ಭಾಗ-ಎರಡು

ಸ್ವಯಂಸೇವಾ ಸಂಸ್ಥೆಗಳ ಪಾತ್ರ

ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರುವುದರಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕೂಡ ಮಹತ್ತರವಾದ ಪಾತ್ರವನ್ನು ವಹಿಸುತ್ತಾ ಬಂದಿವೆ. ಒಂದು ರೀತಿಯಲ್ಲಿ ಹೇಳುವುದಾದರೆ ಸರ್ಕಾರದ ಸಂಸ್ಥೆಗಳಿಗಿಂತ ಒಂದು ಪಾಲು ಹೆಚ್ಚು ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಸಂಸ್ಥೆಗಳಲ್ಲಿರುವ ವಿವಿಧತೆ ಹಾಗೂ ಸರ್ಕಾರದ ಸಂಸ್ಥೆಗಳಿಗೆ ಹೋಲಿಸಿದಾಗ ಕಾಣುವ ವಿಭಿನ್ನತೆ – ಮುಖ್ಯವಾಗಿ ಸಂಸ್ಥೆಗಳ ರಚನೆ, ವಿನ್ಯಾಸ ಮತ್ತು ಕಾರ್ಯಾಚರಣೆ. ಈ ಸಂಸ್ಥೆಗಳ ಸಾಮರ್ಥ್ಯತೆ ಇರುವುದು ಅವುಗಳ ಕಾರ್ಯದಕ್ಷತೆಯಲ್ಲಿ ಹಾಗೂ ಸ್ಥಳೀಯ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಲ್ಲಿ. ಮುಖ್ಯವಾಗಿ ಈ ಸಂಸ್ಥೆಗಳು  ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣ ಮತ್ತು ಕೌಶಲ್ಯವನ್ನು ಹೊಂದಿವೆ. ಸಂಸ್ಥೆಗಳ ಗಾತ್ರ ಚಿಕ್ಕದಾಗಿರುವುದರಿಂದ ಯೋಜಿಸುವ ವಿಧಾನಗಳು ಮತ್ತು ತಜ್ಞತೆಗಳು ಅಷ್ಟೇನು ಕಠಿಣವಿರುವುದಿಲ್ಲ ಮತ್ತು ಅತಿ ಮುಖ್ಯವಾಗಿ ಅವುಗಳ ಗುರಿ ಯಾವಾಗಲೂ ಅಭಿವೃದ್ಧಿಯ ಪಥದಲ್ಲಿ ಇರುವುದರಿಂದ. ಇವೆಲ್ಲಾ ಗುಣಗಳಿರುವ ಪರಿಣಾಮವಾಗಿ ಸ್ವಯಮ ಸೇವಾ ಸಂಸ್ಥೆಗಳು ಹಳ್ಳಿಗಳಲ್ಲಿರುವ ಜನರ ಜೊತೆಗೆ ಬೆರೆತು, ಅವರುಗಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರ ಜೊತೆ ನೇರ ಸಂಪರ್ಕವನ್ನು ಇಟ್ಟುಕೊಂಡು ಅವರ ಜೀವನದಲ್ಲಿ ವಿವಿಧ ಬದಲಾವಣೆಗಳನ್ನು ತರುವುದಕ್ಕೆ ಹೆಚ್ಚಿನಮಟ್ಟಿನ ಶ್ರಮವನ್ನು ವಹಿಸುತ್ತಾ ಬಂದಿವೆ. ಇವೆಲ್ಲಾ ಕಾರಣಗಳಿಂದ ಈ ಸಂಸ್ಥೆಗಳನ್ನು ‘ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು’ ಎಂದು ಕರೆಯುವುದರ ಬದಲಾಗಿ ‘ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳೆಂದು’ ಕರೆಯುವ ರೂಢಿ ವ್ಯವಸ್ಥೆಯಲ್ಲಿ ಬಂದಿದೆ.

ಸಾಮಾಜಿಕ ತಜ್ಞರ ಮತ್ತು ಆರ್ಥಿಕ ತಜ್ಞರ ಅಭಿಪ್ರಾಯದಂತೆ ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯ ಜೊತೆಗೆ ಸಮಾಜದಲ್ಲಿರುವ ಜನರ ವಿವಿಧ ಸಮಸ್ಯೆಗಳು ಕೂಡಾ ಬೆಳೆಯುತ್ತಾ ಬಂದಿವೆ. ಉದಾಹರಣೆಗೆ ಬಡತನ, ನಿರುದ್ಯೋಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ, ಹಿಂದುಳಿದ ಜನಾಂಗದ ಮತ್ತು ದುರ್ಬಲ ವರ್ಗದವರ ಸಮಸ್ಯೆಗಳು, ಅಸಮಾನತೆ, ಮಹಿಳೆಯರ ಶೋಷಣೆ, ಇನ್ನೂ ಅನೇಕ ಸಮಸ್ಯೆಗಳು. ಇದಕ್ಕೆ ಸಂಬಂಧಪಟ್ಟಂತಹ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಶಾಸನಗಳನ್ನು ರೂಪಿಸಿ ಅನುಷ್ಟಾನಗೊಳಿಸುವುದರಲ್ಲಿ ಸರ್ಕಾರದ ಇಲಾಖೆಗಳು ಹೇಳಿಕೊಳ್ಳುವಂತಹ ಯಶಸ್ಸನ್ನು ಸಾಧಿಸಿಲ್ಲ. ಇದಕ್ಕೆ ಹಲವಾರು ತೊಡಕುಗಳನ್ನು ನಾವು ಗಮನಿಸಬಹುದಾಗಿದೆ – ಕಾನೂನಿನ ತೊಡಕುಗಳು,. ಸಿಬ್ಬಂದಿ ಕೊರತೆ, ಸಂಪರ್ಕದ ಕೊರತೆ, ಕಾರ್ಯಾಚರಣೆಯಲ್ಲಿರುವ ನಿಧಾನಗತಿ, ಮಾಹಿತಿಗಳ ಕೊರತೆ ಮತ್ತು ಅಧಿಕಾರಿಗಳ ಅನಾದರಣೆ, ಇದಕ್ಕೆ ಪೂರಕವಾಗಿ ಜನರ ತಿಳುವಳಿಕೆಯ ಮಟ್ಟ ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಸರಿಯಾಗಿ ಇಲ್ಲದೇ ಇರುವುದರ ಪರಿಣಾಮವಾಗಿ ಸರ್ಕಾರದಿಂದ ನಿಯೋಜಿತಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ನಿರೀಕ್ಷಿಸಿದಂತಹ ಫಲಗಳನ್ನು ತರುವುದರಲ್ಲಿ ವಿಫಲತೆಯನ್ನು ತೋರುತ್ತಿವೆ ಎಂದರೆ ಬಹುಶಃ ತಪ್ಪಾಗಲಾರದು.

ಈ ಒಂದು ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದಲ್ಲಿ ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿ ಹೇಗೆ ತಮ್ಮ ಪಾತ್ರಗಳನ್ನು ವಹಿಸುತ್ತಿವೆ, ಅವುಗಳ ಕಾರ್ಯ ವಿನ್ಯಾಸ, ಕಾರ್ಯ ವೈಖರಿಯ ಬಗ್ಗೆ ಇಲ್ಲಿ ವಿಚಾರ ಮಾಡಲಾಗಿದೆ.

