ಪ್ರಸ್ತಾವನೆ

ದೇಶದ ಅಥವಾ ಯಾವುದೇ ರಾಜ್ಯದ ಆರ್ಥಿಕ ಅಭಿವೃದ್ಧಿಯ ಪರಿಪೂರ್ಣತೆಯನ್ನು ಕಾಣುವುದು ಆರ್ಥಿಕ ಅಭಿವೃದ್ಧಿಯ ಜೊತೆಯಲ್ಲಿ ಸಾಮಾಜಿಕ ಬದಲಾವಣೆಯನ್ನು ಕಂಡಾಗಲೇ ಎಂದರೆ ತಪ್ಪಾಗಲಾರದು. ತಾತ್ವಿಕವಾಗಿ ನೋಡಿದಾಗ ಕೇವಲ ಆರ್ಥಿಕ ಸುಧಾರಣೆಯಾದರೆ ಸಾಲದು. ಅದರ ಜೊತೆಯಲ್ಲಿ ಒತ್ತುಕೊಡುವ ಮತ್ತು ಪೂರಕವಾದ ಸಾಮಾಜಿಕ ಬದಲಾವಣೆಯು ಕೂಡ ಅತಿ ಮುಖ್ಯವಾದದ್ದು. ಸಮಾಜದಲ್ಲಿ ಇಂತಹ ಬದಲಾವಣೆಗಳನ್ನು ತರುವುದರಲ್ಲಿ ಹಲವಾರು ಸಂಘ ಸಂಸ್ಥೆಗಳು, ಅದರಲ್ಲೂ ಪಂಚಾಯತ್ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇದಕ್ಕೆ ಬೇಕಾದ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ಸಂಸ್ಥೆಗಳು ಕಾರ್ಯವ್ಯಾಪ್ತಿ ಮುಖ್ಯವಾಗಿ ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮ ಜನತೆಯನ್ನು ಬಡತನ ರೇಖೆಯಿಂದ ಮೇಲೆ ತರುವುದು. ಈ ಲೇಖನದ ಮುಖ್ಯ ವಿಷಯವಾದ ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಪಂಚಾಯತ್ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪಾತ್ರವೇನು ಎಂದು ಪ್ರಶ್ನಿಸಿಕೊಂಡಾಗ, ಉದ್ಬವವಾಗುವ  ಪ್ರಶ್ನೆ, ಈ ಸಂಸ್ಥೆಗಳೂ ಹಾಗೂ ಸಾಮಾಜಿಕ ಬದಲಾವಣೆಯ ನಡುವಿನ ಸಂಬಂಧವೇನು ಎಂಬುದರ ಬಗ್ಗೆ ಮುಖ್ಯವಾಗಿ ನಾವು ಇಲ್ಲಿ ತಿಳಿಯಬೇಕಾಗಿದೆ.

ಸಾಮಾಜಿಕ ಬದಲಾವಣೆ ಅಂದರೆ ಸಮಾಜದಲ್ಲಿ ಆದಂತಹ ವಿವಿಧ ಮಾರ್ಪಾಟುಗಳಲ್ಲಿ ಅಥವಾ ಬದಲಾವಣೆಗಳು – ಅದು ಸಾಮಾಜಿಕ ಪರಿವರ್ತನೆ ಆಗಿರಬಹುದು, ಆರ್ಥಿಕ ಅಭಿವೃದ್ಧಿ ಆಗಿರಬಹುದು, ಸಾಂಸ್ಕೃತಿಕ ಮಾರ್ಪಾಡು ಆಗಿರಬಹುದು, ಒಂದು ಗುಂಪಿನ ಅಥವಾ ಜನಾಂಗದ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಬದಲಾವಣೆ ಇರಬಹುದು, ಜನತೆಯ ದಿನನಿತ್ಯದ ಜೀವನದಲ್ಲಿ ಸುಧಾರಣೆ ಆಗಿರಬಹುದು. ಇಂತಹ ಉದ್ದೇಶಿತ ಬದಲಾವಣೆಗಳು, ಮುಖ್ಯವಾಗಿ ಹೇಳುವುದಾದರೆ, ಆಯಾ ಕ್ಷೇತ್ರದಲ್ಲಿ ಮತ್ತು ಜನರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಂತಹ ಪ್ರಯತ್ನವಾಗಿರುತ್ತದೆ.

ಮೇಲೆ ತಿಳಿಸಿರುವ ವಿಷಯದ ಹಿನ್ನೆಲೆಯಲ್ಲಿ ಇಟ್ಟುಕೊಂಡು, ನಾವು ಈ ಲೇಖನದಲ್ಲಿ ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಪಂಚಾಯತ್ ಮತ್ತು ತರುವುದಕ್ಕೆ ಈ ಸಂಸ್ಥೆಗಳು ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳೇನು ಹಾಗೂ ಕಾರ್ಯಾಚರಣೆಗೆ ತರುವುದರಲ್ಲಿ ಯಾವ ಯಾವ ತರಹದ ಅಡಚಣೆಗಳನ್ನು ಅವು ಎದುರಿಸುತ್ತಿವೆ ಮತ್ತು ಸಾಮಾಜಿಕ ಬದಲಾವಣೆ ಜನಜೀವನದ, ಮುಖ್ಯವಾಗಿ ಬಡಜನತೆಯ ಹಾಗೂ ವಿವಿಧ ವರ್ಗ ಮತ್ತು ಜನಾಂಗಗಳ ಮೇಲೆ ಎಂತಹ ಪರಿಣಾಮ ಬೀರಿದೆ-ಇಂತಹ ಹಲವಾರು ವಿಷಯಗಳನ್ನು ಈ ಲೇಖನದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಈ ಲೇಖನವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಸಾಮಾಜಿಕ ಬದಲಾವಣೆಗಳನ್ನು ತರುವುದರಲ್ಲಿ ಪಂಚಾಯತ್‌ಗಳ ಪಾತ್ರ, ಎರಡನೇ ಭಾಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮತ್ತು ಮೂರನೇ ಭಾಗದಲ್ಲಿ ಈ ಎರಡೂ ಸಂಸ್ಥೆಗಳು ವಹಿಸಿದ ಪಾತ್ರದ ಕಾರಣ ಉಂಟಾದ ಪರಿಣಾಮಗಳ ಬಗ್ಗೆ ಒಂದು ವಿಚಾರಪೂರಿತ ವಿಶ್ಲೇಷಣೆಯನ್ನು ಮಾಡಲಾಗಿದೆ.

ಭಾಗ – ಒಂದು

ಪಂಚಾಯತ್ ಸಂಸ್ಥೆಗಳ ಪಾತ್ರ:

ಪಂಚಾಯತ್ ಸಂಸ್ಥೆಗಳು ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಕಾರ್ಯ ನಡೆಸುತ್ತಾ ಬಂದಿವೆ. ಇವುಗಳಿಗೆ ತಮ್ಮದೇ ಆದ ಒಂದು ಚರಿತ್ರೆ ಇದೆ. ಇತಿಹಾಸ ಸಂಶೋಧನೆ ಮೂಲಕ ಹೇಳುವುದಾದರೆ “ಪ್ರಾಚೀನ ಭಾರತದಲ್ಲಿದ್ದ ಸ್ಥಳೀಯ ಸ್ವಯಂ ಸರ್ಕಾರಗಳು ಬ್ರಿಟಿಷ್ ಆಡಳಿತ ಅಥವಾ ಇವತ್ತಿನ ಸ್ಥಿತಿಗೆ ಹೋಲಿಸಿದಾಗ ವಿಶಾಲವಾಗಿ ಹಮ್ಮಿಕೊಂಡಿದ್ದು ಹೆಚ್ಚಿನ ಮಟ್ಟದಲ್ಲಿ ನೈಜತ್ವ ಹೊಂದಿದ್ದು ಆರ್ಥಿಕ ಮಟ್ಟದಲ್ಲಿ ಯಶಸ್ವಿ ಹೊಂದಿದ ಸಂಸ್ಥೆಗಳಾಗಿದ್ದವು” (ವೆಂಕಟರಾಮಯ್ಯ ಮತ್ತು ಪಟ್ಟಾಭಿರಾಮ್-೧೯೬೯). ಈ ಒಂದು ಯಶಸ್ವಿಗೆ ಮುಖ್ಯ ಕಾರಣ ಆ ದಿನಗಳಲ್ಲಿ ಇದ್ದ ಒಳ್ಳೆಯ ಪರಿಸರ, ಜಾತ್ಯಾತೀಯತೆ ಮತ್ತು ಮುಖ್ಯವಾಗಿ ಅಂದಿನ ಸಮಾಜದಲ್ಲಿದ್ದ ಸಮಗ್ರತೆಯ ಗುಣ. ಆದರೆ ಇಂತಹ ಒಂದು ಪರಿಸರ ಹಾಗೂ ಸಮಗ್ರತೆ, ಇತ್ತೀಚಿನ ಇತಿಹಾಸದಲ್ಲಿ ನೋಡಿದಾಗ ಅಷ್ಟೇನು ಕಂಡುಬರುವುದಿಲ್ಲ. ಏಕೆಂದರೆ ಇವುಗಳಿಗೆ ಬೇಕಾದ ಬಲವಾದ ರಾಜಕೀಯ ಮತ್ತು ಹಣಕಾಸಿನ ಸ್ವಾಯತ್ತತೆ ಇಲ್ಲದ್ದು ಮತ್ತು ಯಾವಾಗಲೂ ಇವುಗಳ ಆಡಳಿತ ಪಟ್ಟಭದ್ರ ಹಿತಾಶಕ್ತಿಗಳ ಹಿಡಿತದಲ್ಲಿ ಇದ್ದದರಿಂದ ಈ ಸಂಸ್ಥೆಗಳು ಪ್ರಜಾತಂತ್ರೀಯವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಒಂದು ಪರಿಸ್ಥಿತಿ ಇತ್ತೀಚಿನ ವರ್ಷಗಳವರೆಗೂ ಇತ್ತು. ಹಲವಾರು ರಾಜ್ಯಗಳಲ್ಲಿ, ಮುಖ್ಯವಾಗಿ ಹೇಳಬೇಕಾದರೆ ಕರ್ನಾಟಕ ಮತ್ತು ಪಶ್ಚಿಮಬಂಗಾಳಗಳಲ್ಲಿ ಈ ಸಂಸ್ಥೆಗಳನ್ನು ಗೌರವಯುತ ಮತ್ತು ಶಕ್ತಿಯುತ ಸಂಸ್ಥೆಗಳನ್ನಾಗಿ ಮಾಡುವಂತಹ ಪ್ರಯತ್ನಗಳನ್ನು ಮಾಡಲಾಗಿದೆ. ಇದಕ್ಕೆ ಒತ್ತಾಗಿ ಇತ್ತೀಚೆಗೆ ತಂದ ಸಂವಿಧಾನದ ಎಪ್ಪತ್ಮೂರನೇ ತಿದ್ದುಪಡಿಯು ಈ ಸಂಸ್ಥೆಗಳಿಗೆ ಪರಿಪೂರ್ಣವಲ್ಲದಿದ್ದರೂ, ಅರ್ಥಪೂರ್ಣವಾದ ಸ್ವಾಯತ್ತತೆಯನ್ನು ಕೊಟ್ಟಿದೆ.

ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆ

ಕರ್ನಾಟಕದಲ್ಲಿ ಪಂಚಾಯತ್ ರಾಜ್ಯ ವ್ಯವಸ್ಥೆಯು ೧೮೬೨ರಲ್ಲಿ ‘ಸ್ಥಳೀಯ ನಿಧಿ’ಯನ್ನು ಸ್ಥಾಪಿಸಿವುದರ ಮೂಲಕ ಉಗಮವಾಯಿತು. ಇವುಗಳನ್ನು ಸ್ವಾಯತ್ತತೆ ಸಂಸ್ಥೆಗಳನ್ನಾಗಿ ಮಾಡಲು ಸ್ವಾತಂತ್ರೋತ್ತರದ ಸರ್ಕಾರಗಳು ಸಮಿತಿಗಳನ್ನು (ವೆಂಕಟಪ್ಪ ಸಮಿತಿ, ಚಂದ್ರಶೇಖರಯ್ಯ ಸಮಿತಿ, ಕೊಂಡಜ್ಜಿ ಬಸಪ್ಪ ಸಮಿತಿ) ರಚಿಸುವುದರ ಮೂಲಕ ಪ್ರಯತ್ನ ಮಾಡಿದವು. ಆದರೆ ಹೇಳಿಕೊಳ್ಳುವಂತಹ ಫಲ ದೊರಕಲಿಲ್ಲ. ಇವುಗಳಿಗೆ ನಿಜವಾದ ಸ್ವಾಯತ್ತತೆ ಬಂದಿದ್ದು ೧೯೮೩ರಲ್ಲಿ ಸ್ಥಾಪಿಸಲಾದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತಿಗಳಿಂದ ಅಂದರೆ ತಪ್ಪಾಗಲಾರದು. ಅಂದರೆ ಹಿಂದೆ ಇದ್ದ ಸಂಸ್ಥೆಗಳ ಪಾತ್ರವೇನೂ ಇರಲಿಲ್ಲ ಅಂತ ವಾದವಲ್ಲ. ಆ ಸಂಸ್ಥೆಗಳು ಕೂಡ ಮುಖ್ಯವಾಗಿ ಆಗ ಇದ್ದ ತಾಲ್ಲೂಕು ಅಭಿವೃದ್ಧಿ ಮಂಡಳಿಗಳು ಜನ ಮೆಚ್ಚುವಂತಹ ಕೆಲಸ ಮಾಡಿವೆ. ಆದರೆ ಈ ಸಂಸ್ಥೆಗಳಿಗೆ ಸರಿಯಾದ ಮತ್ತು ಸಮಂಜಸವಾದ ಅಧಿಕಾರ ಮತ್ತು ಹಣ ಇರಲಿಲ್ಲ, ಹೆಚ್ಚಿನ ರೀತಿಯಲ್ಲಿ ಇವು ರಾಜ್ಯ ಸರ್ಕಾರದ ‘ಪ್ರತಿನಿಧಿ’ ಸಂಸ್ಥೆಗಳಾಗಿ ಕೆಲಸ ಮಾಡಿದವು. ಆದರೂ ಸಹ ಒಂದು ರೀತಿಯಲ್ಲಿ ಹೇಳುವುದಾದರೆ, ಇವತ್ತಿನ ಸಂಸ್ಥೆಗಳ ಸ್ಥಾಪನೆಗೆ ಆಗ ಇದ್ದ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಅಭಿವೃದ್ಧಿ ಮಂಡಳಿ ಮತ್ತು ಜಿಲ್ಲಾ ಅಭಿವೃದ್ಧಿ ಸಂಘಗಳು ಒಂದು ಭದ್ರತಳಪಾಯವನ್ನು ಕೊಟ್ಟಿವೆ.

ಪಂಚಾಯತ್ ಸಂಸ್ಥೆಗಳ ಪಾತ್ರವನ್ನು ಪ್ರಮುಖವಾಗಿ ಎರಡು ರೀತಿಗಳಲ್ಲಿ ನೋಡಬಹುದಾಗಿದೆ. ಒಂದನೆಯದಾಗಿ, ಈ ಸಂಸ್ಥೆಗಳಲ್ಲಿ ಎಷ್ಟರಮಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳು ಭಾಗವಹಿಸಲು ಸಾಧ್ಯವಾಗಿದೆ ಹಾಗೂ ಈ ಸಂಸ್ಥೆಗಳು ಎಷ್ಟರಮಟ್ಟಿನಲ್ಲಿ ಈ ವರ್ಗಗಳಿಗೆ ಸಮೀಪದಲ್ಲಿವೆ ಮತ್ತು ಸೇವೆಗಳನ್ನು ಸಲ್ಲಿಸುತ್ತಿವೆ ಎಂಬುದು. ಏಕೆಂದರೆ, ವಿಕೇಂದ್ರೀಕರಣದ ಒಂದು ಮೂಲ ಉದ್ದೇಶ ಸ್ಥಳೀಯ ಸಂಸ್ಥೆಗಳು ಯಾವುದೇ ಗುಂಪಿನ ಅಥವಾ ವರ್ಗದ ಜನಾಂಗದ ಅಭಿವೃದ್ಧಿಗಾಗಿ ತೆಗೆದುಕೊಂಡಂತಹ ನಿರ್ಣಯಗಳ ಫಲಗಳನ್ನು ಅಂತಹ ಜನಾಂಗದವರು ಪಡೆದಾಗಲೇ ಮತ್ತು ಅನುಭವಿಸಿದಾಗಲೇ ನಿಜವಾದ ವಿಕೇಂದ್ರೀಕರಣ ಸಾಧ್ಯ. ಎರಡನೆಯದಾಗಿ, ಈ ಪಂಚಾಯತ್ ಸಂಸ್ಥೆಗಳು ರೂಪಿಸಿ ಮತ್ತು ಅನುಷ್ಟಾನಗೊಳಿಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳು ಹಳ್ಳಿಗಳ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಅಥವಾ ಸರ್ವತೋಮುಖ ಅಭಿವೃದ್ಧಿಗೆ ಯಾವ ತರಹದಲ್ಲಿ ಸಹಾಯವಾಗಿವೆ ಎಂದು ತಿಳಿಯುವುದರ ಮೂಲಕ ನಾವು ಈ ಸಂಸ್ಥೆಗಳು ಒಟ್ಟಾರೆ ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಎಂತಹ ಪಾತ್ರವನ್ನು ವಹಿಸುತ್ತಿವೆ ಎಂದು ತಿಳಿಯಬಹುದಾಗಿದೆ. ಈ ಎರಡು ವಿಷಯಗಳನ್ನು ವಿಶ್ಲೇಷಿಸುವುದಕ್ಕೆ ಮೊದಲು ಇಲ್ಲಿ ನಾವು ಸಂಕ್ಷಿಪ್ತವಾಗಿ ಕರ್ನಾಟಕ ಪಂಚಾಯತ್ ಸಂಸ್ಥೆಗಳ ಸ್ವರೂಪ ಮತ್ತು ರಚನೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ. ಮುಖ್ಯವಾಗಿ ೧೯೮೩ರ ಮತ್ತು ೧೯೯೩ರ ಅಧಿನಿಯಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಮಟ್ಟದ ಪ್ರಾಧಾನ್ಯತೆ ಮತ್ತು ಪ್ರಾಶ್ಯಸ್ತತೆ ದೊರಕಿದೆ. ಹೊಸ ವ್ಯವಸ್ಥೆಯ (೧೯೮೩ರ ಅಧಿನಿಯಮದ)  ಮೂಲಕ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳ ರಚನೆ ಮತ್ತು ಪ್ರಕಾರ್ಯಗಳಲ್ಲಿ ತೀವ್ರತರಹದ ಸುಧಾರಣೆಗಳನ್ನು ತರಲಾಯಿತು. ‘ಜನತೆಗೆ ಅಧಿಕಾರ’ ಎಂಬ ಸರ್ಕಾರದ ಘೋಷಣೆಯನ್ನು ಯಶಸ್ವಿಯಾಗಿ ಅನುಷ್ಠಾನ ತರುವುದರಲ್ಲಿ ಹೊಸ ವ್ಯವಸ್ಥೆ ಬಹಳ ಮಟ್ಟಿನ ಯಶಸ್ಸನ್ನು ಸಾಧಿಸಿತು.

