ಕನ್ನಡ ‘ಕವಿರಾಜಮಾರ್ಗ’ದಲ್ಲಿ ಪ್ರಾಸಂಗಿಕವಾಗಿ ವ್ಯಾಕರಣಾಂಶಗಳ ಪ್ರಸ್ತಾವವಿದೆ; ಪ್ರತ್ಯೇಕವಾಗಿಯೇ ನಾಗವರ್ಮ ಕೇಶಿರಾಜ ಭಟ್ಟಾಕಳಂಕರ ವ್ಯಾಕರಣಗ್ರಂಥಗಳಿವೆ. ಇವಕ್ಕೆ ಸಂಸ್ಕೃತ ವ್ಯಾಕರಣಗ್ರಂಥಗಳು ಮಾದರಿಯೆಂದರೂ, ಸ್ವತಂತ್ರವಾದ, ದೇಶೀಯವಾದ ಪರಿಭಾಷೆಯೂ ಸ್ಪಷ್ಟವಾಗಿ ಉಂಟು. ಸಂಸ್ಕೃತಿ ಪಾರಿಭಾಷಿಕ ಶಬ್ದಗಳ ಬಳಕೆಯೇ ಹೆಚ್ಚು ಎಂದರೂ, ಈ ಸ್ವತಂತ್ರ ದೇಶೀಯ ಪಾರಿಭಾಷಿಕಗಳಿಗೂ ಸಾಕಷ್ಟು ಎಡೆ ದೊರೆತಿದೆ. ಹಾಗೆ ನೋಡಿದರೆ, ಅಚ್ಚಕನ್ನಡ ಪಾರಿಭಾಷಿಕ ಶಬ್ದಗಳ ಸ್ವರೂಪಕಲ್ಪನೆ, ಅವುಗಳ ಅರ್ಥವ್ಯಾಪ್ತಿ ಇವೇ ಪ್ರತ್ಯೇಕ ಅಧ್ಯಯನ ವಿಷಯವಾಗಬಹುದಾಗಿದೆ.

ಪ್ರತಿ ವ್ಯಾಕರಣಗ್ರಂಥದಲ್ಲಿಯೂ ಹಳಗನ್ನಡ ಭಾಷೆಯ ಸ್ವರೂಪವನ್ನು ವಿಶದ ಪಡಿಸಲು ಹೇರಳವಾಗಿ ಪಾರಿಭಾಷಿಕಶಬ್ದಗಳನ್ನು ಬಳಸಿದ್ದು, ಇವನ್ನು ವಿವಿಧವಾಗಿ ವ್ಯಾಕರಣತತ್ತ್ವಗಳು ಅಧಿಕರಿಸಿರುತ್ತವೆ; ಈ ತತ್ವಗಳನ್ನು ಪ್ರಮಾಣಿಸಲು ಪ್ರಯೋಗಗಳು ಬಂದಿರುತ್ತವೆ. ಇವುಗಳ ವ್ಯಾಪ್ತಿ ವರ್ಣಮಾಲೆಯಿಂದ ಆರಂಭಿಸಿ, ಅಪಭ್ರಂಶ ಪ್ರಕರಣದವರೆಗೆ ಎಂದು ಸ್ಥೂಲವಾಗಿ ಹೇಳಬಹುದು.

ಸಂಸ್ಕೃತದಲ್ಲಿ ಕೆ.ವಿ. ಅಭ್ಯಂಕರ್ ಅವರ A Dictionary of Sansktrit Grammar,  ಕೆ.ಸಿ. ಚಟರ್ಜಿ ಅವರ Technical Terms in Sanskrit Grammar ಹೀಗೆ ಕೆಲವು ಪರಿಭಾಷಾಕೋಶಗಳು ಇದ್ದು, ಇವುಗಳ ಮಾದರಿಯಲ್ಲಿ ಕನ್ನಡದಲ್ಲಿಯೂ ಒಂದು ವ್ಯಾಕರಣಕೋಶ ರಚಿತವಾಗಬಹುದಾಗಿದೆ. ಇದರಿಂದ ಅಭ್ಯಾಸಿಗಳಿಗೆ ವ್ಯಾಕರಣವಿಧಿಗಳೂ ಪ್ರಯೋಗಗಳೂ ಕೈವೊಕ್ಕ ನಿಧಿಯಂತೆ ಸುಲಭ ಗ್ರಾಹಿಯಾಗಿ ಮನವರಿಕೆಯಾಗುತ್ತವೆ.

