತಹ ಮಾಲಿನ್ಯವನ್ನು ನಿಯಂತ್ರಿಸುವ ಗೊಡವೆಗೇ ಹೋಗುವುದಿಲ್ಲ ಮತ್ತು ಕಾಯಿದೆಯನ್ನು ತಪ್ಪಿಸಿಕೊಳ್ಳುತ್ತವೆ. ಈಗ ಖಾಸಗೀ ರಂಗದಲ್ಲಿ ತಂತ್ರಜ್ಞಾನವನ್ನು ನೀಡುವ ಸಂಸ್ಥೆಗಳು ಪ್ರಾರಂಭವಾಗಿದ್ದು ಉದ್ಯಮಗಳು ಈ ಜ್ಞಾನವನ್ನು ಅವರ ಮೂಲಕ ದೊರಕಿಸಲು ಸಾಧ್ಯವಿದೆ. ಅದಕ್ಕೆ ಮಂಡಳಿಯ ಅಧಿಕಾರಿಗಳು ತಮ್ಮ ತಲೆಯನ್ನು ಚಚ್ಚಿಕೊಳ್ಳಬೇಕಾಗಿಲ್ಲ. ಅವರ ಕರ್ತವ್ಯ ಮಾಲಿನ್ಯದ ತನಿಖೆಯನ್ನು ಮಾಡುವುದು ಮತ್ತು ನಿರ್ಧರಿಸಿದ ಮಿತಿಗಳನ್ನು ಮೀರುವ ಉದ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳುವುದು. ತಂತ್ರಜ್ಞಾನವನ್ನು ಕೊಡಲು ಅವರು ಕಾಯಿದೆಬದ್ಧರಲ್ಲ.

ಮಾಲಿನ್ಯ ನಿಯಂತ್ರಣ ಕಾನೂನು  ಇದ್ದರೂ ಅದನ್ನು ತೋರಿಕೆಗೆ ಅನುಷ್ಠಾನದಲ್ಲಿ ತಂದು ನೈಜಿಕವಾಗಿ ನಿರ್ಧರಿಸಿದ ಮಿತಿಗಳಿಗೆ ಮೀರಿ ಮಾಲಿನ್ಯವನ್ನು ಪರಿಸರದಲ್ಲಿ ಬಿಡುವುದೇ ಅನೇಕ ಉದ್ಯಮಗಳಿಗೆ ಸಾಮಾನ್ಯವಾಗಿ ಹೋಗಿದೆ. ಮಾಲಿನ್ಯವನ್ನು ನಿಯಂತ್ರಿಸದೇ ಕಲುಷಿತ ನೀರನ್ನೂ ನಗರದ ಚರಂಡಿಗಳಲ್ಲಿ, ಹಳ್ಳಿಗಳಲ್ಲಿ ತೂರಿ ಬಿಡುತ್ತವೆ. ಮನೆಗಳಿಂದ ಬರುವ ಚರಂಡಿ ನೀರೂ ಇದಕ್ಕೆ ಸೇರಿಕೊಂಡು ನೈಸರ್ಗಿಕವಾಗಿ ಸುಂದರವಾದ ಹಳ್ಳಗಳು ರಾಡಿಯ ನೀರಿನಿಂದ ತುಂಬಿ ಅದರ ದುರ್ನಾತ ಮೈಲುಗಟ್ಟಲೆ ಪಸರಿಸುತ್ತದೆ  ಮತ್ತು ಭೂಗರ್ಭದಲ್ಲಿದ್ದ ಶುಚಿಯಾದ ನೀರೂ ಸಹ ಮಲಿನವಾಗುತ್ತದೆ. ಇದನ್ನು ಪರಿಹರಿಸಲು ಕಾನೂನು ಅಲ್ಲದೇ ಜನಬಲವೂ ಮಾಲಿನ್ಯ ನಿಯಂತ್ರಣೆಗೆ ಬೇಕಾಗುತ್ತದೆ.

