ಕರ್ನಾಟಕದ ಆರ್ಥಿಕತೆಯ ಕುರಿತಾದ ಎರಡನೆಯ ದಿನದ ಮೊದಲನೆಯ ಗೋಷ್ಠಿಯಲ್ಲಿ ಒಟ್ಟು ಆರು ಪ್ರಬಂಧಗಳನ್ನು ಮಂಡಿಸಲಾಯಿತು. ಡಾ.ಪ್ರಹ್ಲಾದಾಚಾರ್ ಅವರು ಈ ಗೋಷ್ಠಿಯ ಅಧ್ಯಕ್ಷರಾಗಿದ್ದರು. ಗೋಷ್ಠಿಯ ಪ್ರಬಂಧಗಳನ್ನು ಎರಡು ಗುಂಪಾಗಿ ವಿಂಗಡಿಸಿಕೊಳ್ಳಬಹುದು. ಮೊದಲನೆಯ ಗುಂಪಿನಲ್ಲಿ ಕರ್ನಾಟಕದ ಸಾರ್ವಜನಿಕ ಉದ್ಯಮಗಳು ಬೆಳವಣಿಗೆ ಮತ್ತು ಕಾರ್ಯನಿರ್ವಹಣೆ (ಪ್ರೊ. ಬಿ.ಎಸ್.ಶ್ರೀಕಂಠಾರಾಧ್ಯ) ಕರ್ನಾಟಕ ರಾಜ್ಯ ಹಣಕಾಸು (ಕೆ.ಗಾಯತ್ರಿ) ಮತ್ತು ಕರ್ನಾಟಕದಲ್ಲಿ ಆರ್ಥಿಕ ಸಾಧನ ಸಂಪತ್ತುಗಳು-ಸಮಸ್ಯೆಗಳು ಹಾಗೂ ನಿರೀಕ್ಷೆಗಳು (ಎಂ.ಜಾನ್ಸ್‌ನ್ ಸ್ಯಾಮುಲ್ ಮತ್ತು ಎಂ.ಲಿಂಗರಾಜು) ಎಂಬ ಪ್ರಬಂಧಗಳಿದ್ದರೆ ಎರಡನೆಯ ಗುಂಪಿನಲ್ಲಿ ಜನಸಂಖ್ಯಾ ಬೆಳವಣಿಗೆ ಕುಟುಂಬಯೋಜನೆ ಹಾಗೂ ಆರೋಗ್ಯ ಸೌಕರ್ಯಗಳು (ಪಿ.ಹನುಮಂತ ರಾಯಪ್ಪ ಮತ್ತು ಕೆ.ಎಸ್. ಉಮಾಮಣಿ) ಬಡತನ ನಿರುದ್ಯೋಗ ಮತ್ತು ರಕ್ಷಣಾ ಕಾರ್ಯಕ್ರಮಗಳು (ವಿ.ಶಾಂತಪ್ಪ ಹಾಗೂ ಶ್ರೀ ಕೇಶವ) ಮತ್ತು ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಒಂದು ಸಮೀಕ್ಷೆ (ಉಷಾ ರಾಮಕುಮಾರ್) ಎಂಬ ಪ್ರಬಂಧಗಳಿದ್ದವು.