ಸ್ವಯಂ ಸೇವಾ ಸಂಸ್ಥೆಗಳ ಕಾರ್ಯವಿನ್ಯಾಸ ಮತ್ತು ವೈಖರಿ

ಈ ಸಂಸ್ಥೆಗಳ ಕಾರ್ಯವಿನ್ಯಾಸ ಮತ್ತು ವೈಖರಿಯನ್ನು ಗಮನಿಸಿದಾಗ ತಿಳಿಯುವ ಅಂಶವೆಂದರೆ ಈ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳಿಗಿಂತ, ಹಿಂದೆ ಹೇಳಿದಂತೆ, ಹೆಚ್ಚಿನ ಮಟ್ಟದ ವಿಭಿನ್ನತೆಯನ್ನು ಹೊಂದಿವೆ. ಇವುಗಳ ಕಾರ್ಯವ್ಯಾಪ್ತಿಯನ್ನು ಮೂರು ಹಂತಗಳಲ್ಲಿ ನೋಡಬಹುದು (ರೇಖಾಪಟವನ್ನು ಗಮನಿಸಿ). ಸರ್ಕರದ ಸಂಸ್ಥೆಗಳ ಮತ್ತು ಜನತೆಯ ನಡುವೆ ಮಧ್ಯಸ್ತಿಕೆ ವಹಿಸುವುದು – ಮುಖ್ಯವಾಗಿ ಅಭಿವೃದ್ಧಿಕಾರ್ಯಕ್ರಮದ ಫಾಲನುಭವಿಗಳಿಗೆ ಬ್ಯಾಂಕಿನಿಂದ ಸಾಲ ಕೊಡಿಸುವುದಕ್ಕೆ ಸಹಾಯ ಮಾಡುವುದು, ತಾಂತ್ರಿಕ ಸಲಹೆ ಮತ್ತು ಸಹಾಯವನ್ನು ಕೊಡುವುದು, ಎರಡನೆಯದಾಗಿ, ಸ್ವಂತವಾಗಿ, ಜನತೆಯ (ಬಡವರ) ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಬಂಡವಾಳವನ್ನು ಹೂಡುವುದು, ಅನುದಾನವನ್ನು ಮತ್ತು ಸಾಲವನ್ನು ಕೊಡುವುದು. ಸಂಸ್ಥೆಗಳನ್ನು ಕಟ್ಟುವುದು, ಬಡಜನರನ್ನು ಮತ್ತು ಫಲಾನುಭವಿಗಳನ್ನು ಸಂಘಟಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು, ಸ್ಥಳೀಯ ನಾಯಕತ್ವವನ್ನು ಬೆಳೆಸುವುದು, ಸಾಮೂಹಿಕ ಕಾರ್ಯಕ್ರಮಗಳನ್ನು (ಸಾಂಸ್ಕೃತಿಕ) ನಡೆಸುವುದು, ಸಾರ್ವಜನಿಕ ಸೇವೆಗಳ ಅಡಿಯಲ್ಲಿ ಬಡಜನರಿಗೆ ಆಸ್ತಿಗಳನ್ನು ವೃದ್ಧಿ ಮಾಡುವುದಕ್ಕೆ ಸಹಾಯ ಮಾಡುವುದು, ಸಹಾಯಧನ ಒದಗಿಸುವುದು ಮತ್ತು ಸ್ಥಳೀಯ ಯುವಕ ಮತ್ತು ಯುವತಿಯರಿಗೆ ಕರಕುಶಲಗಳ ಬಗ್ಗೆ ತರಬೇತಿಯನ್ನು ಒದಗಿಸುವುದು. ಈ ಎಲ್ಲಾ ಧ್ಯೇಯ ಅಥವಾ ಗುರಿಗಳನ್ನು ಮುಟ್ಟುವುದಕ್ಕೆ ಅವು ತಮ್ಮದೇ ಆದ ‘ಕಾರ್ಯವ್ಯೂಹ’ಗಳನ್ನು ರಚಿಸಿಕೊಂಡಿವೆ – ಸರ್ಕಾರದ ಸಂಸ್ಥೆಗಳ ಮೇಲೆ ಒತ್ತಡ ತರುವುದು, ಅಧಿಕಾರಿಗಳ ಗಮನ ಸೆಳೆಯುವುದು, ಸತ್ಯಾಗ್ರಹ ಹಾಗೂ ಧರಣಿ ಕೂಡುವುದು ಮತ್ತು ಸಂಪರ್ಕ ಸಭೆಗಳನ್ನು ನಡೆಸುವುದು. ಇಂತಹ ಸಭೆಗಳಲ್ಲಿ ನಡೆಸುವುದು. ಇಂತಹ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜನನಾಯಕರನ್ನು ಒಂದುಗೂಡಿಸಿ ಎಲ್ಲಾ ಸಮಸ್ಯೆಗಳನ್ನು ಮುಖಾಮುಖಿ ಅಂಕಿ ಅಂಶಗಳೊಡನೆ ಚರ್ಚಿಸಿ ಜನಪರವಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ವ್ಯವಸ್ಥೆಯನ್ನು ಈ ಸಂಸ್ಥೆಗಳು ರೂಪಿಸಿಕೊಂಡು ಕಾರ್ಯವೆಸಗುತ್ತಾ ಬಂದಿವೆ. ಇಂತಹ ಧ್ಯೇಯ ಮತ್ತು ಗುರಿಗಳನ್ನು ಇಟ್ಟುಕೊಂಡು ಹಾಗೂ ತಮ್ಮದೇ ಆದ ಕಾರ್ಯ ವೈಖರಿ ಮತ್ತು ಮಾರ್ಗಗಳನ್ನು ಅನುಸರಿಸಿ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರುವುದಕ್ಕೆ ಸರ್ಕಾರದ ಸಂಸ್ಥೆಗಳ ಜೊತೆ ಅವು ಪೂರಕ ಸಂಸ್ಥೆಗಳಾಗಿ ಕೆಲಸ ಮಾಡುತ್ತಾ ಬೆಳೆದು ಬಂದಿವೆ.

ಸಾಮಾಜಿಕ ಸುಧಾರಣೆ

ಗ್ರಾಮಾಂತರ ಪ್ರದೇಶದ ಜನರ ಜೀವನದ ಗತಿ ವಿಧಾನಗಳಲ್ಲಿ ಸಾಮಾಜಿಕ ಸುಧಾರಣೆಯನ್ನು ತರುವುದಕ್ಕೋಸ್ಕರ ಸ್ವಯಂ ಸೇವಾ ಸಂಸ್ಥೆಗಳು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಹೆಚ್ಚಿನ ರೀತಿಯಲ್ಲಿ ಈ ಸಂಸ್ಥೆಗಳು ಕಾರ್ಯಕೈಗೊಳ್ಳುತ್ತಿರುವ ಕಾರ್ಯಕ್ಷೇತ್ರಗಳು ಯಾವುವೆಂದರೆ – ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜನರನ್ನು ಸಂಘಟನೆಗೊಳಿಸುವುದು, ಪರಿಸರ ಸಂರಕ್ಷಣೆ ಇತ್ಯಾದಿ.