ಕಾನೂನು ಮತ್ತು ಜನರ ಬೆಂಬಲಗಳ ಜೊತೆಗೆ ಇನ್ನೊಂದು ಆರ್ಥಿಕ ಪರಿಹಾರವನ್ನು ಯೋಜಿಸಬಹುದು. ಅದೇ ಮಾಲಿನ್ಯದ ಮೇಲೆ ಹಾಕುವ ಕರಭಾರ ಅಥವಾ pollution tax. ನೀರಿನಲ್ಲಿ ಮತ್ತು ಹವೆಯಲ್ಲಿ ಎಷ್ಟು ಮತ್ತು ಯಾವ ತರಹದ ಮಾಲಿನ್ಯವನ್ನು ಉದ್ಯಮಗಳು ಬಿಡುತ್ತವೆಯೆಂದು ಮಾಪನ ಮಾಡುವ ತಂತ್ರಜ್ಞಾನ ಲಭ್ಯವಿದೆ. ಮಾಲಿನ್ಯದ ಪ್ರಮಾಣಕ್ಕೆ ತಕ್ಕಂತೆ ಈ ಕರವನ್ನು ಹೇರಬಹುದು. ಈ ಕರದ ಭಾರದ ಎಷ್ಟು ಇರಬೇಕೆಂದರೆ ಕರವನ್ನು ಕೊಡುವುದಕ್ಕಿಂತ ಮಾಲಿನ್ಯವನ್ನು ನಿಯಂತ್ರಿಸುವುದೇ ಕಡಿಮೆ ವೆಚ್ದ್ದುಎಂದು ಉದ್ಯಮಗಳಿಗೆ ಅನಿಸಬೇಕು. ಕರಭಾರ ಅದಕ್ಕೂ ಹಗುರವಾದರೆ ಮಾಲಿನ್ಯವನ್ನು ನಿಯಂತ್ರಿಸುವುದನ್ನು ಬಿಟ್ಟು ಕರಕೊಟ್ಟು ಕೈತೊಳೆದುಕೊಳ್ಳಬಹುದು. ಈ ಅಡಚಣೆಯಿಂದಾಗಿ ಮಾಲಿನ್ಯಕರವನ್ನು ಭಾರತದಲ್ಲಿ ಹೇರಿಲ್ಲ. ನೆದರ್‌ಲ್ಯಾಂಡಿನಲ್ಲಿ ಜಲಮಾಲಿನ್ಯದ ಮೇಲೆ ಕರ ಹೇರಿ ಮಾಲಿನ್ಯವನ್ನು ಬಹಳ ಕಡಿಮೆ ಮಾಡಿದ ಅನುಭವವುಂಟು. ಭಾರತದಲ್ಲು ಇಂತಹ ಕರವನ್ನು ಹೇರುವ ಸಾಧ್ಯತೆಯ ಬಗ್ಗೆ ವಿಚಾರ ನಡೆದಿದೆ. ಇಂತಹ ಕರ ಕಾನೂನಿನ ಬದಲಾಗಿ ಅಲ್ಲ, ಪೂರಕವಾಗಿ ಹೇರಬೇಕಾಗುತ್ತದೆ. ಸದ್ಯದಲ್ಲಿ ಚರಂಡಿಗಳಲ್ಲಿ ದೂಷಿತ ನೀರನ್ನು ಬಿಡುವ ಉದ್ಯಮಗಳು ಅವುಗಳ ಸಾಮೂಹಿಕ ನಿಯಂತ್ರಣದ ಖರ್ಚನ್ನಾದರೂ ಹೊರುವಂತೆ ನೋಡಿಕೊಳ್ಳಲು ಸಾಧ್ಯವಿದೆ. ನಗರ ಪಾಲಿಕೆಗಳು ಈಗ ಈ ಭಾರವನ್ನು ಹೊರಬೇಕಾಗುತ್ತದೆ. ಅವುಗಳಿಗೆ ಯಾವಾಗಲೂ ಇಂತಹ ವಿಷಯದಲ್ಲಿ ಆರ್ಥಿಕ ಕೊರತೆ ಇದ್ದೇ ಇದೆ. ಉದ್ಯಮಗಳು ಈ ಖರ್ಚಿನ ಭಾರವನ್ನು ನೋಡಿಕೊಂಡರೆ ನಗರಪಾಲಿಕೆಗಳ ಹಣದ ಅಭಾವ ಕಡಿಮೆಯಾಗಿ ಮಾಲಿನ್ಯ ನಿಯಂತ್ರಣವನ್ನು ಅವು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಸಾಮರ್ಥ್ಯ ಹೊಂದುತ್ತವೆ. ನಾಗರೀಕರು ಈ ದೃಷ್ಟಿಯಲ್ಲಿ ಜಾಗ್ರತರಾಗಿದ್ದು ನಗರ ಪಾಲಿಕೆಗಳು ತಮ್ಮ ಕರ್ತವ್ಯವನ್ನು ಪಾಲಿಸುವಂತೆ ಒತ್ತಡ ತರಬೇಕಾಗುತ್ತದೆ.