ಬಿ.ಎಸ್.ಶ್ರೀಕಂಠಾರಾಧ್ಯರು ತಮ್ಮ ಪ್ರಬಂಧದಲ್ಲಿ ಮೊದಲಿಗೆ ಕರ್ನಾಟಕದ ಸಾರ್ವಜನಿಕ ಉದ್ಯಮಗಳ ಬೆಳವಣಿಗೆಯ ಚಾರಿತ್ರಿಕ ವಿಶ್ಲೇಷಣೆ ನೀಡಿ ವ್ಯವಹಾರಿಕ ಪ್ರಯೋಜನದ ದೃಷ್ಟಿಯಿಂದ ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಲಾಯಿತು ಎಂಬ ನಿರ್ಣಯವನ್ನು ಮಂಡಿಸಿದರು. ಮುಂದೆ ಸ್ವಾತಂತ್ಯ್ರಾನಂತರ ಕಾಲದಲ್ಲಿ ವ್ಯಾವಹಾರಿಕ ಪ್ರಯೋಜನಾ ದೃಷ್ಟಿಯೊಂದಿಗೆ ಭಾವನಾವಾದವೂ ಸೇರಿಕೊಂಡು ಸಾರ್ವಜನಿಕ ವಲಯ ಬೆಳೆಯಿತು ಎಂದು ಅವರು ವಾದಿಸಿದರು. ವಿಷಯ ಮಂಡನೆಗಾಗಿ ಅವರು ಸಾರ್ವಜನಿಕ ಉದ್ಯಮಗಳನ್ನು ೭ ವರ್ಗಗಳಾಗಿ ವಿಂಗಡಿಸಿಕೊಂಡು ಈ ಉದ್ಯಮಗಳ ಬೆಳವಣಿಗೆಯ ಮತ್ತು ಸಮಸ್ಯೆಯ ವಿಶ್ಲೇಷಣೆ ನಡೆಸಿದರು. ಕರ್ನಾಟಕದಲ್ಲಿ ಒಟ್ಟು ೭೨ ಉದ್ಯಮಗಳಲ್ಲಿ ಕೇವಲ ೬ ಉದ್ಯಮಗಳು ಬಾರೀ ಮೊತ್ತದ ಬಂಡವಾಳದಲ್ಲಿ ೮೬.೪೨ ಶೇಕಡ ಹಣವನ್ನು ಹೊಂದಿದ್ದು ಉಳಿದ ೬೨ ಉದ್ಯಮಗಳಲ್ಲಿ ಕೇವಲ ೧೩.೫೮ ಶೇಕಡ ಬಂಡವಾಳ ವಿನಿಯೋಗಿಸಿದ ತಾರತಮ್ಯವನ್ನು ಅವರು ಎತ್ತಿ ತೋರಿಸಿದರು. ವಾಣಿಜ್ಯೇತರ ಅಭಿವೃದ್ಧಿ ಶೀಲ ಉದ್ಯಮ ವರ್ಗದಲ್ಲಿ ಮಹಿಳೆಯರ ಮತ್ತು ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮಗಳು ಮಾತ್ರ ಲಾಭಗಳಿಸಿದ್ದು ಅದೇ ವರ್ಗಕ್ಕೆ ಸೇರಿದ ಇತರ ನಿಗಮಗಳೆಲ್ಲ ನಷ್ಟ ಅನುಭವಿಸಿವೆ ಎಂಬ ಅವರ ಗಮನಿಸುವಿಕೆ ಕುತೂಹಲಕಾರಿಯಾಗಿದೆ. ಒಟ್ಟಿನಿಂದ ಅವರ ಪ್ರಬಂಧವು ‘ಸಾರ್ವಜನಿಕ ಉದ್ಯಮಗಳು ರಾಜ್ಯಕ್ಕೆ ವರದಾನವಾಗುವ ಬದಲು ಒಂದು ಹೊರೆಯಾಗಿರುವುದು ಅವುಗಳ ಕಾರ್ಯನಿರ್ವಹಣೆಯ ಸಮೀಕ್ಷೆಯಿಂದ ಸ್ಪಷ್ಟವಾಗುತ್ತದೆ’ ಎಂಬ ಅಂಶವನ್ನು ಅಂಕಿಅಂಶಗಳ ಮೂಲಕ ಸಾಬೀತುಪಡಿಸಿತು. ಸಂಖ್ಯಾಬಾಹುಳ್ಯ ನಿಯಮಗಳ ಅಸಮರ್ಪಕ ಅನುಷ್ಠಾನ ಉನ್ನತ ಹುದ್ದೆಗಳಿಗೆ ಅಸಮರ್ಪಕ ನೇಮಕಾತಿ ಮತ್ತು ಸರಕಾರಸದ ಹಸ್ತಕ್ಷೇಪಗಳಿಂದಾಗಿ ಸಾರ್ವಜನಿಕ ಉದ್ಯಮಗಳು  ಸೊರಗುತ್ತಿವೆ ಎಂದು ಅವರು ವಾದಿಸಿದರು. ಇದಕ್ಕೆ ಪರಿಹಾರವಾಗಿ ಅವರು ಉದ್ಯಮಗಳ ಸುಧಾರಣೆ, ಉದ್ಯಮಗಳ ವಿಲೀನಗೊಳಿಸುವಿಕೆ ಉದ್ಯಮಗಳ ಖಾಸಗೀಕರಣ ಮತ್ತು ಉದ್ಯಮಗಳನ್ನು ಮುಚ್ಚುವ ೫ ಸಲಹೆಗಳನ್ನು ಮುಂದಿಟ್ಟರು.

ಈ ‌ಪ್ರಬಂಧದ ಕುರಿತು ಸಾಕಷ್ಟು ಮುಕ್ತವಾದ ಚರ್ಚೆ ನಡೆಯಿತು. ಹಿ.ಚಿ. ಬೋರಲಿಂಗಯ್ಯ ನವರು ಅಭಿವೃದ್ಧಿಯೇತರ ಬಾಬ್ತುಗಳ ಬಂಡವಾಳಕ್ಕೆ ಸರಕಾರ ಹಾಕಿದ ಕಡಿವಾಣವನ್ನು ವಿರೋಧಿಸಿದರು. ಪ್ರೊ.ರೆಣುಕಾರ್ಯ ಅವರು ಖಾಸಗೀಕರಣದ ಅಪಾಯವು ಸರಕಾರಕ್ಕುಂಟಾಗುವ ನಷ್ಟಕ್ಕಿಂತ ಹೆಚ್ಚಿನ ತೊಂದರೆಗಳನ್ನು ತರಬ್ಲದು, ಸರಕಾರವು ಜನರಿಗೆ ಹೆಚ್ಚು ಜವಾಬ್ದಾರಿಯನ್ನು ವಹಿಸಬೇಕು ಮತ್ತು ಸಾರ್ವಜನಿಕ ಉದ್ಯಮಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ವಿದೇಶೀಕರಣದ ವಿರುದ್ಧ ಚಿಂತಿಸಬೇಕು ಎಂದರು.ಡಾ.ಸಿ. ಮಹಾದೇವ ಅವರು ಸಾರ್ವಜನಿಕ ಉದ್ಯಮಗಳಿಂದ ರಾಜಕಾರಣವನ್ನು ಬೇರ್ಪಡಿಸಬೇಕು ಮತ್ತು ಖಾಸಗಿಯವರಿಗಿರುವ ಸ್ವಾತಂತ್ಯ್ರವನ್ನು ಸರಕಾರಿ ಕೆಲಸಗಾರರೂ ಅನುಭವಿಸಬೇಕು ಎಂಬ ಅಭಿ‌ಪ್ರಾಯ ಮಂಡಿಸಿದರು. ವಿದ್ಯುತ್ ನಿಗಮದ ಕಾರ್ಯನಿರ್ವಹಣೆಯ ಬಗೆಗೆ ಅನೇಕ ಆಕ್ಷೇಪ ವ್ಯಕ್ತಪಡಿಸಿದರು. ನಿಯಾಜಿಯವರು ರೈತರ ವಿದ್ಯುತ್ ಬಳಕೆಯೂ ಪರವಾಗಿ ಮಾತಾಡಿದರೆ ಪೂರ್ಣಾನಂದ ಅವರು ರೈತರಿಗೆ ಉಚಿತ ವಿದ್ಯುತ್ ನೀಡುವುದರಿಂದ ಸಮಸ್ಯೆ ಪರಿಹಾರವಾಗದು, ಎಂದು ಅಭಿಪ್ರಾಯಪಟ್ಟರು. ಪ್ರಶ್ನೆಗಳಿಗೆ ಉತ್ತರಿಸಿದ ಆರಾಧ್ಯರು ವಿದ್ಯುಚ್ಛಕ್ತಿ ಮಂಡಳಿಯು ದರ ಹೆಚ್ಚು ಮಾಡಿದ್ದು ಉಚಿತವಾದ್ದಲ್ಲ ಮತ್ತು ಆಯ್ಕೆಯುಕ್ತ ಖಾಸಗೀಕರಣ (Selective Privitisation) ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲದು ಎಂದು ಅಭಿಪ್ರಾಯಪಟ್ಟರು.

