ಭಾರತದಲ್ಲಿ ಹಲವು ದೇಶಭಾಷೆಗಳಿವೆ; ಅವನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ಪ್ರಾಂತಭಾಗಗಳಲ್ಲಿ ಅಲ್ಲಲ್ಲಿಯ ಜನಸಮುದಾಯ ಎಂದಿನಿಂದಲೂ ಬಳಸುತ್ತ ಬಂದಿವೆ. ಆ ಭಾಷೆಗಳಲ್ಲಿ ಕೆಲವಕ್ಕೆ ಮಾತ್ರವೇ ಸಾವಿರ ವರ್ಷಗಳಿಗೂ ಮೀರಿದ ಪ್ರಾಚೀನತೆಯಿದೆ, ಅವಿಚ್ಛಿನ್ನ ಹಾಗೂ ಸಮೃದ್ಧ ಸಾಹಿತ್ಯಿಕಪರಂಪರೆಯಿದೆ. ಈ ಪರಂಪರೆ ಗ್ರಾಂಥಿಕಸಾಹಿತ್ಯವನ್ನು ಹೇಗೋ ಹಾಗೆ ಶಾಸನಸಾಹಿತ್ಯವನ್ನೂ ಒಳಕೊಂಡಿದ್ದಾಗಿದೆ. ಈಚೆಗೆ ಭಾರತ ಸರಕಾರ ‘ಶಾಸ್ತ್ರೀಯ ಭಾಷೆ’ (classical language) ಎಂಬ ಹೆಸರಿನಲ್ಲಿ ವಿಶೇಷವಾಗಿ ಸ್ಥಾನಮಾನಗಳನ್ನು ನೀಡಲು ಗೊತ್ತುಮಾಡಿದ ಅರ್ಹತೆಗಳನ್ನು ಅವುಗಳಲ್ಲಿ ಕೆಲವು ಪಡೆದುಕೊಂಡಿವೆ. ಇವುಗಳಲ್ಲಿ ಕನ್ನಡ ಭಾಷೆಯೂ ಒಂದು ಎನ್ನುವುದು ಅಭಿಮಾನಪಡಬೇಕಾದ ವಿಷಯ. ಈಚೆಗೆ ತಮಿಳುಭಾಷೆಯ ವಿಷಯದಲ್ಲಿ ತಮ್ಮ ವಾದಗಳನ್ನು ಮಂಡಿಸಿದವರು ವಿದೇಶದ ವಿದ್ವಾಂಸರಾದ ಪ್ರೊ. ಜಿ.ಎಲ್. ಹಾರ್ಟ್‌ ಅವರು.

ಯಾವುದೇ ಭಾಷೆಯನ್ನು ಶಾಸ್ತ್ರೀಯಭಾಷೆಯೆಂಬುದಾಗಿ ಘೋಷಿಸಬೇಕಾದರೆ ಅದರಲ್ಲಿ ಮೂರು ಮುಖ್ಯವಾದ ಮಾನದಂಡಗಳಿರಬೇಕೆಂದು ಅವರು ಹೇಳಿದಂತೆ ವರದಿಯಾಗಿದೆ (Classical ಎಂಬುದಕ್ಕೆ ‘ಶಾಸ್ತ್ರೀಯ’ ಎಂಬುದು ತಕ್ಕ ಮಾತಲ್ಲ; ‘ಅಭಿಜಾತ’ ಎಂದು ಬೇಕಾದರೆ ಹೇಳಬಹುದು)

೧. ಅದು ಪ್ರಾಚೀನ ಭಾಷೆಯಾಗಿರಬೇಕು.

೨. ಸ್ವತಂತ್ರಪರಂಪರೆಯಿಂದ ಬೆಳೆದು ಬಂದಿರಬೇಕು.

೩. ಅಗಾಧ ಪ್ರಾಚೀನಸಾಹಿತ್ಯ ಹೊಂದಿರಬೇಕು.

ಅವರು ಹೇಳುತ್ತಾರೆ: “ತಮಿಳು ಈ ಎಲ್ಲಾ ಅಂಶಗಳನ್ನು ಪೂರೈಸುತ್ತದೆ. ಇದು ಅರೇಬಿಕ್ ಭಾಷೆಗಿಂತ ಹಳೆಯದು. ಲ್ಯಾಟಿನ್‌ನಷ್ಟೇ ಹಳೆಯ ಭಾಷೆ. ಸಂಪೂರ್ಣ ಸ್ವತಂತ್ರ ಪರಂಪರೆಯಿಂದ ಬೆಳೆದುಬಂದಿದೆ. ಸಂಸ್ಕೃತ ಸೇರಿದಂತೆ ಇತರ ಭಾಷೆಗಳಿಂದ ತಮಿಳು ನಗಣ್ಯವೆನಿಸುವಷ್ಟು ಅಲ್ಪಪ್ರಮಾಣದಲ್ಲಿ ಪ್ರಭಾವಹೊಂದಿದೆ. ಅದರ ಪ್ರಾಚೀನ ಸಾಹಿತ್ಯವಂತೂ ಅಗಾಧ ಮತ್ತು ಉತ್ಕೃಷ್ಟ.”

ಹಾರ್ಟ್‌ ಅವರಿಗೆ ತಮಿಳು ಭಾಷೆ ಸಾಹಿತ್ಯಗಳ ಪರಿಚಯವೆಷ್ಟೋ, ಅನ್ಯ ದ್ರಾವಿಡಗಳ ಪರಿಚಯವೆಷ್ಟೋ, ನನಗೆ ತಿಳಿಯದು. ಅವರ ತಮಿಳುಪಕ್ಷಪಾತ ನನಗೆ ದ್ರಾವಿಡ ಭಾಷಾವ್ಯಾಕರಣಕರ್ತೃ ಕಾಲ್ಡ್‌ವೆಲ್ ಅವರ ನೆನಪು ತರುತ್ತದೆ.

ಅವರು ಸೂಚಿಸುವ ಮಾನದಂಡಗಳ ಮೂಲಕವೇ ನಾವು ವಿಷಯಪ್ರವೇಶ ಮಾಡೋಣ. “ಸಂಸ್ಕೃತಸಾಹಿತ್ಯ, ಇತರ ಭಾರತೀಯ ಭಾಷೆಗಳ ಪೈಕಿ ತಮಿಳನ್ನು ಮಾತ್ರ ‘ಶಾಸ್ತ್ರೀಯ’ ಎಂದು ಪರಿಗಣಿಸಬಹುದು. ಇದನ್ನು ನಾನೇನೂ ಒಣ ಅಭಿಮಾನದಿಂದ ಹೇಳುತ್ತಲ್ಲ. ತಮಿಳಿಗೆ ಖಂಡಿತವಾಗಿಯೂ ಆ ಅರ್ಹತೆ ಇದೆ.” -ಹೀಗೆ ತಮ್ಮ ವಾದಕ್ಕೆ ಪೀಠಿಕೆ ಹಾಕುವ ಹಾರ್ಟ್‌, “ಗ್ರೀಕ್ ಭಾಷೆಯನ್ನು ಶಾಸ್ತ್ರೀಯ (ಅಭಿಜಾತ) ಭಾಷೆಯೆಂದು ಘೋಷಿಸಿದಾಗ ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆಗಳು ಗಲಾಟೆ ಮಾಡಲಿಲ್ಲ” ಎಂದು ಹೇಳುವ ಮೂಲಕ ಉಳಿದ ಭಾರತೀಯ ಭಾಷೆಗಳು ಆ ಸ್ಥಾನ ಮರ್ಯಾದೆಯನ್ನು ಬೇಡಬಾರದು ಎಂದು ಎಚ್ಚರಿಸುವಂತೆ ತೋರುತ್ತಿದೆ. ಈ ವಿದ್ವಾಂಸರು ಯಾವ ದೇಶದವರೋ, ಅವರ ಭಾರತೀಯ ಭಾಷಾಪ್ರಭುತ್ವ ಎಷ್ಟರ ಮಟ್ಟನದೋ ನನಗೆ ತಿಳಿಯದು. ಅದಿರಲಿ, ಮೂರು ಮಾನದಂಡಗಳತ್ತ ಹೊರಳೋಣ:

. ಪ್ರಾಚೀನತೆ

ಈ ವಿದ್ವಾಂಸರ ನಿಲುವು ಹೀಗೆ: “ತಮಿಳುಸಾಹಿತ್ಯ ಇತರ ಆಧುನಿಕ ಭಾರತೀಯ ಸಾಹಿತ್ಯಗಳಿಗಿಂತ ಸುಮಾರು ೨೦೦೦ ವರ್ಷ ಹಳೆಯದು. ಪ್ರಾಚೀನ ತಮಿಳು ಕೃತಿ ‘ತೊಲ್‌ಕಾಪ್ಪಿಯಂ’ನಲ್ಲಿ ಪೂರ್ವ-ತಮಿಳುಸಾಹಿತ್ಯದ ಉಲ್ಲೇಖವಿದೆ. ಅವುಗಳ ಕಾಲ ಕ್ರಿ.ಪೂ. ೨ನೆಯ ಶತಮಾನ. ಸಂಗಂ ಸಾಹಿತ್ಯ, ಪತ್ತುಪ್ಪಾಟ್ಟು ಇವುಗಳ ಕಾಲ ಕ್ರಿ.ಶ.೨ನೆಯ ಶತಮಾನ. ಎಂದರೆ ಕಾಳಿದಾಸನ ಕಾಲಕ್ಕಿಂತ ೨೦೦ ವರ್ಷ ಮೊದಲೇ ಸಮಾಜಮುಖಿಯಾದ ಸಾಹಿತ್ಯವನ್ನು ನೀಡಿದ ಕೀರ್ತಿ ತಮಿಳಿಗೆ ಸಲ್ಲುತ್ತದೆ.”

‘ತೊಲ್‌ಕಾಪ್ಪಿಯಂ’ ಗ್ರಂಥದ ಕಾಲವನ್ನು ಮೊದಲು ಪರಿಶೀಲಿಸೋಣ. ಕ್ರಿ.ಪೂ. ೮೦೦೦ದಿಂದ ಕ್ರಿ.ಶ. ೮ನೆಯ ಶತಮಾನದ ವರೆಗೆ ಅದರ ಕಾಲ ಉಯ್ಯಾಲೆಯಾಡುತ್ತಿದೆ. ಈಚಿನ ಕಾಲದ ವ್ಯಾಖ್ಯಾನಕಾರರು ಹಬ್ಬಿಸಿರುವ ಐತಿಹ್ಯಗಳನ್ನು ಆಲಕ್ಷಿಸಿ ನೋಡಿದಾಗ, ಅದರ ರಚನಾಕಾಳ ಕ್ರಿ.ಶ.ಸು. ೧೧-೧೨ನೆಯ ಶತಮಾನವೆಂದು ಬಿ.ಜಿ.ಎಲ್. ಸ್ವಾಮಿ ನಿರ್ಧರಿಸಿದ್ದಾರೆ. ಸ್ವಾಮಿ ಕನ್ನಡಿಗರು ಎಂದು ಯಾರಾದರೂ ಆಕ್ಷೇಪಿಸಬಹುದು. ತಮಿಳು ವಿದ್ವಾಂಸರಾದ ಶಿವರಾಜ ಪಿಳ್ಳೆ ಕ್ರಿ.ಶ. ೪ರಿಂದ ೭ನೆಯ ಶತಮಾನ, ವೈಯಾಪುರಿ ಪಿಳ್ಳೆ ಕ್ರಿ.ಶ. ೫೦೦, ರಮಣಶಾಸ್ತ್ರಿ ಕ್ರಿ.ಶ. ೬೫೦ ಹೀಗೆ ಇವರ ಸೂಚನೆಗಳುಂಟೆನ್ನಬಹುದು. ಎ.ಸಿ. ಬರ್ನೆಲ್ ಕ್ರಿ.ಶ. ೮ನೆಯ ಶ. ಎನ್ನುತ್ತಾರೆ.

ಇವೆಲ್ಲ ಕನ್ನಡ ಕವಿರಾಜಮಾರ್ಗಪೂರ್ವಕಾಲೀನ ಸಾಹಿತ್ಯದ ಅವಧಿಗೆ, ಕದಂಬ-ಗಂಗ-ಬಾದಾಮಿ ಮತ್ತು ಶ್ರವಣಬೆಳ್ಗೊಳ ಶಾಸನಲೇಖನಗಳ ಸಾಹಿತ್ಯದ ಅವಧಿಗೆ, ಹೊಂದಿಕೊಳ್ಳುವ ಕಾಲಮಾನಗಳೇ ಆಗಿವೆ ಎನ್ನುವುದನ್ನು ಗಮನಿಸಬೇಕು.

ದಿಟವಾಗಿ ಲಿಖಿತ ದ್ರಾವಿಡಭಾಷಾಸಾಹಿತ್ಯಗಳು ಸಂಸ್ಕೃತಪ್ರಾಕೃತ ಭಾಷಾಸಾಹಿತ್ಯಗಳ ಪ್ರಭಾವಕ್ಕೆ ಸಿಕ್ಕ ಕಾಲದಲ್ಲಿ ‘ತೊಲ್‌ಕಾಪ್ಪಿಯಂ’ ರಚಿತವಾಯಿತೆನ್ನಬೇಕು. ಅದರಲ್ಲಿ ಅತಿಪ್ರಾಚೀನವೆಂಬ ವ್ಯಾಕರಣರೂಪಗಳಿಲ್ಲವೆನ್ನುತ್ತಾರೆ, ಕಾಲ್ಡ್‌ವೆಲ್. ಶಬ್ಧ ಭಂಡಾರ, ಆಚರಣೆಗಳು, ಚಿಂತನೆಗಳು, ಆದರ್ಶಗಳು ಆರ್ಯಭಾಷಾ ಪ್ರಭಾವವನ್ನು ಪ್ರಕಟಿಸುತ್ತವೆ ಎನ್ನುತ್ತಾರೆ, ಚಿದಂಬರಂ ಪಿಳ್ಳೆ. ಹೀಗಾಗಿ ಇಲ್ಲಿ ದೊರೆಯುವ ಸಾಮಾಜಿಕ-ಸಾಂಸ್ಕೃತಿಕ ಸಾಮಗ್ರಿ ಕ್ರಿ.ಶ. ೬ನೆಯ ಶ. ದಿಂದ-೧೧/೧೨ನೆಯ ಶತಕದ ವರೆಗಿನ ವ್ಯಾಪ್ತಿಯುಳ್ಳದ್ದು ಎಂದು ಅಭಿಪ್ರಾಯಪಡಲಾಗಿದೆ.

ಒಟ್ಟಾಗಿ ಸಂಗಂ ಸಾಹಿತ್ಯದ ಹಳಮೆಗೆ ಸಂಬಂಧವಿರುವ ಐತಿಹ್ಯಗಳನ್ನೆಲ್ಲ ಆಧುನಿಕಕಾಲದ ವಿದ್ವಾಂಸರು ಗಮನಿಸಿ, ಅದರ ಅವಧಿಯನ್ನು ಕ್ರಿ.ಪೂ. ೫ನೆಯ ಶತಮಾನದಿಂದ ಕ್ರಿ.ಶ. ೫ನೆಯ ಶತಮಾನದ ವರೆಗೆ ಎಂದೂ ಬೌದ್ಧಶ್ರವಣರ ಕಾಲದ ಮಹಾಕಾವ್ಯಗಳ ಕಾಲವನ್ನು ಕ್ರಿ.ಶ. ೨ರಿಂದ ೭ನೆಯ ಶತಮಾನದ ವರೆಗೆ ಎಂದೂ ತಿಳಿಯುತ್ತಾರೆ. ತಮಿಳು ಸಾಹಿತ್ಯದ ವಿಶ್ವಕೋಶಕಾರರು ಸಂಗಂ ಸಾಹಿತ್ಯದ ರಚನೆಗೆ ಉಲ್ಲೇಖಗಳು ೭ನೆಯ ಶತಮಾನದಿಂದ ಮುಂದಕ್ಕೆ ಕಾಣಸಿಗುವುದೆಂದು ಈಚೆಗೆ ಹೇಳಿದ್ದಾರೆ. (ETL. Vol. I, Madras, 1990.)

ಹಾಗೆ ನೋಡಿದರೆ, ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಹ, ವಿವಾದಾಸ್ಪದವಾದ ಕನ್ನಡ ಬೌದ್ಧಸಾಹಿತ್ಯದ ವಿಚಾರ ಹೇಗೇ ಇರಲಿ, ಕನ್ನಡ ಭಾಷೆಯ ಸಂಗಂ ಸಾಹಿತ್ಯವೆಂದೇ ಹೇಳಬಹುದಾದ ಅನುಪಲಬ್ಧವಾದ ಜೈನಸಾಹಿತ್ಯದ ಉಲ್ಲೇಖಗಳು ಹೇರಳವಾಗಿವೆ. ಅಲ್ಲಿ ಧಾರ್ಮಿಕ, ಲೌಕಿಕ ಎಂಬ ಎರಡು ಬಗೆಯ ಸಾಹಿತ್ಯವೂ ಇದೆ. ಅದರ ವ್ಯಾಪ್ತಿ ಮಹತ್ತ್ವಗಳು ನಮ್ಮ ಅಂದಾಜಿಗೆ ಸರಿಯಾಗಿ ಸಿಕ್ಕುತ್ತಿಲ್ಲ. ಕ್ರಿ.ಶ. ಸು. ೩ನೆಯ ಶ.ದ ಶ್ಯಾಮಕುಂದಾಚಾರ್ಯರು ಜೈನ ಸಿದ್ಧಾಂತಗ್ರಗಂಥಗಳಾದ ಷಟ್ಖಂಡಾಗಮ ಮತ್ತು ಕಷಾಯಪ್ರಾಭೃತಗಳಿಗೆ ರಚಿಸಿದ ಪದ್ಧತಿಗಳೆಂಬ ಟೀಕೆಗಳೂ ಕ್ರಿ.ಶ.ಸು. ೪ನೆಯ ಶ.ದ ತುಂಬಲೂರಾಚಾರ್ಯರು ಅವೇ ಗ್ರಂಥಗಳಿಗೆ ಬರೆದ ವಿಸ್ತೃತ ‘ಚೂಡಾಮಣಿ’ ವ್ಯಾಖ್ಯಾನವೂ ನಮಗೆ ದೊರೆತಿಲ್ಲ. ಇವು ತಮಿಳು ಸಂಗಂ ಸಾಹಿತ್ಯಕಾಲಕ್ಕೆ ಸೇರಿದವೆನ್ನಬೇಕು. ಇಲ್ಲವೆ ಆ ಭಾಷೆಯ ಬೌದ್ಧ-ಶ್ರವಣ ಸಾಹಿತ್ಯಕಾಲದವೆನ್ನಬಹುದು. ಷಟ್ಖಂಡಾಗಮದ ಟೀಕಾಕಾರರ ಕಾಲವನ್ನು ಕ್ರಿ.ಶ. ೨ನೆಯ ಶ.ದಿಂದ-೭ನೆಯ ಶ.ದ ವರೆಗೆ ಎಂದು ಹೀರಾಲಾಲ್ ಜೈನ್ ನಿರ್ಧರಿಸಿದ್ದಾರೆ.

“ಕನ್ನಡ ನುಡಿ ಕ್ರಿ.ಶ. ಆದಿಭಾಗದಿಂದಲೂ ಇದ್ದಿತೆಂದು ಹೇಳಬಹುದಾಗಿದೆ. ಕ್ರಿ.ಶ. ೨-೩ನೆಯ ಶತಮಾನಗಳಲ್ಲಿ ಅದಕ್ಕೆ ಲಿಪಿಯೊಂದು ಉಂಟಾಗಿ ಅದು ಗ್ರಂಥಸ್ಥವಾಗುವುದಕ್ಕೆ ಮೊದಲಿಟ್ಟಿರಬಹುದು. ಆ ಕಾಲದಲ್ಲಿ ಕನ್ನಡಿಗರಲ್ಲಿ ಬಾಯಿಂದ ಬಾಯಿಗೆ ಪ್ರಚಾರಗೊಳ್ಳುತ್ತಿದ್ದ ಜಾನಪದ ಸಾಹಿತ್ಯವೂ ಇದ್ದಿರಬಹುದು. ಇದು ಗ್ರಂಥಸ್ಥರೂಪವನ್ನು ಪಡೆಯಿತೋ ಇಲ್ಲವೋ ಎಂಬುದನ್ನು ತಿಳಿಯಲು ಈಗ ಪ್ರಮಾಣಗಳಿಲ್ಲ.” ಹೀಗೆ ಅಭಿಪ್ರಾಯಪಡುವ ಹಳಗನ್ನಡ ವಿದ್ವಾಂಸರಾದ ಡಿ.ಎಲ್. ನರಸಿಂಹಾಚಾರ್ಯರ ಊಹಿಸಿರುವ ಗ್ರಂಥಸ್ಥ ಕನ್ನಡಸಾಹಿತ್ಯದ ಕಾಲಮಾನವೂ ತಮಿಳು ಭಾಷೆಯ ಸಂಗಂ ಸಾಹಿತ್ಯಕ್ಕೆ ಹೇಳುವ ಕಾಲದೊಂದಿಗೆ ಕೂಡಿಕೊಳ್ಳುತ್ತದೆ.

ಕನ್ನಡದಲ್ಲಿ ಕ್ರಿ.ಶ. ೪೫೦ರಿಂದ ಮುಂದಕ್ಕೆ ಅರಸುಮನೆತನಗಳ ಶಾಸನಗಳು ದೊರೆಯುತ್ತ ಹೋಗಿವೆ. ಕದಂಬ, ಪಶ್ಚಿಮಗಂಗ, ಬಾದಾಮಿ ಚಾಲುಕ್ಯ ಶಾಸನಗಳ ಜೊತೆಗೆ ಶ್ರವಣಬೆಳ್ಗೊಳದ ಮೃತ್ಯುಲೇಖಗಳು ಕ್ರಿ.ಶ. ೭-೮ನೆಯ ಶತಮಾನಗಳ ಅವಧಿಯಲ್ಲಿವೆ. ಇವು ಬಹುಸಂಖ್ಯೆಯಲ್ಲಿವೆ. ನೃಪತುಂಗ/ಶ್ರೀವಿಜಯ, ಪಂಪ, ನಾಗಚಂದ್ರ, ನಾಗವರ್ಮ(೨) ಜಯಕೀರ್ತಿ ಮೊದಲಾದವರ ಶಾಸ್ತ್ರಗ್ರಂಥಗಳೂ ಕಾವ್ಯಗ್ರಂಥಗಳೂ ಕ್ರಿ.ಶ. ೧೧ನೆಯ ಶತಮಾನಕ್ಕೆ ಹಿಂದೆ, ಕನಿಷ್ಠ ೩-೪ ಶತಮಾನಗಳಷ್ಟಾದರೂ ಹಿಂದೆ, ಎಂದರೆ ೭-೮ನೆಯ ಶತಮಾನಗಳ ಕಾಲದಿಂದ ಕನ್ನಡ ಸಾಹಿತ್ಯ ಸ್ವತಂತ್ರವಾಗಿ, ಸುಪುಷ್ಟವಾಗಿ ಬೆಳೆದುಬಂದಿದ್ದಿತು ಎನ್ನುವ ಸ್ಪಷ್ಟಸಾಕ್ಷ್ಯಗಳನ್ನು ಒಳಕೊಂಡಿವೆ. ಶಬ್ದಮಣಿದರ್ಪಣಕಾರನು ಮಾರ್ಗಕಾರರೆಂದು ಹೆಸರಿಸುವ ಕವಿಗಳ ಪಂಕ್ತಿಯಲ್ಲಿ, ೯ ಮಂದಿಯಲ್ಲಿ ೭ ಜನ ಕವಿಗಳ ರಚನೆಗಳೇ ನಮಗೆ ದೊರೆತಿಲ್ಲವೆಂಬುದನ್ನೂ ನೆನೆದರೆ, ಸು.೩೦-೪೦ ರಚನೆಗಳಾದರೂ ಕಾಲಗರ್ಭದಲ್ಲಿ ಕರಗಿಹೋಗಿವೆಯೆಂದು ಹೇಳಬೇಕಾಗುತ್ತದೆ. ಇವುಗಳಲ್ಲಿ ಮುಕ್ಕಾಲಂಶವಾದರೂ ಲಭ್ಯವಾಗಿದ್ದರೆ, ತಮಿಳು ಭಾಷೆಯ ಪ್ರಾಚೀನಸಾಹಿತ್ಯಕ್ಕೆ ಅದು ಸಾಟಿಯಾಗಬಹುದಿತ್ತು. ನಾವು ದುರ್ದೈವಿಗಳು, ಆ ಪ್ರಾಪ್ತಿ ಇಲ್ಲವಾಗಿದೆ.

ಪ್ರಾಸಂಗಿಕವಾಗಿ, ಬಿ.ಎಂ. ಶ್ರೀಕಂಠಯ್ಯನವರ ಎರಡು ಲೇಖನಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಬಹುದಾಗಿದೆ. ‘ಪೂರ್ವದ ಹಳಗನ್ನಡ ಮತ್ತು ತಮಿಳು: ಕನ್ನಡ ಮೊದಲೊ ತಮಿಳು ಮೊದಲೊ?’ ಎಂದು ಲೇಖನದಲ್ಲಿ ಶ್ರಿಯವರು ಪ್ರಾಚೀನ ಕನ್ನಡ ಶಾಸನಗಳಲ್ಲಿ ಕಾಣುವ ಹಲವು ಶಬ್ದರೂಪಗಳು, ಪ್ರತ್ಯಯಗಳು ಮತ್ತು ವಾಕ್ಯರಚನೆಯ ಮೇಲಿನಿಂದ ಪೂರ್ವದ ಹಳಗನ್ನಡಸ್ವರೂಪವನ್ನು ಅಲ್ಲಿ ಗುರುತಿಸಿ, ಅವು ಸಂಗಂ ತಮಿಳಿನೊಂದಿಗೆ ಸಾಮ್ಯ ಇಲ್ಲವೆ ಸಾದೃಶ್ಯ ತೋರುತ್ತಿರುವುವು ಎಂದು ಹೇಳಿರುವುದೇ ಅಲ್ಲದೆ, “ಕನ್ನಡದ ನುಡಿಗಳೂ ವ್ಯಾಕರಣದ ನಿರಿಗಳೂ ಭಾಷಾಶಾಸ್ತ್ರದ ದೃಷ್ಟಿಯಿಂದ ಕನ್ನಡದಲ್ಲೇ ಪೂರ್ವರೂಪಗಳಾಗಿಯೂ ತಮಿಳಿನವು ಅನಂತರದ ರೂಪಗಳಾಗಿಯೂ ಸ್ಪಷ್ಟವಾಗಿ ಕಾಣುತ್ತವೆ”- ಎಂದು ಧೈರ್ಯವಾಗಿ ಶ್ರುತಪಡಿಸಿದ್ದಾರೆ. ಹೇರಳವಾಗಿ ಸಾಕ್ಷ್ಯಾಧಾರಗಳನ್ನು ಕೊಟ್ಟು ತಮ್ಮ ನಿಲವನ್ನು ಸಮರ್ಥಿಸಿದ್ದಾರೆ. ೧೯೪೦ರಲ್ಲಿ ತಿರುಪತಿಯಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ಶಾಖೆಯಲ್ಲಿ ಇಂಗ್ಲೀಷಿನಲ್ಲಿ ಮಾಡಿದ ಈ ಅಧ್ಯಕ್ಷ ಭಾಷಣಕ್ಕೆ ಆಗ ತಮಿಳುಭಾಷಾ ವಿದ್ವಾಂಸರಿಂದ ಏನು ಪ್ರತಿ ಕ್ರಿಯೆ ಬಂದಿತೋ, ಯಾವ ಪ್ರತಿಭಟನೆಗಳು ನಡೆದುವೋ, ತಿಳಿಯದು.

ಶ್ರೀಯವರು ಸಂಗಂ ಸಂಕಲನಗಳಲ್ಲಿ ಕೊನೆಯದೆಂಬ ‘ಪುಱನಾನೂಱು’ ಕಾವ್ಯದಲ್ಲಿ ಹೊಯ್ಸಳ ರಾಜಧಾನಿ ದ್ವಾರಾವತಿ ಮತ್ತು ಸಳನ ಹೆಸರು ಬರುವುದನ್ನು ಸಹ ಒಂದು ಲೇಖನದಲ್ಲಿ ಎತ್ತಿತೋರಿಸಿದ್ದಾರೆ.

. ಸ್ವತಂತ್ರ ಸಾಹಿತ್ಯಪರಂಪರೆ

ಹಾರ್ಟ್‌ ಹೇಳುವುದು ಹೀಗೆ: “ಸಂಸ್ಕೃತದ ಹೊರತಾಗಿ ಸ್ವತಂತ್ರ ಸಾಹಿತ್ಯಪರಂ ಪರೆಯಿರುವ ಏಕೈಕ ಭಾರತೀಯ ಭಾಷೆ ತಮಿಳು. ಸಂಸ್ಕೃತದ ಪ್ರಭಾವ ದಕ್ಷಿಣ ಭಾರತಕ್ಕೆ ಬರುವ ಮೊದಲೇ ತಮಿಳಿನಲ್ಲಿ ಕೆಲವು ಉತ್ತಮ ಸಾಹಿತ್ಯಕೃತಿಗಳು ಬಂದಿದ್ದುವು. ಇವು ಒಳಕೊಂಡಿದ್ದ ವಿಷಯಗಳು ಇತರ ಭಾರತೀಯ ಭಾಷೆಗಳ ಕೃತಿಗಳಲ್ಲಿ ಇದ್ದುದಕ್ಕಿಂತ ಭಿನ್ನವಾಗಿದ್ದವು. ತನ್ನದೇ ಆದ ಸ್ವಂತ ಸಾಹಿತ್ಯಮೀಮಾಂಸೆ, ವ್ಯಾಕರಣ ಪದ್ಧತಿ, ಸೌಂದರ್ಯಮೀಮಾಂಸೆ ಹಾಗೂ ಬೇರೆಲ್ಲೂ ಕಾಣಸಿಗದ ಅತ್ಯುತ್ತಮ ಮೌಲಿಕಸಾಹಿತ್ಯ ತಮಿಳಿನಲ್ಲಿ ಬಹು ಹಿಂದೆಯೇ ರೂಪುಗೊಂಡಿತ್ತು. ಇದರ ಸಂವೇದನೆ ಸಂಸ್ಕೃತ ಸೇರಿದಂತೆ ಇತರ ಭಾರತೀಯ ಭಾಷೆಗಳಿಗಿಂತ ಬಹು ಭಿನ್ನ ಹಾಗೂ ಸಮೃದ್ಧ.”

ಇದನ್ನು ಒಪ್ಪಲಾಗದು. ಅನುಪಲಬ್ಧ ಸಂಗಂ ಸಾಹಿತ್ಯದ ವಿಷಯ ಖಚಿತವಿಲ್ಲ; ತೊಲ್‌ಕಾಪ್ಪಿಯಂ ಕಾಲ ಅನಿಶ್ಚಿತ. ಬೌದ್ಧ-ಶ್ರವಣರ ಕಾಲದ ಕಾವ್ಯಗಳು ಮೊದಲ ಆದ ರಚನೆಗಳು, ಆ ಧರ್ಮಗಳು ದಕ್ಷಿಣ ಭಾರತವನ್ನು ಪ್ರವೇಶಿಸಿದ ಮೇಲೆ, ಎಂದರೆ ಕ್ರಿ.ಪೂ. ೪ನೆಯ ಶತಮಾನದ ಮೇಲೆ, ಅವುಗಳ ಪ್ರಭಾವಕ್ಕೆ ಒಳಪಟ್ಟು, ಸಿದ್ಧವಾದವು; ಸ್ವತಂತ್ರ ಹಾಗೂ ಸ್ವಯಂವ್ಯಕ್ತ ರಚನೆಗಳೇನಲ್ಲ.

ಈ ವಿಷಯದಲ್ಲಿ ದೇಶೀಯ ಮತ್ತು ವಿದೇಶೀಯ ವಿದ್ವಾಂಸರು ಸಾಕಷ್ಟು ವ್ಯಾಪಕವಾಗಿ ವ್ಯಾಸಂಗಮಾಡಿ, ಪ್ರಾಕೃತ ಸಂಸ್ಕೃತಗಳೊಂದಿಗೆ ತಮಿಳಿನ ಸಂಬಂಧ ವಿನಿಮಯಗಳು ಯಾವ ತೆರನಾದವು ಎನ್ನುವುದನ್ನು ವಿಶದವಾಗಿ, ವಿಸ್ತಾರವಾಗಿ ಬರೆದಿದ್ದಾರೆ. ಪ್ರಾಚೀನ ತಮಿಳುಭಾಷೆ ಸಾಹಿತ್ಯಗಳ ಮೇಲೆ ಆರ್ಯಭಾಷೆ ಸಾಹಿತ್ಯಗಳ ಪ್ರಭಾವವನ್ನು ಹೇರಳವಾಗಿಯೇ ಗುರುತಿಸಿದ್ದು, ತಮಿಳುಸಾಹಿತ್ಯದ ಈಚಿನ ವಿಶ್ವಕೋಶದಲ್ಲಿ ಪ್ರತ್ಯೇಕ ಅಧ್ಯಾಯಗಳಲ್ಲಿ ಈ ವಿಷಯವನ್ನು ವಿವೇಚಿಸಿದೆ (ನೋಡಿ: ETL., Vol. I. Ch.14-16.).

ಕ್ರಿ.ಪೂ. ೪ನೆಯ ಶತಮಾನದಲ್ಲಿ ದಕ್ಷಿಣಕ್ಕೆ ಕಾಲಿಟ್ಟ ಜೈನ ಬೌದ್ಧ ಧರ್ಮಗಳು ಸಿಂಹಳವನ್ನೂ ಒಳಕೊಂಡ ಹಾಗೆ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಹೇಗೆ ವ್ಯಾಪಿಸಿದುವು, ಭಾಷೆ ಸಾಹಿತ್ಯಗಳ ಮೇಲೆ ಏನು ಪ್ರಭಾವ ಬೀರಿದುವು ಎನ್ನುವುದರ ಮೇಲೆ ಲೇಖನಗಳೂ ಪುಸ್ತಕಗಳೂ ಸಾಕಷ್ಟು ಬಂದಿವೆ. ಜೈನಧರ್ಮ ಕರ್ನಾಟಕದ ಮೂಲಕವಾಗಿಯೇ ತಮಿಳುನಾಡನ್ನು ಹೊಕ್ಕಿತು ಎನ್ನುವುದನ್ನು ತಿಳಿಸುವ ವಾಸ್ತು ಆಧಾರಗಳು, ಶಾಸನಸಾಕ್ಷ್ಯಗಳು, ಗ್ರಂಥಪ್ರಮಾಣಗಳು ಎಂ.ಗೋವಿಂದ ಪೈ ಮೊದಲಾದವರ ಬರಹಗಳಿಂದ ನಮಗೆ ವಿಶದಪಟ್ಟಿವೆ. ಶ್ರುತಕೇವಲಿ ಭದ್ರಬಾಹುವಿನ ಅಪ್ಪಣೆಯ ಮೇರೆಗೆ ದಶಪೂರ್ವಧರನಾದ ವಿಶಾಖಾಚಾರ್ಯನು ಸಂಘಸದಸ್ಯರೊಂದಿಗೆ ಸೇರಿಕೊಂಡು ಚೌಲದೇಶವನ್ನು, ಎಂದರೆ ಚೋಳದೇಶವನ್ನು, ಕುರಿತು ಪ್ರಯಾಣಮಾಡಿ, ಅಲ್ಲಿ ೧೨ ವರ್ಷಗಳ ಕಾಲವಿದ್ದು ಬಳಿಕ ಉತ್ತರದೇಶಕ್ಕೆ ಮರಳಿದ ವಿಚಾರ ರತ್ನ ನಂದಿಯ ‘ಭದ್ರಬಾಹುಚರಿತೆ’ಯಲ್ಲಿ ಬಂದಿರುವುದನ್ನು ಗೋವಿಂದ ಪೈ ವಿವರವಾಗಿ ತಿಳಿಸಿದ್ದಾರೆ.

