ಪ್ರಸ್ತಾವನೆ

ಸ್ವಾತಂತ್ಯ್ರಪೂರ್ವ ಭಾರತದ ಕೈಗಾರಿಕಾ-ಕ್ಷೇತ್ರ-ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ತನ್ನ ದೂರದರ್ಶಿತ್ವದ ಕೈಗಾರಿಕಾ ನೀತಿ, ಕಾರ್ಯಯೋಜನೆಗಳು ಹಾಗೂ ವಿಶಿಷ್ಟ ಸಾಧನೆಗಳಿಂದಾಗಿ ಕಂಗೊಳಿಸಿದ್ದು ಸರ್ವವೇದ್ಯ. ಸ್ವಾತಂತ್ಯ್ರೋತ್ತರದಲ್ಲಿಯೂ ಸಹ ೫೦ರ ದಶಕದಲ್ಲಿ ದೇಶದ ಕೈಗಾರಿಕಾ ಮೌಲ್ಯವೃದ್ಧಿಯಲ್ಲಿ (value added from industry) ರಾಜ್ಯದ ಕೊಡುಗೆಯನ್ನು ಪರಿಗಣಿಸಿದಾಗ ನಾಲ್ಕನೆಯ ಸ್ಥಾನ ಹೊಂದಿತ್ತು. ಆದರೆ ೬೦, ೭೦ ಮತ್ತು ೮೦ರ ದಶಕಗಳಲ್ಲಿ ಈ ಮಾನದಿಂದ ರಾಜ್ಯದ ಕೊಡುಗೆ ಕಡಿಮೆಯಾಗುತ್ತಾ ಬಂದು ರಾಜ್ಯದ ಸ್ಥಾನ ಒಂಬತ್ತಕ್ಕೆ ಇಳಿಯಿತು. (೧) ಕೈಗಾರಿಕಾ ಕ್ಷೇತ್ರದಲ್ಲಿನ ರಾಜ್ಯದ ಹಿನ್ನೆಡೆ ಎಂಟನೇ ಪಂಚವಾರ್ಷಿಕ ಯೋಜನೆ (ಕರಡು)ಯಲ್ಲಿಯೂ ಪ್ರಸ್ತಾಪಿಸಲ್ಪಟ್ಟಿರುವುದನ್ನು ಗಮನಿಸಬಹುದು. (೨) ರಾಜ್ಯದ ನೈಜ ಆದಾಯದ ಬೆಳವಣಿಗೆಯ ಪ್ರಮಾಣವು ದೇಶದ ನೈಜ ಆದಾಯದ ಬೆಳವಣಿಗೆಯ ಪ್ರಮಾಣಕ್ಕೆ ಹೋಲಿಸಿದರೆ ಐದನೆಯ ಪಂಚವಾರ್ಷಿಕ ಯೋಜನೆಯವರೆಗೆ ಹೆಚ್ಚಾಗಿದ್ದದ್ದು ನಂತರ ತಿರುವು ಮುರುವಾಯಿತು. ಇದಕ್ಕೆ ಮುಖ್ಯವಾಗಿ ಈ ಅವಧಿಯಲ್ಲಿ ದ್ವಿತೀಯ ವಲಯ (Secondary sector)ದ ಬೆಳವಣಿಗೆಯ ಗತಿಯಲ್ಲಾದ ಹಿನ್ನಡೆಯೇ ಕಾರಣವೆಂಬುದು ಪ್ರತಿ ಕ್ಷೇತ್ರದ ಬೆಳವಣಿಗೆಯ ಗತಿಯನ್ನು ವಿಮರ್ಶಿಸಿದಾಗ ಸ್ಪಷ್ಟವಾಯಿತು. ಉತ್ಪಾದನೆಯು (Manufacturing) ದ್ವಿತೀಯ ವಲಯದ ಅತಿ ಪ್ರಮುಖ ಅಂಗವಾದುದರಿಂದ ಈ ಅಂಗದ ಊನತೆ ಅಂತಿಮವಾಗಿ ರಾಜ್ಯದ ಆದಾಯದ ಗತಿಯನ್ನು ನಿರ್ಧರಿಸುವಲ್ಲಿ ಕಾರಣವಾಯಿತೆಂಬುದು ನಿಚ್ಚಳ. ರಾಜ್ಯವು ವಿಶೇಷವಾಗಿ ೭೦ರ ದಶಕದಿಂದೀಚೆಗೆ ಕೈಗಾರಿಕಾರಂಗದಲ್ಲಿ ಅನುಭವಿಸಿದ ದುಗುಡ-ದುಮ್ಮಾನ, ಸ್ಥಿತಿ-ಗತಿ, ಸಾಧನೆಗಳ ಹಿನ್ನೆಲೆಯಲ್ಲಿ, ಮುಂಬರುವ ದಶಕಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ದಿಶೆಯಲ್ಲಿ ಎದುರಿಸಬೇಕಾದ ಅಡೆ-ತಡೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥೂಲವಾಗಿ ಚರ್ಚಿಸುವ ಉದ್ದೇಶ ಈ ಲೇಖನದ್ದು. ಪಾಂಡೆ ಮತ್ತು ವಾಂಚೂ ಸಮಿತಿಗಳ ಶಿಫಾರಸ್ಸುಗಳನ್ನು ಆಧರಿಸಿ ಹಿಂದುಳಿದ ಪ್ರದೇಶಗಳ ಕೈಗಾರಿಕಾಭಿವೃದ್ಧಿಗಾಗಿ ವಿಶೇಷ ಕಾರ್ಯನೀತಿ (policy), ಎಂ.ಆರ್.ಟಿ.ಪಿ. ಆಕ್ಟ್ ಇತ್ಯಾದಿ ಮಹತ್ವದ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಂಡದ್ದು ೭೦ರ ದಶಕದಲ್ಲಾದುದರಿಂದ ಅದನ್ನು ಭಾರತೀಯ ಕೈಗಾರಿಕಾ ಇತಿಹಾಸದಲ್ಲಿ ಒಂದು ಮೈಲಿಗಲ್ಲೆಂದು ಪರಿಗಣಿಸಬಹುದು. ಆದ್ದರಿಂದ ‌ಪ್ರಸ್ತುತ ಚರ್ಚೆಗೆ ಸಾಧ್ಯವಾದಷ್ಟು ಮಟ್ಟಿಗೆ ೭೦ರ ದಶಕವನ್ನು ತಳಹದಿ (base)ಯಾಗಿಟ್ಟು ಕೊಳ್ಳುವುದು ಅಸಮಂಜಸವೆನಿಸಲಾರದು.

ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಪಟ್ಟ ಅಂಕಿ ಸಂಖ್ಯಾಂಶಗಳು (data/information) ಅನೇಕ ಮೂಲಗಳಿಂದ (sources) ಮುಖ್ಯವಾಗಿ ಸರ್ಕಾರಿ ಪ್ರಕಟಣೆಗಳು ಲಭ್ಯವಿರುವುದಾದರೂ ಅವು ವೈಯಕ್ತಿಕ ಕೈಗಾರಿಕೆಗಳು ಹಾಗೂ ಪ್ರಾದೇಶಿಕವಾಗಿ (industry-wise, region-wise) ನೀಡುವ ವಿವರಗಳು, ಅನುಸರಿಸುವ ವ್ಯಾಖ್ಯೆ (definitions) ಮತ್ತು ಪರಿಭಾವನೆ (concepts), ವರ್ಗೀಕೃತ ವಿವರ, (classficatory details), ಕಾಲಾವಧಿ (time period)ಇತ್ಯಾದಿ ಬೇರೆ ಬೇರೆಯಾಗಿರುವುದರಿಂದ ಒಂದು ಅವಧಿಯಿಂದ ಇನ್ನೊಂದು ಅವಧಿಯವರೆಗೆ ನಡೆಸುವ ವಿಶ್ಲೇಷಣೆ/ಅಭ್ಯಾಸಗಳಿಗೆ (Time Series Analysis/studies) ಅನೇಕ ಸಮಸ್ಯೆಗಳನ್ನುಂಟು ಮಾಡುತ್ತವೆ. ಹಾಗಾಗಿ ಅನೇಕ ಹೊಂದಾಣಿಕೆಗಳನ್ನು ಸಂಶೋಧಕರು ತಮ್ಮ ವಿಶ್ಲೇಷಣೆ/ಅಭ್ಯಾಸಗಳಲ್ಲಿ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಪ್ರಸ್ತುತ ಲೇಖನವು ಈ ರೀತಿಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಆದರೆ ಅವುಗಳನ್ನು ಚರ್ಚಿಸಬಯಸದೆ. ಅನೇಕ ಮೂಲಗಳಿಂದ ಸಂಗ್ರಹಿಸಿದ ಅಂಕಿ ಸಂಖ್ಯೆಗಳನ್ನು ಸಂದರ್ಭಕ್ಕನುಸಾರವಾಗಿ ಸೂಕ್ತ ರೀತಿಯಲ್ಲಿ ಬಳಸಿಕೊಂಡು ವಿಶ್ಲೇಷಣೆ ನಡೆಸಿದೆ ಎಂಬುದನ್ನು ಮಾತ್ರ ಸೂಚಿಸಬಯಸುತ್ತದೆ. ಕೈಗಾರಿಕಾ ಕ್ಷೇತ್ರದ ಅಂಕಿ ಸಂಖ್ಯೆಗಳಿಗೆ ಈ ಕೆಳಗೆ ನಮೂದಿಸಿದ ಮೂಲಗಳು ಹೊರತರುವ ನಿಯತಕಾಲಿಕ ಪ್ರಕಟಣೆ, ವರದಿಗಳು ಹಾಗೂ ಇತ್ಯಾದಿ ಮಹತ್ವವೆಂದು ತಿಳಿಯಬಹುದು. ಅವುಗಳೆಂದರೆ (೧)ಕೈಗಾರಿಕಾ ವಾರ್ಷಿಕ ಸಮೀಕ್ಷೆ (Annual Survey of Industries), (೨)ಕೇಂದ್ರೀಯ ಸಾಂಖ್ಯಿಕ ಸಂಖ್ಯೆ (CSI) (೩) ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಕರ್ನಾಟಕ,  (೪) ರಾಷ್ಟ್ರೀಯ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳು ಗಣತಿ, (೫) ಖಾದಿ ಮತ್ತು ಗ್ರಾಮೋಧ್ಯೋಗ ಕೈಗಾರಿಕಾ ಮಂಡಳಿ. ಈ ಸಂದರ್ಭದಲ್ಲಿ ಅನೇಕ ಸಂಶೋಧನಾ ಸಂಸ್ಥೆಗಳು, ವಿದ್ವಾಂಸರು ವಿದ್ವಾಂಸರು ಪ್ರಕಟಿಸಿರುವ ಅಧ್ಯಯನ ಲೇಖನಗಳು, ವರದಿಗಳು ಹಾಗೂ ಇತ್ಯಾದಿ ವಸ್ತುಗಳು ಪ್ರಸ್ತುತ ಅಭ್ಯಾಸಕ್ಕೆ ಸಹಕಾರಿಯಾಗಿವೆ ಎಂಬುದನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಬಹುದು.