ಕೆ.ಗಾಯತ್ರಿಯವರ ಅನುಪಸ್ಥಿತಿಯಲ್ಲಿ ಬಿ.ಎಸ್. ಶ್ರೀಕಂಠಾರಾಧ್ಯರು ಅವರ ಪ್ರಬಂಧವನ್ನು ಮಂಡಿಸಿದರು. ರಾಜ್ಯದ ಹಣಕಾಸಿನಲ್ಲಿ ಬೃಹತ್ ಪ್ರಮಾಣದ ಹೆಚ್ಚಳವಾಗಿರುವುದನ್ನು ಗುರುತಿಸಿದ ಗಾಯತ್ರಿಯವರು ತಮ್ಮ ಪ್ರಬಂಧದಲ್ಲಿ ಸರಕಾರ ವೆಚ್ಚಗಳ ಬೆಳವಣಿಗೆ ಮತ್ತು ಅದರ ಮಾದರಿಯಲ್ಲಿ ಪ್ರತಿಬಿಂಬವಾಗಿರುವ ಸರಕಾರಿ ಚಟುವಟಿಕೆ ಹಾಗೂ ಬೆಳೆಯುತ್ತಿರುವ ವೆಚ್ಚಗಳಿಗೆ ಆಗುವ ಹಣಕಾಸು ಪೂರೈಕೆಯನ್ನು ಅಭ್ಯಸಿಸುವ ಪ್ರಯತ್ನ ನಡೆಸಿದರು ಮತ್ತು  ಮುಂಗಡ ಪತ್ರದ ಹೆಚ್ಚುವರಿ ಕೊರತೆ ಸ್ಥಿತಿಯ ಬಗ್ಗೆ ವಿಶೇಷ ಗಮನಹರಿಸಲಾಗಿತ್ತು. ಪ್ರಬಂಧದ ಎರಡನೆಯ ಭಾಗದಲ್ಲಿ ಆಧಾಯ ತಃಖ್ತೆಯನ್ನು ನೀಡಿ ಮೂರನೆಯ ಭಾಗದಲ್ಲಿ ತೆರಿಗೆ ಮತ್ತು ವೆಚ್ಚಗಳ ವಿಶ್ಲೇಷಣೆಯನ್ನು ನೀಡಲಾಗಿತ್ತು. ರಾಜ್ಯದ ಹಣ ಕಾಸಿನ ಕೊರತೆ ಸ್ಥಿತಿಗೆ ಬೆಳೆಯುತ್ತಿರುವ ರಾಜಸ್ವ ವೆಚ್ಚವು ಒಂದು ಮೂಲ ಕಾರಣವಾಗಿದೆ ಎಂಬುದು ಅವರ ಮುಖ್ಯ ತರ್ಕವಾಗಿತ್ತು. ಆದರೂ ರಾಜ್ಯದ ತೆರಿಗೆ ಆದಾಯವು ಹೆಚ್ಚುತ್ತಿರುವುದರ ಬಗ್ಗೆ ಅವರಿಗೆ ಸಾಕಷ್ಟು ತೃಪ್ತಿಯಾಯಿತು. ಪ್ರಬಂಧಕಾರರ ಅನುಪಸ್ಥಿತಿಯಿಂದಾಗಿ ಪ್ರಬಂಧದ ಬಗ್ಗೆ ಚರ್ಚೆ ನಡೆಯಲಿಲ್ಲ. ಸಂಕಿರಣದ ಮೂರನೆಯ ಪ್ರಬಂಧವನ್ನು ಲಿಂಗರಾಜು ಅವರು ಮಂಡಿಸಿದರು. ಆರ್ಥಿಕ ಸಾಧನ ಸಂಪತ್ತುಗಳಲ್ಲಿ ಸಾರಿಗೆ, ಸಂಪರ್ಕ ಮತ್ತು ವಿದ್ಯುತ್ ವಿಭಾಗಗಳಲ್ಲಿ ರಾಜ್ಯ ತೋರಿದ ಅಭಿವೃದ್ಧಿಯ ಬಗೆಗೆ ಅವರು ಆಶಾದಾಯಕ ವಿವರ ನೀಡಿದರು. ಸಂಪರ್ಕಗಳಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಮತ್ತು ಅಂಚೆ ತಂತಿ ಕ್ಷೇತ್ರದಲ್ಲಾದ ಪ್ರಗತಿಯ ಕುರಿತು ವಿವರ ನೀಡಿದರು. ವಿದ್ಯುತ್ ಶಕ್ತಿಗೆ ಸಂಬಂಧಿಸಿದಂತೆ ರಾಜ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ವಿವರಿಸಿದರು. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ತೀವ್ರ ಸ್ವರೂಪದ ವಿದ್ಯುಚ್ಛಕ್ತಿ ಕೊರತೆ ಅನುಭವಿಸುವುದನ್ನು ಅವರು ಬೊಟ್ಟು ಮಾಡಿ ತೋರಿಸಿದರು. ಹಾಗೆಯೇ ಖಾಸಗೀಕರಣ ಮತ್ತು ವಿದೇಶೀಕರಣ ಜನರ ಶ್ರೇಯೋಭಿವೃದ್ಧಿಯನ್ನು ಉತ್ತಮಗೊಳಿ ಸುತ್ತದೆಯೇ ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು.

