ಸಂಸ್ಕೃತದಲ್ಲಿ ವ್ಯಾಕರಣ ಅಲಂಕಾರಶಾಸ್ತ್ರಗಳನ್ನು ವಿಶೇಷ ಅಧ್ಯಯನವಿಷಯಗಳಾಗಿ ಹಲವು ವರ್ಷಗಳ ಕಾಳ ಮಹಾಪಾಠಶಾಲೆಗಳಲ್ಲಿ ಕಲಿಸಲಾಗುವುದು. ಕನ್ನಡದಲ್ಲಿಯಾದರೋ ವ್ಯಾಕರಣವನ್ನು ಕಲಿಯುವಾಗ ಕಾಲೇಜು ತರಗತಿಗಳಲ್ಲಿ ‘ಶಬ್ದಮಣಿ ದರ್ಪಣ’ವನ್ನೂ ಪಂಡಿತಪರೀಕ್ಷೆಯ ತರಗತಿಗಳಲ್ಲಿ ‘ಶಬ್ದಾನುಶಾಸನ’ವನ್ನೂ ಕಲಿಸುವ ಪದ್ಧತಿ ಬಹುಕಾಲದಿಂದ ನಡೆದುಬಂದಿತು. ಈಗ ಈಯೆರಡೂ ವ್ಯಾಕರಣಪಠ್ಯಗಳು ಕಲಿಕೆಯಲ್ಲಿ ಅಲಕ್ಷಿತವಾಗಿರುವಂತೆ, ತಿರಸ್ಕೃತವಾಗಿರುವಂತೆ ತೋರುತ್ತಿವೆ. ಹಳಗನ್ನಡ ವ್ಯಾಕರಣಗಳನ್ನು ನ್ಯಾಯವಾಗಿ ತುಲನಾತ್ಮಕವಾಗಿ ಕಲಿಯುವುದಾದರೆ, ಪರಸ್ಪರ ಪ್ರಭಾವಗಳೂ ಹೊಸ ಲಕ್ಷಣಲಕ್ಷ್ಯಗಳ ಪರಿಚಯಲಾಭಗಳೂ ಆಗುತ್ತವೆ. ಅಲ್ಲದೆ ಪಂಪಾದ್ಯರಾದ ಪ್ರಾಚೀನ ಕವಿಗಳ ಹಳಗನ್ನಡಭಾಷೆಯನ್ನು ಚೆನ್ನಾಗಿ ಗ್ರಹಿಸಬೇಕಾದರೆ, ಹಳಗನ್ನಡ ವ್ಯಾಕರಣಗಳ ಜ್ಞಾನ ಅನಿವಾರ್ಯವಾದುದು; ಅದರಲ್ಲಿಯೂ ‘ಶಬ್ದಮಣಿದರ್ಪಣ’ವನ್ನಂತೂ ಚೆನ್ನಾಗಿ ಅಭ್ಯಾಸಮಾಡಿರಲೇ ಬೇಕು. ‘ಶಬ್ದಮಣಿದರ್ಪಣ’ದ ಹಲವು ಪರಿಷ್ಕರಣಗಳು ಹೊರಬಂದು ವ್ಯಾಕರಣವಸ್ತುವಿನ ಸಾಮಾನ್ಯ ಜ್ಞಾನ ನಮಗೆ ಸಾಧ್ಯವಾಗಿರುವುದು ಸಮಾಧಾನದಸಂಗತಿ. ಆದರೆ ಆ ಗ್ರಂಥದ ವೃತ್ತಿ ಮತ್ತು ಪ್ರಯೋಗಗಳ ತೊಡಕುಗಳು ತೃಪ್ತಿಕರವಾಗಿ ಪರಿಹಾರವಾಗಬೇಕಾದರೆ, ಅದರ ಒಬ್ಬ ಸಂಪಾದಕರಾದ ಡಿ.