ಜೈನಧರ್ಮ ಮತ್ತು ತಮಿಳು ಸಾಹಿತ್ಯ ಕುರಿತು ವಿಚಾರಮಾಡಿರುವ ತಮಿಳುನಾಡಿನ ವಿದ್ವಾಂಸರು ಅಲ್ಲಿ ಮಧುರೆಯ ಸುತ್ತಮುತ್ತಣ ಜೈನುಗುಹೆಗಳಲ್ಲಿ ಕಂಡುಬಂದಿರುವ ಬ್ರಾಹ್ಮೀಲಿಪಿಯ ಶಾಸನಗಳು ಕ್ರಿ.ಪೂ. ೩ನೆಯ ಶತಮಾನದವು ಎಂದು ಹೇಳಿರುವುದು ಇದಕ್ಕೆ ಹೊಂದಿಕೊಳ್ಳುವುದು. ‘ದರ್ಶನಸಾರ’ವೆಂಬ ಜೈನ ದಿಗಂಬರಗ್ರಂಥದಲ್ಲಿ ವಜ್ರ ನಂದಿಯೆಂಬವನು ಮಧುರೆಯಲ್ಲಿ ದ್ರಾವಿಡಸಂಘವನ್ನು ಸ್ಥಾಪಿಸಿದ್ದು ಕ್ರಿ.ಶ. ೪೭೦ರಲ್ಲಿ ಎಂಬುದಾಗಿ ಹೇಳಿದ್ದು, ಅನಂತರವೇ ಅಲ್ಲಿ ಪಂಚಕಾವ್ಯಗಳ ರಚನೆ ನಡೆದ ಹಾಗೆ ತಿಳಿಯುತ್ತದೆ. ತಮಿಳು ಭಾಷೆಯ ಆದಿಕಾವ್ಯವೆನ್ನುವ ‘ಶಿಲಪ್ಪದಿಕಾರಂ’ ಈಚಿನ ಸಂಶೋಧನಗಳಿಂದ ಕ್ರಿ.ಶ. ೮ನೆಯ ಶತಮಾನದ ರಚನೆಯೆಂದು ತಿಳಿದಿದೆ.

ಕರ್ನಾಟಕದಲ್ಲಿ ಸಾಹಿತ್ಯದ ಮೊದಲ ಬೆಳೆ ತೆಗೆದವರೆಲ್ಲ ಜೈನಕವಿಗಳೆಂಬುದು ಈಗ ತಿಳಿದ ವಿಷಯ. ಕವಿರಾಜಮಾರ್ಗಪೂರ್ವಕಾಲೀನ ಸಾಹಿತಿಗಳು ಜೈನರಿರಲಿ, ಬೌದ್ಧರೇ ಇರಲಿ, ಆ ಮಟ್ಟಿಗೆ ಸಾಹಿತ್ಯದ ಪ್ರಾಚೀನತೆಯನ್ನೇ ಅದು ಹೇಳುತ್ತದೆ. ಶ್ಯಾಮಕುಂದ ತುಂಬುಲೂರಾಚಾರ್ಯರು ಕ್ರಿ.ಶ. ೩-೪ನೆಯ ಶ.ದವರೆಂದು ಜೈನ ವಿದ್ವಾಂಸರು ಹೇಳುತ್ತಾರೆ. ಇದೇನೂ ಕಡಮೆಯಾದ, ಹಗುರವಾದ ವಿಷಯವಲ್ಲ.

ಇನ್ನು ಲಕ್ಷಣಗ್ರಂಥಗಳ ವಿಚಾರಕ್ಕೆ ಹೊರಡುವ ಮೊದಲು, ಕವಿರಾಜಮಾರ್ಗೋಕ್ತರಾದ ಗದ್ಯಪದ್ಯ ಕವಿಗಳಲ್ಲಿ ಗದ್ಯಕವಿ ಗಂಗದೊರೆ ದುರ್ವಿನೀತನು ಕ್ರಿ.ಶ.ಸು. ೪೮೨-೫೨೨ರ ನಡುವೆ ಇದ್ದು, ಪದ್ಯಕವಿ ಶ್ರೀವಿಜಯನು ಕ್ರಿ.ಶ.ಸು. ೮೦೦ರಲ್ಲಿ ಇದ್ದು ಕನ್ನಡ ಸಾಹಿತ್ಯದ ಆದ್ಯರಲ್ಲಿ ನಿಸ್ಸಂಶಯವಾಗಿ ಸೇರುವವರಾಗಿದ್ದಾರೆ, ಅವರ ರಚನೆಗಳ ಬಗೆಗೆ ನೇರ ಉಲ್ಲೇಖಗಳಿವೆ ಎಂಬುದನ್ನು ಮತ್ತೆ ಜ್ಞಾಪಿಸಬೇಕಾಗಿದೆ. ಕನ್ನಡದಲ್ಲಿ ಚತ್ತಾಣ ಬೆದಂಡೆ ಎಂಬ ಕಾವ್ಯಪ್ರಕಾರಗಳನ್ನೂ ಅವುಗಳ ಸ್ವರೂಪವನ್ನೂ ಅಲ್ಲಿ ಉಲ್ಲೇಖಿಸಿದ್ದು, ಕನ್ನಡಕ್ಕೆ ಒಂದು ನಿರ್ದಿಷ್ಟವಾದ ಕಾವ್ಯಪರಂಪರೆಯಿದ್ದುದು ಅದರಿಂದ ತಿಳಿಯುತ್ತದೆ. ಅಲ್ಲದೆ ‘ಪುರಾತನಕವಿಗಳ್’, ‘ಪೂರ್ವಾಚಾರ್ಯರ್’, ‘ಕನ್ನಡಗಬ್ಬಂಗಳೊಳ್‌’, ‘ಪೂರ್ವಕಾವ್ಯರಚನೆಗಳ್’,‘ಪುರಾಣಕವಿಪ್ರಭುಪ್ರಯೋಗಾವಿಳ ಸದ್ಗುಣೋದಯಂ’ ಇಂಥ ಮಾತುಗಳು ಸಹ ಆ ಪರಂಪರೆ ಸಾಕಷ್ಟು ಪ್ರಾಚೀನವೆಂಬುದನ್ನೆ ಸಾರುತ್ತಿವೆ.

ಹಾರ್ಟ್‌ ಮಹಾಶಯರು ತಮಿಳು ಭಾಷೆಗೆ ಸ್ವಂತ ಸಾಹಿತ್ಯಮೀಮಾಂಸೆ ಮೊದಲಾದ ಲಾಕ್ಷಣಿಕ ಮಹತಿಯುಂಟೆಂದು ಉಗ್ಗಡಿಸಿರುವ ವಿಚಾರವನ್ನು ನೋಡೋಣ:

ಭಾರತೀಯ ಭಾಷೆಗಳ ಲಾಕ್ಷಣಿಕಸಾಹಿತ್ಯದಲ್ಲಿ ಅನನ್ಯವಾದ ಎರಡು ಕನ್ನಡ ಗ್ರಂಥಗಳು ಎಂದರೆ, ‘ಕವಿರಾಜಮಾರ್ಗ’ ಮತ್ತು ‘ಕಾವ್ಯಾವಲೋಕನ’. ಇದರಲ್ಲಿ ಪ್ರಾಚೀನವಾದ ಮೊದಲ ರಚನೆಯನ್ನು ಕುರಿತು ಅಮರಿಕದ ಷಿಕಾಗೋ (ಈಗ ಕೊಲಂಬಿಯಾ) ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಭಾರತ ಅಧ್ಯಯನ ಈ ವಿಷಯಗಳಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಡಾ. ಷೆಲ್ಡನ್ ಪೋಲಾಕ್ ಅವರು ಏನು ಹೇಳುವರೆಂಬುದನ್ನು ನೋಡಿ (‘ವಿಶ್ವಾತ್ಮಕ ದೇಶಭಾಷೆ’, ಅನು. ಕೆ.ವಿ. ಅಕ್ಷರ, ಅಕ್ಷರ ಪ್ರಕಾಶನ, ಸಾಗರ, ಪು.೯೦-೯೧):

“ಜಗತ್ತಿನ ಯಾವುದೇ ಭಾಗದ ಆಧುನಿಕಪೂರ್ವ ಸಾಹಿತ್ಯ ಸಂಸ್ಕೃತಿಯನ್ನು ಹೋಲಿಕೆಯಾಗಿಟ್ಟುಕೊಂಡು ನೋಡಿದರೂ ಸರಿಯೇ, ಕನ್ನಡ ಭಾಷೆಯ ಸಂದರ್ಭದಲ್ಲಿ ದೇಶಭಾಷಾನಿರ್ಮಾಣದ ಪ್ರಕ್ರಿಯೆಯನ್ನೂ ಇತಿಹಾಸವನ್ನೂ ನಾವು ತಿಳಿಯಬಹುದಾದಷ್ಟು ನಿಖರವಾಗಿ, ಇನ್ನಾವುದೇ ಇಂಥ ದೇಶಭಾಷಾನಿರ್ಮಿತಿಯನ್ನೂ ಅರಿಯಲಾಗುವುದಿಲ್ಲ. ಇವತ್ತಿನ ಭಾರತದ ದಕ್ಷಿಣಭಾಗದಲ್ಲಿ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕರ್ನಾಟಕವೆಂದು ಹೆಸರಾದ ಈ ಪ್ರಾಂತ್ಯದ ಆಡುಭಾಷೆ ಯಾಗಿರುವ ಕನ್ನಡದ ಒಂದು ವಿಶೇಷವೆಂದರೆ, ಇಲ್ಲಿ ಕ್ರಿ.ಶ. ೫ನೆಯ ಶತಮಾನದಿಂದ ಆರಂಭಿಸಿ ಸತತವಾಗಿ, ವಿಶ್ವಾತ್ಮಕತೆ ಮತ್ತು ದೇಶೀಯತೆಗಳ ನಡುವಿನ ಚಲನಶೀಲ ಸಂಬಂಧವು ಬೆಳೆಯುತ್ತ ಬಂದಿರುವುದನ್ನು ನಾವು ನೋಡಲಿಕ್ಕೆ ಸಾಧ್ಯವಿದೆ. ಮಾತ್ರವಲ್ಲ, ಇಲ್ಲಿಯ ಬಹುತೇಕ ವಿದ್ಯಮಾನಗಳ ನಿಖರ ಕಾಲನಿರ್ಣಯವೂ ನಮಗೆ ಲಭ್ಯವಿದೆ. ಜಗತ್ತಿನ ಇನ್ನಾವುದೇ ಪ್ರಾಂತೀಯ ಭಾಷೆಯಲ್ಲೂ ಇಷ್ಟು ದೀರ್ಘಕಾಲದ ಮತ್ತು ಇಷ್ಟೇ ಕಾಲನಿರ್ಣಯದ ಅನುಕೂಲವು ನಮಗೆ ಲಭ್ಯುವಾಗುವುದಿಲ್ಲ.

ಇದರ ಜೊತೆಗೆ, ಕನ್ನಡದ ಇನ್ನೊಂದು ವಿಶೇಷವೆಂದರೆ, ಇಲ್ಲಿ ಲಭ್ಯವಾಗುವ ಬಹುತೇಕ ಮಾಹಿತಿಗಳು ಶಾಸನಗಳನ್ನು ಆಧರಿಸಿದ ಗಟ್ಟಿಯಾದ ಸಾಕ್ಷ್ಯಗಳು; ಅಂಥ ಲಭ್ಯ ಶಾಸನಗಳ ಮೊತ್ತ ಇಲ್ಲಿ ದಂಗುಬಡಿಸುವಷ್ಟಿದೆ. ಜಗತ್ತಿನ ಯಾವುದೇ ಭಾಗಕ್ಕೆ ಹೋಲಿಸಿದರೂ ಇದು ತುಂಬ ಸಾಂದ್ರವಾದ ದಾಖಲೆಗಳನ್ನೊಳಗೊಂಡ ಒಂದು ಭೂ ಪ್ರದೇಶ. ಇಲ್ಲಿ ಸುಮಾರು ೨೫ ಸಾವಿರದಷ್ಟು ಪ್ರಶಸ್ತಿ ಉಂಬಳಿ ದಾನಪತ್ರ ವಂಶಾವಳಿ ಒಪ್ಪಂದ ಮೊದಲಾದವು ಸಿಗುತ್ತವೆ. ಈ ದಾಖಲೆಗಳು ಅಧಿರಾಜರು ಮತ್ತು ಅಧೀನ ಪ್ರಭುಗಳ ಆಸ್ಥಾನದಿಂದ ಹೊರಟಿರುವಂಥವು. ಮಾತ್ರವಲ್ಲ, ಗ್ರಾಮಸಮುದಾಯ ಮೂಲದ ವೀರಗಲ್ಲುಗಳಂಥ ದಾಖಲೆಗಳೂ ಇಲ್ಲಿ ಸೇರಿವೆ. ಇಷ್ಟರ ಮೇಲೆ, ಲಿಖಿತ ಸಾಹಿತ್ಯಪಠ್ಯಗಳೂ ಇಲ್ಲಿ ಬಹುಸಂಖ್ಯೆಯಲ್ಲಿ ದೊರೆಯುತ್ತವೆ; ಇವು ಈ ಉಪಖಂಡದಲ್ಲೇ ನಿಖರವಾದ ಕಾಲನಿರ್ಣಯಕ್ಕೆ ಸಿಗಬಲ್ಲ ಅತ್ಯಂತ ಪ್ರಾಚೀನಪಠ್ಯಗಳು (ತಮಿಳು ಪಠ್ಯಗಳು ಇವಕ್ಕಿಂತ ಹಳೆಯವು, ನಿಜ; ಆದರೆ ಅಲ್ಲಿಯ ಆರಂಭಿಕ ಸಾಹಿತ್ಯದ ಇತಿಹಾಸವು ತುಂಬ ಊಹಾಧಾರಿತ). ಈ ಪಠ್ಯಗಳಲ್ಲಿ ಬಹುಮುಖ್ಯವಾದದ್ದೊಂದು-ಕವಿರಾಜಮಾರ್ಗ (ಕ್ರಿ.ಶ.೮೭೫).

ವಿಶ್ವಾತ್ಮಕ (ಕಾಸ್ಮೊಪಾಲಿಟನ್) ಮತ್ತು ದೇಶೀಯ (ವೆರ್ನಾಕ್ಯುಲರ್) ಸಾಹಿತ್ಯ-ಸಾಂಸ್ಕೃತಿಕ ರೂಢಿಗಳ ಸಂಬಂಧವನ್ನು ಕುರಿತು ಪ್ರಜ್ಞಾಪೂರ್ವಕವಾದ ಸಿದ್ಧಾಂತ ನಿರ್ಣಯಕ್ಕೆ ತೊಡಗುವ ಈ ಪಠ್ಯವು, ನನಗೆ ತಿಳಿದಂತೆ ಇಡಿಯ ದಕ್ಷಿಣ ಏಶಿಯಾದಲ್ಲಿ ಮಾತ್ರವೇ ಅಲ್ಲ, ಜಗತ್ತಿನಲ್ಲಿಯೇ, ಇಂಥ (ಇದಂ) ಪ್ರಥಮ ಪಠ್ಯ. ಇನ್ನು ಸಾಹಿತ್ಯವೇ ಅಲ್ಲದೆ, ದೇವಾಲಯನಿರ್ಮಾಣದಂಥ ಸಾಂಸ್ಕೃತಿಕ ಪ್ರಾಂತೀಕರಣದ ಉದಾಹರಣೆಗಳು ಕೂಡ ಇಲ್ಲಿ ಉದ್ದಕ್ಕೂ ಸ್ಪಷ್ಟವಾಗಿ ಕಾಣಸಿಗುತ್ತವೆ; ಮತ್ತು ಸಾಹಿತ್ಯಿಕ ದೇಶಭಾಷಾನಿರ್ಮಾಣದೊಂದಿಗಿನ ಅವುಗಳ ಸಂಬಂಧ ಕೂಡ ಸಾಕಷ್ಟು ಸಮಾನಾಂತರವಾಗಿ ನಡೆದಿರುವುದು ಗೋಚರವಾಗುವಂತಿದೆ. ಇಷ್ಟು ಮಾತ್ರವೇ ಅಲ್ಲ, ಈ ಎಲ್ಲ ಬೆಳವಣಿಗೆಗಳನ್ನು ನಾವು ಸಾಕಷ್ಟು ಸ್ಪಷ್ಟವಾಗಿ ಇಲ್ಲಿಯ ರಾಜಕೀಯ ವಿದ್ಯಮಾನಗಳೊಂದಿಗೆ ಕೂಡಿಸಿ ನೋಡುವುದೂ ಸಾಧ್ಯವಿದೆ.”