ಮಾಲಿನ್ಯ ನಿಯಂತ್ರಣದ ವೆಚ್ಚ ಉದ್ಯಮಗಳಿಗೆ ನೀಗಲಾದಷ್ಟು ದುಬಾರಿಯೆ ? ಇದರಿಂದ ಅವುಗಳ ಲಾಭದಾಯಕತೆ ಕಡಿಮೆಯಾಗುವುದೆ? ಈ ಕಾರಣಕ್ಕಾಗಿಯೇ? ಉದ್ಯಮಗಳು ಮಾಲಿನ್ಯ ನಿಯಂತ್ರಣವನ್ನು ಸಾಕಷ್ಟು ಮಾಡಲು ಹಿಂಜರಿಯುತ್ತಿವೆಯೆ? ಇದರ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ಎರಡು ಅಧ್ಯಯನಗಳನ್ನು ನಡೆಸಲಾಯಿತು. ಅವೆರಡೂ ಕರ್ನಾಟಕದ ಉದ್ಯಮಗಳನ್ನು ಕುರಿತದ್ದೆ! ಅದರಲ್ಲಿ ಮೊದಲನೆಯದು ರವಿಚಂದ್ರನ್ ಅವರು ನಾಡಕಣಿರ್ಯವರ ಮಾಗದರ್ಶನದಲ್ಲಿ ಮಾಡಿದ ಪಿ.ಹೆಚ್.ಡಿ.ಪ್ರಬಂಧ (೧೯೮೯). ಎರಡನೆಯದು ಇತ್ತೀಚೆಗೆ ಇನ್ನೂ ಸ್ವಲ್ಪ ಉದ್ಯಮಗಳನ್ನು ತೆಗೆದುಕೊಂಡು ನಾಡಕರ್ಣಿ ಮತ್ತು ಶಾಸ್ತ್ರಿಯವರು ಅಮ್‌ಸ್ಟರ್ ಡ್ಯಾಮ್‌ನಲ್ಲಿಯ ಪರಿಸರ ಅಧ್ಯಯನ ಸಂಸ್ಥೆಯ  ಜೊತೆಗೆ IDPADದ ಅನುದಾನದ ಕೆಳಗೆ ನೆದರ್‌ಲ್ಯಾಂಡಿನೊಡನೆ ತುಲನಾತ್ಮಕವಾಗಿ ಮಾಡಿದ ಅಧ್ಯಯನ (೧೯೯೫). ಎರಡೂ ಅಧ್ಯಯನಗಳಲ್ಲಿ ಕಂಡುಬಂದ ಅಂಶವೇನೆಂದರೆ ಮಾಲಿನ್ಯ ನಿಯಂತ್ರಣವನ್ನು ಕೈಗೊಂಡ ಉದ್ಯಮಗಳಲ್ಲಿ ಅದರ ಮೇಲಿನ ವೆಚ್ಚ ಅಷ್ಟೇನೂ ಭಾರವಾಗಿಲ್ಲ. ಒಂದೆರಡು ಅಪವಾದಗಳನ್ನು ಬಿಟ್ಟರೆ, ವಾರ್ಷಿಕ ತಳಹದಿಯ ಮೇಲೆ ತೆಗೆದುಕೊಂಡ ಮಾಲಿನ್ಯ ನಿಯಂತ್ರಣದ ಖರ್ಚನ್ನು (Annualised cost) ಒಟ್ಟು ಉತ್ಪಾದನೆಯ (turnover) ಜೊತೆಗೆ ಹೊಲಿಸಿದರೆ ಅದು ಪ್ರತಿಶತ ೦.