೧. ಪರಿಚಯ

ಅಭಿವೃದ್ಧಿ, ವಿತರಣೆ ಮತ್ತು ಸ್ಥಿರತೆಯಂತಹ ಆರ್ಥಿಕತೆಯ ಪ್ರಕ್ರಿಯೆಯಲ್ಲಿ ರಾಜ್ಯದ ಹಣಕಾಸು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಗಳ ಹಂಚಿಕೆಯ ಹಿನ್ನೆಲೆಯಲ್ಲಿ ಸಹ ರಾಜ್ಯ ಹಣಕಾಸು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಭಾರತದಲ್ಲಿ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿಯು ರಾಜ್ಯ ಸರ್ಕಾರದ್ದಾಗಿದೆ. ಈ ಸುಧಾರಣೆಯು ಶಿಕ್ಷಣ, ಕೃಷಿ, ಕೈಗಾರಿಕೆ ಆರೋಗ್ಯ ಇತ್ಯಾದಿಗಳಾಗಿವೆ.  ಜವಾಬ್ದಾರಿಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತವೆ; ಈ ಮೂಲಗಳು ತೆರಿಗೆ ಮತ್ತು ತೆರಿಗೆಯೇತರ, ಸಾಲ ಪಡೆಯುವುದು, ಹಾಗೆಯೇ ಅದನ್ನು ಸಾಮಾಜಿಕ ಹಾಗೂ ಆರ್ಥಿಕ, ಸಮುದಾಯ ಅಭಿವೃದ್ಧಿ ಹಾಗೂ ಆರ್ಥಿಕ ಸೇವೆಗಳ ಮೇಲೆ ಖರ್ಚು ಮಾಡುವುದು – ಈ ವಿಷಯಗಳ ಮೇಲೆ ಸರ್ಕಾರಿ ವೆಚ್ಚದಲ್ಲಿ ಒಂದು ವೇಗವಾದ ಹೆಚ್ಚಳವಿದೆ. ಇದು ಆಧುನಿಕ ಸರ್ಕಾರಗಳು ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವುದು ಹೆಚ್ಚಳವಾಗಿರುವುದರಿಂದ ಆಗಿದೆ. ಈ ಭಾಗವಹಿಸುವಿಕೆಯು ಪ್ರಾಮುಖ್ಯ ವಲಯಗಳಾದ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳ ನಿರ್ಮಾಣದ ಮೇಲಿನ ಹೂಡಿಕೆಯಾಗಿರುತ್ತದೆ. ಒಂದು ಕಡೆಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಸರ್ಕಾರದ ಭಾಗವಹಿಸುವಿಕೆಯ ಹೆಚ್ಚಳದ ಅಗತ್ಯವಿದೆ. ಇನ್ನೊಂದು ಕಡೆಯಲ್ಲಿ ಸಂವಿಧಾನದ ನಿರ್ದೇಶಕ ತತ್ವಗಳ ಅಡಿಯಲ್ಲಿ ಜನತೆಯ ಅಗತ್ಯತೆಗಳಿಗೆ ಸ್ಪಂದಿಸುವ ಉದ್ದೇಶವಿದೆ. ಈ ಎಲ್ಲಾ ಕಾರಣಗಳ ಫಲಿತಾಂಶವಾಗಿ ರಾಜ್ಯ ಹಣಕಾಸಿನಲ್ಲಿ ಬೃಹತ್ ಪ್ರಮಾಣದ ಹೆಚ್ಚಳವಾಗಿದೆ.

ಒಟ್ಟಾರೆ ಆರ್ಥಿಕತೆಯಲ್ಲಿ ಸರ್ಕಾರದ ಭಾಗವಹಿಸುವಿಕೆಯ ಪಾಲು, ಇದು ರಾಜ್ಯ ಆಂತರಿಕ ಉತ್ಪಾದನೆಯಲ್ಲಿ ಸರಕಾರದ ವೆಚ್ಚಗಳ ಸರಿಸಮಾನ ಪ್ರಮಾಣ ಮತ್ತು ಅದರ ಅನುವರ್ತನೆಯು ಒಂದು ಸೀಮಿತ ಅವಧಿಯಲ್ಲಿ ಸರ್ಕಾರಿ ಚಟುವಟಿಕೆಯ ಹೆಚ್ಚುವಿಕೆ ಅಥವಾ ಕಡಿಮೆಯಾಗುವಿಕೆಯ ವಿವರಣೆಯೊಂದಿಗೆ ಪ್ರತಿಫಲಿತವಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಸರ್ಕಾರದ ಚಟುವಟಿಕೆಗಳನ್ನು ರಾಜ್ಯದ ಆಂತರಿಕ ಉತ್ಪಾದನೆಯಲ್ಲಿ ಸರ್ಕಾರದ ಶೇಕಡಾ ವೆಚ್ಚದ ಪಾಲಿನ ದೃಷ್ಟಿಯಿಂದ ನೋಡಿದಾಗ ೧೯೭೪-೭೫ರಿಂದ ೧೯೮೯-೯೦ರ ಅವಧಿಯಲ್ಲಿ ಇದು ದ್ವಿಗುಣಗೊಂಡಿದೆ. ಇದು ಶೇ. ೧೬.೨ ರಿಂದ ೩೨.೨೩ ಶೇಕಡಕ್ಕೆ ಏರಿದೆ. ೧೯೭೪-೭೫ ರಿಂದ ೧೯೮೯-೯೦೦ರ ಅವಧಿಯಲ್ಲಿ ಸರ್ಕಾರಿ ಪಾಲು ರಾಜ್ಯ ಆಂತರಿಕ ಉತ್ಪಾದನೆಯ ಕಾಲುಭಾಗದಷ್ಟು ಇತ್ತು. ಅಂದರೆ ಶೇ. ೨೫.೭೯ ಆಗಿತ್ತು. ಈ ಅಂಶಗಳು ಸರ್ಕಾರಿ ಚಟುವಟಿಕೆಯ ಗಣನೀಯ ಹೆಚ್ಚಳವನ್ನು ಲೆಕ್ಕಹಾಕುತ್ತವೆ. ಅರ್ಥಾತ್ ಕರ್ನಾಟಕ ಸರ್ಕಾರದ ವತಿಯಿಂದ ನೀಡುವ ಸರಕುಗಳು ಹಾಗೂ ಸೇವೆಗಳು ಗಣನೀಯವಾಗಿ ಏರಿವೆ ಎಂಬುದನ್ನು ಸೂಚಿಸುತ್ತದೆ. ಹಾಗೇಯೇ log linear regression ನ ಫಲಿತಾಂಶಗಳಲ್ಲಿ ತಿಳಿಸಿರುವಂತೆ ವೆಚ್ಚಗಳು ಬಹುವಾಗಿ ಆದಾಯದ ಸ್ಥಿತಿ ಸ್ಥಾಪಕತೆ ಎಂದು ಗಮನಿಸಲಾಗಿದೆ. ನಿಜವಾದ ತಲಾ ರಾಜ್ಯ ಆಂತರಿಕ ಉತ್ಪಾದನೆಯ ಪ್ರತಿ ಘಟಕದ ಹೆಚ್ಚಳದೊಂದಿಗೆ ವೆಚ್ಚಗಳು ೧.೬೭ ಶೇಕಡಾದೊಂದಿಗೆ ಹೆಚ್ಚಳವಾಗಿದ್ದು, ಸಂಖ್ಯಾ ಶಾಸ್ತ್ರಾಧಾರವಾಗಿ ೧ ಶೇಕಡಾ ಮಟ್ಟದಲ್ಲಿ ಇದು ಬಹು ಪ್ರಾಮುಖ್ಯ ಎಂದು ಪರಗಣಿಸಲಾಗಿದೆ. ಕರ್ನಾಟಕದ ಹೆಚ್ಚಿನ ಆದಾಯ ಸ್ಥಿತಿ ಸ್ಥಾಪಕತೆಯು, ಆಡೋಲ್ಫ್ ವಾಗ್ನರ್‌ರ “ಹೆಚ್ಚುತ್ತಿರುವ ರಾಜ್ಯ ಚಟುವಟಿಕೆಯ ನೀತಿ”ಯ ಸಮಸ್ಥಿತಿಯಲ್ಲಿದೆ. ಈ ತತ್ವವು ಒಂದು ಗುಣಲಕ್ಷಣವನ್ನು ಉಲ್ಲೇಖಿಸುತ್ತದೆ. ಅದೇನೆಂದರೆ ಆರ್ಥಿಕ ಅಭಿವೃದ್ಧಿಯು ಹೆಚ್ಚಿನ ಸ್ಥಾನವನ್ನು ಪಡೆಯುತ್ತಿರುವಂತೆ, ಪೂರಕವಾಗಿ ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿ ಸರ್ಕಾರಿ ವಲಯದ ಪ್ರಾಮುಖ್ಯತೆಯು ಹೆಚ್ಚುವುದು. ಅದರಂತೆ ಸರ್ಕಾರೀ ವೆಚ್ಚಗಳು, ತಲಾ ಆದಾಯಕ್ಕಿಂತಲೂ ಹೆಚ್ಚಿನ ವೇಗದ ದರದಲ್ಲಿ ಹೆಚ್ಚಳವಾಗುವುವು.* ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಬಂಧದಲ್ಲಿ ಸರಕಾರಿ ವೆಚ್ಚಗಳ ಬೆಳವಣಿಗೆ ಮತ್ತು ಅದರ ಮಾದರಿಯಲ್ಲಿ ಪ್ರತಿಬಿಂಬವಾಗಿರುವ ಸರಕಾರಿ ಚಟುವಟಿಕೆ ಹಾಗೂ ಬೆಳೆಯುತ್ತಿರುವ ವೆಚ್ಚಗಳಿಗೆ ಆಗುತ್ತಿರುವ ಹಣಕಾಸು ಪೂರೈಕೆಯನ್ನು ಅಭ್ಯಸಿಸುವ ಒಂದು ಪ್ರಯತ್ನ ಮಾಡಲಾಗಿದೆ. ಈ ಬಗ್ಗೆ ಒಟ್ಟಾರೆ ಮುಂಗಡ ಪತ್ರದ ಹೆಚ್ಚುವರಿ ಕೊರತೆ ಸ್ಥಿತಿಯ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಹಾಗೂ ಎರಡನೇ ಭಾಗದಲ್ಲಿ ಆದಾಯ ತಖ್ತೆಯನ್ನು ನೀಡಲಾಗಿದೆ. ಮೂರನೇ ಭಾತಗದಲ್ಲಿ, ಆದಾಯ/ಬಂಡವಾಳ ತೆರಿಗೆಗಳು ಮತ್ತು ಅಭಿವೃದ್ಧಿಯೇತರ ಶೀರ್ಷಿಕೆಯಡಿಯಲ್ಲಿ ಸರಕಾರಿ ವೆಚ್ಚಗಳ  ವಿಶ್ಲೇಷಣೆಯ ಮೇಲೆ ಕೇಂದ್ರೀಕೃತಗೊಳಿಸಲಾಗಿದೆ. ನಾಲ್ಕನೆಯ ಭಾಗವು ವೆಚ್ಚಗಳಿಗೆ ಹಣಕಾಸು ಪೂರೈಕೆಯ ಹಾಗೂ ತೆರಿಗೆ, ತೆರಿಗೆಯೇತರ ಮತ್ತು ಸಾಲಗಳಿಗೆ ಸಂಬಂಧಿಸಿದೆ. ಕೊನೆಯ ಭಾಗದಲ್ಲಿ ಉಪ ಸಂಹಾರವನ್ನು ನೀಡಲಾಗಿದೆ.

೨. ರಾಜ್ಯ ಸರ್ಕಾರದ ಮುಂಗಡ ಪತ್ರದ ಸ್ಥಿತಿ

ರಾಜ್ಯ ಹಣಕಾಸಿನ ಒಟ್ಟಾರೆ ತಖ್ತೆಯು ಸರ್ಕಾರದ ಮುಂಗಡ ಪತ್ರದ ಸ್ಥಿತಿಯಿಂದ ನಿರ್ವಹಿಸಲ್ಪಟ್ಟಿದೆ. ಸರಕಾರದ ಹಣಕಾಸಿನ ಮಿಗತೆ ಅಥವಾ ಕೊರತೆಯನ್ನು ಕಂಡುಕೊಳ್ಳಲು ಸರಕಾರದ ಸಂಪನ್ಮೂಲಗಳನ್ನು ವೆಚ್ಚದೊಂದಿಗೆ ತುಲನೆ ಮಾಡಲಾಗಿದೆ. ಆದಾಯ  ಮತ್ತು ಬಂಡವಾಳ ತಖ್ತೆಯನ್ನು ಕೋಷ್ಟಕ ೧ರಲ್ಲಿ ನೀಡಲಾಗಿದೆ ಹಾಗೂ ಇದು  ಮುಂಗಡ ಪತ್ರದ ಸ್ಥಿತಿಯನ್ನು ಹೇಳುತ್ತದೆ.

