ನಿರಂತರ ಅಂತರಗಳಲ್ಲಿ ಸಂಭವಿಸುತ್ತಿರುವ ಕ್ಷಾಮ ಪರಿಸ್ಥಿತಿಯ ದುಷ್ಪರಿಣಾಮಗಳನ್ನು ತೊಡೆದು ಹಾಕಲು ನೀರಾವರಿಯು ಬಹು ಪ್ರಾಮುಖ್ಯ ಹಾಗೂ ಅತೀ ಅಗತ್ಯವೆನಿಸಿದೆ. ಕೃಷಿ ಉತ್ಪಾದನೆಯಲ್ಲಿನ ಸುಧಾರಣೆಯು ಬಹುಪಾಲು ವಿಸ್ತೃತವಾದ ಅಥವಾ ದೊರೆಯುವ ಕೃಷಿಯೋಗ್ಯ ಭೂಮಿಯ ಸಮರ್ಪಕ ಬಳಕೆಯ ಮೇಲೆ ಅವಲಂಬಿಸಿದೆ. ವಿಸ್ತೃತವಾದ ಕೃಷಿಯು ಭವಿಷ್ಯದ ಒಂದು ಹಂತದ ಬಳಿಕ ಸಾಧ್ಯವಿಲ್ಲ. ಏಕೆಂದರೆ, ಹೆಚ್ಚು  ಹೆಚ್ಚು ಭೂಮಿಯನ್ನು ಕೃಷಿಗೆ ಒಳಪಡಿಸುವುದು ಭೌಗೋಳಿಕವಾಗಿ ಅಸಾಧ್ಯವಾಗಿದೆ. ಇನ್ನೊಂದು ರೀತಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಬಾರದ ಮಳೆ ಮತ್ತು ಕಡಿಮೆ ಪ್ರಮಾಣದ ಮಳೆ ವಿಸ್ತೃತ ಕೃಷಿಯ ಸಾಧ್ಯತೆಗಳನ್ನು ಕುಂಠಿತಗೊಳ್ಳುತ್ತದೆ. ಆದುದರಿಂದ ರಾಜ್ಯದಲ್ಲಿ ಲಭ್ಯವಿರುವ ಜಲಸಂಪನ್ಮೂಲಗಳನ್ನು ನೀರಾವರಿಗಾಗಿ ರಕ್ಷಿಸುವ ಉದ್ದೇಶವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಕೆಲವಾರು ದೊಡ್ಡ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳನ್ನು ನಿರ್ಮಿಸುವುದರ ಮೂಲಕ ರಾಜ್ಯವು, ನೀರಿನ ಹೆಚ್ಚಿನ ಬಳಕೆಯತ್ತ ಹಲವಾರು ಉತ್ತಮ ಹೆಜ್ಜೆಗಳನ್ನು ತೆಗೆದುಕೊಂಡಿದೆ ಎನ್ನುವುದಕ್ಕೆ ಸಂಶಯವಿಲ್ಲ. ಆದರೂ, ಈ ಪ್ರಗತಿಯು ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ಕಂಡುಬರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಕರ್ನಾಟಕದ ನೀರಾವರಿ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಹಾಗೂ ಸಂದಿಗ್ಧಗಳನ್ನು ವಿಶ್ಲೇಷಿಸಲು ಯತ್ನಿಸಲಾಗಿದೆ.

ದೇಶದ ಒಟ್ಟಾರೆ ಭೌಗೋಳಿಕ ಪ್ರದೇಶದಲ್ಲಿ ಕರ್ನಾಟಕವು ಶೇಕಡಾ ೫.೮೧ ಪ್ರದೇಶವನ್ನು ಹೊಂದಿರುತ್ತದೆ ಹಾಗೂ ದೇಶದ ಒಟ್ಟು ಜನಸಂಖ್ಯೆ (೧೯೯೧)ಯಲ್ಲಿ ಶೇ. ೫.೩೧ ಜನಸಂಖ್ಯೆಯನ್ನು ಹೊಂದಿರುತ್ತದೆ. ರಾಜ್ಯದಲ್ಲಿ ೧.೪ ಲಕ್ಷ ಚದರ ಕಿಲೋಮೀಟರ್ ಕೃಷಿ ಭೂಮಿಯಾಗಿದ್ದರೆ, ೦.೫೫ ಲಕ್ಷ ಚದರ ಕಿಲೋಮೀಟರ್ ಮಾತ್ರ ನೀರಾವರಿ ಪ್ರದೇಶವಾಗಿದೆ. ಇದು ಶೇ. ೪೦ ಆಗಿರುತ್ತದೆ. ಉಳಿದ ಶೇ. ೬೦  ಕೃಷಿ ಭೂಮಿಯು ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿದೆ. ಇದು, ರಾಜ್ಯದಲ್ಲಿ ದೊರೆಯುವ ಎಲ್ಲಾ ಜಲಮೂಲ (ಭೂಮಿಯ ಮೇಲಿರುವ ಮತ್ತು ಅಂತರ್ಜಲ)ಗಳ ಸರಿಯಾದ ಬಳಕೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

ರಾಜ್ಯದಲ್‌ಇಲ ಕೃಷ್ಣ, ಕಾವೇರಿ, ತುಂಗಭದ್ರಾ, ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್, ಪಾಲಾರ್ ಮುಂತಾದ ನದಿಮೂಲಗಳು ಇವೆ ಮತ್ತು ಒಟ್ಟಾರೆ ತೊಂಬತ್ತೇಳು ಸಾವಿರದ ಮುನ್ನೂರ ಐವತ್ತೆರಡು (೯೭, ೩೫೨) ದಶಲಕ್ಷ ಘನ ಮೀಟರ್ (೩೦೪೦ TMC) ವಾರ್ಷಿಕ ನೀರಿನ ಹರಿವು ಇದೆ. ಇದರ ನಲ್ವತ್ತೊಂಬತ್ತು ಶೇಕಡಾ (೧೬೮೭ TMC), ಮಿತವಾಗಿ ನೀರಾವರಿ ಉದ್ದೇಶಗಳಿಗಾಗಿ ಉಪಯೋಗಿಸಲಾಗಿದೆ. ಹೆಚ್ಚಾಗಿ, ಈ ನದಿಗಳಿಂದ ನೀರನ್ನು ನೀರಾವರಿ ಉದ್ದೇಶಗಳಿಗಾಗಿ ಉಪಯೋಗಿಸಲಾಗಿದೆ. ಹೆಚ್ಚಾಗಿ, ಈ ನದಿಗಳಿಂದ ನೀರನ್ನು ನೀರಾವರಿ ಉದ್ದೇಶಗಳಿಗಾಗಿ ಇಚ್ಛಿತ ಮಟ್ಟಕ್ಕೆ ಉಪಯೋಗ ಮಾಡಲಾಗದಿರುವುದು ದುರಾದೃಷ್ಟ. ಇದು ಯಾಕೆಂದರೆ ಪ್ರತಿಕೂಲ ಭೌಗೋಳಿಕ ಮೇಲ್ಮೈಗಳಿಂದಾಗಿ ನೀರನ್ನು ಹಿಡಿದಿಡುವ ಅಣೆಕಟ್ಟುಗಳನ್ನು ಕಟ್ಟಲು ಅಸಾಧ್ಯವಾಗಿರುವುದು. ಇದು ನಿರ್ದಿಷ್ಟವಾಗಿ ಪಶ್ಚಿಮಕ್ಕೆ ಹರಿಯುವ ನದಿಗಳ ಬಗೆಗಂತೂ ಬಹಳ ಸತ್ಯ. ಇಳುವರಿಯ (ನೀರಿನ ಹರಿವು)ಬಗ್ಗೆ ರಾಜ್ಯದಲ್ಲಿ ಈ ನದಿಗಳ ಕೊಡುಗೆಯು ಒಟ್ಟು ೫೮ ಆಗಿರುತ್ತದೆ. ರಾಜ್ಯವು ಕೇವಲ ೧೬.೮೭ ಟಿ.ಎಂ.ಸಿ. ನೀರಿನ ಬಳಕೆಯಲಷ್ಟೆ ಸಂತೃಪ್ತಿ ಪಡೆಯಬೇಕಾಗಿದೆ.

ನೀರಾವರಿ ಅಭಿವೃದ್ಧಿಯ ಸ್ಥಾನ ಮಾನ: ಒಂದು ಪಕ್ಷಿ ನೋಟ

ನೀರಾವರಿ ಅಭಿವೃದ್ಧಿ ಶಕ್ಯತೆಯ ಬಗ್ಗೆ ಕರ್ನಾಟಕವು ಒಂದು ಹಿಂದುಳಿದ ರಾಜ್ಯವಾಗಿದೆ. ನೀರಾವರಿಯ (ದೊಡ್ಡ, ಮಧ್ಯಮ ಮತ್ತು ಕಿರು, ಅಂತರ್ಜಲವನ್ನೂ ಸೇರಿಸಿ) ಅಭಿವೃದ್ಧಿಯ ಗರಿಷ್ಠ ಶಕ್ಯತೆಯು ೫.೫ ಮಿಲಿಯ ಹೆಕ್ಟೇರುಗಳಾಗಿದೆ. ಇದು ದೇಶದ ಒಟ್ಟಾರೆ ಅಭಿವೃದ್ಧಿ ಶಕ್ಯತೆಯ ೪.೮ ಶೇಕಡಾವಾಗಿರುತ್ತದೆ. ೧೯೯೧-೯೨ರವರೆಗಿನ ದೊರೆತಿರುವ ಅಂಕಿ ಸಂಖ್ಯೆಗಳಂತೆ, ರಾಜ್ಯದ ಒಟ್ಟು ನಿವ್ವಳ ಬಿತ್ತನೆ ಪ್ರದೇಶದಲ್ಲಿ ೨೧.೬* ಶೇಕಡಾ ಪ್ರದೇಶವು ನೀರಾವರಿ ಪ್ರದೇಶವಾಗಿರುತ್ತದೆ. ಆದರೆ ದೇಶದ ಸರಾಸರಿ ನೀರಾವರಿ ಬಿತ್ತನೆಯು ೩೩ ಶೇಕಡಾವಾಗಿರುತ್ತದೆ.

ರಾಷ್ಟ್ರೀಯ ಸರಾಸರಿಗೆ ಹೋಲಿಸಿದಾಗ ಒಟ್ಟಾರೆಯಾಗಿ ರಾಜ್ಯವು ಈ ಬಗ್ಗೆ ಹಿಂದುಳಿದಿರುವ ಸೂಚಕವಾಗಿದೆ. ನೀರಾವರಿಯ ಅಭಿವೃದ್ಧಿಯ ಶಕ್ಯತೆ ಬಗ್ಗೆ ಕರ್ನಾಟಕವು ತೀವ್ರವಾದ ಅಂತರ್ ಪ್ರಾದೇಶಿಕ ಅಸಮತೋಲನವನ್ನು ಪಡೆದಿದೆ.

