೧೩-೧೧-೯೫ರಂದು ನಡೆದ ಎರಡನೆ ತಾಂತ್ರಿಕ ಗೋಷ್ಠಿಯಲ್ಲಿ ಒಟ್ಟು ನಾಲ್ಕು ಪ್ರಬಂಧಗಳು ಮಂಡಿತರಾದವು. ಇವುಗಳ ಪೈಕಿ ಮೊದಲನೆಯದು ಡಾ.ಎಂ. ವೆಂಕಟರೆಡ್ಡಿಯವರು ನೀರಾವರಿ ಅಭಿವೃದ್ಧಿಯ ಸಮಸ್ಯೆಗಳನ್ನು ಕುರಿತದ್ದು. ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಸಣ್ಣ ಪ್ರಮಾಣದ ಮತ್ತು ಅಂತರ್ಜಲ ಮೂಲದ ನೀರಾವರಿ ಸೌಲಭ್ಯಗಳನ್ನು ಹೀಗೆ ಬಳಸಿಕೊಳ್ಳಲಾಗಿದೆ ಮತ್ತು ಇನ್ನು ಮುಂದೆ ಹೇಗೆ ನಾವು ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಸೌಲಭ್ಯಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ ಎಂಬುದನ್ನು ವಿವರಿಸಿದರು. ನೀರಾವರಿ ಅಂತರ್ ಸಾಮರ್ಥ್ಯವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲದಿರುವುದನ್ನು ಮತ್ತು ಮುಂದಿನ ಐದು ವರ್ಷಗಳಲ್ಲಿನ ಕೃಷ್ಣಾನದಿಯ ನೀರಿನ ಕರ್ನಾಟಕದ ಪಾಲನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳ ಬೇಕಾಗಿರುವುದರ ಅಗತ್ಯವನ್ನು ಪ್ರಸ್ತಾಪಿಸಿದರು. ನೀರಾವರಿಯ ಉಪಯೋಗಿಸಿಕೊಳ್ಳ ಬೇಕಾಗಿರುವುದರ ಅಗತ್ಯವನ್ನು ಪ್ರಸ್ತಾಪಿಸಿದರು. ನೀರಾವರಿಯ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ಹಣಕಾಸಿನ ಕೊರತೆ, ನೀರಾವರಿ ಸೌಲಭ್ಯ ಸೃಷ್ಟಿಯಾಗಿದ್ದರೂ ನೀರಿನ ವಿತರಣೆ ಸರಿಯಾಗಿ ಆಗದಿರುವುದು ಜಮೀನಿನ ಆಗದಿರುವುದು, ನೀರಿನ ನಿಲ್ಲುವಿಕೆಯಿಂದ ಕ್ಷಾರಾಂಶ ಜಾಸ್ತಿಯಾಗಿ ಭೂಮಿ ಅನುಪಯುಕ್ತವಾಗಿರುವುದು ಮುಂತಾದವುಗಳನ್ನು ವಿವರಿಸಿದರು. ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಈ ಕೆಳಗಿನ ಪರಿಹಾರಗಳನ್ನು ಸೂಚಿಸಿದರು. ೧. ದೊಡ್ಡ ಮತ್ತು ಮಧ್ಯಮ ಪ್ರಮಾಣದ ನೀರಾವರಿ ಯೋಜನೆಗಳಿಂದ ದೊರಕುತ್ತಿರುವ ಸೌಲಭ್ಯ ರೈತರಿಗೆ ಸರಿಯಾಗಿ ಮುಟ್ಟುವ ವ್ಯವಸ್ಥೆಯಾಗಬೇಕು, ೨. ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು, ೩. ಅಂತರ್ಜಲ ಮತ್ತು ಕಾಲುವೆ ನೀರಾವರಿ ಸಂಯುಕ್ತವಾಗಿ ಅಭಿವೃದ್ಧಿಯಾಗಬೇಕು, ೪. ನೀರಾವರಿ ನಿರ್ವಹಣೆಗೆ ನೀರಾವರಿ ಸಂಘಗಳು ಅಸ್ತಿತ್ವಕ್ಕೆ ಬರಬೇಕು.