೧೫ರಿಂದ ೨ರಷ್ಟು ಆಗುವುದು. ಈ ಪ್ರಮಾಣ ಹೆಚ್ಚಲ್ಲ. ಮದ್ಯವನ್ನು ತಯಾರಿಸುವ ಡಿಸ್ಟಿಲರೀಗಳಲ್ಲಿ, ಸಣ್ಣ ಗಾತ್ರದ ಕಾಗದ ಉತ್ಪಾದಕ ಉದ್ಯಮಗಳಲ್ಲಿ ಮಾತ್ರ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಿತ್ತು (೫ ರಿಂದ ೨೨ ಪ್ರತಿಶತ). ಸಾಮಾನ್ಯವಾಗಿ ಎಲ್ಲ ಉದ್ಯಮಗಳಿಗೆ ಮಾಲಿನ್ಯ ನಿಯಂತ್ರಣ ವೆಚ್ಚವನ್ನು ಸಹಿಸುವ ಸಾಮರ್ಥ್ಯವಿದೆ. ಹೀಗಾದರೂ ಅವು ಈ ಕರ್ತವ್ಯವನ್ನು  ಕೈಗೊಳ್ಳಲು ಏಕೆ ಹಿಂದೆ ಮುಂದೆ ನೋಡುತ್ತವೆ? ಆಯಕರ (Income Tax) ಕೊಡುವ ಸಾಮರ್ಥ್ಯವಿದ್ದೂ ಅದನ್ನು ತಪ್ಪಿಸಲು ನೋಡುವ ಧನಿಕರಿಲ್ಲವೆ? ಸಮಾಜಕ್ಕೆ ಜನರಿಗೆ ಯಾವ ಧಕ್ಕೆ ಬಂದರೇನು ನಮ್ಮ ದುಡ್ಡು ಆದಷ್ಟು ಉಳಿತಾಯವಾಗಬೇಕು ಎಂವ ಸಂಕುಚಿತ ಮನಸ್ಸೇ ಮಾಲಿನ್ಯ ನಿಯಂತ್ರಣಕ್ಕೆ ಮುಖ್ಯ ಅಡಚಣೆ. ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆಗೆ ಜನರೂ ಸಹ ಉದ್ಯಮಗಳು ತಮ್ಮ ಕರ್ತವ್ಯದಿಂದ ಜಾರಿಕೊಳ್ಳುವಂತೆ ನೋಡಿಕೊಳ್ಳುವುದೇ ಈ ಸಮಸ್ಯೆಗೆ ಪರಿಹಾರ.