ಕರ್ನಾಟಕದಲ್ಲಿ (ಕ್ರೋಢೀಕರಿಸಿದ ನಿಧಿ) ಸರಕಾರಿ ಆದಾಯ ಮತ್ತು ಸರ್ಕಾರಿ ವೆಚ್ಚವನ್ನು ಕಳೆದ ಮೂರು ದಶಕಗಳಿಗೆ ಹೋಲಿಸಲಾಗಿದೆ ಹಾಗೂ, ಇದು ಸರಕಾರಿ ವೆಚ್ಚವು ಸಾಮಾನ್ಯವಾಗಿ ಸರ್ಕಾರಿ ಆದಾಯವನ್ನು ದಾಟುತ್ತದೆ. ಎಂದು ಸ್ಪಷ್ಟಪಡಿಸುತ್ತದೆ. ಅದೇ ರೀತಿ ಜಮೆಗಿಂತ ಬಹಳ ಹೆಚ್ಚಿನ ವೇಗದಲ್ಲಿ ವೆಚ್ಚವು ಬೆಳೆದಿದೆ, ವೆಚ್ಚಗಳ ಸಂಚಿತ ದರದ ಬೆಳವಣಿಗೆಯು ೧೩.೨೭ ಶೇಕಡಾವಾಗಿದ್ದು ಇದರ ವಿರುದ್ಧ ಆದಾಯದ ಬೆಳವಣಿಗೆಯು ೧೨.೭೭ ಶೇಕಡಾವಾಗಿದೆ. ಫಲಿತಾಂಶವಾಗಿ ಕೊರತೆಯ ಪ್ರಮಾಣವು ೧೯೬೧-೯೨ರಲ್ಲಿ ೬.೦೧ ಕೋಟಿ ರೂಪಾಯಿಗಳಿಂದ ೧೯೮೯-೯೦ರಲ್ಲಿ ೧೭೨.೩ ಕೋಟಿ ರೂಪಾಯಿಗಳಿಗೆ ಏರಿದೆ. ಜಮೆಗಿಂತ ವ್ಯಯವು ಹೆಚ್ಚಾಗಿರುವ ಈ ಸ್ಥಿತಿಯು ಹೊರನೋಟಕ್ಕೆ ಎಚ್ಚರಿಕೆಯನ್ನು ನೀಡಬಹುದು. ನೆನಪಿಡಬೇಕಾದ ಅಂಶವೆಂದರೆ ಸ್ವಲ್ಪಮಟ್ಟಿನ ಹೆಚ್ಚಿನ ವ್ಯಯವು ಆರ್ಥಿಕತೆಗೆ ಹಾನಿ ಮಾಡುವುದಕ್ಕಿಂತ ಸಹಾಯವನ್ನು ಮಾಡುತ್ತದೆ. ಏಕೆಂದರೆ ಹೆಚ್ಚುವರಿ ಖರ್ಚನ್ನು ಸರಿಯಾಗಿ ಯೋಜಿಸಿದಲ್ಲಿ ಆರ್ಥಿಕತೆಯಲ್ಲಿ ಉತ್ಪಾದನೆಯನ್ನು ಸಮೃದ್ಧಿಸಲು ಹಾಗೂ ಇದರಿಂದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ಸಾಧ್ಯವಿದೆ. ಹಾಗಿದ್ದರೂ, ಸಂಪನ್ಮೂಲಗಳು ಅಭಿವೃದ್ಧಿ ಚಟುವಟಿಕೆಗಳಿಗೆ ಹರಿಯುವಂತೆ ಬೇಕಾದ ನಿಗಾವನ್ನು ವಹಿಸಬೇಕು. ಆಗ ಮಾತ್ರ ಆರ್ಥಿಕ ಅಭಿವೃದ್ಧಿಗೆ ಅದು ಸಹಾಯ ಮಾಡುವುದು. ಸಂಪನ್ಮೂಲಗಳು ಒಂದು ವೇಳೆ ಉತ್ಪಾದನೇತರ ಉದ್ದೇಶಗಳಿಗೆ ಹರಿದರೆ ಇದು ಹಣದುಬ್ಬರ ಉಂಟುಮಾಡುವುದು ಹಾಗು ಅದು ಆರ್ಥಿಕ ಬೆಳವಣಿಗೆಗೆ ಮಾರಕವೆನಿಸಬಹುದು. ಕೊರತೆಗೆ ಎಡೆಮಾಡುವ ಒಂದು ನಿಗಾ ವಹಿಸಿದ ಅಧ್ಯಯನವು ಏನನ್ನು ತೋರಿಸುತ್ತದೆ ಎಂದರೆ ೧೯೮೪-೮೫ರ ವರೆಗಿನ ಕೊರತೆಯು ಬಂಡವಾಳ ತಖ್ತೆಯ ಕೆಳಗಿನ ಅತಿಯಾದ ವೆಚ್ಚದಿಂದ ಉಂಟಾಗಿದೆ. ಅಲ್ಲಿಂದ ಮುಂದಿನ ಒಟ್ಟಾರೆ ಕೊರತೆಯು ಆದಾಯದ ಮೇಲಿನ ಹೆಚ್ಚಿದ ವ್ಯಯದಿಂದ ಪ್ರಭಾವಿತಗೊಂಡಿದೆ. ಹಾಗೂ ಫಲಿತಾಂಶವಾಗಿ ಆದಾಯದ ಕೊರತೆಯ ಪ್ರಮಾಣವು ಹೆಚ್ಚುತ್ತಿದೆ ಎಂದು ತಿಳಿಸುತ್ತದೆ. ವಾರ್ಷಿಕ ಸಂಚಿತ ಬೆಳವಣಿಗೆ ದರವು ಸಹ ಈ ಲೆಕ್ಕದಲ್ಲಿ ಬರುತ್ತದೆ. ೧೯೭೦-೭೧ರಿಂದ ೧೯೮೦-೮೧ನೇ ಹಂತದಲ್ಲಿ ರಾಜಸ್ವ ಜಮೇಗಿಂತ (೧೪.೪೮ ಶೇಕಡಾ) ಹೆಚ್ಚಾಗಿತ್ತು. ಇದಕ್ಕೆ ವಿರುದ್ಧವಾಗಿ ಬಂಡವಾಳ ಜಮೆಯು (೧೪.೫೦ ಶೇಕಡಾ) ಬಂಡವಾಳ  ವೆಚ್ಚಕ್ಕಿಂತ ಕಡಿಮೆಯಾಗಿದೆ. ಈ ಪರಿಸ್ಥಿತಿಯು ೧೯೮೦-೮೧ರಿಂದ ೧೯೯೦-೯೧ರಲ್ಲಿ ತದ್ವಿರುದ್ಧವಾಗಿದೆ. ಈ ಅವಧಿಯಲ್ಲಿ ಆದಾಯ ವ್ಯಯವು (೧೬.೦೭ ಶೇಕಡಾ) – ರಾಜಸ್ವ ಜಮೆ (೧೫.೧೭ ಶೇಕಡಾ) ಗಿಂತ ವೇಗವಾಗಿ ಬೆಳೆದಿದೆ ಮತ್ತು ಬಂಡವಾಳ ಜಮೆಯು (೧೫.೧೧ ಶೇಕಡಾ) ಬಂಡವಾಳ ವ್ಯಯಕ್ಕಿಂತ (೧೪.೩೨ ಶೇಕಡಾ) ಹೆಚ್ಚಾಗಿದೆ. ಹಾಗೂ ಇದು ಈ ಹಿಂದಿನ ನೀತಿಗೆ ವಿರುದ್ಧವಾಗಿದೆ. ಕರ್ನಾಟಕ ರಾಜ್ಯದಲ್ಲಿ ಆದಾಯ ಕೊರತೆಯು ಒಂದು ಹೊಸ ವಿಷಯವೆಂದು ಎನಿಸಿದರೂ ನಿರಂತರ ನಿರ್ವಹಣಾ ವೆಚ್ಚವನ್ನು ಸಾಲದ ನಿಧಿಗಳಿಂದ ಹಣಕಾಸು ಹೊಂದಿಸಿಕೊಳ್ಳುವುದು ಒಂದು ಒಳ್ಳೆಯ ಸಂಪ್ರದಾಯವಲ್ಲ. ಬಂಡವಾಳ ತಖ್ತೆಯಲ್ಲಿ ಕೊರತೆಯನ್ನು ಮೆಚ್ಚಿಕೊಳ್ಳಬೇಕು. ಏಕೆಂದರೆ ಇದು ಸಂಪನ್ಮೂಲಗಳ ನಿರ್ಮಾಣ ಹಾಗೂ ಆದಾಯ ಉತ್ಪಾದನೆಗೆ ಸಹಕಾರಿ ಎನಿಸುವುದು, ಆದರೆ ಅದೇ ಸನ್ನಿವೇಶ ಆದಾಯ ತಖ್ತೆಯಲ್ಲಿ ಸಾಲದ ನಿಧಿಯನ್ನು ಸೇವನೆ ಹಾಗೂ ನಿರ್ವಹಣೆ ಉದ್ದೇಶಗಳಿಗಾಗಿ ದಿಕ್ಕು ಬದಲಿಸುವುದು. ಈ ಪ್ರಕ್ರಿಯೆಯಲ್ಲಿ ಸೇವನೆಯ ರೀತಿಯ ವ್ಯಯವನ್ನು ನಿರ್ಬಂಧಿಸುತ್ತದೆ. ಏರುತ್ತಿರುವ ಬಡ್ಡಿ ನೀಡುವಂತಹ ಹೊಸದಾದ ಭಾರವೊಂದನ್ನು ಇದು ನಿರ್ಮಿಸುತ್ತದೆ.

ಇಂತಹ ಪರಿಸ್ಥಿತಿಗಳನ್ನು ಸರಿಗೊಳಿಸಲು ೧೯೯೧ನೇ ವರ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಿರತೆಯ ಹೆಜ್ಜೆ ಪರಿಚಯಿಸಿವೆ. ಇವುಗಳ ಕೊರತೆಯ ಪ್ರಮಾಣವನ್ನು ಕೆಲವು ಸಮಯದೊಳಗೆ ಕಡಿಮೆಗೊಳಿಸುವ ಗುರಿಯನ್ನು ಹೊಂದಿರುತ್ತದೆ. ೧೯೯೧-೯೨ನೇ ವರ್ಷದಿಂದ ಮಾಡಿರುವ ಕರ್ನಾಟಕ ಸರ್ಕಾರದ ಕೊರತೆಯ ವಿಶ್ಲೇಷಣೆಯು ಈ ಕೆಳಗಿನ ವಿಷಯವನ್ನು ಸೂಚಿಸುತ್ತದೆ. ಒಟ್ಟಾರೆ ಕೊರತೆಯ ಅಸ್ತಿತ್ವವು ಮುಂದುವರಿದರೂ ಸಹ ಆದಾಯ ತಖ್ತೆಯಲ್ಲಿ ಮಿಗತೆಯು ಕಂಡು ಬಂದಿರುವುದು ವಿಶೇಷತಃ ೧೯೯೩-೯೪ ಮತ್ತು ೧೯೯೪-೯೫ರಲ್ಲಿ ಇದು ಕಂಡು ಬಂದಿದೆ. ಇದು ಸ್ವಾಗತಾರ್ಹ ಲಕ್ಷಣವಾಗಿದೆ. ಇದೇ ರೀತಿಯ ಲಕ್ಷಣವು ಇನ್ನೂ ಕೆಲವು ವರ್ಷ ಮುಂದುವರಿದರೆ ರಾಜ್ಯದ ಆರ್ಥಿಕ ಸ್ಥಿತಿಯು ಗಮನಾರ್ಹವಾಗಿ ಸುಧಾರಣೆಯಾಗುವುದು ಹಾಗೂ ಸರ್ಕಾರೀ ಮೂಲಗಳಿಂದ ಅಭಿವೃದ್ಧಿಗೆ ಹೆಚ್ಚು ಖರ್ಚು ಮಾಡಲು ಸಾಧ್ಯವಾಗುವುದು.

೩.ಕರ್ನಾಟಕದಲ್ಲಿ ಬೆಳವಣಿಗೆ ಮತ್ತು ಸರ್ಕಾರೀ ವೆಚ್ಚಗಳ ವಿಧಾನ

ಸರ್ಕಾರಿ ವೆಚ್ಚವನ್ನು ಸ್ಥೂಲವಾಗಿ ಆದಾಯ ಮತ್ತು ಬಂಡವಾಳ ಶೀರ್ಷಿಕೆಗಳು ಎಂದು ವಿಂಗಡಿಸಲಾಗಿದೆ. ಆದಾಯ ಶೀರ್ಷಿಕೆ ಮುಖ್ಯವಾಗಿ ಪುನರಾವರ್ತಿಸುವ ಹಾಗೂ ನಿರ್ವಹಣೆಯ ಸರ್ಕಾರಿ ವೆಚ್ಚಕ್ಕೆ ಸಂಬಂಧಿಸಿದೆ. ಬಂಡವಾಳ ಶೀರ್ಷಿಕೆಯು ಸರ್ಕಾರದ ಆದಾಯ ಆಸ್ತಿ/ಉತ್ಪಾದನೆಯ ಚಟುವಟಿಕೆಗಳಿಗೆ, ತೊಡಗಿಸುವ ಹಣದ ಬಗ್ಗೆ ಉಲ್ಲೇಖಿಸುತ್ತದೆ. ಹೀಗೆ ತೊಡಗಿಸುವ ಹಣದ ಮಿತಿಯು ಒಂದು ಲಕ್ಷ ಹಾಗೂ ಅದಕ್ಕಿಂತ ಹೆಚ್ಚು. ಈ ವಿಂಗಡಿಸಿದ ವೆಚ್ಚಗಳ ರೀತಿಯ ಪ್ರಕಾರ ಹೋದರೆ ಬಂಡವಾಳ ವೆಚ್ಚದಲ್ಲಾಗುವ ಯಾವುದೇ ಹೆಚ್ಚಳವು ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹದಾಯಕವಾಗಿದೆ ಎಂದು ಮತ್ತು ಆದಾಯ ವ್ಯಯವು ಇದಕ್ಕೆ ವ್ಯತಿರಿಕ್ತವಾಗಿದೆಯೆಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಆದರೆ ಅಂತಹ ತೀರ್ಪುಗಳನ್ನು ನೀಡುವ ಮೊದಲು ಯಾವುದೇ ವ್ಯಕ್ತಿ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಉನ್ನತ ಮಟ್ಟದ ಅಭಿವೃದ್ಧಿಯನ್ನು ಸಾಧಿಸಲು ಹೊಸ ಹಣ ಹೂಡಿಕೆಯು ಎಷ್ಟು ಮುಖ್ಯವೊ, ಅದೇ ರೀತಿ ಪ್ರಸ್ತುತವಿರುವ ಹೂಡಿಕೆಯನ್ನು  ಸರಿಯಾಗಿ ನಿರ್ವಹಿಸುವುದು ಅಷ್ಟೇ ಮುಖ್ಯವಾಗಿದೆ. ಯೋಜಿತ ಉದ್ದೇಶಗಳನ್ನು ಈಡೇರಿಸುವ ಪ್ರಕ್ರಿಯೆಯಲ್ಲಿ ಇವು ಮುಖ್ಯವಾಗುತ್ತವೆ. ವೆಚ್ಚಗಳ ವಿವರಗಳನ್ನು ಪ್ರತಿ ವಿಂಗಡನೆಯಲ್ಲೂ ವಿಶ್ಲೇಷಿಸುವ ಒಂದು ಯತ್ನವನ್ನು ಇಲ್ಲಿ ಮಾಡಲಾಗಿದೆ.

ಆದಾಯ ಮತ್ತು ಬಂಡವಾಳ ವೆಚ್ಚಗಳು

ಆದಾಯದಲ್ಲಿನ ಬೆಳವಣಿಗೆ ಮತ್ತು ಬಂಡವಾಳ ವೆಚ್ಚದ ಒಂದು ತುಲನೆಯು, ಆದಾಯವು ಒಟ್ಟಾರೆ ವೆಚ್ಚದಲ್ಲಿ ದೊಡ್ಡ ಭಾಗವನ್ನು ಪಡೆದು ಹೆಚ್ಚಿನ ವೇಗದಲ್ಲಿ ಬೆಳವಣಿಗೆಯನ್ನು ಪಡೆದಿದೆ ಎಂದು ಸೂಚಿಸುತ್ತದೆ. ಬಂಡವಾಳ ವೆಚ್ಚವು ೪೧ ಪಟ್ಟು ಬೆಳೆದಿದ್ದರೆ, ಆದಾಯ ವೆಚ್ಚವು ೮೨ ಪಟ್ಟು ಬೆಳೆದಿದೆ. ಅಂದರೆ ಇದು ಬಂಡವಾಳ ವೆಚ್ಚದ ಸರಿ ಎರಡು ಪಟ್ಟು ಆಗಿರುತ್ತದೆ. ವಾರ್ಷಿಕ ಸಂಚಿತ ರೀತಿಯ ಬೆಳವಣಿಗೆ ದರಗಳ ಲೆಕ್ಕದಲ್ಲಿ, ಆದಾಯ ವೆಚ್ಚವು ವಾರ್ಷಿಕ ೧೩.೪೬ ಶೇಕಡಾದಲ್ಲಿ ಬೆಳೆದಿದೆ ಹಾಗೂ ಬಂಡವಾಳ ವೆಚ್ಚ ವಾರ್ಷಿಕ ೮.೪೧ ಶೇಕಡಾ ದರದಲ್ಲಿ ಬೆಳೆದಿದೆ. ಇನ್ನೊಂದು ಮುಖ್ಯ ವಿಷಯ ಗಮನಿಸಬೇಕಾಗಿರವುದು ಏನೆಂದರೆ ಒಟ್ಟಾರೆ ವ್ಯಯಗಳಲ್ಲಿ ಆದಾಯ ವ್ಯಯವು ದೊಡ್ಡ ಪಾಲನ್ನು ಪಡೆದಿರುತ್ತದೆ ಹಾಗೂ ಇದು ೧೯೬೧-೬೨ರಲ್ಲಿ ೭೪.೩೨ಶೇಕಡಾದಿಂದ ೧೯೯೪-೯೫ರಲ್ಲಿ ೮೫.೧೩ ಶೇಕಡಾಕ್ಕೆ ಹೆಚ್ಚಳವಾಗಿದೆ (ಕೋಷ್ಟಕ-೨). ಇನ್ನೊಂದು ಲೆಕ್ಕದಲ್ಲಿ ಬಂಡವಾಳ ವೆಚ್ಚದ ಪಾಲು ಇಳಿಮುಖವಾಗಿದೆ. ಇದು ೧೯೬೧-೬೨ರಲ್ಲಿ ೨೪.೬೮ ಶೇಕಡಾದಿಂದ ೧೯೯೪-೯೫ರಲ್ಲಿ ೧೬.೮೭ ಶೇಕಡಾಕ್ಕೆ ಇಳಿದಿದೆ.

ಸರ್ಕಾರಿ ವೆಚ್ಚಗಳ ಈ ಮಾದರಿಯು ಒಂದು ಸತ್ಯ ವಿಷಯವನ್ನು ಲೆಕ್ಕ ಹಾಕುತ್ತದೆ. ಏನೆಂದರೆ ಕರ್ನಾಟಕದಲ್ಲಿ ಸರಕಾರಿ ವೆಚ್ಚವು ನಿರ್ವಹಣಾ ಮತ್ತು ಪುನರಾವರ್ತಿಸುವ ರೀತಿಯ ಖರ್ಚುಗಳಿಗೆ ವ್ಯಯವಾಗುತ್ತಿದ್ದು ಆದಾಯೋತ್ಪನ್ನಗಳಿಗೆ ಅಲ್ಲ. ಆದರೆ ಈ ಹಿಂದೆ ವಾದಿಸಿರುವಂತೆ ಈ ವೆಚ್ಚಗಳ ರೀತಿಯ ಬಗ್ಗೆ ಹೆಚ್ಚೇನು ತಿಳಿಸುವುದಿಲ್ಲ. ಏಕೆಂದರೆ ನಿವ್ವಳ ವೆಚ್ಚವು ಸರಿ ಸಮಾನವಾಗಿ ಮುಖ್ಯವಾಗಿರುತ್ತದೆ. ಹಾಗಿದ್ದರೂ ಬಂಡವಾಳ ನಿರ್ಮಾಣ ಅಥವಾ ಆದಾಯೋತ್ಪನ್ನಗಳಿಗೆ ಬೆಳೆಯುತ್ತಿರುವ ಸರ್ಕಾರಿ ವೆಚ್ಚದ ದೇಣಿಗೆಯೇನು ಎಂಬ ಹೆಚ್ಚಿನ ವಿವರವನ್ನು ತನಿಖೆ ಮಾಡಿದಾಗ ಸರ್ಕಾರಿ ವೆಚ್ಚಗಳ ಉಪಯೋಗದ ಒಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಕರ್ನಾಟಕದಲ್ಲಿ ಬಂಡವಾಳ ನಿರ್ಮಾಣದ ರೀತಿಯು ಚಿಂತನೆಗೆ ಎಡೆ ಮಾಡುತ್ತದೆ. ಮುಂಗಡ ಪತ್ರವನ್ನು ಮೊದಲಿನಿಂದ ಗಮನಿಸಿದಾಗ ಬಂಡವಾಳ ನಿರ್ಮಾಣವು ಪ್ರಮಾಣದಲ್ಲಿ ಬಹಳಷ್ಟು ಚಿಕ್ಕಿದೆ ಮಾತ್ರವಲ್ಲ ಒಂದು ಕಾಲಾವಧಿಯಲ್ಲಿ ಗಣನೀಯವಾಗಿ ಇಳಿದಿದೆ.  ಇದಕ್ಕೆ ವಿರುದ್ಧವಾಗಿ ವರ್ಗಾವಣೆ ಮಾದರಿ ವೆಚ್ಚಗಳಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಒಟ್ಟಾರೆ ವ್ಯಯದಲ್ಲಿ ನಿವ್ವಳ ಬಂಡವಾಳ ರಚನೆಯ ಪಾಲು ೧೯೭೫ರಲ್ಲಿ ೨೧.೫೨ ಶೇಕಡಾದಿಂದ ೧೯೮೯ ರಲ್ಲಿ ೯.೭೩ ಶೇಕಡಾಕ್ಕೆ ಇಳಿದಿದೆ. ೧೯೯೦-೯೧ ರಲ್ಲಿ ಅಲ್ಪ ಮಟ್ಟದ  ಸುಧಾರಣೆಯೊಂದಿಗೆ ೧೯೯೪-೯೫ ರಲ್ಲಿ ೧೪.೭೯ ಶೇಕಡಾ ಹೆಚ್ಚಳವಾಗಿದೆ. ಇನ್ನೊಂದು ಕಡೆಯಲ್ಲಿ ವರ್ಗಾವಣೆ ಪಾವತಿಗಳ ಪಾಲು ೧೯೭೫ ರಲ್ಲಿ ೨೩.೨೮ ಶೇಕಡಾದಿಂದ ೧೯೮೯ ರಲ್ಲಿ ೫೪.೫೯ಕ್ಕೆ ಹೆಚ್ಚಳವಾಗಿದೆ. ಹಾಗೆ ೧೯೯೪-೯೫ ರಲ್ಲಿ ೫೩.೪೫ ಶೇಕಡಾಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ೧೯೯೦-೯೧ರಿಂದ ಇರುವ ರೀತಿಯು ಆರ್ಥಿಕತೆಗೆ ಅನುಕೂಲಕರವಾಗಿ ಬದಲಾಯಿಸುತ್ತಿದೆ.