ಹೊಸದಾಗಿ ೧೯೮೩ರಲ್ಲಿ ರಚಿಸಿಕೊಂಡು ೧೯೮೭ರಲ್ಲಿ ಅನುಷ್ಟಾನಕ್ಕೆ ಬಂದ ಪ್ರಜಾಪ್ರಭುತ್ವ ವಿಕೇಂದ್ರಿಕರಣದ ವ್ಯವಸ್ಥೆಯಲ್ಲಿ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತಿಗಳು ಚುನಾಯಿತ ಸಂಸ್ಥೆಗಳಾಗಿದ್ದವು. ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ (೧೯೮೩ರ ಅಧಿನಿಯಮದಲ್ಲಿ) ರಾಜ್ಯ ಮಂತ್ರಿ ಸ್ಥಾನವನ್ನು ಹಾಗೂ ಉಪಾಧ್ಯಕ್ಷರಿಗೆ ಉಪಮಂತ್ರಿ ಸ್ಥಾನವನ್ನು ಕೊಡಲಾಗಿತ್ತು. ಇದರ ಪರಿಣಾಮವಾಗಿ ಇವರಿಗೆ ಅಧಿಕಾರಿಗಳ ಮೇಲೆ ಆಡಳಿತ ಹಿಡಿತವನ್ನು ಕೊಡಲಾಗಿತ್ತು. ದೇಶದಲ್ಲಿ ಮೊದಲ ಬಾರಿಗೆ ಒಟ್ಟು ಸ್ಥಾನಗಳಲ್ಲಿ ಶೇ. ೨೫ರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಾಗಿ ಇಡಲಾಗಿತ್ತು. ಇದೇ ರೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಒಟ್ಟು ಸ್ಥಾನಗಳಲ್ಲಿ ಶೇ. ೧೫ ಮತ್ತು ಶೇ. ೩ರಷ್ಟು ಸ್ಥಾನಗಳನ್ನು ಮೀಸಲಾಗಿಡಲಾಗಿತ್ತು. ಇದು ಒಂದು ತರಹದ ‘ಕ್ರಾಂತಿಕಾರಿ ಹೆಜ್ಜೆ’ ಆಗಿತ್ತು. ಯುವ ಜನತೆಯನ್ನು ಸಕ್ರಿಯವಾಗಿ ಸ್ಥಳೀಯ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಮಾಡಲು ಮತನೀಡುವ ವಯಸ್ಸನ್ನು ೧೮ ವರ್ಷಕ್ಕೆ ಇಳಿಸಲಾಯಿತು.

ಇಲಾಖಾವಾರು ವಿಷಯಗಳ ಆಧಾರದ ಮೇಲೆ ರಚಿತಗೊಂಡ ಸ್ಥಾಯಿ ಸಮಿತಿಗಳ ಮೂಲಕ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತಿಗಳು ತಮಗೆ ವಹಿಸಿದ ಕಾರ್ಯ ಮತ್ತು ಜವಾಬ್ದಾರಿಗಳನ್ನು ನಡೆಸಿಕೊಂಡು ಹೋಗುತ್ತಿದ್ದವು. ಈ ಸಮಿತಿಗಳ ಕಾರ್ಯಗಳ ಮೂಲಕ ಸದಸ್ಯರುಗಳು ಆಯಾ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನವನ್ನು ಬೆಳೆಸಿಕೊಳ್ಳುವುದಕ್ಕೆ ಬಹುಮಟ್ಟಿನ ರೀತಿಯಲ್ಲಿ ಅನುಕೂಲವಾಗಿತ್ತು. ಸದಸ್ಯರು ಆಪ್ತರೀತಿಯಲ್ಲಿ, ನಿರ್ಭಂದವಿಲ್ಲದೆ ಮತ್ತು ಮುಚ್ಚುಮರೆ ಇಲ್ಲದೆ ಚರ್ಚೆಯನ್ನು ಮಾಡುವುದಕ್ಕೆ ಈ ಸಮಿತಿಗಳು ಅವಕಾಶ ಮಾಡಿಕೊಟ್ಟಿದ್ದವು.

ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತಿ ವ್ಯವಸ್ಥೆಯ ಪ್ರಗತಿಪರವಾದ ಸುಧಾರಣೆಗಳಲ್ಲಿ ಗಮನಿಸಬಹುದಾದಂತಹ ಸುಧಾರಣೆಯೆಂದರೆ, ಪ್ರಪ್ರಥಮಬಾರಿಗೆ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಟಾನಗೊಳಿಸುವಿಕೆಯಲ್ಲಿ ಇಲ್ಲಿಯವರೆಗೂ ಇದ್ದ ‘ಮೇಲಿನಿಂದ ಕೆಳಕ್ಕೆ’ ನೀತಿಯ ಬದಲು ‘ಕೆಳಗಿನಿಂದ ಮೇಲಕ್ಕೆ’ ಎಂಬ ನೀತಿಯನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದಿರುವುದು. ಈ ಕಾರ್ಯಕ್ಷೇತ್ರದಲ್ಲಿ ಮಾಡಿರುವ ಸಂಶೋಧನಾ ಅನುಭವಗಳ ಮೂಲಕ ತಿಳಿಯುವದೇನೆಂದರೆ ಸ್ವಲ್ಪಮಟ್ಟಿನಲ್ಲಿ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯಿತಿಗಳು ತಮ್ಮ ಯೋಜನೆಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವುದರಲ್ಲಿ ಯಶಸ್ಸನ್ನು ಸಾಧಿಸಿರುವುದು (ಅಬ್ದುಲ್ ಅಜೀಜ್,೧೯೯೩).

ಇತ್ತೀಚೆಗೆ ತರಲಾದ ೧೯೯೩ರ ಅಧಿನಿಯಮದಲ್ಲಿ ಪಂಚಾಯತ್‌ಗಳನ್ನು ಮೂರು ಹಂತಗಳಲ್ಲಿ ಸ್ಥಾಪಿಸಲಾಗಿದೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್. ಈ ಮೂರು ಸಂಸ್ಥೆಗಳಿಗೆ ಭದ್ರತಳಪಾಯ ಕೊಟ್ಟಿರುವ ವ್ಯವಸ್ಥೆಯ ಇನ್ನೊಂದು ಅಂಗ ಎಂದರೆ ‘ಗ್ರಾಮಸಭೆ’, ಇದನ್ನು ಪಂಚಾಯತ್ ರಾಜ್‌ನ ‘ಜೀವಾತ್ಮ’ ಎಂದು ಬಣ್ಣಿಸಲಾಗಿದೆ. ಈ ಆಧಿ ನಿಯಮವು ಆದಷ್ಟು ಮಟ್ಟಿಗೆ ಸಂವಿಧಾನದ ೭೩ನೇ ತಿದ್ದುಪಡಿಯ ಪರಿವಿಧಿಯನ್ನು ಗಮನದಲ್ಲಿಟ್ಟು ಕೊಂಡು ರಚಿಸಲಾಗಿದೆ. ಈ ತಿದ್ದಪಡಿಯಲ್ಲಿ ಗಮನಿಸಬೇಕಾದ ಮುಖ್ಯಾಂಶಗಳಾವುದೆಂದರೆ:

ಅ. ಮೂರು ಮಟ್ಟಗಳಲ್ಲೂ ಚುನಾಯಿತ ಪಂಚಾಯತ್‌ಗಳನ್ನು ಸ್ಥಾಪಿಸುವುದು.

ಆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯಾನುಗುಣವಾಗಿ ಸ್ಥಾನಗಳನ್ನು, ಮಹಿಳೆಯರಿಗೆ ಪ್ರತಿ ವರ್ಗದಿಂದಲೂ ಮೂರನೇ ಒಂದರಷ್ಟು ಸ್ಥಾನಗಳನ್ನು ಹಾಗೂ ಹಿಂದುಳಿದ ವರ್ಗದವರಿಗೆ ಆಯಾ ರಾಜ್ಯಗಳ ತೀರ್ಮಾನದಂತೆ ಸ್ಥಾನಗಳನ್ನು ಸದಸ್ಯರ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮಟ್ಟದಲ್ಲಿ ಮೀಸಲಾಗಿಡುವುದು.

ಇ. ರಾಜ್ಯ ಹಣಕಾಸಿನ ಆಯೋಗ ಮತ್ತು ಚುನಾವಣಾ ಆಯೋಗಗಳನ್ನು ರಚಿಸುವುದು ಮತ್ತು

ಈ. ಐದು ವರ್ಷಗಳಿಗೊಮ್ಮೆ ಎಲ್ಲಾ ಪಂಚಾಯತ್‌ಗಳಿಗೆ ಚುನಾವಣೆಗಳನ್ನು ನಡೆಸುವಿಕೆ ಹಾಗೂ ಪಂಚಾಯತ್ ಅವಧಿಯ ೬ ತಿಂಗಳೊಳಗಾಗಿ ಈ ಪ್ರಕ್ರಿಯೆಯನ್ನು ಮುಗಿಸುವಿಕೆ.