ರಾಜ್ಯದ ಆದಾಯ ೧೯೮೦ರಿಂದ ೧೯೯೪-೯೫

ರಾಜ್ಯದ ನಿವ್ವಳ ಆದಾಯವು (Net State Domenstic Product) ೧೯೮೦-೮೧ರಲ್ಲಿ ರೂ. ೫೬೧೧ ಕೋಟಿಯಿದ್ದದ್ದು. ೧೯೯೪-೯೫ಕ್ಕೆ ರೂ.೧೧೫೧೧೪ ಕೋಟಿಗೆ (ನಿರೀಕ್ಷಿತ ಆದಾಯ ೧೯೮೦-೮೧ರ ಸ್ಥಿರ ಬೆಲೆಗನುಸಾರ), ಅಂದರೆ ವಾರ್ಷಿಕ ಸರಾಸರಿ ಶೇಕಡ ೫.೩ರಷ್ಟು ಪ್ರಮಾಣದಲ್ಲಿ ಏರಿತು. (೩) ಈ ಅವಧಿಯಲ್ಲಿ ರಾಜ್ಯದ ಅರ್ಥ ವ್ಯವಸ್ಥೆಯಲ್ಲಿರುವ ವೈಯಕ್ತಿಕ ಕ್ಷೇತ್ರದ (individual sector) ಆದಾಯ ವೃದ್ಧಿಯ ಪ್ರಮಾಣ ಬೇರೆ ಬೇರೆಯಾಗಿದ್ದುದರಿಂದ ವೈಯಕ್ತಿಕ  ಕ್ಷೇತ್ರದ ಪರಸ್ಪರ ಪ್ರಾಮುಖ್ಯತೆ (relative importance) ಅಥವಾ ಪಾಲು (share) ಗಮನಾರ್ಹ ಬದಲಾವಣೆ ಹೊಂದಿತು. ರಾಜ್ಯದ ಒಟ್ಟು ಆದಾಯದಲ್ಲಿ ಪ್ರಾಥಮಿಕ ಕ್ಷೇತ್ರದ ಪಾಲು ೧೯೮೦-೮೧ರಲ್ಲಿ ಶೇಕಡ ೪೫.೮ರಿಂದ ೧೯೯೩-೯೪ರಲ್ಲಿ ಶೇಕಡ ೩೫.೯ಕ್ಕೆ ಇಳಿದರೆ ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳ ಪಾಲು ಕ್ರಮವಾಗಿ ಶೇಕಡ ೨೧.೧ರಿಂದ ಶೇಕಡ ೨೩.೬ಕ್ಕೆ ಮತ್ತು ಶೇಕಡ ೩೩.೧ರಿಂದ ೪೦.೫ಕ್ಕೆ ಏರಿದವು. (೪) ದ್ವಿತೀಯ ಕ್ಷೇತ್ರದಲ್ಲಿ ಈ ಮೊದಲು ಉಲ್ಲೇಖಿಸಿದಂತೆ ಉತ್ಪಾದನೆ (manufacturing) ಅತಿ ಪ್ರಮುಖ ಉಪ ಕ್ಷೇತ್ರ (sub-sector)ವಾದುದರಿಂದ ಅದರ ಆದಾಯದಲ್ಲಾದ ಬದಲಾವಣೆ, ಅಭಿವೃದ್ಧಿಗಳು ಆ ಕ್ಷೇತ್ರದ ಆದಾಯದ ಮೇಲಷ್ಟೇ ಅಲ್ಲದೆ ರಾಜ್ಯದ ಇಡೀ ಆದಾಯದ ಮೇಲೂ ಸಾಕಷ್ಟು ಪ್ರಭಾವ ಬೀರಿದವು.

ಉತ್ಪಾದನಾ ಕ್ಷೇತ್ರ ಹಾಗೂ ಉದ್ಯೋಗ

೧೯೮೧ ಮತ್ತು ೧೯೯೧ರ ಜನಗಣತಿಯ ಪ್ರಕಾರ, ರಾಜ್ಯದ ಒಟ್ಟು ಕೆಲಸಗಾರರಲ್ಲಿ ಪ್ರತಿಶತ ೧೦ ಹಾಗೂ ೧೨ರಷ್ಟು ಕೆಲಸಗಾರರು ಉತ್ಪಾದನೆಯಲ್ಲಿ ನಿರತರಾಗಿದ್ದರು. ಈ ದಶಕಗಳ  ಮಧ್ಯೆ ಉತ್ಪಾದನೆ ಕ್ಷೇತ್ರದಲ್ಲಿ ಆಂತರಿಕವಾಗಿ ಸಂಭವಿಸಿದ ಕುತೂಹಲಕಾರಿ ಬೆಳವಣಿಗೆಯನ್ನು ನಾವು ವಿಶೇಷವಾಗಿ ಗಮನಿಸಬೇಕು. ೧೯೮೧ರಲ್ಲಿ ಉತ್ಪಾದನೆಯಲ್ಲಿ ತೊಡಗಿದ ಕೆಲಸಗಾರರಲ್ಲಿ ಸುಮಾರು ೧/೩ ಭಾಗದಷ್ಟು ‘ಗೃಹ ಕೈಗಾರಿಕೆ ಇತ್ಯಾದಿ’ ಉಪ ವಲಯದಲ್ಲಿ ಹಾಗೂ ೨/೩ ಭಾಗದಷ್ಟು ‘ಗೃಹೇತರ ಕೈಗಾರಿಕೆ’ಯಲ್ಲಿ ತೊಡಗಿದ್ದಾರೆ, ೧೯೯೧ರಲ್ಲಿ ಇವುಗಳು ಕ್ರಮವಾಗಿ ೧/೫ ಭಾಗ ಹಾಗೂ ೪/೫ ಭಾಗದಷ್ಟಿದ್ದವು. ಅಂದರೆ ಉದ್ಯೋಗ ದೃಷ್ಟಿಯಿಂದ ‘ಗೃಹಕೈಗಾರಿಕೆ’ ಸ್ಥಾನ ಸಾಕಷ್ಟು ಪ್ರಮಾಣದಲ್ಲಿ ಕ್ಷೀಣಿಸಿತು (೧/೩ನೇ ಭಾಗದಿಂದ ೧/೫ ಭಾಗಕ್ಕೆ). ಈ ಬೆಳವಣಿಗೆ ಅರ್ಥಶಾಸ್ತ್ರದಲ್ಲಿ ಪ್ರಚಲಿತವಿರುವ ಸಿದ್ಧಾಂತಕ್ಕನುಸಾರವಾಗಿದೆಂಬುದನ್ನು ಇಲ್ಲಿ ಸ್ಮರಿಸಬಹುದು.

ಕೈಗಾರಿಕೋತ್ಪನದ ಸೂಚ್ಯಂಕ

(೫) ೧೯೮೧-೮೨ರಿಂದ ೧೯೯೨-೯೩ರ ಅವಧಿಯಲ್ಲಿ ರಾಜ್ಯದ ಕೈಗಾರಿಕೋತ್ಪನ್ನದ ಸೂಚ್ಯಂಕವು (೧೯೮೦-೮೧)=೧೦೦ ಸರಾಸರಿ ೬.೨೯%ರಿಂದ ಹೆಚ್ಚಿನ ಪ್ರಮಾಣದಲ್ಲಿ ಏರಿತು. (೬) ಕೈಗಾರಿಕೋತ್ಪನ್ನ ಕ್ಷೇತ್ರವನ್ನು ಉಪಕ್ಷೇತ್ರಗಳಾಗಿ ವರ್ಗೀಕರಿಸಿ-ಉತ್ಪಾದನೆ (Manufacturing), ವಿದ್ಯುಚ್ಛಕ್ತಿ (Electricity), ಗಣಿ (Mining) – ಅವುಗಳ ವಾರ್ಷಿಕ ಸರಾಸರಿ ಬೆಳವಣಿಗೆಯ ಪ್ರಮಾಣಗಳನ್ನು ಅಂದಾಜು ಮಾಡಿದಾಗ, ಉತ್ಪಾದನಾ ಉಪ ಕ್ಷೇತ್ರವು ಉಳಿದೆರಡು ಉಪ ಕ್ಷೇತ್ರಗಳಿಗಿಂತ ಹೆಚ್ಚು ವೇಗದ ಪ್ರಗತಿ ತೋರಿತು.

ಅನುಭೋಗಾಧಾರಿತ ಕೈಗಾರಿಕೋತ್ಪಾದನೆ ವಿವರಗಳು (Use-based Groups of Manufacturing Industries):

೧೯೮೧-೮೨ರಿಂದ ೧೯೯೨-೯೩ರ ಅವಧಿಯಲ್ಲಿ ಬಂಡವಾಳಯುಕ್ತ ಕೈಗಾರಿಕೆಗಳು (ಶೇಕಡ ೯.೮), ಬಳಕೆ ವಸ್ತುಗಳ ಕೈಗಾರಿಕೆಗಳು (ಶೇಕಡ ೮.೧೬) ಮತ್ತು ಮೂಲವಸ್ತು ತಯಾರಿಕಾ ಕೈಗಾರಿಕೆಗಳಿಗಿಂತ (ಶೇಕಡ ೫.೫) ಹೆಚ್ಚು ಪ್ರಮಾಣದಲ್ಲಿ ಬೆಳೆದವು.

ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು

೧೯೯೫ರ ಮಾರ್ಚ್‌ ಅಂತ್ಯದಲ್ಲಿ ಒಟ್ಟು ೭೪೬ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು ಇವುಗಳಲ್ಲಿ ಹೂಡಿದ ಬಂಡವಾಳ (Investment) ರೂ. ೬೨೯೮ ಕೋಟಿ ಹಾಗೂ ಸೃಷ್ಟಿಸಿದ ಉದ್ಯೋಗ ಅವಕಾಶ ೨.೮೦ ಲಕ್ಷವಾಗಿತ್ತು. ಈ ಕೈಗಾರಿಕೆಗಳ ಪ್ರಾದೇಶಿಕ ಹಂಚಿಕೆ (Regional distribution)ತೀವ್ರ ಅಸಮಾನವಾಗಿರುವುದು ಅಂಕಿ ಸಂಖ್ಯೆಗಳಿಂದ ಎದ್ದು ತೋರುತ್ತದೆ (ಕೋಷ್ಟಕ ೧). ಈ ಕೈಗಾರಿಕೆಗಳು ಸುಮಾರು ಶೇಕಡ ೪೫.೨ರಷ್ಟು ಬೆಂಗಳೂರು ಜಿಲ್ಲೆಯೊಂದರಲ್ಲಿಯೇ (ಅದರಲ್ಲೂ ಬೆಂಗಳೂರು ಸುತ್ತ ಮುತ್ತ)ಕೇಂದ್ರೀಕೃತವಾಗಿದ್ದು, ನಂತರ ಕ್ರಮವಾಗಿ ಮೈಸೂರು, ಧಾರವಾಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಬಹುತೇಕ ಸೀಮಿತವಾಗಿವೆ. ಆದರೆ ಈ ಕೈಗಾರಿಕೆಗಳಲ್ಲಿ ಹೂಡಿದ ಒಟ್ಟು ಬಂಡವಾಳ ಹಾಗೂ ಒದಗಿಸಿದ ಒಟ್ಟು ಉದ್ಯೋಗ ಸಂಖ್ಯೆಗಳು ಮಾತ್ರ ಈ ಐದು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿಲ್ಲದಿರುವುದು (ಬೆಂಗಳೂರು ಹೊರತುಪಡಿಸಿ) ಸ್ವಲ್ಪ ಸಮಾಧಾನದ ಸಂಗತಿ. ಈ ಸಂದರ್ಭದಲ್ಲಿ ಒಂದೆರಡು ವಿಪರ್ಯಾಸಗಳನ್ನು ಗಮನಿಸಬಹುದು. ಗುಲ್ಬರ್ಗಾದಲ್ಲಿ ಈ ಕೈಗಾರಿಕೆಗಳು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಇವುಗಳಲ್ಲಿ ಹೂಡಿದ ಬಂಡವಾಳ ಹೆಚ್ಚಾಗಿದ್ದು (ಒಟ್ಟಾಗಿಯಾಗಲೀ ಅಥವಾ ತಲಾ ಘಟಕ ದೃಷ್ಟಿಯಿಂದಾಗಲೀ), ಬೆಂಗಳೂರಿನ ಇವುಗಳ ಸಂಖ್ಯೆ ಹೆಚ್ಚಾಗಿದ್ದರೂ ಘಟಕವಾರು ಬಂಡವಾಳ ದೃಷ್ಟಿಯಿಂದ ಅಷ್ಟೊಂದು ಪ್ರಾಶಸ್ತ್ಯ ಪಡೆಯುವುದಿಲ್ಲ. ಒಟ್ಟು ಉದ್ಯೋಗಾವಕಾಶಗಳ ದೃಷ್ಟಿಯಿಂದ ಈ ಕೈಗಾರಿಕೆಗಳ ಮಹತ್ವ ಬೆಂಗಳೂರು, ಕೋಲಾರ, ಮಂಡ್ಯ, ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತವಾಗಿದೆಯೆನ್ನಬಹುದು. ಆದರೆ ತಲಾಘಟಕ ಉದ್ಯೋಗ ನಿರ್ಮಿತ ಮಾನದಿಂದ ಕೋಲಾರಕ್ಕೆ ಅಗ್ರಸ್ಥಾನ, ನಂತರದ ಸ್ಥಾನಗಳು ಕ್ರಮವಾಗಿ ಶಿವಮೊಗ್ಗ, ಗುಲ್ಬರ್ಗಾ, ಬೆಳಗಾವಿ, ಮಂಡ್ಯ , ಚಿತ್ರದುರ್ಗ, ಉತ್ತರ ಕನ್ನಡ, ಬಿಜಾಪುರ, ರಾಯಚೂರು, ಬಳ್ಳಾರಿ ಮತ್ತು ಬೆಂಗಳೂರು ಜಿಲ್ಲೆಗಳಿಗೆ.

ಸಣ್ಣ ಪ್ರಮಾಣದ ಕೈಗಾರಿಕೆಗಳು

೧೯೯೫ ಮಾರ್ಚ್ ಅಂತ್ಯದಲ್ಲಿ ಒಟ್ಟು ೧.೬೪ ಲಕ್ಷ ಘಟಕಗಳಿದ್ದು ಇವುಗಳಲ್ಲಿ  ಹೂಡಿದ ಬಂಡವಾಳ ಒಟ್ಟು ರೂ. ೧೯೩೬ ಕೋಟಿ ಹಾಗೂ ಇವು ೧೦.೭೭ ಲಕ್ಷ ಜನಕ್ಕೆ ಉದ್ಯೋಗಾವಕಾಶ ಸೃಷ್ಟಿಸಿದವು. ಬೆಂಗಳೂರು ಜಿಲ್ಲೆಯೊಂದರಲ್ಲೇ ಸುಮಾರು ೪೦ ಸಾವಿರ ಘಟಕಗಳಿದ್ದು, ಅಗ್ರಸ್ಥಾನದಲ್ಲಿತ್ತು ನಂತರ ಇವುಗಳು ಮುಖ್ಯವಾಗಿ ಬೆಳಗಾವಿ, ಮೈಸೂರು, ಧಾರವಾಡ, ದಕ್ಷಿಣ ಕನ್ನಡ ಮತ್ತು ತುಮಕೂರುಗಳಲ್ಲಿ ಸ್ಥಾಪಿತಗೊಂಡಿವೆ – ಇವುಗಳಲ್ಲಿ ಹೂಡಿದ ಬಂಡವಾಳ ಹಾಗೂ ಉದ್ಯೋಗ ಪ್ರಮಾಣಗಳ ದೃಷ್ಟಿಯಿಂದಲೂ ಈ ಜಿಲ್ಲೆಗಳೇ ಹೆಚ್ಚು ಕಡಿಮೆ ಪ್ರಾಮುಖ್ಯತೆ ಪಡೆದಿವೆ. (ಕೋಷ್ಟಕ ೨).

ತಲಾಘಟಕ ಹೂಡಿದ ಬಂಡವಾಳ ಪ್ರಮಾಣ ಅತಿ ಹೆಚ್ಚು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂತರ ಬೆಂಗಳೂರು, ಬೀದರ್, ರಾಯಚೂರು, ಚಿತ್ರದುರ್ಗ, ಕೋಲಾರ, ಇತ್ಯಾದಿ ಜಿಲ್ಲೆಗಳಲ್ಲಿರುವುದನ್ನು ಗಮನಿಸಬಹುದು. ಜಿಲ್ಲೆಯಲ್ಲಿನ ತಲಾ ಘಟಕ ಉದ್ಯೋಗ ಪ್ರಮಾಣ ಸರಾಸರಿ ೪ರಿಂದ ೯ರವರೆಗಿತ್ತು.

ಅಖಿಲ ಭಾರತ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಜನಗಣತಿ (Census) ೧೯೭೦ ಹಾಗೂ ೧೯೮೮ರಿಂದ ಅನೇಕ ಮಾಹಿತಿಗಳು ಲಭ್ಯವಿದ್ದು, ಅದರಂತೆ ಇವುಗಳ ಸಂಖ್ಯೆ ೭ ಪಟ್ಟು, ಇವುಗಳಲ್ಲಿ ಹೂಡಿದ ನೈಜ ಬಂಡವಾಳ (Real Investment) ಮತ್ತು ಉದ್ಯೋಗ ಸಂಖ್ಯೆಗಳೆರಡೂ ೪ ಪಟ್ಟು ಹಾಗೂ ಉತ್ಪನ್ನ ೯ ಪಟ್ಟು ಹೆಚ್ಚಿತು. ಅಲ್ಲದೆ ಇವು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತಗೊಂಡಿದ್ದರಿಂದ ಒಟ್ಟು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಖ್ಯೆಯಲ್ಲಿ ಹಿಂದುಳಿದ ಪ್ರದೇಶಗಳ ಪಾಲು ೧೯೭೨ರಲ್ಲಿ ಶೇಕಡ ೪೨ ಇದ್ದದ್ದು ೧೯೮೭-೮೮ರಲ್ಲಿ ಶೇಕಡ ೭೯ಕ್ಕೆ ಉತ್ತಮಗೊಂಡಿತು.

ಗ್ರಾಮೀಣ ಕೈಗಾರಿಕೆಗಳು

ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳ ದೃಷ್ಟಿಯಿಂದ ಗ್ರಾಮೀಣ ಕೈಗಾರಿಕೆಗಳ ಪಾತ್ರ ಅತ್ಯಂತ ಅಲ್ಪವಾದ್ದು. ೧೯೭೧ರಲ್ಲಿ ಗ್ರಾಮೀಣ ಕೈಗಾರಿಕೆಗಳು ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇಕಡ ೧ ಭಾಗ ಜನರಿಗೆ ಅಥವಾ ಗ್ರಾಮೀಣ ಜನಸಂಖ್ಯೆಯನ್ನು ಮಾತ್ರ ಪರಿಗಣಿಸಿದಾಗ ಶೇಕಡ ೧.೨ ಭಾಗ ಜನರಿಗೆ ಉದ್ಯೋಗ ಒದಗಿಸಿದ್ದರೆ, ಈ ಶೇಕಡವಾರು ಸಂಖ್ಯೆಗಳು ೧೯೮೦ರಲ್ಲಿ ಕ್ರಮವಾಗಿ ೨ ಮತ್ತು ೨.೮ಕ್ಕೆ ಮಾತ್ರ ಮುಟ್ಟಲು ಸಾಧ್ಯವಾಯಿತು. (೮) ಒಟ್ಟು ಕೆಲಸಗಾರರನ್ನಷ್ಟೇ (Total workers) ಇಲ್ಲವೇ ಗ್ರಾಮೀಣ ಕೆಲಸಗಾರರನ್ನಷ್ಟೇ ಗಣನೆಗೆ ತೆಗೆದುಕೊಂಡರೂ ಗ್ರಾಮೀಣ ಕೈಗಾರಿಕೆಗಳಿಂದ ೧೯೭೧ರಲ್ಲಿ ಕ್ರಮವಾಗಿ ಶೇಕಡ ೨.೬ ಹಾಗೂ ೩.೩ ಭಾಗದ ಕೆಲಸಗಾರರಿಗೆ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯವಾಯಿತು. ೧೯೮೮ರಲ್ಲಿ ಇವುಗಳ ಶೇಕಡವಾರು ಸಂಖ್ಯೆಗಳು ಕ್ರಮವಾಗಿ ೫.೪ ಮತ್ತು ೭ಕ್ಕೆ ಮಾತ್ರ ಏರಿದವು.