ಬಂಡವಾಳ ನಿರ್ಮಾಣದ ಹೆಚ್ಚುತ್ತಿರುವ ಪಾಲು ಮುಖ್ಯವಾಗಿ ಈ ಅವಧಿಯಲ್ಲಿ ಸರಕಾರದವತಿಯಿಂದ ಬಂಡವಾಳ ವೆಚ್ಚದ ಗಣನೀಯ ಏರಿಕೆಯಿಂದಾಗಿದೆ. ಇವುಗಳ ಆರ್ಥಿಕ ಅಭಿವೃದ್ಧಿಯನ್ನು ಉದ್ಧೀಪನಗೊಳಿಸಲು ಸೂಕ್ತವಾದ ಸನ್ನಿವೇಶಗಳಾಗಿವೆ ಹಾಗೂ ಈ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸಲು ಹೆಚ್ಚಿನ ಯತ್ನವನ್ನು ಮಾಡಬೇಕಾಗಿದೆ. ಈ ಬದಲಾವಣೆಗಳು ಸುಧಾರಣೆ ಪ್ರಕ್ರಿಯೆಯಿಂದಾಗಿ ಉಂಟಾಗುವುದಾದರೆ ಅಂತಹ ಬದಲಾವಣೆಗಳು ರಾಜ್ಯ ಹಣಕಾಸಿಗೆ ಒಂದು ಸ್ವಾಗತಾರ್ಹ ಅಂಶವಾಗಿವೆ.

ಅಭಿವೃದ್ಧಿ ಹಾಗೂ ಅಭಿವೃದ್ಧಿಯೇತರ ವೆಚ್ಚಗಳು

ಸರಕಾರಿ ವೆಚ್ಚಗಳ ಬೆಳವಣಿಗೆ ಮತ್ತು ಅದರ ರೀತಿಯ ಇಲ್ಲಿಯತನಕದ ವಿಶ್ಲೇಷಣೆಯು ಸರ್ಕಾರಿ ವೆಚ್ಚಗಳ ಆದಾಯ ಮತ್ತು ಬಂಡವಾಳ ಗುಣದ ಬಗ್ಗೆ ಹೇಳುತ್ತದೆ. ಆದರೂ ಸರ್ಕಾರಿ ಚಟುವಟಿಕೆಯ ರೀತಿಯು ಸರ್ಕಾರವು ನಿರ್ವಹಿಸಿದ ಅವಧಿ ಕಾರ್ಯಗಳಲ್ಲಿ ಹಾಗೂ ಅದರ ಮೇಲೆ ಮಾಡಿರುವ ಖರ್ಚುಗಳಲ್ಲಿ ಪ್ರತಿಫಲಿತಗೊಳ್ಳುತ್ತದೆ.

ಒಂದು ಕಾಲಾವಧಿಯಲ್ಲಿ ಅವುಗಳ ವಿಸ್ತಾರ ಹಾಗೂ ನಡವಳಿಕೆಯು ಸರ್ಕಾರವು ನಿರ್ವಹಿಸಿದ ವಿವಿಧ ಕಾರ್ಯಗಳನ್ನು ಅದರ ಮಹತ್ವವನ್ನು ಅಭಿವೃದ್ಧಿ ಪ್ರಕ್ರಿಯೆಯು ಸಾಗುತ್ತಿರುವ ದಿಕ್ಕು ಹಾಗೂ ಸರ್ಕಾರ ಅದರಲ್ಲಿ ಭಾಗವಹಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಸ್ಥೂಲವಾಗಿ ಕಾರ್ಯಪರ ವರ್ಗೀಕರಣಗಳನ್ನು ಮಾನವ ಸಂಪನ್ಮೂಲಗಳ ಅಭಿವೃದ್ಧಿ, ಭೌತಿಕ ಸಂಪನ್ಮೂಲ ಅಭಿವೃದ್ಧಿ ಮತ್ತು ಬೆಂಬಲ ಸೇವೆಗಳಂತಹ ಸರ್ಕಾರಿ ಕಾರ್ಯಗಳ ಕೆಳಗೆ ಒಟ್ಟುಗೂಡಿಸಬಹುದು. ಲೆಕ್ಕ ಪತ್ರದ ವ್ಯವಸ್ಥೆಯಲ್ಲಿ ಈ ಸೇವೆಗಳನ್ನು ಸಾಮಾಜಿಕ ಮತ್ತು ಸಮುದಾಯಿಕ ಸೇವೆಗಳು, ಆರ್ಥಿಕ ಸೇವೆಗಳು ಮತ್ತು ಸಾಮಾನ್ಯ ಸೇವೆಗಳು ಎಂದು ಉಲ್ಲೇಖಿಸಲಾಗಿದೆ. ಮೊದಲನೇ ಎರಡು ವಿಷಯಗಳನ್ನು ಅಭಿವೃದ್ಧಿ ವೆಚ್ಚಗಳೆಂದೂ ಉಪಚರಿಸಲಾಗಿದೆ ಹಾಗೂ ಕೊನೆಯದನ್ನು ಅಭಿವೃದ್ಧಿಯೇತರ ಅಥವಾ ನಿರ್ವಹಣ ವೆಚ್ಚವೆಂದೂ ಪರಿಗಣಿಸಲಾಗಿದೆ.

ಸರ್ಕಾರಿ ವೆಚ್ಚದ ಗುಣಾಭಿವೃದ್ಧಿ (Nature) ಸುಧಾರಿಸಲು ಸಹಾಯ ಮಾಡುವುದೇ ಅಥವಾ ಇಲ್ಲವೇ ಎಂಬುದು ಪರಿಗಣಿಸಬೇಕಾದ ಪ್ರಮುಖ ಪ್ರಶ್ನೆಯಾಗಿದೆ. ಸರ್ಕಾರಿ ವೆಚ್ಚವು ಬಹಳ ವೇಗವಾಗಿ ಬೆಳೆಯುತ್ತಿದೆ ಹಾಗೂ ರಾಜ್ಯದ ಆಂತರಿಕ ಉತ್ಪಾದನೆಯಂತಹ ಒಟ್ಟಾರೆ ಆರ್ಥಿಕ ಚಟುವಟಿಕೆಯನ್ನು ಪಡೆದಿರುವುದು ಸರ್ಕಾರವು ತೀವ್ರವಾಗಿ ಆರ್ಥಿಕತೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವುದನ್ನು ಸಾದರಪಡಿಸುತ್ತದೆ. ಇಂತಹ ಬೆಳೆಯುತ್ತಿರುವ ಪ್ರಾಮುಖ್ಯತೆಯೊಂದಿಗೆ ಆರ್ಥಿಕತೆ ಅಭಿವೃದ್ಧಿಗೆ ಸರ್ಕಾರದ ಭಾಗವಹಿಸುವಿಕೆಯು ಯಾವುದೇ ರೀತಿಯ ಸುಧಾರಣೆಯನ್ನು ತಂದಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ಸೂಕ್ತವೆನಿಸುತ್ತದೆ. ಒಂದು ವೇಳೆ ಹಾಗಿದ್ದರೆ ಸರ್ಕಾರವು ಎಷ್ಟರ ಮಟ್ಟಿಗೆ ಪ್ರಗತಿಪರವಾಗಿದೆ? ಈ ಪ್ರಶ್ನೆಗಳು ಉತ್ತರಿಸಲು ಕಷ್ಟವೆನಿಸುತ್ತವೆ. ಏಕೆಂದರೆ ಸರ್ಕಾರಿ ವೆಚ್ಚದಲ್ಲಿ ಬಹುಪಾಲು ಸೇವೆಗಳನ್ನು ಒದಗಿಸುವುದಕ್ಕೆ ತಗಲುತ್ತದೆ, ಅದರ ಮೌಲ್ಯವನ್ನು ನೇರವಾಗಿ ಪರಿಮಾಣಾತ್ಮಕವಾಗಿ ಮಾಪನ ಮಾಡಲು ಸಾಧ್ಯವಿಲ್ಲ. ಇದರ ಹೆಚ್ಚಿನ ಪಾಲು ಹಣದ ಬಳಕೆಯನ್ನು ಎಷ್ಟರಮಟ್ಟಿನ ನಿರ್ವಹಣಾ ಸಾಮರ್ಥ್ಯದೊಂದಿಗೆ ಬಳಸಲಾಗಿದೆ ಎಂಬುದರ ಮೇಲೆ ನಿಂತಿದೆ. ಆದ್ದರಿಂದ ಸರ್ಕಾರಿ ವೆಚ್ಚಗಳ ಬಳಕೆಯ ಸಂಕ್ಷಿಪ್ತ ಅಂದಾಜು ಅಸಾಧ್ಯ. ಸರ್ಕಾರಿ ವೆಚ್ಚದ ಪ್ರಯೋಜನವನ್ನು ತೀರ್ಮಾನಿಸಲು ಒಂದು ಪರ್ಯಾಯ ವ್ಯವಸ್ಥೆ ಏನೆಂದರೆ ಸರ್ಕಾರಿ ಕಾರ್ಯಕ್ರಮಗಳನ್ನು ಹಾಗೂ ಅದಕ್ಕೆ ತಗಲಿರುವ ಖರ್ಚುಗಳನ್ನು ಮಾಪನ ಮಾಡುವುದು. ಹೇಗೆಂದರೆ, ವೆಚ್ಚದ ಮಟ್ಟವು ಒಂದು ನಿರ್ದಿಷ್ಟ ಸಮರ್ಥತೆಯ ಮಟ್ಟದಲ್ಲಿ ಅದರ ಪ್ರಾಮುಖ್ಯತೆಯ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂಬ ಕಲ್ಪನೆಯೊಂದಿಗೆ ತುಲನೆ ಮಾಡುವುದು. ವಿವಿಧ ರೀತಿಯ ಕಾರ್ಯಕ್ರಮಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಭೌತಿಕ ಸಂಪನ್ಮೂಲ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತವೆ.

ಸಾಮಾನ್ಯವಾಗಿ ಮೇಲಿನ ಎರಡು ಉದ್ದೇಶಗಳಿಗೆ ಸಂಬಂಧಿಸಿದ ಕಾರ್ಯಗಳು ಶಿ‌ಕ್ಷಣ, ವೈದ್ಯಕೀಯ ಸಾಮಾಜಿಕ, ಆರೋಗ್ಯ, ಕೃಷಿ, ಕೈಗಾರಿಕೆ, ಸಾರಿಗೆ ಇತ್ಯಾದಿ ನಿರ್ದಿಷ್ಟ ಕಾರ್ಯಕ್ರಮಗಳ ಸುಧಾರಣೆಗಳನ್ನು ಒಳಗೊಂಡಿರುತ್ತವೆ. ಹಾಗೂ ಇವುಗಳನ್ನು ಅಭಿವೃದ್ಧಿ ವೆಚ್ಚಗಳೆಂದು ಪರಿಗಣಿಸಲಾಗಿದೆ. ಸರ್ಕಾರದ ಕಾರ್ಯನಿರ್ವಹಣೆಗೆ ಬೆಂಬಲವಾಗಿರುವ ಕಾರ್ಯಕ್ರಮಗಳ ಮೇಲಿನ ವೆಚ್ಚಗಳನ್ನು ಅಭಿವೃದ್ಧಿಯೇತರ ಪಟ್ಟಿಯಲ್ಲಿ ಸೇರಿಸಲಾಗಿದೆ. ವೆಚ್ಚಗಳ ಪಾವತಿ, ಪಿಂಚಣಿಗಳು, ಹಣಕಾಸು ಸೇವೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಹಾಗೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿಡಲು ತಗಲುವ ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚಗಳೆಂದು ಪರಿಗಣಿಸಲಾಗಿದೆ.