ಕೋಷ್ಟಕ – ೧
ಕರ್ನಾಟಕದಲ್ಲಿ ಜಿಲ್ಲಾವಾರು ನಿವ್ವಳ ಬಿತ್ತನೆ ಪ್ರದೇಶದಲ್ಲಿನ ಒಟ್ಟು ಶೇಕಡಾ ನೀರಾವರಿ ಪ್ರದೇಶ

ಕ್ರ.ಸಂ ಜಿಲ್ಲೆ ಒಟ್ಟು ಬಿತ್ತನೆ ೧೯೫೭-೫೮ ಪ್ರದೇಶದಲ್ಲಿ ೧೯೮೩-೮೪ ಶೇಕಡಾ ನೀರಾವರಿ ಪ್ರದೇಶ ೧೯೯೧-೯೨
೧. ಬೆಂಗಳೂರು ೧೦.೯ ೧೯.೦ ೧೯.೨
೨. ಬೆಳಗಾಂ ೫.೯ ೨೦.೬ ೨೮.೯
೩. ಬಿಜಾಪುರ ೧.೮ ೧೦.೮ ೨೦.೮
೪. ಚಿಕ್ಕಮಗಳೂರು ೩೨.೭ ೧೧.೨ ೧೦.೧
೫. ಚಿತ್ರದುರ್ಗ ೭.೩ ೧೮.೫ ೨೦.೨
೬. ದಕ್ಷಿಣ ಕನ್ನಡ ೨೪.೭ ೩೯.೩ ೪೩.೦
೭. ಧಾರವಾಡ ೫.೦ ೮.೭ ೧೪.೭
೮. ಹಾಸನ ೧೫.೭ ೧೪.೬ ೧೭.೧
೯. ಕೊಡಗು ೬.೭ ೩.೦ ೨.೪
೧೦. ಕೋಲಾರ ೧೭.೦ ೨೩.೮ ೨೭.೩
೧೧. ಮಂಡ್ಯ ೨೬.೦ ೩೮.೨ ೩೭.೬
೧೨. ಮೈಸೂರು ೧.೨ ೧೨.೪ ೨೫.೨
೧೩. ಶಿವಮೊಗ್ಗ ೪೧.೫ ೪೧.೮ ೪೪.೬
೧೪. ತುಮಕೂರು ೯.೬ ೧೩.೨ ೧೩.೬
೧೫. ಉತ್ತರ ಕನ್ನಡ ೨೦.೫ ೧೯.೪ ೨೯.೯
೧೬. ಬಳ್ಳಾರಿ ೩.೫ ೨೦.೭ ೨೭.೭
೧೭. ಬೀದರ್ ೨.೭ ೭.೭ ೧೧.೭
೧೮. ಗುಲ್ಬರ್ಗಾ ೧.೪ ೨.೫ ೧೪.೧
೧೯. ರಾಯಚೂರು ೧.೨ ೧೨.೪ ೨೫.೪
  ರಾಜ್ಯ ೭.೫ ೧೫.೦ ೨೧.೬

ಮೂಲ: ಕರ್ನಾಟಕ ಸರ್ಕಾರ : ಆರ್ಥಿಕ ಮತ್ತು ಅಂಕಿ ಸಂಖ್ಯೆಗಳ ಬ್ಯೂರೋ : ವಿವಿಧ ವರ್ಷಗಳಿಗೆ ಪಡೆದ ಅಂಕಿ ಅಂಶಗಳಿಂದ ಲೆಕ್ಕ ಹಾಕಿರುವುದು.

ಕೊಷ್ಟಕ ೧ ರಲ್ಲಿ ನೀಡಲಾಗಿರುವ ನಿವ್ವಳ ಬಿತ್ತನೆ ಪ್ರದೇಶದಲ್ಲಿನ ಶೇಕಡಾ ಒಟ್ಟು ನೀರಾವರಿ ಪ್ರದೇಶವು ಈ ನಿಲುವನ್ನು ಬೆಂಬಲಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ವ್ಯತ್ಯಾಸಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದರೂ, ನೀರಾವರಿ ಅಭಿವೃದ್ಧಿಯಲ್ಲಿ ಅಂತರ್ ಜಿಲ್ಲಾ ಅಸಮತೋಲನವು ಕೋಷ್ಟಕ ೧ರಲ್ಲಿ ತೋರಿಸಿರುವಂತೆ ರಾಜ್ಯದಲ್ಲಿ ಇನ್ನೂ ಮುಂದುವರಿಯುತ್ತಿದೆಯೆಂಬುದು ಕಾಣುತ್ತದೆ. ಒಂದು ಕುತೂಹಲಕಾರಿ ಅಂಶವೆಂದರೆ, ಒಟ್ಟಾರೆ ೧೯ ಜಿಲ್ಲೆಗಳ ಪೈಕಿ ೧೦ ಜಿಲ್ಲೆಗಳಲ್ಲಿನ ನಿವ್ವಳ ಬಿತ್ತಿದ ಪ್ರದೇಶಗಳಲ್ಲಿನ ಒಟ್ಟು ನೀರಾವರಿ ಪ್ರದೇಶದ ಶೇಕಡಾವಾರು ಸಂಖ್ಯೆಯು ಉಲ್ಲೇಖಿತ ಮೂರು ಅವಧಿಗಳಲ್ಲೂ ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದೆ. ಈ ಸಂಬಂಧ ಜಿಲ್ಲೆಗಳು ಪಡೆದಿರುವ ಸ್ಥಾನಗಳಲ್ಲಿ ಬದಲಾವಣೆ ಆಗಿವೆ. ಕೆಲವು ಜಿಲ್ಲೆಗಳಲ್ಲಿ ಅಂದರೆ ರಾಯಚೂರು ಮತ್ತು ಬಳ್ಳಾರಿಯಂತಹ ಜಿಲ್ಲೆಗಳಲ್ಲಿ ಬದಲಾವಣೆಗಳು ಮುಕ್ತವಾಗಿ ಕಾಣುವಂತೆ ಇವೆ. ಇಲ್ಲಿ ಅನುಕ್ರಮವಾಗಿ ೧೯೫೭-೫೮ರಲ್ಲಿ ೧.೨%ಇದ್ದ ನೀರಾವರಿ ಪ್ರದೇಶವು ೧೯೯೧-೯೨ರಲ್ಲಿ ೨೫.೪%ಕ್ಕೆ ಹಾಗೂ ೩.೫%ರಿಂದ ೨೭.೭% ಏರಿದೆ. ಆ ಜಿಲ್ಲೆಗಳಲ್ಲಿ ಇಂತಹ ಗಮನಾರ್ಹ ಏರಿಕೆಯು, ಕಾಲುವೆ ನೀರಾವರಿಯನ್ನು ಸರ್ಕಾರವು ಪ್ರೋತ್ಸಾಹಿಸಿರುವ ಪ್ರಯತ್ನದಿಂದ ಆಗಿರುವಂತೆ ಕಾಣುತ್ತದೆ. ರಾಜ್ಯ ಸರಾಸರಿಗಿಂತಲೂ ಬಹಳಷ್ಟು ಕಡಿಮೆಯಿದ್ದರೂ ಗುಲಬರ್ಗಾದಲ್ಲಿನ ನಿವ್ವಳ ನೀರಾವರಿ ಪ್ರದೇಶದಲ್ಲಿನ ಏರಿಕೆಯು ಸಹ ಗಮನಾರ್ಹ. ಇನ್ನೊಂದು ಕಡೆಯಲ್ಲಿ, ಬೀದರ್‌ನಂತಹ ಜಿಲ್ಲೆಗಳಲ್ಲಿ, ಎಲ್ಲಿ ಕಾಲುವೆ ನೀರಾವರಿಗೆ ಹೆಚ್ಚಿನ ಅವಕಾಶವಿಲ್ಲವೋ, ಅಲ್ಲಿ ನೀರಾವರಿಯ ನಿವ್ವಳ ಪ್ರದೇಶಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳಿಲ್ಲ. ಸ್ಥಳೀಯವಾಗಿ ದೊರಕುವ ಜಲಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು ಮತ್ತು ನೀರು ಹೆಚ್ಚುವರಿಯಾಗಿ ದೊರೆಯುವ ಪ್ರದೇಶಗಳಿಂದ ಅದನ್ನು ಇತರ ಪ್ರದೇಶಗಳಿಗೆ ವರ್ಗಾಯಿಸುವಂತಹ ನ್ಯಾಯ ಸಮ್ಮತವಾದ ಕಾರ್ಯಕ್ರಮಗಳ ಸಮ್ಮಿಶ್ರದ ಅಗತ್ಯವನ್ನು ಇದು ಸಾರಿ ಹೇಳುತ್ತದೆ.

ನದಿ ಮೂಲಯುಕ್ತ ನೀರಿನ ಹಂಚುವಿಕೆ ಮತ್ತು ಉಪಯೋಗ

ರಾಜ್ಯದ ವಾರ್ಷಿಕ ನದಿ ನೀರು ಉತ್ಪನ್ನದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಗರಿಷ್ಠ (೫೮%) ನೀಡಿದರೂ, ನೀರಾವರಿಯ ಉದ್ದೇಶಕ್ಕೆ ಇದರ ಬಳಕೆಯು ಬಹಳ ಕಡಿಮೆ (೧೦ ಶೇಕಡಾಕ್ಕಿಂತಲೂ ಕಡಿಮೆ). ಕೃಷ್ಣಾ ಮತ್ತು ಕಾವೇರಿ ನದಿ ತಟಗಳು ರಾಜ್ಯದ ನೀರಾವರಿಯ ಎರಡು ಮುಖ್ಯ ಮೂಲಗಳು. ಈ ಎರಡೂ ನದಿಮೂಲಗಳ ಜಲವನ್ನು ಬೇರೆ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಸಮಸ್ಯೆಯನ್ನೊಳಗೊಂಡಿರುವುದು ಒಂದು ದುರಾದೃಷ್ಟ ಸಂಗತಿ. ಆದುದರಿಂದ, ಈ ಎರಡೂ ನದಿಮೂಲಗಳ ನೀರಿನ ಬಳಕೆಯು ನಿಯಂತ್ರಣದಲ್ಲಿದ್ದು, ಅದು ಅಂತರ್ ರಾಜ್ಯ ನೀರು ಹಂಚಿಕೆಗಳ ಒಪ್ಪಂದದ ಮೇರೆಗೆ ನಿರ್ದಿಷ್ಟ ಮಾದರಿಯಲ್ಲಿರುತ್ತದೆ. ಬಳಕೆಯ ಸ್ಥಿತಿಗತಿಯನ್ನು ಕೋಷ್ಟಕ-೨ರಲ್ಲಿ ನೀಡಲಾಗಿದೆ.