ಮಾಲಿನ್ಯ ನಿಯಂತ್ರಣದ ವೆಚ್ಚ ವಿಪರೀತವಿದ್ದೂ ಅದನ್ನು ವಹಿಸುವ ಸಾಮರ್ಥ್ಯವೇ ಇಲ್ಲದ ಪ್ರಸಂಗಗಳಲ್ಲಿ ಏನು ಮಾಡಬೇಕು? ಸಣ್ಣ ಪ್ರಮಾಣದ ಉದ್ಯಮಗಳಲ್ಲಿ ಈ ಅಡ್ಡಿ ಕಂಡು ಬಂದಲ್ಲಿ ಸಾಮೂಹಿಕವಾಗಿ ಮಾಲಿನ್ಯ ನಿಯಂತ್ರಣ ಮಾಡಿ ಅದರ ಲೆಕ್ಕ ವೆಚ್ಚವನ್ನು ಈ ಉದ್ಯಮಗಳು ಹಂಚಿಕೊ‌ಳ್ಳಬೇಕಾಗುವುದು. ಸಾಮೂಹಿಕ ಮಾಲಿನ್ಯ ನಿಯಂತ್ರಣದ ಪರಿಮಿತಿಯ ಹೊರಗೆ ಅಥವಾ ನಗರಗಳ ಹೊರಗೆ ಒಂದೊಂದಾಗಿ ಇದ್ದ ದೊಡ್ಡ ಮತ್ತು ಮಧ್ಯಮ ಉದ್ಯಮಗಳಿಗೆ ಈ ಸಮಸ್ಯೆ ಇದ್ದರೆ ಈ ಉದ್ಯಮಗಳನ್ನು ಚಲಿಸಲು ಪರವಾನಗಿ ಕೊಡದೇ ನಿಲ್ಲಿಸಿ ಬಿಡುವುದೇ ಸೂಕ್ತ. ಆರ್ಥಿಕ ದೃಷ್ಟಿಯಿಂದ ಬರುವ ಆಯಕ್ಕಿಂತ ವ್ಯಯವೇ ಹೆಚ್ಚಾದರೆ ಅಂತಹ ಆರ್ಥಿಕ ಚಟುವಟಿಕೆಯನ್ನು ಬಿಟ್ಟುಬಿಡುವುದೇ ಮೇಲು. ಆದರೆ ಇಂಥ ಆಯ ಮತ್ತು ವ್ಯಯದ ಗಣಿಕೆಯನ್ನು ಮಾಡುವಾಗ ಸಮಾಜಕ್ಕೆ ಆಗುವ ಲಾಭ ಮತ್ತು ಹಾನಿಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.  ಮಾಲಿನ್ಯದ ಮೂಲಕ ಲಾಭಕ್ಕಿಂತ ಹಾನಿಯೇ ಹೆಚ್ಚಾದರೆ ಇಂತಹ  ಉದ್ಯಮಗಳಿಗೆ ಆಸ್ಪದವೇ ಇರಕೂಡದು.

ನೆದರ್‌ಲ್ಯಾಂಡಿನೊಡನೆ ತುಲನಾತ್ಮಕವಾಗಿ ಮಾಡಿದ ಉಪಯುಕ್ತ ಅಧ್ಯಯನದಲ್ಲಿ ಇನ್ನೂ ಎರಡೂ ಅಂಶಗಳು ಹೊರಬಂದವು. ಸರಕಾರ ಮಾಲಿನ್ಯ ಮಿತಿಗಳನ್ನು (Pollution standards) ನಿರ್ಧರಿಸುತ್ತದೆ ಎಂದು ಹೇಳಿದೆಯಲ್ಲವೆ? ಮಾಲಿನ್ಯಗಳನ್ನು ಈ ಮಿತಿಗಳಿಗೆ ಮೀರದಂತೆ ಉದ್ಯಮಗಳು ನಿಯಂತ್ರಿಸಬೇಕಾಗುತ್ತದೆ. ಈ ಮಿತಿಗಳು ಭಾರತಕ್ಕಿಂತ ನೆದರ್‌ಲ್ಯಾಂಡಿನಲ್ಲಿ ಬಿಗಿಯಾಗಿವೆ ಅಂದರೆ ಕೆಳಗಿವೆ. ಅಲ್ಲಿಯಕ್ಕಿಂತ ಭಾರತದಲ್ಲಿ ಕಾಯಿದೆ ಪ್ರಕಾರ ಹೆಚ್ಚು ಮಾಲಿನ್ಯವನ್ನು