‘ಕವಿರಾಜಮಾರ್ಗ’ದ ಬಗೆಗೆ ಅವರ ಇನ್ನೊಂದು ಉದ್ಧೃತಿ ಹೀಗಿದೆ (ಅದೇ, ಪು.೧೧೧):

“ಕನ್ನಡ ಪರಂಪರೆಯು ಭವಿಷ್ಯಕ್ಕೆ ಕಾದಿಟ್ಟುಕೊಳ್ಳಲು ನಿರ್ಧರಿಸಿದ ಮೊತ್ತಮೊದಲಿನ ಪಠ್ಯಗಳಲ್ಲೊಂದು ಕವಿರಾಜಮಾರ್ಗ (ಕರಾಮಾ.) ಇದು ಪ್ರಾಯಶಃ ಜಗತ್ತಿನ ಸಂಸ್ಕೃತಿಗಳಲ್ಲೇ ದೇಶಭಾಷಾಮೀಮಾಂಸೆಯನ್ನು ಸಿದ್ಧಾಂತೀಕರಿಸಿದ ಮೊದಲ ಪಠ್ಯವೂ ಹೌದು. ಇನ್ನೊಂದು ರೀತಿಯಿಂದ ಹೇಳುವುದಾದರೆ, ಇದು ಪ್ರಾಂತ್ಯಾಂತರ ವ್ಯಾಪ್ತಿಯನ್ನುಳ್ಳ-ಟ್ರಾನ್ಸ್‌ರೀಜನಲ್ ಆದ-ಸಾಂಸ್ಕೃತಿಕ ವ್ಯವಸ್ಥೆಯೊಂದರ ನಿಯಮಗಳನ್ನು ಮೊತ್ತಮೊದಲ ಬಾರಿಗೆ ಅರಿತುಕೊಂಡಂಥ ಪಠ್ಯ ಮತ್ತು ಅಂಥ ಪ್ರಾಂತ್ಯಾಂತರ ವ್ಯಾಪ್ತಿಯ ಒತ್ತಡಗಳಿಗೆ ಒಳಪಡುತ್ತಲೇ ತಾನು ಅದರಿಂದ ಭಿನ್ನವಾಗುವುದಕ್ಕೆ ಉಪಾಯಗಳನ್ನು ರೂಪಿಸಿಕೊಂಡಂಥ ಪಠ್ಯವೂ ಹೌದು. ಆ ಮೂಲಕ ಈ ಪಠ್ಯವು ಪ್ರಾಂತ್ಯಾಂತರವ್ಯಾಪ್ತಿಯ ಸಂಸ್ಕೃತಿಯನ್ನು ಸರಿಗಟ್ಟಲಿಕ್ಕೆ ಮತ್ತು ಅದನ್ನು ಪಲ್ಲಟಗೊಳಿಸಲಿಕ್ಕೆ ಎರಡಕ್ಕೂ ಪ್ರಯತ್ನಮಾಡಿತು. ಆದ್ದರಿಂದಲೇ ಈ ಪಠ್ಯವು ದೇಶಭಾಷಾ  ನಿರ್ಮಾಣದ ಪ್ರಕ್ರಿಯೆಯನ್ನು ಕುರಿತ ಯಾವುದೇ ಚರ್ಚೆಯಲ್ಲಿ ಅನಿವಾರ್ಯಸ್ಥಾನವನ್ನು ಪಡೆಯುತ್ತದೆ.”

ಷೆಲ್ಡನ್ ಪೋಲಾಕ್ ಕನ್ನಡ ‘ಕವಿರಾಜಮಾರ್ಗ’ದ ಸ್ವತಂತ್ರ ಸಾಹಿತ್ಯ ಮೀಮಾಂಸೆಯನ್ನು ಜಗತ್ತಿನ ಭಾಷೆಗಳ ಮೀಮಾಂಸಗ್ರಂಥಗಳೊಂದಿಗೆ ತೂಗಿನೋಡಿ ಅದಕ್ಕೆ ಅಗ್ರ ಪಟ್ಟವನ್ನೇ ಕಟ್ಟಿರುವುದನ್ನು ನಾವು ನಮ್ಮ ದೇಶದ ರಾಜಕೀಯ ಪ್ರಭುಗಳ ಮುಂದಿಟ್ಟು ತೋರಿಸಿ, ಕನ್ನಡ ಭಾಷೆ ಶಾಸ್ತ್ರೀಯಭಾಷೆ ಎನ್ನಿಸಲು, ಎಂದರೆ ಅಭಿಜಾತಭಾಷೆ ಎಂದು ಮನ್ನಣೆ ಪಡೆಯಲು, ತಮಿಳುಭಾಷೆಗಿಂತ ಹೆಚ್ಚಿನ ಅರ್ಹತೆ ಪಡೆದಿದೆ ಎಂಬುದಾಗಿ ಮನದಟ್ಟುಮಾಡಿಸಬೇಕು.

೧೧ನೆಯ ಶ.ದ ಪೂರ್ವಭಾಗದಲ್ಲಿ ಮಹಾಮೇಧಾವಿ ಶಾಸ್ತ್ರಕಾರ ನಾಗವರ್ಮನ ‘ಕಾವ್ಯಾವಲೋಕನ’ದ ವೈಶಿಷ್ಟ್ಯವಾದರೂ ಹೀಗೆಯೇ ಗಮನಿಸಬೇಕಾದ್ದು. ಕನ್ನಡ ಕಾವ್ಯಾಲಂಕಾರಗ್ರಂಥಗಳನ್ನು ಈ ದೃಷ್ಟಿಯಿಂದ ವಿಮರ್ಶಿಸಿ ಕೆ. ಕೃಷ್ಣಮೂರ್ತಿ ಒಂದು ಪುಸ್ತಕವನ್ನೇ ಬರೆದಿದ್ದಾರೆ.

ಅಲಂಕಾರಕ್ಷೇತ್ರದ ಮಾರ್ಗ-ದೇಸಿ, ವಸ್ತುಕ-ವರ್ಣಕ, ದಕ್ಷಿಣೋತ್ತರಮಾರ್ಗ, ಪದ-ಪಾಡು-ಮೆಲ್ವಾಡು, ಇಡುಕುಂಗಬ್ಬ-ಪಾಡುಗಬ್ಬ-ಬಾಝನೆಗಬ್ಬ, ಚತ್ತಾಣ-ಬೆದಂಡೆ, ಒಗಟು-ಬೆಡಗು-ಮುಂಡಿಗೆ ಇಂಥವುಗಳ ಜೊತೆಗೆ ಕವಿಶಕ್ತಿದ್ಯೋತಕಗಳಾದ ಇಂಪು, ಓಜೆ, ಕೊಂಕು, ಜಾಣ್, ದೇಸಿ, ನುಣ್ಪು, ಪದಿರ್ ಇಂತಹ ಲಾಕ್ಷಣಿಕ ಶಬ್ದಗಳು ಒಂದು ವಿಶಿಷ್ಟಪರಂಪರೆಯನ್ನು ಹಿಡಿದು ಬೆಳೆದ ಪರಿಕಲ್ಪನೆಗಳು. ಹೀಗೆಯೇ ವ್ಯಾಕರಣ ಛಂದಸ್ಸುಗಳಲ್ಲಿಯೂ ಅಚ್ಚಕನ್ನಡದ ಜಾತಿಶಬ್ದಗಳಿವೆ, ಪರಿಕಲ್ಪನೆಗಳಿವೆ.

. ಉತ್ಕೃಷ್ಟ ಸಾಹಿತ್ಯ

ಸುಮಾರು ಕ್ರಿ.ಶ. ೩-೪ನೆಯ ಶತಮಾನಗಳಿಂದ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆಯಾಗುತ್ತಿದ್ದು, ಇದರ ತಲಕಾವೇರಿ ಧರ್ಮಪ್ರಸಾರದ ಟೀಕೆ ವ್ಯಾಖ್ಯಾನಗಳು ಎನ್ನುವುದು ತಿಳಿದಿದೆ. ಕ್ರಿ.ಶ. ೯-೧೦ನೆಯ ಶತಮಾನಗಳಿಂದ ಪುರಾಣೇತಿಹಾಸಗಳು ವಸ್ತುವನ್ನು ತತ್ಕಾಲೀನ ವ್ಯಕ್ತಿ ವಿದ್ಯಮಾನಗಳಿಗೆ ಮತ್ತು ಆಗಾಮಿ ಪೀಳಿಗೆಗಳಿಗೆ ಅನ್ವಯ ಇಸುವಂತೆ ಹೊಸ ದೃಷ್ಟಿಯಿಂದ ಸವಿಮರ್ಶವಾಗಿ ನಿರೂಪಿಸಲು ಗುಣವರ್ಮ ಪಂಪ ಮೊದಲಾದವರು ಸಂಕಲ್ಪಿಸಿದ್ದು ಕನ್ನಡ ಭಾಷೆಗೆ ಒಂದು ಅನನ್ಯವಾದ ಪರಿಕ್ರಮವೆನ್ನಬಹುದು. ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಅಥವಾ ಆತನ ಸಮೀಪ  ಕಾಲದ ಕಥೆ ಕಾವ್ಯವಾಗಿ ಪರಿಣಮಿಸಿದಂತೆ ತೋರುವ ‘ಕರ್ಣಾಟೇಶ್ವರ ಕಥಾ’ ದೊರೆಯದಿರುವುದು ನಮ್ಮ ದೌರ್ಭಾಗ್ಯ.

ಪಂಪ ಕವಿಯ ಎರಡು ಲೋಕೋತ್ತರ ಕಾವ್ಯಗಳನ್ನು ತತ್ಕಾಲೀನ ಭಾರತೀಯ ಭಾಷಾ ಸಾಹಿತ್ಯಗಳಲ್ಲೆ ಅನನ್ಯವಾದ ಸಮಕಾಲೀನಪ್ರಜ್ಞೆಯನ್ನುಳ್ಳ, ಪೂರ್ವಪರಿಸರವನ್ನು ಪುನಾರಚಿಸುವ ನೆಲೆಯಲ್ಲಿಯೇ ವಿಶ್ವಸಾಮಾನ್ಯ ಜೀವನ ಮೌಲ್ಯಗಳನ್ನೂ ಆದರ್ಶಗಳನ್ನೂ ಸಹಜವಾಗಿ ಪರಿಣಾಮಕಾರಿಯಾಗಿ ಪುರಾಣಕಥಾಪಾತ್ರಗಳ ಮೂಲಕ ಎತ್ತಿ ಹಿಡಿಯುವ ಹೃದಯಂಗಮ ಮಹಾಕಾವ್ಯಗಳೆಂದು ಎಲ್ಲರೂ ಹೇಳುತ್ತಿದ್ದಾರೆ. ತೆಲುಗಿನ ಆದಿಕವಿ ನನ್ನಯನಿಗೆ (೧೧ನೆಯ ಶ.) ಆತನ ಮಿತ್ರ, ಬಹುಭಾಷಾಕೋವಿದ ನಾರಾಯಣಭಟ್ಟನು ಪಂಪಭಾರತವನ್ನು ಓದಿ ಹೇಳಿರುವನೆಂಬ ಅಭಿಪ್ರಾಯವಿದೆ. ತಮಿಳು ಸಾಹಿತ್ಯದ ವಿಷಯದಲ್ಲಿ ಹಾರ್ಟ್‌ ಅವರು ವಿಶೇಷವಾಗಿ ಹೇಳುವ ಒಂದು ಮಾತು ಎಂದರೆ, ಆ ಸಾಹಿತ್ಯದಲ್ಲಿ ನಿಮ್ನ ಉಪೇಕ್ಷಿತ ವರ್ಗದ ಜನರಿಗೆ ಸ್ಥಾನ ದೊರೆತಿದೆ ಎನ್ನುವುದು. ನೀಚಕುಲ-ಉಚ್ಚಕುಲ, ಬಡವ-ಬಲ್ಲಿದ ಈ ವರ್ಣ ವರ್ಗಗಳ, ಮೇಲುಕೀಳುಗಳ ಸಂಘರ್ಷ ಪಂಪ ರನ್ನ ಮೊದಲಾದವರ ಕಾವ್ಯಗಳಲ್ಲಿ ಸ್ಫುಟವಾಗಿ ಚಿತ್ರಿತವಾಗಿದೆ. ಈ ಪ್ರಾಚೀನ ಜೈನಕವಿಗಳು, ಅರ್ವಾಚೀನ ವಚನಕಾರರು ಪ್ರತಿಭಟನ ಸಾಹಿತ್ಯದ ಹರಿಕಾರರಾಗಿದ್ದಾರೆ, ನಿಮ್ನವರ್ಗದ ಜನರ ಮುಖವಾಣಿಯಾಗಿದ್ದಾರೆ. ವಿಸ್ತಾರವಾದ ಲೋಕಾನುಭವದ ವಿವಿಧ ವಿಲಾಸಗಳನ್ನು ನಯಸೇನನಂತೆ, ಅರ್ಥ ಹೀನ ಪೌರಾಣಿಕ ಶ್ರದ್ಧೆ ಮೂಢನಂಬಿಕೆಗಳ ಪರಿಹಾಸ ವಿಡಂಬನೆಗಳನ್ನು ಬ್ರಹ್ಮಶಿವನಂತೆ ಬೇರೆ ಯಾವ ಭಾಷೆಯ ಯಾವ ದೇಶೀಯ ಕವಿ ಮಾಡಿರುವನೋ ನನಗೆ ತಿಳಿಯದು. ಆತ್ಮಸಾಕ್ಷಿಯ ಸಾರಣೆಯಲ್ಲಿ ಜೀವನಾನುಭವಗಳನ್ನೂ ಆಧ್ಯಾತ್ಮದ ಅನುಭಾವಗಳನ್ನೂ ಶೋಧಿಸಿ ನಿರರ್ಗಳ ಸಹಜ ಸೂಕ್ತಿಗಳಿಗೆ ಮುಕ್ತಾಫಲದ ಮೆರುಗು ನೀಡಿದ ವಚನರಚನೆಗೆ ಲೋಕಸಾಹಿತ್ಯದಲ್ಲಿ ಏನು ಬೆಲೆಯುಂಟೆಂದು ತಿಳಿದವರಿಗೆ ಹೇಳಬೇಕಾಗಿಲ್ಲ. ‘ಸೂಕ್ತಿ ಸುಧಾರ್ಣವ’ದಂಥ ಸುಂದರ ಪದ್ಯಗುಚ್ಛವನ್ನೂ ನೂತನ ವರ್ಣನಾತ್ಮಕ ವ್ಯಾಕರಣದ ಬೆಲೆಯುಳ್ಳುದೆಂದು ಹೇಳುವ ‘ಶಬ್ದಮಣಿದರ್ಪಣ’ದಂಥ ಹಳಗನ್ನಡ ವ್ಯಾಕರಣವನ್ನೂ ಗೌರವಿಸದವರು ಯಾರು?

ಕನ್ನಡ ನುಡಿಯ ಹಿರಿಮೆಯನ್ನು ಸಾರುವ ಭಟ್ಟಾಕಳಂಕನ “ನ ಚೈಷಾ ಭಾಷಾ ಶಾಸ್ತ್ರಾನುಪಯೋಗಿನೀ ತತ್ತ್ವಾರ್ಥಮಹಾಶಾಸ್ತ್ರವ್ಯಾಖ್ಯಾನಸ್ಯ…” ಎಂಬ ಉಗ್ಗಡಣೆ ಪ್ರಸಿದ್ಧವಾದ್ದು. ಈ ವೈಯಾಕರಣನು ತನ್ನ ‘ಕರ್ಣಾಟಕ ಶಬ್ದಾನುಶಾಸನ’ವನ್ನು ಬರೆಯಲು ಹೊರಟಾಗ, “ಸಂಸ್ಕೃತ ಭಾಷೆಯೇ ಮಹಾಭಾಷೆ, ಇದೇ ಸರ್ವಶಾಸ್ತ್ರೋಪ ಯೋಗಿ, ಇದೇ ಮಹಾಜನಪರಿಗ್ರಾಹ್ಯವು, ಇದೇ ಅನುಶಾಸನಕ್ಕರ್ಹವು ಎಂದು ಆಗ್ರಹ ಪಡುವವರು ಪಂಡಿತಂಮನ್ಯರಾದ ಕೇವಲ ಸಂಸ್ಕೃತಜ್ಞರು ಎಂದೂ ಹಾಗಲ್ಲದೆ ಸಂಸ್ಕೃತಶಬ್ದಗಳು ಹೇಗೆ ಸಾಧು-ಅಸಾಧು ವಿವೇಚನಾಪೂರ್ವಕವಾಗಿ ಅನುಶಾಸನಕ್ಕೆ ಅರ್ಹಗಳೋ ಹಾಗೆಯೇ ಕನ್ನಡ ಭಾಷೆಯ ಶಬ್ದಗಳೂ ಆಗಿವೆ ಎಂಬುದಾಗಿ ತಿಳಿಯ ಬೇಕಾಗಿದೆ ಎಂದೂ” ತನ್ನ ಅಭಿಪ್ರಾಯವನ್ನು ಇಂಗಿತಗೊಳಿಸುತ್ತಾನೆ. ಈ ಮಾತು ಹಾಗಿರಲಿ, ಕನ್ನಡದಲ್ಲಿ ತತ್ತ್ವಾರ್ಥಮಹಾಶಾಸ್ತ್ರದ ‘ಚೂಡಾಮಣಿ’ ಎಂಬ ವಿಸ್ತೃತ ವಾದ ಕನ್ನಡವ್ಯಾಖ್ಯಾನವೂ ಶಬ್ದಾಗಮ ಯುಕ್ತ್ಯಾಗಮ ಪರಮಾಗಮ ವಿಷಯಕವಾದ ಗ್ರಂಥಗಳೂ ಕಾವ್ಯ ನಾಟಕ ಅಲಂಕಾರ ಕಲಾಶಾಸ್ತ್ರ ವಿಷಯಕವಾದ ಅನೇಕವಾದ ಗ್ರಂಥಗಳೂ ದೊರೆತು ಪ್ರಸಿದ್ಧವಾಗಿವೆಯೆಂದೂ ಕನ್ನಡ ಭಾಷೆ ಶಾಸ್ತ್ರಕ್ಕೆ ಉಪಯುಕ್ತವಾದುದೆಂದೂ ಆತನು ಹೇಳಿರುವುದನ್ನು ಗಮನಿಸಿದರೆ, ಅದರ ಸಮೃದ್ಧಿ ಎಂಥದು, ಸತ್ತ್ವ ಯಾವ ಬಗೆಯದು ಎನ್ನುವುದು ವಿದಿತವಾಗುತ್ತದೆ.

ಹೀಗೆ ಶಾಸ್ತ್ರಗ್ರಂಥವೊಂದನ್ನು ಬರೆಯುವುದಕ್ಕೆ ಬೇಕಾಗಿರುವ ಭಾಷಾಸಾಹಿತ್ಯ ಸಾಮಗ್ರಿ ಕನ್ನಡದಲ್ಲಿ ತುಂಬಿ ತುಳುಕುತ್ತಿದೆ. ಎಂದರೆ ಶ್ರೀವಿಜಯ ನಾಗವರ್ಮ ಕೇಶಿರಾಜ ಭಟ್ಟಾಕಳಂಕರು ಭದ್ರಪಡಿಸಿದ, ವ್ಯಾಖ್ಯಾನಿಸಿದ ಕನ್ನಡ ಕವಿಮಾರ್ಗದಿಂದ ಕನ್ನಡ ಭಾಷೆ ನಿಸ್ಸಂದೇಹವಾಗಿ ಅಭಿಜಾತಸಾಹಿತ್ಯದ ಎಲ್ಲ ಗುಣಲಕ್ಷಣಗಳನ್ನೂ ಪಡೆದು ಕೊಂಡಿದೆ. ಕನ್ನಡಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ್ದು ಕನ್ನಡ ಮಕ್ಕಳ ಕರ್ತವ್ಯ, ರಾಜಕೀಯ ಪ್ರಭುಗಳ ಜವಾಬ್ದಾರಿ.