ಎಲ್. ನರಸಿಂಹಾಚಾರ್ಯರು ಭಾವಿಸುವಂತೆ ಅದರ ಸವಿಮರ್ಶಪರಿಷ್ಕರಣವೊಂದು ಹೊರಬರಬೇಕಾಗಿದೆ. ಆರ್. ನರಸಿಂಹಾಚಾರ್ಯರು ಸಿದ್ಧಪಡಿಸಿದ ‘ಶಬ್ದಸ್ಮೃತಿ’ (‘ಕಾವ್ಯಾವಲೋಕನ’ದ ಭಾಗ) ‘ಭಾಷಾಭೂಷಣ’ ಹಾಗೂ ‘ಶಬ್ದಾನುಶಾಸನ’ಗಳು ಬಲುಮಟ್ಟಿಗೆ ತೃಪ್ತಿಕರಗಳಾಗಿದ್ದರೂ ಅವುಗಳ ತುಲನಾತ್ಮಕ ಅಧ್ಯಯನ ಹಾಗೂ ವ್ಯಾಕರಣವಸ್ತುವಿನ ವ್ಯಾಖ್ಯಾನ, ವಸ್ತುವಿಮರ್ಶೆಗಳ ಅಗತ್ಯವಿದ್ದೇ ಇದೆ. ‘ಶಬ್ದಾನುಶಾಸನ’ವನ್ನು ಈವರೆಗೆ ಸಂಪಾದಿಸಿ ವಿಮರ್ಶಿಸಿರುವವರು ಅದರ ಅನ್ವಯಿಕಮಭಲ್ಯವನ್ನೂ ನ್ಯೂನಾತಿರೇಕಗಳನ್ನೂ ಸರಿಯಾಗಿ ಗುರುತಿಸಿರುವಂತೆ ತೋರುವುದಿಲ್ಲ. ಆ ಕೆಲಸ ಪರಿಣತರಿಂದ ನಡೆಯಬೇಕಾಗಿದೆ. ಶಬ್ದಾನು ಶಾಸನಕಾರನು ಅನುಸರಿಸಿರುವ ಸೂತ್ರಪದ್ಧತಿ ಅಮೋಘವಾದುದು; ಆದರೆ ವ್ಯಾಕರಣಾಂಶಗಳು  ಹಲವೆಡೆ ಪ್ರಶ್ನಾರ್ಹವಾದುದು. ಇದನ್ನು ವಿಮರ್ಶಿಸಿ ವಿಷದಪಡಿಸಬೇಕಾಗಿದೆ.

ಕನ್ನಡದ ಅಲಂಕಾರಗ್ರಂಥಗಳು ‘ಕವಿರಾಜಮಾರ್ಗ’ದಿಂದ ಹಿಡಿದು ಅಳಿಯ ಲಿಂಗರಾಜನ ‘ನರಪತಿವಿಜಯ’ದ ವರೆಗೆ ೧೨ ಇವೆ. ಇವುಗಳಲ್ಲಿ ತಿಮ್ಮಣ್ಣನ ‘ನವರಸಾಲಂಕಾರ’, ಜಾಯೇಂದ್ರನ ‘ಶೃಂಗಾರತಿಲಕ’ (ರಸಮಂಜರಿ) ಇವು ಇನ್ನೂ ಬೆಳಕು ಕಂಡಿಲ್ಲ. ಉಳಿದವುಗಳಲ್ಲಿ ‘ಮಾಧವಾಲಂಕಾರ’ದ ಪರಿಷ್ಕರಣ ಏನೇನೂ ತೃಪ್ತಿಕರವಾಗಿಲ್ಲ. ತಿಮ್ಮ ಮತ್ತು ಜಾಯೇಂದ್ರರ ಗ್ರಂಥಗಳು ಆದ್ಯತೆಯ ಮೇಲೆ ಪ್ರಕಟವಾಗಬೇಕು. ‘ಮಾಧವಾಲಂಕಾರ’ದಂಡಿಯ ‘ಕಾವ್ಯಾದರ್ಶ’ದ ಅನುವಾದವಾದ್ದರಿಂದ, ಸಂಸ್ಕೃತಮೂಲದ ಆಧಾರದಿಂದ ಪದ್ಯಗಳ ಆಶಯ ಸ್ಫುಟವಾಗುವಂತೆ ಇನ್ನೊಮ್ಮೆ ಸಂಪಾದಿತವಾಗಬೇಕಾಗಿದೆ. ‘ಕಾವ್ಯಾವಲೋಕನ’ ‘ಅಪ್ರತಿಮವೀರಚರಿತ’ಗಳು ಅರ್ಥಬೋಧೆಯ ದೃಷ್ಟಿಯಿಂದ ಸಾಕಷ್ಟು ಸಮಾಧಾನಕರವಾದ ಪರಿಷ್ಕರಣಗಳು. ಉಳಿದ ಗ್ರಂಥಗಳಲ್ಲಿ ‘ಕವಿರಾಜಮಾರ್ಗ’ದ ವಸ್ತುವಿವೇಚನೆ ಈಚಿನ ವರ್ಷಗಳಲ್ಲಿ ಹೆಚ್ಚಿನ ಉತ್ಸಾಹದಿಂದ ನಡೆದಿದ್ದರೂ, ನಾಲ್ಕು ಪರಿಷ್ಕರಣಗಳು ಬಂದಿದರೂ, ಆ ಗ್ರಂಥದ ಹೆಚ್ಚಿನ ಹಸ್ತಪ್ರತಿಗಳಿಗಾಗಿ ಶೋಧಕಾರ್ಯ ನಡೆಯಬೇಕು, ಒಂದು ಸೊಗಸಾದ ಹೊಸ ಪರಿಷ್ಕರಣ ಸಿದ್ಧವಾಗಬೇಕು. ಶುದ್ಧಪಾಠದ ನಿರೀಕ್ಷೆಯಲ್ಲಿ ಇನ್ನೂ ಹಲವು ಪದ್ಯಗಳು ಕಾದು ಕುಳಿತಿವೆಯೆಂಬುದನ್ನು ತಪ್ಪದೆ ತಿಳಿಸಬೇಕಾಗಿದೆ. ‘ಉದಯಾದಿತ್ಯಾಲಂಕಾರ’, ‘ಶೃಂಗಾರರತ್ನಾಕರ’, ‘ರಸರತ್ನಾಕರ’, ‘ಶಾರದಾವಿಲಾಸ’, ‘ನರಪತಿವಿಜಯ’ಗಳು ಹಸ್ತಪ್ರತಿಗಳ ಸಂಬಂಧದ ಹಲವು ಸಮಸ್ಯೆಗಳಿಂದಾಗಿ ಕೋಟಲೆಗಳ ಗೂಡುಗಳಾಗಿವೆ. ಇವು ಸಂಪ್ರದಾನಕ್ರಮದಲ್ಲಿ ಉತ್ತಮಗೊಳ್ಳಬೇಕು; ಅಧ್ಯಯನದ ಭಾಗದಲ್ಲಿ ಗ್ರಂಥೋ ಪಯುಕ್ತ ವಸ್ತುವಿವರಗಳೂ ತುಂಬಿಕೊಳ್ಳಬೇಕು. ಈವರೆಗೆ ಇವುಗಳ ಸಂಪಾದನೆಗೆ ಕೈತೊಡಗಿಸಿದವು ಒಂದು ಸುಖಬೋಧವಾದ ಪರಿಷ್ಕರಣವನ್ನು ಒದಗಿಸಬೇಕೆಂಬ ಸರಳವಾದ ಉದ್ದೇಶದಿಂದ ಮಾತ್ರ ಹೊರಟಿರುವಂತೆ ತೋರುತ್ತದೆ. ಆಧಾರಪ್ರತಿಯ ಆಯ್ಕೆ, ಪಾಠಭೇದಗಳ ಸೂಚನೆ ಇವಕ್ಕೆ ಪ್ರಾಶಸ್ತ್ಯ ನೀಡಿದಂತೆ ತೋರುವುದಿಲ್ಲ. ಇನ್ನು ಕೆಲವು ಸಂಪಾದಕರು ತಾವು ಸಂಪಾದಿಸಿದ ಅಲಂಕಾರಗ್ರಂಥಗಳಲ್ಲಿ, ಗ್ರಂಥಶರೀರದಲ್ಲಿಯೇ ಟಿಪ್ಪಣಿ ಇತ್ಯಾದಿಗಳನ್ನು ಕೊಟ್ಟಿರುವುದರಿಂದ ಅದು ಸಹ ಕವಿಪಾಠವೆಂಬ ಭ್ರಾಂತಿಗೆ ಅವಕಾಶಮಾಡಿವೆ.

ಕನ್ನಡ ಲಕ್ಷಣಗ್ರಂಥಗಳ ಸಂಪಾದನೆಯ ಸ್ವರೂಪ ಮತ್ತು ವಿಮರ್ಶೆಗಳಿಗೆ ಮುಖ್ಯವಾಗಿ ‘ಕನ್ನಡ ಲಕ್ಷಣಗ್ರಂಥಗಳ ಸಂಪಾದನೆ’ ಎಂಬ ಪ್ರಬಂಧವನ್ನು (‘ಶಾಸ್ತ್ರೀಯ’-ಸಂಪುಟ ೧, ೧೯೯೯, ಪು.೧೭೯-೨೧೪) ನೋಡಬಹುದಾಗಿದೆ.