ಈ ಪ್ರಬಂಧವು ತೀವ್ರತರವಾದ ಆಕ್ಷೇಪಗಳಿಗೆ ಒಳಗಾಯಿತು. ಮುಖ್ಯವಾಗಿ ಆರ್ಥಿಕ ಸಾಧನ ಸಂಪತ್ತುಗಳನ್ನು ಸಾರಿಗೆ, ಸಂಪರ್ಕ ಮತ್ತು ವಿದ್ಯುತ್ತಿಗೆ ಮಾತ್ರ ಸೀಮಿತಗೊಳಿಸಿದ್ದನ್ನು ಹಲವರು ಆಕ್ಷೇಪಿಸಿದರು. ಹಿ.ಚಿ.ಬೋರಲಿಂಗಯ್ಯನವರು ರಸ್ತೆಗಳು ನಮ್ಮಲ್ಲಿದೆ ಆದರೆ ಅವು ಹೇಗಿವೆ? ಎಂಬ ಪ್ರಶ್ನೆಗೆ ಪ್ರಬಂಧದಲ್ಲಿ ಉತ್ತರವಿಲ್ಲದ್ದಕ್ಕೆ ವಿಷಾದಿಸಿದರು. ಕೆ.ಕೆ. ಮಾಧವ ಅವರು ಇಂಥ ಪ್ರಬಂಧಗಳಲ್ಲಿ ಮಾನವ ಸಂಬಂಧಗಳು ಗೈರುಹಾಜರಿಯಾಗಿರುತ್ತವೆ, ನಮ್ಮ ಆರ್ಥಿಕ ವೈರುಧ್ಯಗಳನ್ನು ವಿಶ್ಲೇಷಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು. ಡಾ.ಮೋಹನ್‌ಕುಂಟಾರ್ ಅವರು ಆರ್ಥಿಕತೆ ಮತ್ತು ಸಾರಿಗೆ ಸಂಪರ್ಕಗಳ ನಡುವಣ ಸಂಬಂಧಗಳನ್ನು ನೆರೆಯ ಕೇರಳ ರಾಜ್ಯದ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡಬೇಕೆಂಬ ಸಲಹೆ ನೀಡಿದರು. ಸಭಿಕರ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಶ್ರೀ ಲಿಂಗರಾಜು ಅವರು ಹೇಳಿದರು.