ಉದಾ. ಗೆ ಆರಂಭದ ವರ್ಣಮಾಲೆಯ ಭಾಗವನ್ನೇ ನೋಡೋಣ: ಅಕ್ಷರಗಳು – ಅವುಗಳ ಉತ್ಪತ್ತಿ ಸ್ಥಾನಗಳು, ವರ್ಗ-ಅವರ್ಗ-ಯೋಗವಾಹಗಳು, ಸ್ವರ-ವ್ಯಂಜನ, ಸಮಾನ-ಸವರ್ಣ-ನಾಮಿ, ಹ್ರಸ್ವ-ದೀರ್ಘ-ಪ್ಲುತ, ೞ-ಕುಳ-ಕ್ಷಳ, ಅಂತಃಸ್ಥ-ಊಷ್ಮ, ಅನುಸ್ವಾರ-ವಿಸರ್ಗ, ವ್ಯಂಜನಾಂಗ-ಸ್ವರಾಂಗ, ಅನುಕೃತಿಸ್ವರ, ಅನುನಾಸಿಕ-ನಿರನು ನಾಸಿಕ, ಸಂಧ್ಯಕ್ಷರ, ಚಾಕ್ಷುಷ-ಶ್ರಾವಣ, ದಡ್ಡಕ್ಕರ-ಬೀೞಕ್ಕರ, ಶುದ್ಧಗೆ (ಸುದ್ದಗೆ) – ದೇಶೀಯ ಇವೆಲ್ಲ ವಿವರಣೆಯನ್ನು ಬಯಸುವಂಥವು.

ಹೀಗೆಯೇ ಇತರ ಪ್ರಕರಣಗಳಲ್ಲಿ ಕೂಡ ಸಂಜ್ಞೆಗಳನ್ನು ಬಿಡಿಬಿಡಿಯಾದ ಉಲ್ಲೇಖಗಳನ್ನಾಗಿ ಎತ್ತಿಕೊಂಡು ವಿಧಿ, ಪ್ರಯೋಗ, ಟಿಪ್ಪಣಿಗಳೊಂದಿಗೆ ವಿವರಿಸಬಹುದಾಗಿದೆ.

ಈಗ ಅಲಂಕಾರಶಾಸ್ತ್ರ ಸಂಬಂಧವಾದ ವಿಚಾರ :

ಕನ್ನಡದಲ್ಲಿ ‘ಕವಿರಾಜಮಾರ್ಗ’ದಿಂದ ಹಿಡಿದು ಅಳಿಯ ಲಿಂಗರಾಜನ ‘ನರಪತಿ ಚರಿತ’ದ ವರೆಗೆ ಹಲವು ಅಲಂಕಾರಶಾಸ್ತ್ರಗ್ರಂಥಗಳಿವೆ. ಇವುಗಳಲ್ಲಿ ಹಲವಕ್ಕೆ ಸಂಸ್ಕೃತಗ್ರಂಥಗಳು ಮೂಲವೆನ್ನುವುದು ದಿಟ; ಆದರೆ ‘ಕವಿರಾಜಮಾರ್ಗ’ಕಾರ, ನಾಗವರ್ಮ, ಕವಿಕಾಮ ಮತ್ತು ಸಾಳ್ವ ಇಂಥವರು ಅಲ್ಪವಾದರೂ ಬೆಲೆಯುಳ್ಳ ಸ್ವತಂತ್ರ ವಿಚಾರಗಳನ್ನು ಪ್ರಸ್ತಾವಿಸಿ ಭಾರತೀಯ ಕಾವ್ಯಮೀಮಾಂಸೆಗೆ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಅಲ್ಲದೆ ಕನ್ನಡಕ್ಕೆ ವಿಶಿಷ್ಟವಾದ ಕಾವ್ಯತತ್ವಗಳನ್ನೂ ಅಲ್ಲಿ ಗುರುತಿಸಯೂ ಇದೆ (ನೋಡಿ: ಕೆ.ಕೃಷ್ಣಮೂರ್ತಿ, ‘ಕನ್ನಡದಲ್ಲಿ ಕಾವ್ಯತತ್ತ್ವ’).