ಕೋಷ್ಟಕ – ೨
ಕರ್ನಾಟಕದಲ್ಲಿ ನದಿ ಮೂಲಯುಕ್ತ ನೀರಿನ ಹಂಚಿಕೆ ಮತ್ತು ಉಪಯೋಗ (ದೊಡ್ಡ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳು)

  ನದಿ ಮೂಲ ಕರ್ನಾಟಕಕ್ಕೆ (ಟಿ.ಎಂ.ಸಿ. ಗಳಲ್ಲಿ) ಇಲ್ಲಿಯತನಕ ಕೈಗೊಂಡ ಬಳಕೆ
ಸಂಪೂರ್ಣಗೊಂಡ ಯೋಜನೆಗಳು ಚಾಲ್ತಿಯಲ್ಲಿರುವ ಯೋಜನೆಗಳು ಒಟ್ಟು
೧. ಕೃಷ್ಣಾ ೭೫೭.೦೦ ೮೫.೭೩ ೪೩೫.೨೦ ೫೨೦.೯೩
(೬೮.೮)
೨. ಗೋದಾವರಿ ೧೫.೨೭   ೧೪.೨೭ ೧೪.೨೭
(೯೩.೪)
೩. ಕಾವೇರಿ ೩೪೫.೩೦ ೧೨೨.೫೦ ೧೭೦.೪೦ ೨೯೨.೯೦
(೮೪.೮)
೪. ಇತರೆ ಮೂಲಗಳು ೪೫.೬೦ ೦.೮೮   ೦.೮೮
(೧.೯)
  ಒಟ್ಟು ೧೨೮೭.೭೨ ೨೦೯.೧೧ ೬೧೯.೮೭ ೮೨೮.೯೮
(೬೪.೪)

ಸೂಚನೆ : ಆವರಣದ ಒಳಗಿರುವ ಸಂಖ್ಯೆಗಳು ಒಟ್ಟು ಲಭ್ಯತೆಯ ಶೇಕಡಾವಾರು ಉಪಯೋಗ.

ಮೂಲ : ಕರ್ನಾಟಕ ಸರ್ಕಾರದ  ನೀರಾವರಿ ಇಲಾಖೆ: ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಕಾರ್ಯಕ್ರಮಗಳ ಮೇಲೆ ಕೆಲಸ ಮಾಡುವ ತಂಡದ ಎಂಟನೇ ಪಂಚವಾರ್ಷಿಕ ಯೋಜನೆಯ ಮೇಲಿನ ವರದಿ, ೧೯೯೦-೯೫.

ಕೋಷ್ಟಕ ೨ ರಲ್ಲಿ ನೀಡಲಾಗಿರುವ ಅಂಕಿ ಸಂಖ್ಯೆಗಳಲ್ಲಿ ಕಾಣುವಂತೆ ಕೃಷ್ಣ ಮತ್ತು ಕಾವೇರಿ ನದಿ ಮೂಲಗಳ ರಾಜ್ಯದ ಪಾಲಿನ ನೀರಿನ ಬಳಕೆಯು ಅಷ್ಟೇನೂ ಪ್ರೋತ್ಸಾಹದಾಯಕವಲ್ಲ. ಇದು ನಿರ್ದಿಷ್ಟವಾಗಿ ಕೃಷ್ಣ ಜಲ ಮೂಲಕ್ಕಂತೂ ಸತ್ಯ. ಯಾಕೆಂದರೆ ಇಲ್ಲಿ ನಿಯುಕ್ತಿಗೊಳಿಸಿದ ಒಟ್ಟು ನೀರಿನ ಮೂರನೇ ಒಂದು ಭಾಗದಷ್ಟು ಇನ್ನು ಉಪಯೋಗ ವಾಗಬೇಕಷ್ಟೆ. ನಿದಿಷ್ಟ ಸಮಯದ ಒಳಗೆ (ಕ್ರಿ.ಶ. ೨೦೦೦) ರಾಜ್ಯವು ತನ್ನ ಪಾಲಿನ ನೀರನ್ನು ವಶಗೊಳಿಸಬೇಕು. ಆದರೆ ಇದರ ಸಂಪೂರ್ಣ ಬಳಕೆಯ ಮೇಲೆ ಇನ್ನೂ ಸಂದೇಹಗಳು ವ್ಯಕ್ತವಾಗುತ್ತಿವೆ. ಕ್ರಿ.ಶ. ೨೦೦೦ನೇ ವರ್ಷದ ಒಳಗೆ ಈ ಉದ್ದೇಶಕ್ಕೆ ಬೇಕಾದ ಹಣವನ್ನು ಸಂಗ್ರಹಿಸಿ ರಾಜ್ಯ ತನ್ನ ಪಾಲಿನ ನೀರನ್ನು ಉಪಯೋಗಿಸದ ವಿನಃ ಬೇರೆ ದಾರಿಯಿಲ್ಲ.

ನೀರಾವರಿಯಲ್ಲಿ ಹಣ ತೊಡಗಿಸುವುದು

ಹಿಂದುಳಿದ ಪ್ರದೇಶಗಳಿಗೆ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡುವ ದೃಷ್ಟಿಯಿಂದ ಯೋಜನಾ ಅವಧಿಯಲ್ಲಿ ನೀರಾವರಿಯ ಮೇಲೆ ಹಣ ತೊಡಗಿಸುವುದನ್ನು ಹೆಚ್ಚಿಸಲಾಯಿತು. ಕೃಷ್ಣ ಮತ್ತು ಕಾವೇರಿ ತಟಗಳಲ್ಲಿ ಹಲವಾರು ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಯೋಜನಾ ವೆಚ್ಚಗಳಲ್ಲಿ ಸುಮಾರು ೨೫ ಶೇಕಡಾದಷ್ಟು ನೀರಾವರಿ ವಲಯಕ್ಕಾಗಿ ನಿಗದಿಗೊಳಿಸಲಾಗಿತ್ತು. ಏಳನೆಯ ಯೋಜನೆಯ ಕೊನೆಗೆ, ನೀರಾವರಿಯ ಮೇಲೆ ಸುಮಾರು ೨೫, ೦೦೦  ಕೋಟಿ ರೂಪಾಯಿಗಳಷ್ಟು ಹಣ ತೊಡಗಿಸಲಾಗಿತ್ತು. ಇದರಲ್ಲಿ ಸುಮಾರು ೮೫ ಶೇಕಡಾದಷ್ಟು ದೊಡ್ಡ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳಲ್ಲಿ ತೊಡಗಿಸಲಾಗಿತ್ತು. ಇಷ್ಟು ಆಗಾಧವಾಗಿ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳಲ್ಲಿ ಹಣ ತೊಡಗಿಸಿರುವುದು ರಾಜ್ಯದ ತಪ್ಪು ಹಾಗೂ ಪಕ್ಷಪಾತದ ಧೋರಣೆ ಎಂದು ಹಲವರು ಭಾವಿಸುತ್ತಾರೆ. ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಯೋಜನೆಗಳಿಂದ ಆಗುವ ಲಾಭವು ನಿರೀಕ್ಷಿತ ಅಥವಾ ಇಚ್ಚಿತ ಮಟ್ಟದಲ್ಲಿ ಇರುವುದಿಲ್ಲ ಎಂದೂ ಅಪಾದಿಸಲಾಗಿದೆ. ರಾಜ್ಯದ ದೊಡ್ಡ ನದಿಗಳ ನೀರಿನ ಬಳಕೆಯ ಹಿನ್ನಲೆಯಲ್ಲಿ ನಿರ್ದಿಷ್ಟವಾಗಿ ಅಂತಹ ಅಭಿಪ್ರಾಯಗಳು ಚರ್ಚಾಸ್ಪದವಾಗಿದೆ. ಈ ಪ್ರಶ್ನೆಯ ಬಗ್ಗೆ ಇನ್ನೊಂದು ಕಡೆಯಲ್ಲಿ ನಾವು ಮಾತಾಡೋಣ.