ಈ ಗೋಷ್ಠಿಯಲ್ಲಿ ಮಂಡಿತವಾದ ಎರಡನೇ ಪ್ರಬಂಧ ಡಾ.ಪಿ.ವಿ.ಶೆಣೈ ಮತ್ತು ಡಾ.ಎಂ.ವಿವೇಕಾನಂದ ಅವರ ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿಯನ್ನು ಕುರಿತದ್ದು. ಈ ಪ್ರಬಂಧವನ್ನು ಕರ್ನಾಟಕದ ಕೃಷಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ವಿಶ್ಲೇಷಿಸಲಾಯಿತು. ಬೆಳೆಯ ಮಾದರಿ, ಇಳುವಳಿ, ಪ್ರಾದೇಶಿಕ ವ್ಯತ್ಯಾಸಗಳು, ವಾಣಿಜ್ಯ ಬೆಳೆಗಳು ಪ್ರಾಧಾನ್ಯಗಳಿಸಿಕೊಂಡಿರುವುದು, ಕೃಷಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುವ ಬದಲು ಸ್ಥಗಿತಗೊಂಡಿರುವುದು ಮುಂತಾದ ಅಂಶಗಳನ್ನು ಈ ಪ್ರಬಂಧದಲ್ಲಿ ಪ್ರಸ್ತಾಪ ಮಾಡಲಾಯಿತು.

ಈ ಗೋಷ್ಠಿಯಲ್ಲಿ ಮಂಡಿತವಾದ ಮೂರನೆಯ ಪ್ರಬಂಧ ಡಾ.ವಿ.ಎಂ.ರಾವ್ ಅವರ ಕರ್ನಾಟಕದ ಗ್ರಾಮೀಣ ಅಭಿವೃದ್ಧಿಯನ್ನು ಕುರಿತದ್ದು. ಗ್ರಾಮೀಣ ಅಭಿವೃದ್ಧಿಯ ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡುವ ಅಗತ್ಯವನ್ನು ಈ ಪ್ರಬಂಧ ಒತ್ತಿ ಹೇಳುತ್ತದೆ. ಈ ಪ್ರಬಂಧ ಮುಖ್ಯ ಕೊಡುಗೆ ಎಂದರೆ ಬಂಬಲ ನೀತಿಗಳು, ಹೂಡಿಕೆಯ ನೀತಿಗಳು ಮತ್ತು ನಿಯಂತ್ರಕ ನೀತಿಗಳ ಇವುಗಳ ಮುಖಾಂತರ ಹೇಗೆ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಬಹುದು ಎಂಬುದು.

ಈ ಗೋಷ್ಠಿಯ ನಾಲ್ಕನೆಯ ಪ್ರಬಂಧವನ್ನು ಮಂಡಿಸಿದವರು ಡಾ.ಸಿ.ಕೆ. ರೇಣುಕಾರ್ಯ ಅವರು. ಈ ಪ್ರಬಂಧ ಕರ್ನಾಟಕದಲ್ಲಿ ಕೈಗಾರಿಕಾ ಸಂಬಂಧಗಳ ಒಂದು ಪಕ್ಷಿನೋಟವನ್ನು ಕೊಡಲಾಯಿತು. ಕೈಗಾರಿಕಾ ಸಂಬಂಧಗಳಲ್ಲಿ ಕಾರ್ಮಿಕರು, ಉದ್ಯಮಪತಿಗಳು ಮತ್ತು ಸರ್ಕಾರ ವಹಿಸಬೇಕಾಗುವ ಮತ್ತು ವಾಸ್ತವವಾಗಿ ವಹಿಸುತ್ತಿರುವ ಪಾತ್ರವನ್ನು ತಮ್ಮ ಮಂಡನೆಯಲ್ಲಿ ಅವರು ಪ್ರಸ್ತಾಪಿಸಿದರು. ಕೆಲವು ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ಕಾರ್ಮಿಕ ಸಂಘಗಳು ದುರ್ಬಲವಾಗಿರುವುದಕ್ಕೆ ಕಾರಣವಾಗಿರುವ ಅಂಶಗಳನ್ನು ವಿವರಿಸಿದರು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಉತ್ತಮ ಕೈಗಾರಿಕಾ ಸಂಬಂಧಗಳು ಇರುವುದನ್ನೂ ಮತ್ತು ಇದರಿಂದ ರಾಜ್ಯಕ್ಕೆ ಹೊರಗಿನಿಂದ ಬಂಡವಾಳ ಹರಿದುಬರುವುದಕ್ಕೆ ಸಹಾಯವಾಗಿರುವುದನ್ನು ಗಮನಕ್ಕೆ ತಂದರು.

ಈ ನಾಲ್ಕು ಪ್ರಬಂಧಗಳು ಮಂಡನೆಯ ನಂತರ ಚರ್ಚೆಯಲ್ಲಿ ಅನೇಕರು ಭಾಗವಹಿಸಿದರು.