ಶಿಕ್ಷಣ ಕ್ಷೇತ್ರದಲ್ಲಿ ದೃಷ್ಟಾಂತಗಳ ಮೂಲಕ ಹೇಳುವುದಾದರೆ ಬೆಂಗಳೂರು ಜಿಲ್ಲೆಯಲ್ಲಿ ‘ಫೆಡಿನಾ’ ಎಂಬ ಸಂಸ್ಥೆಯು ಜನ ವಿದ್ಯಾಲಯಗಳನ್ನು ತೆರೆಯುವುದರ ಮೂಲಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ಕ್ಷೇತ್ರದ ಹೊಸ ಹೊಸ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಟ್ಟಾರೆ ಎಲ್ಲಾ ವರ್ಗದ ಹಾಗೂ ಜನಾಂಗದಲ್ಲಿ ‘ಸಾಕ್ಷರತೆ’ಯ ಮೂಲಕ ವಿದ್ಯಾಭ್ಯಾಸವನ್ನು ಕೊಡುತ್ತಿದೆ. ಇದೇ ರೀತಿ ‘ಸುಮಂಗಲಿ ಸೇವಾಶ್ರಮ’ ಸಂಸ್ಥೆಯು ನಿರಾಶ್ರಿತ ಮಕ್ಕಳಿಗಾಗಿ, ಶಿಶುವಿಹಾರಗಳನ್ನು ಮತ್ತು ಶಾಲೆಗಳನ್ನು ನಡೆಸುತ್ತಾ ಬಂದಿದೆ. ಮಹಿಳೆಯರಿಗೆ ಸ್ವಯಂ-ಉದ್ಯೋಗ ಪ್ರಾರಂಭಿಸುವುದಕ್ಕೆ ಬೇಕಾದ ವೃತ್ತಿನಿರತ ಶಿಕ್ಷಣ ಮತ್ತು ತರಬೇತಿಯನ್ನು ಕೊಡುತ್ತಾ ಬಂದಿದೆ. ಮಾಹಿತಿಯ ಪ್ರಕಾರ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಗಳು ೪೦೦ ಮಕ್ಕಳಿಗೆ ವಿದ್ಯಾಭ್ಯಾಸವನ್ನು ೧೦೦ ಮಹಿಳೆಯರಿಗೆ ಹೊಲಿಗೆ ಮತ್ತು ಪರದೆ ಮುದ್ರಣ (ಸ್ಕ್ರೀನ್ ಪ್ರಿಂಟಿಂಗ್)ದಲ್ಲಿ, ೪೦ ಮಹಿಳೆಯರಿಗೆ ನೂಲಿನ ತರಬೇತಿಯನ್ನು ಕೊಡುತ್ತಾ ಬಂದಿದೆ. ‘ಅಕ್ಷನ್ ಏಡ್’ ಸಂಸ್ಥೆಯು ಚಿತ್ರದುರ್ಗ ಜಿಲ್ಲೆಯ ೨೭ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಲಂಬಾಣಿ, ಭೋವಿ ಮತ್ತು ನಾಯ್ಕ ಜನಾಂಗದ ಮಕ್ಕಳಿಗೆ ಪ್ರಾಥಮಿಕ ಶಾಲೆಗಳನ್ನು ತೆರೆಯುವುದರ ಮೂಲಕ ಶಿಕ್ಷಣವನ್ನು ಕೊಡುತ್ತಾ ಬಂದಿದೆ. ಮುಖ್ಯವಾಗಿ ಶಾಲೆಗಳಿಂದ ಹೊರಗೆ ಬಂದ ಮಕ್ಕಳಿಗೆ (ಸುಮಾರು ೧೯೦ ಮಕ್ಕಳಿಗೆ) ಹಾಗೂ ವಯಸ್ಕರಿಗೆ ರಾಜ್ಯ ಸರ್ಕಾರದ ‘ಅಕ್ಷರವಾಣಿ’ ಕಾರ್ಯಕ್ರಮದ ಮೂಲಕ, ಪ್ರಾಥಮಿಕ ಶಿಕ್ಷಣವನ್ನು ಮತ್ತು ಕನಿಷ್ಟ ಕಲಿಕೆ ವಿಧಾನವನ್ನು ಕಲಿಸುತ್ತಾ ಬಂದಿದೆ. ಜಿಲ್ಲಾ ಪಂಚಾಯಿತಿ ನೆರವಿನಿಂದ ಶೇ. ೨೫ರಷ್ಟು ಧನ ಸಹಾಯದಿಂದ ಮತ್ತು ರೂ. ೧೦,೦೦೦ ರಷ್ಟು ಬೆಲೆಯ ಜನರ ಶ್ರಮ ಮತ್ತು ಸಾಮಗ್ರಿಗಳ ನೆರವಿನಿಂದ, ಈ ಸಂಸ್ಥೆಯು ಎರಡು ಹಳ್ಳಿಗಳಲ್ಲಿ ಎರಡು ಶಾಲಾ ಕಟ್ಟಡಗಳನ್ನು ಕಟ್ಟಿಸಿ ಶಾಲೆಗಳನ್ನು ನಡೆಸುತ್ತಿದೆ. ಈ ಶಾಲೆಗಳಲ್ಲಿ ಸುಮಾರು ಶೇ. ೨೫ರಿಂದ ೮೦ರಷ್ಟು ಹಾಜರಾತಿಯನ್ನು ಕಾಣಬಹುದಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ನೋಡುವುದಾದರೆ, ಉದಾಹರಣೆಗೆ, ರಾಣಿಬೆನ್ನೂರು, ತಾಲ್ಲೂಕಿನ ಮೆಡ್ಲೇರಿ ಎಂಬ ಗ್ರಾಮದಲ್ಲಿ ‘ಇಂಡಿಯಾ ಡೆವಲಪ್‌ಮೆಂಟ್ ಸರ್ವೀಸ್’ ಸಂಸ್ಥೆಯು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಸುತ್ತಮುತ್ತಲ್ಲಲಿರುವ ಬಡಜನರಿಗೆ ಒಳ್ಳೆಯ ಆರೋಗ್ಯ ಸೇವೆಯನ್ನು ಕೊಡುವಂತಹ ಸೇವೆಯನ್ನು ಹಿಂದೆ ಮಾಡುತ್ತಿತ್ತು. ಒಳ್ಳೆಯ ಮತ್ತು ಸುರಕ್ಷಿತ ಆಹಾರವನ್ನು ಮಕ್ಕಳಿಗೆ ಕೊಡುವುದಕ್ಕಾಗಿ ‘ಸುಮಂಗಲಿ ಸೇವಾಶ್ರಮ’ವು ೧೫ ಹಳ್ಳಿಗಳಲ್ಲಿ ಸರ್ಕಾರದ ಸಹಾಯದಿಂದ ಸುಮಾರು ೧೬೦೦ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುತ್ತಾ ಬಂದಿದೆ. ಇದೇ ರೀತಿ ಮುಳಬಾಗಿಲು ತಾಲ್ಲೂಕಿನಲ್ಲಿರುವ ‘ಗ್ರಾಮವಿಕಾಸ’ ಸಂಸ್ಥೆಯು ಕೂಡ ಬಡ ಜನರಿಗಾಗಿ ಔಷಧಿಗಳನ್ನು ಕೊಳ್ಳುವುದಕ್ಕೆ ಧನಸಹಾಯ ಮಾಡುವುದು ಮತ್ತು ಮಕ್ಕಳಿಗಾಗಿ ಪೌಷಟಿಕ ಆಹಾರವನ್ನು ಕೊಡುವುದರ ಮೂಲಕ  ಜನರ ಕನಿಷ್ಟ ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ. ಚಿತ್ರದುರ್ಗದ ಸೋಮನಹಳ್ಳಿಯಲ್ಲಿ ‘ಅಕ್ಷನ್ ಏಡ್’ ಸಂಸ್ಥೆಯು ಸರ್ಕಾರದ ‌ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೆರವು ಕೊಡುವುದರ ಮೂಲಕ ಆರೋಗ್ಯ ಸೇವೆಯನ್ನು ಕೊಡುತ್ತಾ ಬಂದಿದೆ. ಪ್ರಮುಖವಾಗಿ, ಆರೋಗ್ಯ ಶಿಕ್ಷಣ ಕಾರ್ಯಕರ್ತರಿಗೆ ತರಬೇತಿ, ಗರ್ಭಿಣಿ ಹೆಂಗಸರನ್ನು ಗುರುತಿಸಿ ನೊಂದಾಯಿಸುವುದು, ರೋಗಿಗಳ ಎತ್ತರ ಮತ್ತು ತೂಕವನ್ನು ದಾಖಲಾತಿ ಮಾಡುವುದು, ತೊಂದರೆಗೊಳಪಟ್ಟಿರುವ ತಾಯಂದಿರನ್ನು ಗುರುತಿಸಿ ನೆರವು ಕೊಡುವುದು, ಮಕ್ಕಳನ್ನು ಗುರುತಿಸಿ ಲಸಿಕೆ, ಪೋಲೀಯೋ ಹಾಕಿಸುವುದು. ಹೀಗೆ ಹಲವಾರು ಆರೋಗ್ಯ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತಾ ಬಂದಿದೆ. ಜನರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಂತಹ ಸೇವೆಯನ್ನು ಕೂಡ ಮಾಡುತ್ತಾ ಬಂದಿದೆ. ಅಂಕಿ ಅಂಶಗಳನ್ನು ನೋಡಿದಾಗ ಈ ಸಂಸ್ಥೆ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕಲ್ಯಾಣಕ್ಕಾಗಿ ಶೇ. ೬೦ರಿಂದ ೧೦೦ರಷ್ಟು ಯಶಸ್ಸನ್ನು ಸಾಧಿಸುತ್ತಾ ಬಂದಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿರುವ ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ವು ಕೂಡಾ ಸ್ಥಳೀಯ ಸೋಲಿಗ ಜನಾಂಗಕ್ಕೆ ಆರೋಗ್ಯಜ್ಞಾನದ ಬಗ್ಗೆ ಅರಿವು ಮೂಡಿಸುತ್ತಾ ಅವರುಗಳು ಆರೋಗ್ಯವಾಗಿರುವುದಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತಾ ಬಂದಿದೆ. ಈ ಕೇಂದ್ರದ ಆರೋಗ್ಯ ಪೋಷಣೆಯಿಂದ ‘ಶಿಶು ಮರಣ’ ಪ್ರತಿ ಸಾವಿರಕ್ಕೆ ೧೪೫ರಿಂದ ೨೮೦ಕ್ಕಿಂತ ಕಡಿಮೆಗೊಳಿಸಿರುವುದು ಈ ಸಂಸ್ಥೆಯ ಮೇರು ಸಾಧನೆ.

ಒಳ್ಳೆಯ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವುದು ಕಲ್ಮಷವಿಲ್ಲದ ಕುಡಿಯುವ ನೀರು ಹಾಗೂ ನೈರ್ಮಲ್ಯ. ಎಲ್ಲಾ ಕಾಲಗಳಲ್ಲೂ ಜನರ ತಮ್ಮ ಆರೋಗ್ಯಮಟ್ಟವನ್ನು ಉತ್ತಮಗೊಳಿಸುವುದಕ್ಕೆ ಹಾಗೂ ಪಶುಗಳಿಗೆ ಸುರಕ್ಷಿತವಾದ ಆರೋಗ್ಯವನ್ನು ಕೊಡುವುದಕ್ಕೆ ಕುಡಿಯುವ ನೀರು ಬಹಳ ಅತ್ಯಗತ್ಯ. ಇದರ ಜೊತೆಗೆ ಸುತ್ತಮುತ್ತಲಿನ (ನೀರಿನ ವ್ಯವಸ್ಥೆ ಇರುವಲ್ಲಿ) ಪರಿಸರವನ್ನು ಕೂಡ ಶುಚಿತ್ವದಿಂದ ಇಟ್ಟುಕೊಳ್ಳಬೇಕಾಗಿದೆ. ಇಂತಹ ಸೇವೆಗಳನ್ನು ಕೊಡುವುದರಲ್ಲಿ ಸ್ವಯಂ ಸೇವಾ ಸಂಸ್ಥೆಗಳಾದ ‘ಡ್ಯಾನಿಡಾ’, ‘ಮೈರಾಡ’, ‘ಮಹಿಳಾ ವಿಮೋಚನೆ’ , ‘ಅಮಲಾ ಕುಟುಂಬ ಅಭಿವೃದ್ಧಿ ಕಾರ್ಯಕ್ರಮ’, ಮತ್ತು ‘ಪುನರ್‌ವಸತಿ ಸಂಘ’ಗಳು ಹೆಚ್ಚಿನ ಮಟ್ಟದ ಶ್ರಮವನ್ನು ವಹಿಸುತ್ತಾ ಬಂದಿವೆ. ಸರ್ಕಾರದ ‘ನಲ್ಲಿ ನೀರು ಸರಬರಾಜು’, ‘ಕಿರುನೀರು ಸರಬರಾಜು’ , ‘ಕೈಪಂಪು ಸಹಿತ ಕೊಳವೆಬಾವಿ’, ಯೋಜನೆಗಳನ್ನು ಅನುಷ್ಟಾನ ತರುವಿಕೆಯಲ್ಲಿ ಮೇಲಿನ ಸಂಸ್ಥೆಗಳು ಪೂರಕ ಸಂಸ್ಥೆಗಳಾಗಿ ಕೆಲಸ ಮಾಡುತ್ತಾ ಬಂದಿವೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ, ಮಹಿಳಾ ವಿಮೋಚನೆ, ಮೈರಾಡ ಸಂಸ್ಥೆಗಳು ಒವರ್ ಹೆಡ್ ಟ್ಯಾಂಕ್ ನಿರ್ಮಿಸಲು ಉತ್ತಮ ಸ್ಥಳದ ಆಯ್ಕೆ, ಕೊಳವೆ ಬಾವಿಗಳ ಗುರುತಿಸುವಿಕೆ, ನೀರಿರುವ ಸ್ಥಳಗಳನ್ನು ಗುರುತಿಸುವಿಕೆ ಹಾಗೂ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಉತ್ತೇಜನವನ್ನು ಕೊಟ್ಟಿವೆ ಮತ್ತು ಕೊಡುತ್ತಾ ಬಂದಿವೆ. ಇದರ ಜೊತೆಗೆ ಪರಿಸರ ಮಾಲಿನ್ಯ ಕುರಿತಂತೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿವೆ.

ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಿನ ಮಟ್ಟದಲ್ಲಿ ಹಿಂದುಳಿದ ಜನಾಂಗದವರ ಆಯಾ ವರ್ಗದವರ ಕಲ್ಯಾಣಕ್ಕಾಗಿ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿವೆ. ಈ ಒಂದು ದಿಶೆಯಲ್ಲಿ ‘ಇಂಡಿಯಾ ಡೆವಲಪಮೆಂಟ್ ಸರ್ವೀಸ್’ ಸಂಸ್ಥೆಯು ಎರಡು ತರಹದ ಫಲಾನುಭವಿಗಳ ಗುಂಪುಗಳನ್ನು ಯಾವಾಗಲೂ ತನ್ನ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಾ ಬಂದಿದೆ. ಎಲ್ಲಾ ಬಡಜನಾಂಗ ಮತ್ತು ಬಡಮಹಿಳೆಯರು ಹಾಗೂ ಅರಿಸುವಿಕೆಯಲ್ಲಿ ಮುಖ್ಯವಾಗಿ, ಜಮೀನು ಇಲ್ಲದವರಿಗೆ ಹೆಚ್ಚಿನ ಆದ್ಯತೆಯನ್ನು ಕೊಡುವುದು, ಇವರಿಗೆ ಕುರಿ ಸಾಕಾಣಿಕೆ ಬಗ್ಗೆ, ಹಾಲು ಉತ್ಪಾದನಾ ಬಗ್ಗೆ, ಪಶುಗಳನ್ನು ಆರೈಕೆ ಮಾಡುವ ಜವಾಬ್ದಾರಿಯ ಬಗ್ಗೆ ಗ್ರಾಮೀಣ ಮತ್ತು ಗುಡಿಕೈಗಾರಿಕೆಗಳ ಬಗ್ಗೆ ಮಾಹಿತಿ, ತರಬೇತಿ ಮತ್ತು ಹಣದ ಸಹಾಯವನ್ನು ಕೊಟ್ಟು ಇವರು ಸ್ವತಂತ್ರವಾಗಿ ಜೀವನ ನಡೆಸುವುದಕ್ಕೆ ಸಮಾಜದಲ್ಲಿ ಜವಾಬ್ದಾರಿ ಹೊತ್ತ ವ್ಯಕ್ತಿಗಳಾಗಿ ಬೆಳೆಯುವುದಕ್ಕೆ ಈ ಸಂಸ್ಥೆ ನೆರವು ಮತ್ತು ಸಹಾಯವನ್ನು ನೀಡುತ್ತಾ ಬಂದಿದೆ.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವು ಡಾ|| ಸುದರ್ಶನ್ ಅವರ ನೇತೃತ್ವದಲ್ಲಿ ಕಳೆದ ೧೫ ವರ್ಷಗಳಿಂದ ಗಿರಿಜನರ ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ತಮ್ಮ ಸೇವೆ ಮತ್ತು ಶ್ರಮವನ್ನು ನೀಡುತ್ತಾ ಬಂದಿದೆ. ಇದುವರೆವಿಗೂ ಸುಮಾರು ೨೦,೦೦೦ ಗಿರಿಜನರನ್ನು ಪೋಷಿಸಿ ಅವರಲ್ಲಿರುವ ಬಡತನದ ನಿವಾರಣೆಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು, ಜನಾಂಗದ ಸಂಸ್ಕೃತಿಯನ್ನು ಅಳವಡಿಸಿಕೊಂಡು, ಈ ಜನಗಳ ಏಳಿಗೆಗಾಗಿ ದುಡಿಯುತ್ತಾ ಬಂದಿದೆ. ಇದೇ ರೀತಿ ಫೆಡಿನಾ ಸಂಸ್ಥೆಯ ಆಶ್ರಯದ ಹೆಗ್ಗಡದೇವನ ಕೋಟೆಯಲ್ಲಿರುವ ವಿವಿಧ ಕಾಡುಕುರುಬರ ಸಂಘವು ಕುರುಬ ಜನಾಂಗದ ಪದ್ಧತಿಯಲ್ಲಿರುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಹಬ್ಬಗಳನ್ನು ಆಚರಿಸುವ ಮೂಲಕ ಕಾಡುಕುರುಬರನ್ನು ಸಂಘಟನೆ ಮಾಡಿ ಜಮೀನಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವಂತೆ ಹುರಿದುಂಬಿಸಿ ಜನಾಂಗಕ್ಕೆ ಬೇಕಾದ ನ್ಯಾಯವನ್ನು ಒದಗಿಸಿ ಕೊಡುತ್ತಾ ತನ್ನ ಸೇವೆಯನ್ನು ಮಾಡುತ್ತಾ ಬಂದಿದೆ.

ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಕ್ಷನ್ ಏಡ್ ಸಂಸ್ಥೆಯು ಜನರನ್ನು ಸಂಘಟನೆ ಮಾಡುವುದರ ಮೂಲಕ ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಇದಕ್ಕಾಗಿ ‘ಗ್ರಾಮಾಭಿವೃದ್ಧಿ’ ಮಂಡಳಿಗಳನ್ನು ಸ್ಥಾಪಿಸಿ ಇದರಲ್ಲಿ ಫಲಾನುಭವಿಗಳು ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಉಪಸಮಿತಿಗಳನ್ನು ರಚಿಸಿ ಸದಸ್ಯರಿಗೆ ಜವಾಬ್ದಾರಿಯನ್ನು ಕೊಡುವುದರ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದಕ್ಕೆ ಸಹಕಾರ ಮತ್ತು ಪ್ರೋತ್ಸಾಹ ಕೊಡುತ್ತಾ ಬಂದಿದೆ. ದೃಷ್ಟಾಂತ ಮೂಲಕ ಹೇಳುವುದಾದರೆ, ೧೬ ಮಂದಿ ರೈತರನ್ನು ಒಂದುಗೂಡಿಸಿ ‘ಸಾಮೂಹಿಕ ನೀರಾವರಿ’ ಕಾರ್ಯಕ್ರಮವನ್ನು ಜಾರಿಗೊಳಿಸುವುದರ ಮೂಲಕ ಈ ಎಲ್ಲಾ ರೈತರಿಗೆ ನೀರಾವರಿ ಬೇಸಾಯ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಾಯ್ತು. ಇದರ ಜೊತೆಗೆ ಜಿಲ್ಲಾ ಪಂಚಾಯತ್‌ನ ಅನುದಾನದ ಸಹಾಯದಿಂದ ಸಾಮೂಹಿಕ ಭವನಗಳನ್ನು ಎರಡು ಹಳ್ಳಿಗಳಲ್ಲಿ (ಸೋಮನಹಳ್ಳಿ, ರಾಜನಹಳ್ಳಿ) ಈ ಸಂಸ್ಥೆ ಕಟ್ಟಿದೆ. ಹಳ್ಳಿಗಳಲ್ಲಿ ಬೇಕಾದ ಸವಲತ್ತುಗಳನ್ನು ವೃದ್ಧಿಪಡಿಸಲು ಈ ಸಂಸ್ಥೆಯು ಜನರಲ್ಲಿ ಶ್ರಮದಾನ ಕೊಡುವಂತಹ ಪ್ರವೃತ್ತಿಯನ್ನು ಬೆಳೆಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಾ ಬಂದಿದೆ.