ಇಂತಹ ವರ್ಗೀಕರಣದಲ್ಲಿ ಹಲವಾರು ನ್ಯೂನತೆಗಳಿವೆ. ಈ ವರ್ಗೀಕರಣವು ನಿರ್ದಿಷ್ಟವಾಗಿ ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಒಂದು ವಾದದ ಆಧಾರದ ಮೇಲೆ ಪ್ರಸ್ತುತವಾಗಿರುವ ಅಭಿವೃದ್ಧಿಯ ಮಟ್ಟಕ್ಕೆ ಇದು ನೇರವಾಗಿ ಕೊಡುಗೆ ನೀಡುತ್ತಿಲ್ಲವೆಂಬ ಕಾರಣಕ್ಕೆ ಆಗಿರುವ ವೆಚ್ಚ ಅಭಿವೃದ್ಧಿಯೇತರ ಎಂದು ಹೇಳಲಾಗುವುದಿಲ್ಲ. ಈ ಸೇವೆಗಳ ಬೆಂಬಲವಿಲ್ಲದೆ ಸರ್ಕಾರವು ಕಾರ್ಯಾಚರಿಸಲು ಸಾಧ್ಯವಿಲ್ಲ ಹಾಗೂ ಈ ವೆಚ್ಚಗಳ ಗೈರುಹಾಜರಿಯಲ್ಲಿ ಮುಂದುವರಿಸುವುದು ಅಸಾಧ್ಯ. ಅದೇ ಸಮಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಆಗುವ ಆಡಳಿತಾತ್ಮಕ ವೆಚ್ಚಗಳು ನೇರವಾಗಿ ಅಭಿವೃದ್ಧಿಗೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಅದನ್ನು ಅಭಿವೃದ್ಧಿಯೇತರ ವರ್ಗದ ಪಟ್ಟಿಯಲ್ಲಿ ಸೇರಿಸಬೇಕು ಎಂದು ವಾದಿಸಬಹುದು.

ಆದ್ದರಿಂದ ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ಎಂಬ ಎರಡು ವರ್ಗಗಳು ಸಾಧ್ಯವಿಲ್ಲ. ಒಂದು ಸಮರ್ಥ ಸರ್ಕಾರವನ್ನು ನಿರ್ವಹಿಸಲು ಇವೆರಡರ ಸರಿಯಾದ ಮಿಶ್ರಣವು ಸಹಾಯವಾಗುವುದು. ಬೆಂಬಲಿತ ಖರ್ಚುಗಳಷ್ಟು ಕನಿಷ್ಟ ಮಟ್ಟದಲ್ಲಿ ನಿಲ್ಲಿಸಲು ಹಾಗೂ ಅದರಿಂದಾಗಿ ಸರ್ಕಾರಿ ನಿಧಿಯ ಉತ್ಪಾದನಾ ಬಳಕೆಯನ್ನು ಸಾಧ್ಯವಾಗಿಸಲು ನಿಗಾವಹಿಸಬೇಕು ಎಂಬ ತರ್ಕಕ್ಕೆ ಪ್ರತಿವಾದ ಇರಲಾರದು. ಪ್ರಸ್ತುತ ಅಭ್ಯಾಸದಲ್ಲಿ ಮೇಲಿನ ವಾದಗಳನ್ನು ಗಮನಿಸಿಕೊಂಡು ವೆಚ್ಚಗಳನ್ನು ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವರ್ಗಗಳ ಕೆಳಗೆ ಪಟ್ಟಿಮಾಡುವ ಯತ್ನವನ್ನು ಮಾಡಿಲ್ಲ. ಸರ್ಕಾರವು ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವರ್ಗ ಎಂಬ ವರ್ಗೀಕರಣವನ್ನು ಈ ಕೆಳಗಿನಂತೆ ವಿಶ್ಲೇಷಣೆಯನ್ನು ನೀಡುವ ಉದ್ದೇಶಕ್ಕಾಗಿ ಬಳಸಲಾಗಿದೆ. ಅಭಿವೃದ್ಧಿ ಮತ್ತು ಅಭವೃದ್ಧಿಯೇತರ ವರ್ಗಗಳಲ್ಲಿನ ಒಟ್ಟಾರೆ ವೆಚ್ಚವು ೧೯೬೧-೬೨ರಲ್ಲಿ ೯೫.೧೩ ಕೋಟಿಗಳು ಹಾಗೂ ೩೨.೮೧ ಕೋಟಿಗಳು ಮತ್ತು ೧೯೯೪-೯೫ರಲ್ಲಿ ೬೮೧೬.೫೫ ಕೋಟಿಗಳು ಹಾಗೂ ೨೩೫೪.೦೭ ಕೋಟಿಗಳು ಸಾಮಾನ್ಯ ಲೆಕ್ಕದಲ್ಲಿ ಏರಿವೆ (ಕೋಷ್ಟಕ ೩). ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವೆಚ್ಚ ೭೧ ಪಟ್ಟು ಹೆಚ್ಚಾಗಿರುವುದು ಕುತೂಹಲಕಾರಿ ಅಂಶವಾಗಿದೆ. ಯೋಜನಾ ಅಂಶಗಳಲ್ಲಿ ಹೆಚ್ಚಿನ ಶೇಕಡಾ ಹೆಚ್ಚುವರಿಯನ್ನು ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವೆಚ್ಚಗಳು ಯೋಜನಾ ಘಟಕದಲ್ಲಿ ತೋರಿಸಿದರೂ ಅವೆರಡರಲ್ಲಿ (ಅಭಿವೃದ್ಧಿ ಮತ್ತು ಅಭಿವೃ‌ದ್ಧಿಯೇತರ) ಯೋಜನೇತರ ಅಂಶವು ಯೋಜನಾ ಅಂಶಕ್ಕಿಂತ ದೊಡ್ಡದಾಗಿದೆ.

ಅಭಿವೃದ್ಧಿ  ವೆಚ್ಚದ ಒಟ್ಟು ಮೊತ್ತದ ಪ್ರಮಾಣ ಅಭಿವೃದ್ಧಿಯೇತರ ವೆಚ್ಚಕ್ಕಿಂತ ಅಗಾಧವಾಗಿದೆ ಎಂದು ಕರ್ನಾಟಕದ ಒಟ್ಟು ವೆಚ್ಚದ ರಚನೆಯ ಅಧ್ಯಯನ ಅವಧಿಯಲ್ಲಿ ತೋರ್ಪಡಿಸಿದೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವೆಚ್ಚಗಳು ಉಲ್ಲೇಖಿತ ವರ್ಷಗಳಲ್ಲಿ ಎರಡು ಅನುರೂಪಕತೆಯನ್ನು ಹೊಂದಿವೆ. ಅಭಿವೃದ್ಧಿ ವೆಚ್ಚದ ಪಾಲು ೭೪ ಶೇಕಡಾವಾಗಿದೆ ಮತ್ತು ಅಭಿವೃದ್ಧಿಯೇತರ ವೆಚ್ಚವು ೨೬ ಶೇಕಡಾವಾಗಿದೆ. ಹೀಗಿದ್ದರೂ ಈ ರೀತಿಯಲ್ಲಿ ೧೯೯೦-೯೧ ರವರೆಗೆ ಅಭಿವೃದ್ಧಿ ವೆಚ್ಚದ ಪಾಲು ಅನುಕ್ರಮವಾಗಿ ಕುಂಠಿತಗೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ಅಭಿವೃದ್ಧಿಯೇತರ ವೆಚ್ಚದಲ್ಲಿ ಕ್ರಮವಾಗಿ ಹೆಚ್ಚಳವಾಗಿದೆ. ನಿಜವಾಗಿಯೂ ೧೯೯೦-೯೧ ರವರೆಗೆ ಅಭಿವೃದ್ಧಿ ಘಟಕದ ದರದ ಹೆಚ್ಚುವರಿಯು ಅಭಿವೃದ್ಧಿಯೇತರ ಘಟಕದ ದರಕ್ಕಿಂತ ಕಡಿಮೆಯಾಗಿತ್ತು. ಅಭಿವೃದ್ಧಿ ಘಟಕಕ್ಕೆ ವಾರ್ಷಿಕವಾಗಿ ೧೪.೬೫ ಶೇಕಡಾವಾಗಿದ್ದು ಇದಕ್ಕೆ ತದ್ವಿರುದ್ಧವಾಗಿ ಅಭಿವೃದ್ಧಿಯೇತರ ಘಟಕಕ್ಕೆ ೧೫.೧೨ ಶೇಕಡಾವಾಗಿತ್ತು. ೧೯೯೧-೯೨ ರಿಂದ ಈ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಬಂದಿದೆ. ಈ ಬದಲಾವಣೆಯು ಆದಾಯ ಮತ್ತು ಬಂಡವಾಳ ವೆಚ್ಚಗಳಲ್ಲಿ ಆರ್ಥಿಕ ಸುಧಾರಣೆಯ ಅನುರೂಪ ಪ್ರಕ್ರಿಯೆಯಿಂದಾಗಿದೆ ಹಾಗೂ ಈ ರೀತಿಯ ಮುಂದೆಯೂ ಉಳಿದುಕೊಂಡಲ್ಲಿ ಉತ್ಪಾದನೆ ವೆಚ್ಚದ ಅಂಶವು ಸುಧಾರಣೆಗೊಳ್ಳುತ್ತದೆ.

ಸರ್ಕಾರಿ ವೆಚ್ಚದ ಹಣಕಾಸು

ಕರ್ನಾಟಕ ರಾಜ್ಯದ ಹಣಕಾಸು ವೆಚ್ಚವು ಗಣನೀಯ ಪ್ರಮಾಣದಲ್ಲಿ ಹೆಚ್ಚುವರಿಯಾಗಿರುವುದನ್ನು ಈ ಹಿಂದೆಯೇ ಗಮನಿಸಿ ದಾಖಲಿಸಿವೆ. ಈ ಹಿನ್ನೆಲೆಯಲ್ಲಿ, ಬೆಳೆಯುತ್ತಿರುವ ಸರ್ಕಾರದ ವೆಚ್ಚಕ್ಕೆ ಹೇಗೆ ಹಣಕಾಸಿನ ವ್ಯವಸ್ಥೆಗೊಳಿಸುವುದು ಅನ್ನುವ ಮೂಲ ಪ್ರಶ್ನೆಗೆ ಉತ್ತರಿಸುವುದು ಅವಶ್ಯವಾಗಿದೆ. ಹಾಗೂ ವರ್ಷದ ಕಂದಾಯದ ಮೂಲಗಳು ರಾಜ್ಯದ ವೆಚ್ಚವನ್ನು ಭರಿಸುವಲ್ಲಿ ಸಾಕಷ್ಟು ಇವೆಯೇ ಅಥವಾ ಸರ್ಕಾರವು ಹಣಕಾಸಿನ ಮೂಲಕ್ಕಾಗಿ ಜಂಜಾಡುತ್ತಿದೆಯೇ ಎಂದು ಗಮನವಹಿಸುವುದು ಕೂಡ ಅಗತ್ಯವಿದೆ. ಇದು ರಾಜ್ಯದ ಹಣಕಾಸಿನ ಹೆಚ್ಚುವರಿ/ಕೊರತೆ ಸ್ಥಾನಗಳ ಮೇಲೆ ಮತ್ತು ರಾಜ್ಯದ  ಹಣಕಾಸಿನ ಸಾಧನೆ ಮೇಲೆ ಬೆಳಕು ಚೆಲ್ಲಬಹುದು.

ಹೆಚ್ಚುತ್ತಿರುವ ಸಾರ್ವಜನಿಕ ವೆಚ್ಚದ ಬೇಡಿಕೆಯಲ್ಲಿ ಸಾರ್ವಜನಿಕರ ಮೇಲೆ ಹೊಸ ಮತ್ತು ಹೆಚ್ಚು ಭಾರ ಹೊರಿಸುವ ಮೊದಲು ಪ್ರಸ್ತುತ ಇರುವ ತೆರಿಗೆ ಮೂಲಗಳನ್ನು ಸಮುದಾಯ ಕಲ್ಯಾಣಕ್ಕಾಗಿ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡುವ ಅಗತ್ಯತೆ ಇದೆ ಎಂದು ತರ್ಕಬದ್ಧವಾಗಿ ತೆರಿಗೆ ವಿಚಾರ ಸಮಿತಿಯು ಹೇಳಿಕೆ ನೀಡಿದೆ (೧೯೫೩-೫೪, ೩೪). ಹೀಗಿರುವಾಗ, ಸರ್ಕಾರಿ ಆದಾಯವನ್ನು ಒಟ್ಟು ಸೇರಿಸುವ ಮಟ್ಟದಲ್ಲಿ ವಿವಿಧ ಮೂಲಗಳಿಂದ, ತೆರಿಗೆ, ತೆರಿಗೆಯೇತರ, ಸಾಲ ಇತ್ಯಾದಿಗಳನ್ನು ವಿಶ್ಲೇಷಿಸುವ ಅಗತ್ಯ ಇದೆ. ಇದು ಸಂಪನ್ಮೂಲದ ಕ್ರೋಢೀಕರಣ ಮಾಡುವಲ್ಲಿ ಸರ್ಕಾರದ ಪ್ರಯತ್ನ ಮತ್ತು ಈ ಆರ್ಥಿಕತೆಯಲ್ಲಿ ಪ್ರತಿಯೋರ್ವ ವ್ಯಕ್ತಿಯ ಮೇಲೆ ಇರುವ ತೆರಿಗೆ ಹೊರೆಯ ಲೆಕ್ಕವನ್ನು ಕೊಡುತ್ತದೆ.