ಎಂದೂ ಕನ್ನಡದ ಜನ ಸಂಕೋಚಸ್ವಭಾವದವರು, ಅಲ್ಪತೃಪ್ತರು, ಅಲಸಿಗಳು. ಹೀಗಾಗಿ ಉದ್ದಕ್ಕೆ ಅನ್ಯಾಯದ ಆಘಾತಗಳನ್ನು ಅವರು ಸಹಿಸುತ್ತಲೇ ಇದ್ದಾರೆ.

ತಮಿಳುಭಾಷೆಯ ಜನ ವಿಶ್ವದ ನಾನಾ ಮೂಲೆಗಳಲ್ಲಿ ನೆಲಸಿದ್ದಾರೆ; ತಮಿಳುಭಾಷೆ ಸಾಹಿತ್ಯಗಳಿಗೆ ಜಾಗತಿಕವಾದ ನೆಲೆಗಳಲ್ಲಿ ಹೆಚ್ಚು ಪ್ರಚಾರ ಸಿಕ್ಕುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ; ಕನ್ನಡಿಗರಿಗೆ ಆ ಪ್ರಾಪ್ತಿ ಇಲ್ಲ. ತಮಿಳು ಭಾಷೆ ಸಾಹಿತ್ಯಗಳ ವಿದ್ವಾಂಸರು ಅವುಗಳ ಹಿರಿಮೆ ಗರಿಮೆಗಳನ್ನು ವಿಶೇಷವಾಗಿ ಇಂಗ್ಲಿಷ್ ಭಾಷಾ ಮಾಧ್ಯಮದ ಮೂಲಕ ಸೀಮಾತೀತವಾಗಿ ಹಬ್ಬಿ ಹರಡಿಸಿದ್ದಾರೆ; ಕನ್ನಡಿಗರು ಹಾಗೆ ಮಾಡಿಲ್ಲ. ತಮಿಳು ಭಾಷೆ ಸಾಹಿತ್ಯಗಳ ವಿದ್ವಾಂಸರು ರಾಷ್ಟ್ರೀಯ ಅಂತರರಾಷ್ಟ್ರೀಯ ನೆಲೆಗಳಲ್ಲಿ ಹೇರಳವಾಗಿ ಪುಸ್ತಕಗಳನ್ನೂ ಲೇಖನಗಳನ್ನೂ ಬರೆದು ಪ್ರಚುರಪಡಿಸಿದ್ದಾರೆ, ವಿಚಾರಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ವೇದಿಕೆಗಳಲ್ಲಿ ಉಪನ್ಯಾಸಮಾಡಿದ್ದಾರೆ. ಈ ಎಲ್ಲ ಪ್ರಯತ್ನಗಳಲ್ಲೂ ತಮಿಳುನಾಡು ಸರ್ಕಾರಗಳು ಅವರನ್ನು ಬೆಂಬಲಿಸುತ್ತ ಪ್ರೋತ್ಸಾಹಿಸುತ್ತ ಬಂದಿವೆ; ಕನ್ನಡ ನಾಡಿನಲ್ಲಿ ಅಂತಹ ಪ್ರಯತ್ನಗಳು ವಿದ್ವಾಂಸರ ಕಡೆಯಿಂದ ಹೇಳಿಕೊಳ್ಳುವಂತೆ ನಡೆದಿಲ್ಲ. ಕರ್ನಾಟಕದ ಸರ್ಕಾರಗಳು ಅಂತಹ ಉತ್ತೇಜನ ನೀಡಿಲ್ಲ.

ತಮಿಳರಿಗೆ ಬಾಯಿ ಉಂಟು, ಕನ್ನಡಿಗರಿಗೆ ಬಾಯಿಲ್ಲ. ಕರ್ನಾಟಕ ಸರ್ಕಾರದಲ್ಲಿ, ಕಛೇರಿ ಕಾರ್ಖಾನೆಗಳಲ್ಲಿ ತಮಿಳರು ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ; ಪ್ರಭಾವದಲ್ಲಿ ಸಮರ್ಥರಾಗಿದ್ದಾರೆ.

ಪ್ರಾಂತೀಯ ಮತ್ತು ರಾಷ್ಟ್ರೀಯ ನೆಲೆಗಳಲ್ಲಿ ರಾಜಕೀಯವಾಗಿ ತಮಿಳರು ಪ್ರಬಲರಾಗಿದ್ದಾರೆ; ತಮ್ಮ ಮಾತು ನಡೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಖ್ಯೆಯ ದೃಷ್ಟಿಯಿಂದ ಸರ್ಕಾರದ ಹುದ್ದೆಗಳಲ್ಲಿ, ಕಚೇರಿ ಕಾರ್ಖಾನೆಗಳಲ್ಲಿ ಕನ್ನಡಿಗರು ಕಡಮೆ, ರಾಜಕೀಯವಾಗಿ ಅವರ ಮಾತು ನಡೆಯುವುದೂ ಕಡಮೆಯೆ.

ಭರತಖಂಡದ ಭಾಷೆಗಳೆಲ್ಲವೂ ಸರ್ವಭಾಷಾಸರಸ್ವತಿಯ ದಿವ್ಯವಾಣಿಗಳೆಂಬ ಆಶಯವನ್ನು ನಾವು ಚಚ್ಚರದಿಂದ ಕಾದುಕೊಂಡು ಬರಬೇಕಾಗಿದೆ. ಈ ದೇಶದಲ್ಲಿ ಒಂದಕ್ಕೆ ಅಭಿಜಾತಭಾಷೆಯ ಪಟ್ಟ ಕಟ್ಟಿದರೆ, ಶತಶತಮಾನಗಳಿಂದ ಸಂಪುಷ್ಟವಾಗಿ, ಸಮೃದ್ಧವಾಗಿ ಬೆಳೆದುಕೊಂಡು ಬರುತ್ತಿರುವ ಇತರ ಭಾರತೀಯ ಭಾಷೆಗಳಲ್ಲಿ ಮೇಲು ಕೀಳುಗಳ ಭಾವನೆಗೆ ಅವಕಾಶವಾಗಿ ಅಸಹನೆ ಪೈಪೋಟಿಗಳು ಹೆಚ್ಚುತ್ತವೆ. ಅಲ್ಲದೆ ನಮ್ಮವೇ ಕೂಸುಗಳಲ್ಲಿ ಭೇದಭಾವ ಮಾಡಿದಂತೆ ಆಗುತ್ತದೆ. ಸಂವಿಧಾನದ ಮನ್ನಣೆ ಪಡೆದುಕೊಂಡು ಬೆಳೆದುಬರುತ್ತಿರುವ ಯಾವುದೇ ಭಾಷೆಗೆ ಸಮಾನವಾದ ಸ್ಥಾನಮಾನಗಳು ದೊರೆಯುವಂತೆ ನೋಡಿಕೊಳ್ಳಬೇಕಾದುದು ನಮ್ಮ ಸರ್ಕಾರದ, ಜನತೆಯ ಕರ್ತವ್ಯವಾಗಿದೆ.

ಕನ್ನಡ ಭಾಷೆಗೆ ‘ಶಾಸ್ತ್ರೀಯಭಾಷೆ’ಯ ಗೌರವ ಸಲ್ಲುವ ವಿಷಯದಲ್ಲಿ ಇತರ ದೇಶ ಭಾಷೆಗಳಿಗಿಂತ (ಸಂಸ್ಕೃತ ಪ್ರಾಕೃತ ಹೊರತುಪಡಿಸಿ) ಹೆಚ್ಚಿನ ಅರ್ಹತೆಗಳಿವೆ ಎಂದು ತಿಳಿಯುವುದಕ್ಕೆ ಈ ಕೆಳಗಿನ ಕೆಲವರು ವಿದ್ವಾಂಸರ ಅಭಿಪ್ರಾಯಗಳು ಸಹಕಾರಿಯಾಗಬಹುದಾಗಿವೆ.

೧.ಜೆ.ಎಫ್.ಫ್ಲೀಟ್ (೧೮೪೭-೧೯೧೭) ಅವರುಎಫ್‌. ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಷ್ ನಿಘಂಟುವನ್ನು ವಿಮರ್ಶಿಸುತ್ತ (Indian Antiqary, Vol. 24,1895, pp.83-84) ಹೇಳಿರುವುದು:

(i)The Kanarese language, -the original true vernacular, and still mostly the actual vernacular, of the territory in which lie the districts of Belgaum, Bijapur, and Dharwar, and parts of Sholapur and North Kanara, of the Bombay presidency, Mysore, and the southern portions of the Nizam’s dominions, – has hardly received from European scholars the recognition and attention which it deserves. It is the most mellifluous of all the Indian vernaculars, and the richest in capability and force of expression. It probably surpasses all the others in bulk and value of original composition. And it has an antiquity to which, apparently, none of them can make any pretensions in forms approximating to those which they have now..

(ಬಹು ಪ್ರಾಚೀನ ಕಾಲದಿಂದಲೂ ಇರುವ, ವಾಸ್ತವವಾದ, ಬೆಳಗಾವಿ ಬಿಜಾಪುರ ಧಾರವಾಡ ಜಿಲ್ಲೆಗಳಲ್ಲಿಯೂ ಸೊಲ್ಲಾಪುರದ ಕೆಲವು ಭಾಗಗಳಲ್ಲಿಯೂ ಬೊಂಬಾಯಿ ಆದಿಪತ್ಯದ (ಈಗ ಕರ್ನಾಟಕ) ಉತ್ತರ ಕನ್ನಡದಲ್ಲಿಯೂ ದಕ್ಷಿಣ ಮರಾಠಾ ಪ್ರಾಂತವೆಂದು ವ್ಯವಹರಿಸುವ ಇತರ ದೇಶೀಯ ಸಂಸ್ಥಾನಗಳಲ್ಲಿಯೂ ಮದರಾಸು ಆಧಿಪತ್ಯದ (ಈಗ ಕರ್ನಾಟಕ) ಬಳ್ಳಾರಿ ಜಿಲ್ಲೆಯಲ್ಲಿಯೂ, ಮೈಸೂರಿನಲ್ಲಿ, ನೈಜಾಂ ಪಭ್ರುತ್ವದ ದಕ್ಷಿಣಭಾಗಗಳಲ್ಲಿ (ಈಗ ಕರ್ನಾಟಕ) ಕೂಡ ಈಗಲೂ ವಿಶೇಷವಾಗಿ ಬಳಕೆಯಲ್ಲಿರುವ ದೇಶಭಾಷೆಯಾದ ಕನ್ನಡ ಭಾಷೆಗೆ, ತನಗೆ ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯನ್ನು, ಲಕ್ಷ್ಯವನ್ನು ಪಡೆಯುವುದು ಇನ್ನೂ ಸಾಧ್ಯವಾಗಿಲ್ಲ.

ಇದು ಭಾರತೀಯವಾದ ಭಾಷೆಗಳಲ್ಲೆಲ್ಲ ಜೇನಿನಂತೆ ಸವಿಯಾದ ಭಾಷೆ; ಅಭಿವ್ಯಕ್ತಿಯ ಸಾಮರ್ಥ್ಯದಲ್ಲಿ ಹಾಗೂ ಪರಿಣಾಮಕಾರಿತ್ವದಲ್ಲಿ ಅತ್ಯಂತ ಶ್ರೀಮಂತವಾದ್ದು. ಮೌಲಿಕ ಸಾಹಿತ್ಯರಚನೆಯ ಗಾತ್ರ (ಸಮೃದ್ಧಿ) ಮತ್ತು ಗುಣ (ಮೌಲ್ಯ) ಇವುಗಳ ದೃಷ್ಟಿಯಿಂದ ಬಹುಶಃ ಉಳಿದೆಲ್ಲ ಭಾಷೆಗಳನ್ನೂ ಮೀರಿ ನಿಲ್ಲುವಂಥದು. ಸದ್ಯ, ಅವುಗಳಲ್ಲಿ ಕಂಡುಬರುವ ರೂಪಗಳ ವಿಷಯದಲ್ಲಿ ತೋರಬಹುದಾದ ಸಾದೃಶ್ಯ ನೋಡಿದರೆ, ಅವು ತಮ್ಮ ಹೆಚ್ಚುಗಾರಿಕೆಯನ್ನು ಹೇಳಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಇದಕ್ಕೆ ಒಂದು ಪ್ರಾಚೀನತೆಯಿದೆ.)

(ii) ಫ್ಲೀಟ್ ಅವರೇ ಆರ್. ನರಸಿಂಹಾಚಾರ್ಯರ ‘ಕರ್ಣಾಟಕ ಕವಿಚರಿತೆ’ಯನ್ನು ವಿಮರ್ಶಿಸುತ್ತ ಹೇಳಿರುವುದು:

Kannada is in fact, the earliest vernacular of South India, apart from Prakrit, that is met with in the inscriptional records.

(ಶಾಸನಗಳ ದಾಖಲೆಗಳಿಂದ ತಿಳಿದುಬರುವಂತೆ, ಪ್ರಾಕೃತವನ್ನು ಹೊರತುಪಡಿಸಿದರೆ, ದಕ್ಷಿಣಭಾರತದ ಪ್ರಾಚೀನತಮ ದೇಶಭಾಷೆಯೆಂದರೆ ದಿಟವಾಗಿ ಕನ್ನಡವೇ.)

೨. ಬಿ. ಲೂಯಿ ರೈಸ್(೧೮೩೭-೧೯೨೭) ಅವರು (ಉದ್ಧೃತಿ: ‘೧೯ನೇ ಶತಮಾನದಲ್ಲಿ ಪಾಶ್ಚಾತ್ಯವಿದ್ವಾಂಸರ ಕನ್ನಡ ಸೇವೆ’, ೧೯೯೨, ಪು. ೪೭೯-೮೦) ಹೇಳಿರುವುದು:

Among the socalled Dravidian languages of Southern India none can boast of higher antiquity in the cultivation of its literature than the Kannad language. And yet while the sister languages- Tamil and Telugu-have their votraries, Kannada has received attention from but few, if any, among oriental scholars.

(ದಕ್ಷಿಣ ಭಾರತದಲ್ಲಿ ದ್ರಾವಿಡಭಾಷೆಗಳೆಂಬುದಾಗಿ ಕರೆಯಲ್ಪಡುವ ಭಾಷೆಗಳಲ್ಲಿ ನಡೆದಿರುವ ಸಾಹಿತ್ಯಕೃಷಿಯ ವಿಷಯದಲ್ಲಿ ಕನ್ನಡಕ್ಕಿಂತ ಹೆಚ್ಚು ಪ್ರಾಚೀನತೆಯನ್ನು ಕೊಚ್ಚಿಕೊಳ್ಳುವ ಭಾಷೆ ಬೇರೆ ಯಾವುದೂ ಇಲ್ಲ. ಆದರೆ ತಮಿಳು ತೆಲುಗು ಈ ಸೋದರ ಭಾಷೆಗಳಲ್ಲಿ ಅವಕ್ಕೆ ಶ್ರದ್ಧಾನ್ವಿತರಾದ ಉಪಾಸಕರು ಇರುವ ಹಾಗೆ ಕನ್ನಡ ಭಾಷೆಯ ಬಗೆಗೆ ಲಕ್ಷ್ಯಕೊಡುತ್ತಿರುವ ಪ್ರಾಚ್ಯವಿದ್ಯಾಪಂಡಿತರು ಹೆಚ್ಚಾಗಿಲ್ಲ.)

ಈ ಉದ್ಧೃತಿಗಳು ಅಭಿಜಾತಭಾಷೆಯಾಗಿ ಕನ್ನಡ ಹಳೆಮೆಯನ್ನು ಸ್ಫುಟವಾಗಿ ಸಾರುತ್ತಿರುವುದು ಉದಿತವೇ ಇದೆ. ಹರ್ಮನ್ ಮೋಗ್ಲಿಂಗ್ ಅವರು (೧೮೧೧-೧೮೮೧) ಬಾರ್ತ್‌ಅವರಿಗೆ ಜನವರಿಗೆ ೨೨, ೧೮೪೯ರಲ್ಲಿ ಬರೆದ ಒಂದು ಪತ್ರದಲ್ಲಿ “ಕನ್ನಡಿಗರ ಮನಃಪ್ರವೃತ್ತಿಯನ್ನೂ ಅವರ ಆಡುಭಾಷೆಯನ್ನೂ ಅರ್ಥಮಾಡಿಕೊಳ್ಳಬೇಕಾದರೆ ಅವರ ಭಾಷೆಯ ಹಳೆಯ ದಾಖಲೆಗಳಲ್ಲಿ ಅವನ್ನು ಹುಡುಕಿ ತೆಗೆಯಬೇಕಾಗುತ್ತದೆ” ಯೆಂದು ತಿಳಿಸಿರುವುದು (ಡಾ. ಹರ್ಮನ್ ಗುಂಡರ್ಟ್‌: ‘ಹರ್ಮನ್ ಮೋಗ್ಲಿಂಗ್’, ಪು. ೨೪೫) ಗಮನಾರ್ಹ. ಹಾಗೆಯೇ ಎಫ್. ಕಿಟ್ಟೆಲ್ ಅವರು (೧೯೩೨-೧೯೦೩) “ಕನ್ನಡ ಸಾಹಿತ್ಯ ಹೆಚ್ಚುಹೆಚ್ಚು ಪ್ರಕಟವಾದಹಾಗೆಲ್ಲ ಅದು ದೇಶದ ಯಾವುದೇ ಸಾಹಿತ್ಯದೊಂದಿಗೆ ಎಲ್ಲ ರೀತಿಗಳಿಂದಲೂ ಸಮದಂಡಿಯಾಗಿ ನಿಲ್ಲುವುದು” ಎಂಬುದಾಗಿ ಹೇಳಿರುವುದನ್ನೂ ಗಮನಿಸಬೇಕು.