ಈಗ ಕೆಲವು ದಶಕಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗ ಸಂಸ್ಕೃತ ಅಲಂಕಾರಶಾಸ್ತ್ರ ಸಾಹಿತ್ಯವನ್ನು ಆಧರಿಸಿ ಅಲಂಕಾರಶಬ್ದಕೋಶದ ಒಂದು ಬೃಹದ್ ಯೋಜನೆಯನ್ನು ಹಾಕಿಕೊಂಡಿತು (೧೯೭೧ ರಲ್ಲಿ ಹೊರಡಿಸಿದ ಯೋಜನೆಯ ನೀಲನಕ್ಷೆ ನೋಡಿ). ಕೆಲಸ ಬಲುಮಟ್ಟಿಗೆ ಪೂರೈಸಿ ಮುದ್ರಣದ ಹಂತದಲ್ಲಿ ಅದು ನಿಂತುಹೋಯಿತು. ಇದು ತೀರ ವಿಷಾದಕರ. ಹೀಗೆಯೇ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಆಯ್ದ ಪ್ರಾಚೀನ ಕನ್ನಡಪದ್ಯಗಳನ್ನು ಆಧರಿಸಿ ಒಂದು ಅಲಂಕಾರ ಶಬ್ದಕೋಶವನ್ನು ಸಿದ್ಧಪಡಿಸುವ ಯೋಜನೆಯನ್ನು ರೂಪಿಸಿತು (೨೦೦೩). ಇದು ಕೂಡ ಮುಕ್ತಾಯದ ಘಟ್ಟವನ್ನು ತಲುಪಿ ಸ್ಥಗಿತಗೊಂಡಿತು.

ಇದನ್ನು ಮನಗಂಡು ಹೇಳಬಹುದಾದ್ದೆಂದರೆ ; ಪೂರ್ವೋಕ್ತವಾದ ಎರಡು ಯೋಜನೆಗಳಲ್ಲಿ, ನೇರವಾಗಿ ಕನ್ನಡಕ್ಕೆ ಸಂಬಂಧಿಸಿದ ಸಾಹಿತ್ಯ ಪರಿಷತ್ತಿನ ಅಲಂಕಾರ ಶಬ್ದಕೋಶದ ಯೋಜನೆ ಮತ್ತೆ ಪುನಶ್ಚೇತನಗೊಂಡು ಆ ಕೋಶ ಪ್ರಕಟವಾಗಲು ಸಂಶೋಧಕರು ಕನ್ನಡ ಸಾಹಿತ್ಯಪರಿಷತ್ತಿನೊಂದಿಗೆ ಸಹಕರಿಸಬೇಕಾಗಿದೆ.

ಎರಡನೆಯ ಸಂಗತಿಯೆಂದರೆ : ಕನ್ನಡದ ಪ್ರಾಚೀನ ಅಲಂಕಾರಗ್ರಂಥಗಳನ್ನೇ ಆಧರಿಸಿ, ಅಲ್ಲಿಯ ಉದಾಹರಣೆಗಳನ್ನೇ ಬಳಸಿ, ಸೂಕ್ತ ಆಕರಗಳ ಸೂಚನೆಗಳೊಂದಿಗೆ ಒಂದು ಅಲಂಕಾರ ಶಾಸ್ತ್ರಶಬ್ದಕೋಶವನ್ನು ಹೊಸದಾಗಿಯೇ ಸಿದ್ಧಪಡಿಸಬಹುದು. ಸ್ವಾಭಾವಿಕವಾಗಿಯೇ ಇಲ್ಲಿ ನಮ್ಮ ಶಾಸ್ತ್ರಕಾರರು ಪ್ರಸ್ತಾವಿಸುವ ರಸ ರೀತಿ ಮಾರ್ಗ ವೃತ್ತಿ ಧ್ವನಿ ಅಲಂಕಾರ ಈ ಕೆಲವು ಮೂಲತತ್ತ್ವಗಳು, ಶಬ್ದ ಮತ್ತು ಅರ್ಥಾಲಂಕಾರಗಳು, ಕವಿಸಮಯ ಇತ್ಯಾದಿಗಳ ಅಡಕವಾದ, ಸೋದಾಹರಣವಾದ ವಿವರಗಳು ಇರುತ್ತವೆ.

ವಿಶೇಷವಾಗಿ, ಸಾಳ್ವನ ರಸರತ್ನಾಕರದ ಜೊತೆಗೆ ಅನುಬಂಧವಾಗಿ ಪ್ರಕಟವಾಗಿರುವ ಧ್ವನಿತತ್ತ್ವ ವಿವೇಚನೆಯಿರುವ ‘ಶಾರದಾವಿಲಾಸ’ವನ್ನು ತೌಲನಿಕವಾಗಿ ಸಂಸ್ಕೃತದ ಆನಂದವರ್ಧನನ ಕೃತಿಯ ಜೊತೆಗಿಟ್ಟು ಅಧ್ಯಯನ ಮಡಬೇಕಾದ ಅಗತ್ಯವಿದೆ.