೯೩ನೇ ಅಧಿನಿಯಮದಲ್ಲಿ ಹೆಚ್ಚು ಒತ್ತು ಕೊಟ್ಟಿರುವ ಅಂಶಗಳೆಂಧರೆ ವಿಕೇಂದ್ರಿತ ಪಂಚಾಯತ್‌ಗಳ ಆಡಳಿತದಲ್ಲಿ ಜನರು ಹೆಚ್ಚು ಹೆಚ್ಚಾಗಿ ಭಾಗವಹಿಸುವುದಕ್ಕೆ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಅತಿ ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದಕ್ಕೆಅವಕಾಶ  ಮಾಡಿಕೊಟ್ಟಿರುವುದು. ಸಂವಿಧಾನದ ೭೩ನೇ ತಿದ್ದುಪಡಿಯಿಂದ ಬಂದ ಸ್ಥಿರತೆ ಮತ್ತು ಸ್ವಾಯತ್ತತೆ ಫಲವಾಗಿ ಈ ಸಂಸ್ಥೆಗಳು ತಮ್ಮದೇ ಆದ ಗೂಡನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ರಾಜಕೀಯ ವಿಕೇಂದ್ರೀಕರಣ, ಆಡಳಿತ ವಿಕೇಂದ್ರೀಕರಣ ಮತ್ತು ಹಣಕಾಸಿನ ವಿಕೇಂದ್ರೀಕರಣದ ಪರಿಣಾಮವಾಗಿ ಪಂಚಾಯತಿಗಳು ಹಳ್ಳಿಗಳಲ್ಲಿ ಪ್ರಜಾಪ್ರಭುತ್ವವನ್ನು ಬಲವಾಗಿಸುವುದರಲ್ಲಿ ಬಹಳ ಮಟ್ಟಿನ ಪಾತ್ರವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.

ಸಾಮಾಜಿಕ ಸುಧಾರಣೆ

ಹಿಂದೆ ಉಲ್ಲೇಖಿಸಿದಂತೆ, ವಿಕೇಂದ್ರೀಕೃತ ಸ್ಥಳೀಯ ಸಂಸ್ಥೆಗಳ ಅಸ್ತಿತ್ವ ಮತ್ತು ಪ್ರಾಮುಖ್ಯತೆಯ ಬೆಳಕಿಗೆ ಬರಬೇಕಾದರೆ ಸಂಸ್ಥೆಗಳು ತೆಗೆದುಕೊಂಡಂತಹ ನಿರ್ಣಯಗಳು ಸ್ಥಳೀಯ ಜನತೆಯ ಅಭಿವೃದ್ಧಿಗೆ ಪೂರಕವಾದಾಗ ಮತ್ತು ಜನತೆ ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸಾಧ್ಯ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಒಂದು ಅವಕಾಶವನ್ನು ಇತ್ತೀಚೆಗೆ ಬಂದ ೧೯೯೩ರ ಆಧಿನಿಯಮದಲ್ಲಿ ಮಾಡಿಕೊಡಲಾಗಿದೆ. ಆದರೆ ಇಂತಹ ಒಂದು ಅವಕಾಶ ಹಿಂದೆ ಇದ್ದ ಆಧಿನಿಯಮಗಳಲ್ಲಿ ಅಷ್ಟಾಗಿ ಇರಲಿಲ್ಲ. ಏಕೆಂದರೆ, ಹಿಂದೆ ಇದ್ದ ಪಂಚಾಯತಿಗಳ ಆಡಳಿತ ವ್ಯವಸ್ಥೆಯು ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಲ್ಲಿ ಇದ್ದಿದರ ಪರಿಣಾಮವಾಗಿ ದುರ್ಬಲ ವರ್ಗದವರು, ಹಿಂದುಳಿದ ಜನಾಂಗದವರು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ, ಮುಖ್ಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಇದಕ್ಕೆ ಮೂಲ ಕಾರಣ ಸಾಮಾನ್ಯವಾಗಿ ದುರ್ಬಲ ಮತ್ತು ಹಿಂದುಳಿದ ಜನಾಂಗದವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದವರಾಗಿದ್ದಾರೆ.

ಕರ್ನಾಟಕದಲ್ಲಿ  ನೋಡಿದಾಗ, ಸುಮಾರು ಮೂರುದಶಕಗಳ ಕಾಲ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದ ಜಾತಿ ಪಂಗಡಗಳಿಗೆ ಸೇರಿದ ಸದಸ್ಯರೇ ಹೆಚ್ಚಿನ ಮಟ್ಟದಲ್ಲಿ ಈ ಸಂಸ್ಥೆಗಳನ್ನು ಪ್ರತಿನಿಧಿಸುತ್ತಾ ಬಂದಿದ್ದರು. ದೃಷ್ಟಾಂತ ಮೂಲಕ ಹೇಳುವುದಾದರೆ ಹಿಂದೆ ಇದ್ದ ಗ್ರಾಮ ಪಂಚಾಯತ್‌ನ ಶೇ.೩೦.೧೭ ಮತ್ತು ಶೇ. ೨೩.೮೨ರಷ್ಟು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಲಿಂಗಾಯತ್ ಮತ್ತು ಒಕ್ಕಲಿಗರ ಜನಾಂಗಕ್ಕೆ ಸೇರಿದ ಸದಸ್ಯರ ಪಾಲಾಗಿತ್ತು, ಒಟ್ಟು ೧೭೫ ತಾಲ್ಲೂಕು ಅಭಿವೃದ್ಧಿ ಮಂಡಳಿಗಳಲ್ಲಿ ೫೪ ಅಧ್ಯಕ್ಷರ, ೨೮ ಉಪಾಧ್ಯಕ್ಷರ ಮತ್ತು ೮೦೮ ಸದಸ್ಯತ್ವ ಸ್ಥಾನಗಳು ಲಿಂಗಾಯಿತ ಜನಾಂಗಕ್ಕೆ ಸೇರಿದ ಸದಸ್ಯರ ಪಾಲಾಗಿತ್ತು. ಒಟ್ಟಾರೆ ಶೇಕಡಾದಲ್ಲಿ ಲಿಂಗಾಯತರ ಪಾಲು ೨೫.೭೨ ಮತ್ತು ಒಕ್ಕಲಿಗರ ಪಾಲು ೨೩.೧೮ ಆಗಿತ್ತು. ಅಂದರೆ ಒಟ್ಟು ಶೇ. ೪೮.೯೦ ಈ ಎರಡು ಜನಾಂಗಕ್ಕೆ ಸೇರಿದ ಸದಸ್ಯರ ಪಾಲಾಗಿತ್ತು (ಎರಡನೇ ಹಿಂದುಳಿದ ಜನಾಂಗದ ಸಮಿತಿಯ ವರದಿ, ೧೯೮೬). ಹಿಂದೆ ಇದ್ದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್‌ಗಳಲ್ಲೂ ಕೂಡ ಈ ಎರಡು ಜನಾಂಗಕ್ಕೆ ಸೇರಿದ ಸದಸ್ಯರುಗಳದೇ ಹೆಚ್ಚಿನ ಬಹುಮತ ಇತ್ತು, ಉದಾಹರಣೆಗೆ ಜಿಲ್ಲಾ ಪರಿಷತ್ತಿನ ಒಟ್ಟು ೧೯ ಅಧ್ಯಕ್ಷರ ಸ್ಥಾನಗಳಲ್ಲಿ ೬ ಲಿಂಗಾಯಿತ ಮತ್ತು ೪ ಒಕ್ಕಲಿಗರ ಪಾಲಾಗಿದ್ದು, ಒಟ್ಟು ಶೇ. ೫೫ರಷ್ಟು ಇವರ ಪಾಲಾಗಿತ್ತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪಂಚಾಯತ್ ಸಂಸ್ಥೆಗಳು ಸ್ಥಾನಗಳು ಯಾವುದೇ ರೀತಿಯಲ್ಲಿ ಆಯಾ ಜಾತಿ ಜನಾಂಗದ ಒಟ್ಟು ಜನಸಂಖ್ಯೆಯನ್ನು ಪ್ರತಿಬಿಂಬಿಸುವುದಿಲ್ಲ. ಉದಾಹರಣೆಗೆ, ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯಿತ ಜನಸಂಖ್ಯೆಯು ಶೇ.೧೧.೬೮ ಮತ್ತು ಶೇ. ೧೬.೯೨ರಷ್ಟು ಇದೆ. ಇದಕ್ಕೆ ಅನುಗುಣವಾಗಿ ಜಿಲ್ಲಾ ಪರಿಷತ್ ಅಧ್ಯಕ್ಷರ ಸಂಖ್ಯೆ ೪ ಮತ್ತು ೬ರಷ್ಟು ಇದೆ. ಇದೇ ರೀತಿ ರಾಜ್ಯದ ಒಟ್ಟು ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ.೧೫.೮೬ರಷ್ಟು ಇದ್ದರೆ ಈ ಪಂಗಡ ಹಿಂದಿನ ಜಿಲ್ಲಾ ಪರಿಷತ್ತಿನಲ್ಲಿಗಳಿಸಿದ ಸ್ಥಾನ ಕೇವಲ ಒಂದು. ಕುರುಬ ಜನಾಂಗದ ಜನಸಂಖ್ಯೆ ಶೇ. ೬.೯೨ರಷ್ಟು ಇದೆ. ಆದರೆ ಈ ಪಂಗಡ ಗಳಿಸಿದ ಸ್ಥಾನ ಕೇವಲ ಒಂದು. ಇದಕ್ಕೆ ಮುಖ್ಯ ಕಾರಣ ಲಿಂಗಾಯುತ ಮತ್ತು ಒಕ್ಕಲಿಗ ಜನಾಂಗದವರು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ವಾಸವಾಗಿರುವುದರಿಂದ ಈ ಜನಾಂಗದವರು ಹೆಚ್ಚಿನ ಮಟ್ಟದಲ್ಲಿ ಸಜ್ಜುಗೊಳ್ಳುವುದಕ್ಕೆ ಅವಕಾಶ ಇದೆ (ಅಮಲ್ ರೇ ಮತ್ತು ಜಯಲಕ್ಷ್ಮಿ ಕೆ, ೧೯೮೭).

