ಈಗ ವ್ಯವಹಾರದಲ್ಲಿ ‘ಶಾಸ್ತ್ರೀಯ ಕನ್ನಡ ಭಾಷೆ’ (Classical Kannada language) ಎಂಬುದಾಗಿ ಹೇಳುತ್ತಿರುವ ಹಳಗನ್ನಡ ನಡುಗನ್ನಡ ಭಾಷೆಗಳ ಭಾಷೆ ಸಾಹಿತ್ಯವಿಷಯಗಳನ್ನು ಅಧ್ಯಯನ ಸಂಶೋಧನೆಗಳಿಗೆ ಎತ್ತಿಕೊಳ್ಳಲು, ಆ ಸಂಬಂಧದ ಯೋಜನೆಗಳನ್ನು ಕೈಕೊಳ್ಳಲು, ಶಾಸ್ತ್ರೀಯ ಭಾಷೆಯ ಅಧಿಕೃತ ಮನ್ನಣೆ ನಿಮಿತ್ತವಾಗಿ ಇನ್ನು ಮುಂದೆ ಕೇಂದ್ರಸರ್ಕಾರದ ಕಡೆಯಿಂದ ಗಣನೀಯ ಪ್ರಮಾಣದಲ್ಲಿ ಅನುದಾನಗಳು ಬರುತ್ತವೆ ಎನ್ನುವುದು ಈಗ ತಿಳಿದ ವಿಷಯ. ಅದರಿಂದಾಗಿ, ಮುಂದೆ ಪ್ರಾಚೀನ ಕನ್ನಡ ಭಾಷೆ ಸಾಹಿತ್ಯಗಳ ಕ್ಷೇತ್ರದಲ್ಲಿ ಅಧ್ಯಯನ ಸಂಶೋದನೆಗಳನ್ನು ನಡಸುವವರಿಗೆ, ಅವರ ಆಸಕ್ತಿ ಕುತೂಹಲಗಳಿಗೆ ಅನುಗುಣವಾಗಿ ಕೆಲಸಗಳಿಗೆ ಸಹಾಯವಾಗಲೆಂದು ದಿಕ್ಸೂಚಿಯಾಗಿ  ಈ ಕೈಪಿಡಿ ಹೊತ್ತಿಗೆಯನ್ನು ಬರೆಯಲಾಗಿದೆ. ಆದರೆ ವಿಷಯಗಳೂ ಯೋಜನೆಗಳೂ ಇವೇ, ಇಷ್ಟೇ ಎಂದು ಯಾರೂ ತಿಳಿಯುವುದಿಲ್ಲ ಎನ್ನುವುದೂ ವಿದಿತವೇ ಇದೆ.

ಆರ್. ನರಸಿಂಹಾಚಾರ್ಯರ ‘ಕರ್ನಾಟಕ ಕವಿಚರಿತೆ’ಯನ್ನು ಆಸಕ್ತರು ನಾಲ್ಕಾರು ಸಲ ತಿರುವಿಹಾಕಬೇಕು; ಅಲ್ಲಿ ನಾನಾ ದೃಷ್ಟಿಗಳಿಂದ ವಿಶೇಷವೆಂದೂ ಅನನ್ಯವೆಂದೂ ತೋರಿದ ಕೃತಿಗಳನ್ನು ಗುರುತಿಸಿ, ಅವುಗಳಲ್ಲಿ ಅಪ್ರಕಟಿತವಾದವುಗಳ ಬಗೆಗೆ ಶೋಧನೆಗಳಿಗೆ ತೊಡಗುವುದು ಲಾಭಕರವಾದ್ದು; ಸಾಮಾಜಿಕವಾಗಿಯೂ ಸಾಂಸ್ಕೃತಿಕವಾಗಿಯೂ ಮಹತ್ತ್ವದವು ಎಂದು ಕಂಡವಕ್ಕೆ, ಹಾಗೆಯೇ ಐತಿಹಾಸಿಕವಾಗಿ ವಿವರಗಳನ್ನೂ ಕಥನಗಳನ್ನೂ ಉಳ್ಳವಕ್ಕೆ ಆದ್ಯತೆ ಸಲ್ಲುವುದು ಅಪೇಕ್ಷಣೀಯವೆನ್ನಬೇಕು. ಪ್ರಾಚೀನ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗವೇ ಆದ ಶಾಸನಸಾಹಿತ್ಯವನ್ನು ಗ್ರಾಂಥಿಕಸಾಹಿತ್ಯದ ಜೊತೆಗೇ ಕೂಡಿಸಿಕೊಂಡು ಸ್ವತಂತ್ರವಾಗಿಯೂ ತುಲನಾತ್ಮಕವಾಗಿಯೂ ಅಧ್ಯಯನ ಮಾಡುವುದಕ್ಕೆ ಹೇರಳವಾಗಿ ಅವಕಾಶಗಳಿವೆ. ಇನ್ನು ಮುಂದೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ನಮ್ಮ ಕಾಲದ ನಮ್ಮನಡುವಿನ ಜನದ ಬದುಕು ಚೆನ್ನಾಗಲು, ಅವರ ನಡೆನುಡಿಗಳು ಉನ್ನತಿಯ ಶಿಖರಗಳಿಗೆ ಏರಲು ಸಾಧ್ಯವಾಗುವಂತೆ ಪರಿಶೋಧಿಸುವ, ಪ್ರಟಿಸುವ ಹಾಗೂ ವ್ಯಾಖ್ಯಾನಿಸುವ ಕೆಲಸಗಳನ್ನು ನಮ್ಮ ಯುವಪೀಳಿಗೆಯ ಸಂಶೋಧಕರು ಮಾಡಬೇಕಾಗಿದೆ. ವಿದ್ವತ್ತೆಯ ವ್ಯವಸಾಯಗಳಲ್ಲಿ, ಕಳದ ಕಾಲಕ್ಕಿಂತ ಬರುವ ಕಾಲ ಉತ್ತಮ ಎನ್ನುವಂತಾಗಲೆಂದು ನಾನು ಹಾರೈಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ಆಹ್ವಾನದ ಮೇಲೆ ಈಗ್ಗೆ ಕೆಲವು ತಿಂಗಳುಗಳ ಹಿಂದೆ ನಾನು ಹಂಪಿಗೆ ಹೋಗಿದ್ದೆ. ಅಲ್ಲಿ ಬಿಡುವಿನ ವೇಳೆಯಲ್ಲಿ ಮಾನ್ಯ ಕುಲಪತಿಗಳು ಪ್ರೊ. ಎ. ಮುರಿಗೆಪ್ಪನವರೊಂದಿಗೆ ಮಾತುಕತೆಯಲ್ಲಿದ್ದಾಗ ನಮ್ಮ ಮಾತು ಶಾಸ್ತ್ರೀಯ ಭಾಷೆಯ ಕಡೆಗೆ ತಿರುಗಿತು. ಇಂತಹ ಒಂದು ಕೈಪಿಡಿ ಹೊತ್ತಿಗೆಯ ಸಾಧ್ಯತೆಯನ್ನು ನಾನು ಅವರಿಗೆ ಸೂಚಿಸಿದಾಗ, ಅವರು ಕೂಡಲೇ, ಅದನ್ನು ನಾನು ಸಿದ್ಧಪಡಿಸಿಕೊಟ್ಟರೆ ತಾವು ಕನ್ನಡ ವಿಶ್ವವಿದ್ಯಾಲಯದ ಮೂಲಕ ಪ್ರಕಟಿಸುವ ಭರವಸೆ ನೀಡಿದರು. ಅದರ ಫಲವೇ ಈ ರಚನೆ. ಅವರ ವಿಶ್ವಾಸಕ್ಕೆ ನಾನು ಬಹುವಾಗಿ ಕೃತಜ್ಞ. ಪ್ರಕಟನೆಯ ಹಂತದಲ್ಲಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರು ನನಗೆ ಎಲ್ಲ ವಿಧದ ಸಹಕಾರವನ್ನೂ ನೀಡಿದ್ದಾರೆ. ಡಾ. ಪ್ರಣತಾರ್ತಿಹರನ್ ಅವರ ನೆರವೂ ನನಗೆ ದೊರೆತಿದೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಎಸ್. ಯೋಗಾನಂದ ಅವರು ಹಾಗೂ ಶ್ರೀರಂಗಪಟ್ಟಣದ ಶ್ರೀರಂಗ ಡಿಜಿಟಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಸಂಸ್ಥೆಯ ಸಿಬ್ಬಂದಿವರ್ಗದವರು ಅಕ್ಷರಜೋಡಣೆಯ ಕೆಲಸವನ್ನು ತೃಪ್ತಿಕರವಾಗಿ ನಿರ್ವಹಿಸಿಕೊಟ್ಟಿರುತ್ತಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಶ್ರದ್ಧಾವಂತರೂ ಶ್ರಮಸಹಿಷ್ಣುಗಳೂ ಆದ, ಅಧ್ಯಯನದಲ್ಲಿ ಕುತೂಹಲಿಗಳೂ ಸಂಶೋಧನೋತ್ಸಾಹಿಗಳೂ ಆದ ಯುವಸಂಶೋಧಕರು ಈ ಚಿಕ್ಕಪುಸ್ತಕದ ಪ್ರಯೋಜನವನ್ನು ಪಡೆಯುವಂತಾದರೆ, ನನ್ನ ಪ್ರಯತ್ನ ಸಾರ್ಥಕವಾಯಿತೆಂದು ನಾನು ತಿಳಿಯುತ್ತೇನೆ.

ಮೈಸೂರು
೨೬-೮-೨೦೦೯
ಟಿ.ವಿ. ವೆಂಕಟಾಚಲ ಶಾಸ್ತ್ರಿ