ಮೊದಲನೆಯದಾಗಿ ಡಾ.ಪುರುಷೋತ್ತಮ ಬಿಳಿಮಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಕೃಷಿಯ ಬದಲಾವಣೆಗಳ ಬಗ್ಗೆ ಕೆಲವು ಆತಂಕಗಳನ್ನು ವ್ಯಕ್ತಪಡಿಸಿದರು. ಆಹಾರ ಧಾನ್ಯಗಳಿಂದ ರಬ್ಬರ್‌ನಂತಹ ವಾಣಿಜ್ಯ ಕೃಷಿಗೆ ಆದ ಬದಲಾವಣೆ ಹಾಗೂ ಇಂತಹ ಬದಲಾವಣೆಗಳಲ್ಲಿ ಮೂಲಕ ಗ್ರಾಮೀಣ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಗ್ರಾಮಗಳನ್ನು ಪ್ರವೇಶಿಸುತ್ತಿರುವ ನವವಸಾಹತು ಶಾಹಿ ಶಕ್ತಿಗಳು ಹಾಗೂ ಇಂತಹ ಬದಲಾವಣೆಗಳನ್ನು ಸೂಚಿಸಲು ಉಪಯೋಗಿಸಲಾಗುತ್ತಿರುವ ಅಧ್ಯಯನ ಕ್ರಮ ಮತ್ತು ಅಂಕಿ ಅಂಶಗಳ ಬಗ್ಗೆ ಅವರು ವಿದ್ವಾಂಸರ ಗಮನ ಹರಿಯಬೇಕೆಂದು ಸೂಚಿಸಿದರು.

ನೀರಾವರಿ ಕಾಲುವೆ ವ್ಯವಸ್ಥೆ ಅದರ ಸಂರಕ್ಷಣೆ ಬಗ್ಗೆ ಚರ್ಚೆಯನ್ನು ಎತ್ತಿದ ಡಾ.ಸಿ. ಮಹದೇವ ಅವರು ಮಂಡ್ಯ ಜಿಲ್ಲೆಯ ನೀರಾವರಿ ಕಾಲುವೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಅಂಶಗಳನ್ನು ಪ್ರಸ್ತಾಪಿಸಿದರು. ದುರಸ್ತಿ ಕಾರ್ಯಗಳಲ್ಲಿ ಆಗುವ ಅನಗತ್ಯ ವಿಳಂಬ, ಅದಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದಲ್ಲಿ ವ್ಯಾಪಕವಾಗಿರುವ ಲಂಚಗುಳಿತನ ಹಾಗೂ ಕಾಲುವೆಯ ಮೇಲು ದಂಡೆ ಹಾಗೂ ಕೆಲದಂಡೆಗಳ ಆಶ್ರಯದಲ್ಲಿರುವ ಭೂಮಿಗೆ ನೀರು ಒದಗಿಸುವಲ್ಲಿ ಉಂಟಾಗುತ್ತಿರುವ ತಾರತಮ್ಯ ಇಂತಹ ಅಂತಗಳ ಬಗ್ಗೆ ಪ್ರಸ್ತಾಪಿಸಿದ ಅವರು ಬೃಹತ್ ಪ್ರಮಾಣದ ನೀರಾವರಿ ಯೋಜನೆಗಿಂತ ಸಣ್ಣ ಪ್ರಮಾಣದ ನೀರಾವರಿ ಯೋಜನೆ ನಿಯೋಗಾತ್ಮಕವಾಗಿ ಹೆಚ್ಚು ಉಪಯುಕ್ತವಾಗಬಹುದು ಎಂದು ಸೂಚಿಸಿದರು.

ಹೊಸ ಭೂಕಾಯಿದೆ ಮತ್ತು ಸಣ್ಣ ಹಿಡುವಳಿಯ ರೈತರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರೊ.ಹಿ.ಚಿ. ಬೋರಲಿಂಗಯ್ಯನವರು ಸಣ್ಣ ಹಿಡುವಳಿಯ ರೈತರ ಆರ್ಥಿಕ ಬೆಂಬಲಕ್ಕಾಗಿ ರೂಪಿಸಿದ ರೇಶ್ಮೆ ವ್ಯವಸಾಯ ತಾಂತ್ರಿಕ ಸಂಪನ್ಮೂಲದ ಕೊರತೆಯಿಂದಾಗಿ ಅಸಫಲವಾಯಿತು ಎಂದರು. ರೈತರು ಹಿತವನ್ನು ನಿರ್ಲಕ್ಷಿಸಿ ವಿದೇಶೀ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂಬ ಅವರು ಉತ್ತರಪ್ರದೇಶದ ರೇಶ್ಮೆ ನೇಕಾರರಿಗೆ ಕರ್ನಾಟಕದ ರೇಶ್ಮೆ ಉಪಲಬ್ಧವಿರುವಾಗಲು ಚೀನಾದಿಂದ ರೇಷ್ಮೆಯನ್ನು ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ ಎಂದರು.