ಇದರಿಂದ ತಿಳಿಯುವ ಮುಖ್ಯ ವಿಷಯವೇನೆಂದರೆ, ಇಲ್ಲಿಯವರಿಗೂ ಈ ಸ್ಥಳೀಯ ಸಂಸ್ಥೆಗಳಲ್ಲಿ ದುರ್ಬಲವರ್ಗದವರಿಗೆ ಹಾಗೂ ಹಿಂದುಳಿದ ಜನಾಂಗದವರಿಗೆ ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಹ ಅವಕಾಶ ಇರಲಿಲ್ಲ, ಅವಕಾಶ ಇದ್ದರೂ ಇವರನ್ನು ಮುಂದೆ ಬರುವುದಕ್ಕೆ ಬಲಯುತ ಪಂಗಡದವರು ಉತ್ತೇಜನ ಕೊಡುತ್ತಿರಲಿಲ್ಲ. ಇವರ ಪಾತ್ರ ಬರೀ ಸದಸ್ಯತ್ವಕ್ಕೆ ಮೀಸಲಾಗಿರದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೂ ಬೇಕಾಗಿತ್ತು. ಏಕೆಂದರೆ ಆಯಾ ಜನಾಂಗದ ಬೇಕು ಬೇಡಗಳನ್ನು ಚೆನ್ನಾಗಿ ಅರಿತುಕೊಂಡು ಅವುಗಳಿಗೆ ರೂಪ-ರೇಶೆಗಳನ್ನು ಕೊಡುವುದು ಈ ಜನಾಂಗದ ನಾಯಕರಿಂದ ಮಾತ್ರ ಸಾಧ್ಯ. ಈ ಒಂದು ದಿಕ್ಕಿನಲ್ಲಿ ನೋಡಿದಾಗ ಸಂವಿಧಾನದ ೭೩ನೇ ತಿದ್ದುಪಡಿಯು ದುರ್ಬಲ ವರ್ಗದವರಿಗೆ ಮತ್ತು ಹಿಂದುಳಿದ ಜನಾಂಗದವರಿಗೆ ಪಂಚಾಯತ್ ಸಂಸ್ಥೆಗಳಲ್ಲಿ ಸ್ಥಾನ ಮೀಸಲಾತಿ ಕೊಡುವುದರ ಮೂಲಕ ಉನ್ನತ ಮಟ್ಟದ ಹಾಗೂ ‘ಕ್ರಾಂತಿಕಾರಕ’ ಸುಧಾರಣೆಯನ್ನು ತಂದಿದೆ. ಇದನ್ನು ಪೂರಕವಾಗಿ ಇಟ್ಟುಕೊಂಡು ಹಿಂದುಳಿದ ಜನಾಂಗಕ್ಕೆ ಶೇ. ೩೩ರಷ್ಟು, ಮಹಿಳೆಯರಿಗೆ ಶೇ.೩೩ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯಾನುಗುಣವಾಗಿ, ಸದಸ್ಯತ್ವ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿಗಳಿಗೆ ಸ್ಥಾನಗಳನ್ನು ಮೀಸಲಾಗಿರಿಸಲಾದ ರಾಜ್ಯವೆಂದರೆ ಕರ್ನಾಟಕ. ಇದರ ಪರಿಣಾಮವಾಗಿ, ಉದಾಹರಣೆಗೆ ಹೇಳುವುದಾದರೆ, ಜಿಲ್ಲಾ ಪಂಚಾಯತ್‌ನ ಒಟ್ಟು ೯೧೯ ಸ್ಥಾನಗಳ ಪೈಕಿ ೧೯೮ ಸ್ಥಾನಗಳು ಹಿಂದುಳಿದ ಜನಾಂಗದ, ೧೨೭ ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮತ್ತು ೩೩೫ ಸ್ಥಾನಗಳು ಮಹಿಳೆಯರ ಪಾಲಾಗಿದೆ. ಜಿಲ್ಲಾ ಪರಿಷತ್ತಿನ ಒಟ್ಟು ೨೦ ಅಧ್ಯಕ್ಷ ಮತ್ತು ೨೦ ಉಪಾಧ್ಯಕ್ಷರ ಸ್ಥಾನಗಳಲ್ಲಿ ೫ ಸ್ಥಾನಗಳು (ಎರಡರಲ್ಲೂ) ಹಿಂದುಳಿದ ಜನಾಂಗದವರಿಗೆ, ೪ ಪರಿಶಿಷ್ಟ ಜಾತಿಯವರಿಗೆ ಮತ್ತು ೭ ಸ್ಥಾನಗಳು ಮಹಿಳೆಯರಿಗೆ ಹೋಗಿವೆ.

ಮೇಲಿನ ವಿಶ್ಲೇಷಣೆಯಿಂದ ತಿಳಿದುಬರುವುದೇನೆಂದರೆ ಇತ್ತೀಚಿನವರೆವಿಗೂ, ಪಂಚಾಯತ್ ಸಂಸ್ಥೆಗಳಲ್ಲಿ ಸಮಾಜದಲ್ಲಿ ಮುಂದುವರೆದ ಜನಾಂಗದವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವುಗಳ ಆಡಳಿತ ಯಂತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಬಂದಿದ್ದರು. ಆದರೆ ಹೊಸದಾಗಿ ತಂದ ಮೀಸಲಾತಿಯ ಪರಿಣಾಮವಾಗಿ ಸಮಾಜದಲ್ಲಿರುವ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನಾಂಗದವರು ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಇನ್ನು ಮುಂದೆ ಈ ವರ್ಗದ ನಾಯಕರು ಪಂಚಾಯಿತಿಗಳಂತಹ ವೇದಿಕೆಯನ್ನು ಉಪಯೋಗಿಸಿಕೊಂಡು ತಮ್ಮ ವ್ಯಕ್ತಿತ್ವ ಮತ್ತು ನಾಯಕತ್ವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮ ತಮ್ಮ ಜನಾಂಗದ ಕುಂದು ಕೊರತೆಗಳನ್ನು ಹೋಗಲಾಡಿಸುವುದಕ್ಕೆ ಕಾರ್ಯತತ್ಪರಾಗಬೇಕಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದರ ಬರುವುದಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಿ ಅನುಷ್ಟಾನಗೊಳಿಸಲಾಗಿದೆ. ಒಳ್ಳೆಯ ಶಿಕ್ಷಣ, ಆರೋಗ್ಯ ಹಾಗೂ ಹೆಚ್ಚಿನ ಉತ್ಪನ್ನ ತರುವಂತಹ ಕಾರ್ಯಕ್ರಮಗಳು ಈ ಹಿಂದುಳಿದ ಜನಾಂಗದವರು ಸಾಮಾಜಿಕವಾಗಿ ಅವರ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮತ್ತು ಆರ್ಥಿಕವಾಗಿ ಮುಂದುವರಿಯುವುದಕ್ಕೆ ಅವಕಾಶ ಮತ್ತು ಸಾಧ್ಯತೆ ಇದೆ ಎಂದರೆ ಉತ್ಪೇಕ್ಷೆಯಾಗಲಾರದು ಮತ್ತು ಎಲ್ಲಿಯವರೆಗೂ ಈ ಜನಾಂಗದವರೂ ತಲೆ ಎತ್ತಿ ನಿಲ್ಲುವುದಿಲ್ಲವೋ, ಆತ್ಮ ಶಕ್ತಿ, ಆತ್ಮ ಸ್ಥೈರ್ಯ ಹಾಗೂ ಸ್ವಾವಲಂಬಿಗಳಾಗುವುದಿಲ್ಲವೋ ಅಲ್ಲಿಯವರೆವಿಗೂ ನಾವು ಯಾವುದೇ ಸಮಾಜವನ್ನು ಸಮಗ್ರ ರೀತಿಯನ್ನು ಸಾಮಾಜಿಕ ಸುಧಾರಣೆಯಾಗಿದೆ ಎಂದು ಹೇಳುವುದು ಬಹಳ ಕಷ್ಟ ಸಾಧ್ಯವಾಗುತ್ತದೆ. ಇಂತಹ ವ್ಯವಸ್ಥೆಯನ್ನು ಬದಲಾಗಿಸುವಂತಹ ಅವಕಾಶವನ್ನು ಪಂಚಾಯತ್ ಸಂಸ್ಥೆಗಳು ಸಮಾಜದ ವಿವಿಧ ವರ್ಗದ ಜನಾಂಗದವರಿಗೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಒಂದು ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಎಲ್ಲಾ ಜನಾಂಗದ ಪ್ರತಿನಿಧಿಗಳು ಸಾಮಾಜಿಕ ಸುಧಾರಣೆಯನ್ನು ತರುವಂತಹ ಒಂದು ಗುರುತರವಾದ, ಮಹತ್ವಪೂರ್ಣವಾದ ಕಾರ್ಯವನ್ನು ಮಾಡಬೇಕಾಗಿದೆ.

ಅಭಿವೃದ್ಧಿ ಕಾರ್ಯಕ್ರಮಗಳು

ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಸುಧಾರಣೆ ಸಾಮಾನ್ಯವಾಗಿ ಸ್ಥಗಿತವಾಗಿದ್ದು ಯಾವುದೇ ತರಹದ ಬದಲಾವಣೆಯನ್ನು ಕಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಸ್ಥಳೀಯವಾಗಿ (ಜನರಲ್ಲಿ ಹಾಗೂ ಸಂಸ್ಥೆಗಳಲ್ಲಿ) ಸುಧಾರಣೆಯನ್ನು ತರುವುದಕ್ಕೆ ಸಮಂಜಸವಾದ ಮತ್ತು ಸರಿಯಾದ ನೇತೃತ್ವ ಮತ್ತು ಪ್ರಯತ್ನಗಳು ಇಲ್ಲದ್ದು. ಈ ಒಂದು ಹಿನ್ನೆಲೆಯಲ್ಲಿ ನೋಡಿದಾಗ ಈಗ ರಚಿತಗೊಂಡಿರುವ ವಿಕೇಂದ್ರೀಕೃತ ಪಂಚಾಯ್ತಿಗಳು ಇಂತಹ ಒಂದು ಸಾಮಾಜಿಕ ಬದಲಾವಣೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ತರುವಂತಹ ಸಾಧನಗಳಾಗಿವೆ (ಅಬ್ದುಲ್ ಅಜೀಜ್, ೧೯೯೪).