ಮೋಗ್ಲಿಂಗ್ ಮತ್ತು ಕಿಟ್ಟೆಲರ ಮಾತುಗಳ ಮಹತ್ತ್ವ ಮನವರಿಕೆಯಾಗಬೇಕಾದರೆ ಇನ್ನೂ ನಿದ್ರಾವಸ್ಥೆಯಲ್ಲಿರುವ ಹಸ್ತಪ್ರತಿಭಂಡಾರದ ನೂರಾರು ಅಪ್ರಕಟಿತ ಅಜ್ಞಾತ ಸಾಹಿತ್ಯಖೃತಿಗಳು ಜ್ಞಾತವಾದಾಗಲೇ, ಪ್ರಕಟವಾದಾಗಲೇ ಎಂದು ಹೇಳಬೇಕಾಗಿದೆ. ಈ ಸಾಹಿತ್ಯ ಕೃತಿಗಳ ಪ್ರಕಟನೆಯೆಂದರೆ, ಕನ್ನಡ ಅಭಿಜಾತಸಾಹಿತ್ಯದ ಕಡೆಗೆ ಲಕ್ಷ್ಯ, ಅನುಸಂಧಾನ ಮತ್ತು ಉಪಾಸನೆಗಳೆಂದೇ ಹೇಳಬಹುದಾಗಿದೆ. ಭಾಷೆಯೂ ಭಾಷಾ ಶೈಲಿಯೂ ಅಪರಿಚಿತವೆಂದೋ ವಿಲಕ್ಷಣವೆಂದೋ ಮೊದಲು ತೋರಬಹುದಾದರೂ ಅಭ್ಯಾಸವಾದಂತೆಲ್ಲ ಅಭಿಜಾತಸಾಹಿತ್ಯ ನಿಧಿಯ ಬೆಲೆಯೂ ಸಾಹಿತ್ಯರಸದ ಸವಿಯೂ ಸುಸಂಸ್ಕೃತಚೇತನವನ್ನು ಆವರಿಸಲು ಶಕ್ತವಾಗುತ್ತವೆ.

ಕನ್ನಡಕ್ಕೆ ‘ಶಾಸ್ತ್ರೀಯಭಾಷೆ’ಯ ಸ್ಥಾನಮಾನಗಳು ದೊರೆತುವು ಎನ್ನುವುದು ಆ ಸಂಬಂಧವಾಗಿ ನಡೆದ ಹೋರಾಟಗಳ ದೃಷ್ಟಿಯಿಂದ ನೆಮ್ಮದಿಯ ಸಂಗತಿ. ನಮ್ಮ ಅಗತ್ಯ. ಅವಕಾಶ ಆದ್ಯತೆಗಳಿಗೆ ಅನುಸಾರವಾಗಿ ನಾವು ಸ್ವತಂತ್ರವಾಗಿ ವಿಚಾರಮಾಡಿ ನಮ್ಮ ಯೋಜನೆಗಳ ಸ್ವರೂಪವನ್ನು ಗೊತ್ತುಮಾಡಿಕೊಳ್ಳಬಹುದು. ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು. ಈ ಸಂಬಂಧದಲ್ಲಿ ಕರ್ನಾಟಕದಲ್ಲಿ ಭಾಷೆ ಸಾಹಿತ್ಯಗಳು, ಸಂಸ್ಕೃತಿ ಇತಿಹಾಸಗಳು ಇವುಗಳ ಸಂವರ್ಧನೆಗೆ ಕೆಲಸ ಮಾಡುತ್ತಿರುವ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ಸರಕಾರಿ, ಅರೆಸರಕಾರಿ ಮತ್ತು ಖಾಸಗಿ ಸಂಘಸಂಸ್ಥೆಗಳು ಅವವುಗಳ ಶಕ್ತಿ ಅರ್ಹತೆಗಳ ಮೇಲೆ ಅನುದಾನ ಪಡೆದು ಕನ್ನಡದ ಮುನ್ನಡೆಗೆ ಶ್ರಮಿಸಬಹುದಾಗಿದೆ. ಹೀಗೆ ಶ್ರಮಿಸುವಾಗ ಕೆಲಸಗಳು ಕಳಪೆಯಾಗದಂತೆ, ಪುನರಾವೃತ್ತಿ ಮಾಡುವ ಕೆಲಸಗಳಿಂದ ಅನುದಾನದ ಅಪವ್ಯಯವಾದಂತೆ ನೋಡಿಕೊಳ್ಳಬೇಕಾದ್ದು ಸಂಬಂಧ ಪಟ್ಟವರ ಜವಾಬ್ದಾರಿಯಾಗಿದೆ.

‘ಶಾಸ್ತ್ರೀಯ ಭಾಷೆ’ಯ ಸಂಬಂಧಲ್ಲಿ ಈಗಾಗಲೇ ಆಗಿರುವ ಕೆಲಸಕ್ಕಿಂತ ಆಗಬೇಕಾಗಿರುವ ಕೆಲಸವೇ ಹೆಚ್ಚು. ಕನಿಷ್ಠಪಕ್ಷ ನೂರು-ನೂರೈವತ್ತು ವರ್ಷಗಳಿಗೆ ಸಾಕಾಗುಷ್ಟು ಕೆಲಸ ಯೋಜಕರಿಗಾಗಿ, ಸಂಶೋಧಕವಿದ್ವಾಂಸರಿಗಾಗಿ ಕಾಯುತ್ತಿದೆ. ಹೊಸದೃಷ್ಟಿ ಧೋರಣೆಗಳಿಗೆ ಅನುಗುಣವಾಗಿ ಈಗ್ಗೆ ನೂರೈವತ್ತು ವರ್ಷಗಳಿಂದಲೂ (೧೮೫೦-೨೦೦೦) ನಡೆದಿರುವ ಕೆಲಸಗಳು ನಡೆಯಬೇಕಾಗಿರುವ ಮುಂದಿನ ಕೆಲಸಗಳೊಂದಿಗೆ ಹೋಲಿಸಿದಾಗ ಶೇಕಡಾ ೧೦-೨೦ರಷ್ಟು ಮಾತ್ರ ಆಗಿವೆ ಎನ್ನುವುದು ನನ್ನ ಅಂದಾಜು. ಹಾಗಾದರೆ, ಮುಂದೇನು?

ಶಾಸ್ತ್ರೀಯ ಭಾಷೆ-ಸಾಹಿತ್ಯ ಎಂಬ ಮಾತುಗಳು ನಮ್ಮ ಹಳೆಯ ಕನ್ನಡ ಭಾಷೆ ಸಾಹಿತ್ಯಗಳ ಸತ್ತ್ವ ಸ್ವರೂಪಗಳನ್ನು ಸಮರ್ಪಕವಾಗಿ ಇಂಗಿತಗೊಳಿಸುವುದಿಲ್ಲ ಎಂದು ಭಾವಿಸಿ, ಈಚೆಗೆ ಬೇರೆ ಬೇರೆ ಸಲಹೆಗಳು ಸೂಚಿತವಾಗುತ್ತಿವೆ. ಇವುಗಳಲ್ಲಿ ಕೆಲವು ಹಳೆಯ ಅಂಗೀಕೃತ ಗ್ರಹಿಕೆಗಳನ್ನು ಪುನರುಜ್ಜೀವಿಸುವಂಥವು, ಇನ್ನು ಕೆಲವು ಹೊಸದಾಗಿ ಕಲ್ಪಿಸಬಹುದಾದಂಥವು. ಈ ಎರಡರಲ್ಲಿಯೂ ಅವ್ಯಾಪ್ತಿ ಅತಿವ್ಯಾಪ್ತಿ ಅನ್ಯಥಾ ವ್ಯಾಪ್ತಿಗಳಿಗೆ ಅವಕಾಶವುಂಟೆಂದು ಯಾರಾದರೂ ವಾದಿಸಬಹುದು. ಉದಾಹರಣೆಗೆ, ಪ್ರಚಾರದಲ್ಲಿರುವ ‘ಶಾಸ್ತ್ರೀಯ ಭಾಷೆ’ ಎಂಬ ಮಾತನ್ನೇ ತೆಗೆದುಕೊಳ್ಳೋಣ. ನೃತ್ಯ ಸಂಗೀತಗಳು ಅವುಗಳ ಶಾಸ್ತ್ರಗ್ರಂಥಗಳಲ್ಲಿ ಉಕ್ತವಾದ ಲಕ್ಷಣಗಳಿಗೆ ಅನುಸಾರವಾಗಿದ್ದಾಗ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ ಎಂದಾಗುತ್ತವೆ. ಆದರೆ ಶಾಸ್ತ್ರೀಯ ಭಾಷೆಯ, ಸಾಹಿತ್ಯದ ವಿಷಯದಲ್ಲಿ ಅದು ಹಾಗಲ್ಲ. ಎಇಲ್ಲಿ ವ್ಯಾಕರಣಾದಿ ಶಾಸ್ತ್ರಗಳ ಲಕ್ಷಣಾಂಶಗಳ ವಿವಕ್ಷೆಗಿಂತ ಬೇರೆ ಕಾವ್ಯಗುಣಗಳು, ಸತ್ತ್ವ ಸ್ವರೂಪಗಳು ಮುಖ್ಯವಾದೆವು. ಇನ್ನು ‘ಪರಂಪರೆ’ ಮೂಲವಾಗಿ ಕಲ್ಪಿಸಲಾಗುವ ಪಾರಂಪರಿಕ ಭಾಷೆ. ಸಾಹಿತ್ಯ ಎಂಬ ಮಾತುಗಳು. ಪರಂಪರೆ ಎನ್ನುವುದು tradition/heritage ಎಂಬ ಅರ್ಥವುಳ್ಳುದು, classical ಎಂಬ ಅರ್ಥವುಳ್ಳುದಲ್ಲ ಎಂಬುದಾಗಿ ಯಾರಾದರೂ ವಾದಿಸಬಹುದು. ಹಳಗನ್ನಡ ಭಾಷೆಯಲ್ಲಿರುವ ಪ್ರಾಚೀನ ಕನ್ನಡ ಸಾಹಿತ್ಯಕೃತಿಗಳ ಸಮುಚ್ಚಯವನ್ನು ಮಾರ್ಗಸಾಹಿತ್ಯ, ಅಭಿಜಾತಸಾಹಿತ್ಯ ಎಂಬುದಾಗಿ ಕರೆಯುವ ರೂಢಿ ಎಂದಿನಿಂದಲೂ ಇದೆ. ಇವೆರಡೂ ಸಮಾನ ಆಶಯಗಳುಳ್ಳವು. ಮುಖ್ಯವಾಗಿ ಶ್ರೇಷ್ಠತೆ ಘನತೆ ಸೌಂದರ್ಯ ಪ್ರೌಢಿಮೆ ಈ ಮೊದಲಾದ ಲಕ್ಷಣಗಳು ಯಾವ ಹಳೆಯ ಸಾಹಿತ್ಯದಲ್ಲಿ ಸೃಷ್ಟಿಮೂಲದಲ್ಲಿಯೇ ಕಂಡುಬರುತ್ತವೆಯೋ, ಸಂಪದ್ಯುಕ್ತವಾಗಿ ವ್ಯಾಪಿಸಿವೆಯೋ ಆ ಸಾಹಿತ್ಯಮಾರ್ಗಸಾಹಿತ್ಯ, ಅಭಿಜಾತಸಾಹಿತ್ಯ ಎನ್ನಿಸುತ್ತದೆ ಎಂದು ಹೇಳಬಹುದಾಗಿದೆ. ಆದರೆ  ಈಗ ಈ ಎರಡೂ ಪದಗಳು ಅಂಥ ಪ್ರಚಾರದಲ್ಲಿಲ್ಲ; ಅಲ್ಲದೆ, ಅವು ಪಂಡಿತಪ್ರಯೋಗದಂತೆ ಕಾಣುತ್ತವೆ. ಕನ್ನಡದ ಶಾಸನಸಾಹಿತ್ಯವನ್ನೂ ಒಳಕೊಂಡ ಹಾಗೆ, ಈಗ ವರ್ತಮಾನಸನ್ನಿವೇಶದಲ್ಲಿ, ಆಧುನಿಕ ಪೂರ್ವಕಾಳದ ಕನ್ನಡ ಸಾಹಿತ್ಯವನ್ನು ‘ಪ್ರಾಚೀನಸಾಹಿತ್ಯ’ ಎಂಬುದಾಗಿ ಎಲ್ಲರಿಗೂ ತಿಳಿಯುವ ಹಾಗೆ ಕರೆದು, ನಮ್ಮ ಯೋಜನೆಗಳನ್ನು ‘ಪ್ರಾಚೀನ ಕನ್ನಡಭಾಷೆ ಸಾಹಿತ್ಯ ಸಂಸ್ಕೃತಿ ಅಧ್ಯಯನಗಳು’ ಎಂಬುದಾಗಿ ನಿರ್ದೇಶಿಸಬಹುದಲ್ಲವೇ? ನಮ್ಮ ಪ್ರಾಚೀನ ಕನ್ನಡಭಾಷೆ, ಪ್ರಾಚೀನ ಕನ್ನಡ ಸಾಹಿತ್ಯ ಇವೇ Classical Kannada language/literature ಎಂಬ ಆಶಯವನ್ನು ತರಬಲ್ಲವಲ್ಲವೇ?

ಇದು ನಮಗೆ ಒಪ್ಪಿಗೆಯಾದರೆ, ನಮ್ಮ ಅಧ್ಯಯನ ಸಂಶೋಧನಗಳ ವ್ಯಾಪ್ತಿ ಸುಲಭವಾಗಿ ಕ್ರಿ.ಶ.ದ ಆರಂಭದಿಂದ (ಅಥವಾ ಕ್ರಿ.ಶ. ೪೫೦ರ ಹಲ್ಮಿಡಿಶಾಸನದ ಕಾಲದಿಂದ) ಕ್ರಿ.ಶ. ೧೭೫೦ರವರೆಗೆ, ಎಂದರೆ ಎಲ್ಲಿಯವರೆಗೆ ಹಳಗನ್ನಡದ ಚಂಪೂಕಾವ್ಯಗಳೂ ನಡುಗನ್ನಡದ ಷಟ್ಪದಿ ಮತ್ತು ಸಾಂಗತ್ಯ ಕಾವ್ಯಗಳೂ ಅವಿರತಧಾರೆಯಾಗಿ ರಚಿತವಾಗತೊಡಗಿದುವೋ ಅಲ್ಲಿಯವರೆಗೆ, ವಿಸ್ತಾರಗೊಳ್ಳಲು ಅವಕಾಶವಾಗುತ್ತದೆ. ವಾಸ್ತವವಾಗಿ, ಕರ್ಣಾಟಕ ಕವಿಚರಿತೆಕಾರರು ಮೊದಲುಗೊಂಡು ಈಚಿನ ಸಾಹಿತ್ಯ ಚರಿತ್ರಕಾರರೆಲ್ಲ ಪ್ರಾಚೀನ ಕನ್ನಡ ಸಾಹಿತ್ಯದ ಗಡಿರೇಖೆಯನ್ನು ಸು. ೧೭೫೦ ಎಂಬುದಾಗಿ ಗುರುತಿಸುವ ಸಾಮಾನ್ಯವಾದ ಪರಿಪಾಠಿಯಿದೆ. ಕನ್ನಡ ಭಾಷೆ ಸಾಹಿತ್ಯಗಳ ವ್ಯವಸಾಯದಲ್ಲಿಯೂ ಅಧ್ಯಯನಗಳಲ್ಲಿಯೂ ಇನ್ನೂ ಐರೋಪ್ಯಪ್ರಭಾವ, ವಿಶೇಷವಾಗಿ ಇಂಗ್ಲೀಷ್ ಭಾಷೆ ಸಾಹಿತ್ಯಗಳ ಪ್ರಭಾವ, ಕಾಣದಿರುವ ಅವಧಿ ಅದು.

ಹೀಗೆ ಅಧ್ಯಯನ ಶೋಧನೆಗಳಿಗೆ ಕಾಲಘಟ್ಟವನ್ನು ಗುರುತಿಸಿಕೊಳ್ಳುವುದರಲ್ಲಿ ವಿಶೇಷವಾದ ಅನುಕೂಲಗಳಿವೆ, ಪ್ರಯೋಜನಗಳೂ ಇವೆ. ಇದರಿಂದ ನಡುಗನ್ನಡ ಕಾಲದ ವಚನಕಾರರೂ ಹರಿದಾಸರೂ ಕುಮಾರವ್ಯಾಸ ಮೊದಲಾದ ಭಾಗವತಕವಿಗಳೂ ರತ್ನಾಕರವರ್ಣಿ ನಂಜುಂಡಕವಿ ಮಂಗರಸರಂಥ ಪ್ರಸಿದ್ಧ ಸಾಂಗತ್ಯಕಾರರೂ ಸೇರ್ಪಡೆಯಾಗುತ್ತಾರೆ. ಪ್ರಾಚೀನ ಕನ್ನಡಸಾಹಿತ್ಯದ ಮಹಾಕವಿಗಳ ಪಂಕ್ತಿಯಲ್ಲಿ ಕುಮಾರವ್ಯಾಸರೊಂದಿಗೆ ರತ್ನಾಕರವರ್ಣಿ ನಂಜುಂಡಕವಿಗಳನ್ನೂ ಸೇರಿಸುವ ರೂಢಿಯಿದೆಯೆಂಬುದನ್ನಿಲ್ಲಿ ವಿಶೇಷವಾಗಿ ನೆನೆಯಬೇಕು. ಈ ಕವಿಗಳ ಸಂಬಂಧವಾಗಿ ಕೆಲಸಗಳೂ ಹೆಚ್ಚಾಗಿ ನಡೆದಿಲ್ಲ.