ಸಾಮಾನ್ಯವಾಗಿ, ಸಂಪನ್ಮೂಲಗಳ ಕೊರತೆಯಿದ್ದರೂ, ರಾಜ್ಯವು ನೀರಾವರಿ ಅಭಿವೃದ್ಧಿಗಾಗಿ ಸಾಕಷ್ಟು ಗಮನವನ್ನು ಹರಿಸಿದೆ. ಯೋಜನಾ ಅವಧಿಗಳಲ್ಲಿ ಮೂರನೇ ಪಂಚವಾರ್ಷಿಕ ಯೋಜನೆಯೊಂದನ್ನು ಹೊರತು ಪಡಿಸಿ, ಕಿರು ನೀರಾವರಿಯ ಮೇಲಿನ ಹಣದ ವೆಚ್ಚವು ಸಮಾನವಾಗಿತ್ತು. ಮೂರನೆಯ ಯೋಜನೆಯಲ್ಲಿ ಒಟ್ಟು ವೆಚ್ಚಗಳಲ್ಲಿ ನೀರಾವರಿ ವಲಯದ ಮೇಲಿನ ಹೂಡಿಕೆಯು ೩೨ ಶೇಕಡಾವಾಗಿತ್ತು. ಆ ಬಳಿಕದ ಮೂರು ವಾರ್ಷಿಕ ಯೋಜನೆಗಳಲ್ಲಿ (೧೯೬೬-೬೯) ಇದು ೨೮% ಆಗಿತ್ತು. ಅಲ್ಲಿಂದ ಕಿರು ನೀರಾವರಿಯ ಪಾಲು ಸ್ಥಿರವಾಗಿ ೧೫ ಶೇಕಡಾದ ಸುತ್ತ ಮುತ್ತ ಕೇಂದ್ರೀಕೃತಗೊಂಡಿದೆ. ಕಿರು ನೀರಾವರಿಯಲ್ಲಿ ಬಹುತೇಕ ಖಾಸಗಿ ಹೂಡಿಕೆಯು ಇದ್ದು, ಇದು ಯೋಜಿತ ಖರ್ಚುಗಳಲ್ಲಿ ಪ್ರತಿಫಲನಗೊಳ್ಳುವುದಿಲ್ಲ. ಆದುದರಿಂದ ಕಿರು ನೀರಾವರಿ ಯೋಜನೆಯಡಿಯಲ್ಲಿ ಸೃಷ್ಟಿಸಿದ ನೀರಾವರಿ ಶಕ್ಯತೆಯ ಪ್ರತಿ ಹೆಕ್ಟೇರಿನ ಬೆಲೆಯು ದೊಡ್ಡ ಪ್ರಮಾಣದ ಯೋಜನೆಗಳಿಗಿಂತ ಕಡಿಮೆಯಿರುವಂತೆ ಕಾಣಿಸುವುದು. ಕಿರು ನೀರಾವರಿಯಲ್ಲಿ ಬೆಲೆಯ ಪ್ರತಿ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೆ, ದೊಡ್ಡ ಮತ್ತು ಮಧ್ಯಮ ಯೋಜನೆಗಳಲ್ಲಿ ಹಣ ತೊಡಗಿಸುವುದು ಅತೀ ಅಗತ್ಯ ಹಾಗೂ, ಈ ರೀತಿ ನದಿಯಿಂದ ದೊರೆಯುವ ನೀರಿನ ಬಳಕೆ ಮಾಡಬೇಕಾಗಿದೆ. ದೊಡ್ಡ ಮತ್ತು ಮಧ್ಯಮ ಯೋಜನೆಗಳಿಂದ ತಯಾರಾದ ನೀರಾವರಿ ಶಕ್ಯತೆಯ ಸಮರ್ಥ ಬಳಕೆಯ ಖಚಿತವಾಗಲು ಧೋರಣೆ ಮತ್ತು ಕಾರ್ಯಕ್ರಮಗಳ ರಚನೆಯು ಸಹಾ ಅಷ್ಟೇ ಮುಖ್ಯವೆನಿಸುತ್ತದೆ. ಮುಂದಕ್ಕೆ, ದೊಡ್ಡ ಮತ್ತು ಕಿರು ನೀರಾವರಿ ಯೋಜನೆಗಳು ಪರಸ್ಪರ ಸ್ಪರ್ಧಿಗಳಲ್ಲಿ ಬದಲಾಗಿ ಒಂದಕ್ಕೊಂದು ಪೂರಕ ಎಂಬುದನ್ನು ಗಮನಿಸಬೇಕು.

ಸೃಷ್ಟಿಸಿದ ನೀರಾವರಿಯ ಶಕ್ಯತೆ

ನೀರಾವರಿಗೆ ಹಣ ಹೂಡಿಕೆಗಿರುವ ತೊಂದರೆಗಳನ್ನು ಗಮನಿಸಿ, ರಾಜ್ಯವು ೧೯೯೨ರ ಡಿಸೆಂಬರ್ ಕೊನೆತನಕ ೩೦.೬೯ ಲಕ್ಷ ಹೆಕ್ಟೇರ್‌ಗಳಷ್ಟು (ಇದು ೭.೬೪ ಲಕ್ಷ ಹೆಕ್ಟೇರ್‌ಗಳ ಅಂತರ್ಜಲ ನೀರಾವರಿಯನ್ನು ಒಳಗೊಂಡಿದೆ) ಶಕ್ಯತೆಯನ್ನು ಸೃಷ್ಟಿ ಮಾಡಿದ್ದು ವಿವರಗಳು ಕೆಳಗಿನಂತಿವೆ.

ಕೋಷ್ಟಕ – ೩
ಸೃಷ್ಟಿಸಿದ ನೀರಾವರಿಯ ಶಕ್ಯತೆ (ಡಿಸೆಂಬರ್
, ೧೯೯೨ರ ತನಕ)

  ಮೂಲ ಸೃಷ್ಟಿಸಿದ ಶಕ್ಯತೆ (ಹೆಕ್ಟೇರುಗಳಲ್ಲಿ)
೧. ಪೂರ್ಣಗೊಂಡ ೭ ದೊಡ್ಡ ಹಾಗೂ ೩೪ ಮಧ್ಯಮ ಯೋಜನೆಗಳು ೪,೨೫, ೮೬೯
(೧೩.೯)
೨. ಚಾಲ್ತಿಯಲ್ಲಿರುವ ೧೧ ದೊಡ್ಡ ಹಾಗೂ ೫ ಮಧ್ಯಮ ಯೋಜನೆಗಳು ೯, ೭೧, ೬೧೫
(೩೧.೭)
೩. ಮೇಲ್ಮೆಯ ನೀರನ್ನು ಬಳಸಿಕೊಂಡ ಕಿರು ಯೋಜನೆಗಳು ೮, ೭೬, ೧೭೯
(೨೮.೫)
೪. ೧೫,೭೧೩ ನಾಲ್ಕು ಹೆಕ್ಟೇರುಗಳಿಗಿಂತ ಕಡಿಮೆ ಆಯಕಟ್ಟು ಇರುವ ಸಣ್ಣ ಕೆರೆಗಳು ೩೧, ೦೦೦
(೧.೦)
೫. ಅಂತರ್ಜಲ ಮೂಲಗಳು ೭, ೬೪, ೨೪
(೨೪.೯)
ಒಟ್ಟು   ೩೦, ೬೯, ೦೮೭
(೧೦೦.೦೦)

ಗಮನಿಸಿ: ಆವರಣದಲ್ಲಿ ನೀಡಿರುವ ಸಂಖ್ಯೆಗಳು ಒಟ್ಟು ಸೃಷ್ಟಿಸಿದ ಶಕ್ಯತೆಯ ಶೇಕಡಾ ಪಾಲು

ಮೂಲ: ಕರ್ನಾಟಕ ಸರ್ಕಾರ, ನೀರಾವರಿ ಇಲಾಖೆ, ಕರ್ನಾಟಕದಲ್ಲಿ ನೀರವಾರಿ, ೧೯೯೩-೯೪.

ದೊಡ್ಡ ಮತ್ತು ಮಧ್ಯಮ ಯೋಜನೆಗಳು ನೀರಾವರಿಯ  ಒಟ್ಟುಹೂಡಿಕೆಯಲ್ಲಿ ಸಿಂಹಪಾಲು (೮೫ ಶೇಕಡಾ) ಪಡೆದರೂ, ಸೃಷ್ಟಿಸಿದ ನೀರಾವರಿ ಶಕ್ಯತೆಯಲ್ಲಿ ಅವುಗಳ ಪಾಲು ಇಲ್ಲಿಯ ತನಕ ಕೇವಲ ೪೫.೬ ಶೇಕಡಾ. ಇದು ತಾರ್ಕಿಕವಾಗಿ ಹೂಡಿಕೆಯ ಹಣದ ಸಮಭಾಗವಲ್ಲ. ಇನ್ನೊಂದು ಕಡೆಯಲ್ಲಿ ಕೇವಲ ೧೫% ಹೂಡಿಕೆಯೊಂದಿಗೆ ಕಿರು ಯೋಜನೆಗಳ ಶಕ್ಯತೆಯ ಕೊಡುಗೆಯು ೩೦%. ಈ ಪರಿಸ್ಥಿತಿಯನ್ನು ಕೆಲವು ಸಲ ವಿಮರ್ಶಾಕಾರರು ರಾಜ್ಯದ ಬೆಲೆ ಪ್ರತಿ ಪರಿಣಾಮ (ಬೆಲೆಯ ಸಮರ್ಥ ಪ್ರತಿಫಲ) ಹೂಡಿಕೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಇದು ಸರಿಯೆನಿಸಲಾರದು. ದೊಡ್ಡ ಮತ್ತು ಮಧ್ಯಮ ಯೋಜನೆಗಳಿಗೆ ಸಂಬಂಧಿಸಿದಂತೆ ಅವುಗಳು ಉತ್ಪಾದನೆಗೆ ಹೆಚ್ಚು ಅವಧಿ ತೆಗೆದುಕೊಳ್ಳುತ್ತದೆ. ಹಲವಾರು ಸಲ ಅಣೆಕಟ್ಟು ಕಟ್ಟಿಸಿ ನೀರನ್ನು ಸಂಗ್ರಹಿಸಲು ಆದ್ಯತೆ  ನೀಡಲಾಗುವುದು, ಜಮೀನುಗಳಿಗೆ ನೀರು ಹಂಚುವ ಸಲುವಾಗಿ ಸರಿಯಾದ ವಿತರಣಾ ಜಾಲವನ್ನು ಕಟ್ಟಿಸಿರುವುದಿಲ್ಲ. ಕಾಲುವೆಗಳ ನಿರ್ಮಾಣವು ಅಣೆಕಟ್ಟಿನ ನಿರ್ಮಾಣದೊಂದಿಗೆ ಸಂಯೋಜನಗೊಂಡಾಗ ಹೂಡಿಕೆಯು ಶಕ್ಯತೆಯನ್ನು ಸೃಷ್ಟಿಸುವುದು. ರಾಜ್ಯದಲ್ಲಿ ಹಲವಾರು ದೊಡ್ಡ ಮತ್ತು ಮಧ್ಯಮ ಯೋಜನೆಗಳು ಪೂರ್ಣಗೊಂಡಿದ್ದರೂ ಕಾಲುವೆಗಳ ನಿರ್ಮಾಣವೂ ಇನ್ನೂ ನಡೆಯುತ್ತಲೇ ಇದೆ. ಫಲಿತಾಂಶವಾಗಿ ಬೆಲೆಯ ಹೆಚ್ಚಳಗೊಂಡಿರುವುದು ಮಾತ್ರವಲ್ಲ ಸೃಷ್ಟಿಗೊಳ್ಳಬಹುದಾದ ಶಕ್ಯತೆಯ ಮೇಲೆ ಇದು ಪ್ರತಿಕೂಲ ಪರಿಣಾಮವನ್ನು ಬೀರಿದೆ.