ಸರ್ಕಾರದ ಆದಾಯದ ರಚನೆ

ತೆರಿಗೆ ಆದಾಯ, ತೆರಿಗೆಯೇತರ ಆದಾಯ ಮತ್ತು ಬಂಡವಾಳ ಜಮೆಗಳಂತಹ ಆದಾಯದ ಒಟ್ಟು ಸೇರಿಸದ ವಿಶ್ಲೇಷಣೆಯಲ್ಲಿ ಸರ್ಕಾರದ ಸಂಪನ್ಮೂಲ ಕ್ರೋಢೀಕರಣದ ಯತ್ನ ಸ್ಪಷ್ಟವಾಗಿ ಕಾಣುತ್ತದೆ. ಭಾರತದಲ್ಲಿ ರಾಜ್ಯಗಳ ಮುಖ್ಯವಾದ ಆದಾಯದ ಮೂಲ ಕೇಂದ್ರದಿಂದ ಜಮೆಯಾಗುವಂತಹ ಹಣ. ಆದುದರಿಂದ, ರಾಜ್ಯ ಹಣಕಾಸಿನಲ್ಲಿ ಜಮೆಯ ಪಾತ್ರವನ್ನು ಪ್ರಸ್ತುತ ವಿಶ್ಲೇಷಣೆಯ ಒಂದು ಪ್ರಮುಖ ಅಂಗವಾಗಿದೆ.

ಕೋಷ್ಟಕ ನಾಲ್ಕರ ಪ್ರಕಟಣೆಯಂತೆ,ರಾಜ್ಯದ ಸ್ವಂತ ತೆರಿಗೆ, ತೆರಿಗೆಯೇತರ ಮೂಲ ಮತ್ತು ತೆರಿಗೆ ಹಾಗೂ ತೆರಿಗೆಯೇತರ ಗುಂಪಿನಲ್ಲಿ ಬರತಕ್ಕ ಕೇಂದ್ರದ ಜಮೆಗಿಂತ ತುಲಾನಾತ್ಮಕವಾಗಿ ರಾಜ್ಯದಲ್ಲಿ ಎಲ್ಲಾ ಮೂಲಗಳಿಂದ ಬರತಕ್ಕ ಆದಾಯದ ಪಾಲು ಆಗಾಧವಾಗಿದೆ. ಇದು ೧೯೬೧-೬೨ ರಲ್ಲಿ ರೂ. ೯೧.೦೨ ಕೋಟಿಗಳಾಗಿದ್ದು, ೧೯೯೪-೯೫ರ ಅವಧಿಗೆ ೮೧೬೮.೩೬ ಕೋಟಿ ರೂಪಾಯಿಗೆ ಹೆಚ್ಚುವರಿದಿದೆ. ಇದರ ಪ್ರಮಾಣವು ಮಟ್ಟವು ೮೯ ಪಟುವಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಆದಾಯದ ಸಂಬಂಧಿತ ಪಾಲು ೧೯೬೧-೬೨ ರಲ್ಲಿ ೫೯.೬೦ ಶೇಕಡಾವಾಗಿದ್ದು, ೧೯೯೪-೯೫ರ ಅವಧಿಗೆ ೮೨.೫೪ ಶೇಕಡಾಕ್ಕೆ ಏರಿಕೆಯಾಗಿದೆ. ಇನ್ನೊಂದು ಕಡೆ ಬಂಡವಾಳ ಜಮೆಯ ಒಟ್ಟು ಮೊತ್ತದ ಪ್ರಮಾಣವು ೧೯೬೧-೬೨ರಲ್ಲಿ ರೂ. ೬೧.೬೯ ಕೋಟಿಯಿಂದ ೧೯೯೪-೯೫ರ ಅವಧಿಗೆ ರೂ.೧, ೭೨೮.೩೧ ಕೋಟಿಗೆ ಏರಿಕೆಯಾಗಿದ್ದು ಇದರ ಪ್ರಮಾಣ ೨೭ ಪಟ್ಟು ಅಧಿಕಗೊಂಡಿದೆ. ರಾಜಸ್ವ ಜಮೆಯ ವಾರ್ಷಿಕ ಸರಾಸರಿ ಬೆಳವಣಿಗೆಯ ದರವು ೧೩.೨೯ ಆಗಿದ್ದು, ಇದಕ್ಕೆ ವಿರೋಧಾಭಾಸವಾಗಿ ಬಂಡವಾಳ ಜಮೆಯ ವಾರ್ಷಿಕ ಸರಾಸರಿ ಬೆಳವಣಿಗೆಯ ದರವು ೮.೪೮ ಶೇಕಡಾ ಆಗಿದೆ. ಇದು ರಾಜಸ್ವ ಜಮೆಯ ಹೆಚ್ಚಳದ ಮಟ್ಟಕ್ಕಿಂತ ಕಡಿಮೆಯಾಗಿದೆ. ರಾಜ್ಯದ ಒಟ್ಟು ಆದಾಯದ ಸಂಬಂಧಿತ ಪಾಲು ೧೯೬೧-೬೨ ರಲ್ಲಿ ೪೦.೪ ಶೇಕಡವಾಗಿದ್ದು, ೧೯೯೪-೯೫ರ ಅವಧಿಗೆ ೧೭.೪೬ ಶೇಕಡಾಕ್ಕೆ ತೀವ್ರವಾಗಿ ಇಳಿದಿದೆ.

ರಾಜಸ್ವ ಮತ್ತು ಬಂಡವಾಳ ಜಮೆಯ  ವಿಶ್ಲೇಷಣೆಯಿಂದ ತಿಳಿದುಬರುವುದೇನೆಂದರೆ ರಾಜ್ಯವು ರಾಜಸ್ವ ಜಮೆಯನ್ನು ಹೆಚ್ಚಾಗಿ ಅಲವಂಬಿಸಿದೆ. ತೆರಿಗೆ ಮತ್ತು ತೆರಿಗೆಯೇತರ ರೂಪದಲ್ಲಿ ಬರತಕ್ಕ ಕೇಂದ್ರದ ಜಮೆಯು ಕಡಿಮೆಯಾಗಿದೆ.

ರಾಜ್ಯದ ಸ್ವಂತ ಆದಾಯ – ತೆರಿಗೆ ಮತ್ತು ತೆರಿಗೆಯೇತರ

ಕರ್ನಾಟಕದಲ್ಲಿ ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯ ಮೂಲವನ್ನು ತುಲಾನಾತ್ಮಕವಾಗಿ ಗಮನಿಸಿದಾಗ ತೆರಿಗೆ ಆದಾಯವು ತೆರಿಗೆಯೇತರ ಆದಾಯಕ್ಕಿಂತ ಅಧಿಕ ವೇಗದಲ್ಲಿ ಹೆಚ್ಚುವರಿಯಾಗುತ್ತಿದೆ. ತೆರಿಗೆ ಆದಾಯವು ೧೬೫ ಪಟ್ಟು ಹೆಚ್ಚುವರಿಯಾದರೆ, ತೆರಿಗೆಯೇತರ ಆದಾಯವು ೩೮ ಪಟ್ಟು ಅಧಿಕಗೊಂಡಿದೆ. ತೆರಿಗೆ ಆದಾಯದ ಬೆಳವಣಿಗೆ ದರವು ಹಿಂದಿನ ವರ್ಷಗಳಲ್ಲಿ ವಾರ್ಷಿಕ ಸರಾಸರಿ ೧೬.೨೪ ಆಗಿದ್ದು ಮುಂದಿನ ವರ್ಷಗಳಲ್ಲಿ ವಾರ್ಷಿಕ ಸರಾಸರಿ ೯.೬೫ ರಷ್ಟಾಗಿದೆ.

೧೯೬೧-೬೨ರಲ್ಲಿ ತೆರಿಗೆ ಮೂಲಗಳಿಂದ ಬಂದ ಆದಾಯವು ರೂ. ೩೬.೦೫ ಕೋಟಿಯಿಂದ ೧೯೯೪-೯೫ಕ್ಕೆ ರೂ. ೫೯೯೭.೨ ಕೋಟಿಗೆ ಹೆಚ್ಚಳವಾಗಿದೆ. ಇನ್ನೊಂದು ಕಡೆ, ತೆರಿಗೆಯೇತರ ಮೂಲಗಳಿಂದ ಬಂದ ಆದಾಯವು ೧೯೬೧-೬೨ ರಲ್ಲಿ ರೂ. ೫೪.೯೭ ಕೋಟಿಗಳಾಗಿದ್ದು ೧೯೯೪-೯೫ರ ರಲ್ಲಿ ರೂ. ೨೧೭೧.೧೬ ಕೋಟಿಗೆ ಹೆಚ್ಚುವರಿದಿದೆ. ಇದು ೯೩ ಪಟ್ಟು ಇದರ ಪ್ರಮಾಣದಲ್ಲಿ ಹೆಚ್ಚುವರಿದಿದೆ. ಆದಾಗ್ಯೂ ಒಟ್ಟು ಮೊತ್ತದಲ್ಲಿ ಹೆಚ್ಚಳವಾಗಿದ್ದರೂ ಒಟ್ಟು ಮೊತ್ತದಲ್ಲಿ ಇದರ ಪಾಲು ೧೯೬೧-೬೨ರಲ್ಲಿ ೩೫.೮೨ ರಷ್ಟಿದ್ದು, ೧೯೯೪-೯೫ ರಲ್ಲಿ ೨೭.೧೫ ಕ್ಕೆ ಕುಂಠಿತಗೊಂಡಿದೆ. ಹಾಗೂ ರಾಜ್ಯದ ಸ್ವಂತ ತೆರಿಗೆಯು ವಾರ್ಷಿಕವಾಗಿ ೧೬.೪೧ ಶೇಕಡಾ ಅಧಿಕಗೊಂಡಿದ್ದು, ಕೇಂದ್ರದ ಜಮೆಯು ವಾರ್ಷಿಕವಾಗಿ ೧೫.೬೯ ಶೇಕಡಾದಷ್ಟು ಹೆಚ್ಚುವರಿದಿದ್ದು, ಇದು ರಾಜ್ಯದ ಜಮೆಯ ಹೆಚ್ಚಳದಂತೆ ಕಡಿಮೆಯಾಗಿದೆ. ಕೇಂದ್ರದ ಜಮೆಯು ಗಣನೀಯವಾಗಿ ಹೆಚ್ಚುವರಿದಿದ್ದರೂ ಇದರಿಂದಾಗಿ ಆರ್ಥಿಕ ಅವಶ್ಯಕತೆಗಳನ್ನು ಎದುರಿಸಲು ಸರ್ಕಾರ ಶಕ್ತವಾದರೂ ಸಹ ಇದರ ಪಾಲಿನಲ್ಲಿ ಇಳಿಕೆಯಾಗಿರುವುದು. ರಾಜ್ಯವು ಸ್ವಂತ ಸಂಪನ್ಮೂಲವನ್ನು ಜಮೆಯಾಗಿರುವ ಸಂಪನ್ಮೂಲಕ್ಕಿಂತ ಹೆಚ್ಚು ಅವಲಂಬಿಸಿದೆ.

