ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಲೌಕಿಕಶಾಸ್ತ್ರಭಾಗದ ಸಾಹಿತ್ಯ ವಿಪುಲವಾಗಿ ಎಂದು ಹೇಳಲಾಗದಿದ್ದರೂ ವೈವಿಧ್ಯಮಯವಾಗಿ ಕಂಡಬರುತ್ತಿರುವುದಂತೂ ನಿಜ.೧೧ನೆಯ ಶತಮಾನದಿಂದ ಮುಂದೆ ಉದ್ದಕ್ಕೆ ಇದನ್ನು ಗಮನಿಸುತ್ತ ಹೋಗಬಹುದು. ಕೆಲವು ಕೃತಿಗಳು ಬಹುಸಂಖ್ಯೆಯಲ್ಲಿರುವಂಥವು, ವಿಸ್ತಾರವಾದವು, ಪ್ರಸಿದ್ಧವಾದವು; ಇನ್ನು ಕೆಲವು ಸಾಮಾನ್ಯವಾದವು, ಸಣ್ಣ ಪ್ರಮಾಣದವು.

ಆರಂಭಕಾಲದ ‘ಲೋಕೋಪಕಾರ’ ಒಂದು ಲೌಕಿಕಶಾಸ್ತ್ರಸಮುಚ್ಛಯ; ಸರ್ವ ವಿಷಯಸಂಗ್ರಹ ಎನ್ನಬಹುದಾದ ಈ ಗ್ರಂಥವನ್ನು ಗೃಹವಿಶ್ವಕೋಶ ಎನ್ನುವುದಿದೆ. ಇದರಲ್ಲಿ ಪಂಚಾಂಗನಿರ್ಣಯದಿಂದ ಶಕುನಶಾಸ್ತ್ರದವರೆಗೆ ೧೨ ಮುಖ್ಯಶಾಸ್ತ್ರಗಳಿವೆ. ವಾಸ್ತುವಿದ್ಯೆ, ಉತ್ಪಾತಸೂಚನೆ, ಉದಕಾರ್ಗಳ (ಜಲಶಿಲ್ಪ), ವೃಕ್ಷಾಯುರ್ವೇದ (ತೋಟಗಾರಿಕೆ), ಗಂಧಯುಕ್ತಿ (ಸುಗಂಧದ್ರವ್ಯಶಾಸ್ತ್ರ), ಸೂಪಶಾಸ್ತ್ರ (ಪಾಕಶಾಸ್ತ್ರ), ನರಾದಿ ವೈದ್ಯ (ಪುರುಷ, ಸ್ತ್ರೀ, ಬಾಲ, ಗೋ, ಅಶ್ವ, ಗಜ, ವಿಷ, ಜನಪದ ವೈದ್ಯ ವಿಚಾರಗಳು) ಈ ಹಲವು ಶಾಸ್ತ್ರಸಂಗತಿಗಳು ಯಥೋಚಿತಪ್ರಮಾಣದಲ್ಲಿ ನಿರೂಪಿತವಾಗಿವೆ.

ಗ್ರಂಥವು ಅದರ ಕನ್ನಡ ವ್ಯಾಖ್ಯಾನದೊಂದಿಗೆ ಇನ್ನೊಮ್ಮೆ ಸುಸಂಪಾದಿತವಾಗಿ ಪ್ರಕಟವಾಗಬೇಕು; ಬಳಿಕ ಆಯಾ ಶಾಸ್ತ್ರಭಾಗದ ಸಂಸ್ಕೃತ ಆಕರಗಳೊಂದಿಗೆ ತುಲನಾತ್ಮಕವಾಗಿ ಪರಿಶೀಲಿಸಿ, ಇಂಗ್ಲಿಷ್ ಮೊದಲಾದ ವಿವಿಧ ಭಾಷೆಗಳಿಗೆ ಭಾಷಾಂತರವಾಗಬೇಕು. ವಿಶಿಷ್ಟ ಪದಸೂಚಿಗಳು ವಿವರಣೆಗಳೊಂದಿಗೆ ಸಿದ್ಧವಾಗಬೇಕು.