ಪ್ರಾಚೀನ ಕನ್ನಡ ಸಾಹಿತ್ಯವೂ ಚಂಪೂಕಾವ್ಯಗಳ ಉತ್ಕರ್ಷೆಯೂ ಮುಗಿದುಹೋಯಿತೆಂಬ ೧೪ನೆಯ ಶತಮಾನಕ್ಕೆ ಅವಧಿ ಸೀಮಿತಗೊಂಡರೆ, ಆ ಮುಂದಿನ ಅವಧಿಯಲ್ಲಿ ರಚಿತವಾಗಿ ಇನ್ನೂ ಹಸ್ತಪ್ರತಿಗಳಲ್ಲಿಯೇ ಹುದುಗಿ ಕುಳಿತಿರುವ ನೂರಾರು ಅಪ್ರಕಟಿತ, ಅಸಂಶೋಧಿತ ಶ್ರೇಷ್ಠಗ್ರಂಥಗಳು ಶಾಶ್ವತವಾಗಿ ಅಪರಿಚಿತವಾಗಿಯೇ ಉಳಿದುಹೋಗಿ ಉಪೇಕ್ಷೆಗೆ ಗುರಿಯಾಗುವ ಅಪಾಯವಿದೆ. ಆಗ ಸಾವಿರ ಸಾವಿರಗಟ್ಟಲೆ ಪದ್ಯಗಳಿರುವ ಎಷ್ಟೋ ಚಂಪೂಕಾವ್ಯಗಳೂ ಷಟ್ಪದಿ ಮತ್ತು ಸಾಂಗತ್ಯಕಾವ್ಯಗಳೂ, ಸಾವಿರಗಟ್ಟಲೆ ಸಾಲುಗಳಿರುವ ಪ್ರಾಚೀನ ಗದ್ಯಗ್ರಂಥಗಳೂ ಬೆಳಕು ಕಾಣದೆ ಹೋಗುತ್ತವೆ. ಉದಾಹರಣೆಗೆ ಹೇಳಬಹುದಾದರೆ, ಚಿಕ್ಕದೇವರಾಜ ಒಡೆಯರ (೧೬೭೨-೧೭೦೪) ಆಳಿಕೆಯ ಅವಧಿಯಲ್ಲಿ ಸುಮಾರು ಇಪ್ಪತ್ತಾದರೂ ದೊಡ್ಡ ಪ್ರಮಾಣದ ಚಂಪೂಕಾವ್ಯಗಳು ರಚಿತವಾಗಿದ್ದು, ಇವುಗಳಲ್ಲಿ ಎಲ್ಲವೂ ಪ್ರಕಟವಾಗಿರುವಂತೆ ತೋರುವುದಿಲ್ಲ. ಹಾಗೆಯೇ ಉಳಿದ ಪ್ರಕಾರದವು ಕೂಡ.

ಅಗತ್ಯವಾಗಿ, ತುರ್ತಾಗಿ ಬೆಳಕು ಕಾಣಬೇಕಾಗಿರುವ, ಅಧ್ಯಯನಗಳು ನಡೆಯಬೇಕಾಗಿರುವ ಗ್ರಂಥರಾಶಿಯಲ್ಲಿ ಕಾವ್ಯಗಳೂ ಪುರಾಣಗಳೂ ಇರುವ ವಿಚಾರವಿರಲಿ; ಕ್ಷೇತ್ರಮಾಹಾತ್ಮ್ಯಗಳಿವೆ, ರಾಜ್ಯಗಳ ಇತಿಹಾಸಗ್ರಂಥಗಳಿವೆ, ಭಾಷಾವಿಷಯಕ ಚಮತ್ಕಾರಗ್ರಂಥಗಳಿವೆ, ಲೋಕೋಪಕಾರಕಗಳಾದ ಗಣಿತಶಾಸ್ತ್ರ ಖಡ್ಗಶಾಸ್ತ್ರ ರತ್ನಶಾಸ್ತ್ರ ವೈದ್ಯಶಾಸ್ತ್ರ ವೃಷ್ಟಿಶಾಸ್ತ್ರ ರಸವೈದ್ಯ ಸೂಪವಿದ್ಯೆ ಮೊದಲಾದ ಶಾಸ್ತ್ರವಿಷಯಗಳ ಅಮೂಲ್ಯವಾದ ರಚನೆಗಳಿವೆ. ದಿಟವಾಗಿ ಈ ಶಾಸ್ತ್ರಗ್ರಂಥಗಳು ಸರಳವಾದ ಹೊಸಗನ್ನಡದಲ್ಲಿ, ಇಂಗ್ಲಿಷ್ ಭಾಷಾಂತರಗಳಲ್ಲಿ ಈಗ ಪ್ರಚಾರಕ್ಕೆ ಬರಬೇಕಾಗಿವೆ. ಇವೆಲ್ಲ ಕರ್ನಾಟಕದ ಸಮಾಜ ಸಂಸ್ಕೃತಿಗಳ, ಧರ್ಮ ಇತಿಹಾಸಗಳ ಹೆಚ್ಚಿನ ತಿಳಿವಳಿಕೆಗೆ ಸಹಾಯಮಾಡುವಂಥವು; ತಪ್ಪು ತಡೆಗಳನ್ನು ಕಳೆಯುವಂಥವು. ಇನ್ನು ಪ್ರಾಚೀನ ಗದ್ಯದ ಸ್ವರೂಪವಂತೂ ಅಪ್ರಕಟಿತ ಗದ್ಯಗ್ರಂಥಗಳು ಪೂರ್ಣವಾಗಿ ಪ್ರಕಟಗೊಂಡಲ್ಲದೆ, ಅಧ್ಯಯನಗಳಿಗೆ ಒಳಪಟ್ಟಲ್ಲದೆ ವಿಶದವಾಗುವಂತಿಲ್ಲ.

ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನಗಳ ಕ್ಷೇತ್ರ ವಿಸ್ತಾರವಾದುದು, ಅನೇಕ ಮುಖವಾದುದು. ಮಾಡಬೇಕಾಗಿರುವ ಕೆಲಸಗಳ ಸಂಬಂಧವಾಗಿ ರೂಪಿಸಬಹುದಾದ ಯೋಜನೆಗಳು ಹಲವು; ಆ ಯೋಜನೆಗಳಲ್ಲಿ ಒಂದೊಂದರ ಕೆಳಗೆ ಪಟ್ಟಿ ಮಾಡಬಹುದಾದ ಅಧ್ಯಯನಗಳ ತಪಶೀಲುಗಳು ಹಲವು. ಅದು ಒಂದು ಪುಸ್ತಕಗಾತ್ರದ ವಿಚಾರ. ಸದ್ಯದಲ್ಲಿ ದಿಕ್ಸೂಚಿಯಾಗಿ ಕೆಲವಂಶಗಳನ್ನಷ್ಟೇ ಇಲ್ಲಿ ಪ್ರಸ್ತಾವಿಸಬಹುದಾಗಿದೆ.

ಮೊದಲು ಶಾಸನಸಾಹಿತ್ಯವನ್ನು ನೋಡೋಣ:

ನಾಡು ನುಡಿಗಳ ಚರಿತ್ರೆಗೆ ಶಾಸನಗಳೇ ಮೂಲಸಾಮಗ್ರಿ. ಇವುಗಳ ಅಭ್ಯಾಸ ವಿವಿಧಮುಖಗಳಲ್ಲಿ, ವ್ಯವಸ್ಥಿತಕ್ರಮಗಳಲ್ಲಿ ಇನ್ನೂ ನಡೆಯಬೇಕಾದ್ದು. ಈಗಾಗಲೇ ಮೂಲಪಠ್ಯಗಳು ಶಿಲೆಯಿಂದ, ಲೋಹಪಟಗಳಿಂದ ಕಾಗದಕ್ಕೆ ಇಳಿದು ಆಗಿವೆ. ಇವು ಈಗಿನ ‘ಕಚ್ಚಾರೂಪ’ದಲ್ಲಿ ಅಲ್ಲದೆ, ಕವಿಲಿಖಿತವಾದ ಶುದ್ಧ, ಛಂದೋಬದ್ಧ ರೂಪಗಳಿಗೆ ಪರಿವರ್ತಿತವಾಗಿ ಅಭ್ಯಾಸಕ್ಕೆ ಒದಗಬೇಕಾಗಿದೆ. ಇತಿಹಾಸ, ಸಮಜಾ, ಸಂಸ್ಕೃತಿಗಳ ಪುನಾರಚನೆಗೆ ಅವುಗಳ ಪ್ರಯೋಜನ ಪಡೆಯುವುದು ಹಾಗಿರಲಿ, ಅವುಗಳ ಭಾಷೆ ಶೈಲಿ ಛಂದಸ್ಸು ಕವಿಗಳು ವಿಶಿಷ್ಟಶಬ್ದಗಳು ಸಂದರ್ಭಗಳು ಅಭ್ಯಾಸಕ್ಕೆ ಕಾದುಕೊಂಡಿವೆ. ಸಂಕಲನಗ್ರಂಥಗಳು ರಾಜಮನೆತನಗಳಿಗೆ ಸಂಬಂಧಿಸಿದ ಹಾಗೆ Corpus ರೂಪದಲ್ಲಿ ಶುದ್ಧವಾಗಿ ಸಂಪಾದಿತವಾಗಿ ಬರಬೇಕಾಗಿವೆ. ನಾಡು ನುಡಿಗಳ ಪರಂಪರೆಗೆ ಅವುಗಳ ಕೊಡುಗೆ ಇನ್ನೂ ಸ್ಪಷ್ಟಪಡಬೇಕಾಗಿದೆ. ಶಾಸನಪಾಠಗಳ ಹೊಸಗನ್ನಡ ರೂಪುಗಳೂ ಇಂಗ್ಲೀಷ್ ಭಾಷಾಂತರಗಳೂ ಬರಬೇಕಾಗಿವೆ. ಉಲ್ಲೇಖಗೊಂಡ ಸ್ಥಳನಾಮ ವ್ಯಕ್ತಿ ನಾಮಗಳ ವಿಶ್ಲೇಷಣೆಗಳಾಗಬೇಕಾಗಿವೆ.

ಈಗ ಸಾಹಿತ್ಯಗ್ರಂಥಗಳ ಕಡೆ ಗಮನಹರಿಸೋಣ:

೧. ಅಳಿದ ಮೇಲೆ, ಈಗ ಉಳಿದುಕೊಂಡಿರುವ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಕ್ರೋಡೀಕೃತಸೂಚಿನಿರ್ಮಾನ ಇವು ತ್ವರಿತಗೊಂಡು ಮುಗಿಯುತ್ತಿದ್ದ ಹಾಗೆಯೇ, ಒಂದೊಂದು ಗ್ರಂಥದ ಸುಸಂಪಾದಿತ ಕೃತಿ ಸಿದ್ಧವಾಗಿ ಪ್ರಕಟವಾಗಬೇಕಾಗಿದೆ. ಇನ್ನೂ ಒಂದೇ ಒಂದು ಸಲ ಕೂಡ ಪ್ರಕಟವಾಗಿರದ ನೂರಾರು ಹಸ್ತಪ್ರತಿಗಳಿವೆ.

೨. ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ವಿವರಣಾತ್ಮಕ ಸೂಚಿ ಹಲವು ಸಂಪುಟಗಳಲ್ಲಿ ಸಿದ್ಧವಾಗಬೇಕಾಗಿದೆ. ಇವುಗಳಲ್ಲಿ ಮುದ್ರಿತ, ಅಮುದ್ರಿತ ಮತ್ತು ಲಭ್ಯ ಹಸ್ತ ಪ್ರತಿಗಳು ಇವುಗಳ ಮಾಹಿತಿಯಿರಬೇಕಾಗುವುದು.

೩. ಆದ್ಯತೆಯೊಂದಿಗೆ ಆಗಬೇಕಾಗಿರುವ ಕೆಲಸವೆಂದರೆ, ಲೋಕೋಪಕಾರಕಗಳಾದ ಶಾಸ್ತ್ರಗ್ರಂಥಗಳ ಸಂಪಾದನೆ ಮತ್ತು ಅವಕ್ಕೆ ಹೊಸಗನ್ನಡ ಮತ್ತು ಇಂಗ್ಲಿಷ್ ಅನುವಾದಗಳು.

೪. ಪ್ರಸಿದ್ಧವಾದ ಪ್ರಾಚೀನ ಸಾಹಿತ್ಯಕೃತಿಗಳ (ಉದಾ. ‘ಪಂಪಭಾರತ’, ‘ಕುಮಾರವ್ಯಾಸಭಾರತ’, ‘ ಜೈಮಿನಿಭಾರತ’,  ‘ಕವಿರಾಜಮಾರ್ಗ’, ‘ಶಬ್ದಮಣಿದರ್ಪಣ’, ‘ಛಂದೋಂಬುಧಿ’ ಇ.) ಸವಿಮರ್ಶಪರಿಷ್ಕರಣಗಳ ಸಿದ್ಧತೆ.

೫. ಶತಶತಮಾನಗಳ ಕನ್ನಡ ಭಾಷೆಯ ಬೆಳೆವಣಿಗೆಯನ್ನು ವರ್ಣನಾತ್ಮಕ, ಐತಿಹಾಸಿಕ ಹಾಗೂ ತುಲನಾತ್ಮಕ ಆದ ನೆಲೆಗಳಲ್ಲಿ ವಿವರವಾಗಿ ನಿರೂಪಿಸುವುದು; ಎಂದರೆ ಕನ್ನಡ ಭಾಷೆಯ ಸಮಗ್ರ ಚರಿತ್ರೆ.

೬. ಗ್ರಂಥಸ್ಥ ಸ್ಥಳನಾಮ, ವ್ಯಕ್ತಿನಾಮಗಳ ಭಾಷಿಕ ಮತ್ತು ಸಾಂಸ್ಕೃತಿಕ ವಿಶ್ಲೇಷಣೆ.

೭. ಶಾಸನಸಾಹಿತ್ಯ ಮತ್ತು ಪ್ರಾಚೀನ ಕನ್ನಡಸಾಹಿತ್ಯ ಇವನ್ನು ಆಧರಿಸಿ ಒಂದು ವಿಸ್ತೃತ ಪ್ರಮಾಣದ ಸಾಂಸ್ಕೃತಿಕ ಪದಕೋಶವನ್ನು ೨ ಅಥವಾ ೩ ಸಂಪುಟಗಳಲ್ಲಿ ಸಿದ್ಧಮಾಡಬೇಕು; ಅದು ವಿಶ್ವಕೋಶವೂ ಆಗಬಹುದು.

೮. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ (ಶಾಸನಸಾಹಿತ್ಯವೂ ಸೇರಿದಂತೆ) ವೇಷ-ಭೂಷಣ, ಕ್ರೀಡೆ-ಮನೋರಂಜನೆ, ಆಹಾರ-ಪಾನೀಯ, ನೃತ್ಯ-ಸಂಗೀತ, ವಾಸ್ತು-ಶಿಲ್ಪ ಮೊದಲಾದವುಗಳ ಚಿತ್ರಣದ ನಿರೂಪಣೆ.

೯. ಉದಾತ್ತ ಮಾನವೀಯ ಮತ್ತು ಸಾಹಿತ್ಯಿಕ ಮೌಲ್ಯಗಳ ಗದ್ಯಪದ್ಯಗಳ ಕಾವ್ಯ ಸಂಕಲನಗಳು; ಹಾಗೆಯೇ ಶಾಸನಪದ್ಯಸಂಕಲನಗಳು ಕೂಡ.

೧೦. ಪ್ರಾಚೀನ ಕನ್ನಡಸಾಹಿತ್ಯದಲ್ಲಿ ಸಾಮಾನ್ಯ ಮನುಷ್ಯನ ಸ್ವಭಾವ ಮತ್ತು ಜೀವನ ಚಿತ್ರಣ.

೧೧. ಪ್ರಾಚೀನ ಕನ್ನಡ ಸಾಹಿತ್ಯದ ವಿದ್ವತ್ತೆಯ ಇತಿಹಾಸ A History of Classical Kannada Scholarship); ಜಾನ್ ಎಡ್ವಿನ್ ಸ್ಯಾಂಡಿಸ್ ಮೊದಲಾದ ಆಂಗ್ಲ ವಿದ್ವಾಂಸರ ಗ್ರಂಥಗಳ ಮಾದರಿಯಲ್ಲಿ ಈ ವಿವೇಚನೆಯಿರಬಹುದು.

೧೨. ಶಾಸನಗಳು ಮತ್ತು ಪ್ರಾಚೀನ ಕನ್ನಡ ಸಾಹಿತ್ಯಗಳನ್ನು ಅಧಿಕರಿಸಿ ಗಾದೆಗಳು, ಒಗಟುಗಳು, ಜನಪದರ ಆಚಾರ ವಿಚಾರಗಳು ಮೊದಲಾದವುಗಳ ನಿರೂಪಣೆ.

೧೩. ಪ್ರಾಚೀನ ಕನ್ನಡ ಸಾಹಿತ್ಯದ ಚಳವಳಿಗಳು ಮತ್ತು ಕರ್ನಾಟಕ ಸಂಸ್ಕೃತಿಯ ಚಲನವಲನಗಳು.

೧೪. ಸಾಹಿತ್ಯಿಕವಾಗಿ ಸಾಂಸ್ಕೃತ ಪ್ರಾಕೃತ ಅಪಭ್ರಂಶ ಭಾಷೆಗಳೊಂದಿಗೆ ಕನ್ನಡದ, ಅನ್ಯ ದ್ರಾವಿಡಭಾಷೆಗಳೊಂದಿಗೆ ಕನ್ನಡದ ತುಲನಾತ್ಮಕ ಅಧ್ಯಯನ.

೧೫. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಧಾರ್ಮಿಕ ಪಂಗಡಗಳ, ಸಂಪ್ರದಾಯಗಳ ಒಳಪ್ರವಾಹಗಳು, ವಿವರಗಳು.

೧೬. ಕನ್ನಡ ಭಾಷೆ ಸಾಹಿತ್ಯಗಳ ಪ್ರಾಚೀನತೆಯ ಇತಿಹಾಸದ ವಿಸ್ತೃತವಿವೇಚನೆ.

೧೭. ಶಾಸನಸಾಹಿತ್ಯ ಪ್ರಾಚೀನಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ಗಣ್ಯವಿದ್ವಾಂಸರ, ಸಂಶೋಧಕರ ಜೀವನಚರಿತ್ರೆಗಳು ಮತ್ತು ಸಾಧನೆಗಳ ಇತಿಹಾಸ.