ಅಭಿವೃದ್ಧಿ ಕಾರ್ಯಕ್ರಮಗಳು

ಅಭಿವೃದ್ಧಿ ಕಾರ್ಯಕ್ರಮಗಳು ಮುಖ್ಯವಾಗಿ ಜನರ ಆರ್ಥಿಕ ಬೆಳವಣಿಗೆಯನ್ನು ಮತ್ತು ಸಮಗ್ರ ತರವಾದ ಸಾಮೂಹಿಕ ಅಭಿವೃದ್ಧಿಯನ್ನು ತರುವಂತಹ ಕಾರ್ಯಕ್ರಮಗಳಾಗಿವೆ. ಹೆಚ್ಚಿನ ರೀತಿಯಲ್ಲಿ ಇವು ಸರ್ಕಾರದಿಂದ ನಿಯೋಜಿತವಾದ ಕಾರ್ಯಕ್ರಮಗಳು. ಈ ಒಂದು ಪರಿವಿಧಿಯಲ್ಲಿ ನೋಡಿದಾಗ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಹೆಚ್ಚಿನ ಮಟ್ಟದಲ್ಲಿ ಸರ್ಕಾರ ಕಾರ್ಯಕ್ರಮಳಿಗೆ ಮತ್ತು ಅದರ ಪ್ರಯತ್ನಗಳಿಗೆ ಬಲಕೊಡುವಂತಹ ಮತ್ತು ಸಹಕಾರ ಕೊಡುವಂತಹ ಸಂಸ್ಥೆಗಳಾಗಿವೆ. ಇಂತಹ ಕಾರ್ಯಕ್ರಮಗಳ ಅನುಷ್ಟಾನ ತರುವಿಕೆಯಲ್ಲಿ ಈ ಸಂಸ್ಥೆಗಳ ಪಾತ್ರ ಅತಿ ಮುಖ್ಯವಾದುದ್ದು.

ಈ ಒಂದು ಹಿನ್ನೆಲೆಯಲ್ಲಿ ನೋಡಿದಾಗ ಸ್ವಯಂ ಸೇವಾ ಸಂಸ್ಥೆಗಳು ಪ್ರಮುಖವಾಗಿ ಸಣ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಾ ಬಂದಿವೆ. ದೃಷ್ಟಾಂತ ಮೂಲಕ ಹೇಳುವುದಾದರೆ ‘ಗ್ರಾಮ ವಿಕಾಸ’ ಸಂಸ್ಥೆಯು ಬಹಳ ಕಡಿಮೆ ಗಾತ್ರದಲ್ಲಿ ವ್ಯವಸಾಯ ಮತ್ತು ಇದಕ್ಕೆ ಸಂಬಂಧಪಟ್ಟ ಅಂದರೆ ಹೊಸ ತಳಿಯ ಬೀಜಗಳನ್ನು ಒದಗಿಸುವುದು ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವಿನಿಯೋಗಿಸುವುದಕ್ಕೆ ಬೇಕಾದ ಬಂಡವಾಳವನ್ನು ರೈತ ಜನರಿಗೆ ಕೊಡುವುದು, ಇಂತಹ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹಳ್ಳಿಗಳಲ್ಲಿ ಬಡತನ ನಿರ್ಮೂಲನಾ ಮಾಡುವುದು.

ಇದೇ ರೀತಿ ಇಂಡಿಯಾ ಡೆವೆಲಪಮೆಂಟ್  ಸರ್ವೀಸ್ ಸಂಸ್ಥೆಯು ಮೆಡ್ಲೇರಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ರೈತರಿಗೆ ಧನ ಸಹಾಯವನ್ನು ಕೊಡುತ್ತಾ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹಳ್ಳಿಗಳ ಆರ್ಥಿಕ ವ್ಯವಸ್ಥೆಯನ್ನು ಬಲ ಪಡಿಸುವುದರ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿ ಉಂಟು ಮಾಡುವುದಕ್ಕೆ ಶ್ರಮಿಸುತ್ತಾ ಬಂದಿದೆ. ರೈತರಿಗೆ ಹೊಸ ಹೊಸ ಬೆಳೆಗಳನ್ನು ಬೆಳೆಯುವುದಕ್ಕೆ ಬೇಕಾದ ಧನ ಸಹಾಯವನ್ನು ಕೂಡ ಮಾಡುತ್ತಾ ಬಂದಿದೆ. ಇದಲ್ಲದೆ ಕುರಿಸಾಗಾಣಿಕೆಯನ್ನು, ಉಣ್ಣೆ ಮತ್ತು ಹಾಲು ಉತ್ಪಾದನೆಯಿಂದ ಬಂದ ಉತ್ಪನ್ನಗಳಿಗೆ ಬೇಕಾದ ಮಾರುಕಟ್ಟೆ ಸೌಲಭ್ಯಗಳನ್ನು ಕೂಡ ಒದಗಿಸುತ್ತಾ ಬಂದಿದೆ. ಇದರ ಜೊತೆಗೆ ಸರ್ಕಾರದಿಂದ ನಿಯೋಜಿತ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದಕ್ಕೆ ಮಧ್ಯಸ್ಥಿಕೆಯನ್ನು ಕೂಡ ವಹಿಸುತ್ತಾ ಬಂದಿದೆ. ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ತಮ್ಮ ಸ್ವಂತ ಉದ್ದಿಮೆ ನಡೆಸಲು ಬೇಕಾದ ಸಾಲವನ್ನು ಬ್ಯಾಂಕಿನಿಂದ ಪಡೆಯುವುದಕ್ಕೆ ಸಹಕಾರವನ್ನು ಹಾಗೂ ಇದಕ್ಕೆ ಬೇಕಾದ ತರಬೇತಿಯನ್ನು ಕೂಡ ನೀಡುತ್ತಾ ಈ ಸಂಸ್ಥೆ ತನ್ನ ಸೇವೆಯನ್ನು ಸಮಾಜಕ್ಕೆ ಧಾರೆ ಎರೆಯುತ್ತಾ ಬಂದಿದೆ.

ರೈತಾಪಿ ಜನರ ಆರ್ಥಿಕ ಬೆಳವಣಿಗೆಗಾಗಿ ‘ಅಕ್ಷನ್‌ ಏಡ್’ ಸಂಸ್ಥೆಯು ಸುಮಾರು ೧೨೫೦ ರೈತ ಫಲಾನುಭವಿಗಳನ್ನು ೨೬ ಹಳ್ಳಿಗಳಿಂದ ಆರಿಸಿ ಅವರಿಗೆ ಬೆಳೆ ಸಾಲ ಮತ್ತು ಕೃಷಿ ಸಂಬಂಧಪಟ್ಟ ಬೆಳೆಗಳನ್ನು ಉತ್ಪನ್ನ ಮಾಡುವುದಕ್ಕೆ ಬೇಕಾದ ಸಹಾಯವನ್ನು ಕೊಡುತ್ತಾ ಬಂದಿದೆ. ತಡೆ ನೀರಾವರಿ ಕಾರ್ಯಕ್ರಮದ ಮೂಲಕ ಸುಮಾರು ೨೩೨ ಎಕರೆ ಜಮೀನಿನಲ್ಲಿ ಹತ್ತಿ ಮತ್ತು ಕಡಲೆಕಾಯಿಯನ್ನು ಬೆಳೆಯುವುದಕ್ಕೆ, ರೈತರಿಗೆ ಸಹಕಾರ ಕೊಟ್ಟಿದೆ. ಇದಕ್ಕೆ ಬೇಕಾದ ಮಾರ್ಕೆಟ್ ಸೌಲಭ್ಯ ಹಾಗೂ ಸುಧಾರಿತ ಬೀಜ ಮತ್ತು ಗೊಬ್ಬರಗಳನ್ನು ಕೊಡುತ್ತಾ ಬಂದಿದೆ. ಇದರ ಜೊತೆಗೆ ಹಾಲಿನ ಕೇಂದ್ರಗಳನ್ನು ತೆರೆಯುವುದಕ್ಕೆ, ಕುರಿ ಮತ್ತು ಮೇಕೆಗಳನ್ನು ಸಾಕುವುದಕ್ಕೆ, ತೋಟಗಾರಿಕೆಯನ್ನು (೧೩ ಎಕರೆ ಒಣಭೂಮಿಯಲ್ಲಿ)ಮತ್ತು ಸಸ್ಯಕ್ಷೇತ್ರಗಳನ್ನು, ಸಣ್ಣ ಪ್ರಮಾಣದಲ್ಲಿ ವ್ಯವಹಾರ (೩೨ ಮಂದಿಗೆ) ನಡೆಸುವುದಕ್ಕೆ ಸಾಲವನ್ನು ಒದಗಿಸುವುದು ಮತ್ತು ಸ್ಥಳದ ಅವಶ್ಯಕತೆಗೆ ಅನುಗುಣವಾಗಿ ನಾರಿನ ಉದ್ದಿಮೆಯನ್ನು (ಹೆಚ್ಚಿನ ಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸಹಾಯವಾಗುವಂತೆ ನಡೆಸುವುದಕ್ಕೆ) ಬೇಕಾದ ಸಹಾಯವನ್ನು ಒದಗಿಸುವುದು. ಇಂತಹ ಅಭಿವೃದ್ಧಿ ಕಾರ್ಯಕ್ರಮಗಳಿಂದ ಚಿತ್ರದುರ್ಗ ಜಿಲ್ಲೆಯ ಹಲವಾರು ಹಳ್ಳಿಯ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರೆಯುವುದಕ್ಕೆ ಈ ಸಂಸ್ಥೆ ಸಹಾಯ ಮಾಡುತ್ತಾ ಬಂದಿದೆ.