ಹೆಚ್ಚು ವ್ಯಾಪ್ತಿಯುಳ್ಳವು ವೈದ್ಯಗ್ರಂಥಗಳೇ. ಇವುಗಳ ಪ್ರಯೋಜನ ಹೆಚ್ಚು ಎನ್ನುವುದೇ ಇದಕ್ಕೆ ಕಾರಣ. ಸಾಮಾನ್ಯ, ಗೋ, ಅಶ್ವ, ಗಜ, ಸ್ತ್ರೀ, ವಿಷ, ಬಾಲಗ್ರಹ ಈ ಕೆಲವು ಉಪವಿಭಾಗಗಳಲ್ಲಿ ಗ್ರಂಥಗಳು ಹುಟ್ಟಿವೆ. ಈ ಗ್ರಂಥಗಳಲ್ಲಿ ವಿರಳವಾಗಿ ಹೊರತು ಎಷ್ಟೋ ಗ್ರಂಥಗಳು ಇನ್ನೂ ಸಂಪಾದಿತವಾಗಿ ಪ್ರಕಟವಾಗಿಲ್ಲ. ಪ್ರಕಟವಾಗುವುದು ಅತ್ಯವಶ್ಯ. ಇವನ್ನು ಚರಕ ಸುಶ್ರುತಾದ್ಯರ ಸಂಸ್ಕೃತ ಮೂಲಗಳೊಂದಿಗೆ ಹೋಲಿಸಿ, ಸಾದೃಶ್ಯಗಳನ್ನು ಕೂಡ ಜೊತೆಗೇ ಕೊಟ್ಟು, ವಿವರಣೆ ಸಹಿತ ಪ್ರಕಟಿಸಬೇಕು; ಪದಸೂಚಿಗಳೂ ಸಿದ್ಧವಾಗಬೇಕು. ‘ಖಗೇಂದ್ರಮಣಿದರ್ಪಣ’ ‘ಸಕಲವೈದ್ಯಸಂಹಿತಾ ಸಾರಾರ್ಣವ’ ಇಂಥವು ರೋಗಗಳ, ಚಿಕಿತ್ಸೆಗಳ ದೊಡ್ಡ ಭಂಡಾರಗಳು. ಇವೆಲ್ಲಕ್ಕೂ ಸಮಾನವಾಗಿ ಶಬ್ದಸಂಗ್ರಹದ ಬಳಿಕ ಒಂದು ವೈದ್ಯ ವಿಶ್ವಕೋಶವನ್ನೇ ಸಿದ್ಧಮಾಡಬಹುದಾಗಿದೆ. ಅವಶ್ಯವಾಗಿ ಈ ವೈದ್ಯಗ್ರಂಥಗಳ ಒಂದೊಂದು ಶಾಸ್ತ್ರಭಾಗಕ್ಕೂ ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ತಾತ್ಪರ್ಯಗಳನ್ನು ಬರೆಯುವುದಾಗಬೇಕು.