ರಾಜ್ಯದ ಸಮಗ್ರ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗದ ದೃಷ್ಟಿಯಿಂದ ಗ್ರಾಮೀಣ ಕೈಗಾರಿಕೆಗಳ ಪಾತ್ರ ಅಲ್ಪವಾದದ್ದಾದರೂ ಇವು ೧೯೭೦-೮೦ರ ದಶಕದಲ್ಲಿ ಸಾಧಿಸಿದ ತೀವ್ರ ಬೆಳವಣಿಗೆ (growth)ಯಿಂದಾಗಿ ಉತ್ಪಾದನೆ ಕ್ಷೇತ್ರದಲ್ಲಿನ ಉದ್ಯೋಗಗಳಲ್ಲಿ ಮಾತ್ರ ಇವುಗಳ ಪಾಲು ಶೇಕಡ ೩೭.೩ರಿಂದ ೫೫ಕ್ಕೆ ಜಾಸ್ತಿಯಾಯಿತು. ಅಷ್ಟೇ ಅಲ್ಲದೆ ಗ್ರಾಮೀಣ ಕೈಗಾರಿಕಾ ಕ್ಷೇತ್ರದ ಎರಡೂ ಉಪವಲಯಗಳು – ಗೃಹ (household) ಹಾಗೂ ಗೃಹೇತರ (non-household)- ಉತ್ಪಾದಕ ಘಟಕಗಳ ಸಂಖ್ಯೆ ಹಾಗೂ ಉದ್ಯೋಗ ಮಟ್ಟಗಳೆರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದವು (ಕೋಷ್ಟಕ ೩). ಆದರೆ ಗ್ರಾಮೀಣ ಕೈಗಾರಿಕಾ ಕ್ಷೇತ್ರದಲ್ಲಿ ಆಂತರಿಕವಾಗಿ ಸಂಭವಿಸಿದ ಕುತೂಹಲಕಾರಿ ಬದಲಾವಣೆಯನ್ನು ಮರೆಯುವಂತಿಲ್ಲ. ಅದೆಂದರೆ ಗೃಹ ಕೈಗಾರಿಕೆಗಳ ಘಟಕಗಳು ಹೆಚ್ಚಿದ್ದರೂ ಅವು ಕಲ್ಪಿಸಿಕೊಟ್ಟ ಉದ್ಯೋಗಗಳು ಮಾತ್ರ ಇಳಿಮುಖಗೊಂಡದ್ದು. ಅದಕ್ಕೆ ಪರ್ಯಾಯವಾಗಿ ಗೃಹೇತರ ಕೈಗಾರಿಕೆಗಳ ಘಟಕಗಳು ಕಡಿಮೆಯಾದರೂ ಅವುಗಳಿಂದ ದೊರೆತ ಉದ್ಯೋಗ ಸಂಖ್ಯೆ ಜಾಸ್ತಿಯಾಯಿತು.

ರಾಜ್ಯದ ಗ್ರಾಮೀಣ ಕೈಗಾರಿಕೆಗಳು ಬಹುತೇಕವಾಗಿ ೬ ಜಿಲ್ಲೆಗಳಲ್ಲಿ (ದಕ್ಷಿಣ ಕನ್ನಡ, ಮೈಸೂರು, ಬೆಳಗಾವಿ, ಧಾರವಾಡ, ತುಮಕೂರು ಮತ್ತು ಬಿಜಾಪುರ) ಮಾತ್ರ ಕೇಂದ್ರೀಕೃತವಾಗಿವೆ. ಅಲ್ಲದೆ ಇವುಗಳು ಕೆಲವು ಸೀಮಿತ ಪರಂಪರಾಗತ ಗ್ರಾಹಕ ಬಳಕೆ ವಸ್ತುಗಳ ಉತ್ಪದಾನೆಯಲ್ಲಿ ಮಾತ್ರ ತೊಡಗಿರುವುದರಿಂದ ವೈವಿಧ್ಯತೆಯನ್ನಿನ್ನೂ ಸಾಧಿಸಬೇಕಾಗಿದೆ.

ರೋಗಗ್ರಸ್ತ ಕೈಗಾರಿಕೆಗಳು

ರೋಗಗ್ರಸ್ತ ಕೈಗಾರಿಕೆಗಳ ಸಮಸ್ತ ರಾಜ್ಯದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ (ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು ಇತ್ಯಾದಿ) ಅಷ್ಟೊಂದು ತೀವ್ರತರ ವಾಗಿರದಿದ್ದರೂ, ಇಂತಹ ಕೈಗಾರಿಕಾ ಘಟಕಗಳ ಸಂಖ್ಯೆ ೧೯೭೮-೯೦ರ ಅವಧಿಯಲ್ಲಿ ೯ ಪಟ್ಟು ಹೆಚ್ಚಿತೆಂಬುದು  ಹಾಗೂ ಇವುಗಳಲ್ಲಿ ಸಾಕಷ್ಟು ಹೂಡಿದ ಬಂಡವಾಳ ಅಡಕವಾಗಿದೆಯೆಂಬುದು (೯) ಕಳವಳಕಾರಿಯೆನ್ನದೆ ವಿಧಿಯಿಲ್ಲ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಕೈಗಾರಿಕಾ ಘಟಕಗಳು ರೋಗಗ್ರಸ್ತವಾಗಲು ಕಾರಣವಾದ ಸನ್ನಿವೇಶಗಳು ಇತ್ಯಾದಿ ವಿಷಯಗಳ ಬಗ್ಗೆ ಕೂಲಂಕಷ ವಿಮರ್ಷೆ ಇನ್ನೂ ಆಗಬೇಕಾಗಿದೆ.

ಸಣ್ಣ ಪ್ರಮಾಣದ ಕೈಗಾರಿಕೆಗಳ ಸಾಪೇಕ್ಷ ಕಾರ್ಯದಕ್ಷತೆ (Relative efficiency)

ಸಣ್ಣ ಪ್ರಮಾಣದ ಕೈಗಾರಿಕೆಗಳು ಸಾಮಾನ್ಯವಾಗಿ ತಮ್ಮ ಉತ್ಪಾದನೆಯಲ್ಲಿ ಕೆಳಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಅವುಗಳ ಉತ್ಪತ್ತಿ (Productivity) ಮತ್ತು ಲಾಭ (Profitability)ದ ಮಟ್ಟಗಳು, ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹೋಲಿಸಿದಾಗ ಕಡಿಮೆ ಪ್ರಮಾಣದಲ್ಲಿರುವುದೆಂಬ ಅಭಿಪ್ರಾಯ ಪ್ರಚಲಿತವಿದೆ. ಈ ಅಭಿಪ್ರಾಯವನ್ನು ಪರೀಕ್ಷಿಸಲು ಕರ್ನಾಟಕದಲ್ಲಿನ ಸಣ್ಣ ಪ್ರಮಾಣದ ಕೈಗಾರಿಕೆಗಳ ಬಗ್ಗೆ ಕೈಗೊಂಡ ಅಧ್ಯಯನವೊಂದು ಸಹಕಾರಿಯಾಗಿದೆ. (೧೦)

ಈ ಅಧ್ಯಯನದಂತೆ ೧೯೭೯-೮೦ರಲ್ಲಿ ಒಟ್ಟು ಪರಿಶೀಲನೆಗೆ ಎತ್ತಿಕೊಂಡು ೧೭ ಕೈಗಾರಿಕಾ ವರ್ಗಗಳಲ್ಲಿ ೧೩ ಸಂದರ್ಭಗಳಲ್ಲಿ ಸಾಪೇಕ್ಷ ದುಡಿಮೆ ಉತ್ಪತ್ತಿ (Relative labour Productivity)ಸಣ್ಣ ಕೈಗಾರಿಕೆಗಳ ೬ ವರ್ಗಗಳಲ್ಲಿ ಒಂದಕ್ಕಿಂತ ಕಡಿಮೆಯಾಗಿತ್ತು. ಅಂದರೆ ತಲಾ ಬಂಡವಾಳ ಉತ್ಪಾದನೆ ಈ ವರ್ಗಗಳಲ್ಲಿ ದೊಡ್ಡ ಕೈಗಾರಿಕೆಗಳಿಗಿಂತ ಕಡಿಮೆಯಾಗಿತ್ತು.

ಒಟ್ಟು ಸಾಪೇಕ್ಷ ಕಾರ್ಯದಕ್ಷತೆಯ ಸೂಚ್ಯಂಕ (Total Relative Efficiency Index), ೫  ಕೈಗಾರಿಕಾ ವರ್ಗಗಳನ್ನು ಹೊರತುಪಡಿಸಿ, ಉಳಿದ ವರ್ಗಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ – ಒಂದಕ್ಕಿಂತ ಕಡಿಮೆಯಾಗಿತ್ತು. ಅಂದರೆ ಹೆಚ್ಚು ಸಂದರ್ಭಗಳಲ್ಲಿ ಸಣ್ಣ ಕೈಗಾರಿಕೆಗಳು ದೊಡ್ಡ ಕೈಗಾರಿಕೆಗಳ ಕಾರ್ಯದಕ್ಷತೆಯ ಮಟ್ಟ ಪಡೆಯಲು ಅಸಮರ್ಥವಾದವು. ಇದಕ್ಕೆ ಅನೇಕ ಕಾರಣಗಳಿದ್ದು ಅವನ್ನು ಇಲ್ಲಿ ಚರ್ಚಿಸಲು ಸಮಯವಕಾಶವಿಲ್ಲ.

ಸರ್ಕಾರದಿಂದ ಸಣ್ಣ ಕೈಗಾರಿಕೆಗಳಿಗೆ ಸಿಕ್ಕುವ ವಿಶೇಷ ಸೌಲಭ್ಯ, ಸವಲತ್ತುಗಳು ಒಂದು ರೀತಿಯಲ್ಲಿ ಇವುಗಳ ಪ್ರಗತಿ ಕುಂಠಿತವಾಗಲು ಕಾರಣವಾಗಿವೆ ಎಂಬ ಅಭಿಪ್ರಾಯ ಅನೇಕ ಅಧ್ಯಯನಗಳಲ್ಲಿ ಮೂಡಿಬಂದಿದೆ. ಇತ್ತೀಚಿನ ಆರ್ಥಿಕ ಹಾಗೂ ಕೈಗಾರಿಕಾ ಧೋರಣೆಗಳು, ಕಾರ್ಯದಕ್ಷತೆಯ ಮೇಲೆ ಹೆಚ್ಚು ವಿಶ್ವಾಸ, ಗಮನ, ಒತ್ತು ತಂದಿರುವುದರಿಂದ, ಸಣ್ಣ ಕೈಗಾರಿಕೆಗಳೂ ಸಹಾ ಸರ್ಕಾರದ ಸೌಲಭ್ಯ ಹಾಗೂ ಸವಲತ್ತುಗಳ ಮೇಲೆ ಅವಲಂಬಿತವಾಗದೆ, ಸ್ವಸಾಮರ್ಥ್ಯ, ಸ್ಪರ್ಧಾತ್ಮಕ ಶಕ್ತಿಗಳನ್ನು ಬೆಳೆಸಿಕೊಳ್ಳುವುದೇ ಅವುಗಳ ಪ್ರಗತಿ ಪಥವನ್ನು ನಿಶ್ಚಯಿಸುವಂತಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ರಾಜ್ಯದ ಕೈಗಾರಿಕಾಭಿವೃದ್ಧಿ ಕುರಿತು ಈವರೆಗೆ ನಡೆಸಿದ ಚರ್ಚೆಯಿಂದ ಹೊರಹೊಮ್ಮುವ ಒಂದೆರಡು ಮುಖ್ಯ ಅಂಶಗಳನ್ನು ಇಲ್ಲಿ ಮೇಲಕುಹಾಕುವುದು ಅಪ್ರಸ್ತುತವಾಗಲಾರದು: ೧) ರಾಜ್ಯದ ಕೈಗಾರೀಕರಣದ ಗತಿಯಲ್ಲಿ ಹಿನ್ನಡೆ, ೨) ಪ್ರಾದೇಶಿಕ ಅಸಮತೋಲನ. ಈ ಎರಡು ಅಂಶಗಳಿಗೆ ಹೊಣೆಯಾದ ಮುಖ್ಯ ಕಾರಣಗಳನ್ನು ವಿಶ್ಲೇಷಿಸುವುದು, ಕೈಗಾರಿಕಾ ನೀತಿ, ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ, ಸೂಕ್ತ ಮಾರ್ಪಾಡುಗಳನ್ನು ಮಾಡುವುದರಲ್ಲಿ ಸಹಕಾರಿ ಯಾಗುವುದೆಂಬುದು ಪ್ರಶ್ನಾತೀತ.