ಈ ಪಟ್ಟಿಯನ್ನು ಇನ್ನೂ ಹಿಂಜಿ ಬೆಳಸಬಹುದು. ಈ ಕ್ಷೇತ್ರದ ಸಾಧಕರಿಗಾಗಿ, ಸಂಶೋಧಕರಿಗಾಗಿ ಸಹಾಯಕ್ಕೆ ಬರಲೆಂದೇ ದಿಕ್ಸೂಚಿಯಾಗಿ ಈ ಕೈಪಿಡಿಯ ರೂಪದ ಪುಸ್ತಕವನ್ನು ಬರೆಯಲಾಗಿದೆ. ಇದೇ ಎಲ್ಲವೂ ಅಲ್ಲ, ಇನ್ನೂ ಬೇಕಾದ ಹಾಗಿದೆ ಎನ್ನುವುದೂ ತಿಳಿದ ಸಂಗತಿಯೇ.

ಈ ಪೀಠಿಕೆಗೆ ಮೂಲವಾದ ಲೇಖನವನ್ನು ಬರೆಯಲು ಆಲೋಚಿಸುತ್ತಿದ್ದಾಗ (ಪ್ರಕಟನೆ: ವಿಜಯ ಕರ್ನಾಟಕ ೧೬-೧೨-೨೦೦೮), ಪ್ರೊ. ಷೆಲ್ಡನ್ ಪೋಲಾಕ್ (ಅಮೆರಿಕೆಯ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಂಸ್ಕೃತ ಮತ್ತು ಭಾರತೀಯ ಅಧ್ಯಯನಗಳ ಪ್ರಾಧ್ಯಾಪಕರು) ಅವರು ಹಿಂದೂ ಪತ್ರಿಕೆಯಲ್ಲಿ ಬರೆದು ಪ್ರಕಟಿಸಿರುವ The real classical languages debate ಎಂಬ ಲೇಖನ (೨೭-೧೧-೨೦೦೮) ನನ್ನ ಗಮನಕ್ಕೆ ಬಂದಿತು. ಇದರಲ್ಲಿ ಲೇಖಕರು ಭಾರತವೂ ಸೇರಿದಂತೆ ವಿಶ್ವದಲ್ಲಿಯೇ ಬೇರೆ ಬೇರೆ ಭಾಷೆಗಳಲ್ಲಿ ಅಭಿಜಾತ ಸಾಹಿತ್ಯದ ಅಧ್ಯಯನಗಳು ಕ್ಷೀಣದಶೆಗೆ ಇಳಿದಿರುವುದನ್ನೂ ಅವುಗಳ ವಿಷಯದಲ್ಲಿ ಅನಾದರ ಹೆಚ್ಚುತ್ತಿರುವುದನ್ನೂ ದೃಷ್ಟಾಂತಗಳ ಮೂಲಕ ವಿಶದಪಡಿಸಿದ್ದಾರೆ. “The house of Indian classical study is not only burning, it lies almost in ashes” ಎಂಬುದಾಗಿ ಆರಂಭದಲ್ಲಿಯೇ ಅವರು ಬರೆದಿರುವುದನ್ನು ನೋಡಿ, ತತ್‌ಕ್ಷಣವೇ ಕನ್ನಡದ ಸ್ಥಿತಿಗತಿಗಳ ಚಿತ್ರ ವಿಷಾದಕರವಾಗಿ ಕಣ್ಣ ಮುಂದೆ ಹಾದುಹೋಯಿತು. ಅಲ್ಲದೆ ಹಲವು ವರ್ಷಗಳ ಹಿಂದೆ ಮುಂಬಯಿಯಲ್ಲಿ ಜರುಗಿದ ೧೫ನೆಯ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಅಧ್ಯಕ್ಷಭಾಷಣ ಮಾಡಿದ ಪ್ರೊ. ಎಸ್.ಕೆ.ಡೇ ಅವರು ವ್ಯಾವಹಾರಿಕ ಹಾಗೂ ಅರ್ಥಕರಿ ಆದ ಐರೋಪ್ಯಸಂಸ್ಕೃತಿ ಹಾಗೂ ಇಂಗ್ಲಿಷ್ ವ್ಯಾಸಂಗಗಳಿಗೆ ನಮ್ಮ ಸರ್ಕಾರ ಕೊಡುತ್ತ ಬಂದ ಪ್ರಾಶಸ್ತ್ಯ ಕಾರಣವಾಗಿ ಅಭಿಜಾತಸಾಹಿತ್ಯದ ಆಸಕ್ತಿ ಅಧ್ಯಯನಗಳು ಹೇಗೆ ಕುಗ್ಗುತ್ತ ಹೋದುವು ಎಂಬುದನ್ನು ತಿಳಿಸಲು ಎತ್ತಿರುವ ವಾದಾಂಶಗಳೂ ಕಣ್ಣೆದುರು ಸುಳಿದುವು. ಹೊಸ ವಿದ್ಯೆಯ ಎದುರು ಪ್ರಾಚೀನ ಭಾಷಾ ವಿದ್ಯೆಯ ಮಹತ್ತ್ವವನ್ನು ಸಮರ್ಥವಾಗಿ ಪ್ರತಿಪಾದಿಸುವ ಅಗತ್ಯವನ್ನು ಅವರು ಅಲ್ಲಿ ಒತ್ತಿ ಹೇಳಿದ್ದಾರೆ. ೧೯೧೯ರಲ್ಲಿ ಇಂಗ್ಲೇಂಡಿನಲ್ಲಿ ಅಭಿಜಾತಸಾಹಿತ್ಯದ ಕ್ಷೀಣದಶೆಗೆ ಕಾರಣಗಳನ್ನು  ಹುಡುಕಿ ಸುಧಾರಣೆಗೆ ಸಲಹೆಗಳನ್ನು ಕೊಡಲು ಏರ್ಪಟ್ಟ ಸಮಿತಿ, “It would be a national disaster if classical study were to disapppear from our education or to be continued to a small class of the humanity” ಎಂಬುದಾಗಿ ಅಭಿಪ್ರಾಯಪಟ್ಟಿತೆಂದು ಹೇಳಿ, ಅದು ಭಾರತಕ್ಕೆ ಇನ್ನೂ ಹೆಚ್ಚಾಗಿ ಅನ್ವಯಸುವುದೆಂದೂ ಪ್ರೊ. ಡೇ ಅವರು ಅಲ್ಲಿ ಒತ್ತಿ ಹೇಳಿದ್ದಾರೆ. ಅಲ್ಲದೆ,ನಾವು ನಮ್ಮ ರಾಷ್ಟ್ರದ ಪರಂಪರೆಯನ್ನು ಕುರಿತು ಮಾತಾಡುತ್ತೇವೆ, ಆದರೆ ಅವರ ಸಂರಕ್ಷಣೆಗೆ ಅಗತ್ಯವಿದ್ದಷ್ಟು ಚಿಂತನೆ ಮಾಡುವುದಿಲ್ಲ ಎಂದೂ ವ್ಯಥೆಪಟ್ಟಿದ್ದಾರೆ.

ಈಚೆಗೆ ವಿಶ್ವವಿದ್ಯಾನಿಲಯಗಳೂ ಸಾಹಿತ್ಯಪರಿಷತ್ತು ಅಕಾಡೆಮಿಗಳೂ ಅಭಿಜಾತ ಸಾಹಿತ್ಯದ ಅಧ್ಯಯನಗಳಿಗೆ ಪೋಷಕವಾದ ಪ್ರೋತ್ಸಾಹವಾದ ವಾತಾವರಣವನ್ನು ನಿರ್ಮಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ; ಪ್ರಾಚೀನಪಠ್ಯಗಳ, ಲಕ್ಷಣಗ್ರಂಥಗಳ ಅಧ್ಯನವಿಲ್ಲ, ಪ್ರಕಟಣೆಗಳಿಲ್ಲ ಎಂಬುದಾಗಿ ಬಲ್ಲವರು ಹೇಳುತ್ತಾರೆ. ಹೀಗಾಗಿ ನಮ್ಮ ಭಾಷೆಗೆ ಹೆಮ್ಮೆಯ ಕೋಡು ಮೂಡಿಸಿದ ಪಂಪ ರನ್ನರ, ಜನ್ನ ನೇಮಿಚಂದ್ರರ, ಕುಮಾರವ್ಯಾಸ ಲಕ್ಷ್ಮೀಶರ ಕೃತಿಗಳನ್ನು ಧೀರಗಂಭೀರವಾದ ದನಿಯಲ್ಲಿ ವಾಚಿಸುವ, ರಸಸ್ಥಾನಗಳನ್ನು ಹಿಡಿದು ವ್ಯಾಖ್ಯಾಣಿಸುವ, ಭಾಷಾ ಶೈಲಿಗಳ ಗತಿಗಮಕಗಳ ಸೂಕ್ಷ್ಮತೆಗಳನ್ನು ವಿಶ್ಲೇಷಿಸುವ ಯುವಪೀಳಿಗೆಯೇ ಕಣ್ಮರೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಈ ದಿಕ್ಕಿನಲ್ಲಿ ಸಾಹಿತ್ಯಾಸಕ್ತ ಯುವಕ ಯುವತಿಯರಿಗೆ ಪ್ರೋತ್ಸಾಹದಾಯಕವಾದ ಯೋಜನೆಗಳು ಏರ್ಪಡಬೇಕು. ಮಾರ್ಗದರ್ಶನ ಶಿಕ್ಷಣಗಳು ದೊರೆಯಬೇಕು. ಇದಕ್ಕೆ ವಿಶೇಷವಾಗಿ ಸಾಂಸ್ಥಿಕ ಪ್ರಯತ್ನಗಳೇ ಬೇಕಾಗುತ್ತವೆ. ಏಖೆ ಹಳೆಯ ಸಾಹಿತ್ಯವನ್ನು ಅಪೇಕ್ಷಿಸಬೇಕು,  ಅಧ್ಯಯನಮಾಡಬೇಕು ಎಂಬ ವಿಷಯದಲ್ಲಿ ಈಗಾಗಲೇ ನಾನು ಬರೆದಿರುವ ನಾಲ್ಕಾರು ಲೇಖನಗಳು ನನ್ನ ‘ಶಾಸ್ತ್ರೀಯ’ ಲೇಖನಸಂಪುಟಗಳಲ್ಲಿ ಪ್ರಕಟವಾಗಿವೆ. ಆಸಕ್ತರು ಅವನ್ನು ಗಮನಿಸಬಹುದಾಗಿದೆ.

ವಿದೇಶದ ವಿಶ್ವವಿದ್ಯಾನಿಲಯಗಳಲ್ಲಿ Professor of Classics ಎಂಬ ಹುದ್ದೆಯೇ ಇರುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಮುಂದೆ ಕನ್ನಡ ಭಾಷೆಗೆ ದೊರೆಯಲಿರುವ ಅಭಿಜಾತಸಾಹಿತ್ಯದ ಸ್ಥಾನಮಾನಗಳಲ್ಲಿ ಈ ತೆರನ ಹುದ್ದೆ ಅಥವ ಹುದ್ದೆಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈ ಹುದ್ದೆಗಳು ವ್ಯಾಕರಣ, ಛಂದಸ್ಸು, ಗ್ರಂಥ ಸಂಪಾದನೆ, ಶಾಸನಾಧ್ಯಯನ, ಸಾಹಿತ್ಯಚರಿತ್ರೆ, ಭಾಷಾವಿಜ್ಞಾನ, ನಿಘಂಟುಶಾಸ್ತ್ರ ಮೊದಲಾದ ಬೇರೆ ಬೇರೆ ಶಾಖೆಗಳಿಗೆ ಕೂಡ ಏರ್ಪಡಬಹುದಾಗಿದೆ. ಆಗ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜ್ಞಾನಕ್ಷೇತ್ರದ ದಿಗಂತಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾದೀತು. ‘ಕಾವ್ಯಕ್ಕೆ ಸಮರ್ಥನೆ’ ಎಂಬ ಹಳೆಯ ವಿಚಾರದ ಕಾಲದ ತನ್ನ ಗುರಿ ಸಾಧಿಸಿ ಆಗಿದೆ; ಇನ್ನು ಮೇಲೆ ‘ಪಾಂಡಿತ್ಯಕ್ಕೆ ಸಮರ್ಥನೆ’ ಎನ್ನುವ ಕಾಲ ಬರಬೇಕಾಗಿದೆ. ಆಗ ನಮ್ಮ ಸಂಪದ್ಯುಕ್ತವಾದ ಪ್ರಾಚೀನಸಾಹಿತ್ಯ ತನ್ನೆಲ್ಲ ವೈಭವ ವಿಲಾಸಗಳನ್ನೂ ಪ್ರಕಟಗೊಳಿಸಿ ಸಮಾಜವನ್ನು ಸಂಸ್ಕೃತಿಸಂಪನ್ನವಾದ, ರಸವಂತವಾದ ಬದುಕಿನೊಡನೆ ವಿಲೀನಗೊಳಿಸಿ ಸಾರ್ಥಕತೆಯ ಶಿಖರವನ್ನು ಮುಟ್ಟಬಲ್ಲುದಾಗಿದೆ.

ಮೈಸೂರು
೨೬-೮-೨೦೦೯

ಟಿ.ವಿ.ವೆಂಕಟಾಚಲ ಶಾಸ್ತ್ರೀ

* * *

…It is not properly understood even today, that oriental studies furnish to us the key to the understanding of our own culture and tradition, of our own ways of life and thought, of our own manners and morals, in fact of ourselves. It is for this imperfect understanding that we failed to do justice to what was great and good in our ancient learinig; and as a result, oriental studies, which were merely suffered to exist, were never assigned their proper place in our educational scheme, which became alien in charactre and outlook from the very beginning.

Prof. Sushil Kumar De
Presidential Address,
15th All India Oriental Conference

*

“ತಾಯಿಬೇರನ್ನು ಕಡಿದು ಮರವನ್ನು ಚಿಗುರಿಸುವುದು ಹೇಗೆ ಆಗಲಾರದೋ, ಹಾಗೆಯೇ ನಮ್ಮ ಪೂರ್ವವನ್ನು ಅಳಿಸಿಬಿಟ್ಟು ಭವಿಷ್ಯಕ್ಕೆ ಹಾರುವುದಕ್ಕೆ ಆಗಲಾರದು. ಆದದ್ದರಿಂದ ಪೂರ್ವದ ಕಾವ್ಯಗಳ ವಿಷಯದಲ್ಲಿ ಹೀಗೆ ಮಾಡಬೇಕು: ದೇಶದಲ್ಲಿ ಹುಳು ತಿಂದು ಹೋಗದೆ ಉಳಿದಿರುವ ಗ್ರಂಥಗಳನ್ನೆಲ್ಲಾ ಶೇಖರಿಸಿ ಒಂದನ್ನೂ ಬಿಡದಂತೆ ಅಚ್ಚುಹಾಕುವುದು”.

ಪ್ರೊ. ಬಿ.ಎಂ. ಶ್ರೀಕಂಠಯ್ಯ
ಭಾಷಣ: ‘ಕನ್ನಡ ಮಾತು ತಲೆಯೆತ್ತುವ ಬಗೆ’

*

ಸಾಹಿತ್ಯವ್ಯಾಸಂಗ ಪರಿಪೂರ್ಣವಾಗಬೇಕಾಗಿದ್ದರೆ ಅದಕ್ಕೆ ಅಂಗವಾಗಿರುವ ವ್ಯಾಕರಣ ಛಂದಸ್ಸು ಅಲಂಕಾರಶಾಸ್ತ್ರಗಳನ್ನೂ ಸಾಹಿತ್ಯಚರಿತ್ರೆಯನ್ನೂ ರಾಜಕೀಯ ಧಾರ್ಮಿಕ ಚರಿತ್ರೆಗಳನ್ನೂ ಇನ್ನೂ ಅನಿರ್ದಿಷ್ಟವಾದ ಇತರ ವಿಷಯಗಳನ್ನೂ ವ್ಯಕ್ತಿ ಕಷ್ಟ ಪಟ್ಟು ಕಲಿಯುವ ಅವಶ್ಯಕತೆಯಿದೆ. ಇವೆಲ್ಲದರಿಂದ ಬರುವ ಸಮಷ್ಟಿರೂಪವಾದ, ಖಚಿತವಾದ ಜ್ಞಾನಕ್ಕೆ ಇಲ್ಲಿ ವಿದ್ವತ್ತು ಎಂದು ಕರೆದಿದೆ. ಇದರ ಉದ್ದೇಶ ಕಾವ್ಯದ ರಸಾಸ್ವಾದನವೇ ಆದರೂ ಇದರ ಸಂಪಾದನೆಯಲ್ಲಿಯೇ ಆನಂದಾನುಭವವುಂಟೆಂಬುದನ್ನು ಮರೆಯಲಾಗದು. ವಿದ್ವತ್ತು ರಸಿಕತೆಗೆ ವಿರೋಧಿಯಲ್ಲ, ಅದಕ್ಕೆ ಪೋಷಕ. ಸಹೃದಯನಲ್ಲಿ ಎರಡೂ ಇರಬೇಕು. ಒಂದು ಬುದ್ಧಿಪ್ರಚೋದಕ, ಇನ್ನೊಂದು ಭಾವ ಪ್ರಚೋದಕ. ಎರಡೂ ಕೂಡಿ ಬೆಳೆದರೆ ಪೂರ್ಣವ್ಯಕ್ತಿತ್ವದ ವಿಕಾಸ. ಒಂದರ ಸಾಹಿತ್ಯ ಬೆಳೆದಷ್ಟು ಇನ್ನೊಂದರದು ಬೆಳೆಯದೆ ಹೋದರೆ ಅಷ್ಟರ ಮಟ್ಟಿಗೆ ಆ ಸಾಹಿತ್ಯದಲ್ಲಿ ಕೊರತೆಯುಂಟಾಗುತ್ತದೆ. ಈ ಎರಡು ಮುಖಗಳೂ ಸೇರಿ ಒಂದು ಸಾಹಿತ್ಯವನ್ನು ನಾಣ್ಯವೆನಿಸುತ್ತವೆ.

ಪ್ರೊ. ಡಿ.ಎಲ್. ನರಸಿಂಹಾಚಾರ್
ಅಧ್ಯಕ್ಷಭಾಷಣ, ೪೯ನೆಯ ಕನ್ನಡ ಸಾಹಿತ್ಯ ಸಮ್ಮೇಳನ