ಪ್ರತ್ಯೇಕವಾಗಿ ಅಶ್ವಶಾಸ್ತ್ರ ಗಜಶಾಸ್ತ್ರಗಳ ವಿಚಾರ: ಕನ್ನಡದಲ್ಲಿ ಅಭಿನವಚಂದ್ರನಿಂದ ಹಿಡಿದು ಪದ್ಮಣಪಂಡಿತನ ವರೆಗೆ ೪ಅಶ್ವಶಾಸ್ತ್ರಗಳು ಪ್ರಸಿದ್ಧವಾಗಿವೆ. ಇವು ಸುಸಂಪಾದಿತವಾಗಿ ಬೆಳಕುಕಾಣಬೇಕು. ಬಳಿಕ ಹೊಸಗನ್ನಡದಲ್ಲಿಯೂ ಇಂಗ್ಲಿಷ್ ಮೊದಲಾದ ಅನ್ಯಭಾಷೆಗಳಲ್ಲಿಯೂ ಅವುಗಳ ಭಾಷಾಂತರಗಳು ಸಿದ್ಧವಾಗಬೇಕು; ಪಾರಿಭಾಷಿಕಪದಸೂಚಿಗಳು ವಿವರಣಕೋಶಗಳೂ ಬರಬೇಕು. ಅಶ್ವಶಾಸ್ತ್ರದ ರಚನೆಗಳಿಗೆ ನಕುಲಾದ್ಯರ ಸಂಸ್ಕೃತಮೂಲಗಳನ್ನೂ ಗಜಶಾಸ್ತ್ರದ ರಚನೆಗಳಿಗೆ ಪಾಲಕಾಪ್ಯ (‘ಮಾತಂಗಲೀಲಾ’, ‘ಮಾನಸೋಲ್ಲಾಸ’ ಸಹ) ಮೊದಲಾದವರ ಸಂಸ್ಕೃತಮೂಲಗಳನ್ನೂ ಸಹಾಯಕ್ಕೆ ತಪ್ಪದೆ ಇಟ್ಟುಕೊಳ್ಳಬೇಕಾಗುತ್ತದೆ.

ಕನ್ನಡದಲ್ಲಿ ಗಜಶಾಸ್ತ್ರ ಶಬ್ದಕೋಶವೊಂದು ಈಚೆಗೆ ಸಿದ್ಧವಾಗಿದ್ದು, ಇದರಿಂದ ಪ್ರಾಚೀನ ಕನ್ನಡಸಾಹಿತ್ಯದ ಗಜಶಾಸ್ತ್ರಸಂಬಂಧಿಯಾದ ಎಷ್ಟೋ ಪಾರಿಭಾಷಿಕ ಶಬ್ದಗಳ ಅರ್ಥವಿವರಣೆ ಸಾಧ್ಯವಾಗಿದೆ, ಪಠ್ಯಗಳ ಪಾಠಶುದ್ದಿಗೆ ಕೂಡ ಅವಕಾಶವಾಗಿದೆ. ಆದರೆ ಪಾಲಕಾಪ್ಯಕೃತ ಹಸ್ತ್ಯಾಯುರ್ವೇದದ ವೀರಭದ್ರರಾಜಕೃತ ಕನ್ನಡಟೀಕೆ ತುಂಬಾ ಕುತೂಹಲಕರವಾದ ವಿಷಯಬಾಹುಳ್ಯದಿಂದ ಕೂಡಿದ್ದಾಗಿಯೂ ಈವರೆಗೂ ಪ್ರಕಟವಾಗದಿರುವುದು ವಿಷಾದಕರ. ಇದನ್ನು ಪರಿಣತಸಂಪಾದಕರು ಅವಶ್ಯವಾಗಿ ಕೈಗೆತ್ತಿಕೊಳ್ಳಬೇಕು. ಅಶ್ವಶಾಸ್ತ್ರದ ವಿಷಯದಲ್ಲಿ ಈವರೆಗೆ ಯಾವುದೇ ಪಾರಿಭಾಷಿಕ ಪದಕೋಶ ಸಿದ್ಧವಾಗಿಲ್ಲ. ಆ ಕಲೆಸ ತುರ್ತಾಗಿ ನಡೆಯಬೇಕು. ಹಾಗೆಯೇ ‘ಹಸ್ತ್ಯಾಯುರ್ವೇದ’ ಟೀಕೆಯ ಪ್ರಕಟನೆ ಮುಗಿದ ಬಳಿಕ, ಅದರ ಸಹಾಯದಿಂದ ಗಜಶಾಸ್ತ್ರಶಬ್ದ ಕೋಶ ಇನ್ನಷ್ಟು ಪರಿಷ್ಕಾರಗೊಳ್ಳಬೇಕು. ವಿಸ್ತಾರಗೊಳ್ಳಬೇಕು.