ಕೈಗಾರಿಕಾ ಹಣಕಾಸು (Industrial Finance)

೮೦ರ ದಶಕದಿಂದೀಚೆಗೆ ರಾಜ್ಯದ ಕೈಗಾರೀಕರಣದಲ್ಲಿ ಹಣಕಾಸು ಸಂಸ್ಥೆಗಳು ತೋರಿದ ಆಸಕ್ತಿ, ಹಣಕಾಸು ಸೌಲಭ್ಯ ಇತ್ಯಾದಿ ರೂಪದಗಳಲ್ಲಿ ವಹಿಸಿದ ಪಾತ್ರ ಶ್ಲಾಘನಿಯವೇ ಸರಿ. ಇವುಗಳಿಂದ ರಾಜ್ಯಕ್ಕೆ ದೊರೆತ ಹಣಕಾಸು ಸೌಲಭ್ಯ ಸುಮಾರು ರೂ. ೨೦೨ ಕೋಟಿಯಿಂದ (೧೯೮೦-೮೧) ರೂ. ೧೩೪೯ ಕೋಟಿಗೆ ಜಾಸ್ತಿಯಾದದ್ದು ಸಮಾಧಾನಕರವಾದರೂ, ರಾಜ್ಯದ ಪಾಲು ರಾಷ್ಟ್ರದ ಸರ್ವ ಹಣಕಾಸು ಸಂಸ್ಥೆಗಳ ಒಟ್ಟು ಮಂಜೂರು ಹಣ (Total Sanctions)ದಲ್ಲಿ ಉತ್ತಮಗೊಳ್ಳುವುದರ ಬದಲು ಕಡಿಮೆಯಾಯಿತೆಂಬುದನ್ನು ನಾವು ಅಲಕ್ಷಿಸುವಂತಿಲ್ಲ. ಇಷ್ಟಲ್ಲದೆ ಯಾವುದೇ ವೈಯಕ್ತಿಕ ಹಣಕಾಸು ಸಂಸ್ಥೆಯಲ್ಲೂ ರಾಜ್ಯದ ಪಾಲು ಸುಮಾರು ಶೇಕಡ ೩ ರಿಂದ ೮ ಮಾತ್ರವಿತ್ತೆಂಬುದು ರಾಜ್ಯದ ಕೈಗಾರೀಕರಣಕ್ಕೆ ಹಣಕಾಸು ಸೌಲಭ್ಯ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಲಿಲ್ಲವೆಂಬ ಅಂಶವನ್ನು ಪ್ರತಿಫಲಿಸುತ್ತದೆ. (೧೧)

ಸಂಪನ್ಮೂಲಗಳು

ಯಾವುದೇ ಪ್ರದೇಶದ ಕೈಗಾರಿಕಾಭಿವೃದ್ಧಿ, ಅದರ ವೈವಿಧ್ಯಮಯ ಸಂಪನ್ಮೂಲಗಳ ಮೇಲೆ (ಕೃಷಿ, ಖನಿಜ, ಅರಣ್ಯ, ಕಡಲು) ಅವಲಂಬಿತವಾಗುತ್ತದೆಂಬ ಮಾತು ಅರ್ಧಸತ್ಯ. ಏಕೆಂದರೆ ಪ್ರದೇಶವೊಂದರಲ್ಲಿ ಸಂಪನ್ಮೂಲಗಳು ಲಭ್ಯವಿದ್ದರೂ, ಅವುಗಳ ಆರ್ಥಿಕ ಬಳಕೆಗೆ ಬೇಕಾದ ಪೂರಕ ಸೌಲಭ್ಯಗಳು, ಸನ್ನಿವೇಶಗಳು, ಉದಾಹರಣೆಗೆ: ಸಾಧನ ಸಂಪತ್ತು, ತಂತ್ರಜ್ಞಾನ, ಉದ್ಯಮಶೀಲತೆ, ಇತ್ಯಾದಿ) ಇಲ್ಲದೆ ಹೋದರೆ ಅವು ನಿರರ್ಥಕವೆನಿಸುತ್ತವೆ. ಸಂಪನ್ಮೂಲಗಳ ಕೊರತೆಯಿಂದ ಅನೇಕ ರಾಷ್ಟ್ರಗಳು (ಮುಖ್ಯವಾಗಿ ಜಪಾನ್) ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸಿದಾಗ ಆಗಾಧವೆನಿಸುತ್ತದೆ. ಇಂತಹ ಅನುಭವಗಳು ಸಂಪನ್ಮೂಲಭರಿತವಾದ ನಮ್ಮ ರಾಜ್ಯ ಕೈಗಾರಿಕಾರಂಗದಲ್ಲಿ ಏನೆಲ್ಲಾ ಸಾಧಿಸಬಹುದೆಂಬ ಬಗ್ಗೆ ನಿರೀಕ್ಷೆಗಳನ್ನು ಹುಟ್ಟಿಸುತ್ತದೆ. ಇದರಿಂದಾಗಿ ಇಲ್ಲಿಯ ಸಂಪನ್ಮೂಲಗಳನ್ನು ಕೈಗಾರಿಕಾಭಿವೃದ್ಧಿಗಾಗಿ ಬಳಸಿಕೊಳ್ಳಬೇಕಾದ ವ್ಯವಸ್ಥೆಯನ್ನು ಪೂರೈಸುವಲ್ಲಿ ರಾಜ್ಯದ ಮೇಲೆ ಗುರುತರ ಹೊಣೆಯಿದೆ ಎಂಬುದು ನಿರ್ವಿವಾದ.

ಸಂಪನ್ಮೂಲ ಕೈಗಾರಿಕೆಗಳ (agro-based, forest-based, mineral based ಇತ್ಯಾದಿ) ಜಿಲ್ಲಾವಾರು ವಿಶ್ಲೇಷಣೆಯಿಂದ ಕೈಗಾರಿಕಾಭಿವೃದ್ಧಿಯಲ್ಲಿ ಅಸಮಾನತೆ, ಅಸಮತೋಲನವಿರುವುದನ್ನು ಸಂಶೋಧನಾ ವರದಿಯೊಂದರಲ್ಲಿ ಕಾಣಬಹುದು (೧೨). ಅಲ್ಲದೆ ಇವು ಹೆಚ್ಚಾಗಿ ಪ್ರಾಥಮಿಕ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗಿದ್ದು, ತರುವಾಯದ ಸಂಸ್ಕರಣೆಗೆ ವಿಶೇಷ ಗಮನ ಕೊಡದಿರುವುದರಿಂದ ಮೌಲ್ಯವೃದ್ಧಿ ಚಟುವಟಿಕೆಗಳು ಇನ್ನೂ ಹೆಚ್ಚು ಮಹತ್ವ ಹಾಗೂ ಬಲ ಪಡೆಯಬೇಕಾಗಿದೆ.

ಸಾಧನ ಸಂಪತ್ತು (Infrastructure)

ಕೈಗಾರೀಕರಣದಲ್ಲಿ ಸಾಧನ ಸಂಪತ್ತುಗಳ ಪಾತ್ರ ಬಹು ಮಹತ್ವದ್ದೆಂಬುದು ನಿರ್ವಿವಾದ. ಈ ಪದದಡಿಯಲ್ಲಿ ಸಾರಿಗೆ (ರೈಲು, ರಸ್ತೆ, ಜಲ), ಅಂಚೆ, ದೂರ ಸಂಪರ್ಕ, ಇಂಧನ, ಇತ್ಯಾದಿ ಸೌಲಭ್ಯಗಳ ಸರಪಳಿಯೇ ಇದೆ ಎಂಬುದನ್ನು ನೆನಪಿಸಿಕೊಳ್ಳಬಹುದು. ಈ ವೈಯಕ್ತಿಕ ಸೌಲಭ್ಯಗಳನ್ನು Principal Component analysis ಎಂಬ ಸಂಖ್ಯಾ ಶಾಸ್ತ್ರದ ತಂತ್ರ (Technique)ದ ಮೂಲಕ ಒಂದುಗೂಡಿಸಿ, ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾಧನ ಸಂಪತ್ತಿನ ಸೂಚ್ಯಂಕವನ್ನು ಕಂಡುಹಿಡಿಯಲಾಯಿತು. ಈ ಮಾಹಿತಿಯನ್ನು ಕೋಷ್ಟಕ ೪ ರಲ್ಲಿ ಕೊಡಲಾಗಿದೆ.

ಈ ಸೂಚ್ಯಂಕಗಳು ಒಂದುಕಡೆ ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರೆದ ಬೆಂಗಳೂರು, ಮೈಸೂರು, ಧಾರವಾಡ, ದಕ್ಷಿಣ ಕನ್ನಡ, ಬೆಳಗಾವಿಗಳಲ್ಲಿರುವ ಮಟ್ಟ ಮತ್ತು ಇನ್ನೊಂದು ಕಡೆ ಉಳಿದ ಜಿಲ್ಲೆಗಳಲ್ಲಿರುವ ಮಟ್ಟ ಎಷ್ಟೊಂದು ಭಿನ್ನವಾಗಿವೆ ಎಂಬ ಕಟುಸತ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸುವುದರ ಜೊತೆಗೆ ತೀವ್ರ ಕಳವಳವನ್ನುಂಟು ಮಾಡುತ್ತವೆ. ಈ ಪ್ರದೇಶಿಕ ಅಸಮಾನತೆ ಹಾಗೂ ಅಂತರ ೧೯೭೬ರಿಂದಲೂ ಮುಂದುವರೆಯುತ್ತಿದೆ ಎಂಬುದು ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸು‌ತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪುಟಕೊಡುವುದು ತಮ್ಮ ನಿಲುವೆಂದು ಆಗಾಗ್ಗೆ ಘೋಷಿಸುತ್ತಿದ್ದರೂ, ಅದಕ್ಕೆ ಸಹಾಯಕವಾಗುವಂತೆ ಈ ಪ್ರದೇಶಗಳ (Infrastructure) ಅಭಿವೃದ್ಧಿ ಸಾಕಷ್ಟು ಪ್ರಮಾಣದಲ್ಲಿ ಆಗದಿರುವುದರಿಂದ ಇವು ಬರೀ ಘೋಷಣೆಗಳಾಗಿಯೇ ಉಳಿದಿವೆ ಎನ್ನಿಸುತ್ತದೆ.

