ಕನ್ನಡ ವಿಶ್ವವಿದ್ಯಾಲಯದ ಮಾಹಿತಿ ಕೇಂದ್ರದ ಆಶ್ರಮದಲ್ಲಿ ದಿನಾಂಕ ೧೩-೧೧-೯೫ ಮತ್ತು ೧೪-೧೧-೯೫, ಈ ಎರಡು ದಿನಗಳ ಕಾಲ ‘ಕರ್ನಾಟಕ ಆರ್ಥಿಕತೆ’ ಕುರಿತ ಮಹತ್ವದ ವಿಚಾರ ಸಂಕಿರಣ ನಡೆಯಿತು. ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿಯ, ಸ್ಥಿತಿ-ಗತಿಗಳ ಕುರಿತು ಕನ್ನಡದಲ್ಲಿ ಆಲೋಚಿಸಿ, ಚರ್ಚಿಸಿ, ಪ್ರಗತಿಗೆ ಪೂರಕವಾದ ಅಂಶಗಳನ್ನು ಮನದಟ್ಟು ಮಾಡಿಕೊಂಡು, ಮುಂದಿನ ಹೆಜ್ಜೆಗಳನ್ನು ಹಾಕುವುದರ ಹಿನ್ನೆಲೆಯಲ್ಲಿ  ಈ ವಿಚಾರ ಸಂಕಿರಣ ಏರ್ಪಾಟಾಗಿತ್ತು.

ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಆವರಣದ ‘ಚಾವಡಿ’ಯಲ್ಲಿ ಈ ವಿಚಾರ ಸಂಕಿರಣದಲ್ಲಿ ನಾಡಿನ ಗಣ್ಯ ಅರ್ಥಶಾಸ್ತ್ರಜ್ಞರು, ವಿದ್ವಾಂಸರು, ರೈತಮುಖಂಡರು, ವಿವಿಧಗಣ್ಯರು ಪಾಲ್ಗೊಂಡಿದ್ದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಶೇಖರ ಕಂಬಾರರು ದಿ ೧೩-೧೧-೧೯೯೫ ರಂದು ಬೆಳಿಗ್ಗೆ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಖ್ಯಾತ ಅರ್ಥಶಾಸ್ತ್ರಜ್ಞರಾದ ಪ್ರೊ.ಅಬ್ದುಲ್ ಅಜೀಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಐಸೆಕೆ ಸಂಸ್ಥೆಯ ಡಾ.ಎಂ.ವೆಂಕಟರೆಡ್ಡಿ ಅಧ್ಯಕ್ಷತೆ ವಹಸಿಸಿದ್ದರು. ಉದ್ಘಾಟನೆಯ ನಂತರ ಗೋಷ್ಟಿಗಳು ಆರಂಭವಾದವು.

ಪ್ರೊ.ಅಬ್ದುಲ್ ಅಜೀಜ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಬೆಳಗಿನ ಮೊದಲ ಗೋಷ್ಠಿಯಲ್ಲಿ ಮುಖ್ಯರಾಗಿ ಮೂರು ಪ್ರಬಂಧಗಳನ್ನು ಮಂಡಿಸಲಾಯಿತು. ಡಾ.ಪಿ. ಬ್ರಹ್ಮಾನಂದ ಅವರ ‘ಕರ್ನಾಟಕದ ಬೆಳವಣಿಗೆಯ ಕೆಲವು ಅಂಶಗಳು’ ಕುರಿತ ಪ್ರಬಂಧವನ್ನು ಅವರಗೈರು ಹಾಜರಿಯಲ್ಲಿ ಡಾ. ಶಿವಣ್ಣ ಮಂಡಿಸಿದ್ದರು. ಡಾ.ಎಂ. ಪ್ರಹ್ಲಾದಾಚಾರ್ ಅವರು ಕರ್ನಾಟಕದಲ್ಲಿ ಕೈಗಾರಿಕಾಭಿವೃದ್ಧಿ ಅನುಭವ ಸಮಸ್ಯೆ ಹಾಗೂ ಅವಕಾಶಗಳ ಬಗ್ಗೆ, ಡಾ.ಎಂ.ವಿ. ನಾಡಕರ್ಣಿ ಮತ್ತು ಡಾ.ಜಿ.ಎಸ್.ಶಾಸ್ತ್ರಿ, ಔದ್ಯೋಗಿಕರಣದ ಇನ್ನೊಂದು ಮುಖದ ಬಗ್ಗೆ ಪ್ರಬಂಧಗಳನ್ನು ಮಂಡಿಸಿದರು. ಈ ಉಪನ್ಯಾಸಗಳ ನಂತರ ಅರ್ಥಪೂರ್ಣ ಚರ್ಚೆ ನಡೆಯಿತು. ಮಾಹಿತಿ ಕೇಂದ್ರದ ನಿರ್ದೇಶಕರಾದ ಶ್ರೀ ಕೆ.ಜಿ. ವಾಸುಕಿ ಹಾಗೂ ಡಾ.ಪಿ.ಕೆ. ರೇಣುಕಾರ್ಯ ಅವರು ಗೋಷ್ಠಿಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.