ಕುತೂಹಲಕರವೂ ಅಮೂಲ್ಯವಾದವೂ ಆದ ಇನ್ನೂ ಹಲವು ಶಾಸ್ತ್ರಭಾಗಗಳ ಸಾಹಿತ್ಯಕೃತಿಗಳು ಕನ್ನಡದಲ್ಲಿ ಬಹು ಹಿಂದೆಯೇ ರಚಿತವಾಗಿವೆ. ಉದಾಹರಣೆಗೆ, ಜ್ಯೋತಿಷ, ಗಣಿತ, ರತ್ನಶಾಸ್ತ್ರ, ಕಾಮಶಾಸ್ತ್ರ, ಸೂಪಶಾಸ್ತ್ರ, ಸಂಗೀತಶಾಸ್ತ್ರ, ಸ್ವರಶಾಸ್ತ್ರ, ಬಾಣಗಾರಿಕೆ, ಖಡ್ಗವಿದ್ಯೆ, ವಾಸ್ತುವಿದ್ಯೆ, ಮಲ್ಲವಿದ್ಯೆ ಇಂಥವು. ಇವುಗಳಲ್ಲಿ ಜ್ಯೋತಿಷ ಮತ್ತು ಗಣಿತಶಾಸ್ತ್ರಗಳು ಹೆಚ್ಚು ಪ್ರಸಿದ್ಧವಾದವು ಎನ್ನುವುದು ತಿಳಿದೆ ಇದೆ. ಹಾಗೆಂದೇ ಅವುಗಳಲ್ಲಿ ಗ್ರಂಥರಚನೆಯೂ ಹೆಚ್ಚಾಗಿದೆ.

ಜ್ಯೋತಿಷದಲ್ಲಿ ಜಾತಕವಿಚಾರ, ಪಂಚಾಂಗನಿರ್ಣಯ, ವೃಷ್ಟಿಶಾಸ್ತ್ರ, ಶಕುನ, ಸಾಮುದ್ರಿಕ, ನರಪಿಂಗಲಿ, ಸ್ವಪ್ನಫಲ, ಮರಣಸೂಚನೆ, ಧನಶಿಲ್ಪ, ಜಲಶಿಲ್ಪ ಇತ್ಯಾದಿ ಶಾಖೆಗಳೆಲ್ಲ ಸೇರುವುದಾಗಿದ್ದು, ಕನ್ನಡದಲ್ಲಿ ಈ ಒಂದೊಂದರ ಬಗ್ಗೆಯೂ ಗ್ರಂಥಗಳಿವೆ. ಜ್ಯೋತಿಷದಲ್ಲಿ ತೀವ್ರವಾದ ಆಸಕ್ತಿ ಕುತೂಹಲಗಳಿರುವವರು ಈ ವಿಸ್ಮಯಾ ವಹಪ್ರಪಂಚವನ್ನು ಪ್ರವೇಶಿಸಿ ಲೌಕಿಕವಾಗಿ ಲಾಭ ಕೀರ್ತಿ ಪ್ರತಿಷ್ಠೆಗಳ ಪ್ರಯೋಜನಗಳನ್ನು ಪಡೆಯುವುದು ಕೂಡ ಸಾಧ್ಯವಿದೆ.