ಪರಿಸರದಲ್ಲಿ ತೂರುವ ಅವಕಾಶವಿದೆ. ಎರಡನೇ ಅಂಶವೆಂದರೆ ಇಷ್ಟಿದ್ದರು ಈ ಸುಲಭ ಮಿತಿಗಳನ್ನು ಸಹ ಭಾರತದಲ್ಲಿ (ಕರ್ನಾಟಕದಲ್ಲಿ) ಅನುಸರಿಸಲಾಗುತ್ತಿಲ್ಲ. ಅನೇಕ ಉದ್ಯಮಗಳು ಅದಕ್ಕಿಂತ ಹೆಚ್ಚು ಮಾಲಿನ್ಯವನ್ನು ಬಿಡುತ್ತವೆಯಷ್ಟೇ ಅಲ್ಲ ಅನೇಕ ತರಹದ ಮಾಲಿನ್ಯ ತೂರುವಿಕೆಯ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಲಕ್ಷ ಕೊಡುವುದಿಲ್ಲ. ಬಟ್ಟೆಬರೆ ಉದ್ಯಮದಲ್ಲಿ ಸಾಧಾರಣ ೩೦ ತರಹದ ಮಾಲಿನ್ಯಗಳ ಬಗ್ಗೆ ಮಾಲಿನ್ಯ ಮಿತಿಗಳ ಮೇಲಿನ ಆದೇಶದಲ್ಲಿ ಉಲ್ಲೇಖವಿದೆ. ಆದರೆ ತನಿಖೆ ನಡೆಸುವುದು ನಾಲ್ಕೈದು ತರಹದ ಮಾಲಿನ್ಯಗಳ ಬಗ್ಗೆ ಮಾತ್ರ. ನೆದರ್‌ಲ್ಯಾಂಡಿನಲ್ಲಿ ಹಾಗಲ್ಲ. ಅಲ್ಲಿ ಬಹುಮಟ್ಟಿಗೆ ಎಲ್ಲ ತರಹದ ಮಾಲಿನ್ಯಗಳ ಬಗ್ಗೆ ಲಕ್ಷ ಕೊಡಲಾಗುವುದು.

ಇಂತಹ ಪರಿಸ್ಥಿತಿಯಲ್ಲಿ ಭವಿಷ್ಯದ ದೃಷ್ಟಿಯಿಂದ ಇನ್ನೊಂದು ಮಾತು ಚಿಂತೆಗೆ ಆಸ್ಪದ ಕೊಡುತ್ತಲಿದೆ. ಉದ್ಯಮಗಳನ್ನು ಸರಳವಾಗಿ ಮಾಲಿನ್ಯದ ದೃಷ್ಟಿಯಿಂದ ಅತೀವ ಮಾಲಿನ್ಯಗಳನ್ನು ಬಿಡುವ ಮತ್ತು ಇತರ ಉದ್ಯಮಗಳೆಂದು ಎರಡು ವಿಧವಾಗಿ ವಿಭಜಿಸುವುದು ಇದೆ. ಮೊದಲನೆಯ ವರ್ಗದಲ್ಲಿ ಸಕ್ಕರೆ, ರಾಸಾಯನಿಕ ಗೊಬ್ಬರ, ಸಿಮೆಂಟ್, ಡಿಸ್ಟಿಲರಿ, ಅಲ್ಯುಮಿನಿಯಮ್, ಪೆಟ್ರೋಕೆಮಿಕಲ್ಸ್, ಥರ್ಮಲ್ ಪಾವರ್, ಕಾಸ್ಟಿಕ್ ಸೋಡಾ, ಆಯಿಲ್ ರಿಫೈನರಿ, ಸಲ್ಫ್ಯುರಿಕ್ ಆಸಿಡ್, ಟ್ಯಾನರೀಗಳು, ಕಾಪರ್ ಸಲ್ಫೇಟ್, ಝಿಂಕ್, ಸಲ್ಫೇಟ್, ಕಬ್ಬಿಣ ಮತ್ತು ಉಕ್ಕು, ಸಣ್ಣ ಗಾತ್ರದ ಕಾಗದ ಮತ್ತು ಪಲ್ಟ್, ಕೀಟನಾಶಕ ರಾಸಾಯನಿಕಗಳು, ಡೈ ಮತ್ತು ಡೈ ಇಂಟರ್ ಮೀಡಿಯಟ್ಸ್ ಮತ್ತು ಔಷಧಿ (ಫಾರ್ಮಾಸ್ಯೂಟಿಕಲ್ಸ್) ಇವುಗಳು ಬರುತ್ತವೆ.