ದಿ. ೧೩-೧೧-೯೫ರಂದು ನಡೆದ ಎರಡನೆ ಗೋಷ್ಠಿಯಲ್ಲಿ ಒಟ್ಟು ನಾಲ್ಕು ಪ್ರಬಂಧಗಳು ಮಂಡಿತವಾದವು. ಡಾ.ಎಂ.ವೆಂಕಟರೆಡ್ಡಿ ಅವರು ‘ನೀರಾವರಿ ಅಭಿವೃದ್ಧಿಯ ಸಮಸ್ಯೆಗಳು’ ಬಗ್ಗೆ ಪ್ರಬಂಧ ಮಂಡಿಸಿದರು. ಡಾ.ಪಿ.ವಿ.ಶೆಣೈ ಅವರು ಗೈರು ಹಾಜರಿಯಲ್ಲಿ ಶ್ರೀ.ಎಂ.ವಿವೇಕಾನಂದ ಅವರು ‘ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿ’ ಕುರಿತು ವಿಚಾರ ಮಂಡಿಸಿದರು. ಡಾ.ವಿ.ಎಂ. ರಾವ್ ಅವರು ‘ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ’ ಕುರಿತು ಹಾಗೂ ಡಾ.ಸಿ.ಕೆ.ರೇಣುಕಾಚಾರ್ಯ ಅವರು ‘ಕರ್ನಾಟಕದಲ್ಲಿ ಕೈಗಾರಿಕಾ ಸಂಬಂಧಗಳು’ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಡಾ.ಹನುಮಂತ ರಾಯಪ್ಪ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಯ ನಂತರ ಚರ್ಚೆ – ಸಂವಾದಗಳು ನಡೆದವು. ಶ್ರಿ.ಬಿ.ಎಸ್.ಶ್ರೀಕಂಠಾರಾಧ್ಯ ಮತ್ತು ಶ್ರೀ ಟಿ.ಎಸ್.ಸತ್ಯನಾಥ್ ಗೋಷ್ಠಿಯ ಸಂಯೋಜಕರಾಗಿದ್ದರು.