ಈ ಒಂದು ದಿಶೆಯಲ್ಲಿ ಗಮನಿಸಿದಾಗ ಹಿಂದೆ ಇದ್ದ ತಾಲ್ಲೂಕು ಅಭಿವೃದ್ಧಿ ಮಂಡಳಿಗಳು, ಜಿಲ್ಲಾ ಪರಿಷತ್ತುಗಳು ಮತ್ತು ಮಂಡಲ ಪಂಚಾಯತಿಗಳು ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅನೇಕ ಮುಖ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಇವುಗಳ ಸಂಕ್ಷಿಪ್ತ ವಿಶ್ಲೇಷಣೆಯನ್ನು ಇಲ್ಲಿ ಮಾಡಲಾಗಿದೆ. ತಾಲ್ಲೂಕು ಅಭಿವೃದ್ಧಿ ಮಂಡಳಿಗಳ ಕಾರ್ಯವೈಖರಿಯನ್ನು ವಿಚಾರ ಮಾಡಿದಾಗ ಕಂಡುಬರುವ ಅಂಶವೆಂದರೆ ಈ ಸಂಸ್ಥೆಗಳು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಗತ್ಯ ಸವಲತ್ತುಗಳನ್ನು ರೂಪಿಸುವುದರಲ್ಲಿ, ಅನೇಕ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದವು – ರಸ್ತೆಗಳು, ಸ್ಕೂಲು, ಆಸ್ಪತ್ರೆ, ಕಟ್ಟಡಗಳು, ಸೇತುವೆ, ಕೆರೆ ಮತ್ತು ನದಿಗಳ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದವು. (ಶಿವಣ್ಣ, ೧೯೯೦).

ಜಿಲ್ಲಾ ಪಂಚಾಯತ್ ಮತ್ತು ಮಂಡಲ ಪಂಚಾಯ್ತಿಗಳ ಪ್ರಕಾರ್ಯಗಳನ್ನು ಮೌಲ್ಯಮಾಪನ ಮಾಡಿದ ಕೃಷ್ಣಸ್ವಾಮಿ ಸಮಿತಿಯ ವರದಿಯ (೧೯೮೯) ಪ್ರಕಾರ ಹಲವಾರು ಅಡಚಣೆಗಳಿದ್ದರೂ ಸಹ ಈ ಸಂಸ್ಥೆಗಳ ಕಾರ್ಯವೈಖರಿ ಪ್ರಭಾವೋತ್ಪಾದಕವಾದದ್ದು. ವಾಸ್ತವಿಕವಾಗಿ ಎಲ್ಲಾ  ಜಿಲ್ಲೆಗಳಲ್ಲೂ ಶಾಲೆಗಳ ಮತ್ತು ಆಸ್ಪತ್ರೆಗಳ ಕಾರ್ಯಾಚರಣೆಯಲ್ಲಿ ಮತ್ತು ಸೇವೆಗಳನ್ನು ಕೊಡುವುದರಲ್ಲಿ ಬಹಳ ಮಟ್ಟಿನ ಸುಧಾರಣೆಯನ್ನು ಕಾಣಬಹುದಾಗಿತ್ತು. ವಿದ್ಯಾರ್ಥಿಗಳ, ಉಪಾಧ್ಯಾಯರ ಮತ್ತು ವೈದ್ಯರ ಹಾಜರಾತಿ ಉತ್ತೇಜನಕಾರಿಯಾಗಿತ್ತು. ಅಧಿಕಾರಿಗಳ, ವೈದ್ಯರ ಮತ್ತು ಶಿಕ್ಷಕರ ಹಾಗೂ ಜನರ ನಡುವೆ ಒಳ್ಳೆಯ ಸ್ಪಂದನ ಮತ್ತು ಆದರ ಗೌರವಗಳು ಇದ್ದವು. ಇದರಿಂದ ಒಳ್ಳೆಯ ‘ಕಾರ್ಯಸ್ನೇಹಿ’ ಪರಿಸರವನ್ನು ಕಾಣಬಹುದಾಗಿತ್ತು.

ಅಭಿವೃದ್ಧಿ ಕಾರ್ಯಕ್ರಮಗಳು ಫಲಕಾರಿಯಾಗಬೇಕಾದರೆ ಮುಖ್ಯವಾಗಿ ಬೇಕಾದದ್ದು ಅವುಗಳನ್ನು ಸಮಯೋಚಿತವಾಗಿ ಅನುಷ್ಟಾನಗೊಳಿಸಿದಾಗ ಅಥವಾ ಜಾರಿಗೊಳಿಸಿದಾಗ ಮಾತ್ರ ಸಾಧ್ಯ. ಇಂತಹ ಯಶಸ್ಸಿಗೆ ಪೂರಕವಾಗಿ ಬೇಕಾಗಿರುವುದು ವಿವಿಧ ಇಲಾಖೆಗಳ ನಡುವೆ ಸೌಹಾರ್ಧತೆ ಹಾಗೂ ಅನ್ಯೋನ್ಯ ಸಂಬಂಧ, ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು  ಮತ್ತು ಇರುವ ಸವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸುವುದು (ಅಬ್ದುಲ್ ಅಜೀಜ್: ೧೯೯೩). ದೃಷ್ಟಾಂತಗಳ ಮೂಲಕ ಹೇಳುವುದಾದರೆ ಜಿಲ್ಲಾ ಪರಿಷತ್ತುಗಳ ಆಡಳಿತ ವ್ಯವಸ್ಥೆಯಲ್ಲಿ ಮೇಲೆ ಹೇಳಿದ ಅಂಶಗಳು ಬಹಳ ಮಟ್ಟಿಗೆ ರೂಢಿಯಲ್ಲಿದ್ದವು. ಜಿಲ್ಲಾ ಪರಿಷತ್ ಒಂದು ‘ಕೊಡೆ’ಯ ಮಾದರಿಯಲ್ಲಿ ಇತ್ತು. ಅಂದರೆ, ಜಿಲ್ಲಾ ಪರಿಷತ್ತಿನ ಆಡಳಿತದ ಚೌಕಟ್ಟಿನಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಭಿವೃದ್ಧಿ ಇಲಾಖೆಗಳು ಕೆಲಸ ಮಾಡುತ್ತಿದ್ದವು. ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ಜಿಲ್ಲಾ ಪರಿಷತ್ ಮತ್ತು ವಿವಿಧ ಇಲಾಖೆಗಳ ನಡುವೆ ಒಳ್ಳೆಯ ಸ್ಪಂದನ ಮತ್ತು ಬಾಂಧವ್ಯ ಇತ್ತು. ಇದರ ಪರಿಣಾಮವಾಗಿ ಮೀನುಗಾರಿಕೆ, ತೋಟಗಾರಿಕೆ ಮತ್ತು ಅರಣ್ಯಕ್ಕೆ ಸಂಬಂಧಪಟ್ಟಂತೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗಮನಹರಿಸುವಂತಹ ವೃದ್ಧಿ ಆಗುವುದಕ್ಕೆ ಸಾಧ್ಯವಾಗಿತ್ತು. ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರಲ್ಲಿ ಹೆಚ್ಚಿನ ಮಟ್ಟಿನ ಶೀಘ್ರತೆ ಎದ್ದು ಕಾಣುತ್ತಿತ್ತು, ಒಳ್ಳೆಯ ಮೇಲ್ವಿಚಾರಣೆ, ಕ್ಷೇತ್ರಮಟ್ಟದ ಕೆಲಸದಲ್ಲಿ ಹೊಂದಾಣಿಕೆ ಇದ್ದುದರ ಫಲವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವುದಕ್ಕೆ ಜಿಲ್ಲಾ ಪರಿಷತ್ತುಗಳಿಗೆ ಅವಕಾಶ ಇತ್ತು (ಮೀನಾಕ್ಷಿ ಸುಂದರಂ, ೧೯೯೪).

ಜಿಲ್ಲಾ ಪರಿಷತ್ತುಗಳು ಈ ಕೆಳಗೆಕಂಡ ಕಾರ್ಯಕ್ರಮಗಳನ್ನು ಆಧ್ಯತೆ ಅಥವಾ ಪ್ರಾಶಸ್ತ್ಯ ಕೊಡುವುದರ ಮೂಲಕ ತಮ್ಮ ತಮ್ಮ ಚೌಕಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದವು.

ಅ) ವ್ಯವಸಾಯ ಮತ್ತು ಸಂಬಂಧಿತ ಚಟುವಟಿಕೆಗಳು, ವ್ಯವಸಾಯ, ತೋಟಗಾರಿಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಹೈನುಗಾರಿಕೆ, ಮೀನುಗಾರಿಕೆ, ಅರಣ್ಯ, ಸಣ್ಣ ನೀರಾವರಿ ಮತ್ತು ರೇಷ್ಮೆ.

ಆ) ಗಣಿಗಳು ಮತ್ತು ಭೂವಿಜ್ಞಾನ

ಇ) ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳು

ಈ) ಗ್ರಾಮೀಣಾಭಿವೃದ್ಧಿ, ಸಹಕಾರ ಮತ್ತು ಗುರಿ ಆಧಾರಿತ ಯೋಜನೆಗಳು

ಉ) ಸಾಮಾಜಿಕ ಸವಲತ್ತುಗಳು – ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ, ವಯಸ್ಕರ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕ ಆಹಾರ, ಗ್ರಾಮೀಣ ನೀರು ಸರಬರಾಜು, ಯುವಜನ ಸೇವೆಗಳು.

ಊ) ಆರ್ಥಿಕ ಸವಲತ್ತುಗಳು – ಕಟ್ಟಡಗಳು (ಗೃಹ ನಿರ್ಮಾಣ) ರಸ್ತೆಗಳು ಮತ್ತು ಸೇತುವೆಗಳು.