ಈ ವಿಷಯದಲ್ಲಿ ಸಂಸ್ಕೃತಮೂಲಗಳಿಂದ ಪಡೆಯಬುದಾದ ಸಹಾಯಕ್ಕೆ ಕೂಡಬೇಕಾದಂತಹ ಅವಕಾಶಗಳಿವೆ. ಜ್ಯೋತಿಶಾಸ್ತ್ರದ ನಿಘಂಟುವೊಂದು ಈಚೆಗೆ ಸಿದ್ಧವಾಗಿ ಪ್ರಕಟವಾಗಿದ್ದರೂ, ಇನ್ನೂ ವಿಸ್ತಾರವಾದ ಪದಸೂಚಿಗಳೂ ವಿವರಣಕೋಶಗಳೂ ಸಿದ್ದವಾಗಲು ಕ್ಷೇತ್ರ ತುಂಬ ದೊಡ್ಡದಾಗಿ ಅವಖಾಶಕೊಡುತ್ತದೆ. ಇನ್ನೂ ಒಂದು ಶ್ಲಾಘ್ಯವಾದ ಪ್ರಯೋಜನವೆಂದರೆ, ಪ್ರಾಚೀನ ಕನ್ನಡ ಸಾಹಿತ್ಯದ ಆಯಾ ಶಾಸ್ತ್ರಭಾಗದ ಪಾರಿಭಾಷಿಕಶಬ್ದಗಳ ಪಾಠಶುದ್ದಿಗೆ, ಅರ್ಥವಿವರಣೆಗೆ ಮಿಗಿಲಾದ ಸಹಾಯವಾಗುವುದು.

ಪ್ರಾಚೀನ ಕನ್ನಡ ಸಾಹಿತ್ಯದ ಶಾಸ್ತ್ರಗ್ರಂಥಗಳು ಹೆಚ್ಚಿನ ಮಟ್ಟಿಗೆ ದೇಶೀಯ ಪ್ರತಿಭೆ ಪಾಂಡಿತ್ಯ ಪರಿಶ್ರಮಗಳ ಫಲಗಳು. ಇವನ್ನು ಹೊಸಗನ್ನಡ ಸರಳಾನುವಾದ, ಇಂಗ್ಲಿಷ್ ಮೊದಲಾದ ಅನ್ಯಭಾಷೆಗಳ ಅನುವಾದಗಳೊಂದಿಗೆ, ವಿಸ್ತೃತವಾದ ಪದಸೂಚಿ ವಿವರಣಕೋಶಗಳೊಂದಿಗೆ ಪ್ರಕಟಿಸುವುದರಿಂದ ವೈಜ್ಞಾನಿಕ ತಾಂತ್ರಿಕ ಕ್ಷೇತ್ರಗಳಲ್ಲಿ ಭಾರತೀಯರ, ವಿಶೇಷವಾಗಿ ಕನ್ನಡಿಗರ, ಸಾಧನೆಗಳು ಲೋಕಕ್ಕೆ ತಿಳಿಯುವಂತಾಗುತ್ತದೆ. ಅಲ್ಲದೆ ಆಧುನಿಕ ವಿಜ್ಞಾನತತ್ತ್ವಗಳ ಹಾಗೂ ಶೋಧಗಳ ಬೆಳಕಿನಲ್ಲಿ ಇವುಗಳನ್ನು ಪರಿಶೀಲಿಸಿ, ಪ್ರಯೋಗಗಳ ಸಾಧುತ್ವ ಮಹತ್ತ್ವಗಳನ್ನು ಗುರುತಿಸುವ ಕೆಲಸವೂ ಆಗಬೇಕಾಗಿದೆ.

ಈ ದಿಕ್ಕಿನಲ್ಲಿ ಆಯಾ ಶಾಸ್ತ್ರವಿಷಯಗಳಲ್ಲಿ ತಕ್ಕಮಟ್ಟಿಗಾದರೂ ಅಧಿಕಾರವನ್ನೂ ಪ್ರಾಚೀನ ಭಾಷಾಶೈಲಿಗಳ ಪರಿಚಯವನ್ನೂ ಪಡೆದಂತಹ ಸಂಶೋಧಕರೇ ಕಾರ್ಯತತ್ಪರರಾಗುವುದು ಅಪೇಕ್ಷಣೀಯ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.