ಇನ್ನೊಂದು ಸಮಸ್ಯೆಯೆಂದರೆ ಈಗಾಗಲೇ ನಿರ್ಮಿತವಾಗಿರುವ ಶಕ್ಯತೆಯ ಬಳಕೆ. ದೊಡ್ಡ ಮತ್ತು ಮಧ್ಯಮ ಯೋಜನೆಗಳಿಗೆ ಸಂಬಂಧಿಸಿದಂತೆ ಸೃಷ್ಟಿಗೊಂಡ ನೀರಾವರಿ ಶಕ್ಯತೆ ಮತ್ತು ಬಳಕೆಯ ನಡುವಿನ ಅಂತರವು ದೊಡ್ಡದಿದೆ ಎಂದು ಹೇಳಲಾಗಿದೆ ಮತ್ತು ಕರ್ನಾಟಕವು ಇದಕ್ಕೆ ಹೊರತೇನಲ್ಲ. ಸೃಷ್ಠಿಸಿದ ಶಕ್ಯತೆ ಮತ್ತು ಬಳಕೆಯ ನಡುವಿನ ಅಂತರವು ದೊಡ್ಡದಿದೆ ಎಂದು ಕೆಲವು ಅಧ್ಯಯನಗಳು ತೋರಿಸಿದೆ. ಇಂತಹ ಅಂತರಕ್ಕೆ ಹಲವಾರು ಕಾರಣಗಳಿವೆ. ಜಲಾಶಯದಲ್ಲಿ ನೀರು ಶೇಖರಣೆಯಾಗಿದ್ದು, ಅಂತಹ ನೀರನ್ನು ಒಯ್ಯಲು ಕಾಲುವೆಗಳು ಜಾಲವು ನೀರು ನೀಡುವ ತೂಬಿನ ತನಕ ತಯಾರಾಗಿದ್ದಾರೆ ಶಕ್ಯತೆಯ ಸೃಷ್ಟಿಯಾಗಿದೆ ಎಂದು ಸಾರಬಹುದು. ನೀರು ಸರಬರಾಜು ತೂಬಿನ ತನಕ ಒದಗಿಸಲ್ಪಟ್ಟರೆ ಅಂತಹ ನೀರಿನ ಬಳಕೆಗೆ ಬರುವ ಅಡ್ಡಿ ಆತಂಕಗಳು ಏನು ಎಂಬ ಪ್ರಶ್ನೆಯನ್ನು ಅವಲೋಕಿಸುವುದು ಮುಖ್ಯ. ಇಲ್ಲಿ ಒಂದು ಊಹೆಯೇನೆಂದರೆ ರೈತರು ನೀರನ್ನು ತನ್ನಷ್ಟಕ್ಕೆ ಬಳಕೆ ಮಾಡುತ್ತಾರೆ ಮತ್ತು ಇಚ್ಚಿಸಿದ ಪ್ರದೇಶವನ್ನು ನೀರಾವರಿಗೆ ತರುತ್ತಾರೆ ಎಂದು. ಆದರೆ ವಾಸ್ತವದಲ್ಲಿ ಇದು ಹಾಗೆ ನಡೆಯುವುದಿಲ್ಲ. ನೀರಿನ ಬಳಕೆಗಾಗಿ ಭೂಮಿ ಸಮತಟ್ಟು ಮಾಡುವ, ಆಕಾರವನ್ನು ನೀಡುವ, ಜಮೀನಿನೊಳಗೆ ನೀರುಣಿಸುವ ಕಾಲುವೆಗಳ ರಚನೆ ಇತ್ಯಾದಿಗಳನ್ನೊಳಗೊಂಡಿರುವ ಜಮೀನಿನ ಅಭಿವೃದ್ಧಿಯನ್ನು ರೈತರು ಕೈಗೊಳ್ಳುವುದಿಲ್ಲ. ನೀರನ್ನು ಸ್ವೀಕರಿಸಲಿಕ್ಕೋಸ್ಕರ ಜಮೀನನ್ನು ತಯಾರುಗೊಳಿಸದ ವಿನಹ, ಆಶಿಸುವಷ್ಟು ಜಮೀನನ್ನು ನೀರಾವರಿಗೆ ಒಳಪಡಿಸುವುದು ಕಷ್ಟವೆನಿಸುವುದು. ಆದುದರಿಂದ ಮಣ್ಣನ್ನು ಸಮತಟ್ಟುಗೊಳಿಸುವುದು ಮತ್ತು ಅಭಿವೃದ್ಧಿಗೊಳಿಸುವುದನ್ನು ಸಂಪೂರ್ಣಗೊಳಿಸದಿರುವುದು ಸೃಷ್ಠಿಸಿದ ನೀರಾವರಿ ಶಕ್ಯತೆ ಮತ್ತು ಬಳಕೆಯ ನಡುವಿನ ಅಂತರಕ್ಕೆ ಎಡೆ ಮಾಡುವ ಒಂದು ಕಾರಣವಾಗಿದೆ. ಇತರ ಸಮಸ್ಯೆಗಳೆಂದರೆ, ನೀರಿನ ಕರದ ಮೇಲಿನ ಊಹೆ, ಬೆಳೆಗಳ ವಿನ್ಯಾಸ, ಬೆಳೆಗೆ ನೀರಿನ ಅಗತ್ಯತೆ ಪ್ರಮಾಣ ಇತ್ಯಾದಿಗಳು ಹಾಗೂ ಕ್ಷೇತ್ರದ ನೈಜ ಪರಿಸ್ಥಿತಿಯೊಂದಿಗಿನ ಅದರ ಅನುವರ್ತನೆಯು ಸೃಷ್ಠಿಸಿದ ಶಕ್ಯತೆಯು ಬಳಕೆಯಾಗದಿರುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿನ ಮಟ್ಟಿಗೆ ವಿವರಿಸುತ್ತದೆ. ಆದುದರಿಂದ ದೊಡ್ಡ ಮತ್ತು ಮಧ್ಯಮ ಯೋಜನೆಗಳ ವಿರುದ್ಧ ಕಿರು ಯೋಜನೆಗಳು. ಇವುಗಳಲ್ಲಿ ಯಾವುದು ಸಮಂಜಸ ಎನ್ನುವ ಬಗ್ಗೆ ಒಂದು ತೀರ್ಪು ನೀಡುವುದು ಸರಿಯೆನಿಸಲಾರದು. ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ)ಗಳನ್ನು ಇಂತಹ ಸಮಸ್ಯೆಗಳ ನಿರ್ವಹಣೆಗಾಗಿ ರಚಿಸಲಾಯಿತು. ಈ ಬಗ್ಗೆ ಅವುಗಳು ಹೆಚ್ಚೇನೂ ಕೊಡುಗೆ ನೀಡಲಾಗಿಲ್ಲ ಎಂಬುದಾಗಿ ಕಾಣುತ್ತದೆ. ಅವುಗಳ ಬಗೆಗಿನ ವಿವರಗಳು ಇಲ್ಲಿ ಸ್ಥಳಾವಕಾಶ ಪಡೆದಿಲ್ಲ.

ಕಿರು ನೀರಾವರಿ

ಕಿರು ನೀರಾವರಿ ಯೋಜನೆಗಳಲ್ಲಿ ಗರಿಷ್ಠ ಶಕ್ಯತೆ ೧೦ ಲಕ್ಷ ಹೆಕ್ಟೇರುಗಳು. ೧೯೯೨ರವರೆಗೆ ಲಭ್ಯವಿರುವ ಅಂಕಿ ಸಂಖ್ಯೆಗಳಂತೆ, ಕಿರು ನೀರಾವರಿಯಲ್ಲಿ ಒಟ್ಟು ಸೃಷ್ಟಿಸಿದ ಶಕ್ಯತೆಯು ೯ ಲಕ್ಷ ಹೆಕ್ಟೇರುಗಳು. ಇನ್ನು ಕೇವಲ ೧೦ ಶೇಕಡ ಬಾಕಿ ಉಳಿದಿರುವ ಶಕ್ಯತೆಯನ್ನು ಬಳಕೆ ಮಾಡಬೇಕಾಗಿದೆ. ಕಿರು ನೀರಾವರಿಯ ವಿಸ್ತರಣೆಗೆ ಹೆಚ್ಚೇನೂ ಅವಕಾಶವಿಲ್ಲದಿರುವ ಕಾರಣ, ದೊರೆಯುವ ನೀರಿನ ಸಂಪೂರ್ಣ ಬಳಕೆಗಾಗಿ ದೊಡ್ಡ ಮತ್ತು ಮಧ್ಯಮ ಯೋಜನೆಗಳಿಗೆ ಗಮನವೀಯುವುದು ಸ್ಪಷ್ಟ ಆಯ್ಕೆಯಾಗಿದೆ.

ಅಣೆಕಟ್ಟುಗಳು ಮತ್ತು ಏತ ನೀರಾವರಿ ಯೋಜನೆಗಳು, ಕೆರೆಗಳು ಕಿರು ನೀರಾವರಿ (ಭೂಮಿಯ ಮೇಲಿನ ನೀರು)ಯ ಪ್ರಧಾನ ಮೂಲಗಳು. ಕಿರು ನೀರಾವರಿಯ ಶಕ್ಯತೆಯಲ್ಲಿ ಕೆರೆಗಳ ಕಾಣಿಕೆ ಶೇಕಡಾ ೭೪.೮  ಇದೆ. ಆದರೆ ಕೆರೆಗಳಲ್ಲಿ ತುಂಬುವ ಕಾಲಾವಧಿಯಲ್ಲಿ ಶಕ್ಯತೆಯನ್ನು ಕಡಿಮೆಗೊಳಿಸುತ್ತದೆ. ಆದುದರಿಂದ, ಸೃಷ್ಠಿಸಿದ ಶಕ್ಯತೆಯನ್ನು ನಿರಂತರವಾಗಿರಿಸಿಕೊಳ್ಳಲು ನಿಗದಿತ ಸಮಯಗಳಲ್ಲಿ ಕೆರೆಗಳ ಹೂಳೆತ್ತುವುದು ಅಗತ್ಯವೆನಿಸುತ್ತದೆ. ಕೆರೆಯ ನೀರಾವರಿಯಿಂದ ಲಾಭಗಳು ಹಲವು. ನೀರಾವರಿ ಸೌಲಭ್ಯವನ್ನು ಒದಗಿಸುವುದರೊಂದಿಗೆ, ಕೆರೆಗಳು ಅಂತರ್ಜಲ ಹರಿವುಗಳನ್ನು ಪುನರುಜ್ಜೀವನಗೊಳಿಸುವುದು. ಮುಂಗಾರಿನಲ್ಲಿ ಭೂಮಿಯ ಮೇಲ್ಮೆಯಲ್ಲಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಕೊಳ್ಳಲು ಹಾಗೂ, ರಾಜ್ಯದಲ್ಲಿ ಪ್ರವಾಹಗಳನ್ನು ತಡೆಗಟ್ಟಲೂ ಇದು ಸಾಧನವೆನಿಸುತ್ತದೆ. ಕೆರೆಯ ಬದಿಯಂಗಳಗಳಲ್ಲಿ ಮರಗಳನ್ನು ಬೆಳೆಸಲು ಸಾಧ್ಯವಿದ್ದು ಪ್ರಾಕೃತಿಕ ಸಮತೋಲನವನ್ನು ಇದು ಕಾಪಾಡುತ್ತದೆ.