ಚಿಂತೆಗೆ ಆಸ್ಪದ ಕೊಡುವ ವಿಷಯವೆಂದರೆ ಇತರ ಉದ್ಯಮಗಳಿಗಿಂತ ಈ ಅತಿ ಹೆಚ್ಚು ಪ್ರದೂಷಣೆಯನ್ನು ಮಾಡುವ ಉದ್ಯಮಗಳೇ ಹೆಚ್ಚಿನ ಗತಿಯಿಂದ ಅಭಿವೃದ್ಧಿ ಹೊಂದುತ್ತಲಿವೆ. ಈ ಮಾತನ್ನು ನಾಲ್ಕು ದೃಷ್ಟಿಯಿಂದ ಹೇಳಬಹುದು – ಉದ್ಯಮಗಳ ಸಂಖ್ಯೆ, ಇಂಧನದ ಬಳಕೆ, ಉತ್ಪಾದಕ ಸಾಮಗ್ರಿ (inputs) ಗಳ ಬಳಕೆ ಮತ್ತು ಉತ್ಪಾದನೆ ಮೌಲ್ಯ ಇದನ್ನು ಕೆಳಗಿನ ಕೋಷ್ಟಕ – ೩ರಲ್ಲಿ ಕಾಣಬಹುದು. ನಮ್ಮ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯನ್ನು ಮುಂದೆ ಇನ್ನೂ ಬಿಗಿಗೊಳಿಸದೇ ಗತ್ಯಂತರವಿಲ್ಲ.

ಕೋಷ್ಟಕ – ೩: ಅತೀವ ಮಾಲಿನ್ಯವನ್ನು ತೂರುವ ಉದ್ಯಮಗಳ ಮತ್ತು ಇತರ ಉದ್ಯಮಗಳ ಪ್ರಗತಿ – ತುಲನಾತ್ಮಕವಾಗಿ (೧೯೮೦-೮೧ ಮತ್ತು ೧೯೮೮-೮೯ರ ನಡುವಿನ ಪ್ರತಿಶತ ವೃದ್ಧಿ)

  ಅತೀವಮಾಲಿನ್ಯ ತೂರುವ ಉದ್ಯಮಗಳು ಇತರ ಉದ್ಯಮಗಳು
ಭಾರತ ಕರ್ನಾಟಕ ಭಾರತ ಕರ್ನಾಟಕ
ಉದ್ಯಮದ ಘಟಕಗಳ ಸಂಖ್ಯೆ ೩೪.೪ ೩೧.೬ ೩.೨ ೫.೭
ಇಂದನ ಬಳಕೆ ೩೬೭.೮ ೨೫೨.೮ ೨೫೦.೫ ೨೦೯.೦
ಉತ್ಪಾದಕ ಸಾಮಗ್ರಿಗಳ ಬಳಕೆ ೨೭೧.೬ ೨೩೮.೯ ೧೯೮.೮ ೧೮೧.೬
ಉತ್ಪಾದನಾ ಮೌಲ್ಯ ೨೪೧.೪ ೨೪೪.೪ ೧೯೩.೭ ೧೭೮.೨

ಟಿಪ್ಪಣಿ : (೨), (೩) ಮತ್ತು (೪) ಇವು ಮೌಲ್ಯದಲ್ಲಿಯ ವೃದ್ಧಿಯನ್ನು ತೋರಿಸುತ್ತವೆ. ಈ ವೃದ್ಧಿಯಲ್ಲಿ ಬೆಲೆಯೇರಿಕೆಯೂ ಸೇರ್ಪಡೆಯಾಗಿದೆ. Annual Survey of Industriesನಲ್ಲಿ ಕೊಟ್ಟ ಅಂಕಿ-ಸಂಖ್ಯೆಗಳನ್ನು ಆಧರಿಸಿ ಈ ಕೋಷ್ಟಕವನ್ನು ತಯಾರಿಸಲಾಗಿದೆ.