ಸರ್ಕಾರದ ನೀತಿ (Government Policy)

ಪ್ರದೇಶ-ಪ್ರದೇಶಗಳ ಮಧ್ಯೆ ಇರುವ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕುವ ಉನ್ನತ ಗುರಿ ನಮ್ಮ ಯೋಜನೆಯಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಲ್ಪಟ್ಟಿರುವುದು ಸರಿಯಷ್ಟೆ. ಈ ಗುರಿ ಸಾಧನೆಗಾಗಿ ಸರ್ಕಾರ (ಕೇಂದ್ರ ಹಾಗೂ ರಾಜ್ಯಗಳೆರಡೂ) ಹಾಕಿಕೊಂಡ ಅನೇಕ ಕಾರ್ಯ ಯೋಜನೆಗಳಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇಂಬು ಕೊಡುವುದೂ ಒಂದು. ಆ ದೃಷ್ಟಿಯಿಂದ (೧) ಬೇರೆ ಬೇರೆ ಪ್ರದೇಶಗಳನ್ನು ಅವುಗಳ ಅಭಿವೃದ್ಧಿಯ ಹಂತದ ಮೇಲೆ ವಲಯಗಳಾಗಿ ವಿಂಗಡಿಸಿ, ಅವುಗಳೀಗೆ ಪ್ರತ್ಯೇಕವಾದ ವಿಶೇಷ ಸೌಲಭ್ಯ-ಸವಲತ್ತುಗಳನ್ನು ಕೊಟ್ಟಿರುವುದು, (೨) ಕೈಗಾರಿಕಾರಹಿತ ಜಿಲ್ಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಅನುವು ಮಾಡಿಕೊಟ್ಟಿರುವುದು, (೩) ಬೆಳವಣಿಗೆ ಕೇಂದ್ರ (Growth Centres)ಗಳನ್ನು ಸ್ಥಾಪಿಸಿರುವುದನ್ನು ಉದಾಹರಿಸಬಹುದು. ಆದರೂ ರಾಜ್ಯ ಸರ್ಕಾರದ ನೀತಿ ನಿಯಮಗಳು – ಅದರಲ್ಲೂ ತೆರಿಗೆ ಕ್ಷೇತ್ರದಲ್ಲಿ (Tax Regime) ಕೈಗಾರಿಕಾಭಿವೃದ್ಧಿ ಕುಂಠಿತವಾಗಲು ಕಾರಣವಾಯಿತೆಂಬ ಅಭಿಪ್ರಾಯ, ಟೀಕೆಗಳಲ್ಲಿ ಸಾಕಷ್ಟು ಸತ್ಯವಿದೆ ಎಂಬುದನ್ನು ಒಪ್ಪಲೇ ಬೇಕು. Turnover Tax, Entry Tax (ನಿಯಮಿತ ಆದರೆ ಪ್ರಮುಖ ಅತ್ಯವಶ್ಯ ಸಾಮಗ್ರಿಗಳ ಮೇಲೆ) ಬಹಳಷ್ಟು ಸಾಮಗ್ರಿಗಳ ಮೇಲೆ ಅತಿಹೆಚ್ಚಿನ ಮಾರಾಟಕರ, ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಹೂಡಿದ ಬಂಡವಾಳಕ್ಕೆ ಸಿಗುತ್ತಿದ್ದ ಸಹಾಯಧನ ಹಾಗೂ ಮಾರಾಟ ತೆರಿಗೆ ಮೇಲಿನ ಸೌಲಭ್ಯಗಳನ್ನು ಹಿಂತೆಗೆದುಕೊಂಡದ್ದು ರಾಜ್ಯದ ಕೈಗಾರಿಕಾಭಿವೃದ್ಧಿಗೆ ಮಾರಕವಾಗಿವೆಯೆನ್ನಬಹುದು.ಅಲ್ಲದೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಗೊತ್ತುಪಡಿಸಿದ ಅನೇಕ ತೆರಿಗೆ ಸೌಲಭ್ಯ, ಸವಲತ್ತುಗಳನ್ನು ಜಾರಿಗೊಳಿಸುವುದರಲ್ಲಿ ರಾಜ್ಯ ಸರ್ಕಾರದ ವಿಫಲತೆ ಕೈಗಾರಿಕಾಭಿವೃದ್ಧಿಗೆ ಹಿತಕರವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಬಾಧಕವಾಗಿವೆ. ಮುಂಬರುವ ವರ್ಷಗಳಲ್ಲಿ ಸರ್ಕಾರದ ಕೈಗಾರಿಕಾ ನೀತಿ ಉದಾರೀಕರಣ (Liberalisation) ಮತ್ತು ಖಾಸಗೀಕರಣ (Privatisation)ಕ್ಕೆ ಒತ್ತು ಕೊಡುವುದಷ್ಟಕ್ಕೇ ಸಮಾಧಾನಗೊಳ್ಳದೇ, ಪ್ರಾಶಸ್ತ್ಯ (Priority)ಗಳನ್ನು ರೂಪಿಸಿಕೊಳ್ಳುವುದರಲ್ಲಿ, ಅವುಗಳನ್ನು ಕಾರ್ಯಾಚರಣೆಗೆ ತರಲು ಬೇಕಾದ ಅನುಕೂಲಕರ ವಾತಾವರಣ, ಸಾಂಸ್ಥಿಕ ಸುಧಾರಣೆಗಳು/ ಏರ್ಪಾಡುಗಳು,

ಕೋಷ್ಟಕ ೧. ಕರ್ನಾಟಕದಲ್ಲಿ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು : ೧೯೯೫ ಮಾರ್ಚ್

ಜಿಲ್ಲೆ ಘಟಕಗಳು (ಸಂಖ್ಯೆ) ಹೂಡಿದ ಬಂಡವಾಳ (ರೂ ಲಕ್ಷಗಳಲ್ಲಿ) ಉದ್ಯೋಗ (ಸಂಖ್ಯೆ) ತಲಾ ಘಟಕ ಹೂಡಿದ ಬಂಡವಾಳ (ರೂ.ಲಕ್ಷಗಳಲ್ಲಿ) ಶ್ರೇಣಿ ತಲಾ ಘಟಕ ಉದ್ಯೋಗ (ಸಂಖ್ಯೆ) ಶ್ರೇಣಿ
ಬೆಂಗಳೂರು ೩೩೭ ೧೨೯೧೫೮.೧೫ ೧೨೪೧೯೨        
(೪೫.೧೭) (೨೦.೫೧) (೪೪.೩೨) ೩೮೩.೨೬ ೧೫ ೩೬೮ ೧೧
ಬೆಳಗಾವಿ ೩೦ ೨೧೮೮೫.೩೨ ೧೬೯೬೦        
(೪.೦೨) (೩.೪೭) (೬.೦೫) ೭೨೯.೫೧ ೫೬೫
ಬಳ್ಳಾರಿ ೨೧ ೧೯೩೩೩.೫೮ ೮೪೨೧        
(೨.೮೨) (೩.೦೭) (೩.೦೦) ೨೯೨.೫ ೧೭ ೧೫೯ ೧೭
ಬೀದರ್ ೧೭ ೪೯೭೨.೪೫ ೨೬೯೭        
(೨.೨೮) (೦.೭೯) (೦.೯೬) ೪೫೧.೯೨ ೧೩ ೪೭೦
ಬಿಜಾಪುರ ೧೦ ೧೫೪೫೧೯.೨೩ ೪೬೯೭        
(೧.೩೪) (೦.೭೩) (೧.೬೮) ೨೬೦೫.೫೦ ೧೨೪ ೧೯
ಚಿತ್ರದುರ್ಗ ೨೬ ೨೩೪೬.೪೯ ೩೨೧೧        
(೩.೪೮) (೧೦.೭೬) (೧.೧೬) ೪೬೯.೩ ೧೨ ೫೨೮
ಚಿಕ್ಕಮಗಳೂರು ೬೭೭೪೩.೨೪ ೨೬೩೮        
(೦.೬೭) (೦.೩೭) (೦.೯೪) ೭೦೨.೭೬ ೧೦ ೨೦೯ ೧೪
ದಕ್ಷಿಣ ಕನ್ನಡ ೩೪ ೨೩೮೯೩.೬೯ ೭೧೦೬        
(೪.೫೬) (೩.೭೯) (೨.೫೪) ೨೩೫.೫೮ ೧೮ ೧೫೩ ೧೮
ಧಾರವಾಡ ೬೮ ೧೬೦೧೯.೨೭ ೧೦೩೮೦        
(೯.೧೧) (೨.೫೪) (೩.೭೦) ೧೩೮೨೧.೬೩ ೭೫೧
ಗುಲ್ಬರ್ಗಾ ೧೪ ೧೯೩೫೦೨.೯೦ ೧೦೫೦೮        
(೧.೮೮) (೩೦.೭೨) (೩.೭೫) ೨೯೯.೫೨ ೧೬ ೨೦೫ ೧೫
ಹಾಸನ ೧೪೯೭.೬೧ ೧೦೨೭        
(೦.೬೭) (೦.೨೪) (೦.೩೭) ೮೭.೦೦ ೧೯ ೧೮೮ ೧೬
ಕೊಡಗು ೧೭೪.೦೦ ೩೭೫        
(೦.೨೭) (೦.೦೪) (೦.೧೩) ೧೦೮೨.೬೦ ೨೧೨೫
ಕೋಲಾರ ೧೩ ೧೪೦೭೩.೮೨ ೨೭೬೩೦        
(೧.೭೪) (೨.೨೩) (೯.೮೬) ೭೩೦.೦೫ ೫೫೭
ಮಂಡ್ಯ ೬೫೭೦.೪೫ ೫೦೧೫        
(೧.೨೧) (೧.೦೪) (೧.೭೯) ೩೯೧.೩೯ ೧೪ ೨೨೮ ೧೩
ಮೈಸೂರು ೮೮ ೩೪೪೪೨.೦೮ ೨೦೦೨೦        
(೧೧.೮೦) (೫.೪೭) (೭.೧೪) ೧೨೮೦.೧೩ ೪೩೫
ರಾಯಚೂರು ೨೨ ೨೮೧೬೨.೮೬ ೯೫೭೬        
(೨.೯೫) (೪.೪೭) (೩.೪೨) ೨೬೨೨.೦೪ ೯೯೧
ಶಿವಮೊಗ್ಗ ೧೫ ೩೯೩೩೦.೬೩ ೧೪೮೬೪        
(೨.೦೧) (೬.೨೪) (೫.೩೦) ೨೬೨೨.೦೪ ೯೯೧
ತುಮಕೂರು ೧೯ ೧೦೬೧೨.೦೭ ೫೧೯೯೦        
(೨.೫೫) (೧.೬೮) (೧.೮೬) ೫೫೮.೫೩ ೧೧ ೨೭೪ ೧೨
ಉತ್ತರ ಕನ್ನಡ ೧೧ ೧೧೫೬೪.೫೮ ೫೬.೮೯        
(೧.೪೭) (೧.೮೪) (೨.೦೩) ೧೦೫೧.೩೩ ೫೧೭
ಕರ್ನಾಟಕ ೭೪೬ ೬೨೯೮೦೨.೪೨ ೨೮೦೨೦೫        
(೧೦೦.೦೦) (೧೦೦.೦೦) (೧೦೦.೦೦)        