ಕೆರೆಗಳ ವಿವಿಧ ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅದರ ಕಾಪಾಡುವಿಕೆ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಹೂಳುಗಳಿಂದ ಕಳೆದುಕೊಂಡ ನೀರಾವರಿ ಶಕ್ಯತೆಯನ್ನು ಪುನರ್‌ಸ್ಥಾಪಿಸುವಂತಹ ಕಾರ್ಯಕ್ರಮಗಳನ್ನು ಹೊಂದಿರಬೇಕಾಗುತ್ತದೆ. ಕೆರೆ ನಿರ್ವಹಣೆಯ ಸಾಂಪ್ರಾದಾಯಿಕ ವಿಧಾನವಾದ ಕೆರೆ ಪಂಚಾಯ್ತಿಗಳನ್ನು,  ಹೆಚ್ಚಿನ ರೈತರು ಭಾಗವಹಿಸುವಂತೆ ಪುನರ್‌ಸ್ಥಾಪಿಸಬೇಕು.

ಅಂತರ್ಜಲ ನೀರಾವರಿ

ನಮ್ಮ ರಾಜ್ಯದಲ್ಲಿ ಕೃಷಿ ಉದ್ದೇಶಗಳಿಗಾಗಿ ಅಂತರ್ಜಲವನ್ನು ಉಪಯೋಗಿಸುವುದು ಪುರಾತನ ವಿಧಗಳಲ್ಲಿ ಒಂದು. ಬರ ಪೀಡಿತ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಅಗೆದ ಬಾವಿಗಳು ನೀರಾವರಿಯ ಮುಖ್ಯ ಸಾಧನವಾಗಿತ್ತು. ಆದರೆ, ಕೊಳುವೆ ಬಾವಿಯ ಪರಿಚಯದೊಂದಿಗೆ ಆಳನೆಲದಲ್ಲಿರುವ ನೀರಿನ ಸೆಲೆಗಳನ್ನು ರೈತರು ನೀರಾವರಿ ಉದ್ದೇಶಗಳಿಗಾಗಿ ಪಡೆಯುವಂತಾಯಿತು. ಅಂತರ್ಜಲದ ಬಳಕೆಯ ತಾಂತ್ರಿಕತೆಯನ್ನು ಕಂಡು ಹಿಡಿದಿರುವುದು, ಆಳನೆಲದ ನೀರಿನ ಅತಿ ಬಳಕೆಗೆ ದಾರಿ ಮಾಡಿದೆ, ಇದರಿಂದ ಪ್ರಾಕೃತಿಕ ಮತ್ತು ಇತರ ಸಾಮಾಜಿಕ -ಆರ್ಥಿಕ ಸಮಸ್ಯೆಗಳು ಗೋಚರಿಸಿವೆ.

ಅಂತರ್ಜಲ ಶಕ್ಯತೆಯು ರಾಜ್ಯದಲ್ಲಿ ೧೦ ಲಕ್ಷ ಹೆಕ್ಟೇರುಗಳಾಗಿರುತ್ತದೆ. ಅಂತರ್ಜಲ ಯೋಜನೆಳಿಂದ ಈ ತನಕ ೭.೬೪ ಲಕ್ಷ ಹೆಕ್ಟೇರ್‌ಗಳ ಶಕ್ಯತೆಯು ಸೃಷ್ಠಿಯಾಗಿದೆ. ಇದರ ೨೫% ಶಕ್ಯತೆಯ ಇನ್ನು ಬಳಕೆಗೆ ಬರಬೇಕಷ್ಟೇ. ಅಂತರ್ಜಲದ ಉತ್ಪನ್ನವು ಮಳೆ ನೀರಿನ ಪ್ರಮಾಣದ ಮೇಲೆ ಅವಲಂಬಿಸಿದೆ ಎಂದು ಚೆನ್ನಾಗಿ ತಿಳಿದಿರುವ ವಿಷಯವಾಗಿದೆ. ಶಕ್ಯತೆಯನ್ನು ಅಂದಾಜಿಸುವ ತಾಂತ್ರಿಕತೆಯು ಕಾಲ್ಪನಿಕ ಗುಣಲಕ್ಷಣಗಳ ಸಮೀಪವರ್ತಿಯಾಗಿದೆ. ಆದುದರಿಂದ ಶಕ್ತತೆಯ ನಿಖರತೆಯ ಮಾಪನ ಮತ್ತು ಅದರ ವಿಶ್ವಾಸಾರ್ಹತೆಯು ಅಂಕಿಗಳ ಮೂಲ ಹಾಗೂ ಇತರ ಗುಣಲಕ್ಷಣಗಳ ಮೇಲೆ ಅವಲಂಬಿಸಿದೆ.

೧೯೮೭ರವರೆಗೆ ದೊರಕಿರುವ ಅಂಕಿ ಸಂಖ್ಯೆಗಳಂತೆ ೫ ಲಕ್ಷಕ್ಕೂ ಮೇಲ್ಪಟ್ಟು ತೋಡುಬಾವಿಗಳಿವೆ. ಹಾಗೂ ೮೫ ಸಾವಿರದಷ್ಟು ಕೊಳವೆಬಾವಿಗಳಿವೆ. ಹಲವಾರು ಜಿಲ್ಲೆಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿರುವುದರಿಂದ ಹೆಚ್ಚುವರಿ ಬಾವಿಗಳಿಗೆ ಅವಕಾಶ ಅಷ್ಟೇನೂ ಪ್ರೋತ್ಸಾಹದಾಯಕವಾಗಿಲ್ಲ. ಕಾಲುವೆ ನೀರಾವರಿ ದೆಸೆಯಿಂದಾಗಿ ಕಾಲುವೆ ಆಧೀನ ಪ್ರದೇಶಗಳಲ್ಲಿ ಅಂತರ್ಜಲದ ಸ್ಥಿತಿಯು ಸುಧಾರಿಸುವ ಸಾಧ್ಯತೆಗಳಿವೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಕಾಲುವೆ ಮತ್ತು ಅಂತರ್ಜಲದ ಸಂಯುಕ್ತ ಬಳಕೆಯನ್ನು ಪ್ರೋತ್ಸಾಹಿಸುವುದು ಸಹಾಯಕವೆನಿಸಬಹುದು.

ನೀತಿ ಧೋರಣೆಯ ಸಂಧಿಗ್ಧಗಳು ಮತ್ತು ಉಪಸಂಹಾರ

ಇಲ್ಲಿ ನಿರೂಪಿಸಲಾದ ರಾಜ್ಯದ ನೀರಾವರಿ ಅಭಿವೃದ್ಧಿಯ ನಿಜವಾದ ಸ್ಥಿತಿಯ ಒಂದು ಮೇಲ್ನೋಟವು, ರಾಜ್ಯದಲ್ಲಿ ಲಭ್ಯವಿರುವ ಜಲಸಂಪನ್ಮೂಲದ ಸಂಪೂರ್ಣ ಮತ್ತು ಪರಿಣಾಮಕಾರಿ ಬಳಕೆಯನ್ನು ಸಾಧ್ಯಗೊಳಿಸುವ, ನೀತಿ ಧೋರಣೆಗಳನ್ನು ರೂಪಿಸುವ ಸಮಯದಲ್ಲಿ ಅವಲೋಕಿಸಬೇಕಾದ ಹಲವಾರು ಸಮಸ್ಯೆಗಳನ್ನು ಮುಂದಿಟ್ಟಿವೆ. ನೀರಾವರಿಯಲ್ಲಿ ಬೃಹತ್ತಾದ ಹಣ ಹೂಡಿಕೆಯು ನಡೆದಿದೆ. ಇದರ ಫಲಿತಾಂಶವಾಗಿ ನೀರಾವರಿ ಶಕ್ಯತೆಯು ಗಮನಾರ್ಹವಾಗಿ, ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ೭ ಲಕ್ಷ ಹೆಕ್ಟೇರ್‌ನಿಂದ, ೧೯೯೨ನೇ ಕೊನೆಗೆ ೩೦ ಲಕ್ಷ ಹೆಕ್ಟೇರ‍್ಗಳಷ್ಟು ಏರಿದೆ. ಯೋಜನೆಗಳ ಅವಧಿಯಲ್ಲಿ ಮಧ್ಯಮ ಮತ್ತು ದೊಡ್ಡ ಯೋಜನೆಗಳಿಗೆ ಮತ್ತು ನೀಡಿರುವುದು, ಕೆಲವರ ದೃಷ್ಟಿಯಲ್ಲಿ ತಪ್ಪು ಮತ್ತು ಪೂರ್ವಾಗ್ರಹ ಪೀಡಿತವೆಂದು ಭಾವಿಸಲ್ಪಟ್ಟಿತ್ತು. ಒಂದು ಬದಿಯಲ್ಲಿ ಅಂತರ್‌ರಾಜ್ಯ ಜಲವಿವಾದ ಹಾಗೂ ಮತ್ತೊಂದು ಬದಿಯಲ್ಲಿ ಕೃಷಿಉತ್ಪನ್ನವನ್ನು ಹೆಚ್ಚಿಸುವುದಕ್ಕಾಗಿ ನೀರಾವರಿಯ ಶಕ್ಯತೆಯನ್ನು ಹೆಚ್ಚಿಸುವುದು, ಇಂತಹ ಒತ್ತಡಗಳಿಂದಾಗಿ, ರಾಜ್ಯಕ್ಕೆ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳ ಮೇಲೆ ಕೇಂದ್ರಿಕೃತಗೊಳ್ಳದ ವಿನಃ ಬೇರೆ ದಾರಿಗಳು ಇರಲಿಲ್ಲ. ದೊಡ್ಡ ಮತ್ತು ಮಧ್ಯಮ ಪ್ರಮಾಣದ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಬಾಕಿಯಿರುವ ೧೮.೨ ಲಕ್ಷ ಹೆಕ್ಟೇರ್‌ಗಳ ಶಕ್ಯತೆಯನ್ನು ಸಾಧಿಸಲು ರಾಜ್ಯಕ್ಕೆ ರೂ. ೫೨೪೦ ಕೋಟಿ ಬೇಕಾಗಿದೆ. ಬಹು ಸಂಖ್ಯೆಯಲ್ಲಿ ನೀರಾವರಿ ಯೋಜನೆಗಳು ಅಪೂರ್ಣಗೊಂಡು, ಹಲವಾರು ವರ್ಷಗಳವರೆಗೆ ಎಳೆದಾಡಿರುವುದನ್ನು ಗಮನಿಸುವುದು ಅಗತ್ಯ. ಅವುಗಳಲ್ಲಿ ಕೆಲವು ೪೦ ವರ್ಷಗಳಿಂದ ಇನ್ನೂ ನಿರ್ಮಾಣದ ಹಂತದಲ್ಲೇ ಇವೆ. ಪೂರ್ಣಗೊಳಿಸುವಲ್ಲಿ ಆಗಿರುವ ಅಂತಹ ವಿಳಂಬಗಳು, ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರೊಂದಿಗೆ ವೆಚ್ಚಗಳಲ್ಲಿ ಹೆಚ್ಚಳವನ್ನು ಉಂಟುಮಾಡಿದೆ. ಇದರ ಫಲಿತಾಂಶವಾಗಿ ಸೃಷ್ಠಿಸಿದ ನೀರಾವರಿ ಶಕ್ಯತೆಯ ವೆಚ್ಚ, ಪ್ರತಿ ಹೆಕ್ಟೇರ್‌ಗೆ ಹೆಚ್ಚಳವಾಗಿದೆ ಹಾಗೂ ಇದು ಹಲವಾರು ಪರಿಸರದ ಸಮಸ್ಯೆಗಳನ್ನು ಸೃಷ್ಟಿಸಿದೆ. ಉದಾಹರಣೆಗೆ, ಹಲವಾರು ಕಡೆ ಅಣೆಕಟ್ಟುಗಳನ್ನು ನಿರ್ಮಿಸಿ ನೀರಿನ ಸಂಗ್ರಹಣೆ ಮಾಡಲಾಗಿದೆ. ಆದರೆ ನೀರು ಸರಬರಾಜಿನ ಜಾಲ ಇನ್ನೂ ಪೂರ್ಣವಾಗಬೇಕಷ್ಟೆ. ಹಾಗೆ, ನೀರು ದೊರಕುವ ಪ್ರಾರಂಭಿಕ ವರ್ಷಗಳಲ್ಲಿ ರೈತರು ಬೆಳೆಸಬೇಕಾದ ಬೆಳೆ ವಿನ್ಯಾಸದಲ್ಲಿ ಉಲ್ಲಂಘಿಸಿ, ನೀರು ಹೆಚ್ಚಾಗಿ ಬೇಕಾಗಿರುವ ಭತ್ತ ಮತ್ತು ಕಬ್ಬು ಬೆಳೆಸಿ ಮಣ್ಣಿನಲ್ಲಿ ಲವಣ ಮತ್ತು ಕ್ಷಾರದಂಶ ಹೆಚ್ಚುವಂತಹ ಸಮಸ್ಯೆಗಳನ್ನು ತಂದೊಡ್ಡಿವೆ. ಆದುದರಿಂದ, ಹೊಸ ಯೋಜನೆಗಳನ್ನು ಕೈಗೊಳ್ಳುವ ಮೊದಲು ಚಾಲ್ತಿಯಲ್ಲಿ ಇರುವ ಯೋಜನೆಗಳಿಗೆ ಗಮನಕೊಟ್ಟು ಪೂರ್ಣಗೊಳಿಸುವುದು ಈ ಸಮಯದಲ್ಲಿ ಸೂಕ್ತ.