ಎರಡನೆಯ ಗುಂಪಿನ ಪ್ರಬಂಧಗಳು

ಎರಡನೆಯ ಗುಂಪಿನ ಮೊದಲ ಪ್ರಬಂಧವು ಜನಸಂಖ್ಯಾ ಬೆಳವಣಿಗೆ, ಕುಟುಂಬ ಯೋಜನೆ ಮತ್ತು ಆರೋಗ್ಯ ಸೌಕರ್ಯಗಳ ಕುರಿತಾಗಿತ್ತು. ಈ ಪ್ರಬಂಧದಲ್ಲಿ ಮೂರು ಮುಖ್ಯ ಅಂಶಗಳಿಗೆ ಆಧ್ಯತೆ ನೀಡಲಾಗಿತ್ತು. ಮೊದಲನೆಯದಾಗಿ, ನಮ್ಮ ಜನಸಂಖ್ಯೆಯ ಚಾರಿತ್ರಿಕ ಹಿನ್ನೆಲೆ, ಬೆಳವಣಿಗೆಯ ಪ್ರಮಾಣ, ವಿವಿಧ ಪ್ರದೇಶ ಹಾಗೂ ಜಿಲ್ಲೆಗಳಲ್ಲಿನ ಪರಿಸ್ಥಿತಿ, ಗ್ರಾಮಾಂತರ ಹಾಗೂ ನಗರಗಳ ಬೆಳವಣಿಗೆಯ ನಡುವಿನ ಅಂತರದ ಪರಿಶೀಲನೆ, ಎರಡನೆಯದಾಗಿ ಜನನ ಹಾಗೂ ಮರಣ ಪ್ರಮಾಣ, ಮದುವೆಯ ವಯಸ್ಸು, ಸಂತಾನ ನಿಯಂತ್ರಣ ಕಾರ್ಯಕ್ರಮಗಳ ಪರಿಶೀಲನೆ  ಮತ್ತು ಮೂರನೆಯದಾಗಿ ಜನರಿಗೆ ಸಂತಾನ ನಿಯಂತ್ರಣ ಕಾರ್ಯಕ್ರಮಗಳ ವಿಚಾರವಾಗಿ ತಿಳುವಳಿಕೆ ಕೊಡುವ ಸಂಸ್ಥೆಗಳು ಹಾಗೂ ಸಾಧನಗಳ ಪರಿಶೀಲನೆ ಜನಸಂಖ್ಯಾ ಬೆಳವಣಿಗೆಯಲ್ಲಿ ಕಾಣಿಸಿಕೊಂಡ ಪ್ರಾದೇಶಿಕ ಅಸಮತೋಲನದ ಪರಿಶೀಲನೆ ಮತ್ತು ಅದರ ಕಾರಣಗಳ ವಿಶ್ಲೇಷಣೆ ನಡೆಸಿದ್ದು ಈ ಪ್ರಬಂಧದ ಮಹತ್ವ ವಿಚಾರವಾಗಿತ್ತು. ಪ್ರಬಂಧದ ಉತ್ತರಾರ್ಧವನ್ನು ಮಂಡಿಸಿದ ಉಮಾಮಣಿಯವರು ಮಹಿಳೆಯರು ಮತ್ತು ಮಕ್ಕಳ ಪಾಲನೆ ಪೋಷಣೆಯ ಬಗ್ಗೆಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವನ್ನು ಪ್ರತುಪಾದಿಸಿದರು. ಕುಟುಂಬ ಯೋಜನೆಯ ಯಶಸ್ಸಿಗೆ ಸೌಲಭ್ಯಗಳ ಗುಣಮಟ್ಟಗಳ ಸುಧಾರಣೆ ಆರೋಗ್ಯ ಕಾರ್ಯಕರ್ತರು ಜನರ ಮನವೊಲಿಸುವ ಕಾರ್ಯಗಳನ್ನು ಮಾಡುವ ಸಲಹೆಗಳನ್ನು ಮಾಡುವ ಸಲಹೆಗಳನ್ನು ಮುಂದಿಟ್ಟರು.

ಈ ಪ್ರಬಂಧವು ಬಹಳ ಉಪಯುಕ್ತವಾದ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಡಾ. ಮಹದೇವ ಅವರು ಕುಟುಂಬಯೋಜನೆಯ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಶೀಲಿಸಿ ಅಲ್ಲಿ ನಡೆದ ಅವ್ಯವಹಾರದ ಬಗೆಗೆ ಗಮನಸೆಳೆದರು. ಪೂರ್ಣಾನಂದ ಅವರು ಜನಸಂಖ್ಯೆ ಮತ್ತು ಬಡತನ ಸಂಬಂಧವನ್ನು ಇನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಬೇಕೆಂದು ಅಭಿಪ್ರಾಯಪಟ್ಟರು. ಟಿ.ಆರ್.ಚಂದ್ರಶೇಖರ್ ಅವರು ಪ್ರಬಂಧದ ಬಗ್ಗೆ ಮೆಚ್ಚುಗೆ ಸೂಚಿಸಿ ಜನಸಂಖ್ಯೆಯ ಬಗೆಗೆ ನಿಮ್ಮ ನಿಲುವುಗಳಲ್ಲಿ ಸಾಕಷ್ಟು ಗೊಂದಲ ಇದೆ ಎಂಬುದನ್ನು ಪ್ರಸ್ತಾಪಿಸಿ, ಮಕ್ಕ ಊಳಿಗೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರದೇಶದಲ್ಲಿರುವ ಜನರ ವಿವೇಕದ ಬಗೆಗೆ ಹೊಸ ತಿಳುವಳಿಕೆಯನ್ನು ಮೂಡಿಸಿಕೊಳ್ಳಬೇಕು ಎಂದರು. ಮರಾಠವಾಡ, ತೆಲಂಗಾಣ, ಹೈದರಾಬಾದ್ ಕರ್ನಾಟಕದಲ್ಲಿರುವ ಜನಸಂಖ್ಯಾ ಹೆಚ್ಚಳಕ್ಕೂ ಅಲ್ಲಿ ಇನ್ನೂ ಉಳಿದುಕೊಂಡಿರುವ ಊಳಿಗಮಾನ್ಯ ವ್ಯವಸ್ಥೆಗೂ ಸಂಬಂಧ ಇರಬಹುದೇ? ಎಂದು ಅವರು ತಮ್ಮ ಸಂದೇಹವನ್ನು ಮುಂದಿಟ್ಟರು. ಪ್ರಶ್ನೆಗಳಿಗೆ ಉತ್ತರಿಸಿದ ಹನುಮಂತ ರಾಯಪ್ಪ ಅವರು ‘ಜನಸಂಖ್ಯೆಯ ಹೆಚ್ಚಳ ಒಂದು ಸಮಸ್ಯೆಯೂ ಹೌದು ಸಮಸ್ಯೆಗೆ ಉತ್ತರವೂ ಹೌದು’ ಎಂಬುದನ್ನು ತರ್ಕಬದ್ಧವಾಗಿ ಮಂಡಿಸಿದರು. ಜನಸಂಖ್ಯಾ ನಿಯಂತ್ರಣವು ಅಭಿವೃದ್ಧಿ ಚಟುವಟಿಕೆಗಳ ಅವಿಭಾಜ್ಯ ಅಂಗವಾದರೆ ಆಗ ಆರ್ಥಿಕ ಅಭಿವೃದ್ಧಿಯೇ ಜನಸಂಖ್ಯಾ ನಿಯಂತ್ರಣಕ್ಕೆ ಸರಿಯಾದ ಉತ್ತರವಾಗುತ್ತದೆ ಎಂಬ ಅವರ ಅಭಿಪ್ರಾಯವನ್ನು ಸಭೆ ಮನ್ನಿಸಿತು.