ಟಿಪ್ಪಣಿ: ಕಂಸದಲ್ಲಿರುವ ಅಂಕಿಗಳು ರಾಜ್ಯದ ಒಟ್ಟು ಅಂಕಿಗಳ ಶೇಕಡಾವಾರು

ಆಧಾರ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಕೋಷ್ಟಕ ೨: ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ೧೯೯೫ ಮಾರ್ಚ್

ಜಿಲ್ಲೆಯ ಹೆಸರು ಘಟಕಗಳು (ಸಂಖ್ಯೆ) ಹೂಡಿದ ಬಂಡವಾಳ (ರೂ.ಲಕ್ಷಗಳಲ್ಲಿ) ಉದ್ಯೋಗ (ಸಂಖ್ಯೆ) ತಲಾ ಘಟಕ ಹೂಡಿದ ಬಂಡವಾಳ ಶ್ರೇಣಿ ತಲಾ ಘಟಕ ಉದ್ಯೋಗ ಪ್ರಮಾಣ (ರೂ.ಗಳಲ್ಲಿ)
ಬೆಂಗಳೂರು (ಗ್ರಾಮಾಂತರ) ೬೪೮೯ ೫೬೪೪.೮೨ ೩೩೭೦೪ ೮೬೯೯೦.೬೦ ೧೬
ಬೆಂಗಳೂರು (ನಗರ) ೩೨೫೩೮ ೫೪೪೯೨.೯೫ ೨೮೮೬೫೬ ೧೬೭೪೭೪.೮೦
ಬೆಳಗಾವೊ ೧೪೧೬೮ ೧೩೦೨೪.೮೭ ೬೩೧೧೮ ೯೧೯೩೧.೬೧ ೧೩
ಬಳ್ಳಾರಿ ೬೩೦೦ ೪೪೨೮.೯೮ ೩೦೧೧೮ ೭೦೩೦೧.೨೭ ೧೯
ಬೀದರ್ ೩೫೭೮ ೫೨೪೨.೩೪ ೨೧೪೫೧ ೧೪೬೫೧೬.೯೩
ಬಿಜಾಪುರ್ ೬೦೩೩ ೪೫೩೫.೭೬ ೩೪೫೯೭ ೭೫೧೮೨.೫೦ ೧೮
ಚಿತ್ರದುರ್ಗ ೫೯೮೮ ೮೫೬೦.೧೫ ೩೩೨೭೫ ೧೪೨೯೭೭.೬೨
ಚಿಕ್ಕಮಗಳೂರು ೨೯೨೧ ೨೨೮೭.೬೧ ೧೩೨೮೭ ೭೮೩೧೫.೯೯ ೧೬
ದಕ್ಷಿಣ ಕನ್ನಡ ೧೧೧೧೫ ೨೦೪೦೪.೧೫ ೭೩೯೦೩ ೧೮೩೫೭೩.೧೦
ಧಾರವಾಡ ೧೩೯೪೦ ೧೩೭೭೦.೪೧ ೧೨೧೦೯೩ ೯೮೭೦೩.೪೩ ೧೦
ಗುಲ್ಬರ್ಗಾ ೫೨೪೦ ೪೭೧೧.೬೬ ೨೯೩೦೪ ೮೯೯೧೭.೧೭ ೧೪
ಹಾಸನ ೩೫೫೪ ೩೧೬೬.೯೨ ೧೮೧೪೩ ೮೯೧೦೮.೬೧ ೧೫
ಕೋಲಾರ ೫೮೯೫ ೮೦೩೨.೯೫ ೪೨೪೪೦ ೧೩೬೨೬೭.೧೮
ಕೊಡಗು ೧೭೩೩ ೧೭೫೯.೮೧ ೧೬೧೪೫ ೧೦೧೫೪೭.೦೩
ಮಂಡ್ಯ ೩೫೯೦ ೩೩೬೩.೪೦ ೧೯೪೪೮ ೯೩೬೮೮.೦೨ ೧೨
ಮೈಸೂರು ೧೪೦೬೦ ೧೦೬೨೦.೫೯ ೮೦೮೮೮ ೭೫೫೩೭.೬೨ ೧೭
ರಾಯಚೂರು ೫೩೨೭ ೭೭೬೨.೭೭ ೩೯೫೪೨ ೧೪೫೭೨೪.೯೯
ಶಿವಮೊಗ್ಗ ೭೯೨೬ ೭೫೧೩.೭೧ ೩೫೬೯೫ ೯೪೭೯೮.೨೬ ೧೧
ತುಮಕೂರು ೧೦೧೫೨ ೧೧೦೨೪.೫೯ ೫೯೯೭೧ ೧೦೮೫೯೫.೨೫
ಉತ್ತರ ಕನ್ನಡ ೨೯೭೭ ೩೨೪೮.೩೪ ೨೧೧೯೪ ೧೦೯೧೧೪.೫೪
ಕರ್ನಾಟಕ ೧,೬೩,೫೨೪ ೧,೯೩,೫೯೬.೭೮ ೧೦,೭೫,೯೭೨ ೧೧೮೩೯೦.೪೪

ಆಧಾರ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು

ಕೋಷ್ಟಕ ೩ : ಕರ್ನಾಟಕದ ಗ್ರಾಮೀಣ ಕೈಗಾರಿಕೆಗಳ ಸಂರಚನೆ

ಉತ್ಪಾದನೆ ಮತ್ತು ರಿಪೇರಿ ವಲಯ ಘಟಕಗಳು (ಸಂಖ್ಯೆ) ಉದ್ಯೋಗ(ಸಂಖ್ಯೆ) ಉತ್ಪಾದನೆ ಮತ್ತು ರಿಪೇರಿ ವಲಯ ಘಟಕಗಳು (ಸಂಖ್ಯೆ) ಉದ್ಯೋಗ (ಸಂಖ್ಯೆ)
ನೋಂದಾಯಿತ ಕಾರ್ಖಾನೆಗಳು ೧೪೬೩ ೫೩೩೮೦೨ ಸ್ಥಾಪಿತ ಘಟಕಗಳು ೪೫೯೯೧ ೩೩೧೧೪೬
(೧.೩ %) (೨೩.೪%) (೧೭.೦%) (೪೫.೦%)
ನೋಂದಾಯಿಸದ ೨೮೦೭೧ ೫೩೮೫೯ ಸ್ವಯಂ ಖಾತಾ ೨೪೧೧೪೨ ೧೦೯೯೯೪೯
ಕಾರ್ಖಾನೆಗಳು (೨೪.೯%) (೨೦.೫%) ಉದ್ದಿಮೆಗಳು (೮೩.೦%) (೫೫.೦%)
ಗೃಹಾವಲಂಬಿ ಕೈಗಾರಿಕೆಗಳು ೮೩೩೯೧ ೧೫೫೬೨೭      
(೭೩.೮%) (೫೯.೧%)      
ಒಟ್ಟು ೧೧೨೯೨೫ ೨೬೩೨೯೫ ಒಟ್ಟು ೨೮೭೧೩೩ ೭೪೧೦೯೫
(೧೦೦%) (೧೦೦%) (೧೦೦%) (೧೦೦%)

ಆಧಾರ : ಆರ್ಥಿಕ ಗಣತಿ, ಕರ್ನಾಟಕ ೧೯೮೦

ಕೋಷ್ಟಕ ೪: ಕರ್ನಾಟಕದಲ್ಲಿ ಸಾಧನ ಸಂಪತ್ತಿನ
ಅಭಿವೃದ್ಧಿಯ ಸೂಚ್ಯಂಕ – ಜಿಲ್ಲಾವಾರು

ಜಿಲ್ಲೆಗಳು ಸೂಚ್ಯಂಕ (೧೯೭೬) ಶ್ರೇಣಿ ಸೂಚ್ಯಂಕ (೧೯೯೧) ಶ್ರೇಣಿ
ಬೆಂಗಳೂರು ೪೪೮೧೨ ೩೩೧೪೦
ಬೆಳಗಾವಿ ೮೧೪೩ ೬೮೬೦
ಬಳ್ಳಾರಿ ೩೩೩೮ ೨೬೧೬ ೧೨
ಬೀದರ್ ೧೦೦೦ ೧೯ ೧೩೦೬ ೧೯
ಬಿಜಾಪುರ ೪೬೮೬ ೩೧೮೬
ಚಿಕ್ಕಮಗಳೂರು ೨೨೯೨ ೧೭ ೨೩೧೦ ೧೫
ಚಿತ್ರದುರ್ಗ ೩೮೦೨ ೩೩೮೪
ಧಾರವಾಡ ೭೨೯೧ ೬೦೪೫
ದಕ್ಷಿಣ ಕನ್ನಡ ೯೪೬೦ ೧೦೨೨೬
ಗುಲ್ಬರ್ಗಾ ೨೫೩೩ ೧೧ ೨೬೬೦ ೧೦
ಹಾಸನ ೨೪೧೬ ೧೬ ೨೫೦೨ ೧೪
ಕೊಡಗು ೧೪೭೧ ೧೮ ೧೭೪೮ ೧೮
ಕೋಲಾರ ೨೫೦೯ ೧೩ ೨೬೫೯ ೧೧
ಮಂಡ್ಯ ೨೫೧೯ ೧೨ ೨೦೮೧ ೧೬
ಮೈಸೂರು ೬೩೯೧ ೬೧೫೧
ರಾಯಚೂರು ೨೪೭೧ ೧೫ ೨೦೫೮ ೧೭
ಶಿವಮೊಗ್ಗ ೩೨೮೭ ೩೨೦೨
ತುಮಕೂರು ೨೫೬೦ ೧೦ ೨೫೩೧ ೧೩
ಉತ್ತರ ಕನ್ನಡ ೨೪೮೦ ೧೪ ೨೬೬೮

ಆಧಾರ: ಕರ್ನಾಟಕದಲ್ಲಿ ಕೈಗಾರಿಕಾ ಸಾಮರ್ಥ್ಯ, ಐ.ಎಸ್.ಇ.ಸಿ. (ಮಿ.ಮಿ.ಯೊ) ಪುಟ ಸಂಖ್ಯೆ, ೧೯೩.