ಎ) ಸಾಮಾಜಿಕ ಮತ್ತು ಕುಟುಂಬ ಕಲ್ಯಾಣ – ಕುಟುಂಬ ಕಲ್ಯಾಣ, ಹಿಂದುಳಿದ ವರ್ಗದವರ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ.

ಮಂಡಲ ಪಂಚಾಯ್ತಿಗಳಲ್ಲಿ ಎರಡು ವರ್ಗಗಳ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನ ಗೊಳಿಸುವುದಕ್ಕೆ ಅವಕಾಶವಿತ್ತು. ವರ್ಗ-೧ರಲ್ಲಿ ಮಂಡಲಪಂಚಾಯಿತಿಗಳು ತಾವೇ ಕಾರ್ಯಕ್ರಮಗಳನ್ನು ಯೋಜಿಸಿ, ಹಣವನ್ನು ರೂಢಿಸಿ ಅನುಷ್ಠಾನಗೊಳಿಸಬೇಕಾಗಿತ್ತು – ವಯಸ್ಕರ ಶಿ‌ಕ್ಷಣ, ಗ್ರಾಮೀಣ ನೀರು ಸರಬರಾಜು, ಗೃಹ ನಿರ್ಮಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ, ವ್ಯವಸಾಯ, ಗ್ರಾಮೀಣ ಅಭಿವೃದ್ಧಿ ಮತ್ತು ರಸ್ತೆ ಹಾಗೂ ಸೇತುವೆಗಳು. ವರ್ಗ-೨ರಲ್ಲಿ (ಅ) ಯೋಜಿಸುವುದು, ಫಲಾನುಭವಿಗಳನ್ನು ಮತ್ತು ಕಾಮಗಾರಿಗಳನ್ನು ಗುರುತಿಸುವುದು ಮತ್ತು (ಆ) ಮೇಲ್ವಿಚಾರಣೆ, ಉಸ್ತುವಾರಿಕೆ ಮತ್ತು ವರದಿ ಒಪ್ಪಿಸುವಿಕೆ. ಸಾಮಾನ್ಯವಾಗಿ ಈ ಕಾರ್ಯಕ್ರಮಗಳು ಕೇಂ‌ದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ರೂಪಿತಗೊಂಡ ಕಾರ್ಯಕ್ರಮಗಳು –  ಮುಖ್ಯವಾಗಿ ಇವು ವ್ಯವಸಾಯ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ, ಮಣ್ಣು ಸಂರಕ್ಷಣೆ, ಅರಣ್ಯ, ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಜನಾಂಗದವರ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು.

ಮಂಡಲ ಪಂಚಾಯಿತಿಗಳು ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಮಾಡಿರುವ ಖರ್ಚಿನ ವಿವರಗಳು ಈ ಕೆಳಕಂಡಂತೆ ಇವೆ. ಇಲ್ಲಿ ನಾವು ಆಯ್ದ ಎಂಟು ಮಂಡಲ ಪಂಚಾಯಿತಿಗಳು ಮಾಡಿರುವ ಖರ್ಚಿನ ವಿವರವನ್ನು ಕೊಟ್ಟಿದ್ದೇವೆ. ಈ ಮಾಹಿತಿಯನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ನಡೆಸಿರುವ ಸಮೀಕ್ಷೆಯ ಆಧಾರವನ್ನು (ಅಬ್ದುಲ್ ಅಜೀಜ್: ೧೯೯೩) ಇಟ್ಟುಕೊಂಡು ಇಲ್ಲಿ ಕೊಡಲಾಗಿದೆ.

ಪಟ್ಟಿ ಒಂದು
ಆಯ್ದ ಮಂಡಲ ಪಂಚಾಯತಿಗಳ ಖರ್ಚಿನ ರೀತಿ ೧೯೮೭-೮೮ರಿಂದ ೧೯೮೯-೯೦

ಖರ್ಚಿನ ಬಗೆ ೧೯೮೭
-೮೮
೧೯೮೮
-೮೯
೧೯೮೯
-೯೦
೩ ವರ್ಷಗಳ ಸರಾಸರಿ
೧. ನಾಗರೀಕ ಸೌಲಭ್ಯಗಳು (ಬೀದಿ ದೀಪಗಳು, ನೀರು ಸರಬರಾಜು,ಗೃಹನಿರ್ಮಾಣ, ಆರೋಗ್ಯ, ಇತ್ಯಾದಿ) ೫೦.೯೯ ೩೬.೭೭ ೪೧.೫೨ ೪೦.೭೬
೨. ಸಾರ್ವಜನಿಕ ಕಾಮಗಾರಿಗಳು (ರಸ್ತೆ, ಸೇತುವೆ, ಭೂಸ್ವಾಧೀನ) ೮.೫೦ ೨೬.೮೬ ೨೭.೩೪ ೨೪.೫೧
೩. ಶೇ. ೨೦ರ ಕಾರ್ಯಕ್ರಮಗಳಲ್ಲಿ ಪ.ಜಾತಿ ಮತ್ತು ಪ.ವರ್ಗಗಳ ಕಾರ್ಯಕ್ರಮಗಳು ೩.೦೩ ೭.೯೩ ೪.೨೦ ೫.೬೫
೪. ಸಿಬ್ಬಂದಿ ಸಂಬಳ, ಪೀಠೋಪಕರಣ, ಮುದ್ರಣ, ಲೇಖನಸಾಮಗ್ರಿಗಳು, ಇತ್ಯಾದಿ ೨೭.೩೪ ೧೩.೫೭ ೧೯.೧೬ ೧೭.೮೯
೫. ರಾಷ್ಟ್ರೀಯ ಹಬ್ಬಗಳು, ಆಟ, ವಯಸ್ಕರ ಶಿಕ್ಷಣ, ಶಿಶುವಿಹಾರ, ಇತ್ಯಾದಿ ೪.೮೭ ೨.೧೮ ೧.೫೫ ೨.೨೯
೬. ಎನ್.ಎಸ್.ಸಿ, ಐ.ಬಿ.ಪಿ. ಮತ್ತು ಉಳಿದ ಖರ್ಚುಗಳು ೫.೨೭ ೧೨.೬೯ ೬.೨೩ ೮.೯೦
ಒಟ್ಟು ೧೦೦.೦೦ ೧೦೦.೦೦ ೧೦೦.೦೦ ೧೦೦.೦೦

ಮೇಲಿನ ಪಟ್ಟಿಯಿಂದ ತಿಳಿದುಬರುವ ಅಂಶಗಳೇನೆಂದರೆ, ಮಂಡಲ ಪಂಚಾಯತಿಗಳು ಹೆಚ್ಚಿನ ಮಟ್ಟದಲ್ಲಿ ಅಂದರೆ ಸುಮಾರು ಶೇ. ೪೧ರಷ್ಟು ಹಣವನ್ನು ನಮ್ಮ ನಾಗರೀಕರಿಗೆ ಬೇಕಾದ ಸೌಲಭ್ಯಗಳ ಮೇಲೆ ಖರ್ಚು ಮಾಡಿವೆ, ಸುಮಾರು ಕಾಲು ಭಾಗದಷ್ಟು (ಶೇ. ೨೫) ಸಾರ್ವಜನಿಕ ಕಾಮಗಾರಿಗಳ ಮೇಲೆ ಮತ್ತು ಶೇ. ೧೮ರಷ್ಟನ್ನು ಸಿಬ್ಬಂದಿಯ ವೇತನ ಹಾಗೂ ಇತರೆ ವಸ್ತುಗಳ ಮೇಲೆ ಖರ್ಚು ಮಾಡಿವೆ. ಒಟ್ಟಾರೆ ಹೇಳುವುದಾದರೆ ಮಂಡಲ ಪಂಚಾಯತಿಗಳು ಶೇ.೬೫ರಷ್ಟು ಖರ್ಚನ್ನು ನಾಗರೀಕ ಸೌಲಭ್ಯಗಳನ್ನು ಒದಗಿಸುವುದಕ್ಕೆ ಮತ್ತು ಸಾರ್ವಜನಿಕ ಕಾಮಗಾರಿಗಳ ಮೇಲೆ ಮಾಡಿವೆ. ಇದನ್ನು ವಿಂಗಡಿಸಿ (ಮೂರು ವರ್ಷಗಳಲ್ಲಿ) ನೋಡಿದಾಗ ನಾಗರಿಕ ಸೌಲಭ್ಯಗಳ ಮೇಲಿನ ಖರ್ಚು ವರ್ಷ ವರ್ಷಕ್ಕೆ ಏರುವಿಕೆಯನ್ನು ತೋರಿಸುತ್ತದೆ. ಇದರಿಂದ ತಿಳಿಯುವ ಮುಖ್ಯ ಅಂಶವೇನೆಂದರೆ ಮಂಡಲ ಪಂಚಾಯತಿಗಳು ಗ್ರಾಮಗಳಲ್ಲಿ ಅತಿ ಮುಖ್ಯವಾಗಿ ಬೇಕಾದ ನಾಗರಿಕ ಸೌಲಭ್ಯಗಳ ಬಗ್ಗೆ ಹಾಗೂ ಸಾರ್ವಜನಿಕ ಸವಲತ್ತುಗಳ ಬಗ್ಗೆ ಬಹಳಮಟ್ಟಿನ ಆಧ್ಯತೆಯನ್ನು ಕೊಟ್ಟಿವೆ.