ನೀರಾವರಿ ದರದ ಬಗ್ಗೆ ಪ್ರಸ್ತಾಪಿಸಿದ ಡಾ.ಟಿ.ಆರ್. ಚಂದ್ರಶೇಖರ ಅವರು ಇಂದು ನೀರಾವರಿ ಯೋಜನೆಯ ನೀರಿನದರ ರಿಯಾಯಿತಿಯಿಂದ ಕೂಡಿದ್ದಾಗಿದ್ದು ಅದು ದೊಡ್ಡ ಹಿಡುವಳಿದಾರರಿಗೆ ಮತ್ತು ಹೆಚ್ಚು ಉಪಯುಕ್ತವಾಗುತ್ತಿದ್ದ ಸಣ್ಣ ಹಿಡುವಳಿದಾರರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು. ಅಲ್ಲದೆ ತರಿ ಮತ್ತು ಚುಕ್ಕಿ ಭೂಮಿಗಳಲ್ಲಿ ಸಂಬಂಧಿಸಿದಂತೆ ನೀರಾವರಿ ದರವನ್ನು ಸಮತೋಲನಗೊಳಿಸಬೇಕಾದ ಅಗತ್ಯವಿದೆ ಎಂದು ಸೂಚಿಸಿದರು.

ಡಾ. ಬಿಳಿಮಲೆ ಮತ್ತು ಪ್ರೊ.ಹಿ.ಚಿ.ಬೋರಲಿಂಗಯ್ಯನವರು ಎತ್ತಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ಚರ್ಚೆಯನ್ನು ವಿಸ್ತರಿಸಿದ ಡಾ.ಅಬ್ದುಲ್ ಅಜೀಜ್ ಅವರು ಅಧ್ಯಯನ ಕ್ರಮದ ದೃಷ್ಟಿಯಿಂದ ಮಾಹಿತಿಯ ಸಂಗ್ರಹವನ್ನು ಗುಣಾತ್ಮಕ ಮತ್ತು ಗಣನಾತ್ಮಕವಾಗಿ ಸಂಗ್ರಹಿಸಿ ಉಪಯೋಗಿಸಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ಗ್ರಾಮೀಣಾಭಿವೃದ್ಧಿಯ ಸೂಚನೆಗಳನ್ನು ಗುರಿತಿಸಿ Compound Index ಒಂದನ್ನು ರೂಪಿಸಿಕೊಳ್ಳುವುದರಿಂದ ಸಮಗ್ರವಾದ ಒಟ್ಟು ನೋಟವೊಂದನ್ನು ಪರಿಭಾವಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಡಾ. ಶೇಷಾದ್ರಿಯವರು ಗ್ರಾಮೀಣ ಆರ್ಥಿಕ ವ್ಯವಸ್ಥೆ ಮತ್ತು ಗ್ಲೋಬಲೈಜೇಷನ್‌ಗಳು ಪರಸ್ಪರ ವಿರುದ್ಧಗತಿಯ  ದ್ವಂದ್ವಗಳು ಹೀಗಾಗಿ ಗ್ಲೋಬಲೈಜೇಷನ್ ಪರಿಕಲ್ಪನೆಯನ್ನು ನಮ್ಮ ಗ್ರಾಮೀನ ಆರ್ಥಿಕ ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಬೇಕು ಎಂಬ ವಿವರಗಳ ಬಗ್ಗೆ ನಾವು ಗಮನಹರಿಸಬೇಕಾಗಿದೆ ಎಂದರು. ಕೈಗಾರಿಕಾಶಾಂತಿ ಕರ್ನಾಟಕದಲ್ಲಿ ನೆಲೆಸಿರುವ ಬಗ್ಗೆ ಡಾ.ರೇಣುಕಾರ್ಯರ ಪ್ರಬಂಧ ಸೂಚಿಸುವಂತೆ ಇದು ಕೇವಲ ಕಾರ್ಮಿಕ ಇಲಾಖೆಯ ಮಧ್ಯಪ್ರವೇಶದಿಂದ ಮಾತ್ರ ಸಾಧ್ಯವಾಯಿತೋ ಅಥವಾ ಅನ್ಯ ಕಾರಣಗಳು ಇವೆಯೇ ಎಂಬ ಬಗ್ಗೆ ಯೋಚಿಸಬೇಕು, ಮುಂದುವರೆದು ಈ ಕೈಗಾರಿಕಾ ಶಾಂತಿ ಅನ್ಯರಾಜ್ಯಗಳು ಮತ್ತು ವಿದೇಶೀ ಬಂಡವಾಳವನ್ನು ಆಕರ್ಷಿಸುತ್ತಿದ್ದಾರೆ ಅದು ಯಾವುದಾದರೂ ಬದಲಾವಣೆಗಳನ್ನು ಅಪೇಕ್ಷಿಸುತ್ತಿದೆಯೇ ಎಂಬುದನ್ನು ನೋಡಬೇಕು ಎಂದರು.