ಸರ್ಕಾರದ ತೆರಿಗೆ ಸ್ಥಿತಿಸ್ಥಾಪಕತೆ

ಉಲ್ಲೇಖ ಮಾಡಿದ ವರ್ಷಗಳಲ್ಲಿ ರಾಜ್ಯದ ಆಂತರಿಕ ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರದ ಆದಾಯವು ಎರಡು ಪಟ್ಟು ಹೆಚ್ಚಳವಾಗಿದೆ. ೧೯೬೧-೬೨ರಲ್ಲಿ ರಾಜ್ಯದ ಆಂತರಿಕ ಉತ್ಪಾದನೆಯಲ್ಲಿ ಸರ್ಕಾರದ ಆದಾಯ ೧೪.೫೩ ಶೇಕಡಾದಿಂದ ೧೯೯೪-೯೫ರಲ್ಲಿ ೩೭.೫೮ಕ್ಕೆ ಅಧಿಕಗೊಂಡಿದೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ, ರಾಜ್ಯದ ತೆರಿಗೆ ಜಮೆಯಲ್ಲಿ ಸರ್ಕಾರದ ಆದಾಯದ ಪ್ರತಿಕ್ರಿಯೆಯ (Responsiveness) ವಿಶ್ಲೇಷಣೆಯನ್ನು ಒಟ್ಟು ಮೊತ್ತ (ಒಟ್ಟು ಸರ್ಕಾರದ ಜಮೆ) ಮತ್ತು ಒಟ್ಟು ಮೊತ್ತವಲ್ಲದ (ತೆರಿಗೆ ಆದಾಯ ತೆರಿಗೆಯೇತರ ಮತ್ತು ಒಟ್ಟು ರಾಜಸ್ವ ಜಮೆ) ಮಟ್ಟದಲ್ಲಿ ಪ್ರಯತ್ನಿಸಲಾಗಿದೆ. ಪಡೆದಿರುವ ಕಂದಾಯ ಮತ್ತು ರಾಜ್ಯದ ಆಂತರಿಕ ಉತ್ಪಾದನೆಯ ಅಂಕಿ – ಅಂಶಗಳು, ತಲಾ ಕಂದಾಯದಂತೆ ತೆಗೆದುಕೊಳ್ಳಲಾಗಿದೆ (ಬೆಲೆ ಮತ್ತು ಜನಸಂಖ್ಯೆ ಬೆಳವಣಿಗೆಯನ್ನು ಹೊಂದಿಕೊಂಡಿದೆ). ಈ ಮಾದರಿಯ ಉಪಯೋಗವೆಂದರೆ ನೇರವಾಗಿ ನಿರಂತರ ಸ್ಥಿತಿಸ್ಥಾಪಕವು ಬದಲಾವಣೆಯನ್ನು (Variables) ಪಡೆಯುವುದು ಮತ್ತು ರಿಗ್ರೇಷನ್ ಕೋ ಎಫಿಶಿಯಂಟ್ (Regression Co- efficient) (ಬಿ) ಸ್ಥಾಪಕತ್ವ ಕೋ-ಎಫಿಶೀಯೆಂಟ್‌ನ್ನು ಪ್ರತಿನಿಧಿಸುತ್ತದೆ.

ರಾಜ್ಯದ ಜಮೆಯು ಆದಾಯದಲ್ಲಿ ಬದಲಾವಣೆ ತರಲು ಮುಖ್ಯ ಜವಾಬ್ದಾರಿಯಾಗಿದೆ ಎಂದು ಅನುಭವಿ ಫಲಿತಾಂಶವು ತೋರ್ಪಡಿಸುತ್ತದೆ. ತೆರಿಗೆ ಆದಾಯ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯೆಯನ್ನು  ಪ್ರಕಟಗೊಳಿಸಿದೆ ಎಂದು ಗಮನಿಸಲಾಗಿದೆ (೪.೬೬ ಶೇಕಡಾ). ತೆರಿಗೆಯೇತರ ಆದಾಯ ಸ್ಥಿತಿ ಸ್ಥಾಪಕತ್ವವಾಗಿದ್ದರೂ ಪ್ರತಿ ಒಂದು ಶೇಕಡಾ ಆದಾಯದ ಹೆಚ್ಚುವರಿಯಲ್ಲಿ ಕೇವಲ ೧.೭ ಶೇಕಡಾ ಹೆಚ್ಚುವರಿಯು ತೋರಿಸುತ್ತಿದ್ದು ಪಟ್ಟಭದ್ರವಾಗಿ ತೆರಿಗೆ ಆದಾಯದಲ್ಲಿ ೪.೬೬ ಶೇಕಡಾ ಹೆಚ್ಚಳವನ್ನು ತೋರುತ್ತದೆ.

ಉನ್ನತ ಆದಾಯ ಸ್ಥಿತಿಸ್ಥಾಪಕತೆಯನ್ನು ಸರ್ಕಾರಿ ಆದಾಯದಲ್ಲಿ ಸಾಮಾನ್ಯವಾಗಿ ಹಾಗೂ ತೆರಿಗೆ ಆದಾಯದಲ್ಲಿ ನಿರ್ದಿಷ್ಟವಾಗಿ ಗಮನಿಸಲಾಗಿದೆ. ಇದು ರಾಜ್ಯ ಹಣಕಾಸಿನ ಒಂದು ಉತ್ತಮ ರೀತಿಯನ್ನು ಸೂಚಿಸುತ್ತದೆ. ಹೀಗೆಂದರೆ ರಾಜ್ಯದ ಆದಾಯವು ಹೆಚ್ಚುತ್ತಿರುವಂತೆ ಸರ್ಕಾರಿ ಆದಾಯವು ತನ್ನಷ್ಟಕ್ಕೆ ಬೆಳೆಯುವುದು ಹಾಗೂ ಇದು ಸರ್ಕಾರವು ತನ್ನ ಜವಾಬ್ದಾರಿಗಳನ್ನು ಈಡೇರಿಸಲು ಸಾಧ್ಯಗೊಳಿಸುತ್ತದೆ. ಸಹೋತದಲ್ಲಿ (೧೯೬೧, vii) ಪ್ರೊ. ವಿ.ಕೆ.ಆರ್.ವಿ.ರಾವ್ ತನ್ನ ಸಂಪಾದಕೀಯ ಪರಿಚಯದಲ್ಲಿ ಈ ಕೆಳಗಿನ ಹೇಳಿಕೆಯನ್ನು ಕೊಟ್ಟಿದ್ದಾರೆ. ‘ರಾಷ್ಟ್ರೀಯ ಆದಾಯದ ಹೆಚ್ಚಳವು ಯಾವ ಮಟ್ಟದ ತನಕ ಆರ್ಥಿಕ ಪ್ರಗತಿಯನ್ನು ಹಿಂಬಾಲಿಸುವುದೋ ಅಲ್ಲಿಯ ತನಕ ಸಾರ್ವಜನಿಕ ಖಜಾನೆಯೊಳಗೆ ತೆರಿಗೆಯಾಗಿ ಹೀರಲ್ಪಡುವುದು. ಇದು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯ ವೇಗವನ್ನು ಹೆಚ್ಚಿಸುವ ಒಂದು ಬಹು ಮುಖ್ಯ ವಿಷಯವೆನಿಸುತ್ತದೆ’.

ಹೀಗಿರುವಾಗ, ತೆರಿಗೆಯ ಪ್ರತಿಕ್ರಿಯೆಯನ್ನು (Responsiveness) ಸಾಮಾನ್ಯವಾಗಿ ಸರಕಾರಿ ಚಟುವಟಿಕೆಯ ಮಾರ್ಗದರ್ಶಿ ತತ್ವವೆಂದು ತೆಗೆದುಕೊಳ್ಳಲಾಗಿದೆ. ಆದಾಯದ ಅನುಪಾತಕ್ಕೆ ಅನುಗುಣವಾಗಿ ತೆರಿಗೆಯ ಹೆಚ್ಚಳವು ತೆರಿಗೆಯ ಸಮರ್ಪಕ ಬಳಕೆಯ ಒಂದೇ ಉತ್ತಮ ಪ್ರಗತಿಯಾಗಿದೆ ಎಂದು ವಾದಿಸಲಾಗಿದೆ. ಆದುದರಿಂದ ಕರ್ನಾಟಕದ ಫಲಿತಾಂಶಗಳನ್ನು ಗಮನಿಸಿದಾಗ ತೆರಿಗೆ ಸಾಮರ್ಥ್ಯದ ಉತ್ತಮ ಬಳಕೆಯನ್ನು ಸೂಚಿಸುತ್ತವೆ.

ಉಪಸಂಹಾರ

ಹಿಂದಿನ ಭಾಗದಲ್ಲಿ ಗಮನಿಸಿರುವಂತೆ ಕರ್ನಾಟಕ ರಾಜ್ಯದ ಹಣಕಾಸುಗಳು ಗಣನೀಯವಾದ ಬದಲಾವಣೆಗಳಿಗೆ ಒಳಪಟ್ಟಿವೆ. ಹೀಗಿದ್ದರೂ, ಇತ್ತೀಚಿನ ಒಟ್ಟಾರೆ ರೀತಿಗಳು (೧೯೯೧ರಿಂದ ೯೨) ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹದಾಯಕವಾಗಿ ಬದಲಾಗುತ್ತಿದ್ದು ಇದು ಹಿಂದಿನ ವರ್ಷಗಳಲ್ಲಿ ಗಮನಿಸುತ್ತಿದ್ದ ಕೆಟ್ಟ ಪರಿಣಾಮಗಳಿಗೆ ವಿರುದ್ಧವಾಗಿದೆ. ೧೯೮೦-೯೦ ದಶಕವು ಕೊರತೆ ಆದಾಯದ ಬೃಹತ್ ಪ್ರಮಾಣದ ಹೆಚ್ಚಳ ಲಕ್ಷಣವನ್ನು ಹೊಂದಿದೆ ಹಾಗೂ ಆದಾಯದಲ್ಲಿ ಬಂಡವಾಳಕ್ಕಿಂತ ಬೃಹತ್ ಹೆಚ್ಚಳ, ಯೋಜನೆಗಿಂತ ಯೋಜನೆಯೇತರ ಹಾಗೂ ಯೋಜನೆ ಬಂಡವಾಳ ವೆಚ್ಚಕ್ಕಿಂತ ಯೋಜಿತ ಆದಾಯ ಹೆಚ್ಚಳದ ಲಕ್ಷಣವನ್ನು ಹೊಂದಿದೆ. ಹಾಗೆ, ಮುಂಗಡ ಪತ್ರದ ಮೂಲಗಳಿಂದ ನಿವ್ವಳ ಬಂಡವಾಳ ರಚನೆಯ ಪ್ರಮಾಣ ಗಣನೀಯವಾಗಿ ಇಳಿದಿರುವುದು ಗಮನಿಸಲಾಗಿದೆ. ೧೯೯೧-೯೨ರಿಂದ ನಿವ್ವಳ ಬಂಡವಾಳ ರಚನೆಯಲ್ಲಿ ಸ್ವಲ್ಪ ಪ್ರಮಾಣದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮಟ್ಟವನ್ನು ಹೆಚ್ಚಿಸುವುದು.

ಕೋಷ್ಟಕ – ೧
ಕರ್ನಾಟಕದ ಆಯ – ವ್ಯಯದ ಸ್ಥಾನ

ವರ್ಷ ಕಂದಾಯ ಲೆಕ್ಕ ಬಂಡವಾಳ ಲೆಕ್ಕ ಒಟ್ಟುಮೊತ್ತ
೧೯೬೦-೬೧ ೨.೨೮ ೨.೨೯ ೦.೦೧
೧೯೬೧-೬೨ ೪.೬೭ ೧.೩೯ ೬.೦೧
೧೯೬೬-೬೭ ೪.೯೬ ೧೭.೦೭ ೧೦.೪೫
೧೯೬೯-೭೦ ೨೦.೧೮ ೨೧.೧ ೦.೭೪
೧೯೭೪-೭೫ ೪೮.೧೮ ೩೩.೭೭ ೧೫.೪೨
೧೯೭೮-೭೯ ೫೧.೭ ೪೬.೨೭ ೭.೯
೧೯೮೦-೮೧ ೫೮.೫೬ ೯೪.೪೯ ೪೦.೩೨
೧೯೮೫-೮೬ ೮೪.೭೪ ೧೭೧.೨ ೮೧.೪೮
೧೯೮೯-೯೦ ೧೧೭.೮೧ ೪೬.೮೪ ೧೭೬.೩
೧೯೯೦-೯೧ ೭೮.೯ ೧೩೧.೩ ೫೨.೧
೧೯೯೧-೯೨ ೧೭೮.೭ ೨೦೯.೭ ೩೧
೧೯೯೨-೯೩ ೧೭೦.೦೨ ೧೧೪.೨ ೫೫.೮೨
೧೯೯೩-೯೪ (RE) ೨೧೨.೬೧ ೨೧೫.೨೪ ೨.೬೩
೧೯೯೪-೯೫ (BE) ೨೧೯.೯೪ ೪೨೨.೦೨ ೨೦೨.೦೮