ಬಡತನ ನಿರುದ್ಯೋಗ ಮತ್ತು ರಕ್ಷಣಾ ಕಾರ್ಯಕ್ರಮಗಳ ಕುರಿತಾದ ಪ್ರಬಂಧವನ್ನು ಶ್ರೀ ಕೇಶವ ಅವರು ಮಂಡಿಸಿದರು. ಈ ಪ್ರಬಂಧದಲ್ಲಿ ಬಡತನ ಮತ್ತು ನಿರುದ್ಯೋಗಗಳ ವ್ಯಾಖ್ಯೆ, ಸಾಮಾನ್ಯ ತಿಳುವಳಿಕೆ, ಕಲ್ಪನೆ, ಲಕ್ಷಣ ಮತ್ತು ವ್ಯಾಪ್ತಿ ಇವುಗಳನ್ನು ಇದಿರಿಸಲು ರಾಜ್ಯ ಸರಕಾರದ ಯೋಜಿಸಿರುವ ರಕ್ಷಣಾ ಕಾರ್ಯಕ್ರಮಗಳ ವಿವರ ನೀಡಲಾಗಿತ್ತು. ಪ್ರಬಂಧದ ಕೊನೆಯಲ್ಲಿ ಅವರು ೨೧ ಮುಖ್ಯ ತೀರ್ಮಾನಗಳನ್ನು ನೀಡಿದರು. ಅದರಲ್ಲಿ ಕರ್ನಾಟಕದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಜನರ ಶೇಕಡಾವಾರು ಒಟ್ಟು ಭಾರತದ ಮಟ್ಟಕ್ಕಿಂತ ಹೆಚ್ಚಾಗಿರುವುದನ್ನು ಅವರು ಗುರುತಿಸಿದ್ದಾರೆ. ಉದ್ಯೋಗದ ದರವು ಕಾರ್ಮಿಕ ಶಕ್ತಿಯ ಬೆಳವಣಿಗೆಯ ದರಕ್ಕಿಂತ ಕಡಿಮೆಯಾಗುತ್ತಿರುವುದರಿಂದ ನಿರುದ್ಯೋಗ ಹೆಚ್ಚಾಗುವುದನ್ನು ಅವರ ಪ್ರಬಂಧ ಗುರುತಿಸಿದೆ. ಕಾರ್ಮಿಕ ಶಕ್ತಿಯ ವ್ಯಾಪ್ತಿಗಿಂತ ಮಹಿಳೆಯರು ಹೊರಗುಳಿದಿದ್ದಾರೆ ಎಂಬ ಅವರ ಗುರುತಿಸುವಿಕೆ ಮಹತ್ವದಾಗಿದೆ. ಇದಕ್ಕೆ ಪರಿಹಾರವಾಗಿ ಅವರು ಸಣ್ಣ ಮತ್ತು ಗೃಹ ಕೈಗಾರಿಕೆಗಳಂತಹ ಕೆಲವು ಗುರುತರ ಸಲಹೆಗಳನ್ನು ನೀಡಿದ್ದಾರೆ.

ಚರ್ಚೆಯಲ್ಲಿ ಪ್ರೊ.ರೇಣುಕಾರ್ಯ ಅವರು ಪ್ರಬಂಧದ ಶೀರ್ಷಿಕೆಯ ಅಸಮರ್ಪಕತೆಯನ್ನು ಗುರುತಿಸಿ ರಕ್ಷಣಾ ಕಾರ್ಯಕ್ರಮಗಳು ಎಂದಿರುವುದರ ಬದಲು ನಿವಾರಣೆಯೆಂದಿದ್ದರೆ ಸಾಕು ಎಂದರು. ಮಾಧವ ಅವರು ಕೂಲಿ ಕೆಲಸದ ಬಗೆಗೆ ಗಮನಿಸಬೇಕು ಎಂಬ ಸೂಚನೆ ನೀಡಿದರು. ಡಾ.ಮಹದೇವ ಅವರು ರಾಜಕಾರಣದ ಅಕ್ರಮ ಪ್ರವೇಶದಿಂದಾಗಿ ಬಡತನ ಮತ್ತು ನಿರುದ್ಯೋಗಗಳು ಹೆಚ್ಚಾಗುತ್ತಿವೆ ಎಂದರು. ನಿಯಾಜಿಯವರು ರಾಜ್ಯದ ಸಂಪತ್ತಿನ ಸದುಪಯೋಗ ಆಗಬೇಕು ನಗರ ಮತ್ತು ಹಳ್ಳಿಗಳ ನಡುವಣ ವೈರುಧ್ಯ ಅಳಿಯಬೇಕು ರೈತರಿಗೆ ಹೆಚ್ಚಿನ ಸವಲತ್ತು ದೊರೆಯಬೇಕು ಎಂದು ಅಭಿಪ್ರಾಯಪಟ್ಟರು. ಟಿ.ಆರ್. ಚಂದ್ರಶೇಖರ್ ಅವರು ಬಡವರು ನಿರುದ್ಯೋಗಿಗಳಾಗಿರಲು ಸಾಧ್ಯವೇ ಇಲ್ಲವೆಂದು ವಾದಿಸಿದರು. ಪ್ರಶ್ನೆಗಳಿಗೆ ಉತ್ತರ ನೀಡಿದ ಕೇಶವ ಅವರು ಶೀರ್ಷಿಕೆ ಬದಲಾವಣೆಗೆ ಒಪ್ಪಿಗೆ ಸೂಚಿಸಿದರು.