ಮೈರಾಡಾ ಸಂಸ್ಥೆಯ ಆಶ್ರಯದಲ್ಲಿ ಹಲವಾರು ತಾಲ್ಲೂಕುಗಳಲ್ಲಿ ನಡೆಯುತ್ತಿರುವ, ಉದಾಹರಣೆಗೆ ಗುಲ್ಬರ್ಗಾ ಜಿಲ್ಲೆಯ ಕಮಲಾಪುರ ವ್ಯಾಪ್ತಿಯಲ್ಲಿ ಮತ್ತು ಮಾಗಡಿ ತಾಲ್ಲೂಕಿನ ಮಹಂತೇಶ್ವರ ಮಠದ ವ್ಯಾಪ್ತಿಯಲ್ಲಿ ತಡೆ ನೀರಾವರಿ  ಯೋಜನೆಗಳು ಸುಧಾರಿತ ಕೃಷಿಯನ್ನು ರೈತರು ಅಳವಡಿಸಿಕೊಳ್ಳುವುದಕ್ಕೆ ಸಹಾಯ ಮಾಡಿದೆ. ಇದರ ಪರಿಣಾಮವಾಗಿ ಸ್ಥಳೀಯ ಬಡರೈತರು ತಮ್ಮ ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಪಡೆಯುವುದಕ್ಕೆ ಹಾಗೂ ಮುಖ್ಯವಾಗಿ ರೈತರು, ಸಣ್ಣ ಮತ್ತು ಅತೀ ಸಣ್ಣ ರೈತರು, ತೋಟಗಾರಿಕೆಯನ್ನು ಒಂದು ಮುಖ್ಯ ಕಸುಬನ್ನಾಗಿ ಮಾಡಿಕೊಳ್ಳುವುದಕ್ಕೆ ಈ ಸಂಸ್ಥೆಗಳು ಕಾರ್ಯಕ್ರಮಗಳಲ್ಲಿ ಇಟ್ಟಿರುವ ಆಸಕ್ತಿ ಮತ್ತು ರೈತರನ್ನು ಒಂದು ಗೂಡಿಸುವಂತಹ ಸಂಘಟನಾ ಶಕ್ತಿ ಈ ಯೋಜನೆಗಳು ಯಶಸ್ವಿ ಆಗುವುದಕ್ಕೆ ಕಾರಣವಾಗಿದೆ. ಇಂತಹ ಕಾರ್ಯಕ್ರಮಗಳ ಫಲವಾಗಿ ಬಡರೈತರು ಆದಷ್ಟು ಒಳ್ಳೆಯ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದಕ್ಕೆ ಸಹಾಯ ಮತ್ತು ಉತ್ತೇಜನ ಸಿಕ್ಕಿದಂತಾಗುತ್ತದೆ.

ಮೇಲೆ ತಿಳಿಸಿದ ಕಾರ್ಯಕ್ರಮಗಳ ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಸಲುವಾಗಿ ಜನಾಂದೋಲನವನ್ನು ನೆಡೆಸುವುದರಲ್ಲಿ ಯಶಸ್ಸನ್ನು ಸಾಧಿಸಿವೆ. ಸರ್ಕಾರದ ಅರಣ್ಯ ಇಲಾಖೆಯ ಅರಣ್ಯೀಕರಣ – ನೆಡುತೋಪುಗಳು, ರಸ್ತೆಬದಿ ನೆಡುತೋಪುಗಳು, ರೈತರಿಗೆ ಸಸ್ಯಗಳ ಹಂಚಿಕೆ, ಗ್ರಾಮಮಟ್ಟದಲ್ಲಿ ಸ್ಥಳೀಯ ಅರಣ್ಯ ಸಮಿತಿಗಳನ್ನು ರಚಿಸುವುದಕ್ಕೆ ಈ ಸಂಸ್ಥೆಗಳು ಸಹಕಾರವನ್ನು  ಕೊಡುತ್ತಾ ಬಂದಿವೆ. ಇಂತಹ ಒಂದು ಕಾರ್ಯವನ್ನು ನಡೆಸುತ್ತಿರುವ ಸಂಸ್ಥೆಗಳೆಂದರೆ ಯುವಕಸಂಘ, ಹೊಸದುರ್ಗ; ‘ಸೇವಾಸಾಗರ ಟ್ರಸ್ಟ್’, ಸಾಗರ; ‘ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ’, ಚಿತ್ರದುರ್ಗ; ‘ಟ್ರೀ ಗ್ರೋವರ್ಸ್ ಸಹಕಾರ ಸಂಘ’, ಕೋಲಾರ, ‘ಹಿಂದೂ ಸೇವಾ ಪ್ರತಿಷ್ಠಾನ’, ಬೆಂಗಳೂರು – ಇವೆಲ್ಲಾ ಸಂಸ್ಥೆಗಳು ‘ಸಾಮಾಜಿಕ ಅರಣ್ಯ’ವನ್ನು ಮತ್ತು ಗಿಡಮೂಲಿಕೆಗಳನ್ನು ಸರಂಕ್ಷಣೆ ಮಾಡಿ ಬೆಳೆಸುವಂತಹ ಕಾರ್ಯಕ್ರಮದಲ್ಲಿ ಹಳ್ಳಿಗಳಲ್ಲಿ ಜನರನ್ನು ಸಣ್ಣ ಸಣ್ಣ ಗುಂಪುಗಳಾಗಿ ಮಾರ್ಪಡಿಸಿ ಅವರದೇ ಮುಂದಾಳತ್ವದಲ್ಲಿ ಫಲಪ್ರದವಾಗಿ ಕಾರ್ಯನಿರ್ವಹಸುವುದಕ್ಕೆ ಬೇಕಾದ ಸಹಕಾರ ಮತ್ತು ಉತ್ತೇಜನವನ್ನು ಕೊಡುತ್ತಾ ಬಂದಿವೆ.

ಈ ರೀತಿಯಾಗಿ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಗಳು ಕೂಡ ಸಾಮಾಜಿಕ ಸುಧಾರಣೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರುವಂತಹ ಸರ್ಕಾರದ ಪ್ರಯತ್ನಗಳಿಗೆ ಪೂರಕ ಸಂಸ್ಥೆಗಳಾಗಿ ಕೆಲಸ ಮಾಡುತ್ತಾ ಬಂದಿವೆ. ಹೀಗಾಗಿ ಸರ್ಕಾರಿ ಸಂಸ್ಥೆಗಳು, ಸಂಘ ಸಂಸ್ಥೆಗಳು, ಪ್ರತಿಷ್ಟಿತ ವ್ಯಕ್ತಿಗಳು ಸಮಾಜದ ವಿವಿಧ ವರ್ಗಗಳ, ಜನಾಂಗಗಳ ಸಾಮಾಜಿಕ ಬೆಳವಣಿಗೆ  ಮತ್ತು ಆರ್ಥಿಕ ಅಭ್ಯುದಯಕ್ಕೆ ಕೆಲಸ ಮಾಡುತ್ತಾ ತಮ್ಮ ತಮ್ಮ ಕರ್ತವ್ಯ, ಶ್ರಮ ಮತ್ತು ಸೇವೆಯನ್ನು ಧಾರೆ ಎರೆಯುತ್ತಾ ಬರುತ್ತಿವೆ ಮತ್ತು ಬರುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ ಇವೆರಲ್ಲರ ಪ್ರಯತ್ನ ಸ್ಥಳದ ಮತ್ತು ಅಲ್ಲಿರುವ ಜನರ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸುವಂತಹ ಒಂದು ತರಹದ ‘ಭೀಷ್ಮ ಪ್ರತಿಜ್ಞೆ’ ಆಗಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಭಾಗ – ಮೂರು

ಉಪಸಂಹಾರ

ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಪಂಚಾಯತ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾತ್ರವನ್ನು ಅರಿತನಂತರ ಈ ಭಾಗದಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಒಂದು ಈ ಸಂಸ್ಥೆಗಳ ಭಾಗವಹಿಸುವಿಕೆಯಿಂದ ಸಮಾಜದಲ್ಲಿ ಆಗುತ್ತಿರುವ ಪರಿಣಾಮಗಳು ಏನೆಂಬುದು. ಎರಡನೆಯದಾಗಿ ಈ ಎರಡು ಸಂಸ್ಥೆಗಳ ನಡುವೆ ಯಾವ ರೀತಿಯ ಸಂಬಂಧ ಮತ್ತು ಸಂಪರ್ಕವನ್ನು ಕಲ್ಪಿಸಬೇಕು ಎನ್ನುವುದು. ಈ ಎರಡು ಸಂಸ್ಥೆಗಳ ಮುಖ್ಯ ಉದ್ದೇಶ ಬಡಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದಕ್ಕೆ ಸಹಕರಿಸುವುದು ಮತ್ತು ಹಳ್ಳಿಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ತರುವುದು. ಆದ್ದರಿಂದ ಈ ಸಂಸ್ಥೆಗಳನ್ನು ಒಂದೂಗೂಡಿಸಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ವ್ಯವಸ್ಥೆಯ ಮೂಲ ಉದ್ದೇಶಗಳಲ್ಲಿ ಗುರಿಮುಟ್ಟ ಬಹುದಾಗಿದೆ ಎಂತಲೇ ಹೇಳಬಹುದು.