ಅಭಿವೃದ್ಧಿ ಎಂಬ ಪರಿಕಲ್ಪನೆಯ ಆರ್ಥಿಕ ಮುಖವನ್ನು ಪ್ರಶ್ನಿಸಿದ ಶ್ರೀ ಖಾಜಾಹುಸೇನ್ ನಿಯಾಜಿಯವರು ಕೇವಲ ಭೌತಿಕ ವಸ್ತುಗಳ ಗಳಿಕೆಯಿಂದ ಆಧರಿಸಿದ ಜೀವನ ಮಟ್ಟದ ಏರಿಕೆಯಷ್ಟೇ ಅಭಿವೃದ್ಧಿಯಾಗುವುದಿಲ್ಲ ಒಂದು ಸರ್ವತೋಮುಖ ಅಭಿವೃದ್ಧಿಯ  ನಿರ್ವಹಣ ಮತ್ತು ಯೋಜನೆಯಲ್ಲಿ ಸ್ಥಳೀಯರ ಅಗತ್ಯ ಹಾಗೂ ಸ್ಥಳೀಯ ತಾಂತ್ರಿಕತೆಗಳನ್ನು ಉಪಯೋಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಡಾ. ವಾಸುಕಿ ಸೂಚಿಸಿದರು. ನೀರಿನ ವಿತರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜಲನೀತಿಯೊಂದಿದ್ದು ಅದರ ಬಗ್ಗೆ ವಿವರಣೆ ನೀಡಲು ಸಾಧ್ಯವೇ ಎಂದು ಡಾ. ವೆಂಕಟರೆಡ್ಡಿಯವರನ್ನು ಅವರು ಕೇಳಿದರು.

ಚರ್ಚೆ ಮತ್ತು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಉತ್ತರಿಸುತ್ತಾ ಡಾ.ರೇಣುಕಾರ್ಯರವರು ಅಭಿವೃದ್ಧಿ ಸೂಚಿಗೆ ಸಂಬಂಧಿಸಿದಂತೆ ಒಂದು  Compant Index ಅಗತ್ಯವಿದೆ ಎಂದು ಸೂಚಿಸದ ಡಾ. ಅಜೀಜ್‌ರವರ ಸೂಚನೆಯನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಡಾ. ಸೇಷಾದ್ರಿಯವರು ಪ್ರಸ್ತಾಪಿಸಿದ ಕರ್ನಾಟಕ ಕೈಗಾರಿಕಾಶಾಂತಿ ಮತ್ತು ಇದರಲ್ಲಿ ಸರ್ಕಾರದ ಮಧ್ಯಪ್ರದೇಶದ ನಿರ್ಣಾಯಕ್ಕೆ ಪಾತ್ರವನ್ನು ಇನ್ನಷ್ಟು ಸಮರ್ಥಿಸುತ್ತಾ ಕಾರ್ಮಿಕ ಬಿಕ್ಕುಟ್ಟುಗಳಿಂದ ಕೇರಳ ಮತ್ತು ಪಶ್ಚಿಮ ಬಂಗಾಳವನ್ನು ವಿದೇಶೀ ಬಂಡವಾಳ ಹೂಡಿಕೆ ಗಮನೀಯವಾಗಿ ಕರ್ನಾಟಕಕ್ಕಿಂತ ಕಡಿಮೆ ಎಂಬುದನ್ನು ಗಮನಿಸಬೇಕು ಎಂದು ಸೂಚಿಸಿದರು.