ಕರ್ನಾಟಕದಲ್ಲಿ ಮಾನ ಸಂಪನ್ಮೂಲಾಭಿವೃದ್ಧಿಯ ಬಗೆ ಗಣ ಉಷಾ ರಾಮಕುಮಾರ್ ಅವರ ಪ್ರಬಂಧವನ್ನು ಸಿ.ಕೆ.ಶ್ಯಾಮಲಾ ಅವರು ಮಂಡಿಸಿದರು. ಪ್ರಬಂಧದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಮತ್ತು ವಿಕಾಸದ ಪರಿಕಲ್ಪನೆಯನ್ನು ಸಮರ್ಪಕವಾಗಿ ನಿರ್ವಚಿಸಿಕೊಳ್ಳಲಾಗಿತ್ತು. ಅನಂತರ ಪ್ರಬಂಧವು ಶಿಕ್ಷಣದ ಪ್ರಗತಿಯ ಪರಿಶೀಲನೆಗೆ ಬದ್ಧವಾಗಿ ಪೂರ್ವ ಪ್ರಾಥಮಿಕ, ಪ್ರೌಢ ಪದವಿಪೂರ್ವ, ವೃತ್ತಿ, ಉನ್ನತ, ತಾಂತ್ರಿಕ,  ವೈದ್ಯಕೀಯ ಮತ್ತು ವಯಸ್ಕರ ಶಿಕ್ಷಣದಲ್ಲಿ ರಾಜ್ಯ ತೋರಿದ ಪ್ರಗತಿಯ ವಿಶ್ಲೇಷಣೆ ನಡೆಸಿತು. ಪ್ರಬಂಧದ ಕೊನೆಯಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಮುಂದಿರುವ ಸಮಸ್ಯೆಗಳನ್ನು ಪ್ರಬಂಧದಲ್ಲಿ ಗುರುತಿಸಲಾಗಿತ್ತು.

ಮಾನವ ಸಂಪನ್ಮೂಲವನ್ನು ಕೇವಲ ಶಿಕ್ಷಣಕ್ಕೆ ಮಿತಿಗೊಳಿಸಿಕೊಂಡು ರಚಿತವಾದ ಈ ಪ್ರಬಂಧವು ತೀವ್ರವಾದ ಪ್ರತಿಕ್ರಿಯೆಗಳಿಗೆ ಒಳಗಾಯಿತು. ಹಿ.ಚಿ. ಬೋರಲಿಂಗಯ್ಯನವರು ಶಿಕ್ಷಣ ಕೇಂದ್ರದಿಂದ ಹೊರಗಿರುವ ಸಂಪನ್ಮೂಲಗಳನ್ನು ಗುರುತಿಸಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದರು. ಕೆ.ಜಿ. ವಾಸುಕಿಯವರು ಈ ಪ್ರಬಂಧವು ಸರಕಾರವೇ ಸಿದ್ಧಪಡಿಸಿದ ವರದಿಯಂತಿದೆ ಎಂದು ಹೇಳಿದರು. ಡಾ.ಸಿ.ಮಹಾದೇವ ಅವರು ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುವ ಡೊನೇಶನ್ ಪಿಡುಗಿನ ಬಗೆಗೆ ಗಮನ ಸೆಳೆದರು. ಪೂರ್ಣಾನಂದ ಅವರು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಡುವ ಕ್ರಮ ಹಾಸ್ಯಾಸ್ಪದವಾದುದು. ಅದರ ಬದಲು ಪೋಷಕರೇ ಮಕ್ಕಳಿಗೆ ಹಾಲು ಕೊಡುವಂತಹ ವಾತಾವರಣವನ್ನು ನಿರ್ಮಾನ  ಮಾಡಬೇಕು ಎಂದರು. ಶಿ‌ಕ್ಷಣ ಕ್ಷೇತ್ರದಲ್ಲಿ ಎನಿಸಿಕೊಂಡ ಪ್ರಗತಿಯನ್ನು ಸಮಾಜದ ಮೌಲ್ಯ ವ್ಯವಸ್ಥೆಯೊಂದಿಗೆ ಹೋಲಿಸಿ ನೋಡುವ ಪ್ರಯತ್ನ ಪ್ರಬಂಧದಲ್ಲಿ ಇಲ್ಲವಾದ್ದರಿಂದ ಸಮಸ್ಯೆಯನ್ನು ಸರಳಗೊಳಿಸಲಾಗಿದೆ ಎಂಬ ಅಭಿಪ್ರಾಯವನ್ನು ಹಲವರು ಪ್ರಕಟಿಸಿದರು. ಪ್ರಬಂಧಕಾರರ ಗೈರು ಹಾಜರಿಯಲ್ಲಿ ಪ್ರಶ್ನೆಗಳಿಗೆ ಉತ್ತರವಿರದಾಯಿತು.