ಭಾರತವು ತನ್ನ ಉತ್ಪಾದನೆಯನ್ನು ನಿರ್ಯಾತಗೊಳಿಸುವಲ್ಲಿ ಪರಿಸರದ ಬಗ್ಗೆ ಇರುವ ಸಡಿಲ ಮನೋಭಾವ ಒಂದು ಅಡ್ಡಿಯಾಗಿ ಬರುತ್ತದೆ. ಪಾಶ್ಚಾತ್ಯ ದೇಶಗಳು ತಮ್ಮ ಮಾಲಿನ್ಯ ಮಿತಿಗಳಿಗೆ ಮೀರಿ ತಯಾರಿಸಿದ ಸರಕುಗಳ ಆಮದಗುಳಿಗೆ ಈಗ ಆಸ್ಪದ ಕೊಡುವುದಿಲ್ಲ. ಹೀಗಾಗಿ ತಮ್ಮ ಹಿತದ ದೃಷ್ಟಿಯಿಂದಲೂ. ಸಹ ನಮ್ಮ ಉದ್ಯಮಿಗಳು ಪರಿಸರದ ಬಗ್ಗೆ ಹೆಚ್ಚು ಗಂಭೀರ ಆಸಕ್ತಿಯನ್ನು ವಹಿಸಬೇಕಾಗಿದೆ.

ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ನಾವು ಒಂದು ಸುಸಂಸ್ಕೃತವಾದ ಉನ್ನತ ನಾಗರಿಕತೆಯನ್ನು ಅಳವಡಿಸಿಕೊಂಡ ರಾಷ್ಟ್ರವೆಂದು ಪರಿಗಣಿಸಲ್ಪಡಬೇಕಾದರೆ ಅದು ಮಲಿನ ರಹಿತವೂ ಆಗಿರಬೇಕಾಗುತ್ತದೆ. ಉದ್ಯಮಿಗಳಷ್ಟೇ ಅಲ್ಲ ನಮ್ಮ ಜನಸಾಮಾನ್ಯರಿಗೂ ನಮ್ಮ ಮೂಲಕ ಇತರರ ಸೌಖ್ಯ ಕೆಡಬಹುದೋ ಎಂದು ಯೋಚನೆ ಮಾಡುವ ಮನೋಭಾವವಿರುವುದಿಲ್ಲ. ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟಿಕೊಂಡರೆ ಸಾಕು ಮನೆಯೊಳಗಿನ ಮಾಲಿನ್ಯವನ್ನು ಹೊರಕ್ಕೆ ಬೀದಿಯಲ್ಲಿ ಸಾಗಿಸಿ ಬಿಟ್ಟರೆ ನಮ್ಮ ಮನಸ್ಸಿಗೆ ನೆಮ್ಮದಿ ಇದೇ ಮನೋಭಾವ ನಮ್ಮ ಉದ್ಯಮಿಗಳಿಗೂ ಇದೆ. ನಮ್ಮಲ್ಲಿಯ ಬಡತನದ ನೆವವೊಡ್ಡಿ ಮಾಲಿನ್ಯವನ್ನು ಸಹಿಸಬೇಕಾಗಿಲ್ಲ. ಸಾರ್ವಜನಿಕ ಮಾಲಿನ್ಯದಿಂದ, ಪರಿಸರ ಪ್ರದೋಷಣೆಯಿಂದ ಅವರಿಗೆ ಬಹಳಷ್ಟು ಹೊಡೆತ ಇತರರಿಗೆ ಬರುವುದಿಲ್ಲ. ಮಾಲಿನ್ಯಕ್ಕೆ ಮುಖ್ಯ ಕಾರಣಭೂತರೇ ಶ್ರೀಮಂತರು. ಇಂತಹ ನೆವಗಳನ್ನು ಬಿಟ್ಟು ಈಗ ನಿರ್ಮಲವಾದ ಭಾರತವನ್ನು ವಿಶೇಷವಾಗಿ ಕರ್ನಾಟಕವನ್ನು ಕಟ್ಟುವಲ್ಲಿ ಕೆಲಸ ಮಾಡಬೇಕಾಗಿದೆ.