ಮಧ್ಯಮ ಮತ್ತು ದೊಡ್ಡ ಪ್ರಮಾಣದ ಯೋಜನೆಗಳಲ್ಲಿ ಸಮರ್ಥ ಮತ್ತು ಮಿತವ್ಯಯದ ನೀರಿನ ಬಳಕೆ ಖಚಿತವಾಗಿರುವ ‘ಕೃಷಿ ಭೂಮಿಯ ಅಭಿವೃದ್ಧಿ’ಗೆ ಒತ್ತು ಕೊಡಬೇಕು. ಸೃಷ್ಟಿಸಿದ ನೀರಾವರಿ ಶಕ್ಯತೆ ಹಾಗೂ ಅದರ ಬಳಕೆಯಲ್ಲಿನ ಅಂತರವನ್ನು ಕಡಿಮೆಗೊಳಿಸಲು, ಅಣೆಕಟ್ಟು ನಿರ್ಮಾಣ, ಕಾಲುವೆಗಳ ಜಾಲ ಮತ್ತು ‘ಕೃಷಿ ಭೂಮಿಯ ಅಭಿವೃದ್ಧಿ’ಯನ್ನು ಒಂದೇ ಸಮಯದಲ್ಲಿ ಕೈಗೊಳ್ಳಬೇಕಾಗುತ್ತದೆ. ರೈತರು ಜಮೀನಿಗೆ ನೀರು ಪಡೆಯುವ ಮೊದಲು ಕೃಷಿ ಭೂಮಿ ಅಭಿವೃದ್ಧಿಯ ಲಾಭಗಳನ್ನು ರೈತರಿಗೆ ತಿಳಿಸುವುದು ಹಾಗೂ, ಕನಿಷ್ಠ ಒಂದು ವರ್ಷ ಜಮೀನಿನ ಅಭಿವೃದ್ಧಿಯ ಕೆಲಸ ಕೈಗೊಳ್ಳುವಂತೆ ಪ್ರೇರೇಪಿಸುವುದು ಅಗತ್ಯವಿದೆ. ಅಂತಹ ಪ್ರೇರೇಪಣೆಯು ಈಗ ಅನಿಶ್ಚಯತೆ ತುಂಬಿರುವ, ಬೇಕೆನಿಸುವಷ್ಟು ಹಾಗೂ ಸಮಯಕ್ಕೆ ಸರಿಯಾಗಿ ಕ್ಷೇತ್ರ ಮಟ್ಟದಲ್ಲಿ ನೀರು ಸರಬರಾಜನ್ನು ನೀರಾವರಿ ಇಲಾಖೆಯಿಂದ ಖಂಡಿತಗೊಳಿಸುವುದರ ಮೇಲೆ ನಿಂತಿದೆ.

ರಾಜ್ಯದಲ್ಲಿ ಪ್ರಸ್ತುತವಿರುವ ದೊಡ್ಡ ಮತ್ತು  ಮಧ್ಯಮ ಯೋಜನೆಗಳಲ್ಲಿ ಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರ ಫಲಿತಾಂಶವಾಗಿ ಸಾವಿರಾರು ಹೆಕ್ಟೇರುಗಳಷ್ಟು ಫಲವತ್ತಾದ ಜಮೀನು ಕೃಷಿಯಿಂದ ಹೊರತಾಗಿದೆ. ತುಂಗಭದ್ರಾ ಯೋಜನೆಯೊಂದರಲ್ಲೇ ೪೦ ಸಾವಿರ ಹೆಕ್ಟೇರುಗಳಷ್ಟು ನೀರು ನಿಲ್ಲುವಿಕೆ, ಲವಣ ಮತ್ತು ಕ್ಷಾರಗಳಿಂದ ಭಾಧಿತವಾಗಿದೆ. ಕೃಷ್ಣಾ ನದಿ ದಂಡೆಗಳಲ್ಲಿ ಕಪ್ಪು ಮಣ್ಣು ಹೆಚ್ಚು ಪ್ರಚೋದನಕಾರಿಯಾಗಿದೆ. ಚರಂಡಿ ಒದಗಿಸುವುದನ್ನು ಯೋಜನೆ ವಿನ್ಯಾಸದ ಮತ್ತು ನಿರ್ಮಾಣದ ಒಂದು ಅವಿಭಾಜ್ಯ ಅಂಗವೆಂದೇ ತೆಗೆದುಕೊಳ್ಳಬೇಕು. ನೀರು ನಿಲ್ಲುವಿಕೆಯಿಂದ ಈಗಾಗಲೇ ಬಾಧಿತವಾಗಿರುವ ಜಮೀನುಗಳನ್ನು ಪುನರುಜ್ಜೀವನಗೊಳಿಸಲು ನಿರ್ಮಾಣದಲ್ಲಿರುವ ಎಲ್ಲಾ ಯೋಜನೆಗಳಿಗೂ ಚರಂಡಿಯನ್ನು ನೀಡುವಂತಹ ಹೆಜ್ಜೆಯನ್ನು ತುರ್ತಾಗಿ ಇಡಬೇಕಾಗಿದೆ. ಇಲ್ಲವಾದರೆ ಭವಿಷ್ಯದ ಉತ್ಪಾದನಾ ಸಾಮರ್ಥ್ಯವು ಬಾಧಿತವಾಗುವುದು. ನೀರಾವರಿ ಅಧೀನ ಪ್ರದೇಶಗಳಲ್ಲಿ ಕೋಡಿಗಳನ್ನು ನೀಡುವುದರೊಂದಿಗೆ, ಎಲ್ಲಾ ನೀರಾವರಿ ಯೋಜನೆಗಳಲ್ಲೂ ಪ್ರಕೃತಿದತ್ತವಾಗಿ ಈಗಾಗಲೇ  ಇರುವ ಕೋಡಿಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೆಚ್ಚಿನ ಅಗತ್ಯತೆಯೂ ಇದೆ. ನಿಸರ್ಗದತ್ತವಾದ ಕೋಡಿಗಳನ್ನು ವಶಪಡಿಸುವ ಒಂದು ಶಾಸನವನ್ನು ಸರ್ಕಾರ ಜಾರಿಗೊಳಿಸಬಹುದು ಹಾಗೂ ಅವುಗಳನ್ನು ನಿರ್ವಹಿಸಲು ಆಗಾಗ್ಗೆ ಹೂಳೆತ್ತುವ ಮತ್ತು ಕಳೆಗಳನ್ನು ತೆಗೆಯುವ ಕೆಲಸಕ್ಕೆ ಕೈಹಾಕಬಹುದು. ಇದು ದೀರ್ಘಾವಧಿಯಲ್ಲಿ ಮಣ್ಣಿನ ಮೇಲಾಗಿರುವ ದುಷ್ಟರಿಣಾಮಗಳ ಸಾಂದ್ರತೆಯನ್ನು ಕಡಿಮೆಗೊಳಿಸಬಹುದು.