ಡಾ. ವೆಂಕಟರೆ‌ಡ್ಡಿಯವರು ನೀರಾವರಿ ಅಭವೃದ್ಧಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ನೀರಾವರಿದರದ ಅಸಮರ್ಪಕತೆಯನ್ನು ಒಪ್ಪಿಕೊಂಡ ಅವರು ಹೊಸ ನೀತಿಯೊಂದನ್ನು ಈಗಾಗಲೇ ರೂಪಿಸಲಾಗಿದ್ದು ಅದು ರಾಜಕೀಯ ಕಾರಣಗಳಿಂದಾಗಿ ಮೂಲೆಯಲ್ಲಿ ಕೂತಿದೆ ಎಂದರು. ನೀರಾವರಿ ಕಾಲುವೆಗಳು ಸಂರಕ್ಷಣೆ ಬಗ್ಗೆ ಪ್ರಸ್ತಾಪಿಸಿದ ಅವರು ಇದಕ್ಕೆ ಸರ್ಕಾರ ರೈತರ ನಡುವೆ ಕೆಲವು ಹೊಂದಾಣಿಕೆಗಳ ಅಗತ್ಯವಿದ್ದು ಅದು ಸಾಧ್ಯವಾದರೆ ಮಾತ್ರ ಸಮರ್ಪಕವಾಗಿ ಯೋಜಿಸಿ ಕಾರ್ಯಗತವಾಗಲು ಸಾಧ್ಯ ಎಂದರು. ನೈಸರ್ಗಿಕ ನೀರು ಹರಿದು ಹೋಗುವ ಕಾಲುವೆಗಳನ್ನು ರೈತರು ಆಕ್ರಮಿಸಿಕೊಂಡಿರುವುದನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ನೀರು ನಿಲ್ಲುವಿಕೆ, ಜಾಗು ಪ್ರದೇಶ ಮತ್ತು ಅದರ ಉಪದ್ರವಗಳನ್ನು ತಪ್ಪಿಸಲು ಸಾಧ್ಯವಿದೆ ಎಂದರು. ಕರ್ನಾಟಕ ನೀರಾವರಿ ಕಾಯಿದೆ  ಮತ್ತು ರಾಷ್ಟ್ರೀಯ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ಪ್ರಾದೇಶಿಕ ಹಾಗೂ ರಾಜ್ಯಮಟ್ಟದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥವಾದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಡಾ. ವಿವೇಕಾನಂದರವರು ಗ್ರಾಮೀಣೀಕರಣಕ್ಕೆ ಸಂಬಂಧಿಸಿದಂತೆ ಗ್ಲೋಬಲೈಜೇಷನನ್ನು ಒಂದು ತೌಲನಿಕ ಉಪಯುಕ್ತತೆ ಎಂದು ಪರಿಗಣಿಸುವ ಮೂಲಕ ಎತ್ತಲಾದ ಹಲವಾರು ಸಮಸ್ಯೆಗಳನ್ನು ಸಮರ್ಪಕವಾಗಿ ಉತ್ತರಸಬಹುದು ಎಂದರು. ಕೃಷಿಗೆ ಸಂಬಂಧಿಸಿದಂತೆ ಸಣ್ಣ ಹಿಡುವಳಿದಾರರು ದೊಡ್ಡ ಹಿಡುವಳಿದಾರರ ವಿರುದ್ಧ ಸ್ಪರ್ಧಿಸುವುದು ಅಸಾಧ್ಯವಾದುದರಿಂದ ಲ್ಯಾಂಡ್‌ಟೇನನ್ಸಿ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಸೂಚಿಸಿದರು.

ಅಧ್ಯಕ್ಷರ ಮಾತಗಳನ್ನಾಡಿದ ಡಾ.ರಾಯಪ್ಪನ್ ಅವರು ಪ್ರಬಂಧಗಳು ಮತ್ತು ಚರ್ಚೆಗಳು ಕರ್ನಾಟಕ ಆರ್ಥಿಕ ಬೆಳವಣಿಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಎತ್ತಿವೆ, ಇವು ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಅದನ್ನು ಸರ್ಕಾರ ನಿಯಂತ್ರಿಸಬೇಕೇ ಎಂಬ ಪ್ರಶ್ನೆ, ಗ್ರಾಮೀಣ ಅಭಿವೃದ್ಧಿ ಆದಾಯ, ಉತ್ಪನ್ನಗಳ ಏರುಮುಖವೋ ಅಥವಾ ವಿದ್ಯಾಭ್ಯಾಸ, ಆರೋಗ್ಯ ತಿಳುವಳಿಕೆಗಳನ್ನೊಳಗೊಂಡ ಸಾರ್ವತ್ರಿಕ ಏರಮುಖವಾಗಬೇಕೆ ಎಂಬ ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿವೆ. ಈ ಸಮಸ್ಯೆಗಳನ್ನು ಗುರುತಿಸಿ ಅರ್ಥಮಾಡಿಕೊಂಡು ಸೂಕ್ತ ಉತ್ತರಗಳನ್ನು ಹುಡುಕಿಕೊಂಡು ಅವನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಒಟ್ಟಿನಲ್ಲಿ ನೋಡಿದಾಗ ಮಂಡಿತವಾದ ಪ್ರಬಂಧಗಳು ಹಾಗೂ ಅದರ ಸುತ್ತ ನಡೆದ ಚರ್ಚೆ ಕರ್ನಾಟಕದ ಆರ್ಥಿಕತೆಯ ವಿವಿಧ ಮುಖಗಳಲ್ಲಿ ಕಂಡುಬರುತ್ತಿರುವ ಬದಲಾವಣೆಗಳ ಬಗ್ಗೆ ಆತಂಕ ಮತ್ತು ಭಯಗಳನ್ನು ವ್ಯಕ್ತಪಡಿಸಿದವು. ಇಂತಹ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸಿ ನಿಭಾಯಿಸುವ ಬಗ್ಗೆ ಸಾಕಷ್ಟು ಕಾಳಜಿ ವ್ಯಕ್ತವಾಯಿತು. ಆದರೆ ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಎದ್ದ ಪ್ರಶ್ನೆಗಳಷ್ಟು ಗಣನೀಯ ಪ್ರಮಾಣದಲ್ಲಿ ಕೈಗಾರಿಕಾ ಸಂಬಂಧಗಳನ್ನು ಕುರಿತಂತೆವುಗಳಲ್ಲಿ ಎಂಬುದು ಗಮನೀಯ.

ಅರ್ಥಶಾಸ್ತ್ರದ ಅಂಕಿ-ಅಂಶಗಳ ತಾತ್ವಿಕ ಚೌಕಟ್ಟಿನಲ್ಲಿ ಮಂಡಿತವಾದ ಪ್ರಬಂಧಗಳ ಬಗ್ಗೆ ಹಾಗೂ ಅವುಗಳಿಂದ ಪ್ರಣೇತಗೊಂಡಿರುವ ಸರ್ಕಾರದ ನೀತಿಗಳ ಬಗ್ಗೆ ಸಾಮೂದಾಯಿಕ ನೆರೆಯಿಂದ ಸಮಾಜ ಶಾಸ್ತ್ರೀಯ ಹಿನ್ನೆಲೆಯಲ್ಲಿ ಕೆಲವು ಆತಂಕಗಳು ವ್ಯಕ್ತವಾದವು. ಇವು ಸರ್ಕಾರದ ಆರ್ಥಿಕ ನೀತಿಯಿಂದ ಸಮಾಜದಲ್ಲಿ  ಅಭಿವೃದ್ಧಿ ಸಮಾನವಾಗಿ ಆಗದೆ ಹೋಗುತ್ತಿರುವ ಬಗ್ಗೆ ವ್ಯಕ್ತಪಡಿಸಿದ ಕಾಳಜಿಗಳು ಇನ್ನು ಕೆಲವು ನಿರ್ವಜನಾತ್ಮಕ ಪುನರ್ ಪರಿಶೀಲನೆಗೆ ಅಗ್ರಹ ಪಡಿಸಿದವು. ಅಭಿವೃದ್ಧಿ ಬೆಳವಣಿಗೆಯ ಕಾರ್ಯಕ್ರಮಗಳಲ್ಲಿ ಸರ್ಕಾರ ನೀತಿ, ಆರ್ಥಿಕ ಮಟ್ಟದಲ್ಲಷ್ಟೇ ಕೇಂದ್ರೀಕೃತಗೊಂಡಿರುವುದನ್ನು ಎಲ್ಲರ ಗಮನಕ್ಕೆ ತಂದ ಈ ಅಭಿಪ್ರಾಯಗಳು ಸಮಾನ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ರೂಪುಗೊಳ್ಳಬೇಕು ಎಂದು ಸೂಚಿಸಿದವು.