ಪಂಚಾಯತಿಗಳ ಪಾತ್ರವನ್ನು ಗಮನಿಸಿದಾಗ ತಿಳಿಯುವದೇನೆಂದರೆ, ಈ ಸಂಸ್ಥೆಗಳು ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಹೆಚ್ಚಿನ ಮಟ್ಟದ ಗುರಿಯನ್ನು ಸಾಧಿಸಲಿಕ್ಕಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಸಂಸ್ಥೆಗಳಿಗೆ ಬೇಕಾದ ರಾಜಕೀಯ ಭದ್ರತೆ, ಅಧಿಕಾರದ ಮತ್ತು ಹಣಕಾಸಿನ ಸ್ವಾಯತ್ತತೆ ಇಲ್ಲದೆ ಇದ್ದುದು. ಮುಖ್ಯವಾಗಿ ಹೇಳುವುದಾದರೆ ಈ ಸಂಸ್ಥೆಗಳಲ್ಲಿ (೧೯೮೩ ಮತ್ತು ೧೯೯೩ ಅಧಿನಿಯಮಗಳು ಬರುವವರೆವಿಗೂ) ಹಿಂದುಳಿದ ವರ್ಗಗಳು, ಜನಾಂಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಹಾಗೂ ಮಹಿಳೆಯರು ಹೆಚ್ಚಿನ ರೀತಿಯ ಭಾಗವಹಿಸುವ ಮತ್ತು ಮುಖ್ಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಅವಕಾಶ ಇರಲಿಲ್ಲ. ಆಡಳಿತದ ಹಿಡಿತ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಇದ್ದುದರ ಪರಿಣಾಮವಾಗಿ ಈ ವರ್ಗಗಳು ಮತ್ತು ಜನಾಂಗದವರು ಸಕ್ರಿಯವಾಗಿ ಪಾತ್ರವಹಿಸುವುದಕ್ಕೆ ಸಾಧ್ಯವಾಗಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಪಂಚಾಯತ್ ಅಧಿನಿಯಮಗಳಿಗೆ ತಂದ ಕ್ರಾಂತಿಕಾರಕ ಸುಧಾರಣೆಗಳಿಂದ ಈ ಸಂಸ್ಥೆಗಳಿಂದ ಎಲ್ಲಾ ವರ್ಗದವರು ಮತ್ತು ಜನಾಂಗದವರು ಭಾಗವಹಿಸಲಿಕ್ಕೆ ಅವಕಾಶ ಸಿಕ್ಕಿದೆ. ತಾತ್ವಿಕವಾಗಿ ಮತ್ತು ತಾರ್ಕಿಕವಾಗಿ ಇದೇ ನಿಜವಾದ ಸಾಮಾಜಿಕ ಬದಲಾವಣೆ ಅಂದರೆ ಬಹುಶಹ ಉತ್ಪ್ರೇಕ್ಷೆ ಆಗಲಾರದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದರೆ ಈ ಎಲ್ಲಾ ವರ್ಗದವರು ಮತ್ತು ಜನಾಂಗದವರು ಸಾಮಾಜದಲ್ಲಿ ಇತರರಂತೆ ಸಮಾನಾಂತರವಾಗಿ ಬಾಳುವುದಕ್ಕೆ ಹಾಗೂ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಇಂತಹ ಒಂದು ಅವಕಾಶವನ್ನು ಕರ್ನಾಟಕ ಪಂಚಾಯತ್ ರಾಜ್ ೧೯೯೩ರ ಆಧಿನಿಯಮವು ಕೊಟ್ಟಿದೆ. ಹೊಸ ಪಂಚಾಯತ್‌ಗಳು ಹೆಚ್ಚಿನ ಮಟ್ಟದಲ್ಲಿ ಸಾಮಾಜಿಕ ಬದಲಾವಣೆಯನ್ನು ತರುವುದಕ್ಕೆ ಕಾರ್ಯತತ್ಪರರಾಗಲು ಅಧಿಕ ಮಟ್ಟದ ಆಡಳಿತ ಮತ್ತು ಹಣಕಾಸಿನ ಸ್ವಾಯತ್ತತೆಯನ್ನು ಕೊಡಬೇಕಾಗಿದೆ. ಇಂತಹ ದಿಸೆಯಲ್ಲಿ ಕರ್ನಾಟಕವು ಹೆಜ್ಜೆ ಇಟ್ಟುರುವುದು ಸ್ವಾಗತಾರ್ಹ. ಈ ಸಂಸ್ಥೆಗಳಿಗೆ ಬೇಕಾದ ಸ್ವಾಯತ್ತತೆಯನ್ನು ಕೊಟ್ಟರೆ ಇವು ಬಲಯುತ ಮತ್ತು ಉಪಯುಕ್ತ ಸಂಸ್ಥೆಗಳಾಗಿ ಬೆಳೆಯುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.

ಸ್ವಯಂ ಸೇವಾ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಮತ್ತು ಹಣಕಾಸಿನ ಸಹಾಯವನ್ನು ಕೊಟ್ಟರೆ ಇ ಸಂಸ್ಥೆಗಳಿಗೂ ಕೂಡ ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಹಿಂದೆ ಬೀಳುವುದಿಲ್ಲ. ಗ್ರಾಮೀಣ ಮಟ್ಟದ ಸಂಘ ಸಂಸ್ಥೆಗಳಿಗೆ ಮುಖ್ಯವಾಗಿ ಯುವಕ ಸಂಘಗಳಿಗೆ ಮತ್ತು ಮಹಿಳಾ ಮಂಡಳಿಗಳಿಗೆ ಇಂತಹ ಉತ್ತೇಜನ ಬೇಕಾಗಿದೆ. ಈ ಸಂಘ ಸಂಸ್ಥೆಗಳು ಗ್ರಾಮೀಣ ಜನತೆಯ ಜೊತೆ ನೇರ ಸಂಪರ್ಕವನ್ನು ಇಟ್ಟುಕೊಂಡಿರುವುದರಿಂದ ಸರ್ಕಾರವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ, ಅನುಷ್ಟಾನಗೊಳಿಸುವುದಕ್ಕೆ ಆದಷ್ಟು ರೀತಿಯ ಉತ್ತೇಜನ ಮತ್ತು ಸಹಕಾರವನ್ನು ಕೊಡಬೇಕಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದರಲ್ಲಿ ಯಾವುದೇ ತರಹದ ಆಡಳಿತ ಮತ್ತು ಹಣಕಾಸಿನ ಅಡಚಣೆಗಳು ಇರಬಾರದು ಮತ್ತು ಕಾರ್ಯಕ್ರಮಗಳ ಫಲಗಳನ್ನು ಅಥವಾ ಉಪಯೋಗಗಳನ್ನು ಜನರಿಗೆ ತಲುಪಿಸುವುದರಲ್ಲಿ ಕೂಡ ಅಡಚಣೆಗಳು ಇರಬಾರದು. ಇಂತಹ ಒಂದು ವ್ಯವಸ್ಥೆ ಕಂಡುಬರುವುದು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಮಾತ್ರ. ಏಕೆಂದರೆ ಈ ಸಂಸ್ಥೆಗಳ ಸ್ವರೂಪ  ಮತ್ತು ಕಾರ್ಯವಿನ್ಯಾಸ, ಸರ್ಕಾರದ ಸಂಸ್ಥೆಗಳಿಗೆ ಹೋಲಿಸಿದಾಗ, ವಿಭಿನ್ನವಾದುದು. ಆದುದರಿಂದ ಈ ಸಂಸ್ಥೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಆಧ್ಯತೆಯನ್ನು ಕೊಡುವುದರಿಂದ ನಾವು ನಮ್ಮ ಗುರಿಯಾದ ಸಾಮಾಜಿಕ ಬದಲಾವಣೆಯನ್ನು ತರಬಹುದಾಗಿದೆ.