ರಾಜ್ಯದಲ್ಲಿ ಎಲ್ಲಾ ದೊಡ್ಡ ಮತ್ತು ಮಧ್ಯಮ ಯೋಜನೆಗಳಲ್ಲಿ ಮೇಲ್ಮೈಯ ಹಾಗೂ ಅಂತರ್ಜಲದ ಸಂಯುಕ್ತ ಬಳಕೆಯನ್ನು ಪ್ರೋತ್ಸಾಹಿಸಬೇಕು. ಇದು ನೀರು ನಿಲ್ಲುವಿಕೆಯಂತಹ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸುವುದಲ್ಲದೆ ಲಭ್ಯವಿರುವ ನೀರಿನ ಪರಿಣಾಮಕಾರಿ ಬಳಕೆಯನ್ನು ಖಚಿತ ಪಡಿಸುತ್ತದೆ. ಇನ್ನು, ಹೆಚ್ಚಿನ ರೈತರು ದಿನದಲ್ಲಿ ನೀರನ್ನು ಬಳಕೆ ಮಾಡಲು ಇ‌ಚ್ಛಿಸುತ್ತಾರೆ. ಇದರಿಂದಾಗಿ ರಾತ್ರಿಯಲ್ಲಿ ಹರಿಯುವ ನೀರು ನಿರರ್ಥಕವಾಗುತ್ತದೆ. ರೈತರು ರಾತ್ರಿಯಲ್ಲಿ ನೀರನ್ನುಬಳಕೆ ಮಾಡುವಂತೆ ಪ್ರೇರಣೆ ನೀಡುವ ಸೂಕ್ತ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ,ನೀರಾವರಿ ಅಧೀನ ಪ್ರದೇಶಗಳಲ್ಲಿ, ಜಮೀನುಗಳಲ್ಲಿ ಚಿಕ್ಕ ಕೆರೆಗಳನ್ನು ತೋಡಿ ರಾತ್ರಿ ಹರಿಯುವ ನೀರನ್ನು ಸಂಗ್ರಹಿಸಿ ದಿನದ ಹೊತ್ತಿನಲ್ಲಿ ಉಪಯೋಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು.

ಕಾಲುವೆ ನೀರಾವರಿಯನ್ನು ನೀಡಲು ಕಡಿಮೆ ಸಾಧ್ಯತೆಯಿಂದ ಹಿಂದುಳಿದ ಜಿಲ್ಲೆಗಳಲ್ಲಿ ಅಂತರ್ಜಲವನ್ನು ಸೇರಿ ಕಿರು ನೀರಾವರಿಯನ್ನು ನೀಡಲು ಅಥವಾ ವಿಸ್ತರಿಸಲು ಆದ್ಯತೆಯನ್ನು ನೀಡಬೇಕು. ಆಳ ಅಂತರ್ಜಲವನ್ನು ಪಡೆಯುವ ಸಾಧ್ಯತೆಯಿರುವಲ್ಲಿ, ರಾಜ್ಯವು ಆಳ ಕೊಳವೆ ಬಾವಿಗಳನ್ನು ಹಾಕುವ ಬಗ್ಗೆ ಆಲೋಚಿಸಬೇಕು. ಈಗ ಈ ಜಿಲ್ಲೆಗಳಲ್ಲಿರುವ ಸಂಪೂರ್ಣ ನೀರಾವರಿ ಶಕ್ಯತೆಯನ್ನು ಒಂದು ದಶಕದೊಳಗೆ ಬಳಕೆಗೆ ಬರುವಂತಹ ವಿಶಾಲ ದೃಷ್ಟಿಕೋನದ ಒಂದು ಯೋಜನೆಯನ್ನು ತಯಾರಿಸಬಹುದು, ಇದು ಅಂತರ್ ಪ್ರಾದೇಶಿಕ ಅಸಮತೆಯನ್ನು ಕಡಿಮೆ ಮಾಡಬಹುದು. ಅಂತರ್ಜಲ ಸಾಮರ್ಥ್ಯದ ಬಳಕೆಗಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸಾರ್ವಜನಿಕ ಹಣ ಹೂಡಿಕೆಯು ಹೆಚ್ಚಾಗಬೇಕು. ದೊಡ್ಡ ಮತ್ತು ಮಧ್ಯಮ ಯೋಜನೆಗಳಂತೆ ಬಂಡವಾಳ ಖರ್ಚನ್ನು ಸರ್ಕಾರವು ಭರಿಸಬೇಕು. ಹಾಗೂ ಚಾಲನೆ  ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ರೈತರಿಗೆ ನೀಡಬೇಕು. ಇದರಿಂದ ಪ್ರಯೋಜನ ಪಡೆಯುವ ರೈತರಿಂದ ಬಂಡವಾಳ ಖರ್ಚನ್ನು ಸುಲಭ ಕಂತುಗಳಲ್ಲಿ ವಾಪಾಸು ಪಡೆಯುವ ಅವಕಾಶವನ್ನು ಕಲ್ಪಿಸಬೇಕು.

ದೊಡ್ಡ ಮತ್ತು ಮಧ್ಯಮ ಯೋಜನೆಗಳಲ್ಲಿ ನೀರಿನ ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಇನ್ನೊಂದು ವಿಷಯವಾಗಿದೆ. ಇದಕ್ಕೆ ಆದ್ಯತೆ ನೀಡಬೇಕು. ನೀರಿನ ಸಮರ್ಥ ಬಳಕೆಯನ್ನು ನಿಜವಾಗಿಸಲು ನೀರು ಬಳಕೆದಾರರ ಸಂಘ ಅಥವಾ ನೀರಾವರಿ ಪಂಚಾಯತ್‌ಗಳನ್ನು ರಚಿಸುವುದು ಅತ್ಯಂತ ಅಗತ್ಯವಾಗಿದೆ. ಹಂಚುವಿಕೆಯ ವ್ಯವಸ್ಥೆಯು, ನೀರಾವರಿ ಪಂಚಾಯತನ್ನು ನಿರ್ಮಿಸುವ ಘಟಕವಾಗಬಹುದು. ಹಂಚುವಿಕೆಯ ವ್ಯವಸ್ಥೆಯ ಮಟ್ಟದಲ್ಲಿ ಸರ್ಕಾರವು ಪೂರ್ವ ನಿರ್ಧಾರಿತ ಗುಣಮಟ್ಟದ ನೀರನ್ನು ಪೂರೈಸುವ ಜವಾಬ್ದಾರಿಯನ್ನು ಹೊರಬಹುದು ಮತ್ತು ಅದರ ಹಂಚಿಕೆಯ ಆಯ್ಕೆಯನ್ನು ರೈತರಿಗೇ ಬಿಟ್ಟು ಕೊಡಬಹುದು. ಹೆಚ್ಚಿನ ಪ್ರಮಾಣದ ನೀರನ್ನು ಪೂರೈಸಿದಾಗ ರೈತರಿಗೆ ನೀರಾವರಿ ಶುಲ್ಕವನ್ನು  ವಿಧಿಸಬಹುದು. ನೆಲೆಯಲ್ಲಾದರೂ ಪ್ರಯತ್ನಿಸಬಹುದು. ಆರ್ಥಿಕ ಉದಾರೀಕರಣದಂತಹ ಸರ್ಕಾರದ ಸಮಕಾಲೀನ ನೀತಿಗಳ ದೃಷ್ಠಿಯಿಂದ, ರೈತರ ಭಾಗವಹಿಸುವಿಕೆ ಹಾಗೂ ಅದರ ಫಲಿತಾಂಶವಾಗಿ ಹಂತ ಹಂತವಾಗಿ ಖಾಸಗೀಕರಣವು ಅತ್ಯಂತ ಸೂಕ್ತವಾಗುತ್ತದೆ. ಕೆರೆಗಳ ನೀರಾವರಿಗೆ ಆದ್ಯತೆ ನೀಡುವುದು ಪ್ರಾಮುಖ್ಯವೆನಿಸುತ್ತದೆ. ಕೆರೆಗಳ ನೀರಾವರಿಯಲ್ಲಿ ಶಕ್ಯತೆಯನ್ನು ಸಂರಕ್ಷಿಸಲು ಹಾಗೂ ಸ್ಥಿರವಾಗಿಸಲು ಕಾಲ ಕಾಲಕ್ಕೆ ಹೂಳೆತ್ತುವ ಕಾರ್ಯವನ್ನು ಕೈಗೊಳ್ಳಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಜಲಾನಯನ ಕಾರ್ಯಕ್ರಮಗಳಿಂದಾಗಿ, ಪ್ರಸ್ತುತವಿರುವ ಕೆರೆಗಳ ನೀರಾವರಿ ಶಕ್ಯತೆಯು, ಮೂಲ ಪ್ರದೇಶದಲ್ಲಿ ನೀರು ಹರಿದು ಹೋಗುವ ವಿಧಾನದ ಬದಲಾವಣೆಯಿಂದಾಗಿ ಕೆಟ್ಟದಾಗಿ ಬಾಧಿತವಾಗುವುದು. ಅದೇ ಸಮಯದಲ್ಲಿ ಜಲಾನಯನ ನಿರ್ವಹಣೆಯು ಅಂತರ್ಜಲ ಪುನರುಜ್ಜೀವನಗೊಳಿಸುವಲ್ಲಿ ಸಹಕಾರಿಯಾಗಿದೆ. ಆದುದರಿಂದ ನೀರಾವರಿ ಯೋಜನೆಗಳಲ್ಲಿ ನೀರಾವರಿ ಶಕ್ಯತೆಯನ್ನು ಹೆಚ್ಚಿಸಲು, ಅಂತರ್ಜಲ ಮತ್ತು ಕೆರೆಗಳ ಮೂಲ ಪ್ರದೇಶಗಳಲ್ಲಿ ಮೇಲ್ಮೆಯಲ್ಲಿ ಹರಿಯುವ ಮಳೆ ನೀರನ್ನು ಬಳಕೆ ಮಾಡಲು ಒಂದು ಸಮಗ್ರ ಪದ್ಧತಿಯ ಅಗತ್ಯವಿದೆ.

ಉಲ್ಲೇಖಗಳು:

೧. ಕರ್ನಾಟಕದಲ್ಲಿ ನೀರಾವರಿ (೧೯೯೩-೯೪) ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆ.

೨. VIIIನೇ ಪಂಚವಾರ್ಷಿಕ ಯೋಜನೆ (೧೯೯೦-೯೫)ಯ ದೊಡ್ಡ ಮತ್ತು ಮಧ್ಯಮ ನೀರಾವರಿ ಕಾರ್ಯಕ್ರಮಗಳ ಕಾರ್ಯ ತಂಡದ ವರದಿ, ಕರ್ನಾಟಕ ಸರ್ಕಾರದ ನೀರಾವರಿ ಇಲಾಖೆ.

 

* ಕರ್ನಾಟಕ ಸರ್ಕಾರದ ಆರ್ಥಿಕ ಮತ್ತು ಅಂಕಿ ಸಂಖ್ಯೆಗಳ ಬ್ಯೂರೋ – ಕರ್ನಾಟಕದ ಒಂದು ನೋಟದಲ್ಲಿ ೧೯೯೨-೯೩.