ಇದಕ್ಕಿಂತ ಭಿನ್ನವಾಗಿ ಉಪೇಕ್ಷಿತ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳ ಹಿನ್ನೆಲೆಯಿಂದ ಇಡೀ ಅಭಿವೃದ್ಧಿಯನ್ನು ಗ್ರಹಿಸಲು ವಾದಿಸಿದ ಆಂದೋಳನ (activists) ಕಾರಿ ದೋರಣೆ ಕೂಡ ಕೆಲವು ಅಭಿಪ್ರಾಯಗಳನ್ನು ಕಂಡು ಬಂದಿತು. ವಸಾಹತೋತ್ತರ ಅಧ್ಯಯನ ಸಂಕಥನ ಪ್ರಮುಖ ನೆಲೆಯಾದ ದೃಷ್ಟಿಕೋನದಿಂದ ಅಭಿವೃದ್ಧಿಯ ಪರಿಕಲ್ಪನೆ ಪುನರ್ ನಿರ್ವಚಿತವಾಗ ಬೇಕಾಗಿರುವ ಅಗತ್ಯವನ್ನು ಒತ್ತಿಹೇಳಿದ ಈ ಅಭಿಪ್ರಾಯಗಳಾಗಿ ಸಮಾನ ಸಾಮಾಜಿಕ ನ್ಯಾಯಕ್ಕೆ ಅಗತ್ಯವಿರುವ compensatory ತತ್ವದ ಆಧಾರ ಮೇಲೆ ಅದು ರೂಪುಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಪ್ರಸ್ತುತ ಅಧ್ಯಯನ ಕ್ರಮವನ್ನು ಹಾಗೂ ವಿಶ್ಲೇಷಣಾ ವಿದಾನವನ್ನು ಪ್ರಶ್ನಿಸುತ್ತಾ ಹೊಸ ಹೊಸ ಅಧ್ಯಯನ ಕ್ರಮಗಳನ್ನು, ಸೂಚಿಗಳನ್ನು ಮತ್ತು ಅಧ್ಯಯನ ವಿಧಾನಗಳನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂಬ ಅಂಶ ಗೋಷ್ಠಿಯ ಸರ್ವಾನುಮತವಾದ ಅಂಶವಾಗಿತ್ತು.

ರಾಜಕೀಯ ಅಂಗ ಸಾರ್ವತ್ರಿಕವಾಗಿ ಒಳಗಾಯಿತು. ಒಂದು ಸರಕಾರಕ್ಕೆ ಅಗತ್ಯವಾಗಿ ಇರಬೇಕಾಗಿರುವ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಜಕೀಯ ಶಕ್ತಿ ಇಲ್ಲದಿರುವುದರಿಂದ ನೀತಿಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಹಿಂಜರಿತಗಳು ಉಂಟಾಗುತ್ತದೆ ಎಂದು ಒಮ್ಮತದಿಂದ ಒಪ್ಪಿಕೊಂಡ ಈ ಗೋಷ್ಠಿ ಗ್ಲೋಬಲೈಜೇಷನ್ ಮತ್ತು ಅದರ ಪರಿಣಾಮವಾಗಿ ರೂಪುಗೊಳ್ಳುತ್ತಿರುವ ಹೊಸ ಸಮಸ್ಯೆಗಳನ್ನು ಇದುರಿಸುವಲ್ಲಿ ಅವುಗಳನ್ನು ತಾತ್ವಿಕ, ಸಾಮಾಜಿಕ, ಆಂದೋಳನಿಕ ಹಾಗೂ ರಾಜಕೀಯ ನೆಲೆಗಳಿಂದ ನೋಡಿ ಅರ್ಥಮಾಡಿಕೊಂಡು ಆ ನೆಲೆಗಳ ಪರಸ್ಪರ ಸಂವಾದದೊಂದಿಗೆ ಹೊಸ ನೀತಿಯನ್ನು ನಿರೂಪಿಸಬೇಕಾಗಿದೆ ಎಂಬ ಅಭಿಪ್ರಾಯವನ್ನು ತಳೆಯಿತು. ಉತ್ತರಗಳು ಇನ್ನೂ ಕಂಡುಬರಬೇಕಾಗಿದೆಯಾದರೂ ಅದನ್ನು ಹುಡುಕುವ ನೆಲೆಗಟ್ಟು ಸರ್ವತೋಮುಖ ಏಳಿಗೆಯನ್ನು ಆಧರಿಸಿದ್ದಾಗಿರಬೇಕು ಮತ್ತು ಬಹುಕೇಂದ್ರಿತವಾಗಿರಬೇಕು ಎಂಬ ಅಂಶಕ್ಕೆ ಒತ್ತು ನೀಡಲಾಯಿತು.