ದಿನಾಂಕ ೧೪-೧೧-೯೫ರಂದು ಆರಂಭವಾದ ಮೂರನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಎಂ.ಪ್ರಹ್ಲಾದಾಚಾರ್ ವಹಿಸಿದ್ದರು. ಪ್ರೊ.ಬಿ.ಎಸ್. ಶ್ರೀಕಂಠಾರಾಧ್ಯ ಅವರು ‘ಕರ್ನಾಟಕದ ಸಾರ್ವಜನಿಕ ಉದ್ಯಮಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆ’ ಕುರಿತು ‘ಕರ್ನಾಟಕ ರಾಜ್ಯದ ಹಣಕಾಸಿನ ‘ ಬಗ್ಗೆ ಕೆ.ಗಾಯತ್ರಿ ಅವರು ಪ್ರಬಂಧಗಳನ್ನು ಮಂಡಿಸಿದರು. ಡಾ.ಎಂ.ಜಾನ್ಸನ್ ಸಾಮ್ಯುಯೆಲ್ ಮತ್ತು ಶ್ರೀ ಎಂ.ಲಿಂಗರಾಜು ಅವರು ಕರ್ನಾಟಕದಲ್ಲಿ ಆರ್ಥಿಕ ಸಾಧನ ಸವಲತ್ತುಗಳು : ಸಮಸ್ಯೆಗಳು ಹಾಗೂ ನಿರೀಕ್ಷೆಗಳು ಕುರಿತು ಪ್ರೊ.ಸಿ.ಹನುಮಂತಪ್ಪ ರಾಯಪ್ಪ ಮತ್ತು ಶ್ರೀಮತಿ ಕೆ.ಎಸ್. ಉಮಾಮಣಿ ಜನರು ‘ಜನಸಂಖ್ಯಾ ಬೆಳವಣಿಗೆ, ಕುಟುಂಬ ಯೋಜನೆ ಹಾಗೂ ಆರೋಗ್ಯ ಸೌಕರ್ಯಗಳ’ ಬಗ್ಗೆ ಹಾಗೂ ಶ್ರೀ ವಿ. ಶಾಂತಪ್ಪ ಮತ್ತು ಶ್ರೀ ಕೇಶವ ಅವರು ‘ಬಡತನ ನಿರುದ್ಯೋಗ ಮತ್ತು ರಕ್ಷಣಾ ಕಾರ್ಯಕ್ರಮಗಳ’ ಬಗ್ಗೆ ತಮ್ಮ ವಿಚಾರಪೂರ್ಣ ಪ್ರಬಂಧಗಳನ್ನು ಮಂಡಿಸಿದರು. ಗೋಷ್ಠಿಯ ನಂತರ ವಿಚಾರಮಂಥನ ನಡೆಯಿತು. ಪ್ರೊ. ಶೇಷಾದ್ರಿ ಮತ್ತು ಡಾ. ಪುರಷೋತ್ತಮ ಬಿಳಿಮಲೆ ಅವರು ಗೋಷ್ಠಿಯ ಸಂಯೋಜಕರಾಗಿದ್ದರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಉಪನ್ಯಾಸಕರಾದ ಶ್ರೀ ಪೂರ್ಣನಂದ ಅವರು ವಿಶೇಷ ಆಹ್ವಾನಿತರಾಗಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ನಾಲ್ಕನೆಯ ಗೋಷ್ಠಿಯಲ್ಲಿ ಪ್ರೊ. ಅಬ್ದುಲ್ ಅಜೀಜ್ ಅವರು ಡಾ.ಐ.ಜಿ.ಎಚ್‌. ಲೂಯಿಸ್ ಅವರ ಭೌತಿಕ ಜೀವನ ಗುಣಮಟ್ಟ ಸೂಚಿ-ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಒಂದು ಮಾಪನ ಎಂಬ ಪ್ರಬಂಧವನ್ನು ಪ್ರೊ.ಅಬ್ದುಲ್ ಅಜೀಜ್ ಅವರು ಮಂಡಿಸಿದರು. ಡಾ.ಎನ್.ಶಿವಣ್ಣ ಅವರು ಸಾಮಾಜಿಕ ಬದಲಾವಣೆ ಪಂಚಾಯತ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಬಗ್ಗೆ ಹಾಗೂ ಶ್ರೀ ಗೋವಿಂದರಾಜು ಅವರು ‘ಕರ್ನಾಟಕದಲ್ಲಿ ರೇಷ್ಮೆ ಕೃಷಿ ಮತ್ತು ಉದ್ಯಮ’ ಕುರಿತು ಪ್ರಬಂಧಗಳನ್ನು ಮಂಡಿಸಿದರು. ಪ್ರೊ.ಹಿ.ಚಿ. ಬೋರಲಿಂಗಯ್ಯನವರು ಗೋಷ್ಠಿಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.

೧೪-೧೧-೯೫ರಂದು ಸಂಜೆ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಿತು. ಪ್ರೊ. ಅಬ್ದುಲ್ ಅಜೀಜ್ ಸಮಾರೋಪ ಭಾಷಣ ಮಾಡಿದರು. ಕುಲಪತಿ ಡಾ.ಚಂದ್ರಶೇಖರ ಕಂಬಾರರು ಅಧ್ಯಕ್ಷತೆ ವಹಿಸಿದ್ದರು.

ಒಟ್ಟು ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಧ್ಯಾಪಕರು, ಸಂಶೋಧಕರು ಹಾಗೂ ಇತರೆ ಸಿಬ್ಬಂದಿ ಪಾ‌ಲ್ಗೊಂಡು, ಚರ್ಚೆಗೆ ಅನುವು ಮಾಡಿಕೊಟ್ಟು ಅವರ ಲಾಭ ಪಡೆದರು. ಈ ವಿಚಾರ ಸಂಕಿರಣ ನಡೆಸಲು ತಗುಲಿದ ಒಟ್ಟು ವೆಚ್ಚ ಸುಮಾರು ರೂ. ೫೨,೦೦೦.೦೦ ಗಳು. ಬ್ಯಾಂಕ್ ಆಫ್ ಇಂಡಿಯಾದ ಕಮಲಾಪುರ ಶಾಖೆಯು ರೂ. ೨೦,೦೦೦.೦೦ಗಳ ನೆರವು ನೀಡಿ ವಿಚಾರ ಸಂಕಿರಣದ ಯಶಸ್ಸಿಗೆ ಸಹಕರಿಸಿತು. ವಿಚಾರ ಸಂಕಿರಣದಲ್ಲಿ ಮಂಡಿತವಾದ ಉತ್ತಮ ಪ್ರಬಂಧಗಳನ್ನು ಚರ್ಚೆಯ ಫಲವಾಗಿ ಹೊರಬಂದ ಅಂಶಗಳನ್ನು ಸೇರಿಸಿ ಪುನಃ ಪರಿಷ್ಕರಿಸಿ ಪ್ರಕಟಿಸುವ ತೀರ್ಮಾನ ಕೈಗೊಳ್ಳಲಾಯಿತು.

ನಿರ್ದೇಶಕರು
ಮಾಹಿತಿ ಕೇಂದ್ರ