ಪ್ರಗತಿಪರ ತೆರಿಗೆನೀತಿ, ನಿಗದಿತ ವೇಳಾಪಟ್ಟಿಯನ್ನು ಹಾಕಿಕೊಂಡು ಸಾಧನ ಸಂಪತ್ತುಗಳ ಅಭಿವೃದ್ಧಿ ಮುಂತಾದ ಅಂಶಗಳ ಕಡೆ ತೀವ್ರ ಗಮನ ಹರಿಸಬೇಕಾಗಿದೆ. ರಾಜ್ಯದ ಎಲ್ಲಾ ಭಾಗಗಳನ್ನೂ ಕೈಗಾರಿಕಾ ದೃಷ್ಟಿಯಿಂದ ಒಂದೇ ರೀತಿಯಲ್ಲಿ, ಉಸಿರಿನಲ್ಲಿ ಅಭಿವೃದ್ಧಿಗೊಳಿಸುವುದು ಅಸಂಭವವಾಗಿರುವುದರಿಂದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಕೈಗಾರಿಕಾ ಸಾಮರ್ಥ್ಯ ಹೊಂದಿರುವ ‘ಗೊಂಚಲು ಸ್ಥಲ’ (clusters)ಗಳನ್ನು ಗುರುತಿಸಿ ಇವುಗಳ ಕೈಗಾರಿಕಾಭಿವೃದ್ಧಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಡುವುದು ಬಹು ಮುಖ್ಯ. ಈ ರೀತಿಯ ಕಾರ್ಯಯೋಜನೆ ರಾಜ್ಯದ ಎಂಟನೆಯ ಪಂಚವಾರ್ಷಿಕ ಯೋಜನೆ (ಕರಡು)ಯಲ್ಲಿ ಮೂಡಿ ಬಂದಿರುವುದು ಸಂತೋಷದ ಸಂಗತಿ.

ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕಿಂತ, ಕೈಗಾರೀಕರಣದ ಕಾರ್ಯ ವಿಧಾನ (Process)ಕ್ಕೆ ಗಮನ ಹರಿಸುವುದು ಮುಖ್ಯ. ಈ ಕಾರ್ಯ ವಿಧಾನದ ವ್ಯಾಪ್ತಿ ಅನೇಕ ವಿಷಯಗಳಿಗೆ, ಕ್ಷೇತ್ರಗಳಿಗೆ ವಿಸ್ತರಿಸುತ್ತದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಉದಾಹರಣೆಗೆ ಸಾಂಸ್ಥಿಕ ಮಾರ್ಪಾಡುಗಳು, ಸುಧಾರಣೆಗಳು, ತಂತ್ರಜ್ಞಾನ ಇತ್ಯಾದಿ ಕೈಗಾರೀಕರಣಕ್ಕೆ ಸಹಾಯಕವಾದ ಪೂರ್ವಭಾವೀ ಕ್ರಮಗಳನ್ನು ದಕ್ಷತೆಯಿಂದ ನಿರ್ವಹಿಸಿದರೆ, ಕೈಗಾರಿಕಾಭಿವೃದ್ಧಿಯ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ. ಹಲವಾರು ಪ್ರಾಮುಖ್ಯ ಕೈಗಾರಿಕೆ (Thurst sectors)ಗಳನ್ನು ಗುರುತಿಸಿ ಕೈಗಾರಿಕಾಭಿವೃದ್ಧಿಗೆ ಅನುವು ಮಾಡಿಕೊಡುವುದರಲ್ಲಿ ರಾಜ್ಯ ವಹಿಸಿದ ಪಾತ್ರ ಶ್ಲಾಘನೀಯವಾದದ್ದು. ಎಂಜಿನಿಯರಿಂಗ್, ಟೆಲಿಕಮ್ಯೂನಿಕೇಶನ್ಸ್, ಮತ್ತಷ್ಟು ಪ್ರಾಮುಖ್ಯತೆ ಪಡೆಯುವುದರಲ್ಲಿ ಸಂದೇಹವಿಲ್ಲ. ಇದಲ್ಲದೆ ಇನ್ನೂ ವೈವಿಧ್ಯಮಯ ಕೈಗಾರಿಕಾ ಉತ್ಪಾದನೆಗೆ ವಿಶೇಷ ಪ್ರಯತ್ನ ನಡೆಯಬೇಕಾಗಿದೆ. ಇವುಗಳಲ್ಲಿ ಹಣ್ಣು ಮತ್ತು ತರಕಾರಿಗಳಿಗೆ ಸಂಬಂಧಿಸಿದ ಕೈಗಾರಿಕೆಗಳು. ರೇಷ್ಮೆ, ಪೋಷಾಕು ವಸ್ತುಗಳು, ಚರ್ಮ, ಮೂಲ ರಾಸಾಯನಿಕ ತಯಾರಿಕೆಗಳು ಇತ್ಯಾದಿ ಕೈಗಾರಿಕೆಗಳನ್ನು ಹೆಸರಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕೈಗಾರಿಕೆಗಳ ಮೌಲ್ಯಾಭಿವೃದ್ಧಿಯ ಚಟುವಟಿಕೆಗಳ ಬಗ್ಗೆ ಹೆಚ್ಚಾದ ಗಮನ ಕೊಡಬೇಕು. ಒಟ್ಟಿನಲ್ಲಿ ಕೈಗಾರಿಕಾಭಿವೃದ್ಧಿಗೆ ರಾಜ್ಯದಲ್ಲಿ ಹಲವು ಹತ್ತಾರು ಅವಕಾಶಗಳು, ಸಾಧ್ಯತೆಗಳು ಇದ್ದರೂ ಅದರ ಸಾಕ್ಷಾತ್ಕಾರವು ಕೈಗಾರೀಕರಣದ ಮಾರ್ಗದಲ್ಲಿರುವ ಅನೇಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದರ ಮೇಲೆ ಅವಲಂಬಿಸಿದೆ. ಅಲ್ಲದೆ ಈಗಿನ ಹೊಸ ಆರ್ಥಿಕ ಕೈಗಾರಿಕಾ ನೀತಿಯ ಕಾರಣಗಳಿಂದಾಗಿ ಕೈಗಾರಿಕೆಗಳು ತಮ್ಮ ಕಾರ್ಯಕ್ಷಮತೆ ಸ್ಪರ್ಧಾತ್ಮಕ ಮನೋಭಾವವನ್ನು  ಬೆಳೆಸಿಕೊಳ್ಳುವುದರ ಮೇಲೆ ಅವಲಂಬಿಸಿದೆ.

ಅಡಿಟಿಪ್ಪಣಿ ಮತ್ತು ಆಕರ ಗ್ರಂಥಗಳು

೧. ಕರ್ನಾಟಕದಲ್ಲಿ ಕೈಗಾರಿಕಾ ಸಾಮರ್ಥ್ಯ, ಐ.ಎಸ್.ಇ.ಸಿ. (ಮಿ.ಮಿ.ಯೊ), ಪುಟ ಸಂಖ್ಯೆ ೩.

೨. ಎಂಟನೇ ಪಂಚವಾರ್ಷಿಕ ಯೋಜನೆಗಳು ಕರಡು ಪ್ರತಿ, ಕರ್ನಾಟಕ ಸರ್ಕಾರ.

೩. ಆರ್ಥಿಕ ಸಮೀಕ್ಷೆ, ಕರ್ನಾಟಕ ಸರ್ಕಾರ, ಮಾರ್ಚ್ ೧೯೯೫.

೪. ಅದೇ ಗ್ರಂಥದ ಕೋಷ್ಟಕ ೫.೨, ಪುಟ -೧೨೩.

೫. ಅಂಡ್ಯ್ರೂಷನ್ ಡೆನ್ನಿಸ್: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಣ್ಣ ಕೈಗಾರಿಕೆಗಳು: ಒಂದು ವಿಚಾರ, ವಿಶ್ವಬ್ಯಾಂಕ್, ಸಮೂಹಕಾರ್ಯ ಪತ್ರಿಕೆ ನಂ. ೫೧೮, ವಾಷಿಂಗ್ಟನ್ – ೧೯೮೨.

೬. ಆರ್ಥಿಕ ಸಮೀಕ್ಷೆ, ಮಾರ್ಚ್, ೧೯೯೫, ಕರ್ನಾಟಕ ಸರ್ಕಾರ, ಪುಟ – ೫೨.

೭. ಅದೇ ಗ್ರಂಥ, ಪುಟ – ೫೬.

೮. ಎಂ.ಹೆಚ್.ಬಾಲಸುಬ್ರಹ್ಮಣ್ಯ: ಕರ್ನಾಟಕದಲ್ಲಿ ಗ್ರಾಮೀಣ ಕೈಗಾರಿಕೆಗಳು: ರಚನೆ ಹಾಗೂ ಬೆಳವಣಿಗೆ, “ಮಾಜಿನ್”, ಜನವರಿ-ಮಾರ್ಚ್, ೧೯೮೯.

೯. ಕರ್ನಾಟಕದಲ್ಲಿ ಕೈಗಾರಿಕಾ ಸಾಮರ್ಥ್ಯ – ಐ.ಎಸ್.ಇ.ಸಿ. – ಪುಟ ೧೪-೧೫.

೧೦. ಭಾರತದಲ್ಲಿ ಗ್ರಾಮೀಣ ಕೈಗಾರೀಕರಣ: ಭಾರತದ ಸಣ್ಣ ಕೈಗಾರಿಕಾ ಸಾಪೇಕ್ಷ ಉತ್ಪಾದನಾ ದಕ್ಷತೆ. ಬಿ.ಪಿ. ವಾಣಿಯವರು ಮಾಡಿರುವ ಅಧ್ಯಯನದ ಸಂವಾದದಲ್ಲಿರುವಂತೆ. ಐ.ಎಸ್.ಇ.ಸಿ. (ಮಿ.ಮಿ.ಯೊ), ಬೆಂಗಳೂರು.

೧೧. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೈಗಾರಿಕಾ ಸಾಮರ್ಥ್ಯ – ಅಧ್ಯಾಯ ೩ರಲ್ಲಿ ಸವಿಸ್ತಾರವಾದ ಮಾಹಿತಿ ನೋಡಬಹುದು.

೧೨. ಅದೇ ಗ್ರಂಥದ ನಾಲ್ಕನೇ ಅಧ್ಯಾಯ ಗಮನಿಸಿ.