ಸೂಚನೆ : ಹೆಚ್ಚುವರಿ + RE =  ಪರಿಷ್ಕೃತ ಅಂದಾಜು
ಕೊರತೆ -RE =  ಆಯವ್ಯಯ ಅಂದಾಜು

ಮೂಲ : ಗಾಯತ್ರಿ ಕೆ, ೧೯೯೧, ಕರ್ನಾಟಕದಲ್ಲಿ ಸಾರ್ವಜನಿಕ ವೆಚ್ಚದ ಮಾದರಿ, ಸಂಶೋಧನಾ ವರದಿ, ಐಸೆಕ್, ಬೆಂಗಳೂರು, ೧೯೮೯ ರಿಂದ ೧೯೯೦ ಮತ್ತು ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ

ಕೋಷ್ಟಕ – ೨
ಕರ್ನಾಟಕದಲ್ಲಿ ಕಂದಾಯ ಮತ್ತು ಆಯವ್ಯಯ ವೆಚ್ಚ

(ರೂ. ಕೋಟಿಗಳಲ್ಲಿ)

ವರ್ಷ ಕಂದಾಯ ಲೆಕ್ಕ ಬಂಡವಾಳ ಲೆಕ್ಕ ಒಟ್ಟುಮೊತ್ತ
೧೯೬೧-೬೨ ೯೫.೬೯ ೩೩.೦೬ ೧೨೮.೭೫
(೭೪.೩೨) (೨೫.೬೮)  
೧೯೬೬-೬೭ ೧೫೧.೪೪ ೩೮.೨೫ ೧೮೯.೬೯
(೭೯.೮೪) (೨೦.೧೬)  
೧೯೬೯-೭೦ ೨೧೪.೫೪ ೫೭.೯೭ ೨೭೨.೫೧
(೭೮.೭೩) (೨೧.೨೭)  
೧೯೭೪-೭೫ ೩೬೪.೯೨ ೫೮.೯೨ ೪೨೩.೮೪
(೮೬.೧೦) (೧೩.೯೦)  
೧೯೭೮-೭೯ ೬೩೬.೮೫ ೧೩೫.೦೯ ೭೭೧.೯೪
(೮೨.೫೦) (೧೭.೫೦)  
೧೯೮೦-೮೧ ೮೪೯.೯ ೧೭೧.೬೮ ೧೦೬೬.೫೮
(೮೩.೯೦) (೧೬.೧೦)  
೧೯೮೫-೮೬ ೨೦೯೭.೮೫ ೨೭೮.೨೨ ೨೩೭೬.೦೭
(೮೮.೨೯) (೧೧.೭೦)  
೧೯೮೯-೯೦ ೩೪೮೨.೯೪ ೩೩೭.೯೯ ೩೮೨೦.೯೩
(೯೧.೧೫) (೮.೮೫)  
೧೯೯೦-೯೧ ೩೯೭೧.೦೯ ೬೫೪.೮೧ ೪೬೨೫.೯
(೮೫.೮೪) (೧೪.೧೬)  
೧೯೯೧-೯೨ ೪೯೫೪.೧೨ ೭೮೫.೮೬ ೫೭೩೯.೯೮
(೮೬.೩೧) (೧೩.೬೯)  
೧೯೯೨-೯೩ ೫೫೯೧.೬೯ ೭೮೬.೬೩ ೬೩೭೮.೩೨
(೮೭.೬೭) (೧೨.೩೩)  
೧೯೯೩-೯೪ B.E. ೬೪೫೯.೭೧ ೧೧೮೦.೬೬ ೭೬೪೦.೩೭
(೮೪.೫೫) (೧೫.೪೫)  
೧೯೯೪-೯೫ B.E. ೭೯೪೮.೬೩ ೧೩೮೮.೦೩ ೯೩೩೬.೬೬
(೮೫.೧೩) (೧೪.೮೭)  

ಸೂಚನೆ : ಆವರಣದೊಳಗೆ ಒಟ್ಟು ಮೊತ್ತದ ಶೇಕಡಾವಾರು ಅಂಕಿ ಅಂಶಗಳನ್ನು ಕೊಡಲಾಗಿದೆ.

ಮೂಲ : ಕೋಷ್ಟಕ ಒಂದರಲ್ಲಿ ತಿಳಿಸಿದಂತೆ

ಕೋಷ್ಟಕ – ೩
ಕರ್ನಾಟಕದಲ್ಲಿ ಅಭಿವೃದ್ಧಿ ಮತ್ತು ಅಭಿವೃದ್ಧಿಯೇತರ ವೆಚ್ಚಗಳು

(ರೂ. ಕೋಟಿಗಳಲ್ಲಿ)

  ಅಭಿವೃದ್ಧಿ ಯೋಜನೆ ಯೋಜನೇತರ ಒಟ್ಟು ಮೊತ್ತ ಅಭಿವೃದ್ಧಿ ಯೋಜನೆ ಯೋಜನೇತರ ಒಟ್ಟುಮೊತ್ತ
೧೯೬೧-೬೨ ೩೦.೧೮ ೬೪.೯೫ ೯೫.೧೩ ೭.೫೪ ೨೫.೨೭ ೩೨.೮೧
೧೯೭೪-೭೫ ೮೬.೯ ೨೨೩.೧೭ ೩೧೦.೦೬ ೦.೦೩ ೧೦೬.೬೫ ೧೦೬.೬೮
೧೯೭೮-೭೯ ೨೧೮.೭೮ ೩೫೮.೪ ೫೭೭.೧೮ ೦.೩೧ ೧೮೫.೨೮ ೧೮೫.೫೯
೧೯೮೦-೮೧ ೨೮೯.೦೬ ೪೭೯.೨೭ ೭೬೮.೩೩ ೧.೩೪ ೨೬೩.೨೭ ೨೬೪.೬೧
೧೯೮೫.೮೬ ೬೨೦.೦೬ ೧೦೫೫.೨೨ ೧೬೭೫.೨೮ ೯.೬೪ ೬೪೦.೩ ೬೪೯.೯೪
೧೯೮೯-೯೦ ೯೮೩-೬೯ ೧೭೯೭.೪೧ ೨೭೮೧.೧ ೧೭.೨೮ ೧೦೫೮.೧೭ ೧೦೭೫.೪೫
೧೯೯೦-೯೧ ೧೪೪೦.೯೯ ೧೯೦೦.೬೫ ೩೩೪೧.೬೪ ೧೬.೨೮ ೧೧೬೯.೭ ೧೦೮೫.೯೮
೧೯೯೧-೯೨ ೧೬೬೩.೭೧ ೨೫೨೨.೭೯ ೪೧೮೬.೫ ೧೮.೬೯ ೧೪೧೬.೯ ೧೪೩೫.೫೯
೧೯೯೪-೯೫ (B.E) ೩೪೨೪.೭೨ ೩೩೯೧.೮೩ ೬೮೧೬.೫೫ ೩೭.೫೧ ೨೩೧೬.೫೬ ೨೩೫೪.೦೭

ಮೂಲ : ಕೋಷ್ಟಕ ಒಂದರಲ್ಲಿ ತಿಳಿದಂತೆ

ಕೋಷ್ಟಕ – ೪
ಕರ್ನಾಟಕ ಸರ್ಕಾರದ ಜಮೆ (ಸಂದಾಯಗಳು)

ವರ್ಷ ಕಂದಾಯ ಬಂಡವಾಳ ಒಟ್ಟು ಮೊತ್ತ
೧೯೬೧-೬೨ ೯೧.೦೨ ೬೧.೬೯ ೧೫೨.೭೧
(೫೯.೬೦) (೪೦.೪೦)  
೧೯೬೬-೬೭ ೧೫೪.೪ ೧೦೭.೪೪ ೨೬೧.೮೪
(೫೮.೯೭) (೪೧.೦೩)  
೧೯೬೯-೭೦ ೨೩೪.೭೨ ೧೩೨.೪ ೩೬೭.೧೨
(೬೩.೯೩) (೩೬.೦೭)  
೧೯೭೪-೭೫ ೪೧೩.೧ ೧೦೭.೯೭ ೫೨೧.೦೭
(೭೯.೨೮) (೨೦.೭೨)  
೧೯೭೮-೭೯ ೬೮೮.೫೫ ೨೧೬.೬೨ ೯೦೫.೧೭
(೭೬.೦೭) (೨೩.೯೩)  
೧೯೮೦-೮೧ ೯೫೩.೪೬ ೨೮೩.೦೧ ೧೨೩.೪೭
(೭೭.೧೧) (೨೨.೮೯)  
೧೯೮೫-೮೬ ೨೦೧೩.೧೧ ೧೦೫೯.೭೬ ೩೦೭೨.೮೭
(೬೫.೫೧) (೩೪.೪೯)  
೧೯೮೯-೯೦ ೩೩೩೬.೪೮ ೧೦೯೧.೮೬ ೪೪೨೮.೩೪
(೭೫.೩೪) (೨೪.೬೬)  
೧೯೯೦-೯೧ ೩೮೯೨.೧೮ ೧೧೧೭.೯೬ ೫೦೧೦.೧೪
(೭೭.೬೯) (೨೨.೩೧)  
೧೯೯೧-೯೨ ೪೭೭೫.೪೬ ೧೪೩೨.೨೧ ೬೨೦೭.೬೭
(೭೬.೯೩) (೨೩.೦೭)  
೧೯೯೨-೯೩ ೫೪೨೧.೬೬ ೧೬೦೪.೧೯ ೭೦೨೫.೮೫
(೭೭.೧೭) (೨೨.೮೩)  
೧೯೯೩-೯೪ (B.E) ೬೬೭೨.೩೨ ೧೬೫೫.೮೯ ೮೩೨೮.೨೧
(೮೦.೧೨) (೧೯.೮೮)  
೧೯೯೪-೯೫ (B.E) ೮೧೬೮.೩೬ ೧೭೨೮.೩೧ ೯೯೮೬.೬೭
(೮೨.೫೪) (೧೭.೪೬)  

ಸೂಚನೆ : ಆವರಣದೊಳಗೆ ಒಟ್ಟು  ಮೊತ್ತದ ಶೇಕಡಾವಾರು ಅಂಕಿ ಅಂಶಗಳನ್ನು ಕೊಡಲಾಗಿದೆ.

ಮೂಲ : ಕೋಷ್ಟಕ ಒಂದರಲ್ಲಿ ತಿಳಿಸಿದಂತೆ

* ಹೆಚ್ಚು ವಿವರಗಳಿಗೆ, ಗಾಯತ್ರಿ.ಕೆ. ಅವರ ‘ಬೆಳವಣಿಗೆ ಮತ್ತು ರಾಜ್ಯ ವೆಚ್ಚದ ರೀತಿ’: ಕರ್ನಾಟಕದ ಅಧ್ಯಯನ – ೧೯೯೦, ಪಿ.ಎಚ್.ಡಿ. ಸಂಶೋಧನೆ ಪ್ರಬಂಧ, ಮೈಸೂರು ವಿಶ್ವವಿದ್ಯಾಲಯ ಹಾಗೂ ಗಾತ್ರಿ.ಕೆ., ೧೯೯೧ ‘ಕರ್ನಾಟಕದ ಸಾರ್ವಜನಿಕ ವ್ಯಯದ ರೀತಿ’, ಒಂದು ಅಪ್ರಕಟಿತ ಸಂಶೋಧನಾ ವರದಿ, ಐ.ಎಸ್.ಇ.ಸಿ., ಬೆಂಗಳೂರು.

 

* ಹೆಚ್ಚು ವಿವರಗಳಿಗೆ, ಗಾಯತ್ರಿ. ಕೆ. ಅವರ ‘ಬೆಳವಣಿಗೆ ಮತ್ತು ರಾಜ್ಯ ವೆಚ್ಚದ ರೀತಿ’: ಕರ್ನಾಟಕದ ಅಧ್ಯಯನ-೧೯೯೦, ಪಿ.ಎಚ್.ಡಿ. ಸಂಶೋಧನೆ ಪ್ರಬಂಧ, ಮೈಸೂರು ವಿಶ್ವವಿದ್ಯಾಲಯ ಹಾಗೂ ಗಾಯತ್ರಿ ಕೆ., ೧೯೯೧ ‘ಕರ್ನಾಟಕದ ಸಾರ್ವಜನಿಕ ವ್ಯಯದ ರೀತಿ’, ಒಂದು ಅಪ್ರಕಟಿತ ಸಂಶೋಧನಾ ವರದಿ, ಐ.ಎಸ್.ಇ.ಸಿ., ಬೆಂಗಳೂರು.