ಗೋಷ್ಠಿಯ ಅಧ್ಯಕ್ಷ ಭಾಷಣ ಮಾಡಿದ ಪ್ರೊ. ಪ್ರಹ್ಲಾದಚಾರ್ ಅವರು ಆರಂಭದಲ್ಲಿ ಪ್ರಬಂಧ ಮಂಡನೆ ಮಾಡಿದ ಮತ್ತು ಸಮಸ್ಯೆಗಳ ಮಂಡನೆ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಜನರ ಪ್ರತಿಕ್ರಿಯೆಗಳಿಂದ ಅರ್ಥಶಾಸ್ತ್ರಜ್ಞರಿಗೆ ಲಾಭವಾಗಿದೆ ಎಂದು ಸ್ಪಷ್ಟಪಡಿಸಿದರು. ಅರ್ಥಶಾಸ್ತ್ರವು ಯಾವಾಗಲೂ ಗುಣಾತ್ಮಕ ಅಂಶಗಳ ಪರಿಶೀಲನೆಯನ್ನು ಬಿಟ್ಟು ಕೊಡುವುದಿಲ್ಲ ಎಂದು ಅವರು ಅಂಕಿ ಅಂಶಗಳ ಬಗೆಗೆ ಎದ್ದಿರುವ ಅಸಮಾಧನಗಳಿಗೆ ಉತ್ತರ ಕೇಳಿದರು. ನಮ್ಮ ಸಮಾಜ ಸಂಕ್ರಮಣ ಸ್ಥಿತಿಯಲ್ಲಿದೆ. ಇದರ ಕಾರಣವಾಗಿ ಹೊಸ ನೀತಿಗಳೂ ಕಾಣಿಸಿಕೊಳ್ಳುತ್ತಿವೆ. ಈ ಹಂತದಲ್ಲಿ ಅಭ್ಯಸಿಸಬೇಕು ಮತ್ತು ಅಧ್ಯತೆಯಿಂದ ಅವುಗಳನ್ನು ಪರಿಹರಿಸಲು ಕ್ರಿಯಾಶೀಲರಾಗಬೇಕು ಎಂದು ಹೇಳಿದರು.

ಮುಕ್ತಾಯ

ಒಟ್ಟಿನಿಂದ ಮಂಡಿಸಲಾದ ಆರೂ ಪ್ರಬಂಧಗಳಲ್ಲಿ ಪ್ರಬಂಧಕಾರರ  ಅಪಾರಶ್ರಮ, ವಿದ್ವತ್ತು ಮತ್ತು ರಾಜ್ಯದ ಅಭಿವೃದ್ಧಿಯ ಬಗೆಗಿನ ಕಳಕಳಿ ಎದ್ದುಕಾಣುತ್ತಿತ್ತು. ಪ್ರಬಂಧಕಾರರ ಈ ಅರ್ಥ ಶಾಸ್ತ್ರೀಯ ಜ್ಞಾನಕ್ಕೆ ವಿರುದ್ಧವಾಗಿ ಸಾಮಾಜಿಕ ನೆಲೆಯಿಂದ ಪ್ರತಿಕ್ರಿಯಿಸಿದ ಹಲವರು ಪ್ರಬಂಧಗಳ ಮಿತಿಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾದುದು. ಈ ನಿಟ್ಟಿನಲ್ಲಿ  ಅದು ಬಹಳ ಮುಕ್ತವಾದ ಚರ್ಚೆಗೂ, ಭಾವುಕವಾದ ಪ್ರತಿಕ್ರಿಯೆಗಳಿಗೂ ಎಡೆ ಮಾಡಿಕೊಟ್ಟಿತು. ಬಹುಪಾಲು ಪ್ರಬಂಧಗಳು ಸರಕಾರವೇ ಸಿದ್ದಪಡಿಸಿದ ವರದಿಗಳಂತಿವೆ, ಅರ್ಥಶಾಸ್ತ್ರಜ್ಞರು ವ್ಯವಸ್ಥೆಯ ಪರವಾಗಿದ್ದಾರೆ ಎಂಬಂಥಹ ಮಾತುಗಳು ಸಭೆಯ ಒಳಗೂ ಹೊರಗೂ ಕೇಲಿ ಬರುತ್ತಿತ್ತು. ಇದರ ಜೊತೆಗೆ ಬದಲಾದ ಪರಿಸ್ಥಿತಿಯ ಸೂಕ್ಷ್ಮ ವಿಶ್ಲೇಷಣೆ ಅಗತ್ಯ ಎಂಬಂತಹ ಎಚ್ಚರದ ಮಾತುಗಳನ್ನು ಅರ್ಥಶಾಸ್ತ್ರಜ್ಞರೂ ಹೇಳುತ್ತಿದ್ದರು. ಈ ಬಗೆಯ ಸಂಕಥನಗಳೇ ಮೂರನೆಯ ಗೋಷ್ಠಿಯ ಯಶಸ್ಸನ್ನು ಪ್ರಕಟಪಡಿಸುತ್ತದೆ.

ಪ್ರೊ. ಶೇಷಾದ್ರಿ
ಅರ್ಥಶಾಸ್ತ್ರ ಪ್ರಾಧ್ಯಾಪಕರು
ಮಹಿಳಾ ಕಾಲೇಜು, ಬಳ್ಳಾರಿ

ಪುರುಷೋತ್ತಮ ಬಿಳಿಮಲೆ
ಪ್ರಾಧ್ಯಾಪಕ, ಜಾನಪದ ವಿಭಾಗ
ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