ಇಂತಹ ಒಂದು ಗುರುತರವಾದ ಧ್ಯೇಯನ್ನು ಸಾಧಿಸಬೇಕಾದರೆ ಈ ಎರಡು ಸಂಸ್ಥೆಗಳು ಜೊತೆ ಜೊತೆಯಲ್ಲಿ ಕೆಲಸ ಮಾಡಬೇಕಾಗಿದೆ. ಪ್ರಮುಖವಾಗಿ ಇವೆರಡರ ನಡುವೆ “ಜಾಲಬಂಧ” (Network)ವನ್ನು ತರಬೇಕಾಗಿದೆ. ಅಭಿವೃದ್ಧಿಗೆ ಸಂಬಂಧಪಟ್ಟ ಕಾರ್ಯಗಳನ್ನು – ಅಂದರೆ ಫಲಾನುಭವಿಗಳ ಆರಿಸುವಿಕೆ, ಸಂಪನ್ಮೂಲಗಳನ್ನು ಕ್ರೋಢೀಕರಿಸುವಿಕೆ, ಸಂಪನ್ಮೂಲಗಳ ಹಂಚಿಕೆ, ಸವಲತ್ತುಗಳು ಮತ್ತು ಸೌಕರ್ಯಗಳನ್ನು ಕೊಡುವುದಕ್ಕೆ, ಬಡವರನ್ನು ಮತ್ತು ಹಿಂದುಳಿದ ವರ್ಗದ ಮತ್ತು ಜನಾಂಗದವರನ್ನು ಒಟ್ಟುಗೂಡಿಸುವಿಕೆ – ಇವನ್ನು ರೂಪಿಸಿ ಅನುಷ್ಟಾನಗೊಳಿಸುವುದಕ್ಕೆ ನಿರ್ದಿಷ್ಟಪಡಿಸಿದ ಒಂದು ಸಂಸ್ಥೆಯಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲು ಈ ಸಂಸ್ಥೆಗೆ ಹೆಗಲುಕೊಡುವಂತಹ ಒಂದೆರಡು ಇತರೆ ಸಂಸ್ಥೆಗಳಿದ್ದರೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದರಲ್ಲಿ ಯಾವುದೇ ತರಹದ ಅಡಚಣೆಗಳಿರುವುದಿಲ್ಲ. ಇಂತಹ ಒಂದು ವ್ಯವಸ್ಥೆಯನ್ನು ಬಲಪಡಿಸುವುದಕ್ಕೋಸ್ಕರ ಕರ್ನಾಟಕ ಸರ್ಕಾರವು “ರಾಜ್ಯಮಟ್ಟದ ಸ್ವಯಂ ಸೇವಾ ಪ್ರತಿನಿಧಿಗಳ ಸಲಹಾ ಸಮಿತಿ” ಯನ್ನು ರಚಿಸಿದೆ. ಇದರ ಮುಖ್ಯ ಉದ್ದೇಶ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುವುದಕ್ಕೆ ಅನುಕೂಲ ಮಾಡಿಕೊಡುವುದು. ಈ ದಿಸೆಯಲ್ಲಿ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆಗಳು ಹೆಚ್ಚಿನ ಮಟ್ಟದ ಪಾತ್ರವನ್ನು ವಹಿಸಬೇಕಾಗಿದೆ. ಇಲಾಖಾ ಕಾರ್ಯಕರ್ತರು ಮತ್ತು ಸ್ವಯಂ ಸೇವಾ ಪ್ರತಿನಿಧಿಗಳು ಒಟ್ಟಿಗೆ ಸೇರಿ, ಪರಸ್ಪರ ಹೊಂದಾಣಿಕೆ ಮತ್ತು ಒಡಂಬಡಿಕೆಯಿಂದ ಕೆಲಸ ಮಾಡಬೇಕಾಗಿದೆ. ಇಂತಹ ಒಂದು ‘ಕಾರ್ಯ-ಸ್ನೇಹಿ’ ಪರಿಸರದಲ್ಲಿ ಈ ಎರಡೂ ಸಂಸ್ಥೆಗಳು ಕಾರ್ಯನಡೆಸಬೇಕಾಗಿದೆ. ಹೀಗೆ ಮಾಡಿದಾಗ ಮಾತ್ರವೇ ಸಮಾಜದಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಬದಲಾವಣೆ ಮತ್ತು ಇದಕ್ಕೆ ಪೂರಕವಾದ ಆರ್ಥಿಕ ಬೆಳವಣಿಗೆಯನ್ನು ತರುವುದಕ್ಕೆ ಸಾಧ್ಯ ಎಂದು ಹೇಳಬಹುದಾಗಿದೆ.

ಉಲ್ಲೇಖಗಳು

೧. ಅಬ್ದುಲ್ ಅಜೀಜ್ (೧೯೯೩) ಡಿಸೆಂಟ್ರಲೈಜ್ಡ್ ಪ್ಲಾನಿಂಗ್, ದಿ ಕರ್ನಾಟಕ ಎಕ್ಸ್‌ಪೀರಿಯನ್ಸ, ಸೇಜ್ ಪಬ್ಲಿಕೇಶನ್ಸ್, ನ್ಯೂ ಡೆಲ್ಲಿ.

೨. ಅಬ್ದುಲ್ ಅಜೀಜ್ (೧೯೯೪) ಡಿಸೆಂಟ್ರಲೈಜೇಷನ್ : ಮಂಡಲ್ ಪಂಚಾಯತ್ ಸಿಸ್ಟಮ್ ಇನ್ ಕರ್ನಾಟಕ, ಎನ್.ಐ.ಆರ್.ಡಿ., ಹೈದರಾಬಾದ್.

೩. ಶಿವಣ್ಣ. ಎನ್ (೧೯೯೦) ಪಂಚಾಯತಿರಾಜ್ ರಿಫಾರಮ್ಸ್ ಅಂಡ್ ರೂರಲ್ ಡೆವಲಪ್‌ಮೆಂಟ್, ಚುಗ್ ಪಬ್ಲಿಕೇಷನ್ಸ್, ಅಲಹಾಬಾದ್.

೪. ವೆಂಕಟರಂಗಯ್ಯ ಎಂಬ ಮತ್ತು ಎಂ ಪಟ್ಟಾಭಿರಾಮ್ (೧೯೬೯) ಲೋಕಲ್ ಗೌರ್ನಮೆಂಟ್ ಇನ್ ಇಂಡಿಯಾ ಸೆಲೆಕ್ಟ್ ರೀಡಿಂಗ್ಸ್, ಅಲೈಡ್ ಪಬ್ಲಿಷರ್ಸ್, ನ್ಯೂ ಡೆಲ್ಲಿ.

೫. ರೇ, ಅಮಲ್ ಅಂಡ್ ಕೆ. ಜಯಲಕ್ಷ್ಮಿ (೧೯೮೭) “ಜಿಲ್ಲಾ ಪರಿಷತ್ ಪ್ರಸಿಡೆಂಟ್ಸ್ ಇನ್ ಕರ್ನಾಟಕ : ದೇರ್ ಸೋಷಿಯಲ್ ಬ್ಯಾಕ್‌ಗ್ರೌಂಡ್ ಅಂಡ್ ಇಂಪ್ಲಿಕೇಷನ್ ಫಾರ್ ಡೆವಲಪ್ಮೆಂಟ್” ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ೧೭, ೨೪, ಅಕ್ಟೋಬರ್.

೬. ಕರ್ನಾಟಕ ಸರ್ಕಾರ (೧೯೮೯) ರಿಪೋರ್ಟ್‌ (ಕೃಷ್ಣಸ್ವಾಮಿ) ಆಫ್‌ದಿ ಜಿಲ್ಲಾ ಪರಿಷತ್ ಅಂಡ್ ಮಂಡಲ ಪಂಚಾಯತ್ ಇವ್ಯಾಲುಷೇನ್ ಕಮಿಟಿ, ಬೆಂಗಳೂರು.

೭. ಕರ್ನಾಟಕ ಸರ್ಕಾರ (೧೯೯೦) ರಿಪೋರ್ಟ್‌ ಆಫ್ ದಿ ಸೆಕೆಂಡ್ ಬ್ಯಾಕ್‌ವರ್ಡ್ ಕ್ಲಾಸ್ ಕಮಿಷನ್, ವಾಲ್ಯೂಂ-೩, ಬೆಂಗಳೂರು.

೮. ಮೀನಾಕ್ಷಿ ಸುಂದರಂ ಎಸ್.ಎಸ್.(೧೯೯೪) ಡಿಸೆಂಟ್ರಲೈಜೇಷನ್ ಇನ್ ಡೆವಲಪ್ಪಂಗ್ ಕಂಟ್ರೀಸ್, ಕಾನ್ಸೆಪ್ಟ್ ಪಬ್ಲಿಷಿಂಗ್ ಕಂಪನಿ, ನ್ಯೂ ಡೆಲ್ಲಿ.

೯. ವಿಶ್ವನಾಥ ವನಿತಾ (೧೯೯೩) ಎನ್.ಜಿ.ಎಸ್. ಅಂಡ್ ವುಮೆನ್ಸ್ ಡೆವಲಪ್‌ಮೆಂಟ್ ಇನ್‌ ರೂರಲ್ ಸೌತ್ ಇಂಡಿಯಾ, ಎ ಕಂಪೇರಬಲ್ ಅನಾಲಿಸಿಸ್, ವಿಸ್ತಾರ್ ಪಬ್ಲಿಕೇಷನ್ಸ್, ನ್ಯೂ ಡೆಲ್ಲಿ.

೧೦. ಅರೋರಾ ಜಿ ಎಸ್, ವಿ.ಎಸ್. ಪಾರ್ಥಸಾರಥಿ, ವಿ ರಾಮಸ್ವಾಮಿ (ಮಾರ್ಚ್ ೧೯೯೪) ವಾಲಂಟರಿ ಆರ್ಗನೈಜೇಷನ್ ಅಂಡ್ ರೂರಲ್ ಡೆವಲಪ್‌ಮೆಂಟ್ (ಅನ ಪಬ್ಲಿಷಡ್ ರಿರ್ಪೋರ್ಟ್), ಇನ್‌ಸ್ಟಿಟೂಟ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್, ಬೆಂಗಳೂರು.

೧೧. ಅಕ್ಷನ್ ಏಡ್ ಕರ್ನಾಟಕ ಪ್ರಾಜೆಕ್ಟ್ಸ್ (ಜನವರಿ-ಜೂನ್ ೧೯೯೪), ಹಾಫ್ ಇಯರ್ಲಿ ಪ್ರೊಗ್ರೆಸ್ ರಿಪೋರ್ಟ್, ಬೆಂಗಳೂರು.