ಪಟ್ಟಿಯಿಂದ ತಿಳಿದು ಬರುವ ಮತ್ತೊಂದು ಅಂಶವೇನೆಂದರೆ ಮಂಡಲ ಪಂಚಾಯತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ಖರ್ಚು ಮಾಡಬೇಕಾಗಿರುವ ಶೇ. ೨೦ರ ಬಾಬ್ತನ್ನು ಸರಾಸರಿ ಮಾಡಿಲ್ಲ; ಮೂರು ವರ್ಷಗಳಲ್ಲಿ ಶೇ. ೫೬.೫ರಷ್ಟನ್ನು ಮಾತ್ರ ಖರ್ಚು ಮಾಡಿವೆ.ಇದಕ್ಕೆ ಮುಖ್ಯ ಕಾರಣ ಮಂಡಲ ಪಂಚಾಯತಿಗಳು ಖರ್ಚು ಮಾಡುವುದಕ್ಕೆ ನಿಯೋಜಿಸಿದ್ದ ಮಾರ್ಗದರ್ಶನಗಳನ್ನು ಸರಿಯಾಗಿ ಪಾಲಿಸಿರಲಿಲ್ಲವಾದ್ದರಿಂದ. ಅಲ್ಲದೆ ಮಂಡಲ ಪಂಚಾಯತಿಗಳ ಖರ್ಚಿನ ರೀತಿಯನ್ನು ಕೂಲಂಕಷವಾಗಿ ಗಮನಿಸಿದಾಗ ತಿಳಿಯುವ ಅಂಶವೇನೆಂದರೆ, ಪಂಚಾಯತಿಗಳು ಹೆಚ್ಚಿನ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ರೂಪಿಸುವುದಕ್ಕೆ ಖರ್ಚನ್ನು ಮಾಡಿ ಬಹಳ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ತರುವಂತಹ ಕಾರ್ಯಕ್ರಮಗಳಿಗೆ ಖರ್ಚನ್ನು ಮಾಡಿದ್ದವು. ಹಂತ ಹಂತವಾಗಿ ಸಮಾಜದ ದುರ್ಬಲ ವರ್ಗ ಮತ್ತು ಹಿಂದುಳಿದ ಜನಾಂಗದ ಏಳಿಗೆಗಾಗಿ ಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು, ಹಳ್ಳಿಗಳಲ್ಲಿ ಭೌಗೋಳಿಕ ಸವಲತ್ತುಗಳನ್ನು ವೃದ್ಧಿಪಡಿಸಿದ ನಂತರ, ಅನುಷ್ಠಾನಗೊಳಿಸುವಂತಹ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದವು. (ಅಬ್ದುಲ್ ಅಜೀಜ್, ೧೯೯೩).

ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಹಿಂದೆ ಇದ್ದ ಮಂಡಲ ಪಂಚಾಯಿತಗಳನ್ನು ‘ಹಳ್ಳಿಗಳಲ್ಲಿ ಸಾಮೂಹಿಕ ಮತ್ತು ಆರ್ಥಿಕ ಅಭಿವೃದ್ಧಿ’ ತರುವಂತಹ ನಿಯೋಜಿತ ಸಂಸ್ಥೆಗಳೆಂದು ಪರಿಗಣಿಸಲಾಗಿತ್ತು. ಇದರ ಪರಿಣಾಮವಾಗಿ ಈ ಸಂಸ್ಥೆಗಳು ಹಣ ಮತ್ತು ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸುವಂತಹ, ವೃದ್ಧಿ ಹೊಂದುವಂತಹ ಸವಲತ್ತುಗಳು, ವ್ಯವಸಾಯ, ಹೈನುಗಾರಿಕೆ, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಉತ್ಪನ್ನ ತರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಹ, ನಾಗರೀಕ ಸೌಲಭ್ಯಗಳಾದ ರಸ್ತೆದೀಪಗಳು, ಒಳ ಚರಂಡಿ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣವನ್ನು ಕೊಡುವಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತು ನಿಭಾಯಿಸಬೇಕಾಗಿತ್ತು ಹಾಗೂ ಮುಖ್ಯವಾಗಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುತ್ತಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಕೂಡ ನೋಡಬೇಕಾಗಿತ್ತು.

ಈ ಒಂದು ಹಿನ್ನೆಲೆಯಲ್ಲಿ ನೋಡಿದಾಗ ಮಂಡಲ ಪಂಚಾಯತಿಗಳು ಆದಷ್ಟು ಮಟ್ಟಿನ ಉತ್ತೇಜನಕಾರಿಯಾದಂತಹ ಯಶಸ್ಸನ್ನು ಸಾಧಿಸಿವೆ. ಹಳ್ಳಿಗಳಿಗೆ ಮುಖ್ಯವಾಗಿ ಬೇಕಾದ ಸೌಲಭ್ಯ, ಸವಲತ್ತುಗಳನ್ನು ಮತ್ತು ಜನರಿಗೆ ಬೇಕಾದ ಅಗತ್ಯಗಳು ಹಾಗೂ ಸೌಲಭ್ಯಗಲನ್ನು ಒದಗಿಸುವುದರಲ್ಲಿ, ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ನೆಲೆಸಿರುವ ವಾಸ ಸ್ಥಳಗಳಲ್ಲಿ, ಸಫಲವಾಗಿದ್ದವು. ಇದರ ಇನ್ನೊಂದು ಮುಖ ಎಂದರೆ ಮುಖ್ಯವಾಗಿ ನಾವು ಹಳ್ಳಿಗಳ ಆರ್ಥಿಕ ಅಭಿವೃದ್ಧಿ ಯಾವ ಮಟ್ಟದಲ್ಲಿ ಆಗಿದೆ ಎಂದು ನೋಡಬೇಕಾಗಿದೆ. ಆದರೆ ಮಂಡಲ ಪಂಚಾಯತಿಗಳು ಅಷ್ಟೇನು ಯಶಸ್ಸನ್ನು ಸಾಧಿಸಲಿಲ್ಲ. ಏಕೆಂದರೆ, ಪಂಚಾಯತಿಗಳು ಬಹಳ ಕಡಿಮೆ ಮಟ್ಟದಲ್ಲಿ ಉತ್ಪನ್ನ ತರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಸಾಮೂಹಿಕ ಅಭಿವೃದ್ಧಿ ತರುವಂತಹ ಕಾರ್ಯಕ್ರಮಗಳಲ್ಲಿ ಜನರ ಭಾಗವಹಿಸುವಿಕೆ ಅಷ್ಟೇನು ಇರಲಿಲ್ಲ. ಜನರ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದರಲ್ಲಿ ಪಂಚಾಯತಿಗಳ ಪ್ರಯತ್ನ ಅಷ್ಟೇನು ಫಲಕಾರಿಯಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಜನರಾಗಲಿ ಅಥವಾ ಅವರ ಸಂಘ ಸಂಸ್ಥೆಗಳಾಗಲಿ ಮಂಡಲ ಪಂಚಾಯತಿಗಳ ಕಾರ್ಯಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಕ್ಕೆ ಯಾವೊಂದು ತರಹದ ಒಲವನ್ನು ಕೂಡ ತೋರಿಸದೇ ಇದ್ದುದು (ಅಬ್ದುಲ್ ಅಜೀಜ್ : ೧೯೯೪)

ರೇಖಾ ಪಟ

01_02_KAKA-KUH

ಮೇಲೆ ಮಾಡಿರುವ ವಿ‌ಶ್ಲೇಷಣೆ ಮೂಲಕ ತಿಳಿದು ಬರುವುದೇನೆಂದರೆ, ಕರ್ನಾಟಕದಲ್ಲಿ ಪಂಚಾಯತ್ ಸಂಸ್ಥೆಗಳು, ಸಾಮಾಜಿಕ ಬದಲಾವಣೆ ತರುವುದರಲ್ಲಿ ಯಶಸ್ಸಿನ ಮುಂಚೂಣಿಯನ್ನು ತಲುಪುವ ದಿಕ್ಕಿನಲ್ಲಿ ಮುಂದೆ ಮುಂದೆ ಹೋಗುತ್ತಿವೆ. ಇಂತಹ ಒಂದು ಸಾಧ್ಯತೆ ಉಂಟಾಗುವುದಕ್ಕೆ ಕಾರಣ ರಾಜ್ಯ ಸರ್ಕಾರ ೧೯೮೭ರಿಂದೀಚೆಗೆ ಪಂಚಾಯತ್ ಅಧಿನಿಯಮಗಳು ತಂದಿರುವ ಸುಧಾರಣೆಗಳಿಂದ ಅಂದರೆ ತಪ್ಪಾಗಲಾರದು. ಸ್ಥಳೀಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಬಹುಪಾಲು ಎಲ್ಲಾ ವರ್ಗಗಳು, ದುರ್ಬಲ ಮತ್ತು ಹಿಂದುಳಿದ ಜನಾಂಗದವರು ಭಾಗವಹಿಸುವುದಕ್ಕೆ ಮತ್ತು ಆಯಾ ವರ್ಗ ಮತ್ತು ಜನಾಂಗದವರ ಏಳಿಗೆಗೆ ಸಂಬಂಧಪಟ್ಟಂತೆ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಪಂಚಾಯತಿಗಳು ಅಗತ್ಯವಾಗಿ ಬೇಕಾದ ವೇದಿಕೆಯನ್ನು ಕೊಟ್ಟಿವೆ. ಇಂತಹ ವೇದಿಕೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಜನರ ಬೇಡಿಕೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸುವುದಕ್ಕೆ ಹಾಗೂ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯವೆಸಗಲು ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಒಂದು ಕಾರ್ಯದಿಂದ ಗ್ರಾಮಗಳಲ್ಲಿ ಸಾಮಾಜಿಕ ಸುಧಾರಣೆ ತರುವುದರ ಮೂಲಕ ಮತ್ತು ಇದಕ್ಕೆ ಪೂರಕವಾದ ಆರ್ಥಿಕ ಅಭಿವೃದ್ಧಿಯನ್ನು ಕೂಡ ತರುವಂತಹ ಪ್ರಯತ್ನವಾಗಿರಬೇಕಾಗಿದೆ.